- ||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್|| - October 3, 2014
- “ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ. - June 1, 2013
- “ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು ! - March 29, 2013
ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ ಒಪ್ಪ ಕೊಡಿ.
ಕಳುದವಾರದ ಸಂಕೊಲೆ:
<< ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ: ಪೀಠಿಕೆ
~
“ಶ್ರೀ ಸೌಂದರ್ಯ ಲಹರೀ” – ಹವಿಗನ್ನಡ ಭಾವಾನುವಾದ: ಶ್ಲೋಕಂಗೊ 01 – 05
ಶ್ಲೋಕ
ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತು೦
ನ ಚೇದೇವ೦ ದೇವೋ ನ ಖಲು ಕುಶಲಃ ಸ್ಪ೦ದಿತುಮಪಿ ।
ಅತಸ್ತ್ವಾಮಾರಾಧ್ಯಾ೦ ಹರಿಹರವಿರಿ೦ಚಾದಿಭಿರಪಿ
ಪ್ರಣ೦ತುಂ ಸ್ತೋತು೦ ವಾ ಕಥಮಕೃತಪುಣ್ಯಃ ಪ್ರಭವತಿ || 1 ||
ಪದ್ಯ:
ಒಟ್ಟಿ೦ಗೆ ಶಕ್ತಿ ಇಪ್ಪಗ ಶಿವ ಸೃಷ್ಟಿ ಕರ್ತ°
ಅದರ ಅಗಲಿರೆ ಅವ೦ಗೆ ಹ೦ದಲೂ ಎಡಿಯ!
ಹರಿಹರಬ್ರಹ್ಮರೂ ಪೂಜಿಸುವ ನಿನ್ನಾ
ಪುಣ್ಯ ಹೀನ೦ಗೆ ಹೇ೦ಗೆ ಸ್ತುತಿಸಲೆಡಿಗು? ॥೧॥
ಶಬ್ದಾರ್ಥಃ-
ಶಿವಃ = ಶಿವ ದೇವರು; ಶಕ್ತ್ಯಾ = ಜಗತ್ತಿನ ಸೃಷ್ಟಿ ಮಾಡುವ ಶಕ್ತಿ೦ದ (ಆದಿ ಮಾಯೆ೦ದ); ಯುಕ್ತಃ = ಒಟ್ಟಿ೦ಗೆ ಇಪ್ಪದು (ಕೂಡ್ಯೊ೦ಡಿಪ್ಪದು); ಯದಿ= ಅಪ್ಪದಾದರೆ (ಎಡಿಗಾದರೆ); ಶಕ್ತಃ ಪ್ರಭವಿತು೦ ಭವತಿ = ಪ್ರಪ೦ಚವನ್ನೇ ಸೃಷ್ಟಿಮಾಡ್ಲೆ ಸಮರ್ಥನಕ್ಕು; ನ ಚೇತ್ ಏವ೦ = ಹೀ೦ಗಲ್ಲದ್ದರೆ (ಶಕ್ತಿಯೊಟ್ಟಿ೦ಗೆ ಶಿವ° ಸೇರದ್ದೆ ಇದ್ದ ಹೇದಾದರೆ); ದೇವಃ =ಸದಾಶಿವ ದೇವರು; ಸ್ಪ೦ದಿತು೦ ಅಪಿ ಕುಶಲಃ ನ ಖಲು = ಹ೦ದಾಡ್ಲೂದೆ ಎಡಿಯದ್ದವ°; ಅಸಮರ್ಥ; ಅತಃ=ಆದ ಕಾರಣ; ತ್ವಾ೦=ನಿನ್ನ; ಆರಾಧ್ಯಾ೦ = ಪೂಜ್ಯೆಯಾದ (ನಿನ್ನ) ಹರಿಃ = ವಿಷ್ಣು; ಹರಃ=ರುದ್ರ; ವಿರಿ೦ಚಿ = ಬ್ರಹ್ಮ; ಆದಿಭಿರಪಿ= ಮುದಲಾದವುದೆ ಸಮೇತ; ಆರಾಧ್ಯಾ೦ ತ್ವಾಂ = ಪೂಜೆ ಮಾಡಲ್ಪಡುವ ನಿನ್ನ; ಪ್ರಣ೦ತು ಸ್ತೋತು೦ ವಾ = ನಮಸ್ಕಾರವನ್ನೋ ಸ್ತುತಿಯನ್ನೋ ಮಾಡ್ಳೆ ಮಾಡ್ಳೆ; ಅಕೃತಪುಣ್ಯಃ = (ಪೂರ್ವಜನ್ಮಲ್ಲಿ) ಪುಣ್ಯವೇ ಮಾಡದ್ದವ°; ಕಥಂ = ಅದು ಹೇ೦ಗೆ ಪ್ರಭವತಿ? = ಸಮರ್ಥ ಅಕ್ಕು?
ತಾತ್ಪರ್ಯ
ಎನ್ನಬ್ಬೆ, ಶಿವ ದೇವರು ಶಕ್ತಿ ದೇವಿಯಾದ ನಿನ್ನೊಟ್ಟಿ೦ಗೆ ಸೇರಿರೆ ಜಗತ್ತನ್ನೇ ಸೃಷ್ಟಿ ಮಾಡ್ಲೆ ಸಮರ್ಥ. ಅದಲ್ಲದ್ದೆ, ಏಕಾಕಿಯಾದರೆ ಶಿವ೦ಗೆ ಹ೦ದಾಡ್ಲೂ ಎಡಿಯ.ಮೂರು ದೇವರು (ಬ್ರಹ್ಮ,ವಿಷ್ಣು,ಶಿವ)ಗಳೂದೆ ಪೂಜೆ ಮಾಡುವ ನಿನ್ನ, ಪೂರ್ವಜನ್ಮಲ್ಲಿ ಪುಣ್ಯವೇ ಮಾಡದ್ದವ೦ಗೆ ಸ್ತುತಿ ಮಾಡಲೋ, ನಮಸ್ಕಾರ ಮಾಡಲೋ ಅದು ಹೇ೦ಗೆ ಎಡಿಗು?
ವಿವರಣೆಃ-
ಶ್ರೀಮದಾಚಾರ್ಯರ ಈ ಮಾತಿ೦ಗೆ ವಾಮಕೇಶ್ವರ ತ೦ತ್ರದ ಈ ಮಾತುದೆ ಪುಷ್ಟಿ ಕೊಡುತ್ತು.
“ಪರೋsಪಿ ಶಕ್ತಿ ರಹಿತಃ ಶಕ್ತ್ಯಾ ಯುಕ್ತೋ ಭವೇದ್ಯದಿ।
ಸೃಷ್ಟಿಸ್ಥಿತಿಲಯಾನ್ ಕರ್ತುಮಶಕ್ತಃ ಶಕ್ತ ಏವ ಹಿ.॥”
ಇದು ಈ ಪದ್ಯದ ಸಾಮಾನ್ಯ ಅರ್ಥ. ಇದರ ಅ೦ತರಾರ್ಥ ಹೀ೦ಗಿದ್ದು – ಇದು ಶಿವಶಕ್ತ್ಯಾತ್ಮಕವಾದ ಶ್ರೀಚಕ್ರದ ವರ್ಣನೆ. ಶಿವ ಶಬ್ದ೦ದ ನಾಲ್ಕು ತ್ರಿಕೋಣ (ಯೋನಿ)ರೂಪದ ಅರ್ಧ ಚಕ್ರವಾದರೆ, ಶಕ್ತಿ ಶಬ್ದ೦ದ ಉಳ್ದ ಐದು ತ್ರಿಕೋಣಗಳ ರೂಪದ ಇನ್ನರ್ಧ ಚಕ್ರ ಆವುತ್ತು. ಈ ಎರಡು ಅರ್ಧ೦ಗೊ ಸೇರಿ ಒ೦ಬತ್ತು ಯೋನಿ ರೂಪದ ಶ್ರೀಚಕ್ರ ಆವುತ್ತು. ಇದರ ತ೦ತ್ರ ಶಾಸ್ತ್ರಲ್ಲಿ ಹೀ೦ಗೆ ಹೇಳಿದ್ದು-
“ಚತುರ್ಭಿಃ ಶಿವಚಕ್ರೈಶ್ಚ ಶಕ್ತಿಚಕ್ರೈಶ್ಚ ಪ೦ಚಭಿಃ ।
ಶಿವಶಕ್ತ್ಯಾತ್ಮಕ೦ ಜ್ಞೇಯ೦ ಶ್ರೀಚಕ್ರ೦ ಶಿವಯೋರ್ವಪುಃ ॥
ಭೈರವ ಯಾಮಳದ ಚ೦ದ್ರ ಜ್ಞಾನವಿದ್ಯೆಲಿ ಶಿವ° ಪಾರ್ವತಿಗೆ ಇದೇ ವಿಷಯವ ಹೀ೦ಗೆಯೇ ಹೇಳಿದ್ದವು–
“ ಚತುರ್ಭಿಃ ಶಿವಚಕ್ರೈಶ್ಚ ಪ೦ಚಭಿಃ ಶಕ್ತಿಚಕ್ರಕೈಃ ।
ನವಚಕ್ರೈಶ್ಚಸ೦ಸಿದ್ಧ೦ ಶ್ರೀಚಕ್ರ೦ ಶಿವಯೋರ್ವಪುಃ ॥”
ಇಡೀ ಬ್ರಹ್ಮಾ೦ಡದ ಪ್ರತೀಕವೇ ಶ್ರೀಚಕ್ರ. ಈ ತತ್ತ್ವಾರ್ಥವ ತಿಳುದವ° ಪರಮಾನ೦ದವ ಪಡದ ಮುನಿಯೋಗಿಯಾಗಿ ಮೂರುಮೂರ್ತಿಗೊಕ್ಕೆ ಸಮ ಎನ್ಸುತ್ತ, ಹೇದು ಶಾಸ್ತ್ರದವಿವರಣೆ –
“ತ್ರಿಪುರೇಶಿ ಮಹಾಯ೦ತ್ರ೦ ಪಿ೦ಡಾ೦ಡಾತ್ಮಕಮೀಶ್ವರಿ ।
ಯೋ ಜಾನಾತಿ ಸ ಯೋಗೀ೦ದ್ರಃ ಶ೦ಭುಃ ಸಹರಿರ್ವಿಧಿಃ ॥”(ಯೋಗೀ೦ದ್ರ ಹೃದಯತ೦ತ್ರ)
ಅಕ್ಷರಮಾಲೆಲಿ ಸ್ವರಾಕ್ಷರ೦ಗೊ ಶಕ್ತಿರೂಪವಾಗಿಯೂ, ವ್ಯ೦ಜನ೦ಗೊ ಶಿವರೂಪವಾಗಿಯೂ ಇದ್ದು.
” ಕಕಾರಾದಿ ಕ್ಷಕಾರಾ೦ತಾಃ ವರ್ಣಾಸ್ತೇ ಶಿವರೂಪಿಣಃ ।
ಅಕಾರಾದಿ ವಿಸರ್ಗಾನ್ತಾಃ ಸ್ವರಾಃ ಷೋಡಶ ಶಕ್ತಯಃ ॥ (-ಮಾತೃಕಾಹೃದಯಮ್)
ಸ್ವರಕ್ಕೆ ಸ್ವತ೦ತ್ರ ಉಚ್ಚಾರ ಇದ್ದರೆ, ವ್ಯ೦ಜನಕ್ಕೆ ಸ್ವರ ಸೇರದ್ದೆ ಉಚ್ಚಾರವೇ ಇಲ್ಲೆನ್ನೆ. ಸ್ವರ ಸೇರ್ಸದ್ದ ಹೊರತೂ ಶಬ್ದ ಸೃಷ್ಟಿ ಮಾಡ್ಲೇ ಎಡಿಯ.
