ಹವಿಕರ ಅಥವಾ ಹವ್ಯಕರ ಮೂಲ ಸ್ಥಾನ ಯಾವದಾಗಿತ್ತು?
ಸನ್ಮಾನ್ಯ ಹವಿಕ ಬಂಧುಗೊಕ್ಕೆ ನಮಸ್ಕಾರಪೂರ್ವಕ ಸವಿನಯ ವಿಜ್ಞಾಪನೆಗೊ.
ಕೆಲವು ವರ್ಷ ಹಿಂದೆ “ನಮ್ಮ ಆದಿ ಸ್ತ್ರೀ ಪುರುಷರ ಜನ್ಮಭೂಮಿ ಯಾವದಾಗಿತ್ತು?” ಈ ವಿಷಯಲ್ಲಿ ಚರ್ಚೆ ಜಿಜ್ಞಾಸೆಗೊ ನಡಕ್ಕೊಂಡಿತ್ತು. ಕರ್ನಾಟಕವೇಯೋ ಅಲ್ಲ ಉತ್ತರ ಭಾರತವೋ? ಇದರ ಅರ್ಥ ನಾವೆಲ್ಲ ವಲಸೆ ಬಂದೊರು!. ಈ ಅಭಿಪ್ರಾಯ ಹವಿಕರೆಲ್ಲೋರ ಮನಸ್ಸಿಲಿ ಇದ್ದು ಹೇಳಿ ಆತು. ಇತ್ತಿತ್ಲಾಗಿ ಕೆಲವು ಮನೆತನದೊರು ತಮ್ಮ ವಂಶವೃಕ್ಷವ ಶೋಧನೆ ಮಾಡಿ ಪುಸ್ತಕ ಪ್ರಕಟಿಸಿದ್ದವು. ಆನು ನೋಡಿದ ಪುಸ್ತಕ ಕಿಳಿಂಗಾರು ಭಟ್ಟಕ್ಕಳ ವಂಶವೃಕ್ಷ. ಅದರಲ್ಲಿ ಅವರ ಹೆಚ್ಚುಕಮ್ಮಿ ಎಲ್ಲಾ ಸದಸ್ಯರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನೂ ಬರದ್ದವು. ಆದರೆ ಅವರ ಮೂಲಸ್ಥಳ ಯಾವದಾಗಿತ್ತು ಈ ವಿಷಯವ ಓದಿದ ನೆನಪಿಲ್ಲೆ. ನಮ್ಮ ಹವಿಕ ಬಂಧುಗೊ ಎಲ್ಲೊರು ಈ ರೀತಿಯ ಒಂದು ಪುಸ್ತಕ ಮಾಡಿ ಮಡ್ಕೊಂಡರೆ ಹೇಂಗೆ? ಮುಂದಾಣ ಪೀಳಿಗೆಯೊರಿಂಗೆ ಒಳ್ಳೆಯ ಒಂದು ಅಭಿಮಾನದ ಸಂಗತಿ ಆವುತ್ತಲ್ಲದಾ? ಸಾವಿರ ವರ್ಷಕ್ಕೂ ಮೇಲ್ಪಟ್ಟು ನಮ್ಮ ಕೌಟುಂಬಿಕ ಜೀವನ ಶೈಲಿಯ ವಿವಾಹ, ಪೂಜೆ, ಹೋಮ, ದೇವಕಾರ್ಯ ಷೋಡಶ ಸಂಸ್ಕಾರಂಗಳಲ್ಲಿ ಸಾಧ್ಯವಾದಷ್ಟು ಕೆಲವನ್ನಾದರೂ ಮಾಡಿಗೊಂಡು, ಉಪವಾಸ ವ್ರತಂಗಳ, ಗೋತ್ರ ಪ್ರವರಂಗಳ, ಅತ್ಯಂತ ಶ್ರದ್ಧೆಲಿ ಒಳ್ಶಿಗೊಂಡು ಇಂದ್ರಾಣವರೆಗೂ ಬಯಿಂದು. ಎಲ್ಲೆಲ್ಲಿಂದ ಬಂದರೂ ಯಾವ ಊರಿಂಗೆ ಹೋದರೂ ನಾವು ಹವಿಕರು ಹೇಳಿಗೊಂಬ ಅಭಿಮಾನ ಇದ್ದು. ಅದಕ್ಕೆ ಕಾರಣ ನಮ್ಮ ಹೆರಿಯೋರ ಸಚ್ಚಾರಿತ್ರ್ಯ, ಅತಿಥಿಸತ್ಕಾರ, ಉದಾರ ಹೃದಯ. ನಾವು ನಮ್ಮ ಮೂಲ ಪುರುಷರ ಬಗ್ಗೆ ಶೋಧನೆ ಮಾಡ್ತಾ ಹೋದರೆ, ನಮ್ಮ ಮೂಲ ಸ್ಥಳ ಯಾವದು ಹೇಳಿ ಗೊಂತಾಗದ್ದೆ ಇರ.
ಪ್ರಕೃತ ಎನಗೆ ಗೊಂತಿಪ್ಪಷ್ಟು ಎನ್ನ ಅಪ್ಪನ ಪೂರ್ವಜರು ದಕ್ಷಿಣ ಕನ್ನಡದ ಪುತ್ತೂರು ತಾಲೂಕಿಂಗೆ ಬಂದ ವಿಷಯವ ತಿಳಿಶೆಕ್ಕು ಹೇಳಿ ಮಾಡಿದ್ದೆ. ಸುಮಾರು ಅಂದಾಜಿ ಕ್ರಿ.ಶ. 1600 ರ ಹಿಂದೆ ಮುಂದೆ, ಒಬ್ಬ ಮಧ್ಯ ವಯಸ್ಸಿನ ಆಢ್ಯಪುರುಷ ಹೆಸರು ಈಶ್ವರ ಭಟ್ಟ ಹೆಬ್ಬಾರ, (ಹೆಬ್ಬಾರ ಹೇಳಿದರೆ ಕಂದಾಯ ವಸೂಲು ಮಾಡುವ ಅಧಿಕಾರಿ-ಕರಭಾರ-ಹೆಬ್ಬಾರ ಈ ರೀತಿಯ ಹೆಸರು ಉಪನಾಮ ಆ ಕಾಲದ್ದಾಗಿರೆಕ್ಕು. ಹಿರಿಯ ಬ್ರಾಹ್ಮಣ, ಗಣ್ಯ ವ್ಯಕ್ತಿ, ಶ್ರೇಷ್ಠ ಹೇಳಿಯೂ ಅರ್ಥ ಇದ್ದು)ಅಚುಮಿ (ಅಚುವಿ) ಮನೆ, ವಿಶ್ವಾಮಿತ್ರ ಗೋತ್ರ, ಶುಕ್ಲ ಯಜುರ್ವೇದ ಶಾಖೆಯೊನು, ಚಿನ್ನ ಬೆಳ್ಳಿ ನಾಣ್ಯಂಗಳ ಗೆಂಟುಕಟ್ಟಿಗೊಂಡು ತನ್ನ ,ಮೂರುಜೆನ ಮಗಂದ್ರೊಟ್ಟಿಂಗೆ ಕುದುರೆಗಳಲ್ಲಿ ಕೂದುಗೊಂಡು, ಅದಕ್ಕೆ ಸರಿಯಾದ ವೇಷಭೂಷಣಂಗಳನ್ನೂ ತೊಟ್ಟುಗೊಂಡು, ಹೆಚ್ಚಿನಂಶ ಮಾರ್ಚ್-ಏಪ್ರಿಲ್ ತಿಂಗಳ ಮಧ್ಯಕಾಲಲ್ಲಿ ಅಂಕೋಲ, ಗೋಕರ್ಣ ದಾಂಟಿಗೊಂಡು ಇನ್ನೂ ದಕ್ಷಿಣಕ್ಕೆ ಬತ್ತಾ ಇತ್ತಿದ್ದ°. ಈ ದೀರ್ಘಪ್ರಯಾಣ ಮಧ್ಯಲ್ಲಿ ಅವನ ಮಕ್ಕಳಲ್ಲಿ ಮಧ್ಯದೊನಿಂಗೆ ಸಿಡುಬು ರೋಗ ಬಂತು!. ಅಯ್ಯೋ ಕಷ್ಟವೇ! ಭಯಂಕರ ಜ್ವರ! ಮುಂದೆ ಪ್ರಯಾಣ ಹೇಂಗೆ? ಆ ಮಾಣಿಯೇ ಹೇಳಿದ “ಅಪ್ಪಾ°, ನಿಂಗೊ ಮುಂದುವರಿಶಿ, ಆನು ಈ ಗುಡ್ಡೆಲಿ ಬೀಜದ ಹಣ್ಣು ತಿಂದುಗೊಂಡಿರ್ತೆ. ಬದ್ಕಿ ಒಳುದರೆ ನಿಂಗಳ ನೋಡುವೆ. ನಿಂಗೊ ಎನ್ನೊಟ್ಟಿಂಗಿದ್ದರೆ,ನಾವು ಬಂದ ಕಾರ್ಯ ಕೆಡುಗು, ಎನ್ನ ರೋಗ ನಿಂಗೊಗೂ ಪಗರುಗು. ಹಾಂಗಾಗಿ ಈ ಕೂಡ್ಳೇ ನಿಂಗೊ ಹೆರಡಿ! ಇದುವೇ ಸರಿಯಾದ ನಿರ್ಧಾರ-ಈ ರೀತಿಲಿ ಅವರ ಒತ್ತಾಯಿಸಿ, “ಚಿಂತೆ ಮಾಡೆಡಿ, ದೈವೇಚ್ಛೆ ಇದ್ದರೆ ಏನೂ ಆಗ, ಸೌಖ್ಯಲ್ಲಿ ಆನು ಬಪ್ಪೆ” ಹೀಂಗೆ ಸಮಾಧಾನ ಮಾಡಿ ಕಳ್ಸಿದ°. ಅವನ ಹೃದಯ ಸಂಸ್ಕಾರ, ಕುಟುಂಬಪ್ರೇಮ, ಆದ್ದಾಗಲಿ ಎನಗೆ, ಬಂದದರ ಎದುರುಸುವ ದೈರ್ಯ, ಇದರ ಮೆಚ್ಚೆಕ್ಕಲ್ಲದಾ? ಇಂಥ ಮಾಣಿಗೆ ದೈವ ಸಹಾಯವೂ ಸಿಕ್ಕಿರೆಕ್ಕು. ಎರಡು ತಿಂಗಳು ಕಳಿವಾಗ ಅವ° ಗುಣ ಹೊಂದಿ ಅಣ್ಣ ತಮ್ಮ ಅಪ್ಪ° ಇಪ್ಪಲ್ಲಿಗೆ ಬಂದು ಸೇರಿದ. ಆದರೆ ಅವನ ಮೆಯ್ ಮೋರೆಲಿ ಸಿಡುಬಿನ ಕಲೆ! ಅದರಿಂದಾಗಿ ಅವ° ಪ್ರಾಯ ಕಳಿವಾಗ ಮಂಗಳಜ್ಜ° ಹೇಳಿ ಹೆಸರಾದ. ಅವನ ನಿಜನಾಮ ಅಳುದು ಹೋತು. ಇವನ ಅಣ್ಣ ಪದ್ಮನಾಭ, ತಮ್ಮ ನರಸಿಂಹ (ನರ್ಸ ಭಟ್ಟ) ಈ ನಾಲ್ಕೂ ಜೆನ ಬಂದು ನೆಲೆಊರಿದ ಜಾಗೆ, ಪುತ್ತೂರು ತಾಲೂಕು, ಕಬಕ ಗ್ರಾಮದ ಪೋಳ್ಯದ ಹತ್ತರೆ ಮುಂಗ್ರಿಮನೆ. ನಿಂಗೊಗೆ ಇದೊಂದು ಕಟ್ಟುಕಥೆಯಾಗಿ ಕಾಂಬಲೂ ಸಾಕು. ಆದರೆ ಇದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲೆ. ಸಿಡುಬು ಆದ ರೋಗಿ ಕಾಡುಗುಡ್ಡೆಲಿ ಬೀಜದ ಹಣ್ಣು ತಿಂದು, ಅದೂ ಕೂಡಾ ಒಂಟಿಯಾಗಿದ್ದುಗೊಂಡು ಬದ್ಕುಲಿದ್ದೋ? “ಸಾಧಿಸಿದರೆ ಸಬಳ ನುಂಗಲೆಡಿಗು” ಹೆರಿಯೊರ ಹೇಳಿಕೆ ಇದ್ದಲ್ಲದ್ದಾ? ದೃಢವಾದ ಮನಸ್ಸು, ಸಂಕಲ್ಪ ಇದ್ದರೆ ಎಂಥ ಪರಿಸ್ಥಿತಿಲಿಯೂ ಮನುಷ್ಯರಿಂಗೆ ಗೆಲುವು ಸಾಧ್ಸುಲೆಡಿಗು. ಆದರೆ ಇದರಲ್ಲಿ ಒಂದು ವೈದ್ಯವಿಜ್ಞಾನವ ಗುರುತುಸಲೆಡಿಗು. ಬೀಜದ ಹಣ್ಣು (ಗೇರು ಹಣ್ಣು) ಇದರಲ್ಲಿ ಕಿತ್ತಳೆ (ಚಿತ್ತುರ್ ಪುಳಿ) ಹಣ್ಣಿಲಿಪ್ಪದರಿಂದ ಹೆಚ್ಚುವಿಟಮಿನ್ ’ಸಿ’ (C) ಇದ್ದೊಡೊ. ಹಾಂಗಾಗಿ ಆ ಹಣ್ಣು ಸಿಡುಬಿನ ಹುಣ್ಣುಗಳ ಗುಣಮಾಡುಲೆ ರಾಮಬಾಣಾವೇ ಆಗಿ ಹೋದಿಕ್ಕು. ಮತ್ತೊಂದು, ಹೆಚ್ಚಾಗಿ ಸಿಡುಬು, ಕೋಟ್ಳೆ (ಚಿಕನ್ ಪಾಕ್ಸ್) ಎಲ್ಲ ಬಪ್ಪಂಥ ಕಾಲ ಮಾರ್ಚ್ ಎಪ್ರಿಲ್ ಸಮಯವೇ. ಬೀಜದ ಹಣ್ಣಿನ ಕಾಲವೂ ಅದುವೇ. ಹಾಂಗಾಗಿ ಈ ಕಥೆಲಿ ಸಂತ್ಯಾಂಶ ಇಪ್ಪದರಲ್ಲಿ ಸಂಶಯವೇ ಇಲ್ಲೆ. ಎಲ್ಲೊರು ಇದರ ಒಪ್ಪುಗಲ್ಲದಾ?. ಕಾಡಿಲಿ ಬೇವಿನ ಮರಂಗಳೂ ಇದ್ದಿಕ್ಕಲ್ಲದಾ? ಅದರ ಕೆಳ ಮನುಗಿಪ್ಪಲೂ ಸಾಕು. ಪ್ರಕೃತಿ ಆ ಕಾಲಲ್ಲಿ ಸ್ವಚ್ಛ ನಿರ್ಮಲವಾಗಿಯೂ ಇದ್ದಿಕ್ಕು. ನಿಂಗೊಗೆ ಇನ್ನೊಂದು ಸಂಶಯವೂ ಇಕ್ಕು. ಇವು ಬ್ರಾಹ್ಮಣರು ಕುದುರೆ ಸವಾರಿಲಿ ಪಳಗಿದೋರೋ? ಹೇಳಿ. ಅದು ಸ್ವತಂತ್ರ ಭಾರತ! ಮರಾಠಾ ಪೇಶ್ವೆಗೊ ಬ್ರಾಹ್ಮಣರೇ! ಶಸ್ತ್ರಾಸ್ತ್ರ ನಿಷೇಧ ಮಾಡಿ ಭಾರತೀಯರ ಹೇಡಿಗಳನ್ನಾಗಿ ಕಟ್ಟಿಹಾಕಿದೋರು ಆ ಮೇಲೆ ಬಂದ ಬ್ರಿಟಿಷರು! ಅವರ ವೇಷಭೂಷಣವೂ ಕುದುರೆ ಸವಾರಿಗೆ ತಕ್ಕ ಹಾಂಗಿಪ್ಪ ಬಿಗಿಯಾದ ಚಲ್ಲಣ, ಅಡ್ಡಪಟ್ಟಿ ಓರೆಗುಬ್ಬಿಯ ಮೇಲುಡುಗೆ ಶರಾಯಿ. ಇದಕ್ಕೆ ಸಣ್ಣದೊಂದು ಸಾಕ್ಷಿಯ ಹೇಳ್ತೆ. ಎನ್ನ ಅಪ್ಪ ದೊಡ್ಡಪ್ಪ ಇವರ ಬಾಲ್ಯದ ಚಲ್ಲಣ ಶರಾಯಿಗಳ ಎಂಗಳ ಉಗ್ಗಪ್ಪಕೋಡಿಯ ಮನೆಲಿ ಒಂದು ವಸ್ತ್ರದ ಚೀಲಲ್ಲಿ ಎನ್ನ ಅಜ್ಜಿ ಭದ್ರವಾಗಿ ಅಟ್ಟಕ್ಕೆ ನೇಲ್ಸಿ ಮಡುಗಿತ್ತಿದ್ದ°. ಅದರ ಒಂದಾರಿ ಆನು ಸಣ್ಣ ಐದಾರು ವರ್ಷ ಇಪ್ಪಾಗ ಒಂದು ಗಳಿಗೆ ಹಾಕಿಯೂ ನೋಡಿದ್ದೆ. ರೇಶ್ಮೆಯ ಚಲ್ಲಣ! ಎನ್ನ ಸೋದರತ್ತೆ ಸಣ್ಣ ಕೂಸಾಗಿಪ್ಪಗ ಹಾಕಿದ ರೇಶ್ಮೆ ಕುಪ್ಪಸವೂ ಅದರೊಟ್ಟಿಂಗೆ ಇತ್ತು. ಅದಲ್ಲದ್ದೆ ಎರಡು ಢಾಲು ಕತ್ತಿ, ತಲವಾರಿನ ಹಾಂಗಿಪ್ಪದು ಬತ್ತ ತುಂಬ್ಸುವ ಪತ್ತಾಯದೊಳ ಹುಗ್ಸಿ ಮಡುಗಿತ್ತಿದ್ದವು! ಸಮಯ ಬಂದರೆ ಬ್ರಾಹ್ಮಣರೂ ಕ್ಷಾತ್ರತೇಜವ ಪ್ರದರ್ಶಿಸಿಗೊಂಡಿತ್ತಿದ್ದವು ಎಂಬುದಕ್ಕೆ ಇದು ಸಾಕ್ಷಿ ಅಲ್ಲದಾ? ಅವಗಾಣ ಗೆಂಡು ಮಕ್ಕಳ ಆಭರಣ ತೋಳ ಸರಿಗೆ (ಬೆಳ್ಳಿದು), ಮುಂಗೈ ಸರಪ್ಳಿ ಚಿನ್ನದ್ದು ಕೈಲಿ ಕಡಗ, ಕಾಲಿಂಗೂ ಈ ಬೆಳ್ಳಿ ಬಳೆಗೊ (ಕಡಗವೇ). ಇವೆಲ್ಲ ಉಚ್ಛವರ್ಗದೊರ, ಅಧಿಕಾರಿಗಳದ್ದೂ ಕೂಡ ತೊಡುಗೆಗೊ ಆಗಿತ್ತು! ಎನ್ನ ಅಜ್ಜಿಯ ಕರಜನಲ್ಲಿ ತೋಳ ಸರಿಗೆ, ಹೆಮ್ಮಕ್ಕಳ ರತ್ನ ಜಟಿತ, ಸೊಂಟದ ಪಟ್ಟಿಯೂ ಅದರಲ್ಲಿತ್ತು ಅಜ್ಜಿದು. ಅಜ್ಜಿ ತನ್ನ 24 ನೇ ವರ್ಷಲ್ಲೇ ಮೂರು ಮಕ್ಕಳ ಅಬ್ಬೆಯೂ ಆಗಿ ವಿಧವೆ ಆಗಿತ್ತಿದ್ದ! (ಇದೀಗ ರಜಾ ವಿಷಯಾಂತರ ಆತು, ಕ್ಷಮಿಸಿ). ಆಭರಣಂಗೊ ನಮ್ಮ ಸಂಪ್ರದಾಯಕ್ಕೆ ದ್ಯೋತಕ ಅಲ್ಲದಾ? ಮುಂಗ್ರಿ ಮನೆ- ಈ ಜಾಗೆ ಒಂದು ಅಜ್ಜಿ ಮುಂಗುಸಿಯ ಸಾಂಕಿಗೊಂಡಿದ್ದಂಥಾದ್ದು. ಕುದುರೆಲಿ ಕೂದುಗೊಂಡು ಬಂದ ಶ್ರೀಮಂತ ಈಶ್ವರ ಭಟ್ಟ ಹೆಬ್ಬಾರ ಅಜ್ಜಿಯ ಕೈಂದ ಕ್ರಯಕ್ಕೆ ತೆಕ್ಕೊಂಡ. ಆ ಮೇಲೆ ಈ ಕುಟುಂಬಕ್ಕೆ ಮುಂಗ್ರಿಮನೆಯೊರು ಹೇಳಿ ಹೆಸರಾತು. (ಹಳೆಗನ್ನಡದ ಗದ್ಯ ಪದ್ಯ ಕಾವ್ಯಂಗಳಲ್ಲಿ ಮುಂಗುಸಿಗೆ ಮುಂಗುರಿ ಹೇಳಿಯೇ ಹೆಸರಿದ್ದು). ಆ ಜಾಗೆಲಿ ಹಲವಾರು ವರ್ಷ ವಾಸ ಮಾಡಿ ಸಂಸಾರ ದೊಡ್ಡ ಆವ್ತಾ ಬಂದು ಬೇರೆ ಬೇರೆ ಜಾಗೆಗಳಲ್ಲಿ ಆಸ್ತಿ ಖರೀದಿ ಮಾಡಿ ಕವಲು ಕವಲಾಗಿ ಬೇರೆ ಬೇರೆ ಹೆಸರಿನೋರಾದವು. ಸುಮಾರು ನೂರಏಳು ಮನಗೊ ಆಯಿದವು ಹೇಳಿ ಮುಂಗ್ರಿಮನೆ (ಖರಗ್ ಪುರಲ್ಲಿದ್ದ) ಸುಬ್ಬಣ್ಣಪ್ಪಚ್ಚಿ ಹೇಳ್ತ°. ಅವರೆಲ್ಲೋರ ಗುರ್ತು ಪರಿಚಯವೂ ಇಲ್ಲದ್ದಷ್ಟು ದೂರ ಆಗಿ ಹೋಯಿದವು. ಅವರಲ್ಲಿ ಕೆಲವರ ಹೇಳ್ಳೆಡಿಗು. ಸುಬ್ಬಣ್ಣಕೋಡಿ, ಪದ್ಯಾಣ, ರೆಂಜೆಅಡಿ,ಕಾಯರ್ಪಾಡಿ, ಸೇರಜ್ಜೆ, ಒಳಕ್ಕಟ್ಟೆ, ಪಂಜಿಗುಡ್ಡೆ, ಸೇಡಿಯಾಪು, ಬೆಟ್ಟುಗೆದ್ದೆ, ಪೋಳ್ಯ ಪಂಜುರ್ಲಿ ಉಗ್ಗಪ್ಪಕೋಡಿ, ಮಣಿಪಾಲ, ಬೊಂಬಾಯಿ, ಮದ್ರಾಸು, ಮುಂಗ್ರಿಮನೆ. ಆದರೆ ಆ ಮೂಲ ಪುರುಷರು ಅಂಕೋಲೆಯಷ್ಟು ದೂರಂದ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿಂಗೇ ಎಂತಕೆ ಬಂದವು? ಎನಗೆ ಗೊಂತಿಲ್ಲೆ. ಅಷ್ಟು ಶ್ರೀಮಂತರೂ, ಪೌರೋಹಿತ್ಯ ಕಲ್ತೊರೂ ಆಗಿದ್ದರೂ ವಲಸೆ ಮಾಡೆಕ್ಕಾಗಿ ಬಂತೆಂತಗೆ? ಇದರ ವಿವರ ಹೇಳುವೊರು ಆರೂ ಇಲ್ಲೆ. ಏಕೆ ಹೇಳಿದರೆ ನಾನ್ನೂರು ವರ್ಷಕ್ಕೂ ಹಿಂದಾಣ ಚರಿತ್ರೆ. ಈ ಮೂಲ ಪುರುಷ ಈಶ್ವರ ಭಟ್ಟಂದ ಹನ್ನೊಂದನೆ ತಲೆಮಾರಿನೊನು ಎನ್ನ ಅಪ್ಪ°. ಸುಮಾರು ಹದಿನೆಂಟನೇ ಶತಮಾನಲ್ಲಿ ಇರೆಕ್ಕು ಈ ಮನೆತನದ ಹೆರಿಯೊರು ಆಸ್ತಿಪಾಸ್ತಿ ನೋಡಿಗೊಂಬದರಲ್ಲೇ ಮನಸ್ಸು ಹಾಕಿ ಪೌರೋಹಿತ್ಯವ ಕಟ್ಟುನಿಟ್ಟಾಗಿ ಮಾಡಿಗೊಂಬಲೆ ಎಡಿಯದ್ದೆ ಅಥವಾ ಕರ್ಮಕಾಂಡದ ಮಂತ್ರಂಗಳ ಕಲ್ತು ಅಭ್ಯಾಸಮಾಡುವ ಆಸಕ್ತಿ ಕಮ್ಮಿ ಆಗಿಯೋ, ಒಟ್ಟಾರೆ, ಒಳ್ಳೆ ಶಾಸ್ತ್ರೋಕ್ತವಾಗಿ ಪೌರೋಹಿತ್ಯ ಮಾಡಿಗೊಂಡಿದ್ದ ವಿಟ್ಳ ಸೀಮೆಯ ಎತ್ತುಗಲ್ಲ ಭಟ್ಟಕ್ಕಳ ಒಂದು ಕವಲು, ಅದೇ ಸಮಯಲ್ಲಿ ಕಬಕ ಗ್ರಾಮದ ಮಿತ್ತೂರಿಂಗೆ ಬಂದ ಕಾರಣ, ಮತ್ತೆ ಶ್ರೇಷ್ಠ ವಿದ್ವಾಂಸರೂ ಆಗಿದ್ದೊರಿಂಗೆ ತಮ್ಮ ಪೌರೋಹಿತ್ಯವ ದಾನಮಾಡಿ ತಮ್ಮ ಮನೆಗಳ ಪೂಜೆ, ವಿವಾಹ, ಉಪನಯನಾದಿ ಎಲ್ಲ ಧರ್ಮ ಕಾರ್ಯಂಗಳ ನಡೆಶಿಕೊಡುವ ಜವಾಬ್ದಾರಿಯನ್ನೂ ಅವಕ್ಕೆ ಬಿಟ್ಟುಕೊಟ್ಟವು. ಹೀಂಗೆ ವೈದಿಕ ಮನೆತನದೊರು ಬರೀ ಕೃಷಿಕರಾದವು. ಆ ಮೇಲೆ ಬೇರೆ ಬೇರೆ ಆಧುನಿಕ ವಿದ್ಯಾಭ್ಯಾಸಲ್ಲಿ ಆಸಕ್ತರಾಗಿಯೂ ಮುಂದುವರಿದವು. ಸೇಡಿಯಾಪಿಲಿ ಈ ಮನೆತನದ ವಂಶವೃಕ್ಷದ ನಕ್ಷೆ ಈಗಳೂ ಇದ್ದು. ಮುಂಗ್ರಿಮನೆಯ ಗೋವಿಂದಜ್ಜ ಹಿಶೆ ಪತ್ರಂಗಳ ಪರಿಶೋಧನೆ ಮಾಡಿ ನಕ್ಷೆ ತಯಾರಿಸಿದ್ದೊಡೊ (ಇದು ಒಂದು ಯೋಗ್ಯ ಮಾರ್ಗ. ಹವಿಕ ಬಂಧುಗೊ ಈ ವಿಷಯಲ್ಲಿ ತಮ್ಮ ತಮ್ಮ ಮನೆತನಂಗಳ ಶೋಧನೆ ಮಾಡಿ ವಂಶವೃಕ್ಷ ತಯಾರ್ಸುಲೆಡಿಗು ಹೇಳಿ ಎನ್ನದೊಂದು ಆಲೋಚನೆ)
ಮುಂಗ್ರಿ ಮನಗೆ ಬಂದು ಕೆಲವು ವರ್ಷ ಕಳುದಿಕ್ಕು. ಆ ಸಮಯಲ್ಲಿ ನಡದ ಒಂದು ಸ್ಮರಣೀಯ ಘಟನೆಯ ನಿಂಗೊಗೆ ತಿಳಿಶೆಕ್ಕು ಹೇಳಿ ಎನ್ನದೊಂದು ಅಭಿಲಾಶೆ. ನಮ್ಮ ಮಾತೃಭಾಷೆ ಸಂಸ್ಕೃತವೇ ಆಗಿತ್ತು ಎಂಬುದಕ್ಕೆ ನಿದರ್ಶನವಾಗಿದ್ದು ಈ ತಮಾಷೆ ಕಥೆ. ಕನ್ನಡ ರಾಜ್ಯಕ್ಕೆ ಬಂದು, ಮನೆಂದ ಹೆರ, ರಾಜರ ಸಮ್ಮುಖಲ್ಲಿ ಕೂಡ ಕನ್ನಡವನ್ನೇ ಮಾತಾಡೆಕ್ಕಾಗಿ ಬಂದು, ಕ್ರಮೇಣ ಸಂಸ್ಕೃತಲ್ಲಿ ಮಾತಾಡುದರ ಬಿಟ್ಟುಗೊಂಡು ಬಿಟ್ಟುಗೊಂಡುಬಂದು ಮನೆಯೊರೆಲ್ಲಾ ಕನ್ನಡಲ್ಲೇ ಮಾತಾಡುವ ಹಾಂಗಾತು. ಅಷ್ಟಪ್ಪಗ ಆ ಮನೆಯ ಹೆರಿಯೊರು “ಪೂಜಾ ಸಮಯಲ್ಲಿ ಕನ್ನಡಲ್ಲಿ ಮಾತಾಡುಲಾಗ, ಸಂಸ್ಕೃತಲ್ಲೇ ಮಾತಾಡೆಕ್ಕು” ಹೇಳಿ ನಿಘಂಟು ಮಾಡಿತ್ತಿದ್ದವು. ಈ ನಿಯಮವ ಹಲವಾರು ವರ್ಷ ಪಾಲನೆ ಮಾಡಿಗೊಂದು ಇತ್ತಿದ್ದವು. ಅದೊಂದು ದಿನ ಮಧ್ಯಾಹ್ನ ಪೂಜೆ ಮಾಡಿಗೊಂಡಿದ್ದೊನಿಂಗೆ ಅಟ್ಟುಂಬೊಳದ ಒಳ ಪುಚ್ಚೆ ಪಚಪಚನೆ ಹಾಲು ಕುಡಿವ ಶಬ್ದ ಕೇಳಿತ್ತು. ಪೂಜೆ ಮಾಡ್ತಾ ಇಪ್ಪಾಗ ಎದ್ದಿಕ್ಕಿ ಹೋಪ ಹಾಂಗೂ ಇಲ್ಲೆ. ಹಾಲೆಲ್ಲಾ ಹಾಳಾವ್ತನ್ನೇ ಹೇಳಿ ಗಾಬರಿ. ಸಂಸ್ಕೃತಲ್ಲಿ ಮಾತಾಡುದು ಕಷ್ಟ ಆಯ್ಕೊಂಡೂ ಇತ್ತು. ಅವ° ಹೆಂಡ್ತಿಯ ದಿನಿಗೇಳಿದ- ಲಕ್ಷ್ಮೀ ಲಕ್ಷ್ಮೀ! ಕ್ಷೀರ ಪಚಪಚ!ಮಾರ್ಜಾಲ! ಕ್ಷೀರ ಪಚಪಚ ಹೇಳಿ ಜೋರಿಲಿ ದೊಡ್ಡಸ್ವರಲಿ ಹೇಳಿದ°. ಇದು ಮನೆಯ ಮುಖಮಂಟಪಲ್ಲಿ ಕೂದುಗೊಂಡಿದ್ದೊರಿಂಗೆ ಕೇಳಿತ್ತು. ಅವೆಲ್ಲ ದೊಡ್ಡಕ್ಕೆ ನೆಗೆ ಮಾಡಿದವು. ಈ ಪ್ರಸಂಗ ಈ ಮನೆತನದ ಎಲ್ಲ ಕವಲಿನವರಿಂಗೂ ಗೊಂತಿದ್ದು. ತಲೆಮಾರುಗೊ ಉರುಳಿದರೂ ಇದು ಮಾತ್ರ ಅಪ್ಪಂದ ಮಗಂಗೆ, ಮಗ ಪುಳ್ಳಿಗೆ ಚರಿತ್ರೆಕಥೆಯ ಹಾಂಗೆ ಹೇಳಿಗೊಂಡು ಬಯಿಂದವು.ಇದರ ಅರ್ಥ ಎಂತ ಹೇಳಿದರೆ ಸಂಸ್ಕೃತದ ಚಲಾವಣೆ ಇಲ್ಲದ್ದ ಊರಿಲಿ ಆ ಊರ ಭಾಷೆಯ ಕಲಿಯಲೇ ಬೇಕಾಗಿ ಬಂದದು. ಕರ್ನಾಟಕಕ್ಕೆ ಬಂದ ಬ್ರಾಹ್ಮಣರೆಲ್ಲಾ ಕನ್ನಡಿಗರೇ ಆಗಿಹೋದವು. ಸುರುವಿಲಿ ರಾಜನ ಆಶ್ರಿತರಾಗಿ ಕನ್ನಡ ಅನಿವಾರ್ಯ ಆತು. ಅದರಂದಾಗಿ ಹವಿಕರ ಮೂಲವನ್ನೇ ಅಪಾರ್ಥ ಮಾಡುವ ಹಾಂಗೆ ಆದ್ದೂ ನಿಜ. ನಮ್ಮ ಭಾಷೆ ಒಂದೂವರೆ ಸಾವಿರ ವರ್ಷ ಹಿಂದಾಣ ಜನಸಾಮಾನ್ಯರ ಆಡುನುಡಿ ಹೇಳಿ ವಿದ್ವಾಂಸರ ಅಭಿಮತ.
ಹವಿಕರ ಹೀನೈಸುವ ಕೆಲವು ಜೆನ-ಹವಿಕರಲ್ಲದ್ದೊರು ಹೇಳುದು-ಹಾಲ್ವಕ್ಕಿ ಗೌಡ ಸ್ತ್ರೀಯಲ್ಲಿ ಬ್ರಾಹ್ಮಣ ಪುರುಷರಿಂಗೆ ಹುಟ್ಟಿದ ಸಂತಾನವೇ ಹವೀಕರು!. ಇನ್ನೊಬ್ಬ ಮಹಾಮತ್ಸರಿ ಹೈಗನಾಡಿನ ಹೈಗರು ಹೇಳಿದರೆ –ದನ ಮೇಶುವಾಗ ಹೈ ಹೈ ಹೇಳಿಗೊಂಡಿದ್ದೊರು, ಆದ ಕಾರಣ ಹೈಗರಾದವು! ಇನ್ನೊಬ್ಬ ಮಹಾ ಪಂಡಿತ ’ ಹವ್ಯಕಾಃ ಸುರಾಂ ಪಿಬಂತಿ!- ಈ ರೀತಿಯಾಗಿ ಮನಸ್ಸಿಂಗೆ ಬಂದ ಹಾಂಗೆ ಪತ್ರಿಕೆಗಳಲ್ಲೂ ಬರದ್ದವು. ಇದರೆಲ್ಲ ಕೇಳಿ ಮನಸ್ಸು ತಡೆಯದ್ದೆ ಈ ಲೇಖನವ ಆನು ಬರವಲೆ ಹೆರಟಿದೆ. ಬಹಳ ವರ್ಷಗಳ ಹಿಂದೆ ಆನು ಓದಿದ ಒಂದು ಸಂಶೋಧನೆಯ ಲೇಖನಲ್ಲಿ ಕರ್ನಾಟಕ-ಕರುನಾಡು- ಮಹಾರಾಷ್ಟ್ರ ಒಂದೇ ಅರ್ಥದ ಶಬ್ದ ಹೇಳಿ ಬರದ್ದವು. ಹದಿನಾಲ್ಕನೇ ಶತಮಾನದ ವರೆಗೆ ಮಹಾರಾಷ್ಟ್ರ ಎಂಬ ಹೆಸರೇ ಇತ್ತಿಲ್ಲೆ. ಪಶ್ಚಿಮ ಕರಾವಳಿಯ ರಾಜ್ಯಂಗೊಕ್ಕೆ ಸಪ್ತಕೊಂಕಣ ಹೇಳಿಯೇ ಹೆಸರಾಗಿತ್ತು. ಕನ್ನಡದ ಅರಸುಗಳೇ ಈ ರಾಜ್ಯಂಗಳ ಆಳಿಗೊಂಡಿದ್ದದು. ಇತಿಹಾಸಲ್ಲಿ ರಾಷ್ಟ್ರಕೂಟರು ರಾಜರಾಗಿದ್ದ ಕಾಲಲ್ಲಿ “ಅಜಂತ, ಎಲ್ಲೋರ ಕಲಾವೈಭವ ನಿರ್ಮಾಣ ಮಾಡಿದೊರು ಆ ರಾಜರೇ” ಹೇಳ್ತವು. ಈಗ ಅದು ಮಹಾರಷ್ಟ್ರದ ಒಳ ಇಪ್ಪದು. ಆ ಕಾಲಲ್ಲಿ ಕರ್ನಾಟಕದ ಗಡಿ ನಾಸಿಕ, ಇದು ಗೋದಾವರೀ ನದೀತೀರಲ್ಲಿದ್ದು. ಗೋದಾವರಿಂದ ದಕ್ಷಿಣದ ಪಯಸ್ವಿನೀ ನದಿಯವರೆಗೆ ಕನ್ನಡ ರಾಜ್ಯವೇ ಇದ್ದದು. ಒಂದು ಕಾಲಲ್ಲಿ ಭಾರತದ ಪಶ್ಚಿಮ ಭಾಗಲ್ಲೆಲ್ಲಾ ಕನ್ನಡವೇ ಪ್ರಚಲಿತವಾಗಿತ್ತು. ಇದೇ ಕಾರಣಂದ ಗುರ್ಜರ ಮಹಾರಾಷ್ಟ್ರ ಪಂಚದ್ರಾವಿಡ ದೇಶಕ್ಕೆ ಒಳಪಟ್ಟದಾದಿಕ್ಕು. (ದ್ರಾವಿಡ ದೇಶ-ಇದರ ಅರ್ಥ-ನಿಬಿಡವಾಗಿ ಮರಂಗೊ ಬೆಳಕ್ಕೊಂಡಿಪ್ಪ ಪ್ರದೇಶ. ದಕ್ಷಿಣ ಭಾರತವೇ ಉತ್ತರಂದ ಹೆಚ್ಚು ಸಸ್ಯಸಂಪತ್ತು, ಜಲ ಸಂಪತ್ತು ಇಪ್ಪ ದೇಶವಾಗಿದ್ದ ಕಾರಣ ಸಂಸ್ಕೃತಲ್ಲಿ ದ್ರಮಿಲ, ದ್ರವಿಳ, ಆಮೇಲೆ ಳ ಕಾರ ಡ ಕಾರವಾಗಿ ಪರಿಣಮಿಸಿ ದ್ರಾವಿಡ ಆದ್ದು.) ದ್ರಾವಿಡ ದೇಶಂಗಳಲ್ಲಿ ವಾಸ ಮಾಡ್ತಾ ಇದ್ದ ಬ್ರಾಹ್ಮಣರು ದ್ರಾವಿಡ ಬ್ರಾಹ್ಮಣರು ಹೇಳಿ ಹೆಸರಾತು. ಈ ಹೆಸರು ಬಂದು ಒಂದು ಸಾವಿರ ವರ್ಷವೇ ಆಗಿ ಹೋತು. (ಮುಂದೆ ಆಕ್ರಮಣಶೀಲ ಮರಾಠರಂದಾಗಿ ಕರ್ನಾಟಕ ಹದಿನಾರು ಜಿಲ್ಲೆಗಳ ಕಳಕ್ಕೊಂಡತ್ತು). ಹಿಂದೆ ಬಳ್ಳಿಗಾವೆ (ಬೆಳಗಾಂ) ಕರ್ನಾಟಕದ ರಾಜಧಾನಿಯಾಗಿದ್ದದು ಈಗ ಗಡಿ ಪ್ರದೇಶ ಹೇಳಿ ಆಯಿದು. ಈ ವಿಷಯ ಎಲ್ಲ ಎಂತಕೆ ಈಗ ಹೇಳಿ ನಿಂಗೊ ಗ್ರೇಶುವಿ. ನಾವು ಕನ್ನಡಿಗರಾಗಿ ಪರಿವರ್ತನೆ ಹೊಂದಲೆ ಕಾರಣ ಈ ಬೃಹತ್ ಕರ್ನಾಟಕದೊಳಂಗೆ ಬಂದು ರಾಜಾಶ್ರಯ ಪಡದೊ, ಊರ ಜನರೊಟ್ಟಿಂಗೆ ವ್ಯವಹರಿಸುವ ಅಗತ್ಯಂದಾಗಿಯೋ, ಭಾಷೆಯ ಕೊಡುಕೊಳ್ಳುವಿಕೆ ನಡದೋ ನಮ್ಮ ಭಾಷೆ ಕನ್ನಡ ಆತು. ಅದನ್ನೇ ನಾವು ಇಂದಿನ ವರೆಗೂ ಸಾಧ್ಯ ಆದಷ್ಟು ಒಳಿಶಿಗೊಂಡು ಬಯಿಂದು. “ಮಯೂರವರ್ಮ ಕರ್ನಾಟಕೀ ಬ್ರಾಹ್ಮಣರನ್ನೇ ಕರೆಶಿದ್ದು” ಹೇಳಿಯೂ ಒಂದು ವಾದ ಇದ್ದು.
ಮಯೂರವರ್ಮನ ಕಾಲ ಕಳುದು ಕೆಲವು ಶತಮಾನಂಗಳೇ ಕಳುದ ಮೇಲೆ ವಿಜಯನಗರ ಸ್ಥಾಪನೆ ಕ್ರಿ.ಶ. 1366 ರ ಕಾಲಲ್ಲಿ (ಹೆಚ್ಚು ಕಮ್ಮಿ) ಆತಲ್ಲದಾ? ಅವಗ ಹಕ್ಕಬುಕ್ಕರ ಗುರು ವಿದ್ಯಾರಣ್ಯ ಮಹರ್ಷಿ ಅಹಿಚ್ಛಂತ್ರಂದವೇ ಬ್ರಾಹ್ಮಣರ ವಿಜಯನಗರಕ್ಕೂ ಕರೆಶಿದ್ದ° ಹೇಳ್ತವು. ಆ ಬ್ರಾಹ್ಮಣರ ವಂಶಸ್ಥರೇ ಮುಂದೆ ತಾಳಿಕೋಟೆಯ ’ರಕ್ಕಸತಂಗಡಿ’ ನಡದ ಯುದ್ಧಲ್ಲಿ ವಿಜಯನಗರದ ರಾಜ ರಾಮರಾಯ ಸತ್ತ ಕೂಡ್ಳೆ ನಡದ ರಾಕ್ಷಸೀ ಕೃತ್ಯವ ಕಂಡು ಪಶ್ಚಿಮಕ್ಕೂ ಪೂರ್ವಕ್ಕೂ ದಕ್ಷಿಣಕ್ಕೂ ಪಲಾಯನ ಮಾಡಿದವು. ಆ ಕಾಲಲ್ಲೇ ಕೊಡಗಿಂಗೆ ಬ್ರಾಹ್ಮಣರ ಪ್ರವೇಶ ಆದ್ದು ಹೇಳಿ ಮೈಸೂರಿನ ಜಿ.ಟಿ.ನಾರಾಯಣ ರಾಯ, ಪ್ರಸಿದ್ಧ ವಿಜ್ಞಾನಿ ಹೇಳ್ತ. ಅವರ ಭಾಷೆ ಶಿಷ್ಟಭಾಷೆ ಹೊಸಕನ್ನಡವೇ ಆದ್ದು ವಿಜಯನಗರ ಅರಸರ ಪ್ರಭಾವಂದವೇ ಆದಿಕ್ಕು. ಜಿ.ಟಿ.ನಾರಾಯಣರಾಯನ ಹುಟ್ಟೂರು ಕೊಡಗು. ಹವ್ಯಕರ ವಲಸೆ (Havyaka’s Migration) ಎಂಬ ಲೇಖನಲ್ಲಿ ಇದರ ಪ್ರತಿಪಾದಿಸಿದ್ದನೊಡೊ.
