Oppanna.com

ತಬ್ಬಲಿಯು ನೀನಲ್ಲ ಮಗುವೇ..

ಬರದೋರು :   ಶರ್ಮಪ್ಪಚ್ಚಿ    on   09/08/2017    20 ಒಪ್ಪಂಗೊ

2010 ರ ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಸ್ಮಾರಕ ಕಥಾ ಸ್ಪರ್ಧೆಲಿ ದ್ವಿತೀಯ ಬಹುಮಾನ ಗಳಿಸಿದ ಕತೆ.ಹವ್ಯಕ ಭಾಷೆಲಿ ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ  ಬರದ ಸುರುವಾಣ ಕತೆ.

ತಬ್ಬಲಿಯು ನೀನಲ್ಲ ಮಗುವೇ..

ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ
“ಗಂಗೇ..ಬಾ..ಬಾ..ಬಾ..
ಉರುವೆಲಿನ ಹತ್ತರೆ ನಿಂದೊಂಡು ದನವ ದೆನಿಗೇಳುವ ಸೊಸೆಯ ದೆನಿ ಕೇಳಿ ಅಟ್ಟುಂಬೊಳ ಮುಳ್ಳು ಸೌತೆಕಾಯಿ ಕೊರಕ್ಕೊಂಡಿದ್ದ ಅಚ್ಚುಮಕ್ಕ ಕೊರದ ಬಾಗಂಗಳ ಎಲ್ಲ ಪಾತ್ರಲ್ಲಿ ಹಾಕಿ ಮುಚ್ಚಿ ಮಡುಗಿಕ್ಕಿ ,ಮೆಟ್ಟುಕತ್ತಿಯನ್ನೂ ಕರೇಲಿ ಮಡುಗಿ ಹೆರ ಬಂದವು.
” ನೀನೆಂತಕೆ ಇನ್ನೂ ಇನ್ನೂ ಗಂಗೇ..ಗಂಗೇ….ಹೇಳಿ ದೆನಿಗೇಳುದು?ಇನ್ನೆಲ್ಲಿದ್ದು ಗಂಗೆ?” ಅತ್ತೆಯ ದೆನಿ ಕೇಳಿ ತಿರುಗಿ ನೋಡಿತ್ತು.
“ಇಲ್ಲಿಗೆ ಬಂದಪ್ಪಗ ಎನ್ನ ಮನಸು ತಡೆತ್ತಿಲ್ಲೆ ಅತ್ತೇ….ಅದರ ಕಂಜಿಯ ನೋಡುಗ ಸಂಕಟಾವ್ತೆನಗೆ. ಗಂಗೆ ಯೇವಗಾದರೂ ಬಕ್ಕು ಹೇಳಿಯೇ ಆವ್ತು,ಹಾಂಗೊಂದರಿ ದೆನಿಗೇಳಿದ್ದಷ್ಟೆ.”
ದನಗೊ ಹೇಳಿರೆ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಸೊಸೆಯತ್ರೆ ಇನ್ನೆಂತ ಹೇಳಿಯೂ ಗುಣಯಿಲ್ಲೆ ಹೇದು ಜಾನ್ಸಿ ಅಚ್ಚುಮಕ್ಕ ಮಾತು ಬದಲ್ಸಿದವು
“ಮುಳ್ಳು ಸೌತೆ ಕೊರದಾತು.ಬಾಳೆ ಬಾಡ್ಸಿ ಉದ್ದಿ ಮಡುಗಿದ್ದೆ.ನಿನಗೆ ಕಡದಪ್ಪಗ ಆನೊಂದರಿ ತೋಟಕ್ಕೊಗಿ ನಾಕು ಕೂಂಬಾಳೆ  ಹೆರ್ಕಿಂಡು ಬತ್ತೆ.”
“ಶ್ಯಾಮನೂ ಶಶಾಂಕನೂ ಆರು ಗಂಟಗೆತ್ತುತ್ತವಾಡ. ನಿಂಗೊ ತೋಟಕ್ಕೀಗೆಂತಕೆ ಹೋಪದು?”
ಸೊಸೆಯ ಮಾತಿಂಗೆ ಅಚ್ಚುಮಕ್ಕ ಒಂದಾರಿ ತಿರುಗಿ ನಿಂದರೂ “ಆನೀಗ ಬತ್ತೆ. ನಿನಗೆ ಕಡದಪ್ಪಗ ಎತ್ತುವೆ.ಬೇಗ ಬೇಗ ಕೆಲಸ ಮುಗುಶಿ ಒತ್ತರೆ ಮಾಡಿರೆ ಅವೆಲ್ಲ ಬಂದಪ್ಪಗ ಮಾತಾಡಿಂಡು ಕೂಬಲಕ್ಕು” ಹೇಳಿಂಡೇ ಕತ್ತಿ ಸೊಂಟಕ್ಕೆ ಕುತ್ತಿ ಅವರಷ್ಟಕೇ ಮಾತಾಡಿಂಡು ಹೋಪ ಅತ್ತೆಯ ಕಾಂಬಗ ಮಂಜುಳೆಗೆ ನೆಗೆ ಬಂತು.ಅತ್ತೆ ಹೇಳಿದಾಂಗೆ ಬೇಗ ಕೆಲಸ ಮಾಡಿರೆ ಮತ್ತೆ ಸುಲಭ ಹೇಳಿ ಗ್ರೇಶಿಂಡೇ ಒಳ ಬಂದು ಕಡವಲೆ ನೋಡುಗ ಕರೆಂಟ್ ಇಲ್ಲೆ.
“ಥಕ್!!!! ಈ ಹಾಳು ಕರೆಂಟು ಬೇಕಪ್ಪಗ ಇಪ್ಪಲಿಲ್ಲೆ’ ಹೇಳಿ ಮನಸಿಲ್ಲಿಯೇ ಪರಂಚಿಂಡು ಕಡವ ಕಲ್ಲು ತೊಳದು ,ತೊಳದ ಅಕ್ಕಿಯ ಕಲ್ಲಿಂಗೆ ಹಾಕಿ ತಿರುಗುಸುಲೆ ಸುರು ಮಾಡಿತ್ತು. ಕಲ್ಲು ತಿರುಗುವ ಹಾಂಗೆ ಅದರ ಮನಸುದೆ ತಿರುಗುಲೆ ಸುರುವಾತು.

ಗೋವಿಂದಣ್ಣ ,ಅಚ್ಚುಮಕ್ಕ ದಂಪತಿಗೊಕ್ಕೆ ನಾಕು ಜೆನ ಮಕ್ಕೊ.ಹೆರಿ ಮಗ ಶಂಕರ. ಡಿಗ್ರಿ ಕಲ್ತು ಅಪ್ಪನೊಟ್ಟುಂಗೆ ಕೃಷಿ ಕೆಲಸಕ್ಕೆ ಕೈ ಜೋಡಿಸಿದ.ಮತ್ತಾಣ ಇಬ್ರು ಮಾಣ್ಯಂಗಳೂ ಇಂಜಿನಿಯರಿಂಗ್ ಕಲ್ತು ಬೆಂಗ್ಳೂರು ಪೇಟೆಲಿ ಕೆಲಸಲ್ಲಿದ್ದವು. ಅಕೇರಿಯಾಣ ಕೂಸು ಗೆಂಡ ಮಕ್ಕಳೊಟ್ಟಿಂಗೆ ಹೈದರಾಬಾದ್ ಲಿಪ್ಪದು.
ಗೋವಿಂದಣ್ಣಂಗೆ ನಾಕೆಕರೆ ತೋಟವು, ರೆಜಾ ಬೀಜದ ಗುಡ್ಡೆಯೂ ಇಪ್ಪದಷ್ಟೆ. ಅವರ ಬಹು ದೊಡ್ಡ ಆಸ್ತಿ ಹೇಳಿರೆ ದನಗೊ. ಹಟ್ಟಿಲಿಪ್ಪ ಹತ್ತಿಪ್ಪತ್ತು ದನಗಳೂ ಊರದನಗಳೇ ಆದ ಕಾರಣ ಅವಕ್ಕೆ ಸಾಂಕಲೆ ದಣಿಯ ಬಂಙ ಆಗಿಂಡಿತ್ತಿದ್ದಿಲ್ಲೆ.ಉದಿಯಪ್ಪಗ ಹಾಲು ಕರದು ,ತೆಳಿಗೆ ಒಂದಿಷ್ಟು ಹಿಂಡಿ ಹಾಕಿ ಅಕ್ಕಚ್ಚು ಕೊಟ್ಟಿಕ್ಕಿ,ಕೊರಳಿಂದ ಬಳ್ಳಿ ಪೀಂಕುಸಿ ಬಿಟ್ಟರೆ ಎಲ್ಲ ದನಗಳೂ ಒಟ್ಟಿಂಗೆ ಗುಡ್ಡಗೆ ಹೋಗಿ,ಮೇದು ಹೊಟ್ಟೆ ತುಂಬುಸಿಕ್ಕಿ ಬಕ್ಕು.ಕಸ್ತಲಪ್ಪಗ ಮನಗೆ ಬಂದ ಅವರ ಕಟ್ಟಿ ಹಾಕಿ ಕರದು ಒಂದಿಷ್ಟು ಹಿಂಡಿ ಕೊಟ್ಟು ,ಮತ್ತೆ ರೆಜಾ ಹುಲ್ಲೋ,ಮುಳಿಯೋ ಹಾಕಿರೆ ದನಗಳ  ಚಾಕ್ರಿ ಮುಗುತ್ತು. ಹಟ್ಟಿಗೆ ಸೊಪ್ಪು, ಬಜವು ತಪ್ಪಲೆ ಒಂದು ಆಳುದೆ ಕಾಯಮ್ಮಿಂಗೆ ಇದ್ದತ್ತು.
ಮಂಜುಳೆ ಶಂಕರನ ಮದುವೆಯಾಗಿ ಆ ಮನಗೆ ಬಂದ ಮತ್ತೆ ಅಚ್ಚುಮಕ್ಕಂಗೆ ದನಗಳ ಕೆಲಸ ಮತ್ತೂ ಸುಲಭ ಆತು.ಮಂಜುಳೆಗೆ ದನಗೊ ಹೇಳಿರೆ ಸಣ್ಣಾದಿಪ್ಪಗಳೇ ಕೊಂಡಾಟ., ಅಪ್ಪನ ಮನೆಲಿತ್ತಿದ್ದ ಒಂದೆರಡು ಕಂಜಿಗಳನ್ನೇ ಭಾರೀ ಮುದ್ದು ಮಾಡಿಂಡಿದ್ದ ಅದಕ್ಕೆ ಇಲ್ಲಿ ಹಟ್ಟಿ ತುಂಬಾ ದನಗಳ ಕಾಂಬಗ ಭಾರೀ ಕೊಶಿಯಾತು.
