Oppanna.com

ಪುಸ್ತಕ ಪರಿಚಯ ೧೧ -"ಯಯಾತಿ"

ಬರದೋರು :   ತೆಕ್ಕುಂಜ ಕುಮಾರ ಮಾವ°    on   06/08/2011    7 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

1959 ರಲ್ಲಿ ಮರಾಠಿ  ಸಾಹಿತಿ ಶ್ರೀ ವಿ. ಎಸ್. ಖಾಂಡೇಕರ್ ಬರದ ಸರ್ವಶ್ರೇಷ್ಟ ಕಾದಂಬರಿ “ಯಯಾತಿ” . ಕೇಂದ್ರ ಸಾಹಿತ್ಯ ಅಕಾಡೆಮಿ, ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ ಅಲ್ಲದ್ದೆ 1974 ರ ಜ್ಞಾನಪೀಠ ಪ್ರಶಸ್ತಿಯೂ ಈ ಪುಸ್ತಕಕ್ಕೆ ಸಿಕ್ಕಿದ್ದು. ಇದು ಎಲ್ಲಾ ಭಾರತೀಯ ಭಾಷೆಗಳಲ್ಲಿಯೂ ಅನುವಾದ ಆಯಿದು. ಶ್ರೀ  ವಿ.ಎಮ್. ಇನಾಂದಾರ್ ಇದರ ಕನ್ನಡಲ್ಲಿ ಅನುವಾದ ಮಾಡಿದ್ದವು.
ಮಹಾಭಾರತದ ಮೂಲ ಕಥೆಲಿ ಬಪ್ಪ ಯಯಾತಿಯ ವ್ಯಕ್ತಿತ್ವ ತುಂಬ ರೋಚಕ. ನಮ್ಮ ಸರ್ವಸಾಮಾನ್ಯ  ಮನುಷ್ಯನ ಪುರಾಣಕಾಲದ ಪ್ರತಿನಿಧಿ. ಎಷ್ಟೇ  ಬಗೆಯ ಸುಖ,ಸವಲತ್ತುಗ ಇದ್ದರೂ, ಯೇವತ್ತೂ ಅತೃಪ್ತನಾಗಿಯೊಂಡೇ ಇದ್ದು ಇನ್ನೂ ಹೊಸ ಹೊಸ ಸುಖಂಗಳ ಹಿಂದೆ ಕಣ್ಣಿದ್ದೂ ಕುರುಡಾಗಿಗೊಂಡು ಓಡುವ ಮನುಷ್ಯ ಸ್ವಭಾವದವ°. ಕ್ಷಣಿಕ ಇಂದ್ರಿಯ ಸುಖ ನಿರಂತರ ಹೇಂಗೆ ಸಿಕ್ಕುಗು ಹೇಳ್ತ ಭ್ರಮೆಲಿಪ್ಪ ಸಾಮಾನ್ಯ ಮನುಷ್ಯನ ಪ್ರತಿನಿಧಿಯೇ ಯಯಾತಿ.  ಈ ಕಾದಂಬರಿ, ಪುರಾಣದ ಯಯಾತಿ, ಕಚ, ದೇವಯಾನಿ, ಶರ್ಮಿಷ್ಟೆಯರ ಕಥೆ. ಯಯಾತಿಯ ಕಾಮದ ಕಥೆ, ದೇವಯಾನಿಯ ಸೇಡಿನ ಕಥೆ, ಶರ್ಮಿಷ್ಟೆಯ ನಿರ್ವಾಜ್ಯ ಪ್ರೀತಿಯ ಕಥೆ, ಕಚನ ಭಕ್ತಿಯ ಪ್ರಗಾಥ. ಇದು ಶುದ್ದ ಪೌರಾಣಿಕ ಕಾದಂಬರಿ ಅಲ್ಲ, ಪುರಾಣದ ಒಂದು ಉಪಾಖ್ಯಾನವ ಆಧರಿಸಿ ಬರದ ಸ್ವತಂತ್ರ ಕಾದಂಬರಿ.

