Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 15 – ಶ್ಲೋಕಂಗೊ 11 – 20

ಬರದೋರು :   ಚೆನ್ನೈ ಬಾವ°    on   28/03/2013    3 ಒಪ್ಪಂಗೊ

ಚೆನ್ನೈ ಬಾವ°

ಪ್ರಪಂಚಲ್ಲಿ ಭಗವಂತನ ನೆಲೆ ಎಂತರ ಹೇಳ್ವದರ ವಿವರಿಸಿಗೊಂಡಿದ್ದ° ಭಗವಂತ° ಅರ್ಜುನಂಗೆ. ಜೀವಿಯೊಟ್ಟಿಂಗೇ ಇಪ್ಪ ಭಗವಂತನ ಪ್ರಕೃತಿ ತ್ರಿಗುಣಂಗಳ ಪ್ರಭಾವಲ್ಲಿಪ್ಪ ಮನುಷ್ಯನ ಕಣ್ಣಿಂದ ಕಾಂಬಲೆ/ತಿಳಿವಲೆ ಸಾಧ್ಯ ಇಲ್ಲೆ. “ಪಶ್ಯಂತಿ ಜ್ಞಾನಚಕ್ಷುಷಃ” – ಜ್ಞಾನಚಕ್ಷುವಿಂದ / ಸ್ವರೂಪಭೂತವಾದ ಕಣ್ಣಿಂದ ಮಾಂತ್ರ ಅವನ ಕಾಂಬಲೆ ಸಾಧ್ಯ ಹೇಳ್ವದರ ನಾವು ಕಳುದ ವಾರದ ಭಾಗಲ್ಲಿ ಓದಿದ್ದದು. ಮುಂದೆ –

ಶ್ರೀಮದ್ಭಗವದ್ಗೀತಾ – ಪಂಚದಶೋsಧ್ಯಾಯಃ – ಪುರುಷೋತ್ತಮಯೋಗಃ ಶ್ಲೋಕಾಃ 11 – 20

ಶ್ಲೋಕ

ಯತಂತೋ ಯೋಗಿನಶ್ಚೈನಂ ಪಶ್ಯಂತ್ಯಾತ್ಮನ್ಯವಸ್ಥಿತಮ್ ।
ಯತಂತೋsಪ್ಯಕೃತಾತ್ಮನೋ ನೈನಂ ಪಶ್ಯಂತ್ಯಚೇತಸಃ ॥೧೧॥  BHAGAVADGEETHA

ಪದವಿಭಾಗ

ಯತಂತಃ ಯೋಗಿನಃ ಚ ಏನಮ್ ಪಶ್ಯಂತಿ ಆತ್ಮನಿ ಅವಸ್ಥಿತಮ್ । ಯತಂತಃ ಅಪಿ ಅಕೃತ-ಆತ್ಮಾನಃ ನ ಏನಮ್ ಪಶ್ಯಂತಿ ಅಚೇತಸಃ ॥

ಅನ್ವಯ

ಯತಂತಃ ಯೋಗಿನಃ ಆತ್ಮನಿ ಅವಸ್ಥಿತಮ್ ಏನಂ ಪಶ್ಯಂತಿ, ಅಚೇತಸಃ ಅಕೃತ-ಆತ್ಮಾನಃ ಚ ಯತಂತಃ ಅಪಿ ಏನಂ ನ ಪಶ್ಯಂತಿ ।

ಪ್ರತಿಪದಾರ್ಥ

ಯತಂತಃ – ಆತ್ಮಸಾಕ್ಷಾತ್ಕಾರಲ್ಲಿ ನೆಲೆಯಾಗಿ ಪ್ರಯತ್ನಿಸುತ್ತಿಪ್ಪ, ಯೋಗಿನಃ – ಯೋಗಿಗೊ (ಅಧ್ಯಾತ್ಮವಾದಿಗೊ), ಚ – ಕೂಡ, ಆತ್ಮನಿ ಅವಸ್ಥಿತಮ್ – ಆತ್ನನಲ್ಲಿ ನೆಲೆಸಿಪ್ಪವನ, ಏನಮ್ – ಇದರ, ಪಶ್ಯಂತಿ – ನೋಡುತ್ತವು, ಅಚೇತಸಃ – ಅಪ್ರಬುದ್ಧ ಮನಸ್ಸುಳ್ಳೋರು, ಅಕೃತ-ಆತ್ಮನಃ – ಆತ್ಮಸಾಕ್ಷಾತ್ಕಾರ ಹೊಂದದ್ದವು, ನ ಏನಮ್ ಪಶ್ಯಂತಿ – ಇದರ ಕಾಣುತ್ತವಿಲ್ಲೆ.

ಅನ್ವಯಾರ್ಥ

ಆತ್ಮಸಾಕ್ಷಾತ್ಕಾರಲ್ಲಿ ನೆಲೆಯಾಗಿದ್ದು ಪ್ರಯತ್ನಪಡುತ್ತಿಪ್ಪ ಅಧ್ಯಾತ್ಮವಾದಿಗೊ (ಯೋಗಿಗೊ) ಇದೆಲ್ಲವ ಸ್ಪಷ್ಟವಾಗಿ ಕಾಣುತ್ತವು., ಅಪ್ರಬುದ್ಧ ಮನಸ್ಸಿನೋರು (ಅಧ್ಯಾತ್ಮಲ್ಲಿ ಅಪಕ್ವ ಮನಸ್ಸುಳ್ಳವು / ನಿರಾಸಕ್ತರು), ಆತ್ಮಸಾಕ್ಷಾತ್ಕಾರಲ್ಲಿ ನೆಲೆಗೊಳ್ಳದ್ದೋರು ಇದರ ಕಾಣುತ್ತವಿಲ್ಲೆ.

ತಾತ್ಪರ್ಯ / ವಿವರಣೆ

ಅಧ್ಯಾತ್ಮಿಕ ಆತ್ಮಸಾಕ್ಷಾತ್ಕಾರದ ಮಾರ್ಗಲ್ಲಿ ಹಲವಾರು ಮಂದಿಗೊ ಆಧ್ಯತ್ಮಿಕವಾದಿಗೊ ಇರ್ತವು. ಆದರೆ ಆತ್ಮಸಾಕ್ಷಾತ್ಕಾರಲ್ಲಿ ನೆಲೆಗೊಳ್ಳದ್ದೋರು ಜೀವಿಯ ದೇಹಲ್ಲಿ ಹೇಂಗೆ ಬದಲಾವಣೆ ಆವ್ತು ಹೇಳ್ವದರ ಕಾಣುತ್ತವಿಲ್ಲೆ. ಇಲ್ಲಿ ಯೋಗಿನಃ ಹೇಳ್ವ ಪದ ಬಹು ಪ್ರಧಾನ / ಮಹತ್ವವಾದ್ದು. ಯೋಗಿಗೊ ಹೇಳಿ ಹೇಳಿಗೊಂಬವು ತುಂಬಾ ಜೆನ ಇರ್ತವು. ಅದು ಬರೆ ಪಾರಿಭಾಷಿಕ ಶಬ್ದಲ್ಲಿ ಯೋಗಿಗೊ ಅನಿಸಲ್ಪಡುತ್ತು. ನಿಜವಾದ ಯೋಗಿಗೊ ಹೇಳಿರೆ ಸಂಪೂರ್ಣ ಕೃಷ್ಣಪ್ರಜ್ಞೆಯ ಅಳವಡಿಸಿ ಅನುಸರುಸಿ ನೆಲೆಸಿ ಆತ್ಮಸಾಕ್ಷಾತ್ಕಾರಲ್ಲಿ ನೆಲೆಗೊಂಡವು. ಯೋಗ ಸಾಧನೆಯ ಮಾಡಿಗೊಂಡಿಪ್ಪವೆಲ್ಲ ನಿಜಯೋಗಿಗೊ ಆವ್ತವಿಲ್ಲೆ. ಅವಕ್ಕೆ ಅದು ಒಂದು ಶಾರೀರಿಕ ವ್ಯಾಯಮ ಮಾಂತ್ರ. ದೇಹವು ದೃಢವಾಗಿಪ್ಪದೊಂದೇ ಅವರ ಲಕ್ಷ್ಯ. ಅಷ್ಟರಲ್ಲೇ ಅವರ ತೃಪ್ತಿ. ಅಂತವು “ಯತಂತಃ ಅಪಿ ಅಕೃತ-ಆತ್ಮನಃ” – ಯೋಗಪದ್ಧತಿಯ ಪ್ರಯತ್ನಿಸಿರೂ ಆತ್ಮಸಾಕ್ಷಾತ್ಕಾರ ಹೊಂದಲೆಡಿಗಾಗದ್ದವು ಹೇಳಿ ಇಲ್ಲಿ ಭಗವಂತ° ಹೇಳಿದ್ದ°. ಇಂತೋರು ದೇಹಂದ ದೇಹಕ್ಕೆ ಆತ್ಮವು ಹೋಪ ಪ್ರಕ್ರಿಯೆಯ ಅರ್ಥಮಾಡಿಗೊಂಬಲೆ ಸಾಧ್ಯ ಇಲ್ಲದ್ದೋರು ಆಗಿರ್ತವು. ಭಗವಂತನ ಸಾಕ್ಷಾತ್ಕಾರ ಮಾಡಿಗೊಂಡವು ಮಾಂತ್ರ ಭಕ್ತಿಯೋಗಿಗೊ. ಕೃಷ್ಣಪ್ರಜ್ಞೆಲಿ ಪರಿಶುದ್ಧ ಭಕ್ತಿಸೇವೆಲಿ ನಿರತರಾದೋರು ಮಾಂತ್ರ ಸಂಗತಿಗೊ ಹೇಂಗೆ ನಡೆತ್ತು ಹೇಳ್ವದರ ಅರ್ಥಮಾಡಿಗೊಳ್ಳುತ್ತವು.

ಬನ್ನಂಜೆ ಹೇಳ್ತವು – ಭಗವಂತನ ಕಾಣೇಕ್ಕಾರೆ ಬರೇ ಶಾಸ್ತ್ರಾಭ್ಯಾಸ ಮಾಡಿರೆ ಸಾಲ. ಜ್ಞಾನ ಪಡದು ಜ್ಞಾನಂದ ನಿರಂತರ ಸಾಧನೆ ಅಗತ್ಯ. ಧ್ಯಾನ ಯೋಗಂದ ನಿರಂತರ ಭಗವಂತನ ಕಾಂಬ ಪ್ರಯತ್ನ ಮಾಡಿರೆ ಆತ್ಮಸಾಕ್ಷಾತ್ಕಾರವಾವ್ತು. ಭಗವಂತನ ಕಾಂಬಲೆ ನಮ್ಮ ನಿರಂತರ ಪ್ರಯತ್ನದ ಒಟ್ಟಿಂಗೆ ಅವನ ಅನುಗ್ರಹವೂ ಬೇಕು. ಇಲ್ಲದ್ರೆ ಏವ ಮಹಾಪ್ರಯತ್ನ ಮಾಡಿರೂ ಅವನ ಹತ್ರೆ ಎತ್ಲೆ ಎಡಿಯ. ಹೇಳಿರೆ ಅವಂಗೆ ಪ್ರಿಯವಾದ ನಿಜಭಕ್ತಿ ಸೇವೆಂದ ಮಾಂತ್ರ ಅವನ ಕಾಂಬಲೆ ಪ್ರಯತ್ನಿಸಿರೆ ಮಾಂತ್ರ ಅದು ಅರ್ಥಪೂರ್ಣ ಕಾರ್ಯ ಆವ್ತು. ಉದಾಹರಣೆಗೆ – ನಾವು ಗೆದ್ದೆ ಹೂಡಿ ಹೊಡಿಮಾಡಿ ಹದಮಾಡಿ, ನೀರಾಕಿ, ಗೊಬ್ಬರ ಹಾಕಿ, ಒಳ್ಳೆ ಗುಣದ ಬೀಜವ ಬಿತ್ತಿರೆ ಮಾಂತ್ರ ಸಾಲ. ಕಾಲಕಾಲಕ್ಕೆ ಸರಿಯಾಗಿ ಮಳೆ ಬರೆಕು ವಿಪರೀತ ಮಳೆಯೂ ಬಪ್ಪಲಾಗ. ಇದೆಲ್ಲ ದೈವಾನುಗ್ರಹ. ಅದಕ್ಕಾಗಿ ನಿರಂತರ ಪ್ರಯತ್ನದೊಟ್ಟಿಂಗೆ ಭಗವಂತನಲ್ಲಿ ಸಂಪೂರ್ಣ ಶರಣಾಗತಿ ಬಹುಮುಖ್ಯ. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದು “ನಿರಂತರ ಜ್ಞಾನಪೂರ್ವಕ ಪ್ರಯತ್ನಂದ ನಿನ್ನ ಅತ್ಯಂತ ಸಮೀಪ ಇಪ್ಪ, ನಿನ್ನ ಅಂತರಂಗದೊಳ ಇಪ್ಪ ಜೀವಸ್ವರೂಪದೊಳ ಇಪ್ಪ ಭಗವಂತನ ಕಾಣೆಕು”. ಇಲ್ಲಿ ಭಗವಂತ° ‘ಏನಮ್’ – ಇದರ ಹೇಳಿ ಹೇಳಿದ್ದ. ಅರ್ಥಾತ್, ‘ನಿನ್ನ ಸನಿಹಲ್ಲೇ, ಇನ್ನ ಒಳವೇ ಇಪ್ಪ ಭಗವಂತನ ಹುಡ್ಕು ಹೊರತು ಅವ ಎಲ್ಲಿದ್ದ° ಹೇಳಿ ಎಲ್ಯೋ ಹುಡ್ಕೇಡ. ಅವ° ನಮ್ಮ ಜೀವಸ್ವರೂಪದೊಳವೇ ಬಿಂಬರೂಪನಾಗಿ ನೆಲೆಸಿದ್ದ°. ಅವನ ನೆಲೆಯಾದ ನಮ್ಮ ಜೀವಸ್ವರೂಪವ ತಿಳುದರೆ ನವಗೆ ಭಗವಂತ° ಕಾಂಬಲೆ ಸಿಕ್ಕುತ್ತ°.

ಶ್ಲೋಕ

ಯದಾದಿತ್ಯಗತಂ ತೇಜೋ ಜಗದ್ಭಾಸಯತೇsಖಿಲಮ್ ।
ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಮ್ ॥೧೨॥

ಪದವಿಭಾಗ

ಯತ್ ಆದಿತ್ಯ-ಗತಮ್ ತೇಜಃ ಜಗತ್ ಭಾಸಯತೇ ಅಖಿಲಮ್ । ಯತ್ ಚಂದ್ರಮಸಿ ಯತ್ ಚ ಅಗ್ನೌ ತತ್ ತೇಜಃ ವಿದ್ಧಿ ಮಾಮಕಮ್ ॥

ಅನ್ವಯ

ಯತ್ ಆದಿತ್ಯ-ಗತಂ ತೇಜಃ ಅಖಿಲಂ ಜಗತ್ ಭಾಸಯತೇ, ಯತ್ ಚ ಚಂದ್ರಮಸಿ, ಯತ್ ಚ ಅಗ್ನೌ (ಸ್ಥಿತಮ್ ಅಸ್ತಿ), ತತ್ ಮಾಮಕಂ ತೇಜಃ (ಅಸ್ತಿ ಇತಿ ತ್ವಂ) ವಿದ್ಧಿ ।

ಪ್ರತಿಪದಾರ್ಥ

ಯತ್ – ಏವ, ಆದಿತ್ಯ-ಗತಮ್ – ಸೂರ್ಯನ ಬೆಣಚ್ಚಿಲ್ಲಿಪ್ಪ, ತೇಜಃ – ತೇಜಸ್ಸು, ಅಖಿಲಮ್ ಜಗತ್ – ಇಡೀ ಜಗತ್ತಿನ, ಭಾಸಯತೇ – ಪ್ರಕಾಶಿಸುತ್ತೋ, ಯತ್  – ಏವ, ಚ – ಕೂಡ, ಚಂದ್ರಮಸಿ – ಚಂದ್ರನಲ್ಲಿ,  ಯತ್ – ಏವ, ಚ – ಕೂಡ, ಅಗ್ನೌ (ಸ್ಥಿತಂ ಅಸ್ತಿ) – ಅಗ್ನಿಲಿ (ತೇಜಸ್ಸು ಇಪ್ಪದಾಗಿ ಇದ್ದೋ), ತತ್ – ಅದು, ಮಾಮಕಮ್ – ಎನ್ನಂದಲಾಗಿ ಆದ, ತೇಜಃ – ತೇಜಸ್ಸು (ಅಸ್ತಿ ಇತಿ ತ್ವಮ್ – ಇಪ್ಪದಾಗಿ ನೀನು) ವಿದ್ಧಿ – ತಿಳುಕ್ಕೊ.

