Oppanna.com

ಸ್ವಯಂವರ : ಕಾದಂಬರಿ : ಭಾಗ 35 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   03/02/2020    4 ಒಪ್ಪಂಗೊ

ಡಾಕ್ಟರ್ ಪೂರ್ಣಿ ತೆಗದು ಕೊಟ್ಟ ಹೊಸ ಅಂಗಿ ಹಾಕ್ಸಿಂಡು, ಆಸ್ಪತ್ರೆಗೆ ಹೋಗಿ ಅದಕ್ಕೆ ಇಂಜೆಕ್ಷನ್ ಕೊಡ್ಸಿಕ್ಕಿ, ಬೆನ್ನಿನ ಗಾಯಕ್ಕೂ ಮದ್ದು ತೆಕ್ಕೊಂಡು ಮನಗೆ ಹೆರಟತ್ತು ಸುಶೀಲ. ಅದು ಸರಕಾರಿ ಆಸ್ಪತ್ರೆ ಆದ ಕಾರಣ ಪೈಸೆ ಕೊಡೆಕಾಗಿ ಬಯಿಂದಿಲ್ಲೆ.

“ನೀನೀಗ ಹೇಂಗೆ ಮನೆಗೆ ಹೋವ್ತೆ?” ಕೇಳಿತ್ತು ಪೂರ್ಣಿ.
ಅದಕ್ಕೆ ಎಂತಾಳಿ ಉತ್ತರ ಕೊಡೆಕೂಳಿ ಸುಶೀಲಂಗೆ ಗೊಂತಾಯಿದಿಲ್ಲೆ. ಅದಕ್ಕೆ ಒಬ್ಬನೇ ಈ ಊರಿಲ್ಲಿ ಎಲ್ಲಿಗೆ ಹೋಗಿಯೂ ಗೊಂತಿಲ್ಲೆ. ಒಂದೆರಡು ಜಾಗೆ ಹೆಸರಲ್ಲದ್ದೆ ಬೇರೆ ಎಂತದೂ ಗೊಂತಿಲ್ಲೆ.

“ಆನು ರಿಕ್ಷಾ ಮಾಡಿ ಕಳ್ಸುತ್ತೆ. ಜಾಗ್ರತೆಲಿ ಹೋಗು. ನಾಳಂಗೆ ಮನಗೆ ಬಾ..ಎನ್ನ ಅತ್ತೆ ಕೆಲಸಕ್ಕೆ ಹೋಗದ್ರೂ ಇಂಗ್ಲೀಷ್ ಬಿ.ಎ. ಕಲ್ತಿದವು. ಕಣ್ಣಿನ ಸಮಸ್ಯೆಂದಾಗಿ ರಜಾ ಸೋತು ಹೋದ್ದು..ಅದೆಲ್ಲ ಇನ್ನೊಂದರಿ ಮಾತಾಡುವ° . ಮಗಳಿಂಗೆ ನಾಳಂಗೂ ಇಂಜೆಕ್ಷನ್ ಆಯೆಕು” ಪೂರ್ಣಿ ಡಾಕ್ಟರ್ ಅಷ್ಟು ಹೇಳಿಕ್ಕಿ ರಿಕ್ಷಾಲ್ಲಿ ಹತ್ಸಿಕ್ಕಿ, ಅದರ ಡ್ರೈವರಿಂಗೆ ಪೈಸೆ ಕೊಟ್ಟಿಕ್ಕಿ ಸುಶೀಲನ ಕರಕ್ಕೊಂಡು ಹೋಪಲೆ ಹೇಳಿತ್ತು‌.

