- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಕನ್ನಾಟಿ ಮುಂದೆ ಪ್ರತಿಬಿಂಬ ನೋಡಿಕೊಂಡಿತ್ತಿದ್ದ ಶಾಲಿನಿ ಕಣ್ಣು ಅದರ ತಲೆ ಕಡೆಂಗೆ ಹೋಗಿದ್ದತ್ತು. ಹಣೆ ಮೇಲೆ ಹಾರಿಕೊಂಡಿತ್ತಿದ್ದ ಒಂದೆರಡು ಕೂದಲಿನ ಮುಂಗುರುಳಿಲಿ, ಒಂದೇ ಒಂದು ಬೆಳಿ ಕೂದಲು ಕಂಡತ್ತೋ, ಶಾಲಿನಿಗೆ ಎನಗೆ ವಯಸ್ಸಾತು ಹೇಳಿ ಕಂಡದ್ದೇ ಅದರ ಮೊಗದಲ್ಲಿ ಒಂದು ಸಣ್ಣ ನೆಗೆ ಹಾಂಗೆ ಹಾದು ಹೋತು.
42 ವಸಂತಗಳ ಹೊಸ್ತಿಲಿಪ್ಪ ಶಾಲಿನಿ ಬದುಕು ಕಳೆದದ್ದು ಬರೀ ಜಂಜಾಟಲಿ. ಅದು ಅದರ ಗೆಂಡನ ಸಾವಿನ ಮತ್ತೆ ಕನ್ನಾಟಿ ಮುಂದೆ ನಿಂದದ್ದೇ ಅಪರೂಪ. ಮಗಳು ಪ್ರಜ್ವಿತ ಮುಂದಿನ ಭವಿಷ್ಯ ಅದರ ಕಣ್ಣ ಮುಂದೆ ಬಂದಪ್ಪಗ ಅಲಂಕಾರ ಇರಲಿ, ಒಂದು ಬೊಟ್ಟು ಸಹಾ ಅದು ಕನ್ನಾಟಿ ನೋಡಿ ಮಡುಗಿಕೊಳ್ಳದೇ , ಕೆಲಸಕ್ಕೆ ಓಡಿಕೊಂಡು ಇದ್ದ ದಿನಗಂಳೇ ಹೆಚ್ಚು ಹೇಳಿ ಹೇಳಲಕ್ಕು. ಆ ದಿನಂಗಳಿಗೆ ಅದರ ಹತ್ರೆ ಲೆಕ್ಕವೇ ಇತ್ತಿಲ್ಲೇ.
ಹಣೆಲಿ ಹಾರಿಕೊಂಡಿತ್ತಿದ್ದ ಮುಂಗುರುಳ ಸರಿಸಿಕ್ಕಿನಿಂದ ಶಾಲಿನಿಗೆ, ಉದಿಯಪ್ಪಗ ಮಗಳು ಕೇಳಿದ ಪ್ರಶ್ನೆ ನೆಂಪಾತು.
“ಅಮ್ಮಾ ನಿನಗೆ ಮತ್ತೆ ಮದುವೆ ಅಪ್ಪಲಾಗದಾ? ಆನು ನಿನ್ನ ಬಿಟ್ಟಿಕ್ಕಿ ಹೋದ ಮತ್ತೆ ನಿನ್ನೊಟ್ಟಿಂಗೆ ಆರು ಇರ್ತವು..?” ಅದು ಕೇಳಿಯಪ್ಪಗ,
“ಎಂತಕ್ಕೆ ಮಗಳೇ, ಈ ಅಮ್ಮನ ಈಗಲೇ ದೂರ ಮಾಡ್ತ ಅಂದಾಜಿಲಿದ್ದೇಯಾ?” ಅಮ್ಮ ಮೋರೆ ಊದಿಸಿ ಹೇಳಿಯಪ್ಪಗ, “ಅದು ಹಾಂಗಲ್ಲ ಅಮ್ಮ. ನೀನು ನೋಡ್ಲೆ ಎಷ್ಟು ಮುದ್ದಾಗಿದ್ದೆ ನೋಡು. ಎನ್ನ ನಿನ್ನ ಒಟ್ಟಿಂಗೆ ಕೂಸು ನೋಡ್ಲೆ ನಿಲ್ಸಿರೆ ಮಧ್ಮಾಳ್ ನೀನೇ ಹೇಳಿ ಹೇಳೇಕು ಹಾಂಗಿದ್ದಿ ನೀನು.” ಪ್ರಜ್ವಿತ ಅಮ್ಮನ ಕೆಪ್ಪಟೆಯ ಮೆಲ್ಲಂಗೆ ಚಿವುಟಿ, ಕಣ್ಹೊಡೆದಿಕ್ಕಿ, ಕನ್ನಾಟಿ ಮುಂದೆ ನಿಲ್ಸಿಕ್ಕಿ, “ಇದಾ ಈಗ ನೋಡು, ಈ ಗುಳಿ ಬೀಳ್ತ ಕೆಪ್ಪಟೆ, ಫಳಫಳ ಹೊಳೆತ ಹಾಂಗಿಪ್ಪ ಕಣ್ಣು, ಇದುವೇ ಸಾಕಲ್ಲದಾ ನಿನ್ನ ನಿಜ ವರ್ಷವ ಮರೆಮಾಚಲೇ. ಅಮ್ಮ ಆನು ಸತ್ಯ ಹೇಳ್ತಾ ಇದ್ದೆ. ನೀ ಇನ್ನೊಂದು ಮದುವೆಯಾಗು..” ಅಮ್ಮನ ಕೊರಳ ಸುತ್ತ ಕೈ ಹಾಕಿಕ್ಕಿ, ಮುದ್ದು ಮಾಡಿ, ಕಾಲೇಜಿಂಗೆ ಹೋದ ಮಗಳಿಂಗೆ ಎಂತ ಹೇಳಲೂ ಆಯಿದಿಲ್ಲೆ ಶಾಲಿನಿಗೆ.