ಉದಿಯಪ್ಪಗ ಬೇಗ ಎದ್ದು ಹೊಸ್ತಿಲಿಂಗೆ ಹೊಡಾಡಿ,ಹಟ್ಟಿಗೆ ಹೋಗಿ “ಗಾವೋ ಮೇ ಮಾತರಃ ಸಂತು,ಪಿತರಃ ಸಂತು ಗೋ ವೃಷಾಃ” ಹೇಳಿಂಡೇ ದನಗೊಕ್ಕೆಲ್ಲ ಕೈ ಮುಗುದು,ರಜಾ ತಿಂಬಲೆ ಹಾಕಿಕ್ಕಿಯೇ ಅದು ಒಳಾಣ ಕೆಲಸಕ್ಕೆ ಹೋಪದು.ಅದರ ಈ ಕ್ರಮ ಅತ್ತೆ ಗೆ ಭಾರೀ ಹಿಡಿಸಿತ್ತು.
“ಈಗಾಣ ಕಾಲದ ಕೂಸುಗಳ ಹಾಂಗಲ್ಲ ನಮ್ಮ ಮಂಜುಳೆ,ಅದಕ್ಕೆ ಗುರು,ಹೆರಿಯರು,ದನಗೊ ಹೇಳಿಯೆಲ್ಲ ಗೌರವ ಇದ್ದು” ಹೇಳಿ ಗೆಂಡನತ್ರೂ ಹೇಳಿದವು.
“ಅತ್ತೆಯೋರ ಸೆರಗಿಲ್ಲಿ ಗೆಂಟು ಹಾಕುವ ಮಂತ್ರ ಗೊಂತಿದ್ದಾ ನಿನಗೆ? ಅಬ್ಬಗೆ ಆರನ್ನೂ ಅಷ್ಟು ಬೇಗ ಹಿಡುಶುವ ಕ್ರಮಯಿಲ್ಲೆ. ಆದರೆ ಈಗ ಸೊಸೆಯನ್ನೇ ಹೊಗಳೆಕಾರೆ ಎಂತೋ ಇದ್ದು..ಎಂತರ ಎ‌ನಗೂ ರಜಾ ಹೇಳಿ ಕೊಡು” ಹೇಳಿ ಅದರ ಶಂಕರನೂ ತಮಾಷೆ ಮಾಡಿಂಡಿತ್ತಿದ್ದ.
ಅಬ್ಬೆಪ್ಪನ ಗೌರವಲ್ಲಿ ನೋಡಿಕೊಂಡು,ಅವನ ತಂಗೆ,ತಮ್ಮಂದ್ರತ್ರೆ ಪ್ರೀತಿಲಿ ವರ್ತಿಸಿಂಡು,ಮನಗೆ ಬಪ್ಪ ನೆಂಟ್ರುಗೊಕ್ಕೆಲ್ಲ ಬೇಕು ಬೇಕಾದಾಂಗೆ ಮಾಡಿ ಕೊಟ್ಟು ಎಲ್ಲರ ಮನಸು ಗೆದ್ದ ಹೆಂಡತಿಯ ಬಗ್ಗೆ ಅವಂಗು ಅಭಿಮಾನವೇ..
ಎರಡು ಪುಳ್ಳಿಯಕ್ಕಳೂ ಹುಟ್ಟಿದ ಮತ್ತೆ ಗೋವಿಂದಣ್ಣ,ಅಚ್ಚುಮಕ್ಕ ಇಬ್ರೂ ಮನೆ ವ್ಯವಹಾರ ಎಲ್ಲ ಮಗ,ಸೊಸೆಗೆ ಒಪ್ಪುಸಿಕ್ಕಿ ಅವರೊಟ್ಟಿಂಗೆ ಕೊಶೀಲಿತ್ತಿದ್ದವು.
ವರುಷ ಉರುಳಿದ ಹಾಂಗೆ ದನಗಳ ಸಾಂಕಾಣ ಬಂಙ ಅಪ್ಪಲೆ ಸುರುವಾತು. ಈಗ ಗುಡ್ಡಗೆ ಮೇವಲೆ ಹೋಪ ದನಗೊಕ್ಕೆ ಮದ್ಲಾಣಾಂಗೆ ತಿಂಬಲೆ ಎಂತದೂ ಸಿಕ್ಕದ್ದಪ್ಪಲೆ ಸುರುವಾತು. ಹೆಚ್ಚಿನವುದೆ ಕಾಡು ಕಡುದು,ಗುಡ್ಡೆ ಗರ್ಪಿ ರಬ್ಬರು ಸೆಸಿ ನೆಟ್ಟ ಮತ್ತೆ ಹುಲ್ಲು, ಸೊಪ್ಪು ಸರಿಯಾಗಿ ಸಿಕ್ಕುದೇಂಗೆ? ಅಂದರೂ ಯೇವಗಳೂ ಗುಡ್ಡಗೆ ಮೇವಲೆ ಹೋಗಿ ಅಭ್ಯಾಸ ಆದ ದನಗೊಕ್ಕೆ ಹಟ್ಟಿಲಿ ಕಟ್ಟಿ ಹಾಕಿರೆ ಹಿತ ಆಗಿಂಡಿತ್ತಿದ್ದಿಲ್ಲೆ. ಇಡೀ ದಿನ ಕೆಲಕ್ಕೊಂಡಿಪ್ಪ’ ಅಂತೇ ಕೈ ಕಾಲು ಹಂದುಲಾದರೂ ಆತು ‘ಹೇಳಿ ಗುಡ್ಡಗೆ ಬಿಟ್ಟು ಕೊಂಡಿತ್ತಿದ್ದವು.ಕೆಲವು ಗಡಸುಗಳ ಎಲ್ಲಾ ಸಾಂಕಲೆ ಬೇಕು ಹೇಳಿದವಕ್ಕೆ  ಅಂತೇ ಕೊಟ್ಟ ಶಂಕರ.
ಮಂಜುಳೆಗೆ ಮಾತ್ರ ಹಟ್ಟಿಲೇ ಹುಟ್ಟಿ ಬೆಳದ ದನಗಳ ಆರಿಂಗೂ ಕೊಡ್ಲೆ ಮನಸು ಬಪ್ಪಲಿಲ್ಲೆ. ಕಣ್ಣಿಂಗೆ ಕಾಂಬ ದೇವರುಗೊ ಹೇಳಿರೆ ದನಗೊ ಹೇಳಿಯೇ ಅದರ ಲೆಕ್ಕ.
ಅವಕ್ಕೆಂತಾರು ರಜಾ ಹೆಚ್ಚು ಕಮ್ಮಿ ಆದರೂ ತನಗೇ ಆದಷ್ಟು ಸಂಕಟ ಪಡುವ ಜೆನ ಅದು.ಎಲ್ಲರತ್ರೆ ಮಾತು ಕಡಮ್ಮೆ ಆದರೂ ಅದಕ್ಕೆ ದನಗಳತ್ರೆ ಎಲ್ಲಾ ಪಂಚಾಯಿತಿಕೆಯೂ ಇದ್ದು. ಮನುಶ್ಯರತ್ರೆ ಹೇಳುವ ಹಾಂಗೆ ಎಲ್ಲಾ ಶುದ್ದಿಯನ್ನೂ ಅವರತ್ರೆ ಹೇಳುಗದು.
“ಸುಬ್ಬೀ ..ಕೆಂಪೀ..ಆನಿಂದು ಅಪ್ಪನಮನೆಗೆ ಹೋವ್ತೆ. ಅತ್ತೆ ಕರವಲೆ ಬಪ್ಪಗ ಬೊಡುಶೆಡಿ.ನಿಂಗೊ ತಡವು ಮಾಡಿ ಬಂದರೆ ಅವಕ್ಕೆ ಕಷ್ಟ ಅಕ್ಕೂಳಿ ಗೊಂತಿದ್ದನ್ನೇ..”
“ನಾಳಂಗೆ ಒಂದು ಮದುವಗೋಪಲಿದ್ದು.ಉದೆಕಾಲಕ್ಕೆ ನಿಂಗೊ ಅಕ್ಕಚ್ಚು ಕುಡಿತ್ತಿಲ್ಲೆ ಹೇಳಿ ಹಠ ಮಾಡ್ಲಾಗ”
ಇಷ್ಟು ಮಾತ್ರಲ್ಲ ಮನಗೆ ಆರಾರು ನೆಂಟ್ರು ಬಂದರೆ,ನೆರೆಕರೆಲಿ ಎಂತಾರು ವಿಶೇಷ ಇದ್ದರೆ,ಹೆಚ್ಚೆಂತಕೆ ಅದಕ್ಕೊಂದು ಸೀರೆ ತೆಗದರೂ ದನಗಳತ್ರೆ ಹೇಳೆಕದಕ್ಕೆ.
ಶಂಕರ, ಮಕ್ಕೊ ಕೆಲವು ಸರ್ತಿ ಈ ವಿಶಯಲ್ಲಿ ಅದರ ತಮಾಶೆ ಮಾಡುದೂ ಇದ್ದು.ಅದಕ್ಕೆ ಅದರ ನೆಗೆ ಮಾತ್ರ ಉತ್ತರ ‌….
ಅವರ ತೋಟಕ್ಕಾಗಲಿ,ನೆಟ್ಟಿ ಸೆಸಿಗೊಕ್ಕಾಗಲಿ ರಸಗೊಬ್ಬರ ,ಕೀಟ ನಾಶಕ ಹಾಕುವ ಕ್ರಮವೇ ಇತ್ತಿದ್ದಿಲ್ಲೆ. ಎಲ್ಲದಕ್ಕೂ ಹಟ್ಟಿ ಗೊಬ್ಬರ, ಗೋಮೂತ್ರ….ಹೀಂಗೆ ದನಗಳ ಉತ್ಪನ್ನಂಗಳನ್ನೇ ಹಾಕಿಂಡಿದ್ದ ಕಾರಣ ಒಳ್ಳೆಯ ಬೆಳೆಯೂ ಸಿಕ್ಕಿಂಡಿತ್ತಿದ್ದು.ಊರ ದನಗಳ ಹಾಲು,ತುಪ್ಪ ಉಪಯೋಗಿಸುವ  ಕಾರಣವೇ ಮಕ್ಕಳು ತುಂಬಾ ಆರೋಗ್ಯವಾಗಿಪ್ಪದು ಹೇಳುವ ಗಟ್ಟಿ ನಂಬಿಕೆ ಮಂಜುಳೆಯದ್ದು.
ಹೀಂಗಿಪ್ಪಗ ಒಂದು ದಿನ ಪೇಪರ್ಲಿ ಬಂದ ಒಂದು ಶುದ್ದಿ ನೋಡಿ ಮಂಜುಳೆಯ ಎದೆ ಒಡದಾಂಗಾತು.ದುಃಖವೂ,ಹೆದರಿಕೆಯೂ ಒಟ್ಟಿಂಗೆ ಆತು.”ರಾಜಾಸ್ಥಾನಂದ ತಂದ ಅಪರೂಪದ ಜಾತಿಯ ಸೀತೆ ಹೇಳುವ  ಹೆಸರಿನ ದನವ ಇರುಳು ಕಟ್ಟಿ ಹಾಕಿದಲ್ಲಿಂದ ಕದ್ದು ಕೊಂಡು ಹೋದ ಶುದ್ದಿ ಆಗಿದ್ದತ್ತು ಅದು.ಬೆಳೀ ಬಣ್ಣದ ಉದ್ದ ಕೊಂಬಿನ ಆ ದನದ ಪಟವೂ ಇದ್ದತ್ತದರ್ಲಿ.
