Oppanna.com

ಅರ್ತಿಕಜೆ ಮಾವನ – ಹವಿಗನ್ನಡ ಗಾದೆಗಳು

ಬರದೋರು :   ಚೆನ್ನೈ ಬಾವ°    on   27/03/2014    9 ಒಪ್ಪಂಗೊ

ಚೆನ್ನೈ ಬಾವ°

ಅರ್ತಿಕಜೆ ಮಾವನ – ಹವಿಗನ್ನಡ ಗಾದೆಗಳು
ಸಂಗ್ರಹಿಸಿ ಬರದೋರು – ಅರ್ತಿಕಜೆ ಮಾವ°  (ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ) unnamed1
ಸಾಹಿತ್ಯ ಕೃಷಿಲಿ ಇಪ್ಪೋರಿಂಗೆ ಅರ್ತಿಕಜೆ ಮಾವನ ಗುರ್ತ ಇಲ್ಲದ್ದೆ ಇರ. ಕಳುದ ಪುತ್ತೂರು ತಾಲೋಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಂಗೊಳಿಸಿದ್ದ ಅರ್ತಿಕಜೆ ಮಾವನ ಬೈಲಿಂಗೆ ಗುರ್ತಮಾಡ್ಳೆ ಹೆಮ್ಮೆ ಪಡುತ್ತೆ.
ಬೈಲ ಪೋಷಕ° ಅರ್ತಿಕಜೆ ಅಜ್ಜನ ತಮ್ಮ ನಮ್ಮ ಈ ಅರ್ತಿಕಜೆ ಮಾವ°
ಎಲ! ಎಂತಾತು ಇವಂಗೆ ಅಜ್ಜನ ತಮ್ಮ ಮಾವ° ಆವ್ತನೋ!! ಹೇದು ಗ್ರೇಶಿದಿರೋ! . ಅದೂ ಅಪ್ಪು. ಅಜ್ಜ ಹೇದು ಹೇದುಗೊಂಬಷ್ಟಕ್ಕೆ ಆಯ್ದಿಲ್ಲೆಡ ಈಗಂಗೆ ಅರ್ತಿಕಜೆ ಮಾವಂಗೆ.   ಎಂತಕೆ ಕೇಟ್ರೆ ನಿವೃತ್ತ° ಹೇದು ಒಂದು ಪಟ್ಟ ಇಪ್ಪದಾದರೂ ಅದು ಬರೇ ಸರಕಾರಿ ಉದ್ಯೋಗಕ್ಕೆ ಮಾಂತ್ರ ನಿವೃತ್ತ°. ಕೃಷಿ ಮಾಡ್ತವಂಗೆ ನಿವೃತ್ತಿ ಹೇದು ಇಲ್ಲೆಡ. ಅದೂ ಅಪ್ಪಲ್ಲದ! ಉದ್ಯೋಗಂದ ನಿವೃತ್ತ° ಆದರೂ ಸಾಹಿತ್ಯ ಕೃಷಿಲಿ ಅರ್ತಿಕಜೆ ಮಾವನ ಶ್ರದ್ಧೆ, ದುಡಿಮೆ ಎಂತ ಜವ್ವನಿಗರನ್ನೂ ನಾಚುಸುಗು. ಇಂದಿಂಗೂ ನೆಡು ಇರುಳು ಆಗಿ ಗಂಟೆ ಎರಡು ಕಳುದರೂ ಎಂತದೋ ಬರವಣಿಗೆಲಿ, ಸಂಶೋಧನೆಲಿ, ಅಧ್ಯಯನಲ್ಲಿ ಕೂದುಗೊಂಡಿರುತ್ತವು ದಿನಾ ಮನೆಲಿ!. ಹಗಲು ಹೊತ್ತಿಲಿ ಅಧ್ಯಾಪನ, ಮಾರ್ಗದರ್ಶನ ವಿದ್ಯಾರ್ಥಿಗೊಕ್ಕೆ, ಆಸಕ್ತರಿಂಗೆ.  ಹೀಂಗೆಲ್ಲ ಆಗಿ ಬೈಲಿಂಗಪ್ಪಗ ಇವು ಅರ್ತಿಕಜೆ ಮಾವ°.
ಅರ್ತಿಕಜೆ ಮಾವ° ಕನ್ನಡದ ಪ್ರಮುಖ ಸಂಶೋಧಕರಲ್ಲಿ ಒಬ್ಬ°. ವಿದ್ವಾಂಸರಲ್ಲಿ ಒಬ್ಬ°. ಊರ ಬಿಟ್ಟು ದೂರದ  ಚೆನ್ನೈಲಿ ಇಪ್ಪದಾದರೂ ಊರದ್ದೇ ಸಂಪರ್ಕ. ಊರದ್ದೇ ಕ್ರಮ.
ಅರ್ತಿಕಜೆ ಅಜ್ಜನ ತಮ್ಮನಾಗಿ 19.04.1945ರಲ್ಲಿ ಹುಟ್ಟಿದ ಈ ಅರ್ತಿಕಜೆ ಮಾವ ಪಾಳ್ಯತ್ತಡ್ಕ ಶಾಲೆಲಿ ವಿದ್ಯಾಭ್ಯಾಸ ತೊಡಗುಸಿ, ಮುಂದೆ ಎಡನೀರು ಹೈಸ್ಕೂಲು, ಪುತ್ತೂರು, ಕಾಸರಗೋಡು ಕೋಲೇಜು ಈ ರೀತಿಯಾಗಿ ಮುಂದುವರುದು ಕನ್ನಡ ಬಿ.ಎ (1969), ಎಂ.ಎ (1971) ಎರಡರಲ್ಲಿಯೂ ಪ್ರಥಮ ರಾಂಕ್ ಗಳುಸಿ ಚಿನ್ನದ ಪದಕ ಗಿಟ್ಟಿಸಿಯೊಂಡವು. ಬಿ.ಎ ಕಲ್ತುಗೊಂಡಿಪ್ಪಗಳೇ ಹಿಂದಿ ವಿಷಾರದ (1967). ಮುಂದೆ ಉದ್ಯೋಗ ನಿಮಿತ್ತ ಮದ್ರಾಸಿಂಗೆ ಬಂದು ಇಳುದು ಇದರೊಟ್ಟಿಂಗೆ ತಮಿಳು ಡಿಪ್ಲೋಮಾ (1978), ಕನ್ನಡ ಪಿ.ಎಚ್.ಡಿ (1981), ಮಲೆಯಾಳ ಸರ್ಟಿಫಿಕೆಟ್ (1982), ಭಾಷಾವಿಜ್ಞಾನ ಸರ್ಟಿಫಿಕೇಟು (1983), ತೆಲುಗಿಲ್ಲಿ ಡಿಪ್ಲೋಮ (1986). ಇದರೊಟ್ಟಿಂಗೆ ಎಂ.ಎ ಕಲ್ತುಗೊಂಡಿಪ್ಪಗಳೇ ಸಂಸ್ಕೃತವನ್ನೂ ಅಧ್ಯಯನ ಮಾಡಿಗೊಂಡು  ಹೀಂಗೆ ಬಹುಭಾಷಾ ಪರಿಣತ° ಆದವು.
