Oppanna.com

“ಗೆಣಂಗು ಸುಗುಣಂಗೆ”- ಎರಡ್ನೇ ತುಂಡು

ಬರದೋರು :   ಸುಭಗ    on   09/03/2011    20 ಒಪ್ಪಂಗೊ

ಸುಭಗ

ಅಡಕ್ಕೆ  ಕೊಯ್ವಲೆ `ಅಣ್ಣೆರೆ, ಏನ್ ಎಲ್ಲೆ ಬರ್ಪೆ-ತತ್ತುಂಡ ಎಲ್ಲಂಜಿ ಗೇರಂಟಿ ಬರ್ಪೆ’ ಹೇಳಿ ವಾಯಿದೆಹಾಕಿಕ್ಕಿ,  ನೂರ್ರುಪಾಯಿ ಎಡ್ವಾನ್ಸು ಪೀಂಕುಸಿಂಡು ಅಕೇರಿಗೆ ನವಗೆ ಚೊಕ್ಕಕೆ ಮೂರು ನಾಮ ಎಳವ ಕೆಳಾಣ ಬೈಲಿನ ಚೋಮ ನಾಯ್ಕನ ಹಾಂಗೆ ನಮ್ಮ ಗ್ರಾಯಕಿ ‘ಕುಬೇರ’ನೂ ಕೈಕೊಟ್ಟನೊ ಜಾನ್ಸಿಂಡು ಇದ್ದಿದ್ದೆ.
ಅಬ್ಬ! ಹೇಳಿದ್ದರಿಂದ ಎರಡು ದಿನ ತಡವಾಗಿಯಾದರೂ ಅಂತೂ ಬಂದಿಕ್ಕಿದ ಪುಣ್ಯಾದಿಗ! ಬಚಾವು..ಇನ್ನು ನಾವು ಮಾತಾಡಿಂಡು ಇದ್ದಿದ್ದ ಶುದ್ದಿ ಮುಂದರ್ಸಲೆ ಅಡ್ಡಿ ಇಲ್ಲೆ.

* * *

ಶರ್ಮಪ್ಪಚ್ಚಿಗೆ ಮದಾಲು ಗೊಂತಾಯಿದು.
ಅಪ್ಪು.
ಕಳುದವಾರ ಸುಗುಣ ಗೆಣಂಗು ಸುಟ್ಟಾಕಿಂಡಿಪ್ಪಗ ಆನು ಹೇಳ್ಳೆ ಹೆರಟ ಶುದ್ದಿ ಅಪ್ಪಚ್ಚಿ ಹೇಳಿದ ಹಾಂಗೆ ಎಡಂದ ಬಲಕ್ಕೂ ಬಲಂದ ಎಡಕ್ಕೂ ಓದ್ಲೆ ಎಡಿಗಪ್ಪ ಶಬ್ದಚಮತ್ಕಾರದ ಬಗ್ಗೆಯೇ.

ನೋಡಿ, ನಾವು ಎಲ್ಲರೂ ಎಂತರನ್ನಾರು ಬರವಗ ಬಲದ ಕೈಲಿ ಪೆನ್ನು ಹಿಡ್ಕಂಡು ಕಾಕತದ ಎಡದ ಹೊಡೆಂದ ಬರವಲೆ ಸುರುಮಾಡ್ತು ಅಪ್ಪೊ?
( ಕೆಲಾವು ಜೆನ ಎಡದ ಕೈಲಿ ಬರವವೂ ಇದ್ದವು. ಆದರೂ ಅವ್ವುದೆ ಬರವದು ಎಡತ್ತಿಂದ ಬಲತ್ತಿಂಗೇ.) ಓದುದೂ ಹಾಂಗೇ! ಹೀಂಗೆ ಬರದ್ದರ ನಾವು ಒಂದುವೇಳೆ ಪೆದಂಬು ಓದಿರೆ ಎಂತಕ್ಕು?
‘ಒಪ್ಪಣ್ಣ’ ಹೇಳಿ ಇಪ್ಪದು ‘ಣಪ್ಪಒ’ ಹೇಳಿ ಅಕ್ಕು. ಓದಲೆ ನೇರ್ಪಕ್ಕೆ ನಾಲಗೆ ಮೊಗಚ್ಚುತ್ತಿಲ್ಲೆ. ಮಾಂತ್ರ ಅಲ್ಲ, ಆ ಶಬ್ದಕ್ಕೆ ಅರ್ಥವೂ ಇಲ್ಲೆ! ಎಷ್ಟಾರೂ ಪೆದಂಬು ಪೆದಂಬೇ ಅಲ್ಲದೊ?!

