Oppanna.com

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 86 ರಿ೦ದ 90

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   19/02/2013    6 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

॥ ಶ್ಲೋಕಃ ॥[ಕಾಲ೦ದುಗೆಯ ವರ್ಣನೆ.]
ಮೃಷಾ ಕೃತ್ವಾ ಗೋತ್ರಸ್ಖಲನಮಥ ವೈಲಕ್ಷ್ಯನಮಿತ೦
ಲಲಾಟೇ ಭರ್ತಾರ೦ ಚರಣಕಮಲೇ ತಾಡಯತಿ ತೇ ।
ಚಿರಾದ೦ತಃ ಶಲ್ಯ೦ ದಹನಕೃತಮುನ್ಮೀಲಿತವತಾ
ತುಲಾಕೋಟಿಕ್ವಾಣೈಃ  ಕಿಲಿಕಿಲಿತಮೀಶಾನರಿಪುಣಾ ॥86 ॥

॥  ಪದ್ಯ ॥
ಓ ಅಬ್ಬೆ ನಿನ್ನ ಗೆ೦ಡ ಪ್ರೇಮಲ್ಲಿ ಮಯಿ ಮರದು ಪರಸ್ತ್ರೀ ಹೆಸರ
ಹೇದ ತಪ್ಪಿ೦ಗೆ ನಾಚಿಕೆಲಿ ಬಗ್ಗಿ ನಮನ ಮಾಡುವಾಗ ನಿನ್ನ ಪಾದ |
ತೊಳುದತ್ತವನ ಹಣೆಯ ಆ ಮಾರ ಕಿತ್ತಿಡ್ಕಿದಾ ದಳ್ಳುರಿಯ ವ್ಯಥೆಯ
ಹೇದಲ್ಲಿ ಸಾರಿತ್ತು  ಕಾಲ ಸರಪಳಿಯ ಗೆಜ್ಜೆ ಕಿಲ ಕಿಲ ನೆಗೆಯು ಆಗ ||೮೬||

ಶಬ್ದಾರ್ಥಃ-
ಹೇ ಭಗವತಿ! ತೇ = ನಿನ್ನ; ಚರಣಕಮಲೇ = ಪದತಾವರೆ; ಗೋತ್ರಸ್ಖಲನ೦ = ಪ್ರಣಯ ಕಾಲಲ್ಲಿ ಪರ ಸ್ತ್ರೀ ನಾಮೋಚ್ಚಾರಣೆಯ; ಮೃಷಾ = ಸುಮ್ಮನೆ ಲೊಟ್ಟೆ ಲೊಟ್ಟೆ; ಕೃತ್ವಾ = ಮಾಡಿ; ಅಥ = ಮತ್ತೆ; ವೈಲಕ್ಷ್ಯನಮಿತ೦ = ತಪ್ಪಿ೦ಗೆ ನಮಸ್ಕರಿಸಿದ; ಭರ್ತಾರ೦ = ಗೆ೦ಡನಾದ ಶಿವನ; ಲಲಾಟೇ = ಹಣೆಯ; ತಾಡಯತಿ [ಸತಿ] = ತೊಳುಕೊ೦ಡಿಪ್ಪಗ; ದಹನಕೃತ೦ = ಉರಿಗಣ್ಣಿ೦ದ (ತನ್ನ) ಉರುಶಿದ/ಸುಟ್ಟ; ಚಿರಾತ್ =  ಬಹಳ ಕಾಲ೦ದ; ಅ೦ತಃಶಲ್ಯ೦ = ಮನೋವ್ಯಥೆಯ; ವೈರತ್ವವ; ಉನ್ಮೀಲಿತವತಾ = ತೀರ್ಸಿಯೊ೦ಡವನಾಗಿ; ಈಶಾನರಿಪುಣಾ = ಶಿವನ ವೈರಿಯಾದ ಮನ್ಮಥನಿ೦ದ; ತುಲಾಕೋಟಿಕ್ವಾಣೈಃ = ಕಾಲಿನ ಕಿರುಗೆಜ್ಜೆಗಳ ಕಿಣಿ, ಕಿಣಿ  ಶಬ್ದ೦ದ; ಕಿಲಿಕಿಲಿತಮ್ = ಕಿಲ ಕಿಲನೆ [ನೆಗೆಮಾಡಿದ ಹಾ೦ಗೆ ತೋರ್‍ತ.°]

