Oppanna.com

ತಿಂಗಳು ಮುಗಿತ್ತ ಶೆಂಕ್ರಾಂತಿ, ತಿಂಗಳು ಸುರು ಆವುತ್ತ ತಿಂಗ್ಳೋಡು!

ಬರದೋರು :   ಒಪ್ಪಣ್ಣ    on   14/01/2011    53 ಒಪ್ಪಂಗೊ

ಚಳಿಗಾಲದ ಛಳಿ, ಧನುರ್ಮಾಸದ ಮುರುಟಾಣ, ಧನುಪೂಜೆಯ ವಿಶೇಷ – ಇದೆಲ್ಲ ನಾವು ಕಳುದ ವಾರ ಮಾತಾಡಿಕ್ಕಿದ್ದು. ಅಲ್ಲದೋ?
ಧನುಪೂಜೆ ಶುದ್ದಿ ಮಾತಾಡಿಗೊಂಡಿದ್ದ ಹಾಂಗೇ, ಧನುಪೂಜೆ ಉತ್ಥಾನವೂ ಆಗಿ ಬಿಟ್ಟತ್ತು! ಬೈಲಿನ ಕೆಲವು ಜೆನ ಅವಕಾಶಲ್ಲಿ ಹೋಯಿಕ್ಕಿದ್ದವುದೇ!

ಎಲ್ಲ ಸರಿ, ಈವಾರಕ್ಕೆಂತರ ಶುದ್ದಿ?
ಬೇರೆಂತಾರು ಊರಶುದ್ದಿ ಮಾತಾಡುವೊ ಹೇಳಿ ಗ್ರೇಶಿಗೊಂಡಿಪ್ಪದ್ದೇ – ಅದಾ, ಬಂದೇ ಬಿಟ್ಟತ್ತು ಶೆಂಕ್ರಾಂತಿ!
ಪರ್ವಕಾಲ ಆಗಿಪ್ಪ ಮಕರಶೆಂಕ್ರಾಂತಿಯ ಬಿಟ್ಟು ಬೇರೇವದೋ ನೇರಂಪೋಕು ಮಾತಾಡಿರೆ ರಂಗಮಾವ° ಪುನಾ ಪರಂಚುಗು!! 🙁
ಅವಕ್ಕೆ ಹಾಂಗೇ – ಏನಾರು ಬಿಂಗಿ ಮಾತಾಡಿ ಹೊತ್ತುಕಳವದು ಕಂಡ್ರೆ ಆಗಲೇ ಆಗ; ಅದಿರಳಿ!
ಶೆಂಕ್ರಾಂತಿ – ಅದರ್ಲಿಯೂ ಮಕರಶೆಂಕ್ರಾಂತಿ, ಅದಕ್ಕೆ ಹೊಂದಿಗೊಂಡ ಊರ ಆಚಾರಂಗೊ, ಮಕರದ ವಿಳಕ್ಕು (ಬೆಣಚ್ಚು) – ಇದೆಲ್ಲದರ ಬಗ್ಗೆ ಬೈಲಿಲಿ ಒಂದರಿ ನೆಂಪು ಮಾಡಿಗೊಂಬ°, ಆಗದೋ?
~
ಆಕಾಶಲ್ಲಿರ್ತ ಸೂರ್ಯ ತಿರುಗಿದ ಹಾಂಗೆ ಕಾಂಬದು ಭೂಮಿ ತಿರುಗುತ್ತದರಿಂದ ಅಡ, ಮಾಷ್ಟ್ರುಮಾವ° ಅಂದೇ ಹೇಳಿದ್ದವು.
ಆದರೆ, ಜ್ಯೋತಿಷ್ಯ ಪ್ರಕಾರ ಭೂಮಿಯ ಪ್ರಕಾರಲ್ಲಿ ಕಂಡು, ಸೂರ್ಯ ಚಲಿಸುತ್ತಾ ಇಪ್ಪದು ಹೇಳಿ ಕೂಡುಸಿಗೊಳ್ತವಡ, ಜೋಯಿಶಪ್ಪಚ್ಚಿ ಹೇಳ್ತವು.
ಆ ಪ್ರಕಾರಲ್ಲಿ, ಸೂರ್ಯ ತಿರುಗಿ ತಿರುಗಿ – ಭೂಗೋಲದ ಸುತ್ತದ ಹನ್ನೆರಡು ರಾಶಿಗೂ ಹೊಕ್ಕು ಹೆರಡ್ತ°.
ಅದರ್ಲಿಯೂ, ಸೂರ್ಯ ಒಂದು ರಾಶಿಂದ ಇನ್ನೊಂದು ರಾಶಿಗೆ ಕಾಲು ಮಡಗುತ್ತ ಕಾಲ – ಆ ಸಂಕ್ರಮಣಕ್ಕೆ – ಸಂಕ್ರಾಂತಿ ಹೇಳ್ತದು.

ಕಾಂಬು ಅಜ್ಜಿ ಅದನ್ನೇ ಶೆಂಕ್ರಾಂತಿ ಹೇಳಿಗೊಂಡಿದ್ದದು ಊರ ಶೈಲಿಲಿ; ಒಪ್ಪಣ್ಣಂಗೂ ಹಾಂಗೇ ಹೇಳಿ ಹೋಪದಿದಾ, ಪಕ್ಕನೆ.. 😉
~
ಒಂದೊರಿಶಲ್ಲಿ ಹನ್ನೆರಡು ರಾಶಿಗೆ ಹೊಕ್ಕೆರಡ್ತ ಸೂರ್ಯ.
ಒಂದು ರಾಶಿಗೆ ಈಚ ಕೊಡಿಯಂದ ಹೊಕ್ಕು ಆಚ ಕೊಡಿಯಂದ ಹೆರಡ್ಳೆ ಮೂವತ್ತು -ಮೂವತ್ತೊಂದು ದಿನ ಬೇಕಾವುತ್ತಡ, ಅದುವೇ ಸೌರ ತಿಂಗಳು.
ಮೇಷ ರಾಶಿಂದ ಪೀಂಕಿ, ವೃಷಭ ರಾಶಿಗೆ ಎತ್ತಿ ಸಂಕ್ರಮಣ ಆವುತ್ತ ದಿನ ವೃಷಭ ಶೆಂಕ್ರಾಂತಿ. ಮತ್ತೆ ಒಂದು ತಿಂಗಳು ವೃಷಭ ತಿಂಗಳು – ಕಾಂಬುಅಜ್ಜಿ ಬೇಸಗೆ ಹೇಳ್ತದು ಅದರನ್ನೇ.
~
ಶೆಂಕ್ರಾಂತಿ ಹೇಳಿತ್ತುಕಂಡ್ರೆ ’ಹೊಸತನ’ ಇರ್ತು ಹೇಳ್ತದು ನಮ್ಮ ಊರಿಲಿ ಒಂದು ನಂಬಿಕೆ.
ಹಾಂಗಾಗಿ ಶೆಂಕ್ರಾಂತಿ ಪೂಜೆಗೊ ಕೆಲವು ದೇವಸ್ಥಾನ, ಬೂತಸ್ಥಾನಂಗಳಲ್ಲಿ ಅನಾದಿಂದಲೂ ನೆಡಕ್ಕೊಂಡು ಬತ್ತಾ ಇದ್ದು.
ಒಂದು ತಿಂಗಳಿಂದ ನೆಡದು ಬಂದ ಧನುಪೂಜೆ ಮುಗುದ ಲೆಕ್ಕಲ್ಲಿ ಒಂದು ಶೆಂಕ್ರಾಂತಿ ಪೂಜೆಯ ಹೆಚ್ಚಿನ ದೇವಸ್ಥಾನಂಗಳಲ್ಲಿ ಮಾಡುಗು.
ರಂಗಮಾವ° ಪಾರೆ ಅಜ್ಜಿಯ ಬೂತಸ್ಥಾನಕ್ಕೆ ಬಂದು, ಒಂದು ಪ್ರಾರ್ಥನೆ ಮಾಡಿ ನೆಣೆಮಡುಗ್ಗು, ನೆಂಪಿಲಿ.
ಒರಿಶಲ್ಲಿ ಕೆಲವು ಶೆಂಕ್ರಾಂತಿಗೊಕ್ಕೆ ವಿಶೇಷ ಹಬ್ಬಂಗಳೇ ಇದ್ದು ನಮ್ಮ ಊರಿಲಿ.
~
ಇಂದು,
ಈ ತಿಂಗಳು – ಶಾರದ ಕೆಲೆಂಡರಿಲಿ ಹದಿನಾಕನೇ ತಾರೀಕು ಅಪ್ಪದಿನ ಸೂರ್ಯ ಧನು ರಾಶಿ ದಾಂಟಿ ಮಕರ ರಾಶಿಗೆ ಶೆಂಕ್ರಾಂತಿ ಆವುತ್ತ.
ಅದುವೇ ಮಕರ ಸಂಕ್ರಮಣ, ಕಾಂಬು ಅಜ್ಜಿಯ ಮಕರ ಶೆಂಕ್ರಾಂತಿ!
ಹನ್ನೆರಡು ಶೆಂಕ್ರಾಂತಿಗೆ ಗವುಜಿ ಇದ್ದರೂ, ಈ ಮಕರ ಶೆಂಕ್ರಾಂತಿಗೆ ವಿಶೇಶ ಸ್ಥಾನ ಇದ್ದೇ ಇದ್ದು.
ಅದೆಂತರ?
~
ಸೂರ್ಯ ಮೂಡಂದ ಪಡುವಂಗೆ ಹೋವುತ್ತನಲ್ಲದೋ – ಅದರೊಟ್ಟಿಂಗೇ ರಜ ರಜವೇ ಆಗಿ ತೆಂಕಂದ ಬಡಗಕ್ಕೂ, ಬಡಗಂದ ತೆಂಕಕ್ಕೂ ಒತ್ತುತ್ತ°.
ಸಂಸ್ಕೃತಲ್ಲಿ ಇದರನ್ನೇ ದಕ್ಷಿಣಾಯಣ, ಉತ್ತರಾಯಣ ಹೇಳುದಡ, ವಿದ್ವಾನಣ್ಣ ಹೇಳಿತ್ತಿದ್ದವು.
ಬಡಗು ಕೊಡೀಂದ ತೆಂಕದ ಕೊಡಿಯಂಗೆ ಹೋವುತ್ತ ಆರು ತಿಂಗಳ ಕಾಲಕ್ಕೆ ದಕ್ಷಿಣಾಯಣ ಹೇಳಿಯೂ, ತಿರುಗಿ ಬಡಗಲಾಗಿ ಬತ್ತ ಮತ್ತಾಣ ಆರು ತಿಂಗಳಿನ ಉತ್ತರಾಯಣ ಹೇಳ್ತದು.
ಆ ಎರಡು ಘಟನೆಗೊ ಆರಂಭ ಆವುತ್ತ ಕ್ಷಣಕ್ಕೆ ಉತ್ತರಾಯಣಾರಂಭ, ದಕ್ಷಿಣಾಯಣಾರಂಭ ಹೇಳಿಯೂ ಹೇಳ್ತವಡ.
ಉತ್ತರಾಯಣದ ಕಾಲಲ್ಲಿ ಸ್ವರ್ಗದ ಬಾಗಿಲು ತೆಗದಿರ್ತು ಹೇಳಿಯೂ, ದಕ್ಷಿಣಾಯನ ಕಾಲಲ್ಲಿ ಮುಚ್ಚಿರ್ತು ಹೇಳಿಯೂ ಶಂಬಜ್ಜ° ನಂಬಿತ್ತಿದ್ದವು.
ಹಾಂಗಾಗಿ ಉತ್ತರಾಯಣಾರಂಭಂದ ಆರು ತಿಂಗಳು ಪುಣ್ಯಕಾಲ, ಮೋಕ್ಷಕಾಲ ಹೇಳಿ ಹೇಳ್ತವಡ.
ಅನಾದಿ ಕಾಲಲ್ಲಿ – ಅಂದೆಕಾಲತ್ತಿಲಿ – ಈ ಮಕರಶೆಂಕ್ರಾಂತಿ ದಿನವೇ ಆ ಉತ್ತರಾಯಣಪುಣ್ಯಕಾಲ ಬಂದುಗೊಂಡು ಇತ್ತಡ.
[ಸೂ: ಕಾಲಕ್ರಮೇಣ ವಿಶ್ವದ ಹಿಗ್ಗುವಿಕೆಂದಾಗಿ ಇಪ್ಪತ್ತಮೂರು ಭಾಗೆ(ಡಿಗ್ರಿ) ವಿತ್ಯಾಸ ಬಂದು, ಈಗ ದಶಂಬ್ರ ಇಪ್ಪತ್ತೆರಡಕ್ಕೇ ಉತ್ತರಕ್ಕೆ ಹೋಪಲೆ ಸುರು ಮಾಡ್ತನಡ ಸೂರ್ಯ. ಎರುಮುಂಜ ಒಯಿಜಯಂತಿ ಪಂಚಾಂಗಲ್ಲಿ ಹಾಂಗೆಯೇ ಇಪ್ಪದಡ, ಮಾಷ್ಟ್ರುಮಾವ° ಹೇಳಿದವು]
ಅಂತೂ ಆಚರಣೆಲಿ ಈಗಳೂ ಮಕರ ಶೆಂಕ್ರಾಂತಿಗೆ ಉತ್ತರಾಯಣ ಆರಂಭ ಹೇಳಿಯೇ ಇದ್ದು.
ಅದು ಲೋಕಾರೂಢಿ.
~
ಈ ಮಕರಶೆಂಕ್ರಾಂತಿ ಹೇಳಿತ್ತುಕಂಡ್ರೆ, ಒಂದರಿಯಾಣ ಚಳಿಗಾಲ ಮುಗಿತ್ತ ಸಂಕ್ರಮಣವುದೇ ಅಪ್ಪು, ಅಲ್ಲದೋ?
ಉದಿಯಪ್ಪಗಾಣ ಒರಕ್ಕು ಹಾಂಗೇ ಇಪ್ಪಗ ಪಕ್ಕನೆ ಏಳುಲೆ ಒಂದು ಕಾರಣ ಬೇಕಲ್ಲದೋ – ಎಳ್ಡ್ರಾಮಿನ ಹಾಂಗಿರ್ತದು! ಈ ಮಕರ ಶೆಂಕ್ರಾಂತಿಯುದೇ ಹಾಂಗೆಯೇ! ;-)ಗಟ್ಟದ ಮೇಗೆ ಎಲ್ಲ ಇದರ ಈಗಳೂ ಉತ್ತರಾಯಣ ಪುಣ್ಯಕಾಲ ಹೇಳಿ ಆಚರಣೆ ಮಾಡ್ತವಡ.

