ದಿನಂಗೊ ಆರನ್ನೂ ಕಾಯದ್ದೆ ಉರುಳುವ ಒಟ್ಟಿಂಗೆ ದಿನೇಸ, ಸುಶೀಲನ ಸಂಬಂಧ ಮತ್ತೂದೆ ಗಟ್ಟಿಯಪ್ಪಲೆ ಸುರುವಾತು. ತಂಗಮ್ಮನ ಕೆಲಸ ಶಾರದೆಗೆ ತುಂಬಾ ಕೊಶಿಯಾದರೆ ,ದಿನೇಸನ ಚುರುಕು ಚಂದ್ರಣ್ಣಂಗೂ ಭಾರೀ ಸಂತೋಷಾತು
“ನಮ್ಮ ಊರಿನ ಜವ್ವನಿಗ ಆಳುಗೊಕ್ಕೆ ಆರಿಂಗೂ ಇದರಾಂಗೆ ಕೆಲಸ ಮಾಡ್ಲೆಡಿಯ.ಮೂರಾಳುಗಳ ಕೆಲಸ ದಿನೇಸ ಒಂದೇ ಮಾಡ್ತು” ಹೇಳಿ ಶಾರದೆಯ ಎದುರಂದ ಹೇಳಿರೆ ಶಾರದಗೂ ಹಾಂಗೇ
“ಈಗ ಅತ್ತೆಯ ನೋಡಿ ,ಅವರ ಕೆಲಸ ಅವ್ವೇ ಮಾಡುವಷ್ಟು ಉಶಾರಿಯಾದ್ದು ತಂಗಮ್ಮಂದಾಗಿ, ಹೇಂಗೆ ಎಣ್ಣೆ ಕಿಟ್ಟಿ ತಿಕ್ಕಿ ,ಬೆಶಿ ಬೆಶಿ ನೀರಿಲ್ಲಿ ಮೀಶಿ ಎಷ್ಟು ಲಾಯ್ಕಲ್ಲಿ ನೋಡ್ಯೊಳ್ತು.ಹೀಂಗಿದ್ದ ಆಳುಗೊ ಸಿಕ್ಕಿದ್ದು ನಮ್ಮ ಪುಣ್ಯ ಅಲ್ಲದಾ?”
ಆದರೆ ಇದರ ಹಿಂದೆ ಇಪ್ಪ ಗುಟ್ಟು ಮಾತ್ರ ಇಬ್ರಿಂಗೂ ಗೊಂತೇ ಆಯಿದಿಲ್ಲೆ.
ಒಂದು ತಿಂಗಳು ಕಳುದಪ್ಪಗ ಕೇಶವ° ಮನಗೆ ಬಂದ° .ಎರಡು ದಿನದ ರಜೆಲಿ ಒಂದರಿ ಶೈಲನ ಮನಗೂ ಹೋಯೆಕು ಹೇಳಿ ಅಂದಾಜಿ ಮಾಡಿಕ್ಕಿ ಬಂದದವ°. ಮನೆ ಒಳಾಂಗೆ ಹತ್ತುಗಳೇ ಎದೂರ ಸಿಕ್ಕಿದ್ದದು ತಂಗಮ್ಮ!!
‘ಹ್ಹೇಂ..ಹಟ್ಟಿ ಕೆಲಸ ಮುಗುದರೂ ಇದು ಇಲ್ಲೇ ಇದ್ದಾ? ಅಂಬಗ ದಿನೇಸ…..!!’ ಅವನ ಮನಸ್ಸು ಒಂದರಿ ಝುಮ್ ಹೇಳಿತ್ತು.
“ಬನ್ನೀ ಅಣ್ಣಾ, ನಿಂಗಳ ಅಬ್ಬೆ ಅಪ್ಪ° ನಿಂಗಳ ಅತ್ತೆಯ ಮನಗೆ ಹೋಯಿದವು” ಭಾರೀ ಚೆಂದಕೆ ನೆಗೆ ಮಾಡಿಂಡು ಅದು ಹೇಳುಗ ಇವಂಗೆ ಒಳ್ಳೆತ ಪಿಸ್ರು ಬಂತು.ಅಂದರೂ ಮಾತಾಡದ್ದೆ ಅವನ ಉಗ್ರಾಣಕ್ಕೆ ಹೋಗಿ ಸಾಮಾನೆಲ್ಲ ಅಲ್ಲಿ ಮಡುಗಿಕ್ಕಿ ಮಿಂದಿಕ್ಕಿ ಬಂದ°.