ಅನ್ವಯಾರ್ಥ

ಏವ ಸೂರ್ಯನಲ್ಲಿ, ಚಂದ್ರನಲ್ಲಿ ಮತ್ತೆ ಅಗ್ನಿಲಿ ಕೂಡ ಪ್ರಕಾಶಿಸುವ ಬೆಣಚ್ಚಿ ಇದ್ದೋ ಅದು ಎನ್ನಂದಾಲಾಗಿ ಇದ್ದು ಎಂಬುದಾಗಿ ನೀನು ತಿಳಿಯೆಕು.

ತಾತ್ಪರ್ಯ / ವಿವರಣೆ

ಭಗವಂತನ ಏವ ರೀತಿ ತಿಳಿಯೇಕು ಹೇದು ಇಲ್ಲಿ ಮತ್ತೂ ರಜ ವಿವರಿಸಿದ್ದ° ಭಗವಂತ°. ನವಗೆ ನಮ್ಮ ದೈನಂದಿನ ಚಟುವಟಿಕೆ ತೊಡಗಲೆ ಶಕ್ತಿ/ಚೈತನ್ಯ ಬೇಕೇ ಬೇಕು. ಯಂತ್ರ, ವಾಹನ, ವಿದ್ಯುತೋಪಕರಣ ಹಂದೆಕ್ಕಾರೆ ವಿದ್ಯುತ್ / ಚೈತನ್ಯ / ಶಕ್ತಿ ಬೇಕು. ಅದು ಎಲ್ಲಿಂದ ಬಪ್ಪದು. ನಮ್ಮ ಕಣ್ಣಿಂಗೆ ಸೌರಶಕ್ತಿಂದ ಬಪ್ಪದು ಹೇಳಿ ತಿಳ್ಕೊಳ್ಳುತ್ತು. ಸಾಮಾನ್ಯವಾಗಿ ನಾವು ಕಾಂಬ ಬೆಣಚ್ಚಿ ಸೂರ್ಯಂದ, ಚಂದ್ರಂದ ವಾ ಅಗ್ನಿಂದ ಬಪ್ಪದು ಹೇಳಿ ಹೇಳುತ್ತು. ಅದು ಅಜ್ಞಾನ ಅಥವಾ ವಿಮೂಢತೆ ಹೇಳಿ ಭಗವಂತ° ಈ ಮದಲೇ ಹೇಳಿದ್ದದು. ಯಥಾರ್ಥವ ತಿಳಿಯೆಕು. ಅದುವೇ ಜ್ಞಾನ. ಸೂರ್ಯಂದ ವಾ ಚಂದ್ರಂದ ಬಪ್ಪ ವಾ ಕಿಚ್ಚಿಲ್ಲಿ ಇಪ್ಪ ಪ್ರಕಾಶ/ಬೆಣಚ್ಚಿ/ಶಕ್ತಿ ಭಗವಂತನಿಂದಲಾಗಿ ಬಪ್ಪದು. ಇದು ವಾಸ್ತವ ಸ್ಥಿತಿ ಹೇಳ್ವದರ ನಾವು ತಿಳಿಯೆಕು ಹೇಳಿ ಭಗವಂತ° ಇಲ್ಲಿ ಎಚ್ಚರಿಸಿದ್ದ°.   ಸೂರ್ಯನಾಗಲೀ, ಚಂದ್ರನಾಗಲೀ, ಅಗ್ನಿಯಾಗಲೀ ಭಗವಂತನ (ಬ್ರಹ್ಮಲೋಕವ) ಪ್ರಕಾಶಮಾನವಾಗಿ ಮಾಡುತ್ತಿಲ್ಲೆ. ಸೂರ್ಯಚಂದ್ರಾದಿ ತಾರೆಗೊ ಬೆಳಗುವದೇ ಭಗವಂತನ ಮೂಲ ಬೆಣಚ್ಚಿಂದ. ಏವ ಬೆಣಚ್ಚಿ ನಮ್ಮ ಸ್ವರೂಪದೊಳ ಅಣೋರಣೀಯವಾಗಿ ನಿಂದು ನಮ್ಮ ನಡೆಶುತ್ತೋ ಅದೇ ಬೆಣಚ್ಚಿ ಮಹತೋಮಹಿಯಾಗಿ ಇಡೀ ಬ್ರಹ್ಮಾಂಡಾವ ಬೆಳಗುತ್ತು. ಒಟ್ಟಿಲ್ಲಿ ಎಲ್ಲ ಬೆಣಚ್ಚಿಗಳ ಮೂಲತೇಜಸ್ಸು ಭಗವಂತ°.

ಶ್ಲೋಕ

ಗಾಮಾವಿಶ್ಯ ಚ ಭೂತಾನಿ ಧಾರಯಮ್ಯಹಮೋಜಸಾ ।
ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ ॥೧೩॥

ಪದವಿಭಾಗ

ಗಾಮ್ ಆವಿಶ್ಯ ಚ ಭೂತಾನಿ ಧಾರಯಾಮಿ ಅಹಮ್ ಓಜಸಾ । ಪುಷ್ಣಾಮಿ ಚ ಓಷಧೀಃ ಸರ್ವಾಃ ಸೋಮಃ ಭೂತ್ವಾ ರಸಾತ್ಮಕಃ ॥

ಅನ್ವಯ

ಅಹಂ ಚ ಗಾಮ್ ಆವಿಶ್ಯ ಭೂತಾನಿ ಓಜಸಾ ಧಾರಯಾಮಿ । ರಸಾತ್ಮಕಃ ಸೋಮಃ ಭೂತ್ವಾ ಚ ಸರ್ವಾಃ ಓಷಧೀಃ ಪುಷ್ಣಾಮಿ ॥

ಪ್ರತಿಪದಾರ್ಥ

ಅಹಮ್ – ಆನು, ಚ – ಕೂಡ, ಗಾಮ್ ಆವಿಶ್ಯ – ಲೋಕವ ಪ್ರವೇಶಿಸಿ, ಭೂತಾನಿ – ಜೀವಿಗಳ, ಓಜಸಾ – (ಸ್ವ)ಶಕ್ತಿಂದ, ಧಾರಯಾಮಿ – ಸಂರಕ್ಷಿಸುತ್ತೆ (ಧರಿಸುತ್ತೆ). ರಸಾತ್ಮಕಃ – ರಸವ ಒದಗುಸುವ, ಸೋಮಃ ಭೂತ್ವಾ – ಚಂದ್ರ° ಆಗಿ, ಚ – ಕೂಡ, ಸರ್ವಾಃ ಓಷಧೀಃ – ಸಮಸ್ತ ಗಿಡಮೂಲೆಕೆಗಳ, ಪುಷ್ಣಾಮಿ – ಪೋಷಿಸುತ್ತೆ.

ಅನ್ವಯಾರ್ಥ

ಆನು ಎನ್ನ ಸ್ವಶಕ್ತಿಂದ ಈ ಲೋಕಂಗಳ ಪ್ರವೇಶಿಸಿ ಸಮಸ್ತ ಜೀವಿಗಳ ಎನ್ನೊಳ ಧರಿಸುತ್ತೆ ( ಸಂರಕ್ಷಿಸುತ್ತೆ). ಚಂದ್ರನಾಗಿ ಎಲ್ಲ ಗಿಡಮೂಲಿಕೆಗೊಕ್ಕೆ ರಸವ (ಜೀವರಸವ) ನೀಡಿ ಪೋಷಿಸುತ್ತೆ.

ತಾತ್ಪರ್ಯ / ವಿವರಣೆ

ಸಮಸ್ತ ಲೋಕವೂ ಆ ಪರಾತ್ಪರ ಶಕ್ತಿಂದಲಾಗಿ ನಡೆತ್ತು ಹೇಳ್ವದರ ನಾವು ತಿಳುದ್ದು. ಅದನ್ನೇ ಭಗವಂತ° ಇಲ್ಲಿ ಒತ್ತಿ ಹೇಳುತ್ತಲಿದ್ದ°. ಸರ್ಗಗತನಾದ ಆ ಭಗವಂತ ಸರ್ವಾಂತರ್ಯಾಮಿಯಾಗಿ ವಿಶ್ವವ ನಡೆಶುತ್ತ° ಹೇಳ್ವದರ ಇಲ್ಲಿ ವಿಸ್ತರಿಸಿದ್ದ°. ಅವ° ಇಲ್ಲದ್ದೆ ಯಾವುದೊಂದೂ ಹಂದ. ಸಮಸ್ತ ವಿಶ್ವವನ್ನೇ ಅವ° ಧರಿಸಿಗೊಂಡಿದ್ದ°. ಸಮಸ್ತ ವಿಶ್ವಕ್ಕೂ ಮೂಲಚೈತನ್ಯವ ನೀಡುವವ° ಅವನೇ. ಭಗವಂತ° ಆಕಾಶ, ಗಾಳಿಂದ ಹಿಡುದು ಪ್ರತಿಯೊಂದು ಲೋಕಲ್ಲಿಯೂ, ಜೀವಿಲಿಯೂ ಮಾಂತ್ರ ಅಲ್ಲದ್ದೆ  ಅಣುರೇಣುತೃಣಕಾಷ್ಠಂಗಳಲ್ಲಿಯೂ ನೆಲೆಸಿ ಅದಕ್ಕೆ ಮಹತ್ವವ ನೀಡಿದ್ದ°. ಪ್ರತಿಯೊಂದರಲ್ಲಿಯೂ ಅವ° ಪ್ರವೇಶಿಸಿ ಅದಕ್ಕೊಂದು ಚೈತನ್ಯವ (ಗುಣವ /ಮೌಲ್ಯವ/ವಿಶೇಷತೆಯ / ಅಭಿವ್ಯಕ್ತಿಯ) ನೀಡುತ್ತ°.  ಅವನ ಪ್ರವೇಶಂದಲಾಗಿ ಪ್ರತಿಯೊಂದರ ಉಚಿತ ಅಭಿವ್ಯಕ್ತಿಯಾವುತ್ತು. ಭಗವಂತನ ವಿಶ್ವ/ಅನಂತರೂಪವು ಗಾಳಿಲಿ ತೇಲುತ್ತಿಪ್ಪ ಈ ಲೋಕವ ತನ್ನ ಮುಷ್ಟಿಲಿ ಹಿಡುದು ಮಡಿಕ್ಕೊಂಡಿದ್ದು. ಅವನ ಶಕ್ತಿಸಾಮರ್ಥ್ಯಂದಲಾಗಿ ಎಲ್ಲ ಚರಾಚರ ವಸ್ತುಗೊ ತಮ್ಮ ಸ್ಥಳಲ್ಲಿ ಉಳುದ್ದು. ಅವನಿಂದಲಾಗಿ ಸೂರ್ಯ° ಪ್ರಕಾಶಿಸುತ್ತ°. ಎಲ್ಲ ಲೋಕವೂ ಸಮತೋಲನಲ್ಲಿ ನಡೆತ್ತು. ಅವ° ಇಲ್ಲದ್ರೆ ಏವತ್ತೋ ಇವೆಲ್ಲವೂ ಚದುರು ಚಲ್ಲಾಪಿಲ್ಲಿ ಆವ್ತಿತ್ತು. ಹಾಂಗೇ ಸೋಮನಾಗಿ ಚಂದ್ರನಲ್ಲಿದ್ದುಗೊಂಡು ಎಲ್ಲ ತರಕಾರಿ ಗಿಡಮೂಲಿಕೆಗೊಕ್ಕೆ ರಸವ (ರುಚಿ) ನೀಡುತ್ತ°. ಅರ್ಥಾತ್ ದೇವೋತ್ತಮ, ಸರ್ವೋತ್ತಮ ಭಗವಂತನಿಂದಲಾಗಿ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಆವ್ತಾ ಇದ್ದು. ಇಲ್ಲಿ ‘ರಸಾತ್ಮಕಃ’ ತುಂಬಾ ಅರ್ಥಪೂರ್ಣ ಪದ. ಚಂದ್ರನ ಮೂಲಕ ಭಗವಂತ° ಬೀರುವ ಪ್ರಭಾವಂದಲಾಗಿ ಎಲ್ಲ ವಸ್ತುಗೊ ರುಚಿಯಾಗಿ ದೊರಕುತ್ತು.

ಬನ್ನಂಜೆ ವಿವರುಸುತ್ತವು – ಇಲ್ಲಿ ಗಾಮ್ ಹೇಳಿರೆ ಭೂಮಿ (ಪೃಥಿವಿ). ಈ ಭೂಮಿ ನಿರಾಲಂಭವಾಗಿ ನಿಂಬ ಹಾಂಗೆ ಸಂಕರ್ಷಣ ಶಕ್ತಿ ರೂಪಲ್ಲಿ ಭೂಮಿಯ ಹೊತ್ತು ನಿಂದವ° ಭಗವಂತ°.  ಇದು ಭಗವಂತನ ವರಾಹ ಅವತಾರವ ಸಾರುತ್ತು. ತಾಮಸ ಲೋಕದ ದೈತ್ಯ° ಹಿರಣ್ಯಾಕ್ಷನಿಂದಲಾಗಿ ಭೂಮಿ ತನ್ನ ಕಕ್ಷೆಂದ ಕಳಚಿ ಕೆಳ ಕುಸಿವಲೆ ಇಪ್ಪದರ ಭಗವಂತ° ವರಾಹ ರೂಪಲ್ಲಿ ಭೂಮಿಯ ಎತ್ತಿ ಹಿಡುದ ಕತೆಯ ನೆಂಪುಮಾಡುತ್ತು.  ವೇದಕಾಲದ ಋಷಿಗೊಕ್ಕೆ ಭೂಮಿಯ ಧಾರಣೆ ಮಾಡಿದ ಭಗವಂತ° ವರಾಹ ರೂಪನಾಗಿ ಕಂಡ°. ವರ = ಶ್ರೇಷ್ಠ. ಗಾಯತ್ರೀಮಂತ್ರಲ್ಲಿ ‘ವರೇಣ್ಯಂ’ ಎಂಬಲ್ಲಿ ಭೂಮಿಯ ಧಾರಣೆ ಮಾಡಿದ ಭಗವಂತನ ವರಾಹ ರೂಪದ ಚಿಂತನೆ ಇದ್ದು. ರಷ್ಯದ ವಿಜ್ಞಾನಿ ವಿಲಿಕೋವಸ್ಕಿ (vilikovsky) ಹೇಳಿದ್ದನಡ – “ವೈಜ್ಞಾನಿಕವಾಕಿ ಎರಡು ಸರ್ತಿ ಈ ಭೂಮಿ ತನ್ನ ಕಕ್ಷೆಂದ ತಪ್ಪಿದ್ದು ನಿಜ, ಆದರೆ ಅದು ಎಂತಕೆ ಹಾಂಗಾತು ಹೇಳ್ವದು ಗೊಂತಿಲ್ಲೆ. ಏವುದೋ ಒಂದು ದುಷ್ಟ ಶಕ್ತಿ ಭೂಮಿಯ ಕಕ್ಷೆಂದ ಕಳಚಿಸಿತ್ತು, ಹಾಂಗೇ ಒಂದು ದೈವೀ ಶಕ್ತಿ ಅದರ ಮರಳಿ ಕಕ್ಷೆಲಿ ಮಡುಗಿತ್ತು”. ಇದನ್ನೇ ಭಗವಂತ° ಇಲ್ಲಿ ಹೇಳಿದ್ದದು “ಗಾಮ್ ಧಾರಯಾಮಿ”. ‘ಅಹಂ ಓಜಸಾ ಭೂತಾನಿ ಧಾರಯಾಮಿ’ – ಭೂಮಿಯ ಧಾರಣೆ ಮಾಡಿದ ಭಗವಂತ ಭೂಮಿಯೊಳ ಇದ್ದು ಪ್ರತಿಯೊಂದು ಜೀವಜಾತದೊಳವೂ ಇದ್ದು ನಮ್ಮ ರಕ್ಷಿಸುತ್ತ°. ಈ ರೀತಿ ಭೂಮಿಯ ಧಾರಣೆ ಮಾಡಿ ರಕ್ಷಿಸುವ ಭಗವಂತನ ಶಕ್ತಿಯ ‘ಓಜಸ್ಸು’ ಹೇಳಿ ಹೇಳಿದ್ದದು. ಹೇಳಿರೆ ಎಲ್ಲ ಅಡೆ-ತಡೆಗಳ ನಿಗ್ರಹ ಮಾಡುವ ಶಕ್ತಿ.