ಹೊತ್ತೋಪಗ ಐದು ಗಂಟೆ ಹೊತ್ತಿಂಗೆ ಮನೆಗೆತ್ತಿತ್ತು ಸುಶೀಲ ‌ . ರಿಕ್ಷಾಲ್ಲಿ ಬಂದದು ಗೊಂತಾದರೆ ತಂಗಮ್ಮ ಎಂತ ಮಾಡುಗು ಹೇಳಿ ಗೊಂತಿಲ್ಲೆ. ಹಾಂಗೆ ಹೆದರಿಯೇ ಅದು ನೀರು ತಪ್ಪ ಬಾವಿ ಹತ್ತರಂದಲೇ ರಿಕ್ಷಾ ಇಳುದು ನಡಕ್ಕೊಂಡು ಬಂತು.
ಬಣ್ಣದ ಸೀರೆ ಸುತ್ತಿ ,ಮಗಳಿಂಗೂ ಒಂದು ಚಂದದ ಅಂಗಿ ಹಾಕ್ಸಿಂಡು, ಕೈಲಿ ಮದ್ದಿನ ತೊಟ್ಟೆಯನ್ನು ಹಿಡ್ಕೊಂಡು ಮನೆಯೊಳಾಂಗೆ ಬಂದ ಸುಶೀಲನ ತಂಗಮ್ಮ ಹೊಸ ಜೆನರ ನೋಡಿದ ಹಾಂಗೆ ನೋಡಿತ್ತು.

“ಇಷ್ಟೊತ್ತು ಸವಾರಿ ಆರೊಟ್ಟಿಂಗೆ ತಿರುಗಲೆ ಹೋದ್ದಪ್ಪಾ.. ? ಅಂಗಿ, ಸೀರೆ ಎಲ್ಲ ಕಾಂಬಗ ಆರೊಟ್ಟಿಂಗೋ‌…..” ಅಷ್ಟು ಹೇಳಿಯಪ್ಪಗ ಸುಶೀಲಂಗೆ ಇಷ್ಟು ದಿನ ಕಟ್ಟಿ ಮಡುಗಿದ ಕೋಪ ಎಲ್ಲ ಒಟ್ಟಿಂಗೆ ಬಂತು. ರಜ್ಜ ಹೊತ್ತು ಮಗಳ ಕಾಲಿಲ್ಲಿ ಮನುಶಿಂಡು ಸುಮ್ಮನೆ ಕೂದತ್ತು. ಅಂದರೂ ತಂಗಮ್ಮನ ಬಾಯಿಂದ ಏನಾರು ಬಪ್ಪದರ ಕೇಳ್ಲೆ ಅದಕ್ಕೆ ಎಡಿಗಾಯಿದಿಲ್ಲೆ.

“ಬಾಯಿ ಮುಚ್ಚಿ ಕೂರು ತೊಂಡಿ ನೀನು, ಆನು ಬೇಕಾದಲ್ಲಿಗೆ ಹೋಪೆ, ಬೇಕಾದಾಂಗೆ ಮಾಡುವೆ. ಇನ್ನೆನ್ನ ಶುದ್ದಿಗೆ ಬರೆಡ ನೀನು”
ತಂಗಮ್ಮಂಗೆ ಕೋಪವೂ ಆಶ್ಚರ್ಯವೂ ಒಟ್ಟಿಂಗೆ ಬಂತು. ಇಷ್ಟು ದಿನ ಎಂತ ಹೇಳಿರೂ ಮೌನ ಮುನಿಯ ಹಾಂಗೆ ಕಣ್ಣನೀರು ಹಾಕಿಂಡು ತಲೆ ಅಡಿಯಂಗೆ ಹಾಕಿ ತಳಿಯದ್ದೆ ಕೂಪ ಜೆನ ಇಂದು ಹೀಂಗೆ ಹೇಳೆಕಾರೆ ಎಂತೋ ಪವಾಡ ನಡದ್ದು. ಇದು ಹೀಂಗೇ ಸೀರೆ ವಸ್ತ್ರ ಎಲ್ಲ ಮಾತಿಕ್ಕಿ ಬಯಿಂದು ಹೇಳಿ ಆದ ಕಾರಣ ಆರದ್ದಾರು ಮನಗೆ ಹೋದಿಕ್ಕು. ಇಷ್ಟು ಧೈರ್ಯಲ್ಲಿ ಮಾತಾಡೆಕಾರೆ ಆರಾರು ಹಿಂದಂದ ಇಕ್ಕು. ಎಲ್ಯಾದರು ಪೋಲೀಸುಗೊ ಮತ್ತೊ ಆದರೆ ಮೈಗೆ ಕಿಚ್ಚಿನ ಕೊಳ್ಳಿಲಿ ಬಡುದ್ದು ಹೇಳಿ ಕೇಸು ಕೊಟ್ಟಿಕ್ಕಿ ಬಂದದಾದಿಕ್ಕಾ….’ ಹಾಂಗಾಗಿ ಒಂದರಿ ಸುಶೀಲನತ್ರೆ ಎಂತೋ ಹೇಳ್ಲೆ ಹೆರಟರೂ ಅರ್ಧಂದಲೇ ನಿಲ್ಸಿಕ್ಕಿ ಸೀದಾ ಹೆರ ಹೋತು.

