Oppanna.com

ಸ್ವಯಂವರ : ಕಾದಂಬರಿ : ಭಾಗ 13 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   26/08/2019    2 ಒಪ್ಪಂಗೊ

ವರುಷಂಗೊ ಒಂದೆರಡು ಶುದ್ದಿಲ್ಲದ್ದೆ ದಾಂಟಿ ಹೋತು.ಕೇಶವನ ಕಾಲು ಬೇನೆ ಪೂರ ಗುಣಾಗಿ ಅವ° ಇಂಜಿನಿಯರಿಂಗ್ ಕಲಿವಲೆ ಮೈಸೂರಿಲ್ಲಿಪ್ಪ ಕೋಲೇಜಿಂಗೆ ಸೇರಿದ°. ಶೈಲ ಬಿ.ಎಸ್ಸಿ ಅಕೇರಿಯಾಣ ವರ್ಷ . ಭಾಮೆಯಕ್ಕನೇ ಅದಕ್ಕೆ ಕಲ್ತಾಗದ್ದೆ ಮದುವೆ ಮಾಡುದು ಬೇಡ ಹೇಳಿದ ಕಾರಣ ಚಂದ್ರಣ್ಣ ತಳಿಯದ್ದೆ ಕೂದ್ದದು.ಇಲ್ಲದ್ರೆ ಅವರ ಅಣ್ಣಂದ್ರ ಮಗಳಕ್ಕಳ ಎಲ್ಲ ಹತ್ತನೇ ಕ್ಲಾಸು ಕಲ್ತು ಎರಡೊರ್ಷಪ್ಪಗಳೆ ಮದುವೆ ಮಾಡಿ ಕೊಟ್ಟರೂ ಶೈಲ ಕಲಿವಲೆ ತುಂಬ ಹುಶಾರಿದ್ದ ಕಾರಣ ಅದರ ಕಲುಶುಲೆ ಅಬ್ಬೆಯ ಒಪ್ಪಿಗೆಯೂ ಸಿಕ್ಕಿದ ಕಾರಣ ಕೂಸಿನ ಜಾತಕ ಕೊಡ್ಲೆ ಅಂಬ್ರೆಪ್ಪು ಮಾಡಿದ್ದವಿಲ್ಲೆ.

ಶಾರದೆ ಸುರುವಾಣ ಸರ್ತಿ ಬಸರಿಯಾಗಿಪ್ಪಗ ಮನಗೆ ಬಂದು, ಅವಕ್ಕೆ ಎಡಿಗಾದಷ್ಟು ಸಮಯ ಎಡಿಗಾದ ಕೆಲಸ ಮಾಡಿಕೊಟ್ಟ ಸರಸತ್ತೆ ಹೆಚ್ಚು ಬಂಙ ಬಾರದ್ದೆ ಈ ಲೋಕ ಬಿಟ್ಟು ಹೋದವು.ಇಷ್ಟು ವರ್ಷ ಇಲ್ಲೇ ಇದ್ದ ಸರಸತ್ತೆಯ ನಿರ್ಗಮನ ಮನೆಯವಕ್ಕೆಲ್ಲ ತುಂಬ ಬೇಜಾರಿನ ಸಂಗತಿಯೇ ಆದರೂ ದಿನ ಕಳುದ ಹಾಂಗೆ ಅದೆಲ್ಲ ಹಳತ್ತಿಂಗೆ ಹೋಗಿ ಹೊಸ ವಿಶಯ ಬಪ್ಪಗ ಕೆಲವೆಲ್ಲ ಮರವಲೇ ಬೇಕಾವ್ತು ‌.

ಸುಶೀಲ ಈಗ ಮನೆಯ ಕೊಂಗಾಟದ ಮುದ್ದು.
“ಅಪ್ಪ°, ಅಬ್ಬೆ,ಅಕ್ಕ°,ಅಣ್ಣಾ…ಅಜ್ಜೀ..” ಹೇಳಿಂಡು ಒಬ್ಬೊಬ್ಬನನ್ನೇ ಚಪ್ಪುಡಿ ಮಾಡಿ ಅದಕ್ಕೆ ಬೇಕಾದ ಕೆಲಸಂಗಳ ಮಾಡ್ಸುಗು. ಎಂಟನೇ ಕ್ಲಾಸಿಲ್ಲಿ ಕಲಿವದಾದರೂ ಮಕ್ಕಳಾಟಿಗೆ ಬಿಡದ್ದ ಕಾರಣ ಒಂದೊಂದರಿ ಅಬ್ಬೆಯ ಕೈಂದಲೋ ,ಅಜ್ಜಿಯ ಕೈಂದಲೋ ಬೈಗಳು ತಿಂಬ ಕ್ರಮವೂ ಇದ್ದು.

