ಕಾಲಬುಡಲ್ಲಿ ಬಂದು ಬಿದ್ದ ಮಗಳ ಹಿಡುದು ನೆಗ್ಗಿತ್ತು ಶಾರದೆ.
“ಅದರ ಮುಟ್ಟೆಡ.!!!!!!” ಚಂದ್ರಣ್ಣ ಹತ್ತರೆ ಬಂದು ಸುಶೀಲನ ತಲೆಕಸವು ಹಿಡುದು ಕೆಪ್ಪಟಗೊಂದು ಬಿಗುದವು.
“ಅಯ್ಯೋ.. ಅಮ್ಮಾ… ಎನ್ನ ಕೊಲ್ಲುತ್ತವು ಅಪ್ಪಾ°….” ಸುಶೀ ಬೇನೆ ತಡವಲೆಡಿಯದ್ದೆ ಬೊಬ್ಬೆ ಹಾಕಿತ್ತು.
“ಎಂತರ ವಿಶಯ, ಎನ್ನತ್ರೆ ಹೇಳ್ಲಾಗದ? ಅಂತೇ ಅದಕ್ಕೆ ಜೆಪ್ಪುದೆಂತಕೆ?” ಶಾರದೆಗೆ ಸುಶೀಲನತ್ರೆ ಮದಲಿಂದಲೂ ರೆಜ ಹೆಚ್ಚು ಕೊಂಗಾಟ.ಕುಞ್ಞಿ ಮಗಳು ಹೇಳಿ ಅದರತ್ರೆ ಎಂತಾರು ಕೆಲಸ ಹೇಳ್ಲೆ ಕೂಡ ಮನಸ್ಸು ಬಪ್ಪಲಿಲ್ಲೆ. ಈಗ ಗೆಂಡ° ಹೀಂಗೆ ಮಗಳಿಂಗೆ ಬಡಿವಗ ನೋಡಿಂಡು ನಿಂಬಲೆಡಿಗೋ!!
“ಎಂತಾತು ಕೇಳು ನಿನ್ನ ಮಗಳತ್ರೆ? ಸಣ್ಣ ಹೇಳಿ ಸಸಾರ ಬಿಟ್ಟದಕ್ಕೆ ಮನೆಯ ಮರ್ಯಾದೆ ತೆಗವಲೆ ಹೆರಟಿದು.ನೋಡು ಇದೆಂತರಾಳಿ” ಹೇಳಿಂಡು ಚಂದ್ರಣ್ಣ ಒಂದು ಸಣ್ಣ ಪ್ಲಾಸ್ಟಿಕ್ ತೊಟ್ಟೆಯ ಅಲ್ಲಿ ಹಾಕಿದವು.
ಕೇಶವ° ಅದರ ತೆಗದು ಬಿಡುಸಿ ನೋಡಿದ°!!
ಜಿಗ್ಗ್’ ಆತವಂಗೆ ಅದರ ನೋಡಿ!!
ಸುಶೀಲನೂ ದಿನೇಸನೂ ಒಟ್ಟಿಂಗೆ ನಿಂದು ತೆಗದ ಪಟ ಅದು!!
“ನೋಡಬ್ಬೆ..ಇದರ ಕೆಲಸ!!” ಶಾರದೆ ಪಟ ನೋಡಿತ್ತು.ಎರಡು ಜೆನವೂ ಹತ್ತರೆ ಹತ್ತರೆ ನಿಂದೊಂಡು ನೆಗೆ ಮಾಡಿಂಡಿದ್ದವು.ಕರಿ ಮಸಿಗಟ್ಟಿಯ ಹತ್ತರೆ ಮಲ್ಲಿಗೆ ಹೂಗು ಮಡುಗಿದ ಹಾಂಗೆ ಕಂಡತ್ತದಕ್ಕೆ ಅವರಿಬ್ರನ್ನು.