ಗಟ್ಟದ ಮೇಗೆ ಎಳ್ಳು ಬೆಲ್ಲ ಕೊಡ್ತದು

ಕರಿಕಬ್ಬು, ಬೆಳಿಎಳ್ಳು, ಬೆಲ್ಲದ ತುಂಡು, ಹುರಿಕಡ್ಳೆ – ಇದರ ಎಲ್ಲ ಒಂದು ಬಟ್ಳಿಲಿ ಮಡಗಿ ದೇವರಿಂಗೆ ಕೊಡುಗಡ.
ಹಾಲಿನ ಮಣ್ಣಳಗೆಲಿ ತುಂಬುಸಿ ಒಲೆಲಿ ಮಡಗಿ ಸಂಭ್ರಮಲ್ಲಿ ಉಕ್ಕಿ ಬತ್ತ ನಮುನೆ ಮಾಡುಗಡ…
ಎತ್ತುಗಳ ಅಲಂಕಾರ ಮಾಡಿ, ಇಷ್ಟೆತ್ತರದ ಕಿಚ್ಚಿನ ಮೇಗೆ ಹಾರ್ತ ನಮುನೆ ಪೆರ್ಚಿ ಬರುಸುಗಡ, ಎಲ್ಲೋರುದೇ ಕೊಣುದು ಗವುಜಿ ಮಾಡಿ ಚೆಂದ ನೋಡುಗಡ…
ಚೀಪೆ ಪಾಚವೋ, ತೊಗರಿ ಹೋಳಿಗೆ ಒಬ್ಬಟ್ಟೋ – ಎಂತಾರು ಮಾಡಿ ಹಂಚುಗಡ.
– ಗಟ್ಟದ ಕ್ರಮಂಗಳ ನೋಡಿ ಅರಡಿವ ಮುಳಿಯಭಾವ ಹೇಳುಗು ಒಂದೊಂದರಿ.ಮದ್ರಾಶು, ತೆಮುಳುನಾಡಿಲಿ ಅಂತೂ ಪೊಂಗಲು ಹೇಳ್ತ ಚೀಪೆ-ಖಾರಂಗಳ ಮಾಡಿ ಗಮ್ಮತ್ತು ಮಾಡಿ ತಿಂಗಡ. ಅಲ್ಲಿ ಹಬ್ಬವನ್ನೂ ಇದೇ ಹೆಸರಿಲಿ ದಿನಿಗೆಳುಗಡ.
ಚೆನ್ನೈಬಾವಂಗೆ ಸರೀ ಅರಡಿಗು.
~
ಬರೇ ಇಷ್ಟೇ ಅಲ್ಲ, ಇದರೊಟ್ಟಿಂಗೆ ಇನ್ನೊಂದು ಗವುಜಿದೇ ಇದ್ದು.
ಅದೆಂತರ?
– ಅದುವೇ ಅಯ್ಯಪ್ಪನ ಮಕರವಿಳಕ್ಕು.

ಹರಿಹರರ ಮಗ° ಅಯ್ಯಪ್ಪ ಪಂದಳಾಪುರದ ರಾಜನ ಮಗ° ಆಗಿ ಹುಟ್ಟಿದ ಕತೆ ಗೊಂತಿದ್ದಲ್ಲದೋ?

ಶಬರಿಮಲೆಲಿ ನೆಲೆನಿಂದ ಅಯ್ಯಪ್ಪ!

ದೈವಾಂಶ ಸಂಭೂತ ಆಗಿಪ್ಪ ಈ ಮಾಣಿ ಸಣ್ಣ ಇಪ್ಪಗಳೇ ಹುಲಿಹಾಲಿನ ತಪ್ಪದೋ, ಮಹಿಷಿಯ ಕೊಲ್ಲುದೋ ಹೀಂಗಿರ್ತ ಮಹಿಮೆಗೊ ತೋರುಸಿಗೊಂಡು –  ಊರಿಂಗೆ ಉಪಕಾರಿ ಆಗಿತ್ತಿದ್ದನಾಡ.

ನಲುವತ್ತೆಂಟು ದಿನ ಶುದ್ಧ ಬ್ರಹ್ಮಚರ್ಯವ ಆಚರಣೆಮಾಡಿಕ್ಕಿ, ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ಆ ಹದ್ನೆಂಟು ಮೆಟ್ಳು ಹತ್ತಿಗೊಂಡು ಹೋದರೆ ಜೀವನಲ್ಲಿ ಒಳ್ಳೆದಾವುತ್ತು ಹೇಳ್ತದು ಊರ ಆಸ್ತಿಕರ ನಂಬಿಕೆ.

ಇದು ಮದಲಿಂಗೆ ಅಷ್ಟೆಂತ ಇತ್ತಿಲ್ಲೇಡ, ಈಗ ಸದ್ಯ ಜಾಸ್ತಿ ಆದ್ದು ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
ಅವು ಸಣ್ಣ ಇಪ್ಪಗ ಅಯ್ಯಪ್ಪ ವ್ರತಧಾರಿಗೊ ಆರನ್ನೂ ಕಂಡ ನೆಂಪಿಲ್ಲೆಡ, ಈಗ ಅಂತೂ ಊರಿಂಗೊಂದು ಭಜನಾಮಂದಿರಲ್ಲಿ ಒಂದೊಂದು ತಂಡ ಇರ್ತು.

ಉದೆಕಾಲಕ್ಕೇ ಎದ್ದು, ಮಿಂದು, ಭಜನೆ ಮಾಡಿ, ಹತ್ತರಾಣ ದೇವಸ್ಥಾನಲ್ಲಿ ಧನುಪೂಜೆ ಇದ್ದರೆ ಹೋಗಿ, ದರ್ಶನ ತೆಕ್ಕೊಂಡು, ಉಪಾಹಾರ ಮಾಡಿ, ದಿನ ಇಡೀ ಶುದ್ಧಲ್ಲಿ ಕಳದು, ಇರುಳಾಣ ಭಜನೆ ಕಳುದು ಒರಗುದು ಅವರ ಕ್ರಮ.

