“ಉಂಬಗ ತಿಂಬಗ ಹಾಂಗೆ ಕಣ್ಣ ನೀರು ಹಾಕಲಾಗ, ನೀನೆಲ್ಲಿಂದ ಬಂದದು? ನಿನ್ನ ಅವಸ್ಥೆ ಹೀಂಗಾದ್ದೇಕೆ? ಎನ್ನ ಹೆಸರು ಪಂಕಜಾ ಹೇಳಿ . ಎನ್ನ ಅಕ್ಕ ಹೇಳಿಯೋ ಅತ್ತೆ ಹೇಳಿಯೋ ದಿನಿಗೇಳ್ಲಕ್ಕು” ಪಂಕಜಾ ಹೇಳುವ ಆ ಹೆಮ್ಮಕ್ಕಳ ಮಾತು ಕೇಳಿಯಪ್ಪಗ ಸುಶೀಲನ ಮನಸ್ಸಿಲ್ಲಿ ಇಷ್ಟರವರೆಗೆ ಕಟ್ಟಿ ಮಡುಗಿದ ದುಃಖ ಎಲ್ಲ ಕಣ್ಣೀರಿನ ರೂಪಲ್ಲಿ ಹೆರ ಬಂತು.
ಮನೆ ಬಿಟ್ಟು ಬಂದ ಮತ್ತೆ ಒಂದೇ ಒಂದು ಜನ ಅದರತ್ರೆ ಹೀಂಗೆ ಮಾತಾಡ್ಸಿದ್ದವಿಲ್ಲೆ. ಪ್ರೀತಿಲಿ ತಿಂಬಲೆ ಕೊಟ್ಟಿದವಿಲ್ಲೆ.
“ಹಾಂಗೆ ಕೂಗಿರೆ ಎನಗೆ ಎಂತದೂ ಅರ್ಥಾವ್ತಿಲ್ಲೆ. ನೀನು ಕೂಗೆಡ. ನಿದಾನಕೆ ಎಲ್ಲ ಹೇಳು” ಅವು ಮತ್ತೂದೆ ಒತ್ತಾಯ ಮಾಡಿಯಪ್ಪಗ ಸುಶೀಲ ಅದರ ಕತೆಯೆಲ್ಲ ಹೇಳಿತ್ತು. ಮನೆ ಯಜಮಾನನೂ ಅಲ್ಲೇ ಹತ್ತರೆ ಕೂದು ಇದರ ಕತೆಯ ಕೇಳಿದ°.
“ಅಯ್ಯೋ ದೇವರೇ..ಎಂಥಾ ಅವಸ್ಥೆ ನಿನ್ನದು!! ಕತೆಲಿ , ಸಿನೆಮಾಲ್ಲಿ ಎಲ್ಲ ಓದಿ, ನೋಡಿ ಮಾಡಿದ್ದೆ. ಆದರೆ ಹೀಂಗಾದವರ ಮಾತ್ರ ಆನು ಮದಾಲು ಕಾಂಬದು. ಅಷ್ಟು ಶ್ರೀಮಂತಿಕೆಲಿ ,ಕೊಂಗಾಟಲ್ಲಿ ಬೆಳದ ನಿನ್ನ ಮದುವೆ ಮಾಡ್ಸಲೆ ಅಪ್ಪ° ರಾಜಕುಮಾರನನ್ನೇ ಹುಡ್ಕುತಿತವು. ಈಗ…!! ಛೇ……ಗ್ರೇಶುಗ ಎನಗೇ ಬೇಜಾರಾವ್ತು. ಹೇಂಗೂ ನಿನ್ನ ಅವಸ್ಥೆ ಹೀಂಗಾತು. ಇನ್ನು ಮಗಳ ಮಾಂತ್ರ ಹೀಂಗಪ್ಪಲೆ ಬಿಡೆಡ. ಅದರ ಲಾಯ್ಕಲ್ಲಿ ಕಲಿಶು….”