ಮಗಳಿಂಗೆ ಶಾಲಗೆ ಹೋಪಲೆ ನಡವಲೆ ಬಂಙಪ್ಪದು ಬೇಡಾಳಿ ಚಂದ್ರಣ್ಣ ಒಂದು ಜೀಪು ತೆಗದವು.ಮನೆಂದ ಅಡಕ್ಕೆ,ಬಾಳೆಕಾಯಿ,ಕೊಕ್ಕೋ ಎಲ್ಲ ಪೇಟಗೆ ಕೊಂಡೋಪಲೂ ಇದರಿಂದ ಅನುಕೂಲಾತು. ಭಾಮೆಯಕ್ಕಂಗೂ ಯೇವಗಾರು ನೆಂಟ್ರ ಮನಗೆ ಹೋಪಲೂ ಈ ಜೀಪು ತುಂಬ ಪ್ರಯೋಜನಕ್ಕೆ ಬಂತು.

“ಈ ಸ್ವಯಂವರ ಹೇಳಿರೆ ಎಂತರಕ್ಕಾ°?” ಒಂದು ದಿನ ಸುಶೀಲ ಶೈಲನತ್ರೆ ಕೇಳಿತ್ತು.
“ಕೂಸುಗಳೇ ಸ್ವಂತ ಅವರ ಮದುವೆ ಅಪ್ಪವರ ಕಂಡು ಹಿಡಿವದು,ಇಲ್ಲದ್ರೆ ಕೂಸಿನ ಅಪ್ಪ° ಯೇವದಾದರು ಪಣ ಮಡುಗಿರ್ತವು ಅದರ್ಲಿ ಗೆದ್ದವು ಆ ಕೂಸಿನ ಮದುವೆ ಅಪ್ಪದಕ್ಕೆ ಸ್ವಯಂವರ ಹೇಳುದು,ಈಗೆಂತಕೆ ಕೂಸಿಂಗೆ ಸ್ವಯಂವರ?” ತಂಗೆಯ ರಜ ತಮಾಶೆ ಮಾಡಿಂಡು ಕೇಳಿತ್ತು ಶೈಲ.

“ಎಂತಕೂ ಇಲ್ಲೆ..ಸುಮ್ಮನೇ ಅಷ್ಟೇ” ಸುಶೀಲ ಸಣ್ಣಕೆ ಯೇವದೋ ಪದ್ಯ ಹೇಳ್ಲೆ ಸುರು ಮಾಡ್ಯಪ್ಪಗ ಶೈಲ ಅದರ ರಟ್ಟೆ ಹಿಡುದು ಕೇಳಿತ್ತು

“ಎಂತ ಒಂದು ಹೊಸ ರಾಗ? ಆರಿಂಗೆ ಸ್ವಯಂವರ ಈಗ? ಸರಿಯಾಗಿ ಹೇಳು,ಇಲ್ಲದ್ರೆ ಆನೀಗ ಅಬ್ಬೆಯತ್ರೆ ಹೇಳುವೆ”
ಅಷ್ಟಪ್ಪಗ ಸುಶೀಲ ದೊಡ್ಡಕೆ ನೆಗೆ ಮಾಡ್ಯೊಂಡು ಚಾವಡಿಲಿಪ್ಪ ಅಪ್ಪಂಗೆ ಕೇಳುವ ಹಾಂಗೆ
“ಅಪ್ಪಾ° ನಮ್ಮಕ್ಕಂಗೆ ನಾವು ಸ್ವಯಂವರ ಮಾಡುವನಾ?” ಕೇಳಿತ್ತು.

