Oppanna.com

ವಂದೇ ಮಾತರಂ-ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಮಂತ್ರ

ಬರದೋರು :   ಶರ್ಮಪ್ಪಚ್ಚಿ    on   13/08/2017    13 ಒಪ್ಪಂಗೊ

ಸ್ವಾತಂತ್ರ್ಯೋತ್ಸವದ ಈ ಸೌಸಂದರ್ಭಲ್ಲಿ ಬಡೆಕ್ಕಿಲ ಅತ್ತೆ ನವಗಾಗಿ ವಿಶೇಷ ಲೇಖನ ಒದಗಿಸಿಕೊಟ್ಟಿದವು. ಆ ಸಮಯಲ್ಲಿ ಪ್ರತ್ಯಕ್ಷದರ್ಶಿಗಳಾಗಿಯೂ ಇತ್ತಿದ್ದ ಇವು, ಬಂಕಿಂಚಂದ್ರರ ಆನಂದ ಮಠ ಕಾದಂಬರಿ, ವಂದೇ ಮಾತರಂ ಸ್ತೋತ್ರ ಇದು ಯಾವ ರೀತಿ ಅಂದ್ರಾಣ ಜನಂಗಳಲ್ಲಿ ಸ್ವಾತಂತ್ರ್ಯದ ಕೆಚ್ಚು ಮೂಡಿಸಿದ್ದುಹೇಳುವದರ ವಿವರವಾಗಿ ಮನಸ್ಸಿಂಗೆ ತಟ್ಟುವಹಾಂಗೆ ಲೇಖನ ರೂಪಲ್ಲಿ ಒದಗಿಸಿದ್ದವು. ಸದ್ಯದ ಪರಿಸ್ಥಿತಿಲಿ ಭಯೋತ್ಪಾದನೆ ಏರುತ್ತಾ ಇಪ್ಪದರ ನಾವು ಯಾವ ರೀತಿಲಿ ಎದುರುಸೆಕ್ಕು ಹೇಳ್ತ ಮಾರ್ಗಸೂಚಿ ಕೊಟ್ಟು ಇದರಲ್ಲಿ ನಾವು ಯಶಸ್ಸು ಪಡೆಕು ಹೇಳ್ತ ಆಶಾಭಾವವನ್ನೂ ಹೊಂದಿದ್ದವು.

ಲೇಖನವ ಓದಿ ನಿಂಗಳ ಅಭಿಪ್ರಾಯ ಬರದು ಪ್ರೋತ್ಸಾಹಿಸಿ

-ಶರ್ಮಪ್ಪಚ್ಚಿ

ಬಡೆಕ್ಕಿಲ ಸರಸ್ವತಿ

||ವಂದೇ ಮಾತರಂ||
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಮಂತ್ರ

ಕ್ರಿ.ಶ. 1800-ರ ಕಾಲಮಾನ, ಭಾರತದ ಪೂರ್ವಭಾಗ ವಂಗದೇಶಲ್ಲಿ (ಬಂಗಾಳಲ್ಲಿ)  ಶೂರವೀರ ಸನ್ಯಾಸಿಗಳ ಸಂಘಟನೆಯೊಂದು ಅಸ್ಥಿತ್ವಕ್ಕೆ ಬಂತು. ಭಾರತದ ರಾಜ ಮಹಾರಾಜರ “ಅತಿಥಿದೇವೋಭವ” ಎಂಬಂಥ ಉದಾರತೆಯ ದುರುಪಯೋಗ ಮಾಡಿ, ವ್ಯಾಪಾರಕ್ಕೆ ಹೇಳಿ ಬಂದ ಇಂಗ್ಲೆಂಡಿನ ಈಸ್ಟ್ ಇಂಡಿಯಾ ಕಂಪೆನಿಯೊರು ತಮ್ಮ ಸರಕು ಸಾಮಾಗ್ರಿಗಳ ರಕ್ಷಣೆಯ ನೆಪ ಒಡ್ಡಿ, ತಮ್ಮದೇ ರಾಜ್ಯ ಹೇಳುವ ಹಾಂಗೆ ಕೋಟೆ ಕಟ್ಟಿ, ಇಂಗ್ಲೆಂಡಿಂದ ಸೈನ್ಯವನ್ನೂ ತರ್ಸಿ ಮಡಿಕ್ಕೊಂಡು, ತಮಗೆ ಆಶ್ರಯ ಕೊಟ್ಟ ರಾಜನನ್ನೇ ಉಚ್ಚಾಟನೆ ಮಾಡಿ, ಒಂದೊಂದೇ ರಾಜ್ಯವ ಕುಟಿಲೋಪಾಯಲ್ಲಿ ವಶ ಮಾಡಿಗೊಳ್ತಾ ಬಂದು ಇಡೀ ದೇಶವನ್ನೇ ಕಬಳಿಸಿ, ಸರ್ವಾಧಿಕಾರ ನಡೆಶಿ, ಭಾರತದ ನೆಲ ಜಲದ ಮೇಲೆ ತಮ್ಮ ಆಧಿಪತ್ಯ ಮಾಡಿಗೊಂಡು, ಭಾರತೀಯರನ್ನೆಲ್ಲಾ ಗುಲಾಮರನ್ನಾಗಿ ಮಾಡಿ, ಅವರ ಎಲ್ಲಾ ಹಕ್ಕುಗಳನ್ನೂ ಕಸುದು ತೆಗದು, ದಬ್ಬಾಳಿಕೆ ಅತ್ಯಾಚಾರ ಮಾಡ್ತಾ ಇಪ್ಪದರ ನೋಡಿದ,  ಅನುಭವಿಸಿದ ಕೆಲವು ಸ್ವಾಭಿಮಾನೀ ಬಂಗಾಳೀ ಜವ್ವನಿಗರು, ಈ ಪಾಶ್ಚಾತ್ಯರ ಹೆರ ಅಟ್ಟುವ ಶಪಥ ಮಾಡಿದವು. ಸುಮಾರು 800 ಕ್ಕೂ ಹೆಚ್ಚು ತರುಣರು ಸನ್ಯಾಸ ದೀಕ್ಷೆ ಪಡದು (ಕೆಲವು ಪುರುಷವೇಷಧಾರಿ ಹೆಮ್ಮಕ್ಕಳೂ ಗುಟ್ಟಾಗಿ ಸೇರಿತ್ತಿದ್ದವು) ತಮ್ಮ ನಾಯಕ ಗುರುವಿನ ಮುಂದೆ ಮಡಿಕ್ಕೊಂಡು ಕಾಡಿನೊಳ ದುರ್ಗಾದೇವಿಯ ಸಮಕ್ಷಮಲ್ಲಿ ಪ್ರಮಾಣಮಾಡಿ ವಚನಬದ್ಧರಾದವು. ಕಾಡಿನ ಆ ರಹಸ್ಯ ತಾಣಲ್ಲಿ ಶಸ್ತ್ರಾಸ್ತ್ರ ಸಂಗ್ರಹ ಮಾಡಿಗೊಂಡು ಯುದ್ಧವಿದ್ಯೆ ಶಸ್ತ್ರಾಭ್ಯಾಸವೂ ಮಾಡಿ ಬ್ರಿಟಿಷರ ಬಗ್ಗು ಬಡಿವಲೆ ಸಮಯ ಕಾಯ್ತಾ ಇಪ್ಪಾಗಳೇ ದುರದೃಷ್ಟವಶಾತ್ ಇವರ ಅಡಗುತಾಣ ಮತ್ತು ಸೈನಿಕ ಚಟುವಟಿಕೆಗಳ ಪತ್ತೆ ಶತ್ರುಗಳ ವಶವಾಗಿ ಹೋತು. ಈ ವಿಷಯ ಸನ್ಯಾಸಿಗೊಕ್ಕೆ ಗೊಂತಾವ್ತಾ ಇದ್ದ ಹಾಂಗೆ, ಕಂಪೆನಿ ಸೈನ್ಯ ಇವರ ಮೇಲೆ ಗುಂಡಿನ ಮಳೆ ಸುರಿಸಿದವು. ಸನ್ಯಾಸಿಗಳ ಹತ್ತರೆ ಕತ್ತಿ, ಗುರಾಣಿ, ಬಿಲ್ಲು, ಬಾಣಂಗಳೇ ಇದ್ದದು. ಒಂದು ಹೊಡೆಲಿ ಅನಿರೀಕ್ಷಿತ ಆಕ್ರಮಣ, ಮದ್ದುಗುಂಡುಗಳ ಕೊರತೆ. ಹಾಂಗಿದ್ದರೂ ಜೀವದ ಹಂಗಿಲ್ಲದ್ದೆ ಸನ್ಯಾಸಿಗೊ ಕಾದಾಡಿ ವೀರಗತಿ ಪಡದವು. ಇವರ ಸಕಲ ಪ್ರಯತ್ನಂಗೊ ನಿಷ್ಫಲ ಆಗಿಹೋತು. ಆದರೂ ಇವರ ಬಲಿದಾನ ವ್ಯರ್ಥ ಆಯಿದಿಲ್ಲೆ ಎಂಬದು ಮುಂದೆ ಎಂಬತ್ತೆರಡು ವರ್ಷ ಕಳಿವಾಗ, ಇಡೀ ಭಾರತಾದ್ಯಂತ ಸ್ವಾತಂತ್ರ್ಯ ಹೋರಾಟಕ್ಕೆ ಮಹಾಸಂದೇಶ ಆಗಿ ಬಿರುಗಾಳಿಯ ಹಾಂಗೆ, ಕಾಳ್ಗಿಚ್ಚಿನ ಹಾಂಗೆ, ಆದರೆ ಬ್ರಿಟಿಷರ ಗಮನಕ್ಕೆ ಬಾರದ್ದ ರೀತಿಲಿ ಇಡೀ ದೇಶಕ್ಕೆ ವ್ಯಾಪಿಸಿತ್ತು. ಇದಕ್ಕೆ ಕಾರಣ ಬಂಕಿಂಚಂದ್ರ ಚಟರ್ಜಿಯ “ಆನಂದ ಮಠ” ಎಂಬ ಕಾದಂಬರಿ ಹೇಳಿದರೆ ಆರಿಂಗೇ ಆದರೂ ಆಶ್ಚರ್ಯ ಅಕ್ಕಲ್ಲದಾ? ಕತ್ತಿಂದಲೂ ಪ್ರಬಲ ಶಕ್ತಿಶಾಲಿಯಾದ್ದು  ಲೇಖನಿ ಎಂಬ ಉಕ್ತಿಗೆ ಈ ಕಾದಂಬರಿ ಸಾಕ್ಷಿ!.