ಕೋಲೇಜಿಂಗೆ ಹೋಗ್ಯೊಂಡಿಪ್ಪಗಳೇ ವಿದ್ಯಾಭ್ಯಾಸದ ಒಟ್ಟಿಂಗೆ ಎಡನೀರು ಮಠಲ್ಲಿ ಅಕೌಂಟಂಟ್ ಆಗಿ ಉದ್ಯೋಗ ಜೀವನ ಸುರುಮಾಡಿದವು (1963 -65) ಮುಂದೆ 1971 -75ರವರೇಂಗೆ ಪುತ್ತೂರು ಫಿಲೋಮಿನಾ ಕಾಲೇಜಿಲ್ಲಿ ಕನ್ನಡ ಉಪನ್ಯಾಸಕ ಆಗಿ ಕೆಲಸ ಮಾಡಿದವು. ಮತ್ತೆ ಮದ್ರಾಸು ಸೇರಿಗೊಂಡು ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗಲ್ಲಿ ಕನ್ನಡ ಉಪನ್ಯಾಸಕ (1975-83), ರೀಡರ್ (1983-89), ಪ್ರಾಧ್ಯಾಪಕ (1989-1991), ಮುಖ್ಯಸ್ಥ (1991-2005) ಆಗಿ ಅತ್ತ್ಯುತ್ತಮ, ಜನಮೆಚ್ಚುಗೆಯ ಸೇವೆ ಸಲ್ಲುಸಿ ಉದ್ಯೋಗಂದ ನಿವೃತ್ತಿ ಹೊಂದಿದವು. ಇದರೆಡಕ್ಕಿಲ್ಲಿ ಮದರಾಸು ವಿಶ್ವವಿದ್ಯಾಲಯದ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಿರ್ದೇಶಕರಾಗಿ (1999-2000), ತಮಿಳು ಹಾಂಗೂ ಇತರ ದ್ರಾವಿಡ ಭಾಷೆಗಳ ಶಾಖೆಯ ಅಧ್ಯಕ್ಷನಾಗಿಯೂ (2002-2005) ಸೇವೆ ಸಲ್ಲುಸಿದ್ದವು.
ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಚೆನ್ನೈ ಹವ್ಯಕ, ಎಸ್ ಕೆ ಡಿ ಬಿ ಇತ್ಯಾದಿ ಹಲವಾರು ಸಂಘ ಸಂಸ್ಥೆಗಳಲ್ಲಿ ಗೌರವ ಹುದ್ದೆಗಳ ಅಲಂಕರಿಸಿ, ತಮಿಳುನಾಡಿನ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿ ಹಾಂಗೂ ಪಠ್ಯಕ್ರಮ ನವೀಕರಣ ಸಮಿತಿ, ಫಿಲಂ ಸೆನ್ಸಾರ್ ಮಂಡಳಿಯ ಕನ್ನಡ ಭಾಷಾ ಸಲಹಾ ಸಮಿತಿ ಇತ್ಯಾದಿ ಗೌರವಾನ್ವಿತ  ಕೆಲಸಂಗಳನ್ನೂ ಯಶಸ್ವಿಯಾಗಿ ನಿಭಾಯಿಸಿದ್ದವು. ಹಲವಾರು ಪತ್ರಿಕೆ, ಸಂಚಿಕೆಗಳಲ್ಲೂ ಸಂಪಾದಕರಾಗಿ ಸೇವೆ ಸಲ್ಲುಸಿದ ಅವರ ಕಾರ್ಯ ನಿಜಕ್ಕೂ ಅದ್ವಿತೀಯ. ಔದ್ಯೋಗಿಕ ಜೀವನಲ್ಲಿ 1995  – 2005ರ ವರೇಂಗೆ ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ, ಬೆಂಗಳೂರು, ಮಂಗಳೂರು, ಗುಲ್ಬರ್ಗ, ಮುಂಬಯಿ, ಮಧುರೈ, ಕೊಯಂಬತ್ತೂರು, ಸೇಲಂ, ಬನಾರಸ್ ವಿಶ್ವವಿದ್ಯಾನಿಲಯಂಗಳ ಕನ್ನಡ ಅಧ್ಯಯನ ಮಂಡಳಿಲಿ ಸದಸ್ಯರಾಗಿತ್ತಿದ್ದವು. ಇದಲ್ಲದ್ದೆ, ಕಲ್ಲಿಕೋಟೆ, ಕಣ್ಣೂರು, ಆಂಧ್ರ ಇತ್ಯಾದಿ ವಿಶ್ವವಿದ್ಯಾನಿಲಯಂಗಳ ಸ್ನಾತಕೋತ್ತರ ಪರೀಕ್ಷಾ ಮಂಡಳಿಗಳ ಅಧ್ಯಕ್ಷ ಹಾಂಗೂ ಸದಸ್ಯರಾಗಿಯೂ ಸೇವೆ ಸಲ್ಲುಸಿದ್ದವು. ವಿಶ್ವವಿದ್ಯಾನಿಲಯ ಮಟ್ಟಲ್ಲಿ ಬೇರೆ ಬೇರೆ ವಿಶ್ವವಿದ್ಯಾಲಯಂಗಳ ವಿವಿಧ ಮಂಡಳಿಗಲ್ಲಿ ಗೌರವ ಹುದ್ದೆಯ ಸೇವೆ ಸಲ್ಲುಸಿದ ಇವರ ಸೇವೆ ಅನನ್ಯ.
