Oppanna.com

ಇಂದು ಶುಕ್ರ ವಾರಾ; ಹಣ್ಣು ತಿಂಬ ವಾರಾ….

ಬರದೋರು :   ಒಪ್ಪಣ್ಣ    on   17/01/2014    5 ಒಪ್ಪಂಗೊ

ಸುಭಗಣ್ಣಂಗೆ ಹೊಗೆಸೊಪ್ಪಿನ ಅಮಲಿಲೇ ಆತ್ಮ ತೃಪ್ತಿ ಇಪ್ಪ ಹಾಂಗೆ,
ಚೆನ್ನೈಭಾವಂಗೆ ಪುರಾಣ ಪಾರಾಯಣಲ್ಲೇ ಆತ್ಮತೃಪ್ತಿ ಇಪ್ಪ ಹಾಂಗೆ,
ಬಲಿಪ್ಪಜ್ಜಂಗೆ ಶೃತಿಪೆಟ್ಟಿಗೆ ಶಬ್ದಲ್ಲೇ ಆತ್ಮತೃಪ್ತಿ ಇಪ್ಪ ಹಾಂಗೆ,
ಪಾರ್ವತಿ ಅಜ್ಜಿಗೆ ದೇವತಾರಾಧನೆಲೇ ಆತ್ಮತೃಪ್ತಿ!

ದೊಡ್ಡಜ್ಜನ ಪೈಕಿ ಓ ಅಲ್ಲಿ ಕಣ್ಣನೂರಿಲಿ ಇದ್ದವಲ್ಲದೋ – ಅವರ ನೆರೆಕರೆಯ ಮನೆಲೇ ಈ ಪಾರ್ವತಿ ಅಜ್ಜಿ ಇಪ್ಪದು.
ಪೇಟೆಯ ಶಾಲೆಲಿ ಟೀಚರು – ಆದ ಕಾರಣ ಪಾರ್ವತಿ ಟೀಚರು ಹೇಳ್ತ ಕ್ರಮ ಇದ್ದು ಆ ಪರಿಸರದವು.
ಈಗ ರಿಠೇರ್ಡು ಆದರೂ ಅವರ ಟೀಚರು ಹೇಳಿಯೇ ಗುರುತುಸುತ್ತೋರ ಸಂಖ್ಯೆ ಕಡಮ್ಮೆ ಆಯಿದಿಲ್ಲೆ.
ಅದಿರಳಿ.

~
ಈ ಪಾರ್ವತಿ ಟೀಚರಿಂಗೆ ದೇವತಾರಾಧನೆಲೇ ಆತ್ಮತೃಪ್ತಿ ಹೇಳಿದೆ ಅಲ್ಲದೋ –
ಎಷ್ಟೊತ್ತಿಂಗೆ ನೋಡಿರೂ ಪಠನ – ಪಾರಾಯಣವೋ, ದೇವತಾರ್ಚನೆ-ದೇವತಾಲಂಕಾರವೋ ಮಾಡಿಗೊಂಡು ದೇವರ ನೆಂಪುಮಾಡಿಗೊಂಡೇ ಇಕ್ಕು. ಈಗ ಅತ್ತಿತ್ತೆ ಸುತ್ತಬಪ್ಪಲೇ ಬಂಙ ಆವುತ್ತರೂ ದೇವತಾರಾಧನೆ ಬಿಟ್ಟಿದವಿಲ್ಲೆ. ಈಗಾಣ ವೃದ್ಧಾಪ್ಯಲ್ಲೇ ಹೀಂಗೆ, ಆದರೆ ಮದಲಿಂಗೆ ಹೇಂಗಿದ್ದಿಕ್ಕು?
ಕುಂಟಾಂಗಿಲ ಭಾವನತ್ರೇ ಕೇಳೇಕಟ್ಟೆ..!