ಕ್ರಿ.ಶ 1838 ರ ಜುಲಾಯಿ 27 ರಂದು ಪಶ್ಚಿಮ ಬಂಗಾಳದ ಕಥಾಲ್ ಪುರ ಎಂಬ ಒಂದು ಹಳ್ಳಿಲಿ ಮಹಾ ದೇಶಭಕ್ತ ಬಂಕಿಂಚಂದ್ರ ಜನ್ಮ ತಾಳಿದ°. ’ಸ್ವಾಭಿಮಾನ, ಬುದ್ಧಿಚಾತುರ್ಯ, ಧೈರ್ಯ ಮೂರೂ ಸೇರಿ ಮುಪ್ಪುರಿಗೊಂಡ ಮಹಾ ಮೇಧಾವಿ’ ಹೇಳಿ ಇವನ ಹೊಗಳಿದ್ದವು. ಇವ° ಸಾಹಿತ್ಯ ಕ್ಷೇತ್ರಕ್ಕೆ ಕಾಲು ಮಡುಗೆಕ್ಕಾರೆ ಮದಲು ಕಾದಂಬರಿ ಎಂಬ ಸಾಹಿತ್ಯ ಪ್ರಕಾರದ ರಚನೆ ಆಯಿದೇ ಇಲ್ಲೆ. (ಉತ್ತರ ಭಾರತಲ್ಲಿ ಉಪನ್ಯಾಸ, ನಮ್ಮಲ್ಲಿ ಕಾದಂಬರಿ. ಕಾದಂಬರೀ ಕಥಾಸಾರ ಎಂಬ ಸಂಸ್ಕೃತ ಭಾಷೆಂದ ಕನ್ನಡಕ್ಕೆ ತಂದ ಪರಿಣಾಮವಾಗಿ ಕಾದಂಬರಿ ಎಂಬ ಹೆಸರು ಪ್ರಚಾರಕ್ಕೆ ಬಂತು) ಬಂಗಾಳದ ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿದ ತರುಣರು ಇಂಗ್ಲಿಷ್ ’ನೊವೆಲ್’ ಗೊಕ್ಕೆ ಆಕರ್ಷಿತರಾಗಿ, ಮಾತೃಭಾಷೆ ಬಂಗಾಳಿಯ ತುಚ್ಛೀಕರಿಸಿ ಹೀನ ದೃಷ್ಟಿಲಿ ನೋಡಿಗೊಂಡಿದ್ದ ಕಾಲ. ಹಿಂದೂ ಧರ್ಮ ಸಂಸ್ಕೃತಿಗಳೂ ಮಹತ್ವ ಕಳದು ಹೋದಂಥ ಕಾಲಘಟ್ಟ. ಒಂದಿಷ್ಟೂ ಆತ್ಮಾಭಿಮಾನ ಇಲ್ಲದ್ದೆ ಪರಭಾಷೆ, ಪರಸಂಸ್ಕೃತಿ, ಪರಕೀಯರ ಭೌತಿಕವಾದ ಹೊಸ ಪೀಳಿಗೆಯ ಮರುಳು ಮಾಡ್ತಾ ಇಪ್ಪದರ ನೋಡಿದ ಬಂಕಿಂಚಂದ್ರ “ಈ ಪರಿಸ್ಥಿತಿಯ ಆಮೂಲಾಗ್ರ ಬದಲಾವಣೆ ಮಾಡೆಕ್ಕು” ಹೇಳಿ ಸಂಕಲ್ಪ ಮಾಡಿದ°.  ಯುವ ಜನಾಂಗವ ಅಕರ್ಷಿಸುವದು ಮಾಂತ್ರ ಅಲ್ಲ, ಅವರ ಮನೋಗತಿಯನ್ನೇ ಪರಿವರ್ತನೆ ಮಾಡೆಕ್ಕು ಹೇಳಿ ನಿರ್ಣಯ ಮಾಡಿ, ಅವಕ್ಕೆ ಹೇಳಿಯೇ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ°. ಪಾಶ್ಚಾತ್ಯರ ಶೈಲಿಯ ತೆಕ್ಕೊಂಡು ದೇಶೀಯವಾದ ಚಿಂತನೆ, ಸಂಸ್ಕಾರ, ಧರ್ಮಪರಾಯಣತೆಗಳ ಬಿಂಬಿಸುವಂಥ ಕಲ್ಪನಾ ವಿಲಾಸಂಗಳ ರಚನೆ ಮಾಡಿದ°. ಅದರಲ್ಲಿಯೂ “ಆನಂದಮಠ” ಬರದ ಉದ್ದೇಶ ಓದಿದೋರ ಮೇಲೆ ಉನ್ನತ ಪರಿಣಾಮ ಉಂಟುಮಾಡುದಾಗಿತ್ತು. ಅಷ್ಟುಮಾತ್ರ ಅಲ್ಲ ತನ್ನ ಎಲ್ಲಾ ಕೃತಿಗಳ ದೇಶದ ಯಾವ ಭಾಷೆಗೆ ಬೇಕಾದರೂ ಭಾಷಾಂತರಿಸುಲೆ ಮುಕ್ತ ಅವಕಾಶ ಮಾಡಿಕೊಟ್ಟ°. ಹೀಂಗಾಗಿ ದೇಶದ ಎಲ್ಲಾ ಭಾಷೆಯೊರು ಅದರೆಲ್ಲ ಓದಿ ಸ್ಪೂರ್ತಿ ಪಡವ ಹಾಂಗಾತು.

ಶ್ರೀ ಭಗತ್ ಚಂದ್ರ ಚಟರ್ಜಿ ಮತ್ತು ಶ್ರೀಮತಿ ದುರ್ಗಾದೇವಿಯರ (ಅಖೇರಿಯಾಣ) ಎಂಟನೆ ಸುಪುತ್ರನಾದ ಬಂಕಿಂಚಂದ್ರ ಸಣ್ಣಾದಿಪ್ಪಗಳೇ ತನ್ನ ಸುತ್ತಮುತ್ತ ಇಂಗ್ಲಿಷ್ ಅಧಿಕಾರಿಗೊ ಬಂಗಾಳಿಗಳ ಮೇಲೆ ಭಯಂಕರ ದೌರ್ಜನ್ಯ ಅತ್ಯಾಚಾರ ಮಾಡ್ತಾ ದುರಾಡಳಿತ ನಡೆಶುದರ ನೋಡಿ ನಿರ್ಭೀತಿಲಿ ಅವರ ಖಂಡನೆ ಮಾಡಿಗೊಂಡಿತ್ತಿದ್ದ°. ಸ್ವದೇಶವಾಸಿಗಳ ದೈನ್ಯ ದುರ್ದೆಶೆಯ ನೋಡಿ, ಇದರ ನಿಲ್ಸೆಕ್ಕು, ಬಂಗಾಳಿಗೊಕ್ಕೆ ನ್ಯಾಯ ಸಿಕ್ಕುವ ಹಾಂಗೆ ಮಾಡೆಕ್ಕು ಹೇಳಿ ನಿರ್ಧಾರ ಮಾಡಿದ°. ಅದಕ್ಕಿಪ್ಪ ಏಕೈಕ ಮಾರ್ಗ ಹೇಳಿರೆ ಕಾನೂನಿನ ಸಂಪೂರ್ಣ ಜ್ಞಾನ ಪಡಕ್ಕೊಂಬದು. ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿಲ್ಲಿ ಕಾನೂನಿನ ಉನ್ನತ ವ್ಯಾಸಂಗ ಮಾಡಿ  ಪದವಿ ಗಳಿಸಿ 1875 ರಲ್ಲಿ (ಇಂಡಿಯನ್ ಸಿವಿಲ್ ಸರ್ವಿಸ್) ಭಾರತೀಯ ನಾಗರೀಕ ಸೇವಾ ವಿಭಾಗಲ್ಲಿ ಮ್ಯಾಜಿಸ್ಟ್ರೇಟ್ ಹುದ್ದೆಗೆ ನೇಮಕಾತಿ ಪಡೆದ°. ಬ್ರಿಟಿಷ್ ಸರ್ಕಾರದ ಆಡಳಿತಲ್ಲಿ ನೌಕರನಾಗಿ ಕೆಲಸ ಮಾಡುದು ಅವನ ಇಚ್ಛೆಗೆ ವಿರುದ್ಧವಾಗಿದ್ದರೂ ಜನಂಗಳ ಪರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಹೇಳಿ ಸಮಾಧಾನ ಮಾಡಿಗೊಂಡು 1891 ರ ವರೆಗೆ ಅದೇ ಹುದ್ದೆಲಿ ಕೆಲಸ ಮಾಡಿ ನಿವೃತ್ತಿ ಪಡೆದ°. ಹಾಂಗಿದ್ದರೂ ಅವನ ಒಳ ಮನಸ್ಸಿನ ವಿಚಾರಂಗೊ ಬೇರೆಯೇ ಆಗಿತ್ತು. ಅದರ ಹೆರ ತಪ್ಪಲೆ ಮಾಧ್ಯಮವಾಗಿ ಕಾದಂಬರಿಗಳ ರಚನೆಮಾಡಿ ಬಂಗಾಳಿಗಳ ಜಡ್ಡುಕಟ್ಟಿ ಹೋದ ನಾಡೀಮಿಡಿತವ ಬಡುದು ಎಚ್ಚರುಸುವ, ಹೊಸ ರಕ್ತ ಸಂಚಾರ ಅಪ್ಪ ಹಾಂಗೆ ಮಾಡುವ ಹಲವು ಪ್ರಯತ್ನಂಗಳ ಮಾಡಿದ°. ಸರಕಾರೀ ನೌಕರಿಲಿ ಇದ್ದುಗೊಂಡೇ ಹಿಂದೂ ಧರ್ಮದ ಕುಂದು ಕೊರತೆಗಳ ನಿವಾರಣೆ, ಸಾಮಾಜಿಕ ಅನ್ಯಾಯಂಗಳ ತೊಡೆದು ಹಾಕುವ ಸುಧಾರಣೆ, ನಿಜವಾದ ಸನಾತನ ಧರ್ಮದ ಆದರ್ಶ ಜೀವನ, ಸಂಸ್ಕೃತಿಯ ಎತ್ತಿ ತೋರ್ಸುವಂಥ, ಮನೋವೈಜ್ಞಾನಿಕ ರೀತಿಲಿ ಮನಃಪರಿವರ್ತನೆ ಮಾಡುವಂಥ, ನಮ್ಮ ಪೂರ್ವಜರ ದೈರ್ಯ ಸಾಹಸ ಸ್ವಾಭಿಮಾನದ ಘನವಾದ ಚರಿತ್ರೆಗಳ ಕಲ್ಪನೆಗಳ ಅದ್ಭುತ ಸಂಯೋಜನೆ ಇಪ್ಪ ಹದಿಮೂರು ಕಾದಂಬರಿ, ಹಾಸ್ಯಮಂಜರಿಗೊ, ವಿಜ್ಞಾನ ಸಂಶೋಧನೆಗಳ ಗ್ರಂಥಗಳನ್ನೂ ಬರದ°. ಇವು ಎಲ್ಲವೂ ಭಾರತದ ಇತರ ಎಲ್ಲಾ ಭಾಷಗೊಕ್ಕೆ ಬಾಷಾಂತರ ಆಯಿದು. ಕನ್ನಡಕ್ಕೆ ಭಾಷಾಂತರಿಸಿದೊರಲ್ಲಿ ಅಗ್ರಗಣ್ಯ ಹೇಳಿದರೆ ಗಳಗನಾಥ°. ಅವನ ಪ್ರಸಿದ್ಧ ಕಾದಂಬರಿಗೊ ಒಂದು ’ಆನಂದ ಮಠ”, ಇನ್ನೊಂದು ’ಕಮಲಾಕಾಂತನ ಉಯಿಲು (ಮೂಲ ಹೆಸರು ಕಮಲಾಕಂತೆರ್ ದಫ್ತರ್) ಆ ಕಾಲಲ್ಲಿ ಅವೆರಡರ ಓದದ್ದ ಕನ್ನಡಿಗರೇ ಇರವು. ಮನೆಮನೆಗಳಲ್ಲಿ ಕಾದಂಬರಿ ಓದುವ ಮರುಳು ಹಿಡಿಶಿದೋನೇ ಈ ಗಳಗನಾಥ. ಇನ್ನೊಬ್ಬ ಭಾಷಾಂತರಕಾರ° ’ವೆಂಕಟಾರ್ಯ”. ಈ ರೀತಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಕಾದಂಬರೀ ಪ್ರಕಾರದ ಸಾಹಿತ್ಯ ಮುಂದೆ ಕನ್ನಡಲ್ಲಿ ಸ್ವತಂತ್ರ ಕಾದಂಬರಿಗಳ ಮಹಾ ಹೊಳೆಯೇ ಹರಿವಲೆ ಕಾರಣ ಆತು. ಇತರ ಭಾಷೆಗಳಲ್ಲೂ ಇಂಥ ಸಾಹಿತ್ಯ ರಚನೆ ಆಯಿದು