ಮರದಿನ ಉದಿಯಪ್ಪಗಲೇ ಒಪ್ಪಕ್ಕ ಎದ್ದಪ್ಪಗ ಅದರ ಕೊಂಗಾಟ ಮಾಡಿ ಮಂಕಾಡ್ಸಿ ಆಚ ಈಚ ಮನಗೊಕ್ಕೆ ಹೋಗದ್ದಾಂಗೆ ತಡವಲೆ ಎಡ್ತತ್ತು ಸುಶೀಲಂಗೆ.

“ಹಶು ಆವ್ತು ಅಬ್ಬೇ..” ಹೇಳಿದ ಒಪ್ಪಕ್ಕಂಗೆ ಕಣ್ಣ ಚಾಯ ಮಾಡಿ ಕೊಟ್ಟತ್ತು. ಮನೆಲಿ ರಜಾ ಅಕ್ಕಿ ಬಿಟ್ಟು ಬೇರೆಂತದೂ ಇತ್ತಿದ್ದಿಲ್ಲೆ. ಅಕ್ಕಿಂದ ಹೆಚ್ಚು ಬತ್ತವೇ ಇದ್ದ ಅದರಿಂದ ಬತ್ತ ಹೆರ್ಕಿಯಪ್ಪಗ ಬರೀ ಒಂದು ಮುಷ್ಟಿ ಆತಷ್ಟೆ‌ . ಅದನ್ನೇ ಹೆಜ್ಜೆ ಮಡುಗಿತ್ತು.
ಹೆಜ್ಜೆ ಬೆಂದಪ್ಪಗ ತಂಗಮ್ಮ ಎಲ್ಲಿದ್ದತ್ತೋ ಗೊಂತಿಲ್ಲೆ. ಸೀದಾ ಬಂದು ಆ ಹೆಜ್ಜೆಯ ಹಾಂಗೇ ಬಟ್ಲಿಂಗೆ ಸೊರುಗಿ ಉಂಬಲೆ ಸುರು ಮಾಡಿತ್ತು. ಮೀನಿನ ಬೆಂದಿ ಆಚಮನೆಂದ ತಂದದರ ಹೆಜ್ಜೆಯ ಮೇಲಂಗೆ ಹಾಕಿದ ಕಾರಣ ಇನ್ನು ಸುಶೀಲ ಕೇಳ್ಲೆ ಬಾರ ಹೇಳಿ ಸರೀ ಗೊಂತಿದ್ದದಕ್ಕೆ.

