ಎಣ್ಣೆ ಮುಗಿವಾಗ ಬತ್ತಿ ಜೋರಾಗಿ ಹೊತ್ತುತ್ತಾಡ. ಅದೇ ನಮುನೆಲಿ ಒಂಭತ್ತು ದಿನದ ಗೌಜಿಯ ಶರನ್ನವರಾತ್ರಿ ಮುಗಿವಗಳೂ ಜೋರಾಗಿ – ದಶಮಿಯ ಆಚರಣೆ ಮಾಡಿಗೊಂಬದು ನಮ್ಮ ಕ್ರಮಲ್ಲಿ ಬತ್ತು.
ಆ ಪ್ರಕಾರ ಹತ್ತನೇ ದಿನದ ದಶಮಿ ಗೌಜಿಲಿ ಕಂಡೇ ಹಬ್ಬ ಮುಗುಶುದು.
ಒಂಭತ್ತೂ ದಿನ ದೇವಿ ದುರ್ಗೆ ಒಂದೊಂದು ಅವತಾರಧಾರಿಣಿಯಾಗಿ ಒಂಭತ್ತು ರಾಕ್ಷಸರ ಕೊಂದು ಲೋಕಲ್ಲಿ ಶಾಂತಿಯನ್ನೂ ಸಮೃದ್ಧಿಯನ್ನೂ ಕಾಣುಸಿದ್ದು.
ಹೀಂಗಾಗಿ, ಹತ್ತನೇದಿನ “ವಿಜಯ” ಆಚರಣೆ ಮಾಡ್ತ ವಿಜಯ ದಶಮಿಯಾಗಿ ಆಚರಣೆ ಮಾಡ್ತವು.
ಇದೇ ಕ್ರಮವ ರಾಜರುದೇ ಅನುಸರುಸಿಗೊಂಡು ಬಂದ ಕಾರಣ ಆ ದಿನವ ವಿಜಯ ದಶಮಿ ಹೇದು ಆಚರಣೆ ಮಾಡಿ, ಆಯುಧಂಗಳ ಪೂಜೆ ಮಾಡಿಗೊಂಡು ಇತ್ತಿದ್ದವಾಡ.
ರಾಜಸ್ಥಾನದ ರಥ ಕತ್ತಿ, ಗುರಾಣಿ, ಈಟಿ, ಪತಾಕೆ ಇತ್ಯಾದಿ ಸಲಕರಣೆಗಳ ಆ ದಿನ ದೇವಿಯ ಎದುರು ಮಡಗಿ – ಅಬ್ಬೆ ದೇವೀ – ನಿನ್ನ ಆಶೀರ್ವಾದಲ್ಲಿ ಇಷ್ಟೊರಿಶ ಗೆದ್ದಿದೆಯೊ. ಈ ಒರಿಶವೂ ಗೆಲ್ಲುಸು – ಹೇದು ಪ್ರಾರ್ಥನೆ ಮಾಡಿಗೊಂಡು ಬಪ್ಪದು. ಆ ದಿನದ ಸೂಚಕವಾಗಿ ರಾಜ್ಯ ವಿಸ್ತಾರದ ಶಾಸ್ತ್ರ ಮಾಡುದಾಡ.
ಗಡಿಯ ಹತ್ತರಾಣ ಎರಡು ಹಳ್ಳಿಗೆ ಹೋಗಿ ಜಯಿಸಿಗೊಂಡು ಬಪ್ಪದು – ಆ ದಿನದ ಕ್ರಮ ಆಡ.
ಕ್ರಮೇಣ ಕಾಲ ಬದಲಾದ ಹಾಂಗೆ ಆಯುಧವೂ ಬದಲಾಗಿಂಡು ಬಂತು. ಕತ್ತಿ ಗುರಾಣಿ ಇಪ್ಪ ಜಾಗೆಲಿ ಬೆಡಿ ಮದ್ದು ಗುಂಡುಗೊ ಬಂತು.
ಆಯುಧ ಪೂಜೆಗೆ ಅದನ್ನೂ ಸೇರ್ಸಿಗೊಂಡವು.
ರಥದ ಬದಲು ಹೊಸ ಹೊಸ ನಮುನೆ ವಾಹನಂಗೊ ಬಂತು.
ಅದನ್ನೂ ಸೇರ್ಸಿಗೊಂಡವು.