ಪುಸ್ತಕದ ಮೋರೆಪುಟ

ಪೂರ್ಣ ಕಥೆ ಯಯಾತಿ, ದೇವಯಾನಿ, ಶರ್ಮಿಷ್ಟೆಯರ ಸ್ವಗತಲ್ಲಿ ಹೇಳಿಗೊಂಡು ಹೋವುತ್ತದು. ಪ್ರಾರಂಭದ ಸಾಲುಗೊ ಹೀಂಗಿದ್ದು – ನಾನು ನನ್ನ ಕಥೆಯನ್ನು ಯಾತಕ್ಕೆಂದು ಹೇಳುತ್ತಿದ್ದೇನೆ ನನಗೆಯೇ ಅದು ಸರಿಯಗಿ ಗೊತ್ತಿಲ್ಲ. ನಾನೊಬ್ಬ ಅರಸು ಎಂದು ಇದನ್ನೆಲ್ಲ ಹೇಳುತ್ತಿದ್ದೇನೆಯೆ ? ನಾನೊಬ್ಬ ಅರಸನೆ? ಅಲ್ಲ, ಇದ್ದೆ…… ಅರಸನೊಬ್ಬನ ಹೊಟ್ಟೆಯಲ್ಲಿ ಹುಟ್ಟಿದೆ ಎಂಬುದರಿಂದ ನಾನೂ ಅರಸನಾದೆ. ಅರಸನಾಗಿ ಬಾಳಿದೆ. ಇದರಲ್ಲಿ ನನ್ನ ಗುಣವೂ ಇಲ್ಲ; ದೋಷವೂ ಇಲ್ಲ. ಹಸ್ತಿನಾಪುರದ ನಹುಷದೊರೆಯ ಹೊಟ್ಟೆಯಲ್ಲಿ ದೇವರು ನನಗೆ ಜನ್ಮವನ್ನು ದಯಪಾಲಿಸಿದ. ತಂದೆಯ ನಂತರದಲ್ಲಿ ನೇರವಾಗಿ ಪಟ್ಟಕ್ಕೆ ಬಂದೆ. ಇದರಲ್ಲಿ ಯಾವ ಹಿರಿತನ ? ಅರಮನೆಯ ಮೇಲಟ್ಟದ ಎತ್ತರದಲ್ಲಿ ಕುಳಿತಿರುವ ಕಾಗೆಯನ್ನೂ ಜನಗಳು ಕುತೂಹಲದಿಂದ ನೋಡುತ್ತಾರೆ !
ಹಸ್ತಿನಾಪುರದ ಚಕ್ರವರ್ತಿ ನಹುಷ° ಮಹಾನ್ ಪರಾಕ್ರಮಿ. ಮೂರು ಲೋಕಂಗಳ ಗೆದ್ದವ°. ಸ್ವರ್ಗವ ಗೆದ್ದು ಇಂದ್ರಾಣಿಗೆ ಆಸೆಪಟ್ಟು ಶಾಪಕ್ಕೆ ಗುರಿಯಾದವ°. – ಈ ನಹುಷ ಹಾಗು ಆತನ ಮಕ್ಕಳು ಎಂದಿಗೂ ಸುಖವಾಗಿರಲಾರದೇ ಹೋಗಲಿ. ನಹುಷನ ಹೆರಿ ಮಗ ಯತಿ, ಸಣ್ಣ ಪ್ರಾಯಲ್ಲಿಯೇ ಸನ್ಯಾಸ ಸ್ವೀಕಾರ ಮಾಡಿ ಆತ್ಮ ಸುಖಕ್ಕಾಗಿ ದೇಹದಂಡನೆಯ ಕಾರ್ಯಲ್ಲಿ ತೊಡಗಿಗೊಂಡು ಮನಃ ಸ್ತಿಮಿತ ಇಲ್ಲದ್ದೆ ಉರೂರು ಅಲೆದಾಡುತ್ತ°. ಎರಡನೆ ಮಗ ಯಯಾತಿ ಅಪ್ಪನ ಹಾಂಗೆಯೇ ಮಹಾ ಶೂರನಾಗಿ ಸಣ್ಣ ಪ್ರಾಯಲ್ಲಿ ಅಶ್ವಮೇಧ ಯಾಗ ಕೈಗೊಂಡು ದಿಗ್ವಿಜಯ ಸಾಧಿಸಿದವ°. ನಹುಷನ ನಂತ್ರ ಹಸ್ತಿನಾವತಿಯ ಪಟ್ಟ ಏರಿದ ಮೇಲೆ, ದೇವಯಾನಿಯ ಕೈಹಿಡುದು ದೇಹ ಸುಖವ ಅರಸಿಗೊಂಡು ಆತ್ಮ ವಂಚನೆಯ ಕಾರ್ಯಲ್ಲಿ ತೊಡಗುತ್ತ°. ಅಗಸ್ತ್ಯ ಶಾಪ ಸುಳ್ಳಾವುತಿಲ್ಲೆ.!
