ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು. ಹೊಸಬೆಟ್ಟು ಶ್ರೀಶಣ್ಣ ಮಧುರವಾಗಿ ಹಾಡಿ, ಪದ್ಯಂಗಳ ಇನ್ನಷ್ಟು ಹತ್ತರೆ ಮಾಡ್ತವು.
ಕಳುದ ಸರ್ತಿ ಪ್ರಕಟ ಆದ ಐದು ಪದ್ಯಂಗೊ ಇಲ್ಲಿದ್ದು.
ಮುಂದಾಣ (26 – 30) ಈ ಸರ್ತಿ. ಎಲ್ಲೋರುದೇ ಓದಿ ಅರ್ತುಗೊಂಬೊ!
ಸೋಮೇಶ್ವರ ಶತಕ:
ಅರ್ಥ ವಿವರಣೆ: ಶರ್ಮಪ್ಪಚ್ಚಿ
ಗಮಕ ವಾಚನ: ಶ್ರೀಶಣ್ಣ
ಕಡಿದಾಡಲ್ ರಣರಂಗದೊಳ್ ನೃಪರೊಳಂ ತಾನಗ್ಗದಿಂ ಕಾದೊಡಂ |
ಮೃಡನಂ ಮೆಚ್ಚಿಸಿ ಕೇಳ್ದೊಡಂ ತೊಳಲಿ ತಾಂ ದೇಶಾಟನಂಗೆಯ್ದೊಡಂ ||
ಕಡಲೇಳಂ ಮಗುಚಿಟ್ಟೊಡಂ ಕಲಿಯೆ ನಾನಾ ಹೃದ್ಯ ವಿದ್ಯಂಗಳಂ |
ಪಡೆದಷ್ಟಲ್ಲದೆ ಬರ್ಪುದೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೬||
ಯುದ್ಧ ಭೂಮಿಲಿ ಶತ್ರುಗಳೆಲ್ಲರ ಕಡುದು ಕೊಂದರೂ, ರಾಜರ ಹತ್ರೆ ಹೋಗಿ ತುಂಬಾ ಹೊತ್ತು ಕಾದು ನಿಂದರೂ, ಕಠಿಣ ತಪಸ್ಸು ಮಾಡಿ ಶಿವನ ಮೆಚ್ಚಿಸಿ ವರವ ಕೇಳಿಗೊಂಡರೂ, ಹಲವಾರು ದೇಶಂಗಳ ಸುತ್ತಿದರೂ. ಏಳು ಸಮುದ್ರವನ್ನೇ ತಲೆಕೆಳ ಮಾಡಿದರೂ, ಮನೋಹರವಾದ ಹಲವಾರು ವಿದ್ಯೆಗಳ ಕಲ್ತರೂ, ತನಗೆ ಎಷ್ಟು ಪ್ರಾಪ್ತಿ ಅಪ್ಪಲೆ ಆ ವಿಧಿ ನಿಶ್ಚಯಿಸಿದ್ದೋ ಅಷ್ಟೇ ಸಿಕ್ಕುಗಷ್ಟೆ ಹೇಳಿ ಕವಿ ಇಲ್ಲಿ ಹೇಳ್ತ°
ಧರೆ ಬೀಜಂಗಳಂ ನುಂಗೆ ಬೇಲಿ ಹೊಲನೆಲ್ಲಂ ಮೇದೊಡಂ ಗಂಡ ಹೆಂ|
ಡಿರನತ್ಯುಗ್ರದಿ ಶಿಕ್ಷಿಸಲ್ ಪ್ರಜೆಗಳಂ ಭೂಪಾಲಕಂ ಬಾಧಿಸಲ್ ||
ತರುವೇ ಪಣ್ಗಳ ಮೆಲ್ಲೆ ಮಾತೆ ವಿಷಮಂ ಪೆತ್ತರ್ಭಕಂಗೂಡಿಸಲ್ |
ಹರ ಕೊಲ್ಲಲ್ ಪರ ಕಾಯ್ವನೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೭||
ಅರ್ಭಕ= ಮಗು
ಬೀಜ ಮೊಳಕೆ ಬಂದು ಸೆಸಿ ಆಯೆಕ್ಕು ಹೇಳಿ ಭೂಮಿಲಿ ಹಾಕಿದ್ದರ ಭೂಮಿಯೇ ತಿಂದರೆ, ರಕ್ಷಣೆಗಾಗಿ ಗೆದ್ದೆಗೆ ಹಾಕಿದ ಬೇಲಿ ಹೊಲಲ್ಲಿ ಬೆಳದ ಬೆಳೆಯನ್ನೇ ತಿಂದರೆ, ರಕ್ಷಿಸೆಕ್ಕಾದ ಗೆಂಡ ತನ್ನ ಹೆಂಡತಿಯ ಕ್ರೂರವಾಗಿ ಶಿಕ್ಷಿಸಿದರೆ, ಪ್ರಜಾ ಪಾಲನೆ ಮಾಡೆಕ್ಕಾದ ದೊರೆ, ತನ್ನ ಪ್ರಜೆಗಳ ವಿನಾ ಕಾರಣ ಹಿಂಸಿಸಿದರೆ, ಮರಂಗಳಲ್ಲಿ ಆದ ಹಣ್ಣುಗ ಆ ಮರವೇ ತಿಂದರೆ, ಹಾಲು ಕುಡಿಶಿ ಬೆಳೆಶಿದ ಮಗುವಿಂಗೆ ಅವನ ಅಬ್ಬೆಯೇ ವಿಷ ಕೊಟ್ಟರೆ, ಎಲ್ಲರನ್ನೂ ಕಾಪಾಡೆಕ್ಕಾದ ದೇವರು (ಶಿವ) ತಾನೇ ಭಕ್ತರ ಸಂಹಾರ ಮಾಡಿರೆ, ಬೇರೆಯವಕ್ಕೆ ಇದರ ತಪ್ಪುಸಲೆ ಸಾಧ್ಯ ಇದ್ದೋ?
ಪುರಗಳ್ ಪುಟ್ಟವೇ ನಿಂದುದಿಲ್ಲ ದಶಕಂಠಗಾಯಿತೇ ಲಂಕೆ ಸಾ|
ಗರದೊಳ್ ಪೋಗದೇ ದ್ವಾರಕಾನಗರಿ ಭಿಲ್ಲರ್ಗಾದುದೇ ಗೋಪುರಂ ||
ದುರುಳರ್ಗಾದುದೆ ಪಟ್ಟುರಂ ಮಧುರೆಯೊಳ್ ಕಂಸಾಸುರಂ ಬಾಳ್ದನೇ |
ಸಿರಿ ಬಂದು ನಿಲೆ ಪುಣ್ಯವೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೮||
ಭಿಲ್ಲರು = ಬೇಡರು
ತ್ರಿಪುರಂಗೊ ಹುಟ್ಟಿದರೂ ಅದು ಒಳುದ್ದಿಲ್ಲೆ(ಇದು ತ್ರಿಪುರಾಸುರ ಸಂಹಾರಕ್ಕೆ ಸಂಬಂಧ ಪಟ್ಟದು), ಲಂಕೆ ರಾವಣಂಗೆ ದಕಿದ್ದಿಲ್ಲೆ, ದ್ವಾರಕೆ ಸಮುದ್ರಲ್ಲಿ ಮುಳುಗಿ ಹೋತು, ಬೇಡರಿಂಗೆ ಗೋಪುರ ವಶವಾಯಿದಿಲ್ಲೆ, ಕುಂಭ ನಿಕುಂಭರಿಂಗೆ ಷಟ್ಪುರ ದಕ್ಕಿದ್ದಿಲ್ಲೆ, ಕಂಸ ಮಧುರೆಲಿ ಬಾಳಿದ್ದಾ ಇಲ್ಲೆ. ಹಾಂಗಾಗಿ ಐಶ್ವರ್ಯ ಎಷ್ಟು ಸಿಕ್ಕಿದರೂ ಅದು ನಮ್ಮದಾಗಿ ಸ್ಥಿರವಾಗಿ ನಿಲ್ಲೆಕ್ಕಾದರೆ ಪುಣ್ಯ ಮಾಡಿರಲೇ ಬೇಕು.
