Oppanna.com

“ಮ-ಮಾ ದೆವ್ವವೂ ಆನೂ ..”

ಬರದೋರು :   ಸುರೇಖಾ ಚಿಕ್ಕಮ್ಮ    on   19/07/2014    12 ಒಪ್ಪಂಗೊ

ಈ “ಮ-ಮಾ” ದೆವ್ವ ಎನ್ನ ಜೀವನಲಿ ಎಷ್ಟು (ಅ)ಸಹಕಾರಿ ಆಯ್ದು ಹೇಳಿ “ಮತ್ತೆ ಹೇಳ್ತೆ”. ಸುರು ಸುರು ಬರೇ ಕೆಲಸದ ವಿಷಯಲ್ಲಿ ಇಪ್ಪ “ಮ- ಮಾ”  ಮತ್ತೆ ಊಟದ ವಿಷಯಲ್ಲು ಸುರುವಾತು. ಬತ್ತಾ ಬತ್ತಾ ರಾತ್ರಿ ಮನಗುವ ವಿಷಯಲ್ಲೂ, ನಿದ್ದೆ ಮಾಡುವ ವಿಷಯದಲ್ಲೂ “ಮ-ಮಾ” ಹೇಳಿ ಕಾಂಬಲೆ ಸುರುವಾತು ಹೇಳಿರೆ ಗೊಂತಕ್ಕು- ವಿಷಯ ಎಷ್ಟು ವಿಪರೀತಕ್ಕೆ ಹೋಯ್ದು ಹೇಳಿ ! ಅಲ್ಲದಾ ?

ಆನು ಸಣ್ಣಾಗಿಪ್ಪಗ ಎಂಗಳ ಮನೇಲಿ ಒಂದು ನಿಯಮ ಇದ್ದತು : “ಮೀಯಣ ಆಗದ್ದೋವಿಗೆ ಮಧ್ಯಾಹ್ನ ಊಟ ಇಲ್ಲೆ” ಹೇಳಿ. ಅದು ಗೊಂತಿದ್ದೂ-ಗೊಂತಿದ್ದೂ “ಮ-ಮಾ” (ಮತ್ತೆ ಮಾಡಿದರಾತು)  ಜಪ ಮಾಡಿಕೊಂಡು, ಹೊಟ್ಟೆ ಚುರುಗುಟ್ಟಿಯಪ್ಪಗಲೆ ಮೀವಲೆ ಹೋಪದು ! ದೊಡ್ಡೋವತ್ರೆ ಬೈಸಿಕ್ಕೊಳ್ಳದ್ರೆ ಮೀಯಣಕ್ಕೊಂದು ಬೆಲೆ ಇಲ್ಲೆ ಹೇಳಿ ಅನ್ನಿಸಿಗೊಂಡಿತ್ತು ! (ಈಗ ಎಂಗಳ ಮಕ್ಕೊವುದೆ ಹಾಂಗೆ ಆಡ್ತಾ ಇದ್ದವು. ರಜೆ ಬಂತು ಹೇಳಿರೆ ಹೇಂಗಪ್ಪ ಇವುಗಳೊಟ್ಟಿಂಗೆ ಏಗುದು ಹೇಳಿ ಕಾಣ್ತು. ಅವುಗಳ ಮೀಯಣ ಮಾಡಿ ಆಯೆಕ್ಕು ಹೇಳಿರೆ ಎಂಗೊಗೆ ಬೊಡಿತ್ತಿಲ್ಲೆಯೋ ? ಕಲೆ, ರೋಗಂಗ ಮಾಂತ್ರ ಅಲ್ಲ……… ಸೊಂಬೇರಿತನವುದೆ ವಂಶಪಾರಂಪರ್ಯ ಹೇಳಿ ಕಾಣ್ತು. ಅಲ್ಲದೋ ?)