 ಮಹಾಭಾರತಲ್ಲಿ ಬಪ್ಪ ಕಚನ ಚಿತ್ರಣ ಸಂಜೀವಿನಿ ವಿದ್ಯೆಯ ಕಲ್ತು ಸ್ವರ್ಗ ಸೇರುವಲ್ಲಿವರೆಗಾಣದ್ದು ಮಾತ್ರ, ಆದರೆ ಇಲ್ಲ್ಲಿ ಅದರ ನಂತರದ ಚಿತ್ರಣವೂ ಬತ್ತು. ಯಯಾತಿ, ದೇವಯಾನಿ, ಶರ್ಮಿಷ್ಟೆ ಒಟ್ಟಿಂಗೆ ಇದ್ದ ಸಂಪರ್ಕವೂ ಇಲ್ಲಿ ವಿವರವಾಗಿ ಬಯಿಂದು. ಈ ಕಾದಂಬರಿಲಿ ತೋರಿಸಿದ ವಿವಿಧ ಸ್ವರೂಪದ ಪ್ರೀತಿಗಳ ಪೈಕಿ ಅತ್ಯಂತ ಶ್ರೇಷ್ಟವಾಗಿ ಕಾಂಬ ಸೋದರ – ಸೋದರಿ ಪ್ರೀತಿ, ಮಾತೃ ಪ್ರೀತಿ, ಸಖ ಪ್ರೀತಿ ಇವೆಲ್ಲದರ ಪ್ರತಿನಿಧಿಯಾಗಿ ಬತ್ತ°.
ದೇವಯಾನಿ ಯಯಾತಿಯ ಕೈಹಿಡಿವಲೆ ಕಾರಣ – ಹಸ್ತಿನಾಪುರದ ಮಹಾರಾಣಿ ಅಪ್ಪ ಅಭಿಲಾಷೆಂದ, ಈ ಮೂಲಕ ಕಚ, ಶರ್ಮಿಷ್ಟೆಯರಿಂಗೆ ಸೇಡು ತೀರ್ಸುಲೆ ದೊಡ್ಡ ಅವಕಾಶ ಸಿಕ್ಕಿಗು ಹೇಳ್ತ ಭ್ರಮೆ. ದೇವಯಾನಿ ತನ್ನ ದುಃಖಕ್ಕೆ ಬಹಮಟ್ಟಿಂಗೆ ತಾನೇ  ಹೊಣೆ ಆಗಿರ್ತು. ಕಚನ ಮೇಲಾಣ ಮದಲ ವಿಫಲ ಪ್ರೀತಿಯ ಅರಗಿಸುಲೆ ಅದಕ್ಕೆ ಮನಃ ಸಾಮರ್ಥ್ಯ ಇತ್ತಿಲೆ. ಅದರ ಅಪ್ಪ ಶುಕ್ರಾಚಾರ್ಯರ ಮುದ್ದಿನ ಮಗಳಾಗಿ ಬೆಳದ ಕೂಸು ಅದು. ಶುಕ್ರಾಚಾರ್ಯರ ಕೋಪಿಷ್ಟ ಸ್ವಭಾವ ಗುಣ ಇದರಲ್ಲೂ ಇತ್ತು. ಕೈಹಿಡಿದವ ಅಪೇಕ್ಷೆ ಮಾಡುವ ಆರ್ತವಾದ, ಆರ್ದ್ರವಾದ, ಉತ್ಕಟವಾದ, ಉದಾತ್ತವಾದ ಪ್ರೀತಿ ಯಯಾತಿಗೆ ದೇವಯಾನಿಂದ ಸಿಕ್ಕಿದ್ದೇ ಇಲ್ಲೆ. ಇಂಥಾ ಸಂದರ್ಭಲ್ಲಿ ತ್ಯಾಗಸ್ವಭಾವದ ಶರ್ಮಿಷ್ಟೆ ಪ್ರೇಯಸಿಯಾಗಿ ಬತ್ತು ಮಾಂತ್ರ ಅಲ್ಲ, ನಿರಪೇಕ್ಷ ಪ್ರೀತಿ ಯಯಾತಿಗೆ ಸಿಕ್ಕುತ್ತು. ಋಷಿಕನ್ಯೆ ದೇವಯಾನಿ ಮಹಾರಾಣಿ ಅವುತ್ತು, ರಾಜಕನ್ಯೆ ಶರ್ಮಿಷ್ಟೆ ದಾಸಿ ಆವುತ್ತು. ಕಾದಂಬರಿಲಿ ಬಂದ ಶರ್ಮಿಷ್ಟೆಯ ಪಾತ್ರ ಚಿತ್ರಣಕ್ಕೆ ಕಾರಣ ಆದ ಅಂಶವ ತಿಳುಶಿಗೊಂಡು ಲೇಖಕ, ಕಾಳಿದಾಸನ ಕ್ರತಿಲಿ ಬಂದ ವಾಕ್ಯದ ಉದ್ಧಾರ ಮಾಡಿದ್ದ°. ಕಣ್ವ ಮಹರ್ಷಿ ಶಕುಂತಲೆಯ ಮದುವೆ ಮಾಡಿ ಕಳುಸುವಗ ಹೇಳಿದ ಬುದ್ಧಿಮಾತು –“ಯಯಾತಿರೇವ ಶರ್ಮಿಷ್ಟಾ ಭರ್ತುರ್ಬಹಮತಾಭವ”( ಯಯಾತಿಗೆ ಶರ್ಮಿಷ್ಟೆ ಅಕ್ಕರೆಯವಳಾಗಿದ್ದ ಹಾಗೆ ನೀನಾದರೂ ನಿನ್ನ ಪತಿಗೆ ಅಕ್ಕರೆಯವಳಾಗು).
ದೇವಯಾನಿ, ಶರ್ಮಿಷ್ಟೆಯರಿಂಗೆ ಸರಿಸುಮಾರು ಒಂದೇ ಸಮಯಲ್ಲಿ ಮಕ್ಕೊ ಹುಟ್ಟುತ್ತವು. ಜ್ಯೋತಿಷಿ ಒಬ್ಬ ದೇವಯಾನಿಯ ಮಗ ಯದುವಿನ ನೋಡಿ ಈ ಮಗು ದುರ್ದೈವಿಯಾಗಿ ಕಾಣುತ್ತು ಹೇಳಿ, ಶರ್ಮಿಷ್ಟೆಯ ಮಗ ಪುರುವಿಂಗೆ ಚಕ್ರವರ್ತಿ ಅಪ್ಪ ಯೋಗ ಇದ್ದು ಹೇಳಿದ್ದು ದೇವಯಾನಿಯ ಕೆರಳುಸುತ್ತು. ಶರ್ಮಿಷ್ಠೆಯ ಕೊಲ್ಸುವ ಪ್ರಯತ್ನ ಫಲಕಾರಿ ಆವುತ್ತಿಲ್ಲೆ. ತಪ್ಪಿಸಿಗೊಂಡು ಹೋಪಲೆ ಯಯಾತಿ ಸಹಕರಿಸಿದ್ದು ಹೇಳ್ತದು ಗೊಂತಾಗಿ ಜೀವಮಾನ ಪರ್ಯಂತ ಮುಟ್ಟುಲಾಗ ಹೇಳಿ ಪ್ರಮಾಣ ತೆಕ್ಕೊಳ್ತು. ಯಯಾತಿ ಮುಂದೆ ಹದಿನೆಂಟು ವರ್ಷ ಅಶೋಕವನಲ್ಲಿ ಇದ್ದುಗೊಂಡು ರಾಜಕಾರ್ಯವ ಬಿಟ್ಟು ಮದಿರೆ, ಮದಿರಾಕ್ಷಿಯ ಒಟ್ಟಿಂಗೆ ಕಾಮುಕ ಜೀವನ ನಡಸುತ್ತು. ಇಬ್ರಿಂಗೂ ತಾವು ಒಬ್ಬಕ್ಕೊಬ್ಬನ ಮೇಲೆ ಸೇಡು ತೀರ್ಸುತ್ತ ವಿಕ್ಶಿಪ್ತ ಸಮಾಧಾನ ! ಶತ್ರು ಸಂಹಾರಕ್ಕೆ ಹೆರಟ ಯದು ಸೆರೆ ಸಿಕ್ಕಿಪ್ಪದು ಗೊಂತಾಗಿ ಪುರು ರಕ್ಷಿಸಿಗೊಂಡು ಬತ್ತ. ಇದೇ ಸಮಯಲ್ಲಿ,ಶುಕ್ರಾಚಾರ್ಯ ಸಂಜೀವಿನಿ ಮಂತ್ರವ ಕಳಕ್ಕೊಂಡ ಮೇಲೆ ಮತ್ತೆ ಸುದೀರ್ಘ ತಪಸ್ಸು ಮಾಡಿ ಹೊಸ ವಿದ್ಯೆಯ ಸಿದ್ಧಿಸಿಗೊಂಡು ದೇವಯಾನಿಯ ಕಾಂಬಲೆ ಬತ್ತ°.  