ಅವು ಹಾಂಗೆ ಹೇಳಿಯಪ್ಪಗ ಹರ್ಕಟೆ ಸೀರೆಯ ಸೆರಗಿಲ್ಲಿ ಕಣ್ಣು ಉದ್ದಿಕ್ಕಿ ಮಡಿಲಿ ಮನುಗಿದ ಒಪ್ಪಕ್ಕನ ನೋಡಿತ್ತದು. ಎರಡು ವರ್ಷ ಆತಷ್ಟೇ. ಈಗಲೇ ಅದಕ್ಕೆ ಉಂಬಲೆ ತಿಂಬಲೆ ಸರಿಯಾಗಿ ಸಿಕ್ಕುತ್ತಿಲ್ಲೆ. ಒಂದೇ ಒಂದು ಅಂಗಿ ಸಾನೂ ಅಪ್ಪ° ಹೇಳುವ ದಿನೇಸ ತಂದು ಕೊಟ್ಟಿದಿಲ್ಲೆ. ದಿನೇಸನ ಮಗಳು ಹೇಳುವ ಕಾರಣಂದ ಎನಗೂ ಮಗಳತ್ರೆ ಕೆಲವು ಸರ್ತಿ ಕೋಪವೇ ಬಪ್ಪದು. ಪಾಪ! ಈ ಅಕ್ಕ° ಹೇಳಿದ ಹಾಂಗೆ ಮಗಳ ಲಾಯ್ಕಲ್ಲಿ ಕಲಿಶೆಕು. ಮನೆ ಹತ್ತರೆ ಶಾಲೆ ಎಲ್ಲಿದ್ದು ಹೇಳಿ ಹುಡ್ಕೆಕು. ….’ ಹೀಂಗೆಲ್ಲ ಗ್ರೇಶಿಂಡು ಹೊಟ್ಟೆ ತುಂಬ ದೋಸೆ ತಿಂದು ಕಾಲಿಲ್ಲಿ ಮನುಗಿ ಒರಗಿದ ಒಪ್ಪಕ್ಕನ ಅಂಗಿ ಹಾಕದ್ದ ಮೈಲಿಪ್ಪ ಧೂಳು ಸೀರೆಲಿ ಮೆಲ್ಲಂಗೆ ಉದ್ದಿತ್ತದು.
“ಮಗಳಿಂಗೆ ಅಂಗಿ ಕೂಡ ಹಾಕ್ಸಿದ್ದಿಲ್ಲೆನ್ನೇ..ಈ ಧೂಳಿಲ್ಲಿ ಆಡ್ಲೆ ಬಿಡುಗ ಅಂಗಿ ಹಾಕ್ಸೆಕು” ಪಂಕಜಾ ಹಾಂಗೆ ಹೇಳಿಂಡಿಪ್ಪಗಳೇ ಜಾಲಿಲ್ಲಿ ಒಂದು ಕಾರು ಬಂದು ನಿಂದತ್ತು.
“ಎನ್ನ ಸೊಸೆ ಬಂತು. ಅದು ನಿಂಗಳ ಇಬ್ರ ಗಾಯಕ್ಕೂ ಮದ್ದು ಕೊಡುಗು. ನಿನ್ನ ಮಗಳ ಗಾಯಕ್ಕೆ ಹೆಚ್ಚು ಜಾಗ್ರತೆ ಬೇಕಾದ್ದು. ಅಲ್ಲಲ್ಲಿ ಮರ್ಲು ನಾಯಿಗಳೂ ಇರ್ತವು” ಹೇಳಿಯಪ್ಪಗ ಸುಶೀಲಂಗೆ ಸತ್ಯಕ್ಕೂ ಹೆದರಿಕೆ ಆತು.
‘ದೇವರೇ..ಎನ್ನ ಹೊಟ್ಟೆಲಿ ಹುಟ್ಟಿದ ಕಾರಣಕ್ಕೆ ಮಗಳು ಹೀಂಗೆ ಕಷ್ಟ ಬಪ್ಪ ಹಾಂಗಾದ್ದು. ಅದಕ್ಕೆ ಕೊಡುವ ಕಷ್ಟ ಎಲ್ಲ ಎನಗೇ ಕೊಡು ದೇವರೇ….’ ಹೇಳಿ ಪ್ರಾರ್ಥಿಸಿತ್ತು.