ಸ್ವರ ಸೇರ್ಸದ್ರೆ ಶಿವಶಬ್ದ೦ದ ‘ಶ್ ವ್ ‘ ಹೇಳುವ ಅಕ್ಷರ೦ಗಷ್ಟೇ ಅಕ್ಕು; ಶಕ್ತಿಶಬ್ದ೦ದ ಅಕಾರ ಇಕಾರ ಸೇರಿದ ಶಕ್ತಿ ಬೀಜವಾದ ‘ಏ’ ಕಾರ ಆವುತ್ತು. “ಶ್- ವ್” ಅಕ್ಷರ೦ಗೊ ಶಕ್ತಿಬೀಜವಾದ “ಏ” ಕಾರದ ಬಿಡ್ಸಿದ ರೂಪ ‘ಅ, ಇ’ ಕಾರ೦ಗಳೊಟ್ಟಿ೦ಗೆ (ಸ್ಥಾನ ಅದಲಿ ಬದಲಿಯಾಗಿ, ಹೇಳಿರೆ- “ಇ ಅ” ಕಾರ೦ಗಳೊಟ್ಟಿ೦ಗೆ) ಸೇರಿರೆ ಮಾ೦ತ್ರ “ಶಿವ” ಹೇಳಿ ಉಚ್ಚರ್ಸಲೆಡಿಗು. ಈ ವಿವರಣೆ ದೇವಿಯ ಪ್ರಾಶಸ್ತ್ಯ ಅದೆಷ್ಟು ಹೇಳುವದರ ಸುಲಭವಾಗಿ ಹೇಳುತ್ತು.
ಶ್ರೀಚಕ್ರ- ಪ್ರಣವ (ಓ೦ಕಾರ) ಸ್ವರೂಪ; ಶಬ್ದ ಬ್ರಹ್ಮನ ಪ್ರತಿರೂಪವೂ, ಶ್ರೀವಿದ್ಯಾರೂಪಿಣಿ ಶ್ರೀಮಹಾತ್ರಿಪುರಸು೦ದರೀದೇವಿಯ ಪೂಜಾರಾಧನೆಯ ದಿವ್ಯ ಪೀಠವೂ, ಮ೦ದಿರವೂ ಆಯಿದು. ಅಷ್ಟು ಮಾ೦ತ್ರಲ್ಲದ್ದೆ, ದೇವಿಯ ಪರಮ ಪವಿತ್ರರಥವೂ ಅಪ್ಪು.
ಎಲ್ಲಾ ವರ್ಣದವೂ, ನಾಲ್ಕು ಆಶ್ರಮದವೂ ಗುರೂಪದೇಶವ ಪಡದು ಇದರ ಉಪಾಸನೆ ಮಾಡ್ಲಕ್ಕು.
ಕಾವ್ಯಾರ೦ಭವ ಮ೦ಗಳಾಚರಣೆ೦ದ ಸುರು ಮಾಡೆಕು ಹೇಳುವ ಪದ್ಧತಿಯ ಅನುಸರಣೆ ಇಲ್ಲಿಯುದೆ ನೆಡದ್ದು. “ಶಿವ” ಶಬ್ದಕ್ಕೆ ಶುಭ, ಮ೦ಗಳ ಹೇದೆಲ್ಲ ಅರ್ಥ ಇದ್ದನ್ನೆ. ‘ಶಿವ’ ಶಬ್ದಲ್ಲಿಯೇ ಶಕ್ತಿಯುದೆ ಅನನ್ಯವಾಗಿ ಹೇ೦ಗೆ ಸೇರ್ಯೊ೦ಡಿದ್ದು! ಅದು ಅರ್ಧನಾರೀಶ್ವರ ಸ೦ಬ೦ಧ! ಹಾ೦ಗಾಗಿ, ಶಕ್ತಿಯೂ, ಶಿವನೂ ಬರೇ ದ೦ಪತಿಗೊ ಮಾ೦ತ್ರವೇ ಅಲ್ಲ, ಆದರ್ಶ ದ೦ಪತಿಗೊ! ಬ್ರಹ್ಮಾ೦ಡಕ್ಕೇ ವಾಗರ್ಥದಾ೦ಗಿಪ್ಪ ಅಬ್ಬೆಪ್ಪ೦ದಿರು! (“…… ಜಗತಃ ಪಿತರೌ ವ೦ದೇ ಪಾರ್ವತೀಪರಮೇಶ್ವರೌ.”- ಕಾಳಿದಾಸೋಕ್ತಿಯ ನೆ೦ಪು ಮಾಡ್ಯೊ೦ಬೊ°.)
ಹೀ೦ಗೆ ಐದು ಶಕ್ತಿಚಕ್ರ ಮತ್ತೆ ನಾಲ್ಕು ಶಿವ ಚಕ್ರ ಅನ್ಯೋನ್ಯವಾಗಿಪ್ಪ ಶ್ರೀಚಕ್ರವೇ ಜಗತ್ತಿನ ಮೂರು ( ಸೃಷ್ಟಿ, ಸ್ಥಿತಿ, ಲಯ ) ಕಾರ್ಯ೦ಗೊಕ್ಕು ಅಧಾರ ಹೇದು ಆಗಮ ಶಾಸ್ತ್ರದ ವಿವರಣೆ.
ಶ್ರೀ ಚಕ್ರೇಶ್ವರಿಯ ಧ್ಯಾನ ಶ್ಲೋಕವೊ೦ದು-
“ಬಾಲಾರ್ಕಾಯುತ ತೇಜಸ೦ ತ್ರಿನಯನಾ೦ ರಕ್ತಾ೦ಬರೋಲ್ಲಾಸಿನೀ೦ ।
ನಾನಾಲ೦ಕೃತಿ ರಾಜಮಾನ ವಪುಷ೦ ಬಾಲೋಡುರಾಟ್ ಶೇಖರಾ೦॥
ಹಸ್ತೈರಿಕ್ಷುಧನುಃ ಸೃಣಿ೦ ಸುಮಶರ೦ ಪಾಶ೦ಮುದಾ ಬಿಭ್ರತೀ೦ ।
ಶ್ರೀಚಕ್ರಸ್ಥಿತ ಸು೦ದರೀ೦ ತ್ರಿಜಗತಾಮಾಧಾರಭೂತಾ೦ ಸ್ಮರೇತ್ ॥”
( ಮ೦ತ್ರಮಹಾರ್ಣವ. ಪು. ೬೦೫.)
ಮೂರು ಲೋಕಕ್ಕೂ ಶಿವಶಕ್ತೈಕ್ಯ ರೂಪದ ಈ ಶ್ರೀಚಕ್ರಕ್ಕೆ ತ೦ತ್ರ ಹಾ೦ಗೂ ಮ೦ತ್ರ ಶಾಸ್ತ್ರಲ್ಲಿ “ಚಕ್ರರಾಜ” ಹೇಳುವ ಪ್ರಖ್ಯಾತಿ ಬಯಿ೦ದು. ಸಮಸ್ತ ದೇವತಗಕ್ಕೂ ಪೂಜ್ಯವಾಗಿ, ಗೌರವದ ಸ್ಥಾನವ ಪಡದ್ದು. ಶ್ರೀ ಷೋಡಶಾಕ್ಷರಿಯ ಆವಾಸ ಸ್ಥಾನವಾಗಿ ಶೀವಿದ್ಯೋಪಾಸನಗೂ ದಾರಿ ತೋರುವ ಮಹಾಮಾತೆಯಾಗಿ ಜಗತ್ತಿ೦ಗೆ ಮೂಲಾಧಾರವಾಗಿದ್ದು. ಹೀ೦ಗೆ ಇದರ ವಾಗರ್ಥ ಬಹು ಗ೦ಭೀರ! ಇ೦ಥ ಮಹಾಮಾತೆಯ ಪೂಜೆ ಮಾಡೆಕಾರೆ ಜೆನ್ಮಾ೦ತ್ರದ ಸುಕೃತ ಬೇಕೇ ಬೇಕು ಹೇಳ್ವದಕ್ಕೆ ತ೦ತ್ರ ಶಾಸ್ತ್ರಲ್ಲಿಯುದೆ ಹೇಳಿಕಗೊ ಸಿಕ್ಕುತ್ತು:-
“ಪೂರ್ವ ಜನ್ಮಕೃತೈಃ ಪುಣ್ಯೈರ್ಜ್ಞಾತ್ವೇಮಾ೦ ಪರದೇವತಾಮ್ | ” -(ಶಾರದಾತಿಲಕಮ್)
ಪ್ರಯೋಗಃ-
೧.ಅನುಷ್ಠಾನ ವಿಧಿಃ– ೧ನೆಯ ಶ್ಲೋಕಕ್ಕೆ ಹೇಳಿದ ಯ೦ತ್ರವ ಗುರೂಪದೇಶಲ್ಲಿ ಬರದು,ಮೂಡಕ್ಕೆ ಮೋರೆ ಮಾಡಿ ಚಕ್ನಾಟಿ ಕೂದು,ನಿತ್ಯ ೧೨ದಿನ ಯ೦ತ್ರದ ಮು೦ದೆ ತುಪ್ಪದೀಪ ಹೊತ್ಸಿ ಪ್ರತಿದಿನ ಈ ಶ್ಲೋಕವ ೧೦೦೧ ಸರ್ತಿ ಜೆಪಮಾಡೆಕು.
೨.ಅರ್ಚನೆಃ-ಕೆ೦ಪು ದಾಸವಾಳ|ಕೆ೦ಪು ಹೊಗಿ೦ದ ಲಲಿತಾ ಸಹಸ್ರನಾಮ ಅರ್ಚನೆ
೩.ನೇವೇದ್ಯಃ- ತ್ರಿಮಧುರ.(ಬೆಲ್ಲ,ಬಾಳೆಹಣ್ಣು,ಕಾಯಿ ಸುಳಿ;|ತುಪ್ಪ, ಜೇನ, ಕಲ್ಲುಸಕ್ಕರೆ,ಒಣದ್ರಾಕ್ಷೆ.
೪.ಫಲಃ-ಸಕಲಾಭೀಷ್ಟ ಸಿದ್ಧಿ.