ಇನ್ನು ಇಲ್ಲಿ ಭಗವಂತ° ಹೇಳಿಪ್ಪದು –  “ಸೋಮೋ ಭೂತ್ವಾ ರಸಾತ್ಮಕಃ”   – ಭಗವಂತ° ಸೋಮರೂಪಲ್ಲಿ ಚಂದ್ರನಲ್ಲಿ ತುಂಬಿದ್ದ°, ಮತ್ತೆ., ‘ಚ ಸರ್ವಾಃ ಓಷಧೀಃ ಪುಷ್ಣಾಮಿ’ – ಎಲ್ಲ ಓಷಧೀ (ವನಸ್ಪತಿ), ತರಕಾರಿ, ಗಿಡಬಳ್ಳಿಗಳಲ್ಲಿ ಜೀವರಸವ ನೀಡಿ ಪೋಷಿಸುತ್ತ°. ಚಂದ್ರನಲ್ಲಿ ತುಂಬಿಪ್ಪ ಸೋಮರೂಪಿ ಭಗವಂತ° ಜೀವಿಗೊಕ್ಕೆ ಬೇಕಾದ ಜೀವರಸವ ನೀಡಿ ಈ ಭೂಮಿಯ ಮತ್ತು ಭೂಮಿಲಿಪ್ಪವರ ಕಾಪಾಡುತ್ತ°.

ಶ್ಲೋಕ

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ ।
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ॥೧೪॥

ಪದವಿಭಾಗ

ಅಹಮ್ ವೈಶ್ವಾನರಃ ಭೂತ್ವಾ ಪ್ರಾಣಿನಾಮ್ ದೇಹಮ್ ಆಶ್ರಿತಃ । ಪ್ರಾಣ-ಅಪಾನ-ಸಮ-ಆಯುಕ್ತಃ ಪಚಾಮಿ ಅನ್ನಮ್ ಚತುರ್ವಿಧಮ್ ॥

ಅನ್ವಯ

ಅಹಂ ಪ್ರಾಣಿನಾಂ ದೇಹಮ್ ಆಶ್ರಿತಃ ಪ್ರಾಣ-ಅಪಾನ-ಸಮ-ಆಯುಕ್ತಃ ವೈಶ್ವಾನರಃ ಭೂತ್ವಾ ಚತುರ್ವಿಧಮ್ ಅನ್ನಂ ಪಚಾಮಿ ।

ಪ್ರತಿಪದಾರ್ಥ

ಅಹಮ್ – ಆನು, ಪ್ರಾಣಿನಾಮ್ – ಎಲ್ಲ ಜೀವಿಗಳ, ದೇಹಮ್ ಆಶ್ರಿತಃ – ಶರೀರವ ಆಶ್ರಿತನಾಗಿ, ಪ್ರಾಣ-ಅಪಾನ-ಸಮ-ಆಯುಕ್ತಃ – ಬಹಿರ್ಮುಖವಾಯು-ಅಧೋಮುಖವಾಯುಗಳ ಸಮತೋಲನಲ್ಲಿರಿಸಿ, ವೈಶ್ವಾನರಃ ಭೂತ್ವಾ – ಜಠರಾಗ್ನಿಯಾಗಿ, ಚತುರ್ವಿಧಮ್ ಅನ್ನಮ್ – ನಾಲ್ಕು ಬಗೆ ಅನ್ನವ, ಪಚಾಮಿ – ಜೀರ್ಣ ಮಾಡುತ್ತೆ.

ಅನ್ವಯಾರ್ಥ

ಆನು ಎಲ್ಲ ಜೀವಿಗಳ ಶರೀರಲ್ಲಿ ಜಠರಾಗ್ನಿಯಾಗಿದ್ದುಗೊಂಡು, ದೇಹದೊಳ ಮತ್ತೆ ಹೆರ ಹೋಪ ಪ್ರಾಣುವಾಯುವ ಸಮತೋಲನಲ್ಲಿ ಮಡುಗಿ (ನಿಯಂತ್ರಿಸಿ), ನಾಲ್ಕು ಬಗೆ ಆಹಾರವ ಜೀರ್ಣ ಮಾಡುತ್ತೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ°- ” ಆನು ವೈಶ್ವಾನರನಾಗಿ ಜೀವಿಗಳ ದೇಹದೊಳ ಇದ್ದುಗೊಂಡು ಪ್ರಾಣ-ಅಪಾನರ ಒಟ್ಟಿಂಗೆ ತಿಂಬ, ಚೀಪುವ, ನಕ್ಕುವ, ಕುಡಿವ ಈ ನಾಲ್ಕು ಬಗೆ ಆಹಾರವ ಜೀರ್ಣಮಾಡುತ್ತೆ (ಕರಗುಸುತ್ತೆ)”.

ಇಲ್ಲಿ “ಪಚಾಮ್ಯನ್ನಮ್ ಚತುರ್ವಿಧಮ್” –  ‘ನಾಲ್ಕು ಬಗೆಯ ಅನ್ನವ (ಆಹಾರವ) ಕರಗುಸುತ್ತೆ’. ಮತ್ತೆ “ಪ್ರಾಣಿನಾಮ್ ದೇಹಮಾಶ್ರಿತಃ” – ಹೇಳಿರೆ ಪ್ರಾಣಿಗೊ ಆಶ್ರಯಿಸುವ ಹೇಳಿ ಅರ್ಥೈಸೆಕು. ಪ್ರಾಣಿಗಳ (ಜೀವಿಗಳ) ನಾಲ್ಕು ಬಗೆ ಆಹಾರ ಹೇಳಿರೆ ಭಕ್ಷ್ಯ, ಭೋಜ್ಯ, ಲೇಹ್ಯ, ಮತ್ತೆ ಚೋಪ್ಯ. ಅಗುದು ಜಗುದು ತಿಂಬದು – ಭಕ್ಷ್ಯ, ಅಗಿಯದ್ದೆ ತಿಂಬದು – ಭೋಜ್ಯ, ನಕ್ಕಿ ತಿಂಬದು – ಲೇಹ್ಯ, ಕುಡಿವಲೆ ಇಪ್ಪದು – ಚೋಪ್ಯ. ಈ ನಾಲ್ಕು ವಿಧ ‘ಅನ್ನ’ವ ಸೇವುಸುವ ಎಲ್ಲ ಜೀವಿಗಳ ಜಠರಲ್ಲಿ ಅಗ್ನಿಯ ರೂಪಲ್ಲಿ ಇದ್ದುಗೊಂಡು, ನಾಲ್ಕು ಬಗೆ ಅನ್ನವ ಮೂರು ಬಗೆ (ಸೂಕ್ಷ್ಮ-ಮಧ್ಯ-ಸ್ಥೂಲ) ವಿಭಾಗ ಮಾಡಿ ದೇಹಕ್ಕೆ ವಿಸ್ತರಿಸಿ ನವಗೆ ಬದುಕಲೆ ವ್ಯವಸ್ಥೆ ಮಾಡುಸುವವ° ವೈಶ್ವಾನರ ರೂಪಿ ಭಗವಂತ°. ಯಾವುದೇ ವಸ್ತು ಜೀರ್ಣ / ಕರಗೆಕಾರೆ ಅಗ್ನಿ ಬೇಕು. ನಮ್ಮ ದೇಹಲ್ಲಿ ಜಠರಲ್ಲಿ ವೈಶ್ವಾನರ ಅಗ್ನಿಯಾಗಿ ಭಗವಂತ° ಇದ್ದ°

ನಾವು ಸೇವುಸುವ ಆಹಾರ ಮಣ್ಣು-ನೀರು-ಕಿಚ್ಚಿನ ಮಿಶ್ರಣ. ಆಹಾರಲ್ಲಿಪ್ಪ ಮಣ್ಣಿನ ಸೂಕ್ಷ್ಮ ಭಾಗ ಮೆದುಳಿಂಗೆ, ಮಧ್ಯ ಭಾಗ ಮಾಂಸ-ಚರ್ಮಕ್ಕೆ, ಮತ್ತೆ ಸ್ಥೂಲ ಭಾಗ ಮಲವಾಗಿ ವಿಸರ್ಜನೆ ಆವ್ತು. ಅದೇ ರೀತಿ ನೀರಿನ ಸೂಕ್ಷ್ಮ ಭಾಗ ಉಸಿರಾಗಿ, ಮಧ್ಯ ಭಾಗ ನೆತ್ತರಾಗಿ, ಹಾಂಗೂ ಸ್ಥೂಲ ಭಾಗ ಮೂತ್ರವಾಗಿ ವಿನಿಯೋಗ ಆವ್ತು. ಅದೇ ರೀತಿ ಕಿಚ್ಚಿನ ಸೂಕ್ಷ್ಮ ಭಾಗ ವಾಕ್ ಶಕ್ತಿಯಾಗಿ, ಮಧ್ಯ ಭಾಗ ಅಸ್ಥಿಮಜ್ಜೆಯಾಗಿ, ಸ್ಥೂಲಭಾಗ ಹಲ್ಲು ಮತ್ತೆ ಅಸ್ಥಿಯಾಗಿ ವಿನಿಯೋಗ ಆವ್ತು. ಈ ರೀತಿ ಚಿನ್ನದ ಗಣಿಂದ ಚಿನ್ನವ ಬೇರ್ಪಡುಸುವದರಿಂದಲೂ ಕಠಿಣವಾದ ಈ ಕಾರ್ಯವ ನಮ್ಮೊಳ ಇದ್ದು ವ್ಯವಸ್ಥಿತ ರೀತಿಲಿ ಮಾಡಿ, ನವಗೆ ಜೀವನವ ಕೊಡುವವ° – ಆ ಭಗವಂತ°. ಭಗವಂತನ ಈ ಕಾರ್ಯಕ್ಕೆ ಸೇವಕ° – ಪ್ರಾಣ-ಅಪಾನ ಹೇಳ್ವ ಪ್ರಾಣದೇವರ ಎರಡು ರೂಪಂಗೊ.

ಊರ್ಧ್ವಂ ಪ್ರಾಣಮುನ್ನಯತಿ ಅಪಾನಂ ಪ್ರತ್ಯಗಸ್ಯತಿ । ಮಧ್ಯೇ ವಾಮನಮಾಸೀನಂ ವಿಶ್ವೇದೇವಾ ಉಪಾಸತೇ(ಕಠೋಪನಿಷತ್ತು – ೨.೨.೩). ಇಲ್ಲಿ ಪ್ರಾಣ-ಅಪಾನ ಹೇಳಿರೆ ಪ್ರಾಣ ದೇವರ ಎರಡು ರೂಪ, ಮಧ್ಯಲ್ಲಿ (ಹೃದಯಲ್ಲಿ) ಭಗವಂತನ ವಾಮನ ರೂಪ. ಇದು ಪಂಚರೂಪಿ ಭಗವಂತನ ಉಪಾಸನೆಂದ ಭಿನ್ನವಾದ ಉಪಾಸನೆ. ಹೃದಯದ ಮಧ್ಯಲ್ಲಿದ್ದುಗೊಂಡು ನಾವು ಉಂಡ ಆಹಾರವ ಜೀರ್ಣಿಸಿ ಬದುಕು ಕೊಡುವವ° – ವಾಮನ ರೂಪಿ ಭಗವಂತ°.  ಈ ಮನ್ವಂತರಲ್ಲಿ ವಾಮನ ದೇವೇಂದ್ರನ ರಕ್ಷಕನಾಗಿಪ್ಪ ‘ಉಪೇಂದ್ರ°’. ಹಾಂಗಾಗಿ ನಮ್ಮ ಹೃದಯಲ್ಲಿಪ್ಪ ವಾಮನ ರೂಪಿ ಭಗವಂತನ ಉಪಾಸನೆ ಈ ಮನ್ವಂತರಲ್ಲಿ ಬಹು ಮುಖ್ಯವಾಗಿದ್ದು. ನಮ್ಮೊಳ ವಾಮನ ರೂಪಿಯಾಗಿಪ್ಪ ಈ ಭಗವಂತನೇ ತ್ರಿವಿಕ್ರಮ° ಆಗಿ ಭೂಮಿ-ವ್ಯೋಮಲ್ಲಿ ತುಂಬಿಗೊಂಡಿದ್ದ° ಹೇದು ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ವೈದ್ಯಶಾಸ್ತ್ರಕ್ಕನುಗುಣವಾಗಿ ಹೊಟ್ಟಗೆ ಹೋಪ ಆಹಾರ ಎಲ್ಲವ ಅರಗುಸುವ ಜಠರಾಗ್ನಿ ಇದ್ದು. ಈ ಅಗ್ನಿ ಪ್ರಜ್ವಲಿಸದ್ರೆ ಹಶು ಆಗ. ಈ ಅಗ್ನಿ ಕೆಲಸ ಮಾಡುವದರಿಂದ ನವಗೆ ಹಶು ಅಪ್ಪದು. ಒಂದೊಂದರಿ ಈ ಅಗ್ನಿ ಸರಿಯಾಗಿ ಕೆಲಸ ಮಾಡದ್ರೆ ಚಿಕಿತ್ಸೆ ಅಗತ್ಯ. ಈ ಅಗ್ನಿ ದೇವೋತ್ತಮ ಪರಮಪುರುಷ ಆ ಭಗವಂತನ ಪ್ರತಿನಿಧಿ. ಭಗವಂತ ವೈಶ್ವಾನರ ಅಗ್ನಿಯಾಗಿ ಜಠರಲ್ಲಿ ಇದ್ದುಗೊಂಡು ಎಲ್ಲ ಬಗೆ ಆಹಾರವ ಜೀರ್ಣಗೊಳುಸುತ್ತ°. ಪ್ರಾಣಿಗೊಕ್ಕೆ (ಜೀವಿಗೊಕ್ಕೆ) ಈ ಪಚನ ಕ್ರಿಯೆ ಕೆಲಸ ಮಾಡದ್ರೆ ಆಹಾರ ತೆಕ್ಕೊಂಬಲೆ ಬದುಕ್ಕಲೆ ಎಡಿಯ.  ಹೀಂಗೆ ತಿಂಬ ನುಂಗುವ ನಕ್ಕುವ ಕುಡಿವ ಆಹಾರಕ್ಕೆ ಜೀರ್ಣಶಕ್ತಿ – ಆ ಭಗವಂತ°.