“ಇದೆಂತರ ಕೂಸೇ? ಎಂತಕೆ ಹೀಂಗೆ ಪಟ ತೆಗದ್ದು? ಹೀಂಗೆಲ್ಲ ಬೇರೆಯವರೊಟ್ಟಿಂಗೆ ನಿಂದು ಪಟ ತೆಗವಲಾಗ ಮಗಳೂ..ನೀನು ಕೂಸಲ್ದಾ? ” ಶಾರದೆಗೆ ಸರಿಯಾಗಿ ವಿಶಯ ಎಂತರಾಳಿ ಇನ್ನೂ ಅರ್ಥಾಯಿದಿಲ್ಲೆ. ಅದರೊಟ್ಟಿಂಗೆ ಪಟ ತೆಗದ್ದಕ್ಕೆ ಗೆಂಡ° ಬಡುದ್ದು ಹೇಳಿ ಮಾತ್ರ ಜಾನ್ಸಿತ್ತದು.
“ಅಬ್ಬೆಂತರ ಹೇಳುದು ? ಅದಿನ್ನೂ ಪುಟ್ಟು ಬಾಬೆ ಹೇಳಿ ಗ್ರೇಶಿದ್ದೆಯಾ ಹೇಂಗೆ? ಅದರ ಹಾಂಕಾರಕ್ಕೆ ಇದರಿಂದ ಮದಲೇ ಸರೀ ಬೀಳೆಕಾತು.ಅಪ್ಪಂಗೆ ಈಗಾದರು ಗೊಂತಾತನ್ನೆ.ಅಂದು ಆನೆಂತಕೆ ಬೈದ್ದು ಹೇಳಿ” ಕೇಶವ° ಹಾಂಗೆ ಹೇಳಿಕ್ಕಿ ಅಲ್ಲಿಂದ ಹೆರ ಹೋದ°.
“ಶ್ಶೋ ದೇವರೇ..ಇದಕ್ಕೆ ಹೀಂಗಿದ್ದ ಬುದ್ದಿ ಬಂತನ್ನೇ.ಶೈಲ ಐದೊರ್ಶ ಯೇವ ರಗಳೆಯೂ ಇಲ್ಲದ್ದೆ ಕೋಲೇಜಿಂಗೆ ಹೋಗಿಂಡು ಬಯಿಂದು. ಇದು ಕೋಲೇಜಿಂಗೆ ಹೋಪಲೆ ಸುರು ಮಾಡಿ ಎರಡೊರ್ಶವೂ ಆಯಿದಿಲ್ಲೆ.ಎಂಥಾ ಅವಸ್ಥೆ” ಶಾರದೆಗೆ ಮಗಳು ಕೋಲೇಜಿಂಗೆ ಹೋಗಿ ಹೀಂಗಾದ್ದೂಳಿ ಮಂಡೆಬೆಚ್ಚ.
“ಕೋಲೇಜಿಂಗೆ ಹೋಗಿಯೂ ಅಲ್ಲ,ಎಂತದೂ ಅಲ್ಲ.ಒಂದೊರ್ಶಂದ ಇಲ್ಲೇ ನೆಗರಿಂಡಿತ್ತಿದ್ದವನ್ನೇ ಆಳುಗೊ.ನಿನಗೆ ರೆಜ ಮಗಳ ಜಾಗ್ರತೆ ಮಾಡೆಕೂಳಿ ಕೂಡ ಗೊಂತಾಯಿದಿಲ್ಲೆ” ಚಂದ್ರಣ್ಣನ ಕೋಪ ಈಗ ಹೆಂಡತಿಯತ್ರಂಗೆ ತಿರುಗಿತ್ತು.