ಶಾಲೆಗೆ ಹೋಗಿಗೊಂಡಿಪ್ಪಗ ಈ “ಮ-ಮಾ” ಚಟ ಎನಗೆ ಭಯಂಕರ ಉಪದ್ರ ಕೊಟ್ಟುಗೊಂಡಿತ್ತು. ಪ್ರತಿದಿನ ಹೋಂವರ್ಕ್ “ಮ-ಮಾ” ಹೇಳಿಕೊಂಡು ರಾತ್ರಿ ಮನಗಿ-ಬೆಳಿಗ್ಗೆ ಮುಗಿಸಲಾಗದ್ದೆ-ಶಾಲೇಲಿ ಬಿಡುವಿಪ್ಪಗ ಗೆಳತಿ ನೋಟ್ ಬುಕ್ಕಿಂದ (ತಪ್ಪು ಸಹಿತವಾಗಿ) ಕಾಪಿ ಮಾಡಿದ್ದು- ಮಾಷ್ಟ್ರತ್ರೆ ಬೈಸಿಗೊಂಡಿದ್ದು-ಬೇರೆ ದಾರಿಯಿಲ್ಲದ್ದೆ ರಾತ್ರೆ ನಿದ್ದೆಗೆಟ್ಟು ಹೋಂವರ್ಕ್ ಸರಿಮಾಡಿ ಬರೆದಿದ್ದು.  ವರ್ಷದ ಮೊದುಲೆಲ್ಲ ಮತ್ತೆ ಓದಿದರಾತು ಹೇಳಿಗೊಂಡು, ಅರಾಮಾಗಿದ್ದು-ಪರೀಕ್ಷೆ ಹತ್ತಿರ ಬಂದಪ್ಪಗ ರಾತ್ರಿ ನಿದ್ದೆಗೆಟ್ಟು ಓದಿ-ಪರೀಕ್ಷೆ ಟೆನ್ಶನ್ ನಿಂದ ಹೊಟ್ಟೆ ಕೆಟ್ಟದ್ದು-ಪಿತ್ತಕ್ಕೆ ತಲೆ ತಿರುಗಿದ್ದು- ವಾಂತಿ ಆಗಿದ್ದು. ಪರೀಕ್ಷೆಲಿ “ಮ-ಮಾ” ಜಪ ಮಾಡಿಕೊಂಡು, ಗೊತ್ತಿದ್ದ ಉತ್ತರವನ್ನೂ ಬರೆಯಲಾಗದ್ದೆ- ಟೈಂ ಸಾಲದ್ದೆ ಮತ್ತೆ ವ್ಯಥೆ ಪಟ್ಟಿದ್ದು … ಒಂದೇ ಎರಡೇ…….. ಬರೀತಾ ಕೂದರೆ ಆ ವಿಷಯವೇ ಒಂದು ಲೇಖನ ಬರೆವಲೆ ಸಾಕು ! ಒಬ್ಬ ಮನುಷ್ಯ ತನ್ನ ಋಣಾತ್ಮಕ ವಿಷಯಗಳನ್ನೆಲ್ಲ ಆರ ಹತ್ರು  ಹೇಳ್ಲೆ ಹೋಪಲಾಗಡ. ಮನಸು ಕೇಳಿದ್ದಿಲ್ಲೆ. ನಿಂಗಳ ಹತ್ರ ಅಲ್ಲದ್ದೆ ಮತ್ತಾರ ಹತ್ರ ಹೇಳಿಗೊಂಬದು ಇದನ್ನೆಲ್ಲ ?