“ಸುಶೀ ಅಲ್ಲೆಲ್ಯಾರು ಇಕ್ಕು ಮಗಾ°, ಕಾಫಿ ಮಾಡಿ ಕೊಡ್ಲೆ ಹೇಳು” ಭಾಮೆಯಕ್ಕ ಮೆಲ್ಲಂಗೆ ಹೇಳಿದವು.
“ಹೋ..ಅಂಬಗ ಆ ಮಹಾರಾಣಿ ಮನೆಲಿದ್ದಲ್ಲದಾ,ಒಂದರಿ ನೋಡಿಕ್ಕಿ ಬತ್ತೆ” ಹೇಳಿಕ್ಕಿ ಮನೆಯಿಡೀ ಅದರ ಹುಡ್ಕಿದ°. ಅಲ್ಲೆಲ್ಲಿಯೂ ಸುಶೀಲನ ಕಂಡತ್ತಿಲ್ಲೆ ಅವಂಗೆ.
“ಕುಞ್ಞಕ್ಕ ತೋಟಕ್ಕೋಯಿದವು ಕಾಣ್ತು” ತಂಗಮ್ಮ ಬಾಯಿಲಿಪ್ಪ ಎಲೆ ತುಪ್ಪಿಕ್ಕಿ ಬಂದು ಹೇಳಿದ್ದು ಕೇಳಿಯಪ್ಪಗ ಅವನ ಪಿತ್ತ ನೆತ್ತಿಗೇರಿತ್ತು.
ಸೀದಾ ಕತ್ತಿ ತೆಕ್ಕೊಂಡು ತೋಟಕ್ಕೆ ಇಳಿವಗ ಭಾರೀ ನೆಗೆ ನೆಗೆ ಮಾಡಿಂಡು ಸುಶೀಲ ಸಂಕ ದಾಂಟಿ ಬಪ್ಪದು ಕಂಡತ್ತವಂಗೆ
“ಒಬ್ಬನೇ ಮರ್ಲೆತ್ತಿ ಹಾಂಗೆ ನೆಗೆ ಮಾಡಿಂಡು ಬಪ್ಪದೆಂತಕೆ?” ಅದು ಹತ್ತರೆತ್ತಿಯಪ್ಪಗ ಕೇಳಿದ°. ಯೇವದೋ ಲೋಕಲ್ಲಿದ್ದ ಜೆನ ಫಕ್ಕನೆ ಅಲ್ಲಿ ಅಣ್ಣನ ಕಂಡಪ್ಪಗ ಒಂದರಿ ಹೆದರಿದಾಂಗೆ ಸಣ್ಣಕೆ ಬೊಬ್ಬೆ ಹಾಕಿ ಅಲ್ಲೇ ನಿಂದತ್ತದು.
“ಎಲ್ಲಿ ನೋಡಿಂಡು ನಡವದು? ” ಹೇಳಿ ಹೇಳಿಕ್ಕಿ ಅವ° ತಿರುಗಿ ನೋಡಿಯಪ್ಪಗ ಅಲ್ಲಿಗೆ ದಿನೇಸ ಓಡಿಂಡು ಬಂತು.
“ನಿನಗೆ ಎನ್ನ ಕೈಂದ ಸಮ್ಮಾನ ತಿನ್ನದ್ದೆ ಆವ್ತಿಲ್ಲೆ ಅಲ್ದಾ?” ಹೇಳಿಕ್ಕಿ ತಂಗೆಯ ಕೈ ಹಿಡುದು ಎಳಕ್ಕೊಂಡೇ ಮನಗೆ ಬಂದದವ°.
