Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 10 – ಶ್ಲೋಕಂಗೊ 12 – 18

ಬರದೋರು :   ಚೆನ್ನೈ ಬಾವ°    on   08/11/2012    4 ಒಪ್ಪಂಗೊ

ಚೆನ್ನೈ ಬಾವ°

ಶ್ರೀಮದ್ಭಗವದ್ಗೀತಾ – ದಶಮೋsಧ್ಯಾಯಃ – ವಿಭೂತಿಯೋಗಃ – ಶ್ಲೋಕಾಃ 12 – 18

ಶ್ಲೋಕ

ಅರ್ಜುನ ಉವಾಚ
ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ ।
ಪುರುಷಂ ಶಾಶ್ವತಂ ದಿವ್ಯಂ ಆದಿದೇವಮಜಂ ವಿಭುಮ್ ॥೧೨॥

ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ ।
ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ ॥೧೩॥

ಪದವಿಭಾಗ

ಅರ್ಜುನಃ ಉವಾಚ
ಪರಮ್ ಬ್ರಹ್ಮ ಪರಮ್ ಧಾಮ ಪವಿತ್ರಮ್ ಪರಮಮ್ ಭವಾನ್ । ಪುರುಷಮ್ ಶಾಶ್ವತಮ್ ದಿವ್ಯಮ್ ಆದಿದೇವಮ್ ಅಜಮ್ ವಿಭುಮ್ ॥

ಆಹುಃ ತ್ವಾಂ ಋಷಯಃ ಸರ್ವೇ ದೇವರ್ಷಿಃ ನಾರದಃ ತಥಾ । ಅಸಿತಃ ದೇವಲಃ ವ್ಯಾಸಃ ಸ್ವಯಮ್ ಚ ಏವ ಬ್ರವೀಷಿ ಮೇ

ಅನ್ವಯ

ಅರ್ಜುನಃ ಉವಾಚ – ಭವಾನ್ ಪರಂ ಬ್ರಹ್ಮ, ಪರಂ ಧಾಮ, ಪರಮಂ ಪವಿತ್ರಮ್ ಅಸ್ತಿ । ಸರ್ವೇ ಋಷಯಃ ತ್ವಾಂ ಶಾಶ್ವತಮ್ ದಿವ್ಯಮ್ ಆದಿದೇವಮ್ ಅಜಂ ವಿಭುಂ ಪುರುಷಮ್ ಇತಿ ಆಹುಃ । ತಥಾ ದೇವರ್ಷಿಃ ನಾರದಃ ಅಸಿತಃ ದೇವಲಃ ವ್ಯಾಸಃ ಕಥಯತಿ, ತ್ವಂ ಚ ಸ್ವಯಮ್ ಏವ ಮೇ ಬ್ರವೀಷಿ ।

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಭವಾನ್ – ನೀನು, ಪರಮ್ ಬ್ರಹ್ಮ – ಪರಮ ಬ್ರಹ್ಮ° (ಸತ್ಯ°), ಪರಮ್ ಧಾಮ – ಪರಮ ಧಾಮ°, ಪರಮಮ್ ಪವಿತ್ರಮ್ ಅಸ್ತಿ – ಪರಮವಾದ ಪವಿತ್ರ° (ಶುದ್ಧ°) ಆಗಿದ್ದೆ, ಸರ್ವೇ ಋಷಯಃ – ಎಲ್ಲ ದೇವರ್ಷಿಗೊ, ತ್ವಾಮ್ – ನಿನ್ನ ಕುರಿತು, ಶಾಶ್ವತಮ್ – ಶಾಶ್ವತ°, ದಿವ್ಯಮ್ – ಅಲೌಕಿಕ°(ದಿವ್ಯ°), ಆದಿದೇವಮ್ – ಮೂಲ°, ಆದಿ ದೇವ°, ಅಜಮ್ – ಜನ್ಮರಹಿತ°, ವಿಭುಮ್ – ಅತ್ಯುತ್ತಮ°, ಪುರುಷಮ್ ಇತಿ ಆಹುಃ – ಪುರುಷ° ಹೇಳಿ ಹೇಳುತ್ತವು, ತಥಾ – ಹಾಂಗೇ, ದೇವರ್ಷಿಃ ನಾರದಃ – ದೇವರ್ಷಿಯಾದ ನಾರದನೂ, ಅಸಿತಃ – ಅಸಿತ°, ದೇವಲಃ – ದೇವಲ°, ವ್ಯಾಸಃ – ವ್ಯಾಸ°, ಕಥಯತಿ – ಹೇಳುತ್ತವು, ತ್ವಮ್ ಚ – ನೀನೂ ಕೂಡ, ಸ್ವಯಮ್ – ಸ್ವತಃ, ಏವ ಮೇ ಬ್ರವೀಷಿ – ಹೀಂಗೇ ಎನಗೆ ಹೇಳುತ್ತೆ.

ಅನ್ವಯಾರ್ಥ

ಅರ್ಜುನ° ಹೇಳಿದ° – ನೀನು ದೇವೋತ್ತಮ ಪರಮ ಪುರುಷ°, ಪರಂಧಾಮ°, ಪವಿತ್ರ°, ಪರಿಪೂರ್ಣ ಸತ್ಯ°, ನಿತ್ಯ°, ದಿವ್ಯ°, ಆದಿಪುರುಷ°, ಜನ್ಮ ರಹಿತ°, ಅತೀ ಶ್ರೇಷ್ಠ°. ದೇವರ್ಷಿಯಾದ ನಾರದ°, ಅಸಿತ°, ದೇವಲ°, ವ್ಯಾಸರಂತಹ ಮಹರ್ಷಿಗಳೂ  ನಿನ್ನ ವಿಷಯಲ್ಲಿ ಈ ಸತ್ಯವನ್ನೇ ಹೇಳುತ್ತವು. ಈಗ ನೀನೂ ಇದನ್ನೇ ಎನಗೆ ಹೇಳುತ್ತಾ ಇದ್ದೆ.