ತಂಗಮ್ಮನ ತಲಗೆ ಕಲ್ಲು ಹೊತ್ತಾಕೆಕು ಹೇಳುವಷ್ಟು ಕೋಪ ಬಂತು ಸುಶೀಲಂಗೆ. ಪುಳ್ಳಿ ಹೇಳುವ ಮಮಕಾರ ಕೂಡ ಇಲ್ಲೆನ್ನೇ ಇದಕ್ಕೆ. ಇನ್ನು ಒಪ್ಪಕ್ಕಂಗೆ ಎಂತರ ಕೊಡುದು….!
ಕೂಗುವ ಒಪ್ಪಕ್ಕನ ಮೆಲ್ಲಂಗೆ ಹೆಗಲಿಲ್ಲಿ ಮನುಶಿ ತಟ್ಟಿತ್ತು ಸುಶೀಲ.
‘ಡಾಕ್ಟರ್ ಪೂರ್ಣಿಯ ಮನಗೆ ಹೋಪಂದ ಮದಲು ಆಯೆಕಾದ ಕೆಲಸಂಗಳ ಬೇಗ ಬೇಗ ಮಾಡಿ ಮುಗುಶೆಕು. ದಿನೇಸ ನಿನ್ನೆ ಬಯಿಂದಿಲ್ಲೆ. ಅದಿನ್ನೂ ಜಾನುವಿನ ಮನೆಲೇ ಇದ್ದು ಕಾಣ್ತು. ಎನ್ನ ಬದುಕು ಹಾಳು ಮಾಡಿಕ್ಕಿ ಅದಕ್ಕೆ ಬೇಕಾದಾಂಗೆ ಬೇಕಾದವರೊಟ್ಟಿಂಗೆ ತಿರುಗುತ್ತು.
ಡಾಕ್ಟರ ಮನೆಲಿ ಹೇಂಗಿದ್ದ ಕೆಲಸ ಕೊಟ್ಟರೂ ಮಾಡಿ ರಜ ಪೈಸೆ ಸಂಪಾದನೆ ಮಾಡೆಕು. ಒಪ್ಪಕ್ಕನ ಕಲುಶೆಕು. ಈ ಹಾಳು ಬದುಕಿನ ಕನಸಿನ ಹಾಂಗೆ ಮರೆಕು. ಎಲ್ಯಾದರು ಅವಕಾಶ ಸಿಕ್ಕಿರೆ ಹೊಲಿಗೆ ಕಲಿಯೆಕು. ಹಾಂಗಾದರು ಸ್ವಂತ ಕಾಲಿಲ್ಲಿ ನಿಂದು ಮಗಳ ಚೆಂದಕೆ ಸಾಂಕೆಕು…..’ ಹೀಂಗಿದ್ದ ಆಲೋಚನೆಗಳಲ್ಲೇ ಮುಳುಗಿಂಡು ಸುಶೀಲ ಬೇಗ ಬೇಗ ಕೆಲಸ ಮಾಡಿಕ್ಕಿ ಹನ್ನೊಂದೂವರೆ ಹೊತ್ತಿಂಗೆ ತಂಗಮ್ಮ ಆಚಮನಗೆ ಹೋದಿಪ್ಪಗ ಮಗಳನ್ನು ಕರಕ್ಕೊಂಡು ಹೆರಟತ್ತು.
ಬೆನ್ನಿನ ಗಾಯಕ್ಕೆ ಮದ್ದು ಇದ್ದರೂ ಹಶು ಹೊಟ್ಟೆಲಿ ಮಾತ್ರೆ ತಿಂಬದೇಂಗೆ..!!
ಅವರ ಮನೆಯ ದಾರಿಯೂ ಸರಿಯಾಗಿ ಗೊಂತಿಲ್ಲೆ ಅದಕ್ಕೆ. ನಿದಾನಕೆ ನಡಕ್ಕೊಂಡು ಮನಸಿಲ್ಲೇ ಅಂದಾಜಿ ಮಾಡಿದ ದಾರಿಲೇ ಹೋತದು.
ಒಂದೆರಡು ದಿಕೆ ದಾರಿ ತಪ್ಪಿದ ಹಾಂಗಾದರೂ ಕೆಲವು ಜೆನರತ್ರೆ ಕೇಳಿ ಅವರ ಮನಗೆತ್ತಿತ್ತು.

“ನಿನ್ನನ್ನೇ ಕಾದು ಕೂದೊಂಡಿತ್ತಿದ್ದೆ. ಪೇಪರು ಓದಿ ಹೇಳುವ ಮದಲು ಮಗಳಿಂಗೆಂತಾರು ತಿಂಬಲೆ ಕೊಡು. ಇದಾ..ಚಪಾತಿ ಮಾಡಿ ಮಡುಗಿಕ್ಕಿ ಹೋಯಿದು ಸೊಸೆ. ಬಾಕಿಪ್ಪದರ ನೀನೂ ತಿನ್ನು” ಆ ಮಾತು ಕೇಳಿಯಪ್ಪಗಳೇ ಸುಶೀಲನ ಮನಸಿಂಗೆ ತಂಪಾತು.
ಬೇಗ ಬೇಗ ಮಗಳಿಂಗೆ ತಿಂಬಲೆ ಕೊಟ್ಟಿಕ್ಕಿ ಒಳುದ ಚಪಾತಿಯ ಅದೂದೆ ತಿಂದಿಕ್ಕಿ ಹೆರ ಬಂದು ಪಂಕಜನ ಹತ್ತರೆ ಕೂದತ್ತು. ಅದರ ಹೊಟ್ಟೆ ತುಂಬಿದ್ದಕ್ಕಿಂತ ಹೆಚ್ಚು ಸಂತೋಷಾದ್ದು ಮಗಳ ಹೊಟ್ಟೆ ತುಂಬಿದ್ದಕ್ಕೆ. ಇಷ್ಟರವರೆಗೆ ಚಪಾತಿ ತಿಂದಿದಿಲ್ಲೆ ಒಪ್ಪಕ್ಕ. ಕುಞಿ ಹಲ್ಲಿಲ್ಲಿ ಹೇಂಗೋ ಅಗುದು ತಿಂಬದು ನೋಡುಗಳೇ ಹೃದಯ ತುಂಬಿ ಬಂತು ಸುಶೀಲಂಗೆ.