ಆದರೆ ಕೆಲಾವು ಶಬ್ದಂಗೊ ಇದ್ದು.
ಬೊಳುಂಬು ಮಾವ ನೆಂಪುಮಾಡಿಕೊಟ್ಟ; ನಾವು ಸಣ್ಣಾಗಿಪ್ಪಗ ಕಲ್ತ ಕನಕ, ಜಲಜ, ನಯನ ಹೀಂಗಿಪ್ಪ ಶಬ್ದಂಗಳ ಈಗ ಒಂದಾರಿ ನೋಡುವೊ.
ಇದೆಲ್ಲ ಒಂದನೇ ಎರಡನೇ ಕ್ಲಾಸಿಲ್ಲಿ ಕಲಿಯುವಷ್ಟು ತೀರಾ ಸರಳ ಶಬ್ದಂಗೊಆಗಿದ್ದರೂ ಈ ಪದಂಗಳ ಎರಡೂ ಹೊಡೆಂದ ಓದ್ಲೆ ಎಡಿತ್ತು..!
ಅಂಬಗ ಈ ದೃಷ್ಟಿಲಿ ಇವುಗಳ ವಿಶೇಷ ಶಬ್ದಂಗೊ ಹೇಳಿ ಗುರುತುಸಲೆ ಅಡ್ಡಿ ಇಲ್ಲೆನ್ನೆ?
ಈ ರೀತಿಯ ಶಬ್ದಂಗೊ ಸಂಸ್ಕೃತಲ್ಲಿಯೋ ಕನ್ನಡಲ್ಲಿಯೋ ಮಾಂತ್ರ  ಇಪ್ಪದಲ್ಲ. ಇಂಗ್ಲಿಷಿಲ್ಲಿಯು ಇದ್ದು.  ಹೆಚ್ಚಿನ ಎಲ್ಲಾ ಭಾಷೆಗಳಲ್ಲಿಯೂ ಇದ್ದು. ಹಾಂಗಾರೆ ಹೀಂಗಿರ್ತ ಶಬ್ದಂಗೊಕ್ಕೆ ಪ್ರತ್ಯೇಕ ಹೆಸರು ಏನಾರೂ ಇದ್ದೊ? ಇದ್ದೊ ಕೇಳಿರೆ ಇದ್ದು.
ಅನುಶ್ರೀ ಹೇಳಿದಹಾಂಗೆ ಸಂಸ್ಕೃತಲ್ಲಿ ಇದಕ್ಕೆ ‘ಗತ ಪ್ರತ್ಯಾಗತ‘ ಹೇಳ್ತವು. (ಗತ= ಹೋದ್ದದು, ಪ್ರತ್ಯಾಗತ= ವಾಪಾಸು ಬಂದದು. ಹೋದ್ದದು ಬಂದದು ಒಂದೇಹಾಂಗೆ ಇಪ್ಪ ಕಾರಣ ಈ ಹೆಸರು.)   ದ್ವಿಮುಖಿಪದ’ ಹೇಳಿಯೂ ಹೇಳ್ತವು.
ಬೆಳ್ಳೆಕ್ಕಾರಂಗೊ ಇದಕ್ಕೆ  palindromes ಹೇಳಿ ಹೇಳ್ತವು. ಕನ್ನಡಲ್ಲಿ..? ಕನ್ನಡಲ್ಲಿ ಪ್ರತ್ಯೇಕ ಹೆಸರಿದ್ದಾಂಗೆ ಕಾಣ್ತಿಲ್ಲೆಪ್ಪ. ಬೇಕಾರೆ ನಾವು ಇದರ ಇರ್ತಲೆ ಶಬ್ದಂಗೊ ಹೇಳುವೊ.
ಈ ಶಬ್ದಂಗಳ ಕಾಂಬಗ ತಲೆಯೂ ಬೀಲವೂ ಒಂದೇಹಾಂಗೆ ಕಾಂಬ ಇರ್ತಲೆ ಹಾವಿನ ನೆಂಪಾವ್ತಿಲ್ಯೊ?
ಹಾಂಗಾಗಿ ಆ ಹೆಸರೇ ಇರಳಿ.

* * *

ಸರಿ; ಕನಕ ಜಲಜ ನಯನ ಎಲ್ಲೋರು ಇರಲಿ, ಅದಲ್ಲಿ ಅಷ್ಟು ದೊಡ್ಡ ಸಂಗತಿ ಮಾಡ್ಲೆ ಎಂತ ಇದ್ದು?
ಸಂಗತಿ ಎಂತರ ಹೇಳಿರೆ-ಭಾಷೆಲಿ ಈಗಾಗಳೇ  ಇಪ್ಪಂತಹ ಹೀಂಗಿರ್ತ ಸ್ವತಂತ್ರ ಶಬ್ದಂಗೊ ಮಾಂತ್ರ ಇರ್ತಲೆಯಾಗಿ ಇಪ್ಪದಲ್ಲ.
ಅದರ ನವಗೆ ಹೊಸತ್ತಾಗಿ ರಚನೆ ಮಾಡ್ಲೂ ಎಡಿತ್ತು! ಬೇಕಾದ ವಿಭಕ್ತಿಪ್ರತ್ಯಯಂಗಳ, ಸಂಧಿ ಸಮಾಸಂಗಳ ಸಹಾಯಂದ ಜಾಗ್ರತೆಲಿ ಶಬ್ದಕ್ಕೆ ಶಬ್ದವ ಜೋಡುಸಿ ಇರ್ತಲೆ ಪದಗುಚ್ಛವನ್ನೋ ವಾಕ್ಯವನ್ನೋ ರಚನೆ ಮಾಡ್ಲೆ ಸಾಧ್ಯ ಆವ್ತು.

ಇಲ್ಲಿ ನಾವು ಮುಖ್ಯವಾಗಿ ಗಮನುಸೆಕ್ಕಾದ ವಿಷಯ ಈ ಗತ ಪ್ರತ್ಯಾಗತ ಹೇಳುವಂತಾದ್ದು ಕೇವಲ ಒಂದು ಬಗೆಯ ಶಬ್ದಚಮತ್ಕಾರ ಹೇಳಿ. ಅಷ್ಟೇ.
ಹಾಂಗಾಗಿ ಇದಕ್ಕೆ ಶಾಸ್ತ್ರೀಯವಾದ ಏವದೇ ವಿಶೇಷ ನಿಯಮ ನಿಬಂಧನೆಗಳೋ ಲಕ್ಷಣಂಗಳೋ ಎಂತ ಮಣ್ಣೂ ಇಲ್ಲೆ.
ಇದು ಕವಿಗೊ ಅವರ ಪಾಂಡಿತ್ಯ ಪ್ರದರ್ಶನ ಮಾಡ್ಲೆ ಬೇಕಾಗಿ ಸ್ವಯಂ ನಿಯಮ ನಿರ್ಬಂಧ ಹಾಕಿಂಡು ಸಾಹಿತ್ಯ ರಚನೆ ಮಾಡುವ ಬಗೆ.
ಪ್ರಾಚೀನ ಸಾಹಿತ್ಯಂಗಳಲ್ಲಿ ಹಲವಾರು ರೀತಿಯ ಚಮತ್ಕಾರಂಗಳ ಮೂಲಕ ಕವಿಗೊ ತಮ್ಮ ವಿದ್ವತ್ ತೋರುಸಿದ ಉದಾಹರಣೆಗೊ ಬೇಕಾಷ್ಟು ಸಿಕ್ಕುತ್ತು.

ಒಬ್ಬ ಕವಿ ಬರೀ ಹೃಸ್ವ ಸ್ವರಂಗೊ ಮಾಂತ್ರ ಇಪ್ಪ ಶಬ್ದಂಗಳ ಉಪಯೋಗುಸಿ ಪದ್ಯ ರಚನೆ ಮಾಡಿರೆ ಮತ್ತೊಬ್ಬ ಕೇವಲ ಅಲ್ಪಪ್ರಾಣ ಇಪ್ಪ ಪದಂಗಳ ಸೇರುಸಿ ಶ್ಲೋಕ ಬರಗು.
ಇನ್ನೊಬ್ಬ ‘ ಇದಾ, ಆನು ಬರದ ಕಾವ್ಯಲ್ಲಿ ಕ ವರ್ಗದ ವ್ಯಂಜನಾಕ್ಷರಂಗೊ ಬಿಟ್ಟು ಬೇರೆ ಇದ್ದರೆ ತೋರ್ಸಿ..!’ ಹೇಳಿ ಸವಾಲು ಹಾಕುಗು.
ಶ್ರೀ ಅಕ್ಕ ಮನ್ನೆ ಬೈಲಿಂಗೆ ತಂದು ತೋರ್ಸಿದ, ಶ್ರೀ ಶಂಕರಾಚಾರ್ಯರು ರಚಿಸಿದ ಅಕ್ಷರಮಾಲಾ ಸ್ತೋತ್ರವೂ ಚಮತ್ಕಾರ ಕಾವ್ಯಕ್ಕೆ ಒಂದು ಉತ್ತಮ ಉದಾಹರಣೆ.