ಆ ಕ್ಷಣ ಅದರ ಕಣ್ಣ ಮುಂದೆ ಬಂದದ್ದೇ ಶ್ರೀಕಾಂತ. ನಿಜ ಅವಂಗೂ ಅಷ್ಟೇ, ಶಾಲಿನಿಯ ಈ ಗುಳಿ ಕೆಪ್ಪಟೆ, ಹೊಳತ್ತ ಕಣ್ಣು, ಅದರ ತುಟಿಲಿ ಇಪ್ಪ ಮಾಸದ ಮುಗುಳ್ನೆಗೆ ಹೇಳಿರೆ ಆತು.ಶ್ರೀಕಾಂತನ ಕವಿ ಮನ ಹೆರ ಹಾಕದ ಕವನಂಗಳಿಲ್ಲ. ಆಗೆಲ್ಲಾ ಶಾಲಿನಿ ನಾಚಿಕೆಲಿ ತಲೆತಗ್ಗಿಸಿ ಬಿಡುತ್ತಿತ್ತು.
ಮದುವೆ ಕಳೆದ ಈ 21 ವರ್ಷಂಗಳಲ್ಲಿ ಅವ ಅದರ ನೆನಪಿನಲೆಲಿ ಬಾರದೇ ಇಪ್ಪ ದಿನಂಗಳೇ ಇತ್ತಿಲ್ಲೇ. ಅದು ಮನೆಯವಕ್ಕೂ ಕೂಡ ಗೊಂತಾಗಿಕೊಂಡಿತ್ತಿಲ್ಲೇ.
ಒಂದೇ ಸಮ ಕನ್ನಾಟಿಯ ನೋಡಿಕೊಂಡಿತ್ತಿದ್ದ ಶಾಲಿನಿಗೆ ಅದೇ ಕನ್ನಾಟಿ ಒಳ ಅಸ್ಪಷ್ಟ ರೂಪ ಕಣ್ಣಿಗೆ ಕಂಡತ್ತು. “ಹೇ ಶಾಲು ಎನ್ನ ನೆಂಪಿದ್ದಾ?” ಪುಚ್ಚೆ ಕಣ್ಣಿನ ಮಾಣಿ, ಚಿಗುರು ಮೀಸೆಯ ಕುಣಿಶಿಕ್ಕಿ, ತುಂಟು ನೆಗೆಯ ಅದರ ಕಡೆಂಗೆ ಬಿಸಾಕಿ ಎದುರು ಬಂದು ನೆಗೆ ಮಾಡಿದಂಗಾತು. ಶಾಲಿನಿ ಕೆಪ್ಪಟೆ ಕೆಂಪು ಕೆಂಪಾಗಿ , ಅದರ ಮನಸ್ಸು, 21 ವರ್ಷದ ಹಿಂದಕ್ಕೆ ಓಡಿತ್ತು.
ಕಾಲೇಜಿನ ಆ ದಿನಗಳು ಅವು. ಹರೆಯ ಉಕ್ಕಿ ಹರಿವಾಂಗಿಪ್ಪ ವಯಸ್ಸು. ಕಂಡದ್ದೆಲ್ಲಾ ಕಣ್ಣಿಂಗೆ ಸೊಗಸೇ. ಶಾಲಿನಿದು ಬಿ ಎಸ್.ಸಿ ಕೊನೆ ವರ್ಷ. ಅಂದು ಆ ವರ್ಷದ ಮೊದಲಾಣ ಕ್ಲಾಸು. ರಜಾ ಬೇಗ ಬಂದ ಶಾಲಿನಿಗೆ ಅದರ ಜೊತೆಲಿಪ್ಪವರ ಕಾಂಬ ಖುಷಿ. ಸಂತೋಷಲಿ ಬಂದ ಅದಕ್ಕೆ ಕಂಡದ್ದು ಖಾಲಿ ಖಾಲಿ ಕ್ಯಾಂಪಸ್. ಆರುದೇ ಬಂದಿತ್ತಿಲ್ಲೇ. ಬೇಗ ಬತ್ತೆಯಾ ಹೇಳಿದ್ದವು ಬಾರದೇ ಇಪ್ಪಗ ಅದಕ್ಕೆ ಉರಿ ಎದ್ದು ಎಂತ ಮಾಡೇಕು ಹೇಳಿ ಗೊಂತಾಗಿ ಕೊಂಡಿದ್ದಿತ್ತಿಲ್ಲೇ.