ಶ್ಲೋಕ

ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂಚ ।
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ವೇದವಿದೇವ ಚಾಹಮ್ ॥೧೫॥

ಪದವಿಭಾಗ

ಸರ್ವಸ್ಯ ಚ ಅಹಮ್ ಹೃದಿ ಸನ್ನಿವಿಷ್ಟಃ ಮತ್ತಃ ಸ್ಮೃತಿಃ ಜ್ಞಾನಮ್ ಅಪೋಹನಮ್ ಚ । ವೇದೈಃ ಚ ಸರ್ವೈಃ ಅಹಮ್ ಏವ ವೇದ್ಯಃ ವೇದಾಂತ-ಕೃತ್ ವೇದ-ವಿತ್ ಏವ ಚ ಅಹಮ್ ॥

ಅನ್ವಯ

ಅಹಂ ಸರ್ವಸ್ಯ ಹೃದಿ ಸನ್ನಿವಿಷ್ಟಃ (ಅಸ್ಮಿ), ಮತ್ತಃ (ಸರ್ವಸ್ಯ) ಸ್ಮೃತಿಃ ಜ್ಞಾನಮ್ ಅಪೋಹನಂ ಚ (ಭವತಿ) , ಅಹಂ ಚ ಏವ ಸರ್ವೈಃ ವೇದೈಃ ವೇದ್ಯಃ (ಅಸ್ಮಿ), ಅಹಮ್ ಏವ ಚ ವೇದಾಂತ-ಕೃತ್, ವೇದ-ವಿತ್ ಚ (ಅಸ್ಮಿ) ।

ಪ್ರತಿಪದಾರ್ಥ

ಅಹಮ್ – ಅನು, ಸರ್ವಸ್ಯ ಹೃದಿ – ಎಲ್ಲೋರ ಹೃದಯಲ್ಲಿ (ಸಕಲ ಜೀವಿಗಳ ಹೃದಯಲ್ಲಿ), ಸನ್ನಿವಿಷ್ಟಃ (ಅಸ್ಮಿ) – ನೆಲೆಸಿದವನಾಗಿದ್ದೆ. ಮತ್ತಃ (ಮತ್-ತಃ) – ಎನ್ನಂದ, (ಸರ್ವಸ್ಯ – ಎಲ್ಲೋರ), ಸ್ಮೃತಿಃ – ನೆಂಪು, ಜ್ಞಾನಮ್ – ಜ್ಞಾನ, ಅಪೋಹನಮ್ ಚ (ಭವತಿ) – ಮರೆವೂ ಕೂಡ ಅಪ್ಪದು. ಅಹಮ್ ಚ ಏವ – ಆನೇ, ಸರ್ವೈಃ ವೇದೈಃ – ಸಮಸ್ತ ವೇದಗಳಿಂದ, ವೇದ್ಯಃ – ತಿಳಿಯಲ್ಪಡೇಕ್ಕಾದವ°. ಅಹಮ್ ಏವ ಚ – ಆನೇ, ವೇದಾಂತ-ಕೃತ್ – ವೇದಾಂತದ ಸಂಕಲನಕಾರ°, ವೇದ-ವಿತ್ ಚ (ಅಸ್ಮಿ ) – ತಿಳುದವ° ಆಗಿದ್ದೆ.

ಅನ್ವಯಾರ್ಥ

ಆನು ಪ್ರತಿಯೊಬ್ಬರ ಹೃದಯಲ್ಲಿ ನೆಲೆಸಿದ್ದೆ. ಸ್ಮರಣೆ(ಸ್ಮೃತಿ), ಜ್ಞಾನ, ಮರವದು ಎನ್ನಂದ ಬಪ್ಪದು. ಎಲ್ಲ ವೇದಂಗಳಿಂದ ತಿಳಿಯಲ್ಪಡಬೇಕಾದವ° ಆನು. ವೇದಾಂತ ಕರ್ತೃ ಆನೇ, ವೇದಂಗಳ ತಿಳುದವನೂ ಆನೇ ಆಗಿದ್ದೆ.

ತಾತ್ಪರ್ಯ / ವಿವರಣೆ

ಪರಮಾತ್ಮನಾಗಿ ಪರಮ ಪ್ರಭು ಎಲ್ಲೋರ ಹೃದಯಂಗಳಲ್ಲಿ ನೆಲೆಸಿದ್ದ°. ಎಲ್ಲ ಚಟುವಟಿಕೆಗಳೂ ಅವನಿಂದ ಪ್ರೇರಿತ ಅಪ್ಪದು. “ಸರ್ವಸ್ಯ ಚ ಅಹಂ ಹೃದಿ ಸನ್ನಿವಿಷ್ಟಃ” – ‘ಅಹಂ’ ಶಬ್ದವಾಚ್ಯನಾಗಿ ಎಲ್ಲೋರ ಹೃದಯಲ್ಲಿ ತುಂಬಿಗೊಂಡಿಪ್ಪವ° ಆ ಭಗವಂತ°. ಹಾಂಗಾಗಿ ಪ್ರಪಂಚಲ್ಲಿ ಆನು, ಎನ್ನದು, ಎನ್ನಿಂದ ಹೇಳಿ ‘ಅಹಂ’ ಪಡುವದು ಅರ್ಥಹೀನ. ಎಲ್ಲವೂ ಆ ಭಗವಂತನೇ , ಭಗವಂತನಿಂದಲೇ. ಭಗವಂತನ ರೂಪಕ್ಕೆ ಅಹಃ’ ಹೇಳಿರೆ, ನಮ್ಮೊಳ ಇಪ್ಪ ಅವನ ರೂಪಕ್ಕೆ ಅಹಮ್ ‘. ಹಾಂಗಾಗಿ ಅಹಮ್ ಬ್ರಹ್ಮಾಸ್ಮಿ’ ಹೇಳ್ವ ಮಾತು ಸತ್ಯ ಅಪ್ಪದು. ಏವಾಗ ಜೀವಿ ಈ ಸ್ಥೂಲ ದೇಹಲ್ಲಿ ಕಾಂಬ ಆನು ಆನಲ್ಲ, ಜೀವ ಸ್ವರೂಪಲ್ಲಿ ಇಪ್ಪ ಸೂಕ್ಷ್ಮದೇಹ ಆನು ಹೇಳ್ವದರ ತಿಳಿತ್ತನೋ ಅಂಬಗ ಅಹಂ ಬ್ರಹ್ಮಾಸ್ಮಿ ಮಾತು ಉಚಿತ. ಎಂತಕೆ ಹೇಳಿರೆ., ಮೂಲಭೂತವಾದ ಜೀವಸ್ವರೂಪ- ಆ ಭಗವಂತನ ಅಂಶ. ಸಮಸ್ತ ಜೀವಿಗಳ ಹೃದಯಲ್ಲಿ ಭಗವಂತ° ನೆಲೆಸಿಗೊಂಡಿದ್ದ°. ಇಂತಹ ಭಗವಂತನ ಪ್ರಜ್ಞೆ ನವಗಿದ್ದರೆ ನಾವು ಹೇಳುವ ‘ಅಹಂ’ ಹೇಳ್ವ ಅಹಂಕಾರ ನವಗೆ ಉಂಟಾಗ.

ಮತ್ತಃ ಸ್ಮೃತಿಃ ಜ್ಞಾನಮ್ ಅಪೋಹನಂ ಚ” – ನವಗೆ ಸ್ಮರಣಶಕ್ತಿಯ ಕೊಡುವದು ಆ ಭಗವಂತ°. ನವಗೆ ಜ್ಞಾನ ಬಪ್ಪದೂ ಆ ಭಗವಂತನಿಂದ, ಬಂದ ಜ್ಞಾನ ನೆಂಪಿಲ್ಲಿ ಒಳಿವದೂ ಭಗವಂತನಿಂದ. ಹೇಂಗೆ ನೆಂಪಿನ ಶಕ್ತಿ ಭಗವಂತ° ನವಗೆ ಕೊಡುತ್ತನೋ, ಹಾಂಗೇ, ಮರದು ಹೋಪ ಹಾಂಗೆ ಮಾಡುವವನೂ ಅವನೇ. ಹೀಂಗೆ ನೆಂಪು-ಜ್ಞಾನ-ಮರವು ಕೊಟ್ಟು ನಮ್ಮ ಸಮತೋಲನಲ್ಲಿ ಉದ್ಧರುಸುವವ° ಆ ಭಗವಂತನ. ನೆಂಪಿಲ್ಲಿ ಇಪ್ಪದರ ಮರದು ಹೋವ್ತಾಂಗೆ ಮಾಡುವದೂ ಅವನೇ.  ಅದು ಭಗವಂತನ ಲೀಲೆ. ಅವನ ಲೀಲೆಯ ಹಿಂದಿಪ್ಪದು ದ್ವೇಷ ಅಲ್ಲ – ಕೇವಲ ಕಾರುಣ್ಯ. ಅದು ನಮ್ಮ ತಿದ್ದಲೆ ಭಗವಂತ° ಮಾಡುವ ಪ್ರಚೋದನೆ / ಲೀಲೆ.

“ವೇದೈಃ ಚ ಸರ್ವೈಃ ಅಹಮ್ ಏವ ವೇದ್ಯಃ” – ‘ಸಮಸ್ತ ವೇದಂಗಳಿಂದ ತಿಳೆಯೇಕಾದವ° ಆನೇ’.  ಬನ್ನಂಜೆ ಹೇಳ್ತವು – ಇಲ್ಲಿ ಚ’ಕಾರದ ಮುಖ್ಯತ್ವ ಇದ್ದು. ಭಗವಂತ ವೇದಂಗಳಿಂದಲೇ ವೇದ್ಯ ಹೇಳ್ವ ಮುಖ್ಯಾರ್ಥ. ಹಾಂಗೇ ಪಂಚಮ ವೇದಂಗಳಾದ ಪುರಾಣ ಗ್ರಂಥಂಗಳಾದ ವೇದಾಂತ, ಮಹಾಭಾರತ, ರಾಮಾಯಣ ಇತ್ಯಾದಿಗಳಿಂದಲೂ ಭಗವಂತ° ವೇದ್ಯ° ಹೇಳ್ವ ದೃಷ್ಟಿಕೋನಲ್ಲಿಯೂ ಅರ್ಥೈಸೆಕ್ಕಾಗಿದ್ದು. ಎಲ್ಲ ವೇದಂಗಳಲ್ಲಿಯೂ ಹೇಳಿದ್ದು ಭಗವಂತನ ಕುರಿತಾಗಿಯೇ. ಅವನೇ ಪರಮ ಶ್ರೇಷ್ಠ°, ಅವನೇ ಸರ್ವಸ್ವ ಹೇಳ್ವದರ ವೇದಂಗಳಲ್ಲಿ ವಿಸ್ತಾರವಾಗಿ ಹೇಳಿಪ್ಪದು. ವೇದವ ಮಥಿಸಿದಷ್ಟೂ ಭಗವಂತನ ಬಗ್ಗೆ ಜ್ಞಾನ ಅಭಿವೃದ್ಧಿ ಆವ್ತು. ಮುತ್ತೆ – “ಅಹಮೇವ ವೇದಃ” – ವೇದಂಗಳಿಂದ ತಿಳಿಯಲ್ಪಡುವವ° ಆನೊಬ್ಬನೇ ಹೇಳ್ವ ಮುಖ್ಯಾರ್ಥವನ್ನೂ ಇಲ್ಲಿ ಕಂಡುಗೊಂಬಲಕ್ಕು. ಬಹುದೇವತಾ ವಾದವ ಇಲ್ಲಿ ಭಗವಂತ° ತಳ್ಳಿಹಾಕಿದ್ದ°. ಎಂತಕೆ ಹೇಳಿರೆ ಅವನೇ ಆದಿಪುರುಷ°, ಆದಿ ನಾರಾಯಣ°. ಬಾಕಿಪ್ಪದೆಲ್ಲ ಅವನಿಂದ ಉಂಟಾದವು, ಅವನ ವಿಭಿನ್ನಾಂಶಂಗೊ.  ಅವನ ಮೀರಿ ಆರೂ ಎಂತರನ್ನೂ ಮಾಡ್ಳೆ ಕೊಡ್ಳೆ ಇಲ್ಲೆ. ಅವ° ಕೊಟ್ಟದರ ಆರಿಂದಲೂ ಕಸಿವಲೆ ಎಡಿಯ°. ಅವಂಗೆ ತೃಪ್ತಿಯಾಗದ್ದೆ ಬೇರೆ ಯಾವ ದೇವತೆಗಳೂ ತೃಪ್ತಿ ಆವ್ತವಿಲ್ಲೆ. ಅವಂಗೆ ತೃಪ್ತಿ ಆದರೆ ಎಲ್ಲೋರಿಂಗೂ ತೃಪ್ತಿ ಆದಾಂಗೇ.

ಸಮಸ್ತ ವೇದಲ್ಲಿ ಭಗವಂತನ ಹೆಸರುಗಳೇ ಇಪ್ಪದು. ಅರ್ಥಾತ್ ಸರ್ವ ಶಬ್ದವಾಚ್ಯನಾಗಿ ಭಗವಂತ° ವೇದಲ್ಲಿ ಇದ್ದ°. ಈಗ ಇಲ್ಯೊಂದು ಸಹಜ ಕುತೂಹಲ / ಸಂಶಯ ನವಗೆ ಮೂಡುಗು. ವೇದಸೂಕ್ತಂಗೊ ಒಂದೊಂದು ದಿಕ್ಕೆ ಒಂದೊಂದು ದೇವತೆಗಳ ಹೆಸರುಗಳ ಹೇಳುತ್ತು. ಒಂದಿಕ್ಕೆ ಅಗ್ನಿ, ಇನ್ನೊಂದಿಕ್ಕೆ ಇಂದ್ರ, ಮತ್ತೊಂದಿಕ್ಕೆ ಗಣಪತಿ, ಸರಸ್ವತಿ … ಹೀಂಗೆ ಅನೇಕ ದೇವತೆಗಳ ಹೆಸರುಗೊ ಬತ್ತನ್ನೇ!. ಬನ್ನಂಜೆ ಹೇಳ್ತವು – ವೇದಲ್ಲಿ ಬಪ್ಪ ಪ್ರತಿಯೊಂದು ಶಬ್ದವೂ ಭಗವಂತನನ್ನೇ ಹೇಳುವದು, ಪ್ರತಿಯೊಂದು ಕ್ರಿಯೆಯೂ ಹೇಳುವದೂ ಭಗವಂತನನ್ನೇ. ಅದಕ್ಕೆ ಭಗವಂತ° ಹೇಳಿದ್ದ° ‘ಅಭಿದತ್ತೇ ಮಾಂ’ – ಎನ್ನಂದ ಉಂಟಾದ್ದು. “ಆತ್ಮನಃ ಆಕಾಶಃ ಸಂಭೂತಃ” – ಅಹಂಕಾರ ತತ್ವಂದ ಆಕಾಶ ದೇವತೆ – ಗಣಪತಿ ಹುಟ್ಟಿದ°. ಆಕಾಶ ಸೃಷ್ಟಿ ಹೇಳಿರೆ ಇದ್ದ ಅವಕಾಶಲ್ಲಿ (space) ಒಂದು ಆವರಣ (ವಾತಾವರಣ) ಸೃಷ್ಟಿ. ಅದರ ಅಭಿಮಾನಿ ದೇವತೆಯಾಗಿ ಗಣಪತಿ ಹುಟ್ಟಿದ°. ಗಣಪತಿಯೊಳ ಆಕಾಶಲ್ಲಿ ಆಕಾಶಲ್ಲಿ ತುಂಬಿಪ್ಪ ಭಗವಂತ- ಆಕಾಶನಾಮಕನಾಗಿ ಅವತರಿಸಿದ°. ಹೀಂಗೆ ಪ್ರತಿಯೊಂದು ವೇದ ಶ್ಲೋಕವೂ ಅಂತತಃ ಹೇಳುವದು ಭಗವಂತನನ್ನೇ. ವೇದಲ್ಲಿ ಬಪ್ಪ ಪ್ರತಿಯೊಂದು ಶಬ್ದಂಗೊ ಭಗವಂತನನ್ನೇ ಸೂಚಿಸುವದು ಹೇಳ್ವದಕ್ಕೆ ಒಂದು ಉದಾಹರಣೆ – ‘ಅಗ್ನಿ’. ಅ+ಗ+ನಿ = ಅಗ್ನಿ.  ಚಲನೆ ಇಲ್ಲದ್ದ ವಸ್ತುವಿಂಗೆ (ಅಗ) ಚಲನೆ ಕೊಡುವವ° – ಅಗ-ನಿ = ಅಗ್ನಿ. ಭಗವಂತ° ಇಡೀ ವಿಶ್ವಕ್ಕೆ ಚಲನೆ ಕೊಡುವವ°ನಾದ್ದರಿಂದ ಅವ° ‘ಅಗ್ನಿ’.