ಈ ಗತ ಪ್ರತ್ಯಾಗತ ಚಮತ್ಕಾರವ ಉಪಯೋಗುಸಿಯೂ ಸಂಸ್ಕೃತಲ್ಲಿ ಕಾವ್ಯ ರಚನೆ ಮಾಡಿದ್ದವು!

‘ಸೂರ್ಯಕವಿ’ ಹೇಳ್ತವ ಬರದ ರಾಮ ಕೃಷ್ಣ ವಿಲೋಮಕಾವ್ಯ (ಸಂಕೋಲೆ ಇಲ್ಲಿ ಮಡುಗಿದ್ದೆ) ಇನ್ನೊಬ್ಬ ವೇಂಕಟಾಚಾರ್ಯ ಹೇಳ್ತ ಕವಿ ರಚನೆ ಮಾಡಿದ ರಾಘವ ಯಾದವೀಯಮ್ (ಇದಾ ಸಂಕೋಲೆ) ಎರಡುದೆ ಈ ಕ್ರಮಲ್ಲಿ ಬರದ ಕಾವ್ಯಂಗೊ.
ಇದರ ಪ್ರತಿ ಚರಣವ ಸೀದಾ ಓದಿರೆ ಶ್ರೀರಾಮನ ಹೊಗಳುವಾಂಗೂ ಉಲ್ಟಾ ಓದಿರೆ ಶ್ರೀಕೃಷ್ಣನ ಹೊಗಳುವಾಂಗೂ ಇದ್ದಡ.

ಅಬ್ಬಾ ಅವರ ಸಾಮರ್ತಿಕೆಯೇ..!!
ಇದರ ಓದಿ ಅರ್ಥ ಮಾಡಿಯೊಂಬಲೂ ಅಷ್ಟೇ ಸಾಮರ್ತಿಕೆ ಬೇಕು. ಅಷ್ಟು ಕಡ್ಪ ಇದ್ದು ಇದು. (ನಮ್ಮ ಡಾಮಹೇಶಣ್ಣ ಒಂದು ಕೈ ನೋಡುಗೋ ಏನೋ 😉 )

* * *

ಹೀಂಗೆ ಗತ ಪ್ರತ್ಯಾಗತ ಸರ್ಕಸ್ ಮಾಡಿಂಡು ಕಾವ್ಯ ರಚನೆ ಮಾಡ್ಲೆ ಒಳ್ಳೆತ ವಿದ್ವತ್ ಬೇಕು. ನಮ್ಮಾಂಗಿಪ್ಪ ಸಾಮಾನ್ಯರಿಂದ ಹರಿಯ. ಒಪ್ಪಿಗೊಂಬೊ.

ಆದರೆ ಭಾಷೆಲಿ ಇಪ್ಪ ಇರ್ತಲೆ ಶಬ್ದಂಗಳ ಹುಡ್ಕಿತೆಗವದೋ ಸಣ್ಣ ಸಣ್ಣ ಇರ್ತಲೆಗಳ ರಚನೆ ಮಾಡುದೋ ಮಾಡ್ಲಕ್ಕನ್ನೆ..?

ಕುಬೇರನಿಗೇನಿರಬೇಕು‘  ಹೇಳ್ತದು ನವಗೆ ಲಾಗಾಯ್ತಿನಿಂದ ಗೊಂತಿಪ್ಪ ಒಂದು ಇರ್ತಲೆ.
ಕುಬೇರನಿಗೆ+ ಏನು+ ಇರಬೇಕು ಈ ಮೂರು ಶಬ್ದಂಗಳ ಸಂದುಸೇರುಸಿ ಪ್ರಾಕಿಲ್ಲಿ ಏವದೋ ಪುಣ್ಯಾದಿಗ ಈ ದ್ವಿಮುಖಿಯ ಮಾಡಿಕೊಟ್ಟಿದ.
ಇಷ್ಟನ್ನಾರ ಇದು ಹೀಂಗೇ ಇದ್ದತ್ತು. ಈಗ ಇದರ ತುಂಡುಮಾಡಿಯೋ ಅಥವಾ ಇದಕ್ಕೆ ಸೇರ್ಸಿಯೋ ಬೇರೆ ಹೊಸ ಇರ್ತಲೆಗಳ ರಚನೆ ಮಾಡ್ಳೆಡಿಗೋ ಹೇಳ್ತ ಆಲೋಚನೆ ಎನಗೆ ಬಂತು.

ಆಲೋಚನೆ ಬಂದಪ್ಪದುದೆ ಕುಬೇರನ ಗಟ್ಟಿ ಹಿಡ್ಕೊಂಡೆ. ಈಗ ಅವ ಎನ್ನ ಚಾಕರಿ ಮಾಡಿಂಡು  ಎನ್ನೊಟ್ಟಿಂಗೇ ಇದ್ದ.
ನಿಂಗೊಗೆಲ್ಲ ಪರಿಚಯ ಮಾಡ್ಸಲೆ ಬೇಕಾಗಿ ‘ಕುಬೇರ ಬರಬೇಕು‘ ಹೇಳಿ ಅವನ ಬೈಲಿಂಗೆ ಕರಕ್ಕಂಡು ಬಯಿಂದೆ.
(ಎನಗೆ ರಜಾ ಬೇಜಾರ ಅಪ್ಪದು ಎಂತರ ಹೇಳಿರೆ ಸದ್ಯಕ್ಕೆ ಅವಂಗೆ ಕನ್ನಡ ಮಾಂತ್ರ ಬಪ್ಪದು. ನಮ್ಮ ಭಾಷೆ ಕಲಿತ್ತಾ ಇದ್ದನಷ್ಟೆ.) ಶುದ್ದಿ ಹೇಳಿ ಮುಗಿವನ್ನಾರ ‘ಕುಬೇರ ಇಲ್ಲೇ ಇರಬೇಕು’ ಹೇಳಿದ್ದೆ. ಅವ ಎನ್ನ ಎಷ್ಟು ನಂಬಿಕಸ್ಥ ಸೇವಕ ಹೇಳಿರೆ- ಆನು ‘ಕುಬೇರ ಕೂರಬೇಕು‘ ಹೇಳಿರೆ ಕೂರುಗು; ‘ಕುಬೇರ ಹಾರಬೇಕು‘ ಹೇಳಿರೆ ಬಾವಿಗೆ ಹಾರುಲೂ ತಯಾರು..!!

