Oppanna.com

ಆ ದಿನವೂ ಯಮದೂತರಿಂಗೆ ರಜೆ ಇಲ್ಲೆ…

ಬರದೋರು :   ಗೋಪಾಲಣ್ಣ    on   12/05/2013    3 ಒಪ್ಪಂಗೊ

ಗೋಪಾಲಣ್ಣ

ಉದಿಯಪ್ಪಗ ಟಿ.ವಿ.ಆನ್ ಮಾಡಿತ್ತು ಪುಳ್ಳಿ ಸಿಂಧು.ತಿಮ್ಮಕ್ಕ ಒಂದಾರಿ ಹಣೆಗೆ ಕೈ ಮಡುಗಿ ನೋಡಿದವು. ಅದರಲ್ಲಿ ಎಂತದೊ ಸಿನೆಮ ಬತ್ತು.ಕೆಳ ಬರದ್ದವು-ಮದರ್ಸ್ ಡೇ ಹೇಳಿ.ಆರಾರೊ ಅವರವರ ಅಬ್ಬೆಕ್ಕೊಗೆ ಶುಭಾಶಯ ಬರೆತ್ತವು. ತಿಮ್ಮಕ್ಕಂಗೆ ಒಂದೊಂದು ಅಕ್ಷರ ಜೋಡಿಸಿ ಇಂಗ್ಲಿಷ್ ಓದಲೆ ಬತ್ತು.ಆದರೆ ಪಕ್ಕ ಪಕ್ಕ ಮಿಂಚಿ ಮಾಯ ಅಪ್ಪ ಅಕ್ಷರ ಓದೆಕಾದರೆ ಕಷ್ಟ.ಇದೆಂತಪ್ಪ ಮದರ್ಸ್ ಡೇ ಹೇಳಿರೆ? ಮಗನ ಹತ್ತರೆ ಕೇಳಿದವು. ಮಗ ಶಾಮಣ್ಣ “ಮದರ್ಸ್ ಡೇ-ಅದು ಅಬ್ಬೆಯಕ್ಕಳ ದಿನ” -ಹೇಳಿ ಹೇಳಿದ.
“ಎಂತರ ಹಾಂಗೆ ಹೇಳಿರೆ? ತಿಥಿಯೊ?”-ತಿಮ್ಮಕ್ಕನ ಪ್ರಶ್ನೆ.
“ತಿಥಿ ಅಲ್ಲ ಅಬ್ಬೆ. ಅಮೆರಿಕಲ್ಲಿ ಇಲ್ಯಾಣ ಹಾಂಗಲ್ಲ.ಅಬ್ಬೆಯಕ್ಕೊ ಮಕ್ಕೊ ಒಟ್ಟಿಂಗೆ ಇರುತ್ತವಿಲ್ಲೆ.ಹಾಂಗಾಗಿ ವರ್ಷಲ್ಲಿ ಒಂದು ದಿನ -ಅಬ್ಬೆಯಕ್ಕಳ ಬಗ್ಗೆ ನೆಂಪು ಮಾಡಲೆ ಬೇಕಾಗಿ -ಒಂದು ದಿನ ಇದ್ದು.ಆ ದಿನ ಅಬ್ಬೆಯಕ್ಕೊಗೆ ಏನಾರೂ ಕೊಟ್ಟು ಒಟ್ಟಿಂಗೆ ಇದ್ದು ಬತ್ತವು..”
‘ಅಂದರೆ,ಜೀವತಾರ ಇಪ್ಪವಕ್ಕೂ ತಿಥಿ ಇದ್ದೊ ಅಲ್ಲಿ?”-ನೆಗೆ ಮಾಡಿದವು ತಿಮ್ಮಕ್ಕ.
“ಈ ಅಜ್ಜಿಗೆ ಎಂತಡ? ಎಂತ ಹೇಳಿರೂ ಗೊಂತಾಗ..”ಇವರ ನೆಗೆಂದಾಗಿ ಸಿನೆಮ ನೋಡುತ್ತ ಪುಳ್ಳಿಗೆ ಹರಟೆ ಆಗಿ ಅದು ಹೇಳಿತ್ತು.