ಇವು ಅನೇಕ ಪುಸ್ತಕಂಗಳನ್ನೂ ಬರದು ಪ್ರಕಟಿಸಿದ್ದವು. ಅದರ ಪಟ್ಟಿಯೇ ದೊಡ್ಡದಿದ್ದು. ಜಾನಪದ ಜೀವನ (ಹವ್ಯಕ ಹಾಡುಗಳ ಸಂಶೋಧನಾ ಕೃತಿ ), ಗಾನಮಂಜರಿ (ಭಕ್ತಿಗೀತೆಗೊ), ಸೂತಭಾರತಿ (ಷಟ್ಪದಿ ಕಾವ್ಯ),  ಸಹಸ್ರಾರ್ಧ ತುಳು ಗಾದೆಳು, ಅಯ್ಯಪ್ಪ (ಮಲೆಯಾಳಂ ಕಾದಂಬರಿಯ ಅನುವಾದ), ಹವ್ಯಕ ಗಾದೆಗೊ, ಜನಪ್ರಿಯ ತುಳುಗಾದೆಗೊ, ವಿಷಕನ್ನಿಕೆ (ಮಲೆಯಾಳ ಕಾದಂಬರಿಯ ಕನ್ನಡಾನುವಾದ), ಸಾರ್ಥಕ – ಪ್ರೊ. ಮರಿಯಪ್ಪ ಭಟ್ಟರ ಸಂಸ್ಮರಣ ಗ್ರಂಥ, ರಾಮರಾಜ ಬಹಾದ್ದೂರ್ (ಮಲೆಯಾಳ ಕಾದಂಬರಿಯ ಕನ್ನಡಾನುವಾದ) , ಕನ್ನಡಲ್ಲಿ ಶತಕ ಸಾಹಿತ್ಯ – ಪಿ ಎಚ್ ಡಿ ಪ್ರಬಂಧ , ಸಮಾಜ ವಿಜ್ಞಾನಿ ಪೆರಿಯಾರ್ (ತಮಿಳಿಂದ ಕನ್ನಡಕ್ಕೆ ಅನುವಾದ), ಸಾಹಿತ್ಯ ಸಂಬಂಧ – ‘ತೌಲನಿಕ ಸಾಹಿತ್ಯ’ , ‘ಬಹುಭಾಷಾ ಸಾಹಿತ್ಯ’, ‘ಪಡಿದನಿ’, ‘ಪ್ರೊ. ಮರಿಯಪ್ಪ ಭಟ್ಟರ ಜೀವನ ಚರಿತ್ರೆ’, ‘ತುಳುನಾಡಿನ ಇತಿಹಾಸ’, ‘ತಿರುವೇಂಗಡಾಚಾರ್ಯ ಶತಕ’,  ‘ಭಾರತಲ್ಲಿ ಜಾತಿ ಪದ್ಧತಿ’ (ಇಂಗ್ಲೀಷಿಂದ ಅನುವಾದ).. – ಹೀಂಗೆ ಅನೇಕ ಕೃತಿಗಳ ರಚಿಸಿದ್ದಲ್ಲದ್ದೆ  ಡಾ. ಹರಿಕೃಷ್ಣ ಭರಣ್ಯ ಮಾವನೊಟ್ಟಿಂಗೆ – ನುಡಿ ಸಂಸ್ಕೃತಿ (ಹವ್ಯಕ ಪಡೆನುಡಿ ಕೋಶ), ಹವ್ಯಕ ಜನಪದ ಗೀತೆಗೊ ಹೀಂಗೆ ದೊಡ್ಡ ಪಟ್ಟಿಯೇ ಇದ್ದು. ‘ಹವ್ಯಕ ಜನಪದ ಗೀತೆಗೊ’, ‘ಚಿಂತನ ಚತುರ್ಮುಖ’ ಈಗಾಗಲೇ ಬಿಡುಗಡೆಗಡೆಗೆ ಸಿದ್ಧವಾಗಿದ್ದು.
ಅನೇಕ ಸ್ಮರಣ ಸಂಚಿಕೆಗಳಲ್ಲಿ ಇವರ ಸಾಹಿತ್ಯ ಲೇಖನಂಗೊ, ಕವನಂಗೊ, ಚುಟುಕಂಗೊ ಪ್ರಕಟ ಆಯ್ದು. ಪತ್ರಿಕೆಗಳಲ್ಲಿ ಲಘುಬರಹ, ಕವನಂಗೊ, ಲೇಖನಂಗೊ ಪ್ರಕಟ ಆಯ್ದು. ಅನೇಕ ವಿಮರ್ಶಾತ್ಮಕ ಪ್ರಬಂಧಂಗಳನ್ನೂ ಬರದ್ದವು. ಪ್ರೊ. ಮರಿಯಪ್ಪ ಭಟ್ಟ, ಸೇಡಿಯಾಪು, ಎಡನೀರು ಸ್ವಾಮೀಜಿ, ಎಮ್.ಎಮ್ ಕಲಬುರ್ಗಿ, ತಗಳಿ ಶಿವಶಂಕರ ಪಿಳ್ಳೆ,  ವೆಂಕಟರಾಜ ಪುಣಿಂಚತ್ತಾಯ, ಪ್ರೊ. ವಿ.ಬಿ. ಮೊಳೆಯಾರ, ಶೇಣಿ, ಕೀರಿಕ್ಕಾಡು, ದೇರಾಜೆ ಮುಂತಾದ  ಅನೇಕ ಮೇಧಾವಿಗಳ ಅಭಿನಂದನಾ ಗ್ರಂಥಂಗಳಲ್ಲಿ  ವ್ಯಕ್ತಿಚಿತ್ರಂಗಳನ್ನೂ  ಲೇಖನಂಗಳನ್ನೂ ಬರದ್ದವು. ಬೇರೆ ಬೇರೆ ಸಾಹಿತ್ಯ ಕ್ಷೇತ್ರಲ್ಲಿ ಪ್ರಸಿದ್ಧರಾದವರ ಆಯ್ದ ಪ್ರತಿಭೆಗಳ ಗುರುತಿಸಿ ‘ಪ್ರತಿಭಾಲೋಕ’ ಹೇಳ್ವ ಕೃತಿಯ ಪುಸ್ತಕರೂಪಲ್ಲಿ ತಂದದು ಶ್ಲಾಘನೀಯ. ಸಾಹಿತ್ಯ-ಸಂಶೋಧನೆ-ವಿಮರ್ಶೆಗೆ ಸಂಬಂಧಿಸಿ ಅರ್ತಿಕಜೆ ಮಾವ ಬರದ ಲೇಖನಂಗಳ ಸಂಗ್ರಹ ‘ಪಡಿದನಿ’ ಹೇಳ್ವ ಪುಸ್ತಕ ವಿಶಿಷ್ಟವಾಗಿದ್ದು. ಬರೇ ಪ್ರಸಿದ್ಧರಾದವರತ್ರೆ ಮಾತ್ರ ಅಲ್ಲ ಅರ್ತಿಕಜೆ ಮಾವಂಗೆ ಕಾಳಜಿ, ವಿದ್ಯಾರ್ಥಿಗೊಕ್ಕೂ ಸ್ಫೂರ್ತಿದಾಯಕ ವಿಶೇಷ ಸಜ್ಜನಿಕೆ ಅವರದ್ದು. ಅದೆಷ್ಟೋ ವಿದ್ಯಾರ್ಥಿಗೊಕ್ಕೆ ವಿದ್ಯಾದಾನ ಮಾಡಿದ್ದಲ್ಲದ್ದೆ ಅವರ ಸರ್ವತೋಮುಖ ಅಭಿವೃದ್ಧಿಗೂ ಅವು ಕಾರಣೀಭೂತರಾಯ್ದವು ಹೇಳ್ವದು ಪ್ರತ್ಯೇಕವಾಗಿ ಹೇಳ್ಳೇಬೇಕಾದ ವಿಷಯ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿಪ್ಪ ಪ್ರತಿಭೆಯ ಗುರುತುಸಿ ಅದಕ್ಕೆ ನೀರೆರದು ಪೋಷಿಸಿ ಬೆಳಿಸಿದ ವಿಶಾಲ ಮನೋಭಾವ ಅರ್ತಿಕಜೆ ಮಾವಂದು. ‘ನೀ ಎಂತಾರು ಸ್ವಂತದ್ದು ಕವಿತೆಯೋ, ಲೇಖನವೋ , ಪ್ರಬಂಧವೋ ಬರಕ್ಕೊಂಡು ಬಾ, ತಪ್ಪಾದರೆ ಸರಿಮಾಡುವೊ, ಆನಿದ್ದೆ ಹೆದರೆಡ’ ಹೇದು ವಿದ್ಯಾರ್ಥಿಗೊಕ್ಕೆ ಪ್ರತಿನಿತ್ಯ ಪ್ರೋತ್ಸಾಹ ಕೊಟ್ಟು  ವಿದ್ಯಾರ್ಥಿಗಳತ್ರಂದ ಪ್ರತಿನಿತ್ಯ ಏನಾರು ಬರಶುಲೆ ಉತ್ತೇಜನ ಕೊಡುವ ಅವರ ವಿಶಾಲ ಹೃದಯವ ನಿಜಕ್ಕೂ ಮೆಚ್ಚೆಕ್ಕಾದ್ದೆ.  ತುಳುವಿಲ್ಲಿಯೂ ಇವು ಕೆಲವು ಕೃತಿಗಳ ಬರದ್ದವು. ಇವೆಲ್ಲಕ್ಕೂ ಹೆಚ್ಹಾಗಿ ತನಗೆ ಪ್ರೊ.ಮರಿಯಪ್ಪ ಭಟ್ಟರು ಗುರುಸಮಾನರು ಹೇದು  ಹೇದುಗೊಂಬದಲ್ಲಿ ಅರ್ತಿಕಜೆ ಮಾವಂಗೆ ಭಾರೀ ಕೊಶಿ. ಹೀಂಗೆ ಸಾಹಿತ್ಯ ಕ್ಷೇತ್ರಲ್ಲಿ ಬಹುವರ್ಷ ಸೇವೆ ಸಲ್ಲುಸಿ ಪ್ರಸಿದ್ಧರಾಗಿಪ್ಪ ನಮ್ಮ ಹಿರಿಯರಲ್ಲಿ ಒಬ್ಬರಾದ ಅರ್ತಿಕಜೆ ಮಾವನ (ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ) ಬೈಲಿಂಗೆ ಪರಿಚಯಿಸುಲೆ ಹೆಮ್ಮೆ ಆವ್ತು.
ಅರ್ತಿಕಜೆ ಮಾವನ ಸಮಗ್ರ ಚಿತ್ರಣ ಸಿಕ್ಕೆಕ್ಕಾರೆ ‘ಅನನ್ಯ’ – ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಅಭಿನಂದನ ಗ್ರಂಥ (2008) ವ ನೋಡೆಕು. ಸುಮಾರು 600ಪುಟಕ್ಕೂ ಹೆಚ್ಚಿಗೆ ಇಪ್ಪ ಈ ಅಭಿನಂದನಾ ಗ್ರಂಥಲ್ಲಿ ಸಾಹಿತ್ಯ ಕ್ಷೇತ್ರದ ಅನೇಕ ಗಣ್ಯ ಮಹನೀಯರು ಅರ್ತಿಕಜೆ – ನಾ ಕಂಡಂತೆ ಹೇಳ್ವಾಂಗೆ ಚಿತ್ರಿಸಿದ್ದವು. ಇದೆಲ್ಲರಿಂದಲು ವಿಶೇಷ ಎಂತ ಹೇದರೆ ಅರ್ತಿಕಜೆ ಮಾವನ ಕೃತಿಗೊ ಅತಿ ಸರಳ ಶೈಲಿ, ಸುಲಲಿತ. ಎಂತವಂಗೂ ಸುಲಭಕ್ಕೆ ಅರ್ಥ ಅಪ್ಪಾಂಗೆ ಇರೆಕ್ಕು ಹೇಳ್ವದು ಅರ್ತಿಕಜೆಮಾವನ ಕಾಳಜಿ.
ಕನ್ನಡ ಸಾಹಿತ್ಯ ಕೃಷಿಯೊಟ್ಟಿಂಗೆ ಹವಿಗನ್ನಡ ಸಾಹಿತ್ಯಲ್ಲಿಯೂ, ತುಳು ಸಾಹಿತ್ಯಲ್ಲಿಯೂ ಅರ್ತಿಕಜೆ ಮಾವನ ಕೃಷಿ ಇದ್ದು.  ಜನಪ್ರಿಯ ತುಳು ಗಾದೆಗಳು, ಸಹಸ್ರಾರ್ಧ ತುಳುಗಾದೆಗಳು  ಇವುಗಳಲ್ಲಿ ಪ್ರಾಮುಖ್ಯವಾಗಿ ಉಲ್ಲೇಖನೀಯ.
ಇಷ್ಟೆಲ್ಲ ಸಾಹಿತ್ಯ ಸಂಪತ್ತುಗಳ ಹೊಂದಿದ ಅರ್ತಿಕಜೆ ಮಾವ° ಒಬ್ಬ ತುಂಬ ಸರಳ ಸಜ್ಜನ ಸಹೃದಯಿ. ಅದೆಷ್ಟೋ ವಿದ್ಯಾರ್ಥಿಗೊಕ್ಕೆ ವಿದ್ಯಾದಾನ, ಮಾರ್ಗದರ್ಶನ ನೀಡಿ ದಾರಿದೀಪ ಆಗಿದ್ದವು.