ಶುದ್ದಿ ಹೇಳಿ ದೊಂಡೆ ಪಸೆ ಆರಿತ್ತು. ಎನಗೂ ನಿಂಗೊಗೂ ಕುಡಿವಲೆ ಆಸರಿಂಗೆ ಅವನತ್ರೆ ತರುಸುವೊ. ‘ಬಾಯಾರಿಕೆ ಕುಬೇರ ತರಬೇಕು‘.
ಹೇಂಗೆ ತರೆಕು?
ಕುಬೇರ ತಗ್ಗಿ ಬಗ್ಗಿ ತರಬೇಕು‘ (ಸೇವಕ ಯಜಮಾನಂಗೆ ನಯ ವಿನಯಲ್ಲಿ ಆಸರಿಂಗೆ ತಂದುಕೊಡೆಕು ಅಲ್ಲದೊ?)

ನೋಡಿದಿರೊ? ಕುಬೇರನ ಏವೆಲ್ಲ ರೀತಿಲಿ ಆಟ ಆಡ್ಸಲೆ ಎಡಿತ್ತು!!

* * *

ಇದೆಲ್ಲ ಕನ್ನಡದ ಇರ್ತಲೆಗಳ ಕತೆ ಆತು. ಕನ್ನಡಲ್ಲಿ ಇಷ್ಟೇ ಅಲ್ಲ; ಹೀಂಗಿಪ್ಪ ಎಷ್ಟೋ ಶಬ್ದಂಗಳ ರಚನೆ ಮಾಡಿದ್ದವು.
ಎಷ್ಟು ಹೇಳಿ ಲೆಕ್ಕ ಸಿಕ್ಕಲೆ ಕಷ್ಟ ಇದ್ದು! ಇದರ ನಮ್ಮ ಭಾಷೆಲಿಯೂ ರಚನೆ ಮಾಡ್ಲೆ ಎಡಿಗೋ? ಎಡಿಗು ಹೇಳಿ ಈ ಶುದ್ದಿಯ ಸುರೂವಾಣ ತುಂಡು ಓದಿಯಪ್ಪಗಳೇ ನಿಂಗೊಗೆ ಗೊಂತಾಗಿಕ್ಕು.
ಇನ್ನೂ ಹೆಚ್ಚು ಉದಾಹರಣೆ ಕೊಡೆಕೊ? ಆನು ರಚನೆ ಮಾಡಿದ ಹನಿಯ ಇರ್ತಲೆಗಳ ಇಲ್ಲಿ ಕೊಡ್ಲಾವ್ತಿತ್ತು. ಆದರೆ ಅದರ ಎಲ್ಲ ಇಲ್ಲಿ ಬರದರೆ ಶುದ್ದಿ ಕಂಡಾಪಟ್ಟೆ ಉದ್ದ ಅಕ್ಕು.
ಮತ್ತೆ ಬೋಸ ಭಾವ ಬಂದು ‘ಕುಸಾಲು ಸಾಕು‘ ಹೇಳಿ ಬೆನ್ನಿಂಗೆ ಎರಡು ಗುದ್ದುಗು!

ಹಾಂಗಾಗಿ ಇದ, ದಣಿಯ ಇಲ್ಲೆ- ಕೆಲಾವು ಇರ್ತಲೆಗಳ ಮಾಂತ್ರ ಕೊಟ್ಟಿಕ್ಕಿತ್ತೆ.

  • ಕುಡು ಹುಡುಕು
  • ಗೆನ ಎಣ್ಣೆ ಎನಗೆ
  • ಸಿಕ್ಕುದರ ದಕ್ಕುಸಿ
  • ಕೆಡದ್ದ ಬಿದ್ದಡಕೆ
  • ಸುರು ಬೆಣ್ಣೆ ಬೆರುಸು
  • ಸುತ್ತು ಹೊತ್ತುಸು
  • ಸುಗುಡು ಮಡಿ ಮಾಡಿ ಮಡುಗುಸು

ಇನ್ನು ಹೆಚ್ಚು ಉದ್ದ ಎಳೆತ್ತಿಲ್ಲೆ. ಎನಗೂ ಒಂದು ಸಣ್ಣ ಕೆಲಸ ಬಾಕಿ ಇದ್ದು. ಎಂಗಳ ನೆರೆಕರೆ ವಿಷ್ಣುಅಣ್ಣನ ಮನೆಲಿ ನಾಳೆ ಒಂದು ಉಪನಯನ ಇದ್ದು. ಅದಕ್ಕೆ ಪಾಲಾಶ ಗೆಲ್ಲು ಬೇಕು ಹೇಳಿತ್ತಿದ್ದ. ಕಡುದು ಮಡುಗಿದ್ದೆ.
ಪಕ್ಕ ಹೋಗಿ ಗೆಲ್ಲಿನ ವಿಷ್ಣುವಿನಲ್ಲಿಗೆ ಎತ್ತುಸಿಕ್ಕಿ ಬತ್ತೆ. ಅಷ್ಟನ್ನಾರ ನಿಂಗಳೂ ಹೀಂಗಿರ್ತ ಇರ್ತಲೆಗಳ ರಚನೆ ಮಾಡಿ ಮಡುಗಿ.
ಈ ಶುದ್ದಿಯ ಓದಿ ಒಪ್ಪ ಕೊಡುವಗ ಒಟ್ಟಿಂಗೆ ನಿಂಗೊ ತಯಾರು ಮಾಡಿ ಮಡುಗಿದ ದ್ವಿಮುಖಿಗಳನ್ನೂ ಬರೆಯಿ. ಚೆಂದದ ರಚನೆ ಮಾಡಿಕೊಟ್ಟವಕ್ಕೆ ಪ್ರೈಸು ಇದ್ದು!

ಪ್ರೈಸು ಎಂತರ ಕೇಳ್ತೀರೊ?