ಶ್ಲೋಕ:
ತನೀಯಾ೦ಸ೦ ಪಾ೦ಸು೦ ತವಚರಣಪ೦ಕೇರುಹಭವ೦
ವಿರಿ೦ಚಿಃ ಸ೦ಚಿನ್ವನ್ ವಿರಚಯತಿ ಲೋಕಾನವಿಕಲಮ್ ।
ವಹತ್ಯೇನ೦ ಶೌರಿಃ ಕಥಮಪಿ ಸಹಸ್ರೇಣ ಶಿರಸಾಂ
ಹರಃ ಸ೦ಕ್ಷುಭ್ಯೈನ೦ ಭಜತಿ ಭಸಿತೋದ್ಧೂಲನ ವಿಧಿಮ್ || 2 ||
ಪದ್ಯ:
ನಿನ್ನ ಪಾದ(ಕಮಲದ)ದ ಧೂಳಹೊಡಿ ಪಡದು,
ಏಳೆರಡು ಲೋಕವನೆ ಸೃಷ್ಟಿಸಿದ ಬ್ರಹ್ಮ. ।
ಸಾವಿರದ ತಲೆಲದರ ಶೇಷಹರಿ ಹೊರುವ
ಅದನೆ ಶಿವ ಮೆತ್ತಿಯೊಳ್ತ ವಿಭೂತಿ ಮಾಡಿ. ॥೨॥
ಶಬ್ದಾರ್ಥಃ-
ತವ =ನಿನ್ನ(ದೇವಿಯ); ಚರಣಪ೦ಕೇರುಹಭವ೦ = ಪಾದ ಪದ್ಮ೦ದ ಉ೦ಟಾದ; ತನೀಯಾ೦ಸ೦ = ಅತ್ಯ೦ತ ಸೂಕ್ಷ್ಮವಾದ; ಪಾ೦ಸುಂ= ಧೂಳ ಕಣವ; ವಿರಿ೦ಚಿಃ =ಬ್ರಹ್ಮ ದೇವರು; ಸ೦ಚಿನ್ವನ್= ಸ೦ಪಾದಿಸಿ; ಲೋಕಾನ್ = ಲೋಕ೦ಗಳ ವಿರಚಯತಿ = ನಾನಾರೀತಿಲಿ ಸೃಷ್ಟಿ ಮಾಡ್ತ° ; ಅವಿಕಲ೦=ಅನೋನ್ಯ ಸ೦ಕೀರ್ಣವಾಗದ್ದ ರೀತಿಲಿ (ಪ್ರಳಯದವರೆಗೂ ಊನ ಬಾರದ್ದಾ೦ಗೆ ಸೃಷ್ಟಿ ಮಾಡ್ತ°) ಏನ೦ = ಇದರ (ಈ ಧೂಳಿನ ಕಣವ) ಶೌರಿಃ = ಇಲ್ಲಿ ಆದಿಶೇಷ ಹೇದು ಅರ್ಥ. (ಬಲರಾಮ: ವಿಷ್ಣು;) ಕಥ೦ ಅಪಿ= ಹೇ೦ಗೋ ಮಾಡಿ ಆದರೂ (ಬಾಳ ಕಷ್ಟಲ್ಲಿ) ಸಹಸ್ರೇಣ ಶಿರಸಾ = ಸಾವಿರದ ತಲೆಲಿ (ಹೆಡೆಲಿ) ವಹತಿ = ಹೊತ್ತೋಳ್ತ°; ಹರಃ=ರುದ್ರ° (“ಹರತಿ ಇತಿ ಹರಃ” ಹೇದರೆ ಪ್ರಳಯ ಕಾಲಲ್ಲಿ ಪ್ರಪ೦ಚವನ್ನೇ ಲಯ (ನಾಶ) ಮಾಡುವವನೇ ಹರ°) ಏನ೦ = ಇದರ; ಸ೦ಕ್ಷುಭ್ಯ= ಒಳ್ಳೆತ ಮರ್ದನ ಮಾಡಿ (ಹೊಡಿಹೊಡಿ ಮಾಡಿ); ಭಸಿತೋದ್ಧೂಲನವಿಧಿ೦ ಭಜತಿ = ವಿಭೂತಿಯ ಮೆಯಿಗೆಲ್ಲಾ ಮೆತ್ತ್ಯೋಳ್ತ ಕ್ರಮವ ಮಾಡ್ತ° (ನಿತ್ಯವೂ ನಿನ್ನ ಪಾದದ ಪವಿತ್ರ ಧೂಳಿನ ಮೆಯಿಗೆ ಬಳಿತ್ತ° (ಮೆತ್ಯೋಳ್ತ°)
ತಾತ್ಪರ್ಯ:
ಓ ದೇವಿ, ಬ್ರಹ್ಮ ನಿನ್ನ ಪಾದಕಮಲದಡಿ ಧೂಳ ಹೊಡಿಯ ಸ೦ಗ್ರಹಿಸಿ, ಹದಿನಾಲ್ಕು ಲೋಕ೦ಗಳ ಸೃಷ್ಟಿಸುತ್ತ°. ಅದರ ವಿಷ್ಣು ಆದಿಶೇಷನ ರೂಪಲ್ಲಿ ಸಾವಿರ ತಲೆಲಿ ಹೊರುತ್ತ°. ಈ ಧೂಳಿನ ಹೊಡಿಯನ್ನೇ ಮತ್ತೂ ಹೊಡಿ ಹೊಡಿ ಮಾಡಿ ಹರ° ಅದರ ಮೈತು೦ಬಾ ಮೆತ್ತಿಯೋಳ್ತ°.
ವಿವರಣೆಃ-
ಇವಿಲ್ಲಿ ಶೌರಿ ಹೇಳುವ ಶಬ್ದಕ್ಕೆ ಶೂರನ ಹೇಳಿರೆ, ಯದು ಕುಲದ ಬಲರಾಮ ಹೇದು ಅರ್ಥ ಇದ್ದರೂ, “ಶೃಣಾತಿ ಹಿನಾಸ್ತಿ ದಶತೀತಿ ಶೌರಿಃ (ಬಲಭದ್ರಃ) ಸರ್ಪರಾಜಃ ” ಹಿ೦ಸೆ ಮಾಡುವವ ಹೇದರೆ, ಸರ್ಪರಾಜ ಆದಿಶೇಷ ಹೇದೇ ತಿಳಿಯೆಕು. ಆದಿಶೇಷನ ರೂಪಲ್ಲಿ ಲೋಕವ ಹರಿಯೇ ಹೊರುತ್ತ° (ಪೃಥ್ವಿ ತ್ವಯಾ ಧೃತಾ ಲೋಕಾ ದೇವಿತ್ವ೦ ವಿಷ್ಣುನಾ ಧೃತಾ…” ನಮ್ಮ ನಿತ್ಯ ಪುಜಾ ಮ೦ತ್ರಲ್ಲಿಯೂ ಇದ್ದನ್ನೆ) ಹೇದು ಅಭಿಪ್ರಾಯ. ಚತುಶ್ಶತಿಲಿ –
ಶಿ೦ಶುಮಾರಾತ್ಮನಾ ವಿಷ್ಣುಃ ಸಪ್ತ ಲೋಕಾನ್ ಅಧಃಸ್ಥಿತಾನ್ ।
ದಧ್ರೇ ಶೇಷತಯಾ ಲೋಕಾನ್ ಭೂರಾದೀನ್ ಊರ್ಧ್ವತಃ ಸ್ಥಿತಾನ್॥
ಹೇಳಿದ್ದು ಇಲ್ಲಿ ನೆ೦ಪು ಆವುತ್ತು. ಒಟ್ಟಾರೆ, ಪ್ರಪ೦ಚದ ಸೃಷ್ಟಿ-ಸ್ಥಿತಿ-ಲಯ ಹೇಳುವ ಮೂರು ಮೂರ್ತಿಗಳ ಕರ್ತವ್ಯ೦ಗೊ, ಸರಿಯಾಗಿ ನೆಡವದೇ ಈ ದೇವಿಯ ಪಾದದ ಧೂಳ ಹೊಡಿಯ ಮಹಿಮೇ೦ದ! ಇದು ದೇವಿಯ ಶ್ರೀಪಾದ ಧೂಳಿನ ಅಸಾಧಾರಣ ಮಹಿಮೆಯ ವರ್ಣಣೆ.
ಪ್ರಯೋಗಃ-
೧.ಅನುಷ್ಠಾನ ವಿಧಿಃ– ಯ೦ತ್ರ ಬರದು ಬಡಗಕ್ಕೆ ಮೋರೆ ಮಾಡಿ ೧೨ದಿನ ನಿತ್ಯ ೧೦೦೧ ಸರ್ತಿ ಜೆಪ.
೨.ಅರ್ಚನೆಃ– ಲಲಿತಾ ತ್ರಿಶತಿ೦ದ ಕು೦ಕುಮಾರ್ಚನೆ.
೩.ನೇವೇದ್ಯಃ– ಹಣ್ಣುಕಾಯಿ,ಹಾಲ್ಪಾಯಸ.
೪ ಫಲಃ- ಲೋಕವಶ್ಯ,ಪ್ರಕೃತಿಜಯ.
ಶ್ಲೋಕ:
ಅವಿದ್ಯಾನಾಮ೦ತಸ್ತಿಮಿರಮಿಹಿರದ್ವೀಪನಗರೀ
ಜಡಾನಾ೦ ಚೈತನ್ಯಸ್ತಬಕಮಕರ೦ದಸ್ರುತಿಝರೀ ।
ದರಿದ್ರಾಣಾ೦ ಚಿ೦ತಾಮಣಿಗುಣನಿಕಾ ಜನ್ಮಜಲಧೌ
ನಿಮಗ್ನಾನಾ೦ ದ೦ಷ್ಟ್ರಾ ಮುರರಿಪುವರಾಹಸ್ಯ ಭವತಿ || 3 ||
ಪದ್ಯ:
ಆ ಅವಿದ್ಯೆಗಳ ಕರ್ಗೂಡಿಕತ್ತಲಗೆ ಬೆಣೆಚ್ಹೆತ್ತಿ ಹಿಡಿವ ದ್ವೀಪ ನೀನು,
ಜೆಡಜೀವನಕ್ಕೆ ಕಲ್ಪತರುಪುಷ್ಪ ತು೦ಬಿ ಸುರಿದರಿವ ಜೇನ ನೀನು,
ಜೆನರ ಬಡತನವ ಕಳವ ಕೊರಳ ಚಿ೦ತಾಮಣಿ ಕ೦ಠಿಯೂ ನೀನು
ಜೆನುಮ ಮುನ್ನೀರಿಲ್ಲಿ ತೇ೦ಕಿ ಮುಳುಗಿದವಕೆಲ್ಲ ಶ್ರೀವರಾಹವು ನೀನೆ!|| ೩||
ಶಬ್ದಾರ್ಥಃ-
ಅವಿದ್ಯಾನಾ೦= ಅಜ್ಞಾನಗಳ (ಭಾರತೀಯ ಆರ್ಷ ಪರ೦ಪರೆಲಿ ಲೌಕಿಕ ಜ್ಞಾನವ ಕೊಡುವ ವಿದ್ಯೆ ಏವದಾದರೂ ಅದು “ಅವಿದ್ಯೆ” ಹೇಳುವ ಕಲ್ಪನೆಯಿತ್ತು. ಪರಮಾತ್ಮ ಪರವಾಗಿಪ್ಪ ಆಧ್ಯಾತ್ಮಿಕ (ಆತ್ಮ) ಜ್ಞಾನವ ಮಾ೦ತ್ರವೇ ಅವರ ದೃಷ್ಟಿಲಿ ವಿದ್ಯೆ ಹೇಳುವ ನಿರ್ಣಯ ಮಾಡಿದ್ದವು). ಅ೦ತಸ್ತಿಮಿರಮಿಹಿರದ್ವೀಪನಗರೀ = ಒಳದಿಕೆ ಅಜ್ಞಾನ ಹೇಳುವ ಕತ್ತಲೆ೦ದ ಮುಚ್ಚಿದ ಆತ್ಮಕ್ಕೆ ಸಮುದ್ರ ಪ್ರದೇಶಲ್ಲಿಪ್ಪ ಸೂರ್ಯನ ಉದಯದ ಪಟ್ಟಣ (ಪ್ರಭಾಸ ನಗರ); ಜಡಾನಾ೦=ಆಲಸಿಗೊ(ಪೆದ್ದಗೊ, ಹೆಡ್ಡ೦ಗೊ); “ಚೇತನಾ” ಶಬ್ದಕ್ಕೆ “ಷಞ್” ಪ್ರತ್ಯಯ ಸೇರಿ ಚೈತನ್ಯ ಹೇದಾವುತ್ತು. ಚೇತನಾ ಹೇದರೆ ಒಳದಿಕ್ಕಿಪ್ಪ ವಸ್ತುಗಳ ಗೊ೦ತು ಮಾಡುವ (ಜ್ಞಾನ ಕೊಡುವ) ವಿಶೇಷ ಶಕ್ತಿ; ಸ್ತಬಕ = ಕಲ್ಪವೃಕ್ಷದ ಹೂಗಿನ ಗೊ೦ಚಲು; ಮಕರ೦ದ = ಪುಷ್ಪರೇಣುವಿನೊಳ ಇಪ್ಪ ಸೀವಿನ ದ್ರವ (ಜೇನ); ಸ್ರುತಿ = ಪ್ರವಾಹ, ಬೆಳ್ಳ; ದೇವಿಯ ಪಾದದ ಧೂಳು ಪೆದ್ದ೦ಗೊಕ್ಕೆ ಚೈತನ್ಯವ ಕೊಡುವ ಚೈತನ್ಯದ ಬೆಳ್ಳ ಹೇಳಿ ಅಭಿಪ್ರಾಯ; ದರಿದ್ರಾಣಾ೦= ದೀನರಿ೦ಗೆ; ಚಿ೦ತಾಮಣಿಗುಣನಿಕಾ=ಬಯಸಿದ್ದರ ಕೊಡುವ ಹರಳಿನ ರಾಶಿ (ಇದೊ೦ದು ಕವಿ ಸಮಯದ ಕಲ್ಲು. ಇ೦ದ್ರ ಸಭೆಲಿಪ್ಪ ಅನರ್ಘ್ಯ ವಸ್ತುಗಳ ವರ್ಣನೆಲಿ ಇದರ ಹೆಸರುದೆ ಪ್ರಾಚೀನ ಕಾವ್ಯ೦ಗಳಲ್ಲಿ ಕಾ೦ಬಲೆ ಸಿಕ್ಕುತ್ತು). ದೇವಿಯ ಪಾದದ ಧೂಳು ಚಿ೦ತಾಮಣಿರತ್ನದ ರಾಶಿಯಾಗಿ ದೀನರ ಇಷ್ಟಾರ್ಥವ ಈಡೇರ್ಸುತ್ತು ಹೇದು ಅಭಿಪ್ರಾಯ. ಜನ್ಮಜಲಧೌ= ಜನ್ಮಹೇಳಿರೆ ಸ೦ಸಾರ (“ಜನ್ಮ ಸ೦ಸಾರ ಬ೦ಧನಾತ್”- ಶ್ರೀ ವಿಷ್ಣುಸಹಸ್ರನಾಮ; ಪೂ.ಪೀಠಿಕೆ, ಶ್ಲೋಕ ೩); ನಿಮಗ್ನಾನಾ೦= ತೇ೦ಕು ಮುಳ್ಕಾಗಿಪ್ಪವಕ್ಕೆ; ದ೦ಷ್ಟ್ರಾ=ಕೋರೆದಾಡೆ; ಮುರರಿಪುವರಾಹಸ್ಯ =ಮುರ ಹೇಳುವ ದೈತ್ಯನ ಶತ್ರು, ವಿಷ್ಣು; ಈಶಬ್ದ ಇಲ್ಲಿ ಸ೦ಜ್ಞಾರ್ಥಕವಾಗಿ ಬಯಿ೦ದು. ಮುರರಿಪುವಿನ ವರಾಹ ಹೇದರೆ ವಿಷ್ಣುವಿನ ಅವತಾರಲ್ಲಿ ಒ೦ದು; ಭವತಿ=ಆವುತ್ತು. (ಸ೦ಸಾರಸಮುದ್ರಲ್ಲಿ ತೇ೦ಕು ಮುಳ್ಕಾಗಿಯೊ೦ಡಿಪ್ಪವಕ್ಕೆ ರಕ್ಕಸ ಹಿರಣ್ಯಾಕ್ಷ ಭೂದೇವಿಯ ಹೊತ್ತೊ೦ಡೋಗಿ ಸಮುದ್ರಲ್ಲಿ ಮುಳುಗಿಪ್ಪ ಸಮಯಲ್ಲಿ ಭೂದೇವಿಯ ಉದ್ಧರ್ಸಿದ ವರಾಹಾವತಾರಿ ಮಹಾವಿಷ್ಣುವಿನ ಕೋರೆದಾಡೆಯ ಹಾ೦ಗೆ ಉದ್ಧರ್ಸುತ್ತು ಹೇದು ಭಾವಾರ್ಥ.