ಹುಲುಬೇಡಂ ಮುರವೈರಿಯಂ ಕುರುಬನಾ ಶೂದ್ರೀಕನಂ ರಾಮನಂ |
ಬೆಲೆವೆಣ್ಣಿಂದ ಶಿಖಂಡಿ ಭೀಷ್ಮನುಮನಾ ದ್ರೋಣಾರ್ಯನಂ ವಸ್ತ್ರವಂ ||
ತೊಳೆವಾತಂ ಹತಮಾಡರೇ ಪಣೆಯೊಳ್ ಪೂರ್ವಾರ್ಜಿತಂ ಹಾಗಿರಲ್ |
ಕೊಲನೇ ಕ್ಷುದ್ರ ಸಮರ್ಥನಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೯||
ಅಲ್ಪನಾದ ಬೇಡರವ ಶ್ರೀಕೃಷ್ಣನ ನಾಶಕ್ಕೆ, ಶೂದ್ರೀಕ ಹೇಳ್ತ ವೀರನ ಮರಣಕ್ಕೆ ಸಾಮಾನ್ಯ ಕುರುಬನೊಬ್ಬ, ಅಂಬೆ ಹೇಳ್ತ ಹೆಂಗಸು ಪರಶುರಾಮನ ಅಂತ್ಯಕ್ಕೆ, ಭೀಷ್ಮಾಚಾರ್ಯನ ಕೊನೆಗಾಲಕ್ಕೆ ಕಾರಣನಾದವ ಶಿಖಂಡಿ, ದ್ರೋಣಾಚಾರ್ಯನ ಶಿಷ್ಯನಾದ ಧೃಷ್ಟದ್ಯುಮ್ನ, ಆಚಾರ್ಯನ ನಾಶಕ್ಕೆ ಕಾರಣ ಆಯಿದಾ ಇಲ್ಲೆಯಾ? ಹಣೆಬರಹ ಹಾಂಗೇ ಇದ್ದರೆ ಅದರ ಬದಲುಸಲೆ ಎಡಿಗಾ? ಅಲ್ಪನಾದವ ಸಮರ್ಥನಾದವನ ನಾಶಕ್ಕೆ ಕಾರಣಕರ್ತರಾದ ಉದಾಹರಣೆಗೊ ಸಾಕಷ್ಟು ಇದ್ದು.
ಮೃಡ ತಾಂ ಭಿಕ್ಷವ ಬೇಡನೇ ಮಖಜೆ ತಾಂ ತೊಳ್ತಾಗಳೇ ಪಾಂಡವರ್ |
ಪಿಡಿದೋಡಂ ತಿರಿದುಣ್ಣರೇ ಖಳನ ಕೈಯೊಳ್ ಸಿಕ್ಕಳೇ ಸೀತೆ ತಾಂ ||
ಸುಡುಗಾಡಿಕೈಗೆ ಭಂಟನಾಗನೆ ಹರಿಶ್ಚಂದ್ರಂ ನರರ್ ಪೂರ್ವದೊಳ್ |
ಪಡೆದಷ್ಟುಣ್ಣದೆ ಪೋಪರೇ ಹರ ಹರಾ ಶೀ ಚೆನ್ನ ಸೋಮೇಶ್ವರಾ || ೩೦||
ಶಿವ ಭಿಕ್ಷೆ ಬೇಡಿದ್ದಾ ಇಲ್ಲೆಯಾ? ದ್ರೌಪದಿ ವಿರಾಟ ನಗರಲ್ಲಿ ದಾಸಿಯಾಗಿ ಇತ್ತಿದ್ದಿಲ್ಲೆಯಾ? ಪಾಂಡವರು ಮಡಕೆ ಹಿಡ್ಕೊಂಡು ಬೇಡಿ ತಿಂದಿದವಿಲ್ಲೆಯಾ? ಸೀತಾ ಮಾತೆ ರಾವಣಂಗೆ ಸೆರೆ ಸಿಕ್ಕಿದ್ದಿಲ್ಲೆಯಾ? ಹರಿಶ್ಚಂದ್ರ ಸ್ಮಶಾನವ ಕಾವಲು ಕಾಯಿದಾ ಇಲ್ಲೆಯಾ? ಹಾಂಗಾಗಿ ನಾವು ತಿಳ್ಕೊಳೆದ್ದಾದು ಎಂತರ ಹೇಳಿರೆ ಮನುಷ್ಯರು ಪೂವ ಜನ್ಮಲ್ಲಿ ಮಾಡಿದ ಕರ್ಮಕ್ಕೆ ತಕ್ಕ ಫಲವ ಅನುಭವಿಸಿಯೇ ತೀರುತ್ತವು.