ದಕ್ಷಿಣ ಕನ್ನಡ ತುಳುವ ಅರಸುಗೊ ಕ್ರಿ.ಶ. ಮೂರನೇ ನಾಲ್ಕನೇ ಶತಮಾನಂದವೇ ಕನ್ನಡ ಅರಸರ ಮಾಂಡಲೀಕರೂ ಮಿತ್ರರೂ ಆಗಿತ್ತಿದ್ದವು. ಅದರಂದಾಗಿ ತುಳುನಾಡಿನ ಆಡಳಿತಭಾಷೆ ಕನ್ನಡವೇ ಆಗಿ ಅದು ಕರ್ನಾಟಕದ ಒಂದು ಭಾಗವೇ ಆಗಿ ಬೆಳದು ಬಂತು. (ಕದಂಬ ರಾಜರು ಕ್ರಿ.ಪೂ 200 ರಿಂದ ಕ್ರಿ.ಶ 600 ರ ವರೆಗೆ ಒಟ್ಟು 800 ವರ್ಷ ಕರ್ನಾಟಕದ ಮಹಾರಾಜರಾಗಿ ಆಳಿದ್ದವು. ’ದಕ್ಷಿಣ ಕನ್ನಡದ ಇತಿಹಾಸ’ ಎಂಬ ಗ್ರಂಥಲ್ಲಿ ಹೀಂಗೆ ಹೇಳಿದ್ದವು. ಆಮೇಲೆ ಚಾಲುಕ್ಯ ಅರಸರಿಂದ ಪರಾಜಿತರಾಗಿ ಅವರ ಕೈಕೆಳ ಮಹಾಮಂಡಲಾಧಿಪತಿಗಳಾದವು. ಮತ್ತೆ ತುಳುವಿಂಗೆ ಲಿಪಿ ಇಲ್ಲೆ, ಈ ಎಲ್ಲ ಕಾರಣಂದ ಹೇಳಿ ಕಾಣ್ತು ತುಳುನಾಡು ಕನ್ನಡ ನಾಡಾಗಿ ಪರಿವರ್ತನೆ ಆದ್ದು ನಮ್ಮ ಕಣ್ಣ ಮುಂದೇ ಇದ್ದು. ಕ್ರಯಪತ್ರಂಗೊ, ಕಂದಾಯದ, ವ್ಯಾಪಾರದ ಎಲ್ಲ ವಹಿವಾಟುಗೊಕ್ಕೆ ಕನ್ನಡವೇ ಬಳಕೆಯಾಗಿ ಹೋದ್ದು ಎಲ್ಲೊರಿಂಗೂ ಗೊಂತಿಪ್ಪ ವಿಷಯವೇ.
ಇದೇ ಪರಿಸ್ಥಿತಿಲಿ ಹೆರರಾಜ್ಯಂದ ಬಂದೊರು ಆಯಾರಾಜ್ಯದ ಆಡಳಿತದ ಭಾಷೆಯ ಕಲಿಯದ್ದೆ ನಿವೃತ್ತಿಯೇ ಇಲ್ಲೆ ಹೇಳಿ ಅಪ್ಪದು ಸ್ವಾಭಾವಿಕ. ಬೊಂಬಾಯಿಲಿ ಕಲಿವ ಮಕ್ಕಳನ್ನೇ ನೋಡಿ. ಅವಕ್ಕೆ ಹಿಂದಿ, ಮರಾಠಿ ಭಾಷೆ ಕಲಿಯಲೇ ಬೇಕಾವುತ್ತು. ಅದೇ ರೀತಿಲಿ ತಮಿಳುನಾಡು ಕೇರಳಕ್ಕೆ ಹೋದೊರ ಕಥೆಯೂ ಇದರಂದ ಬೇರೆ ಆಗ. ಕೇರಳದ ಮಲಯಾಳಿ ಭಾಷೆ,ಶಿಷ್ಟಭಾಷೆ ಕನ್ನಡಂದವೂ ಹೆಚ್ಚುಪಟ್ಟು ಸಂಸ್ಕೃತಮಯವಾಗಿಪ್ಪದು ನಿಂಗೊಗೆಲ್ಲ ಗೊಂತಿಪ್ಪ ವಿಷಯವೇ. ಇದಕ್ಕೆ ಕಾರಣ ಎಂತ ಹೇಳಿ ನಿಂಗೊ ಯೋಚನೆ ಮಾಡಿಪ್ಪಿ. ಪರಶುರಾಮ ಕರಕ್ಕೊಂಡು ಬಂದ ಬ್ರಾಹ್ಮಣರ ಸಂಸ್ಕೃತ ಭಾಷೆಯೇ ಕಾರಣ ಹೇಳಿ ಸ್ಪಷ್ಟ. ಅದೇ ರೀತಿಲಿ ಕನ್ನಡಲ್ಲಿ ತಮಿಳು ತೆಲುಗು ಭಾಷೆಗಳಲ್ಲಿ ಸಂಸ್ಕೃತ-ಹಾಲು ನೀರಿನೊಟ್ಟಿಂಗೆ ಸೇರಿ ಸಾಕ್ಷಿಯೇ ಕಾಣ್ದದ್ದ ಹಾಂಗೆ ಬೆರೆತು (ಕೂಡಿ) ಹೋವುತ್ತೋ ಅದೇ ರೀತಿಲಿ ಸೇರಿ ಹೋಯಿದು. ಇಂದು ಕೆಲವು ಜನ ಕನ್ನಡಿಗರೇ ಸಂಸ್ಕೃತವ ತೆಗದು ಹಾಕೆಕ್ಕು, ಮಹಾಪ್ರಾಣ ಇಪ್ಪಲಾಗ ಇತ್ಯಾದಿ ಸಂಸ್ಕೃತ ದ್ವೇಷವ ಜನರ ಮನಸ್ಸಿಲಿ ಬಿತ್ತುತ್ತಾ ಇದ್ದವು. (ನೂರು ವರ್ಷಂದ ತಮಿಳುನಾಡಿಲಿಯೂ ಇದೇ ತರದ ಸಂಸ್ಕೃತ ದ್ವೇಷ ಪ್ರಾರಂಭ ಆಗಿ ಮತ್ತೆ ಅದೇ ಈಗಾಣ ಸಭ್ಯತೆ ಆಗಿಹೋಯಿದು). ಇದು ಸುಮ್ಮನೇ ನಿಂಗಳ ಗಮನ ಇರಲಿ ಈ ಹೊಡೆಂಗೆ ಹೇಳಿ ತಿಳುಶುತ್ತಾ ಇದ್ದೆ.ಇಂಥ ದ್ವೇಷದ ವಾತಾವರಣವ ಸೃಷ್ಟಿ ಮಾಡುವೊರಿಂಗೂ ದೇವಸ್ಥಾನ, ಪೂಜೆ, ಅವರ ಮಕ್ಕಳ ವಿವಾಹ ಸಂದರ್ಭಂಗಳಲ್ಲಿ ಸಂಸ್ಕೃತದ ಮಂತ್ರಂಗೊ ಅಗತ್ಯ ಬೇಕಪ್ಪದೊಂದು ವಿಪರ್ಯಾಸ. ಎಂತ ಹೇಳ್ತಿ ಇದಕ್ಕೆ?
ಈಗ ಸಂಸ್ಕೃತದ ಮಂತ್ರಂಗಳೇ ನಮ್ಮ ಮೂಲ ಸ್ಥಳವ ತೋರ್ಸಿಕೊಡುವ ರಹಸ್ಯ ತಾಣಂಗೊ ಹೇಳಿದರೆ ನಿಂಗೊ ನಂಬುತ್ತಿ ಅಲ್ಲದಾ? ಅಹಿಚ್ಛತ್ರವೇ ನಮ್ಮ ಮೂಲಸ್ಥಳ ಹೇಳಿ ಉತ್ತರ ದಕ್ಷಿಣ ಎಲ್ಲಾ ದಿಕ್ಕಾಣ ಹವಿಕರು ಒಪ್ಪುತ್ತವು. ಆದರೆ ಅದು ಎಲ್ಲಿದ್ದು?ಅದೇ ಬಂದ ಪ್ರಶ್ನೆ. ಕದಂಬ ವಂಶ ಸ್ಥಾಪಕ ಮಯೂರವರ್ಮ (ಅವನ ಮದಲಾಣ ಹೆಸರು ಶರ್ಮ ಹೇಳಿಯೇ ಇತ್ತು. ಕ್ಷತ್ರಿಯರು ಮಾಡೆಕ್ಕಾದ ಕೆಲಸ ಮಾಡಿದ ಕಾರಣ ಅವನೇ ತನ್ನ ಹೆಸರಿನ ಉಪನಾಮವ ವರ್ಮ ಹೇಳಿ ಮಡಿಕ್ಕೊಂಡ) ತನ್ನ ರಾಜ್ಯಲ್ಲಿ ಬ್ರಾಹ್ಮಣರಿಲ್ಲದ್ದೆ ಧರ್ಮಾಚರಣೆ, ಯಜ್ಞಯಾಗ, ನೀತಿ ಬೋಧೆ, ಶಿಕ್ಷಣ ಎಲ್ಲವೂ ನಿರ್ಲಕ್ಷ್ಯಕ್ಕೊಳಗಾಯಿದು ಹೇಳಿ ಕಶ್ಯಪನೆಂಬ ಋಷಿವರನ ಅಪೇಕ್ಷೆ ಮತ್ತು ಆದೇಶವ ಪಾಲಿಸುಲೆ ಅಹಿಚ್ಛತ್ರಂದ ಅಗ್ನಿಹೋತ್ರಿಗಳೂ ಧರ್ಮನಿಷ್ಠರೂ, ವೇದಶಾಸ್ತ್ರ ಪಾರಂಗತತೂ ಆದ ಬ್ರಾಹ್ಮಣರ ಕರಕ್ಕೊಂದು ಬಪ್ಪಲೆ ಸುಮೇಧ ಎಂಬ ಬ್ರಾಹ್ಮಣನ ಅಹಿಚ್ಛತ್ರಕ್ಕೆ ಕಳ್ಸಿದ°. ಅವ° ಅಲ್ಲಿಯಾಣ ಬ್ರಾಹ್ಮಣರ ಮನ ಒಲಿಸಿ, ಮೂವತ್ತೆರಡು ಬ್ರಾಹ್ಮಣ ಕುಟುಂಬದೊರ ಕರಕ್ಕೊಂಡು ಬನವಾಸಿ ಪಟ್ಟಣಕ್ಕೆ ಮಯೂರವರ್ಮನ ಸಮ್ಮುಖಕ್ಕೆ ತಂದೊಪ್ಸಿದ°. ಮಯೂರವರ್ಮ ಅತ್ಯಧಿಕ ಸಂತೋಷಪಟ್ಟು ಅವಕ್ಕೆ ಧನಕನಕ ವಸ್ತ್ರಾದಿಗಳ ಕೊಟ್ಟು ಸತ್ಕರಿಸಿ ತನ್ನ ರಾಜ್ಯದ ಬೇರೆ ಬೇರೆ ಪ್ರದೇಶಂಗಳಲ್ಲಿ ಒಟ್ಟಾರೆ ಅರುವತ್ತೆರಡು ಗ್ರಾಮಂಗಳ ಉಂಬಳಿಯಾಗಿ ಬಿಟ್ಟು ಅಲ್ಲಿ ಕೃಷಿ ಮಾಡುಲೆ ಅನೇಕ ಕೃಷಿಕ ಕುಟುಂಬಂಗಳನ್ನೂ ನೇಮಕ ಮಾಡಿದ°. (ಮಯೂರವರ್ಮನೂ ಅವಂದ ಮತ್ತೆ ಅವನ ಅಳಿಯ ಲೋಕಾದಿತ್ಯನೂ ಸೇರಿ ಕೊಟ್ಟ ಗ್ರಾಮಂಗೊ) ಶಿಖಾರಿಪುರದ ಪ್ರಣವೇಶ್ವರ ದೇವಸ್ಥಾನದ ಆಯಕಟ್ಟಿನ ಜಾಗೆಗಳಲ್ಲಿ ಈ ವಿಚಾರವಾಗಿ ದೇವನಾಗರಿ ಲಿಪಿಲಿ ಬರದ ಹಲವಾರು ಶಾಸನಂಗೊ ಇದ್ದವೊಡೊ. ಒಂದರಲ್ಲಿ ಮಯೂರವರ್ಮನ ಜೀವನ ಚರಿತ್ರೆಯೂ ಇದ್ದೊಡೊ. ಹೀಂಗೆ ಕರಾರುವಾಕ್ಕಾದ ವಿಷಯವ ನಾರಾಯಣ ಶಾನುಭಾಗರು ಶೋಧನೆ ಮಾಡಿ ತಿಳಿಸಿದ್ದವು. ಈ ಎಲ್ಲಾ ಶಿಲಾಶಾಸನ ಮತ್ತು ಶಿಲಾಕಂಬಂಗಳಲ್ಲಿವುದೇ ಶ್ರೇಷ್ಠ ವಿಪ್ರರ ಸಪತ್ನೀಕರಾಗಿ ಬಪ್ಪಲೆ ಮಯೂರವರ್ಮ ಸುಮೇಧ ಎಂಬ ಗೃಹಸ್ಥನ ಅಹಿಚ್ಛತ್ರಕ್ಕೆ ಕಳ್ಸಿ ಷಟ್ಕರ್ಮಿಗಳಾದ, ಶಾಪಾನುಗ್ರಹ ಮಾಡುವ ಸಾಮರ್ಥ್ಯ ಇಪ್ಪಂಥ ಅಗ್ನಿಹೋತ್ರಿ ಬ್ರಾಹ್ಮಣರ ಕರೆಶಿ ತನ್ನ ರಾಜ್ಯಲ್ಲಿ ಯಜ್ಞಯಾಗಾದಿಗಳ ಮಾಡ್ಸಿ, ಅವಕ್ಕೆ 32 ಗ್ರಾಮಂಗಳ ಉಂಬಳಿಯಾಗಿ ಬಿಟ್ಟ ವಿಷಯ ಆ ಶಾಸಂಗಳಲ್ಲಿದ್ದೊಡೊ. ಮಯೂರವರ್ಮ ಸ್ವತಃ ಬ್ರಾಹ್ಮಣನಾಗಿದ್ದು ಕ್ಷತ್ರಿಯರು ಮಾಡುವ ಕಾರ್ಯವೆಸಗಿ ತನ್ನ ಉಪನಾಮ ಶರ್ಮವ ತ್ಯಾಗ ಮಾಡಿ ವರ್ಮನಾದ ವಿಷಯವೂ ಆ ಶಿಲಾಲೇಖಲ್ಲಿ ಇದ್ದೊಡೊ.