“ತಲೆ ತಿರುಗುದು” ಹೇಳಿಯಪ್ಪಗ ಒಂದು ವಿಷಯ ನೆಂಪಾತು. ತಲೆ ತಿರುಗುತ್ತು ಹೇಳಿಯಪ್ಪಗ ಎನ್ನ ಅಣ್ಣ ತಮಾಷೆ ಮಾಡಿಗೊಂಡು ಇತ್ತಿದ್ದ  : ” ತಲೆಗೆ ” + ” ಶೇಪಿಲಿ ಎರಡು ಅಡಕ್ಕೆ ಹಾಳೆ ಮಡುಗಿ ಕಟ್ಟುತ್ತೆ (ಸದ್ಯ ನೆತ್ತಿಗೆ ಮೊಳೆ ಹೊಡಿತ್ತೆ ಹೇಳಿದ್ದನ್ನಿಲ್ಲೆನ್ನೆ ! ). ಎಂಗಳ ಮನೆಗೊಂದು ಫ್ಯಾನ್ ಆವುತ್ತು”. ಎನ್ನ ಕಷ್ಟ ಎನಗೆ –  ಅವಂಗೆ ತಮಾಷೆ !

ಎನಗೆ 24 ವರ್ಷ ಅಪ್ಪಲ್ಲಿವರೆಗೂ ಈ ಓದದ್ದೆ ಪರೀಕ್ಷೆಗೆ ಹೋದ – ಟೈಂ ಸಾಲೆದ್ದೆ  ಪರದಾಡಿದ “ಪರೀಕ್ಷೆ ಕನಸು” ಪದೇ ಪದೇ ಬಿದ್ದುಗೊಂಡಿತ್ತು ! ಮದುವೆ ಆದ ಮತ್ತೆ (ಎನ್ನ ಮಣಭಾರದ ಜೀವನನ ಪಾಪದ ಗೆಂಡನ ತಲೆಂಗೆ ಹೇರಿದ ಮತ್ತೆ) ಆ ಕನಸು ಕಾಂಬದು ನಿಂದತ್ತು.  ಹಾಂಗೆ ಕನಸು ಕಾಂಬದು ನಿಂಬಲೆ ಆನು ಮಾಡಿದ ಉಪಾಯ ಎಂತದು ಗೊಂತಿದ್ದಾ ? ಸುಮಾರು ಒಂದು ತಿಂಗಳು, ದಿನಾ ರಾತ್ರಿ ಮನಗುವ ಮೊದುಲು “ಎನ್ನ ಜೀವನಲಿ ಎಲ್ಲಾ ಪರೀಕ್ಷೆ ಮುಗುದತ್ತು. ಇನ್ನು ಎನಗೆ ಜೀವನಲಿ ಪರೀಕ್ಷೆ ಬರೆವಲೆ ಇಲ್ಲೆ” ಹೇಳಿ 10 ಸಾರ್ತಿ ಅಂತರ್ ಮನಸ್ಸಿಂಗೆ ಹೇಳಿಗೊಂಡಿತ್ತಿದ್ದೆ.  ಮತ್ತೆ ಹಾಂಗಿಪ್ಪ ಕನಸು ಬೀಳುದು ನಿಂದತ್ತು ! ಇದು ಸತ್ಯದ ಸುದ್ದಿ. ಅವಶ್ಯಕತೆ ಇದ್ದೋವು ಪ್ರಯೋಗ ಮಾಡಿ ನೋಡ್ಲಕ್ಕು !