“ನಿನಗೆ ಕೊಡ್ಲೆ ನಾಲ್ಕೈದು ಸೀರೆ, ರವಕ್ಕೆ ತೆಗದು ಮಡುಗಿದ್ದು ಪೂರ್ಣಿ. ನಿನ್ನ ಮಗಳಿಂಗೆ ಆ ದೊಡ್ಡ ತೊಟ್ಟೆಲಿಪ್ಪ ಅಂಗಿಯೆಲ್ಲ ತೆಕ್ಕೊಂಬಲಕ್ಕು. ಎನ್ನ ಮಗಳ ಮಗಳದ್ದು. ಅದಕ್ಕೆ ಐದು ವರ್ಷ ಆತಷ್ಟೆ. ಆಸ್ಟ್ರೇಲಿಯಾಲ್ಲಿ ಇಪ್ಪದು. ವರ್ಷಕ್ಕೊಂದರಿ ಬಪ್ಪದಷ್ಟೆ. ಬಂದಿಪ್ಪಗ ತೆಗದ ಅಂಗಿಗೊ, ಆರಾರು ಕೊಟ್ಟ ಅಂಗಿಗೊ ಎಲ್ಲ ಇದ್ದದರ್ಲಿ. ಒಂದರಿ ಹಾಕಿದ ಅಂಗಿ ಕೂಡ ಒಂದೋ ಎರಡೋ ಇಕ್ಕಷ್ಟೆ. ಮತ್ತೆಲ್ಲ ಹೊಸತ್ತೇ…..”

ಸುಶೀಲ° ಸೆರಗಿಲ್ಲಿ ಕಣ್ಣುದ್ದಿಂಡು ಪೇಪರು ಓದಿ ಹೇಳ್ಲೆ ಕೂದತ್ತು. ಇಷ್ಟರವರೆಗೆ ಅನುಭವಿಸಿದ ಕಷ್ಟಂಗಳ ಹಾಳು ಕನಸಿನ ಹಾಂಗೆ ಮರೆಕು. ಮಗಳಿಂಗೆ ಹೊಟ್ಟೆ ತುಂಬ ತಿಂಬಲೆ ಸಿಕ್ಕಿರೆ ಸಾಕು. ಹಾಕಲೆ ಅಂಗಿ ಸಿಕ್ಕಿತ್ತು…..!

“ಎಷ್ಟು ಲಾಯ್ಕಲ್ಲಿ ಇಂಗ್ಲೀಷು ಓದುತ್ತೆ ನೀನು. ಎಷ್ಟು ಕಲ್ತಿದೆ?” ಪಂಕಜ ಪೇಪರು ಓದಿ ಹೇಳಿದ ಮತ್ತೆ ಸುಶೀಲನ ಭಾರೀ ಹೊಗಳಿದವು.
ಒಂದು ಗಂಟೆ ಅಪ್ಪಗ ಎರಡು ಇಂಗ್ಲೀಷ್ ಪೇಪರು ಓದಿ ಆತದಕ್ಕೆ. ನಾರಾಯಣ್ ಒಪ್ಪಕ್ಕನ ಒಟ್ಟಿಂಗೆ ಆಟ ಆಡಿಂಡಿತ್ತಿದ್ದವು. ಅವರ ಪುಳ್ಳಿಯಕ್ಕಳ ಆಟದ ಸಾಮಾನು ಪೂರಾ ಅಲ್ಲೊಂದು ದೊಡ್ಡ ಉಗ್ರಾಣಲ್ಲಿ ಇದ್ದತ್ತು.
ಬಣ್ಣದ ಸೈಕಲಿಲ್ಲಿ ಒಪ್ಪಕ್ಕನ ಕೂರ್ಸಿ ನಾರಾಯಣ್ ದೂಡುದು ಕಾಂಬಗ ಫಕ್ಕನೆ ಅಪ್ಪನ ನೆಂಪಾತು.

‘ಈಗ ಅಪ್ಪ° ಎಂತ ಮಾಡ್ತವಾದಿಕ್ಕು? ಈ ಸುಶೀಯ ಮರದಿಕ್ಕೋ…ಅಕ್ಕನ ಪಾಪುವಿನ ಹೀಂಗೇ ಆಡ್ಸುತ್ತವಾದಿಕ್ಕು. ಅಬ್ಬೆ, ಅಣ್ಣ ಅಕ್ಕ° ಎಲ್ಲ ಹತ್ತರೆ ನಿಂದು ಕೊಶೀಲಿ ನೆಗೆ ಮಾಡ್ತವಾದಿಕ್ಕು. ಆ ಹೊತ್ತಿಂಗೆ ಈ ಕಾಟು ಸುಶೀಯ ಆರು ನೆಂಪು ಮಾಡುಗು? ಮನೆತನಕ್ಕೆ ಮಸಿ ಬಳುದಿಕ್ಕಿ ಹೋದ ಜಂತು!’

ಉಂಬ ಹೊತ್ತಿಂಗೆ ಡಾಕ್ಟರ್ ಪೂರ್ಣಿ ಬಂತು. ಅವು ಉಂಬಗ ಇವರನ್ನು ಉಂಬಲೆ ಒತ್ತಾಯ ಮಾಡಿದವು. ಸುಶೀ ಬೇಡ ಹೇಳಿತ್ತು. ದಿನೇಸನೊಟ್ಟಿಂಗೆ ಬಂದ ಮತ್ತೆ ಹೊಟ್ಟೆ ತುಂಬ ಎಂತಾರು ತಿಂದದು ಇಲ್ಲಿಂದಲೇ. ಇಲ್ಲಿ ಬಂದ ದಿನ ಹೀಂಗೆ ಉಂಬಲೆ ತಿಂಬಲೆ ಸಿಕ್ಕುಗು. ಬಪ್ಪಲೆಡಿಯದ್ದ ದಿನ ಎಂತ ಮಾಡುದು!! ಯೇವಗಲೂ ಅಭ್ಯಾಸ ಆದರೆ ಬಂಙ ಅಕ್ಕು.

“ನೀನೆಂತ ದಾಕ್ಷಿಣ್ಯ ಮಾಡೆಡ. ಊಟ ಕೊಟ್ಟತ್ತು ಹೇಳಿ ನಿನ್ನ ಸಂಬಳ ಕಮ್ಮಿ ಮಾಡ್ತಿಲ್ಲೆ. ಬಾ ಎಂಗಳೊಟ್ಟಿಂಗೆ ಕೂರು” ಹೇಳಿ ಮತ್ತೂದೆ ಒತ್ತಾಯ ಮಾಡಿಯಪ್ಪಗ ಬೇರೆ ಉಪಾಯ ಇಲ್ಲದ್ದೆ ಅವರೊಟ್ಟಿಂಗೆ ಉಂಬಲೆ ಕೂದತ್ತು. ‘ಬಹುಶಃ ಮದುವೆ ಕಳುದ ಮತ್ತೆ ರಜಾ ಸಮದಾನ, ನೆಮ್ಮದಿಲಿ ಉಂಬ ಸುರುವಾಣ ಊಟ ಇದು’ ಹೇಳಿ ಮನಸ್ಸಿಲ್ಲಿಯೇ ಜಾನ್ಸಿಂಡು ಹೊಟ್ಟೆ ತುಂಬ ಉಂಡತ್ತು.