ತಿಮ್ಮಕ್ಕ ಅಲ್ಲಿಂದ ಹೆರ ಹಟ್ಟಿಗೆ ಹೋದವು. ಹಟ್ಟಿಲಿ ಎರಡು ಜರ್ಸಿ ದನಂಗಳೂ ಒಂದು ಊರ ದನವೂ ಇದ್ದವು. ತಿಮ್ಮಕ್ಕಂಗೆ ಈಗ ದನಂಗಳ ಚಾಕರಿ ಮಾಡಲೆ ಎಡಿತ್ತಿಲ್ಲೆ.ಆದರೆ ಜಾಲ ಕರೆಂದ ಹುಲ್ಲು ಇದ್ದರ ಕೆರೆಸಿ ದನಕ್ಕೆ ಹಾಕುಗು. ಹಾಳೆಯ ಸಿಗಿದು ದನಂಗೊಕ್ಕೆ ಹಾಕಿ ಸಂತೋಷ ಪಡುಗು. ಕುಂಬಾಳೆಯ ಸಣ್ಣಕೆ ಸಿಗಿದು ಕಂಜಿಗಳ ಬಾಯಿಗೆ ಕೊಡುಗು.ಕಂಜಿಗೊ ತಿಂಬದು ಕಂಡರೆ,ಅವರ ಪುಳ್ಳಿಯಕ್ಕೊ ತಿಂಡಿ ತಿಂಬದರ ನೋಡಿದರೆ ಅಪ್ಪಷ್ಟೇ ಸಂತೋಷ ಅಕ್ಕು ಆ ಅಜ್ಜಿಗೆ!
ಅವರ ಹಟ್ಟಿಲಿ ಇಪ್ಪ ಊರ ದನ -ಅರೆ ಸಿಂಧಿ ಜಾತಿದು.ಅವರ ಪುಳ್ಳಿ ಸಿಂಧು ಹುಟ್ಟುವಂದ ಮೊದಲೇ -ಅವರ ಮಗಂಗೆ ಮದುವೆ ಅಪ್ಪಂದ ಮೊದಲೇ- ಅವರ ಮನೆಲಿ ಇದ್ದ ದನ ಅದು.ಗೌರಿ ಹೇಳಿ ಅದರ ಹೆಸರು. ಆ ದನದ ಅಬ್ಬೆ ಸಹ ಅವರ ಹಟ್ಟಿಲೇ ಇದ್ದದು .ಹಾಂಗೆ ಅದು ತಿಮ್ಮಕ್ಕಂಗೆ ಮನೆಯ ಮಗಳೇ ಆಗಿತ್ತು.ಆ ಕಂಜಿ ಜಾಲಿಲಿ ಆಚೆ ಈಚೆ ಓಡಿಯಪ್ಪಾಗ ,ಅದರ ಹಿಂದೆ ಓಡಿ ಕಟ್ಟಿ ಹಾಕಿದ್ದು,ಲೊಟ್ಟೆ ಕೋಪಲ್ಲಿ ಅದಕ್ಕೆ ಹಾಳೆಯ ತುಂಡಿಲಿ ಶಬ್ದ ಬಪ್ಪ ಹಾಂಗೆ ಬಡುದ್ದು,ಬೈದ್ದು,-ಎಲ್ಲಾ ಅವಕ್ಕೆ ಮೊನ್ನೆ ಮೊನ್ನೆ ನಡೆದ ಹಾಂಗೆ ಕಾಣುತ್ತು.ಗೌರಿಯ ಸುರುವಿಂಗೆ ಗುಡ್ಡೆಗೆ ಬಿಟ್ಟ ದಿನ ತಿಮ್ಮಕ್ಕ ಎಷ್ಟು ಸರ್ತಿ ಮನೆಂದ ಹೆರ ಹೋಗಿ ಗೌರಿ ಬಂತೋ ಹೇಳಿ ನೋಡಿದ್ದವೋ ಏನೊ?ನಾಕು ಗಂಟೆ ಹೊತ್ತಿಂಗೆ ಅದು ಉಳಿದ ದನಂಗಳ ಒಟ್ಟಿಂಗೆ ಬಂದಪ್ಪಾಗ ಅವು ಬೇಗನೆ ಅದಕ್ಕೆ ಅಕ್ಕಚ್ಚು ತಂದು ಮಡುಗಿದವು.ಗೌರಿಯ ಮೋರೆ,ತಲೆ ಉದ್ದಿದವು.ಅವರ ಕಣ್ಣಿಲಿ ನೀರು ಹರಿದತ್ತು!ಮತ್ತೆ,ಅದು ಸುರುವಿಂಗೆ ಕಂಜಿ ಹಾಕಿದ ದಿನ..? ತಿಮ್ಮಕ್ಕ ಇರುಳಿಡೀ ಒರಗದ್ದೆ ಕಾದು ಕೂದು ಉದಯಕಾಲಲ್ಲಿ ಹುಟ್ಟಿದ ಕಂಜಿಯ ಮೋರೆ ನೋಡಿ ಆನಂದಿಸಿದ ಆ ಕ್ಷಣ? ಮತ್ತೆ ಆ ಗೌರಿ ಎಂಟು ಕಂಜಿ ಹಾಕಿದ್ದು. ಅದರ ಕಂಜಿಗೊ ಏವದೂ ಈಗ ಅವರ ಮನೆಲಿ ಇಲ್ಲೆ.ಜರ್ಸಿ ದನಂಗಳ ತೆಗವ ಸಮಯಲ್ಲಿ ಊರದನಂಗಳ ಎಲ್ಲಾ ಮಾರಿ ಆಯಿದು.ಈ ಒಂದು ದನವ ಮಾತ್ರ ಅಬ್ಬೆಯ ಮಾತಿಂಗೆ ಒಪ್ಪಿ ಸಾಂಕುತ್ತಾ ಇದ್ದ ಮಗ ಶಾಮಣ್ಣ.ಈಗ ದನಂಗಳ ಗುಡ್ಡೆಗೆ ಬಿಡಲೆ ಇಲ್ಲೆ. ಎಲ್ಲಾ ಕಡೆ ಮನೆಯೇ.ಬೈಲಿಂದ ಹೆಚ್ಚು ಮನೆಗೊ ಆಯಿದವು ಗುಡ್ಡೆಲಿ.ಮತ್ತೆ ವಿದೇಶಿ ದನಂಗೊ ಊರ ದನದಷ್ಟು ಚುರುಕು ಇಲ್ಲೆ.ಆರಾರೂ ಕದ್ದೊಂಡು ಹೋದರೆ ಭಾರೀ ನಷ್ಟವೂ ಅಕ್ಕು.ಹೀಂಗಾಗಿ ಕಟ್ಟಿ ಹಾಕಿಯೇ ಸಾಂಕೆಕು.