ಪಂಕಜನ ಸೊಸೆ ಬಂದ ಕೂಡ್ಲೆ ಕೈಕಾಲು ತೊಳದು ವಸ್ತ್ರ ಮಾತಿಕ್ಕಿ ಇವರ ಹತ್ತರಂಗೆ ಬಂತು. ಅದು ಒಳ ಇಪ್ಪಗಳೇ ಪಂಕಜ ಸುಶೀಲನ ಕತೆಯ ಎಲ್ಲ ಅದರತ್ರೆ ಹೇಳಿದ ಕಾರಣ ಅದು ಸೀದಾ ಬಂದು ಒಪ್ಪಕ್ಕನ ಕಾಲು ಹಿಡುದು ನೋಡಿತ್ತು.
“ಸಣ್ಣಕೆ ನೆತ್ತರು ಬತ್ತನ್ನೇ. ಎರಡು ಹಲ್ಲು ತಾಗಿದಾಂಗೆ ಕಾಣ್ತು. ನಿಂಗೊ ಆಸ್ಪತ್ರೆಗೆ ಬಂದು ಇಂಜೆಕ್ಷನ್ ಕೊಡ್ಸೆಕು. ಇಲ್ಲದ್ರೆ ಅಪಾಯ”
ಸುಶೀಲಂಗೆ ತಲೆಬೆಶಿಯಾತು. ಮಗಳ ಕರಕ್ಕೊಂಡು ಆಸ್ಪತ್ರೆಗೆ ಹೋಪದಾದರೂ ಹೇಂಗೆ? ಇಂಜೆಕ್ಷನ್ ಕೊಡುಸುಲೆ ಎಷ್ಟು ಖರ್ಚು ಬಕ್ಕೋ ಗೊಂತಿಲ್ಲೆ… ಅಯ್ಯೋ ದೇವರೇ..ಎನಗೆ ಕಷ್ಟ ಕೊಟ್ಟರೂ ತೊಂದರೆ ಇದ್ದತ್ತಿಲ್ಲೆ. ಈ ಪಾಪುವಿಂಗೂ ಎಂತಕೆ ಹೀಂಗೆ ಮಾಡಿದೆ…..’
“ನಿಂಗೊ ಬೇಜಾರ ಮಾಡೆಡಿ. ಈಗ ಎನ್ನೊಟ್ಟಿಂಗೆ ಆಸ್ಪತ್ರೆಗೆ ಬನ್ನೀ. ಎಂತಾಗ,ಹೆದರೆಡಿ” ಡಾಕ್ಟರ್ ಅಷ್ಟು ಹೇಳಿರೂ ಸುಶೀಲಂಗೆ ಧೈರ್ಯ ಬಯಿಂದಿಲ್ಲೆ.
ಈಗ ತಂಗಮ್ಮ ಎಂತ ಮಾಡ್ತಾಯಿಕ್ಕು? ಎಂಗಳ ಹುಡ್ಕುಗೋ..’ಹೋದರೆ ಮಾರಿ ಹೋತು’ ಹೇಳಿ ತಳಿಯದ್ದೆ ಕೂರುಗೋ..ಈ ಒಪ್ಪಕ್ಕಂಗೆ ಇಂಜೆಕ್ಷನ್ ಕೊಡ್ಸುದೇಂಗೆ ? ಇಂದಾದರೆ ಈ ಡಾಕ್ಟರ ಒಟ್ಟಿಂಗೆ ಹೋಪಲಕ್ಕು. ನಾಳಂಗೆ ಎಂತ ಮಾಡುದು!!