ಉಂಡ ಮತ್ತೆ ಅದರತ್ರೆ ಬಟ್ಲು ತೆಗವಲೆ ಸಾನೂ ಬಿಟ್ಟಿದವಿಲ್ಲೆ ಪಂಕಜ
“ಪಾತ್ರ ತೊಳವಲೆ ಜನ ಇದ್ದು. ನೀನೆಂತ ಮಾಡೆಡ. ಪೂರ್ಣಿ ಹೋಪಗ ಅದರೊಟ್ಟಿಂಗೆ ನಿನ್ನಾಣ ಹಾಂಗೆ ಹೋಗು”
ಸುಶೀಲ ಮತ್ತೆ ಎಂತದೂ ಹೇಳಿದ್ದಿಲ್ಲೆ. ಪೂರ್ಣಿಯುದೆ ಸ್ವಂತ ತಂಗೆಯತ್ರೆ ಇಪ್ಪಷ್ಟು ಪ್ರೀತಿಲಿ ಸುಶೀಲನ ಕರಕ್ಕೊಂಡು ಹೋತು.

ದಿನಂಗೊ ಒಂದರ ಹಿಂದೆ ಒಂದರ ಹಾಂಗೆ ಉರುಳುಗ ಸುಶೀಯ ಬದುಕಿಲ್ಲೂ ಸಂತೋಷದ ಪಚ್ಚೆ ಬಣ್ಣ ಚಿಗುರಿತ್ತು.
ನಾರಾಯಣ್ ಅವರ ಮನೆಯ ಒಂದು ಜೆನರ ಹಾಂಗೆ ಪಂಕಜಂಗೆ ಎಲ್ಲಾ ಕೆಲಸಕ್ಕೂ ಸೇರುಗು. ಅವರ ಮಗ ದೂರ ಕೊಡೆಯಾಲಲ್ಲಿ ದೊಡ್ಡ ಡಾಕ್ಟರ° ಆಡ. ಅಮೇರಿಕಾಲ್ಲಿ ಕಲ್ತು ಬಂದ ಮತ್ತೆ ಈಗ ಅಲ್ಲಿ ಕೆಲಸಕ್ಕೆ ಸೇರಿದ್ದಾಡ. ಸೊಸೆ ಪೂರ್ಣಿ ಸರಕಾರಿ ಡಾಕ್ಟರ್ ಆದ ಕಾರಣ ಇದರ ಸದ್ಯಕ್ಕೆ ಬಿಟ್ಟಿಕ್ಕಿ ಹೋಪಲೆ ಎಡಿಯದ್ದೆ ಎರಡು ಜೆನ ಎರಡು ದಿಕೆ ಇರೆಕಾಗಿ ಬಂದದು.

ಒಂದೇ ತಿಂಗಳಿಲ್ಲಿ ಸುಶೀಲನ ರೂಪವೇ ಬದಲಿತ್ತು. ಚೆಂದ ಚೆಂದದ ಬಣ್ಣದ ಸೀರೆ ಸುತ್ತಿ, ಉದ್ದ ತಲೆಕಸವಿನ ಜೆಡೆ ಹಾಕಿ ತಲೆ ತುಂಬ ಹೂಗು ಸೂಡಿ ,ಕೈ ತುಂಬಾ ಬಳೆ ಹಾಕಿ ಕೊಶೀಲಿ ಮಗಳ ಕೊಂಗಾಟ ಮಾಡಿಂಡು ಆಡುವ ಸುಶೀಲನ ಒಂದು ದಿನ ಮನಗೆ ಬಂದ ದಿನೇಸ ಹೊಸ ಜೆನರ ನೋಡುವ ಹಾಂಗೆ ನೋಡಿತ್ತು. ಆ ನೋಟ ಕಾಂಬಗ ಸುಶೀಲನ ಎದೆಲೆಲ್ಲೋ ಹೆದರಿಕೆಯ ಕಿಚ್ಚಿನ ಮಿನ್ನಿ ಭಗ್ಗನೆ ಹೊತ್ತಿತ್ತು. ದಿನೇಸನ ಎದುರಂದ ತಪ್ಸಿ ಹೋಪ ದಾರಿ ಹೇಂಗೇಳಿ ಅರಡಿಯದ್ದೆ ಹುಲಿಯ ಎದುರು ನಿಂದ ಜಿಂಕೆ ಕುಞಿಯ ಹಾಂಗೆ ಕೈ ಕಾಲು ದರ್ಸಿಂಡು ನಿಂದತ್ತದು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