ಹಾಂಗೇ, ವೇದಲ್ಲಿ ಬಪ್ಪ ಪ್ರತಿಯೊಂದು ಅಕ್ಷರವೂ ಭಗವಂತನನ್ನೇ ಸೂಚಿಸುವದು. ಉದಾಹರಣೆಗೆ ‘ಅಜಃ’. ಇಲ್ಲಿ ಅಜಃ – ಹುಟ್ಟಿಲ್ಲದ್ದವ°, ಅ=ಅನಂತಃ (ಸಾವಿಲ್ಲದ್ದವ°). ಹೀಂಗೆ ಪ್ರತಿಯೊಂದು ಅಕ್ಷರವೂ ಭಗವಂತನ ಕುರುತಾಗಿಯೇ ಸೂಚಿಸುವಂತಾದ್ದು. ಒಟ್ಟಿಲ್ಲಿ ವೇದದ ಅಕ್ಷರಂದ ಭಗವಂತನ ಕಾಂಬದು, ಪದಂದ ಭಗವಂತನ ಕಾಂಬದು, ವಾಕ್ಯಂದ ಭಗವಂತನ ಕಾಂಬದು, ಪ್ರಕರಣಂದ ಭಗವಂತನ ಕಾಂಬದು.., ಹೀಂಗೆ ವೇದವ ಬಿಡುಸಿ ಬಿಡುಸಿ ನೋಡಿರೆ ಮಾಂತ್ರ ಅದು ಅರ್ಥಪೂರ್ಣವಾಗಿ ಗ್ರಾಹ್ಯ ಆವ್ತು. ಇಲ್ಲದ್ರೆ ಅದು ಬರೇ ಲೌಕಿಕ ಕಲ್ಪನೆ ಅಕ್ಕಷ್ಟೆ. ಇವೆಲ್ಲವ  ಸಂಕಲಿಸಿ ಜಗತ್ತಿಂಗೆ ನೀಡಿದವ° – ‘ವೇದಾಂತ-ಕೃತ್’ – ಆ ಭಗವಂತ°,  ಹಾಂಗೇ ವೇದವ ಸಂಪೂರ್ಣವಾಗಿ ತಿಳುದವ° ಆ ಭಗವಂತ° ಒಬ್ಬನೇ – ಅವನೇ ‘ವೇದ-ವಿತ್’ – ವೇದವ ನಿಜವಾಗಿ ತಿಳುದವ°.

ಶ್ಲೋಕ

ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ ।
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋsಕ್ಷರ ಉಚ್ಯತೇ ॥೧೬॥

ಪದವಿಭಾಗ

ದ್ವೌ ಇಮೌ ಪುರುಷೌ ಲೋಕೇ ಕ್ಷರಃ ಚ ಅಕ್ಷರಃ ಏವ ಚ । ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥಃ ಅಕ್ಷರಃ ಉಚ್ಯತೇ ॥

ಅನ್ವಯ

(ಅಸ್ಮಿನ್) ಲೋಕೇ ಕ್ಷರಃ ಅಕ್ಷರಃ ಚ ಏವ ಇಮೌ ದ್ವೌ ಪುರುಷೌ (ಸ್ತಃ), ಸರ್ವಾಣಿ ಭೂತಾನಿ ಕ್ಷರಃ, ಕೂಟಸ್ಥಃ ಚ ಅಕ್ಷರಃ ಉಚ್ಯತೇ ।

ಪ್ರತಿಪದಾರ್ಥ

(ಅಸ್ಮಿನ್) ಲೋಕೇ – ಈ ಜಗತ್ತಿಲ್ಲಿ, ಕ್ಷರಃ – ಚ್ಯುತಿಯಪ್ಪಂತಹ, ಅಕ್ಷರಃ – ಚ್ಯುತಿಯಾಗದಂತಿಪ್ಪಂತಹ, ಚ – ಕೂಡ, ಏವ – ಖಂಡಿತವಾಗಿಯೂ, ಇಮೌ ದ್ವೌ – ಈ ಎರಡು, ಪುರುಷೌ (ಸ್ತಃ) – ಜೀವಿಗೊ ಇದ್ದು, ಸರ್ವಾಣಿ ಭೂತಾನಿ – ಎಲ್ಲ ಬಗೆ ಜೀವಿಗೊ, ಕ್ಷರಃ – ಚ್ಯುತಿಯಪ್ಪಂತಹ, ಕೂಟಸ್ಥಃ – ಏಕತ್ವದಲ್ಲಿಪ್ಪವ°, ಚ – ಕೂಡ, ಅಕ್ಷರಃ – ಚ್ಯುತಿಯಾಗದ್ದಿಪ್ಪವ° (ಹೇದು), ಉಚ್ಯತೇ – ಹೇಳಲ್ಪಡುತ್ತು.

ಅನ್ವಯಾರ್ಥ

ಈ ಜಗತ್ತಿಲ್ಲಿ ಪುರುಷರಲ್ಲಿ ಎರಡು ಬಗೆ ಇದ್ದು. ಎಲ್ಲ ಬಗೆ ಜೀವಿಗೊ (ಈ ಐಹಿಕ ಜಗತ್ತಿಲ್ಲಿ ಎಲ್ಲ ಬಗೆ ಜೀವಿಗೊ) ಕ್ಷರ (ಕ್ಷರಗುಣ), ಅಧ್ಯಾತ್ಮ ಜಗತ್ತಿಲ್ಲಿ ಇಪ್ಪ ಏಕತ್ವಲ್ಲಿಪ್ಪದು ಅಕ್ಷರ.

ತಾತ್ಪರ್ಯ / ವಿವರಣೆ

ಶ್ಲೋಕದ ಮೇಲ್ಮೈ ಅರ್ಥ ನೋಡಿರೆ ಜಗತ್ತಿಲ್ಲಿ ಕ್ಷರ, ಅಕ್ಷರ (ಚ್ಯುತಿಯಪ್ಪಂತಹ, ಚ್ಯುತಿಯಾಗದ್ದಿಪ್ಪಂತಹ) ಹೇದು ಎರಡು ಬಗೆ ವರ್ಗ ಹೇಳಿ ಹೇಳಿದಾಂಗೆ ಆವ್ತಷ್ಟೆ. ಆದರೆ  ಭಗವಂತ° ಇಲ್ಲಿ ಹೇಳ್ತಾ ಇಪ್ಪದು ಈ ಲೌಕಿಕ ಜಗತ್ತಿನ ವಿಷಯವ ಅಲ್ಲ. ಹಾಂಗಾಗಿ ಅವನ ಅಧ್ಯಾತ್ಮಿಕ ದೃಷ್ಟಿಕೋನಲ್ಲಿ ಗೀತಾಶ್ಲೋಕಂಗಳ ಅರ್ಥೈಸೆಕು. ಅಂದರಷ್ಟೇ ಅದರಲ್ಲಿ ಅಡಕವಾಗಿಪ್ಪ ಆಶಯ ಅರ್ಥ ಅಕ್ಕಷ್ಟೆ. ಆ ತತ್ವವ ಲೌಕಿಕ ಜೀವನಲ್ಲಿ ಅಳವಡಿಸಿಗೊಂಬದೇ ಜೀವಿಯ ಸಾಮರ್ಥ್ಯ. ಮೋಕ್ಷಕ್ಕೆ ಮಾರ್ಗ. ಭಗವಂತ° ಹೇಳುತ್ತ° – ಲೋಕಲ್ಲಿ ಎರಡು ಬಗೆಯ ಪುರುಷರು. ಒಂದು ಕ್ಷರಪುರುಷ ವರ್ಗ ಮತ್ತೆ ಇನ್ನೊಂದು ಅಕ್ಷರಪುರುಷ ವರ್ಗ. ಚ್ಯುತಿಯಪ್ಪಂತಹ / ಕ್ಷಯ ಅಪ್ಪಂತಹ ಬ್ರಹ್ಮಾದಿ ಸಮಸ್ತ ಜೀವಂಗೊ ಕ್ಷರಪುರುಷರು. ಆಧ್ಯಾತ್ಮಿಕ ಜಗತ್ತಿಲ್ಲಿ ಇಪ್ಪಂತದ್ದು ಅಕ್ಷರ. ಭಗವಂತನ ಹೇಳಿಕೆ ಪ್ರಕಾರ, ಜಗತ್ತಿಲ್ಲಿ ಜೀವಿಗಳಲ್ಲಿ ಎರಡು ವರ್ಗಂಗೊ. ಈ ಲೋಕಲ್ಲಿ ಮನಸ್ಸು ಮತ್ತೆ ಪಂಚೇಂದ್ರಿಯಂಗಳೊಟ್ಟಿಂಗೆ ಸೆಣಸಾಡುವ ಐಹಿಕ ಶರೀರವ ಧರಿಸಿಪ್ಪ ಜೀವಿಗೊ ಒಂದು ವರ್ಗ. ಈ ಶರೀರ ಬದಲಾವ್ತ ಇರುತ್ತು. ಜೀವಿಯು ಬದ್ಧನಾಗಿಪ್ಪವರೇಂಗೆ ಜಡವಸ್ತುವಿನೊಡನೆ ಸಂಬಂಧಂದಲಾಗಿ ಅವನ ದೇಹವು ಬದಲಾವಣೆ ಹೊಂದುತ್ತಿರುತ್ತು. ಜಡವಸ್ತುಗಳೂ ಬದಲಾವ್ತ ಇರುತ್ತು. ಹಾಂಗಾಗಿ ಜೀವಿಯೂ ಬದಲಾವ್ತ ಇಪ್ಪ ಹಾಂಗೆ ಕಾಣುತ್ತು. ಅಕೇರಿಗೆ ಒಂದಿನ ಅದು ನಾಶ (ಕ್ಷರ) ಅಪ್ಪಂತಾದ್ದು. ಐಹಿಕ ಜಗತ್ತಿಲ್ಲಿ ಜೀವಿಯು ಆರು ಬದಲಾವಣೆಗಳ ಹೊಂದುತ್ತ° – ಹುಟ್ಟು, ಬೆಳವಣಿಗೆ, ಕಾಲಾವಧಿ, ಸಂತಾನೋತ್ಪತ್ತಿ, ಕ್ಷಯ, ಕಣ್ಮರೆ. ಇವು ಐಹಿಕ ಶರೀರದ ಬದಲಾವಣೆಗೊ. ಆದರೆ ಆಧ್ಯಾತ್ಮಿಕ ಜಗತ್ತಿಲ್ಲಿ ದೇಹವು ಜಡವಸ್ತುವಿಂದ ಅಪ್ಪ್ಂತಾದ್ದಲ್ಲ. ಹಾಂಗಾಗಿ ಅಲ್ಲಿ ಅದಕ್ಕೆ ಬದಲಾವಣೆ ಇಲ್ಲೆ. ಅದಕ್ಕೆ ಮುಪ್ಪಿಲ್ಲೆ, ಸಾವಿಲ್ಲೆ. ಅಲ್ಲಿ ಎಲ್ಲವೂ ಏಕತೆ. ಪ್ರಪಥಮವಾಗಿ ಸೃಷ್ಟಿಯಾದ ಚತುರ್ಮುಖ ಬ್ರಹ್ಮನಿಂದ ತೊಡಗಿ ಸಣ್ಣ ಎರುಗು ವಾ ಅತೀ ಸಣ್ಣ ಇನ್ಯಾವುದೋ ಇನ್ನೊಂದು ವರೇಂಗೆ ಜಡವಸ್ತುವಿನೊಟ್ಟಿಂಗೆ ಸಂಪರ್ಕ ಪಡದ ಏವುದೇ ಜೀವಿ ತನ್ನ ದೇಹ ಬದಲಾವಣೆಯ ಕಾಣುತ್ತ°. ಅವೆಲ್ಲರೂ ಕ್ಷರರು. ಆದರೆ ಆಧ್ಯಾತ್ಮಿಕ ಜಗತ್ತಿಲ್ಲಿ ಅವೆಲ್ಲರೂ ಏಕತ್ವಲ್ಲಿ ಮುಕ್ತರಾದವು.

ವಾಗ್ಮಿ ಬನ್ನಂಜೆಯವರ ವ್ಯಾಖ್ಯಾನವ ಗಮನಿಸಿರೆ –   ಲೋಕಲ್ಲಿ ಎರಡು ಬಗೆಯ ಪುರುಷರು. ಒಂದು ಕ್ಷರಪುರುಷ ಮತ್ತೆ ಇನ್ನೊಂದು ಅಕ್ಷರಪುರುಷ. (ಇಲ್ಲಿ ಪುರುಷ ಹೇಳಿರೆ ಗೆಂಡು ವರ್ಗ ಹೇಳಿ ಅರ್ಥ ಅಲ್ಲ).  ಚ್ಯುತಿಯಪ್ಪಂತಹ / ಕ್ಷಯ ಅಪ್ಪಂತಹ ಬ್ರಹ್ಮಾದಿ ಸಮಸ್ತ ಜೀವಂಗೊ ಕ್ಷರಪುರುಷರು. ಈ ಚರಾಚರದ ಕೂಟವ ಕೂಡಿಸಿದ ಚಿತ್-ಪ್ರಕೃತಿ ಅಕ್ಷರೆ. ಒಂದಿನ ಬಿದ್ದುಹೋಪ ಶರೀರ ಇಪ್ಪವು ಕ್ಷರಪುರುಷರು, ಬ್ರಹ್ಮಾದಿ ಜೀವರೂ ಕೂಡ ಕ್ಷರಪುರುಷರು. ಬ್ರಹ್ಮಾದಿ ಸಮಸ್ತ ದೇವತೆಗಳೂ ಕೂಡ ಮೋಕ್ಷವ ಸೇರುವಾಗ ತಮ್ಮ ಶರೀರ ಸಮೇತ ಹೋಪಾಂಗೆ ಇಲ್ಲೆ. ಚತುರ್ಮುಖ ಬ್ರಹ್ಮನ ಆಯಸ್ಸು ಒಂದು ಕಲ್ಪ (31,104 ಸಾವಿರ ಕೋಟಿ ಮಾನವ ವರ್ಷ). ಅಷ್ಟಪ್ಪಗ ಅವನ ಶರೀರ ಕೂಡ ಭಸ್ಮ ಆವ್ತು.  ವಾಯುರನಿಲಮ್ ಅಮೃತಮ್ ಅಥೇದಂ ಭಸ್ಮಾಂತಂ ಶರೀರಂ ॥ (ಈಶೋಪನಿಷತ್) – ಭಗವಂತಂಗೆ ಅಧಿಷ್ಠಾನವಾಗಿ ನಿಂದಿಪ್ಪ ಪ್ರಾಣದೇವರು ಅಮೃತರು, ಅಂದರೂ ಒಂದು ದಿನ ಅವರ ದೇಹ ಭಸ್ಮ ಅಪ್ಪಲೇ ಬೇಕು. ಹೀಂಗೆ ಸಮಸ್ತ ದೇವತೆಗೊ, ಜೀವ ಜಾತಂಗೊ – ‘ಕ್ಷರಪುರುಷರು’.