~

ಈಗಲ್ಲ, ಕುಂಟಾಂಗಿಲ ಭಾವ° ಶಾಲಗೆ ಹೋಪಗಾಣ ಕತೆ. ಹಳೇ ಕತೆ.
ಈಗ ಅವಂಗೆ ಊರು ಸುತ್ತುಸ್ಸೇ ಕೊಶಿ ಆದರೂ, ಓದುತ್ತ ಪ್ರಾಯಲ್ಲಿ ಪ್ರಯಾಣ ಹೇದರೆ ಆಗಲೇ ಆಗ.
ಹಾಂಗಾಗಿ ವಾರಲ್ಲಿ ಮೂರು ದಿನ ದೊಡ್ಡಜ್ಜನ ಮನೆಗೆ ಬಂದರೆ, ಮತ್ತೆ ಮೂರು ದಿನ ಕಣ್ಣನೂರು ಭಾವನ ಮನೆಲಿ ನಿಂಗು.
ಆಯಿತ್ಯವಾರ ಮಾಂತ್ರ ಕೊಡೆಯಾಲಕ್ಕೋ ಮಣ್ಣ ಹೋಗಿ ಬನ್ಸು ತಿಂತದು; ಅಷ್ಟೇ!

ಈ ಕುಂಟಾಂಗಿಲ ಭಾವ° ಕಣ್ಣನೂರು ಭಾವನ ಮನೆಗೆ ಹೋಗಿಂಡಿಪ್ಪಾಗಳೇ – ಅಲ್ಯಾಣ ನೆರೆಕರೆ ಮನೆಯ ಈ ಪಾರ್ವತಿ ಅಜ್ಜಿಯ ಒಳ್ಳೆತ ಗುರ್ತ ಆದ್ಸು. ಕುಂಟಾಂಗಿಲ ಭಾವ° ಹೇಳುಸ್ಸುಕೇಳಿ ಕೇಳಿಯೇ ಒಪ್ಪಣ್ಣಂಗೂ ಪರಿಚಯ ಆದ್ಸು.

~

ಪಾರ್ವತಿ ಅಜ್ಜಿಯ ದಿನಚರಿಯೇ ಹಾಂಗೆ.
ಉದಿಯಾದರೆ ದೈವದೇವರು, ಇರುಳೊರೆಂಗೂ ದೈವದೇವರು.
ಎಜಮಾನ್ರಿಂಗೆ ಬೇಂಕಿಲಿ ಕೆಲಸ, ಮಕ್ಕೊಗೆ ಶಾಲೆ ಕೋಲೇಜು ವಿದ್ಯಾಭ್ಯಾಸ.
ಇದರದ್ದೆಲ್ಲ ಏವ ತೆರಕ್ಕಿದ್ದರೂ, ಟೀಚರಜ್ಜಿಯ ದೇವತಾರಾಧನೆಗೆ ತೊಂದರೆಯೇ ಬಯಿಂದಿಲ್ಲೆ.
ರಿಟೇರ್ಡು ಅಪ್ಪನ್ನಾರವೂ ಎಡೆ ಬಯಿಂದಿಲ್ಲೆ, ಇನ್ನೂ ಬತ್ತಿಲ್ಲೆ. ಅದಿರಳಿ.

ಉದಿಯಪ್ಪಗ ಎದ್ದು ಶುದ್ಧ ಆಗಿ, ದೇವರ ಸಾಹಿತ್ಯಂಗಳ – ತಟ್ಟೆ ಹರಿವಾಣಂಗಳ ತೊಳದು, ದೇವರಿಂಗೆ ಹೂಗು ಕೊಯಿಗು.
ಇರುಳಾಣ ಭಜನೆಗೆ ಸಾಕಪ್ಪಷ್ಟೂ!
ತನ್ನ ವಳಚ್ಚಿಲಿಲ್ಲಿ ಇಪ್ಪದು ಸಾಲದ್ದರೆ ಕಣ್ಣನೂರು ಅತ್ತಿಗೆಯ ಕೈತೋಟಕ್ಕೂ ಬಕ್ಕು.
ಕುಂಟಾಂಗಿಲ ಬಾವ° ಹಸೆಂದ ಎದ್ದು ಹಲ್ಲು ತಿಕ್ಕಲೆ ಹೋಪಗ ಒಂದೊಂದರಿ ಈ ಪಾರ್ವತಿಟೀಚರ ಕಾಂಗು, ಅವರ ದಾಸನ ಗೆಡುವಿಂದ ಹೂಗು ಕೊಯಿಕ್ಕೊಂಡು ಇರ್ಸು.