ಒರಿಶ ಇಡೀ ಕಳ್ಳುಕುಡುದು ಜೀವನ ಹಾಳುಮಾಡಿಗೊಳ್ತ ಜಿನ್ನಪ್ಪುದೇ ಆ ನಲುವತ್ತೆಂಟು ದಿನ ಶುದ್ಧ ಬ್ರಹ್ಮಚರ್ಯಲ್ಲಿ ಗುರುಸ್ವಾಮಿ ಆಗಿರ್ತು. 🙂

ಒಳ್ಳೆದೇ ಬಿಡಿ. ದೇವರ ಭಕ್ತಿಯೋ, ಭಯವೋ ಅಂತೂ ಶ್ರದ್ಧೆಲಿ ಆಚರುಸುತ್ತವನ್ನೆ.

ಇಷ್ಟು ವ್ರತ ಮಾಡಿ ಈ ಶೆಂಕ್ರಾಂತಿಗಪ್ಪಗ ಅಯ್ಯಪ್ಪನ ಕಾಂಬಲೆ ಹೋಕು!
ಮದಲಿಂಗೆ ಅದು ಶಬರಿಮಲೆ ಗುಡಿಯ ಬಾಗಿಲು ತೆಗೆತ್ತ ದಿನವೂ ಆಗಿತ್ತಡ. ಆಯಿಕ್ಕು, ಉಮ್ಮಪ್ಪ!
~ಮಕರ ಶೆಂಕ್ರಾಂತಿಯ ದಿನಕ್ಕೆ ಸರೀಯಾಗಿ ಶಬರಿಮಲೆಯ ಆಚ ಗುಡ್ಡೆಲಿ ಬೆಳೀ ಜೋತಿ(ಜ್ಯೋತಿ) ಕಾಣ್ತಡ.
ಅದು ಅಯ್ಯಪ್ಪನೇ ಅಡ,
ನಲುವತ್ತೆಂಟು ದಿನದ ವ್ರತಲ್ಲಿ ಶುದ್ದ ಕಮ್ಮಿ ಮಾಡಿದ್ದಿದ್ದರೆ ಆ ಜ್ಯೋತಿ ಕಾಣ ಅಡ,
ನಿಷ್ಟೆಲಿದ್ದವಂಗೆ ಮಾಂತ್ರ ಅದು ಕಾಂಗಷ್ಟೆ ಅಡ – ಹಾಂಗೆ ಜಿನ್ನಪ್ಪು ಹೇಳುಗು, ಕುಡುದ್ದು ಬಿರುದಿಪ್ಪಗ! 😉cheap moncler jackets
ಆ ನಮುನೆ ಒಂದು ನಂಬಿಕೆ ಊರಿಲಿ ಇದ್ದಲ್ಲದೋ – ಇರಳಿ, ಒಳ್ಳೆದೇ!ಈಗೀಗ ಟೀವಿಲಿಯುದೇ ತೋರುಸುತ್ತವಡ ನೇರಪ್ರಸಾರಲ್ಲಿ.
ಕಳುದೊರಿಶ ರೂಪತ್ತೆ ಅವರ ಮೂವತ್ತೆರಡಿಂಚಿನ ಹೊಸಾ ಓನಿಡ ಟೀವಿಲಿ ನೋಡಿದ್ದಡ!

~
ಹ್ಮ್, ಅದೆಲ್ಲ ಶೆಂಕ್ರಾಂತಿಯ ಬಗ್ಗೆ.
ಇನ್ನೊಂದು ವಿಷಯ ಎಂತರ ಹೇಳಿತ್ತುಕಂಡ್ರೆ, ತಿಂಗಳೋಡು.
ಅದೆಂತರ?
ಶೆಂಕ್ರಾಂತಿಯ ಮರದಿನ ಬತ್ತದೇ ತಿಂಗಳೋಡು.
ಬಟ್ಯ ಇದನ್ನೇ ಸಿಂಗ್‍ಡೆ ಹೇಳ್ತು, ಅದರ ತುಳುವಿಲಿ.
ತಿಂಗಳಿನ ಆರಂಭ ದಿನ ಹೇಳ್ತದರ ತಿಂಗಳೋಡು ಹೇಳಿ ಆತೋ ಏನೋ – ಹೇಳಿ ಮಾಷ್ಟ್ರುಮಾವ° ಸಂಶಯ ಮಾಡುಗು ಒಂದೊಂದರಿ.
ತಿಂಗಳಿನ ಮೀಟ್ರು ಓಡುತ್ತ ಕಾರಣ ತಿಂಗಳೋಡು – ಆಯಿಕ್ಕು ಹೇಳಿ ಅಜ್ಜಕಾನಬಾವ° ಹೊಟ್ಟುಸುಗು ಕೆಲವು ಸರ್ತಿ! 😉
ಶೆಂಕ್ರಾಂತಿ – ತಿಂಗಳೋಡು ಎರಡೂ ದಿನ ನಮ್ಮೋರಿಂಗೆ ಶ್ರದ್ಧೆಯ ದಿನ.
ಆ ದಿನಂಗಳಲ್ಲಿ ಒಳ್ಳೆದು ಮಾಡಿರೆ ಇಡೀ ತಿಂಗಳು ಒಳ್ಳೆದಾಗಿರ್ತು ಹೇಳ್ತದು ಒಂದು ನಂಬಿಕೆ.
ಅದೇ ನಮುನೆ, ಆ ದಿನ ಕರ್ಚು ಬಂದರೆ ಇಡೀ ತಿಂಗಳು ಲೋಸು ಹೇಳ್ತದುದೇ ನಂಬಿಕೆಯೇ!
ಒಬ್ಬೊಬ್ಬನ ಇಷ್ಟಾಭಿಪ್ರಾಯ! ಅದಿರಳಿ.

~
ಮಕರ ಶೆಂಕ್ರಾಂತಿಯ ಗವುಜಿ ಎಡಕ್ಕಿಲಿ ಮಾತಾಡುವಗ ಇಷ್ಟೆಲ್ಲ ನೆಂಪಾತು.
ಅಂತೂ,
ತಿಂಗಳಿನ ಶೆಂಕ್ರಾಂತಿ ದಿನ ಶ್ರದ್ಧೆಲಿ ಇದ್ದುಗೊಂಡು, ದೈವೀಕ ಆಚರಣೆಗಳಲ್ಲಿ ತೊಡಗುಸಿಗೊಂಡು,
ತಿಂಗಳೋಡು ದಿನ ಬೇಡಂಗಟ್ಟೆ ಕರ್ಚು ಮಾಡದ್ದೆ ರಜ ಒಳಿಶಿ ಮಡಗಿರೆ,
ಮುಂದಾಣೋರಿಂಗೂ ರಜ ಸಿಕ್ಕುಗು – ಹೇಳ್ತ ಯೋಚನೆ ನಮ್ಮ ಹೆರಿಯೋರಿಂಗೆ ಬಂದ ಕಾರಣ ನಾವೆಲ್ಲ ಉಣ್ತು ಇಂದು!
ಅಲ್ಲದೋ?ನಾವುದೇ ಅವರ ಹಾಂಗೇ ಶ್ರದ್ಧೆಲಿ ಆಚರುಸುವೊ. ಒಳ್ಳೆದಿನ ಒಳ್ಳೆಕಾರ್ಯ ಮಾಡ್ತ ಎಲ್ಲೊರಿಂಗೂ ಒಳ್ಳೆದಾಗಲಿ.
ಬೈಲಿನವಕ್ಕೆಲ್ಲ ಶೆಂಕ್ರಾಂತಿಯ ಶುಭಾಶಯಂಗೊ!

ಒಂದೊಪ್ಪ: ಮಕರ ಶೆಂಕ್ರಾಂತಿಗೆ ಮಕರ ಜ್ಯೋತಿ ಕಾಣಲಿ! ಜೀವನದ ಶೆಂಕ್ರಾಂತಿಲಿ ಬಾಳಜ್ಯೋತಿ ಕಾಣಲಿ!

ಸೂ: ಪಟಂಗೊ ಇಂಟರುನೆಟ್ಟಿಂದ ಸಿಕ್ಕಿದ್ದು.

53 thoughts on “ತಿಂಗಳು ಮುಗಿತ್ತ ಶೆಂಕ್ರಾಂತಿ, ತಿಂಗಳು ಸುರು ಆವುತ್ತ ತಿಂಗ್ಳೋಡು!

  1. ಅಜ್ಜಕಾನ ಭಾವಾ, ಕಳುದ ವರ್ಷ ಎಷ್ಟು ತಿಂಗಳು ಉರುಡಿರೂ ಏನೂ ಪ್ರೇಜನ ಆಯಿದಿಲ್ಲೆ. ಈ ವರ್ಷ ಹೇಂಗೆ..???

    (ಹೋಯ್.. ಆನು ಹೇಳಿದ್ದು ಕಳುದೊರ್ಷ ಹೊರಡಿಗಿಪ್ಪ ಸಾಮಾನು ತಂದು ಮಡುಗಿದ್ದೇ ಬಂತು, ಮೆಡಿ ಸಿಕ್ಕದ್ದೆ ಉಪ್ಪಿನಕಾಯಿ ಕತೆ ಮೋಸ ಆಯಿದು ಹೇಳಿ. ನಿಂಗೊ ಬೇರೆ ಎಂತಾರು ಜಾನ್ಸಿಕ್ಕೆಡಿ) 😉

  2. ಬರಹ ಯೇವತ್ರಾಣಾಂಗೆ ಚೊಕ್ಕ ಆಯಿದು ಒಪ್ಪಣ್ಣಾ..
    ವರ್ಮುಡಿ ಮಾವನೂ ಶರ್ಮಪ್ಪಚ್ಚಿಯೂ ಗೋಪಾಲ ಭಾವನೂ ಶಬ್ದ ವ್ಯುತ್ಪತ್ತಿಯ ಬಗ್ಗೆ ಜಿಜ್ಞಾಸೆ ಮಾಡುವಗ ನಮ್ಮ ಕೆಮಿ ಕುತ್ತ ಆತಿದ!