ಮೇಗಾಣ ಪದ್ಯಂಗಳ ಶ್ರೀಶಣ್ಣ ಹಾಡಿದ್ದದು ಕೇಳ್ಳೆ –
~~~***~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಶರ್ಮಪ್ಪಚ್ಚಿ, ಎಲ್ಲ ಲಾಯಕ್ಕಾಯಿದು. ೨೯ ನೆಯ ಪದ್ಯಲ್ಲಿ ಪೂರ್ವ ಕತೆ ಬೇರೆ ಎಂತದೋ ಇದ್ದ ಹಾಂಗೆ ಕಾಣುತ್ತನ್ನೆ.
ಶೂದ್ರಿಕನ ಕತೆ ಎನಗೆ ಗೊಂತಿಲ್ಲೆ ,ಅಂಬೆ ಯ ಬೆಲೆವೆಣ್ಣು ಹೇಳಿದ್ದು ಎಂತಕೆ ? ವಸ್ತ್ರ ತೊಳವವ ಆರು ? ಮಹಾಭಾರತಲ್ಲಿ ಈ ವಿಶಯ
ಬತ್ತೊ ಗೊಂತಿಲ್ಲೆ .ದಯಮಾಡಿ ಗೊಂತಿದ್ದವು ತಿಳುಶೆಕ್ಕು ,
ಅಪ್ಪಚ್ಚಿಗೆ ಧನ್ಯವಾದ,ಶ್ರೀಶಣ್ಣನ ವಾಚನವೂ ಮಧುರ.
ಉದಾಹರಣೆಗಳೊಟ್ಟಿ೦ಗೆ ಕವಿಯ ಪ್ರಶ್ನೆಗೊ ಚೆ೦ದಕೆ ಹೇಳಿದ್ದ°.”ಭಿಲ್ಲರ್ಗಾದುದೆ ಗೋಪುರ೦” ಇದು ಆರ ಕುರಿತಾಗಿ ಹೇಳಿ ಗೊ೦ತಾತಿಲ್ಲೆ.ಬೈಲಿಲಿ ಆರಿ೦ಗಾರು ಗೊ೦ತಿದ್ದೊ?
ವಿಧಿಯಾಟವ ತಪ್ಪುಸಲೆ ಎಡಿಯ, ಹಣೆಬರಹಲ್ಲಿಪ್ಪ ಹಾಂಗೇ ಅಕ್ಕು ಮೊದಲಾದ ಮಾತುಗಳ ಸರಿಯಾದ ಅರ್ಥ ವಿವರಣೆ ಕೊಟ್ಟು ಶ್ರೀಶಣ್ಣನ ಧ್ವನಿ ಸಹಿತ ಪ್ರಸ್ತುತ ಪಡಿಸಿದ ಶರ್ಮಪ್ಪಚ್ಚಿಗೆ ಧನ್ಯವಾದಂಗೊ. ಶರ್ಮಪ್ಪಚ್ಚಿ/ಶ್ರೀಶಣ್ಣರ ಶ್ರಮಕ್ಕೆ ತಲೆ ಬಾಗಿದ್ದೆ.
ಓದಿ ಕೇಳಿ ಅತು೯ಕೊ೦ಡೆ. ಅಥ೯ವಿವರಣೆಗೆ ಶಮ೯ಪ್ಪಚ್ಚ ಅವಕ್ಕೂ ಚೆ೦ದಕೆ ಹಾಡಿದ ಶ್ರೀಶಣ್ಣ೦ಗೂ ಧನ್ಯವಾದ.
ಕವಿಯ ಆಶಯಂಗೊ ಭಾರೀ ಲಾಯಕ ಇದ್ದು. ಶರ್ಮಪ್ಪಚ್ಚಿಯ ಸಾರ್ಥಕ ಕೆಲಸಕ್ಕೆ ನಮೋ ನಮಃ . ಶ್ರೀಶಣ್ಣನ ಕಾರ್ಯ ಸ್ತುತ್ಯಾರ್ಹ. ಕೊಶಿ ಆತು. ಹರೇ ರಾಮ.