ಇದಾದ ಮತ್ತೆ ಹೂಗಿನ ಮಾಲೆ ಕಟ್ಟಿ, ದೇವರ ಪಟಂಗಳ ಸುತ್ತ ಅಲಂಕಾರ ಮಾಡಿ, ದೀಪದ ಪ್ರಭೆಮಾಡಿಕ್ಕಿ, ಒಂದರಿ ಶಂಖ ಉರುಗಿದ ಮತ್ತೆಯೇ ಬಾಕಿ ಕೆಲಸಂಗೊ.

ಅದಾದ ಮತ್ತೆ ಅಡಿಗೆ ಕೋಣೆಲಿ ಕೆಲಸಂಗೊ ಹೇಂಗೂ ಇದ್ದನ್ನೇ! ಅದಕ್ಕೆಲ್ಲ ಏನೂ ತಾಪತ್ರೆ ಬಾರದ್ದಷ್ಟು ಬೇಗ ಏಳುಗಿದಾ..
ಉದಿಯಪ್ಪಗಾಣ ಕಾಪಿ ವೆವಸ್ತೆ ಆಗಿ, ಮಜ್ಜಾನದ ಬುತ್ತಿಗಿಪ್ಪದೂ ಆದ ಮತ್ತೆ ಒಬ್ಬೊಬ್ಬನನ್ನೇ ಹೆರಡುಸುಗು.
ಮಾವ° ಬೇಂಕಿಂಗೆ, ಮಕ್ಕೊ ಶಾಲೆ ಕೋಲೇಜಿಂಗೆ.
ಎಲ್ಲೋರಿಂಗೂ ಹೆರಟಾದ ಮತ್ತೆ ಟೀಚರು – ಮತ್ತೊಂದರಿ ದೇವರಿಂಗೆ ಹೊಡಾಡಿ – ಮನೆ ಬಾಗಿಲು ಹಾಕಿಂಡು, ಬೀಗಕ್ಕೂ ಒಂದು ನಮಸ್ಕಾರ ಮಾಡಿಕ್ಕಿ ಶಾಲಗೆ ಹೋಕು.

~

ಹೊತ್ತೋಪಗ – ಶಾಲೆ ಬಿಟ್ಟ ಮತ್ತೆ ಒಪಾಸು ಮನೆಗೆ.
ಕಾಪಿತಿಂಡಿ ತೆಯಾರಿ ಎಲ್ಲ ಆದಮತ್ತೆ ಮೀವಲೆ ಹೋಕು. ಮಿಂದಿಕ್ಕಿ ಬಂದ ಮತ್ತೆ ದೇವರ ದೀಪ ಹೊತ್ತುಸಿಕ್ಕಿ, ದೇವರನಾಮಂಗಳ ನೆಂಪು ಮಾಡಿಗೊಂಬದು. ಶಾರದೆ, ಸರಸ್ವತಿ, ಗೆಣವತಿ, ಶಿವ, ವಿಷ್ಣು ದೇವರುಗಳ ಸ್ತುತಿ ಮಾಡಿಗೊಂಡು, ಲಲಿತಾ ಸಹಸ್ರನಾಮವೋ, ವಿಷ್ಣು ಸಹಸ್ರನಾಮವೋ, ನಾರಾಯಣೀಯಮ್ಮೋ – ಹೀಂಗಿರ್ಸರ ಪಠಣ ಪಾರಾಯಣ ಮಾಡುಗು.
ಇದೆಲ್ಲ ಮಾಡಿ ಮುಗುಶುವ ಹೊತ್ತಿಂಗೆ ಮಕ್ಕೊ ಬಂದು ಕಾಪಿಕುಡುದು ಮಿಂದೂ ಅಕ್ಕು.
ಎಲ್ಲೋರಿಂಗೂ ಮಿಂದಾದ ಮತ್ತೆ ಎಂತರ?
ಭಜನೆ!!