ಚಾವಡಿಲಿ ಅಡಕ್ಕೆ ಕೆರಸಿಂಡಿಪ್ಪ ಚಂದ್ರಣ್ಣಂಗೆ ಮಗಳ ಮಾತು ಕೇಳಿ ನೆಗೆ ಬಂತು. ಸ್ವಯಂವರ ಹೇಳಿರೆ ಈ ಕೂಸು ಎಂತ ಜಾನ್ಸಿದ್ದು ಹೇಳಿ ಗ್ರೇಶಿಂಡು ಅದರತ್ರೆ ಕೇಳ್ಲೆ ಅದರ ದಿನಿಗೇಳಿದವು.

“ಅಪ್ಪಾ°…..ಈ ಅಕ್ಕ° ಎನ್ನ ಚೂಂಟುತ್ತು” ಹೇಳಿಂಡು ಅಪ್ಪ° ದಿನಿಗೇಳುವ ಮದಲೇ ಚಾವಡಿಗೆ ಓಡಿ ಬಂತು ಸುಶೀಲ.
“ಎಂತರ ನಿನ್ನ ಕಾರ್ಬಾರ ಅಕ್ಕನತ್ರೆ? ಸ್ವಯಂವರ ಆಯೆಕಾದ್ದು ನಿನಗಾ ಅದಕ್ಕಾ?” ಅಕ್ಕನ ಕೈಂದ ತಪ್ಸಿಕ್ಕಿ ,ಸೇಂಕಿಂಡು ಓಡಿ ಬಂದ ಮಗಳತ್ರೆ ಕುಶಾಲು ಮಾತಾಡಿದವು ಚಂದ್ರಣ್ಣ.

“ಮನ್ನೆ ಅಜ್ಜಿ ಕೃಷ್ಣನ ಕತೆ ಹೇಳುಗ ರುಕ್ಮಿಣಿ ಸ್ವಯಂವರ ಕತೆ ಹೇಳಿದವು.ಅದರ್ಲಿ ಅದು ಅಣ್ಣ ನೋಡಿದ ಶಿಶುಪಾಲನ ಮದುವೆ ಆಗದ್ದೆ ಕೃಷ್ಣನೊಟ್ಟಿಂಗೆ ಓಡಿ ಹೋತಲ್ಲದಾ? ಅದಕ್ಕೆ ಸ್ವಯಂವರ ಹೇಳುದಾಳಿ ಕೇಳ್ಲೆ ಅಕ್ಕನತ್ರಂಗೆ ಹೋದ್ದು.ಅದೆನ್ನ ತಮಾಶೆ ಮಾಡಿತ್ತಪ್ಪಾ°…..” ಅಪ್ಪನ ಹತ್ತರೆ ಕೂದೊಂಡು ಎಂತದೂ ಗೊಂತಿಲ್ಲದ್ದ ಪುಟ್ಟು ಮಕ್ಕಳ ಹಾಂಗೆ ಮಾತಾಡುವ ಅದರ ಕಂಡಪ್ಪಗ ಶೈಲಂಗೆ ಆಶ್ಚರ್ಯ ಆತು.
“ಇಲ್ಲಿಗೆ ಬಾ” ಹೇಳಿ ಕೈ ಬಾಶೆಲಿ ತಂಗಗೆ ಹೇಳಿತ್ತು.ಅದು ಅಕ್ಕ° ಎಂತ ಮಾಡ್ತೋ ಹೇಳಿ ಹೆದರಿಂಡೇ ಹತ್ತರೆ ಬಂತು.