“ಎನ್ನ ಕೈ ಬಿಡಾ°, ಅಂತೇ ಎಂತಕೆ ಎಳವದು? ಅಯ್ಯೋ ಅಬ್ಬೇ..ಅಪ್ಪಾ……ಆರಾರು ಬನ್ನೀ” ಹೇಳಿ ಆರ್ಬಾಯಿ ಕೊಟ್ಟತ್ತದು.
“ಈಗ ಇಲ್ಲಿ ಅಬ್ಬೆಯೂ ಇಲ್ಲೆ,ಅಪ್ಪನೂ ಇಲ್ಲೆ ಹೇಳಿ ಗೊಂತಿದ್ದ ಕಾರಣ ಅಲ್ದಾ ನೀನು ತೋಟಕ್ಕೆ ಹೋದ್ದು.ನಿನ್ನ ಗ್ರಾಚಾರ ಬಿಡ್ಸುಲಿದ್ದಿಂದಾನು” ಅವಂಗೆ ಪಿಸ್ರು ಏರಿತ್ತು.
“ಸತ್ಯ ಹೇಳು,ನಿನಗೆ ಆ ದಿನೇಸ ಎಂತಾಯೆಕು? ಅದರೊಟ್ಟಿಂಗೆ ಅನಗತ್ಯ ಪಟ್ಟಾಂಗ ಎಂತಕೆ? ಅಂದೊಂದರಿ ನಿನ್ನತ್ರೆ ಆನು ಹೇಳಿದ್ದಲ್ದಾ?”
“ನೀನು ಸುಮ್ಮನೆ ಕೂರಣ್ಣಾ.ಅಂತೇ ಇಲ್ಲದ್ದರ ಹೇಳಿ ಎನ್ನ ಮರ್ಯಾದಿ ತೆಗೆಡ, ಆನೆಂತದೂ ಮಾಡಿದ್ದಿಲ್ಲೆ. ಬೇರೆ ಆಳುಗಳತ್ರೆ ಮಾತಾಡಿದಾಂಗೆ ಅದರತ್ರೂ ಮಾತಾಡಿದ್ದಷ್ಟೆ” ಸುಶೀಲನೂ ಕೋಪಲ್ಲಿಯೇ ಹೇಳಿತ್ತು.
ಕೇಶವ ಮಾತಾಡದ್ದೆ ಅದರ ಮೋರೆಯನ್ನೇ ನೋಡಿದ° ‘ ತಂಗೆ ಹೇಳುದರ್ಲಿ ಎಷ್ಟು ಸತ್ಯ ಇದ್ದು.ಈಗ ಮಾತಾಡಿರೆ ಅದು ಮತ್ತೂ ಗಲಾಟೆ ಮಾಡುಗು.ತಳಿಯದ್ದೆ ಕೂಬದೇ ಒಳ್ಳೆದೂಳಿ ತಳಿಯದ್ದೆ ಅಟ್ಟಕ್ಕೆ ಹತ್ತಿ ಹೋದ°.
ಅವ° ಅತ್ಲಾಗಿ ಹೋದ್ದದೂದೆ ತಂಗಮ್ಮ ಸುಶೀಲನತ್ರಂಗೆ ಬಂತು
“ಎಂತ ಮಾಡಿದ್ದಾಯಿಲ್ಲೆನ್ನೇ ಅಣ್ಣ, ಅಣ್ಣ ಇಪ್ಪನ್ನಾರ ರೆಜ ಜಾಗ್ರತೆ ಮಾಡೆಕು ನಿಂಗೊ,ಇನ್ನು ಆದಷ್ಟು ಬೇಗ ಎನ್ನ ಮಗ° ನಿಂಗಳ ಕೊರಳಿಂಗೆ ತಾಲಿ ಕಟ್ಟದ್ರೆ ಸಂಗತಿ ಮೋಸಕ್ಕು!! ” ಭಾರೀ ದುಃಖ ತೋರ್ಸಿಂಡು ಸುಶೀಲನ ಬೆನ್ನುದ್ದಿತ್ತದು.