ಈ ಪರಿವಾಡಿ ಈಗಳೂ ಬೆಳದು ಬತ್ತಾ ಇದ್ದು. ಈಗೀಗಂತೂ ನಮ್ಮ ಹತ್ತರೆ ಇಪ್ಪ ಕಾರು ಬೈಕ್ಕುಗಳನ್ನೂ ಪೂಜೆ ಮಾಡ್ತ ಸಂಗತಿ ನೆಡೆತ್ತಾ ಇದ್ದು.
ಆಯುಧ ಪೂಜೆಲಿ ಅದುದೇ ಬಂತು – ಹೇದು ಲೆಕ್ಕ.
ಮೊದಲಾಣ ಲೆಕ್ಕವೇ ಈಗಳೂ ಲೆಕ್ಕ, ಅಷ್ಟೆ.
ಆಗಲಿ, ತಪ್ಪೇನಿಲ್ಲೆ. ವೇಗದ ಜಗತ್ತಿಲಿ ಬದ್ಕುಲೆ ಅದುದೇ ಆಯುಧಂಗಳೇ – ಹೇಳುಗು ಮಾಷ್ಟ್ರುಮಾವ°.
ಅದಿರಳಿ.
~
ಮಾಷ್ಟ್ರುಮಾವಂಗೆ ಜೀವನ ಜಯಿಸುಲೆ ವಿದ್ಯೆಯೇ ಆಯುಧ ಆತು. ವಿದ್ಯೆಯ ಅಧಿದೇವತೆ ಸರಸ್ವತಿಯ ಅನುಗ್ರಹ ಇದ್ದುಗೊಂಡರೆ ಎಂತದನ್ನೂ ಬೇಕಾರೂ ಗೆಲ್ಲುಲೆ ಅಕ್ಕು – ಹೇದು ಮನಗಂಡಿತ್ತಿದ್ದವು.
ಅಲ್ಲದ್ದರೂ ನಮ್ಮ ಸಮಾಜಲ್ಲಿ ಆಯುಧಂದ ಗೆದ್ದವರಿಂದಲೂ ವಿದ್ಯೆಂದ ಗೆದ್ದವೇ ಹೆಚ್ಚು.
ವಿದ್ಯೆಯನ್ನೇ ಆಯುಧವಾಗಿ ಪಡೆತ್ತೋರಿಂಗೂ – ಅದೇ ಆಯುಧಪೂಜೆಯ ದಿನವೇ ಗೌಜಿ.
ಅಪ್ಪು.
~
ನವರಾತ್ರಿಯ ಹತ್ತನೇ ದಿನ ವಿದ್ಯಾಧಿದೇವತೆಯಾದ ಶಾರದೆಯ ಪೂಜೆ ಮಾಡ್ತ ಕ್ರಮವೂ ಇದ್ದು ಬೈಲಿಲಿ.
ಮೂಲೇದಾವಾಹಯೇದ್ದೇವೀ ಶ್ರವಣೇನ ವಿಸರ್ಜಯೇತ್ – ಹೇದರೆ, ಮೂಲಾ ನಕ್ಷತ್ರಲ್ಲಿ ಆವಾಹನೆ ಮಾಡಿ, ಶ್ರವಣಾ ನಕ್ಷತ್ರಲ್ಲಿ ವಿಸರ್ಜನೆ ಮಾಡೇಕು – ಹೇದು ಶಾಸ್ತ್ರ ಹೇಳ್ತಾಡ.
ಆ ಪ್ರಕಾರಲ್ಲಿ ನವರಾತ್ರಿಯ ದಿನಂಗಳಲ್ಲಿ ಮೂಲಾ ನಕ್ಷತ್ರ ಬಂದಿಪ್ಪಾಗ ಆವಾಹನೆ ಮಾಡುಸ್ಸು.
ಮನೆಲಿಪ್ಪ ಪುಸ್ತಕಂಗಳಲ್ಲಿ ಶ್ರೇಷ್ಠವಾದ್ಸರ ಹುಡ್ಕಿ ಹೆರ್ಕಿ ತಂದು ಎರಡು ಮೂರು ಅಟ್ಟಿ ಮಾಡಿ ದೇವರ ಕೋಣೆಲಿ ಮಣೆಲಿ ಮಡಗ್ಗು.