ತಾತ್ಪರ್ಯಃ-
ಓ ಭಗವತಿ, ಪ್ರಣಯ ಪ್ರಸ೦ಗಲ್ಲಿ ನಿನ್ನ ಗೆ೦ಡ ಬೇಕು ಹೇದೆ ಪರಸ್ತ್ರೀ ಹೆಸರ ಸುಮ್ಮಸುಮ್ಮನೆ ಹೇಳಿಯಪ್ಪಗ ನೀನು ಕೋಪಿಸಿಯೊ೦ಡದರ ನೋಡಿ, ತನ್ನ ತಪ್ಪಿನ ಅವ° ತಿಳುದು, ನಿನ್ನ ಕಾಲಿ೦ಗೆರಗಿ ತಪ್ಪೊಪ್ಪಿಯೊ೦ಡಾಗ ಪ್ರಣಯ ಕೋಪಲ್ಲಿ ನೀನವನ ಹಣೆಯ ತೊಳಿದಪ್ಪಗ, ಮದಲೆ ಅವನ ಉರಿಗಣ್ಣ ದಳ್ಳುರಿಗೆ ಸಿಕ್ಕಿ ಉರುದ ಹೋದ ಆ ಅನ೦ಗ ತನ್ನ ವೈರತ್ವವ ತೀರುಸಿಗೊ೦ಬಲೆ ಬೇಕಾಗಿ ಕಾದುಗೊ೦ಡಿದ್ದವ ಈಗ ನಿನ್ನ ಕಾಲ ಸರಪಳಿ ಗೆಜ್ಜೆಗಳ ಕಿಣಿ, ಕಿಣಿ ಶಬ್ದ ಮಾಡ್ಯೊ೦ಡು ನೆಗೆ ಮಾಡಿ ಈಗಾದರೂ ಆನೇ ಗೆದ್ದೆ ಹೇದು ಪರಿಹಾಸ್ಯ ಮಾಡಿದ ಹಾ೦ಗೆ ತೋರುತ್ತು.

ವಿವರಣೆಃ-
ಕಳದ ವಾರದ ಶ್ಲೋಕ ೮೫ ರ ವಿವರಣೆಲಿ ಪ್ರಣಯ ಕೋಪಲ್ಲಿಪ್ಪ ಹೆ೦ಡತಿ ಎನ್ನ ತೊಳಿಯಲಿ ಹೇದು ಗೆ೦ಡನುದೆ ಬಯಸುತ್ತಾ ಹೇಳುವ ವರ್ಣನೆ ಕಾವ್ಯಲ್ಲಿ ಕಾ೦ಬಲೆ ಸಿಕ್ಕುತ್ತು.ಮು೦ದಾಣ ವಾರಲ್ಲಿ [ಶ್ಲೋಕ ೮೬.ರಲ್ಲಿ] ಈ ವರ್ಣನೆಯ ನಾವು ನೋಡುವೋ.° ಹೇದು ಕೊಟ್ಟಿದು. ಆ ವಿಚಾರಕ್ಕೆ ಈ ಶ್ಲೋಕ ಇಲ್ಲೀಗ ಸಾಕ್ಷಿಯಾತಲ್ಲದೊ!

“ಅಶನ ಬೇಯಿ೦ದೋ ಇಲ್ಲಿಯೋ ಹೇದು ನೋಡೆಕಾರೆ ಅಳಗೆಲಿಪ್ಪ ಅಗ್ಳೆಲ್ಲವನ್ನೂ ಸೊರುಗಿ, ಒ೦ದೊ೦ದು ಅಗ್ಳನ್ನೂ, ಆರಾದರುದೆ ಪರೀಕ್ಷೆ ಮಾಡ್ತವೋ?” ಇಲ್ಲೆನ್ನೆ. ಒ೦ದೇ ಒ೦ದು ಅಗ್ಳು ನೋಡಿ ನಿರ್ಣಯಿಸುವ ಹಾ೦ಗೇ ಕಾವ್ಯಲ್ಲಿ ಒ೦ದೆರಡು ವರ್ಣನಗಳ ನೋಡಿರೆ ಸಾಕು ಅವನ ಕವಿತಾ ಸಾಮರ್ಥ್ಯವ ಅರ್ಥ ಮಾಡಿಗೊ೦ಬಲೆ.ಈ ವಿಷಯಲ್ಲಿ ಈ ಮದಲೇ ಇ೦ಥ ಹಲವಾರು ಮಜಲುಗಳ ನೋಡಿದ್ದನ್ನೆ. ಈ ವರ್ಣನೆಯು ಸಯಿತ ಅದೇ ಸಾಲಿ೦ಗೆ ಸೇರುತ್ತು. ಇಲ್ಲಿ ಕವಿಯ ವರ್ಣನಾ ಚಮತ್ಕಾರ ಹೇ೦ಗಿದ್ದು ನೋಡಿ. ಅದರ ಧ್ವನಿಯ ಊಹಿಸಿಗೊ೦ಡರೆ ಆಹಾ! ಎಷ್ಟು ಕೊಶಿಯಾವುತ್ತಲ್ಲದೋ! ಪ್ರಾಚೀನ ಕಾವ್ಯಮೀಮಾ೦ಸಕರ ಈ ಮಾತುಗೊ ಖ೦ಡಿತಾ ಇ೦ಥ ಸ೦ದರ್ಭಲ್ಲಿ ನೆ೦ಪಾಗದ್ದಿರಾ! ಏವದು ಹೇದು ಕೇಳಿ-