~

ಭಜನೆ ಹೇದರೆ ಭರ್ಜರಿ ಭಜನೆ.
ರಾಗ-ತಾಳ-ಭಾವ ಮೂರರ ಸಮ್ಮಿಶ್ರ ಕೀರ್ತನೆ.
ದೇವರೊಳ ಎಲ್ಲೋರುದೇ ಕೂದುಗೊಂಡು ದೇವರ ನಾಮ ಸ್ಮರಣೆ. ಎದೂರು ಪಾರ್ವತಿ ಟೀಚರು, ಅವರ ಹಿಂದಂದ ಮಕ್ಕೊ.
ಟೀಚರು ಹೇಳಿಕೊಟ್ಟದರ ಮಕ್ಕೊ ಹೇಳುಲೆ.
ದಿನಾಗುಳೂ ಹೇಳಿದ್ದನ್ನೇ ಹೇಳಿ ಹೇಳಿ ಮಕ್ಕೊಗೂ ಕಂಠಸ್ಥ ಆಯಿದು; ಆದರೂ ಹೇಳಿ ಕೊಡುಸ್ಸು ಭಜನೆಯ ಕ್ರಮ ಅಲ್ಲದೋ?
ಹಾಂಗೆ, ದಿನಾಗುಳೂ ಅದೇ ಭಜನೆಗೊ ತಾನ ಆಗಿಂಡಿತ್ತು. ಪೂರ್ತ ಭಜನೆ ಇಡೀ ಟೀಚರಜ್ಜಿಗೆ ಅಲ್ಲೇ ಕೂದುಗೊಂಡು ಹೇಳುಲೆಡಿಯ. ಆದರೆ ಮಕ್ಕೊ ಕೂದುಗೊಂಡೇ ಇರೆಕ್ಕಾವುತ್ತಿದಾ. ಟೀಚರಜ್ಜಿ ಅಡಿಗೆ ಕೋಣೆಲಿಯೋ, ಕಡವ ಕಲ್ಲಿನ ಬುಡಲ್ಲಿಯೋ, ತರಕಾರಿ ಕೊರೆತ್ತಲ್ಲಿಯೋ – ಅಂಬೆರ್ಪಿಲಿದ್ದರೂ – ಬಾಯಿಲಿ ಭಜನೆ ತಿರುಗೆಂಡೇ ಇಕ್ಕು. ಕೆಲಸಲ್ಲಿದ್ದ ಹೆಮ್ಮಕ್ಕ ಆದಕಾರಣ ಸಮೆಯ ಹೊಂದುಸಿ ಕೆಲಸ ಮಾಡುದರಲ್ಲಿ ಭಾರೀ ಉಶಾರಿ ಟೀಚರಜ್ಜಿ ನಮ್ಮ ಕುಂಬ್ಳೆಜ್ಜಿಯ ಹಾಂಗೆ.

ಟೀಚರಜ್ಜಿ ಇಷ್ಟುದೇ ಭಜನೆಗಳ ಮಾಡುದರಂದ ಎಂತ ಲಾಭ ಹೇಳಿ ಕೇಳುಗು ಓ ಅಲ್ಲಿಪ್ಪ ಕೆಲವು ಬುದ್ಧಿಸಮಲ್ತ ಗೆಡ್ದಂತಾಲಿಗ.  ಟೀಚರಜ್ಜಿಗೆ ಜೀವನದ ಕಷ್ಟಂಗಳ ಎಡೆಲಿ ಮನಸ್ಸು ಹಗುರ ಮಾಡ್ಲೆ ಇದ್ದ ಹೊತ್ತೇ ಭಜನೆದು.  ನಿಧಾನಕ್ಕೆ ಭಜನೆ ಅವರ ಒಳ ಹೇಂಗೆ ಸೇರಿಗೊಂಡತ್ತು ಹೇದರೆ ಅವರ ಜೀವನದ ಭಾಗವೇ ಆಗಿ ಹೋತು. ನಮ್ಮ ಹೆರಿಯೋರು ಭಜನೆ ಮಾಡ್ತ ಕ್ರಮವ ರೂಢಿಗೆ ತಂದದೇ ನಮ್ಮ ನಿತ್ಯಬದುಕ್ಕಿಲಿ ದೇವಸ್ಮರಣೆ ನಮ್ಮೊಟ್ಟಿಂಗೆ ಇರೆಕ್ಕು ಹೇಳಿಯೇ ಅಲ್ಲದೋ.