“ಇದಾ….ನೀನು ಈ ಸೀರೆ ಸುತ್ತು.ಈ ರವಕ್ಕೆ ಹಾಳಿತಾವ್ತಾ ನೋಡು” ಪಂಕಜಾ ಒಂದು ಸೀರೆ, ರವಕ್ಕೆ, ಲಂಗ ಎಲ್ಲ ತಂದು ಸುಶೀಲನ ಎದುರು ಮಡುಗಿಯಪ್ಪಗ ಅದರ ದುಃಖ ಕಟ್ಟೆ ಒಡದ ಹಾಂಗಾಗಿ ಜೋರು ಕೂಗಲೆ ಬಂತು.
ಅಪ್ಪನಮನೆಲಿ ಅಬ್ಬೆ ಹೀಂಗೇ.. ಹೋಪಲ್ಲಿಂಗೆ ಸುತ್ತುವ ಸೀರೆ ಎಲ್ಲ ರಜಾ ಹಳತ್ತಾದರೆ ಕೆಲಸಕ್ಕೆ ಬಪ್ಪ ಹೆಣ್ಣಿಂಗೆ ಕೊಡುಗು
“ಅದಕ್ಕೆ ಎಲ್ಲಿಗಾರು ಹೋಯೆಕಾರೆ ಲಾಯ್ಕದ ಸೀರೆ ಎಲ್ಲಿಕ್ಕು? ನಾವೇ ಕೊಟ್ಟಾಯೆಕಷ್ಟೆ. ಅದಕ್ಕೇ ಲಾಯ್ಕದ ಸೀರೆಯನ್ನೇ ಕೊಟ್ಟೆ. ಸುತ್ತಿ ಹಳತ್ತಾದ ಸೀರೆ ಕೊಟ್ರೆ ಅದಕ್ಕೆ ನಾಲ್ಕು ಸರ್ತಿ ಕೂಡ ಸುತ್ತಲೆಡಿಯ. ನಿನ್ನದೂದೆ ಹಾಕದ್ದೆ ಮಡುಗಿದ ಅಂಗಿ ಇದ್ದರೆ ಅದಕ್ಕೆ ಕೊಡು.ರಜ ಸಣ್ಣ ಮಾಡ್ಸಿ ಮಗಳು ಹಾಕಲಿ.ಈಗ ಎಲ್ಲೋರು ಬೇರೆ ಬೇರೆ ನಮೂನೆ ಅಂಗಿ ಹಾಕುಗ ಅದಕ್ಕೂದೆ ಬೇಕೂಳಿ ಅಕ್ಕು, ಪಾಪ!”
ಅಂಬಗ ಅಬ್ಬೆಯ ಮಾತು ಬರೀ ಕುಶಾಲು ಹೇಳಿ ಕಂಡು ಕೊಂಡಿದ್ದತ್ತು. ಆದರೆ ಈಗ ಆನಿಪ್ಪದು ಯಾವ ಸ್ಥಾನಲ್ಲಿ!!
ಕೊಡುವ ಸ್ಥಾನಂದ ಬೇಡುವ ಸ್ಥಾನಕ್ಕೆ ಎತ್ತಿದೆ..ಆರು ಕಾರಣ!!??
“ನಿನ್ನ ಮಗಳು ದೊಡ್ಡಪ್ಪಗ ನಿನ್ನ ಕಷ್ಟ ಎಲ್ಲ ಪರಿಹಾರ ಅಕ್ಕು. ಅದರ ಲಾಯ್ಕ ಕಲುಶು. ಈಗ ಈ ಸೀರೆ ಸುತ್ತಿಂಡು ಹೆರಡು. ಬೇಕಾರೆ ಒಂದರಿ ಮಿಂದಿಕ್ಕಿ ಬಾ. ಮತ್ತೆ ಒಂದರಿ ತಲೆಬಾಚು. ಅದಕ್ಕೆ ಬೇಕಾದ್ದೆಲ್ಲ ಆನು ಕೊಡ್ತೆ” ಪಂಕಜಾ ಒಳ ಹೋಗಿ ಒಂದು ತೋರ್ತು, ಹೊಸ ಸಾಬೂನು ,ಒಂದು ಹಣಿಗೆ ಎಲ್ಲ ತಂದು ಕೊಟ್ಟವು. ಸುಶೀಲಂಗೆ ತೆಕ್ಕೊಳದ್ದೆ ಬೇರೆ ದಾರಿ ಇತ್ತಿದ್ದಿಲ್ಲೆ.