ತಿಮ್ಮಕ್ಕಂಗೆ ಮೂವರು ಮಗಂದಿರು.ಇಬ್ಬರು ದೂರ ಕೆಲಸಲ್ಲಿ ಇದ್ದವು.ಶಾಮಣ್ಣ ಒಬ್ಬನೇ ಮನೆ,ಜಾಗೆ ನೋಡುತ್ತ.ಶಾಮಣ್ಣನ ಅಪ್ಪ ತೀರಿಹೋಗಿ ಹತ್ತು ವರ್ಷ ಆತು.ಶಾಮಣ್ಣಂಗೆ ಕೃಷಿ ಮಾತ್ರ ಅಲ್ಲ, ದನ ಸಾಂಕಿ,ಹಾಲು ಕರೆದು ಮಾರಾಟ ಮಾಡುದೂ ಇದ್ದು. ಊರ ದನ ಆಗಿದ್ದರೆ,ಕರ್ಚು ಕಮ್ಮಿ. ಆದಾಯವೂ ಕಮ್ಮಿ. ಇಷ್ಟು ದನ ಸಾಂಕಲೆ ಆವುತ್ತಿತ್ತೋ ಇಲ್ಲೆಯೊ? ಈಗ ಈ ಗೌರಿ ಮಾತ್ರ ನಿಷ್ಪ್ರಯೋಜಕ ಆಗಿ ಇದ್ದು. ಸುಮಾರು ವರ್ಷ ಹಾಲು ಕೊಟ್ಟ ದನ.ಶಾಮಣ್ಣನ ಮಕ್ಕೊ ಅದರ ಹಾಲು ಕುಡುದೇ ಬೆಳದ್ದದು.ಈಗ ತೊಂಡಿ ಆಯಿದು. ಆದರೆ ಮೋರೆಲಿ ಕಳೆ ಹಾಂಗೇ ಇದ್ದು. ದೊಡ್ಡ ಕೊಂಬಿನ ,ಹಳದಿ ,ಬೆಳಿ ಮಿಶ್ರಿತ ಬಣ್ಣದ ದನ.ದಿನ ಹೋದ ಹಾಂಗೆ ದನ ಸಾಂಕುದು ಕಷ್ಟ ಆವುತ್ತಾ ಇದ್ದು. ಹಿಂಡಿಯ,ಬೈಹುಲ್ಲಿನ ಕರ್ಚು ವಿಪರೀತ ಏರುತ್ತಾ ಇದ್ದು.ಹಸಿ ಹುಲ್ಲು ಕೆರಸಲೆ ಆಳುಗೊ ಸಿಕ್ಕುತ್ತವಿಲ್ಲೆ.ಮನೆಯವಕ್ಕೆ ಒಂದೊಂದು ದಿನ ಕೆರಸಲೆ ಎಡಿಯ-ಆ ದಿನ ಹುಲ್ಲೂ ಇರ.
ಹೀಂಗಾಗಿ,ಆ ದಿನ ಒಂದು ವ್ಯಾಪಾರಿ ಬಂದಪ್ಪಾಗ ಶಾಮಣ್ಣ ಮನೆಂದ ದೂರ ಹೋಗಿ, ಪಿಸ ಪಿಸ ಮಾತಾಡಿ ಬಂದ. ಅದು ತಿಮ್ಮಕ್ಕಂಗೆ ಗೊಂತಿಲ್ಲೆ. ಅಲ್ಲಿಗೆ ಬಂದ ಶಾಮಣ್ಣನ ನೋಡಿ,”ಮಗಾ,ಗೌರಿ ರಜಾ ಬಚ್ಚಿತ್ತೋ ಹೇಳಿ ಕಾಣ್ತು?’-ಹೇಳಿದವು.