“ಹ್ಹಾ….ಆನಾ ಆಳುಗಳ ಇಲ್ಲಿ ನಿಲ್ಸುಲೆ ಹೇಳಿದ್ದು.ಮನೆ ಕೆಲಸ, ದನಗಳ ಕೆಲಸ ಆಯೆಕು ಒಟ್ಟಿಂಗೆ ನಿಂಗಳ ಅಬ್ಬೆಯ ಚಾಕ್ರಿಯೂ ಆಯೆಕು. ನಿಂದಲ್ಲಿಂದ ತಿರುಗಲೆ ಪುರ್ಸೊತ್ತಿಲ್ಲದ್ದಷ್ಟು ಕೆಲಸ ಇಪ್ಪಗ ‘ಹೊಸ ಹಟ್ಟಿ ಕಟ್ಸಲೆ ಹೆರಟರೆ ಆಳುಗೊಕ್ಕೆ ಬೇಶಿ ಕೊಡ್ಲೆ ಬಂಙಕ್ಕು ಹೇಳಿಪ್ಪೆ.ಅದಕ್ಕೆ ಬೇಕಾಗಿ ನಿಂಗಳ ಮಗಳು ಮಾಡಿದ ಘನಾಂದಾರಿಕೆ ಕೆಲಸಕ್ಕೆ ಎನ್ನ ದೂರೆಕೂಳಿಲ್ಲೆ” ಶಾರದೆಗೂ ಈ ವಿಶಯಲ್ಲಿ ಗೆಂಡನತ್ರೆ ಕೋಪ ಬಂತು.
“ಹ್ಹೂಂ..ಇನ್ನಿದರ ಮನೆಂದ ಹೆರ ಇಳಿವಲೆ ಬಿಡೆಡ.ಆಚವರ ಎರಡ್ರನ್ನೂ ಇಂದೇ ಇಲ್ಲಿಂದ ಅಟ್ಟುತ್ತೆ.ಇಲ್ಲದ್ರಿದು ಸರಿಯಾಗ” ಚಂದ್ರಣ್ಣ ಅಷ್ಟು ಹೇಳಿಕ್ಕಿ ತಂಗಮ್ಮ ಇಪ್ಪಲ್ಲಿಗೆ ಹೋದವು.ಅದು ಭಾಮೆಯಕ್ಕನ ಕಾಲಿಂಗೆ ಎಣ್ಣೆ ಹಾಕಿ ಉದ್ದಿಂಡಿದ್ದತ್ತು.ತಂಗಮ್ಮನ ಬೈದು ಅಟ್ಸೆಕೂಳಿ ಬಂದವಕ್ಕೆ ಇಲ್ಲಿ ಹೀಂಗೆ ಕಾಂಬಗ ಎಂತ ಹೇಳ್ಲೂ ನಾಲಗೆ ತೆರ್ಚದ್ದಾಂಗಾತು.
‘ಅಬ್ಬೆಯ ಇಷ್ಟು ಲಾಯ್ಕಲ್ಲಿ ನೋಡಿಕೊಂಬಲೆ ಶಾರದೆಗೆ ಎಡಿಗಾ?
ಇದರ ಮಗ ಎಂತೋ ತಪ್ಪು ಮಾಡಿತ್ತು ಹೇಳಿ ಇದರ ಎಂತಕೆ ಬೈವದು’ ಆ ಕ್ಷಣಲ್ಲಿ ಅವರ ಮನಸ್ಸು ಹಾಂಗೆ ಆಲೋಚನೆ ಮಾಡಿತ್ತು. ಹಾಂಗಾಗಿ ಅಲ್ಲಿಗೆ ಹೋದರೂ ಅಬ್ಬೆ ಹತ್ತರೆ “ಹೇಂಗಿದ್ದೆಬ್ಬೇ” ಕೇಳಿಕ್ಕಿ ರೆಜ ಹೊತ್ತು ಅಲ್ಲೇ ನಿಂದು ತಂಗಮ್ಮನ ಕೆಲಸ ನೋಡಿಕ್ಕಿ ಬಂದವು.