ಆದರೆ ಈ ಅಹಿಚ್ಛತ್ರ ಎಲ್ಲಿ ಇದ್ದು? ಈ ಬಗ್ಗೆ ವಾದವಿವಾದಂಗೊ ಇದ್ದು ಹೇಳಿ ಎನಗೆ ಕೆಲವು ಸಮಯ ಹಿಂದೆ ಗೊಂತಾತು. ಹಾಂಗಾಗಿ ಈ ವಿಷಯಲ್ಲಿ ಎನ್ನ ಅಪ್ಪನುದೇ , ಅಪ್ಪಂಗೆ ಅಪ್ಪಚ್ಚಿ ಅಪ್ಪಂಥ ಪ್ರೊಫೆಸರ್ ಮುಂಗ್ರಿಮನೆ ಮರಿಯಪ್ಪ ಭಟ್ಟನೂ (ಮದ್ರಾಸಿಲಿ ಕನ್ನಡ ವಿಶ್ವವಿದ್ಯಾಲಯದ ಮುಖ್ಯ ಅಧಿಕಾರಿಯಗಿ ಇದ್ದೊನು) ಎನಗೆ ಮರಿಯಜ್ಜ°. ಇವೆರಡು ಜೆನ ಎಂಗಳ ಕೊಡೆಯಾಲದ ಮನೆಲಿ ಮಾತಾಡ್ತಾ ಇಪ್ಪಾಗ ಅನು ಅಲ್ಲಿಯೇ ಮಾತಿಂಗೆ ಕೆಮಿಕೊಟ್ಟುಗೊಂಡಿತ್ತಿದ್ದೆ, ಅದು 1946-47 ಸಮಯಲ್ಲಿ. ತಮ್ಮ ಹೆರಿಯೊರ ವಂಶಾವಳಿಯನ್ನೂ, ಕ್ಷೀರ ಪಚ ಪಚ ಕಥೆಯನ್ನೂ ಹೇಳಿಗೊಂಡು ವಿಷಯ ವಿನಿಮಯ ಮಾಡಿಗೊಂಡು ಇನ್ನೊಂದು ಮುಖ್ಯವಾದ ವಿಷಯ ಹೇಳಿದವು. “ಅಹಿಚ್ಛತ್ರ ಎಲ್ಲಿದ್ದು- ಈ ರಹಸ್ಯ ನಮ್ಮ ಸಂಧ್ಯಾವಂದನೆಲಿ ಇದ್ದು, ಅದರಲ್ಲಿ ನಮ್ಮ ಮೂಲ ನೆಲೆ ಯಾವದು? ಅದು ಎಲ್ಲಿ ಹೇಳಿ ಸ್ಪಷ್ಟವಾಗಿ ಅರ್ಥ ಆವುತ್ತು”
ನಿಂಗೊ ಗೆಂಡುಮಕ್ಕೊ ಉಪನಯನ ಆದ ಲಾಗಾಯ್ತು ಪ್ರತಿದಿನ ಸಂಧ್ಯಾವಂದನೆ ಮಾಡ್ತಿ, ಇದರಲ್ಲಿ ಓಂ. ಭೂಃ, ಓಂ ಭುವಃ, ಓಂ ಸುವಃ ಸುರುಮಾಡಿ ಗಾಯತ್ರಿ ಆವಹನೆ ಮಾಡಿದಮೇಲೆ ಬಪ್ಪ ದಿಗುಪಸ್ಥಾನಲ್ಲಿ ದಿಕ್ಕುಗೊಕ್ಕೆ ನಮಸ್ಕಾರ ಮಾಡಿದಮೇಲೆ ಹೇಳುವ ಮಂತ್ರ. ಹೇಳಿದ್ಹಾಂಗೆ ಇತ್ತಿತ್ಲಾಗಿ ಅರ್ಘ್ಯಜಪವ ಭಾರೀ ಚುಟ್ಕಿಲಿ ಮುಗುಶುದು ಸರ್ವಸಾಮಾನ್ಯ ಆಗಿಹೋಯಿದು. ಇದು ಕಾಲದ ಮಹಿಮೆ. ಈ ಯಂತ್ರಯುಗಲ್ಲಿ ಮನುಷ್ಯರೆಲ್ಲಾ ಯಂತ್ರಂಗೊ ಆಗಿಪ್ಪಾಗ ಮಂತ್ರಂಗೊಕ್ಕೆ ಸಮಯಾವಕಾಶ ಎಲ್ಲಿದ್ದು? ಗಾಯತ್ರಿ ಸಂಧ್ಯಾವಂದನೆಗೆ ಎಂತ ಅರ್ಥ ಇದ್ದು ಎಂಬುದು ಮಕ್ಕೊಗೆ ಉಪನಯನ ಮಾಡುವಾಗಲೇ ತಿಳುಶುವ ಕೆಲಸ ಆಯೆಕ್ಕು. ಅದರ ಮಹತ್ವ ಗೊಂತಿಲ್ಲದ್ದೆ ಈ ನಿರ್ಲಕ್ಷ್ಯಕ್ಕೆ ಒಂದು ಕಾರಣ ಹೇಳಿ ಕಾಣ್ತೆನಗೆ. ಮತ್ತೆ ಅರ್ಥ ಗೊಂತಿರದ ಮಂತ್ರ ಹೇಳಿದರೆ ಏನು ಪ್ರಯೋಜನ ಹೇಳಿ? ಈ ಅಭಿಪ್ರಾಯವೂ ಇಕ್ಕು. ಕಾರಣ ಯಾವದೇ ಇರಲಿ, ಮುಂದೆ ನೋಡುವೊ°. ಆನೀಗ ದಿಗುಪಸ್ಥಾನದ ಪೂರ್ಣಪಾಠವ ಪರಿಚಯಿಸುತ್ತೆ. ನಿಂಗೊ ಉಪನಯನ ಕಾಲಲ್ಲಿ ಕಲ್ತದೇ, ಆದರೆ ನಮ್ಮ ಹೆಮ್ಮಕ್ಕೊಗೆ ಗೊಂತಿದ್ದೋ ಇಲ್ಲೆಯೋ? ಹಾಂಗಾಗಿ ಬರೆತ್ತಾ ಇದ್ದೆ, ಕ್ಷಮಿಸಿ
ದಿಗುಪಸ್ಥಾನಂ
(ಇದು ಯಜುಃಶಾಖೆಯೊರಿಂದು. ಬೇರೆ ಋಗ್, ಸಾಮವೇದಿಗೊ ಇದೇ ಮಂತ್ರವ ಹೇಳುತ್ತವೋ ಇಲ್ಲೆಯೋ ಸತ್ಯಕ್ಕೂ ಎನಗೆ ಗೊಂತಿಲ್ಲೆ)
ಓಂ ನಮಃ ಪ್ರಾಚ್ಯೈ ದಿಶೇಯಾಶ್ಚ ದೇವತಾ| ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ|
ನಮೋ ದಕ್ಷಿಣಾಯೈ ದಿಶೇಯಾಶ್ಚ ದೇವತಾ| ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ|
ನಮಃ ಪ್ರತೀಚ್ಯೈ ದಿಶೇಯಾಶ್ಚ ದೇವತಾ| ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ|
ನಮಃ ಉದೀಚ್ಯೈ ದಿಶೇಯಾಶ್ಚ ದೇವತಾ| ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ|
ನಮಃ ಊರ್ಧ್ವಾಯೈ ದಿಶೇಯಾಶ್ಚ ದೇವತಾ| ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ|
ನಮೋಧರಾಯೈ ದಿಶೇಯಾಶ್ಚ ದೇವತಾ| ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ|
ನಮೋವಾಂತರಾಯೈ ದಿಶೇಯಾಶ್ಚ ದೇವತಾ| ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ|
ನಮೋ ಗಂಗಾಯಮುನಯೋರ್ಮಧ್ಯೇ ಯೇ ವಸಂತಿ ತೇಮೇ ಪ್ರಸನ್ನತ್ಮಾನಶ್ಚಿರಂಜೀವಿತಂ ವರ್ಧಯಂತಿ
ನಮೋ ಗಂಗಾ ಯಮುನಯೋರ್ಮುನಿಭ್ಯಶ್ಚ ನಮೋ
ನಮೋ ಗಂಗಾ ಯಮುನಯೋರ್ಮುನಿಭ್ಯಶ್ಚ ನಮಃ
ಮುಂದೆ ಗಾಯತ್ರ್ಯೈ ನಮಃ ಸಾವಿತ್ರ್ಯೈ ನಮಃ ಸರಸ್ವತ್ಯೈ ನಮಃ ಇತ್ಯಾದಿ ನಮಸ್ಕಾರಂಗೊ ಇದ್ದು. ಆದರೆ ಗಂಗಾ ಯಮುನಾ ನದೀ ಮಧ್ಯಲ್ಲಿ ವಾಸಮಾಡಿಗೊಂಡಿಪ್ಪ ನಿಂಗೊ ಎನ್ನ ಮೇಲೆ ಪ್ರಸನ್ನರಾಗಿ! ಆನು ಚಿರಂಜೀವಿಯಾಗಿ ವೃದ್ಧಿಹೊಂದುವ ಹಾಂಗೆ ಆಶೀರ್ವಸಿದಿಸಿ! ಹೇಳುದು, ಆ ಮೇಲೆ ಮೂರು ಸರ್ತಿ ಗಂಗಾ ಯಮುನಾ ಪ್ರದೇಶದ ಮುನಿಗೊಕ್ಕೆ ನಮಸ್ಕಾರ ಮಾಡುದು- ಇದು ವಿಶೇಷವಾದ ಅರ್ಥ ಕೊಡ್ತಲ್ಲದಾ? ಈ ನಮಸ್ಕಾರ ಸರಣಿಲಿ ತೀವ್ರವಾದ ಭಾವನಾತ್ಮಕ ಸಂಬಂಧ ಕಾಣ್ತಿಲೆಯಾ? ತನ್ನ ಅಬ್ಬೆ ಅಪ್ಪ ಅಜ್ಜಿ ಅಜ್ಜ ಗುರುಹಿರಿಯರ ಸ್ಮರಣೆ ಮಾಡಿ ನಮಸ್ಕರಿಸುದಲ್ಲದಾ ಇದು? ಇದರಿಂದಾಗಿ ನಾವು ಆ ಪ್ರದೇಶದೋರೇ ಹೇಳಿ ಘಂಟಾಘೋಷ ಮಾಡ್ತಾ ಇದ್ದಲ್ಲದಾ ಈ ನಾಲ್ಕು ಸಾಲುಗಳ ಮಂತ್ರ ನಮಸ್ಕಾರ? ಇದರಿಂದ ಗಂಗಾ ಯಮುನಾ ಮಧ್ಯದ ಪ್ರದೇಶವೇ ಅಹಿಚ್ಛತ್ರ ಹೇಳಿ ಸಿದ್ಧ ಆವುತ್ತಿಲ್ಲೆಯಾ?