“ಮತ್ತೆ,ಅದಕ್ಕೆ ಪ್ರಾಯ ಆತಿಲ್ಲೆಯೊ? ನಿಂದಲ್ಲೇ ನಿಂಬದು ಕೈ ಕಾಲು ಆಡಲೆ ಇಲ್ಲೆ.ಮತ್ತೆಂತಕ್ಕು?”
“ಅಂಬಗ ಅದರ ಒಳಚಾಲಿಲಿ ಒಳಮ್ಮೆ ಹಾಕಲಕ್ಕು’
“ಅಬ್ಬೆ,ನಿನಗೆ ಭ್ರಾಂತೊ? ಈಗ ಒಳಚಾಲಿಲಿ ಎಂತ ಇದ್ದು? ಮುಳಿಯ ಕುತ್ತಿಯೂ ಇರ. ನಾಲ್ಕು ಬಾಡ್ಕಟೆ ತೊಟ್ಟಂಬಾಡಿ ಇಕ್ಕು! ಹಾಂಗಾಗಿ, ಆನೀಗ ಒಂದು ಆಲೋಚನೆ ಮಾಡಿದ್ದೆ..”
-ಅಬ್ಬೆಗೆ ಗೊಂತಾಗದ್ದೆ ವ್ಯಾಪಾರಿಯ ಹತ್ತರೆ ಮಾತಾಡಿರೂ ಮತ್ತೆ ಗೊಂತಾಗದ್ದಿರ! ಹಾಂಗಾಗಿ ಶಾಮಣ್ಣ ವಿಷಯ ತಿಳಿಸಲೆ ಮನಸ್ಸು ಮಾಡಿದ.
“ಎಂತರ?”
‘ಗೌರಿಯ ಆರಿಂಗಾರೂ ಕೊಡುದು ಹೇಳಿ. ಹೆಚ್ಚು ಕ್ರಯ ಸಿಕ್ಕ.ಆದರೆ ಬೈಹುಲ್ಲಿನ ಕರ್ಚು ಒಳಿಗು”
“ಎಂತ ಹೇಳುದು ಮಗ ನೀನು? ಗೌರಿಯ ಕೊಡುದೊ? ಅದಕ್ಕೆ ಇಪ್ಪತ್ತೆರಡು ವರ್ಷ ಆತು. ಇನ್ನು ಚನೆ ಆಗ.ಆರು ತೆಕ್ಕೊಳ್ತವು?”
“ಆರಾದರೆ ಎಂತ ? ಅದು ನಿನಗೆ ಬೇಡ; ನೀನು ಕೇಳುಲಾಗ.”
ತಿಮ್ಮಕ್ಕಂಗೆ ಕಣ್ಣು ಕತ್ತಲೆ ಹೋದ ಹಾಂಗೆ ಆತು. ಬೈಪ್ಪಣೆಲೇ ಕೂದುಬಿಟ್ಟವು.ಕಂಬವ ಗಟ್ಟಿ ಹಿಡ್ಕೊಂಡವು.” ಅಂದರೆ? ಕಸಾಯಿಯವೊ?”ಸ್ವರ ನಡುಗಿತ್ತು.
ಮಗ ತಲೆ ತಗ್ಗಿಸಿದ. ಶಾಮಣ್ಣನ ಹೆಂಡತ್ತಿ ,ಮಕ್ಕೊ- ಸಿಂಧು ಮತ್ತೆ ಸುದೀಪ ಅಲ್ಲಿಗೆ ಬಂದವು.
” ಏ ಮಗ, ನಿನಗೆ ಬುದ್ಧಿ ಇದ್ದೊ? ದನಂಗಳ ಸಾಂಕುವವಕ್ಕೆ ಕೊಡಲಕ್ಕು. ಕಡಿವವಕ್ಕೆ ಕೊಡುತ್ತೆಯೊ? ಇಷ್ಟು ವರ್ಷ ನಮಗೆಲ್ಲಾ ಹಾಲು ಕೊಟ್ಟ ಅಬ್ಬೆ..ಅಬ್ಬೆ..ಇದು. ಇಲ್ಲಿಯೇ ಹುಟ್ಟಿದ ಹಶು. ಅಯ್ಯೊ..”-ಊರಿಡೀ ಕೇಳುವ ಹಾಂಗೆ ಕಿರುಚಿದವು ತಿಮ್ಮಕ್ಕ.
“ಅತ್ತೆ,ಅತ್ತೆ,ಮೆಲ್ಲಂಗೆ..ಮೆಲ್ಲಂಗೆ.. ಹಶು ಸಾಂಕುವ ಕಷ್ಟ ನಿಂಗೊಗೆ ಗೊಂತಿಲ್ಲೆಯೊ? ಗೌರಿಯ ಕೊಡಲೆ ಎಂಗೊಗೂ ಬೇಜಾರ ಆವುತ್ತು.ಆದರೆ ಮಾಡುದೆಂತರ? ಪೂರೈಸೆಕ್ಕನ್ನೆ?”