ತಾತ್ಪರ್ಯ / ವಿವರಣೆ

ಈ ಶ್ಲೋಕದ ವಿವರಣೆಯ ಬನ್ನಂಜೆಯವರ ಸುಂದರ ವ್ಯಾಖ್ಯಾನಂದಲೇ ನೋಡುವೊ°,ಅರ್ಜುನ° ಭಗವಂತನ ಉಪದೇಶ ಕೇಳಿಗೊಂಡು ಮೈಮರದು ಹೋದ°. ಅವಂಗೆ ತಾನು ಯುದ್ಧರಂಗಲ್ಲಿ ನಿಂದುಗೊಂಡಿದ್ದೆ ಹೇಳ್ವ ವಿಚಾರವೇ ಮರದು ಕೇವಲ ಕೃಷ್ಣ ಮಾಂತ್ರ ಸರ್ವಸ್ವ ಹೇಳಿ ಕಾಂಬಲೆ ಸುರುವಾತು. ಹಾಂಗಾಗಿ ಆ ಗುಂಗಿಲ್ಲಿ ಭಗವಂತನತ್ರೆ ಅರ್ಜುನ° ಹೇಳುತ್ತ° –  “ನೀನು ಪರಂಬ್ರಹ್ಮ°, ಪರಂಧಾಮ°, ಪರಮಪವಿತ್ರ°”. ಇಲ್ಲಿ ಪರಮ್ ಹೇಳಿರೆ ಎಲ್ಲಕ್ಕಿಂತ ದೊಡ್ಡ, ಶ್ರೇಷ್ಠ. ಎಲ್ಲರಿಂದಲೂ ದೊಡ್ಡವ°, ಶ್ರೇಷ್ಠ° ನೀನು ನಂಬಿದವರ ಎತ್ತರಕ್ಕೇರುಸುವ ಪರಿಪೂರ್ಣ°. ನೀನು ಪರಂಧಾಮ°, ಧಾಮ ಹೇಳಿರೆ ಆಶ್ರಯ, ಭಗವಂತನ ಆಶ್ರಯಿಸದ್ದೆ ಈ ಜಗತ್ತಿಲ್ಲಿ ಒಂದು ವಸ್ತುವೂ ಇಲ್ಲೆ. ನೀನು ಸರ್ವಸ್ವತಂತ್ರ, ಎಲ್ಲವೂ ನಿನ್ನ ಅಧೀನ. ಎಲ್ಲೋರು ನಿನ್ನ ಆಶ್ರಿತರು. ತತ್ವಾಭಿಮಾನಿ ದೇವತೆಗೊ ನವಗೆ ಒಂದೊಂದು ರೂಪಲ್ಲಿ ಆಶ್ರಯ ಕೊಡುತ್ತವು. ಆ ತತ್ವಾಭಿಮಾನಿ ದೇವತೆಗೊಕ್ಕೂ ನೀನು ಆಶ್ರಯದಾತ°. ಹಾಂಗಾಗಿ ನೀನು ಪರಂಧಾಮ°. ನೀನು ‘ಪರಮಂ ಪವಿತ್ರಂ’. ಇಂತಹ ಭಗವಂತನ ನಾವು ಪವಿತ್ರತೆಯ ಪ್ರತೀಕವಾದ ಅಗ್ನಿಮುಖೇನ ಉಪಾಸನೆ ಮಾಡುವದು. ಅಗ್ನಿ ಸ್ವಯಂ ಪವಿತ್ರ°, ಎಂದೂ ಕೊಳಕ್ಕಾವುತ್ತಿಲ್ಲೆ. ಅಗ್ನಿ ತನ್ನ ಸ್ಪರ್ಶಕ್ಕೆ ಬಂದ ವಸ್ತುಗಳ ಕೊಳೆರಹಿತವಾಗಿ ಮಾಡುತ್ತು. ಹಾಂಗೆ ಅಗ್ನಿಮುಖೇನ ಇಪ್ಪ ಭಗವಂತ ನಮ್ಮ ಮತ್ತು ಈ ಪ್ರಪಂಚವ ಪಾವನಗೊಳುಸುವ ಪರಮ ಪವಿತ್ರ ಶಕ್ತಿ. ಇಲ್ಲಿ ಅರ್ಜುನಂಗೆ ತನ್ನಲ್ಲಿ ಕೊಳೆ ತುಂಬಿದ್ದು. ಆ ಕೊಳೆಯ ಭಗವಂತನೇ ಪವಿತ್ರಗೊಳುಸಿ ಭಗವಂತನಿಂದ ತಾನು ಪೂರ್ಣತೆಯ ಪಡೆಕು ಹೇಳ್ವ ಬಯಕೆಯ ಅರ್ಜುನನ ಈ ಮಾತುಗಳಲ್ಲಿ ಕಾಂಬಲಾವ್ತು. ಇತು ಅರ್ಜುನನ ಉದ್ವೇಗದ ಮಾತುಗೊ ಅಲ್ಲ. ಕೆಲವೊಂದರಿ ನಾವು ಉದ್ವೇಗಂದ ಏನೇನಾರು ಮಾತಾಡುತ್ತು. ಅದು ಆ ಸಂದರ್ಭಕ್ಕೆ ಮಾಂತ್ರ ಭಾವೋದ್ವೇಗದ ಮಾತುಗೊ ಆಗಿಬಿಡ್ತು. ಆದರೆ ಅರ್ಜುನಂಗೆ ಇಲ್ಲಿ ಹಾಂಗೆ ಅಲ್ಲ. ಒಬ್ಬ° ಸಾಧಕಂಗೆ ದೇವರ ಉಪಾಸನೆಲಿ ಇದು ಬಹಳ ಮುಖ್ಯ ಅಂಶ. ಎಂತಕೆ ಹೇಳಿರೆ ನಾವು ದೇವರ ಬಗ್ಗೆ ಎಂತ ಕಲ್ಪನೆ ಮಾಡಿರೂ ಅದು ಕೇವಲ ಕಲ್ಪನೆ ಹೊರತು ಸಾಕ್ಷಾತ್ಕಾರ ಆವುತ್ತಿಲ್ಲೆ. ನಮ್ಮ ಕಲ್ಪನೆ ನಮ್ಮ ಮನಸ್ಸಿನ ಸ್ಥಿತಿಯ ಹೊಂದಿಕೊಂಡಿರುತ್ತು. ಮನಸ್ಸಿಲ್ಲಿ ಉತ್ಸಾಹ ಇಪ್ಪಗ ಏನೇನೋ ಹೊಸ ಹೊಸ ಕಲ್ಪನೆಗೊ ಬತ್ತು. ಅವೆಲ್ಲವೂ ಸತ್ಯ ಆಯೇಕು ಹೇಳಿ ಏನಿಲ್ಲೆ. ಹಾಂಗಾಗಿ ಅವರವರ ಬುದ್ಧಿಮಟ್ಟಕ್ಕೆ ತಕ್ಕಂತೆ ಅವರವರ ಕಲ್ಪನೆ ಹೊರತು ಭಗವಂತ° ಹೇಂಗಿದ್ದನೋ ಹಾಂಗೆ ನಮ್ಮ ಕಲ್ಪನೆ ಇರುತ್ತಿಲ್ಲೆ. ಅರ್ಜುನ ಇದರ ಖಚಿತಪಡುಸಲೆ ಆವ್ತು ಮುಂದೆ ಹೇಳುತ್ತ° – “ದೇವರ್ಷಿ ನಾರದರು ಅಸಿತ ದೇವಲರು ವ್ಯಾಸರೂ ಕೂಡ ಹೀಂಗೇ ಹೇಳಿದ್ದವು. ನೀನೂ ಕೂಡ ಇದನ್ನೇ ಹೇಳಿದ್ದೆ ಹೇಳಿ ತನ್ನ ಮನಃಪೂರ್ವಕವಾಗಿ ಅನುಭವಕ್ಕೆ ಬಂತು” ಹೇಳಿ ಹೇಳುತ್ತ°.