ಯಯಾತಿಯ ಕಾಮುಕ ಜೀವನ ನೋಡಿ ಹೇಸಿಗೊಂಡು ಶಾಪ ಕೊಡ್ತ°. “ನಿನ್ನ ಯೌವನ ಈ ಕ್ಷಣಕ್ಕೆ ನಷ್ಟವಾಗಲಿ, ಪರಮ ಪಾಪಿಯಾದ ಯಯಾತಿ ಈ ಕ್ಷಣಕ್ಕೆ ಕುಷ್ಟಕುಷ್ಟ ಮುದುಕನಾಗಲಿ “.
ಆದರೆ, ಯಯಾತಿಯ ಪಶ್ಚಾತ್ತಾಪವ ಕಂಡು, ಮಗಳ ದುಃಖವ ನೋಡ್ಲೆ ಯೆಡಿಯದ್ದೆ ವಿಃಶಾಪವನ್ನೂ ಹೇಳ್ತ°.- ನಿನ್ನ ಕುಲದಲ್ಲಿಯ, ನಿನ್ನ ರಕ್ತದ ಯಾವನಾದರೂ ಒಬ್ಬ ಯುವಕ ನಿನ್ನ ವಾರ್ಧಕ್ಯವನ್ನು ಸ್ವೀಕರಿಸುವುದಕ್ಕೆ ಸಂತೋಷವಾಗಿ ಮುಂದೆ ಬಂದರೆ, ನೀನು ಬಯಸಿದ ಕ್ಷಣ ನಿನ್ನ ಮುಪ್ಪು ಅವನದಾಗುತ್ತದೆ, ಆತನ ತಾರುಣ್ಯ ನಿನ್ನದಾಗುತ್ತದೆ. ಎರವಲು ಪಡೆದ ಆ ತಾರುಣ್ಯ ಆತನಿಗೆ ಹಿಂತಿರುಗುವುದು ನಿನ್ನ ಮರಣದ ನಂತರವೇ. ನನ್ನನ್ನು ನೆನೆದು ಮೂರು ಸಲ ” ನನ್ನ ಈ ತಾರುಣ್ಯವನ್ನು ಹಿಂದಿರುಗಿಸುತ್ತಿದ್ದೇನೆ ” ಎಂದೆಯಾದರೆ ನೀನು ಮೃತನಾಗಿ ಬೀಳುವೆ. ಪುರು ತನ್ನ ತಾರುಣ್ಯವ ಕೊಡ್ಲೆ ಮುಂದೆ ನಿಲ್ಲುತ್ತ°. ಮುಂದೆ ಕಚನ ಪ್ರವೇಶಂದಾಗಿ ಎಲ್ಲ ಸುಖಾಂತ್ಯ ಆವುತ್ತು. ಆತ್ಮ ಸಾಕ್ಷಾತ್ಕರವ ಹುಡುಕಿಗೊಂಡು ದೇಹದಂಡನೆ ಮಾಡಿ ಮಾನಸಿಕ ಸ್ತಿಮಿತ ಕಳಕ್ಕೊಂಡ ಯತಿಯ ಸರಿದಾರಿಗೆ ತಂದು, ದೇಹಸುಖಕ್ಕಾಗಿ ಆತ್ಮ ವಂಚನೆಲಿ ಇತ್ತಿದ್ದ ಯಯಾತಿಯ ಕಣ್ಣು ತೆರೆಸಿ, ಸೇಡಿನ ಮನೋಭಾವಲ್ಲಿ ಶರ್ಮಿಷ್ಟೆಯ ತನ್ನ ದಾಸಿ ಮಾಡಿದ ದೇವಯಾನಿಗೆ ಸರಿದಾರಿ ತೋರುಸಿ, ಶರ್ಮಿಷ್ಟೆಗೆ ತಂಗೆಯ ಸ್ಥಾನ ಕೊಟ್ಟು ಉದ್ಧರಿಸಿ ಕಚ° ಈ ಕಾದಂಬರಿಲಿ ಉನ್ನತ ಸ್ಥಾನಲ್ಲಿ ನಿಲ್ಲುತ್ತ°. ಮನೋ ವೈಕಲ್ಯಕ್ಕೆ ಒಳಗಾಗಿದ್ದ ಯತಿ, ಅಕೇರಿಗೆ ಯಯಾತಿಗೆ ದೇಹ- ಆತ್ಮಂಗಳ ಸಂಬಂಧದ ಬಗ್ಗೆ ಉಪದೇಶ ಮಾಡುವಷ್ಟು ಶಕ್ತಿ ಪಡದ್ದದು ಕಚನ ಹಿರಿಮೆ. !
ಕಾದಂಬರಿಗಾರ ಯತಿಯ ಬಾಯಿಂದ ಸುಖೀಸಂಸಾರ ಸಾರದ ತತ್ವವ ಹೀಂಗೆ ವ್ಯಕ್ತ ಪಡಿಸಿದ್ದ. – ದೇಹ ಆತ್ಮಗಳ ಸಂಬಂಧ ಶತ್ರುಸಂಬಂಧವಲ್ಲ. ಇವೆರಡೂ ಒಂದೇ ರಥದ ಗಾಲಿಗಳು. ಈ ಎರಡು ಗಾಲಿಗಳಲ್ಲಿಯ ಯಾವ ಒಂದು ಕಳಚಿಹೋದರೂ ಇನ್ನೊಂದರ ಮೇಲೆ ಎಲ್ಲ ಭಾರ ಬೀಳುತ್ತದೆ; ರಥದ ತೂಕ ತಪ್ಪುತ್ತದೆ. ಆತ್ಮದ ಉನ್ನತಿಗಾಗಿ ದೇಹವನ್ನು ದಂಡಿಸುವುದು ಅಥವಾ ದೇಹದ ಸುಖಕ್ಕಾಗಿ ಆತ್ಮವನ್ನು ಮರೆತೇಬಿಡುವುದು, ಎರಡೂ ತಪ್ಪು ದಾರಿಗಳೇ. ಈಶ್ವರ ನಿರ್ಮಿಸಿದ ಈ ಸ್ರಷ್ಟಿಯಲ್ಲಿಯ ವಿವಿಧ ಸೌಂದರ್ಯವನ್ನು ಅಪವಿತ್ರ ಅಥವಾ ಅಸ್ಪ್ರಶ್ಯ ಎಂದು ಹೇಗೆ ಹೇಳುವುದು ? ಸ್ತ್ರೀಪುರುಷರ ಸಂಬಂಧವಾದರೂ ದೇಹ ಮತ್ತು ಆತ್ಮಗಳ ಸಂಬಂಧದಂತೆಯೇ ಇದೆ. ಪರಸ್ಪರರನ್ನು ದ್ವೇಷಿಸಿಯಲ್ಲ, ಪರಸ್ಪರರನ್ನು ಉತ್ಕಟವಾಗಿ ಪ್ರೀತಿಸಿ, ತನ್ನನ್ನು ತಾನೇ ಪೂರ್ತಿಯಾಗಿ ಮರೆತುಬಿಡಬಲ್ಲಂತೆ ಪ್ರೀತಿಸಿದಾಗ, ಸ್ತ್ರೀಪುರುಷರು ಸಂಸಾರದಲ್ಲಿಯೇ ಸ್ವರ್ಗಸುಖವನ್ನುಪಡೆಯುತ್ತಾರೆ. ಹಾಗೆಂದೇ ಸಂಸಾರ ಯಜ್ಞದಷ್ಟೇ ಪವಿತ್ರ ಎನ್ನುವುದು. ಸರ್ವಸಾಮಾನ್ಯ ಮನುಷ್ಯನಿಗೆ ಅದೇ ಧರ್ಮ.