“ನಿನಗೆ ಸ್ವಯಂವರ ಹೇಳಿರೆ ಎಂತರ ಹೇಳಿ ಗೊಂತಿಲ್ಲೆ ಅಲ್ದಾ? ನಿನ್ನ ಪಾಠ ಪುಸ್ತಕದ ಎಡಕ್ಕಿಲ್ಲಿಪ್ಪ ಕಾದಂಬರಿ ಎಲ್ಲ ಕಾಣ್ತೆನಗೆ.ಎನ್ನ ಎಂತಾರು ಹೇಳಿರೆ ಅದರ ಅಪ್ಪಂಗೆ ಈಗ ತಂದು ತೋರ್ಸುವೆ” ಸುಶೀಲ ‘ಚ’ ಕಾರ ಎತ್ತದ್ದೆ ಅಲ್ಲಿಂದ ಓಡಿತ್ತು.
ಶೈಲಂಗೆ ತಂಗೆಯ ಕ್ರಮ ಕಾಂಬಗ ನೆಗೆ ಬಂದು ತಡದ್ದಿಲ್ಲೆ.
ಕಲಿವಲೆ ದೊಡ್ಡ ಮನಸ್ಸೇ ಇಲ್ಲದ್ದ ಸುಶೀಲ ಅದರ ಫ್ರೆಂಡುಗಳ ಕೈಂದ ಕಾದಂಬರಿ ತಂದು ಪುಸ್ತಕದ ಎಡೇಲಿ ಮಡುಗಿ ಓದುದರ ಸುಮಾರು ಸರ್ತಿ ಕಂಡಿದದು.ಕಾದಂಬರಿ ಓದುದು ತಪ್ಪಲ್ಲದ್ರೂ ಈಗಷ್ಟೇ ಬದುಕಿನ ಹೊಸದೃಷ್ಟಿಂದ ನೋಡ್ಲೆ ಸುರು ಮಾಡಿದ ತಂಗಗೆ ಅದರಿಂದ ತೊಂದರೆ ಅಪ್ಪಲಾಗಾಳಿ ಮಾತ್ರ ಅದರ ಒಳ್ಳೆಯ ಮನಸ್ಸಿಲ್ಲಿ ಇದ್ದದು. ಒಂದು ಅದರ ವಿಷಯ ಹೇಳಿ ತಂಗಗೆ ಬುದ್ದಿ ಹೇಳೆಕೂಳಿ ಗ್ರೇಶಿಂಡಿದ್ದತ್ತದು. ಡಿಗ್ರಿ ಪರೀಕ್ಷೆ ಕಳುದು ಈಗ ಮನೇಲೇ ಇಪ್ಪ ಕಾರಣ ಅದಕ್ಕೆ ತಂಗೆಯ ಕೆಲವು ಚಪ್ಪುಡಿ ಬುದ್ದಿ ಎಲ್ಲ ಗೊಂತಾಗಿಂಡಿದ್ದತ್ತು.ಅಂದರೂ ಅದು ಸಣ್ಣ ಹೇಳಿ ಹೆಚ್ಚು ದೊಡ್ಡ ವಿಶಯ ಮಾಡದ್ದೆ ಸುಮ್ಮನೇ ಬಿಟ್ಟು ಕೊಂಡಿದ್ದತ್ತು.

ಮನಗೆ ಕರೆಂಟು ಬಂದ ಕಾರಣ ಭಾಮೆಯಕ್ಕಂಗೆ ಅಂತೇ ಕೂದು ಉದಾಸಿನಪ್ಪದಕ್ಕೆ ಒಂದು ಬಣ್ಣದ ಟಿವಿಯನ್ನು ತಂದು ಮಡುಗಿದವು ಚಂದ್ರಣ್ಣ. ಭಾಮೆಯಕ್ಕಂಗೆ ಗೊಂತಿಪ್ಪ ಭಾಶೆಯ ಅದರೊಳ ಇಪ್ಪವು ಮಾತಾಡದ್ರೂ ಅಂತೇ ಜನಂಗೊ ಕೊಣಿವದೋ,ಮಾತಾಡುದೋ ನೋಡ್ಲೆ ಲಾಯ್ಕ ಆಗಿಂಡಿದ್ದತ್ತು ಅವಕ್ಕೆ.ಅಂದರೂ ವಾರಕ್ಕೊಂದರಿ ಕನ್ನಡ ಸಿನೆಮಾ ಬಂದುಕೊಂಡಿದ್ದತ್ತು.ಭಾಮೆಯಕ್ಕ° ಕನ್ನಡ್ಕ ಮಡುಗಿ ಟಿವಿ ನೋಡ್ಲೆ ಕೂಬಗ ಒಂದೊಂದರಿ ಸುಶೀಲನೂ ಬಂದು ಕೂರುಗು. ಹದಿಹರೆಯಕ್ಕೆ ಎತ್ತಿದ ಆ ಕೂಸಿನ ಮನಸಿಲ್ಲಿ ಟಿವಿಲಿ ಬಪ್ಪ ಸಿನೆಮಾದ ಪದ್ಯಂಗೊ, ಕತೆಗೊ,ಅದು ಓದುವ ಕಾದಂಬರಿಯ ಕತೆಗೊ ಎಲ್ಲ ಸೇರಿ ಮನಸಿಲ್ಲಿ ಹೊಸತ್ತರ ಎಂತದೋ ಕಾಂಬ ಕಲ್ಪನೆಗೆ ಬಣ್ಣ ತುಂಬುಸುಲೆ ಸುರು ಮಾಡಿದವು.