ಬೆಂಗಳೂರಿಂಗೆ ಬಂದಿಕ್ಕಿ, ಕೆಲಸಕ್ಕೆ ಸೇರಿಯಪ್ಪಗ ಕಟ್ಟುನಿಟ್ಟು ಇಲ್ಲದ್ದ ಆಫೀಸು ಸಿಕ್ಕಿದ್ದು ಎನ್ನ “ಮ-ಮಾ” ದೆವ್ವಕ್ಕೊಂದು ವರದಾನ ಆಗಿಬಿಟ್ಟತ್ತು. “ಬಾಸ್ ಬೈಯಲ್ಲ ಬಿಡು” ಹೇಳಿಕೊಂಡು 10 ಗಂಟೆ ಆಫೀಸಿಂಗೆ 10.30 ಕ್ಕೆ ಹೋಗಿಗೊಂಡಿತ್ತಿದ್ದೆ (ಹನುಮಂತ ನಗರದಿಂದ ಪೀಣ್ಯಕ್ಕೆ). ಆದರೆ ಎ೦ತಕ್ಕೆ ಗೊಂತಿಲ್ಲೆ.  ಆಫೀಸಿಂದ ಮನೆಗೆ ವಾಪಾಸ್ ಬಪ್ಪಗ ಈ “ಮ-ಮಾ” ಜ್ವರ ಇರ್ತಿತ್ತಿಲ್ಲೆ ! ಹೊತ್ತಪ್ಪಗ 5.20 ಅಪ್ಪದನ್ನೆ ಕಾದುಕೂದು 5.30 ಕ್ಕೆಲ್ಲ ಆಫೀಸಿಂದ ಹೊರಟುಗೊಂಡಿತ್ತಿದ್ದೆ. ಹೀಂಗೆ ಮಾಡುಲೆ ಆಫೀಸಿನ ಗಡಿಯಾರಗಳನ್ನೆಲ್ಲ 10  ನಿಮಿಷ ಮುಂದೆ ಇಟ್ಟಿತ್ತಿದ್ದೆಯೊಂ. ಅದು ಎನ್ನ ಮತ್ತು ಆಫೀಸ್ ಬಾಯ್ ಕೈವಾಡ ಹೇಳಿ ಬಾಸ್ ಗೆ ಗೊಂತಿದ್ದಿಕ್ಕು !

ಮದುವೆ ಆದ ಮತ್ತೆ ಈ “ಮ-ಮಾ” ಕಥೆ ಮತ್ತಷ್ಟು ವಿಷಯಗಳಿಗೆ ವಿಸ್ತರಿಸಿತ್ತು. ಇಷ್ಟು ವರ್ಷ ಶಾಲೆ-ಕಾಲೇಜು-ಆಫೀಸ್ ಗೆ ಹೊವ್ತಾ ಇಪ್ಪಗ “ಮತ್ತೆ ಊಟ ಮಾಡಿದರಾತು” ಹೇಳಿಗೊಂಡು, ಅಕೇರಿಯಪ್ಪಗ ಖಾಲಿ ಹೊಟ್ಟೆಲಿ ಹೋಗಿಗೊಂಡಿತ್ತಿದ್ದೆ. ಹಾಂಗೆ ತೆಳ್ಳಂಗುದೆ ಇತ್ತಿದ್ದೆ. ಆನು ಕೊನೇ ಕ್ಷಣಲಿ ಕೆಲಸ ಮಾಡ್ತಾ ಇಪ್ಪದನ್ನ ಮಾಂತ್ರ ನೋಡಿದವು “ಹುಡುಗಿ ಎಂತ ಚುರುಕು” ಹೇಳಿ ಹೊಗಳಿಕೊಂಡು ಇತ್ತಿದ್ದವು ! ಕೇಳಿ ಬಾರೀ ಖುಷಿ ಆಗಿಗೊಂಡಿತ್ತು. ಆದ್ರೆ ಈಗ ? “ಮ-ಮಾ” ಅಂತ ಇಟ್ಟುಕೊಂಡ ಕೆಲಸವನ್ನೆಲ್ಲ ಅನಿವಾರ್ಯವಾಗಿ ಮುಗುಸಿ ಮನಗುಲೆ ಹೋಪಷ್ಟೊತ್ತಿಂಗೆ ರಾತ್ರಿ 11 ಕಳಿತ್ತು.  ಈ ಕೆಲಸ ಮುಗುಸಿಯೆ ಮನಗುಲೆ ಹೋಪದು ಹೇಳಿ ಯೊಚನೆ ಮಾಡಿಗೊಂಡಿಪ್ಪಗಲೆ  “ಇನ್ನೂ ನಿಂದು ಕೆಲ್ಸ ಮುಗುದಿಲ್ಲೆಯೊ ?” ಹೇಳುವ ಪ್ರಶ್ನೆ ಮನಗುವ ಕೋಣೆ ಕಡೇಂದ ತೂರಿ ಬತ್ತು.  ನಾಳೆ ಆದ್ರು ಬೇಗ ಕೆಲಸ ಮುಗುಸಿಕೊಳ್ಳೆಕ್ಕು- ಹೇಳಿ ಗ್ರಹಿಶಿಗೊಂಬದು. ಎಡಿತ್ತೇ ಇಲ್ಲೆ !  ಈ “ಮ-ಮಾ” ದೆವ್ವ ಉದಿಯಪ್ಪಗಿಂದ ರಾತ್ರಿವರೆಂಗೂ ಎನ್ನ ಬೆನ್ನು ಬಿಡ್ತೆ ಇಲ್ಲೆನ್ನೆ ! ವಿಕ್ರಮಾದಿತ್ಯ – ಬೇತಾಳನ ಹಾಂಗಾಯ್ದು ಎನ್ನ ಕತೆ !