ನಾಶ ಇಲ್ಲದ್ದ ಜ್ಞಾನಾನಂದಮಯ ಸ್ವರೂಪಭೂತವಾದ ದೇಹವುಳ್ಳ ಶ್ರೀಲಕ್ಷ್ಮಿ ಅಕ್ಷರಪುರುಷೆ. ಸಮಸ್ತ ಕ್ಷರಪುರುಷರೂ ಮೋಕ್ಷಲ್ಲಿ ಅಕ್ಷರರಾವುತ್ತವು. ಆದರೆ ಲಕ್ಷ್ಮಿ ಸದಾ ಅಕ್ಷರೆ. ಇಲ್ಲಿ ಲಕ್ಷ್ಮಿಯ ‘ಕೂಟಸ್ಥೆ’ – ಏಕತ್ವಲ್ಲಿಪ್ಪೋಳು ಹೇಳಿ ವರ್ಣಿಸಲ್ಪಟ್ಟಿದು. ಕೂಟ ಹೇಳಿರೆ ಕೂಡುತ್ತದು. ಜೀವ ಮತ್ತೆ ಶರೀರದ ಕೂಡುವಿಕೆಗೆ ಕಾರಣಳಾದೋಳು ಅಬ್ಬೆ – ಶ್ರೀಲಕ್ಷ್ಮಿ. ಸದಾ ನಿರ್ಲಿಪ್ತೆಯಾಗಿ, ಯಾವುದೇ ಲೇಪ ಇಲ್ಲದ್ದೆ, ಪ್ರಪಂಚವ ವ್ಯವಸ್ಥೆಗೊಳುಸಿದ ಶಕ್ತಿ – ಜಗನ್ಮಾತೆ ಶ್ರೀಲಕ್ಷ್ಮಿ. ಅದು ಅಕ್ಷರಪುರುಷೆ.

ಶ್ಲೋಕ

ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ ।
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ ॥೧೭॥

ಪದವಿಭಾಗ

ಉತ್ತಮಃ ಪುರುಷಃ ತು ಅನ್ಯಃ ಪರಮ್-ಆತ್ಮಾ ಇತಿ ಉದಾಹೃತಃ । ಯಃ ಲೋಕ-ತ್ರಯಮ್ ಆವಿಶ್ಯ ಬಿಭರ್ತಿ ಅವ್ಯಯಃ ಈಶ್ವರಃ ॥

ಅನ್ವಯ

ಉತ್ತಮಃ ಪುರುಷಃ ತು ಅನ್ಯಃ (ಅಸ್ತಿ),  ಯಃ ಅವ್ಯಯಃ ಈಶ್ವರಃ ಲೋಕ-ತ್ರಯಮ್ ಆವಿಶ್ಯ (ತತ್) ಬಿಭರ್ತಿ, (ಸಃ) ಪರಂ-ಆತ್ಮಾ ಇತಿ ಉದಾಹೃತಃ ।

[ಉತ್ತಮಃ ಪುರುಷಃ ತು ಅನ್ಯಃ (ಅಸ್ತಿ) ಯಃ ಲೋಕ-ತ್ರಯಮ್ ಅವಿಶ್ಯ (ತತ್) ಬಿಭರ್ತಿ, (ಸಃ) ಅವ್ಯಯಃ, ಈಶ್ವರಃ, ಪರಮ್-ಆತ್ಮಾ ಇತಿ ಉದಾಹೃತಃ ॥ – ಈ ರೀತಿಯಾಗಿಯೂ ಅರ್ಥೈಸಲಕ್ಕು]

ಪ್ರತಿಪದಾರ್ಥ

ಉತ್ತಮಃ ಪುರುಷಃ ತು – ಅತ್ಯುತ್ತಮ ಪುರುಷ°ನಾದರೋ, ಅನ್ಯಃ (ಅಸ್ತಿ) – ಇನ್ನೊಬ್ಬ° ಇದ್ದ°.  ಯಃ – ಯಾವಾತ°, ಅವ್ಯಯಃ – ಅವ್ಯಯ°, ಈಶ್ವರಃ – ಪ್ರಭು / ಒಡೆಯ°/ಕಾಪಾಡುವವ°, ಲೋಕತ್ರಯಮ್ – ಮೂರ್ಲೋಕವ, ಆವಿಶ್ಯ – ಪ್ರವೇಶಿಸಿ, (ತತ್) ಬಿಭರ್ತಿ – ಪೋಷಿಸುತ್ತನೋ, (ಸಃ – ಅವ°), ಪರಂ-ಆತ್ಮಾ ಇತಿ – ಪರಮನಾದ ಆತ್ಮ° ಹೇದು, ಉದಾಹೃತಃ – ಹೇಳಲಾಯ್ದು.

ಅನ್ವಯಾರ್ಥ

ಅತ್ಯುತ್ತಮ ಪುರುಷ°ನಾದರೋ ಇನ್ನೊಬ್ಬ° ಇದ್ದ°, ಅವ° ಅವ್ಯಯ°(ಅವಿನಾಶಿ), ಜಗದೊಡೆಯ°, ಮೂರ್ಲೋಕವನ್ನೂ ಪ್ರವೇಶಿಸಿ ಅದರ ಪಾಲುಸುವವ°, ಪರಮಾತ್ಮ° (ಪರಮ° – ಅತೀ ಶ್ರೇಷ್ಠ°) ಹೇದು ಹೇಳಲಾಯ್ದು.

ತಾತ್ಪರ್ಯ / ವಿವರಣೆ

ಕ್ಷರ, ಅಕ್ಷರ ಈ ಎರಡಕ್ಕೂ ಮಿಗಿಲಾಗಿ ಇನ್ನೊಬ್ಬ° ಇದ್ದ°. ಅವನ ಪರಮಾತ್ಮ° ಹೇದು ಹೇಳುವದು. ಅವ° ಸ್ವತಃ ಅವಿನಾಶಿ, ಮೂರ್ಲೋಕವನ್ನೂ ಪ್ರವೇಶಿಸಿ, ಪುರುಷೋತ್ತಮನಾಗಿ, ಜಗದೀಶನಾಗಿ ಇಡೀ ಬ್ರಹಾಂಡವ ಪಾಲುಸುವವ°. ಇಲ್ಲಿ ಮೂರ್ಲೋಕ ಹೇಳಿರೆ ಬರೇ ಮೂರು ಲೋಕ ಹೇದು ಅರ್ಥ ಅಲ್ಲ. ಭೂಮಿ, ಭೂಮಿಂದ ಕೆಳ ಇಪ್ಪ ಲೋಕಂಗೊ, ಭೂಮಿಂದ ಮೇಗಂತಾಗಿ ಇಪ್ಪ ಲೋಕಂಗ ಹೇದು ಮೂರ್ಲೋಕ ಹೇಳಿ ಸಮಸ್ತ ಹದಿನಾಲ್ಕು ಲೋಕವ ಒಳಗೊಂಡ ಈ  ಇಡೀ ಬ್ರಹ್ಮಾಂಡವನ್ನೇ ಹೇಳಿದ್ದದು. ಇಡೀ ಬ್ರಹಾಂಡವನ್ನೇ ವ್ಯಾಪಿಸಿ ಅದರ ಪಾಲುಸುವ ಈಶ್ವರ° – ಆ ಪುರುಷೋತ್ತಮನಾದ ಪರಮಾತ್ಮನಾದ ಭಗವಂತ°.

ಶ್ಲೋಕ

ಯಸ್ಮಾತ್ಕ್ಷರಮತೀತೋsಹಮ್ ಅಕ್ಷರಾದಪಿ ಚೋತ್ತಮಃ ।
ಅತೋsಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ॥೧೮॥

ಪದವಿಭಾಗ

ಯಸ್ಮಾತ್ ಕ್ಷರಮ್ ಅತೀತಃ ಅಹಮ್ ಅಕ್ಷರಾತ್ ಅಪಿ ಚ ಉತ್ತಮಃ । ಅತಃ ಅಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ॥

ಅನ್ವಯ

ಯಸ್ಮಾತ್ ಅಹಂ ಕ್ಷರಮ್ ಅತೀತಃ, ಅಕ್ಷರಾತ್ ಅಪಿ ಚ ಉತ್ತಮಃ (ಅಸ್ಮಿ), ಅತಃ (ಅಹಮ್) ಲೋಕೇ ವೇದೇ ಚ ಪುರುಷೋತ್ತಮಃ ಇತಿ ಪ್ರಥಿತಃ ಅಸ್ಮಿ ॥

ಪ್ರತಿಪದಾರ್ಥ

ಯಸ್ಮಾತ್ – ಏವುದರಿಂದ / ಏವ ರೀತಿಂದ, ಅಹಮ್ – ಆನು, ಕ್ಷರಮ್ – ನಾಶವಪ್ಪದರ, ಅತೀತಃ – ಅತೀತ°, ಅಕ್ಷರಾತ್ ಅಪಿ – ಚ್ಯುತಿ ಇಲ್ಲದ್ದವರಿಂದಲೂ,  ಚ – ಕೂಡ, ಉತ್ತಮಃ (ಅಸ್ಮಿ) – ಅತಿ ಉತ್ತಮನಾಗಿದ್ದೆನೊ, ಅತಃ – ಅದೇ ರೀತಿಲಿ, (ಅಹಮ್ – ಆನು), ಲೋಕೇ – ಜಗತ್ತಿಲ್ಲಿ, ವೇದೇ ಚ – ವೇದ ಸಾಹಿತ್ಯಲ್ಲಿಯೂ ಕೂಡ, ಪುರುಷೋತ್ತಮಃ ಇತಿ – ಪರಮ ಪುರುಷ° ಹೇದು, ಪ್ರಥಿತಃ ಅಸ್ಮಿ  – ಪ್ರಾರ್ಥಿಸಲ್ಪಟ್ಟವನಾಗಿದ್ದೆ / ಕೊಂಡಾಲ್ಪಟ್ಟವನಾಗಿದ್ದೆ/ಪ್ರಸಿದ್ಧನಾಗಿದ್ದೆ/ತಿಳುದವನಾಗಿದ್ದೆ.

ಅನ್ವಯಾರ್ಥ

ಜಗತ್ತಿಲ್ಲಿ ಆನು ಏವ ರೀತಿಲಿ ಕ್ಷರ-ಅಕ್ಷರಾತೀತಂದ ಉತ್ತಮನಾಗಿದ್ದೆನೋ ಅದೇ ರೀತಿಲಿ ವೇದ ಸಾಹಿತ್ಯಲ್ಲಿಯೂ (ವೇದಲ್ಲಿಯೂ) ಪರಮಪುರುಷ° (ಪುರುಷೋತ್ತಮ) ಹೇದು ತಿಳುದವನಾಗಿದ್ದೆ.

ತಾತ್ಪರ್ಯ / ವಿವರಣೆ

ದೇವೋತ್ತಮ ಪರಮ ಪುರುಷನಾದ ಆ ಭಗವಂತನ ಬದ್ಧ ಆತ್ಮನಾಗಲೀ, ಮುಕ್ತ ಆತ್ಮನಾಗಲೀ ಮೀರ್ಲೆ ಸಾಧ್ಯ ಇಲ್ಲೆ. ಅವ° ಕ್ಷರಾಕ್ಷರಾತೀತರಲ್ಲಿ ಶ್ರೇಷ್ಠ°. ವೇದಂಗಳಲ್ಲಿಯೂ ಅವನೇ ಪುರುಷೋತ್ತಮ° ಹೇಳಿ ಹೇಳಲ್ಪಟ್ಟಿದು. ಜೀವಾತ್ಮನಲ್ಲಿ ಪರಮಾತ್ಮ ಇಪ್ಪದಾದರೂ, ಪರಮಾತ್ಮನಲ್ಲಿ ಜೀವಾತ್ಮ ಮುಕ್ತ ಸ್ಥಿತಿಲಿ ಸೇರುತ್ತನಾದರೂ ಜೀವಾತ್ಮನೂ ಪರಮಾತ್ಮನೂ ಒಂದೇ ಅಲ್ಲ ಹೇಳ್ವದರ ಇಲ್ಲಿ ಭಗವಂತ° ವಿವರಿಸಿದ್ದ°. ಭಗವಂತ° ಮದಲಾಣ ಶ್ಲೋಕಲ್ಲಿ ಕ್ಷರಾಕ್ಷರಂಗಳಿಂದ ಅತೀತನಾಗಿಪ್ಪವ° ಪುರುಷೋತ್ತಮ° ಹೇಳಿ ಹೇಳಿದ್ದ°. ಇಲ್ಲಿ ನೇರವಾಗಿ “ಆ ಬೇರೆಯೇ ಆದ ಪುರುಷೋತ್ತಮ° ಆನೇ” ಹೇಳಿ ಹೇಳುತ್ತ°. ಕ್ಷರಂದ ಅತೀತ° ಮತ್ತೆ ಅಕ್ಷರಂದ ಉತ್ತಮ° – ‘ಪುರುಷೋತ್ತಮ’ನಾದ ಭಗವಂತ°. ಕ್ಷರಪುರುಷನ ಅಸ್ತಿತ್ವದ ವ್ಯಾಪ್ತಿ ಈ ಬ್ರಹ್ಮಾಂಡದ ಒಳ. ಆದರೆ ಲಕ್ಷ್ಮೀ-ನಾರಾಯಣರು ಈ ಬ್ರಹಾಂಡವ ಮೀರು ನಿಂದವು. ಇದನ್ನೇ ಇಲ್ಲಿ ‘ಅತೀತ’ ಹೇಳಿ ಹೇಳಿದ್ದದು. ಭಗವಂತ ಅಕ್ಷರೆಯಾದ ಲಕ್ಶ್ಮಿಗಿಂತಲೂ ಉತ್ತಮ. ಈ ಶ್ಲೋಕಲ್ಲಿ ಅಪಿ, ಚ ಹೇಳ್ವ ಪದಂಗಳ ಮೂಲಕ ಭಗವಂತನ ಸರ್ವಶ್ರೇಷ್ಠತೆಯ ಎತ್ತಿ ತೋರ್ಸಿದ್ದ. ಅವನಿಂದ ಶ್ರೇಷ್ಠವಾದ್ದು ಇನ್ನೊಂದಿಲ್ಲೆ.

‘ಪುರುಷೋತ್ತಮ’ ಪದದ ಎಲ್ಲ ಮುಖದ ಅರ್ಥ (ಸಂಪೂರ್ಣ ಅರ್ಥ) ಕೇವಲ ಭಗವಂತನಲ್ಲಿ ಮಾತ್ರ ಅನ್ವಯವಾವ್ತದು. ಭಗವಂತ° ಹೇಳ್ತ – ಲೋಕಲ್ಲಿ ಮತ್ತು ವೇದಲ್ಲಿ ಪುರುಷೋತ್ತಮ ಹೇದು ದೆನಿಗೊಂಡದು ಎನ್ನನ್ನೇ. ಇಲ್ಲಿ ‘ಲೋಕ’ ಹೇದು ಹೇಳಿದ್ದದು ಲೌಕಿಕ ಲೋಕವ ಅಲ್ಲ, ಬದಲಾಗಿ ಪೌರುಷೇಯವಾದ ಪುರಾಣ ಗ್ರಂಥಂಗಳ – ರಾಮಾಯಣ, ಮಹಾಭಾರತ, ಪುರಾಣ ಇತ್ಯಾದಿ. ಹೀಂಗೆ ‘ಪುರುಷೋತ್ತಮ’ ಹೇಳ್ವದು ಪರಮ ಮುಖ್ಯವಾಗಿ ಕೇವಲ ಭಗವಂತಂಗೆ ಮಾಂತ್ರ ಅನ್ವಯ ಅಪ್ಪದು ಹೇದು ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದದು.