“ಅಯ್ಯೋ ದೇವರೇ..ಇಷ್ಟು ಚೆಂದದ ದನವ ಆರಪ್ಪಾ ಕದ್ದು ಕೊಂಡು ಹೋದ್ದು?”ಆ ದನಕ್ಕೆ ಯೇವ ಅಪಾಯವೂ ಆಗದ್ದಿರಳಿ ಹೇಳಿ ದೇವರತ್ರೆ ಬೇಡಿ ಕೊಂಡದು ಮಾತ್ರ ಅಲ್ಲ,ಹಟ್ಟಿಲಿ ಹೋಗಿ ದನಗಳತ್ರೂ ಜಾಗ್ರತೆ ಹೇಳಿತ್ತು.
“ಇನ್ನು ಮುಂದೆ ನಿಂಗೊ ಎಲ್ಲ ಒಟ್ಟಿಂಗೆ ಹೋಗಿ ಒಟ್ಟಿಂಗೆ ಬರೆಕು.ಜೆತೆ ತಪ್ಪಿ ಅಲ್ಲಿ ಇಲ್ಲಿ ಮುಂದೆ ಮುಂದೆ ಹೋಗೆಡಿ,ಗುರ್ತಯಿಲ್ಲದ್ದವೆಲ್ಲ ಹತ್ತರೆ ಬಂದರೆ ಮೈ ಮುಟ್ಲೆ ಬಿಡೆಡಿ,ಹೆಚ್ಚೊತ್ತು ಗುಡ್ಡೆ ತಿರುಗಿಂಡು ಮನಗೆ ಬಪ್ಪಗ ಕತ್ತಲೆ ಮಾಡೆಡಿ,ಕಾಲ ಒಳ್ಳೆದಿಲ್ಲೆ”
ದನಗೊಕ್ಕೆ ಅಷ್ಟು ಜಾಗ್ರತೆ ಹೇಳಿರೂ ಅದುದೆ ಅಷ್ಟೇ ಹೆದರಿಕೆಲಿ ದನಗಳ ಕಾವಲೆ ಸುರು ಮಾಡಿತ್ತು.ಒಂದು ದನ ಬಪ್ಪಲೆ ರಜಾ ತಡವಾದರೆ ಸಾಕು ಅದಕ್ಕೆ ಗಾಬರಿ ಅಕ್ಕು. ಮನೆಯ ಮುಂದೆ ಇಪ್ಪ ಒರುಂಕಿನ ತಲೆಲಿ ನಿಂದು ಕೊಂಡು ಎಲ್ಲಾ ದನಗಳ ಹೆಸರು ಹಿಡುದು ದೆನಿಗೇಳುಗದು.ಮಂಜುಳೆಯ ಸ್ವರ ಕೇಳಿರೆ ಸಾಕು ಎಲ್ಲಾ ದನಗಳೂ “ಅಂಬಾ….ಅಂಬಾ….” ಹೇಳಿ ಕೆಲಕ್ಕೊಂಡು ಬೇಗ ಬೇಗ ಬಂದು ಕೊಂಡಿತ್ತಿದ್ದವು.

ಹಾಂಗಿದ್ದರೂ ಸೋಣೆ ತಿಂಗಳಿನ ಜೋರು ಮಳೆ ಬಪ್ಪ ಒಂದು ದಿನ ಅವರ ಗಂಗೆ ಹೇಳುವ ದನ ಹಟ್ಟಿಗೆ ಬಯಿಂದೇಯಿಲ್ಲೆ. ಕಂಜಿ ಹಾಕಿ ಹದಿನೈದೇ ದಿನ ಆದ್ದಷ್ಟೇ ಆದ ಕಾರಣ ಅದು ಯಾವಗಳೂ ಒಳುದ ದನಗಳಿಂದ ರಜ ಬೇಗವೇ ಬಂದು ಕೊಂಡಿದ್ದತ್ತು.ಇರುಳು ಏಳು ಗಂಟೆಯಾದರೂ ಅದರ ಕಾಣದ್ದಿಪ್ಪಗ ಮಂಜುಳೆಯ ಎದೆಲಿ ಪಿಟಿಪಿಟಿ ಅಪ್ಪಲೆ ಸುರುವಾತು. ಗೆಂಡ ತೋಟಂದ ಬಂದ ಕೂಡ್ಲೇ ಹೇಳಿತ್ತು.
” ಇದಾ..ನಮ್ಮ ಗಂಗೆ ಇನ್ನೂ ಬಯಿಂದಿಲ್ಲೆ. ಒಂದಾರಿ ಗುಡ್ಡೆಲೆಲ್ಲಾದರೂ ಬಾಕಿಯಾಯಿದಾ ನೋಡಿಕ್ಕಿ ಬತ್ತೀರಾ?”
“ಈ ಮಳಗೆ ಆನೆಲ್ಲಿ ಹುಡುಕ್ಕುದು?” ಹೇಳಿರೂ ಶಂಕರ ಅಂಬಗಳೇ ಕೊಡೆಯೂ,ಲೈಟೂ ತೆಕ್ಕೊಂಡು ಹೆರಟ‌.
ಅಂವ ಗಂಗೆಯ ಹುಡುಕ್ಕಲೆ ಹೋದ ಮತ್ತೆ ಮಂಜುಳೆ ಹಟ್ಟಿಗೆ ಬಂತು. ಗಂಗೆಯ ಕಂಜಿ ಗೋಪಿಯ ಹತ್ತರೆ ನಿಂದು ಅದರ ಮೈ ಉದ್ದಿತ್ತು.ಆ ಪುಟ್ಟು ಕಂಜಿ ಹಾಲಿಂಗೆ ಬೇಕಾಗಿ ಬಳ್ಳಿ ಎಳದೂ ಎಳದೂ “ಉಂಬೇ..ಉಂಬೇ..ಹೇಳಿ ಕೂಗುದು ಕಂಡು ಅದರ ಕಣ್ಣಿಲ್ಲಿಯೂ ನೀರು ತುಂಬಿತ್ತು.ಬೇರೆ ದನದ ಹಾಲು ಪಾತ್ರಕ್ಕೆರದು ಕುಡುಶುಲೆ ನೋಡಿರೂ ಎಡ್ತಿದಿಲ್ಲೆ ಅದಕ್ಕೆ‌.
‘ ದೇವರೇ ಗಂಗೆಗೆ ಏವ ಅಪಾಯವೂ ಆಗದ್ದಿರ್ಲಿ,ಅದು ಆದಷ್ಟು ಬೇಗನೆ ಮನಗೆ ಬಪ್ಪ ಹಾಂಗಾಗಲಿ’ ಹೇಳಿ ಪ್ರಾರ್ಥಿಸಿಂಡು ಹಟ್ಟಿಲೇ ಕೂದತ್ತದು.
ಗಂಗೆ ಅವರ ಪ್ರೀತಿಯ ದನ.ಊರ ದನ ಆದರೂ ಇದು ರಜಾ ಎತ್ತರ ಹೆಚ್ಚು. ಅದರ ಕೊಂಬುದೆ ಎತ್ತುಗಳ ಹಾಂಗೆ ಉದ್ದ.ಎಷ್ಟು ದನಗಳೊಟ್ಟಿಂಗೆ ಇದ್ದರೂ ಗಂಗೆ  ” ಹ್ಹಂಬಾ….”ಹೇಳಿ ಕೆಲವ ಒಂದು ದೆನಿಯೇ ಬೇರೆ .ಅದರ ಗೊಂತಿಪ್ಪವಕ್ಕೆ ಆ ಸ್ವರ ಕೇಳಿರೆ ಅದು ಗಂಗೆ ಕೆಲವದೂ ಹೇಳಿ ಗೊಂತಕ್ಕು.ಅದರ ಗಾಂಭೀರ್ಯವೇ ಹಾಂಗಿಪ್ಪದು.
ಅದರ ಅಬ್ಬೆ ದುರ್ಗೆ ಅದು ಆರು ತಿಂಗಳ ಕಂಜಿಯಾಗಿಪ್ಪಗಳೇ ಪೊಟ್ಟು ಬಾವಿಗೆ ಬಿದ್ದು ಸತ್ತ ಮತ್ತೆ ಮಂಜುಳೆಯೇ ಗಂಗೆಯ ಕೊಂಡಾಟಲ್ಲಿ ಸಾಂಕಿದ್ದದು.ಅದು ಸುರು ಕಂಜಿ ಹಾಕಿಯಪ್ಪಗ ಸೊಸೆಯ ಸಂಭ್ರಮ ಕಂಡು ಅಚ್ಚುಮಕ್ಕನೂ  ಅದರ ಕುಶಾಲು ಮಾಡಿದ್ದವು.
“ಮಂಜುಳೆಗೆ ಮಗಳ ಬಾಣಂತನದ ಗೌಜಿ” ಹೇಳಿ.ಈಗಾಣದ್ದು ಅದರ ಎರಡನೇ ಕಂಜಿ.ಕಪ್ಪು ಬಣ್ಣದ ಅದರ ಮೋರೆಲಿ ಬೆಳೀ ಬೊಟ್ಟಿಪ್ಪ ಗೋಪಿಗೂ ಅದೇ ಗಾಂಭೀರ್ಯ!!.
ಗಂಗೆಯ ಚೆಂದ ಕಂಡ ಕೆಲವು ಜೆನ “ಈ ದನವ ಕೊಡ್ತೀರಾ?” ಹೇಳಿ ಗೋವಿಂದಣ್ಣನತ್ರೆ ಕೇಳಿತ್ತವು.
“ಇಲ್ಲೆಪ್ಪಾ..ಏವ ದನ ಕೊಟ್ಟರೂ ಗಂಗೆಯ ಮಾತ್ರ ಕೊಡ್ಲಿಲ್ಲೆ,ಎಂಗಳ ಹಟ್ಟಿಯ ಪೊಲುಸು ಇದು”.
ಗಂಗೆಯ ಹುಡ್ಕಲೆ ಹೋದ ಶಂಕರಂಗೆ ಅಲ್ಲೆಲ್ಲ ಎಷ್ಟು ಹುಡ್ಕಿರೂ ಅದರ ಸುಳಿವೂ ಸಿಕ್ಕಿದ್ದಿಲ್ಲೆ.
” ಗಂಗೇ….ಗಂಗೇ….ಹೇಳುವ ಅವನ ದೆನಿ ಅವಂಗೇ ಪ್ರತಿಧ್ವನಿ ಆಗಿ ಕೇಳಿತ್ತಷ್ಟೆ ವಿನಃ ಬೇರೆಂತದೂ ಕಂಡಿದಿಲ್ಲೆ.
ಗೆಂಡನ ಕಂದಿದ ಮೋರೆ ನೋಡುಗಳೇ ಮಂಜುಳೆಗೆ ಗಂಗೆ ಸಿಕ್ಕಿದ್ದಿಲ್ಲೆ ಹೇದು ಅಂದಾಜಾತು.ಅಂದರೂ ಎಂತದೂ ಕೇಳಿದ್ದಿಲ್ಲೆ. ಅದಕ್ಕೆ ಬೇಜಾರಪ್ಪದು ಬೇಡಾದು ಜಾನ್ಸಿ ಅವನೇ
“ಈ ಮಳಗೆ ಅದು ಜೆತೆ ತಪ್ಪಿ ಬೇರೆ ದನಗಳೊಟ್ಟಿಂಗೊ ಮತ್ತೊ ಹೋಯಿದಾದಿಕ್ಕು.ನಾಳಂಗುದಿಯಪ್ಪಗ ಬಕ್ಕು” ಹೇಳಿದ.