ಮೂರೂ ದಿನ ನಿತ್ಯ ಪೂಜೆಯ ಒಟ್ಟಿಂಗೆ ಅದಕ್ಕೂ ಪೂಜೆ.
ಮೂರ್ನೇ ದಿನ ಅದಕ್ಕೊಂದು ಮಂಗಳಾರತಿ.
ಚೀಪೆ ಅವಲಕ್ಕಿ ಪ್ರಸಾದ.
ಇಷ್ಟಾಗಿ ಮನೆ ಎಜಮಾನ್ರು ಒಂದೊಂದೇ ಪುಸ್ತಕವ ಪ್ರಸಾದ ರೂಪಲ್ಲಿ ಮನೆಯೋರಿಂಗೆ ಹಂಚುಗು.
ಎಲ್ಲೋರುದೇ ಒಂದೊಂದು ಅಧ್ಯಾಯ ಓದೇಕು – ಹೇದು ಲೆಕ್ಕ.
ಯೇವಗ ಓದದ್ದೋನುದೇ ಆ ದಿನ ಒಂದು ಓದೆಕ್ಕಿದಾ, ಉದಾಸ್ನ ಬಿಟ್ಟು.
ಈಗೀಗ ಕೆಲವು ದಿಕ್ಕೆ ಶಾರದಾ ಪೂಜೆ – ಹೇದು ಗೌಜಿಲಿ ಮಾಡ್ತದು ಕಾಣ್ತು.
ಶಾರದೆಯ ಮೂರ್ತಿಯ ಮಡಗಿ, ಗೆಣವತಿ ಮೂರ್ತಿಯ ಹಾಂಗೇ ಪೂಜೆ ಪುನಸ್ಕಾರ ಮಾಡಿ – ಎಲ್ಲ ಮಾಡ್ತವು.
ಎಲ್ಲ ಸರಿ – ಆದರೆ ಮೂರ್ನೇ ದಿನ ಬೆಳ್ಳಕ್ಕೆ ಬಿಡುಸ್ಸು ಎಂತ್ಸಕೆ – ಹೇದು ಆಚಮನೆ ದೊಡ್ಡಣ್ಣಂಗೆ ಸಮದಾನ ಇಲ್ಲೆ.
ಗೆಣವತಿಯ ಬೆಳ್ಳಕ್ಕೆ ಬಿಡ್ತದಕ್ಕೆ ಒಂದು ಉಪಕತೆ ಇದ್ದು, ಆದರೆ ಶಾರದೆಯ ಬೆಳ್ಳಕ್ಕೆ ಬಿಟ್ರೆ ಅಕ್ಕೋ?
~
ಅದೇನೇ ಇರಳಿ, ಶಾರದಾ ಪೂಜೆ ಆವುತ್ತು. ಗೌಜಿಲಿ.
ಮದಲಿಂಗೆ ಶಾಲೆ ಶಾಲೆಗಳಲ್ಲಿಯೂ ಆಗಿಂಡು ಇದ್ದತ್ತು.
ಹೆಡ್ಮಾಷ್ಟ್ರ ಗುರಿಕ್ಕಾರ್ತಿಗೆಲಿ, ಆ ಊರ ಆರಾರು ಭಟ್ಟಮಾವನ ದಿನಿಗೆಳಿ, ಚೆಂದಕೆ ಒಂದು ಪೂಜೆ.
ಬಟ್ಟಮಾವ ಮಂತ್ರ ಹೇಳುವಾಗ ಮಕ್ಕೊ ಎಲ್ಲ ಕೂದುಗೊಂಡು ಭಜನೆ ಮಾಡುಸ್ಸು.
ಭಟ್ಟಮಾವ ಪೂಜೆ ಮುಗುದು ಮಂಗಳಾರತಿಗೆ ಅಪ್ಪಗ ಭಜನೆಯೂ ಮುಗಿಗು.
ಏಳ್ನೇ ಕ್ಲಾಸಿನ ದೊಡ್ಡ ಮಕ್ಕೊ ಭಜನೆಗೆ ಕೂಪಲೆ ಇಲ್ಲೆ, ಅವಕ್ಕೆ ಕಾಯಿ ಕೆರೆಸ್ಸು, ಬೆಲ್ಲ ಕೆರಸುಸ್ಸು – ಹೀಂಗಿರ್ಸ ಕೆಲಸಂಗೊ.