ಶ್ಲೋಕ

ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್ ।
ಸ ಸರ್ವವಿದ್ಭಜತಿ ಮಾಂ ಸರ್ವಭಾವೇನ ಭಾರತ ॥೧೯॥

ಪದವಿಭಾಗ

ಯಃ ಮಾಮ್ ಏವಂ ಅಸಮ್ಮೂಢಃ ಜಾನಾತಿ ಪುರುಷೋತ್ತಮಮ್ । ಸಃ ಸರ್ವ-ವಿತ್ ಭಜತಿ ಮಾಮ್ ಸರ್ವ-ಭಾವೇನ ಭಾರತ ॥

ಅನ್ವಯ

ಹೇ ಭಾರತ!, ಯಃ ಅಸಮ್ಮೂಢಃ ಮಾಂ ಪುರುಷೋತ್ತಮಮ್ ಏವಂ ಜಾನಾತಿ, ಸಃ ಸರ್ವ-ವಿತ್ (ಭೂತ್ವಾ) ಮಾಂ ಸರ್ವ-ಭಾವೇನ ಭಜತಿ ।

ಪ್ರತಿಪದಾರ್ಥ

ಹೇ ಭಾರತ!, ಏ ಭರತವಂಶ ಶ್ರೇಷ್ಠನಾದ ಅರ್ಜುನ!, ಯಃ – ಯಾವಾತ°, ಅಸಮ್ಮೂಢಃ – ಸಂದೇಹ ಇಲ್ಲದ್ದವ°, ಮಾಮ್ – ಎನ್ನ, ಪುರುಷೋತ್ತಮಮ್ ಏವಮ್ – ದೇವೋತ್ತಮ ಪರಮ ಪುರುಷ° ಹೇದು ಈ ರೀತಿಯಾಗಿ, ಜಾನಾತಿ – ತಿಳಿತ್ತನೋ, ಸಃ – ಅವ°, ಸರ್ವ-ವಿತ್ (ಭೂತ್ವಾ) – ಸರ್ವಜ್ಞನಾಗಿ,   ಮಾಮ್ – ಎನ್ನ / ಎನಗೆ, ಸರ್ವ-ಭಾವೇನ – ಎಲ್ಲ ರೀತಿಲಿ, ಭಜತಿ – ಭಕ್ತಿಸೇವೆಯ ಸಲ್ಲುಸುತ್ತ°

ಅನ್ವಯಾರ್ಥ

ಏ ಭರತವಂಶ ಶ್ರೇಷ್ಠನಾದ ಅರ್ಜುನ!, ಆರು ಎನ್ನ ಸಂದೇಹವಿಲ್ಲದ್ದೆ ಪುರುಷೋತ್ತಮ ಹೇದು ತಿಳಿತ್ತನೋ ಅವ° ಸರ್ವವನ್ನೂ ತಿಳುದ ಸರ್ವಜ್ಞನಾಗಿ ಎನಗೆ ಎಲ್ಲ ರೀತಿಯ ಭಕ್ತಿಸೇವೆಯ ಸಲ್ಲುಸುತ್ತ°.

ತಾತ್ಪರ್ಯ / ವಿವರಣೆ

ಭಗವಂತನ ನಿಸ್ಸಂದೇಹವಾಗಿ ‘ಪುರುಷೋತ್ತಮ’ ಹೇದು ಜ್ಞಾನಪೂರ್ವಕವಾಗಿ ಅರ್ಥೈಸಿಗೊಂಡವ° ನಿಜವಾದ ಸರ್ವಜ್ಞ°. ಅವ° ಭಗವಂತನ ಎಲ್ಲ ರೀತಿಲಿಯೂ ಸರ್ವೋತ್ತಮ° ಹೇಳಿ ತಿಳಿದಿರುತ್ತ°. ಯಾವಾತ° ಭಗವಂತನ ಪರಿಪೂರ್ಣವಾಗಿ ‘ಪುರುಷೋತ್ತಮ°’ ಹೇದು ತಿಳಿದಿರುತ್ತನೊ°, ಅವ° ಮತ್ತೆ ಕಾಲವಿಳಂಬ ಮಾಡದ್ದೆ, ಊಹಾತ್ಮಕ ಅನ್ಯ ಚಿಂತನೆಲಿ ತೊಡಗದ್ದೆ, ನೇರವಾಗಿ ಭಗವಂತನ  ಭಕ್ತಿಸೇವೆಯ ಉಪಾಸನೆ ಮಾಡ್ಳೆ ತೊಡಗುತ್ತ°.

ಭಗವಂತ° ಇಲ್ಲಿ ಭಗವಂತನ ವಿಚಾರವ ತಿಳಿವದರಿಂದ ಎಂತ ಲಾಭ ಹೇಳ್ತ ಸಂದೇಹ ಇಪ್ಪವಕ್ಕೆ ಉತ್ತರಿಸಿದ್ದ°. ಭಗವಂತ° ಹೇಳ್ತ° – “ಯಃ ಅಸಮ್ಮೂಢಃ ಮಾಂ ಪುರುಷೋತ್ತಮಮ್ ಏವಂ ಜಾನಾತಿ” – ಯಾವತ° ಈ ರೀತಿಯಾಗಿ (ಭಗವಂತ° ಕ್ಷರಾಕ್ಷರತೀತ ಉತ್ತಮ°, ಪುರುಷೋತ್ತಮ° ಹೇದು) ಯೇವ ಸಂಶಯವೂ ಇಲ್ಲದ್ದೆ (ನಿಸ್ಸಂದೇಹವಾಗಿ) ತಿಳಿತ್ತನೋ, “ಸಃ ಸರ್ವ-ವಿತ್ (ಭೂತ್ವಾ) ಮಾಂ ಸರ್ವ-ಭಾವೇನ ಭಜತಿ” – ಅವ° ಸ್ವಚ್ಛಮನಸ್ಸುಳ್ಳವನಾಗಿ, ನಿರ್ಮೋಹನಾಗಿ, ನಿರಹಂಕಾರನಾಗಿ ಸರ್ವಜ್ಞನೆನುಸಿ ಎನ್ನನ್ನೇ ಸರ್ವಸ್ವ ಹೇದು ನಂಬಿ ಎನ್ನ ಪ್ರೀತಿಗೋಸ್ಕರ ಭಕ್ತಿಸೇವೆಲಿ ನಿರತನಾವುತ್ತ°. ನವಗೆ ಭಗವಂತನ ಅಸ್ತಿತ್ವ ಅರ್ಥ ಆಯೇಕ್ಕಾರೆ, ಮದಾಲು, ಜಡಕ್ಕಿಂತ ಭಿನ್ನವಾದ ‘ಆನು’ ಹೇಳ್ವ ಚೇತನ ಈ ದೇಹಲ್ಲಿ ಇದ್ದು ಹೇಳ್ವದರ ಅರ್ಥಮಾಡಿಗೊಳ್ಳೆಕು. ಹೀಂಗೆ ಆತ್ಮಸಾಕ್ಷಾತ್ಕಾರವಾದ ಮತ್ತೆ ಭಗವಂತನ ಬಿಂಬ ಸಾಕ್ಷಾತ್ಕಾರ ಆವ್ತು. ಆರು ಭಗವಂತನ ತಿಳಿತ್ತನೋ ಅವಂಗೆ ಎಲ್ಲವನ್ನೂ ಯಥಾರ್ಥವಾಗಿ ತಿಳಿವಲೆ ಎಡಿಗು. ಅಂತವು ನಿಜವಾದ ಜ್ಞಾನಿ ಆವ್ತವು. ಹೀಂಗೆ ಬದುಕುವಾಗ ನಮ್ಮ ಲ್ಲಿ ದೇವರ ಮೇಗಾಣ ಅಚಲ ಭಕ್ತಿ ಸ್ಥಿರವಾವ್ತು. ಜ್ಞಾನಿ ಎನಿಸಿಗೊಂಡವಂಗೆ ತನ್ನ ಸರ್ವಸ್ವ ಹೋದರೂ ‘ಅದು ಭಗವಂತನ ಕರುಣೆ, ಭಗವಂತ° ಒಬ್ಬನೇ ನಿಜವಾದ ಸರ್ವಸ್ವ’ ಹೇಳ್ವದರ ಮನಗಾಣುತ್ತ°.

ಅಜ್ಞಾನಿಗಳಲ್ಲಿ ಈ ದೃಢಭಕ್ತಿ ಇರ. ಈ ರೀತಿ ದೃಢಭಕ್ತಿ ಮೂಡೇಕ್ಕಾರೆ ನಾವು ‘ಭಾರತ’ ಆಯೇಕು. ನಿರಂತರ ಜ್ಞಾನ ತೃಷೆ, ಜ್ಞಾನಿಗಳಲ್ಲಿ ಭಕ್ತಿ, ಭಗವದ್ ಭಕ್ತರಲ್ಲೇ ಹಿರಿಯರಾದ ಪ್ರಾಣದೇವರಲ್ಲಿ ಭಕ್ತಿ – ನಮ್ಮ ‘ಭಾರತ’ರನ್ನಾಗಿ ಮಾಡುಗು.

ಶ್ಲೋಕ

ಇತಿ ಗುಹ್ಯತಮಂ ಶಾಸ್ತ್ರಮ್ ಇದಮುಕ್ತಂ ಮಯಾನಘ ।
ಏತದ್ ಬುದ್ಧ್ವಾ ಬುದ್ದಿಮಾನ್ ಸ್ಯಾತ್ ಕೃತಕೃತ್ಯಃ ಚ ಭಾರತ ॥೨೦॥

ಪದವಿಭಾಗ

ಇತಿ ಗುಹ್ಯತಮಂ ಶಾಸ್ತ್ರಮ್ ಇದಮ್ ಉಕ್ತಂ ಮಯಾ ಅನಘ । ಏತತ್ ಬುದ್ಧ್ವಾ ಬುದ್ಧಿಮಾನ್ ಸ್ಯಾತ್ ಕೃತಕೃತ್ಯಃ ಚ ಭಾರತ ॥

ಅನ್ವಯ

ಹೇ ಅನಘ!, ಇತಿ ಗುಹ್ಯತಮಮ್ ಇದಂ ಶಾಸ್ತ್ರಂ ಮಯಾ ಉಕ್ತಮ್ । ಹೇ ಭಾರತ!, ಏತತ್ ಬುದ್ಧ್ವಾ (ಜೀವಃ) ಬುದ್ಧಿಮಾನ್ ಕೃತಕೃತ್ಯಃ ಚ ಸ್ಯಾತ್ ।

ಪ್ರತಿಪದಾರ್ಥ

ಹೇ ಅನಘ ! – ಏ ಪಾಪರಹಿತನೇ!, ಇತಿ ಗುಹ್ಯತಮಮ್ – ಹೀಂಗೆ ಅತಿ ರಹಸ್ಯವಾದ, ಇದಮ್ ಶಾಸ್ತ್ರಮ್ – ಈ ಅಪೌರುಷೇಯ ಧರ್ಮಶಾಸ್ತ್ರವ, ಮಯಾ ಉಕ್ತಮ್ – ಎನ್ನಂದ ಹೇಳಲ್ಪಟ್ಟತ್ತು, ಹೇ ಭಾರತ! – ಏ ಭರತವಂಶಜನಾದ ಅರ್ಜುನ!, ಏತತ್ ಬುದ್ಧ್ವಾ – ಇದರ ತಿಳುದು, (ಜೀವಃ – ಜೀವಿಯು), ಬುದ್ಧಿಮಾನ್ – ಬುದ್ಧಿವಂತ°, ಕೃತಕೃತ್ಯಃ – ತನ್ನ ಪ್ರಯತ್ನಲ್ಲಿ ಅತ್ಯಂತ ಪರಿಪೂರ್ಣ°, ಚ ಸ್ಯಾತ್ – ಕೂಡ ಆಯೇಕು.

ಅನ್ವಯಾರ್ಥ

ಏ ಪಾಪರಹಿತನಾದ, ಭರತವಂಶಜನಾದ ಅರ್ಜುನ°!,  ಹೀಂಗೆ ಈ ಅತೀ ರಹಸ್ಯವಾದ ಅಪೌರುಷೇಯ ಧರ್ಮಶಾಸ್ತ್ರದ ವಿಷಯಂಗಳ ಎನ್ನಂದ ಹೇಳಲ್ಪಟ್ಟತ್ತು. ಇದರ ಸರಿಯಾಗಿ ತಿಳುದ ಜೀವಿಯು ನಿಜವಾದ ಬುದ್ಧಿವಂತನಾಗಿ ತನ್ನ ಪ್ರಯತ್ನಲ್ಲಿ ಪರಿಪೂರ್ಣನಾಯೇಕು.

ತಾತ್ಪರ್ಯ / ವಿವರಣೆ

ಇದು (ಇಲ್ಲಿ ಈ ವರೇಂಗೆ ಈ ಅಧ್ಯಾಯಲ್ಲಿ ಹೇಳಿದ್ದದು) ಎಲ್ಲ ಅಪೌರುಷೇಯ ಧರ್ಮಗ್ರಂಥಂಗಳ ಸಾರ (ತಿರುಳು) ಎಂಬುದರ ಭಗವಂತ° ಇಲ್ಲಿ ಹೇಳಿದ್ದ°. ದೇವೋತ್ತಮ ಪರಮ ಪುರುಷ° ಭಗವಂತ° ಭಗವಂತ° ಹೇಳಿದ ಈ ಪ್ರಕಾರ ಇದರ ಅರ್ಥ ಮಾಡಿಗೊಳ್ಳೆಕು. ಅಂಬಗ ಮನುಷ್ಯ° ದಿವ್ಯಜ್ಞಾನಲ್ಲಿ ಪರಿಣತನಪ್ಪಲೆ, ತನ್ನ ಪ್ರಯತ್ನಲ್ಲಿ ಪರಿಪೂರ್ಣನಪ್ಪಲೆ ಎಡಿಗಾವ್ತ°. ಅರ್ಥಾತ್., ಭಗವಂತ° ಇಲ್ಲಿ ಹೇಳಿದ ಅತೀ ರಹಸ್ಯವಾದ ನಿಜವಿಷಯವ ಸರಿಯಾಗಿ ಅರ್ಥಮಾಡಿಗೊಂಡು ಐಹಿಕ ಪ್ರಕೃತಿಯ ಗುಣಂಗಳ ಎಲ್ಲ ಕಲ್ಮಷದ ಸೋಂಕಿಂದ ಮುಕ್ತನಾಗಿ ಈ ತತ್ವಜ್ಞಾನವ ಅರ್ಥೈಸಿ ಅವನ ದಿವ್ಯಸೇವೆಲಿ ನಿರತನಪ್ಪಲೆ ಸಾಧ್ಯ ಆವ್ತು. ಕೃಷ್ಣಪ್ರಜ್ಞೆಲಿ ನಿಷ್ಠನಾಗಿ ಭಕ್ತಿಸೇವೆಲಿ ತೊಡಗುವವಂಗೆ ಐಹಿಕ ಕಲ್ಮಷದ ಸೋಂಕು ತಾಗುತ್ತಿಲ್ಲೆ. ಅವನ ಅಂತರಂಗಲ್ಲಿ ಭಗವಂತ° ಪ್ರಚೋದಕ ಶಕ್ತಿಯ ನೀಡುತ್ತ°, ತನ್ನ ಕಾರ್ಯಲ್ಲಿ ಸಾಫಲ್ಯವ ಕಾಂಬಲೆ ಸಹಾಯಕನಾವುತ್ತ°.