4 thoughts on “ಸ್ವಯಂವರ : ಕಾದಂಬರಿ : ಭಾಗ 35 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಸುಶೀಲಂಗೆ ಡಾಕ್ಟ್ರ ಮನೆಲಿ ಸತ್ಯ ಸಂಗತಿ ಹೇಳಿ ಅಪ್ಪ ಅಮ್ಮಂಗೆ ಒಂದು ಫೋನು ಮಾಡಿದ್ರೆ ಸುಲಾಭಲ್ಲಿ ನರಕ್ಕಂದ ಬಿಡುಗಡೆ ಸಿಕ್ಕುತಿತೊ ಎಂತೊ. ಅದರ ಒಣಕ್ಕು ಮರ್ಯಾದೆ ಬಿಟ್ಟತ್ತಿಲ್ಲೆ ಆಯ್ಕು. ಅಂತು ಸುಶೀಲನ ಅವಸ್ಥೆ ನೋಡಿಕ್ಕಲಾವ್ತಿಲ್ಲೆ. ನಮ್ಮ ಪೈಕಿ ಒಂದು ಕೂಸಿನ ಹಾಂಗೇ ಅನಿಸಿ ಬೇಜಾರಾವ್ತು. ಕತೆ ರೈಸಲಿ.

  2. ಎಂಥ ಕಷ್ಟದ ಅನುಭವ ಇಲ್ಲದ್ದ ಸುಶಿ ಈಗ ಎಂಥಾ ಉಷಾರಿ…ಒಂದು ಮಾತು ಅತ್ತೆಗೆ ಹೇಳಿತ್ತು..ಇಲ್ಲದ್ರೆ ಅದರ ಜುಟ್ಟು ಹಿಡಿತ್ತು. .ಈಗ ಅದಕ್ಕೆ ಅಪ್ಪನ ನೆನಪು.. ಕಣ್ಣೀರು ಬತ್ತು ಓದುವಾಗ… ಪುಳ್ಳಿ ಯ ಎಷ್ಟು ಪ್ರೀತಿ ಮಾಡು ತಿತ್ತವು… ಸುಶಿಗೆ ಒಪ್ಪಕ್ಕಂಗೆ ಆಹಾರ,ವಸ್ತ್ರ,ಎಲ್ಲ ಸಿಕ್ಕುವಾಗ ಅಪ್ಪ ಖುಷಿ ಓದುವವರಿಂಗು ಆವುತ್ತು..ಇನ್ನೂ ದಿನೇಶ ಎಂಥ ಮಾಡ್ತಾ..ಅದೇ ಹೆದರಿಕೆ..ಪೈಸೆ ಮೇಲೆ ಇಪ್ಪ ಪ್ರೀತಿ ಮನುಷ್ಯನ ಮೇಲೆ ಇಲ್ಲೆ.. ಸುಶಿಗೆ ಪೂರ್ಣಿ ಪಂಕಜ ಬೆಂಬಲ…ಎಲ್ಲ ಪಾಯಿಂಟ್ ಒಳ್ಳೆ ಓದಿಸಿಕೊಂಡು ಹೋವುತ್ತು..ಸುಷಿ ಮನಸ್ಸಿಂಗೆ ಶಕ್ತಿ ಧೈರ್ಯ ಬರಲಿ

  3. Kongaatada koosina bagge appa kandidda kanasellavu neerili homa addake vipareetha sankata padugu aa hiri jeeva.. koosinge appane preethiya saakaara moorthi.. ega aa appa enta madugo..

  4. Susheelana jeevana elloringu maadari.. madida thappina arivaagi paschataapa pattu bendugondidake jeevake hos hurupu.. magala bhavishyada bannada kanasu…baggidare mattu badudu nelake beelsuvavara edure thale etti eradu matadidake adara jeeva oluthu.. istadaru adara appa enta madtavayku heluva kuthoohala iddu.. appana maneya chitrana kodtera..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×