    “ಯಥಾರ್ಥಕ್ಕೆ ತಿಂಗಳೋಡು ಹೇಳಿ ಅಲ್ಲ, ಅದು ತಿಂಗಳ+ಅಡಿ(ಸುರು)=ತಿಂಗಳಡಿ ಹೇಳಿ ಇದ್ದದು, ಅದರ ಪೀಂಟುಸಿ ಅಪಭ್ರಂಶ ಮಾಡಿ ಈ ರೂಪ ಕೊಟ್ಟದು” ಹೇಳಿ ಎನ್ನ ತಿಂಗಳಾಡಿ ಭಾವ ಪಿರಿಪಿರಿ ಮಾಡಿಯೊಂಡು ಇದ್ದಿದ್ದ.
    “ಅಂಬಗ ಅದು ತಿಂಗಳ+ಆದಿ ಹೇಳಿ ಏಕೆ ಆಗಿರ?” ಕೇಳಿದೆ ಆನು

    ಅಲ್ಲ.., ಎನಗೆ ಈಗ ‘ಕುಂಬಳೋಡು’ ತಾಳು ಎಂತಗೆ ನೆಂಪಾದ್ದು..?? ಉಮ್ಮಪ್ಪ..!! ನಿಂಗೊಗರಡಿಗೊ..?

    1. ದೊಡ್ಡ ಭಾವ ತಿಂಗಳ + ಹೊರಡಿ ತಿಂಗಳೊರಡಿ ಹೇಳಿದ್ದಕ್ಕೊ ಏನೋ..
      ಅವ° ಎಂತ್ಸಕೆ ಹೇಳಿದ್ದು ಕೇಳಿಕ್ಕೆಡಿ..

  3. Have you changed the layout n look & feel? I think old layout was much much much better compared to this!

    Jayakishore Bayadi

    1. ಜಯಕಿಶೋರಣ್ಣಂಗೆ ನಮಸ್ಕಾರ ಇದ್ದು!
      ಬೈಲಿನ ಬಗ್ಗೆ ನಿಂಗಳ ಆಸಗ್ತಿ ಕಂಡು ತುಂಬಾ ಕೊಶಿ ಆತು.
      ಒರಿಶಕ್ಕೊಂದಾದರೂ ಹೊಸ ಅಂಗಿ ಹೊಲಿಶದ್ರಾಗ ಹೇಳಿ ಒಪ್ಪಣ್ಣ ಬೊಬ್ಬೆ ಹೊಡದ್ದಕ್ಕೆ ಇದರ ತಂದು ಕೊಟ್ಟದು..
      ಹೊಸತ್ತಕ್ಕೆ ಒಗ್ಗಿಗೊಂಬದು ಸುರುವಿಂಗೆ ರಜ ಕಷ್ಟ ಅನುಸಿದರೂ, ಈಗಾಣ ತಂತ್ರಜ್ಞಾನಂಗಳ ಹೆಚ್ಚಿನ ಮಟ್ಟಿಂಗೆ ಉಪಯೋಗುಸಿದ ಬೈಲು ಇದು.

      ಹೇಳಿದಾಂಗೆ, ಹಳೆ ಅಂಗಿಯ ಇಡ್ಕಿದ್ದಿಲ್ಲೆ ನಾವು. ಅದರ ನೋಡೆಕ್ಕಾರೆ ಈ ಸಂಕೊಲೆಲಿ ನೇಲೆಕ್ಕು:
      https://oppanna.com/?wptheme=oppanna2010

      ಪುನಾ ಹೊಸ ಅಂಗಿಯ ಹಾಕೆಕ್ಕಾರೆ ಈ ಸಂಕೊಲೆ:
      https://oppanna.com/?wptheme=Oppanna2011

      ಹೊಸತ್ತರ ಉಪಯೋಗುಸಲೆ ಸುರುಮಾಡಿ, ಒಂದೆರಡು ದಿನಲ್ಲಿ ನಿಂಗಳದ್ದೇ ಆಗಿ ಬಿಡ್ತು!
      ಹರೇರಾಮ.

      1. Gurikkararinge Namaskara!

        Dhanyavaada. NInga heliddu sariye. Aaadare obbobbange ondondu chenda kaanuththu…enage chenda kandadu ningoge chenda kaanekku heli ille…haaange ningoge chenda kandadu enage chenda kaanekku heli ille….

        Adene irali…koshiyaatu….blog nooru kaala balali heli haaraisutte!

        Jayakishore

  4. ಎಲ್ಲೋರೂ ಚೂರು ಚೂರು ಒಪ್ಪ ಕೊಟ್ಟಪ್ಪಗ ಜ್ಞಾನಪತ್ತಾಯ ತುಂಬುತ್ತದ.
    ಎಲ್ಲೋರಿಂಗೂ ಧನ್ಯವಾದಂಗೊ.

  5. ಈ ವಾರದ ಶುದ್ದಿ ಲಾಯಕ ಆಯಿದು ಒಪ್ಪಣ್ಣ.. ಒಂದು ಸಂಕ್ರಮಣ ಹೇಳಿದರೆ ಎಂತರ? ಕಾಂಬು ಅಜ್ಜಿಯ ಶೆಂಕ್ರಾಂತಿ ಎಂತದು? ಶೆಂಕ್ರಾಂತಿಲಿ ಎಷ್ಟು ವಿಷಯಂಗ ಇರ್ತು, ಹೇಂಗೆ ಆವುತ್ತು ಹೇಳಿ ಶೋಕಿಲಿ ತೋರ್ಸಿ ಕೊಟ್ಟೆ..
    ವರುಷದ ಹನ್ನೆರಡು ತಿಂಗಳು ಸೂರ್ಯನ ತಿರ್ಗಾಟವ ಚೆಂದಲ್ಲಿ ವಿವರ್ಸಿದ್ದೆ. ಅವ° ಒಂದು ರಾಶಿಯ ಮನೆಯ ಸಾಮಾನ್ಯ ಒಂದು ತಿಂಗಳಿನ ಅವಧಿಲಿ ಕ್ರಮಿಸಿ, ಅಲ್ಲಿಂದ ಇನ್ನೊಂದು ರಾಶಿಗೆ ಪೀಂಕಿ ಹೋಪದು ಹೇಳಿ ಹೇಳಿದ್ದು ಕಣ್ಣಿಂಗೆ ಕಂಡ ಹಾಂಗೆ ಆತು. 🙂 😉

    ನಮ್ಮ ಮಾಷ್ಟ್ರು ಮಾವನ ಸಣ್ಣ ಮಗ° ಪ್ರತಿ ಸಂಕ್ರಾಂತಿಗೆ ಊರಿಂಗೆ ಬಂದು ಪಾರೆ ಅಜ್ಜಿಯ ಕಂಡು, ಭಕ್ತಿಲಿ, ಮನಸ್ಸಿನ ಆಳಂದ ಪ್ರಾರ್ಥನೆ ಮಾಡಿ ಗಂಧ ಪ್ರಸಾದ ಕೊಡ್ಸದ್ದರೆ ಪಾರೆ ಅಜ್ಜಿಗೂ,ಊರೋರಿಂಗೂ, (ಅವಂಗುದೆ) ಸಮಾಧಾನವೇ ಅಪ್ಪಲಿಲ್ಲೆಡ್ಡ. ಈಗ ತೆರಕ್ಕಿನ ಎಡೆಲಿ ತಿಂಗಳು ತಿಂಗಳು ಹೊಪಲೆಡಿತ್ತಿಲ್ಲೇ ಹೇಳಿ ಅವಂಗೆ ಬೇಜಾರಡ್ಡ. ಬೇರೆ ವೆವಸ್ತೆ ಮಾಡಿದ್ದ°.., ಆರು ಮಾಡಿದರೂ ಅವ° ಸ್ವತಃ ಮಾಡಿದ ಹಾಂಗೆ ಆಗ ಇದಾ. ಶ್ರದ್ಧೆ ಭಕ್ತಿಲಿ ಎಲ್ಲಾ ಕೆಲಸ ಮಾಡುವವಕ್ಕೆ ಹಾಂಗೆ ತೋರುಗು ಅಲ್ಲದಾ?

    ಸಂಕ್ರಾಂತಿಗಳಲ್ಲಿ ಅತಿ ವಿಶೇಷದ್ದು ಮಕರ ಸಂಕ್ರಾಂತಿ ಹೇಳಿ ಶುದ್ದಿಲಿ ಅದರ ಮಹತ್ವವ ಚೆಂದಲ್ಲಿ ವಿವರ್ಸಿದ್ದೆ. ನಮ್ಮ ದೇಶದ ವೈವಿಧ್ಯತೆಯ ಹಾಂಗೆ ಆಚರಣೆಗಳಲ್ಲಿಯೂ ವಿವಿಧತೆ ಇದ್ದಲ್ಲದಾ? ಎಲ್ಲೋರ ಅನುಕೂಲಕ್ಕೆ ತಕ್ಕ ಹಾಂಗೆ, ಆಯಾ ಭಾಗದವರ, ಆಯಾ ಪ್ರದೇಶದವರ ವಿಷಯ ಪ್ರಾಮುಖ್ಯತೆಗೆ ತಕ್ಕ ಹಾಂಗೆ ಆಚರಣೆ ಮಾಡುದು ನಮ್ಮ ಸಂಸ್ಕೃತಿಯ ಒಂದು ಭಾಗ ಅಲ್ಲದಾ? ಮಾಡುದರಲ್ಲಿ ಶ್ರದ್ಧೆ, ಭಕ್ತಿ ಇದ್ದರೆ ಎಲ್ಲವೂ ದೇವರಿಂಗೆ ಪ್ರಿಯವೇ ಅಕ್ಕು..