ಅದೇ ಸಮಯಕ್ಕೆ ಶೈಲಂಗೆ ಒಂದು ಒಳ್ಳೆ ಕುಳವಾರು ಬಂತು.ಮಾಣಿ ರಾಮಚಂದ್ರ ಕೋಲೇಜಿಲ್ಲಿ ಮಾಷ್ಟ್ರು. ಅಬ್ಬೆ ಅಪ್ಪನ ಮೂರು ಮಕ್ಕಳಲ್ಲಿ ಮಧ್ಯದವ°. ಕಾಂಬಲೆ ರಜಾ ಕಪ್ಪು, ಕಣ್ಣಿಂಗೆ ಕನ್ನಡ್ಕ ಇದ್ದು ಹೇಳುವ ಕೊರತೆ ಬಿಟ್ಟರೆ ಬೇರೆ ಯೇವ ವಿಶಯಲ್ಲೂ ತೆಗದು ಹಾಕುವ ಪಾರ್ಟಿ ಅಲ್ಲ.

ಚಂದ್ರಣ್ಣ ಕೇಶವನ ಬರ್ಸಿ ಕೇಳಿದವು.ಅವಂಗೆ ಎಂತ ಹೇಳೆಕೂಳಿ ಅರಡಿಯದ್ರೂ ಮಾಣಿ ಎಲ್ಲಾ ವಿಶಯಲ್ಲೂ ಯೋಗ್ಯ° ಆದರೆ ಆಗದ್ದೆಂತ ” ಹೇಳಿದ°. ಭಾಮೆಯಕ್ಕ, ಕೂಸಿನ ದೊಡ್ಡಪ್ಪಂದ್ರು, ಸೋದರತ್ತೆಕ್ಕೊ ಎಲ್ಲೋರದ್ದೂ ಒಪ್ಪಿಗೆ ಸಿಕ್ಕಿತ್ತು.
“ಬೇಕಾರೆ ಒಂದು ಮಾತು ಶೈಲನತ್ರೂದೆ ಕೇಳು.ಈಗ ಮದ್ಲಾಣಾಂಗಲ್ಲ, ಅದೂದೆ ಕಲ್ತಿದು.ಅಷ್ಟಪ್ಪಗ ಅದರ ಮನಸಿಲ್ಲೆಂತಯಿದ್ದು ಹೇಳಿ ಗೊಂತಾಗೆಡದಾ” ಭಾಮೆಯಕ್ಕಂಗೆ ಪುಳ್ಳಿಯ ಅಭಿಪ್ರಾಯವನ್ನು ತಿಳಿಯದ್ದೆ ಮುಂದುವರುಶುಲೆ ಮನಸ್ಸು ಬಯಿಂದಿಲ್ಲೆ.