ಕಾದಂಬರಿಗಾರನ ಪರಿಚಯ ಃ

ಶ್ರೀ ವಿಷ್ಣು ಸಖಾರಾಮ್ ಖಾಂಡೇಕರ್ ( January 19,1898 – September 2, 1976) ಮಹಾರಾಷ್ತ್ರದ ಹೆಸರಾಂತ ಸಾಹಿತಿ. ಸಾಂಗ್ಲಿ ಹೇಳುವಲ್ಲಿ ಹುಟ್ಟಿ, ಶಿರೋಡೆಲಿ ಶಾಲಾ ಮಾಸ್ತರನಾಗಿ ಕೆಲಸಲ್ಲಿ ಇತ್ತಿದ್ದ, ಖಾಂಡೇಕರ್, ಮರಾಠಿ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಮಹತ್ತರವಾದ್ದು. ಸುಮಾರು 16 ಕಾದಂಬರಿ, 6 ನಾಟಕ, 250 ಸಣ್ಣಕಥೆ, 100 ಪ್ರಬಂಧ, 200 ಕ್ಕೂ ಮಿಕ್ಕಿ ವಿಮರ್ಶಾತ್ಮಕ ಲೇಖನಂಗಳ ಬರದ್ದ. “ಯಯಾತಿ” ಈ ಸಾಹಿತಿಯ ಮೇರು ಕೃತಿ. ಮರಾಠಿ ಸಾಹಿತ್ಯಕ್ಕೆ ಸಂದ ಶುರುವಾಣ ಜ್ಞಾನಪೀಠ ಪ್ರಶಸ್ತಿ 1974 ರಲ್ಲಿ ಈ ಕೃತಿಗೆ ಸಿಕ್ಕಿದ್ದು. ಇದಲ್ಲದ್ದೆ “ಕಾಂಚನಮೃಗ”, ದೋನ್  ಧ್ರುವ್”, ಕ್ರೌಂಚವಧ್” ಇತ್ಯಾದಿ ಕಾದಂಬರಿಗಳೂ ಪ್ರಖ್ಯಾತ ಆಯಿದು.

7 thoughts on “ಪುಸ್ತಕ ಪರಿಚಯ ೧೧ -"ಯಯಾತಿ"

  1. ಧನ್ಯವಾದ, ಮಾವ.
    ಓದುವ ಹವ್ಯಾಸ ನಿಲ್ಸಿದ್ದಿಲೆ, ಆದರೆ ಅನ್ಯ ಕಾರಣಂದಲಾಗಿ ಬೈಲಿಲಿ “ಪುಸ್ತಕ ಪರಿಚಯ” ಕಾರ್ಯ ರಜ್ಜ ಸಮಯಕ್ಕೆ ನಿಂದಿದು. ಸದ್ಯಲ್ಲಿಯೇ ಮತ್ತೆ ಶುರು ಮಾಡ್ತೆ.