ಎನ್ನ ಕತೆ ಹೀಂಗಾತನ್ನೆ ! ನಿಂಗಳ ಕತೆ ಎಂತ ? ನಿಂಗೊಗೆ ಈ ಚಾಳಿ ಇಲ್ಲೆಯಾ ? ಸತ್ಯ ಹೇಳೆಕ್ಕು ಮತ್ತೆ !

ವಿಶೇಷ ಸೂಚನೆ : ಈ ಲೇಖನ ಬರೇ ಕಲ್ಪನೆ. ಆನು ಬಾರೀ…….. ಒಪ್ಪಕ್ಕ. ಆತಾ ! ನಂಬಿ ಪ್ಲೀಸ್……………..

12 thoughts on ““ಮ-ಮಾ ದೆವ್ವವೂ ಆನೂ ..”

  1. ಆನು “ಮ .ಮಾ .”೦ದಲೂ ಒಂದು ಹೆಜ್ಜೆ ಮುಂದೆ — ” ನಾಮಾ” (ನಾಳೆ ಮಾಡುವ) . ಹಾಂಗಾಗಿ ಎನ್ನ ಅವಸ್ತೆ ಮೂರು ನಾಮ !

    1. ಆನು “ಮ .ಮಾ .”೦ದಲೂ ಒಂದು ಹೆಜ್ಜೆ ಮುಂದೆ — ”
      ಹ್ಹ… ಹ್ಹಾ… ನನ್ನ “ಮ-ಮಾ” ದೆವ್ವಕ್ಕೇ ಮಾರ್ಗದರ್ಶಕರು !!! ನನ್ನ “ಮ-ಮಾ” ದೆವ್ವಕ್ಕೆ ಖುಷೀ ಅವುತ್ತಾ ಇದ್ದಡ. ಫ್ರೀ ಆಗಿ ಒಬ್ಬ ಗುರು ಸಿಕ್ಕಿದ ಹೇಳಿ………….

  2. ಮ ಮಾ ಕೊಲೆಯ ಕಾಟ ಎನಗೂ ಇದ್ದಪ್ಪ ತುಂಬಾ !ಹೇಳಿ ಪ್ರಯೋಜನ ಇಲ್ಲೆ ,ಆನುದೇ ಒಪ್ಪಕ್ಕ ಎಲ್ಲ ಮ ಮಾ ದ್ದೇ ಉಪದ್ರ ಎಂತ ಮಾಡುದು !ಎನಗೆ ಮಾತ್ರ ಇದು ಉಪದ್ರ ಕೊಡುದು ಹೇಳಿ ಗ್ರೇಶಿತ್ತಿದೆ ಈಗ ರಜ್ಜ ಸಮಾಧಾನ ಆತು ಸುರೇಖಾ ಚಿಕ್ಕಮ್ಮ