    ಒಪ್ಪಣ್ಣ, ಮಕರ ಸಂಕ್ರಾಂತಿಗೆ ಮಕರವಿಳಕ್ಕು ಕಂಡರೆ ಜೀವನ ಪಾವನ ಆವುತ್ತು ಹೇಳಿ ಆ ದಿನಕ್ಕೆ ಹೋಪ ಹಾಂಗೆ ಮಾಲೆ ಹಾಕುತ್ತವು. ಆದರೆ ಈ ವರ್ಷ ಆದ ಅನಾಹುತ ಮುಂದೆ ಯಾವ ಕಾಲಕ್ಕುದೇ ಪುನಃ ಆಗದ್ದೆ ಇರಲಿ. ತುಂಬಾ ಜೆನಂಗ ಸೇರುವ ಜಾಗೆಲಿ ಅಪ್ಪ ದುರ್ಘಟನೆಗೆ ನಾವು ಯಾವ ಕಾಲಕ್ಕುದೇ, ಮನಸ್ಸಿನ ಒಂದು ಮೂಲೆಲಿ ಜಾಗೃತರಾಗಿರೆಕ್ಕು ಅಲ್ಲದಾ? ಆದರೂ, ಜನ ಸಾಗರ ಇಪ್ಪಲ್ಲಿ ನಮ್ಮ ಬುದ್ಧಿಯ ಪ್ರಚೋದನೆ ಎಷ್ಟರ ಮಟ್ಟಿನ್ಗೆ ಕೆಲಸ ಮಾಡುಗು ಹೇಳಿ ಹೇಳುದು ಕಷ್ಟ!!!!
    ಅಯ್ಯಪ್ಪನ ವ್ರತ ತೆಕ್ಕೊಂಡಿಪ್ಪಗ ಮಾಡುವ ನಿಯಮ ನಿಷ್ಠೆ ಜೀವನ ಪೂರ್ತಿ ಜನಂಗಳ ಒಟ್ಟಿನ್ಗೆ ಇರಲಿ ಹೇಳಿ ನಮ್ಮ ಹಿರಿಯೋರು ಈ ಕ್ರಮ ಮಾಡಿಕ್ಕು. ವರ್ಷಲ್ಲಿ ಒಂದರಿ ದೇಹ, ಮನಸ್ಸು ಶುದ್ದಿ ಆಗಿ ದೇವಲಹರಿಲಿ ಮನುಷ್ಯರು ತೇಲಾಡಲಿ ಹೇಳಿ.
    ಒಪ್ಪಣ್ಣ, ಶೆಂಕ್ರಾಂತಿ ಹೇಳಿದರೆ ‘ಹೊಸತನ’ ಹೇಳಿ ಹೊಸ ಅರ್ತ ಬಪ್ಪ ಹಾಂಗೆ ಹೇಳಿದ್ದದು ಲಾಯ್ಕಾಯಿದು.. ನಾವು ಪ್ರತಿ ತಿಂಗಳುದೆ ಹೊಸತ್ತು ಆದ ಹಾಂಗೆ ಲೆಕ್ಕ ಹಾಕುದು ಅಪ್ಪೋ? ಸಂಕ್ರಾಂತಿಯ ಮರುದಿನದ ಸಿಂಗ್ ಡೆಯ ನಮ್ಮಲ್ಲಿ ಎಲ್ಲಾ ‘ಡೇ’ ಆಚರಣೆಯ ಹಾಂಗೆ ಮಾಡ್ತವು ಜನಂಗ.. ಆ ದಿನ ಡಾಗುಟ್ರಕ್ಕಳ ಕಾಂಬಲೆದೆ ಹೋವುತ್ತವಿಲ್ಲೆ. ಭರಣಿ ಕೃತ್ತಿಕೆ ಇದ್ದರೂ ಕೂಡ ಹಾಂಗೆ!!!
    ಒಪ್ಪಣ್ಣ, ಶುದ್ದಿಯ ಅಕೇರಿಗೆ ವಿವರ್ಸಿದ ಹಾಂಗೆ ನಮ್ಮ ಮುಂದಾಣವಕ್ಕೆ ಕ್ರಮಂಗಳೂ, ನಾವು ಮಾಡುವ ಅನಾವಶ್ಯಕ ಖರ್ಚುಗಳನ್ನೂ, ಒಳಿಶಿದರೆ ನಾಳೆ ಅವ್ವುದೇ ಎಲ್ಲವನ್ನೂ ಮುಂದರಿಶುಗು. ಇಲ್ಲದ್ದರೆ ಎಲ್ಲವನ್ನೂ ಕ್ರಮಿಸಿ ಅವ್ವು ಹೆರಾಣ ಸಂಕ್ರಮಣಕ್ಕೆ ಕಾಲು ಮಡುಗುಗು ಅಲ್ಲದಾ?

    ಒಂದೊಪ್ಪ ಲಾಯ್ಕಾಯಿದು. ಎಲ್ಲೋರ ಜೀವನದ ಶೆಂಕ್ರಾಂತಿಲಿ ದಿನಮಣಿ ಚೆಂದದ ಪ್ರಭಾತ ತಪ್ಪ ಹಾಂಗೆ ಆಗಲಿ.

    1. { ಸಿಂಗ್ ಡೆಯ ನಮ್ಮಲ್ಲಿ ಎಲ್ಲಾ ‘ಡೇ’ ಆಚರಣೆಯ ಹಾಂಗೆ ಮಾಡ್ತವು ಜನಂಗ.. }
      ಓ! ಸಿಂಗ್-ಡೇ ಹೇಳ್ತದರ ಇಂಗ್ಳೀಶರುದೇ ಆಚರಣೆ ಮಾಡ್ತವೋ?
      ಕೊಶೀ ಆತೊಂದರಿ!! 🙂

  6. ಯೆವತ್ತಿನ ಹಾಂಗೆ ಒಳ್ಳೆ ಲೇಖನ .ಶೆಂಕ್ರಾಂತಿಯ ಮಹತ್ವ, ನಮ್ಮ ದೇಶದ,ಮುಖ್ಯವಾಗಿ ದಕ್ಷಿಣ ಭಾಗಲ್ಲಿ ಹೇ೦ಗೆಲ್ಲಾ ಈ ಸಂಧಿ ಕಾಲವ ಆಚರಣೆ ಮಾಡುತ್ತವು ಹೇಳಿ ಒಪ್ಪಕ್ಕೆ ಬರದ್ದ ಒಪ್ಪಣ್ಣ.
    ಮಹಾರಾಷ್ಟ್ರ,ಗುಜರಾತ್ ಗಳಲ್ಲಿ “ಉತ್ತರಾಯಣ್” ಹೇಳಿ ಗೌಜಿಲಿ ಆಚರಣೆ ಮಾಡುತ್ತವು.ಪ್ರಾಯದ ಭೇದ ಇಲ್ಲದ್ದೆ ಗಾಳಿಪಟ ಉದೆಗಾಲಕ್ಕೆ ಹಾರ್ಸುಲೆ ಶುರು ಮಾಡ್ತವು,ಆಕಾಶಲ್ಲಿ ಹಕ್ಕಿಗೊಕ್ಕೆ ಹಾರುಲೇ ಜಾಗೆ ಸಿಕ್ಕದ್ದಷ್ಟು ಟ್ರಾಫಿಕ್ ಜಾಮ್ ಆವುತ್ತು.

    1. ಗಾಳಿಪಟ ಹಾರುಸುತ್ತದೋ? ಅದೆಂತಗೆ?
      ಬೊಳುಂಬುಮಾವ ಅಂದೊಂದು ರಜ ಪಟ ತೆಗದು ಕೊಟ್ಟಿದವು ಬೈಲಿಂಗೆ, ಕಂಡಿದಿರೋ?

  7. ಲಾಯ್ಕಾಯ್ದು ಒಪ್ಪಣ್ಣ!

  8. ಒಪ್ಪಣ್ಣೋ ಒಳ್ಳೆ ಸಮಯಲ್ಲಿ ಬ೦ದ ಒಳ್ಳೆ ಲೇಖನ.ಕು೦ಬ್ಳೆ ಸೀಮೆಲಿ ಜಾತ್ರಗಳ ಕಾಲ ಸುರುವಾತದ.ಮಾಯಿಪ್ಪಾದಿ ರಾಜ೦ಗಳ ನಾಲ್ಕು ಸೀಮಾ ದೇವಸ್ಥಾನ೦ಗಳಲ್ಲಿ ಮಕರ ಸ೦ಕ್ರಾ೦ತಿಯೊಟ್ಟಿ೦ಗೆ ಜಾತ್ರೆಗೊ ಸುರುವಾವುತ್ತದ.ಕು೦ಬ್ಳೆ ಜಾತ್ರೆಯೊಟ್ಟಿ೦ಗೆ ಸುರುವಾವುತ್ತ ಜಾತ್ರೆ ಎಲ್ಲ ಸ೦ಕ್ರಾ೦ತಿಗೋಕ್ಕು ಒ೦ದೊ೦ದು ದೇವಸ್ಥಾನಲ್ಲಿ ಜಾತ್ರೆ ಸುರುವಾವುತ್ತು ಅಖೇರಿಗೆ ನಮ್ಮ ಮಧೂರು ಬೊಡ್ಡಜ್ಜನ ಜಾತ್ರೆ ವಿಷು ಸ೦ಕ್ರಮಣಕ್ಕೆ ಕೊಡಿಅದ.ಇನ್ನು ಹಿ೦ದೆ ಎಲ್ಲಾ ಅಯ್ಯಪ್ಪ೦ಗೆ ಚ೦ದ್ರಗಿರೀ೦ದ ಈಚಿಗೆ ವ್ಯಾಪ್ತಿ ಇಲ್ಲೆ ಹೇಳುಗು ಆದರೆ ಇದರ ಎಲ್ಲಾ ಲೊಟ್ಟೆ ಮಾಡಿ ಅಯ್ಯಪ್ಪ ಭಕ್ತ೦ಗೊ(?) ದೇಶ ಇಡೀ ತು೦ಬಿದ್ದವು.ಕೆಲವು ಜೆನ೦ಗೋಕ್ಕೆ ಇದು ಪೈಸೆ ಮಾಡ್ತ ದ೦ಧೆಯೂ ಅಪ್ಪು.ಇರಳಿ ಬಹುಶಹ ಧರ್ಮ ಸ್ಥಾಪನಗೆ ದೇವರು ಕ೦ಡೊ೦ಡ ಹೊಸ ದಾರಿಯೋ ಏನೊ.ಉಮ್ಮೊಪ್ಪ ನವಗರಡಿಯ(ಒಪ್ಪಣ್ಣನ ಬಾಷೆಯ ಕದ್ದದಕ್ಕೆ ಕ್ಷಮೆ ಇರಳಿ).ಒಪ್ಪವೇ ಉದ್ದ ಆಗಿ ಲೇಖನ ಅಪ್ಪಲಾಗಾನೆ.ಒಪ್ಪ೦ಗಳೊಟ್ಟಿ೦ಗೆ

    1. { ಉಮ್ಮೊಪ್ಪ ನವಗರಡಿಯ }
      ಚೆ ಚೆ, ಇದು ಆರದ್ದೂ ಅಲ್ಲ ಕದಿವಲೆ..
      ನವಗರಡಿಯದ್ದರ ನವಗರಡಿವಾಂಗೆ ಹೇಳೆಕ್ಕಾರೆ ನವಗರಡಿಯ ಹೇಳಿಯೇ ಹೇಳೆಕ್ಕಟ್ಟೆ, ಅಲ್ಲದೋ?
      ಬೇರೆ ರೀತಿಲಿ ಹೇಳ್ಳಾವುತ್ತೋ – ಉಮ್ಮಪ್ಪ, ನವಗರಡಿಯ!