ನಮ್ಮೂರ ಅಜ್ಜಿಯಕ್ಕಳ ಹಳೇ ಹಾಡುಗಳ ಒಳಗೊಂಡು ದಾಸರ ಪದಂಗೊ, ಮೀರಾ, ಕಬೀರರ ಹಿಂದಿ ಭಜನೆಗೊ, ರಾಮನಾಮ, ಹನುಮನಾಮ, ಶಿವಾರ್ಚನೆ – ಇದೆಲ್ಲವೂ ಬಕ್ಕು. ಹಾಂ° – ಹೇಳಿದಾಂಗೆ, ಅವಕ್ಕೆ ನೆಂಪಿದ್ದ ಎಲ್ಲ ಭಜನೆಗಳನ್ನೂ ಒಂದು ದಪ್ಪ ಬೈಂಡಿನ ಪುಸ್ತಕಲ್ಲಿ ಬರದು ಮಡಗಿದ್ದವು – ಪಕ್ಕನೆ ಮರದು ಹೋತಿಕ್ಕುದು ಬೇಡ ಹೇಳಿಯೋ, ಮಕ್ಕಗೆ ಕಲಿಯಲೆ ಸುಲಭ ಆಗಲಿ ಹೇಳಿಯೋ  – ಉಮ್ಮಪ್ಪ.
ಒಂದರಿ ಬೈಲಿಂಗೆ ಬೇಕಾತನ್ನೇ – ಹೇಳಿಮಡಗಿದ್ದ° ಕುಂಟಾಂಗಿಲ ಭಾವ°; ಯೇವಗಾರು ಒಂದಿನ ಬೈಲಿಲಿ ಬಂದರೂ ಆತು! ಅದಿರಳಿ.

~

ಇದೆಲ್ಲ ವಾರ ಇಡೀ ನೆಡದರೂ – ಶುಕ್ರವಾರದ ಭಜನೆ ಒಂದು ವಿಶೇಷ!
ಬಾಕಿ ದಿನ ಅಂತೇ ಭಜನೆ ಮಾಡಿ ಕುಂಕುಮ ಬೊಟ್ಟು ಹಾಕಿಕ್ಕಿ ನಮಸ್ಕಾರ ಮಾಡಿಕ್ಕಿ ಬಂದರೂ – ಶುಕ್ರವಾರ ವಿಶೇಷವಾಗಿ ಫಲನೈವೇದ್ಯ ಇದ್ದಿದಾ. ಕಣ್ಣನೂರಿನ ಓ ಆ ಕೊಂಕಣಿ ಅಂಗುಡಿಂದ ಹಣ್ಣುಹಂಪಲು ತಕ್ಕು ಬೇಂಕಿನಜ್ಜ°. ಪ್ರತಿ ಶುಕ್ರವಾರ ಭಜನೆಗಿರ್ಸು – ಹೇಳ್ತದು ಆ ಅಂಗುಡಿ ಜೆನಕ್ಕೂ ಗೊಂತಿದ್ದು. ಶುಕ್ರವಾರದ ದಿನಚರಿಯೂ ಒಳುದ ದಿನದ ಹಾಂಗೇ ಇದ್ದರೂ – ಆ ದಿನ ಭಜನೆ ಸುರು ಅಪ್ಪಗಳೇ ಒಂದು ತಟ್ಟೆಲಿ ತೊಳದು ಮಡಗಿದ ಹಣ್ಣುಹಂಪಲಿನ ಮಡಗುಸ್ಸು. ಕೆಲವು ಸರ್ತಿ ಕಣ್ಣನ್ನೂರು ಭಾವನಲ್ಲಿ ಆದ ಪೇರಳೆಯೋ, ಪನ್ನೇರಳೆಯೋ, ಪರಂಗಿಚೆಕ್ಕೆಯೋ ಕೊಡುಗು ಕಣ್ಣನ್ನೂರು ಅಕ್ಕ°. ಕುಂಟಾಂಗಿಲ ಭಾವನೂ ದೊಡ್ಡಜ್ಜನಲ್ಲಿಂದ ಏನಾರು ವಿಶೇಷ ಫಲ ಇದ್ದರೆ ತೆಕ್ಕೊಂಗಿದಾ.. ಊರ ಹಣ್ಣುಗೊ ಸಿಕ್ಕಿದರೆ ಟೀಚರಜ್ಜಿ ಒಂದು ಭಜನೆ ಹೆಚ್ಚೇ ಹೇಳುಗಿದಾ ಕೊಶೀಲಿ!