ತಾತ್ಪರ್ಯ:
ಓ ಅಬ್ಬೆ, ನಿನ್ನ ಈ ಪಾದಕಮಲ ಪರಾಗ ಅಜ್ಞಾನಿಗಳ ಅಜ್ಞಾನ ಹೇಳುವ ಕರ್‍ಗೂಡಿಕತ್ತಲೆಗೆ, ಜ್ಞಾನ ಸೂರ್ಯನ ಉದಯ ದ್ವೀಪ ನಗರ. ಪೆದ್ದುಗೊಕ್ಕೆ ಚೈತನ್ಯವ ಕೊಡುವ ಕಲ್ಪವೃಕ್ಷದ ಹೂಗೊ೦ಚಲಿ೦ದ ಸೋರಿ ಹರಿವ ಜೇನದಾ ಬೆಳ್ಳ. ದರಿದ್ರ೦ಗೊಕ್ಕೆ ಇಷ್ಟಾರ್ಥ ಕೊಡುವ ಚಿ೦ತಾಮಣಿರತ್ನಕ೦ಠಿ. ಹುಟ್ಟು- ಸಾವು ಸಮುದ್ರಲ್ಲಿ ತೇ೦ಕು ಮುಳ್ಕಿಲ್ಲಿಪ್ಪವರ ಮೇಗೆ ಎತ್ತುವ ವರಾಹನ ಕೋರೆ ದಾಡೆ.
ವಿವರಣೆಃ-
ಇಲ್ಲಿ “ಮಿಹಿರ ದ್ವೀಪನಗರೀ” ಹೇಳುವದಕ್ಕೆ “ಮಿಹಿರೋದ್ದೀಪನಕರಿ” ಹೇದು ಪಾಠಾ೦ತರ ಇದ್ದು. ಅದಕ್ಕೆ ಬೆಣೆಚ್ಚೆತ್ತಿ ಹಿಡುದ ದೀಪ ಹೇಳುವ ಅರ್ಥ ಬತ್ತು. ಅದಕ್ಕಿ೦ತ ಮದಲಾಣದ್ದೇ ಹೆಚ್ಚು ಅರ್ಥವತ್ತಾಗಿ ತೋರುತ್ತು. ಆಧ್ಯಾತ್ಮ ಸಾಧನೆಯ ಹಾದಿಲಿ ಮು೦ದೆ ಹೋಯೆಕಾರೆ, ತು೦ಬಾ ಶ್ರಮ ಬೇಕು. ಇ೦ದ್ರಿಯಕ್ಕೆ ಸಿಕ್ಕುವ ಅನುಭವವೇ ಸತ್ಯ ಅಲ್ಲ. “ಸಾ ವಿದ್ಯಾ ಯಾ ವಿಮುಕ್ತಯೇ” ಹೇಳುವ ನಿರ್ವಚನೆಲಿ, ಪಾರಮಾರ್ಥಿಕ ಸತ್ಯದ ಜ್ಞಾನವ ಗಳುಸುವದೇ ಜೀವದ ಪರಮ ಗುರಿ ಹೇಳುವದೇ ಅರ್ಥ. ಆದರೆ ಈ ಭವ ಸಾಗರಲ್ಲಿ ಮುಳುಗಿಪ್ಪಾಗ, ದಾರಿ ಪೂರ್ಣ ಕರ್ಗೂಡಿಕತ್ತಲೆಲಿ ಮುಚ್ಚಿಯೊ೦ಡಿಪ್ಪಗ ಉದೆಗಾಲಾಣ ಬೆಣಚ್ಚಲ್ಲಿ ಎದ್ದು ಕಾ೦ಬ ನಗರದ ಹಾ೦ಗೆ ಅಬ್ಬೆ ತನ್ನ ಹತ್ತರೆ ಬಪ್ಪಲೆ ಬೆಣಚ್ಚಿನ (= ಸುಜ್ಞಾನವ) ಕೊಡುತ್ತು. ಸ೦ಸಾರ ಒ೦ದು ತೇ೦ಕು ಮುಳ್ಕಿನ ಅಪಾರ ಸಾಗರ! ಇಲ್ಲಿ೦ದ ಮೇಗೆ ಬಪ್ಪದು ಸುಲಭವೋ..!? ಆ ಸಮಯಲ್ಲೇ “ಉದೆಗಾಲಣ ಬೆಣಚ್ಚು” ಈ ಶಬ್ದಕ್ಕೆ ಅದೆಷ್ಟು ಅರ್ಥ! ಅ೦ಬಗ ಎ೦ಥ ಪ್ರಕೃತಿ! ಇರುಳೆಲ್ಲ ಕಳದು, ಕತ್ತಲೆಯು ಹರುದು, ಜೀವ ರಾಶಿಗೊ ಎಲ್ಲ ಬದುಕಿನ ಪಯಣಲ್ಲಿ ಹೊಸ ಹುರುಪಿಲ್ಲಿ ಕಾಲು ಮಡಗುವ ಕಾಲ! ಅದಕ್ಕೇ ಅದು “ಸುಪ್ರಭಾತ”ದ ಕಾಲ! ಹಾ೦ಗಾಗಿಯೇ ಅದು ಅ೦ತಿ೦ಥ ನಗರಿ ಅಲ್ಲ; “ಅಜ್ಞಾನಿಗಳ ಹೃದಯಾ೦ತರಾಳದ ಕತ್ತಲೆಯ ಕಳವ “ಮಿಹಿರದ್ವೀಪನಗರೀ” (ಪ್ರಭಾಸದ್ವೀಪ ನಗರ!) ಅರ್ಥಪುಷ್ಟಿ ಅದೆಷ್ಟು! ಅನನ್ಯ ಕಾವ್ಯ ಪ್ರತಿಭೆಗೆ ಒಳ್ಳೆಯ ಸಾಕ್ಷಿ! “ನವನವೋsನ್ಮೇಷ ಶಾಲಿನೀ ಪ್ರತಿಭಾ” ಮಾ೦ತ್ರವೇ ಅಲ್ಲ; ನವನವೋಲ್ಲೇಖ ಶಾಲಿನಿಯೂ ಅಪ್ಪು. ಸಹೃದಯ ಓದುಗ ಆ ಅನುಭವವ ತನ್ನದಾಗಿ ಮಾಡ್ಯೋಳೆಕಾರೆ, ಅವ ಏವ ಮಟ್ಟಕ್ಕೆ ಏರೆಡ..!? ಸುಮ್ಮನೆ ಅಲ್ಲ, ರಾಷ್ಟ್ರಕವಿ ಕುವೆ೦ಪು “ನಾನೇರುವೆತ್ತರಕೆ ನೀನೇರಬಲ್ಲೆಯಾ?” ಹೇದು ಸವಾಲು ಹಾಕಿದ್ದು, ವರಕವಿ ಡಾ। ಬೇ೦ದ್ರೆಯವು “ಬೆಳಗು” ಕವನ ಬರವಾಗ ಇ೦ಥ ಒ೦ದು ಸುಪ್ರಭಾತದ ದಿವ್ಯ ದರುಶನವ ಪಡದಿಪ್ಪಲೇ ಬೇಕು ಹೇದು ಆ ಪದ್ಯವ ಓದಿದವಕ್ಕೆಲ್ಲ ನೆನಪ್ಪಾಗದ್ದಿರ! “ಮೂಡಲ ಮನೆಯಾ ಮುತ್ತಿನ ನೀರಿನ ಎರಕವ ಹೋಯ್ದಾ!……” ಇದರ ಅಕೇರಿಗೆ–
ಗ೦ಧರ್ವರ ಸೀಮೆಯಾಯಿತು।
ಕಾಡಿನಾ ನಾಡು।
ಕ್ಷಣದುಳು- ಕಾಡಿನಾ ನಾಡು।….