ಸುಗುಣ ಸುಟ್ಟುಹಾಕಿದ ಗೆಣಂಗಿನ ಒಂದೊಂದು ತುಂಡು..!! 😉

ಆರುದೆ ‘ಉಮ್ಮಪ್ಪ, ನವಗರಡಿಯ!’ ಹೇಳಿ ತಳಿಯದ್ದೆ ಕೂರೆಡಿ ಮಿನಿಯ..
ಭಾಗ್ಯಕ್ಕ, ‘ಸಂಸ್ಕೃತ ಸುಟ್ಟು ತಿಂಬಲೂ ಅರಡಿಯ’ ಹೇಳಿದ್ದಿ.
ಸಂಸ್ಕೃತ ಬೇಡಪ್ಪಾ.. ಕನ್ನಡಲ್ಲಿಯೋ ನಮ್ಮ ಭಾಷೆಲಿಯೋ ಪ್ರಯತ್ನ ಮಾಡಿ. ಖಂಡಿತ ಎಡಿಗು ನಿಂಗೊಗೆ.

ಏ ಚೆನ್ನೈ ಭಾವಾ, ನಿಂಗೊ ನೆಡು ಇರುಳು ವರೆಗೆ ಮೊಬೈಲು ಕಿಟಿಕಿಟಿ ಮಾಡಿಂಡು ಸಮೋಸ ಹಂಚುತ್ತಾ ಇರ್ತಿ. ಆ ಹೊತ್ತಿಲ್ಲಿ ರಜ ಈ ವಿಷಯದ ಬಗ್ಗೆಯೂ ತಲೆ ಕೊಡಿ. ನಿಂಗೊಗೂ ಇರ್ತಲೆ ಹಿಡಿವಲೆಡಿಗು! 😉

* * *

ಎಳ್ಳಷ್ಟು ಸೇರ್ಸಿಕ್ಕಿತ್ತೆ-
ಈ ಶಬ್ದಚಮತ್ಕಾರ ವಿಷಯಲ್ಲಿ ಎನಗೆ ಆಸಗ್ತಿ ಬಪ್ಪಹಾಂಗೆ ಮಾಡಿದ್ದು ವಿಜಯ ಕರ್ನಾಟಕ ಪೇಪರಿಲ್ಲಿ ಪ್ರತಿ ಆದಿತ್ಯವಾರ ಪರಾಗ ಸ್ಪರ್ಶ ಹೇಳ್ತ ಅತ್ಯಂತ ಜನಪ್ರಿಯ ಅಂಕಣ ಬರವ ಶ್ರೀ ಶ್ರೀವತ್ಸ ಜೋಶಿ.
ಗತ ಪ್ರತ್ಯಾಗತ ವಿಷಯದ ಬಗ್ಗೆಯೇ ಅವು ಒಂದು ಲೇಖನ ಬರದ್ದವು (ಇದ, ಸಂಕೊಲೆ ಇಲ್ಲಿದ್ದು)

ಇದು ಮಾಂತ್ರ ಅಲ್ಲ; ಸಂಸ್ಕೃತ/ ಕನ್ನಡ ಸಾಹಿತ್ಯಲ್ಲಿ ಇಪ್ಪ ಹೀಂಗಿರ್ತ ಹತ್ತುಹಲವು  ವಿಶೇಷಂಗಳ ಬಗ್ಗೆ ಅವು ಸುಮಾರು ಲೇಖನಂಗಳ ಅವರ ಅಂಕಣಲ್ಲಿ ಬರದ್ದವು. ಅಂಕಣದ ಮೂಲಕವೇ ಪರಿಚಯ ಆಗಿ, ಈಗ ಎನ್ನ ಆತ್ಮೀಯ ಗೆಳೆಯ ಆಗಿಪ್ಪ ಸರಳ ಸಜ್ಜನ ಶ್ರೀ ಜೋಶಿಯವಕ್ಕೆ ಕೃತಜ್ಞತೆ ಸಲ್ಲಿಸುವ ಲೆಕ್ಕಲ್ಲಿ ಮದಾಲು ಒಂದು ತುಂಡು ಗೆಣಂಗು ಅವಕ್ಕೆ ಕೊಡ್ತಾ ಇದ್ದೆ.. 😉

ಸೂ:

  • ರಾಮಕೃಷ್ಣ ವಿಲೋಮ ಕಾವ್ಯಮ್ (ಸಂಕೊಲೆ)

  • ಶ್ರೀವತ್ಸ ಜೋಶಿ ಬರದ ಪರಾಗಸ್ಪರ್ಶ ಶುದ್ದಿ: (ಸಂಕೊಲೆ)

20 thoughts on ““ಗೆಣಂಗು ಸುಗುಣಂಗೆ”- ಎರಡ್ನೇ ತುಂಡು

    1. ‘ಭಯಂಕರ..?!?’ ಹ್ಹ ಹ್ಹ ಹ್ಹಾ.. ತಿಂಬಗ ಎಡೆದೊಂಡೆಗೆ ಸಿಕ್ಕಿಯೋ ಮಣ್ಣೊ ಆಯಿದಿಲ್ಲೆನ್ನೆ?! 😉

      ಒಪ್ಪಕ್ಕೆ ಧನ್ಯವಾದಂಗೊ ಪ್ರದೀಪಣ್ಣಾ

  1. ಸುಭಗ ಭಾವ, ಗತಪ್ರತ್ಯಾಗತದ ಗತಿಯ ಒಲಿಶಿಗೊಂಡು ಅದರ ಸುಲಾಬಲ್ಲಿ ಮಾಡ್ಲೆ ಆವುತ್ತು ಹೇಳಿ ಕೊಟ್ಟ ನಿಂಗಳ ಮೇಧಾ ಶಕ್ತಿಗೆ ಎನ್ನ ನಮನ.

    ನಿತ್ಯ ಉಪಯೋಗಿಸುವ ಶಬ್ಧಂಗಳಲ್ಲಿ ಎಲ್ಲೋರ ಗಮನಕ್ಕೆ ಬಪ್ಪ ಹಾಂಗೆ ಚೆಂದಲ್ಲಿ ವಿವರ್ಸಿದ್ದಿ. ಇದರ ಒಟ್ಟಿಂಗೆ ನಿಂಗೊ ಕೊಟ್ಟ ಸಂಗ್ರಹ ಯೋಗ್ಯ ಕೃತಿಗೊಕ್ಕೆ ತುಂಬಾ ಧನ್ಯವಾದಂಗ.

    1. ಶ್ರೀ ಅಕ್ಕನ ಅಭಿನಂದನೆಯ ಮಾತುಗಳ ಆನು ಅಕ್ಕರೆಯ ಆಶೀರ್ವಾದ ಹೇಳಿ ತೆಕ್ಕೋಳ್ತೆ.