ಬನ್ನಂಜೆ ಮತ್ತೂ ವಿವರುಸುತ್ತವು – ಅರ್ಜುನ° ಹೇಳುತ್ತ° – “ನಿನ್ನ ಪುರುಷಃ, ಶಾಶ್ವತಃ, ದಿವ್ಯಃ ,ಆದಿದೇವಃ, ಅಜಃ, ವಿಭುಃ ಹೇಳಿ ಈ ಮಹಾತ್ಮರುಗೊ ಹೇಳಿದ್ದವು”. ಇಲ್ಲಿ ಬಳಸಿಪ್ಪ ಒಂದೊಂದು ಪದಲ್ಲಿಯೂ ಭಗವಂತನ ಅನಂತ ಗುಣ ಅಡಗಿದ್ದು. ಇಲ್ಲಿ ಪುರುಷಃ ಹೇಳಿರೆ ಬರೇ ಗಂಡಸು ಹೇಳ್ವ ಶಬ್ದ ಅರ್ಥ ಅಲ್ಲ. ಸಮಸ್ತ ವೇದಂಗಳ ಸಾರಭೂತವಾದ ಸೂಕ್ತಂಗಳ ರಾಜ° ‘ಪುರುಷಸೂಕ್ತ’ ಭಗವಂತನ ‘ಸಹಸ್ರ ಶೀರ್ಷಾ ಪುರುಷಃ’ ಹೇಳಿ ಹೇಳಿದ್ದು. ಸೃಷ್ಟಿ ಕಾಲಲ್ಲಿ ಏನೂ ಇಲ್ಲದ್ದಿಪ್ಪಗಳೂ ಇದ್ದು, ಈ ಸೃಷ್ಟಿಯ ನಿರ್ಮಾಣ ಮಾಡಿದ ಭಗವಂತ°- ‘ಪುರಾ + ಷಃ’. ಪ್ರಳಯಕಾಲಕ್ಕಿ ಎಲ್ಲವನ್ನೂ ಸುಟ್ಟ ಭಗವಂತ ಪುರು-ಉಷ. ಪ್ರಪಂಚಲ್ಲಿ ಅನಂತವಾಗಿ, ಅನಂತ ಕಾಲ, ಅನಂತ ಸಾಮರ್ಥ್ಯ, ಅನಂತ ಗುಣಂಗಳಿಂದ ತುಂಬಿಪ್ಪ ಭಗವಂತ° ಪುರ-ಸಹ. ಪ್ರಳಯ ಕಾಲಲ್ಲಿ ಏನೂ ಇಲ್ಲದ್ದೆ ಇತ್ತಿದ್ದು, ಸೃಷ್ಟಿ ಕಾಲಲ್ಲಿ ತನ್ನ ನಾಭಿಂದ ಒಂದೊಂದರ ಸೃಷ್ಟಿ ಮಾಡಿದ ಭಗವಂತ°, ಮದಾಲು “ಮಹತತ್ವ”ವ ಸೃಷ್ಟಿ ಮಾಡಿದ°.  ಮಹತತ್ವ ಹೇಳಿರೆ ಇಡೀ ಪ್ರಪಂಚಕ್ಕೆ ಭೂತಪ್ರಜ್ಞೆ ಜಾಗೃತಿ. ಹಿಂದೆ ಇತ್ತಿದ್ದ ಸಮಸ್ತ ಸೃಷ್ಟಿಯ ಸ್ಮರಣೆಯ ಚಿತ್ತಾಭಿಮಾನಿ ಬ್ರಹ್ಮ-ವಾಯುವಿಂಗೆ ಕೊಟ್ಟು, ಸೂಕ್ಷ್ಮ ರೂಪದ ಪ್ರಪಂಚ ನಿರ್ಮಾಣ. ಮತ್ತೆ ದೇವತೆಗೊ, ಪಂಚಭೂತಂಗಳ ನಿರ್ಮಾಣ. ಹೀಂಗೆ ನಿರ್ಮಾಣವಾದ ಸ್ಥೂಲ ಬ್ರಹ್ಮಾಂಡದೊಳ ಭಗವಂತ ತುಂಬಿಗೊಂಡ°. ಒಂದೊಂದು ಪಿಂಡಾಂಡದೊಳವೂ ಒಂದೊಂದು ರೂಪಲ್ಲಿ ಬಿಂದರೂಪನಾಗಿ ತುಂಬಿ ಆ ಪಿಂಡಾಂಡಂದ ಮಾಡುಸೆಕ್ಕಾದ ಕಾರ್ಯವ ಮಾಡುಸಿ, ಮೋಕ್ಷವ ಕರುಣುಸುವ ಭಗವಂತ ಪುರುಷಃ. ಹೀಂಗೆ ಸೃಷ್ಟಿಯ ಮದಲು, ಸೃಷ್ಟಿಯ ಕಾಲಲ್ಲಿ, ಸ್ಪಷ್ಟವಾದ ವಸ್ತುವಿನೊಳ, ಸೃಷ್ಟಿಯ ಸಾಧನೆಲಿ, ಸಾಧನೆಂದ ಮುಕ್ತಿಯವರೇಂಗೆ ಎಲ್ಲೋದಿಕ್ಕೆ ಇಪ್ಪ ಈ ಹೃತ್ಕಮಲ ನಿವಾಸಿ ಭಗವಂತ°, ಪೂರ್ಣವಾದ ಷಡ್ಗುಣಂಗಳಿಂದ ತುಂಬಿಪ್ಪ ಜ್ಞಾನಾನಂದ ಸ್ವರೂಪ°. ಪು+ರು+ಷ = ಪುರುಷಃ. ಇಲ್ಲಿ ಪು ಹೇಳಿರೆ ನಮ್ಮ ಪಾವನಗೊಳುಸುವ ಪರಮಪವಿತ್ರ°, ರು ಹೇಳಿರೆ ‘ರುವಂತಿ’, ಪ್ರಪಂಚದ ಎಲ್ಲ ಶಬ್ದಂಗಳಿಂದ ವಾಚ್ಯನಾಗಿಪ್ಪವ°, ಷಃ ಹೇಳಿರೆ ಸಹ /ಒಟ್ಟಿಂಗೆ, ಹೇಳಿರೆ ಎಲ್ಲಾ ವಸ್ತುಗಳ ಒಳ / ಒಟ್ಟಿಂಗೆ ತುಂಬಿಪ್ಪ ಸರ್ವಾಂತರ್ಯಾಮಿ ತತ್ವ.

ಶಾಶ್ವತಃ – ಅನಾದಿ ಅನಂತ ಕಾಲಲ್ಲಿ ಯಾವುದೇ ಬದಲಾವಣಗೆ ಒಳಗಾಗದ್ದೆ ಎಂದೆಂದೂ ಒಂದೇ ರೀತಿಯಾಗಿಪ್ಪ ಶಾಶ್ವತ ಆನಂದಸ್ವರೂಪ ಭಗವಂತ° – ‘ಶಾಶ್ವತಃ’.

ದಿವ್ಯಃ – ದಿವ್ಯ ಹೇಳ್ತದಕ್ಕೆ ಅನೇಕ ಅರ್ಥಂಗೊ ಇದ್ದು. ಮೂಲವಾಗಿ ದಿವ್ಯ ಅಥವಾ ದೇವರು. ಇದು ‘ದಿವು’ ಹೇಳ್ದ ಧಾತುವಿಂದ ಬಂದದು. ಪ್ರಾಚೀತ ಧಾತುಪಾಠಲ್ಲಿ ಈ ಧಾತುವಿಂಗೆ ಏಳು ಅರ್ಥಂಗೊ ಇದ್ದು . ೧. ಧ್ಯುತಿಃ, ೨. ವಿಜಿಗೀಶಃ, ೩. ಕಾಂತಿಃ, ೪. ಸ್ತುತಿಃ, ೫. ವ್ಯವಹಾರಃ, ೬. ಕ್ರೀಡಾ, ೭ ಗತಿಶು.

೧. ಧ್ಯುತಿಃ – ಧ್ಯುತಿ ಹೇಳಿರೆ ಬೆಣಚ್ಚಿಯ ಸ್ವರೂಪ. ಬೆಣಚ್ಚಿಯ ಪುಂಜವಾದ ಸೂರ್ಯ° ಚಂದ್ರಾದಿಗೊಕ್ಕೆ ಬೆಣಚ್ಹು ಕೊಡುವ ಭಗವಂತ° ನಮ್ಮೊಳದಿಕ್ಕೆ ಜ್ಞಾನದ ಬೆಣಚ್ಚಿಯ ಕೊಡುವವ°.

೨. ವಿಜಿಗೀಶ – ಭಗವಂತ° ಎಲ್ಲೋರಿಂದ ಎತ್ತರಲ್ಲಿಪ್ಪವ°, ಗೆಲುವಿನ ಸ್ವರೂಪ°.

೩. ಕಾಂತಿಃ – ಕೇವಲ ಇಚ್ಛೆಂದ ಸೃಷ್ಟಿಮಾಡ್ಳೆ ಶಕ್ತ°, ನವಗೆ ಇಚ್ಛೆಯ ಕೊಟ್ಟವ°, ಮತ್ತೆ ಅವರವರ ಯೋಗ್ಯತಗೆ ತಕ್ಕಾಂಗೆ ಪೂರೈಸುವವ°.

೪ ಸ್ತುತಿಃ – ಎಲ್ಲರಿಂದ ಸ್ತುತನಾದವ°, ಎಲ್ಲೋರು ಆರ ಸ್ತುತಿಸುತ್ತವೋ ಅವ° ಸರ್ವಶಬ್ದ ವಾಚ್ಯ° – ಭಗವಂತ°.

೫. ವ್ಯವಹಾರಃ – ಜಗತ್ತಿನ ಸಮಸ್ತ ವ್ಯವಹಾರವ ನಿರ್ವಹಿಸುವವ°.

೬. ಕ್ರೀಡಾ – ಸೃಷ್ಟಿ-ಸ್ಥಿತಿ-ಸಂಹಾರ, ಇದು ಭಗವಂತನ ಕ್ರೀಡೆ.

೭. ಗತಿಶು – ಚಲನೆ ಮತ್ತೆ ಜ್ಞಾನವ ಕೊಟ್ಟವ°. ಆರು ಎಲ್ಲದಿಕ್ಕೆ ಗತನಾಗಿದ್ದನೋ, ಎಲ್ಲವನ್ನೂ ತಿಳುದಿದ್ದನೋ, ಎಲ್ಲರೊಳ ಬಿಂಬರೂಪಲ್ಲಿ ನೆಲೆಸಿದ್ದನೋ ಅವ° – ದಿವ್ಯ° ಅಥವಾ ದೇವ°.