ತನ್ಮಯವೀ ಗೇಹಾ।
ದೇವರ-ದೀ ಮನಸಿನಾ ಗೇಹಾ।
ಅರಿಯದು ಆಳವು ತಿಳಿಯದು ಮನವು।
ಕಾಣsದೋ ಬಣ್ಣಾ।
ಶಾ೦ತಿರಸವೇ ಪ್ರೀತಿಯಿ೦ದಾ।
ಮೈದೋರೀತಣ್ಣಾ।
ಇದು–ಬರಿ ಬೆಳಗಲ್ಲೋ ಅಣ್ಣಾ।
“ಇದು ಬರಿ ಬೆಳಗಲ್ಲೋ ಅಣ್ಣಾ (!)” ಎ೦ಥ ಅರ್ಥ ವ್ಯಾಪ್ತಿ ಈ ಸಾಲಿಲ್ಲಿ! ಅದೆ೦ಥಾ ಗೆನಾರ್ಥ ಇಲ್ಲಿಯೋ ಹೇಳಿ. ಹುಟ್ಟು-ಸಾವುಗಳ ನೆಡುವಾಣ ಅವಸ್ಥೆ ಜೀವಿಗೊಕ್ಕೆ ಒ೦ದು ಬಿಡ್ಸಲಾಗದ್ದ ಜೆ೦ಜಾಟ, ಬಲೆ; ಅದಕ್ಕೇ ಸಾವಿನ ಪ್ರಕೃತಿ ಹೇದೂ, ಜನನವ ವಿಕೃತಿ(“ಮರಣ೦ ಪ್ರಕೃತಿಃ ಶರೀರಾಣಾ೦ ವಿಕೃತಿರ್ಜೀವಿತಮುಚ್ಯತೇ”) ಹೇಳಿ ಕಾಳಿದಾಸ ಹೇಳಿದ್ದದು. ಜೆಡ ಚೈತನ್ಯಕ್ಕೆ ಕಲ್ಪವೃಕ್ಷದ ಹೂಗೊ೦ಚಲಿ೦ದ ತು೦ಬಿ ಸೋರಿ ಹರಿವ ಜೇನದ ಬೆಳ್ಳದ ಹಾ೦ಗೆ. ಅತಿ೦ಥ ವೃಕ್ಷ ಅಲ್ಲ; ಬಯಸಿದ್ದರ ಕೊಡುವ (ಕಲ್ಪವೃಕ್ಷ!) ಮರದ ಪುಷ್ಪಮಕರ೦ದ! ಸಾಮಾನ್ಯ ಜೇನದ ಮಹತ್ವವೇ ಅಸಾಮಾನ್ಯವಾಗಿಪ್ಪಗ; ಮತ್ತೆ ಈ ಜೇನದ ಘನಸ್ತಿಕೆಯ ಎಷ್ಟು ಕೊ೦ಡಾಡಿರೂ ಕಡಮ್ಮೆಯೆ! ದರಿದ್ರ೦ಗೊಕ್ಕೆ ಬ೦ಗಾರದ ಮಾಲೆಯೇ ಸಿಕ್ಕಿರೆ, ಕೇಳೆಕೋ? ಮತ್ತೆ ಸ್ವರ್ಗಕ್ಕೆ ಮೂರೇ ಮೂರು ಗೇಣು.ಆದರೋ ಇಲ್ಲಿ ಸಿಕ್ಕುವದು ಚಿ೦ತಾಮಣಿರತ್ನದ ಕ೦ಠಿ! ಮತ್ತವಕ್ಕೆಲ್ಲಿ ಚಿ೦ತೆ? ಜೆನುಮ ( =ಭವ, ಸ೦ಸಾರ) ಮೂನ್ನೀರಿಲ್ಲಿ (= ಮೂರು ನೀರುಗೊ ಸೇರಿಪ್ಪದು ಹೇದರೆ ಸಮುದ್ರ.) ಜಗದ್ಗುರು ಶ್ರೀ ಶ೦ಕರಾಚಾರ್ಯ ಸ್ವಾಮಿಗಳು ಚರ್ಪಟ ಮ೦ಜರಿಕಾ ಸ್ತೋತ್ರಲ್ಲಿ (ಹೇದರೆ ಭಜ ಗೋವಿ೦ದ ಸ್ತೋತ್ರಲ್ಲಿ,) “ಪುನರಪಿ ಜನನ೦ ಪುನರಪಿ ಮರಣ೦ ಪುನರಪಿ ಜನನೀ ಜಠರೇ ಶಯನ೦….” ಹೇಳಿ ಉಪದೇಶಿಸಿದಾ೦ಗೆ) ತೇ೦ಕು ಮುಳ್ಕಾಗಿದ್ದವಕ್ಕೆ ಶ್ರೀ ವರಾಹನ ಕೋರೆ ದಾಡೆ! ಹಿರಣ್ಯಾಕ್ಷ ಭೂಮಿಯನ್ನೇ ಕದ್ದೊ೦ಡು ಹೋದಪ್ಪಗ ಮಹಾವಿಷ್ಣು ದೇವರು ವರಾಹ ಅವತಾರವ ತಾಳಿ ಆ ರಕ್ಕಸನ ಕೋರೆದಾಡೆಲಿ ಸಿಗ್ದು ಹಾಕಿ, ಅದರಲ್ಲಿಯೇ ಭೂದೇವಿಯ ಮೇಗ೦ತಾಗಿ ತ೦ದನಡ. ಇಲ್ಲಿ ಸ೦ಸಾರ ಸಮುದ್ರಲ್ಲಿ ಮುಳುಗೇಳುವವರ, ಹಾ೦ಗೆಯೇ ಜಗದ೦ಬೆ ಕಾಪಾಡುತ್ತು. (“ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ ಸರ್ವಸ್ಯಾರ್ತಿ ಹರೇ ದೇವಿ ನಾರಾಯಣಿ ನಮೋSಸ್ತುತೇ” ಹೇದು ಸಪ್ತಶತಿಲಿ ದೇವಿಯ ಬಗ್ಗೆ ಹೇಳಿದ್ದು ನೆ೦ಪಾವುತ್ತು.) ಶರಣರ ರಕ್ಷಣೆಯೇ ಅಬ್ಬೆಯ ಗುಣವಾಗಿ,”ಶರಣ್ಯೆ” ಹೇಳುವ ಸ೦ಬೋಧನೆಯ ಅರ್ಥ ಸಾರ್ಥಕವ ಪಡದತ್ತು. ಈ ಶ್ಲೋಕಲ್ಲಿ ರೂಪಕ, ಪರಿಣಾಮ, ಉಲ್ಲೇಖಾದಿ ಅಲ೦ಕಾರ೦ಗೊ ಸ್ವಾರಸ್ಯಪೂರ್ಣವಾಗಿ ಬಯಿ೦ದು.
ಪ್ರಯೋಗಃ-
೧.ಅನುಷ್ಠಾನ ವಿಧಿಃ– ೩ನೇ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು, ಈಶಾನ್ಯಕ್ಕೆ ಮೋರೆ ಮಾಡಿ ೧೨ದಿನ,ದಿನಕ್ಕೆ ೧೦೦೮ ಸರ್ತಿ(೩ ನೇಶ್ಲೋಕ೦ದ)ಜೆಪ.
೨..ಅರ್ಚನೆಃ- ಬೆಳಿ(ಮಲ್ಲಿಗೆ)ಹೊಗಿ೦ದ ಲಲಿತಾತ್ರಿಶತಿ೦ದ ಅರ್ಚನೆ.
೩.ನೇವೇದ್ಯಃ– ಉದ್ದಿನೊಡೆ,ಜೇನ,ತಾ೦ಬೂಲ
೪.ಫಲಃ- ಐಶ್ವರ್ಯ, ವೇದಾದಿ ವಿದ್ಯಾ ಪ್ರಾಪ್ತಿ.
ಶ್ಲೋಕ:
ತ್ವದನ್ಯಃ ಪಾಣಿಭ್ಯಾಮ್ ಅಭಯವರದೋ ದೈವತಗಣಃ
ತ್ವಮೇಕಾ ನೈವಾಸಿ ಪ್ರಕಟಿತ ವರಾಭೀತ್ಯಭಿನಯಾ ।
ಭಯಾತ್ತ್ರಾತು೦ ದಾತು೦ ಫಲಮಪಿ ಚ ವಾ೦ಛಾಸಮಧಿಕ೦
ಶರಣ್ಯೇ ಲೋಕಾನಾ೦ ತವ ಹಿ ಚರಣಾವೇವ ನಿಪುಣೌ || 4 ||
ಪದ್ಯ:
ಅಭಯವರ ಕಯಿಮುದ್ರೆ ನಿನ್ನ ಬಿಟ್ಟೊಳುದ ದೇವತೆಗೊಕ್ಕೆಲ್ಲ
ನೀ ಕೊಡುವೆ, ಸುಳ್ದಿದಿಲ್ಲೆ ಆ ನಟನೆ ನಿನ್ನ ಕಡಗೆ |
ಭಯ ಹಿ೦ಗುವಾ೦ಗೆ ಹೆಚ್ಚಿನ ಫಲ ಕೊಡುವ ‘ಶರಣ್ಯೆ’ ನೀನು
ನಿನ್ನಾ ಪಾದ೦ಗಳೇ ಸಾಕು ಆಯೆಲ್ಲ ಸೌಭಾಗ್ಯವನ್ನೆ ಕೊಡುಗು ॥ ೪ ॥
ಶಬ್ದಾರ್ಥಃ-
(ಹೇ ಭಗವತಿ,) ಲೋಕಾನಾ೦ ಶರಣ್ಯೇ = ಎಲ್ಲಾ (ಹದಿನಾಲ್ಕು) ಲೋಕ೦ಗಳನ್ನೂ ಕಾಪಾಡ್ಲೆ ಯೋಗ್ಯಳಾದ; ತ್ವತ್=ನಿನ್ನ೦ದಲೂ; ಅನ್ಯಃ= ಬೇರೆಯಾದ; ದೈವತಗಣಃ = ಇ೦ದ್ರಾದಿ ದೇವತಗಳ ಸಮೂಹ; ಪಾಣಿಭ್ಯಾಮ್ = ಎರಡು ಕಯಿ೦ದ; ಅಭಯವರದಃ = ಅಭಯ ಹಾ೦ಗು ವರದ ಮುದ್ರಗಳ (ಅಭಯ = ಹೆದರೆಡ ಹೇದು ಧೈರ್ಯವ ಅ೦ಗೈಯ ಮೇಗ೦ಗೆ ನೆಗ್ಗಿ ತೋರ್ಸುವ ರೀತಿ; ‘ವರದ’ ಹೇದರೆ ಅ೦ಗೈಯ ಕೆಳ ಮಾಡಿ ಇಷ್ಟಾರ್ಥವ ಕೊಡುವ ಸ೦ಜ್ಞೆ. (ಭರತ ನಾಟ್ಯಲ್ಲಿ ಇವೆಲ್ಲವುದೆ ಹಸ್ತ ಮುದ್ರೆಯ ಭ೦ಗಿಗೊ. “ಊರ್ಧ್ವಾರ್ಧ ಪ್ರಸುತಾವರ್ಧಚ೦ದ್ರಾಖ್ವ್ಯೌ ವಾಮದಕ್ಷಿಣೌ| ಅಭಯೋವರದಶ್ಚೈವ ಪಾರ್ವತ್ಯಾಃ ಕರ ಈರಿತಃ| – ನಾಟ್ಯಶಾಸ್ತ್ರ.); ಏಕಾ ತ್ವಮೇವ = ನೀನೊ೦ದೇ; ಪಾಣಿಭ್ಯಾ೦=ಎರಡು ಕೈಯಿ೦ದ; ಪ್ರಕಟಿತವರಾಭೀತ್ಯಭಿನಯಾ ನೈವಾಸಿ ಹಿ = ವರಾಭಯ ಮುದ್ರಗಳ ನಟನೆ ಮಾಡಿ ತೋರ್ಸುತ್ತಿಲ್ಲೆ; ಇತಿ ಸ೦ಚಿತ್ಯ = ಹೀ೦ಗೆ ಯೋಚನೆ ಮಾಡಿ; ತವ =ನಿನ್ನ; ಚರಣ ಏವ = ಪಾದ೦ಗಳೇ; ಭಯಾತ್ ತ್ರಾತು೦ = ಸ೦ಸಾರದ ಭಯ೦ದ ರಕ್ಷಣೆ ಮಾಡ್ಲುದೆ; ಅಪಿ= ಮತ್ತೆ; ದಾತು೦ ಫಲ೦= ಬಯಸಿದ್ದಕ್ಕ ಅನುರೂಪದ ಫಲವ ಕೊಡ್ಲುದೆ; ಚ = ಮತ್ತುದೆ; ವಾ೦ಛಾಸಮಧಿಕ೦= ಆಶಿಸಿದ್ದಕ್ಕೂ ಹೆಚ್ಚಿಗೆ (ಫಲವ ಕೊಡ್ಲುದೆ); ನಿಪುಣೌ= ಸಮರ್ಥವಾಯಿದು.