ಅವು ಹೇಳಿದಾಂಗೆ ಒಂದರಿ ಲಾಯ್ಕಲ್ಲಿ ಮಿಂದಿಕ್ಕಿ ಬಂತು. ಅವು ಕೊಟ್ಟ ಸೀರೆ ಸುತ್ತಿ , ತಲೆ ಬಾಚಿ ಇಪ್ಪ ತಲೆಕಸವಿನ ಜಡೆ ಹಾಕಿ ಅಲ್ಲೇ ಎದುರು ಇಪ್ಪ ಕನ್ನಾಟಿ ನೋಡಿತ್ತು. ಪ್ರತಿಬಿಂಬ ಕಂಡು ಅದಕ್ಕೇ ಝುಮ್ ಹೇಳಿ ಆತು. ಇಷ್ಟರವರೆಗೆ ಸರಿಯಾದ ಕನ್ನಾಟಿ ಇಲ್ಲದ್ದ ಕಾರಣ ಸ್ವಂತ ಮೋರೆ ಕೂಡ ಸರೀ ನೋಡದ್ದ ಜೆನ ಅದು. ಕೋಲೇಜಿಂಗೆ ಹೋಪ ಸುಶೀಲನ ಪ್ರೇತ ಇದು!! ಅಂದರೂ ಬಣ್ಣ ಮಾತ್ರ ಹಾಂಗೇ ಇದ್ದು. ಮಿಂದು ಬಣ್ಣದ ಸೀರೆ ಸುತ್ತಿಯಪ್ಪಗ ನಾಕು ಜನರ ಎದುರು ನೆಗದು ಕಾಂಬ ಹಾಂಗಿದ್ದ ರೂಪ ಈಗಲೂ ಇದ್ದು.
‘ಈ ರೂಪವೇ ಎನ್ನ ಹಾಳು ಮಾಡಿದ್ದದು’ ಹೇಳಿಂಡು ಮಗಳ ನೋಡಿತ್ತು.
ಮಗಳು ಇನ್ನೂ ಎದ್ದಿದಿಲ್ಲೆ. ಅದರ ಒಂದರಿ ಮೀಶೆಕು. ಹುಟ್ಟಿದ ಮತ್ತೆ ಸರಿಯಾಗಿ ಮೀಶಿದ್ದಿಲ್ಲೆ ಅದರ….! ಎಷ್ಟಾದರೂ ಎನ್ನ ಬಣ್ಣ ಅದಕ್ಕೆ ಬಯಿಂದಿಲ್ಲೆ. ಸಾಕು. ಹೀಂಗೇ ಇರಲಿ. ಹೆಚ್ಚು ರೂಪದೊಟ್ಟಿಂಗೆ ಶ್ರೀಮಂತಿಕೆಯೂ ಇದ್ದರೆ ಎನ್ನ ಹಾಂಗಪ್ಪದು. ಮಗಳ ಬದುಕು ಹಾಳಪ್ಪಲೆ ಬಿಡ್ಲಾಗ. ಅಪ್ಪನಮನೆಂದ ಬಪ್ಪಗ ತಂದ ಪೈಸೆ ಮಗಳ ಕಲುಶುಲೆ ಉಪಯೋಗ ಮಾಡ್ಲಕ್ಕು……!!
“ಹೋ….ಈಗ ನಿನ್ನ ಗುರ್ತವೇ ಸಿಕ್ಕುತ್ತಿಲ್ಲೆ. ಎಷ್ಟು ಚಂದ ಇದ್ದೆ ನೀನು” ಪಂಕಜನ ಮಾತು ಕೇಳಿಯಪ್ಪಗ ಅದು ಪಕ್ಕನೆ ತಿರುಗಿ ನೋಡಿತ್ತು.