ಯೇವತ್ರಾಣ ಹಾಂಗೇ ಮಾಮೂಲು ಹೇಳ್ತ ಭಜನೆಗೊ ಅಲ್ಲದ್ದೆ, ನಮ್ಮಮ್ಮ ಶಾರದೆ, ಭಾಗ್ಯದ ಲಕ್ಷ್ಮಿ, ಲಕ್ಷ್ಮಿ ಬಂದಳೋ , “ಇಂದು ಶುಕ್ರವಾರಾ” – ಹೀಂಗಿರ್ಸ ದೇವಿ ಭಜನೆಗೊ ವಿಶೇಷವಾಗಿ ಹಾಡ್ಲಿದ್ದು. ಅಷ್ಟೂ ಅಲ್ಲದ್ದೆ, ಶುಕ್ರವಾರದ ಭಜನೆಗಪ್ಪಗ ಈ ಹತ್ತರಾಣ ಮನೆಯೋರುದೇ ಬಪ್ಪಲಿದ್ದು. ಅದೊಂದು ನಲ್ಕುರಿಯ ಹೇಳಿಕೆ ಆದ ಕಾರಣ, ಶುಕ್ರವಾರದ ಪಾರ್ವತಿ ಟೀಚರ ಭಜನೆಗೆ ಹೋಪಲಿದ್ದು ಹೇಳ್ತದು ಕುಂಟಾಂಗಿಲ ಭಾವನ ಮನೆಗೂ ಗೊಂತಿದ್ದು. ಅಲ್ಲಿ ಕಣ್ಣನೂರು ಭಾವ° ಅಂಬೆರ್ಪಿಲಿಯೋ ಮಣ್ಣ ಇದ್ದರೆ – ಕುಂಟಾಂಗಿಲ ಬಾವನ ಮೆಲ್ಲಂಗೆ ಕಳುಸಿಕೊಡುದು. ಫಲನೈವೇದ್ಯ ನೆಂಪಾದ ಲೆಕ್ಕಲ್ಲಿ ಕುಂಟಾಂಗಿಲ ಭಾವಂಗೂ ಅದು ಕೊಶಿಯೇ. ಅದಿರಳಿ.

ಭಜನೆ ಎಲ್ಲವುದೇ ಆದ ಮತ್ತೆ, ಮಂಗಳಾರತಿಯೂ ಆದ ಮತ್ತೆ, ತಂದ ಹಣ್ಣುಗಳ ಎಲ್ಲವನ್ನೂ ನಿಧಾನಕ್ಕೆ ಕೊರದು – ಎಷ್ಟು ಜೆನ ಇದ್ದವೋ – ಅಷ್ಟು ತಟ್ಟೆಗೆ ಹಾಕಿ; ಒಬ್ಬೊಬ್ಬಂಗೆ ಒಂದೊಂದು ತಟ್ಟೆ ಕೊಟ್ಟು, ತಾನೂ ತೆಕ್ಕೊಂಡ ಮತ್ತೆಯೇ ಪಾರ್ವತಿ ಟೀಚರಿಂಗೆ ಸಮಾಧಾನ. ಒಂದು ತಟ್ಟೆ ಸಿಕ್ಕಿದ ಮೇಗೆಯೇ ಕುಂಟಾಂಗಿಲ ಭಾವಂಗೂ ಸಮಾಧಾನ! 😉
~

ಅಂಬಗಳೇ ಇದಾ, ಕುಂಟಾಂಗಿಲ ಭಾವನ ಬಾಯಿಲಿ ಹಲವು ಹೊಸ ಭಜನೆಗೊ ತಿರುಗಿದ್ದು!!
ಸಕ್ಕರೆ ತುಪ್ಪಾ ಕಾಲುವೆ ಹರಿಸಿ – ಹೇಳಿಪ್ಪದರ ಶೆಕ್ಕರೆ ತುಪ್ಪಾ – ಕಾಯಾಲು ಅರುಶಿ..! ಹೇಳಿ ಈಗಳೂ ಹೋಳಿಗೆ ಹಂತಿಲಿ ಕೂದಿಪ್ಪಗ ನೆಂಪಪ್ಪಲಿದ್ದು ಕುಂಟಾಂಗಿಲ ಬಾವಂಗೆ. ವಾರ ಬಂತಮ್ಮಾ – ಹೇಳಿಪ್ಪದರ “ಕಾರು ಬಂತಮ್ಮಾ” – ಹೇಳಿಯೂ ಹೇಳ್ತವು.
ಅದೆಲ್ಲದಕ್ಕೆ ಕಳಶಪ್ರಾಯವಾಗಿ ಒಂದು –
ಇಂದು ಶುಕ್ರವಾರಾ….,
ಹಣ್ಣು ತಿಂಬ ವಾರಾ…!
– ಹೇದು!!  (ಶುಭವ ತರುವ ವಾರ ಹೇಳಿದ ದಾಸರ ಕ್ಷಮೆಕೋರಿ!)