ಇವರ ಕಂಡಪ್ಪಗ ತಂಗಮ್ಮನೂ ಭಾರೀ ನೆಗೆ ನೆಗೆಲಿ ಮಾತಾಡ್ಸಿತ್ತು
“ಕುಂಞ್ಞಣ್ಣ ಬಯಿಂದವು.ಒಂದು ವಾರ ಇಕ್ಕೋ? ” ಒಳ ನಡದ ವಿಶಯ ಅದಕ್ಕೆ ಸರೀ ಗೊಂತಾದರೂ ಎಂತದೂ ಗೊಂತಾಗದ್ದಾಂಗೆ ಮಾಡಿತ್ತು.ಚಂದ್ರಣ್ಣನೂ ಅದರತ್ರೆ ಯೇವ ಅಸಮಧಾನ ತೋರ್ಸಿದ್ದವೂ ಇಲ್ಲೆ.
ಸುಶೀಲ ಅಡಿಗೊಳವೇ ನೆಲಕ್ಕಲ್ಲಿ ಕೂದೊಂಡು ದಿನೇಸನ ಹೇಂಗೆ ಕಾಂಬದೂಳಿ ಆಲೋಚನೆ ಮಾಡಿಂಡಿದ್ದತ್ತು.ಈಗ ಮನೆಯ ಹಿಂದಾಣ ಉಗ್ರಾಣಲ್ಲಿ ಅವು ನಿಂಬಲೆ ಸುರು ಮಾಡಿದ ಮತ್ತೆ ಅದರ ಕಾಂಬಲೆ ಹೆಚ್ಚು ಬಂಙ ಆಗಿಂಡಿದ್ದತ್ತಿಲ್ಲೆ.ಅಣ್ಣನೂ ಮನೆಲಿ ಇಲ್ಲದ್ದ ಕಾರಣ ಆರ ಹೆದರಿಕೆಯೂ ಇದ್ದತ್ತಿಲ್ಲೆ. ಇಂದೀಗ ಇಷ್ಟು ಫಕ್ಕನೆ ಅಪ್ಪಂಗೆ ಗೊಂತಕ್ಕೂಳಿ ಜಾನ್ಸಿದ್ದಿಲ್ಲೆ ಅದು.
‘ಅಣ್ಣ ಜೋರು ಮಾಡುವ ಕಾರಣ ಅವ° ಹೋಪಲ್ಲಿ ವರೆಗೆ ನಾವು ರಜಾ ದೂರ ಇಪ್ಪೋ°’ ಹೇಳ್ಲೆ ದಿನೇಸನ ಕಾಂಬಲೆ ತೋಟಕ್ಕೆ ಹೋದ್ದದದು.ದಾರೀಲಿ ಅಪ್ಪ° ಸಿಕ್ಕಿ ಎಳಕ್ಕೊಂಡು ಬಂದ ಕಾರಣ ಈಗ ಎಂತ ಮಾಡುದೂಳಿ ತಲಗೆ ಹೋಗದ್ದಾಂಗಾತದಕ್ಕೆ.
“ನಿನ್ನ ರೂಮಿಂಗೆ ಹೋಗಿ ಕೂದು ಓದು. ನಿನ್ನ ಹಾರಾಟ ಸಾಕು” ಶಾರದೆ ಸುಶೀಲನ ಅಲ್ಲಿಂದ ಕಳ್ಸಿತ್ತು.ಅಬ್ಬೆ ಹೆಚ್ಚೆಂತದೂ ಹೇಳದ್ದ ಕಾರಣ ಅದಕ್ಕೆ ಧೈರ್ಯ ಬಂತು.
ಸೀದಾ ಹೋಗಿ ಹಾಸಿಗೆ ಬಿಡ್ಸಿ ಮನುಗಿತ್ತು.ಅಪ್ಪ ಕೆಪ್ಪಟಗೆ ಕೊಟ್ಟ ಪೆಟ್ಟಿನ ಬೇನೆ ಕಡಮ್ಮೆ ಆಗದ್ದಿಪ್ಪಗ ದಿನೇಸನನ್ನೇ ನೆಂಪಾತದಕ್ಕೆ.