ಆದಿದೇವಃ – ಈ ಜಗತ್ತಿಲ್ಲಿ ಸೃಷ್ಟಿ-ಸ್ಥಿತಿ-ಸಂಹಾರ ಆರಿಂಗೆ ಲೀಲಾ ಮಾತ್ರವೋ ಅವ° ಆದಿದೇವಃ. ಭಗವಂತ° ಈ ಸೃಷ್ಟಿ / ಪ್ರಪಂಚ ಇಲ್ಲದ್ದಿಪ್ಪಗಳೂ, ಇಪ್ಪಗಳೂ, ಇಲ್ಲದ್ದೇ ಆದರೂ ಇಪ್ಪವ°, ಎಲ್ಲೋರಿಂದಲೂ ಹಿರಿಯವ°, ಎತ್ತರದವ°, ಶ್ರೇಷ್ಠ°. ಎಲ್ಲಾ ಕಾಲಲ್ಲಿಯೂ ಜಗತ್ತಿನ ಸರ್ವ ವ್ಯವಹಾರಂಗಳ ನಡಶುವವ° ಅವ°, ಎಲ್ಲದರೊಳವೂ ಇದ್ದುಗೊಂಡು ನಡಶುವ ಭಗವಂತ – ಆದಿದೇವಃ.

ಅಜಃ – ‘ನ ಜಾಯತೇ ಇತಿ ಅಜಃ’. ‘ಜ’ ಹೇಳಿರೆ ಜನನ, ಅ+ಜ ಹೇಳಿರೆ ಹುಟ್ಟು ಇಲ್ಲದ್ದವ°. ಹುಟ್ಟದ್ದವವನ ಹೊಕ್ಕುಳುಲಿ ಹುಟ್ಟಿದ ಚತುರುಮುಖನನ್ನೂ ಅಜ ಹೇಳ್ತವು. ಇಂತಹ ಚತುರ್ಮುಖನೊಳವೂ ಸನ್ನಿಹಿತನಾಗಿ ಸೃಷ್ಟಿ ಮಾಡುವ ಭಗವಂತ° ತಾನು ಹುಟ್ಟದ್ದೆ ಎಲ್ಲವನ್ನೂ ಸೃಷ್ಟಿ ಮಾಡಿ ಸಂಹಾರ ಮಾಡುವ – ‘ಅಜಃ’.  ಇನ್ನು ಅಜಃ ಹೇಳಿ ಎಲ್ಲ ದಿಕ್ಕೆ ವ್ಯಾಪಿಸಿಪ್ಪವ° ಹೇಳಿಯೂ ಅಪ್ಪು. ಅ+ಜ = ಅಜಃ. ಅ ಹೇಳಿರೆ ಅಲ್ಲ / ಇಲ್ಲೆ. ಹೇಳಿರೆ, ನಾವು ತಿಳ್ಕೊಂಡ ಯಾವ ವಸ್ತುವೂ ಅಲ್ಲ, ಅವನಲ್ಲಿ ಏವ ದೋಷವೂ ಇಲ್ಲೆ. ಇನ್ನೊಂದು ಅರ್ಥಲ್ಲಿ ಅಜಃ – ಆರಿಂದಲೂ ಹುಟ್ಟದ್ದವ° ಆದರೆ ಎಲ್ಲರಲ್ಲೂ ಹುಟ್ಟುವವ°. ಭಗವಂತ° ಆರಿಂದಲ್ಲೂ ಹುಟ್ಟಿ ಬಂದವ° ಅಲ್ಲ ಆದರೆ ಎಲ್ಲೋರಲ್ಲೂ ಬಿಂಬರೂಪಿಯಾಗಿ ಪ್ರತಿಯೊಂದು ಗರ್ಭಲ್ಲಿ ನೆಲೆಸಿ ಏಕ ಕಾಲಲ್ಲಿ ಅನೇಕ ರೂಪಿಯಾಗಿ ಹುಟ್ಟುತ್ತ°.

ವಿಭುಃ – ವಿವಿಧ + ಭವತಿ. ಹೇಳಿರೆ – ವಿವಿಧ ರೂಪ ತೊಟ್ಟ ಅನಂತರೂಪಿ. ಸರ್ವಸಮರ್ಥನಾಗಿ ಪ್ರಪಂಚಲ್ಲಿ ಎಲ್ಲೆಡೆಯೂ ತುಂಬಿಪ್ಪ ಭಗವಂತ° – ‘ವಿಭುಃ’. 

ಇಲ್ಲಿ ಅರ್ಜುನ° ವಿಶೇಷವಾಗಿ ದೇವರ್ಷಿ ನಾರದ°, ಅಸಿತ°-ದೇವಲ° ಮತ್ತೆ ವ್ಯಾಸರ ಉಲ್ಲೇಖಿಸುತ್ತ°. ಎಂತಕೆ ಹೇಳಿರೆ , ಅರ್ಜುನ ಇವರ ಕಂಡಿದ ಮತ್ತೆ ಅವು ಭಗವಂತನ ಬಗ್ಗೆ ಹೇಳ್ತದರ ಕೇಳಿದ್ದ°. ನಾರದ° ಮಹಾಜ್ಞಾನಿ ಹೇಳ್ವದು ನವಗೂ ಗೊಂತಿದ್ದು. ನರಸಮುದಾಯಲ್ಲಿ ಅಜ್ಞಾನವ ಸಂಹಾರ ಮಾಡಿ ಭಗವಂತನ ಜ್ಞಾನವ ಕೊಡುವವ° ನಾರದ°, ನವಗೆ ಸತ್ಯವ ಹೊಳೆಶುವ ಅಂತಃಪ್ರಜ್ಞೆಯ ದೇವತೆ. ಆಜ್ಞಾಚಕ್ರವ ಜಾಗೃತಗೊಳುಸಿರೆ ನವಗೆ ನಾರದನ ದರ್ಶನ ಆವ್ತು. ಯಾವುದರ ಮಾಡೆಕು, ಯಾವುದರ ಮಾಡ್ಳಾಗ ಹೇಳ್ವದರ ಅಂತರ್ದೃಷ್ಟಿಂದ ಹೇಳುವವ° ನಾರದ°. ಅಸಿತ°, ದೇವಲು ಮಂತ್ರದೃಷ್ಟಾರರಾದ ವೇದಕಾಲದ ಋಷಿಗೊ. ಇವು ಧರ್ಮರಾಯನ ಸಭಗೆ ಬಂದು ಅವಂಗೆ ಧರ್ಮೋಪದೇಶ ಮಾಡಿದ್ದರ ಅರ್ಜುನ° ನೋಡಿದ್ದ°. ಇನ್ನು ವ್ಯಾಸ°., ವೇದವ ವಿಭಾಗ ಮಾಡಿ ನವಗೆ ಹದಿನೆಂಟು ಪುರಾಣ, ಮಹಾಭಾರತ, ಪಂಚಮವೇದವ ಕೊಟ್ಟ ಭಗವಂತನ ಅವತಾರ° ಆ ವ್ಯಾಸ°. “ಈ ಎಲ್ಲಾ ಮಹಾತ್ಮರು ಎಂತ ಹೇಳಿತ್ತಿದ್ದವೋ ಅದನ್ನೇ ನೀನು ಹೇಳುತ್ತಾ ಇದ್ದೆ ಎನಗೆ ಇಲ್ಲಿ” ಹೇಳಿ ಅರ್ಜುನ° ಭಗವಂತಂಗೆ ಹೇಳುತ್ತ°. ಹೀಂಗೆ ತನಗೆ ಅಪ್ಪಂತ ಈ ಅನುಭವ ಕೇವಲ ಭ್ರಮೆ ಅಲ್ಲ ಹೇಳ್ವದರ ಖಚಿತಪಡುಸುತ್ತ° ಅರ್ಜುನ°.