ತಾತ್ಪರ್ಯ:
ನಿನ್ನ ಹೊರತಾಗಿ ಬೇರೆಲ್ಲ ದೇವರುಗೊ ವರದ, ಅಭಯ ಮುದ್ರೆಗಳ ಕಯಿಲಿ ತೋರುಗು. ಆದರೆ ನೀನು ಮಾ೦ತ್ರ ಈ(ಕಯಿಲಿ ವರದಾಭಯ ಮುದ್ರೆಯ) ನಟನೆ ಮಾಡದ್ದಿಪ್ಪೋಳು.(ಹಾ೦ಗೆ ಮಾಡಿರೆ ಇ೦ದ್ರಾದಿ ಎಲ್ಲಾ ದೇವತಗೊಕ್ಕೆ ಸರ್ವಶ್ರೇಷ್ಠೆಯಾದ ಅಬ್ಬೆಯೂ ಸಮಾನ ಹೇಳಿದಾ೦ಗೆ ಆವುತ್ತು.) ನಿನ್ನ ಎರಡು ಶ್ರೀಚರಣಕ್ಕೂ, ಶರಣು ಹೊಕ್ಕವರ ಸ೦ಸಾರ (ಜೆನನ ಮರಣದ)ಭಯದ ದೆಶೇ೦ದ ಕಾಪಾಡ್ಸರೊಟ್ಟಿ೦ಗೆ, ಅವರ ಇಷ್ಟಾರ್ಥವ ಮಾ೦ತ್ರಲ್ಲದ್ದೆ, ಅದಕ್ಕೂ ಹೆಚ್ಚಿನ ಫಲವ ಕೊಡ್ಲೆ ಸಾಮರ್ಥ್ಯ ಇದ್ದು. ಈ ಕಾರಣ೦ದಲೇ ನೀನು ಕಯಿಲಿ ವರದ ಅಭಯ ಮುದ್ರಗಳ ತೋರ್ಸುತ್ತಿಲ್ಲೆ. ಶಕ್ತಿ ಸ್ವರೂಪಿಣಿ ಶ್ರೀಲಲಿತಾ ಮಾತೆ ಲೋಕ ಶರಣ್ಯೆ. ಉಳುದ ಎಲ್ಲಾ ದೇವತಗಳೂ ಭಕ್ತರ ಭಯವ ಕಳದು, ಅಭೀಷ್ಟವ ಈಡೇರ್ಸವದರ ವರದ, ಅಭಯ ಮುದ್ರಾದಿಗಳ ಕಯಿ ನಟನೆಲಿ ಸೂಚಿಸಿರೆ, ಜಗಜ್ಜನನಿ ಈ ನಟನೆ ಮಾಡದ್ದೋಳು! ಆ ಎರಡೂ ಕೆಲಸವನ್ನುದೆ ಅಬ್ಬೆಯ ಪಾದ೦ಗಳೇ ಮಾಡ್ತನ್ನೆ.( ಶ್ರೀ ಮಹಾತ್ರಿಪುರ ಸು೦ದರಿಯ ಶ್ರೀಪಾದಗಳ ಮಾಹಿಮೆಯ ವರ್ಣನೆ ಭಕ್ತ ಜೆನಮನೋರಮ್ಯ.
(ಇಲ್ಲಿ ವ್ಯತಿರಿಕ್ತ, ವಾಕ್ಯಲಿ೦ಗ, ಕಾವ್ಯಲಿ೦ಗಾದಿ ಅಲ೦ಕಾರ೦ಗೊ ಲಾಯಕಾಗಿ ಬಯಿ೦ದು.)
ಪ್ರಯೋಗಃ-
೧.ಅನುಷ್ಠಾನ ವಿಧಿಃ– ೪ನೇ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು, ಈಶಾನ್ಯಕ್ಕೆ ಮೋರೆ ಮಾಡಿ ಕೂದು,೧೨ದಿನ ನಿತ್ಯವೂ ೧೦೦೧ ಸರ್ತಿ ಈ ಶ್ಲೋಕ೦ದ ಜೆಪ.
೨..ಅರ್ಚನೆಃ- ಲಲಿತಾ ಸಹಸ್ರನಾಮ೦ದ ಕು೦ಕುಮಾರ್ಚನೆ.
೩.ನೇವೇದ್ಯಃ- ಹುಗ್ಗಿ, ಅಶನ,ಹಾಲು,ಕಬ್ಬು
೪.ಫಲಃ- ರೋಗದಾರಿದ್ರ್ಯಾದಿ ನಿವೃತ್ತಿ,ಐಶ್ವರ್ಯಪಾಪ್ತಿ.
ಶ್ಲೋಕ
ಹರಿಸ್ತ್ವಾಮಾರಾಧ್ಯ ಪ್ರಣತ ಜನ ಸೌಭಾಗ್ಯ ಜನನೀ೦
ಪುರಾ ನಾರೀ ಭೂತ್ವಾ ಪುರರಿಪುಮಪಿ ಕ್ಷೋಭಮನಯತ್ ।
ಸ್ಮರೋsಪಿ ತ್ವಾ೦ ನತ್ವಾ ರತಿನಯನ ಲೇಹ್ಯೇನವಪುಷಾ
ಮುನೀನಾಮಪ್ಯ೦ತಃ ಪ್ರಭವತಿ ಹಿ ಮೋಹಾಯ ಮಹತಾಮ್ || 5 ||
ಪದ್ಯ:
ಅಬ್ಬೆ, ಶರಣಜೆನಸೌಭಾಗ್ಯೆ, ಮದಲು ಹರಿ ನಿನ್ನ ಭಜಿಸಿ
ಪಡದ ಮೋಹಿನಿ ರೂಪ ತ್ರಿಪುರಾರಿ ಮನಸಾತು ಚಲಿತ
ರತಿಯ ಕಣ್ಬೊ೦ಬೆ ಆ ಮನಸಿಜನೆ ಆದರೂ ನಿನ್ನ ನಮಿಸಿ
ಮುನಿಗಳಾ೦ತರ್ಯವಾ ಮೋಹಿಸಿ ಗೆಲಲಾದವ ಸಮರ್ಥ. ॥ ೫ ॥
ಶಬ್ದಾರ್ಥಃ-
ಹೇ ಭಗವತಿ, ಪ್ರಣತಜನಸೌಭಗ್ಯಜನನೀ೦= ಭಕ್ತ ಜೆನ೦ಗೊಕ್ಕೆ ಸಕಲ ಸೌಭಾಗ್ಯವ ಕೊಡುವ ಅಬ್ಬೇ; ತ್ವಾ೦=ನಿನ್ನ; (ಕಾಯಿಕಾ,ವಾಚಿಕಾ, ಮಾನಸಿಕ ಈ ಮೂರು ವಿಧಲ್ಲಿ ನಿನಗೆ ನಮಸ್ಕಾರ ಮಾಡುವ ಭಕ್ತ ಜೆನ೦ಗಕ್ಕೆ ಸರ್ವ ಸೌಭಾಗ್ಯವ ಕೊಡುವ ನಿನ್ನ) ಹರಿಃ= ವಿಷ್ಣು; ತ್ವಾಮ್ =ನಿನ್ನ ಹೇಳಿರೆ, ಶ್ರೀಚಕ್ರೇಶ್ವರಿಯೂ, (ಶ್ರೀವಿದ್ಯಾರೂಪಿಣಿಯೂ) ಆದ ನಿನ್ನ ಹೇದು ಅರ್ಥ; ಆರಾಧ್ಯ = ಪೂಜೆ (ಜೆಪ, ಉಪಾಸನೆ) ಮಾಡಿ; (ಅದಕ್ಕೇ ತ್ರಿಪುರ ಸು೦ದರೀ ಪಸ್ತಾರ ಪ್ರಕಾರಲ್ಲಿ ಒ೦ದಕ್ಕೆ ವಿಷ್ಣುವೇ ಋಷಿಯೂ ಆಗಿಪ್ಪದು. ಪ೦ಚದಶಾಕ್ಷರೀ ವಿದ್ಯೆಯ ಪ್ರಸ್ತಾಪ ವೇದಲ್ಲಿಯೇ ಇದ್ದು. (“ಚತ್ವಾರ ಈ೦ ಬಿಭ್ರತಿ ಕ್ಷೇಮಯ೦ತಃ” – ಋಗ್ವೇದ); ಪುರಾ ನಾರೀ ಭೂತ್ವಾ = ಮದಲೆ ಸ್ತ್ರೀರೂಪವ ಧರಿಸಿ; ಪುರರಿಪು೦ ಅಪಿ = ತ್ರಿಪುರಾ೦ತಕನಾದ ಈಶ್ವರನನ್ನೂದೆ (ಕಾಮಧ್ವ೦ಸಿಯೂ, ಜಿತೇ೦ದ್ರಿಯೂ ಆದ ಶ೦ಭುವ ಹೇಳಿ ಅಭಿಪ್ರಾಯ); ಕ್ಷೋಭ೦= ಮನೋವಿಕಾರವ; ಅನಯತ್ = ಅಪ್ಪಾ೦ಗೆ ಮಾಡಿದ ಸ್ಸ್ಮರೋsಪಿ = ಮನ್ಮಥನುದೆ ವಿಷ್ಣುವಿನಾ೦ಗೆ; ತ್ವಾ೦ ನತ್ವಾ = ನಿನ್ನ ಶರಣು ಹೊ೦ದಿ ಹೇಳಿರೆ, ಶ್ರೀಚಕ್ರವ (ಶ್ರೀವಿದ್ಯೆಯ) ಉಪಾಸನೆ ಮಾಡಿ; ರತಿನಯನಲೇಹ್ಯೇನ = ರತಿದೇವಿಯ ನಯನಾನ೦ದ ಅಸ್ವಾದನೀಯವಾದ (ಮನೋಹರವಾದ ರೂಪವ); ವಪುಷಾ= ಶರೀರ೦ದ; ಮಹತಾ೦ ಮುನಿನಾ೦ ಅಪಿ = ಜಿತೇ೦ದ್ರಿಯರೂ ಮಹಾತ್ಮರೂ ಆದ ಮುನಿಗಳನ್ನೂ ಸಮೇತ ಅ೦ತರ೦ಗಲ್ಲಿ (ಚಿತ್ತವೃತ್ತಿಲಿ); ಹಿ=ಕ೦ಡಿತವಾಗಿಯೂ; ಮೋಹಾಯ=ವಿಷಯ೦ಗಳಲ್ಲಿ ಆಶೆ ಮೂಡ್ಸಲೆ; ಪ್ರಭವತಿ= ಸಮರ್ಥ ಆವುತ್ತ°.
ತಾತ್ಪರ್ಯ:
ಹೇ ಭಗವತಿ,ಶರಣಾಗತರಾದ ಭಕ್ತ ಜೆನಗೊ೦ಕ್ಕೆ (ಕಾಯಿಕ,ವಾಚಿಕ,ಮಾನಸಿಕ ಈ ಮೂರು ವಿಧಲ್ಲಿ ನಮಸ್ಕಾರ ಮಾಡುವ ಭಕ್ತ೦ಗೊಕ್ಕೆ)ಸೌಭಾಗ್ಯವ ಕೊಡುವ ನಿನ್ನಾ ವಿಷ್ಣು ದೇವರು ಕೃತ ಯುಗಲ್ಲಿ ಮದಾಲು ನಿನ್ನ ಉಪಾಸನೆ ಮಾಡಿ,ಜಗನ್ಮೋಹಕ ಮೋಹಿನಿ ರೊಪವ ಪಡದು,ತ್ರಿಪುರಾ೦ತಕ೦ಗೂ(ಈಶ್ವರ೦ಗೂ)ಮನೋವಿಕಾರವ ಮಾಡಿದವು.ರತಿ ದೇವಿಯ ನಯನಮೋಹನಮನ್ಮಥನೂ ನಿನ್ನ ಉಪಾಸನೆಯ ಬಲ೦ದ ಜಿತೇ೦ದ್ರಿಯರಾದ ಮಹಾಮುನಿಗಳ ಮನಸ್ಸಿಲ್ಲಿ ಮೋಹವ ಹುಟ್ಸವ ಸಾಮರ್ಥ್ಯವ ಪಡದ°.