” ಅಪ್ಪು ಸುನಿತಾ, ಎನಗೆ ಗೊಂತಿದ್ದು.ಈ ದನಕ್ಕೆ ಎಂತ ಬೇಕು? ರಾಶಿ ಹಿಂಡಿ ಬೇಕೊ? ದಿನಕ್ಕೊಂದು ಕಟ್ಟ ಬೈಹುಲ್ಲು ಬೇಕೊ? ರಜ ತೆಳಿ,ಕಾಟು ಸೊಪ್ಪೊ,ಹುಲ್ಲೊ ಹಾಕಿರೆ ಸಾಕು.ಅದಕ್ಕೆ ತಕ್ಕಿತ ಗೊಬ್ಬರವೂ ಕೊಡ್ತಿಲ್ಲೆಯೊ ಇದು? ನೀನು ಎನಗೆ ಹೇಳೆಡ.”-ಅತ್ತೆತನದ ಅಧಿಕಾರ ತೋರಿಸಿ ಅಭ್ಯಾಸ ಇಲ್ಲದ್ದ ತಿಮ್ಮಕ್ಕ ಈಗ ಯಾವ ಮೂಲೆಂದಲೋ ಆ ಭಾವನೆ ಮೇಲೆ ಬಂದು ಜೋರು ಮಾಡಿದವು.
‘ಎನಗೆ ಎಂತ ಇಲ್ಲೆ.ನಿಂಗಳ ಮಗನ ಹತ್ತರೆ ಹೇಳಿ..”-ಸೊಸೆ ಜಾರಿತ್ತು.
“ಎಂತ ಅಜ್ಜಿ,ನಿಂಗೊ ಅಮ್ಮಂಗೆ ಜೋರು ಮಾಡುದು? ದನವ ನಾವು ಕೊಲ್ಲುತ್ತಿಲ್ಲೆ. ನಾವು ಕೊಟ್ಟ ಮೇಲೆ ಬೇರೆ ಆರೋ ಕೊಂದರೆ ನವಗೆಂತ ಪಾಪ ತಟ್ಟುತ್ತು?”-ಸಿಂಧು ಹೇಳಿತ್ತು.
“ಏ ಕೂಸೆ, ನಾವು ಕೊಲ್ಲುತ್ತವಕ್ಕೆ ಕೊಟ್ಟರೆ,ಆ ಪಾಪ ನಮಗೇ.ಗೊಂತಿದ್ದೂ ತಪ್ಪು ಮಾಡಿರೆ ದೋಷ ತಟ್ಟದ್ದಿರ…” ಕಣ್ಣೀರು ಹರಿಸಿದವು ತಿಮ್ಮಕ್ಕ.ಶಾಮಣ್ಣ ಸುಮ್ಮನೆ ನಿಂದಿದ.
ಸುದೀಪ ಪಿಯುಸಿ ಮಾಣಿ. ಮೀಸೆ ಬಪ್ಪ ಪ್ರಾಯ. ” ಅಜ್ಜೀ,ದನವೂ ಒಂದು ಪ್ರಾಣಿ. ಆಡೂ ಒಂದು ಪ್ರಾಣಿ. ಆಡು ಕೋಳಿ ತಿಂಬವರ ನಿಂಗೊ ಬೈತ್ತಿಲ್ಲಿ. ದನ ಕಡಿವದು ಮಾತ್ರ ಏಕೆ ತಪ್ಪು? ಬಾಕಿ ಪ್ರಾಣಿಗೊ ಎಂತ ತಪ್ಪು ಮಾಡಿದ್ದವು? ”
” ಏ ಮಾಣಿ, ಇದರ ಹಾಲು ಕುಡಿದ ನಿನಗೆ ಈ ದುರ್ಬುದ್ಧಿ ಬಂತನ್ನೆ? ದನ ಹೇಳಿರೆ ದೇವರು. ಮೂವತ್ಮೂರು ಕೋಟಿ ದೇವತೆಗೊ ಈ ದನಲ್ಲಿ ಇದ್ದವು.ಗೋಮಾತೆ ಹೇಳಿ ನಮ್ಮ ಗುರುಗೊ ಮೊನ್ನೆ ಮಾಣಿಮಠಲ್ಲಿ ಹೊಗಳಿದ್ದು ಕೇಳಿದ್ದಿಲ್ಲೆಯೊ ನೀನು? ನಿನಗೆ ಎಂತ ಗೊಂತು? ಸುಮ್ಮನೆಯೊ ಮೀಸೆ ಬಪ್ಪಾಗ ದೇಶ ಕಾಣ ಹೇಳುದು?”