ಮಂಜುಳೆ “ಎನ್ನ ಸಮದಾನಕ್ಕೆ ಬೇಕಾಗಿ ಹಾಂಗೆ ಹೇಳುದಲ್ಲದಾ?” ಹೇಳುವ ಭಾವಲ್ಲಿ ಅವನ ಮೋರೆ ನೋಡಿಯಪ್ಪಗ ತಿರುಗಿ ಅದರ ಮೋರೆ ನೋಡುವಷ್ಟು ಧೈರ್ಯ ಬಾರದ್ದೆ ಅಂವ ದೃಷ್ಟಿ ಕೆಳ ಮಾಡಿದ.

ಮರದಿನ ಮಾಂತ್ರ ಅಲ್ಲ, ಒಂದು ವಾರ ಬಿಡದ್ದೆ ಹುಡ್ಕಿರೂ ಗಂಗೆ ಸಿಕ್ಕಿದ್ದೇಯಿಲ್ಲೆ.ಗಂಗೆ ಕಾಣೆಯಾದ ಸಮಯಲ್ಲೇ ಅವರ ಆಚೀಚ  ಮನೆಗಳಿಂದಲೂ ಕೆಲವು ದನಗೊ ಕಾಣೆಯಾಯಿದವು ಹೇಳಿ ಗೊಂತಾತು.ಅಚ್ಚುಮಕ್ಕನೂ,ಗೋವಿಂದಣ್ಣನೂ ಹಾಂಗಿದ್ದ ಶುದ್ದಿಗಳ ಆದಷ್ಟು ಸೊಸೆಯ ಕೆಮಿಗೆ ಬೀಳದ್ದಾಂಗೆ ಜಾಗ್ರತೆ ಮಾಡಿದವು.ಆದರೂ ಎಷ್ಟಾದರೂ ನೆರೆಕರೆ ಶುದ್ದಿಗೊ ಮುಚ್ಚಿ ಮಡುಗುಲೆಡಿತ್ತೋ?ಇಲ್ಲಿಯೂ ಹಾಂಗೇ ಆತು.ಶುದ್ದಿ ಗೊಂತಾದ ಮಂಜುಳೆ ಕೂಗಿಂಡು ಹಟ್ಟಿಗೆ ಓಡಿ ಹೋಗಿ ಅಲ್ಲಿಪ್ಪ ಗೋಪಿಯ ಕೊರಳಪ್ಪಿ ಕಣ್ಣೀರು ಹಾಕಿತ್ತು “ನಿನ್ನ ಅಬ್ಬೆಯೂ ನಿನ್ನ ಬಿಟ್ಟಿಕ್ಕಿ ಹೋತನ್ನೇ..ಎಂಗೊ ಎಲ್ಲೋರೂ ಅದರ ಹಾಲು ಕರದುಂಡಿದೆಯ,ಹಾಂಗಾಗಿ ಅದು ಎಂಗೊ ಎಲ್ಲೋರ ಅಬ್ಬೆ ಅದು.ಹಾಂಗಿದ್ದ ಅಬ್ಬೆಯ ಒಳುಶಿಕೊಂಬಲೆಡಿಯದ್ದ ಎಂಗೊ ಬದ್ಕಿ ಎಂತ ಪ್ರಯೋಜನ….!!?”
ಅಚ್ಚುಮಕ್ಕ ಹಟ್ಟಿಗೆ ಬಂದು ಸೊಸೆಯ ಸಮದಾನ ಮಾಡಿದವು “ನೀನು ಹೀಂಗೆ ಕೂಗುಲಾಗ.ಮದ್ಲಾಣ ಕಾಲಲ್ಲಿಯೂ ಗುಡ್ಡಗೆ ಬಿಟ್ಟ ದನಗಳ ಹುಲಿಯೋ,ಕತ್ತೆಪ್ಪಿಲಿಯೋ ಹಿಡ್ಕೊಂಡು ಹೋಪದಿದ್ದು.ಈಗ ಆ ಕೆಲಸ ಮನುಶ್ಯರೇ ಮಾಡ್ತವು. ಒಟ್ಟಾರೆ ನವಗದರ ಕರದುಂಬ ಯೋಗಯಿಲ್ಲೆ ಅಷ್ಟೇ”.
” ಮದ್ಲಾಣ ಕಾಲದ ಹುಲಿಯಾದರೂ ಪುಣ್ಯಕೋಟಿಯ ಸತ್ಯ ನಿಷ್ಠೆ ಕಂಡು ಅದರ ತಿನ್ನದ್ದೆ ಬಿಟ್ಟಿದು.ಈ ಪಾಪದ ದನಗೊ ಆರಿಂಗೆ ಎಂತ ಹಿಂಸೆ ಕೊಟ್ಟಿದವೂಳಿಲ್ಯಾ?ಆ ಹುಲಿಂದಲೂ ಕ್ರೂರಿಗೊ ಈಗಾಣ ಮನುಶ್ಯರೆ ಆಗಿ ಹೋದವನ್ನೇ….”ಮಂಜುಳೆಗೆ ಸಂಕಟ ತಡವಲೇ ಎಡಿತ್ತಿಲ್ಲೆ.
“ನೀನು ಹಾಂಗಿದ್ದದರ ಎಲ್ಲ ಗ್ರೇಶಿ ಕೂಗೆಡ.ಗಂಗೆಗೆ ಎಂತಾಗಿರ.ಅದು ಬಕ್ಕು” ಅತ್ತೆಯ ಮಾತು ಮಂಜುಳೆಗೆ ಒಂದಾರಿ ಸಮದಾನ ತಂದರೂ ಅದರ ಒಳ ಮನಸು ಕಾಣೆಯಾದ ದನಗಳನ್ನೇ ನೆಂಪು ಮಾಡಿಂಡಿದ್ದತ್ತು.

ಮತ್ತೆ ಒಂದು ವಾರ ಅದು ದನಗಳ ಗುಡ್ಡಗೆ ಬಿಟ್ಟಿದೇಯಿಲ್ಲೆ.ಉದಿಯಪ್ಪಗ ಬೇಗ ಎದ್ದು ಅಡಿಗೆ ಮಾಡಿಕ್ಕಿ ಗೆಂಡನೊಟ್ಟಿಂಗೆ ತೋಟಕ್ಕೆ ಹೋಗಿ ದನಗೊಕ್ಕೆ ತಿಂಬಲೆ ಹುಲ್ಲು ತಂತು.ಮಧ್ಯಾಹ್ನ ಮತ್ತೆ ಸೊಪ್ಪು ತಂದು ಕೊಚ್ಚಿ ಹಾಕಿ ಅವರ ಅಡಿ ಕಿರಿಂಚಿ ಆಗದ್ದಾಂಗೆ ಮಾಡಿತ್ತು.ಸೊಸೆ ಹೀಂಗೆ ಬಙ ಬಪ್ಪದು ಕಂಡು ಅತ್ತಗೂ,ಮಾವಂಗೂ ದುಃಖ ಬಂತು.
“ಇಷ್ಟು ದನಗಳ ಹಟ್ಟಿಲೇ ಕಟ್ಟಿ ಹಾಕಿ ಸಾಂಕುದು ಬಙವೇ. ಆರಾರು ಸಾಂಕುವವು ಇದ್ದರೆ ಒಂದೆರಡು ದನಗಳನ್ನಾದರು ಕೊಡ್ಲಾವ್ತಿತು. ಈಗ ಆಳುಗಳು ಸರಿಕಟ್ಟು ಸಿಕ್ಕದ್ದಿಪ್ಪಗ ಹುಲ್ಲು, ಸೊಪ್ಪು ತಪ್ಪದೇ ದೊಡ್ಡ ಕಷ್ಟಾತನ್ನೇ..”
ಮಂಜುಳೆ ಅದಕ್ಕೆ ಒಪ್ಪಿದ್ದಿಲ್ಲೆ. “ಅದು ಮಾಂತ್ರ ಬೇಡ ಮಾವ,ನಮ್ಮ ಹಟ್ಟಿಯ ದನಗಳ ಆರಿಂಗಾರು ಕೊಡುದು ಹೇಳಿರೆ ನವಗೆ ಮಾತ್ರಲ್ಲ,ಆ ದನಗೊಕ್ಕೂ ಬೇಜಾರಕ್ಕು ಮಾವ..ಎನ್ನ ಅಜ್ಜಿ ಇಪ್ಪಗ ಹೇಳಿಂಡಿತ್ತವು”ಹಟ್ಟಿಲಿ ದನಗೊ ಇದ್ದರೆ ಹೇಳುಗಾಡ,ಮನೆ ಒಡೆಯಂಗೆ ಬಪ್ಪ ಆಪತ್ತು ಎಂಗೊಗೆ ಬರ್ಲಿ “ಅದು ನೆಂಪಾದರೆ ಯೇವ ದನವನ್ನೂ ಕೊಡ್ಲೆ ಮನಸು ಬತ್ತಿಲ್ಲೆ ಮಾವ..ಈಗೊಂದರಿ ನಮ್ಮ ಕೈಂದ ಸಾಂಕಲೆ ಕೊಂಡೋವ್ತೆ ಹೇಳಿ ಕೊಂಡೋಗಿ ಅದರ ಕಟುಕರಿಂಗೆ ಕೊಟ್ರೆ? ನಮ್ಮ ದೇವರ ನೈವೇದ್ಯಕ್ಕೆ ನಮ್ಮ ದನದ ಹಾಲೇ ಆಗೆಡದಾ? ಆನು ಹೀಂಗೆ ಹೇಳಿ ನಿಂಗೊ ಮಾಡುವ ಕೆಲಸವ ತಳ್ಪಿದ್ದಲ್ಲ ಮಾವ,ಎನ್ನ ಮನಸಿಂಗೆ ಬಂದದರ ಹೇಳಿದ್ದಷ್ಟೆ.”
ಸೊಸೆಯ ಮಾತು ಕೇಳಿ ಗೋವಿಂದಣ್ಣನ ಮನಸು ತುಂಬಿ ಬಂತು. “ಇಲ್ಲೆ, ನಿನ್ನ ಮನಸಿಂಗೆ ಬೇಜಾರಪ್ಪ ಯೇವ ಕೆಲಸವನ್ನೂ ಆನು ಮಾಡ್ತಿಲ್ಲೆ.. ”
ಅಲ್ಲಿಗೆ ದನಗಳ ಕೊಡುವ ಅವರ ಆಲೋಚನೆ ಅರ್ಧಲ್ಲಿ ನಿಂದತ್ತು.