ಪ್ರಕೃತ ಈ ಆನಂದ ಮಠವೇ ದೇಶಾದ್ಯಂತ ಅಲ್ಲೋಲ ಕಲ್ಲೋಲ ಮಾಡಿದ ಕಾದಂಬರಿ. ಕ್ರಿ.ಶ 1800 ರಲ್ಲಿ ನಡೆದ ಸನ್ಯಾಸಿಗಳ ಹೋರಾಟದ ಕಥೆ. ಅವರ ಧೃಢನಿಶ್ಚಯ, ಸ್ವಾಭಿಮಾನ, ತ್ಯಾಗ, ಬಲಿದಾನ, ಪ್ರಾಣಾರ್ಪಣೆ, ಬ್ರಿಟಿಷರ ಕುಟಿಲ ತಂತ್ರ, ಕ್ರೌರ್ಯ ಇವೆಲ್ಲ ದೇಶದ ಮೂಲೆ ಮೂಲೆಗೂ ಮುಟ್ಟಿ ಜನರ ಮನಸ್ಸಿಲ್ಲಿ ಸ್ವಾಭಿಮಾನದ  ಕಿಚ್ಚಿನ ಹೊತ್ತಿಸಿತ್ತು. ಸನ್ಯಾಸಿಗಳ ’ವಂದೇ ಮಾತರಂ’ ಉದ್ಘೋಷ, ಜನ್ಮಭೂಮಿಯ ಮಾತೃಸ್ವರೂಪಿಣಿ ಹೇಳಿ ಆವಾಹನೆ ಮಾಡಿದ ದಿವ್ಯ ಸ್ತೋತ್ರವ ಹಾಡಿದೋರೂ ಕೇಳಿದೋರೂ, ತಮ್ಮ ಜನ್ಮ ಪಾವನ ಆತು ಹೇಳಿ ಹೆಮ್ಮೆ ಪಟ್ಟವು. ಮೂರು ಶತಮಾನದ ಕಾಲ ದಾಸ್ಯದ ಕರ್ಗತ್ತಲೆಯ ಭೇದಿಸಿ ಆತ್ಮಗೌರವದ ಶಕ್ತಿಯ ಪ್ರಭಾವಲಯವ ತೋರಿಸಿಕೊಟ್ಟ ಈ ಮಹಾಮಂತ್ರವ ಎಲ್ಲೋರೂ ಏಕ ಕಂಠಲ್ಲಿ ಹಾಡುಲೆ ಸುರುಮಾಡಿದವು. ಇದಕ್ಕೆ ಇನ್ನಷ್ಟು ಬಲ ಬಂದದು ಅಖಿಲ ಭಾರತ ಕಾಂಗ್ರೆಸ್ ಸಂಸ್ಥೆಯ 1896 ರ ಪ್ರಥಮ ಅಧಿವೇಶನಲ್ಲಿ ಈ ವಂದೇ ಮಾತರಂ ಗೀತೆಯ ಪ್ರಾರ್ಥನೆಯ ರೂಪಲ್ಲಿ ಹಾಡಿದ ಮೇಲೆ. ಇದು ಸ್ವಾತಂತ್ರ್ಯ ಸಂಗ್ರಾಮದ ನಾಂದೀ ಪದ್ಯವಾಗಿ ರಾಷ್ಟ್ರ ಘೋಷಣೆಯೂ ಆಗಿ, ಲೋಕಮಾನ್ಯ ಬಾಲಗಂಗಾಧರ ತಿಲಕ, ಗೋಪಾಲಕೃಷ್ಣ ಗೋಖಲೆ, ಎಂ.ಜಿ. ರಾನಡೆಯೊರಂಥ ರಾಷ್ಟ್ರ ನಾಯಕರ ಮುಂದಾಳುತ್ವಲ್ಲಿ ಇಡೀ ದೇಶಕ್ಕೇ ಬೆಣ್ಚಿ ಅಪ್ಪ ಹಾಂಗೆ ಬೆಳಗಿತ್ತು. ಮೂಲರೂಪಲ್ಲಿ ವಂಗದೇಶದ ಏಳುಕೋಟಿ ಜನರ ದೃಷ್ಟಿಲಿ ಮಡ್ಕೊಂಡು ಬರದ ಗೀತೆಯ ಇಡೀ ದೇಶಕ್ಕೆ, ದೇಶದ ಮೂವತ್ತು ಕೋಟಿ ಜನರ ಅಂತರ್ವಾಣಿ ಅಪ್ಪ ಹಾಂಗೆ ತಿದ್ದಿಗೊಂಡು ಹಾಡುಲೆ ಬಂಕಿಂಚಂದ್ರನೇ ಹೇಳಿದ°. ಈ ಗೀತೆ ಸಮಸ್ತ ಭಾರತಕ್ಕೆ ಅನರ್ಘ್ಯವಾದ ಅನನ್ಯವಾದ ಉಡುಗೊರೆ ಆಗಿ ಪರಿಣಮಿಸಿತ್ತು. ಏಕೆ ಹೇಳಿದರೆ ದೇಶಲ್ಲಿ ಹಲವು ರಾಜರು ಬೇರೆಬೇರೆ ಪ್ರದೇಶಂಗಳಲ್ಲಿ ಆಳಿಗೊಂಡಿದ್ದ ಕಾರಣ, ಬೇರೆಬೇರೆ ಭಾಷೆಯ ಜನಂಗಳಾದ್ದರಿಂದ ಪ್ರಾಂತೀಯ ಭಾವನೆ ಆಳವಾಗಿ ಬೇರೂರಿಗೊಂಡಿತ್ತು. ಇಂಗ್ಲಿಷರ ವಶವಾದ ಮೇಲೆಯೂ ಈ ಭಾವನೆ ಬದಲಾಗಿತ್ತಿಲ್ಲೆ. ’ಜಂಬೂ ದ್ವೀಪೇ ಭಾರತ ವರ್ಷೇ ಭರತ ಖಂಡೇ’ ಈ ಸಂಕಲ್ಪ ಮಂತ್ರಕ್ಕೆ ಭಾರತವ ಏಕಸೂತ್ರಲ್ಲಿ ಬಂಧಿಸುವ ಶಕ್ತಿ ಇತ್ತಿಲ್ಲೆ. ಮತ್ತೆ ಒಗ್ಗಟ್ಟಿನ ಪ್ರಶ್ನೆ ಬಪ್ಪದಾದರೂ ಹೇಂಗೆ? ಆ ಸಂಕಲ್ಪ ಮಂತ್ರ ಪೂಜೆ, ಧಾರ್ಮಿಕ ಆಚರಣೆಗಲ್ಲಿ ಮಾತ್ರವೇ ಹೇಳುವ ಕ್ರಮ ಇಡೀ ದೇಶಲಿ ಇದ್ದದೂ ನಿಜವೇ. ಆದರೆ ಭಾರತ ಅಥವಾ ಜಂಬೂದ್ವೀಪ ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಒಂದು ಜನಾಂಗ, ಒಂದು ಪರಂಪರೆ ಎಂಬಂಥ ಒಗ್ಗಟ್ಟಿನ ಭಾವನೆಯೇ ಇತ್ತಿಲ್ಲೆ. ಭಾರತವರ್ಷ ನಮ್ಮ ಜನ್ಮಭೂಮಿ, ನಾವೆಲ್ಲಾ ಭಾರತಮಾತೆಯ ಮಕ್ಕೊ, ನಾವೆಲ್ಲ ಅಣ್ಣತಮ್ಮಂದ್ರು, ಜಾತಿಮತ ಮೇಲುಕೀಳು ಭಾವನೆಯ ಮೀರಿದ ಐಕ್ಯತೆ ಉಂಟಾದ್ದೇ ಈ ವಂದೇ ಮಾತರಂ ಗೀತೆಂದಾಗಿ. ಇದರ ಪ್ರಭಾವಂದ ದೇಶದ ಎಲ್ಲಾ ಭಾಷೆಗಳಲ್ಲಿ ಐಕ್ಯಗಾನಂಗೊ ಬೀದಿಬೀದಿಗಳಲ್ಲಿ ಝೇಂಕಾರ ಮಾಡುಲೆ ಸುರುವಾತು . ಜನಂಗಳಲ್ಲಿ ರಾಷ್ಟ್ರಭಕ್ತಿಯ ಪ್ರೇರೇಪಿಸುಲೆ. ಸ್ವಾತಂತ್ರ್ಯದ ದಾಹ (ಆಸರು) ಉಂಟುಮಾಡುಲೆ ಸ್ವಯಂಸೇವಕರು, ಸ್ವಾತಂತ್ರ್ಯಯೋಧರು ಸಿದ್ಧರಾದವು.  ಸೂರ್ಯೋದಯಂದ ಮದಲೆ ನಿಶ್ಚಿತವಾದ ಜಾಗೆಲಿ ಸಭೆ ಸೇರಿ, ನಗರ ಪಟ್ಟಣಳಂಗಳ ಮಾರ್ಗಂಗಳಲ್ಲಿ ಪ್ರಭಾತಫೇರಿ (ಶಿಸ್ತುಬದ್ಧವಾಗಿ ಮಾರ್ಚ್ ಮಾಡುದು) ನಡೆಶುವಾಗ ’ವಂದೇ ಮಾತರಂ’ ಉದ್ಘೋಷ ಮಾಡುದು, ರಾಷ್ಟ್ರಭಕ್ತಿಯ ಗೀತೆಗಳ ರಚನೆಮಾಡಿ ಹಾಡುದು, ನಗರ ಪ್ರದಕ್ಷಿಣೆ ಮಾಡುದು ಇದೆಲ್ಲ ಸುರುವಾತು. ಸಭೆ ಸಮಾರಂಭಂಗಳಲ್ಲಿ ವಂದೇಮಾತರಂ ಹಾಡುದು, ಇದು ಕ್ರಮೇಣ ವಿಸ್ತಾರ ಆವುತ್ತಾ ಮೂವತ್ತು ನಲುವತ್ತು ವರ್ಷದ ಜಾಗೃತಿ ಜಾಥಾ ಇಡೀ ದೇಶಕ್ಕೆಉತ್ಸಾಹದ ಚಿಲುಮೆ ಆಗಿ ಲಕ್ಷಾಂತರ ಸ್ವಾತಂತ್ರ್ಯಯೋಧರು ಉದ್ಭವ ಆದವು. ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ ಮುಂತಾದೊರ ನಾಯಕತ್ವಲ್ಲಿ ಸಂಘಟಿತವಾದ ಕಾಂಗ್ರೆಸ್ಸಿಂಗೆ ಮಹಾತ್ಮಾ ಗಾಂಧಿ, ವಲಭ ಭಾಯಿ ಪಟೇಲ್,ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದೊರು ಸೇರ್ಪಡೆ ಆದ ಮೇಲೆ 1920 ರಲ್ಲಿ “ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು” ಈ ಘೋಷ ವಾಕ್ಯದೊಟ್ಟಿಂಗೆ ದೊಡ್ಡ ಪ್ರಮಾಣಲ್ಲಿ ಜನಾಂದೋಲನ ಸುರುವಾತು. ಸ್ವರಾಜ್ಯಕ್ಕಾಗಿ ಬ್ರಿಟಿಷ್ ಸರಕಾರದ ಕಾನೂನುಗಳ ಮುರಿವದು, ಅಸಹಕಾರ ಚಳವಳಿ, ಸತ್ಯಾಗ್ರಹ ಮಾಡುದು, ಉಪವಾಸ, ಮೆರವಣಿಗೆ ದೊಡ್ಡದೊಡ್ಡ ಮೈದಾನುಗಳಲ್ಲಿ ಬೃಹತ್ ಸಮಾವೇಶ ಬ್ರಿಟಿಷ್ ಸರಕಾರದ ವಿರುದ್ಧ ಘೋಷಣೆ ಮಾಡುದು , ಇತ್ಯಾದಿ ಅಹಿಂಸಾ ರೂಪಲ್ಲಿ ಪ್ರತಿಭಟನೆ ಮಾಡುದು ಎಲ್ಲ ಸುರುವಾಗಿ ಕಾನೂನು ಭಂಗದ ಸಂಕೇತವಾಗಿ ಉಪ್ಪಿನ ಸತ್ಯಾಗ್ರಹದ ದಂಡೀಯಾತ್ರೆ-ಇದೆಲ್ಲ ನಿಂಗೊಗೆ ಗೊಂತಿಪ್ಪ ವಿಷಯವೇ. ಈ ಹೋರಾಟಲ್ಲಿ ಎಷ್ಟೆಷ್ಟೊ ತಲೆದಂಡ, ಕಾರಾಗೃಹವಾಸ, ಪೋಲೀಸ್ ಪಡೆಗಳೇ ಗುಂಡಿನಮಳೆಗರದು ಸಾವಿರಾರು ಜನ ಹುತಾತ್ಮರಾದವು. ಲಕ್ಷಾಂತರ ಜನ ಗಾಯಾಳುಗಳಾದವು. ಸೆರೆಮನೆ ವಾಸ, ಕಠಿಣ ದಂಡನೆ, ಕರಿನೀರಿನ ಶಿಕ್ಷೆ, ಏನೆಲ್ಲಾ ಶಿಕ್ಷೆ ಅನುಭವಿಸಿದವೋ ಎಷ್ಟು ಜನಕ್ಕೆ ಗಲ್ಲಿ ಶಿಕ್ಷೆ ಆತೋ, ಜಲಿಯನ್ ವಾಲಾಬಾಗಿಲಿ ನಾಲ್ಕು ಸಾವಿರ ಜನರ ಗುಂಡುಹಾರಿಸಿ ಕೊಂದದೊ, ಏನೆಲ್ಲಾ ಕಷ್ಟಂಗಳ ಅನುಭವಿಸಿದವೋ, ಎಲ್ಲದರ ಪ್ರತ್ಯಕ್ಷದರ್ಶಿಗಳೂ ನಾಶವಾಗಿ ಹೋದವು. ಅವರೆಲ್ಲರ ಲೆಕ್ಕವೇ ಸಿಕ್ಕದ್ದೆ ಹೋಯಿದು.