  9. elloringu sankranthi habbada shubhashayango………………. 17 kke kumbale bedi ………18 kke nammade totada kerege devaru meevale bappadu………araatinge……… khusiyoo khushi….sannadippaga shaalage raje haaki hogyondiddadu nenapaavtu

    1. { 18 kke nammade totada kerege devaru meevale bappadu }
      ವಿದ್ಯಕ್ಕೋ..
      ದೇವರು ಮೀವಲೆ ಬಂದ ಗವುಜಿ ಹೇಂಗಿತ್ತು? ಬೈಲಿಂಗೆ ಹೇಳ್ತಿರೋ?

      1. aanu ee sarthi jatrege mhogadda kaarana hengittu aaratu heli gonthille……….Putturli ramajjana college li kelasa madva yaringu janavari thingalili freeye ille……..ondu advani ajja bappaliduu heli kalejina madimmalu madtha iddavu…….adrinda modalu NAAC team bappadakke tayaari…………

  10. ಒಳ್ಳೇ ಲೇಖನ.. ಒಪ್ಪಣ್ಣ೦ಗೆ ಧನ್ಯವಾದ೦ಗೊ..
    ಶಬರಿಮಲೆಯ ವಿಶಯ ಇ೦ದು ಎಲ್ಲಾ ಟಿ ವಿ ಗಳಲ್ಲಿ, ಪೇಪರುಗಳಲ್ಲಿಯೂ ನೋಡಿ ಗೊ೦ತಾತಾಯ್ಕು ಅಲ್ಲದೋ? ಇಷ್ಟರವರೇ೦ಗೆ ೧೦೨ ಶವ ಸಿಕ್ಕಿತ್ತಾಡ.. 🙁 ದೇವರು ಅವರ ಆತ್ಮಕ್ಕೆ ಶಾ೦ತಿ ಕರುಣಿಸಲಿ.

    ಆನು ಸಣ್ಣ ಆಗಿಪ್ಪಗ ಶಬರಿಮಲೆಗೆ ಹೋಪದು ಹೇಳಿದರೆ ಒಳ್ಳೆ ಶ್ರಧ್ಧೆ, ಭಯಭಕ್ತಿ ಎಲ್ಲಾ ಇದ್ದತ್ತು.. ಕಪ್ಪು ವಸ್ತ್ರ, ಮೆಟ್ಟು ಹಾಕದ್ದೆ ಇಪ್ಪದು, ಗೆಡ್ಡ, ಮೀಸೆ, ತಲೆಕ್ಕುಚ್ಚಿ, ಉಗುರು ಇತ್ಯಾದಿ ತೆಗೆಯದ್ದೇ ಇಪ್ಪದು, ವ್ರತಾನುಷ್ಠಾನ೦ಗೊ ಎಲ್ಲದರಲ್ಲುದೆ ಒಳ್ಳೆ ಶ್ರಧ್ಧೆ ಇದ್ದತ್ತು. ಹೋಪಗಳುದೆ ಎಷ್ಟೋ ದೂರ ನಡದೇ ಹೋಯೆಕು, ವಾಹನ ಒ೦ದು ಹ೦ತದ ವರೇ೦ಗೆ ಹೋಕಷ್ಟೆ. ವ್ರತಲ್ಲಿ ಇದ್ದು, ಅಲ್ಲಿ ಹೋಗಿ ತಿರುಗಿ ಬ೦ದು ಮಾಲೆ ತೆಗೆವನ್ನಾರ ಆದರುದೆ ಮನಸ್ಸು ಒಳ್ಳೆ ರೀತಿಲಿ ಮಡುಗಿಯೊ೦ಡು ಇತ್ತಿದ್ದವು.
    ಈಗಳುದೆ ಅಷ್ಟೇ ಭಯಭಕ್ತಿಲಿ ವ್ರತ ಆಚರಿಸುತ್ತವು ಇದ್ದವು, ಆದರೆ ಅವರ ಶತಮಾನ ಕಮ್ಮಿ ಆಯಿದು. ನಮ್ಮ ಊರವಕ್ಕಿ೦ತಲುದೆ, ಈ ವಿಷಯಲ್ಲಿ ಕರ್ನಾಟಕದ ಆಚ ಹೊಡೆಯಾಣವು, ತಮಿಳುನಾಡು, ಆ೦ಧ್ರಪ್ರದೇಶ೦ದ ಬಪ್ಪವು ಇವಕ್ಕೆಲ್ಲಾ ಒ೦ಚೂರು ಪ್ರಾಮಾಣಿಕತೆ, ಭಯಭಕ್ತಿ, ಶ್ರಧ್ಧೆ ಜಾಸ್ತಿ ಇದ್ದ ಹಾ೦ಗೆ ಕಾಣ್ತು. ಮೊದಲೆಲ್ಲಾ ೪೮ ದಿನ೦ದ ಕಮ್ಮಿ ವ್ರತ ಮಾಡ್ತ ಕ್ರಮವೇ ಇಲ್ಲೆ. ಈಗ ಅವರವರ ಸೌಕರ್ಯಾನುಸಾರ ಆಯಿದು. ವ್ರತ ಮಾಡ್ತ ಸಮಯಲ್ಲಿ ಆದರುದೆ ಮದ್ಯ, ಧೂಮಪಾನ ಇತ್ಯಾದಿಗಳ ಪೂರ್ತಿ ಬಿಡದ್ದ ಎಷ್ಟೋ ಜನರ ಈಗ ಕಾ೦ಬಲೆ ಸಿಕ್ಕುತ್ತು. ಇನ್ನು ಬಿಟ್ಟ ಕೆಲವು ಜನ೦ಗೊ ಕೂಡ ಶಬರಿಮಲೆಲಿ ಹೋಗಿ ತಿರುಗಿ ಬಪ್ಪ ದಾರಿಲೇ ಕುಡುದು ಟೈಟ್ ಆಗಿ ಬಪ್ಪದು ಕೂಡ ಸಾಮಾನ್ಯ ವಿಶಯ ಆಗಿ ಹೋಯಿದು. ಎನಗೆ ಗೊ೦ತಿಪ್ಪ ಹಲವು ತ೦ಡ೦ಗೊ ತಿರುಗಿ ಬಪ್ಪ ದಾರಿಲಿ ಮಾಹಿ ಹೇಳ್ತ ಕೇ೦ದ್ರಾಡಳಿತ ಪ್ರದೇಶ೦ದ (ಅಲ್ಲಿ ಮದ್ಯಕ್ಕೆ ಕ್ರಯ ಕಮ್ಮಿ ಅಡ, ಮದ್ಯದ೦ಗಡಿಗಳುದೆ ತು೦ಬಾ ಜಾಸ್ತಿ) ಪೆಟ್ಟಿಗೆಗಟ್ಳೆ ಕುಪ್ಪಿ ತು೦ಬಿಸಿಗೊ೦ಡು ಬತ್ತವು.
    ಈ ವ್ರತದ ಹಿ೦ದೆ ಇಪ್ಪ ನಿಜವಾದ ಉದ್ದೇಶ ಎ೦ತರ ಹೇಳಿ ಅರ್ಥ ಮಾಡದ್ದೆ, ಇದರ ಜೀವನಲ್ಲಿ ಅಳವಡಿಸದ್ದೆ ಶಬರಿಮಲೆಗೆ ಅ೦ತೆ ಕಪ್ಪುವಸ್ತ್ರ ಸುತ್ತಿ ಹೋಗಿ ಬ೦ದು ಎ೦ತ ಪ್ರಯೋಜನ? ಕೇರಳದ ಹೆಚ್ಚಿನ ಭಕ್ತರಿ೦ಗೆ (?) ಈಗ ಶಬರಿಮಲೆಗೆ ಹೋಗಿ ಬಪ್ಪದು ತೀರ್ಥಾಟನೆ೦ದಲೂ ಹೆಚ್ಚು ಒ೦ದು ವಿನೋದಯಾತ್ರೆಯ ಹಾ೦ಗೆ ಆಗಿ ಹೋಯಿದು..

    1. ಅದು ಸರಿ..
      ತುಂಬಾ ಲಾಯಿಕ ಬರದೆ ಒಪ್ಪವ..
      ಇದೇ ನಮುನೆ ಶುದ್ದಿ ಬರೆತ್ತೆಯೋ? ಬೈಲಿಂಗೆ ಹೇಳುಲಕ್ಕಿದಾ..

  11. ಒಡುಕ್ಕ ಹೇಳಿದರೆ ಅಖೆರಿ.tiMgaLODu ತಿಂಗಳ ಕಡೆ ಅಲ್ಲ.ಸುರು.
    ಬೇರೆ ರೀತಿ ವ್ಯುತ್ಪತ್ತಿ ಇಕ್ಕು.ಆಲೋಚನೆ ಮಾಡುವೊ.

  12. ಈಗ ಇರುಳಿನ ಪ್ರಮಾಣ ಹೆಚ್ಚು. ಉತ್ತರಾಯಣಲ್ಲಿ ಹಗಲಿನ ಪ್ರಮಾಣ ಹೆಚ್ಚಾವುತ್ತಾ ಬಪ್ಪದು.