ಇದು ಅಧ್ಯಾತ್ಮ ಜಿಜ್ಞಾಸುಗೊಕ್ಕೆ ತಿಳಿದಿರೆಕಾದ ರಹಸ್ಯಂಗಳಲ್ಲಿ ಅತೀ ಶ್ರೇಷ್ಠ ರಹಸ್ಯ. ಅಧ್ಯಾತ್ಮಲ್ಲಿ ಆಸಕ್ತಿಯಿಪ್ಪೋರಿಂಗೆ ಅವರ ಆಸಕ್ತಿಯ ಆಳವ ಅರ್ತು ಅವಕ್ಕೆ ಅಧ್ಯಾತ್ಮ ವಿಷಯವ ಹೇಳೇಕು. ರಹಸ್ಯವ ಎಲ್ಲ ದಿಕ್ಕೆ ಹೇಳಿ ಎಂತ ಪ್ರಯೋಜನವೂ ಇಲ್ಲೆ. ಅದಕ್ಕಾಗಿಯೇ ಅರ್ಜುನ ಈ ವಿಷಯಕ್ಕೆ ಯೋಗ್ಯ° ಹೇಳಿ ತೀರ್ಮಾನಿಸಿ ಭಗವಂತ° ಅವಂಗೆ ಎಲ್ಲವನ್ನೂ ಆಳವಾಗಿ ವಿವರಿಸಿದ್ದ°. ಶಾಸ್ತ್ರದ ಪ್ರಮೇಯವ ನೆಡುಬೀದಿಲಿ ಬಿಡಿಸಿಮಡುಗಲಾಗ ಹೇಳ್ವ ಸೂಕ್ಷ್ಮವ ಇಲ್ಲಿ ಹೇಳಿದ್ದ. ಅದಕ್ಕೆ ಇಲ್ಲಿ ‘ಇತಿ ಗುಹ್ಯತಮಂ’ ಹೇಳ್ವ ಪದಪ್ರಯೋಗ ಮಾಡಿದ್ದ° ಭಗವಂತ°. ಅದು ರಹಸ್ಯವಾಗಿರೆಕು. ನಿಜವಾಗಿ ಬೇಕಾದಲ್ಲಿ ಮಾಂತ್ರ ಅದರ ಬಿಡುಸೆಕು. ನೆಡುಬೀದಿಲಿ ಬಿಕ್ಕಿರೆ ಅದರಿಂದ ವ್ಯರ್ಥವೂ ಅನರ್ಥವೂ ಮಾಂತ್ರ ಅಪ್ಪದು. ಆಸಕ್ತಿ ಇಲ್ಲದ್ದೋರಿಂಗೆ ಆಸಕ್ತಿ ಇಲ್ಲದ್ದ ಮುಖ್ಯ ವಿಚಾರಂಗಳ ಹೇಳ್ವದರಿಂದ ಏವ ಗುಣವೂ ಇಲ್ಲೆ ಹೇಳ್ವ ಸೂಕ್ಷತೆಯ ಇಲ್ಲಿ ಭಗವಂತ° ಗೂಢವಾಗಿ ತಿಳಿಸಿದ್ದ°.

‘ಇತಿ ಗುಹ್ಯತಮಂ ಶಾಸ್ತ್ರಂ ಇದಮ್ ಉಕ್ತಂ ಮಯಾ ಅನಘ’ – ‘ಈ ರೀತಿಯಾಗಿ ಅತೀ ಗೌಪ್ಯವಾದ / ರಹಸ್ಯವಾದ , ಜೋಪಾನವಾಗಿ ಕಾಪಾಡೇಕ್ಕಾದ ಉಪದೇಶಾರ್ಹ ಈ ತತ್ವಶಾಸ್ತ್ರ ವಿಚಾರವ ‘ಅನಘ’ – ಪಾಪರಹಿತನಾದ ನಿನಗೆ ಎನ್ನಂದ ಹೇಳಲ್ಪಟ್ಟತ್ತು . ಪಾಪರಹಿತನಾಗಿ ನೀನು ಈ ವಿಷಯವ ತಿಳಿವದಕ್ಕೆ ಯೋಗ್ಯನಾಗಿದ್ದೆ. ಯೋಗ್ಯನಾದವಂಗೆ ಹೇಳಿರೆ ಮಾಂತ್ರ ಅದು ವೇದ್ಯ ಅಕ್ಕಷ್ಟೆ. ರಹಸ್ಯವಿಷಯಂಗಳ ಕಂಡಕಂಡವರತ್ರೆ ಹೇಳಿ ಹೊಲಸು ಮಾಡ್ಳಾಗ. ನೀನು ‘ಅನಘ’ – ಏವ ದೋಷವೂ ಇಲ್ಲದ್ದವ°ನಾದ್ದರಿಂದ ಯೋಗ್ಯನಾಗಿದ್ದೆ’ – ಹೇದು ರಹಸ್ಯ ವಿಚಾರಂಗಳ ಆರತ್ರೆ ಹೇಂಗೆ ಹೇಳ್ಳಕ್ಕು ಹೇಳ್ವದರನ್ನೂ ಇಲ್ಲಿ ಸೂಚಿಸಿದ್ದ°. ಜ್ಞಾನ ನವಗೆ ತಿಳಿಯೇಕ್ಕಾರೆ ನಮ್ಮ ಮನಸ್ಸು ಮದಾಲು ಶುದ್ಧವಾಗಿರೇಕು, ‘ಭಾರತ’ನಾಯೇಕು – ಬೆಣಚ್ಚಿಯ ಹಾದಿಲಿ ರಥನಾಗಿ ಸಾಗೆಕು, ಬೆಣಚ್ಚಿಯ ಹುಡ್ಕುವಲ್ಲಿ ನಿರತನಾಯೇಕು. ನಮ್ಮ ಮನಸ್ಸು ಕೆಟ್ಟದ್ದರಲ್ಲಿ ನೆಟ್ಟುಗೊಂಡಿಪ್ಪಗ ಯಾವ ಉತ್ತಮ ವಿಷಯಂಗಳೂ ಪ್ರತಿಫಲಿಸ. ಏವುದೇ ಪೂರ್ವಾಗ್ರಹ ಆವೇಶಂಗೊ ಇಲ್ಲದ್ದೆ ಪೂರ್ಣ ಭಗವಂತನಲ್ಲಿ ಶರಣಾಗತನಾಗಿ ಮನಸ್ಸಿನ ಮುಕ್ತಗೊಳಿಸಿರೆ ನಾವು ಪಾಪರಹಿತರಪ್ಪಲಕ್ಕು. ಮನಸ್ಸಿಲ್ಲಿ ಪೂರ್ವಾಗ್ರಹ ಮಡಿಕ್ಕೊಂಡು ಏವುದೇ ವಿಷಯದ ಬಗ್ಗೆ ಚರ್ಚೆ ಮಾಡಿರೆ ಅದು ಅಂತೇ ಬಾಯಿವಾಸನೆ ಮಾಡಿಗೊಂಬಲಕ್ಕಷ್ಟೇ. ಅಂತವರ ಎದುರು ವಿಷಯ ಮಂಥನಮಾಡುವದು ವ್ಯರ್ಥ. ಅವಕ್ಕೆ ವಿಷಯವ ಯಥಾರ್ಥ ಸ್ಥಿತಿಯ ಅರ್ತುಗೊಂಬ ಶಕ್ತಿ ಆ ಸನ್ನಿವೇಶಲ್ಲಿ ಇರ್ತಿಲ್ಲೆ.

“ಏತತ್ ಬುದ್ಧ್ವಾ ಬುದ್ಧಿಮಾನ್ ಕೃತಕೃತ್ಯಃ ಸ್ಯಾತ್” – ಈ ರೀತಿಯಾಗಿ ತಿಳುದು ಕೃತಕೃತ್ಯನಾಯೇಕು ಹೇಳಿ ಭಗವಂತ° ಅಕೇರಿಲಿ ಸಾರಿದ್ದ°. ಯಾವಾತ° ನಿಷ್ಕಲ್ಮಶ ಮನಸ್ಸಿಂದ ವಿಷಯವ ತಿಳಿತ್ತನೋ ಅವಂಗೆ ಜ್ಞಾನ ಪ್ರಾಪ್ತಿಯಾವ್ತು, ಅದರಿಂದ ಅವ° ತನ್ನ ಕರ್ತವ್ಯಲ್ಲಿ ಪರಿಪೂರ್ಣತೆಯ ಸಾಧುಸುತ್ತ° ಹೇಳಿ ಭಗವಂತ° ಭರವಸೆ ಹೇಳಿದಲ್ಯಂಗೆ –

 

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಪುರುಷೋತ್ತಮಯೋಗೋ ನಾಮ ಪಂಚದಶೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನ ರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಪುರುಷೋತ್ತಮಯೋಗಃ ಹೇಳ್ವ ಹದಿನೈದನೇ ಅಧ್ಯಾಯ ಮುಗುದತ್ತು.

 

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

॥ ಶ್ರೀಕೃಷ್ಣಾರ್ಪಣಮಸ್ತು ॥

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಮೇಗಾಣ ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 15 – SHLOKAS 11 – 20
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

3 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 15 – ಶ್ಲೋಕಂಗೊ 11 – 20

  1. ಮೇಲೆ ಬರದ ಶ್ಲೋಕ೦ಗಳ ಭಾವಾನುವಾದ ಒದಿ ಅಪ್ಪಗ ಪುರುಷೋತ್ತಮ ಯೊಗ ಓದುಲುದೆ ಪೂರ್ವ ಜನ್ಮದ ಪುಣ್ಯ ಬೇಕಕ್ಕು ಹೇಳಿ ಕ೦ಡತ್ತು.

    “ನಿರಂತರ ಜ್ಞಾನಪೂರ್ವಕ ಪ್ರಯತ್ನಂದ ನಿನ್ನ ಅತ್ಯಂತ ಸಮೀಪ ಇಪ್ಪ, ನಿನ್ನ ಅಂತರಂಗದೊಳ ಇಪ್ಪ ಜೀವಸ್ವರೂಪದೊಳ ಇಪ್ಪ ಭಗವಂತನ ಕಾಣೆಕು”.

    ಈ ಮೇಲಾಣ ವಾಕ್ಯವ ಒ೦ದು ಸಾಧ್ವಿ ಜನ೦ಗೊಕ್ಕೆ ಅರ್ಥ ಅಪ್ಪಲೆ ಕತೆಯ ರೂಪಲ್ಲಿ ಹೀ೦ಗೆ ಹೇಳುದರ ಟಿ. ವಿ ಲಿ ನೋಡಿತ್ತಿದ್ದೆ– ಸಮುದ್ರ ಮಥನ ಆಗಿ ಎಲ್ಲೋರಿ೦ಗು ಒ೦ದೊ೦ದು ವ್ಯವಸ್ತೆ ಆದ ಮತ್ತೆ ಪರಮಾತ್ಮ ಆಲೋಚನೆಲಿ ಮುಳುಗಿದಡೊ ”ಆನು ಎಲ್ಲಿ ನೆಲಸಲಿ”? ಎಲ್ಲೊರು ಅವವು ಇಪ್ಪ ಲೊಕಕ್ಕೆ ಬಪ್ಪಲೆ ಆಹ್ವಾನ ಕೊಟ್ಟವಡೊ. ಅಸ್ಟಪ್ಪಗ ಪರಮಾತ್ಮ ಹೆಳಿದಡೊ ”ಮನುಷ್ಯ ಮೇಲೆ ಆಕಾಶಲ್ಲಿ ಹೋಗಿ ಹುಡುಕುತ್ತ, ಸಮುದ್ರದ ಆಳಕ್ಕಿಳುದು ಶೋಧಿಸುತ್ತ. ಆದರೆ ಅವನ ಅ೦ತರ೦ಗವ ಹುಡುಕ್ಕುಲೆ ಹೋವುತ್ತಾಯಿಲ್ಲೆ. ಹಾ೦ಗಾಗಿ ಆನು ಅಲ್ಲೇ ವಾಸಮಡ್ತೆ”

  2. ಚೆನ್ನೈ ಬಾವ, ಹರೇ ರಾಮ; [ ಈ ರೀತಿ ಚಿನ್ನದ ಗಣಿಂದ ಚಿನ್ನವ ಬೇರ್ಪಡುಸುವದರಿಂದಲೂ ಕಠಿಣವಾದ ಈ ಕಾರ್ಯವ ನಮ್ಮೊಳ ಇದ್ದು ವ್ಯವಸ್ಥಿತ ರೀತಿಲಿ ಮಾಡಿ, ನವಗೆ ಜೀವನವ ಕೊಡುವವ° – ಆ ಭಗವಂತ°. ಭಗವಂತನ ಈ ಕಾರ್ಯಕ್ಕೆ ಸೇವಕ° – ಪ್ರಾಣ-ಅಪಾನ ಹೇಳ್ವ ಪ್ರಾಣದೇವರ ಎರಡು ರೂಪಂಗೊ.]ವಿವರಣೆ ಬಾರೀ ಸು೦ದರವೂ ಹೃದಯ೦ಗಮವೂ ಆಗಿ ಬತ್ತಾ ಇದ್ದು.ಮತ್ತೆ ಹಾಡುಗಾರಿಕೆಯೂ ಸ್ಪಷ್ಟವಾಗಿ ಅರ್ಥವ ಬಿಡಿಸಿ ಮಾಡಗಿದಾ೦ಗೆ ಹಾಡ್ತಾ ಇದ್ದವು.ಅವರ ಧ್ವನಿಲಿ ನಮ್ಮ ಭದ್ರಗಿರಿ ಅಚ್ಹುತದಾಸರ ಮೆರಗು – ಛಾಪು ಎದ್ದು ತೋರುತ್ತು.ಅಚ್ಚುತದಾಸರ ಎ೦ತದೋ ಒ೦ದು ಬಗೆಯ ಪ್ರಭಾವ ಇವಕ್ಕೆ ಆದ ಹಾ೦ಗೆ ಇದ್ದು ಹೇದು ಅನುಸುತ್ತು.ಅವರ ಪರಿಚಯ ಮಾಡ್ತಿರೋ?ನಿ೦ಗಳ ಈ ಸಾರ್ಥಕ ಕಾರ್ಯಕ್ಕೆ ಕಯಿ ಮುಗುದು ಧನ್ಯವಾದ ಹೇಳ್ತಾ ಇದ್ದೆ. ಇದರ ಶ್ರುತಿ ಬದ್ಧವಾಗಿ ಹಾಡುವ ಶ್ರೀ ಟಿ. ಎಸ್. ರಂಗನಾಥನ್ ಅವಕ್ಕೆ ಎನ್ನ ಧನ್ಯವಾದವ ತಿಳಿಶಿ.ನಮಸ್ತೇ..

    1. ಹರೇ ರಾಮ ಅಪ್ಪಚ್ಚಿ. ತುಂಬ ಧನ್ಯವಾದಂಗೊ ನಿಂಗಳ ಆಶೀರ್ವಾದಕ್ಕೆ.
      ಅಕೇರಿಗೆ ಬಪ್ಪ ಭಜನೆ ಹಾಡು ಅದು ಸಂತ ಭದ್ರಗಿರಿ ಕೇಶವದಾಸ ಮತ್ತು ಬಳಗದವರದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×