“ಕಿಚ್ಚು ಮುಟ್ಟಿದ ಗಾಯ ಹೊಗೆತ್ತಾ. ಹೇಂಗೂ ಆಸ್ಪತ್ರೆಗೆ ಹೋಪಲಿದ್ದನ್ನೇಳಿ ಆನು ಮದ್ದು ಕಿಟ್ಟದ್ದದು” ಹೇಳಿಂಡು ಕೈಲಿ ಇಂಗ್ಲೀಷ್ ಪೇಪರು ಹಿಡ್ಕೊಂಡು ಬಂದವು ಪಂಕಜಾ.
ಅದರಲ್ಲಿ ಇಪ್ಪ ಶುದ್ದಿಯ ಕುತೂಹಲಂದಲೇ ಕಣ್ಣರಳ್ಸಿ ನೋಡಿತ್ತು ಸುಶೀಲ. ಇಲ್ಲಿ ಬಂದ ಮತ್ತೆ ಅದಕ್ಕೆ ಯೇವದೇ ಪುಸ್ತಕಾಗಲೀ, ಪೇಪರಾಗಲೀ ಓದಲೇ ಸಿಕ್ಕಿದ್ದಿಲ್ಲೆ.
“ನಿನಗೆ ಇಂಗ್ಲೀಷು ಓದಲೆ ಬತ್ತಲ್ಲದಾ ?” ಪಂಕಜಂಗೆ ಸುಶೀಲ ಓದುದು ಕಂಡತ್ತು.
“ಅಪ್ಪು” ಹೇಳುವ ಹಾಂಗೆ ತಲೆ ಆಡ್ಸಿತ್ತದು.
“ಅಂಬಗ ಇದರ ಒಂದರಿ ಓದಿ ಹೇಳು. ಎನಗೆ ಈಗೀಗ ಪೇಪರು ,ಪುಸ್ತಕ ಓದಲೆ ಕಾಣದ್ದೆ ಭಾರೀ ಬಂಙ ಆಯಿದು. ಕಣ್ಣು ಬಲೆ ಕಟ್ಟಿದ ಹಾಂಗಪ್ಪದು” ಹೇಳಿಂಡು ಪೇಪರು ಸುಶೀಲನ ಕೈಗೆ ಕೊಟ್ಟವು.
ಸುಶೀಲಂಗೆ ಕೊಶೀ ಆತು. ಹತ್ತು ನಿಮಿಷಲ್ಲಿ ಅವಕ್ಕೆ ಬೇಕಾದ ಶುದ್ದಿಗಳ ಎಲ್ಲ ಓದಿ ಹೇಳಿತ್ತು. ಪಂಕಜಂಗೆ ಭಾರೀ ಸಂತೋಷಾತು. ಅವು ಸೀದಾ ಗೆಂಡನತ್ರಂಗೆ ಹೋಗಿ ಎಂತದೋ ಮಾತಾಡಿಕ್ಕಿ ಬಂದವು. ಸುಶೀ ಪೇಪರ್ ಓದಿದ ಶುದ್ದಿಯ ಮತ್ತೆ ಮತ್ತೆ ಹೇಳಿದವು. ಅವರ ಗೆಂಡ ನಾರಾಯಣ್ ಅಂಬಗಳೇ ಎದ್ದು ಹೆರ ಬಂದವು
“ನಿನಗೆ ಇಂಗ್ಲೀಷು ಲಾಯ್ಕಲ್ಲಿ ಓದಲೆ ಅರಡಿತ್ತಾಡ. ಎಡಿಗಾರೆ ದಿನಕ್ಕೆ ಒಂದೆರಡು ಗಂಟೆ ಇಲ್ಲಿಗೆ ಬಂದು ಎನ್ನ ಹೆಂಡತಿಗೆ ಪುಸ್ತಕ, ಪೇಪರು ಓದಿ ಹೇಳಿಕ್ಕಿ ಹೋಗು.ಎಂತಾ..ಎಡಿಯದಾ..ದಿನಾಗಳೂ ಅದರ ಓದಿ,ಇದರ ಓದಿ ‘ ಹೇಳಿ ಎನ್ನ ತಲೆ ತಿಂತದು. ಅಂತೇ ಓದಿ ಹೇಳೆಡ , ಪೈಸೆ ಕೊಡ್ಲಕ್ಕು. ನಿನ್ನ ಮಗಳಿಂಗೆ ಅಂಗಿ ತೆಗವಲಾದರೂ ಅಕ್ಕದಾ..”