      ವಿಷಯಲ್ಲಿ ಆಸಕ್ತಿ ತೋರಿ ಒಪ್ಪಕೊಟ್ಟು ಪ್ರೋತ್ಸಾಹಿಸಿದ್ದಕ್ಕೆ ನಿಂಗೊಗೂ ಧನ್ಯವಾದಂಗ

  2. ಎನಗೆ ಗೆಣ೦ಗು ಹೇಳಿದರೆ ಮೊದಲೇ ರಜ ಜಾಸ್ತಿ ಪ್ರೀತಿ…
    ಆದರೆ ಈ ಗೆಣ೦ಗಿಲಿ ಇಷ್ತು ವಿಷಯ೦ಗೊ ಇದ್ದು ಹೇಳಿ ಇ೦ದೇ ಗೊ೦ತಾದ್ದು ಮಾರಯ್ರೆ…

    ನಿ೦ಗಳ ಎಲ್ಲ ಪರಿಚಯ ಆಗಿ ಈ ಒಪ್ಪಣ್ನ ಸೇರಿದ ಮೇಲೆ ಎನ್ನ ಖಾಲಿ ಇದ್ದ ಉಪ್ಪರಿಗೆ ಜಾಗೆ ರಜ ರಜ ತು೦ಬುತ್ತಾ ಇದ್ದು……

    ಓಳ್ಲೆ ಲೇಖನ…..

    1. ಭೂಪಣ್ಣಂಗೆ ಭೋ ಪರಾಕ್..
      ಹ್ಹ ಹ್ಹ ಹ್ಹಾ…! ಗೆಣಂಗಿಲ್ಲಿ ‘ಉಪ್ಪರಿಗೆ’ ತುಂಬುಸಲೆ ಬೇಕಾದ ಪ್ರೊಟೀನುಗಳೂ ಇದ್ದು ಹೇಳಿ ಆತು ಅಂಬಗ! 😉

      ಒಪ್ಪ ಕೊಟ್ಟದು ಕೊಶೀ ಆತು. ಧನ್ಯವಾದಂಗೊ.

  3. ಭಾರೀ ಲಾಯಿಕ ಆಯಿದು. ಸುರುವಾಣ ತುಂಡು ಗೆಣಂಗಿಗಿಂತ ಎರೆಡ್ನೆದು ದೊಡ್ಡ ಆಯಿದು. ಮೂರನೆ ತುಂಡು ಇದ್ದಾ?

    1. ಧನ್ಯವಾದಂಗೊ ಅಪ್ಪಚ್ಚಿ.. ಗೆಣಂಗು ಮುಗಾತು. ಸುಡ್ಲೆ ಬೇರೆಂತಾರು ಸಿಕ್ಕುತ್ತೊ ನೋಡ್ತೆ 🙂

  4. ಭಾವಾ,
    ತು೦ಬಾ ಲಾಯ್ಕಿದ್ದು ವಿಷಯ.ಈ ಶಬ್ದ ಚಮತ್ಕಾರ ಎನಗೆ ಹೊಸತ್ತು. ವಿಲೋಮ ಕಾವ್ಯ ಅರ್ಥ ಆತಿಲ್ಲೆ.ರಾಘವ ಯಾದವೀಯ೦ ನ ಸಾಹಿತ್ಯ ನೋಡಿ ಅಪ್ಪಗ ಆಶ್ಚರ್ಯ ಆತು.ಅದ್ಭುತ.

    1. ಧನ್ಯವಾದಂಗೊ ಭಾವಾ.. ವಿಲೋಮಕಾವ್ಯಂಗಳ ಎನಗೂ ಓದ್ಲೆ ಎಡಿಗಾತೆ ಹೊರತು ಅರ್ಥ ಮಾಡಿಯೊಂಬಲೆ ಎಡಿಗಾಯಿದಿಲ್ಲೆ!

      ನಿಂಗಳ ಭಾಮಿನಿಯೊಳ ಏವಗ ಇರ್ತಲೆ ಹೊಕ್ಕುತ್ತು ಹೇಳಿ ಕಾದಂಡು ಇದ್ದೆ ಭಾವಾ..

  5. ಶೆಲ ಮಾಣೀ..ನೀನು ಭಾರೀ ಬಲ ಇದ್ದೆ..!

    ಬೇಡ.. ಬೇಪಲೇ ಬೇಡ.. ನೀನಿನ್ನು ಇಂಗ್ಲಿಶು ಕಲಿವಲೆ ಹೋಪದು ಬೇಡ್ಲೇ ಬೇಡ.. ಎನಗೆ ಇರ್ತಲೆ ಹಿಡಿವಲೆ ‘ಕಲುಶಲೆ’ ಬಾ..!

    ನೀನು ಇಟ್ಟು ಬರದ್ದಕ್ಕೆ ಎಟ್ಟು ಒಪ್ಪ ಕೊಟ್ರೂ ಸಾಲ-ಅಯ್ಯೋ ಕಟ್ಟ ಕಟ್ಟ!

    ಇದಾ ದೊಡ್ಡ ತುಂಡು ಗೆಣಂಗು ನಿನಗೆ..

    1. {ನೀನಿನ್ನು ಇಂಗ್ಲಿಶು ಕಲಿವಲೆ ಹೋಪದು ಬೇಡ್ಲೇ ಬೇಡ}
      ಚೆಲ, ಒಳ್ಳೆ ಕತೆ ನಿಂಗಳದ್ದು.
      ನಿಂಗೊಗೆ ಹೇಳುಲೆ ಸುಲಾಬ, ಆದರೆ ಬಂಡಾಡಿಅಜ್ಜಿ ಪರಂಚುಲೆ ಸುರುಮಾಡಿರೆ ಆನು ಕೇಳೆಡದೋ ಮತ್ತೆ..?! 🙁 😉

      ಅವು ಜೋರು ಪರಂಚುತ್ತವು, ಇಡೀ ಬೈಲಿಂಗೇ ಕೇಳ್ತ ನಮುನೆಲಿ.
      ಎನಗೆ ಮರಿಯಾದಿ ಹೋದಾಂಗಾಗಿ ನಾಚಿಗೆ ಆವುತ್ತು ಮತ್ತೆ! 🙁

  6. ಸುಭಗಣ್ಣಾ..
    ಗೆಣಂಗು” ಎರಡ್ಣೇ ತುಂಡು ಸುರುವಾಣದ್ದರಿಂದ “ದೊಡ್ಡದೊ“?
    ಕನಕ“ಮಜಲಿನ ಹತ್ತರೆ ಕೂದಂಡು ನಿಂಗೊಗೆ ಈ “ಸಲಕೆಯಕೆಲಸ” ವೋ? 🙂
    ಅದೇನೇ ಇರಳಿ,
    ಭಾರೀ ಶೋಕು ಆಯಿದು ಶುದ್ದಿ!