“ಹ್ಹ..ಹ್ಹ..ಅಣ್ಣನ ಕಣ್ಣಿಂಗೆ ಮಣ್ಣು ಹಾಕಲೆ ಎನಗೊಂತಿಲ್ಯಾ? ಇನ್ನು ಅಬ್ಬೆ ಅಪ್ಪ° ಬಂದಪ್ಪಗ ನೋಡು, ಅವನ ಎಂತ ಮಾಡ್ತೆ ಹೇಳಿ….” ಅಣ್ಣಂಗೆ ಹೇಂಗಾರು ಮಾಡಿ ಬೈಗಳು ತಿನ್ಸೆಕೂಳ ಜಾನ್ಸಿಂಡು ಅದಕ್ಕಿಪ್ಪ ಉಪಾಯವ ಆಲೋಚನೆ ಮಾಡಿಂಡು ಪುಸ್ತಕ ಬಿಡ್ಸಿ ಕೂದತ್ತದು.
ಅಬ್ಬೆ ಅಪ್ಪ ಬಪ್ಪನ್ನಾರ ಕೇಶವ° ಕೆಳ ಇಳುದು ಬಯಿಂದನೇಯಿಲ್ಲೆ.
“ಹೋ..ನೀನೇವಗ ಬಂದದು? ಸುಶೀ ಇಷ್ಟೊತ್ತಾದರೂ ಅಣ್ಣ ಬಯಿಂದ’ ಹೇಳಿದ್ದೇಯಿಲ್ಲೆ” ಶಾರದೆಗೆ ಮಗ° ಬಂದ ಸಂತೋಷ.
“ಅವ° ಬಂದದರ ಹೇಳ್ಲೆಂತಯಿದ್ದು? ಕಾಣ್ತಿಲ್ಯಾ?” ಸುಶೀ ಮನಸ್ಸಿಲ್ಲದ ಮನಸಿಂದ ಹೇಳಿತ್ತು.ಅದೆಲ್ಲ ಶಾರದೆ ಗುಮಾನ ಮಾಡಿದ್ದಿಲ್ಲೆ.
“ನಿನಗೆ ಆಪೀಸು ಕೆಲಸ ಹೇಂಗಾವ್ತೋ°?ಉಂಬಲೆ ತಿಂಬಲೆ ಎಲ್ಲ ಇಲ್ಯಾಣಾಂಗಿದ್ದ ಅಡಿಗೆ ಸಿಕ್ಕುತ್ತಾ,ನೀನು ರಜಾ ಬಚ್ಚಿದ್ದೆ” ಅಬ್ಬೆಯ ಮನಸ್ಸು ಯೇವಗಳೂ ಹಾಂಗೇ ಅಲ್ಲದ.
“ಬಚ್ಚಿದ್ದೂ ಇಲ್ಲೆ,ಎಂತೂ ಇಲ್ಲೆ.ಎಲ್ಲ ಸರೀ ಇದ್ದಬ್ಬೇ.ಅಲ್ಯಾಣ ಕೆಲಸದ ಬಗ್ಗೆ ನೀನು ಆಲೋಚನೆ ಮಾಡೆಡ.ಇಲ್ಲಿ ಎಂತಾರು ಹೊಸ ವಿಶಯ ಇದ್ದಾ?” ಕೇಶವ° ಹಾಂಗೆ ಹೇಳಿಂಡು ತಂಗೆಯ ಮೋರೆ ನೋಡಿದ°. ಅದು ಮೋರೆ ತಿರುಗ್ಸಿತ್ತು.
ಈಗಳೇ ಅಬ್ಬೆ ಹತ್ತರೆ ಮಾತಾಡ್ಲೆ ಒಳ್ಳೆ ಸಮಯ ಹೇಳಿ ಆತವಂಗೆ.ಹಾಂಗೆ ಹೇಳಿ ಸೀದಾ ಆ ವಿಶಯವನ್ನೇ ತೆಗವಲಾವ್ತಾ? ಅದಕ್ಕೆ ಬೇಕಾಗಿ ಸುಮ್ಮನೇ ಅದೂ ಇದೂ ಶುದ್ದಿ ಮಾತಾಡಿಂಡು ಕೂದ°.