ಅವು ಆಯ್ದು ಸಂಗ್ರಹಿಸಿದ 1391  ಹವ್ಯಕ ಗಾದೆಗಳ ಪುತ್ತೂರು ಕರ್ನಾಟಕ ಸಂಘದೋರು 1985ರಲ್ಲಿ ಹವ್ಯಕ ಗಾದೆಗಳು ಹೇಳ್ವ ಕೃತಿಯ ಮೂಲಕ ಪುಸ್ತಕ ರೂಪಲ್ಲಿ ಬಿಡುಗಡೆ ಮಾಡಿದ್ದವು. ಇದೇ ಕೃತಿಯ ಪರಿಷ್ಕರಿಸಿ ಮತ್ತೆ ಇದೀಗ ಮತ್ತೂ ಕೆಲವಷ್ಟರ ಸೇರುಸಿ 2888 ಗಾದೆಗಳ ಸಂಗ್ರಹಿತ ಕೃತಿ ಮುದ್ರಿತವಾಗಿ ಇದೀಗ ಓ ಮನ್ನೆ 8.3.2013ರಂದು ಚೆನ್ನೈ ಕರ್ನಾಟಕ ಸಂಘಲ್ಲಿ ನಡದ ‘ಹೊರನಾಡ ಕನ್ನಡಿಗರ ಸಮ್ಮೇಳನ’ಲ್ಲಿ ಬಿಡುಗಡೆ ಆಯ್ದು. ಅಕಾರಾದಿಯಾಗಿ ಸಂಗ್ರಹಿಸಿದ ಈ ಗಾದೆಗಳ ಕೃತಿ ಅತ್ಯುಪಯುಕ್ತ ಪುಸ್ತಕ.  ಈ ಪುಸ್ತಕದ  ಅಕೇರಿಲಿ ಡಾ. ಹರಿಕೃಷ್ಣ ಭರಣ್ಯ ಮಾವ° ರಚಿಸಿದ ನವೀನ ಗಾದೆಗಳನ್ನೂ, ಗ್ರಂಥಋಣವನ್ನೂ ಶಬ್ದಕೋಶವನ್ನೂ ಕೊಟ್ಟದು ತುಂಬಾ ಉಪಯುಕ್ತ ಅಲ್ಲದ್ದೆ ಲಾಯಕವೂ ಆಯ್ದು.havyaka gadegalu ಈ ಕೃತಿಲಿ-
ಅಂಕುಶ ಹಾಕಿರೆ ಆನೆಯೂ ನಿಂಗು
ಅಂಕೆಲಿಪ್ಪ ಹೆಣ್ಣು ಹಾಳಾಗ, ಮಜ್ಜಿಗೆಲಿಪ್ಪ ಬೆಣ್ಣೆ ಹಾಳಾಗ
ಅಂಗೈಂದ ಮೊಳ ಹಾಕಲೆಡಿಗೊ
ಅಂಗೈ ತೋರ್ಸಿ ಅವಲಕ್ಷಣ ಹೇಳ್ಸಿಗೊಂಬದು
ಅಂಗೈಲಿ ಆಕಾಶ ತೋರ್ಸುಲೆಡಿಗೊ
ಅಂತೆ ಇಪ್ಪವಂದ ಕೂಲಿ ಮಾಡುವವ° ಅಕ್ಕು
ಅಂತೆ ಬಂದದು ಅಂತೇ ಹೋತು
ಅಂತೂ ಇಂತೂ ನಾಯಿ ಸಂತೆ ತಿರುಗಿಕ್ಕಿ ಬಂತು
ಅಂಬಗಂಬಗ ಹೋದರೆ ಅಕ್ಕು ತಾತ್ಸಾರ
ಅಕ್ಕಿ ಕೊಟ್ಟು ಉಂಬಲೆ ಅಕ್ಕನ ಹಂಗೆಂತ
ಅಟ್ಟಕ್ಕೆ ಹತ್ತದ್ದೆ ಬೆಟ್ಟಕ್ಕೆ ಹತ್ತಲೆಡಿಗೊ?
ಅನ್ಯಾಯಲ್ಲಿ ಗಳಿಸಿದ್ದು ಒಳಿಯ ನ್ಯಾಯಲ್ಲಿ ಗಳಿಸಿದ್ದು ಅಳಿಯ
ಅಬ್ಬೆಯ ಬಡಿವಲಾಗ ಗುಬ್ಬಿ ಗೂಡಳಿಶಲಾಗ
ಉಂಡ ಊಟ ಮರವಲಾಗ ಕಲ್ತ ವಿದ್ಯೆ ಮರವಲಾಗ
ಊರೇ ಕೂಗಿರೆ ಸಮಾಧಾನ ಮಾಡ್ಳೆಡಿಗೊ?
ಕೂಡಿಗೈಯೆಕ್ಕು ಕೊಟ್ಟು ತಿನ್ನೆಕ್ಕು
ಕಾಶಿಗೆ ಹೋದರೆ ಕತ್ತೆ ಕುದುರೆ ಅಕ್ಕೊ?
ಕುಂಭಾ ತಿಂಗಳು ಮಳೆ ಬಂದರೆ ಕುಪ್ಪೆಲಿ ಅಶನ
ಗುಣ ಇಲ್ಲದ್ದ ಹೆಣ್ಣು ರುಚಿ ಇಲ್ಲದ್ದ ಹಣ್ಣು
ಖರ್ಜೂರ ಹಣ್ಣಪ್ಪಗ ಕಾಕೆ ಬಾಯಿಲಿ ಹುಣ್ಣು
ಅವಲಕ್ಕಿಗೆ ಸಜ್ಜಿಗೆ ಎರಕ್ಕ ಮೇಲಾರಕ್ಕೆ ಮಜ್ಜಿಗೆ ಎರಕ್ಕ
ಶಾಂತಕ್ಕನ ಸಾಂತಾಣಿ ತಿಂದರೆ ಮನಶ್ಯಾಂತಿ ಸಿಕ್ಕುಗೊ?
ಶುಕ್ರಂಗೆ ಸೊಳೆ ಆಗ ಶನಿಗೆ ಬೇಳೆ ಆಗ
ಮನೆ ತುಂಬ ಮಕ್ಕೊ ಇದ್ದರೂ ಹಪ್ಪಳ ಕಾವಲೆ ಜೆನ ಇಲ್ಲೆ
ಮಾತಿಲಿ ಸೋಲ್ಲಾಗ ದಾರಿಲಿ ಬೀಳ್ಳಾಗ
ಗಾದೆ ಹೇಳಿರೆ ಪಾದೆ ಹೊಡಿಯಕ್ಕು
ಹುಬ್ಬೆಮಳೆ ಅಬ್ಬೆ ಮಲೆಹಾಲಿನಾಂಗೆ
ಹುಬ್ಬೆ ಮಳಗೆ ಗುಬ್ಬಿ ತಲೆಯೂ ನೆನೆಯ
ಹೂಡದ್ದೆ ಗೆದ್ದೆ ಹಾಳಾತು, ನೋಡದ್ದೆ ಮನೆ ಹಾಳಾತು
……ಹೀಂಗೆ ಮುಂದುವರುದು ಮುಂದುವರುದು ….
ಹೋವುತ್ತೆ ಹೋವುತ್ತೆ ಹೇದು ಏಳು ದಿನ ಕೂಯಿದನಡ
ಹೋಳಿಗೆ ಇದ್ದಲ್ಲಿ ಎರುಗು ತಪ್ಪ, ಬೆಲ್ಲ ಇದ್ದಲ್ಲಿ ನೆಳವು ತಪ್ಪ
ಹೋಳಿಗೆ ತಿಂದವ° ಏಳಿಗೆ ಆಗ°ಹೇದು ಮುಗುಶುವಾಗ ಲೆಕ್ಕ 2888ಕ್ಕೆ ಎತ್ತಿದ್ದು.
 