ಅದಕ್ಕೆ ಗೊಂತಾದರೆ ಎಷ್ಟು ದುಃಖ ಅಕ್ಕು. ಹೂಗಿನ ಹಾಂಗೆ ನೋಡ್ತೆ ಹೇಳಿ ಹೇಳಿದ ಜೆನ ಅದು.ಛೇ..ಸಿನೆಮಲೆಲ್ಲ ಕಾಂಬ ಹಾಂಗೆ ಅದರ ಎದುರು ಹೋಗಿ ಕೂಗಿರೆ ಅದು ಹೇಂಗೆ ಸಮದಾನ ಮಾಡುಗು ಹೇಳಿ ಜಾನ್ಸಿಂಡು ಕಣ್ಣು ಮುಚ್ಚಿ ಕನಸು ಕಾಂಬಲೆ ಸುರು ಮಾಡಿತ್ತದು.
ರಜ ಹೊತ್ತು ಕಳುದು ಕೇಶವ° ಕೆಳ ಇಳುದು ಬಪ್ಪಗ ಮನೆಲಿ ಯೇವ ಶಬ್ದವೂ ಇಲ್ಲೆ.ಶಾರದೆ ಚಕ್ಕುಲಿ ಮಾಡ್ಲೆ ಹೆರಟುಕೊಂಡಿದ್ದತ್ತು. ಚಂದ್ರಣ್ಣ ಜಾಲಿಲ್ಲಿ ಅಡಕ್ಕೆ ರಾಶಿ ಹತ್ತರೆ ನಿಂದೊಂಡಿದ್ದವು.ಸುಶೀಲನ ಮಾತ್ರ ಅಲ್ಲೆಲ್ಲಿಯೂ ಕಂಡಿದಿಲ್ಲೆ. ಸೀದಾ ಅಜ್ಜಿ ಇಪ್ಪಲ್ಲಿಗೆ ಬಂದಪ್ಪಗ ತಂಗಮ್ಮ ಎಲೆ ತಿಂದು ಕೆಂಪು ಕೆಂಪಾದ ಹಲ್ಲು ತೋರ್ಸಿ ನೆಗೆ ಮಾಡಿತ್ತು.
‘ಅಪ್ಪ° ಇವರ ಕಳ್ಸದ್ದೆ ಎಂತ ಮಾಡಿದ್ದು,ಇದರ ನೆಗೆ ಕಾಂಬಗಳೇ ಎಂತೋ ಕುಟಿಲತೆ ಕಾಣ್ತು. ಇದು ಇಲ್ಲಿದ್ದರೆ ಮನಗೆ ಮಾಟ ಮಡುಗಿದ ಹಾಂಗೆ’ ಹೇಳಿ ಒಳ ಮನಸ್ಸು ಹೇಳಿತ್ತು. ಜಾಲಿಂಗೆ ಬಂದು ಅಪ್ಪನತ್ರೆ ನಿಂದ°
ಚಂದ್ರಣ್ಣ ಮಗನ ನೋಡಿದವು.ಅವಂಗೆಂತೋ ಹೇಳ್ಲಿದ್ದೂಳಿ ಗೊಂತಾದ ಕಾರಣ ‘ ಎಂತ ವಿಶಯ’ ಹೇಳಿ ಕಣ್ಣ ಭಾಶೆಲಿ ಕೇಳಿದವು.