ಆದರೂ ಒಂದು ವಾರ ಹಟ್ಟಿಲಿ ಕಟ್ಟಿ ಹಾಕಿಯಪ್ಪಗ ಅವರ ದನಗೊಕ್ಕೆಲ್ಲ ಬೊಡುದತ್ತು. ಸರಿಯಾಗಿ ಹುಲ್ಲು ತಿನ್ನದ್ದೆ,ಅಕ್ಕಚ್ಚು ಕುಡಿಯದ್ದೆ,ಕರವಲೂ ನೇರ್ಪ ಬಿಡದ್ದಿಪ್ಪಗ ಮಂಜುಳೆಗೂ ಎಂತ ಮಾಡುದು ಹೇಳಿ ಅಂದಾಜಾಗದ್ದಾಂಗಾತು.” ಕಟ್ಟಿ ಹಾಕಿ ತಿಂಬಲೆ ಹಾಕಿರೆ ಇವಕ್ಕೆನ್ನತ್ರೆ ಹಿತ ಆವ್ತಿಲ್ಲೆ ಕಾಣ್ತು, ಗುಡ್ಡಗೆ ಬಿಡ್ತಿಲ್ಲೇಳಿ ಕೋಪವೋ ಏನೋ?ಹೀಂಗೆ ಬೊಡುಶಿರೆ ಇವರ ಗುಡ್ಡಗೆ ಬಿಡದ್ದೆ ಬೇರೆ ದಾರಿಯೇ ಕಾಣ್ತಿಲ್ಲೆನಗೆ”

ಶಂಕರಂಗೂ ಹೆಂಡತಿಯ ಮಾತೇ ಸರಿ ಹೇದು ಕಂಡತ್ತು. ಮರುದಿನಂದಲೇ ಎಲ್ಲಾ ದನಗಳೂ ಬಂಧನಂದ ಬಿಡುಗಡೆ ಆದವರಾಂಗೆ ಹೋಪದು ಕಾಂಬಗ ಮಂಜುಳೆಗೂ ಕೊಶಿಯಾತು.
ಆರು ಗಂಟೆಯಪ್ಪಗ ದನಗೊ ಬಾರದ್ರೆ ಅದು ಉರುವೆಲಿನ ಹತ್ರೆ ನಿಂದು ಎಲ್ಲಾ ದನಗಳದ್ದೂ ಹೆಸರಿಡುದು ದೆನಿಗೇಳುಗು.ಹಾಂಗೆ ದೆನಿಗೇಳುಗ ಅವರೊಟ್ಟಿಂಗೆ ಗಂಗೆಯ ಹೆಸರೂ ಇಕ್ಕು. ಆದರೆ ಅದಕ್ಕೆ ಓಗೊಟ್ಟು “ಹ್ಹಂ….ಬಾ….” ಹೇಳಿ ಉತ್ತರ ಕೊಡ್ಲೆ ಗಂಗೆ ಮಾಂತ್ರ ಬಯಿಂದೇಯಿಲ್ಲೆ‌.
“ಏವಾಗ ಈ ಭೂಮಿಲಿ ಗೋವುಗೊಕ್ಕು,ಬ್ರಾಹ್ಹರಿಂಗೂ ರಕ್ಷಣೆ ಸಿಕ್ಕದ್ದಾವ್ತೋ ಅಂಬಗಳೇ ಈ ಕಲಿಯುಗದ ಅಂತ್ಯ ಸುರುವಾತು ಹೇಳಿ ಕಾಣ್ತು. ಒಂದು ಹೊಡೆಂದ ಗೋಹತ್ಯೆ ನಿಷೇಧ ಮಾಡೆಕು,ದನಗಳ ರಕ್ಷಣೆ ಮಾಡೆಕು ,ಎಲ್ಲರೂ ಅವರವರ ಮನೆಲಿ ದನಗಳ ಸಾಂಕುವ ಹಾಂಗಾಯೆಕು ಹೇದು ಹೇಳ್ತಾ ಇಪ್ಪಗಳೇ, ಇನ್ನೊಂದೆಡೆಲಿ ಹೀಂಗಿರ್ತ ಪಿಶಾಚಿಗಳ ಹಾಂಗಿದ್ದವೂದೆ ಇರ್ತವನ್ನೇ..ಇವೆಲ್ಲ ಯೇವ ರೌರವ ನರಕಕ್ಕೆ ಹೋಪಲೆ ಬೇಕಾಗಿ ಹೀಂಗೆಲ್ಲ ಮಾಡ್ತವೋ ದೇವರೇ….”
ಇಷ್ಟುದಿಯಪ್ಪಗಳೇ ಅತ್ತೆ ಇದಾರತ್ರೆ ಹೀಂಗೆ ಮಾತಾಡುದು ಹೇಳಿ ಅಡಿಗೊಳ ಮಸರು ಕಡಕ್ಕೊಂಡಿದ್ದ ಮಂಜುಳೆ ಅಲ್ಲಿಂದಲೇ ಮೆಲ್ಲಂಗೆ ಬಗ್ಗಿ ನೋಡಿತ್ತು.ಚಾವಡಿಲಿ ಅತ್ತೆಯೂ,ಮಾವನೂ ಅಂದ್ರಾಣ ಪೇಪರುದೆ ಕೈಲಿಡುದು ಎಂತೋ ಆಲೋಚನೆ ಮಾಡುವಾಂಗೆ ಕಂಡತ್ತದಕ್ಕೆ‌.
ಎಂತ ವಿಶಯ ಆದಿಕ್ಕಪ್ಪಾ ಹೇದು ಅಂದಾಜಾಯಿದಿಲ್ಲೆ ಅದಕ್ಕೆ. ಬೇಗ ಬೇಗ ಮಾಡಿಂಡಿದ್ದ ಕೆಲಸವ ಒತ್ತರೆ ಮಾಡಿಕ್ಕಿ ಹೆರ ಬಂದು ಅಲ್ಲಿಪ್ಪ ಪೇಪರು ಬಿಡಿಸಿ ನೋಡುತ್ತು.ಅದರ್ಲಿ ಬಂದ ಒಂದು ಶುದ್ದಿ ನೋಡುಗ ಅದಕ್ಕೆ ಕಣ್ಣು ಕಸ್ತಲೆ ಆದಾಂಗಾತು.
‘ಒಂದು ದನವ ನಾಲ್ಕೈದು ಜೆನ ದುಷ್ಕರ್ಮಿಗೊ ಅಟ್ಟಿಸಿಂಡು ಬಂದು ಒಂದು ದೇವಸ್ಥಾನದ ಆವರಣಲ್ಲಿಪ್ಪ ಕಂಬಕ್ಕೆ ಕಟ್ಟಿ ಹಾಕಿ ಪೈಶಾಚಿಕವಾಗಿ,ಅತ್ಯಂತ ಅಮಾನವೀಯ ರೀತಿಲಿ ಕೊಲೆ ಮಾಡಿದ ಶುದ್ದಿ ಆಗಿದ್ದತ್ತು ಅದು.’ದನವ ಕಟ್ಟಿ ಹಾಕಿ ಅದರ ಹೊಟ್ಟೆ ಸೀಳಿ,ಕರುಳು ಬಗದು…..!!!!!!!!….!! ಮತ್ತಾಣ ಶುದ್ದಿ ಓದಲೆಡಿಯದ್ದೆ ಮಂಜುಳೆ ಪೇಪರಿಡ್ಕಿಕ್ಕಿ ಕೂಗಿಂಡೇ ಹಟ್ಟಿಗೋಡಿತ್ತು.ಅಲ್ಲಿಪ್ಪ ಪುಣ್ಯಕೋಟಿ, ಕಪಿಲೆಯರ ಕೊರಳಪ್ಪಿ ಕಣ್ಣೀರಾಕಿತ್ತು.
“ಗೋಮಾತೇ….ನಿಂಗಳ ರಕ್ಷಣೆ ಮಾಡೆಕಾದವ್ವೇ ಭಕ್ಷಣೆ ಮಾಡಿರೆಂತ ಮಾಡುದು?ಎಂಗಳ ಹಾಂಗಿದ್ದವಕ್ಕೆ ನಿಂಗಳ ರಕ್ಷಿಸಿಕೊಂಬಲೆಡಿತ್ತಿಲ್ಲೆನ್ನೇ..!! ನಿಂಗಳ ಹಾಲು ಕುಡುದ್ದಕ್ಕೆ ಅಬ್ಬೆಯ ಹಾಂಗೆ ನೋಡೆಕಾದ ನಿಂಗಳ ನೆತ್ತರು ಕುಡಿವಲೂ ಹೇಸುತ್ತವಿಲ್ಲೆನ್ನೇ ಈ ಪಿಶಾಚಿಗಳ ಹಾಂಗಿಪ್ಪವು….!! ನಿಂಗಳ ಆಕ್ರಂದನ ಅವರ ಹೃದಯಕ್ಕೆ ತಟ್ಟುತ್ತಿಲ್ಲೆಯೋ ಹಾಂಗಾರೆ..!! ಇಂದು ನಿಂಗಳ ವಂಶ ಅಳಿತ್ತಾ ಹೋವ್ತರೂ, ನಿಂಗಳ ಬದುಕೇ ಕಷ್ಟಲ್ಲಿದ್ದರೂ ನಿಂಗಳ ಕಣ್ಣೀರಿಂಗೆ ಬೆಲೆ ಇಲ್ಲದ್ದ ಹಾಂಗಾತನ್ನೇ..ಅಯ್ಯೋ.. ದೇವರೇ….!! ಮದಲಿಂಗೆ ವಸಿಷ್ಠರ ಆಶ್ರಮಲ್ಲಿಪ್ಪ ” ಶಬಲೆ”ಯ ಕೌಶಿಕರಾಜ ಕದ್ದೊಂಡು ಹೋಪಗ ಆ ದನದ ಮೈಂದ ಸೈನಿಕರು ಹುಟ್ಟಿ ರಾಜನ ಸೇನೆಯ ಇಡೀ ನಾಶ ಮಾಡಿದ್ದವಾಡ.ನಿಂಗೊಗೂ ಹಾಂಗಿದ್ದ ಶಕ್ತಿ ಬೇಕಾತು..ನಿಂಗೊಗೆ ಹಿಂಸೆ ಕೊಡ್ಲೆ ಬಂದವು ನಿಂಗಳ ಮುಟ್ಟಿದ ಕೂಡ್ಲೆ ಅವರ ತಲೆ ಸಾವಿರ ಹೋಳಾಗಿ ಹೋಯೆಕಾತು.ಆ ಶಕ್ತಿ ನಿಂಗೊಗಿರ್ತಿದ್ದರೆ ಎಂಗೊ ಎಲ್ಲ ಇದ್ದು ಕೂಡ ನಿಂಗೊ ಹೀಂಗೆ ತಬ್ಬಲಿಗಳಾಂಗೆ ಕಷ್ಟ ಪಡೆಕಾಗಿ ಬತ್ತಿತಿಲ್ಲೆ.ನಿಂಗಳ ರಕ್ಷಣೆ ಮಾಡೆಕಾರೆ ಶ್ರೀಕೃಷ್ಣ ದೇವರೇ ಇನ್ನೊಂದರಿ ಹುಟ್ಟಿ ಬರೆಕಾವ್ತಾ ಕಾಣ್ತು……!!!! “