    1. ಬೋಸಂಗೆ ಅದೊಂದು ತಲೆಬೆಶಿ ಹೆಚ್ಚಾಯಿದಡ..ಹೆಡ್ಡು ಹೆಡ್ಡು ಹೇಳಿ ತಲೆ ಹಿಡುಕ್ಕೊಂಡು ಕೂಯಿದ° ಹೇಳಿ ಶುದ್ದಿ..

      1. ಹ ಹ,
        ಜೋಯಿಶಪ್ಪಚ್ಚಿಯ ಹತ್ರೆ ಪೆಂಗಣ್ಣ ಕೇಳಿಗೊಂಡು ಇತ್ತಿದ್ದ – ದಿನಾಮಾನ ಯೇವತ್ತು ಜಾಸ್ತಿ ಅಪ್ಪದು – ಹೇಳಿಗೊಂಡು..

  13. ಒಪ್ಪಣ್ಣೊ,
    ಸ೦ಕ್ರಾ೦ತಿ-ಉತ್ತರಾಯಣದ ಬಗ್ಗೆ ಸರಳವಾಗಿ ಚೆ೦ದಕೆ ಹೇಳಿ ಕೊಟ್ಟದು ಲಾಯಕಾಯಿದು!

  14. ಮಕರಜ್ಯೊತಿ ಈ ಸರ್ತಿ ರಜ ಲೇಟಾಗಿ ಕಂಡದಡ……೭ ಗಂಟೆ ಕಳುದ್ದು………

    1. ವಿಳಕ್ಕ್ ಕೊಂಡುಹೋಪಗ ತಡ ಆದ್ದದೋ ಹೇಳಿ ವಿಚಾರಣೆ ಅಕ್ಕೋ? ಜ್ಯೋತಿ ಕಂಡ ಜಾಗೆದೆ ಬದಲಿದ್ದಡ ಕಳುದೊರುಶಂದ.. ಏನೇ ಆಗಲಿ,ನೇಮ ನಿಷ್ಠೆಗೆ ಒಂದು ದಾರಿ ಅಲ್ಲದೋ?

  15. ಒಪ್ಪಣ್ಣೋ! ಸಂಕ್ರಾಂತಿ ಬಗ್ಗೆ ಚೆಂದಕ್ಕೆ ವಿವರ ಕೊಟ್ಟ ಲೇಖನ ಈ ಸತ್ತಿ.. ಏವತ್ತಿನ ಹಾಂಗೆ ಮೋಡಿ ಮಾಡ್ತ ಶೈಲಿ, ಓದಿಸಿಗೊಂಡು ಹೋವುತ್ತು.. ಈಗೀಗ ಶಬರಿಮಲೆ ಯಾತ್ರೆ ಮಾಡೋರ ಸಂಕ್ಯೆ ಬರ್ಜರಿ ಇದ್ದು.. ಜೆನ ಬದಲಾವ್ತಾ ಇದ್ದವೋ ಏನೋ! ಆದರೂ ಅಯ್ಯಪ್ಪನ ಕಥೆ, ಮಕರವಿಳಕ್ಕು ಎಲ್ಲ ಗ್ರೇಶಿರೆ ತುಂಬಾ ಕೊಶಿ ಆವ್ತು.. ಆದರೆ ಒಂದು ಸಂಶಯ, ರೂಪತ್ತೆ ಏವ ವ್ರತ ಇಲ್ಲದ್ದೆ ಸಂಕ್ರಮಣದ ದಿನ ಮಕವಿಳಕ್ಕಿನ ಮೂವತ್ತೆರಡಿಂಚಿನ ಟೀವಿಲಿ ನೋಡಿದ್ದೋ? ಜ್ಯೋತಿ ಕಂಡಿದೋ ಇಲ್ಲೆಯೋ ಸಂಶಯ! 😉
    ಗಟ್ಟದ ಗೌಜಿಯ ಆಚರಣೆ, ಪೊಂಗಲಿನ ಶುದ್ದಿ ಎಲ್ಲ ನೆಂಪಾತೀಗ, 🙂 ನೆನಪು ಮಾಡಿದ್ದಕ್ಕೆ ಧನ್ಯವಾದಂಗೋ!! 🙂 ಹರೇರಾಮ!

    1. { ರೂಪತ್ತೆ ಏವ ವ್ರತ ಇಲ್ಲದ್ದೆ ಸಂಕ್ರಮಣದ ದಿನ ಮಕವಿಳಕ್ಕಿನ ಮೂವತ್ತೆರಡಿಂಚಿನ ಟೀವಿಲಿ ನೋಡಿದ್ದೋ? }
      ಅದಕ್ಕೆ ವ್ರತ ಮಾಡ್ಳೆ ಅವರ ಕಾರಿನಶೆಡ್ಡಿಲಿ ಕಟ್ಟಿದ ನಾಯಿ ಬಿಡ್ತಿಲ್ಲೆಡ, ಅಂಬಗಂಬಗ ಮುಟ್ಟಿ ಮೈಲಿಗೆ ಮಾಡ್ತಡ. 😉

      1. ಎನಗೆ ಮೂಡಬಿದ್ರೆಗೆ ಬಂದ ಮೇಲೆ ತುಂಬಾ ಹಬ್ಬಂಗ ತಪ್ಪಿತ್ತು. ಈ ಸರ್ತಿಯ ಸಂಕ್ರಾಂತಿಯುದೇ ಹಾಂಗೆಯೇ. ಉಳುದವಕ್ಕೆಲ್ಲ ಶುಭಾಶಯ ಕೋರುದಷ್ಟೇ. ಈ ಸರ್ತಿ ಸಂಕ್ರಾಂತಿಯ ಮರುದಿನ ಮಂಗಳೂರಿಲ್ಲಿ ಒಂದು ಉಪನಯನಕ್ಕೆ ಹೋಗಿತ್ತಿದೆ. ಸುಮಾರು ಜನ ಮಾತಾಡ್ಲೆ ಸಿಕ್ಕಿದವು. ಅಲ್ಲಿಗೆ ಎನ್ನ ಸಂಕ್ರಾಂತಿಯ ಆಚರಣೆ ಮುಗುತ್ತು. !!! 🙁

  16. ಮಕರಸಂಕ್ರಮಣದ ದಿನ ರವಿ ಮಕರರಾಶಿಗೆ ದಾಂಟುವ ದಿನ. ಮಕರ ರಾಶಿ ಶನಿಯರಾಶಿ. ಶಿವ(ರವಿ)ನ ಬೆನ್ನು ಶಾಸ್ತ°=ಅಯ್ಯಪ್ಪ°(ಶನಿ). ಹಾಂಗಾಗಿ ಮಕರಸಂಕ್ರಮಣ ಅಯ್ಯಪ್ಪಂಗೆ ವಿಶೇಷ. ಶನಿಗೆ ಕಪ್ಪು ವೊಸ್ತ್ರ ಹೇಳ್ತವು. ಹಾಂಗಾಗಿ ಅಯ್ಯಪ್ಪ ವ್ರತದವಕ್ಕೆ ಕಪ್ಪು ವೊಸ್ತ್ರ. ಶನಿ ದೋಶಕ್ಕೆ ಅಯ್ಯಪ್ಪ° ಪರಿಹಾರ.

    1. ”ಒಡ್ಕ”=ಕಡೇ ಹೇಳಿ ಶಬ್ದಾರ್ಥ ಇದ್ದು.
      “ಒಡ್ಕಕೆ” ಹೇಳಿರೆ “ಅಕೇರಿಗೆ” ಹೇಳ್ತ ಅರ್ಥಲ್ಲಿ ಮಾತಾಡ್ತ ಕ್ರಮ ಇದ್ದು.

      1. ವೋಡ್ಕ ಹೇಳಿರೆ ಬೇರೆಂತದೋ ಅರ್ತ ಇದ್ದಡ, ಅಲ್ಲದೋ?
        ಆಸರಿಂಗೆ ಕುಡಿತ್ತದು ಆಗಿರೇಕು ಅದು! 😉

        1. ಆಸರಿಂಗೆ ಅಪ್ಪದ್ದೆ ಕುಡಿತ್ತದೇ, 🙂 ಆದರೆ ಆಸರ ಹೆಚ್ಚಾಗಿ ಹೊತ್ತೋಪಗ ಅಪ್ಪದಡ.. 😉 ಕಸ್ತಲಪ್ಪಗ ಆನು ಮನೆಗೆ ಹೋಪಾಗ ದಾರಿಲಿ ಕೆಲವು ಜೆನ ಈ ಆಸರಿಂಗೆ ಕುಡುದು ಮಾರ್ಗದ ಉದ್ದಗಳ ಅಳೆತ್ತವು.. 😉

          1. ಉದ್ದಗಲ ಅಳವಲೆ ಅವಕ್ಕೆ ಸಕಾಯಕ್ಕೆ ಹೋತಿಕ್ಕೆಡ 🙂

  17. @ “ತಿಂಗಳೋಡು”= ತಿಂಗಳ ಓಡು.
    ೧)”ಓಡು”= ಸುರು ೨)”ಒಡ್ಕ”=ಕಡೇ ಹೇಳಿ ಶಬ್ದಾರ್ಥ ಆದಿಕ್ಕು.
    ಅಜಕ್ಕಳ ಗಿರೀಶಂಗೆ ಗೊಂತಿಕ್ಕೋ ಏನೋ?
    ಹವ್ಯಕ ಕನ್ನಡದ ಪದ ವೈವಿಧ್ಯಂಗೊ ನಾಶ ಆವುತ್ತಾ ಇದ್ದು. ಬೈಲಿಲಿ ಪುನಾ ತಪ್ಪಲೆ ಪ್ರಯತ್ನ ಎಲ್ಲೋರೂ ಮಾಡೆಕ್ಕು.
    ಒಪ್ಪಣ್ಣ ಲಾಯಕ ಬರೆತ್ತ°.
    ದಿ.ಮರಿಯಪ್ಪ ಭಟ್ರ ಒಂದು ಪುಸ್ತಕವೂ ಇದ್ದು.
    ಮಂಗಳೂರು ಹೋಬಳಿಯ ಎಲ್ಲಾ ಸೀಮೆಗಳ ಪದಂಗೊ, ವಾಕ್ಯ ರಚನಾ ಕ್ರಮಂಗೊ, ಅದರ ಹಿಂದೆ ಇಪ್ಪ ಆಚಾರ-ವಿಚಾರಂಗೊ ಎಲ್ಲಾ ಈ ಬೈಲಿಲಿ ಬರಳಿ.
    ಗೊಂತಿಪ್ಪವೆಲ್ಲಾ ರಜ ರಜ ಕೊಟ್ಟರೆ ದೊಡ್ದ ಸಂಗ್ರಹವೇ ಅಕ್ಕು.