“ಇದೆಂತ ನಿನಗೆ ಇಷ್ಟೂ ಅಸಕ್ಕಾಯಿದಾ? ಇಷ್ಟು ದಿನ ಕೇಳದ್ದವರ ಶುದ್ದಿ ಕೂಡ ಕೇಳ್ತೆನ್ನೇ..” ಶಾರದೆಗೆ ಮಗ° ಹೀಂಗೆ ತುಂಬ ಮಾತಾಡುದು ವಿಶೇಶ ಕಂಡತ್ತು.
“ಅಬ್ಬೇ..ಈ ಸುಶೀ ಎಂತ ಮಾಡ್ತು? ಸರೀ ಓದುತ್ತಾ ಅಲ್ಲ,ಅಂತೇ ತೋಟ, ಗುಡ್ಡೆ ತಿರುಗುದಷ್ಟೆಯಾ?”
ಅವ° ಅಷ್ಟು ಹೇಳಿಯಪ್ಪಗ ಅಲ್ಲಿದ್ದ ಸುಶೀಲಂಗೆ ಎಂತಾತು ಗೊಂತಿಲ್ಲೆ.
“ಎನ್ನ ಶುದ್ದಿ ಮಾತಾಡೆಡ ನೀನು,ಎನ್ನ ಕಂಡ್ರಾಗದ್ದವ°ಲ್ಲದ ನೀನು,ಸುಮ್ಮನೇ ಬೈಗಳು ತಿನ್ಸುಲೆ ಹೆರಟಮ್ಮಾ ಅವ°” ಹೇಳಿ ಹೇಳಿಕ್ಕಿ ಅಲ್ಲಿಂದ ಎದ್ದು ಜಾಲಿಂಗಿಳುದತ್ತು.
“ಏಯ್..ಎಲ್ಲಿಗೆ ಹೋಪದು? ನಿಲ್ಲಲ್ಲಿ” ಅವ° ಅದರ ರಟ್ಟೆ ಹಿಡುದು ನಿಲ್ಸಿದ°.
“ಅಬ್ಬೇ ಈ ಅಣ್ಣ ನೋಡು” ಹೇಳಿ ರಾಗ ಎಳದತ್ತದು.
“ಇನ್ನೂದೆ ಸಣ್ಣ ಮಕ್ಕಳ ಹಾಂಗೆ ಮಾಡ್ತೆನ್ನೇ ಕೇಶೂ..ಅದರ ಅದರಷ್ಟಕೆ ಬಿಡು..ಮಕ್ಕಳಾಟಿಕೆ ಬಿಟ್ಟಿದಿಲ್ಲೆಯ ನಿಂಗೊಗೆ” ಅಬ್ಬೆ ಅಷ್ಟು ಹೇಳಿದ ಕೂಡ್ಲೇ ಅಣ್ಣನ ಕೈಂದ ಉಳುಂಚಿಕೊಂಡು ತೋಟಕ್ಕೆ ಓಡಿತ್ತದು.
“ಈಗ ತಂಗಮ್ಮನೂ ದಿನೇಸನೂ ಕಾಯಮ್ಮಿಂಗೆ ಇಲ್ಲಿಪ್ಪದು.ಅಜ್ಜಿಯ ಚಾಕ್ರಿ ತುಂಬ ಲಾಯ್ಕಲ್ಲಿ ಮಾಡ್ತ ಕಾರಣ ಎನಗೆ ಕೆಲಸ ರೆಜ ಹಗುರಾತು.ದಿನೇಸನೂ ಹಾಂಗೆ ಮರ ಹತ್ತಲೆ ಎಲ್ಲ ಗೊಂತಿದ್ದು.ಸುಶೀಗೆ ಯೇವಗಲೂ ಸಂಪಗೆ ಹೂಗುದೆ ಕೊಯ್ದು ಕೊಡ್ತು. ಭಾರೀ ಕೊಂಗಾಟ ಅವಕ್ಕೆ ಸುಶೀಲನತ್ರೆ……” ಅಬ್ಬೆ ಹೇಳುದರ ಕೇಳಿಂಡಿದ್ದರೂ ಸುಶೀ ಈಗ ಅಷ್ಟು ಅಂಬ್ರೆಪ್ಪಿಲ್ಲಿ ತೋಟಕ್ಕೆ ಓಡಿದ್ದೆಂತಕೇಳಿ ಅಂದಾಜಾಯಿದಿಲ್ಲೆ ಅವಂಗೆ.