ಅಂಬಗಲೇ ಅದರೆ ಹತ್ರೆಂದ “ಎಕ್ಸ್ ಕ್ಯೂಸ್ ಮೀ..ಇಲ್ಲಿ ಸ್ಟಾಪ್ ರೂಮ್ ಎಲ್ಲಿ ಬತ್ತು ಹೇಳ್ಲೆಡಿಗಾ?” ಪ್ರಶ್ನೆ ಬಂದಪ್ಪಗ ಕೋಪಲಿ ಉರ್ಕೊಂಡು ಇತ್ತಿದ್ದ ಶಾಲಿನಿ “ಅಲ್ಲೇ ಮುಂದೆ ಹೋಗಿಕ್ಕಿ ಆರನ್ನಾದ್ರೂ ಕೇಳಿರೆ ಹೇಳ್ತಿಲ್ಲೆಯಾ? ಎನ್ನ ತಲೆಬೆಶಿ ಎನಗಿಲ್ಲಿ.” ತಕ್ಷಣ ಹಿಂದೆ ನೋಡದೇ ಕೋಪಲಿ ಹೇಳಿದ ಶಾಲಿನಿಯ ಮಾತಿಂಗೆ ಪೆಚ್ಚಾಗಿದ್ದ ಅವ ಶಾಲಿನಿಯ ಕಣ್ಣಿಂಗೆ ಕಣ್ಣು ಬೆರೆಸಿಯಪ್ಪಗ, ಅವನ ಪುಚ್ಚೆ ಕಣ್ಣಿನ ನೋಟ ಕಂಡು, ಶಾಲಿನಿಯೂ ಪೆಚ್ಚಾಗಿ, ಬೇರೆಂತ ಹೇಳದೇ ಹೆಗಲಿಲಿಪ್ಪ ಶಾಲು ಸರಿ ಮಾಡಿಕ್ಕಿ, ತಿರುಗಿ ನೋಡದೇ ಮುಂದೆ ಹೋತು.
ಎರಡ್ಹೆಜ್ಜೆ ಮುಂದೆ ಹೋದಿಕ್ಕಿ, ತಿರುಗಿ ಅವನ ಕಡೆ ನೋಡಿದ ಅದಕ್ಕೆ ಕಂಡದ್ದು, ಅದರನ್ನೇ ನೋಡಿಕೊಂಡಿತ್ತಿದ್ದ ಅವ , ಅದರತ್ತ ಒಂದು ನೆಗೆ ಹಾರಿಸಿ, ಕಾರಿಡಾರ ಕಡೆ ಹೆಜ್ಜೆ ಹಾಕಿಯಪ್ಪಗ, ಶಾಲಿನಿ ಹೃದಯ ಮೆಲ್ಲಗೆ ಬಡ್ಕೊಂಡತ್ತು. “ಲವ್ ಎಟ್ ಫಸ್ಟ್ ಸೈಟ್” ಹೇಳಿರೆ ಇದೆಯಾ? ಅದರ ತಲೆಲಿ ಸಂಶಯ ಶುರು ಆತು. ತಲೆ ಕೊಡವಿಕ್ಕಿ ಕ್ಲಾಸಿಂಗೆ ಹೋದರೆ, ಮೊದಲಾಣ ಕ್ಲಾಸ್ ಶುರುವಾದಪ್ಪಗ ಅವನೇ ಬರೇಕೆ? ಅವ ಬಂದಪ್ಪಗಲೇ” ಆನು ಹೊಸತಾಗಿ ಬಂದ ಕೆಮಿಸ್ಟ್ರಿ ಲೆಕ್ಚರರ್ ಶ್ರೀಕಾಂತ್” ಹೇಳಿ ಪರಿಚಯ ಮಾಡಿಕೊಂಡಪ್ಪಗ ಶಾಲಿನಿಗೆ ಭಾರೀ ನಾಚಿಕೆ ಆತು.
ಒಂದೇ ಒಂದು ಕ್ಷಮೆ, ಇಟ್ಸ್ ಓಕೆ ಹೇಳುವ ಪದ ಅವರಿಬ್ಬರ ಮಧ್ಯೆ ಬಂದತ್ತೋ, ಅವಾಗಲೇ ಅವರಿಬ್ಬರ ಮನ ಒಂದಾಗಿ ಹೋಗಿದ್ದತ್ತು. ಅವು ಮಾತಾಡಿದ್ದಕ್ಕಿಂತ ಹೆಚ್ಚಾಗಿ, ಅವರ ಕಣ್ಣು ಮಾತಾಡಿದ್ದು ಹೆಚ್ಚು. ಅವರ ಈ ಪ್ರೀತಿಯ ಬೀಜ ಹುಟ್ಟಿ, ಹೆಮ್ಮರವಾಗಿ ಬೆಳೆವಲೆ ಹೆಚ್ಚು ದಿನ ಬೇಕಾಯಿದಿಲ್ಲೇ.
ನಿಮಿಷಂಗ, ಗಂಟೆಂಗ, ದಿನಂಗ, ವಾರಂಗ, ಉರುಳುರುಳಿ ವರ್ಷ ಕಳದದ್ದೇ ಅವಕ್ಕೆ ಗೊಂತ್ತಾಯಿದಿಲ್ಲೇ. ಕಾಲೇಜ್ ಕ್ಯಾಂಪಸ್ ಮೂಲೆ ಮೂಲೆಂಗೂ ಈ ವಿಷಯ ಹಬ್ಬಿದ್ದರೂ, ಮನೆಯವಕ್ಕೆ ಮಾತ್ರ ಈ ವಿಷಯ ಎತ್ತಿದ್ದೇ ಇಲ್ಲೇ. ಈ ವಿಷಯ ಗೊಂತಾಗಿದ್ರೆ , ಎಲ್ಲಾ ಮನೆಯಂಗಳ ಹಾಂಗೆ ವಿರೋಧವೇ ಅಲ್ದಾ?
ಅಂದು ಕಾಲೇಜು ದಿನದ ಕೊನೆಯ ದಿನ ಆಗಿತ್ತಿದ್ದು. ಅದರ ಮರುದಿನ ಫೈನಲ್ ಇಯರ್ ಸ್ಟೂಡೆಂಟಿನವಕ್ಕೆ ಸೆಂಡ್ ಆಫ್ ಪಾರ್ಟಿ.