“ನಿಂಗೊ ಹೇಳಿದ್ದಕ್ಕೆ ಎನಗೆ ಒಪ್ಪಿಗೆ ಇದ್ದಬ್ಬೇ ” ಅಪ್ಪ° ಕೇಳಿದ ಪ್ರಶ್ನಗೆ ಅಡಿಗೊಳಾಂಗೆ ಹೋಗಿ ಮೆಲ್ಲಂಗೆ ಅಬ್ಬೆ ಹತ್ತರೆ ಉತ್ತರ ಹೇಳಿತ್ತು ಶೈಲ.
“ಮದುವೆ ವಿಶಯ ಹೇಳುಗಳೇ ಕೂಸಿಂಗೆ ನಾಚಿಕೆ ಬಂತನ್ನೇ” ಅಲ್ಲೇ ಇದ್ದ ಅಜ್ಜಿ ನೆಗೆ ಮಾಡಿದವು.
ವೈಶಾಖಲ್ಲಿ ಮದುವೆ ಮಾಡುದು ಹೇಳಿ ನಿಗಂಟು ಮಾಡಿದವು.ಇಷ್ಟು ದೊಡ್ಡ ಮನೆಯಿಪ್ಪಗ ಅದರ ಒತ್ತರೆ ಮಾಡುದೇ ದೊಡ್ಡ ಕೆಲಸ.
ಬದ್ದ ಕಳುದ ಮತ್ತೆ ಶಾರದೆಗೂ, ಚಂದ್ರಣ್ಣಂಗೂ ಪುರುಸೊತ್ತೇ ಇಲ್ಲದಷ್ಟು ಕೆಲಸ ಆತು.ಕೇಶವಂಗೆ ಪರೀಕ್ಷೆ ಮುಗಿಯದ್ದ ಕಾರಣ ಎಲ್ಲಾ ಕೆಲಸಕ್ಕೂ ಅವ್ವೇ ಹೋಯೆಕಾಗಿ ಬಂದುಕೊಂಡಿದ್ದತ್ತು.

ಅಕ್ಕನ ಮದುವೆ ಸಂಭ್ರಮ ಸುಶೀಲಂಗೂದೆ.ಆದರೂ ಭಾವ° ಅಪ್ಪವನ ಮಾತ್ರ ಅದಕ್ಕೆ ಹೆಚ್ಚು ಕೊಶಿಯಾಯಿದಿಲ್ಲೆ.ಅಕ್ಕನತ್ರೆ ಅವ° ಮಾತಾಡಿದ್ದಾಯಿಲ್ಲೆ.ಕಾಂಬಲೆ ತುಂಬ ಚೆಂದ ಇಲ್ಲೆ.ಸಿನೆಮಾದ ಹೀರೋ ಹಾಂಗಿದ್ದರೆ “ಎನ್ನ ಭಾವ°” ಹೇಳಿ ಕೊಶೀಲಿ ಫ್ರೆಂಡುಗಳತ್ರೆ ಹೇಳ್ತಿತು.ಈಗ ಏಕೋ ಉದಾಸೀನ ಅದಕ್ಕೆ. ಅಂದರೂ ಜವುಳಿ ತೆಗವಲೆ ಹೋಪಗ, ಚಿನ್ನ ತೆಗವಲೆ ಹೋಪಗ ಎಲ್ಲ ಅದೂದೆ ಹೋಯಿದು.

ಮದುವೆ ಲೆಕ್ಕಲ್ಲಿ ಎರಡು ಉದ್ದ ಲಂಗ,ರವಕೆಯೂ ಒಂದು ಜೊತೆ ಈಗಾಣ ಹೊಸ ನಮೂನೆಯ ಪಂಜಾಬಿ ಡ್ರೆಸ್ಸುದೆ ತೆಗದತ್ತು. ಚಂದ್ರಣ್ಣ ದೊಡ್ಡ ಮಗಳಿಂಗೆ ಚಿನ್ನ ತೆಗವಗ ಸಣ್ಣ ಮಗಳಿಂಗೂ ಒಂದು ಸಣ್ಣ ನೆಕ್ಲೇಸು,ಕೆಮಿಗೆ ನೇಲುವ ಲೋಲಾಕು ಎಲ್ಲ ತೆಗದವು.

ಮದಲೇ ಶೈಲಂದಲೂ ಚೆಂದ ಸುಶೀಲ ಕಾಂಬಲೆ. ಶೈಲನಿಂದಲೂ ರಜ ಉದ್ದದ ಜೆಡೆವುದೆ, ಮೋರೆ ಕರೇಲಿ ಸುರುಳಿ ಸುರುಳಿಯಾಗಿ ನೇಲುವ ತಲೆಕಸವು. ಸಾಲದ್ದಕ್ಕೆ ಪೌಡರು,ಕಾಡಿಗೆ ಹೇಳಿಯೆಲ್ಲ ಮೋರಗೆ ಬಳುದಪ್ಪಗ ಅದರ ಒಂದು ರೀತಿಲಿ ವಿಶೇಶ ಚೆಂದ ಕಾಂಬದು. ಮದುವೆ ದಿನ ಅಂತೂ ಉದ್ದ ಜೆಡೆ ತುಂಬ ಹೂಗು ಸೂಡಿ,ಹೊಸ ಅಂಗಿ ಹಾಕಿ,ಚಿನ್ನ ಬಣ್ಣ ಹಾಕಿಯಪ್ಪಗ ಎಲ್ಲೋರಿಂಗು ಕಣ್ಣಿಂಗೆ ಕುತ್ತುವಷ್ಟು ಚೆಂದದ ಬೊಂಬೆಯ ಹಾಂಗೆ ನೆಗದು ಕಂಡತ್ತದರ ಅಂದು ಸಭೆಲಿ.