ಆದರೆ ಕೆಲವು ಜನ ಹವಿಕ ಮುಖಂಡರೇ ಬನವಾಸಿಯನ್ನೇ ಅಹಿಚ್ಛತ್ರ ಹೇಳಿ ಹೇಳ್ತಾ ಇಪ್ಪದು ಅತ್ಯಂತ ಆಶ್ಚರ್ಯಕರವಾಗಿದ್ದು. ಒಂದು ಹೊಡೆಲಿ ಅಹಿಚ್ಛಂತ್ರಂದ ಬನವಾಸಿಗೆ ಮಯೂರವರ್ಮ ಕರಕ್ಕೊಂಡು ಬಯಿಂದ ಹೇಳಿಗೊಳ್ತವು. ವಿಚಿತ್ರ ಅಲ್ಲದಾ? ಅಹಿಚ್ಛತ್ರ ಆದಿನೆಲೆ ಹಸ್ತಿನಾವತಿಗೆ ಹತ್ತರೆಯೇ ಇಕ್ಕಷ್ಟೆ, ಏಕೆ ಹೇಳಿದರೆ ಅರ್ಜುನ, ಗುರು ದ್ರೋಣಾಚಾರ್ಯಂಗೆ ಗುರುದಕ್ಷಿಣೆಯಾಗಿ ತಾನು ಗೆದ್ದ ಭೂಪ್ರದೇಶ ಅಹಿಚ್ಛತ್ರವ ಕೊಟ್ಟ° ಹೇಳಿ ಮಹಾಭಾರತಲ್ಲಿ ಇಪ್ಪ ಕಾರಣ ಅದು ಕರ್ನಾಟಕದೊಳ ಇಪ್ಪ ಸಾಧ್ಯತೆ ಇಲ್ಲೆ. ಆಮೇಲೆ ಅಲ್ಲಿ ಬ್ರಾಹ್ಮಣರ ಕೇಂದ್ರವಾಗಿ ಪರಿಣಮಿಸಿಕ್ಕು. ಅಲ್ಲಿಂದ ನಾನಾ ಕಾರಣಂದಾಗಿ ಅಹಿಚ್ಛತ್ರದ ಬ್ರಾಹ್ಮಣರು ಬೇಬೇರ ಪ್ರದೇಶಕ್ಕೆ ಹೋದಿಕ್ಕು. ಪ್ರಕೃತಿ ವಿಕೋಪ, ಶತ್ರುಗೊಕ್ಕೆ ಹೆದರಿ, ರೋಗ ಭೀತಿಲಿ! ಈ ರೀತಿಲಿ ಗ್ರಾಮಗಳ ಬಿಟ್ಟಿಕ್ಕಿ ಬೇರೆ ಸುರಕ್ಷಿತ ಜಾಗಗೊಕ್ಕೆ ಹೋದ ಘಟನೆಗೊ ಹಲವಾರು ನಡದ್ದು ಇತಿಹಾಸಲ್ಲಿ ಸಿಕ್ಕುತ್ತು. ಮತ್ತೆ ಅಹಿಚ್ಛತ್ರದೊರು ಹೋಗಿ ನೆಲೆಸಿದಲ್ಲೆಲ್ಲಾ ಸುತ್ತುಮುತ್ತಾಣ ಜೆನ ಆ ಜಾಗೆಯ ಅಹಿಚ್ಛತ್ರ ಹೇಳ್ತಾ ಇಪ್ಪದು ಸ್ವಾಭಾವಿಕವೇ. ಏಕೆ ಹೇಳಿರೆ ವಿಟ್ಳಲ್ಲಿ ಎಂಗೊ ಕಟ್ಟಿಸಿದ ಮನಗೆ ಅಲ್ಲಿಂದ ಬಂದು ಮೂವತ್ತುನಲುವತ್ತು ವರ್ಷ ಕಳುದರೂ ಆ ಜಾಗೆಯ ಹೆಸರು ಊರ ಜನರ ಬಾಯಿಲಿ ಬಡೆಕ್ಕಿಲ ಹೇಳಿಯೇ ಇದ್ದು, ಇದಕ್ಕೆ ನಿಂಗೊ ಎಂತ ಹೇಳ್ತಿ? ಅಲ್ಲಿ ಬಡೆಕ್ಕಿಲ ಎಂಬ ಫಲಕವ ಎಂಗೊ ಹಾಕಿದ್ದಿಲ್ಲೆಯೊ°. ಹಾಂಗಿದ್ದರೂ ಅದು ಹೇಂಗೆ ಬಡೆಕ್ಕಿಲ ಹೆಸರು ಒಳುದು ಹೋತು? ಆ ವಿಷಯವ ಇಲ್ಲಿಗೆ ಬಿಡುವೊ° (ಬಡೆಕ್ಕಿಲ ಇಪ್ಪದು ಕೆದಿಲ ಗ್ರಾಮಲ್ಲಿ)
***
ಐದಾರು ವರ್ಷ ಹಿಂದೆ ಮಂಜೇಶ್ವರದ ಹತ್ತರಾಣ ಹೇರೂರಿನ ಒಬ್ಬ ನಿಷ್ಠಾವಂತ ಕೋಟ ಬ್ರಾಹ್ಮಣ ಎಂಗಳ ಮೈಸೂರು ಮನಗೆ ಬಂದಿತ್ತಿದ್ದ. ಹೇರೂರಿನ ವಿಷ್ಣು ದೇವಸ್ಥಾನಕ್ಕೆ ಎನ್ನ ಮಗ ’ಶ್ಯಾಮಸುಂದರ’ ಗಣಪತಿ ವಿಗ್ರಹ ಮಾಡ್ತಾ ಇಪ್ಪದರ ನೋಡಿಕ್ಕಿ ಹೋಪಲೆ ಬಂದವ°. ಹೀಂಗೆ ಉಭಯಕುಶಲೋಪರಿ ಮಾತಾಡ್ತಾ ಅವನ ಹತ್ತರೆ ಅವರ ಸಂಧ್ಯಾವಂದನೆ ಮಂತ್ರಲ್ಲಿ ಈ ಮೊದಲು ತಿಳಿಶಿದ ಗಂಗಾ ಯಮುನಾ ನದಿ ಪ್ರದೇಶದ ಋಷಿಮುನಿಗೊಕ್ಕೆ ಸಮಸ್ಕರಿಸುವ ಮಂತ್ರ ಇದ್ದೋ ಹೇಳಿ ಕೇಳಿದ್ದಕ್ಕೆ ಅವ° ಕೂಡ್ಳೆ ಹೇಳಿದ°-“ಎಂಗಳ ಪೂರ್ವಜರು ಗೋದಾವರೀ ನದೀಪ್ರದೇಶಂದ ಬಂದೊರು. ಅವರ ಗಂಗೊಳ್ಳಿ (ಗಂಗಾವಳಿ)ಯ ದಕ್ಷಿಣ ಪ್ರದೇಶ ಬ್ರಹ್ಮಾವರ, ನೀಲಾವರ, ಕುಂದಾಪುರ, ಕೋಟ ಈ ಭಾಗಂಗೊಕ್ಕೆ ಕರಕ್ಕೊಂಡು ಬಂದೊನು ಕದಂಬ ರಾಜ ಮಯೂರ ವರ್ಮ. ಈ ರಾಜ ಭಟ್ಟಾಚಾರ್ಯ ಎಂಬ ಮುನೀಶ್ವರನ ಹತ್ತರೆ ಷಟ್ಕರ್ಮಿಗಳೂ, ವೇದ ಪಾರಂಗತರೂ ಆದ ಬ್ರಾಹ್ಮಣರ ಕರಕ್ಕೊಂಡು ಬಂದು ಎನ್ನ ರಾಜ್ಯವ ಪಾವನಗೊಳ್ಸೆಕ್ಕು ಹೇಳಿದ್ದಕ್ಕೆ, ಭಟ್ಟಾಚಾರ್ಯ ಗೋದಾವರೀ ತೀರಂದ (ಅದು ಈಗಾಣ ನಾಸಿಕ ಜಿಲ್ಲೆ) ಕುಟುಂಬ ಸಮೇತ 30 ಮನೆಯೊರ ಕರಕ್ಕೊಂಡು ರಾಜನ ಸಮ್ಮುಖಕ್ಕೆ ಬಂದು ಒಪ್ಸಿದ°. ಮಯೂರವರ್ಮ ಎಂಗಳ ಹೆರಿಯೊರಿಂಗೆ ಹದಿನಾಲ್ಕು ಗ್ರಾಮಂಗಳ ಉಂಬಳಿಯಾಗಿ ಬಿಟ್ಟುಕೊಟ್ಟದರ ಶಿಲಾಫಲಕಲ್ಲಿ ಬರೆಶಿದ್ದ°. ಆ ಶಿಲಾಶಾಸನ ಎಂಗಳ ಕೋಟಪ್ರದೇಶದ ಒಂದು ದೇವರ ಗುಡಿ ಮುಂದೆ ತೊಳಶಿಕಟ್ಟೆ ಹತ್ತರೆ ನಿಲ್ಸಿಗೊಂಡು ಭದ್ರವಾಗಿ ಎಂಗೊ ಕಾಪಾಡಿಗೊಂಡಿದ್ದೆಯೊ°” ಹೇಳಿದ.