ವಿವರಣೆಃ
ಸಮುದ್ರ ಮಥನದ ಕಾಲಲ್ಲಿ, ಅಮೃತವ ಹ೦ಚುವ ಸ೦ದರ್ಭಲ್ಲಿ ಶ್ರೀ ವಿಷ್ನು ದೇವರು ಮೋಹಿನೀ ರೂಪವ ತಾಳಿದ್ದರ ಕ೦ಡು ಕಾಮಾರಿ ( ಶಿವ೦ ) ಗೂ ಮನೋವಿಕಾರ ಆತಡ! ಇ೦ಥ ಅಮೋಘ ಸೌ೦ದರ್ಯವ ಶ್ರೀಹರಿ ನಿನ್ನ ಆರಾಧನೆಯ ಮಾಡಿದ್ದರ ಫಲ! ವಾಮಕೇಶ್ವರ ತ೦ತ್ರದ ಚತುಶ್ಶತಿಲಿ ಈ ವಿಷಯದ ಬಗಗೆ ಎ೦ತ ಹೇಳ್ತು ಹೇದರೆಃ-
“ಏತಾಮೇವ ಪುರಾ ಧ್ಯಾತ್ವಾ ವಿದ್ಯಾ೦ ತ್ರೈಲೋಕ್ಯ ಸು೦ದರೀಮ್ |
ತ್ರೈಲೋಕ್ಯ೦ ಮೋಹಯಾಮಾಸ ಕಾಮಾರಿ೦ ಭಗವಾನ್ ಹರಿಃ ॥”
ಅಷ್ಟೇ ಅಲ್ಲ ಮನೋಜನುದೆಃ-
“ಕಾಮದೇವೋsಪಿ ದೇವೇಶೀ೦ ಮಹಾತ್ರಿಪುರ ಸು೦ದರೀ೦|
ಸಮಾರಾಧ್ಯಾಭವಲ್ಲೋಕೇ ಸರ್ವಸೌಭಾಗ್ಯ ಸು೦ದರಃ ॥”
ಈ ಉಕ್ತಿಗೊ ಮೇಲಾಣ ಅಭಿಪ್ರಾಯವ ಮತ್ತಷ್ಟೂ ಪುಷ್ಟೀಕರ್ಸುತ್ತು.( ಮ೦ತ್ರ ಶಾಸ್ತ್ರಲ್ಲಿ ತ್ರೈಲೋಕ್ಯ ಮೋಹನ ಗೌರೀ ಮ೦ತ್ರ ಒ೦ದರ ಉಲ್ಲೇಖ ಇದ್ದು. ಇದರ ದೃಷ್ಟಾರನೂ ಋಷಿಯೂ ಆರು ಹೇದು ಕೇಟರೆ ಸಾಕ್ಷಾತ್ ಬ್ರಹ್ಮ ದೇವರೆ. ಐಹಿಕ ಕಾಮನಗಳ ಸಿದ್ಧಿಗೆ ಫಲಪ್ರದವಾದ ಮ೦ತ್ರ ಇದಾಗಿದ್ದು. ಇದರ ಯ೦ತ್ರಲ್ಲಿ ಅನ೦ಗ ಗಾಯತ್ರಿ, ಪ೦ಚಬಾಣ ಮ೦ತ್ರ೦ಗೊ ಇತ್ಯಾದಿಗಳ ಎಲ್ಲಿ ಹೇ೦ಗೆ ಬರೆಕು ಅದರ ಪ್ರಯೋಜನಾದಿಗಳ ವಿವರ ನೋಡುವಾ೦ಗಿದ್ದು.) ಸರ್ವ ಯ೦ತ್ರ ಮ೦ತ್ರ ತ೦ತ್ರ ತತ್ತ್ವಾತ್ಮಿಕೆಯಾದ ಸರ್ವೇಶ್ವರಿಯ ಉಪಾಸನೆ ಮಾಡಿಯೇ ಮನು ಮುನಿ ದೇವತಗೊ ಅವರವರ ಕಾರ್ಬಾರ೦ಗಳ (ಕರ್ತವ್ಯ೦ಗಳ) ಯಶಸ್ವಿಯಾಗಿ ನೆರವೇರ್ಸ್ತಾ ಇದ್ದವು! ಮದಲೆ ಈ ಶ್ರೀವಿದ್ಯೋಪಾಸನೆಯ ಹನ್ನೆರಡು ಜೆನ ಮಾಡಿದ್ದು, ಆ ವಿವರ೦ಗೊ ಹೀ೦ಗಿದ್ದಿದ:-
ಮನುಶ್ಚ೦ದ್ರ ಕುಬೇರಶ್ಚ ಲೋಪಮುದ್ರಾ ಚ ಮನ್ಮಥ: |
ಅಗಸ್ತಿರಗ್ನಿ ಸೂರ್ಯಶ್ಚ ಇ೦ದ್ರಸ್ಕ೦ದಶಿವಸ್ತಥಾ |
ಕ್ರೋಧಭಟ್ಟಾರಕೋದೇವ್ಯಾ ದ್ವಾದಶಾನಿ ಉಪಾಸಕಾ: ||
ಹಿ೦ಗೆ ಮನು, ಚ೦ದ್ರ, ಕುಬೇರ, ಲೋಪಾಮುದ್ರೆ, ಮನ್ಮಥ, ಅಗಸ್ತ್ಯ,ಅಗ್ನಿ, ಸೂರ್ಯ, ಇ೦ದ್ರ, ಷಣ್ಮುಖಸ್ವಾಮಿ, ಶಿವ°, ಮಹರ್ಷಿದುರ್ವಾಸ – ೧೨ ಹೆಸರುಗೊ ಶ್ರೀವಿದ್ಯೋಪಾಸಕರ ಸಾಲಿಲ್ಲಿ ಪ್ರಸಿದ್ಧವಾದವು. ಸಿಕ್ಕಿಸಿಕ್ಕಿದವೆಲ್ಲ ಈ ಮ೦ತ್ರವ ಉಪಾಸನೆ ಮಾಡುವ ಹಾ೦ಗಿಲ್ಲೆ ಹೇದು ತ೦ತ್ರ- ಮ೦ತ್ರ ಶಾಸ್ತ್ರ೦ಗೊ ಗ೦ಭೀರವಾಗಿಯೇ ನಿರ್ದೇಶನ ಮಾಡಿದ್ದವು. ನೋಡಿ:-
ಇಯ೦ ತು ಸು೦ದರೀ ವಿದ್ಯಾ ದೇವಾನಾಮಪಿ ದುರ್ಲಭಾ |
ಗೋಪನೀಯ ಪ್ರಯತ್ನೇನ ಸರ್ವಸ೦ಪತ್ಕರೀ ಮತಾ || 2 ||
ಅಪರೀಕ್ಷಿತಶಿಷ್ಯಾಯ ತಾ೦ ನ ದದ್ಯಾತ್ಕದಾಚನ |
ಯದುಚ್ಚಾರಣಮಾತ್ರೇಣ ಪಾಪಸ೦ಘ: ಪ್ರಲೀಯತೇ |
ಆತ್ಮಾ ದೇಯ: ಶಿರೋ ದೇಯ೦ ನ ದೇಯಾ ಷೋಡಾಕ್ಷರೀ || 3 ||
– ( ೬ನೇ ತರ೦ಗ; ಮ೦ತ್ರ ಮಹಾರ್ಣವ ತ೦ತ್ರಮ್)
ಇದೇ ಅಭಿಪ್ರಾಯವ ಲಲಿತಾ ತ್ರಿಶತೀನಾಮಸ್ತೋತ್ರದ ಅವತರಣಿಕೆ (ಪೂರ್ವ ಪೀಠಿಕೆ)ಲಿಯುದೆ ಸ್ವತ: ಶ್ರೀ ದೇವಿಯೇ ಶ್ರೀ ಹಯಗ್ರೀವ ಸ್ವಾಮಿಗೆ ಹೀ೦ಗೆ ಹೇಳಿದ್ದರ ಕಾ೦ಬಲಕ್ಕು ನೋಡಿ:-
ಶ್ರೀ ದೇವ್ಯುವಾಚ
ಅಶ್ವನನಾವಯೋಃ ಪ್ರೀತಿಃ ಶಾಸ್ತ್ರ ವಿಶ್ವಾಸಿನೀ ತ್ವಯಿ |
ರಾಜ್ಯ೦ ದೇಯ೦ ಶಿರೋ ದೇಯ೦ ನ ದೇಯಾ ಷೋಡಶಾಕ್ಷರೀ || 10 ||“ದೇವತಗೊಕ್ಕು ದುರ್ಲಭವಾದ ಸರ್ವವಿಧ(ಲೌಕಿಕ ಹಾ೦ಗೂ ಪಾರ ಲೌಕಿಕ)ವಾದ, ಪರಿಪೂರ್ಣವೂ, ಶಾಶ್ವತವೂ ಆದ ಸ೦ಪತ್ತುಗಳ ಕೊಡುವ ಈ ಶ್ರೀವಿದ್ಯಾಮ೦ತ್ರವ ಪ್ರಯತ್ನಮಾಡಿ ರಹಸ್ಯವಾಗಿಯೇ ಮಡಗಿಯೊಳೆಕು. ಏವದರ ಉಚ್ಚಾರಣೆ ಮಾಡಿದ ಮಾ೦ತ್ರಕ್ಕೇ ಪಾಪರಾಶಿಗೊ ಸ೦ಪೂರ್ಣ ನಾಶವಾವುತ್ತೋ ಅ೦ಥ ಈ ಮ೦ತ್ರವ ಶಿಷ್ಯನ ಕೂಲ೦ಕಷವಾಗಿ ಪರೀಕ್ಷೆ ಮಾಡದ್ದೆ ಏವತ್ತೂ ಉಪದೇಶ ಕೊಡ್ಲಾಗ! ಆತ್ಮವನ್ನಾಗಲೀ, ತಲೆಯನ್ನೆಯಾಗಲೀ ಕೊಡ್ಲಕ್ಕಾದರೂ ಷೋಡಶಾಕ್ಷರೀ ಮ೦ತ್ರವ (ಅಪಾತ್ರರಿ೦ಗೆ) ಮಾ೦ತ್ರ ಉಪದೇಶ ಕೊಡ್ಲಾಗ.” ಇದು ಮ೦ತ್ರ ಮಹಾರ್ಣವ ಹೇಳಿಕೆಯ ಅರ್ಥ.
ಶ್ರೀ ಹಯಗ್ರೀವ ಸ್ವಾಮಿಗೆ ಶ್ರೀಲಲಿತಾದೇವಿ “ಹೇ ಹಯಗ್ರೀವ, ಶಾಸ್ತ್ರ೦ಗಳಲ್ಲಿ ವಿಶ್ವಾಸ ಇಪ್ಪ ನಿನ್ನ ಮೇಗಾಣ ವಾತ್ಸಲ್ಯ೦ದ ಅತಿಗೌಪ್ಯವಾದ ಈ ಸ್ತುತಿಯ ವಿಸ್ತಾರವಾಗಿ ಹೇಳ್ತೆ. ರಾಜ್ಯವನ್ನಾಗಲೀ, ತಲೆಯನ್ನಾಗಲಿ ಕೊಡ್ಲಕ್ಕಾದರೂ ಹದಿನಾರಕ್ಷರದ ಈ ಮ೦ತ್ರವ ಮಾ೦ತ್ರವ ರಹಸ್ಯಲ್ಲಿ ಮಾಡಿಗ್ಯೊಳಕು.” ನಿರ್ದೇಶನ ಮಾಡಿದ್ದವು.
ಇನ್ನು ಅದರ ಎಷ್ಟು ಗೌಪ್ಯವಾಗಿರ್ಸೆಕು ಹೇಳ್ವದನ್ನೂ , ಅದೇ ಸ೦ದರ್ಭದ ಹನ್ನೊ೦ದನೆಯಶ್ಲೋಕಲ್ಲಿ ನೋಡಿ:-
ಸ್ವಮಾತೃಜಾರವತ್ ಗೋಪ್ಯಾ ವಿದ್ಯೈಷೇತ್ಯಾಗಮಾ ಜಗುಃ |
ತತೋsತಿಗೋಪನೀಯಾ ಮೇ ಸರ್ವ೦ಪೂರ್ತಿ ಕರೀ ಸ್ತುತಿಃ || 11 ||
ಇ೦ಥ ಮ೦ತ್ರೋಪಾಸನೆಯ ಬಲ೦ದಲೇ ಶ್ರೀ ವಿಷ್ಣು ಹಾ೦ಗು ಅನ೦ಗಾದಿಗೊ , ಶಿವನನ್ನೂ, ಜಗತ್ತನ್ನೂ ಗೆದ್ದವು. ತ್ರಿಪುರಸು೦ದರಿಯ ಪ್ರಸ್ತಾರ ಭೇದಲ್ಲಿ ಒ೦ದಕ್ಕೆ ಋಷಿ ವಿಷ್ಣು; ಅನ೦ಗ ವಿದ್ಯೆಲಿ ಮನ್ಮಥಪ್ರಸ್ತಾರದ ಋಷಿಯುದೆ ಮನೋಜನೆ ಆಗಿಪ್ಪದರಿ೦ದ ಅವನ ಗೆಲುವೇನಿದ್ದರೂ ಅದು ಜಗಜ್ಜನನಿಯ ಕೃಪಾಕಟಾಕ್ಷ೦ದ ಹೇಳ್ವದು ಐದನೆಯ ಶ್ಲೋಕದ ಒಟ್ಟಾರೆ ಆಭಿಪ್ರಾಯ. ಇ೦ಥ ಪರಮ ಪಾವನೆಯ ಪವಿತ್ರ ಪಾದ೦ಗೊಕ್ಕೆ ಎಣೆಯಾದರೂ ಅದೆಲ್ಲಿ! ಈಪಾರಮ್ಯವ ಮಹಾಕವಿ ಕಾಳಿದಾಸ ಶ್ಯಾಮಲಾ ದ೦ಡಕಲ್ಲಿ ಕೊ೦ಡಾಡಿದ ರೀತಿ ಅನನ್ಯ, ಸಾರ್ಥಕ ; ರಮ್ಯವೋ ರಮ್ಯ !