“ಶ್ರೀ, ಮುಂದಾಣ ಹೆಜ್ಜೆ ಎಂತ? ಎಂಗಳ ಭೇಟಿ ಹೇಂಗೆ? ನೀ ಬೇರೆ ನಾಳೆಂಗೆ ಊರಿಂಗೆ ಹೋವುತ್ತೆ. ಬಪ್ಪದು ಯಾವಾಗ? ನಿನ್ನ ನೋಡದೇ ಆನು ಹೇಂಗಿಪ್ಪದು?” ಶ್ರೀಕಾಂತ್ ಊರಿಂಗೆ ಹೋವುತ್ತೆ ಹೇಳಿಯಪ್ಪಗಳೇ ಶಾಲಿನಿಗೆ ಢವಢವ ಶುರುವಾಗಿತ್ತಿದ್ದು.
“ಹೇಳಿತ್ತಿದ್ದೆ ಅಲ್ಲದಾ ಶಾಲು, ಪರ್ಮನೆಂಟ್ ಜಾಬ್ ಅಪ್ಪ ಚಾನ್ಸ್ ಇದ್ದು. ಅದಕಲ್ಲದಾ ಆನು ಊರಿಂಗೆ ಹೆರಟದ್ದು. ಹಾಂಗೆ ಅಲ್ಲಿ ಒಂದು ಮದುವೆಯೂ ಇದ್ದು. ಮದುವೆ ಮುಗಿಶಿಕ್ಕಿ, ಜಾಬ್ ಕಥೆ ಎಂತ ಹೇಳಿ ನೋಡಿಕ್ಕಿ ಬಂದು ನಿನ್ನಪ್ಪನ ಮುಂದೆ ನಿಂದು, ಎನ್ನರಗಿಣಿಯ ಎನ್ನ ಕೈಗೆ ಒಪ್ಪಿಸಿ, ಕಣ್ಣರೆಪ್ಪೆ ಹಾಂಗೆ ಕಾಪಾಡಿಕೊಳ್ತೆ ಹೇಳಿ ಕೇಳ್ತೆ. ಆಗದಾ..? ನೀ ರಜಾ ಕಾಯೇಕಪ್ಪ. ಹಾಂಗೆ ಅರ್ಜೆಂಟ್ ಮಾಡಿರೆ ಹೇಂಗೆ ಹೇಳು..? ಮುಂದಕ್ಕೆ ಇದ್ದೇ ಇದ್ದಲ್ಲದಾ ನಮ್ಮ ಜೊತೆ ಜೊತೆಯ ಓಡಾಟ.” ಶಾಲಿನಿಯ ಮೊಗವ ಕೈಲಿ ಹಿಡಿದು, ಅದರ ಕಣ್ಣಲ್ಲೇ ನೋಟ ನೆಟ್ಟಿತ್ತಿದ್ದ. ಅವನ ಹಿತ ಸ್ಪರ್ಶ ಹೀಂಗೆ ಇರಲಿ ಹೇಳಿ ಶಾಲಿನಿಗೆ ಅನಿಸಿದರೂ, ಅದು ಸದ್ಯಕ್ಕೆ ಆವುತ್ತಿಲ್ಲೆ ಹೇಳಿ ಅನಿಸಿಯಪ್ಪಗ ದೂರ ಸರಿದಿತ್ತಿದವು ಇಬ್ಬರೂದೇ. ಈ ದೂರ ಅವರಿಬ್ಬರ ಶಾಶ್ವತವಾಗಿ ದೂರ ಸರಿಸುತ್ತು ಹೇಳಿ ಆ ಕ್ಷಣ ಅವಕ್ಕೆ ಗೊಂತಿತ್ತಿಲ್ಲೇ.
ಶ್ರೀಕಾಂತ್ ಅವನ ಊರಿಂಗೆ ಗಾಡಿ ಹತ್ತಿದ್ದ. ಅವರ ಕೊನೆಯ ಭೇಟಿಯಾಗಿತ್ತಿತದು. ಶಾಲಿನಿಗೆ ಕಾದು ಕಾದು ಸಾಕಾತು. ಅವನ ಒಂದು ಫೋನ್, ಮೆಸೇಜ್ ಯಾವುದೂ ಇತ್ತಿಲ್ಲೇ. ಶಾಲಿನಿಯೇ ಫೋನ್ ಮಾಡಿರೆ, ಫೋನ್ ಸ್ವಿಚ್ ಆಫ್. ತಲೆ ಕೆಟ್ಟು ಹೋಗಿತ್ತದಕ್ಕೆ. ಮನೆಯವಕ್ಕೂ ಹೇಳಲೆಡಿಯದ್ದೇ, ಎಲ್ಲಾ ಬೇನೆಯ ಒಳವೇ ಮಡಗಿಕೊಂಡತದು. ಮುಂದಾಣ ಓದಿಂಗೆ ಅವಕಾಶ ಇಲ್ಲದ್ಹಾಂಗೆ ಶಂಕರ ಅದರ ಬಾಳಿಂಗೆ ಬಂದು ಬಿಟ್ಟಿತ್ತಿದ್ದ. ಹೆಮ್ಮರವಾಗಿ ಬೆಳೆದಿತ್ತಿದ್ದ ಪ್ರೀತಿ ಬುಡಂದಲೇ ಉರುಳಿ ಹೋಗಿದ್ದತ್ತು. ಮರೆವ ಪ್ರಯತ್ನ ಅದು ಮಾಡ್ತಲೇ ಇದ್ದತು. ಆದರೂದೇ ಮನದ ಮೂಲೆಲಿ ಶ್ರೀಕಾಂತ ಬೆಚ್ಚಂಗೆ ಕೂದಿತ್ತಿದ್ದ.