ಶ್ಲೋಕ

ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ ।
ನ ಹಿ ತೇ ಭಗವನ್ ವ್ಯಕ್ತಿಂ ವಿದುರ್ದೇವಾ ನ ದಾನವಾಃ ॥೧೪॥

ಪದವಿಭಾಗ

ಸರ್ವಮ್ ಏತತ್ ಋತಮ್ ಮನ್ಯೇ ಯತ್ ಮಾಮ್ ವದಸಿ ಕೇಶವ । ನ ಹಿ ತೇ ಭಗವನ್ ವ್ಯಕ್ತಿಮ್ ವಿದುಃ ದೇವಾಃ ನ ದಾನವಾಃ ॥

ಅನ್ವಯ

ಹೇ ಕೇಶವ!, ಯತ್ ಮಾಂ ತ್ವಂ ವದಸಿ, ತತ್ ಏತತ್ ಸರ್ವಮ್ ಅಹಮ್ ಋತಮ್ ಇತಿ ಮನ್ಯೇ । ಹೇ ಭಗವನ್!, ನ ದೇವಾಃ ವಾ ನ ದಾನವಾಃ ತೇ ವ್ಯಕ್ತಿಂ ಹಿ ವಿದುಃ ॥

ಪ್ರತಿಪದಾರ್ಥ

ಹೇ ಕೇಶವ! – ಏ ಕೇಶವ!, ಯತ್ ಮಾಮ್ – ಯಾವುದರ ಎನಗೆ, ತ್ವಮ್ ವದಸಿ – ನೀನು ಹೇಳುತ್ತ ಇದ್ದೆಯೋ, ತತ್ ಏತತ್ ಸರ್ವಮ್ – ಅದರೆಲ್ಲವ, ಅಹಮ್ – ಆನು, ಋತಮ್ ಇತಿ ಮನ್ಯೇ – ಸತ್ಯ ಹೇಳಿ ತಿಳ್ಕೊಂಡಿದ್ದೆ. ಹೇ ಭಗವನ್! – ಏ ದೇವೋತ್ತಮ ಪರಮ ಪುರುಷನಾದ ಭಗವಂತನೇ!, ನ ದೇವಾಃ ವಾ ನ ದಾನವಾಃ – ದೇವತೆಗಳೋ ಅಥವಾ ರಾಕ್ಷಸರುಗಳೋ, ತೇ – ಅವುಗಳ, ವ್ಯಕ್ತಿಮ್ ಹಿ ವಿದುಃ (ದೇವಾಃ ವಾ ದಾನವಾಃ ನ ವಿದುಃ ಇತಿ ಅತ್ರ ಅರ್ಥಃ) – ದಿವ್ಯವ್ಯಕ್ತಿತ್ವವ ತಿಳುದ್ದವಿಲ್ಲೆ.  

ಅನ್ವಯಾರ್ಥ

ಕೃಷ್ಣ! ನೀನು ಎನಗೆ ಹೇಳಿದ್ದರೆಲ್ಲವ ಸತ್ಯ ಹೇದು ಸಂಪೂರ್ಣವಾಗಿ ಒಪ್ಪಿಗೊಳ್ಳುತ್ತೆ. ಭಗವಂತ°!, ಆದರೆ ದೇವತೆಗೊ ಆಗಲೀ, ದಾನವರು ಆಗಲೀ ನಿನ್ನ ಈ ದಿವ್ಯ ವ್ಯಕ್ತಿತ್ವವ ಅರ್ಥಮಾಡಿಗೊಂಡಿದ್ದವಿಲ್ಲೆ.

ತಾತ್ಪರ್ಯ / ವಿವರಣೆ

ಅರ್ಜುನ° ಮತ್ತೆ ಮುಂದುವರುಸಿ ಹೇಳುತ್ತ°,- “ಏ ದೇವೋತ್ತಮನಾದ ಕೇಶವನೇ!, ನೀನು ಹೇಳುತ್ತಿಪ್ಪದರಲ್ಲಿ ಏವುದೇ ಅತಿಶಯೋಕ್ತಿ ಇಲ್ಲೆ ಹೇಳ್ವದು ಎನಗೊಂತಿದ್ದು. ನಿನ್ನ ಜ್ಞಾನದ ಅಭಿವ್ಯಕ್ತಿಯ ದೇವತೆಗೊ ಆಗಲೀ ದಾನವರು ಆಗಲೀ ತಿಳುದ್ದವಿಲ್ಲೆ”. ಬ್ರಹ್ಮಾದಿದೇವತೆಗಳಿಂದಲೂ ಭಗವಂತನ ಪೂರ್ಣತ್ವವ ಅರ್ತುಗೊಂಬಲೆ ಎಡಿಗಾಯ್ದಿಲ್ಲೆ. ದಾನವರು ಭಗವಂತನಲ್ಲಿ ದೋಷ ಹುಡುಕ್ಕುತ್ತರಲ್ಲಿಯೂ ಯಶಸ್ವಿ ಆಯ್ದವಿಲ್ಲೆ. ಎಂತಕೆ ಹೇಳಿರೆ ಭಗವಂತ ಅನಂತ ಗುಣಸಂಪನ್ನ°. ಅವನಲ್ಲಿ ಏವುದೇ ದೋಷಂಗೊ ಇಲ್ಲೆ. ಅವನ ಪೂರ್ಣವಾಗಿ ಅರ್ಥ ಮಾಡಿಗೊಂಬದು ಸಾಧ್ಯ ಇಲ್ಲೆ. ಭಗವಂತನ ಬಗ್ಗೆ ಅವನೇ ಹೇಳೇಕ್ಕಷ್ಟೇ ಹೊರತು ಬೇರೆ ಆರಿಂದಲೂ ಪೂರ್ತಿಯಾಗಿ ತಿಳ್ಕೊಂಬಲೆ ಸಾಧ್ಯ ಇಲ್ಲೆ. ಎಂತಕೆ ಹೇಳಿರೆ ಅವ° ಆದಿದೈವ, ಸರ್ವಾಂತರ್ಯಾಮಿ, ನಿತ್ಯ°, ಅವಿಕಾರ°. ಭಗವಂತನ ಪೂರ್ಣ ತಿಳ್ಕೊಂಬದು ಇರಲಿ, ಅವನ ಅವತಾರದ ಒಂದು ಲೀಲೆಯನ್ನೂ ಪೂರ್ಣ ಅರ್ಥೈಸಿಗೊಂಬದು ಸುಲಭ ಸಾಧ್ಯ ಅಲ್ಲ. ಅವನ ಬಗೆಯೇ ನವಗೆ ವಿಚಿತ್ರ. ಅವನ ಒಂದೊಂದು ನಡೆಯೂ ಒಂದೊಂದು ಅರ್ಥ, ಸಂದೇಶ, ಪಾಠ. ಅವನ ಅಂಶ ಸಂಭೂತರಿಂದಲೂ ಸಾಧ್ಯವಾಗದ್ದಿಪ್ಪಗ ಮತ್ತೆ ನಮ್ಮಂತ ಸಾಮಾನ್ಯ ಮನುಷ್ಯರ ಪಾಡೆಂತರ ಅಥವಾ ಐಹಿಕ ಜಗತ್ತಿನ ವಿದ್ವಾಂಸರು ಹೇಳಿಗೊಂಬವು ಭಗವಂತನ ಅರ್ಥ ಮಾಡಿಗೊಂಡದು ಎಷ್ಟಿಕ್ಕು!. ಹಾಂಗಾಗಿ ಭಗವಂತನಿಂದಲೇ ನೇರವಾಗಿ ಭಗವಂತನ ಬಗ್ಗೆ ಕೇಳಿಗೊಂಡ ಅರ್ಜುನಂಗೆ ಭಗವಂತನ ಕುರಿತಾಗಿ ಒಂದಿಷ್ಟು ಸಂಶಯವೂ ಇಲ್ಲೆ.    