ಹಟ್ಟಿಗೆ ಯೇವದೋ ಕೆಲಸಕ್ಕೆ ಬಂದ ಶಂಕರ ಮಂಜುಳೆ ಹೀಂಗೆ ಕೂಗುದು ಕಂಡು ಹತ್ರಂಗೆ ಬಂದ.ದನಗೊ ಎಲ್ಲ ಎಂತದೋ ಅಪ್ಪಲಾಗದ್ದದು ಆದ ಹಾಂಗೆ “ಹ್ಹುಂ..!! ಹ್ಹುಂ..!!” ಹೇಳಿಂಡಿತ್ತವು.ಅವರ ಆ ಸ್ಥಿತಿ ಕಂಡು ಅವಂಗೂ ಎದೆಲಿ ಸಂಕಟಾತು.ಮೆಲ್ಲಂಗೆ ಹೆಂಡತಿಯ ದೆನಿಗೇಳಿದ
” ಇದರಾಂ….ನೀನು ಹೀಂಗೆ ಕಣ್ಣೀರು ಹಾಕುದರ ಮನೆಲಿ ಆರಿಂಗೂ ನೋಡ್ಲೆಡಿತ್ತಿಲ್ಲೆ.ನಿನ್ನ ದುಃಖ ಎಂಗೊಗೂ ಅರ್ಥಾವ್ತು. ಆದರೂ ನಾವು ಈ ವಿಶಯಲ್ಲಿ ಎಷ್ಟು ಅಸಹಾಯಕರು ಹೇಳಿ ನಿನಗೂ ಗೊಂತಿದ್ದು. ನವಗೆಡಿಗಾದ ಪ್ರಯತ್ನ ಎಲ್ಲಾ ಮಾಡಿ ಆಯಿದು. ಇನ್ನೆಲ್ಲ ದೇವರ ಕೈಲಿಪ್ಪದು”
ಅದೆನಗೂ ಗೊಂತಿದ್ದು. ಅಂದರೂ ಭೂಮಿಲಿಪ್ಪ ಮನುಶ್ಯರಿಂಗೆಲ್ಲ ದನಗೊ ಹೇಳಿರೆ ಪೂಜ್ಯ ಭಾವನೆ ಬಂದಿದ್ದರೆ ,ಎಲ್ಲೋರಿಂಗೂ ಗೋ ಸೇವೆ ಮಾಡೆಕು,ಗೋ ಮಾತೆಯ ರಕ್ಷಣೆ ಮಾಡೆಕೂಳುವ ಮನಸ್ಸಾಗಿದ್ದರೆ ನಮ್ಮ ದನಗೊಕ್ಕೆಲ್ಲ ಈ ಅವಸ್ಥೆ ಬತ್ತೀತಾ?ನಿರ್ಗತಿಕರ ಹಾಂಗೆ ಕಸಾಯಿಖಾನೆಲಿ ಕಟುಕರ ಕ್ರೂರ ಹಿಂಸೆ ತಡವಲೆಡಿಯದ್ದೆ ನರಳಿ ನರಳಿ ಸಾಯೆಕಾವ್ತಿತಾ? ಈಗ ನೋಡಿ ಎಷ್ಟು ಜೆನ ದನ ಸಾಂಕುವವು ಇದ್ದವು ಅವೆಲ್ಲೋರೂ ಮುದಿ ದನಗಳ,ಗೊಡ್ಡು ದನಗಳ,ಹೋರಿಗಳ ಎಲ್ಲ ಕಟುಕರಿಂಗೆ ಮಾರುದಲ್ಲದಾ?ಅಲ್ಲಿ ಇವು ಅಬ್ಬೆಪ್ಪ ಇಲ್ಲದ್ದ ತಬ್ಬಲಿಗಳಾಂಗೆ ಅವರ ಬಾಳುಕತ್ತಿಗೆ ತಲೆಯೊಡ್ಡೆಕಾಗಿ ಬತ್ತನ್ನೇದು ಗ್ರೇಶುಗ ಎನಗೆ ಬದ್ಕುದೇ ಬೇಡ ಕಾಣ್ತು “
“ನೀನು ಹಾಂಗೆ ಎಂತಾರು ಹೇಳೆಡ.ನಿನ್ನ ಹಾಂಗಿದ್ದ ಹೆಮ್ಮಕ್ಕೊ ಪ್ರತಿ ಮನೆಲೂ ಇದ್ದರೆ ಸಾಕು, ಆ ಮನೆಲಿಪ್ಪ ಏವ ದನಗಳೂ ತಬ್ಬಲಿಗೊ ಅಲ್ಲ..ಈಗಲೇ ಕೆರೆ ತೋಡಿ ಮುಂಗಿ ಮೀಯೆಕು ಹೇಳಿರೆ ಆವ್ತಾ..ಒಂದಲ್ಲ ಒಂದು ದಿನ ನೀನು ಹೇಳುವ ಹಾಂಗೆ ಗೋ ಹತ್ಯೆಯೂ ನಿಲ್ಲುಗು,ಎಲ್ಲೋರೂ ದನಗಳ ಸಾಂಕುವ ಪುಣ್ಯ ದಿನಂಗಳೂ ಬಕ್ಕು ,ಈಗ ನೀನು ಒಳಾಂಗೆ ಬಾ..ನಾಡ್ತಿಂಗೆ ಹಬ್ಬ ಬಂತಿಲ್ಯಾ? ಸಾಮಾನೆಂತಾರು ಆಯೆಕಾರೆ ನೋಡಿ ಹೇಳು. ಅಬ್ಬೆ ನಿನ್ನತ್ರೆ ಕೇಳ್ಲೆ ಹೇಳಿದವು”
ಗೆಂಡನ ಮಾತಿಂಗೆ ಸುಮ್ಮನೆ ತಲೆಯಾಡ್ಸಿಕ್ಕಿ ,ಸೆರಗಿಲ್ಲಿ ಕಣ್ಣು,ಮೋರೆ ಉದ್ದಿಕ್ಕಿ ಒಳ ಹೋತು ಮಂಜುಳೆ.
ಅವರ ಮನೆಲಿ ಪ್ರತಿ ವರ್ಷವೂ ದೀಪಾವಳಿ ಹಬ್ಬಕ್ಕೆ ಭಾರೀ ಗೌಜಿ. ಅದರ್ಲೂ ಗೋಪೂಜೆ ದಿನ ಮತ್ತೂ ವಿಶೇಶ. ಎಲ್ಲಾ ದನಗಳನ್ನೂ ಮೀಶಿ,ಅವರ ಕೊರಳಿಂಗೆ ಹೂಗಿನಮಾಲೆ , ಮೋರಗೆ ಕುಂಕುಮ ಬೊಟ್ಟೆಲ್ಲ ಹಾಕಿ ಅಲಂಕಾರ ಮಾಡಿ ಆರತಿಯೆತ್ತಿ ,ಪೂಜೆ ಮಾಡಿಕ್ಕಿ ಎಲ್ಲಾ ದನಗೊಕ್ಕೂ ಮುಳ್ಳು ಸೌತೆ ಕೊಟ್ಟಿಗೆಯನ್ನೂ ಕೊಡುವ ಕ್ರಮ.ಗೋಪೂಜೆ ದಿನ ಶ್ಯಾಮನೂ,ಶಶಾಂಕನೂ ಹೆಂಡತ್ತಿ ಮಕ್ಕಳೊಟ್ಟಿಂಗೆ ಬಪ್ಪ ಕಾರಣ ಮನೆ ಮಕ್ಕೊಗೂ ಹಬ್ಬ ಹೇಳಿರೆ ಸಂಭ್ರಮ. ಪಟಾಕಿ,ದುರುಸು,ನಕ್ಷತ್ರ ಕಡ್ಡಿ ,ನೆಲಚಕ್ರ ಎಲ್ಲ ಹೊತ್ತುಸಿ ದೊಡ್ಡವು ಕೂಡ ಸಣ್ಣ ಮಕ್ಕಳ ಹಾಂಗೆ ಕೊಶಿ ಪಟ್ಟುಕೊಂಡಿತ್ತಿದ್ದವು.
ಆದರೆ ಈ ಸರ್ತಿ ಮಾಂತ್ರ ಹಬ್ಬ ಹತ್ತರೆ ಬಂತೂಳಿ ಆರಿಂಗೂ ಸಂತೋಶವೇಯಿಲ್ಲೆ.ಗಂಗೆ ಇಲ್ಲದ್ದೆ ಇಡೀ ಮನೆಯೇ ಸೂತಕದ ಮನೆಯ ಹಾಂಗೆ ಇತ್ತಿದ್ದು.ಅಂದರೂ ಯೇವಗಾಣ ಕ್ರಮ ತಪ್ಪುಸುದು ಬೇಡ ಹೇದು ಮನಸಿಲ್ಲದ್ದ ಮನಸಿಂದಲೇ ಎಲ್ಲೋರೂ ಹಬ್ಬದ ಏರ್ಪಾಡು ಮಾಡಿದವು.ಮಂಜುಳೆ ದಿನಕ್ಕೆರಡು ಮೂರು ಸರ್ತಿಯಾದರೂ ಉರುವೆಲಿನ ಹತ್ತರೆ ನಿಂದು “ಗಂಗೇ….ಗಂಗೇ….” ಹೇಳಿ ದೆನಿಗೇಳಿಂಡೇ ಇತ್ತಿದ್ದು.ಅದರ ಮನಸಿಂಗೆ ಬೇನೆ ಮಾಡುದು ಬೇಡಾಳಿ ಮನೆಲಿ ಆರೂ ಎಂತದೂ ಹೇಳಿದ್ದವಿಲ್ಲೆ.

“ಇದೆಂತ ನೀನು ಕರೆಂಟಿದ್ದರೂ ಕಲ್ಲಿಲ್ಲಿ ಕಡದ್ದು?” ಅತ್ತೆಯ ದೆನಿ ಮಂಜುಳೆಯ ಆಲೋಚನೆಯ ಸರಪ್ಪುಳಿಯ ತುಂಡು ಮಾಡಿತ್ತು.