ಇದರ ಬೆನ್ನಾರಿಕೆ ಡಾ. ಹರಿಕೃಷ್ಣ ಭರಣ್ಯ ಮಾವ° ರಚಿಸಿದ ನವೀನ ಗಾದೆಗೊ –
ಅಂಗಾತ ಮನುಗಿರೆ ಸಂಗಾತ ಬೇಡ
ಅಂಗಾಲ್ಪು ಹಿಡುದರೆ ಸಂಗಾತ ಬೇಡ
ಅಂಡೆದುರುಸಿಂಗೆ ಮಂಡೆ ಬೆಶಿ ಇದ್ದೋ
ಅಕ್ಕಂಗೆ ಭಾವನ ಚಿಂತೆ, ಬೊಕ್ಕಂಗೆ ಚಕ್ಕುಲಿ ಚಿಂತೆ
ಅಕ್ಕಮ್ಮ ಸತ್ತರೆ ಅಮವಾಸೆ ಒಳಿಗೊ
ಉಂಡಾಡಿ ಊಟಕ್ಕೆ ಅಡಾಣಿ ಆಟಕ್ಕೆ
ಉಚ್ಚಾಲಿಂಗೆ ಬಚ್ಚಲಿಲ್ಲೆ
ಒಲೆ ತಪ್ಪಿರೂ ಹೊಲೆ ತಪ್ಪ
ಗಂಟೆ ನಿಂದರೆ ದಿನ ನಿಲ್ಲ
ಗುರಿ ಇಲ್ಲದ್ದವ° ಗೊರಟಿನೊಟ್ಟಿಂಗೆ ಹೋಯೆಕ್ಕಷ್ಟೆ
ಪುಸ್ತಕ ಓದುಲೆ ಮಸ್ತಕ ತಿಳಿವಲೆ
ಪೂಜಗೆ ಕೂಬಗ ದೂಜನ ನೆಂಪು
ಬೊಬ್ಬೆ ಹಾಕಿರೆ ಅಬ್ಬೆಅಪ್ಪಂಗೆ ಪಾಲಿಲ್ಲೆ
ಬೆರಳು ಚೀಪಿರೆ ಹೊಟ್ಟೆತುಂಬ
ಹೆರ್ಕಲೆ ಸಿಕ್ಕದ್ದು ಬರ್ಕತ್ತು ಇಲ್ಲೆ
ಹೊತ್ತಿಂಗೆ ಎತ್ತದ್ದವ° ಸುತ್ತಿರೂ ಒಂದೆ ಸತ್ತರೂ ಒಂದೆ
….ಹೀಂಗೆ 138 ಗಾದೆಗೊ. ಅದರ ಮತ್ತೆ ಅಕಾರಾದಿಲಿ ಶಬ್ದಕೋಶ.
ಹವ್ಯಕ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆಯಾದ ಈ ಪುಸ್ತಕ ಅಮೂಲ್ಯವಾಗಿಯೂ, ಹೇಮಾರಿಕೆಗೆ ಯೋಗ್ಯವಾಗಿಯೂ ಪ್ರತಿಬಿಂಬಿತವಾಯ್ದು ಹೇಳ್ವದು ನವಗೂ ಹೆಮ್ಮಯ ಶುದ್ದಿ.
ಅರ್ತಿಕಜೆ ಮಾವನ ಬೈಲಿಂಗೆ ಗುರ್ತ ಮಾಡಿದ್ದಾತು. ಅರ್ತಿಕಜೆ ಮಾವಂಗೆ ಬೈಲ ಗುರ್ತ ಇದ್ದರೂ ಮತ್ತೊಂದರಿ ವಿವರವಾಗಿ ಗುರ್ತ ಮಾಡಿಸಿಯೂ ಆತು. ಸದ್ಯಲ್ಲೆ ಅವುದೇ ಬೈಲಿಂಗೆ ಬಪ್ಪಲಿದ್ದವು ಹೇಳ್ವದು ಇದೀಗ ಶುದ್ದಿ.
~
ಹೇದಾಂಗೆ ಈ  ‘ಹವ್ಯಕ ಗಾದೆಗಳು’ ಅಡಿಗೆ ಸತ್ಯಣ್ಣನ ಕೈಗೆ ಸಿಕ್ಕಿದ್ದಡ!. ನಿಂಗೊಗೋ°?
 