[1935-ರಲ್ಲಿ ಇರೆಕ್ಕು, ನಮ್ಮ ಕೊಡೆಯಾಲಲ್ಲಿ ಸಮವಸ್ತ್ರ ಧರಿಸಿದ ಸ್ವಯಂಸೇವಕರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮಾಡಿಗೊಂಡು ಐಕ್ಯಗಾನಂಗಳ ಹಾಡಿಗೊಂಡು, ದಿನಾಗಳೂ ಮನೆ ಮುಂದಾಣ ಮಾರ್ಗಲ್ಲಿ ಪ್ರಭಾತಫೇರಿ ಮಾರ್ಚಿಂಗ್ ಮಾಡುದರ ನೋಡಿದ್ದೆ. ಆ ರಾಷ್ಟ್ರಭಕ್ತಿಗೀತೆಗಳಲ್ಲಿ ಒಂದೆರಡು ಎನಗೆ ಸರಿಯಾಗಿ ನೆಂಪಿದ್ದು-

ಭಾರತವರ್ಷವಿದೊಂದೇ ಗ್ರಾಮ
ಭಾರತವಾಸಿಗಳೊಂದು ಕುಟುಂಬ
ನೂರುಮತಗಳಲಿ ಒಂದೇ ಧರ್ಮ
ನೂರು ಮಾತುಗಳಲೊಂದೇ ಮರ್ಮ ||
ಗ್ರಾಮಗ್ರಾಮದೀ ಭಾರತವರ್ಷವ
ಪ್ರೇಮದಿ ನಿರ್ಮಿಸಿ ಅರ್ಚಿಸುವಾ |ಗ್ರಾಮ||

ಈ ಮಹಾಜನ ಅಭಯ ಪ್ರಸಾದದಿ
ಕ್ಷೇಮ ಒದಗುವರೆ ಯಾಚಿಸುವಾ
ಒಂದೇ ಕುಲದಲಿ ಒಂದೇ ಬಲದಲಿ
ಒಂದೇ ಛಲದಲಿ ಬೆಳೆದವರೆಂದೂ
ಒಂದೇ ಜನಪದ ಒಂದೇ ಸಂಪದ
ಒಂದೇ ಹಾದಿಗೆ ಕಾಲಿಡಲೆಂದೂ || ಭಾರತ………..ಮರ್ಮ||

ಭಾರತಾಂಬೆ ನಮ್ಮ ಮಾತೆ ಜೀವಕಿಂತ ಮೇಲು
ಜೀವಕಿಂತ ಮೇಲು ನಮ್ಮ ಪ್ರಾಣಕಿಂತ ಮೇಲು
ದಾಸ್ಯಭಾರದಿಂದ ನಮ್ಮ ದೇಶವಿಂದು ಬಳಲಿದೆ
ಪರರ ರಾಜ್ಯಭಾರದಿಂದ ಜನರ ಮಾನ ಕಳೆದಿದೆ
ಜನರ ಶೌರ್ಯ ಕುಸಿದಿದೆ
ಭಿನ್ನ ಭಿನ್ನ ಭೇದ ಭಾವ ಎಲ್ಲವನ್ನು ನೀಗುತ
ಒಂದೆ ತಾಯ ಮಕ್ಕಳೆಲ್ಲ ನಾವು ನೀವು ಎನ್ನುತ
ಒಂದುಗೂಡಿ ಸಾಗುವ
ಜನರ ಶಾಂತಿ ಜಗದ ಶಾಂತಿ
ಕೂಡಿ ಕೂಡಿ ಸಾಧಿಸಿ ಕೀರ್ತಿಧ್ವಜವ ಹಾರಿಸಿ
ಜಯದ ಘೋಷ ಮೊಳಗಿಸಿ ತಾಯ ಋಣವ ಸಲ್ಲಿಸಿ
ಶಾಂತಿಮಂತ್ರ ಶಾಂತಿಸಹನೆ ಶಾಂತಿದಳಗಳಿಂದಲೇ
ಜಗದ ಶಾಂತಿ ನೆಲಸಲಿ  ||ಭಾರತಾಂಬೆ||

ಸ್ವಾತಂತ್ರ್ಯವೀರರ ಉತ್ಸಾಹ ಎಂತದು? ಮಾರ್ಗದ ಕರೆಯಾಣ ಮನೆಯೊರು, ಅಂಗ್ಡಿಯೊರು ಅವರ ನೋಡಿ ವಂದೇ ಮಾತರಂ ಹೇಳಿ ಪ್ರೋತ್ಸಾಹಿಸುವ ಗೌಜಿ ಎಂಥಾದ್ದು!]

ಸನ್ಯಾಸಿವೀರರ ಉದ್ಘೋಷ, ವಂದೇ ಮಾತರಂ ಸ್ತೋತ್ರವ ಗೀತೆಯ ರೂಪಲ್ಲಿ ವಿಸ್ತರಿಸಿ ಬರವಲೆ  ಬಂಕಿಂಚಂದ್ರನ ಭಾವಾವೇಶವೇ ಕಾರಣ. ಅವನ ಅಂತಃಸ್ಪೂರ್ತಿಯ ಉಗಮಸ್ಥಾನ ಶ್ರೀ ರಾಮಚಂದ್ರ ಮರ್ಯಾದಾ ಪುರುಷೋತ್ತಮನ ಉದ್ಗಾರ-ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ- “ಎಂಬ ಭರತವಾಕ್ಯ. ಇದನ್ನೇ ಬಂಕಿಂಚಂದ್ರ ಪುನರ್‍ಪ್ರತಿಷ್ಠಾಪನೆ ಮಾಡಿದ್ದು” (ವಿಭೀಷಣ ಶ್ರೀರಾಮನ ಲಂಕೆಲಿಯೇ ಇರೆಕ್ಕು ಹೇಳಿ ಒತ್ತಾಯಿಸಿದ್ದಕ್ಕೆ, ಲಕ್ಷ್ಮಣನೂ “ಏಕಾಗ?” ಹೇಳಿದ್ದಕ್ಕೆ ರಾಮ ಹೇಳಿದ ಮಾತದು) ಭಾರತವರ್ಷ ಅಖಂಡ ಭರತಖಂಡ, ನಮ್ಮ ಹೆತ್ತಬ್ಬೆ-ಈ ಭಾವನೆಯೊಟ್ಟಿಂಗೆ ಭಾರತೀಯ ಎಲ್ಲಾ ಹಕ್ಕುಗಳ ಕಸುದುಕೊಂಡ ಬ್ರಿಟಿಷರ ಮೇಲೆ ಆಕ್ರೋಶ, ತಿರಸ್ಕಾರ, ಎಲ್ಲವೂ  ಕೂಡಿ, ಇವರ ಹೀಂಗೇ ಬಿಟ್ಟರಾಗ, ಇವರ ಅಟ್ಟಲೇ ಬೇಕು- ಈ ನಿರ್ಧಾರ ಬಲ ಆವ್ತಾ ಬಂದು ಲಕ್ಷ ಲಕ್ಷ ಸ್ವಾತಂತ್ರ್ಯಯೋಧರು ಮನೆ ಬಿಟ್ಟು ಹೆರಬಂದವು. ಬಹಿರಂಗವಾಗಿಯೂ ಭೂಗತರಾಗಿಯೂ ಕರಪತ್ರಂಗಳ ಹಂಚುವದು, ಗುಪ್ತಸ್ಥಾನಲ್ಲಿ ಸಭೆ ಸೇರುವದು ಇತ್ಯಾದಿ ಜನಜಾಗೃತಿ ಉಂಟುಮಾಡಿ ಪ್ರತಿಜ್ಞಾಬದ್ಧರಾದವು. ಈ ಐಕ್ಯಭಾವದ ಬೀಜಾರೋಪಣೆ ಆದ್ದೇ ವಂದೇಮಾತರಂ ಸ್ತೋತ್ರಂದಾಗಿ!. ಒಬ್ಬ° ಇನ್ನೊಬ್ಬನ ನೋಡುವಾಗ ಹೇಳುವ ನಮಸ್ಕಾರಕ್ಕೆ ಬದಲಾಗಿ “ವಂದೇ ಮಾತರಂ”!