ಶ್ಲೋಕ

ಸ್ವಯಮೇವಾತ್ಮನಾತ್ಮಾನಂ ವೇತ್ಥ ತ್ವಂ ಪುರುಷೋತ್ತಮ ।
ಭೂತಭಾವನ ಭೂತೇಶ ದೇವದೇವ ಜಗತ್ಪತೇ ॥೧೫॥

ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ ।
ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ ॥೧೬॥

ಪದವಿಭಾಗ

ಸ್ವಯಮ್ ಏವ ಆತ್ಮನಾ ಆತ್ಮಾನಮ್ ವೇತ್ಥ ತ್ವಮ್ ಪುರುಷೋತ್ತಮ । ಭೂತ-ಭಾವನ ಭೂತ-ಈಶ ದೇವ-ದೇವ ಜಗತ್-ಪತೇ ॥

ವಕ್ತುಮ್ ಅರ್ಹಸಿ ಅಶೇಷೇಣ ದಿವ್ಯಾಃ ಹಿ ಆತ್ಮ-ವಿಭೂತಯಃ । ಯಾಭಿಃ ವಿಭೂತಿಭಿಃ ಲೋಕಾನ್ ಇಮಾನ್ ತ್ವಮ್ ವ್ಯಾಪ್ಯ ತಿಷ್ಠಸಿ ॥

ಅನ್ವಯ

ಹೇ ಪುರುಷೋತ್ತಮ!, ಭೂತ-ಭಾವನ!, ಭೂತ-ಈಶ!, ದೇವ-ದೇವ!, ಹೇ ಜಗತ್-ಪತೇ!, ತ್ವಂ ಸ್ವಯಮ್ ಏವ ಆತ್ಮನಾ ಆತ್ಮಾನಂ ವೇತ್ಥ ।

ಅತಃ ಯಾಭಿಃ ವಿಭೂತಿಭಿಃ ತ್ವಮ್ ಇಮಾನ್ ಲೋಕಾನ್ ವ್ಯಾಪ್ಯ ತಿಷ್ಠಸಿ, ತಾಃ ದಿವ್ಯಾಃ ಆತ್ಮ-ವಿಭೂತಯಃ ಹಿ ಅಶೇಷೇಣ ವಕ್ತುಮ್ ಅರ್ಹಸಿ ।

ಪ್ರತಿಪದಾರ್ಥ

ಹೇ ಪುರುಷೋತ್ತಮ! – ಏ ದೇವೋತ್ತಮ ಪರಮ ಪುರುಷ! (ಸಕಲ ವ್ಯಕ್ತಿಗಳಲ್ಲಿ ಶ್ರೇಷ್ಠನಾದವನೇ! / ಪುರುಷ ಉತ್ತಮನೇ), ಭೂತ-ಭಾವನ! – ಪ್ರತಿಯೊಂದರ ಮೂಲನೇ!, ಭೂತ-ಈಶ – ಪ್ರತಿಯೊಂದರ ಈಶನೇ (ಪ್ರಭುವೇ/ಒಡೆಯನೇ), ದೇವ-ದೇವ! – ದೇವಾಧಿದೇವನೇ, ಹೇ ಜಗತ್-ಪತೇ! – ಏ ಜಗತ್ತಿಂಗೇ ಒಡೆಯನೇ, ತ್ವಮ್ ಸ್ವಯಮ್ – ನೀನು ವೈಯಕ್ತಿಕವಾಗಿ, ಏವ –  ಖಂಡಿತವಾಗಿಯೂ, ಆತ್ಮನಾ – ನಿನ್ನಂದ, ಆತ್ಮಾನಮ್ – ನಿನ್ನ, ವೇತ್ಥ – ತಿಳುದ್ದೆ.

ಅತಃ – ಹಾಂಗಾಗಿ, ಯಾಭಿಃ ವಿಭೂತಿಭಿಃ – ಯಾವ ಐಶ್ವರ್ಯಂಗಳಿಂದ, ತ್ವಮ್ – ನಿನ್ನ, ಇಮಾನ್ ಲೋಕಾನ್ – ಈ ಲೋಕಂಗಳ, ವ್ಯಾಪ್ಯ – ವ್ಯಾಪಿಸಿ, ತಿಷ್ಠಸಿ – ಇದ್ದೆಯೋ,  ತಾಃ ದಿವ್ಯಾ – ಆ ದೈವೀಕವಾದ, ಆತ್ಮ-ವಿಭೂತಯಃ  – ನಿನ್ನ ಐಶ್ವರ್ಯಂಗಳ, ಹಿ  – ಖಂಡಿತವಾಗಿಯೂ, ಅಶೇಷೇಣ – ಸಂಪೂರ್ಣವಾಗಿ (ವಿವರವಾಗಿ), ವಕ್ತುಮ್ ಹೇಳ್ಳೆ, ಅರ್ಹಸಿ – ನೀನೇ ಅರ್ಹನಾಗಿದ್ದೆ.

ಅನ್ವಯಾರ್ಥ

ಓ ಪುರುಷೋತ್ತಮ!, ಎಲ್ಲವುದರ ಮೂಲನೇ, ಎಲ್ಲವುದರ ಪ್ರಭುವೇ, ದೇವದೇವನೇ, ಜಗತ್ಪತಿಯೇ!, ಕಾರ್ಯಕ್ಕಾರು ನಿನ್ನ ಅಂತರಂಗ ಶಕ್ತಿಂದ ನೀನೊಬ್ಬನೇ ನಿನ್ನ ಅರ್ಥಮಾಡಿಗೊಂಬೆ.

ಯಾವ ದೈವೀಕ ಸಂಪತ್ತುಗಳಿಂದ ನೀನು ಎಲ್ಲ ಜಗತ್ತುಗಳ ವ್ಯಾಪಿಸಿಗೊಂಡಿದ್ದೆಯೋ ಅದರ ವಿವರವಾಗಿ ಹೇಳ್ಳೆ ನೀನೊಬ್ಬನೇ ಸಾಧ್ಯನಾಗಿದ್ದೆ.

ತಾತ್ಪರ್ಯ / ವಿವರಣೆ

ಅರ್ಜುನ° ಮತ್ತೆ ಅವನ ಅನುನಾಯಿಗಳಾಂಗೆಪ್ಪಿವರಂದ ಮಾಂತ್ರವೇ  ಭಕ್ತಿಸೇವೆಯ ಮೂಲಕ ಭಗವಂತನ ಸಂಬಂಧವಪಡಕ್ಕೊಂಡವರಿಂದ ಭಗವಂತನ ಅರ್ಥಮಾಡಿಗೊಂಬಲೆ ಎಡಿಗಷ್ಟೆ. ರಾಕ್ಷಸೀ ಅಥವಾ ನಾಸ್ತಿಕ ಮನೋಧರ್ಮದವರಿಂದಲೋ, ಅಥವಾ ಐಹಿಕ ಪ್ರಜ್ಞೆಲಿಯೇ ಕಾಳಕಳವವರಿಂದ ಭಗವಂತನ ಅರ್ಥಮಾಡಿಗೊಂಬಲೆ ಎಡಿಯ. ದೇವತೆಗಳಿಂದಲೇ ಕಷ್ಟಸಾಧ್ಯ ಹೇಳಿ ಆದಮತ್ತೆ ಬಾಕಿದ್ದವರ ಕತೆ ಎಂತರ! ಸಾಧನೆಲಿಯುಕ್ತರಾದವು ಭಗವಂತನ ಮೂರು ಮುಖಲ್ಲಿ ಸಾಕ್ಷಾತ್ಕರಿಸಿಗೊಳ್ಳುತ್ತವು. ಸುರುವಿಂಗೆ ನಿರಾಕಾರ ಬ್ರಹ್ಮನಾಗಿ, ಮತ್ತೆ ಅಂತರ್ಯಾಮಿ ಪರಮಾತ್ಮನಾಗಿ ಮತ್ತೆ ಅಕೇರಿಗೆ ದೇವೋತ್ತಮ ಪರಮಪುರುಷನಾಗಿ ಆ ಭಗವಂತನ ಕಂಡುಗೊಳ್ಳುತ್ತವು. ಹಾಂಗಾಗಿ ಪರಿಪೂರ್ಣ ಸತ್ಯವ ಅರ್ಥಮಾಡಿಗೊಂಬ ಅಕೇರಿಯಾಣ ಹಂತಲ್ಲಿ ಸಾಧಕ ದೇವೋತ್ತಮ ಪರಮ ಪುರುಷನ ನೆಲೆಗೆ ಬಂದಿರುತ್ತವು.