“ಓ..ಕರೆಂಟೆಷ್ಟೊತ್ತಿಂಗೆ ಬಂದದು?ಆನು ಕಡವಲೆ ಹೆರಟಪ್ಪಗ ಇತ್ತಿದ್ದೇಯಿಲ್ಲೆ.ಇನ್ನು ಹೇಂಗಾರು ಇದು ಬಾಚಲಾತು” ಹೇಳಿಂಡೇ ಅದು ಬೇಗ ಕೆಪ್ಪಟೆಲಿ ಅರುದ ಕಣ್ಣೀರಿನ ಸೆರಗಿನ ಕೊಡೀಲಿ ಉದ್ದಿಕ್ಕಿ ಹಿಟ್ಟು ಬಾಚಿತ್ತು. ಅಚ್ಚುಮಕ್ಕಂಗೆ ಸೊಸೆಯ ಕಣ್ಣೀರು ಕಾಂಬಗ ಗೆಂಟ್ಲು ಕಟ್ಟಿದ ಹಾಂಗಾತು. ಹಾಂಗೆ ಹೆಚ್ಚು ಮಾತಾಡದ್ದೆ ಬೇಗ ಬೇಗ ಕೊಟ್ಟಿಗೆ ಮಡುಸುಲೆ ಸೇರಿದವು. ಅಟ್ಟಿನಳಗೆಲಿ ಮಡುಗಿ ಸಜ್ಜಿಲಿ ಕಿಚ್ಚಾಕಿಕ್ಕಿ ಹೆರ ಬಪ್ಪಗ ಮಕ್ಕೊ ಶಾಲೆಂದ ಬಂದವು.ಅವಕ್ಕೆ ಕಾಪಿ,ತಿಂಡಿ ಎಲ್ಲ ಕೊಟ್ಟಿಕ್ಕಿ ಹಟ್ಟಿಗೆ ಬಂತು ಮಂಜುಳೆ. ಹಬ್ಬ ಆದ ಕಾರಣ ಅಂದು ದನಗಳ ಗುಡ್ಡಗೆ ಬಿಟ್ಟಿದವಿಲ್ಲೆ.ಆ ದಿನ ಕಸ್ತಲಪ್ಪಗ ಹಾಲು ಕರವ ಕ್ರಮವೂ ಇಲ್ಲದ್ದ ಕಾರಣ ಕಂಜಿಗಳ ಎಲ್ಲ ಅಗಿವಲೆ ಬಿಟ್ಟತ್ತದು.ಎಲ್ಲಾ ಕಂಜಿಗಳೂ ಕೊಣುಕ್ಕೊಂಡು ಅವರವರ ಅಬ್ಬೆಕ್ಕಳತ್ರಂಗೆ ಹೋಪದು ಕಾಂಬಗ ಮಂಜುಳೆಯ ಮನಸು ತುಂಬಿ ಬಂತು.
“ನಿನಗೆ ಆನು ತೆಳಿ ತತ್ತೆ ಪುಟ್ಟೂ……” ಗೋಪಿಯ ಹತ್ತರೆ ನಿಂದು ಅದರ ಕೊರಳಪ್ಪಿ ಕೊಂಡಾಟ ಮಾಡಿತ್ತದು. ಅದರ ಅಬ್ಬೆ ಕಾಣೆಯಾಗಿ ಎರಡು ತಿಂಗಳು ಕಳುದರೂ ಮಂಜುಳೆಯ ಪ್ರೀತಿಯ ಸಾಂಕಾಣಲ್ಲಿ ಉರುಟುರುಟಾಗಿ,ಚೆಂದ ಚೆಂದಕೆಯಿದ್ದತ್ತದು. ಗೋಪಿಗೆ ತೆಳಿ ತಪ್ಪಲೆ ಮನೆಯೊಳಾಂಗೆ ಹೆರಟ ಮಂಜುಳೆಗೆ ಹೆರ ಉರುವೆಲ ಬಾಗಿಲಿಂದ “ಹ್ಹಂ….ಬಾ….” ಹೇಳಿ ದನವೊಂದು ಕೆಲವ ಶಬ್ದ ಕೇಳಿದಾಂಗಾತು.
“ಇದೆಂತ ಎನ್ನ ಮನಸಿಂಗೆ ಹಾಂಗದ್ದಾ?ಅಲ್ಲ ನಿಜವಾಗಿಯೂ ದನ ಕೆಲದ್ದಾ?” ಹೇಳಿ ಅಂದಾಜಾಗದ್ದೆ ಅದು ಒಳ ಹೋಗದ್ದೆ ಅಲ್ಲೇ ನಿಂದತ್ತು.’ಎನ್ನ ಭ್ರಮೆ ಅಲ್ಲನ್ನೇ….ಹೇಳಿ ಗ್ರೇಶಿಂಡಿಪ್ಪಗಳೇ ಒಳಾಂದ ಅತ್ತೆಯುದೆ “ಏ ಶಂಕರಾ….ಈಗ ಗೇಟಿನತ್ರೆ ಒಂದು ದನ ಕೆಲದಾಂಗೆ ಕೇಳಿತ್ತು.ಒಂದಾರಿ ಯೇವದೂಳಿ ಹೋಗಿ ನೋಡು” ಹೇಳಿದ್ದು ಕೇಳಿತ್ತು ಮಂಜುಳೆಗೆ. ಅಷ್ಟಪ್ಪಗ ಮತ್ತೊಂದರಿ ಅದೇ ಸ್ವರ ” ಹ್ಹಂ….ಬಾ….”ಮತ್ತೆ ಕಾವಲೆಡ್ತಿದಿಲ್ಲೆ ಮಂಜುಳೆಗೆ. ಓಡಿಂಡೇ ಹೋಗಿ ಉರುವೆಲಿನತ್ರೆ ನಿಂದಪ್ಪಗ ಅದರ ಕಣ್ಣುಗಳನ್ನೇ ನಂಬುಲೆಡಿಗಾಯಿದಿಲ್ಲೆ ಅದಕ್ಕೆ. ಅಲ್ಲಿಂದಲೇ ಅತ್ತೆಯ ದೊಡ್ಡಕೆ ದೆನಿಗೇಳಿತ್ತು..
“ಅತ್ತೇ….ಬೇಗ ಬನ್ನೀ..ನಮ್ಮ ಗಂಗೆ ಬಂತೂ..ಗಂಗೇ….'”ಅಷ್ಟು ಹೇಳಿಕ್ಕಿ ಮತ್ತೆ ಎಂತ ಮಾತಾಡ್ಲೂ ದೆನಿ ಹೆರಟಿದೇಯಿಲ್ಲೆ ಅದಕ್ಕೆ. ಸಂತೋಷಲ್ಲಿ ಎಂತ ಮಾಡೆಕೂ ಗೊಂತಾಗದ್ದೆ ಗಂಗೆಯ ಮುಟ್ಟಿ ಮೈ ಉದ್ದಿತ್ತು.
ಮಂಜುಳೆಯ ದೆನಿ ಕೇಳಿ ಮನೆಯೊಳ ಇಪ್ಪವೆಲ್ಲ ಗಂಗೆಯ ನೋಡ್ಲೆ ಓಡಿ ಬಂದವು. ಸೀದಾ ಹಟ್ಟಿಯೊಳಾಂಗೆ ಹೋದ ಗಂಗೆ ಕಂಜಿಗಳ ಎಲ್ಲ ಮೂಸಿಂಡು ಹೋಗಿ ಗೋಪಿಯ ಹತ್ತರೆ ನಿಂದು ಅದರ ಕೊಂಡಾಟಲ್ಲಿ ನಕ್ಕಲೆ ಸುರು ಮಾಡಿತ್ತು. ಗೋಪಿಯೂ ಅಬ್ಬೆ ಸಿಕ್ಕಿದ ಕೊಶಿಲಿ ಅದರ ಕೆಚ್ಚಲಿಂಗೆ ಬಾಯಿ ಹಾಕಿತ್ತು. ಈ ದೃಶ್ಯವ ಕಂಡ ಮನೆಯವಕ್ಕೆಲ್ಲ ಸಂತೋಷ,ಸಂಭ್ರಮ ತಡವಲೇ ಎಡಿಯ. ಮಂಜುಳೆಗಂತೂ ಸಂತೋಷ ತಡವಲೆಡಿಯದ್ದೆ ಕಣ್ಣಿಲ್ಲಿ ನೀರೇ ಬಂತು
” ಇಷ್ಟು ದಿನದ ನಿನ್ನ ಪ್ರಾರ್ಥನೆ ದೇವರಿಂಗೆ ಕೇಳಿದ ಕಾರಣವೇ ಹೆಬ್ಬುಲಿಯ ಬಾಯಿಂದ ಪುಣ್ಯ ಕೋಟಿ ಪುನಾ ಬಂದಾಂಗೆ ನಮ್ಮ ಗಂಗೆಯೂ ಬಂತದಾ.ಇನ್ನು ನಮ್ಮ ಗೋಪಿಯೂ ತಬ್ಬಲಿ ಅಲ್ಲ..ಇನ್ನು ನೀನು ಕಣ್ಣೀರಾಕೆಕಾದ ಅಗತ್ಯ ಇಲ್ಲೆ” ಗೆಂಡನ ಮಾತಿಂಗೆ ಸೆರಗಿಲ್ಲಿ ಕಣ್ಣೀರು ಉದ್ದಿಕೊಂಡೇ ಮತ್ತೆ ಮತ್ತೆ ಗಂಗೆಯನ್ನೂ,ಗೋಪಿಯನ್ನೂ ಅಪ್ಪಿ ಹಿಡ್ಕೊಂಡತ್ತು ಮಂಜುಳೆ. ಅದರ ಕಣ್ಣಿಂದ ಬೀಳುವ ಸಂತೋಶದ ಅಶ್ರುಧಾರೆ ಗಂಗೆಯ ಕೊರಳನ್ನೂ ಚೆಂಡಿ ಮಾಡಿಂಡಿದ್ದತ್ತು.

-ಪ್ರಸನ್ನಾ ವಿ ಚೆಕ್ಕೆಮನೆ

~~~***~~~

ಇವು ಬರದ ದಾರಿದೀಪ ಹೇಳ್ತ ಕತೆಗೆ 2015 ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಲಿ ಪ್ರಥಮ ಬಹುಮಾನ ಸಿಕ್ಕಿದ್ದು. ಕತೆಯ ಓದಲೆ ಇಲ್ಲಿ ಕ್ಲಿಕ್ ಮಾಡಿ

ಶ್ರೀ ಗುರುಗೊ ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ ಇವಕ್ಕೆ ಈ ಸಂದರ್ಭಲ್ಲಿ (2015 ರಲ್ಲಿ) ಶಾಲು ಹೊದೆಸಿ, ಮಂತ್ರಾಕ್ಷತೆ ಕೊಟ್ಟು ಕೊಡಗಿನ ಗೌರಮ್ಮ ಪ್ರಶಸ್ತಿಯ ಕೊಟ್ಟ ಆ ಶುಭ ಸಂದರ್ಭದ ಪಟ ಇಲ್ಲಿದ್ದು.

ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

~~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

20 thoughts on “ತಬ್ಬಲಿಯು ನೀನಲ್ಲ ಮಗುವೇ..

  1. ಕಥೆ ಭಾರೀ ಲಾಯ್ಕ ಆಯಿದು ಪ್ರಸನ್ನತ್ತೆ….ಸಣ್ಣಾದಿಪ್ಪಗ ಮನೆಲಿದ್ದ ಎಲ್ಲಾ ದನಂಗಳ ನೆನಪು ಬಂತು.. ಅಲ್ಲಿಯೂ ಗಂಗೆ ಹೇಳುವ ದನ ಗುಡ್ಡೆಗೆ ಬಿಟ್ಟದು ತಿರುಗಿ ಬೈಂದೇ ಇಲ್ಲೆ.. ನಮ್ಮ ನೆರೆಕರೆಲಿ ಎಲ್ಲರಲ್ಲೂ ಹಾಂಗೆಯೇ ಆಯಿದು ಅಲ್ದಾ… ಗ್ರೇಶುವಾಗ ತುಂಬಾ ಬೇಜಾರಾವ್ತು.