    1. ಎನ್ನ ಈ ಹರಟೆ ಓದಿಯುದೆ -ಇಲ್ಲಿ ಒಪ್ಪ ಕೊಡದೇ ಇಪ್ಪೋವಕ್ಕೆಲ್ಲ “ಮ-ಮಾ” ದೆವ್ವ ಮೆಟ್ಟಿದ್ದು ಹೇಳಿಯೇ ಲೆಕ್ಕ …! ಓದಿ- ಮತ್ತೆ ಒಪ್ಪ ಕೊಟ್ಟರಾತು ಹೇಳಿ ಸುಮ್ಮನೆ ಕೂದಿಕ್ಕು. ನಿಂಗೋ ಅವರೆಲ್ಲರಂಗೆ ಅಲ್ಲ… ನಿಂಗೋ ಬಾರೀ ಒಪ್ಪಕ್ಕ ಆತಾ….

      1. ಛೇ… ಆನು ಓದಿಕ್ಕಿ ಒಪ್ಪ ಮತ್ತೆ ಕೊಡುವ ಹೇಳಿರೆ… ನಿಂಗ ಹೀಂಗೆ ಕೊಕ್ಕೆ ಹಾಕುದಾ….

        1. ನಿಂಗೋ ಹೀಂಗೆ ಯೋಚನೆ ಮಾಡುಗು ಹೇಳಿ ಎನಗೆ ಮೊದಾಲೆ ಗೊಂತಾತು. ಕೊಕ್ಕೆ ಹಾಕಿದ್ದು ಉಪಯೋಗ ಆತನ್ನೆ !

  3. ಆನು ಸತ್ಯವೇ ಹೇಳುದು — ಎನಗೆ ಮೈಗ್ರನ್ ತಲೆ ಬೇನೆ ಬಪ್ಪ ಕ್ರಮ ಇದ್ದು . ಎನಗೆ ತಲೆ ಇದ್ದು ಹೇಳಿ ನೆನಪ್ಪಪ್ಪದೆ ಅಷ್ಟಪ್ಪಗ . ಆ ಸಮಯಲ್ಲಿ ‘ಮ-ಮಾ” ದೆವ್ವಕ್ಕೆ ಶರಣು ಹೋಪದು. ಬೇರೆ ಆರಿಂಗೂ ತಲೆಯೇ ಇಲ್ಲೆಯಾ ?ಹೇಳಿ ಆನು ಆ ಸಮಯಲ್ಲಿ ಗ್ರೇಶುಲಿದ್ದು . (ನಿಂಗಳ ಲೇಖನ ಮೊನ್ನೆ ಕನ್ನಡ ಪ್ರಭಲ್ಲಿ ಬಂದದು ಒಳ್ಳೆದಿತ್ತು )

    1. “ಸತ್ಯವನ್ನೇ ಹೇಳುದು – ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ ” ಹೇಳುವ ನಿಮ್ಮ ಪ್ರಕಾರ ಮೈಗ್ರನ್ ತಲೆ ಬೇನೆ ಇಲ್ಲದೋವೆಲ್ಲ ತಲೆ ಇಲ್ಲದ್ದೋವು ಹೇಳಿಯಾ ? ಹ್ಹ… ಹ್ಹಾ… ಎನಗೆ ಮೈಗ್ರನ್ ಇಲ್ಲೆ … ಹಾಂಗಾಗಿ ತಲೆ ಇಲ್ಲೆ …. ಸದ್ಯ ಸಾಕಪ್ಪ…. ದೇಹದ ಒಂದು ಪಾರ್ಟ್ ಮೈಂಟೆನನ್ಸ್ ತಲೆಬಿಸಿ (?) ತಪ್ಪಿತ್ತು……!!!!
      ಈ-ಕನ್ನಡಪ್ರಭದಲ್ಲಿ ಮಕರಂದ-ಲಹರಿ ಲೇಖನದ ಬಗ್ಗೆ ಅಲ್ಲಿನ ಪ್ರತಿಕ್ರಿಯೆ ವಿಭಾಗಲಿ ನಿಂಗಳ ಅಭಿಪ್ರಾಯ ದಾಖಲಿಸಿದ್ರೆ ಅಲ್ಲಿಯೇ ಉತ್ತರ ಬರಿತ್ತೆ. ಅಲ್ಲಿ ಒಳ್ಳೆ ರೆಸ್ಪಾನ್ಸ್ ಇರ್ತು. ನಿಂಗಳಿಗೂ ಸ್ವಾಗತ…..