ಈ ಪುಸ್ತಕದ ಪ್ರತಿ ಬೇಕಾದೋರು ಪ್ರಮುಖ ಪುಸ್ತಕ ಮಾರಾಟಗಾರರ ಸಂಪರ್ಕುಸಲಕ್ಕು. ಅಥವಾ, ಚಿತ್ತಾ ಪಬ್ಲಿಕೇಶನ್, ಮಂಗಳೂರು 9480864365,  ಶ್ರೀಕೃಷ್ಣ ಭಟ್ ಅರ್ತಿಕಜೆ ಚೆನ್ನೈ 9444071563,  ಸಾಧನಾ ಪ್ರಕಾಶನ ಬೆಂಗಳೂರು 8951853706 / 9480088960 ಇವರುಗಳ ಸಂಪರ್ಕುಸಲಕ್ಕು.
 
Ananya Padidani prathibhalokatulu gadegalu1508558_259930077513830_35245992_n
 
 
 
 
 
 
 
 
 

9 thoughts on “ಅರ್ತಿಕಜೆ ಮಾವನ – ಹವಿಗನ್ನಡ ಗಾದೆಗಳು

  1. ಅರ್ತಿಕಜೆ ಮಾವನ ”ಹವ್ಯಕ ಗಾದೆಗಳು” ಪುಸ್ತಕ ಎನ್ನ ಸ೦ಗ್ರಹಲ್ಲಿ ಇದ್ದು ಹೇಳುಲೆ ಹೆಮ್ಮೆ ಆವುತ್ತು.ಈಗ ಹೊಸ ಆವೃತ್ತಿ ಬ೦ದದು ಗೊ೦ತಾಗಿ ಸ೦ತೋಷ ಹೆಚ್ಚಾತು.
    ಮಾವ೦ಗೆ ಆತ್ಮೀಯ ಸ್ವಾಗತ.ಮಾವನ ಹವ್ಯಕ ಸಾಹಿತ್ಯ ಕೃಷಿ ಬೈಲಿನ ನೆ೦ಟ್ರಿ೦ಗೂ ಉಮೇದು ಕೊಡುಗು ಹೇಳ್ತದರಲ್ಲಿ ಸ೦ಶಯ ಇಲ್ಲ್ಲೆ.
    ಪರಿಚಯ ಮಾಡಿದ ಚೆನ್ನೈಭಾವ೦ಗೆ ಧನ್ಯವಾದ.