ಸಣ್ಣ ಮನೆ, ಸಂಸಾರ ತೂಗಿಸಿಕೊಂಡು ಹೋಪಲೇ , ಸಣ್ಣದೂ ಅಲ್ಲದಾ, ದೊಡ್ಡದೂ ಅಲ್ಲದಾ ಕೆಲಸ ಶಂಕರಂಗೆ. ಹೆಂಡತಿಯ ಮೇಲೆ ಅಂವ ಮಡುಗಿದ್ದ ಪ್ರೀತಿ, ಕಾಳಜಿ ಕಂಡು ಶಾಲಿನಿ ಸೋತು ಹೋಗಿದ್ದತ್ತು.
ಶಾಲಿನಿ ಬದಲಾಗಿತ್ತು. ಇನ್ನು ಎನ್ನ ಬಾಳು ಶಂಕರನೊಂದಿಗೆ ಹೇಳಿ ನಂಬಿ ಅವನೊಟ್ಟಿಂಗೆ ಖುಷಿಲಿ ಬದುಕಲೆ ಶುರು ಮಾಡಿತು.
ಇವರ ಇಂಥ ಪ್ರೀತಿ ಕಂಡು ವಿಧಿಗೂ ಸಹಿಸಲೆ ಎಡಿಗಾಯಿದಿಲ್ಲೆ ಕಾಣ್ತು. ಎರಡು ವರ್ಷದ ಕೂಸು ಪ್ರಜ್ವಿತನ ಅದರ ಕೈಲಿ ಮಡುಗಿಕ್ಕಿ ಅವ ಬಾರದ ಲೋಕಕ್ಕೆ ಪಯಣ ಬೆಳೆಸಿತ್ತಿದ್ದ. ಬದುಕು ಅಶಾಶ್ವತ ಹೇಳುವದು ಎಷ್ಟು ಸತ್ಯ ಅಲ್ಲದಾ?.
ಬೇರೆ ಮದುವೆಯಾಗು ಹೇಳಿದ ಮನೆಯವರ ಮಾತಿಂಗೂ ಬಗ್ಗದೇ ಈ ಇಪ್ಪತ್ತು ವರ್ಷ , ಅನುಕಂಪದ ಆಧಾರದ ಮೇಲೆ ಸಿಕ್ಕಿತ್ತಿದ್ದ ಶಂಕರನ ಕೆಲಸದ ಜೊತೆಲಿ, ಅಪ್ಪನೂ, ಅಮ್ಮನೂ ಆಗಿ ಮಗಳ ಬೆಳೆಶಿತ್ತಿದದು ಯಾವ ಕುಂದುಕೊರತೆ ಇಲ್ಲದೇ..
ಈ ಇಪ್ಪತ್ತು ವರ್ಷದ ನಂತರ ಮಗಳಿಂಗೆ ಇಂಥ ಒಂದು ಯೋಚನೆ ಎಂತಕ್ಕೆ ಬಂತೋ ಅದಕ್ಕೆ ಅರ್ಥ ಆಯಿದಿಲ್ಲೇ.ಇಷ್ಟು ವರ್ಷವೇ ಕಳೆದೋತಡ , ಇನ್ನೆಂತ ಮದುವೆ..? ಶಾಲಿನಿ ನಿರ್ಲಕ್ಷ್ಯ ಮಾಡಿದುದರದೇ ಅಕಸ್ಮಾತ್ ಶ್ರೀಕಾಂತ್ ಸಿಕ್ಕರೆ…?. ಎಲ್ಲೋ ಒಂದು ಸಣ್ಣ ಆಶಾಭಾವನೆ ಅದಕ್ಕೆ.. ಹಾಂಗೆಯೇ ಸಣ್ಣ ನೆಗೆ ಬಂದು ಹೋತು ಅದರ ಮೊಗದಲ್ಲಿ. ಅಂವ ಮದುವೆಯಾಗಿ, ಅವನ ಸಂಸಾರದೊಟ್ಟಿಂಗೆ ಎಲ್ಲಿ ಸುಖವಾಗಿ ಇದ್ದನೋ ಎಂತೋ..? ಎನ್ನ ಮರುಳು ಆಶೆಯೇ..? ತಲೆಂದ ಆ ವಿಷಯ ತೆಗೆದು ಹಾಕಿತ್ತದು.
ಕಸ್ತಲಪ್ಪಗ ಕೆಲಸ ಮುಗಿಶಿಕ್ಕಿ ಬಂದ ಶಾಲಿನಿ, ಮನೆಯ ಬೀಗ ತೆಗೆದಿಕ್ಕಿ, ಕೈಕಾಲು ಮೋರೆ ತೊಳೆದಿಕ್ಕಿ ,ಕಾಫಿ ಮಾಡ್ಲೇ ಹೆರಟುಕೊಂಡು ಇತ್ತಿದ್ದು.
“ಅಮ್ಮಾ, ಅಮ್ಮಾ” ದಿನಾ ಬಪ್ಪ ಹಾಂಗೆ ಅಮ್ಮನ ದಿನಿಗೇಳಿಕೊಂಡೇ ಬಂದ ಪ್ರಜ್ವಿತ ಅಮ್ಮನ ಕಾಫಿ ಕೆಲಸಕ್ಕೆ ಬ್ರೇಕ್ ಹಾಕಿಸಿಕ್ಕಿ ಹಜಾರಕ್ಕೆ ಎಳಕೊಂಡು ಬಂದಿತ್ತು.