  2. ತೆಕ್ಕು೦ಜೆ ಮಾವ, ನಮಸ್ತೇ.ಶ್ರೀ ವಿ ಎಸ್. ಖಾ೦ಡೇಕರ್ ಬರದ ” ಯಯಾತಿ ” ಕಾದ೦ಬರಿಯ ಕನ್ನಡಕ್ಕೆ ಪ್ರಾ। ಶ್ರೀ ಇನಾ೦ದಾರ್ ಅನುವಾದಿಸದ್ದರ ಸ೦ಕ್ಷಿಪ್ತ ರೊಪಲ್ಲಿ ” ತರ೦ಗ ” ವಾರ ಪತ್ರಿಕೆಲಿ ಓದಿತ್ತಿದ್ದೆ. ಈಗ ಮತ್ತೆ ನಿ೦ಗಳ ಈ ವಿಮರ್ಶಾತ್ಮಕ ಪರಿಚಯ ಓದಿ ತು೦ಬಾ ಕೊಶಿಯಾತು.ನಿ೦ಗಳ ಶೈಲಿ ಹಾ೦ಗೂ ನಿರೂಪಣೆ ಆಕರ್ಷಕವಾಗಿದ್ದು. ವಿಮರ್ಶೆ ಮೂಲ ಕೃತಿಯ ಓದುವ ಹಾ೦ಗೆ ಮಾಡೆಕು. ಆ ಕೆಲಸ ನಿ೦ಗಳ ಈ ಲೇಖನ ಮಾಡಿದ್ದು. ನಮ್ಮ ಭಾಷೆಲಿ ಇ೦ಥ ಕಾರ್ಯ ನಿರ೦ತರ ನೆಡೆಯಲಿ.ಒಳ್ಳೆಯ ಹವ್ಯಾಸ ಬೆಳಶಿದ್ದಿ; ಬಿಡೆಡಿ. ಧನ್ಯವಾದ.

  3. ತುಮ್ಬಾ ಲಾಯ್ಕದ ಕಾದಮ್ಬರಿ, beutiful presentation. keep it up..

  4. ಚೆಂದಕೆ ಬರದ್ದಿ . ಧನ್ಯವಾದಂಗೊ ಕುಮಾರಣ್ಣಂಗೆ.

  5. ಭಾಷಾಂತರ ಕಾದಂಬರಿ “ಯಯಾತಿ” ಪುಸ್ತಕದ ಪರಿಚಯ ಚೆಂದಕೆ ಬಯಿಂದು. ಕಡೇಂಗೆ ಕೊಟ್ಟ ಮನುಷ್ಯ ಧರ್ಮ ಎಲ್ಲೋರು ತಿಳುಕ್ಕೊಳೆಕಾದ ವಿಷಯ. ಕುಮಾರಂಗೆ ಧನ್ಯವಾದಂಗೊ.

  6. ಯಯಾತಿ ಹೇಳಿ ತಲೆಬರಹ ಕಂಡಪ್ಪಗ ಇದು ನಮ್ಮ ಪುರಾಣ ಕತೆಲಿ ಬಪ್ಪ ಯಯಾತಿ ಕತೆಯೋ ಗ್ರೇಶಿದೆ. ಮತ್ತೆ ಒಳ ಶುದ್ದಿ ಬಿಡಿಸಿ ನೋಡಿಯಪ್ಪಗ ಸಂಗತಿ ಅದುವೇ.! ಸಂಗತಿ ಈಗ ಎಂತ ಹೇಳಿರೆ, ಬಹು ವರ್ಷ ಮದಲೆ (ಹಾಂಗೇಳಿ ಸುಮಾರು ವರ್ಷವೋ ಹೇಳಿ ಲೆಕ್ಕ ಹಾಕಿಕ್ಕೆಡಿ., ಕೆಲವು ವರ್ಷ ಮದಲೆ ಹೇಳಿ ಇರಲಿ) ಆನು ಒಂದರಿ ಓದಿದ್ದೆ!.
    ಪುಸ್ತಕ ಪರಿಚಯ, ನಿರೂಪಣಾ ಕ್ರಮ, ಸಾರಾಂಶ ಹೈಲೈಟು, ತೆ.ಕು. ಶೈಲಿ – ಎಂತ ಹೇಳುವದು? – “ಲಾಯಕ್ಕ ಆಯ್ದು, ವಾರಂದ ವಾರಕ್ಕೆ ಲಾಯಕ್ಕವಾಗಿ ಬತ್ತಾ ಇದ್ದು”.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×