“ಅಪ್ಪಾ° ಸುಶೀಯ ವಿಶಯವ ನಿಂಗೊ ಹೀಂಗೆ ಸಸಾರ ಬಿಟ್ರಾಗ.ನಾಳಂಗುದಿಯಪ್ಪಗಳೇ ದಿನೇಸನನ್ನು ಅದರಬ್ಬೆಯನ್ನು ಇಲ್ಲಿಂದ ಅಟ್ಟದ್ರೆ ನಮಗೆ ಕಷ್ಟ. ಸುಶೀ ಅದರೊಟ್ಟಿಂಗೆ ತಿರುಗುದು ರೆಜ ಸಮಯಾತು.ಊರಿನವೆಲ್ಲ ಈಗಲೇ ಓರೆಗೆ ಹೇಳಿ ನೆಗೆ ಮಾಡ್ಲೆ ಸುರು ಮಾಡಿದ್ದವು.ಹಾಂಗಾಗಿ ನಿಂಗೊ ಈ ವಿಶಯಲ್ಲಿ ಒಂದು ತೀರ್ಮಾನ ತೆಕ್ಕೊಂಬಲೇ ಬೇಕು”.
ಚಂದ್ರಣ್ಣ ಮಗನ ಮಾತಿನ ಪೂರ್ತಿ ಒಪ್ಪಲೆ ತಯಾರಾಯಿದವಿಲ್ಲೆ.ದಿನೇಸನನ್ನು, ತಂಗಮ್ಮನನ್ನು ಕಳ್ಸಿರೆ ಅಷ್ಟು ಕೆಲಸ ಮಾಡುವ ಆಳುಗೊ ಸಿಕ್ಕವು ಹೇಳಿ ಅವಕ್ಕಪ್ಪದು.ಮಗಳಿಂಗೆ ರೆಜ ಬುದ್ದಿ ಹೇಳಿ ಕೂರ್ಸಿರೆ ಸಾಕು.ಅದು ಕೇಳುಗು ಹೇಳಿ ಅವರ ಮನಸಿಂಗೆ ಅಂಬಗ ತೋರಿತ್ತು. ಹಾಂಗಾಗಿ ಕೇಶವ° ಹೇಳಿದ್ದದೆಂತದೂ ನಾಟಿದ್ದೇಯಿಲ್ಲೆ.
ಕೇಶವಂಗೆ ಅಪ್ಪನತ್ರೆ ಹೇಳಿ ಹೇಳಿ ಬೊಡುದತ್ತು.
” ಅಪ್ಪಾ° ಇದಕೇರಿ.ಆನಿನ್ನು ಈ ವಿಶಯ ನಿಂಗಳತ್ರೆ ಮಾತಾಡ್ತಿಲ್ಲೆ.ಸುಶೀಯ ಜಾಗ್ರತೆ ಮಾಡದ್ದೆ ಅಂತೇ ಆಳುಗಳೇ ದೊಡ್ಡ ಹೇಳಿಂಡು ಕೂದರೆ ನಾಳಂಗೆ ಎಂತಕ್ಕು ಗೊಂತಿದ್ದಾ? ಆನಿಲ್ಲೆ ನಿಂಗಳ ವಯಿವಾಟಿಂಗೆ.ಎನಗಿದೆಲ್ಲ ನೋಡ್ಲೇ ಎಡಿಯ.!! ಆನು ನಾಳಂಗೆ ಶೈಲನ ಮನಗೆ ಹೋಗಿಕ್ಕಿ ಅಲ್ಲಿಂದಲೇ ಹೋವ್ತೆ.ಮತ್ತೆ ನಿಂಗೊ ಎಂತ ಬೇಕಾರೂ ಮಾಡಿ” ಪಿಸ್ರು ಬಂದು ಲೋಕಯಿಲ್ಲೆ ಅವಂಗೆ.
“ಸುಶೀಗೆ ಬುದ್ದಿ ಹೇಳ್ಲೆ ಅಬ್ಬೆತ್ರೆ ಹೇಳಿದ್ದೆ.ಸಣ್ಣಾದ ಕಾರಣ ಅದಕ್ಕೆ ಅಂದಾಜಾಗದ್ದದು.ಇನ್ನು ಹಾಂಗೆ ಮಾಡ.ಒಂದರಿ ತಪ್ಪು ಮಾಡಿದ್ದು ಅರ್ಥಾದರೆ ಮತ್ತೆ ಪುನಾ ಪುನಾ ತಪ್ಪು ಮಾಡುವ ಕೂಸಲ್ಲ ನಿನ್ನ ತಂಗೆ”.