ಅರ್ಜುನ° ಇಲ್ಲಿ ಹೇಳುತ್ತ° – “ನಿನ್ನ ಗುಣಪ್ರಮಾಣವ ದೇವತೆಗಳಿಂದಲೂ ಅಳವಲೆ ಸಾಧ್ಯ ಇಲ್ಲೆ. ಹಾಂಗಾಗಿ ನಿನ್ನ ಬಗ್ಗೆ ಸಂಪೂರ್ಣವಾಗಿ ತಿಳುದಿಪ್ಪವ° ನೀನೊಬ್ಬನೇ. ಅದರ ನೀನು ನೀನಾಗಿಯೇ ಹೇಳೆಕೆ ಹೊರತು ಇನ್ನೊಬ್ಬನಿಂದ ಹೇಳ್ಳೆ ಸಾಧ್ಯ ಇಲ್ಲೆ. ಎಂತಕೆ ಹೇಳಿರೆ ನೀನು ಪುರುಷೋತ್ತಮ°”. ಇಲ್ಲಿ ಪುರುಷೋತ್ತಮ ಹೇಳ್ವದು ವಿಶೇಷಣ. ಪುರುಷರಲ್ಲಿ ಉತ್ತಮ, ಪುರುಷೋತ್ತಮ ಹೇಳಿರೆ ಕ್ಷರ(ಜೀವ)ವ ಮೀರಿನಿಂದವ. ಅಕ್ಷರ(ಶ್ರೀತತ್ವ)ಕ್ಕಿಂತಲೂ ಹಿರಿಯವ°. “ಕ್ಷರ-ಅಕ್ಷರವ ಮೀರಿ ನಿಂದ ನೀನಲ್ಲದ್ದೆ ನಿನ್ನಂದ ಹಿರಿದಾದ್ದು ಇನ್ನೊಂದಿಲ್ಲೆ. ಹಾಂಗಾಗಿ ಇದರ ವಿವರಣೆಯ ನಿನ್ನಂದಲೇ ತಿಳಿಯೆಕು” ಹೇಳ್ವ ಭಾವಲ್ಲಿ ಅರ್ಜುನನ ಹೇಳಿಕೆ.

ಬನ್ನಂಜೆ ಇನ್ನೂ ವಿವರುಸುತ್ತವು – ಇಲ್ಲಿ ಭೂತಭಾವನ, ಭೂತೇಶ, ದೇವದೇವ ಮತ್ತೆ ಜಗತ್ಪತೇ ಹೇಳ್ವದಕ್ಕೆ ವಿಶೇಷ ಅರ್ಥಂಗೊ. ಭೂತಭಾವನಃ ಹೇಳಿರೆ ಪಂಚಭೂತಾತ್ಮಕ ಪ್ರಪಂಚವ ಸೃಷ್ಟಿಮಾಡಿ, ಸಮಸ್ತ ಜೀವಜಾತದ ಸೃಷ್ಟಿ-ಸ್ಥಿತಿ-ಲಯಕ್ಕೆ ಕಾರಣನಾದವ°, ಭೂತೇಶಃ ಹೇಳಿರೆ ಎಲ್ಲರನ್ನೂ ನಿಯಂತ್ರುಸುವವ°, ಸರ್ವ ನಿಯಾಮಕ°, ದೇವದೇವ° ಹೇಳಿರೆ ಎಲ್ಲ ದೇವತೆಗೊಕ್ಕೂ ದೇವ° ಆಗಿಪ್ಪವ°, ಸೂರ್ಯಾದಿಗೊಕ್ಕೂ ಬೆಣಚ್ಚಿಯ ಕೊಡುವ ಮೂಲ ಜ್ಯೋತಿ, ಜಗತ್-ಪತಿ ಹೇಳಿರೆ ಈಡೀ ಜಗತ್ತಿನ ಪತಿ / ಪಾಲಕ°. ಹುಟ್ಟುಸುವವನೂ ಅವನೇ, ಪಾಲುಸುವವನೂ ಅವನೇ, ಸಾಯಿಸುವದೂ ಅವನೇ. ಹಾಂಗೇ ಹುಟ್ಟುಸಾವು ಇಲ್ಲದ್ದ ಮೋಕ್ಷವ ಕೊಡುವವನೂ ಅವನೇ. ಸಮಸ್ತ ಜಗತ್ತಿನ ಪಾಲಕ°. ನವಗೆ ‘ಸಂಸಾರಬಂಧ’ ಕೊಡುವದು ಅವನ ಪಾಲನೆಯ , ಶಿಕ್ಷಣದ ಒಂದು ಮುಖ ಅಷ್ಟೆ, ಒಟ್ಟಿಲ್ಲಿ “ನೀನಿಲ್ಲದ್ದೆ ನಾವಿಲ್ಲೆ, ನೀನೇ ಸರ್ವ ರಕ್ಷಕ°” ಹೇಳ್ವ ಭಾವವ ಅರ್ಜುನ° ಈ ಮೂಲಕ ವ್ಯಕ್ತಪಡಿಸಿದ್ದ°.

ಶ್ಲೋಕ

ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿಂತಯನ್ ।
ಕೇಷು ಕೇಷು ಚ ಭಾವೇಷು ಚಿಂತ್ಯೋsಸಿ ಭಗವನ್ಮಯಾ ॥೧೭॥

ಪದವಿಭಾಗ

ಕಥಮ್ ವಿದ್ಯಾಮ್ ಅಹಮ್ ಯೋಗಿನ್ ತ್ವಾಮ್ ಸದಾ ಪರಿಚಿಂತಯನ್ । ಕೇಷು ಕೇಷು ಚ ಭಾವೇಷು ಚಿಂತ್ಯಃ ಅಸಿ ಭಗವನ್ ಮಯಾ ॥

ಅನ್ವಯ

ಹೇ ಯೋಗಿನ್!, ಸದಾ ಪರಿಚಿಂತಯನ್ ಅಹಂ ತ್ವಾಂ ಕಥಂ ವಿದ್ಯಾಮ್ ? ಹೇ ಭಗವನ್! ಕೇಷು ಕೇಷು ಚ ಭಾವೇಷು ತ್ವಂ ಮಯಾ ಚಿಂತ್ಯಃ ಅಸಿ ?

ಪ್ರತಿಪದಾರ್ಥ

ಹೇ ಯೋಗಿನ್ – ಏ ಪರಮ ಯೇಗಿಯೇ!, ಸದಾ ಪರಿಚಿಂತಯನ್ – ಏವತ್ತೂ ಯೋಚಿಸಿಗೊಂಡೇ, ಅಹಮ್ – ಆನು, ತ್ವಾಮ್ – ನಿನ್ನ, ಕಥಮ್ – ಹೇಂಗೆ, ವಿದ್ಯಾಮ್ – ತಿಳಿಯಲಿ, ಕೇಷು ಕೇಷು ಚ ಭಾವೇಷು – ಯಾವ್ಯಾವ ಲಕ್ಷಣಂಗಳಲ್ಲಿ, ತ್ವಮ್ – ನೀನು, ಮಯಾ – ಎನ್ನಿಂದ, ಚಿಂತ್ಯಾ ಅಸಿ – ಸ್ಮರಿಸಲ್ಪಡೆಕಾದವನಾಗಿದ್ದೆ.

ಅನ್ವಯಾರ್ಥ

ಏ ಕೃಷ್ಣ!,  ಪರಮ ಯೋಗಿಯೇ!, ಆನು ಸದಾ ನಿನ್ನ ಧ್ಯಾನಮಾಡುವದು ಹೇಂಗೆ?, ಓ ದೇವೋತ್ತಮ ಪರಮ ಪುರುಷ° ಭಗವಂತನೇ!, ಯಾವ ಯಾವ ರೂಪಂಗಳಲ್ಲಿ ಎನ್ನಿಂದ ನಿನ್ನ ಸ್ಮರಿಸಲ್ಪಡೆಕ್ಕಾಗಿದ್ದು ?