***

ಬ್ರಿಟಿಷ್ ಅಧಿಕಾರಿಗೊ “ಭಾರತೀಯರು ಅಂಧವಿಶ್ವಾಸಲ್ಲಿ ಮುಳುಗಿ ಹೋದ ಮಹಾಮೂಢರು! ನೂರಾರು ದೇವರ ಪೂಜೆ ಮಾಡುವೊರು, ಅವಕ್ಕೆ ಜ್ಞಾನೋದಯ ಅಪ್ಪ ಹಾಂಗೆ ಮಾಡಿ ಅವರ ಜೀವನವ ಸುಧಾರ್ಸುಲೆ ಬಂದೊರು ಎಂಗೊ”- ಈ ರೀತಿ ಪ್ರಚಾರ ನಡೆಶಿ, ಅವಹೇಳನ ಮಾಡಿ ಯುವಜನರ ಮನಸ್ಸಿಲಿ ಹೀನ ಭಾವನೆ ಬೆಳೆಶಿ ತೇಜೋವಧೆ ಮಾಡ್ತಾ ಇದ್ದ ಪರಿಣಾಮವಾಗಿ ಸ್ವಾಭಿಮಾನ್ಯ ಶೂನ್ಯರಾಗಿದ್ದ ಕಾಲಲ್ಲಿ ಬಂಕಿಂಚಂದ್ರನ “ಆನಂದಮಠ” ಓದಿ ಜವ್ವನಿಗರು, ಮಕ್ಕೊ, ಮುದ್ಕರು ಕೂಡಾ ಸಿಡಿಲಿನ ಮರಿಗಳ ಹಾಂಗೆ ಆದವು. ’ಬ್ರಿಟಿಷರ ಅಡಿಯಾಳಾಗಿಪ್ಪದೇ ನಮ್ಮ ಹಣೆಬರಹ, ನಾವು ಯಾವುದಕ್ಕೂ ಆಗದ್ದ ಮೂರ್ಖರು”-ಈ ರೀತಿಯಾಗಿ ಬೆಳದ ಮೌಢ್ಯವ, ದೈನ್ಯತೆಯ ಹರುದು ಇಡ್ಕಿ, ಎಲ್ಲೋರು ತಲೆ ಎತ್ತಿ ಏಕಕಂಠಲ್ಲಿ ವಂದೇ ಮಾತರಂ ಹಾಡಿದವು. “ಒಂದೇ ದೇಶ, ಒಂದೇ ಗುರಿ! ಈ ಹೋರಾಟಲ್ಲಿ ಏನೇ ಕಷ್ಟ ಬಂದರೂ ಹಿಂದೆ ಸರಿತ್ತಿಲ್ಲೆಯೊ°, ಅಡಿಯ ಮುಂದಿಡೆ ಸ್ವರ್ಗ! ಅಡಿಯ ಹಿಂದಿಡೆ ನರಕ!” ಈ ರೀತಿ ಭಾಷೆಕೊಟ್ಟುಗೊಂಡು ಶಪಥ ಮಾಡಿದವು. ಈ ವೀರಾವೇಶದ ಉತ್ಕಟ ದೇಶಪ್ರೇಮವು ಎಲ್ಲೋರ ನರನಾಡಿಗಳಲ್ಲಿ ವಿದ್ಯುತ್‍ಸಂಚಾರ ಉಂಟು ಮಾಡಿತ್ತು. “ ನಾವು ವೀರರು , ಹೇಡಿಗಳಲ್ಲ”. ಎಲ್ಲ ಜವ್ವನಿಗರ ಹೃದಯಲ್ಲಿ ರೋಷ ಆವೇಶ ಉತ್ಪನ್ನ ಆತು. ಭಾರತಮಾತೆಯ ಬಂಧನ ಬಿಡುಸಲೆ ಸೊಂಟಕಟ್ಟಿ ನಿಂಬಲೆ ದೈರ್ಯ ಸಾಹಸ ಉಕ್ಕಿ ಹರಿವಲೆ ಸುರುವಾತು. ಸಮಸ್ತ ಭಾರತವ ಪ್ರತಿನಿಧಿಸುವ ವಂದೇ ಮಾತರಂ ಮಂತ್ರ, ಭಾರತಮಾತೆಯ ಭಕ್ತಿಲಿ ನಮಿಸುವ-ಸಂಸ್ಕೃತ ಮತ್ತು ಬಂಗಾಳೀ ಮಿಶ್ರ ಆದ ಈ ಗೀತೆ ರಾಷ್ಟ್ರದ ಮೂಲೆಮೂಲೆಗೂ ವ್ಯಾಪಿಸಿ ರಾಷ್ಟ್ರಪ್ರೇಮದ ಪ್ರಚಂಡ ಅಲೆಗಳ ಸೃಷ್ಟಿಸಿತ್ತು. ಜನಮಾನಸಲ್ಲಿ ದಿವ್ಯವೂ ಅಲೌಕಿಕವೂ ಆದ ಭಾವೈಕ್ಯವ, ಮಾತೃಭೂಮಿಗೋಸ್ಕರ ಸರ್ವಸ್ವವನ್ನೂ ತ್ಯಾಗಮಾಡುವ, ಆತ್ಮಾಹುತಿ ನೀಡುವ ಉಜ್ವಲ ಸ್ವಾಭಿಮಾನದ ಪ್ರತಿಷ್ಠಾಪನೆ ಮಾಡಿತ್ತು, ಸ್ವರಾಜ್ಯ ಮತ್ತು ವಂದೇ ಮಾತರಂ ಈ ಎರಡು ಪದಸಮುಚ್ಚಯಂಗೊ ಎಲ್ಲ ಭಾರತೀಯರ ಮೇಲೆ ಮಾಯಾಜಾಲವನ್ನೇ ಬೀಸಿದವು. ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಇವು ಭಾರತದ ಉದಯಾದ್ರಿಲಿ ಪ್ರಾದುರ್ಭವಿಸಿ ಶತಮಾನಂಗಳ ಕಾಲ ನಿದ್ರಾವಶವಾಗಿದ್ದ ಭಾರತದ ಅಂತರಾತ್ಮವ ಎಚ್ಚರಿಸಿದ ಸ್ವಾತಂತ್ರ್ಯ ಪೂರ್ವದ ರಣಭೇರಿ ನಿನಾದ ಹೇಂಗೆ ಸತ್ಯಾಗ್ರಹ, ಅಹಿಂಸಾ ಮಾರ್ಗಕ್ಕೆ ಹೊರಳಿ ಸ್ವಾತಂತ್ರ್ಯ ಪಡಕ್ಕೊಂಡತ್ತೋ, ಅದೇ ರೀತಿಲಿ ಇಂದು ಆಂತರಿಕ ಶತ್ರುಗಳಿಂದಾಗಿ ಭಯೋತ್ಪಾದಕರ ದಾಳಿಗೆ ತುತ್ತಾವುತ್ತಾ ಇಪ್ಪದರನ್ನೂ ಪರಿಹರಿಸೆಕ್ಕಾಯಿದು. ಸ್ವಾತಂತ್ರ್ಯ ಸಿಕ್ಕಿದ ಮೇಲೆಯೂ ನಮ್ಮ ಮಾನಸಿಕ ದಾಸ್ಯವೇ ದೊಡ್ಡ ಜಾಡ್ಯವಾಗಿ ಪರಿಣಮಿಸಿದ್ದರ ನಿಗ್ರಹಿಸೆಕ್ಕಾಯಿದು. ಇಂದು ಭಯೋತ್ಪಾದನೆಯ ಮೂಲೋತ್ಪಾಟನೆ ಮಾಡಿ ಶಿಷ್ಟಜನರ ರಕ್ಷಿಸೆಕ್ಕಾದ ಮಹತ್ತರ ಕಾರ್ಯ ನಮ್ಮ ಮುಂದೆ ಇದ್ದು. ಈ ಸಂದಿಗ್ಧ ಕಾಲಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಸುತ್ತ ಎಂತ ಆವ್ತಾ ಇದ್ದು, ಸಂಶಯಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ಕಣ್ಣು ಮಡಿಕ್ಕೊಂಡು ಕಟ್ಟೆಚ್ಚರಲ್ಲಿ ಇರೆಕ್ಕಾಗಿ ಬಯಿಂದು. ಏಕೆ ಹೇಳಿರೆ ಸರಕಾರ ಒಂದರಿಂದಲೇ ಈ ಸಮಸ್ಯೆ ಪರಿಹಾರ ಅಪದು ಕಾಣ್ತಿಲ್ಲೆ. ದಿನೇ ದಿನೇ ದುಷ್ಟರ ಸಂಖ್ಯೆ ಏರುತ್ತಾ ಇದ್ದು. ಸಾಮಾನ್ಯ ಪ್ರಜೆಗಳ ಸಹಕಾರ ಅತ್ಯಗತ್ಯ ಆಯಿದು. “ಎನಗೆಂತಕೆ ಊರವರ ವಹಿವಾಟು” ಹೇಳುವ ನಿರ್ಲಕ್ಷ ಭಾವವ ಕಡುದಿಕ್ಕಿ ರಂಗಸ್ಥಳಕ್ಕೇ ಬರೆಕಾಯಿದು. ಪ್ರತಿಯೊಬ್ಬನೂ ಒಬ್ಬ ಗೂಢಚಾರನ ಹಾಂಗೆ ಗುಪ್ತದಳದ ಸದಸ್ಯನ ಹಾಂಗೆ ತಮ್ಮ ಪಾತ್ರ ಯಾವ ರೀತಿಲಿ ಇರೆಕ್ಕು ಹೇಳಿ ತಮ್ಮ ಮನಸ್ಸಿನ ಕೇಂದ್ರೀಕರಿಸೆಕ್ಕು. ನಾವೇ ಮತ ಹಾಕಿದ ಪ್ರತಿನಿಧಿಗೊ ಅಥವಾ ಪ್ರಧಾನಿಗಾದರೂ ಒಳ್ಳೆದೇ , ತಾವು ತಿಳ್ಕೊಂಡ ರಹಸ್ಯವ ತಿಳ್ಸೆಕ್ಕು. ಇಂದು ಸಂಪರ್ಕ ಸಾಧನಂಗೊಇಷ್ಟೊಂದು ಇಪ್ಪ ಕಾಲಲ್ಲಿ ಸುಲಭ ಅಕ್ಕು. ನಾವು ಮಾಡುವ ಸಣ್ಣ ಅಳಿಲ ಸೇವೆಯೇ ಮಹಾ ಪರ್ವತ ಆಗಿ ಹೋಪಲೂ ಸಾಕು –ಹೇಳಿದರೆ-ಎಷ್ಟೋ ಪ್ರಾಣಹಾನಿ,ಸಂಪತ್ತು ನಾಶ ಅಪ್ಪದರ ತಡವಲೆ ಸಾಧ್ಯ ಆಗಿಹೋಕು. ಹವಿಕ ಬಂಧುಗೊ ಇಂಥ ಸಂಘಟನೆ ಮಾಡುಲೆ ಮುಂದೆ ಬರೆಕ್ಕು ಇದು ಎನ್ನ ಅಂತರಂಗದ ಆಶಯ ಕಳಕಳಿಯ ಮನವಿ. ನಮ್ಮ ದೇಶ ರಕ್ಷಣೆಯ ಮಹಾಯಜ್ಞಲ್ಲಿ ನಮ್ಮ ಪಾತ್ರವೂ ಇದ್ದು ಎಂಬುದರ ಎಲ್ಲೋರು ಮನಗಾಣೆಕ್ಕು. ಕೈಕೈ ಜೋಡ್ಸಿದರೇ ಮಹಾ ಕಾರ್ಯಂಗೊ ನಡವದು!. ನೂರಮೂವತ್ತು ವರ್ಷ ಹಿಂದೆಯೇ ಯಾವ ಧೈರ್ಯಲ್ಲಿ  ನಮ್ಮ ಹೆರಿಯೋರು ಸ್ವಾತಂತ್ರ್ಯ ಯೋಧರಾದವೋ,ಅದೇ ಉತ್ಸಾಹಲ್ಲಿ ಮತ್ತೊಂದರಿ ಸತ್ಪ್ರಜೆಗಳಾದ ನಿಂಗೊ ಮನಸ್ಸಿನ ಜಾಡ್ಯವ ಹರುದುತೆಗದು ಮುಂದೆ ಬನ್ನಿ, ಇದು ಪ್ರತಿಯೊಬ್ಬ ಭಾರತೀಯನೂ ಮಾಡೆಕ್ಕಾದ ಇಂದ್ರಾಣ ಕರ್ತವ್ಯ ಹೇಳಿ ಎನ್ನ ಖಚಿತವಾದ ಅಭಿಪ್ರಾಯ. ಮತ್ತೊಂದರಿ ವಂದೇ ಮಾತರಂ ತನ್ನ ಶಕ್ತಿಯ ಪ್ರದರ್ಶಿಸಲಿ