ಸುದೀಪಂಗೆ ಕೆರಳಿತ್ತು.”ಎಂತ ಬೇಕಾರೂ ಹೇಳುವಿ ನಿಂಗೊ.ಎಲ್ಲಿದ್ದವು ಇದರಲ್ಲಿ ದೇವತೆಗೊ? ಮಾಂಸ ,ನೆತ್ತರು, ಚರ್ಮ,ಎಲುಬು-ಅಷ್ಟೆ.ದನದ ಮಾಂಸ ತಿಂಬವು ಎಷ್ಟು ಮುಂದೆ ಬಯಿಂದವು! ಮೊನ್ನೆ ಇಂಗ್ಲೆಂಡಿಲಿ ರೋಗ ಬಕ್ಕು ಹೇಳಿ ಹೆದರಿ ದನಂಗಳ ಮಿಶನಿಂಗೆ ಕೊಟ್ಟು ಕೊಂದಿದವು.ಆನು ಚಿತ್ರ ತೋರಿಸುತ್ತೆ ನಿಂಗೊಗೆ! ಎಂತ ಪಾಪ ತಟ್ಟಿದ್ದು ಅವಕ್ಕೆ? ಎಂತದೂ ಇಲ್ಲೆ..ನಿಂಗೊಗೆ ಭ್ರಾಂತು..ಎಲ್ಲಾ ಬಂಡಲ್…” ಹೇಳಿ ಅಜ್ಜಿಯ ನೇರವಾಗಿ ಎದುರಿಸಿದ.
ಈಗ ಶಾಮಣ್ಣ ಮಾತಾಡೆಕ್ಕಾಗಿ ಬಂತು.”ಸುದೀಪಾ,ಒಳ ಹೋಗು. ನಿನಗೆ ಎಂತಗೆ ಅಧಿಕಪ್ರಸಂಗ? ವಿಲಾಯ್ತಿಯವು ಮಾಡಿದ ಹಾಂಗೆ ನಾವು ಮಾಡಲಕ್ಕೊ? ಅಜ್ಜಿಯ ಹತ್ತರೆ ವಿಪರೀತ ಮಾತಾಡ್ತಿಯೊ? ಕಾಲು ಹಿಡಿ ಅಜ್ಜಿಯ..”ಅಪ್ಪ ಹೇಳಿದ ಮಾತಿಂದ ಸುದೀಪಂಗೆ ಅವಮಾನ ಆತು.ಅವ ಕೂಗಿಂಡು ಅಜ್ಜಿಯ ಕಾಲು ಹಿಡಿದ ಹಾಂಗೆ ಮಾಡಿ ಒಳ ಹೋದ.
ಶಾಮಣ್ಣ ಅಬ್ಬೆಯ ಹತ್ತರೆ ಬಂದ-“ಅಬ್ಬೆ,ಮಾಣಿಯ ಮಾತಿಂಗೆ ಬೇಜಾರ ಮಾಡೆಡ.ಅವಂಗೆ ಎರಡು ಬಿಗಿದು ಆನು ಬುದ್ಧಿ ಹೇಳುವೆ. ಈಗ ನೋಡು,ಮಕ್ಕೊಗೆ ಕಲಿವ ಪ್ರಾಯ.ಕರ್ಚು ತುಂಬಾ ಜಾಸ್ತಿ ಆಯಿದು. ಉತ್ಪತ್ತಿ ಸಾಕಾವ್ತಿಲ್ಲೆ.ಹೀಂಗಿಪ್ಪಾಗ ಬತ್ತಿದ ದನವ ಹೇಂಗೆ ಮಡಿಕ್ಕೊಂಬದು? ನಾವು ಬೇರೆ ದನ ತೆಗವೊ.ಬೇಕಾರೆ,ಊರ ತಳಿಯ ದನವನ್ನೇ ತೆಗವೊ. ನೀನು ಹೇಳಿದ್ದು ಸರಿ,ಎನಗೆ ಗೊಂತಿದ್ದು.ಆನು ಒಪ್ಪುತ್ತೆ. ಆದರೆ ಎಂತ ಮಾಡುದು ಆನು?” ಹೇಳಿ ನಯವಾಗಿ ಮಾತಾಡಿ ಅಬ್ಬೆಯ ಒಲಿಸಲೆ ಬಂದ.
ತಿಮ್ಮಕ್ಕ ಕೋಪಂದ-“ಎಂತ ಬೇಕಾರೂ ಮಾಡು. ಈ ಮನೆಲಿ ನಿಂಗೊ ಎಲ್ಲಾ ಒಂದು.ಆನು ಮಾತ್ರ ಬೇರೆ. ನಾಳೆ ಹೇಂಗೋ ಏನೋ? ಈ ಅಬ್ಬೆಗೆ ಪ್ರಾಯ ಆತು- ಇದು ಬೇಡ ಹೇಳಿ ಮಾಡ್ತೀರೋ ಏನೋ?”ಹೇಳಿ ಸುಮ್ಮನೆ ಕೂದವು.