ಟೀಚರಜ್ಜಿ ನೇವೇದ್ಯಕ್ಕೆ ಮಡಿಗಿದ್ದದು.  ಮುಟ್ಳಾಗಾತೋ
ಟೀಚರಜ್ಜಿ ನೇವೇದ್ಯಕ್ಕೆ ಮಡಿಗಿದ್ಸು.

ಕಿಟ್ಳಾಗಾತೋ

ಶುಕ್ರವಾರದ ಭಜನೆಯ ವಿಶೇಷವೇ ಅದು – ಅಲ್ಲದೋ?
ನೈವೇದ್ಯ ಹಣ್ಣು ತಿಂತದೂ ಒಂದು ಶುಭವೇ ಅಲ್ಲದೋ? ಕೇಳುಗು ಕುಂಟಾಂಗಿಲ ಭಾವ°.
ಕುಂಟಾಂಗಿಲ ಭಾವ ದೊಡ್ಡಜ್ಜನಲ್ಲಿಂದ ಹಣ್ಣು ತಂದದಿನ ಅವಂಗೆ ಒಂತುಂಡು ಹೆಚ್ಚಿಗೆ ಕೊಡುಗಿದಾ ಟೀಚರಜ್ಜಿ 😉
ಅದಕ್ಕೇ – ಕುಂಟಾಂಗಿಲ ಭಾವ° ಶುಕ್ರವಾರಕ್ಕಪ್ಪಗ ದೊಡ್ಡಜ್ಜನ ಮನೆಗೆ ಬಾರದ್ದೆ ಕಣ್ಣನೂರು ಭಾವನ ಮನೆಗೇ ಹೋಗಿಂಡಿದ್ದದು – ಹೇಳ್ತದು ಸುಭಗಣ್ಣಂಗೆ ಗೊಂತಿಪ್ಪ ಗುಟ್ಟು.

~

ಹ್ಮ್, ಕುಶಾಲು ಏನೇ ಇರಳಿ.
ಆ ಪಾರ್ವತಿ ಅಜ್ಜಿಯ ಅಪ್ರತಿಮ ದೈವ ಭಕ್ತಿಯ ಮಾಂತ್ರ ಮೆಚ್ಚಲೇಬೇಕು.
ಮಕ್ಕಳ ಎಲ್ಲೋರನ್ನುದೇ ಸಂಸ್ಕಾರಯುತರಾಗಿ ಮಾಡಿದ್ದಲ್ಲದ್ದೇ, ಬಿಡುವಿನ ಸಮಯ ಪೂರ್ತ ದೇವತಾರಾಧನೆಲಿ ತೊಡಗಿಂಡು, ಇಂದಿಂಗೂ ವೃದ್ಧಾಪ್ಯಲ್ಲಿ ಪುಳ್ಯಕ್ಕಳ ಸಕಾಯಲ್ಲಿ ಭಜನೆ-ಪಾರಾಯಣ ಮಾಡ್ತ ಸಂಗತಿ ಒಪ್ಪಣ್ಣಂಗೆ ಗೌರವ ಇದ್ದು.

ಇಂದ್ರಾಣ ಶುದ್ದಿ ಅವರ ಬಗ್ಗೆಯೂ ಅಲ್ಲ, ದಾಸರ ಪದದ ಬಗ್ಗೆಯೂ ಅಲ್ಲ; ಬದುಕ್ಕಿನ ಬಂಙದೆಡಕ್ಕಿಲಿ ದೇವಸ್ಮರಣೆಂದ ಬದುಕ್ಕಿನ ದಾರಿ ಸುಲಾಬ ಮಾಡಿಗೊಂಡು ಬಂದ ಹೆರಿಯೋರ ಬಗ್ಗೆ ನಮ್ಮ ಗಮನ ಹರಿಯಲಿ ಹೇದು.