ಇವರಿಬ್ಬರಿಂಗೆ ಬೆನ್ನು ಹಾಕಿ ನಿಂದಿದ್ದ ವ್ಯಕ್ತಿ ಗೋಡೆಲಿಪ್ಪ ಪೋಟೋಗಂಳ ನೋಡಿಕೊಂಡು ಇತ್ತಿದ್ದ. ಅದಾರು ಹೇಳಿ ಶಾಲಿನಿಗೆ ಗೊಂತಾಯಿದಿಲ್ಲೇ.
“ಸರ್ ಇವು ಎನ್ನ ಅಮ್ಮ..” ಪ್ರಜ್ವಿತ ದಿನಿಗೇಳಿದಾಗ ಅವು ಅವರ ಕಡೆ ಮುಖ ಮಾಡಿತ್ತಿದ್ದವು.
ಶಾಲಿನಿ ಬೆಚ್ಚಿ ಬಿದ್ದತ್ತು. ಅವನೇ ….ಅವನೇ ಪುಚ್ಚೆ ಕಣ್ಣಿನ ಮಾಣಿ… ಶ್ರೀಕಾಂತ. ಅದರ ಮನದನ್ನ. ಮನದೊಳಂಗೆ ಹಾಂಗೆ ಬಂದು ಹೇಳದೇ ಹೋದಂವ.ಅದರ ಕಣ್ಣಂಚು ಚಂಡಿ ಆತು. ಶ್ರೀಕಾಂತನ ಸ್ಥಿತಿಯೂ ಹಾಂಗೆ ಇದ್ದತ್ತು. ಆ ಪುಚ್ಚೆ ಕಣ್ಣಿಲೂ ನೀರು. ಮಾತು ಹೆರಡದ್ದೇ, ಒಬ್ಬರ ಮೋರೆ, ಒಬ್ಬ ನೋಡಿಕೊಂಡು ಇತ್ತಿದ್ದು ಕಂಡ ಪ್ರಜ್ವಿತ “ಅಮ್ಮ” ಹೇಳಿ ದಿನಿಗೇಳಿಯಪ್ಪಗ ಇಬ್ಬರಿಂಗೆ ಎಚ್ಚರ ಆತು.
“ಸರ್ ಇವ್ವೇ ಎನ್ನ ಅಮ್ಮ.ನಿಂಗ ಇನ್ನೂ ಮನದೊಳ ಪೂಜೆ ಮಾಡಿಕೊಂಡು ಇಪ್ಪ ನಿಂಗಳ ಪ್ರೀತಿಯ ಹೂಗು ಶಾಲಿನಿ..ಈ ದಿನಕ್ಕೆ ಕಾದುಕೊಂಡು ಇತ್ತಿದ್ದೆ. ಈಗ ನಿಂಗಳ ಎದುರೇ ನಿಲ್ಸಿದ್ದೆ ನೋಡಿ…” ಹೇಳಿದ ಪ್ರಜ್ವಿತ ,
“ಅಮ್ಮ ಹೇಂಗೆ ಗೊಂತಾತು ಹೇಳಿ ಆಶ್ಚರ್ಯ ಪಡೆಡ.ಸರ್ ಪರ್ಸ್ ಅಕಸ್ಮಾತ್ ಎನ್ನ ಕೈಗೆ ಸಿಕ್ಕಿದತ್ತು. ನಿಂಗಳಿಬ್ಬರ ಫೋಟೋ ಕಂಡತ್ತೋ ,ಎಲ್ಲಾ ಇವರ ಕೇಳಿ ತಿಳ್ಕೊಂಡಿತ್ತಿದ್ದೆ. ಅವರ ಪ್ರೀತಿ ಬಗ್ಗೆ ಹೆಮ್ಮೆ ಅನಸುತ್ತು ಎನಗೆ. ನಿನ್ನ ನೆನಪಿಲೇ ಈಗಲೂ ಜೀವನ ಪೂರ್ತಿ ಒಂಟಿಯಾಗಿ ಕಾಲ ಕಳಕೊಂಡು ಇಪ್ಪ ನಿಜವಾದ ಪ್ರೇಮಿ ಇವ್ವೇ ನೋಡು..” ಪ್ರಜ್ವಿತ ಹೇಳಿಯಪ್ಪಗ
“ಇವು ನಿಜವಾದ ಪ್ರೇಮಿಯಾ ?. ಊರಿಂಗೆ ಹೋಗಿ ಬತ್ತೆ ಹೇಳಿ ಹೇಳಿಕ್ಕಿ ಹೋದವ್ವು ಒಂದೇ ಒಂದು ಮೆಸೇಜ್, ಫೋನ್ ಕಾಲ್ ಮಾಡಿತ್ತಲ್ಲೇ.ಆನು ಫೋನ್ ಮಾಡಿರೆ , ಸ್ವಿಚ್ ಆಫ್. ಆನಿಲ್ಲಿ ಇವರ ಕಾದೊಂಡು ಕೂದದ್ದಕ್ಕೆ ಬೆಲೆಯೇ ಇಲ್ಲದೇ ಹೋತು. ಅಂದರೂದೇ ಎನಗೆ ಇವರ ಮೇಲೆ ಕೋಪ ಇತ್ತಿಲ್ಲೇ.. ಬೇನೆ ನುಂಗಿ ಆನು ಬದುಕುತ್ತಾ ಇದ್ದೆ. ಈಗಲೂದೇ ಕೋಪ ಇಲ್ಲೆ. ಆದರೆ ಅರ್ಧಕ್ಕೆ ಕೈಕೊಟ್ಟಿಕ್ಕಿ ಹೋದ್ದು ಎಂತಕ್ಕೆ ಹೇಳಿ ಆನು ಅರಿಯೇಕು.. ಹೇಳಲೆ ಎಡಿಗಾ..?” ಶಾಲಿನಿ ಮಾತಿಲಿ ಅದು ಅಷ್ಟರವರೆಂಗೆ ತಿಂದ ಬೇನೆ ಕಂಡುಕೊಂಡಿತ್ತಿದ್ದತ್ತು.