ಚೀಪೆ ಅವಲಕ್ಕಿ ಅಷ್ಟೂ ಜೆನಕ್ಕೆ ಆಗೆಡದೋ ಮತ್ತೆ!?
ಕಾಂಬಲೇ ಇಲ್ಲೆ ಹೇದು ಅಪ್ಪದಕ್ಕೆ ಈಗ ನಮ್ಮವರ ಉಸ್ತುವಾರಿಲಿ ಇಪ್ಪ ಕೆಲವೇ ಕೆಲವು ಶಾಲೆಗಳಲ್ಲಿ ಆವುತ್ತಾಡ ಈ ಪೂಜಾ ಕೈಂಕರಿಯಂಗೊ.
ನಮ್ಮ ಮುಜುಂಗಾವು ಶಾಲೆಲಿ ಕೋಣಮ್ಮೆ ಬಟ್ಟಮಾವನ ಉಸ್ತುವಾರಿಲಿ ಪೂಜೆ ಆವುತ್ತಾಡ ಇದಾ.
ಸರ್ಕಾರಿ ಶಾಲೆಗಳಲ್ಲಿ ಎಲ್ಲ ಗೋವಿಂದ. “ಜಾತ್ಯತೀತ ವಾದ” ಬಂದ ಕಾರಣ ಇದಕ್ಕೆ ಕೊಕ್ಕೆ ಬಿದ್ದಿದು.
ಕ್ರಿಸ್ಮಸ್ಸು ವೇಶ ಹಾಕಲೆ ಸಮಸ್ಯೆ ಬತ್ತಿಲ್ಲೆ ಇವಕ್ಕೆ. ತಲೆತಲಾಂತರಂದ ನೆಡದ ಶಾರದಾ ಪೂಜೆ ಮುಂದುವರುಸಲೆ ಮಾಂತ್ರ ಕಷ್ಟ ಅಪ್ಪದು. ಪೋ!
~
ಇದೇ ದಿನ ವಿದ್ಯಾರಂಭವೂ ಮಾಡ್ತವಾಡ. ಅಕ್ಶರ ದೇವಿ ಸರಸ್ವತಿಯ ನೆಂಪು ಮಾಡಿಗೊಂಡು ಮಕ್ಕೊಗೆ ವಿದ್ಯಾರಂಭ ಮಾಡಿಗೊಂಬದು.
ಕೆಲವು ಜೆನ ಮನೆಲೇ ಮಾಡ್ಸಿಗೊಳ್ತವು. ಕೆಲವು ಜೆನ ಯೇವದಾರು ದೇವಸ್ಥಾನಲ್ಲಿ. ಕೆಲವು ಜೆನ ಕೋಣಮ್ಮೆ ಭಟ್ಟಮಾವನ ಹಾಂಗಿಪ್ಪ ಮಹನೀಯರ ಕೈಲಿ, ಕೆಲವು ಜೆನ ಶ್ರೀ ಗುರುಗಳ ಹತ್ತರೆ ಹೋಗಿ ಸರಸ್ವತೀ ಅನುಗ್ರಹ ಮಾಡ್ಸಿಗೊಳ್ತವು.
ವಿದ್ಯಾ ಕ್ಷೇತ್ರಕ್ಕೆ ಹೊಸ ವಟುಗಳ ಆಗಮನ. ವಿದ್ಯೆಯನ್ನೇ ಆಯುಧ ಆಗಿ ಹಿಡುದು ಹೋರಾಡುವ ಜಗತ್ತಿಂಗೆ ಹೊಸ ಸೇನಾನಿಗಳ ಆಗಮನದ ದಿನ.
~
ಅದೇನೇ ಇರಳಿ. ಅಂತೂ ನವರಾತ್ರಿಯ ದಶಮಿ ಹೇದರೆ – ಎಲ್ಲೋರಿಂಗೂ ಗೌಜಿ.
ವಿದ್ಯೆ ಬಯಸುವ ವಿದ್ಯಾರ್ಥಿಗೊಕ್ಕೂ, ವಿಜಯ ಬಯಸುವ ಸೇನಾನಿಗೊಕ್ಕೂ – ಅವರವರ ಆಶೆ ಸಿದ್ಧಿಸಲಿ – ಹೇದು ಬೈಲಿನ ಹಾರೈಕೆ.