ಆದರೆ ನಾವೆಲ್ಲ ಆ ಮಂತ್ರವನ್ನೇ ಮರದು ಬಿಟ್ಟಿದು. ಈಗ ಕೇವಲ ಆಕಾಶವಾಣಿಲಿ  ಮಾಂತ್ರ, ಅದುದೇ ಒಂದೇ ಸೊಲ್ಲಿನ ಕೇಳುತ್ತು ನಾವು. ಅದರ ಇಡಿಯಾಗಿ ನಿಂಗೊಗೆ ಪರಿಚಯಿಸಿ ನಿಂಗಳ ಹೃದಯಲ್ಲಿ ಸ್ವಾಭಿಮಾನದ , ಆತ್ಮಗೌರವದ ತರಂಗಂಗೊ ಏಳಲಿ. ನಿಂಗಳಲ್ಲಿ ಅಲೌಕಿಕ ಸ್ಪೂರ್ತಿಯ ಉದಯ ಆಗಲಿ!. ಈ ಹಿಂದೆ ದೇಶಕ್ಕೋಸ್ಕರ ಹುತಾತ್ಮರಾದ ಲಕ್ಷಾಂತರ ಮಹಾಚೇತನಂಗಳ ಈ ಸ್ವಾತಂತ್ರ್ಯೋತ್ಸವ ಆಚರಿಸುತ್ತಾ ಇಪ್ಪ ನಾವು ಸ್ಮರಣೆ ಮಾಡದ್ದರೆ ಹೇಂಗೆ? ಇಂದು ಕೂಡಾ ದೇಶದ ಗಡಿಗಳ ಕಾಯ್ತಾ ಇಪ್ಪ , ಹಿಮಾವೃತ ಕಠಿಣ ಪ್ರದೇಶಲ್ಲಿ ನಮ್ಮ ರಕ್ಷಣೆಯ ಪಣತೊಟ್ಟ ವೀರ ಸೈನಿಕರ  ಕಷ್ಟಂಗಳ ನೆನಪು ಮಾಡಿಗೊಳ್ಳದ್ದರೆ ಹೇಂಗೆ?  ಅವಕ್ಕೆಲ್ಲ ಶುಭವಾಗಲಿ ಹೇಳಿ ಪ್ರಾರ್ಥಿಸುವೊ°, ಜಯಕಾರ ಮಾಡುವೊ°. ಪ್ರತಿದಿನವೂ ಹಗಲಿರುಳು ಒರಗದ್ದೆ ಶತ್ರುಸೈನ್ಯವ ಎದುರುಸುತ್ತಾ ಆತ್ಮಾಹುತಿ ನೀಡಿದ, (ದಧೀಚಿಯ ಹಾಂಗೆ) ನೀಡ್ತಾ ಇಪ್ಪ ಹುತಾತ್ಮ ಸೈನಿಕರಿಂಗೆ ಎರಡು ಹನಿ ಕಣ್ಣೀರ ತರ್ಪಣ ನೀಡುವೊ°. ಜಯ್ ಜವಾನ್! ಜಯ ಹಿಂದ್, ವಂದೇ ಮಾತರಂ, ವಂದೇ ಮಾತರಂ, ವಂದೇ ಮಾತರಂ, ವಂದೇ ಮಾ……..ತರಂ, ವಂದೇ ಮಾತರಂ| ವಂದೇ……….

ಬಂಕಿಂಚಂದ್ರನ ಅಂತರ್ವಾಣಿ

ಅಗೋಸ್ಟ್ 15,  ಸ್ವಾತಂತ್ರ್ಯೋತ್ಸವದ ಈ ಶುಭದಿನಲ್ಲಿ ಬಂಕಿಂಚಂದ್ರ ಚಟರ್ಜಿಯ ಸ್ಮರಣೆ ಮಾಡೆಕ್ಕಾದ್ದು ನಮ್ಮ ದೇಶವಾಸಿಗಳೆಲ್ಲೊರ ಕರ್ತವ್ಯ. ಅವನ ಮನದಾಳದ ಮಾತುಗಳ ತಿಳ್ಸೆಕ್ಕಾದ್ದು ಎನ್ನ ಕರ್ತವ್ಯ ಹೇಳಿ ಗ್ರೇಶುತ್ತೆ. ಅವ° ನೇರವಾಗಿ ಎಂತದೂ ಹೇಳಿದ್ದಾ ಇಲ್ಲೆ. ಬ್ರಿಟಿಷರ ಭದ್ರಕೋಟೆಯ ಒಳ ಇದ್ದುಗೊಂಡೇ ತನ್ನ ದೇಶದ ಜನಸಾಗರಕ್ಕೆ ಮುಟ್ಟುಸಲೆ ಕಾದಂಬರಿಯ ಮಾಧ್ಯಮವಾಗಿ ತೆಕ್ಕೊಂಡ ಜಾಣತನವ ಎಂಥೊರೂ ಕೊಂಡಾಡುಗು. ತನ್ನ ಕಾದಂಬರಿಯ ಪಾತ್ರಧಾರಿಗಳ ಮೂಲಕ ದೇಶದ ಭಾಗ್ಯವನ್ನೇ ಬದಲಾಯಿಸಿದ. ಸಾರಂಶ ಇಷ್ಟೇ. ನಮ್ಮ ಪ್ರಾಚೀನ ಋಷಿಗೊ ನವಗೆ ಬಿಟ್ಟಿಕ್ಕಿ ಹೋದ ಸಂದೇಶ ’ವಸುಧೈವ ಕುಟುಂಬಕಂ’ ಇದನ್ನೇ ಪುನರಾವರ್ತನೆ ಮಾಡಿದ್ದ°. “ಸ್ವಾತಂತ್ರ್ಯ ಸಂಪಾದನೆ, ಸ್ವರಾಜ್ಯ ರಕ್ಷಣೆ, ಸ್ವದೇಶಾಭಿಮಾನ ಇಷ್ಟೇ ಆದರೆ ಎನಗೆ ಶಾಂತಿಕೊಡ. ರಾಷ್ಟ್ರಪ್ರೇಮ ವಿಶಾಲವಾಗಿ ಹರಿಯೆಕ್ಕು, ಮಾನವೀಯತೆಯ ನಮ್ಮ ಹೃದಯದೊಳಂಗೆ ಆವಾಹನೆ ಮಾಡಿಗೊಳ್ಳೆಕ್ಕು, ಕಷ್ಟ, ರೋಗ, ಬೇನೆ, ಬಡತನಂಗಳಿಂದ ನೊಂದು ಬಳಲುವೊರಿಂಗೆ ಸಹಾಯ ಮಾಡುವ ಔದಾರ್ಯ ನಮ್ಮದಾಯೆಕ್ಕು. ಜಾತಿ ಮತ ಭೇದ ಇಲ್ಲದ್ದ ಹೃದಯವೈಶಾಲ್ಯ ಇಲ್ಲದ್ದರೆ ಅದು ರಾಷ್ಟ್ರಭಕ್ತಿಯೇ ಅಲ್ಲ. ರಾಷ್ಟ್ರಪ್ರೇಮ ವಿಶಾಲವಾವ್ತಾ  ಹೋಗಿ ವಿಶ್ವಮಾನವತೆಗೆ ನಮ್ಮ ಪ್ರಯಾಣ ಸಾಗೆಕ್ಕು”– ಹೀಂಗೆ ನೂರಮೂವತ್ತೈದು ವರ್ಷದ ಹಿಂದೆಯೇ ಪ್ರತಿಪಾದಿಸಿದ ಮಹಾಮಹಿಮ ಬಂಕಿಂಚಂದ್ರ ಚಟರ್ಜಿಯ ಉನ್ನತ ಆದರ್ಶಂಗಳ ಮನನ ಮಾಡುವೂ°, ಆ ದಾರಿಲಿ ನಡವಲೆ ಪ್ರಯತ್ನಿಸುವೊ°.