ಶ್ರೀಕಾಂತ ಹೇಳಲೆ ಬಾಯಿ ತೆರೆದಂವ ಪ್ರಜ್ವಿತ ಕೈ ಸನ್ನೆ ಮಾಡಿಯಪ್ಪಗ ಸುಮ್ಮನಾಗಿತ್ತಿದ್ದ.
“ಅವರ ಪರಿಸ್ಥಿತಿ ಹಾಂಗಿತ್ತಿದ್ದಮ್ಮ. ಊರಿಂಗೆ ಹೋದವ್ವು ಅವರ ಜಾಬ್ ವಿಚಾರಿಸಿಕ್ಕಿ, ಅದು ಖಾತ್ರಿ ಹೇಳಿ ಅದಪ್ಪಗ ಖುಷಿಲಿ ಮದುವೆಗೆ ಹೆರಟವು. ಆಗ ಆದ ಆಕ್ಸಿಡೆಂಟಲಿ ಇವರ ಅಕ್ಕ, ಬಾವ, ಅಪ್ಪ , ಅಮ್ಮ ಎಲ್ಲಾ ಸ್ಪಾಟ್ ಡೆತ್ ಆಗಿ, ಇವ್ವುದೇ , ಇವರ ಅಕ್ಕನ ಮಗ ಚಿರಾಗ್ ಮಾತ್ರ ಉಳ್ಕೊಂಡದ್ದು. ಮೊಬೈಲ್ ಎಲ್ಲಿ ಇಡ್ಕಿ ಹೋಗಿತ್ತೋ ಎಂತೋ.. ವಿಷಯ ಹೇಳಲೆ ಅವಕ್ಕೆ ಮಾರ್ಗ ಬೇಡದಾ? ಎಲ್ಲಾ ಒಂದು ಹದಕ್ಕೆ ಬಂದಪ್ಪಗ ನಿನ್ನ ಮದುವೆಯೂ ಆಗಿಹೋಗಿತ್ತಿದ್ದು.ಬೇರೆ ಆರು ಇವರ ಬಾಳಿಂಗೆ ಜೊತೆ ಅಪ್ಪದು ಇವಕ್ಕೆ ಖುಷಿಯೇ ಇತ್ತಿಲ್ಲೇ. ಚಿರಾಗ್ ಇವರ ಕಣ್ಮಣಿ ಆಗಿತ್ತಿದ್ದ. ಅವನ ಸಾಂಕುತ್ತಾ ಇಷ್ಟು ವರ್ಷ ಕಳೆದವು.ಅವ್ವು ಬೇಕು ಹೇಳಿ ನಿನ್ನ ಬಿಟ್ಟು ಹೋದದ್ದಲ್ಲ . ಇದರಲ್ಲಿ ಅವರ ತಪ್ಪು ಎಂತ ಇದ್ದು..?” ಪ್ರಜ್ವಿತ ಎಲ್ಲಾ ವಿವರಂಗಳ ಶಾಲಿನಿ ಎದುರು ತೆರೆದಪ್ಪಗ ಶಾಲಿನಿಗೆ ಎಲ್ಲಾ ಅರ್ಥ ಆತು.
“ಇಷ್ಟೆಲ್ಲಾ ಆಗಿ ಹೋತ ಎನ್ನ ಶ್ರೀ ಬಾಳಿಲಿ. ಅಂವ ಇನ್ನೂ ಎನ್ನ ನೆಂಪಿಲಿ, .. ಹೀಂಗೆ ಒಂಟಿಯಾಗಿ” ಶಾಲಿನಿಂಗೆ ಯೋಚಿಸಿಯಪ್ಪ ಅದರ ಹೃದಯವ ಆರೋ ಹಿಂಡಿದ ಹಾಂಗೆ ಬೇನೆ ಆತು. ಆಧಾರಕ್ಕೆ ಸೋಫಾದ ತುದಿ ಹಿಡಿದ ಶಾಲಿನಿ ಮನಸ್ಥಿತಿ ಶ್ರೀಕಾಂತಂಗೆ ಗೊಂತಾಗಿ, “ಶಾಲು” ಮೊದಲಿನ ಹಾಂಗೆ ಸಿಹಿಯಾಗಿ ದಿನಿಗೇಳಿದಾಗ ಶಾಲಿನಿಗೆ ತಡಕೊಂಬಲೇ ಆಯಿದಿಲ್ಲೇ. ಕಣ್ಮುಚ್ಚಿ ನಿಂದ ಅದರ ಕಣ್ಣಿಂದ ಅಶ್ರುಧಾರೆ ಹಾಂಗೆ ಕೆಪ್ಪಟೆ ಮೇಲಂಗೆ ಹರಿದತ್ತು.