“ಜಯ ಜನನಿ……………ಸುಧಾಸಮುದ್ರಾ೦ತಹೃದ್ಯನ್ಮಣಿದ್ವೀಪಸ೦ರೂಢಬಿಲ್ವಟವೀಮಧ್ಯ……………ಸರ್ವತೀರ್ಥಾತ್ಮಿಕೇ ಸರ್ವಮ೦ತ್ರಾತ್ಮಿಕೇ ಸರ್ವತ೦ತ್ರಾತ್ಮಿಕೇ ಸರ್ವಯ೦ತ್ರಾತ್ಮಿಕೇ ಸರ್ವಪೀಠಾತ್ಮಿಕೇ ಸರ್ವತತ್ತ್ವಾತ್ಮಿಕೇ ಸರ್ವಶಕ್ತ್ಯಾತ್ಮಿಕೇ ಸರ್ವವಿದ್ಯಾತ್ಮಿಕೇ ಸರ್ವಯೋಗಾತ್ಮಿಕೇ ಸರ್ವಯೋಗಾತ್ಮಿಕೇ ಸರ್ವನಾದಾತ್ಮಿಕೇ ಸರ್ವಶಬ್ದಾತ್ಮಿಕೇ ಸರ್ವವಿಶ್ವಾತ್ಮಿಕೇ ಸರ್ವಗೇ ಪಾಹಿ ಮಾ೦ ಪಾಹಿ ಮಾ೦ ಪಾಹಿ ಮಾ೦, ದೇವಿ ತುಭ್ಯ೦ ನಮೋ ದೇವಿ ತುಭ್ಯ೦ ನಮೋ ದೇವಿ ತುಭ್ಯ೦ ನಮಃ || 5 || ”
ಪ್ರಯೋಗಃ-
೧.ಅನುಷ್ಠಾನ ವಿಧಿಃ– ಚೆ೦ಬಿನ ತಗಡಿಲ್ಲಿ ೫ನೇ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು, ವಾಯವ್ಯ(ಪಡು-ಬಡಗ ಮೂಲೆ)ಅಥವಾ ಮೂಡ ಮೋರೆ ಮಾಡಿ ಕೂದು,12/8 ದಿನ ಪ್ರತಿದಿನವೂ ೨೦೦೧ ಸರ್ತಿ ಜೆಪ ಮಾಡೆಕು.
೨.ಅರ್ಚನೆಃ- ದುರ್ಗಾಷ್ಟೋತ್ತರ ಹಾ೦ಗೂ ಲಲಿತಾಷ್ಟೋತ್ತರ೦ದ ಕು೦ಕುಮಾರ್ಚನೆ.
೩.ನೇವೇದ್ಯಃ- ಹುಗ್ಗಿ, ಪಾಯಸ, ಜೇನ, ಹಣ್ಣುಕಾಯಿ-ನೇವೇದ್ಯ.
೪.ಫಲಃ- ಸಕಲ ಸ೦ಮೋಹನ.
ನವನವೊsನ್ಮೇಷ (ಉಲ್ಲೇಖ)ಶಾಲಿನಿಯಾದ ಕಾವ್ಯಪ್ರತಿಭಾ ಕಾರ೦ಜಿ ಬಾನೆತ್ತರಕ್ಕೆ ನೆಗದು ಹಾರುವ ದಿವ್ಯ ದರುಶನವ ಈ ಎರಡೂ ಕೃತಿಗೊ ಸಹೃದಯರಿ೦ಗೆ ಮನ ತಣಿಯುವಾ೦ಗೆ ಮಾಡಿದ ಬಗಗೂ ಈ ದಿವ್ಯಾನುಭೂತಿಯ ಅನುಭಾವ ಭಾಗ್ಯವ ಕರುಣಿಸಿದ ಆ ಮಹಾಚೇತನ೦ಗಕ್ಕೂ ಧನ್ಯತಾ ಭಾವಲ್ಲಿ –
ನಮಃ ತಸ್ಯೈ ನಮಃ ತಸ್ಯೈ ನಮಃ ತಸ್ಯೈ ನಮೋ ನಮಃ ಹೇದು ಶರಣಾಗತರಪ್ಪೊ°.
ಸೌಂದರ್ಯಲಹರಿ ಈ ಶ್ಲೋಕಂಗಳ ಬೈಲಿಂಗೆ ನಮ್ಮ ದೀಪಿಕಾ ಹಾಡಿದ್ದದು ಕೇಳ್ಳೆ ಇಲ್ಲಿದ್ದು – Soundarya Lahari By Deepika.
ಮತ್ತೆ ಮತ್ತೆ ಓದುವಾ೦ಗಿಪ್ಪ ಬರವಣಿಗೆ,ಮತ್ತೆ ಮತ್ತೆ ಕೇಳುವಾ೦ಗಿಪ್ಪ ಹಾಡು.
ಮನಸ್ಸು ಶರಣಾಗತಿ ಹೊ೦ದಿತ್ತು.ಅಪ್ಪಚ್ಚಿಗೆ ಧನ್ಯವಾದ.ದೀಪಿಕಾ೦ಗೆ ಅಭಿನ೦ದನೆ.
thumbaa olledaidu hadiddu…..
appachchi barada artha mana muttuvaange iddu,,,,
thumbaa dhanyavadango deepikakkanguu,,,appachchiguu
ವಿಜಯತ್ತೆ,
ಹರೇ ರಾಮ; ಲಾಯಕಕೆ ಓದಿದಲ್ಲದ್ದೆ, ನಮ್ಮ ಒಪ್ಪಕ್ಕ( ದೀಪಿಕಾ)ಹಾಡಿದ್ದರನ್ನೂ ಕೇಳಿ ( ಆಲಿಸಿ); ಹಾಲಿ೦ಗೆ ಜೇನ ಸೇರ್ಸಿ ಕೂಡುದ ಅನುಭಾವಲ್ಲಿ ಒಪ್ಪ ಕೊಟ್ಟದ್ದಕ್ಕೆ ತು೦………..ಬಾಽ…….. ಧನ್ಯವಾದ೦ಗೊ.
ಹಾಡುವದರೊಟ್ಟ೦ಗೆ ಸೌ೦ದರ್ಯಲಹರಿ ಹಾಲಿ೦ಗೆ ಜೇನು ಸೇರಿದ ಹಾ೦ಗಿದ್ದು ಬಹು ಕೊಶಿ ಆತು ಅಪ್ಪ್ಚಚ್ಹಿ
ದೀಪಿಕಾ ಹಾಡಿದ್ದು, ತುಂಬಾ ಲಾಯಿಕ ಆಯಿದು. ಮತ್ತೆ ಮತ್ತೆ ಕೇಳುವ ಹಾಂಗೆ ಇದ್ದು.
ಅಪ್ಪಚ್ಚಿ,
ಹರೇ ರಾಮ; ನಿ೦ಗಳ ಒಪ್ಪಕ್ಕೆ ಧನ್ಯವಾದ೦ಗೊ. ನಮಸ್ತೇ….
ಸೌಂದರ್ಯ ಲಹರಿಯ ಸರಿಯಾಗಿ ಅರ್ಥೈಸಿಗೊಂಬಲೆ ಒಳ್ಳೆ ಲೇಖನ.
ಎಲ್ಲರಿಂಗೂ ಅರ್ಥ ಆವ್ತ ಹಾಂಗೆ, ನಮ್ಮ ಭಾಷೆಲಿ, ಅದಕ್ಕೆ ವ್ಯಾಖ್ಯಾನವನ್ನೂ ಕೊಡ್ತಾ ಇಪ್ಪ, ಉಡುಪಮೂಲೆ ಅಪ್ಪಚ್ಚಿಗೆ ನಮೋ ನಮಃ.
ವಿವರಣೆ,ಹಾಡಿದ್ದು ಲಾಯಿಕ ಆಯಿದು.ಅಭಿನಂದನೆಗೊ.
ಹರೇ ರಾಮ; ಧನ್ಯವಾದ೦ಗೊ ಗೋಪಾಲಣ್ಣ. ನಮಸ್ತೇ…
ಹರೇ ರಾಮ; ” ಕಟ್ಟಿಯುಮೇನೊ! ಮಾಲೆಗಾರನ ಪೊಸ ಬಾಸಿಗ೦ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೆ ? ಹೇಳುವ ಕ೦ನಡದ ಕವಿವಾಣಿಯಾ೦ಗೆ ನಿ೦ಗಳಾ೦ಗಿರ್ತವು ಪ್ರೋತ್ಸಾಹ ಕೊಡ್ತದರಿ೦ದ ಬರವಲೆ ಉಮೇದು ಬತ್ತು. ಓದಿ ನೋಡಿ ಒಪ್ಪ ಕೊಟ್ಟದಕ್ಕೆ ಧನ್ಯವಾದ.
ಅನಂತ ಪೊಕ್ಕಿಶ ಬೈಲಿಲಿ ಸಿಕ್ಕಿದಾಂಗೆ ಆತು. ಒಂದೆರಡು ಸರ್ತಿ ಓದಿರೆ ಸಾಲ. ಮತ್ತೆ ಮತ್ತೆ ಓದಿ ಅನುಭವಿಸಿ ಓದುವಾಂಗೆ ಮಾಡಿದ್ದಿ ಅಪ್ಪಚ್ಚಿ . ಹೇಮರ್ಸಿಮಡಿಕ್ಕೊಳ್ಳೆಕ್ಕಾದ ಕೊಡುಗೆ. ಧನ್ಯವಾದಂಗೊ. ಆಸಕ್ತಿಂದ ಇನ್ನಾಣ ವಾರಕ್ಕೆ ಕಾಯ್ತು ಎಂಬುದೀಗ – ‘ಚೆನ್ನೈ ವಾಣಿ’.
ದೀಪಿಕ್ಕಕ್ಕೋ ಲಾಯ್ಕ ಹಾಡಿದ್ದಿ ಆತೋ.
ದೀಪಿಕಾ, ಹರೇ ರಾಮ, ನಿನ್ನ ಇ೦ಪಾದ ಶ್ರುತಿ ಬದ್ಧ ಕ೦ಠಶ್ರೀಲಿ ಶ್ರೀಸೌ೦ದರ್ಯ ಲಹರೀ ಸ್ತೋತ್ರ೦ಗಳ ನವಮಿಯ ಈ ಪುಣ್ಯ ಗಳಿಗೆಲಿ ಕೇಳಿ ಆದ ಆನ೦ದವ ಮಾತಿಲ್ಲಿ ಹೇ೦ಗೆ ಹೇಳೆಕೊ ಗೊ೦ತಾವುತ್ತಿಲ್ಲೆ!” ಧನ್ಯೋsಸ್ಮಿ! “ಹೇಳ್ವದೊ೦ದೇ ಸರಿ; ವೈಯಕ್ತಿಕವಾಗಿ ಹಾ೦ಗೂ ನಮ್ಮ ಬಯಲಿನವರೆಲ್ಲರ ಪರವಾಗಿ ಧನ್ಯವಾದ೦ಗೊ. ಈ ಕಾರ್ಯಕ್ಕೆ ನಮ್ಮಲ್ಲರ ಶ್ರೀಯಕ್ಕನೇ ಪ್ರೇರಣೆ.ಈ ಸ೦ದರ್ಭಲ್ಲಿ ಅವರ ಮರವಲೆಡಿಗೋ? ಅವರ ಅಪಾರ ಶ್ರದ್ಧಾಭಕ್ತಿಗೆ ಧನ್ಯವಾದದೊಟ್ಟಿ೦ಗೆ ನಮೋನ್ನಮಃ