    ಬೈಲಿನೋರಿಂಗೆ ಈ ತಮಾಶೆ ಗೊಂತಿದ್ದೋ?:
    ಮೊನ್ನೆ ಸುಬಗಣ್ಣ ಅಪುರೂಪಲ್ಲಿ ಬಸ್ಸಿಲಿ ಹೆರಟದಡ, ದೊಡ್ಡಜ್ಜನ ಮನೆ ಹೊಡೆಂಗೆ!
    ಬಸ್ಸಿಂಗೆ ಹತ್ತಿದ್ದೇ, ಕಂಡೆಗ್ಟ್ರ ಬಂತು, ಟಿಕೇಟು ಕೊಡ್ಳೆ. “ಟಿಕೇಟಿಗೆ ಕ್ರಯ ಎಷ್ಟಾಗ್ತದೇ?” ಕೇಳಿದನಾಡ.
    ಎಷ್ಟೋ ಹೇಳಿತ್ತು, ದೊಡ್ಡ ಪೈಶೆ, ಟಿಕೇಟಿಂಗೆ ಅಪ್ಪದು.
    ದೊಡ್ಡ “ನೋಟು ಕೇಟಿ ಸುಬಗ ’ಬಸು ಟಿಕೇಟು? ನೋ’…!” ಹೇದು ಇಳುದು ಬೈಕ್ಕಿಲೇ ಹೋದನಡ!! 😉
    –> ಚೆನ್ನೈಭಾವಾ – ನೆಗೆ(ಬಂದರೆ) ಮಾಡ್ಳಾತು!
    ~

    ಹೇಳಿದಾಂಗೆ,
    ಯಿಬ್ರಾಯಿ“ಯ ಮರದಂಗುಡಿಯ ಹಿಂದೆ ಮಾರ್ಗಲ್ಲಿ ಹೋದರೆ ಸಿಕ್ಕುದು “ಬೊಳುಂಬೊ“? ಉಮ್ಮಪ್ಪ!

    1. ಹಹ್ಹ್ಹ್ಹಹಾ ಹೋ ಪಾ ನಿಂಗಳೆ. ಒಬ್ಬನಿಂದ ಒಬ್ಬ ಬಲ ಇದ್ದವಪ್ಪ . ಕನಕ ಮಜಲಿಂದ ಸಲಕೆ ಹಿಡ್ಕೊಂಡು ಯಿಬ್ರಾಯಿ ಕರಕ್ಕೊಂಡು ಬೊಳುಂಬಿನ್ಗೆ ಹೋದ್ದೆ!!

  7. ಸುಭಗಣ್ಣ,
    ಅಬ್ಭ ನಿ೦ಗಳ ಸಾಮರ್ಥ್ಯವೇ !! ಭಾರೀ ಪರಿಶ್ರಮಸಾಧ್ಯವಾದ ಲೇಖನವ ಲೀಲಾಜಾಲವಾಗಿ ಬರದ್ದೀರನ್ನೇ!!
    ಕುಬೇರ ನಿ೦ಗಳ ಹತ್ರೆ ಇಪ್ಪಗ `ಶಬ್ದ ನಿಧಿ’ಯುದೆ ನಿ೦ಗಳೊಟ್ಟಿಂಗೇ ಇಲ್ಲದ್ದಿಕ್ಕೊ?!!

    ನಿ೦ಗ ಕೊಟ್ಟ ದ್ವಿಮುಖಿ ಶಬ್ದಂಗಳಲ್ಲೆಲ್ಲ ಅಕ್ಷರಂಗ ವಿಷಮ ಸಂಖ್ಯೆಲ್ಲೇ (೩,೫,೭,೯,೧೧) ಇದ್ದು, ಅಪ್ಪೊ?!

    ಕೊಟ್ಟ ಶಬ್ದಲ್ಲಿ ಎರಡೆರಡು ಅಕ್ಷರ೦ಗಳ ಹಿಮ್ಮುಖವಾಗಿ ಒಟ್ಟಿ೦ಗೆ ಓದಿರೆ ಹೇಂಗೆ? ಉದಾಃ ಗತ ಪ್ರತ್ಯಾ ಗತ
    ಇನ್ನೊ೦ದು ರೀತಿಯ ದ್ವಿಮುಖಿ (ಯುಗಳ-ಗತಪ್ರತ್ಯಾಗತ) ಅಕ್ಕು!
    ಇದಾ ನಿ೦ಗೊಗೆ ಸುಲಭಲ್ಲಿ ದಕ್ಕಿಸಿ / ಸಿಕ್ಕಿದ ಕೆಲವು ಗತಪ್ರತ್ಯಾಗತಂಗ —
    ೨೦೦೨
    ೧೨೩೪೫೫೪೩೨೧
    ೨೧ ೦೨ ೨೦೧೨ (21 02 2012)

    🙂 😉 🙂

    1. ಮಹೇಶಣ್ಣ, ಒಪ್ಪಕ್ಕೆ ತುಂಬ ತುಂಬ ಧನ್ಯವಾದಂಗೊ.
      ನಿಂಗಳ ಹೊಗಳಿಕೆಗೆ ತಕ್ಕ ಸಾಮರ್ಥ್ಯ ನಮ್ಮಲ್ಲಿ ಇಲ್ಲೆಪ್ಪಾ!!
      ಮೂರು ವರ್ಷ ಮದಲು ರಜ ಸಮಯ ಗುರುಟಿಂಡು ಇದ್ದಿದ್ದ ವಿಷಯ ಪಕ್ಕನೆ ನೆಂಪಾತು. ಶುದ್ದಿಲಿ ವೈವಿಧ್ಯವೂ ಬಂದಹಾಂಗೆ ಆತನ್ನೆ ಹೇಳಿ ಈ ಪ್ರಯತ್ನ ಮಾಡಿದೆ. ನಿಂಗೊ ಶುದ್ದಿಯ ಪೂರ್ತಿ ಗಮನಿಸಿದ್ದು ನೋಡಿ ಕೊಶಿ ಆತು.