“ಆನು ಹೇಳುದೆಂತಾರು ಅರ್ಥಾತ ನಿನಗೆ.ನಾಳಂಗೆ ರೆಜ ಚಕ್ಕುಲಿ ಮಾಡ್ತೆ.ಶೈಲನ ಮನಗೋಪಗ ಕೊಂಡೋಪಲಾತು.ಸುಶೀಗು ರಜೆ ಇದ್ದ ಕಾರಣ ಬೇಗ ಅಡಿಗೆ ಮಾಡಿಕ್ಕಿ ಆನುದೆ ಹೆರಟ್ರಕ್ಕಾಳಿದ್ದೆ.ಈಗ ತಂಗಮ್ಮ ಮನೇಲೇ ಇಪ್ಪ ಕಾರಣ ಆನುದೆ ನಿನ್ನಪ್ಪನುದೆ ಸುಶೀಯನ್ನು,ಅಜ್ಜಿಯನ್ನು ಬಿಟ್ಟಿಕ್ಕಿ ಕೆಲಾವು ದಿಕಂಗೆ ಹೋಪಲಾವ್ತು”
ಅವ° ಮಾತಾಡಿದ್ದಾ° ಇಲ್ಲೆ. ಮನೆಲಿ ತಂಗಮ್ಮನ ಸ್ಥಾನ ಎಷ್ಟು ಗಟ್ಟಿಯಾಯಿದು ಹೇಳಿ ಅಂದಾಜಪ್ಪಲೆ ಸುರುವಾತು .ಎಂತಾರು ಮಾಡಿ ಅವರ ಇಲ್ಲಿಂದ ಕಳ್ಸದ್ರೆ ತಂಗೆಯ ಭವಿಷ್ಯ ಹಾಳಕ್ಕು ಹೇಳಿ ಅವನ ಮನಸ್ಸು ಹೇಳಿಡಿಪ್ಪಗಳೇ ಹೆರಾಂದ ಚಂದ್ರಣ್ಣನ ಆರ್ಭಟೆ ಕೇಳಿತ್ತು
“ಇಷ್ಟ್ರವರೆಗೆ ನೀನು ಸಣ್ಣ ಸಣ್ಣ ಹೇಳಿ ಬಿಟ್ಟದಕ್ಕೆ ಈಗ ಹೀಂಗಿದ್ದ ಮರ್ಯಾದಿ ಹೋಪ ಕೆಲಸ ಮಾಡಿದೆ ಅಲ್ದಾ? ಇನ್ನು ನೀನು ಮನೆಂದ ಹೆರ ಇಳುದರೆ ಕೈಕಾಲು ಬಡುದು ಮುರಿವಲಿದ್ದು” ಹೇಳಿಂಡೇ ಸುಶೀಲನ ರಟ್ಟೆ ಹಿಡುದು ದರದರ ಎಳಕ್ಕೊಂಡು ಬಂದು ಶಾರದೆಯ ಕಾಲ ಬುಡಕ್ಕೆ ನೂಕಿ ಬಿಟ್ಟವು ಚಂದ್ರಣ್ಣ.
ಅಪ್ಪನ ಕೋಪ ಕಾಂಬಗ ಕೇಶವಂಗೆ ವಿಶಯ ಎಂತರಾಳಿ ಅಂದಾಜಾತು. ಶಾರದೆಗೆ ಮಾಂತ್ರ ಒಂದೂ ಗೊಂತಾಗದ್ದೆ ಗೆಂಡನನ್ನೂ ,ಮಗಳನ್ನೂ ಬದಲ್ಸಿ ಬದಲ್ಸಿ ನೋಡಿಂಡು ನಿಂದತ್ತು.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 20: https://oppanna.com/kathe/swayamvara-20-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020