” ಆತಪ್ಪಾ ಆತು..ಅದರ ತಲೆಲಿ ಹೊತ್ತುಕೊಂಡು ತಿರುಗಿ,ಇಲ್ಲದ್ರೆ ಊರವು ಹೇಳುವಾಂಗೆ ಮನೆಯಳಿಯನ ಮಾಡಿಂಡು ಮೆರವಣಿಗೆ ಮಾಡಿ.ಸುಶೀಲಾ ಸ್ವಯಂವರ ಹೇಳಿ”
“ಥಕ್….ಬಾಯಿ ಮುಚ್ಚು ನೀನು!! ತಂಗೆಯ ಇಷ್ಟು ಸಸಾರ ಮಾಡಿ ಮಾತಾಡ್ತೆನ್ನೆ ನೀನು.ಎನ್ನ ಎದುರಂದ ಎದ್ದು ಹೋಗು.ಇಲ್ಲಿ ಇನ್ನೂ ನಿಂದರೆ ಎನಗೆ ನೀನು ಮಗ° ಹೇಳುದು ಕೂಡ ನೆಂಪಾಗ!!!!” ಚಂದ್ರಣ್ಣ ಕೇಶವನತ್ರೆ ಕೋಪಲ್ಲಿ ಹಾರಿದವು.
ಅವ° ಮಾತಾಡದ್ದೆ ಅಲ್ಲಿಂದ ಹೋದ°. ಸುರುವಾಣ ಸಂಬಳ ಸಿಕ್ಕಿದ ಸಂತೋಶಲ್ಲಿ ಎಲ್ಲೋರಿಂಗು ಉಡುಗೊರೆ ತೆಕ್ಕೊಂಡು ಬಂದರೂ ಅದರ ಕೊಶೀಲಿ ಮನೆಯವಕ್ಕೆ ಕೊಡ್ಲೆಡಿಯದ್ದ ಬೇಜಾರಲ್ಲೇ ಅವ° ಮರದಿನ ಒಂದರಿ ಶೈಲನ ಮನಗೆ ಹೊಕ್ಕು ಹೆರಟಿಕ್ಕಿ ಅಂದಿರುಳೇ ಬಸ್ಸು ಹತ್ತಿದ°. ಮನೆಲಿ ಇಪ್ಪಷ್ಟು ಹೊತ್ತು ಅಪ್ಪನ ಎದುರಂಗೆ ಸಿಕ್ಕಿದ್ದನೂ ಇಲ್ಲೆ,ಸುಶೀಲನತ್ರೆ ಮಾತಾಡಿದ್ದನೂ ಇಲ್ಲೆ.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 21: https://oppanna.com/kathe/swayamvara-21-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಇದರೆಲ್ಲ ಆರಿಂದ ಸರಿ ಮಾಡ್ಳೆ ಆವತ್ತೋ….ಬೇಜಾರು ಆವುತ್ತು….ಕಥೆ ಲಾಯ್ಕಲ್ಲಿ ಹೋವುತ್ತ ಇದ್ದು…ಕೆಟ್ಟ ಮನಸು…ಅತಿ ಆಸೆ…ಎಲ್ಲಾ ಸೇರಿ ಜೀವನ ಹಾಳು…..
ಕರಿ ಮಸಿಗಟ್ಟಿಯ ಹತ್ತರೆ ಮಲ್ಲಿಗೆ ಹೂಗು – ಒಳ್ಳೆಯ ಉಪಮೆ !!!
ಅಸಹಾಯಕ ಕೇಶವನ ಕಾಂಬಗ ಬೇಜಾರಾವ್ತು. ಕತೆ ಒಳ್ಳೆ ರೈಸುತ್ತಾ ಇದ್ದು.