      ದ್ವಿಮುಖಿ ಶಬ್ದಂಗಳಲ್ಲಿ ಸಮ ಸಂಖ್ಯೆಯ ಅಕ್ಷರಂಗಳೂ ಇಪ್ಪಲಕ್ಕು. ಉದಾ- ‘ನಮ್ಮಮ್ಮನ’ ‘ತನ್ನ ಹೋಮ ಮಹೋನ್ನತ’. (ಆದರೆ ಬಹುಪಾಲು ದ್ವಿಮುಖಿಗೊ ಇಪ್ಪದು ವಿಷಮ ಸಂಖ್ಯೆಲಿಯೇ)

      ಓಹೋಯ್.. ಫೋನ್ ನಂಬ್ರವೋ ಪಿನ್ ಕೋಡೋ ತಾರೀಕೋ ಕೊಟ್ಟು ‘ಇದು ಎನ್ನ ಇರ್ತಲೆ’ ಹೇಳ್ತ ಕೆಟ್ಟುಕೆಣಿ ನೆಡೆಯ ಮಿನಿಯ… ಇದಕ್ಕೆ ಅಕ್ಷರವೇ ಆಯೆಕ್ಕು! 😉

  8. ‘ಸೂರ್ಯಕವಿ’ ಯ, ರಾಮ ಕೃಷ್ಣ ವಿಲೋಮಕಾವ್ಯ , ವೇಂಕಟಾಚಾರ್ಯನ ರಾಘವ ಯಾದವೀಯಮ್ ಕಾವ್ಯಂಗಳ ಮೇಲಂದ ಮೇಲೆ ನೋಡಿ ಅಪ್ಪಗ ಸರಿಯಾಗಿ ಅರ್ಥ ಆಗದ್ರೂ ರಜ ರಜ ಎಂತದೋ ತಲಗೆ ಹೋತು. ನಮ್ಮ ಹಳೆಯ ಕಾಲದ ವಿದ್ವಾಂಸರ ಪಾಂಡಿತ್ಯವ ಗ್ರೇಶಿ ಅಭಿಮಾನ ಉಕ್ಕಿ ಬಂತು.

    1. ಬೊಳುಂಬು ಮಾವಾ, ಒಪ್ಪಕ್ಕೆ ಧನ್ಯವಾದಂಗೊ.

      ಗಡಿಬಿಡಿ ಇಲ್ಲೆ.. ಸಾವಕಾಶ ಪುರ್ಸೊತ್ತು ಇಪ್ಪಗ ಪ್ರಯತ್ನ ಮಾಡಿ ನೋಡಿ. ಅಂತೂ ನಿಂಗಳಾಂಗಿಪ್ಪ ನಾಕು ಜೆನಕ್ಕೆ ಈ ವಿಷಯಲ್ಲಿ ಆಸಗ್ತಿ ಬಂತು ಹೇಳಿ ಆದರೆ ಆನು ಬರದ್ದು ಸಾರ್ಥಕ ಆತು! 😉

      ನಿಂಗೊ ಹೇಳಿದ್ದು ಅಕ್ಷರಶಃ ನಿಜ. ಪ್ರಾಚೀನ ವಿದ್ವಾಂಸರುಗಳ ಪಾಂಡಿತ್ಯ ನಮ್ಮ ಕಲ್ಪನೆಗೂ ಸಿಕ್ಕದ್ದಷ್ಟು ಅಗಾಧವಾಗಿ ಇದ್ದು. ಈ ತಲೆಮಾರಿನ ಜೆನಂಗೊ ಹಾಂಗಿಪ್ಪದರ ಬರವದು ಬಿಡಿ; ಅದರ ಓದಿ ಜೀರ್ಣಮಾಡಿಯೊಂಬಲೂ ಎಡಿತ್ತಿಲ್ಲೆ!

  9. ಸುಭಗನ ಪೆದಂಬು ಶಬ್ದಂಗೊ ಕೊಶಿ ಕೊಟ್ಟತ್ತು. ಅಂಬಗ ಸುಗುಣನ ಗೆಣಂಗಿನ ಕತೆಲಿ ಇಷ್ಟೆಲ್ಲಾ ವಿಷಯಂಗೊ ಇದ್ದಲ್ಲದೊ ? ಸುಭಗ ಹವ್ಯಕ ಶಬ್ದಂಗಳಲ್ಲಿ ಸರ್ಕಸ್ಸು ಮಾಡಿದ್ದದು ಲಾಯಕಾಯಿದು. ಈಗ ಅರ್ಜೆಂಟಿಂಗೆ ಗೆಣಂಗು ಸುಟ್ಟು ಹಾಕಲೆ ಎಡಿತ್ತಿಲ್ಲೆ. ಪ್ರಯತ್ನ ಮಾಡುವೊ ಆಗದೊ ಭಾವಯ್ಯ ?!

  10. ಏ ಭಾವ ನಿಂಗಳೆ…! ಗೆಣಂಗು ಹೆಗ್ಳ ಒಕ್ಕಿತ್ತು ಹೇಳಿ ಕುಬೇರನ ಹಿಡುದು ಲಾಯಕ್ಕ ಕುಣಿಸಿದಿ. ಈ ಕಲೆ ಅದ್ಭುತವೇ. ಒಳ್ಳೆ ಚಮತ್ಕಾರ ಕಲೆ.

    ಅಪ್ಪೋ ಭಾವ ಯೇವತ್ತೂ ಅದೂ ಇದೂ ಹೇಳಿ ಬಿಸಿ ಆಗಿಪ್ಪ ಮನುಷ್ಯ ನಿಂಗೊಗೆ ಇದರ ಚಿಂತನೆ ಮಾಡ್ಲೆ ಎಲ್ಲಿ ಸಿಕ್ಕುತ್ತು ಭಾವ ಟೈಮ್? ನೆಡು ಇರುಳೆಯೋ? ಈ ಸಾಹಸ ನಿಂಗಳಿಂದಲೇ ಎಡಿಗಷ್ಟೆ. ಸಮೋಸ ಕಥೆ ಎಂತಕೆ ಕೇಳ್ತಿ. ಅದಕ್ಕೂ ಗಿರಾಕಿ ಇದ್ದು ಭಾವ ನಾವಿಬ್ಬರು ಒರಗಿಯಾತೋ ಹೇಳಿ ಕಾದೊಂಡು ಹು.

    ಎಂತಾರು ಇಲ್ಲಿ ನಿಂಗಗೊಂದು ‘ಒಪ್ಪ’ ಕೊಡದ್ದೆ ಕಳಿಯ.

    ಬೇಸಗೆ ಬತ್ತು . ಇನ್ನಾಣದ್ದು ನಿಂಗಳದ್ದು ಆ ನೀರು ಬಿಡುತ್ತೇನ್ಗೆ ಹೇಳಿ ಆದಿಕ್ಕೋ ಹೇಳಿ ಒಂದು ಅಂತೆ ತರ್ಕ ನಮ್ಮಷ್ಟಕ್ಕೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×