  2. ರಾಮಕೃಷ್ಣ ಅವಕ್ಕೆ ಎನ್ನ ಕೃತಜ್ಞತೆಗೊ. ಎನ್ನ ಪುಸ್ತಕ ಬೈಲಿಂಗೆ ತಂದದು ತುಂಬಾ ಸಂತೋಷ. ಭಾರೀ ಲಾಯ್ಕಿದ್ದು.
    ಗೋಪಾಲಣ್ಣ ಹೇಳಿದ್ದು ಆಗಿಪ್ಪಲೂ ಸಾಕು. ಕೆಲವು ಪಾಠಾಂತರ ವ್ಯತ್ಯಾಸ ಇಪ್ಪಲೂ ಸಾಕು ಸ್ಥಳೀಯ ಪ್ರಯೋಗಲ್ಲಿ.

  3. ಗೇರೆ ಹಣ್ಣಪ್ಪಾಗ ಕಾಕೆ ಬಾಯಿಲಿ ಹುಣ್ಣು -ಹೇಳಿ ನಮ್ಮ ಊರಿಲಿ ಹೇಳುತ್ತವು. ಖರ್ಜೂರ ಹೇಳುದು ಅಷ್ಟು ಸಮಂಜಸ ಅಲ್ಲದೋ ಹೇಳಿ ತೋರುತ್ತು.

  4. ಲಾಯಕ ಆಯಿದು

    1. ಚೆನ್ನೈ ಭಾವ.
      ಹರೇರಾಮ; ಎಷ್ಟೋ ದಿನದ ಆಸೆ, ಕನಸು ಈಗ ಕೈಗೂಡಿದ್ದಕ್ಕೆ ತು೦ಬಾ ಕೊಶಿಯಾತು ಹಲವು ಸರ್ತಿ ನಮ್ಮ ಅರ್ತಿಕಜೆ ಶ್ರೀಕೃಷ್ಣಣ್ಣನ ಹತ್ತರೆ ನಿ೦ಗೊ ನಮ್ಮ ಬೈಲಿ೦ಗೆ ಬರೆಕು ಹೇದು ಒತ್ತಾಯ ಮಾಡಿತ್ತಿದ್ದೆ.ಅವು ಹಮ್ಮಿಗೊ೦ಡ ಕೆಲವೊ೦ದು ಅನಿವಾರ್ಯ ಯೋಜನಗಳ ಒ೦ದು ಹ೦ತಕ್ಕೆ ತ೦ದಿಕ್ಕಿ ಖ೦ಡಿತಾ ಬೈಲಿ೦ಗೆ ಇಳಿತ್ತೆ ಹೇದು ಎನ್ನ ಹತ್ತರ ಮುಖತಃ ಹಾ೦ಗೂ ಜ೦ಗಮವಾಣಿಲಿ ಭರವಸೆ ಕೊಟ್ಟಿತ್ತವು.ಈಗ ಅವು ಬೈಲಿ೦ಗೆ ಆಗಮಿಸುವ ವಿಚಾರ ಓದಿ ತು೦ಬಾ ಕೊಶಿಯಾತು.ಅವಕ್ಕೆ ಹೃತ್ಪೂರ್ವಕ ಸ್ವಾಗತ ಕೋರುವದರೊಟ್ಟಿ೦ಗೆ ಅಭಿನ೦ದನಗೊ.ಅವರ ಹೀ೦ಗೆ ಪರಿಚಯಿಸಿದ ನಿ೦ಗೊಗುದೆ ಅಭಿನ೦ದನೆಗೊ + ಧನ್ಯವಾದ೦ಗೊ.ಅವರ ಆಗಮನ೦ದ ನಮ್ಮ ಬೈಲಿನ ಸಾಹಿತ್ಯ ಸ೦ಪದ್ಭರಿತವಾಗಲಿ ಹೇದು ಹಾರೈಕೆ.ನಮಸ್ತೇ.

  5. ಗುಣಗ್ರಾಹಿ ಸಜ್ಜನ ವಿದ್ವಾಂಸ ರಲ್ಲೊಬ್ಬರಾದ ಡಾ. ಅರ್ತಿಕಜೆ ಮಾವನ ಪರಿಚಯ ಓದಿ ತುಂಬಾ ಕೊಶಿ ಆತು ,ಅಲ್ಲದ್ದೆ ಅವರ ಲೇಖನಂಗೊ ಬೈಲಿಲಿ ಪ್ರಕಟ ಆವುತ್ತದುದೇ ಬೈಲಿಂಗೇ ಅಭಿಮಾನದ ವಿಶಯ ಅಲ್ಲದೋ! ಚೆನ್ನೈ ಭಾವಂಗುದೆ ಅಭಿನಂದನೆಗೊ .

  6. ವಿವರವಾದ ಪರಿಚಯ ಲೇಖನ ಒಪ್ಪ ಆಯಿದು ಚೆನ್ನೈ ಭಾವ. ಅರ್ತಿಕಜೆ ಮಾವ ಇನ್ನ್ನು ಬೈಲಿಲಿಯೂ ಶುದ್ಧಿ ಹೇಳ್ತದು ಗೊಂತಾಗಿ ಕೊಶಿ ಆತು.

  7. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಲ್ಲಿ ಅವರ ಅಧ್ಯಕ್ಷ ಭಾಷಣ ಕೇಳಿತ್ತಿದ್ದೆ.ಈಗ ಅವರ ವಿವರವಾದ ಪರಿಚಯ ಆತು.ಅರ್ತಿಕಜೆ ಅಣ್ಣನ ಕೀರ್ತಿ ಇನ್ನಷ್ಟು ಎತ್ತರಕ್ಕೆ ಏರಲಿ ಹೇದು ಹಾರೈಕೆ.ಧನ್ಯವಾದಂಗೊ ಚೆನ್ನೈ ಭಾವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×