ಉಪಸಂಹಾರ

ಸಾಮಾನ್ಯವಾಗೊ ಎಲ್ಲೊರುದೇ 1857 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಕೈಕೆಳ ಇದ್ದ ಸೈನಿಕರು ದಂಗೆ ಎದ್ದು ಮಾಡಿದ  ಯುದ್ಧವನ್ನೇ ಪ್ರಥಮ ಸ್ವಾತಂತ್ರ್ಯ ಹೊರಾಟ ಹೇಳಿ ತಿಳ್ಕೊಂಡಿದವು. ಆದರೆ 1800 ರಲ್ಲೇ ಸ್ವಾತಂತ್ರ್ಯ ಹೋರಾಟದ ರಣಭೇರಿ ಮೊಳಗಿದ್ದು. ಭಾರತದ ಉದಯಾದ್ರಿಲಿ ಸ್ವಾತಂತ್ರ್ಯದ ಕಿಚ್ಚು ಸದ್ದಿಲ್ಲದ್ದೇ ಸ್ಫೋಟ ಆಗಿ ನಿಧಾನಕ್ಕೆ ದೇಶದೊಳವೇ ಗುಮುಲಿಗೊಂಡು ಗುಮುಲಿಗೊಂದು ಅದು ಸರ್ವವ್ಯಾಪಿ ಆದ್ದು, ಇದರ ಇಡೀ ವಿಶ್ವವೇ ನೋಡಿ   ಚಕಿತರಾದ್ದು, ಇದೆಲ್ಲ ನಮ್ಮ ಇತಿಹಾಸಲ್ಲಿ ಸ್ವರ್ಣಾಕ್ಷರಲ್ಲಿ ಬರೆಯಕ್ಕಾದ ವಿಷಯ.

ಅರ್ಧ ಭೂಮಂಡಲವನ್ನೇ ತಮ್ಮ ಪಾದಾಕ್ರಾಂತ ಮಾಡಿಗೊಂಡ ಮಹಾಚಾಣಾಕ್ಷ ಕಪಟಿಗಳ ಭಾರತಂದವೇ ಗಡಿಪಾರ್ ಮಾಡಿದ್ದು ಸಣ್ಣ ವಿಷಯವೋ? ಅದರ ಮರವಲಕ್ಕೋ? ಅಥವಾ ಮರವಲೆಡಿಗೋ? ನಾವಿಂದು ಆರ  ಹಂಗಿಲ್ಲದ್ದೆ ಸ್ವಾತಂತ್ರ್ಯ ಸುಖವ ಅನುಭವಿಸುವ ಹಾಂಗೆ ಮಾಡಿದ ಲಕ್ಷಾಂತರ ಭಾರತೀಯರ ರಕ್ತತರ್ಪಣಲ್ಲಿ ನೆನೆದು ಹೋದ ಭಾರತದ ಮಣ್ಣಿನ ಕಣಕಣವೂ ನಮ್ಮ ಎಚ್ಚರುಸುತ್ತಾ ಇದ್ದು. ಏಳಿ, ಎದ್ದೇಳಿ, ಎಚ್ಚರ! ಕಟ್ಟೆಚ್ಚರ! ಆ ನಮ್ಮ ಹೆರಿಯೊರ ವರಪುತ್ರರಪ್ಪಲೆ ಅವರ ಆಶೋತ್ತರಂಗಳ ಈಡೇರುಸಲೆ ಸತ್ಯಶೀಲರಾಗಿ, ನಿರ್ವಂಚನೆಲಿ ನಡದು ಮುಂದಾಣ ಪೀಳಿಗೆಯೊರಿಂಗೆ ಪಥ ಪ್ರದರ್ಶಕರಪ್ಪ ಹಾಂಗೆ ನಮ್ಮ ಜೀವನವ ರೂಪಿಸುವೊ°.

ಈ ಲೇಖನವ ಬರವಲೆ ಅನುವು ಮಾಡಿಕೊಟ್ಟ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಎಲ್ಲಾ ಸದಸ್ಯರಿಂಗೂ ಹಾರ್ದಿಕ ಶುಭಾಶಯಂಗಳೊಟ್ಟಿಂಗೆ ಕೃತಜ್ಞತಾಪೂರ್ವಕ –ನಿಂಗಳ ಪ್ರೀತಿಯ ಸರಸ್ವತಿ ಬಡೆಕ್ಕಿಲ

 

ಲೇಖನ ಪ್ರೇರಣೆ ಮತ್ತು ಮಾಹಿತಿ-

ಅಗೋಸ್ಟ್ 31-2012 ರ ಭವನ್ಸ್ ಜರ್ನಲ್, ಲೇಖಕಿ-ಪ್ರಾಧ್ಯಾಪಿಕೆ-ಸುಚರಿತಾ ಡೇ ಗೌಹಾತೀ

 

 

ಬಂಕಿಂಚಂದ್ರ ಚಟರ್ಜಿ ವಿರಚಿತ ಸಂಸ್ಕೃತ ಬಂಗಾಳೀ ಮಿಶ್ರಿತ ವಂದೇ ಮಾತರಂ ಸ್ತೋತ್ರದ ಪೂರ್ಣ ಪಾಠ:-

ವಂದೇ ಮಾತರಂ, ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ||

ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ, ವರದಾಂ ಮಾತರಂ || ವಂದೇ ಮಾತರಂ|| ೧||

ಸಪ್ತ ಕೋಟಿ ಕಂಠ ಕಲಕಲ ನಿನಾದ ಕರಾಲೇ
ದ್ವಿಸಪ್ತ ಕೋಟಿ ಭುಜೈರ್ಧೃತ ಘನಕರವಾಲೇ
ಕೇ ಬೋಲೇ ಮಾ ತುಮೀ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಂ || ವಂದೇ ಮಾತರಂ|| ೨||

ತುಮಿ ವಿದ್ಯಾ ತುಮಿ ಧರ್ಮಾ
ತುಮಿ ಹೃದಿ ತುಮಿ ಮರ್ಮಾ
ತ್ವಂ ಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೊಮಾರಿ ಪ್ರತಿಮಾ ಗಾಡಿ ಮಂದಿರೇ ಮಂದಿರೇ || ವಂದೇ ಮಾತರಂ|| ೩||

ತ್ವಂ ಹಿ ದುರ್ಗಾ ದಶಪ್ರಹರಣಾ ಧಾರಿಣೀಂ
ಕಮಲಾ ಕಮಲದಲ ವಿಹಾರಿಣೀಂ
ವಾಣೀ ವಿದ್ಯಾದಾಯಿನೀಂ,
ನಮಾಮಿ ತ್ವಾಂ ನಮಾಮಿ ಕಮಲಾಂ
ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ || ವಂದೇ ಮಾತರಂ|| ೪||

ವಂದೇ ಮಾತರಂ
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ……
ಭರಣೀಂ…..
ಮಾತರಂ || ವಂದೇ ಮಾತರಂ|| ೫||

‘~~~‘

ಇಷ್ಟೆಲ್ಲಾ ಹೇಳಿದ ಮೇಲೆ ಬಂಕಿಂಚಂದ್ರ ಚಟರ್ಜಿಯವರಿಂದ ಪ್ರಾಯಲ್ಲಿ 22 ವರ್ಷ ಸಣ್ಣೊನಾದ ರವೀಂದ್ರನಾಥ ಠಾಕೂರ ಬರದ ಜನಗಣಮನ-ರಾಷ್ಟ್ರಗೀತೆಯಾಗಿ ನಮ್ಮ ರಾಷ್ಟ್ರ ನಾಯಕರು ಸ್ವೀಕರಿಸಿದ-ಗೀತೆಯ ಮಂಗಳ ಹಾಡದ್ದರೆ ಹೇಂಗೆ? ಅಲ್ಲದಾ? ಅದನ್ನೂ ಇಡಿಯಾಗಿ ಹಾಡುತ್ತವಿಲ್ಲೆ. ಹಾಂಗಾಗಿ ಈ ಪರಿಚಯ

ಜನ ಗಣ ಮನ ಅಧಿನಾಯಕ ಜಯಹೇಭಾರತ ಭಾಗ್ಯವಿಧಾತಾ
ಪಂಜಾಬ, ಸಿಂಧು, ಗುಜರಾತ, ಮರಾಠಾ,
ದ್ರಾವಿಡ, ಉತ್ಕಲ, ವಂಗಾ
ವಿಂಧ್ಯ, ಹಿಮಾಚಲ, ಯಮುನಾ, ಗಂಗಾ,
ಉಚ್ಚಲ ಜಲಧಿ ತರಂಗಾ

ತವ ಶುಭನಾಮೇ ಜಾಗೇ
ತವ ಶುಭ ಆಶಿ ಸಮಾಗೇ
ಗಾಹೇ ತವ ಜಯ ಗಾಥಾ
ಜನಗಣ ಮಂಗಳದಾಯಕ ಜಯಹೇ ಭಾರತ ಭಾಗ್ಯವಿಧಾತಾ
ಜಯಹೇ ಜಯಹೇ ಜಯಹೇ ಜಯ ಜಯ ಜಯ ಜಯಹೇ | ಭಾರತ ಭಾಗ್ಯವಿಧಾತಾ

ಅಹರವ ತವ ಆಹ್ವಾನ ಪ್ರಚಾರಿತ ಸುನಿತವ ಉದಾರ ವಾಣೀ
ಹಿಂದು ಬೌದ್ಧ ಸಿಖ ಜೈನ ಪಾರಸಿಕ ಮುಸಲ್ಮಾನ ಕ್ರಿಸ್ತಾನೀ
ಪೂರಬ ಪಶ್ಚಿಮ ಆಶೇ ತವ ಸಿಂಹಾಸನ ಪಾಶೇ
ಪ್ರೇಮಹಾರ ಹೋಯ ಗಾಥಾ
ಜನಗಣ ಐಕ್ಯ ವಿಧಾಯಕ ಜಯಹೇ ಭಾರತ ಭಾಗ್ಯವಿಧಾತಾ
ಜಯಹೇ ಜಯಹೇ ಜಯಹೇ ಜಯ ಜಯ ಜಯ ಜಯಹೇ | ಭಾರತ ಭಾಗ್ಯವಿಧಾತಾ

ಪತನ ಅಭ್ಯುದಯ ಬಂಧುರ ಪಂಥಾ
ಯುಗಯುಗ ಧಾವಿತಧಾತ್ರೀ
ತುಮಿ ಚಿರಸಾರಥಿ ತವರಥ ಚಕ್ರೇ
ಮುಖರಿತ ಪಥದಿನ ರಾತ್ರೀ
ದಾರುಣ ವಿಪ್ಲವ ಮಾಝೇ
ತವ ಶಂಖಧ್ವನಿ ಬಾಜೇ
ಸಂಕಟ ದುಃಖತ್ರಾತಾ
ಜನಗಣಪಥ ಪರಿಚಾಯಕ ಜಯಹೇ ಭಾರತ ಭಾಗ್ಯವಿಧಾತಾ
ಜಯಹೇ ಜಯಹೇ ಜಯಹೇ ಜಯ ಜಯ ಜಯ ಜಯಹೇ | ಭಾರತ ಭಾಗ್ಯವಿಧಾತಾ