ಅಬ್ಬೆಗೆ ಕೋಪ ಬಯಿಂದು; ರಜಾ ಕಳುದ ಮೇಲೆ ಸಮಾಧಾನ ಅಕ್ಕು-ಎಷ್ಟಾದರೂ ಎನ್ನ ಅಬ್ಬೆ ಅಲ್ಲದೊ?-ಹೇಳಿ ಗ್ರೇಶಿದ ಶಾಮಣ್ಣ ಒಳ ಹೋದ.
ಹೆಂಡತ್ತಿಯ ಹತ್ತರೆ,”ಅಬ್ಬೆ ಎಂತ ಬೈದರೂ ಮಾತಾಡೆಡ.ಮಕ್ಕಳ ಹತ್ತರೆಯೂ ಹೇಳು. ನಾಳೆ ಬೇರೆ ದನ ತಪ್ಪೊ. ಕೋಟೆಬೈಲು ರಾಮಣ್ಣ ಶೆಟ್ಟಿಯ ಹತ್ತರೆ ಊರ ದನ ಇದ್ದಡ,ನೋಡಲೆ ಹೋವ್ತೆ ಮಧ್ಯಾಹ್ನ.ಅಷ್ಟಪ್ಪಾಗ ಅಬ್ಬೆಗೆ ತೆಳಿವಾಡು ಅಕ್ಕು”ಹೇಳಿ ಸೂಚನೆ ಕೊಟ್ಟ.
ತಿಮ್ಮಕ್ಕ ಉರಿಮೋರೆಲಿ ಬಂದು ಚಿಟ್ಟೆಲಿ ಕೂದವು. ತಿಂಡಿಗೂ ಬೈಂದವಿಲ್ಲೆ.ಸಿಂಧು ಮೆಲ್ಲಂಗೆ ಬಂದು-“ಅಜ್ಜಿ,ತಿಂಡಿಗೆ ಬನ್ನಿ” ಹೇಳಿತ್ತು.
“ಎನಗೆ ಬೇಡ; ಚಾಯ ಮಾತ್ರ ಸಾಕು.ಇಲ್ಲಿಯೇ ಕೊಡು”-ತಿಮ್ಮಕ್ಕ ಹೇಳಿ ಅಪ್ಪಾಗ ಸಿಂಧು ಚಾಯ ತಂದು ಕೊಟ್ಟತ್ತು.ಅದರ ಕುಡಿದ ತಿಮ್ಮಕ್ಕ ಅಡಿಮೋರೆ ಹಾಕಿಂಡು ಅಲ್ಲಿಯೇ ಕೂದವು.
ಮನೆಲಿ ಆದ ಚರ್ಚೆಯ ಬಗ್ಗೆ ನೆನೆಸಿ,ನೆನೆಸಿ ತಿಮ್ಮಕ್ಕ ದುಃಖಿಸಿದವು. ಅಲ್ಲ,ದನವ ಕಡಿವಲೆ ಕೊಡುದು ಹೇಳಿದರೆ,ಅರ್ಥ ಇದ್ದೊ? ಕಡಿವವು ತಿಂಬಲೆ ಬೇಕಾಗಿ ಕಡಿವದು,ಅವರ ಲಾಭಕ್ಕೆ ಕಡಿವದು.ಕೊಂದ ಪಾಪ ತಿಂದು ಪರಿಹಾರ ಹೇಳಿ ಗಾದೆಯೇ ಇದ್ದು.ಅವಕ್ಕೆ ದೋಷ ತಟ್ಟ ಆದಿಕ್ಕು.ಆದರೆ ನಾವು ಹಿಂದುಗೊ ,ಅದರಲ್ಲೂ ಜನಿವಾರ ಹಾಕಿದೋರು -ನಮಗೆ ಭಕ್ತಿ ಬೇಡದೊ? ಎಲ್ಲವನ್ನೂ ಪೈಸೆ,ಪೈಸೆ ಹೇಳಿ ಲೆಕ್ಕ ಹಾಕಲೆ ಅಕ್ಕೊ? ಮತ್ತೆ ಸೊಸೆ,ಅದರದ್ದೆ ಮಾತು ನಡವದು ಈ ಮನೆಲಿ-ಎನ್ನದಲ್ಲ.ಮತ್ತೆ ಸುದೀಪ,ಬುದ್ಧಿ ಇಲ್ಲದ್ದ ಮಾಣಿ,ಈಗಳೇ ಹೀಂಗೆ ಮಾತಾಡ್ತ.ಹಶುವಿನ ಅಬ್ಬೆ ಹೇಳಿ ತಿಳಿಯದ್ದವ ಮುಂದೆ ತನ್ನ ಅಬ್ಬೆಯ ನೋಡುಗೊ? ಕೊರಳಿಂಗೊಂದರ ಕಟ್ಟಿರೆ ಅದೇ ಮುಖ್ಯ ಅಕ್ಕು ಅವಂಗೆ.ಮತ್ತೆ ಅಬ್ಬೆ ಅಪ್ಪನ ಗುರ್ತ ಇರ…ಮನೆ ದೇವರ ಪೂಜೆ ಮಾಡ್ತನೊ ಇಲ್ಲೆಯೋ?-ಹೀಂಗೆ ಬೇಡದ್ದರ,ಬೇಕಾದ್ದರ ಎಲ್ಲಾ ಗ್ರೇಶಿಕೊಂಡು ತಲೆಬೆಶಿ ಮಾಡಿಕೊಂಡು ಕೂದವು ತಿಮ್ಮಕ್ಕ.