    1. ಅಪ್ಪು.. ಅದೇ ನೆಂಪಾತು ಬರವಗ.ಹಾಂಗೇ ಅಷ್ಟು ಸಹಜತೆ ಬಂದದು.ಕತೆ ಓದುಗಲೂ ಆ ದನಗಳನ್ನೇ ನೆಂಪಾವ್ತು.

  2. ಕತೆ ಫಷ್ಟಾಯಿದು. ಹೆಚ್ಚಿನಂಶವೂ ಈ ಕಥೆಯ ಅಂದು ಆನು ಓದಿದ್ದೆ. ಮನಸ್ಸಿಂಗೆ ಮುಟ್ಟುವ ಕತೆ.
    ಮದ್ಲಾಣ ಕಾಲದ ಹುಲಿಯಾದರೂ ಪುಣ್ಯಕೋಟಿಯ ಸತ್ಯ ನಿಷ್ಠೆ ಕಂಡು ಅದರ ತಿನ್ನದ್ದೆ ಬಿಟ್ಟಿದು.ಈ ಪಾಪದ ದನಗೊ ಆರಿಂಗೆ ಎಂತ ಹಿಂಸೆ ಕೊಟ್ಟಿದವೂಳಿಲ್ಯಾ?ಆ ಹುಲಿಂದಲೂ ಕ್ರೂರಿಗೊ ಈಗಾಣ ಮನುಶ್ಯರೆ ಆಗಿ ಹೋದವನ್ನೇ. ಇದು ಸರಿಯಾದ ಮಾತು. ಪ್ರಸನ್ನಕ್ಕಾ, ಮತ್ತೊಂದರಿ ಅಭಿನಂದನೆಗೊ.

    1. ಧನ್ಯವಾದ ಗೋಪಾಲಣ್ಣ…..ಗುಡ್ಡಗೆ ಬಿಟ್ಟ ದನಗೊ ಕಾಣೆಯಪ್ಪಗ ಅಪ್ಪ ಸಂಕಟ ಅದು.

      1. ಇಂದ್ರಾಣ namaste ಬೆಂಗಳೂರಿಲ್ಲಿ ಪ್ರಸನ್ನಕ್ಕನ ಓಣಂ ಬಗ್ಗೆ ಬಾರದ ಲೇಖನ ಲಾಯಿಕ ಇದ್ದು.

  3. ಪ್ರಸನ್ನಾ ವಿ ಚೆಕ್ಕೆಮನೆ, ಕಥೆ ಒಳ್ಳೆದಿದ್ದು. ಈ ಸಂದರ್ಭದಲ್ಲಿ ನಿನ್ನ ಅಣ್ಣ ನೋ,ಅಪ್ಪಚ್ಚಿಯೊ ಆದಿಪ್ಪ ಎಂಗಳ ಮನೆ ಹತ್ತರೆ ಇದ್ದಿಪ್ಪ ಚೆಕ್ಕೆಮನೆ ಈಶ್ವರಣ್ಣ ಎನಗೆ ಮಾಡಿದ ಉಪಕಾರವ ಆನು ಸ್ಮರಿಸುತ್ತೆ. ಆ ಸಮಯಲ್ಲಿ ಎನಗೆ ಒಂದು ಸರಕಾರಿ ಅಧಿಕಾರಿಯ ಸರ್ಟಿಫಿಕೇಟ್ ಬೇಕಾಗಿದ್ದತ್ತು. ಅವು ಎನ್ನ ಅಧಿಕಾರಿಯಲ್ಲಿ ಕರಕೊಂಡು ಹೋಗಿ ಎನ್ನ ಕೆಲಸ ಮಾಡಿಸಿದ್ದವು. ಅವರ ಕೆಲಸ ಶ್ಲಾಘನೀಯ. ಧನ್ಯವಾದಗಳು.

    1. ಕತೆ ಇಷ್ಟಾದ್ದು ಕೊಶಿಯಾತು ಅಣ್ಣಾ..

  4. ee blagilli namma shivalli bandhavaroo ಒಪ್ಪ ಕೊಡುದು ಸಂತೋಷದ ವಿಷಯ. aggithayare ಈಕ್ಲೆಗ್ ಥ್ಯಾಂಕ್ಸ್.

  5. ಕಥೆ ಬಾರೀ ಲಾಯ್ಕ್ ಇದ್ದು ಪ್ರಸನ್ನ ಓದುತ್ತ ಓದುತ್ತ ಕಣ್ಣಿಲಿ ಧಾರಾಕಾರ ನೀರು ಬಂತು ಮಂಜುಳೆಯ ಪಾತ್ರಲ್ಲಿ ನಿಂಗಳನ್ನೇ ಕಂಡ ಹಾಂಗಾತು

    1. ಕತೆ ಮೆಚ್ಚಿದ್ದಕ್ಕೆ ಧನ್ಯವಾದ ಅಕ್ಕಾ..ಕತೆ ಬರವ ಸಮಯಲ್ಲಿ ಎಷ್ಟೋ ಸರ್ತಿ ಮಂಜುಳೆಯ ಸ್ಥಾನಲ್ಲಿ ಎನ್ನ ಕಲ್ಪಿಸಿಕೊಂಡಿತ್ತಿದ್ದೆ.ಆನು ಬರದ ಕತೆಯೇ ಆದರೂ ಅದರ ಓದುಗ ಎನ್ನ ಕಣ್ಣು ಕೂಡ ತುಂಬಿ ಬತ್ತು..ನೈಜ ಘಟನೆ ಆಧರಿಸಿ ಬರದ ಕತೆ ಆದ ಕಾರಣ ಹಾಂಗಪ್ಪದಾದಿಕ್ಕು.

  6. ಪ್ರಸನ್ನ ಪ್ರಥಮವಾಗಿ ಬರದ ಕತೆ ಉತ್ತಮವಾಗಿ ಮೂಡಿ ಬಯಿಂದು. ಈ ಕತೆಯ ಆನು ಆ ಸಂದರ್ಭಲ್ಲಿ ಹಾಕಿರೆಕು . ಸರೀ ನೆಂಪಿಲ್ಲೆ. ಹವ್ಯಕ ವಾರ್ತೆಲಿ ಅಂತೂ ಬಯಿಂದು.

    1. ಈ ಕತೆ ಓದಿ ” ನಿನಗೆ ಸಾಹಿತ್ಯ ಕ್ಷೇತ್ರಲ್ಲಿ ಉತ್ತಮ ಭವಿಷ್ಯ ಇದ್ದು ತಂಗೇ..”ಹೇಳಿ ಹಾರೈಸಿದ್ದರ ಎನಗೆ ಮರವಲೆಡಿಗೋ ವಿಜಯಕ್ಕಾ….ಅದುವೇ ಎನ್ನಲ್ಲಿ ಆತ್ಮ ವಿಶ್ವಾಸ ತುಂಬಿ ಮತ್ತಷ್ಟು ಬರವಲೆ ಪ್ರೇರಣೆ ಕೊಟ್ಟದು.ಈ ಕತೆಗೆ ಬಹುಮಾನ ಬಂದ ಸಮಯಲ್ಲಿ ಆನು ಸಾಹಿತಿ ಹೇಳಿ ಗುರುತಿಸಿ ಕೊಂಬಲೆ ಎನ್ನತ್ರೆ ಎಂತದೂ ಇತ್ತಿದ್ದಿಲ್ಲೆ. ಅಂಬಗ ನಿಂಗೊ ಹೇಳಿದ್ದಿ “ಈಗ ಇಲ್ಲೆ ಹೇಳಿ ಬೇಜಾರ ಮಾಡೆಡ.ಇದೇ ನಿನ್ನ ಮೊದಲ ಮೆಟ್ಟಿಲು”.. ಅದು ನಿಜವಾಗಿಯೂ ಸತ್ಯ ಆಯಿದು.2015 ರಲ್ಲಿ ಎನಗೆ ಪ್ರಥಮ ಬಹುಮಾನ ಬಂದಪ್ಪಗ ‘ಕರ್ನಾಟಕ ಪುಸ್ತಕ ಪ್ರಾಧಿಕಾರದ ಸಹಾಯಂದ ಎನ್ನ ಕವನ ಸಂಕಲನ ಬಿಡುಗಡೆ ಆಗಿತ್ತು.ಕೇರಳ ಸರಕಾರದ ಎರಡನೇ ಕ್ಲಾಸಿನ ಮಕ್ಕೊಗೆ ಕಲಿವಲೆ ಆನು ಬರದ ಪದ್ಯ ಆಯ್ಕೆ ಆಯಿದು..ಇದೆಲ್ಲ ನಿಂಗಳ ಒಳ್ಳೆಯ ಮನಸಿನ ಶುಭಹಾರೈಕೆಂದ ಹೇಳುವ ವಿಶ್ವಾಸ ಎನ್ನದು ವಿಜಯಕ್ಕಾ..

  7. ಒಳ್ಳೆಯ ಬರಹ..

  8. ಲಾಯಿಕ ಆಯಿದು ಓದಿಸಿ೦ಡು ಹೋಪ ಕಥೆ …
    ಪ್ರಸ್ತುತ ಪರಿಸ್ಥಿತಿಗೆ ಕನ್ನಡಿ ಹಿಡುದಾ೦ಗಾತಿದು..ಈ ಕಥೆಯ ಮ೦ಜುಳನ೦ಥವು ಹೆಚ್ಚಾಯೆಕು

    1. ಆನು ಏಳು ವರ್ಷ ಮೊದಲು ಬರದ ಕತೆ ಇದು.ಮಂಜುಳೆಯ ಹಾಂಗಿದ್ದವ ಹೆಮ್ಮಕ್ಕೊ ಪ್ರತಿ ಮನೆಲೂ ಇದ್ದರೆ ನಂದ ಗೋಕುಲದ ಹಾಂಗಿದ್ದ ಸಮಾಜ ನಿರ್ಮಾಣ ಅಕ್ಕು. ಕತೆ ಓದಿ ಮೆಚ್ಚಿದ ನಿಂಗೊಗೆ ಧನ್ಯವಾದ ಅಣ್ಣಾ..

    1. ಕತೆ ಮೆಚ್ಚಿದ ನಿಮಗೆ ಧನ್ಯವಾದ

      1. kathe ಲಾಯಿಕ ಆಯಿದು. ಹತ್ತೈವತ್ತು ವರ್ಷದ ಹಿಂದೆ ನಮ್ಮ ಮನೆಯ ಹಟ್ಟಿಲಿದ್ದ januvaruga ನಮ್ಮ ಕುಟುಂಬ ಸದಸ್ಯರ ಹಾಂಗೇ ಇತ್ತಿದ್ದವು.

        1. ದನಗೊ ಯೇವಗಳೂ ನಮ್ಮ ಮನೆಯ ಸದಸ್ಯರ ಹಾಂಗೆಯೇ ಅಲ್ಲದ ಅಣ್ಣಾ….ಈಗ ಮಾತ್ರ ನವಗೆ ಹಲವು ದನಗಳ ಸಾಂಕಲೆ ಎಡಿತ್ತಿಲ್ಲೆ. ಅದೇ ಬೇಜಾರು.ಕತೆ ಮೆಚ್ಚಿದ್ದಕ್ಕೆ ಧನ್ಯವಾದ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×