~
ಒಂದೊಪ್ಪ: ವಿದ್ಯಾರ್ಥಿಗೊ ನಿತ್ಯ ಸೇನಾನಿಗೊ; ಸೇನಾನಿಗೊ ನಿತ್ಯ ವಿದ್ಯಾರ್ಥಿಗೊ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಶರ್ಮ ಭಾವ ಹೇಳಿದಾಂಗೆ ಆನು ಹೋದ [ಕಳತ್ತೂರು] ಶಾಲೇಲಿ ಶುಕ್ರವಾರ ಭಜನೆ,ವಿದ್ಯಾ ದಶಮಿಗೆ ಪೂಜೆ ಇತ್ತಿದ್ದು. ಆದರೆ ವಿಸರ್ಜನೆ ಆಡಂಬರ ಇತ್ತಿಲ್ಲೆ. ಪೂಜೆಂದ ಹೆಚ್ಚಿಗೆ ವಿಸರ್ಜನೆ ಗೌಜಿ ಇತ್ತೀಚೆಗಾಣದ್ದು.
ಎಂಗೊ ಸರ್ಕಾರೀ ಶಾಲೆಗೆ (ಕೇರಳ) ಒಂದನೇ ಕ್ಲಾಸಿಂದಲೇ ಹೋದ ಜೆನಂಗೋ. ಆ ದಿನಗಳಲ್ಲಿಯೇ ಎಂಗಳ ಶಾಲೇಲಿ ಪೂಜೆ ಪದ್ಧತಿ ಇತ್ತಿದ್ದಿಲ್ಲೇ. ಮನೇಲಿ ಮೂರು ದಿನ ಪೂಜೆ ಆಗಿಂಡು ಇತ್ತಿದ್ದು.
ಎನಗೆ ಗೊಂತಿಪ್ಪ ಇನ್ನೊಂದು ಪ್ರೈವೇಟ್ ಶಾಲೆಲಿ, ಶಾರದಾ ಪೂಜೆ ಅಲ್ಲದ್ದೆ ಶುಕ್ರವಾರ ಪೂಜೆ ಕೂಡಾ ನಡಕ್ಕೊಂಡು ಇತ್ತಿದ್ದು.
ಈಗ ಆಡಂಬರಕ್ಕೆ ಪ್ರಾಧಾನ್ಯತೆ ಬಂದು,ಶಾರದಾದೇವಿಯ ಮೂರ್ತಿ ಮಡುಗಿ, ಅದರ ವಿಸರ್ಜನೆಗೆ ಪ್ರಾಮುಖ್ಯತೆ ಆಗಿ ಹೋಯಿದು.
ಒಪ್ಪಣ್ಣನ ಶುದ್ದಿ ಓದಿ ಹಳೆಯ ನೆಂಪುಗೊ ಮರುಕಳಿಸಿತ್ತು. ನೀರ್ಚಾಲು ಶಾಲೆಲಿ ಪುಸ್ತಕ ಪೂಜಗೆ ಮಡಗಲೆ ಬೇಕಾಗಿ ಪುಸ್ತಕಕ್ಕೆ ಚೆಂದಕೆ ತಟ್ಟಿ(ಬೈಂಡು) ಹಾಕಿ ಕೊಟ್ಟದು ನೆಂಪಾತು. ಕಾಗದಲ್ಲಿ ಅವಲಕ್ಕಿ ಪ್ರಸಾದ ತಿಂಬಗ ಅದೆಂತ ಕೊಶಿ. ಆಚಮನೆ ದೊಡ್ಡಣ್ಣ ಹೇಳಿದ್ದು ನಿಜ ಒಪ್ಪಣ್ಣ. ಮನ್ನೆ ಕೊಡೆಯಾಲಲ್ಲಿಯುದೆ ಶಾರದೆಯ ಮೂರ್ತಿಗೆ ಚೆಂದಕೆ ಮದುಮಗಳ ಹಾಂಗೆ ಅಲಂಕಾರ ಮಾಡಿಕ್ಕಿ ಕಡೆಂಗೆ ನೀರಿಲ್ಲಿ ಮುಂಗುಸಿದ್ದು ಕಾಂಬಗ ಬೇಜಾರು ಆತು.