ಅಷ್ಟಪ್ಪಾಗ ಎರಡು ಜನ ಅಲ್ಲಿಗೆ ಬಂದವು.ಅವರ ಕೈಲಿ ಬಳ್ಳಿ ಇತ್ತು.ಶಾಮಣ್ಣ ಅವರ ಎದುರುಗೊಂಡು ಹಟ್ಟಿಗೆ ಹೋದ.ತಿಮ್ಮಕ್ಕಂಗೆ ಗೊಂತಾತು .ತಲೆ ತಿರುಗಿದ ಹಾಂಗೆ ಆತು. ನಾಲಗೆಲಿ ನೀರ ಪಸೆ ಇಲ್ಲೆ.ಅವರ ಹಲವು ಕಾಲದ ಒಡನಾಡಿಯೂ ಒಂದರ್ಥಲ್ಲಿ ಜೀವವೇ ಆಗಿದ್ದ ಗೌರಿಯ ಇಬ್ಬರು ಕಪ್ಪು ಮನುಷ್ಯರು ಕೊಂಡೋವ್ತಾ ಇದ್ದವು. ಜಾಲಿಲಿ ಇಳಿದ ಗೌರಿ ಅವರ ಕಡೆ ನೋಡಿ ಅಂಬಾ-ಹೇಳಿ ಕೂಗಿತ್ತು. ಇಬ್ಬರು ಯಮದೂತರು ಗೌರಿಯ ಕೊಂಡೋವ್ತವು…ಕೊಂಡೋದವು,ಕೊಂಡೋಗಿಯೇ ಬಿಟ್ಟವು.ಅಯ್ಯೋ..ಇನ್ನು ಆನು ಗೌರಿಯ ಕಾಂಬದು ಎಲ್ಲಿ ? ಆ ಲೋಕಲ್ಲಿಯೊ?-ತಿಮ್ಮಕ್ಕ ಕಲ್ಲಿನ ಹಾಂಗೆ ಕೂದೊಂಡಿದ್ದವು-ಎರಡು ನಿಮಿಷದ ನಂತರ ಅಯ್ಯೋ-ಹೇಳಿ ಮುಂದೆ ಬಗ್ಗಿ ಜಗಲಿಂದ ಕೆಳ ಬಿದ್ದವು.ಮನೆಯವೆಲ್ಲಾ ಓಡಿ ಬಂದವು.ಆದರೆ? ಅಬ್ಬೆಯಕ್ಕಳ ದಿನ ತಿಮ್ಮಕ್ಕನ ದಿನವೇ ಆಗಿಹೋತು!

3 thoughts on “ಆ ದಿನವೂ ಯಮದೂತರಿಂಗೆ ರಜೆ ಇಲ್ಲೆ…

  1. ಸಾಂಕಿದ ದನ ಬತ್ತಿದರೂ ಕೆದೆಂದ ಹೆರ ಹಾಕುಲೆ ಮನಸ್ಸೇ ಬಾರ. ಹಾಂಗಿಪ್ಪಗ ತಿಮ್ಮಕ್ಕಂಗೆ ಃ(

  2. “ಅಬ್ಬೆಯಕ್ಕಳ ದಿನ” ಕಥೆ ತುಂಬಾ ಮನಸ್ಸಿಂಗೆ ತಟ್ಟಿತ್ತು. “ಮದರ್ಸ್ ಡೇ” ಯ ದಿನವೇ “ತಿಮ್ಮಕ್ಕನ ದಿನ”ವೂ ಆದ್ದದು ಕೇಳಿ ತುಂಬಾ ಬೇಜಾರು ಆತು. ನಮ್ಮ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಂತಹ ಕಥೆ. ಗೋಪಾಲಣ್ಣ ಮಾಡಿದ ನಿರೂಪಣೆ ಲಾಯಕಾಯಿದು.
    ಎಲ್ಲೋರು ಓದಿ, ಒಪ್ಪ ಕೊಡಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×