ತಾತ್ಪರ್ಯ / ವಿವರಣೆ

ಈ ಪ್ರಪಂಚದ ಪ್ರತಿಯೊಂದು ವಸ್ತುವಿಲ್ಲಿಪ್ಪ ಒಂದು ವಿಶಿಷ್ಟ ಗುಣದ ಹಿಂದೆ ಭಗವಂತನ ವಿಭೂತಿ ಅಡಗಿದ್ದು. ಭಗವಂತ° ಎಲ್ಲಿ ಯಾವಾಗ ಏನಾಗಿದ್ದ° ಹೇಳ್ವದು ಅವಂಗೊಬ್ಬಂಗೇ ಗೊಂತು. ಅದನ್ನೇ ಸ್ಪಷ್ಟಪಡಿಸಿಗೊಂಬಲೆ ಅರ್ಜುನ° ಇಲ್ಲಿ ಭಗವಂತನತ್ರೆ ನೇರ ಕೇಳುತ್ತ°- “ಏ ಭಗವಂತ°, ಸರ್ವಸಮರ್ಥನಾದ ನೀನು ಎಲ್ಲಿ ಎಂತರ ಹೇಳ್ವದು ನಿನಗೆ ಗೊಂತಿದ್ದು ಹೊರತು ಎನಗಲ್ಲ. ಆನು ಒಂದು ವಸ್ತುವ ಕಂಡಪ್ಪಗ ಅದರ ಹಿಂದಿಪ್ಪ ಭಗವತ್ ಶಕ್ತಿಯ ನೆಂಪು ಬರೆಕು. ಯಾವ ಯಾವ ವಸ್ತುವಿಲ್ಲಿ ನಿನ್ನ ಉಪಾಸನೆಯ ಆನು ಮಾಡೆಕು ಹೇಳ್ವದರ ಎನಗೆ ತಿಳಿಯೆಕು”

ಶ್ಲೋಕ

ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ ।
ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇsಮೃತಮ್ ॥೧೮॥

ಪದವಿಭಾಗ

ವಿಸ್ತರೇಣ ಆತ್ಮನಃ ಯೋಗಮ್ ವಿಭೂತಿಮ್ ಚ ಜನಾರ್ದನ । ಭೂಯಃ ಕಥಯ ತೃಪ್ಟಿಃ ಹಿ ಶೃಣ್ವತಃ ನ ಅಸ್ತಿ ಮೇ ಅಮೃತಮ್

ಅನ್ವಯ

ಹೇ ಜನಾರ್ದನ!, ಆತ್ಮನಃ ಯೋಗಂ ವಿಭೂತಿಂ ಚ ಭೂಯಃ ವಿಸ್ತರೇಣ ಕಥಯ । ಏತತ್ ಅಮೃತಂ ಶೃಣ್ವತಃ ಹಿ ಮೇ ತೃಪ್ತಿಃ ನ ಅಸ್ತಿ ।

ಪ್ರತಿಪದಾರ್ಥ

ಹೇ ಜನಾರ್ದನ! – ಏ ಜನಾರ್ದನ!, ಆತ್ನನಃ – ನಿನ್ನ ಸ್ವಯಂ , ಯೋಗಮ್ – ಯೋಗಶಕ್ತಿಯ, ವಿಭೂತಿಮ್ – ಐಶ್ವರ್ಯವ / ವೈಭವವ, ಚ – ಕೂಡ, ಭೂಯಃ – ಪುನಃ, ವಿಸ್ತರೇಣ ಕಥಯ – ವಿವರವಾಗಿ ವಿವರುಸು. ಏತತ್ ಅಮೃತಮ್ – ಈ ಅಮೃತವ, ಶೃಣ್ವತಃ – ಕೇಳುವ, ಹಿ – ಖಂಡಿತವಾಗಿಯೂ,  ಮೇ – ಎನಗೆ, ತೃಪ್ತಿಃ – ತೃಪ್ತಿ, ನ ಅಸ್ತಿ – ಇಲ್ಲೆ.

ಅನ್ವಯಾರ್ಥ

ಜನಾರ್ದನ!, ನಿನ್ನ ಸಿರಿಯ, ಯೋಗಶಕ್ತಿಯ, ವೈಭವವ ಮತ್ತೆ ನೀನು ವಿವರವಾಗಿ ವರ್ಣುಸು. ನಿನ್ನ ವಿಷಯವ ಕೇಳಿದಷ್ಟೂ ಸಾಕಾವ್ತಿಲ್ಲೆ. ನಿನ್ನ ಅಮೃತ ಮಾತುಗಳ ಕೇಳಿದಷ್ಟೂ ತೃಪ್ತಿ ಸಾಕಾವುತ್ತಿಲ್ಲೆ.

ತಾತ್ಪರ್ಯ / ವಿವರಣೆ

ಭಗವಂತನ ವಿಷಯವೇ ವಿಚಿತ್ರ, ಸ್ವಾರಸ್ಯ. ಅವನ ವಿಷಯವ ಕೇಳಿದಷ್ಟೂ ಅಮೃತಪಾನದ ಸವಿ. ಐಹಿಕ ಆಗುಹೋಗುಗಳ ಕಥೆಯ ಕೇಳಿ ಕೇಳಿ ಬೊಡಿವಲೆ ಸಾಧ್ಯ. ಆದರೆ ಭಗವಂತನ ಲೀಲಾ ವಿಚಿತ್ರ ಕೇಳಿದಷ್ಟೂ ಅದರಲ್ಲಿ ರಸವೇ ಸಿಕ್ಕುವದು. ಐಹಿಕ ಕಷ್ಟವ ನೀಗುಸುವ ದಿವ್ಯೌಷಧಿ ಭಗವಂತನ ಮಹಿಮೆಯ ಶ್ರವಣ. ಅದಕ್ಕಾಗಿಯೇ ಅರ್ಜುನ° ಇಲ್ಲಿ ಭಗವಂತನತ್ರೆ ಕೇಳಿಗೊಂಬದು ‘ನಿನ್ನ ಸಿರಿ ವೈಭವವ (ವಿಭೂತಿ)ಇನ್ನೂ ವಿವರವಾಗಿ ಎನಗೆ ಹೇಳು’ ಹೇಳಿ. ಭಗವಂತನ ಲೀಲಗೊ ಕೇಳ್ಳೆ ವಿನೋದ, ವಿಸ್ಮಯ, ಆಶ್ಚರ್ಯ, ನವರಸಪೂರ್ಣ. ಒಂದೊಂದು ವಿಷಯಲ್ಲೂ ಅವನ ಮಹಿಮೆ ಎತ್ತಿ ತೋರುಸುತ್ತು, ಬದುಕಿಂಗೆ ಒಂದು ದಾರಿದೀಪ, ಜ್ಞಾನದಾಯಕ. ಭಗವಂತನ ಮಹಿಮೆ ಕೇಳಿದಷ್ಟೂ ಭಗವಂತನಲ್ಲಿ ಪ್ರೀತಿ, ಭಕ್ತಿ, ಶ್ರದ್ಧೆ, ನಂಬಿಕೆ ಇನ್ನೂ ಆಳಕ್ಕೆ ಬೇರೂರುತ್ತು.

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 10 – SHLOKAS 12 – 18

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

 

4 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 10 – ಶ್ಲೋಕಂಗೊ 12 – 18

  1. ನಮೋ ನಮಃ ಚೆನ್ನೈ ಭಾವ ನಿಂಗಳ ಶ್ರದ್ಧೆಗೆ, ಶೈಲಿಗೆ
    ಹರೇ ರಾಮ

  2. ಅನನ್ಯ ಶೈಲಿ, ಅಥಗರ್ಭಿತ ವಾಕ್ಯಂಗೊ.
    ಆ ಭಗವಂತನ ಮಹಿಮೆಯ ಕೇಳುಲೆ ಕಾದೊಂಡು ಇದ್ದೆಯೊ°

  3. ಚೆನ್ನೈ ಭಾವಾ, ನಮಸ್ಕಾರ.
    ಈ ಬಾರಿ ಖ೦ಡಿತಾ ಪೂರ್ತಿ ಓದಿದ್ನಿಲ್ಲೆ. ಆದರೆ ನಿ೦ಗಳ ಶ್ರದ್ಧೆ, ಸಾಮರ್ಥ್ಯ, ಏಕೀರ್ಭವಿತ ಭಾವ ಎನ್ನ ಕಲ್ಪನೆ ಮೀರಿದ್ದು! ನಿಜ೦ಗೂ ಮೆಚ್ಚುವ೦ಥದ್ದು, ಅದಕ್ಕೇ ಈ ಒಪ್ಪ.

  4. ಭಗವದ್ಗೇತೆಯ ಬಗ್ಗೆ – ‘ಸರ್ವೋಪನಿಷದೋ ಗಾವೋ, ದೋಗ್ಧಾ ಗೋಪಾಲ ನಂದನ’ ಹೇಳಿ ಹೇಳ್ತವು – ಈ ಅಮೃತ ಸಮಾನವಾದ ವಿಚಾರ ಧಾರೆಯ ನವಗೆ ನಮ್ಮದೇ ಭಾಷೆಲಿ ಉಣ ಬಡಿಸುತ್ತಾ ಇಪ್ಪ ಚೆನ್ನೈ ಭಾವಂಗೆ ನಮೋ ನಮ:

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×