ಸುಶೀಲಂಗೆ ಎಂತ ಹೇಳೆಕೂಳಿ ಗೊಂತಾಯಿದಿಲ್ಲೆ. ಓದುದು ಹೇಳಿರೆ ಮದಲಿಂದಲೂ ಇಷ್ಟ. ಶಾಲೆಲಿ ಕೋಲೇಜಿಲ್ಲಿ ಇಂಗ್ಲೀಷಿಂಗೆ ಒಳ್ಳೆ ಮಾಷ್ಟ್ರಕ್ಕಳೇ ಇದ್ದ ಕಾರಣ ಇಂಗ್ಲೀಷು ತುಂಬ ಸುಲಭವೇ ಆಗಿದ್ದತ್ತು. ಇಲ್ಲಿಗೆ ದಿನಾಗಳು ಬಂದು ಪೇಪರು ಓದಿ ಹೇಳಿಕ್ಕಿ ಹೋದರೆ ಮಗಳಿಂಗೆ ಹೊಟ್ಟೆ ತುಂಬ ಊಟ ಆದರೂ ಕೊಡ್ಲೆಡಿಗನ್ನೇ. ದಿನೇಸ ಇನ್ನೆಂತದೂ ತಂದು ಹಾಕ. ಅದಕ್ಕೆ ಆ ಕರಿ ಹೆಣ್ಣು ಜಾನು ಮಾತ್ರ ಸಾಕು……!
“ಇನ್ನು ಹೆರಡುವನಾ ಅಂಬಗ. ಅತ್ತಗೆ ಪುಸ್ತಕ ಓದಿ ಹೇಳ್ಲೆ ಒಂದು ಜೆನ ಸಿಕ್ಕಿದ್ದು ಎಂಗಳ ಪುಣ್ಯ. ನಾಳೆಂದಲೇ ಬಾ..ಹೇಂಗಾರು ಮಗಳಿಂಗೆ ಇಂಜೆಕ್ಷನ್ ಕೊಡ್ಸಲೆ ಹೋಯೆಕನ್ನೇ” ಡಾಕ್ಟರ್ ಪೂರ್ಣಿ ಹತ್ತರೆ ಬಂತು.
“ಅಕ್ಕು ಅಕ್ಕಾ , ಹಾಂಗೇ ಮಾಡ್ತೆ” ಹೇಳಿ ನೆಲಕ್ಕಲ್ಲಿ ಮನುಗಿದ ಒಪ್ಪಕ್ಕನ ಮೆಲ್ಲಂಗೆ ಏಳ್ಸಿ,ಮೈ ತೊಳಶಿಕ್ಕಿ ಬಂತು.