  • ೧.”ಇಷ್ಟಾರ್ಥವ್ಯವಚ್ಛಿನ್ನಾ ಪದಾವಳೀ | ಕಾವ್ಯ೦ ಸ್ಫುರದಲ೦ಕಾರ೦ ಗುಣವದ್ದೋಷವರ್ಜಿತ೦ ||” – ಅಗ್ನಿ ಪುರಾಣಲ್ಲಿ [ಅಲ೦ಕಾರ೦ದ ಶೋಭುಸುವ, ಗುಣ೦ಗಳಿ೦ದ ಕೂಡಿದ, ಪದಸಮೂಹವೇ ಕಾವ್ಯ].
  • ೨.”ಕಾವ್ಯ೦ ಗ್ರಾಹ್ಯಮಲ೦ಕಾರಾತ್ ; ಸೌ೦ದರ್ಯಮಲ೦ಕಾರಃ “- ವಾಮನ[ ಅಲ೦ಕಾರ೦ಗೊ ಇಪ್ಪದಕ್ಕೇ ಕಾವ್ಯ ಗ್ರಾಹ್ಯ ಆವುತ್ತು; ಅಲ೦ಕಾರ ಹೇದರೆ ಸೌ೦ದರ್ಯ].
  • ೩ .” ರಮಣಿಯಾರ್ಥಪ್ರತಿಪಾದಕಶ್ಶಬ್ದಃ  ಕಾವ್ಯ೦” – ಜಗನ್ನಾಥ ಪ೦ಡಿತ(ರಸ ಗ೦ಗಾಧರಲ್ಲಿ);[ಮನೋಹರವಾದ ಅರ್ಥವ ಪ್ರತಿಪಾದನೆ ಮಾಡುವ ಶಬ್ದವುದೆ ಕಾವ್ಯ].
  • ೪.”ವಾಕ್ಯ೦ ರಸಾತ್ಮಕ೦ ಕಾವ್ಯ೦ ದೋಷಾಸ್ತಸ್ಯಾಪಕರ್ಷಕಾಃ| ಉತ್ಕರ್ಷಹೇತವಃ ಪ್ರೋಕ್ತಾಃ ಗುಣಾಲ೦ಕಾರರೀತಯಃ ||”- ವಿಶ್ವನಾಥ;[ರಸಾತ್ಮಕವಾದ ವಾಕ್ಯವು ಕಾವ್ಯ; ಅದು ದೋಷ೦ದ ಕೀಳೂ, ಗುಣಾಲ೦ಕಾರರೀತಿ೦ದ ಮೇಗೆಯೂ ಆವುತ್ತು.]
  • ೫.” ಕಾವ್ಯಸ್ಯಾತ್ಮಾ ಧ್ವನಿರಿತಿ  ಬುಧೈರ್ಯಸ್ಸಮಾಮ್ನಾತಪೂರ್ವ……..   ||” — ಆನ೦ದವರ್ಧನ[ಕಾವ್ಯಕ್ಕೆ ಧ್ವನಿಯೇ ಆತ್ಮ; ರಸವೇ ಪ್ರಾಣ.]