ಘೋರ ತಿಮಿರ ಘನ ನಿಬಿಡ ನಿಶೀಥೇ
ಪೀಡಿತ ಮೂರ್ಛೀ ದೇಶೇ
ಜಾಗ್ರತ ವಿಲತವ ಅವಿಚಲ ಮಂಗಲ
ನತನಯನೇ ಅನಿಮೇಷೇ
ದುಃಸ್ವಪ್ನೇ ಆತಂಕೇ
ರಕ್ಷಾಕರಿಲೇ ಅಂಕೇ
ಸ್ನೇಹಮಯೀ ತುಮಿ ಮಾತಾ
ಜನಗಣ ದುಃಖತ್ರಾಯಕ ಜಯಹೇ ಭಾರತ ಭಾಗ್ಯವಿಧಾತಾ
ಜಯಹೇ ಜಯಹೇ ಜಯಹೇ ಜಯ ಜಯ ಜಯ ಜಯಹೇ | ಭಾರತ ಭಾಗ್ಯವಿಧಾತಾ

ರಾತ್ರಿ ಪ್ರಭಾತಿಲ ಉದಿಲರವಿಚ್ಛವಿ
ಪೂರ್ವ ಉದಯ ಗಿರಿಭಾಲೇ
ಗಾಹೆವಿಹಂಗಮ ಪುಣ್ಯ ಸಮೀರಣ
ನವಜೀವನ ರಸಢಾಲೇ
ತವ ಕರುಣಾರುಣ ರಾಗೇ
ನಿದ್ರಿತ ಭಾರತ ಜಾಗೇ
ತವಚರಣೇ ನತಮಾತಾ
ಜಯಜಯ ಜಯಹೇ ಜಯರಾಜೇಶ್ವರ ಭಾರತ ಭಾಗ್ಯವಿಧಾತಾ
ಜಯಹೇ ಜಯಹೇ ಜಯಹೇ ಜಯ ಜಯ ಜಯ ಜಯಹೇ | ಭಾರತ ಭಾಗ್ಯವಿಧಾತಾ

 

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ,
ನಂ: 1566, 19th ಕ್ರಾಸ್
ರೂಪಾನಗರ
ಭೋಗಾದಿ ಪೋಸ್ಟ್
ಮೈಸೂರು 570026

9019274678

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

13 thoughts on “ವಂದೇ ಮಾತರಂ-ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಮಂತ್ರ

  1. ಓದುಲೆ ಉದ್ದ ಆದರೂ ಓದಿದ ಮತ್ತೆ ಉದ್ದಿ ಬಿಡ್ತಾಂಗಿಪ್ಪದಲ್ಲ ಕತೆ ಇದು. ನಮಃ ನಮಃ ಈ ಶುದ್ದಿಗೆ ತಡವಾಗಿ ಓದಿಕ್ಕಿ

  2. ಭಾರತಾಂಬೆ ನಮ್ಮ ಮಾತೆ ಪದ್ಯವ ಸಣ್ಣಾಗಿಪ್ಪಗ ಶಾಲೆಲಿ ಹೇಳ್ಸಿ ವಾರ್ಷಿಕೋತ್ಸವಲ್ಲಿ ನೃತ್ಯ ಮಾಡ್ಸಿಗೊಂಡು ಇತ್ತಿದ್ದವು

    ಟ್ವಿಂಕಲ್ ಟ್ವಿಂಕಲ್ ಬಂದು ಇದು ಈಗ ಎಲ್ಲೋರಿಂಗೂ ಮರತ್ತಿದು

  3. ನಮಸ್ಕಾರ ಸ್ವಾತಂತ್ರ ಬಗ್ಗೆ ಮಾಹಿತಿ ನೀಡಿದ ಹಾಗೂ ವಂದೇ ಮಾತರಂ ಗೀತೆ ಬಗ್ಗೆ ಮಾಹಿತಿ ಒಪ್ಪಣ್ಣ ಬಳಗಕ್ಕೆ ಧನ್ಯವಾದಗಳು

  4. ಸ್ವಾತಂತ್ರ್ಯೋತ್ಸವದ ಸಮಯಕ್ಕೆ ಸರಿಯಾಗಿ ಹೊಂದುವ ಒಳ್ಳೆ ಶುದ್ದಿ. ಗೊಂತಿಲ್ಲದ ಹಲವು ವಿಷಯಂಗೊ ಗೊಂತಾತು. ನಿಜವಾಗಿಯೂ, ಸ್ವಾತಂತ್ರ್ಯಕ್ಕೆ ಬೇಕಾಗಿ ಬಲಿದಾನ ಮಾಡಿದ ಆ ಮಹಾತ್ಮರ ಎಷ್ಟು ನೆನಪಿಸೆಂಡರೂ ಸಾಲ. ಈಗ ಮತ್ತೆ, ನಮ್ಮ ಸಂಸ್ಕೃತಿ ಭಾಷೆಯ ಒಳುಸಲೆ ಬೃಹತ್ ಹೋರಾಟ ನೆಡಕಾಗಿ ಬಕ್ಕೋ ಹೇಳುವ ಹೆದರಿಕೆ ಹುಟ್ಟುತ್ತ ಇದ್ದು. ಸಕಾಲಿಕ ಶುದ್ದಿಯ ಒದಗುಸಿ ಕೊಟ್ಟ ಬಡೆಕ್ಕಿಲ್ಲ ಅಕ್ಕ, ಶುದ್ದಿಯ ಬೈಲಿಂಗೆ ಒದಗುಸಿಕೊಟ್ಟ ಶರ್ಮಪ್ಪಚ್ಚಿಗೆ ಧನ್ಯವಾದಂಗೊ.

  5. ಬರವಗ ತಪ್ಪು ಬಂತು.ಓದಿಯಪ್ಪಗ ಹೇಳಿ ತಿದ್ದಿಕೊಳುತ್ತೀರನ್ನೇ..

  6. ಸೇಡಿಯಾಪು ಕೃಷ್ಣ ಭಟ್ಟರ ಸಾಹಿತ್ಯ ನೆತ್ತರೂ ಮಗಳು ಸರಸ್ವತಿಯ ದೇಹಲ್ಲಿ ಪಸರಿಸಿದ್ದೂಳಿ ಆನು ಅಂದೇ ಜಾನ್ಸಿಗೊಂಡಿತ್ತಿದ್ದೆ .ಆದರೆ ಈಗ ಕಾಂಬಗ ಅಷ್ಟು ಮಾತ್ರ ಅಲ್ಲ!. ಅವರ,ಪ್ರತಿಭೆ,ಓಘ, ವಾಗ್ಝರಿ, ಎಲ್ಲವೂ ಬಯಿಂದು. ಸರಸ್ವತಿ ಅಕ್ಕಾ ನಿಂಗೊ ಆಯುರಾರೋಗ್ಯಲ್ಲಿದ್ದು,ಹೀಂಗೆ ಸಣ್ಣವಕ್ಕೆ ನಿಂಗಳಲ್ಲಿಪ್ಪದರ ಕೊಟ್ಟು ಪ್ರೋತ್ಸಾಹಿಸುತ್ತಾ ಇರಿ, ಹೇಳಿ ಮನತುಂಬಿ ಹೇಳ್ತಾಇದ್ದೆ.

    1. ವಿಜಯಕ್ಕ ಇಂದ್ರಾಣ ಪುತ್ತೂರು ಸುದ್ದಿಯ ೧೨ನೆ ಪುಟಲ್ಲಿ ಕಲ್ಯಾಣಪ್ಪನ ದಂಡ ಯಾತ್ರೆ ಹೇಳುವ ಲೇಖನ ಇದ್ದು. ಅದರ ಓದಿ ವಿಜಯಕ್ಕ.

        1. ಇಂಟೆರ್ನೆಟಿಲ್ಲಿ ಯಾವ ಪೇಪರು ಬೇಕಾದರೂ ಸಿಕ್ಕುತ್ತು ವಿಜಯಕ್ಕ.

  7. ಸ್ವಾತಂತ್ರ್ಯ ಹೋರಾಟದ ವಿವರಣೆಗಳ ಉದಿಯಪ್ಪಗ ಮೈ ರೋಮಾಂಚನ ಆತು.ಆ ದಿನಂಗೊ ಕಣ್ಣಿಂಗೆ ಕಟ್ಟಿದ ಹಾಂಗಾತು.ಎಷ್ಟೋ ಜೆನಕ್ಕೆ ಗೊಂತಿಲ್ಲದ್ದ ಅದೆಷ್ಟೋ ಮಾಹಿತಿಗಳ ಬಡೆಕ್ಕಿಲ ಅತ್ತೆ ಇಲ್ಲಿ ಕೊಟ್ಟಿದವು.ಉತ್ಸಾಹಂದ ಬರದ ಅವಕ್ಕೂ,ಅದರ ಇಲ್ಲಿ ಓದಲೆ ಒದಗಿಸಿ ಕೊಟ್ಟ ಶರ್ಮಣ್ಣಂಗೂ ಅಭಿನಂದನೆ..

  8. ಈ ಲೇಖನಕ್ಕೆ ಸರಸ್ವತಿ ಅಕ್ಕಂಗೆ ಎಷ್ಟು ಧನ್ಯವಾದ ಹೇಳಿರೂ ಕಡಮ್ಮೆಯೇ. ಸ್ವಾತಂತ್ರ್ಯೋತ್ಸವಕ್ಕೆ ಇದು ಒಳ್ಳೆಯ ಕೊಡುಗೆ.ಸಣ್ಣ ಮಕ್ಕೊಗೆ ಅರ್ಥ ಅಪ್ಪಾಂಗೆ ಭಾಷಣ ಮಾಡ್ಳೆ ಎಡಿವವು ಕಮ್ಮಿ. ಆದರೆ ಕುಞ್ಞ್ ಮಕ್ಕೊಗೂ ಅರ್ಥ ಅಪ್ಪಾಂಗೆ ಹೇಳೆಕ್ಕಾರೆ, ಬರೆಕಾರೆ ಸರ್ಸ್ವತಿ ಅಕ್ಕನೇ ಆಯೆಕ್ಕು. ಹೀಂಗಿಪ್ಪದು ನಿಂಗಳ ಪತ್ತಾಯಂದ ಇನ್ನೂ ಬರಲಿ. ದೊಡ್ಡವಕ್ಕೆ ನಾವು ಹೇಳಿರೆ ಗುಣ ಕಮ್ಮಿ. ಸಣ್ಣವಕ್ಕೇ ಹೇಳಿ ಬೋಧುಸೆಕ್ಕಪ್ಪದು. ನಿಂಗೊಗೆ ,ಶರ್ಮಭಾವಂಗೆ ನಮೋನಮಃ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×