“ಶಾಲು ನೀ ಕೂಗಿದರೆ, ಎನಗೂ ಕೂಗೇಕು ಹೇಳಿ ಆವುತು. ನೀನಿಲ್ಲದೆ ಇಷ್ಟು ವರ್ಷ ಅದ್ಹೆಂಗೆ ಬಾಳಿದೆನೋ ? .ನೀ ಸಿಕ್ಕುತ್ತೆ ಹೇಳುವ ಆವ ಭರವಸೆಯೂ ಎನಗಿತ್ತಿಲ್ಲೇ. ನಿನ್ನ ಮಗಳು ಅಂಬಗಂಬಗ ಹೇಳಿಕೊಂಡು ಇತ್ತಿದ್ದು. ನಿಂಗ ಮದುವೆ ಆಗಿ ಸರ್. ಆನು ಕೂಸು ಹುಡುಕುತ್ತೆ ಹೇಳಿ. ಆ ಕೂಸು ನೀನೇ ಹೇಳಿ ಈಗೆನಗೆ ಅರ್ಥ ಆತು ನೋಡು. ಹೇಳು ಶಾಲು ಎನ್ನ ಮದುವೆ ಆವುತ್ತೆಯಾ ?” ದನಿಯಲ್ಲಿ ಆವ ಏರಿಳಿತ ಇಲ್ಲದೇ ಅಂವ ಹೇಳಿಯಪ್ಪಗ,
ಮುಚ್ಚಿತ್ತಿದ್ದ ಕಣ್ಣುಗಳ ತಕ್ಷಣ ತೆರೆದ ಶಾಲಿನಿ ಪ್ರಜ್ವಿತ ಎಲ್ಲಿಯಾರು ಇದ್ದ ಹೇಳಿ ಸುತ್ತ ನೋಡಿತು.ಆದರೆ ಪ್ರಜ್ವಿತ ಅದು ಆವ ಮಾಯದಲ್ಲಿ ಅಲ್ಲಿಂದ ಹೋಗಿತ್ತಿದ್ದೋ ಎಂತೋ ?. ಅದು ಅಲ್ಲಿ ಇತ್ತಿಲ್ಲೆ.
“ಅರ್ಧ ಬಾಳೇ ಮುಗ್ದು ಹೋತು ಶ್ರೀ..ಈಗೆಂತಕ್ಕೆ ಮದುವೆ? ಸಮಾಜ ಎಂತ ಹೇಳುಗು.”
“ಆಗಲಿ ಅದಕ್ಕೆಂತ.. ಅಂದು ಸಿಕ್ಕದ ನೀನು ಇಂದು ಸಿಕ್ಕಿದ್ದಿ ..ಸಮಾಜದ ವಿಷಯವೇ ಬೇರೆ ಬಿಡು. ಅದು ಎಂಗ ಸರ್ತ ಇದ್ದರೂ ಹೇಳುತ್ತು, ಇಲ್ಲದರೂ ಹೇಳುವದು ಹೇಳಿಯೇ ಹೇಳುತ್ತು.ನಿನ್ನ ಅಭಿಪ್ರಾಯ ಎಂತ ಈಗ. ಅದು ಮುಖ್ಯ ಅಷ್ಟೇ ಹೊರತು ಸಮಾಜದಲ್ಲ. ಹೇಳು ನೀನು ಎನ್ನ ಮದುವೆ ಆವುತೆಯಾ..?” ಪುನಃ ಕೇಳಿದ್ದ.
ಎಷ್ಟೋ ಸರ್ತಿ ಆನು ಎನ್ನ ಶ್ರೀ ಸಿಕ್ಕರೆ..ಹೇಳಿಕೊಂಡು ಇತ್ತಿದ್ದೆ. ಈಗ ಅವನೇ ಎದುರು ನಿಂದು ಕೇಳಿಯಪ್ಪಗ…? ಎಂತ ಹೇಳಲಿ ಆನು ? ಬೇಕು..ಬೇಡ..ಅದರ ಮನಸ್ಸು ಸಂದಿಗ್ಧತೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದತ್ತು.
“ಶಾಲು” ಅದರ ಹತ್ತರೆ ಶ್ರೀಕಾಂತ ಬಿಸಿ ಉಸಿರು ಕೆಪ್ಪಟೆ ಸೋಕಿಯಪ್ಪಗ ಹಳೇ ನೆಂಪು ಕಾಡಿತದಕ್ಕೆ. ತಕ್ಷಣ ತಿರುಗಿ ಅವನ ಕಣ್ಣೇ ನೋಡಿತು.ಅಲ್ಲಿ ಅದಕ್ಕೆ ಕಂಡದ್ದು ಅವನ ನಿರ್ವಾಜ್ಯ ನಿರ್ಮಲ ಪ್ರೇಮ. ಶಾಲಿನಿ ಸೋತು ಹೋಗಿದ್ದತ್ತು.
“ಹೂಂ” ಹೇಳುವ ಮೊದಲೇ ಶ್ರೀಕಾಂತ ಅವನ ಕೈಯೊಳ ಅದರ ಬಂಧಿಸಿಬಿಟ್ಟಿತ್ತಿದ್ದ.
ಕಾಪಿ ಮಾಡ್ಲೇ ಹೋಗಿತ್ತಿದ್ದ ಪ್ರಜ್ವಿತ ಕಾಪಿ ಗ್ಲಾಸ್ ಹಿಡ್ಕೊಂಡು ಬಂದದ್ದು, ಅವರಿಬ್ಬರ ಪ್ರೀತಿಯ ಆಲಿಂಗನ ಕಂಡು, ಎರಡ್ಹೆಜ್ಜೆ ಹಿಂದೆ ಹೋದ ಅದರ ಕಣ್ಣಿಂದ ಖುಷಿಯ ಕಣ್ಣೀರು ಜಾರಿ ಕಾಪಿ ಗ್ಲಾಸಿಂಗೆ ಬಿದ್ದತ್ತು.