“ಎರಡ್ನೇ ಮಗಳ ಮದುವೆ ಅಂದಾಜಿದ್ದ ಚಂದ್ರಣ್ಣಾ” ಹೇಳಿ ಸುಶೀಲನ ಪ್ರಾಯ ಗೊಂತಿಲ್ಲದ್ದವು ಕೆಲವು ಜೆನ ಮದುವೆ ದಿನವೇ ಗುಟ್ಟಾಗಿ ಕೇಳಿದವು ಕೂಡಾ.
“ಇಲ್ಲೆಪ್ಪಾ, ಅದಿನ್ನು ಹತ್ತನೇ ಕ್ಲಾಸಿಂಗೆ ಎತ್ತೆಕಷ್ಟೆ.ಅದರನ್ನೂ ಇದರ ಹಾಂಗೆ ಕಲಿವಷ್ಟು ಕಲಿಶೆಕು” ಚಂದ್ರಣ್ಣ ಕೇಳಿದವರತ್ರೆಲ್ಲ ನೆಗೆ ಮಾಡಿಂಡೇ ಉತ್ತರ ಕೊಟ್ಟವು.
ಅಂತೂ ಅಕ್ಕನ ಮದುವೆ, ಸಟ್ಟುಮುಡಿಲಿ ಚೆಂದ ಚೆಂದಕೆ ಆಯತ ಮಾಡಿಂಡು ಇಡೀ ಸಭೆಲಿ ತಿರುಗಿ ಸುಧರಿಕೆ ಮಾಡಿದ ಸುಶೀಲನ ಒಂದರಿ ಕಂಡವು ಮತ್ತೊಂದರಿ ತಿರುಗಿ ನೋಡದ್ದೆ ಇತ್ತಿದ್ದವಿಲ್ಲೆ ಹೇಳ್ಲಕ್ಕು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 13 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಧಾರಾವಾಹಿ ಒಳ್ಳೆ ಮನ ಮುಟ್ಟುವ ಹಾಂಗೆ ಇದ್ದು.ಫ್ಲಾಶ್ ಬ್ಯಾಕ್ ಲಾಯ್ಕಿದ್ದು.ಕಳುದ ವಾರ ಎಪಿಸೋಡಿಂಗೆ ಕಾದ್ದು.ಅಂತೂ ಈ ವಾರ ಖುಷಿ ಆತು…

  2. ಸ್ವಯಂವರದ ಫ಼್ಲಾಷ್ ಬ್ಯಾಕು ರೈಸುತ್ತಾ ಇದ್ದು. ಕಳುದವಾರ ಧಾರಾವಾಹಿಗೆ ರಜೆ ಆಗಿ ರಜ್ಜ ಕಾಯ್ತ ಹಾಂಗೆ ಆತು. ಅದರ ಬದಲು ಒಪ್ಪಣ್ಣ ಬೈಲಿಲ್ಲಿ ರುಕ್ಮಿಣಿ ಸ್ವಯಂವರ ಬಂದದು ಸರಿಯಾತು. ಆ ಕಥೆ ಈ ಕಥೆಗೆ ಪೂರಕವಾಗಿ ಕಂಡತ್ತು. ಅಂತೂ ಸುಶೀಲನ ಸ್ವಯಂವರ ಅಪ್ಪಲೆ ಆಗೆಂದು ಬಂದ ಹಾಂಗಿದ್ದು. ಪ್ರಸನ್ನಕ್ಕ, ಚೆಂದಕೆ ಮುಂದುವರಿಯಲಿ ಧಾರಾವಾಹಿ !!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×