    1. { ಒಪ್ಪಣ್ಣ ಲಾಯಕ ಬರೆತ್ತ° }
      ಕೊಶಿ ಆತು ನಿಂಗೊ ಹೇಳಿದ್ದರ ಕೇಳಿ..
      ಆದರೆ ಬೈಲಿಲಿ ಸುಮಾರು ಜೆನ ಶುದ್ದಿ ಹೇಳ್ತವಿದಾ, ಅವರದ್ದೆಲ್ಲೋರದ್ದುದೇ ಒಪ್ಪಣ್ಣಂಗೆ ಲಾಯಿಕ ಅಪ್ಪದು.. 🙂

  18. ಎಲ್ಲೋರಿಂಗು ಮಕರ ಸಂಕ್ರಮಣದ ಶುಭಾಶಯಂಗೊ. ಈ ಸಂದರ್ಭಲ್ಲಿ ಬಂದ ಒಪ್ಪಣ್ಣನ ವಿವರಣಾತ್ಮಕ ಲೇಖನ ಸಮಯೋಚಿತ. ಶರ್ಮಪ್ಪಚ್ಚಿ ಹೇಳಿದ ಹಾಂಗೆ, ಎಂಗಳ ಬೇಂಕಿಲ್ಲಿದ್ದ ಘಟ್ಟದ ಮೇಲಾಣವೆಲ್ಲ, ಎಳ್ಳು ಬೆಲ್ಲ ಹಂಚುತ್ತವು. ಎಂಗಳ ಸಿರಿಗಂಧ ಕನ್ನಡ ಬಳಗಲ್ಲಿ ಎರಡು ಸರ್ತಿ ಸಂಕ್ರಮಣದ ವಿಶೇಷ ಕಾರ್ಯಕ್ರಮ ಮಾಡಿದ್ದೆಯೊ. ಎಳ್ಳು ಬೆಲ್ಲ ಹಂಚಿದ್ದೆಯೊ. ಎಲ್ಲೋರನ್ನು ಒಟ್ಟು ಸೇರುಸುವ ಇಂಥಾ ಹಬ್ಬಂಗೊ ನೆಡೆತ್ತ ಕಾರಣ, ನೆರೆ ಹೊರೆಲಿ, ನೆಂಟರೊಳ, ಕುಟುಂಬದವರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಬೆಳೆತ್ತು. ಒಪ್ಪಣ್ಣ ತಿಂಗಳೋಡು ಹೇಳ್ತ ಶಬ್ದ ನೆಂಪು ಮಾಡಿದ. ಕುಂಬಳೋಡು ಪಲ್ಯ ಪಕ್ಕನೆ ನೆಂಪಾತು !

    ವರ್ಷ ಇಡಿ ಮಾಡ್ಳಾಗದ್ದನ್ನೇ ಮಾಡಿ, ಒಂದು ತಿಂಗಳು ಕಪ್ಪು ವಸ್ತ್ರ ಸುತ್ತಿ ವ್ರತ ಆಚರಿಸಿ(ಆಚರಿಸುತ್ತವೊ ಗೊಂತಿಲ್ಲೆ), ಮತ್ತೆ ಪುನ: ಮದಲಾಣ ಹಾಂಗೆ ಮಾಡ್ಳಾಗದ್ದನ್ನೇ ಮುಂದುವರಿಸುವವರ ಕಾಂಬಗ ಹೇಸಿಗೆ ಆವ್ತು. ಇದು ಬರೀ ಆಡಂಬರದ ಭಕ್ತಿ ಹೇಳಿ ಎನಗೆ ಕಾಣ್ತು. ವ್ರತದ ಸಮೆಲಿ ಅವರ ಮಡಿ, ಮೈಲಿಗೆ, ತಟ್ಟೆಲಿ ತಿಂಬಲಾಗದ್ದದು ಎಲ್ಲ ಅಬ್ಬಬ್ಬಬ್ಬ ನೋಡ್ಳಾವುತ್ತಿಲ್ಲೆ. ಬ್ರಾಹ್ಮಣರಿಂದಲೂ ಒಂದು ಮೆಟ್ಟಲಿನಷ್ಟು ಮೇಲೆ ಇರ್ತವು. ಕಳುದ ವರ್ಷ ಒಂದು ಅಯ್ಯಪ್ಪ ವೇಷಧಾರಿ, ಕುಡುದು ಗಂಡಿ ಕರೆಲಿ ಬಿದ್ದೊಂಡು ಆನು ಕಂಡಿದೆ. ಎಲ್ಲೋರು ಹಾಂಗೆ, ಹೇಳ್ತ ಅಭಿಪ್ರಾಯ ಎನ್ನದಲ್ಲ. ದಯವಿಟ್ಟು ಕ್ಷಮಿಸಿ. ಅವರವರ ಭಕ್ತಿ ಅವಕ್ಕವಕ್ಕೆ.

    1. ತಾಮಸ ಸ್ವಭಾವಕ್ಕೆ ತಾಮಸ ಸ್ವರೂಪದ ಆರಾಧನೆ.

    2. ಬೊಳುಂಬುಮಾವಾ..
      ನಿಂಗೊ ಹೇಳಿದ ಸಂಗತಿ ಅಪ್ಪು, ಮಾಲೆ ಹಾಕಿ ನಿಷ್ಟೆಲಿ ಇಲ್ಲದ್ದವುದೇ ಇದ್ದವು.
      (ನಮ್ಮೋರಲ್ಲಿದೇ ಇದ್ದವಲ್ಲದೋ – ಹೇಳಿ ಒಂದೊಂದರಿ ಪೆಂಗಣ್ಣ ಕೇಳ್ತ°.. 🙂 )

  19. ಸಂಕ್ರಾಂತಿ ಸಮಯದ ಎಲ್ಲಾ ಆಚರಣೆಗಳ ನೆನಪು ಮಾಡ್ಸಿ ಕೊಟ್ಟ ಲೇಖನ ಬರದ ಒಪ್ಪಣ್ಣಂಗೆ ಧನ್ಯವಾದಂಗೊ.
    ಉತ್ತರಾಯಣ ಪರ್ವ ಕಾಲ ಹೇಳಿ, ಮಕರ ಸಂಕ್ರಮಣ ಆಚರಣೆ ಹೆಚ್ಚಿನ ಎಲಾ ಕಡೆಯೂ ಇಪ್ಪ ಹಬ್ಬ. ನೆರೆಕರೆಯ್ವಕ್ಕೆ ಎಳ್ಲು, ಬೆಲ್ಲ, ಸಕ್ಕರೆ ಅಚ್ಚು ಮಿಶ್ರ ಮಾಡಿ ಹಂಚಿ ಆಚರಿಸುವ ಕ್ರಮ ಬೆಂಗಳೂರು ಕಡೆಯವಕ್ಕೆ ಇದ್ದು. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತು ಹೇಳಿ ಹೇಳುಗು. ಹೊಸತಾಗಿ ಮದುವೆ ಆದ ಮದುಮ್ಮಾಳು 5 ಜೆನ ಮುತ್ತೈದೆಗೊಕ್ಕೆ ಬಾಗಿನ ಕೊಟ್ಟು ಆಶೀರ್ವಾದ ಪಡಕ್ಕೊಂಬ ಕ್ರಮವೂ ಅಲ್ಲಿ ಪ್ರಚಲಿತವಾಗಿ ಇದ್ದು.
    ಕಣ್ಯಾರದ ಗೋಪಾಲ ಕೃಷ್ಣ ದೇವಸ್ಥಾನಲ್ಲಿ 5 ದಿನದ ಜಾತ್ರೆಗೆ ಇಂದು ಕೊಡಿ ಏರುಸುವ ದಿನ. 17/01 ಕ್ಕೆ ಬೆಡಿ ಉತ್ಸವ, ತುಂಬಾ ವಿಶೇಷ. ಕುಂಬ್ಳೆ ಬೆಡಿ ಹೇಳಿರೆ ತುಂಬಾ ಗೌಜಿ ಮತ್ತೆ famous. ಪರ ಊರಿಲ್ಲಿ ಇಪ್ಪ ಈ ಊರಿನವು ಬಂದು ಸೇರುವ ದಿನ.
    ಪ್ರಕೃತಿಲಿ ಮಾವು ಹಲಸು, ಗೇರು, ಹೂ ಬಿಡುವ ಸಮಯ. ಮುಂದೆ ಫಲ ವಸ್ತುಗೊ ಸಮೃದ್ಧಿ ಅಪ್ಪ ಸಮಯ.
    ಎಲ್ಲರ ಜೀವನಲ್ಲಿಯೂ ಸುಖ ಸಂತೋಷ ನೆಮ್ಮದಿಯ ಸಮೃದ್ಧಿ ಆಗಲಿ ಹೇಳುವ ಶುಭ ಹಾರೈಕೆಗೊ.

    1. ಶರ್ಮಪ್ಪಚ್ಚೀ…
      ನಿಂಗೊ ಹೇಳಿಅಪ್ಪಗ ಬೆಡಿಗೆ ಹೋಪಲೆ ನೆಂಪಾತು, ಆದರೆ ಈ ಜೆಂಬ್ರಂಗಳ ಎಡಕ್ಕಿಲಿ ಹೋಪಲೇ ಆಯಿದಿಲ್ಲೆ.
      ನಿಂಗೊ ಹೋಯಿದಿರೋ?

  20. ಮಕರ ಸಂಕ್ರಾಂತಿ ಕಣ್ಯಾರ ದೇವಸ್ಥಾನಲ್ಲಿ ಕೊಡಿ ಇಂದು.
    ಒಳ್ಳೆ ಲೇಖನ ಬಂದದು ಖುಷಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×