  4. ಹೀ೦ಗೆ ಮ೦ಥೆರೆಯು ಮ.ಮ., ಹೇಳಿ ,ಕಲ್ಪಿಸಿಕೊ೦ಡಿದ್ದರೆ ಜಿ೦ಕೆಯ ಮಾಯೆ ಕಾ೦ಬಲೆ ಇತ್ತೋ?.ಕೈಕಾ ರಾಣೀಗೂ ನೀ ಬಾರಿ ಒಪ್ಪಕ್ಕಾ ಹೇಳಿ ಆರೋ ಮ೦ಥರಿಸಿದ್ದು ನೆ೦ಪಾತು.

    1. ಮಂಥರೆ-ದುರ್ಯೋಧನ-ಅಂಬಿಕೆ-ದ್ರೋಣ ಮುಂದೆ ಬಪ್ಪಲೆ ಕಾಯ್ತಾ ಇಪ್ಪ ಶ್ರುತಕೀರ್ತಿ-ನಂದಗೋಪ ಯಾರಿಂಗೂ ಇಲ್ಲದ “ಮ-ಮಾ” ಬೇತಾಳ ಎನ್ನನ್ನೇ ಹಿಡುಕೊಂಬದು ಎಂತಕ್ಕೆ ? “ಮ-ಮಾ” ಬೇತಾಳ ಹೇಳ್ತಾ ಇಪ್ಪದು ” ನೀನು ಬಾರೀ.,,,,, ಒಪ್ಪಕ್ಕಾ… ಅದಕ್ಕೆ ನಿನ್ನ ಹೆಗಲೇರಿ ಕುಯ್ದೆ !!! ” ಹೇಳಿ…. ಅಪ್ಪಾ ? ಎನಗೆ ಗೊಂತ್ತಿಲ್ಲಪ್ಪಾ …….

  5. ಮಣ ಭಾರದ ಜೀವ(ನ)ವ ಆ ಪಾಪದ ಗೆಂಡನ ಮೇಗೆ ಹಾಕಿದಿರನ್ನೆ?ಅವರ ಬಗ್ಗೆ ಅಯ್ಯೋ ಪಾಪ ಹೇಳಿ ಕಂಡತ್ತು.ನಿಂಗೊ ಭಾರೀ ಸಪೂರ ಹೇಳಿ ಪಟ ನೋಡಿರೆ ಗೊಂತಾವುತ್ತು.ಎಮ್ಮೆಯ ಆನೆಯ ಹಾಂಗೆ ಕಂಡ ಪ್ರಸಂಗ ನೆಂಪಾತು.ಇರಳಿ.ತಮಾಷೆಗಷ್ಟೇ.ಶುದ್ದಿ ಲಾಯಕಾಯಿದು.

    1. ನಿಂಗೋ ಸಹಾನುಭೂತಿ ತಿಳಿಸಿದ್ದು ಕೇಳಿ -ಇಲ್ಲಿ ಒಬ್ಬರಿಂಗೆ ಬಾರೀ ಖೊಷೀ ಆಯ್ದು. ಧನ್ಯವಾದ ಹೇಳ್ಲೆ ಹೇಳಿದ್ದವು !!!!
      ಪ್ರತಿಕ್ರಿಯೆಗೊಂದು ಧನ್ಯವಾದಂಗೋ……

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×