ಸುಮಾರು ದಿನ ಆತು, ಒಂದು ಹಗುರ ಶುದ್ದಿ ಮಾತಾಡದ್ದೆ ಇದಾ.
ಜೀವನಲ್ಲಿ ನವಗೆ ಯಾವಾಗ ಎಂತ ಅನುಭವಿಸುಲೆ ಸಿಕ್ಕುತ್ತು ಹೇಳುಲೆ ಎಡಿಯ.
ಹಾಂಗೆ, ಒಂದು ಹಳೇ ಕತೆಯ ಬೈಲಿಂಗೆ ನೆಂಪುಮಾಡುವನೋ ಹೇದು ಕಂಡತ್ತು.

~
ಶುಕ್ರವಾರಂಗೊ ಮತ್ತೆ ಮತ್ತೆ ಬರಳಿ.
ಶುಭವೂ ತರಳಿ.
ನಮ್ಮ ಬಾಯಿಗೆ ಹಣ್ಣುಗೊ ಧಾರಾಳ ಸಿಕ್ಕಲಿ.
ನಮ್ಮ ಜಾಲಿಲಿಯೂ ಬಗೆಬಗೆ ಹಣ್ಣುಗೊ ಬೆಳದು ಟೀಚರಜ್ಜಿಯ ಭಜನೆಗೆ ನೇವೇದ್ಯ ಆಗಲಿ ಅಲ್ಲದೋ?
~

ಒಂದೊಪ್ಪ: ಹಣ್ಣು ತಿಂಬ ಹಾಂಗಾದರೆ, ಅದುವೇ ಶುಭ ಅಲ್ಲದೋ?

 

ವಿಸೂ: ಪಟ ಇಂಟೆರುನೆಟ್ಟಿಂದ

5 thoughts on “ಇಂದು ಶುಕ್ರ ವಾರಾ; ಹಣ್ಣು ತಿಂಬ ವಾರಾ….

  1. ಹರೇ ರಾಮ ,{ ಈ ಸರ್ತಿ ಎನ ರಜ ಹುಶಾರಿಲ್ಲದ್ದೆ ಆಗಿ ಒಪ್ಪಣ್ಣನ ಶುದ್ದಿ ಓದಲೇ ಎಡಿಗಾಯಿದಿಲ್ಲೆಯಿದ} ಈಶುದ್ದಿ ಓದಿಯಪ್ಪಗ ಒಂದು ಗಾದೆಮಾತು ನೆಂಪಾವುತ್ತು ‘ಮನಗೊಂದು ಅಜ್ಜಿ,ಒಲಗೊಂದು ಕೊೞಿ’ ಹೇಳುಗು.ಮನೆ ಮಂದಿಯ ಎಲ್ಲೋರನ್ನೂ ಸರಿಯಾಗಿ ಕೊಂಡು ನೆಡಶೆಕ್ಕಾರೆ ಒಂದು ಅನುಭವೀ ಪ್ರಾಯಸ್ಥೆ ಬೇಕಿದ.ಹಾಂಗೇ ಒಲೆಲಿ ಹೆಜ್ಜೆ ಮಡಗಿಕ್ಕಿ ಅದು ಬೇವನ್ನಾರ ಬಿಟ್ಟಿಕ್ಕಿ ಹೋಯೆಕ್ಕಾರೆ ಒಂದು ಗಟ್ಟಿ ಕೊೞಿ ಬೇಕು. ಒಪ್ಪ ಶುದ್ದಿ

  2. ಒಪ್ಪಣ್ಣನ ಶುದ್ದಿ ಓದಿಯಪ್ಪಗ ಎನ್ನಜ್ಜಿಯ ನೆಂಪಾತು ಪಚಾದದ ಬೆಲ್ಲ ಬಾಳೆಹಣ್ಣು ಮಕ್ಕೊಗೆ ಸಿಕ್ಕುವುದದ. ಒಂದಾರಿ ಪಚಾದ ಬೆಲ್ಲಕ್ಕೆ ಎರುಗು ಬಂದದರ ಕತ್ಲೆಲಿ ನೋಡದ್ದೆ ತಿಂದು ಬಾಯಿ ಹುಳಿಯಾದ್ದದುದೆ ನೆಂಪಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×