“ಆ ಕೂಸಿನ ಹಾಂಗೆ ಬರೀ ಮೈಲಿ ಕರಕ್ಕೊಂಡು ಹೋಗೆಡ, ಇಲ್ಲಿ ಎನ್ನ ಪುಳ್ಳಿಯಕ್ಕಳ ಹಳೇ ಅಂಗಿ ಇದ್ದಾ ನೋಡ್ತೆ” ಹೇಳಿ ಪಂಕಜಾ ಹೇಳಿಯಪ್ಪಗ ಅಲ್ಲೇ ನಿಂದೊಂಡಿದ್ದ ಪೂರ್ಣಿ ಡಾಕ್ಟರು
“ಆ ಕೂಸಿಂಗೆ ಹೋಪ ದಾರಿಲಿ ಆನು ತೆಗದು ಕೊಡುವೆ ಅಂಗಿ. ನಿಂಗೊ ಮಾರಾಪು ಹುಡ್ಕೆಡಿ ಈಗ” ಹೇಳಿ ಅತ್ತೆಯತ್ರೆ ನೆಗೆ ಮಾಡಿಂಡು ಹೇಳಿಕ್ಕಿ ಕಾರಿನ ಬಾಗಿಲು ತೆಗದು ಸುಶೀಲನ ಕೂಬಲೆ ಹೇಳಿಕ್ಕಿ ಡ್ರೈವಿಂಗ್ ಸೀಟಿಲ್ಲಿ ಕೂದು ಕಾರು ಸ್ಟಾರ್ಟು ಮಾಡಿತ್ತು.
ಮಗಳ ಹೆಗಲಿಲ್ಲಿ ಮನುಶಿ ತಟ್ಟಿಂಡು ಇನ್ನಾದರು ಈ ಬದುಕಿಲ್ಲಿ ಒಂದು ರಜಾ ನಿರೀಕ್ಷೆ ಮಡುಗುಲಕ್ಕು. ಮಗಳಿಂಗೆ ಬೇಕಾಗಿಯಾದರೂ ಬದ್ಕೆಕು’ ಹೇಳಿ ಮನಸಿಲ್ಲೇ ಧೈರ್ಯ ತಂದು ಕೊಂಡು ಸುಶೀಲ ಹೆರಾಂಗೆ ನೋಡಿಂಡು ಕೂದತ್ತು.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 33: https://oppanna.com/kathe/swayamvara-33-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಕೋಲೇಜಿಂಗೆ ಹೋಪ ಸುಶೀಲನ ಪ್ರೇತ !!! ಉಪಮೆ ಭಾರೀ ಲಾಯಕಾಯಿದು. ಅಂತೂ ಪಂಕಜಕ್ಕ ಸಿಕ್ಕಿದವು. ಇನ್ನೆಂತಾದರೂ ಒಳ್ಳೆದಾವುತ್ತೋ ನೋಡುವೊ. ಈಗ ದಿನೇಸನ ಪೆರಂಟು ಎಂತಾರೂ ಸುರುವಾದರೆ ಕಷ್ಟವೇ ಸೈ..
ಅಬ್ಬಾ ಸಮಾಧಾನ ಆತು..ಇನ್ನೂ ಸುಶಿಗೆ ಬದುಕುವ ಉತ್ಸಾಹ ಬಕ್ಕು..ಮಗಳ ಸರಿಯಾಗಿ ನೋಡಿಕೊಂಬೇ ಹೇಳುವ ಧೈರ್ಯ ಬೈಂದು…ದೂರ ದಿಗಂತಲ್ಲಿ ಒಂದು ಆಶಾಕಿರಣ..ಒಳ್ಳೆಯವರ ಸಹವಾಸ ಎಂದಿಂಗು ಕೆಟ್ಟದಾಗಾ..ಇವರ ಆಸ್ತಿ ಆಸೆಗೆ ದಿನೇಶ ಪ್ರೀತಿ ಮಾಡಿದ್ದಲ್ದ..ನಿಜವಾದ ಪ್ರೀತಿ ಹೇಳಿರೆ ಇದುವ…ಕಷ್ಟ ಅನುಭವಿಸಿದ ಸುಷಿ ಇನ್ನು ಉಷಾರಿ ಆದರೆ ಸಂತೋಷ…
Hanebarahalli adbhuta thiruvu…. Dodda pravaahali kocchi hopa jeevake hullu kaddi aasare helva hange ellavannu kalakkonde, inentadake badukekku heluvaaga sanna aashaakirana sushi ya kanneduru bantanne.. abba.. innu aa jeevake magala baduku roopisuva hurupu bakku.. adara kanasellavannu magala mukhaantara sushi neraverisali..