ಶರ್ಮಪ್ಪಚ್ಚಿ ,
ಹರೇ ರಾಮ;[….ಪಡೆದಷ್ಟಲ್ಲದೆ ಬರ್ಪುದೆ ?; ಕೊಲ್ಲನೆ ಕ್ಷುದ್ರ೦ ಸಮರ್ಥನ೦ ?;ಪಡೆದಷ್ಟುಣ್ಣದೆ ಪೋಪರೇ ? ] ಬಾರೀ ಲಾಯಕಿನ ನುಡಿಗಟ್ಟುಗೊ! ನಿ೦ಗಳ ಅರ್ಥ ವಿವರಣೆ ತು೦ಬಾ ಹಿತವಾತು. (ಟೈಪ್ ಮಾಡುವಾಗ ಕಣ್ಣು ತಪ್ಪಿ ಎರಡು ಸ೦ಣ ಒತ್ತುಗೊ ಬಿಟ್ಟು ಹೋಯಿದು.ಅದು ೧. ಪದ್ಯ.೨೯ರಲ್ಲಿ- ”ಕೊಲ್ಲನೆ”ಆಯೆಕು;೨.ಪದ್ಯ. ೩೦ರಲ್ಲಿ ಮಖಜೆ ಆಯೆಕು.)ಗಮಕ ವಾಚನ ಮಾಡಿದ ಶ್ರೀಶಣ್ಣ ಹಾ೦ಗೂ ನಿ೦ಗಗುದೆ ನಮಸ್ಕಾರ ಪೂರ್ವಕ ಧನ್ಯವಾದ.ನಿ೦ಗಳ ಈ ಸತ್ಕಾರ್ಯಕ್ಕೆ ಒ೦ದೊಳ್ಳೆ ಒಪ್ಪ.
[ಪದ್ಯ.೨೯ರಲ್ಲಿ- ”ಕೊಲ್ಲನೆ”ಆಯೆಕು;೨.ಪದ್ಯ. ೩೦ರಲ್ಲಿ ಮಖಜೆ ಆಯೆಕು.]
ತಪ್ಪಿನ ತೋರಿಸಿ ತಿದ್ದಲೆ ಅವಕಾಶ ಮಾಡಿಕೊಟ್ಟ ಅಪ್ಪಚ್ಚಿಗೆ ಧನ್ಯವಾದಂಗೊ.
ಕೊಲನೆ ಹೇಳ್ತ ಪ್ರಯೋಗ ಹಳೆಕನ್ನಡಲ್ಲಿ ಸಾಕಷ್ಟು ಇದ್ದು.
ಉದಾಃ ಕಳ ಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ…
ಹಾಂಗಾಗಿ ಅಲ್ಲಿ ಅದು ಸರಿ ಆಗಿಕ್ಕು ಹೇಳಿ ಎನ್ನ ಅಭಿಪ್ರಾಯ- ಎನ್ನ ಸಂಗ್ರಹಲ್ಲಿ ಇಪ್ಪದಲ್ಲಿ ಹಾಂಗೆ ಇದ್ದು ಕೂಡಾ.
ತಿಳುದವು ಇದರ ಬಗ್ಗೆ ಮಾಹಿತಿ ಕೊಡ್ಲಕ್ಕು
ಮತ್ತೇಭವಿಕ್ರೀಡಿತ ವೃತ್ತದ ಮಾತ್ರಾಬಂಧವ ಅವಲೋಕಿಸಿದರೆ,
ನನನಾನಾನನನಾನನಾನನನನಾ|ನಾನಾನನಾನಾನನಾ
“ಕೊಲನೇ ಕ್ಷುದ್ರ ಸಮರ್ಥನಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ” ಹೇಳುದು ಸರಿ ಇದ್ದು. ‘ಕೊಲ್ಲನೆ’ಮಾಡಿರೆ ಮಾತ್ರಾ ಬಂಧ ವೆತ್ಯಾಸ ಆವುತ್ತು.