ಭಟ್ಟಾಚಾರ್ಯನ ಮಯೂರವರ್ಮ ಭೇಟಿ ಮಾಡಿದ ಚರಿತ್ರೆಯನ್ನೂ ಅವ° ಹೇಳಿದ- ಅದು ತುಂಬಾ ಆಶ್ಚರ್ಯಕರವಾಗಿ ಇದ್ದು. “ತಿರುಪತಿಯ ಪುಷ್ಕರಣಿ ಒಂದರ ಸ್ನಾನ ಘಟ್ಟಲ್ಲಿ ಇಳುದು ತನ್ನ ಪಟ್ಟೆ ಉತ್ತರೀಯವ ಒಗದು ಆಕಾಶಲ್ಲಿ ಹರಡಿ ನಿಲ್ಸಿದ ಈ ಭಟ್ಟಾಚಾರ್ಯ. ಆ ಮೇಲಿ ಅಲ್ಲಿ ಮುಳುಗಿ ಮಿಂದಿಕ್ಕಿ ಆ ವಸ್ತ್ರವ ತೆಗದು ಹೊದಕ್ಕೊಂಡು ಮೇಲೆ ಬಂದು ತಿರುಪತಿ ದೇವಸ್ಥಾನದ ಮುಖ್ಯ ದ್ವಾರದೊಳ ಪ್ರವೇಶ ಮಾಡಿದ°. ಅದೇ ಸಮಯಕ್ಕೆ ರಾಜಾ ಮಯೂರ ವರ್ಮ (ಶರ್ಮ) ಈ ಸಿದ್ಧಪುರುಷನ ಚಲನವಲನ ಗಮನ್ಸಿದೊಂಡಿದ್ದೊನು ಅವಂಗೆ ಸಾಷ್ಟಾಂಗ ನಮಸ್ಕಾರ ಮಾಡಿ ನಿನ್ನಂಥ ಸಾಧಕನ ಆನು ಈ ವರೆಗೆ ಕಂಡಿದಿಲ್ಲೆ, ಎನಗೆ ನಿನ್ನ ಸಹಾಯ ಬೇಕು, ಎನ್ನ ರಾಜ್ಯ ನೀತಿಭ್ರಷ್ಠರಿಂದ ತುಂಬಿಹೋಗಿ ಅಧೋಗತಿಗೆ ಮುಟ್ಟುತ್ತಾ ಇದ್ದು. ಸಚ್ಚರಿತ್ರರೂ ಧರ್ಮಪರಾಯಣರೂ ವೇದವಿದ್ಯಾ ಪಾರಂಗತರೂ ಆದ ಬ್ರಾಹ್ಮಣರ ಎನ್ನ ರಾಜ್ಯಕ್ಕೆ ಕರಕ್ಕೊಂಡು ಬರೆಕ್ಕು. ಅವರ ಜೀವನೋಪಾಯಕ್ಕೆ ಬೇಕಾದ ಎಲ್ಲ ಸೌಕರ್ಯಂಗಳ ಆನು ಮಾಡಿಕೊಡ್ತೆ ಹೇಳಿ ಅನುನಯ ವಿನಯಲ್ಲಿ ಪ್ರಾರ್ಥನೆ ಮಾಡಿದ°. ಹೀಂಗೆ ಎಂಗಳ ಹೆರಿಯೊರು ಗೋದಾವರೀ ತೀರಂದ ದಕ್ಷಿಣದ ಕೋಟಕ್ಕೆ ಬಪ್ಪ ಹಾಂಗಾತು. ಅಲ್ಲಿಂದ ಮತ್ತೆ ಎಂಗೊ ವಂಶಪಾರಂಪರ್ಯ ಈ ಭಾಗಲ್ಲಿ ನೆಲಸುವ ಹಾಂಗಾತು”. ಅವಕ್ಕೆ ಅಹಿಚ್ಛತ್ರದೊರು ಎಂಬ ಹೆಸರಾಯಿದಿಲ್ಲೆ ನೋಡಿ!. ಗೋದಾವರೀ ತೀರಲ್ಲೇ ನಾಸಿಕ ಜಿಲ್ಲೆ ಇಪ್ಪದು. ಆ ಕಾಲಲ್ಲಿ ಇದು ಕನ್ನಡ ನಾಡೇ ಆಗಿತ್ತು ಎಂಬದಕ್ಕೆ ಒಂದು ಸಣ್ಣ ಮಾಹಿತಿ ಕೊಡ್ತೆ. ನಾಸಿಕದ ಜಿಲ್ಲಾ ಕಛೇರಿಲಿ ಭೂಮಿಕ್ರಯ ವಿಕ್ರಯ ಹಳೇಕಾಲದ ಕಾಗದ ಪತ್ರಂಗಳ ಲೇಖನ ಕನ್ನಡ ಲಿಪಿ ಮಾತ್ರ ಅಲ್ಲ ಭಾಷೆ ಕೂಡಾ ಕನ್ನಡವೇ. ಎನ್ನ ತಂಗೆ ಗೆಂಡ° ಪಿ.ಎಸ್. ಶಿವರಾಮ, ನಾಸಿಕ್ ರೋಡಿಲಿಪ್ಪ ನೋಟು ಮತ್ತು ಸ್ಟಾಂಪ್ ಪ್ರಿಂಟ್ ಮಾಡಿವ ಸೆಕ್ಯೂರಿಟಿ ಪ್ರಿಂಟಿಂಗ್ ಪ್ರೆಸ್ಸಿನ ಜನರಲ್ ಮ್ಯಾನೇಜರನಾಗಿ ಕೆಲವು ವರ್ಷ ಇದ್ದು ರಿಟಾಯರ್ ಆದ. ಅವಂಗೆ ಈ ಹಳೇ ಲೆಜ್ಜರಿನ ಓದುವ ಹವ್ಯಾಸ. ಅವ° ಯಾವ ಊರಿಂಗೆ ಹೋದರೂ ಆ ಊರಿನ ಲೆಜ್ಜರ್ ಪರಿಶೀಲನೆ ಮಾಡ್ತ°. ದೊಡ್ಡ ಸಹಕಾರಿ ಹುದ್ದೆಲಿಯೂ ಇದ್ದ°. ಹಾಂಗಾಗಿ ಅದರ ತರ್ಸಿ ಓದುದಕ್ಕೆ ಆರೂ ಅಡ್ಡಿ ಮಾಡುವ ಹಾಂಗಿಲ್ಲೆ. ಅವ° ನಾಸಿಕ ಜಿಲ್ಲಾ ಕಛೇರಿಯ ಹೆಳೆ ಲೆಜ್ಜರ್ ತರ್ಸಿ ನೋಡುವಾಗ ಎಲ್ಲ ಕನ್ನಡ ವಾಕ್ಯಂಗೊ, ಕನ್ನಡ ಲಿಪಿ! ನೋಡಿ ತುಂಬಾ ಆಶ್ಚರ್ಯ!
ಆನು ಒಂದಾರಿ ಸಾಸಿಕಕ್ಕೆ ಅವರ ಬ್ರಿಟಿಷರ ಕಾಲದ ಸರಕಾರೀ ಬಂಗ್ಲೆಗೆ (ತಂಗೆ ಮನಗೆ)ಹೋಯಿದೆ. ಆ ಮೇಲೆ ಗೋದಾವರೀ ನದಿಯ ಕರೆಲಿಪ್ಪ ತ್ರ್ಯಂಬಕೇಶ್ವರ ದೇವಸ್ಥಾನವನ್ನೂ ನೋಡಿಕ್ಕಿ ಬಂದೆ. ಮಹಾರಾಷ್ಟ್ರದ ಒಳ ಇದ್ದರೂ ಅಲ್ಲಿ ಹಲವಾರು ಕನ್ನಡಿಗರು, ಹವಿಕರು ಇದ್ದವು. ಇನ್ನೂ ಹಲವು ವಿಷಯಂಗೊ ಇದ್ದು. ಅತಿ ದೀರ್ಘವಾಗಿ ನಿಂಗೊಗೆಲ್ಲ ’ಬೋರ್’ ಆವುತ್ತಾ ಇಕ್ಕು, ಕ್ಷಮಿಸಿ. ’ಅಹಿಚ್ಛತ್ರದೊರು’ ಈ ಶಬ್ದ ಜನರ ನಾಲಗೆಲಿ ಕಾಲಾನುಕ್ರಮಲ್ಲಿ ಅಹಿಕರು ಹೇಳಿ ಆಗಿ ಆ ಮೇಲೆ ಹವಿಕರು ಹೇಳಿ ಆದ್ದು. ಇದು ಕನ್ನಡಿಗರ ಬಾಯಿಲಿ ಅಪ್ಪ ಪರಿವರ್ತನೆ. ಈಗಳೂ ಮೈಸೂರು ಹೊಡೆಲಿ ಹಕಾರವ ಅಕಾರವಾಗಿಯೂ, ಅಕಾರವ ಹಕಾರವಾಗಿಯೂ ಹೇಳುವೊರು ತುಂಬಾ ಜೆನ ಇದ್ದವು. [ಪ್ರಸಿದ್ಧವಾದ ಕಥೆ- ರೈಲ್ವೇ ಕೆಲಸಗಾರ ಹಾಸನವ ಆಸನ ಹೇಳಿಗೊಂಡಿದ್ದದಕ್ಕೆ ಮೇಲಧಿಕಾರಿ ಅವನ ಅರಸೀಕರೆಗೆ ಹಾಕಿದ°. ಅಲ್ಲಿ ಅವ° ಅರಸೀಕರೆಗೆ ಬದಲಾಗಿ ಹರ್ಶೀಕೆರೆ ಹೇಳುಲೆ ಸುರುಮಾಡಿದ್ದಕ್ಕೆ ಅವನ ಯಥಾಸ್ಥಾನಕ್ಕೆ ಪುನರ್ನೇಮಕ ಮಾಡಿದವೊಡೊ]
ಆ ಮೇಲೆ ಇತ್ತೀಚೆಗೆ ಹವ್ಯಕ-ಹವ್ಯ ಕವ್ಯಾದಿಗಳ ಮಾಡುವೊರು-ಹವ್ಯಕರು ಹೇಳಿ ಪ್ರಚಾರಕ್ಕೆ ಬಂತು. ಆಂಧ್ರದ ವಿದ್ವಾಂಸ ಕಾವ್ಯಕಂಠ ಗಣಪತಿ ಶಾಸ್ತ್ರಿ ಪ್ರಪ್ರಥಮವಾಗಿ ಪ್ರಾಚೀನ ಗ್ರಂಥ ಉತ್ತರ ಸಹ್ಯಾದ್ರಿ ಖಂಡಲ್ಲಿ ಪ್ರಶೋಧನೆ ಮಾಡಿ ತಿಳಿಶಿದ್ದ° ಹೇಳಿ ಗೊಂತಾತು. ಇಲ್ಲಿಗೆ, ಈ ವಿಚಾರವಾಗಿ ಎನಗೆ ಗೊಂತಾದ ವಿಷಯಂಗಳ ತಿಳಿಶಿ ವಿರಮಿಸುತ್ತೆ.
ಧನ್ಯವಾದ
ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ,
ನಂ: 1566, 19th ಕ್ರಾಸ್,ರೂಪಾನಗರ
ಭೋಗಾದಿ ಪೋಸ್ಟ್
ಮೈಸೂರು 570026
9019274678
ಬ್ರಾಹ್ಮಣರ ವಲಸೆ ಏಕೆ ಆತು?- ಇಲ್ಲಿದ್ದು
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಭಾರೀ ಚೆಂದದ ಬರಹ…ಅಕ್ಷರಗಳನ್ನೇ ಮಾಲೆ ಮಾಡಿದ್ದಿ ನಿಂಗೊ.
ನಮ್ಮ ಬಗ್ಗೆ ತಿಳಿಯದ್ದ ಹಲವಾರು ವಿಷ್ಯಂಗೊ ಗೊಂತಾತು. ಧನ್ಯವಾದಂಗೊ
ಹವ್ಯಕರ ಮೂಲದ ಬಗ್ಗೆ ತುಂಬಾ ಸಂಶೋಧನೆ ಮಾಡಿ ವಿವರವಾಗಿ ಬರದ್ದಿ. ಲಾಯಕ ಆಯಿದು.