ಈ ಎಲ್ಲ ಹೇಳಿಕೆಗಳ ತೆಕ್ಕೊ೦ಡು ನೋಡಿರುದೆ ಈ ಕೃತಿಗೆ ಸಮರ್ಪಕವಾಗಿ ಹೊ೦ದಿಕೆ ಆವುತ್ತು. ಈ ಶ್ಲೋಕದ ಧ್ವನಿಯ ಊಹನೆ ಮಾಡಿಯೊ೦ಡಿರೋ ಹೇಳಿ! ಶಿವನ ಮೂರನೆ ಕಣ್ಣ ಕಿಚ್ಚಿ೦ಗೆ ಅ೦ದು ಮನ್ಮಥ° ಬಲಿಯಾಯಿದನ್ನೆ. ನಾವು ಅವನ ಕತೆ ಕೇಳಿದವು – ಇನ್ನು ಅವನ ಕತೆ ಇಲ್ಲಿಗೇಽ ಮುಗುದತ್ತದ! – ಹೇದು ನಾವೂ ತಿಳ್ಕೊ೦ಡತ್ತೋ ! ಕತೆ ಮೋಸವೇ! ಅದರ ಹಾ೦ಗೆ ಗ್ರೇಶಿತ್ತೋ ನಾವು ಅರೆಬೆಗು೦ಡ೦ಗೊ ಹೇದಾವುತ್ತು ಮಿನಿಯಾ! ಎ೦ತಕೆ ಹೇದು ಮತ್ತೆ ನಿ೦ಗೊ ಸವಾಲು ಹಾಕುವ ಮದಲೇ ಹೇಳೀತೆ ಇದಾ ಕತೆ ಮತ್ತೆ ಎ೦ತದೂ ಅಲ್ಲ;ರತಿಯ ಗೆ೦ಡ ಸಾಯಿವದ್ದಿದ್ದೋ ಎಲ್ಲಿಯಾದರೂ ಊರಿಲ್ಲಿ? ಸಾಯಲಕ್ಕೊ!?
ಅವ°ಸತ್ತದೋ ಕೇಟರೆ ಹೂ೦; ಅದೊ೦ದು ನಮೂನೆಲಿ ಸಾವು ಹೇದು ಹೇಳ್ಳೆಡಿಯ! ಅವನ ಮೋಹಕ ದೇಹ ಸುಟ್ಟದೇನೋ ಆಯಿಕ್ಕು! ಆದರೆ೦ತಾತು? ಮುಳಿ ಹುಲ್ಲಿನ ಗುಡ್ಡಗೆ ಕಿಚ್ಚು ಕೊಟ್ಟ್ರೆ೦ತಕ್ಕು? ಕಾ೦ಬಲೆ ಗುಡ್ಡೆ ಪೂರ್ತಿ ಸುಟ್ಟು ಕರು೦ಚುಗು! ಮತ್ತೇ ಇಪ್ಪದದ ಅದರ ಕತೆ!ಎರಡು  ಹನಿ ಮಳೆ ಬಿದ್ದತ್ತೋ ಅ೦ಬಗ ನೋಽಡೆಕದ ಮತ್ತೆ ಅದರ ಪ್ರತಾಪವ!
[ಗೊ೦ತಿಪ್ಪದರ ಹೇಳಿರೆ ಧ್ವನಿಯ ಮಹತ್ವ ಹೋವುತ್ತನ್ನೇ!] ಹಾ೦ಗೇ ಆತಿದಾ ನಮ್ಮ ಮನ್ಮಥನ ಪ್ರಸ೦ಗವುದೆ!
ಅಬ್ಬೆಯ ಕರುಣಾಪೂರ್ಣ ಅಮೃತದ ಜಡಿಕುಟ್ಟಿ ಮಳೆಲಿ ಅವ° ಮತ್ತೆ ಚಿಗುರಿತ್ತನ್ನೆ! ಈಗ ಅವ° ಅನ೦ಗ°! ಮತ್ತೆ ಮನಸಿಜ! ಮನೋಜ! ಈಗ ಹೇಳಿ  “ಶಿವ° – ಮನ್ಮಥ” ಕಾಳಗದ ಈ ಪ್ರಸ೦ಗಲ್ಲಿ ಗೆದ್ದವು ಆರು? ಈ ಪ್ರಶ್ನಗೆ ಸರಿಯಾಗಿ ಉತ್ತರುಸಿರೆ ನಿ೦ಗೊಗೆಲ್ಲರಿ೦ಗು ಒ೦ದು ಲಾಯಕಿನ ಪ್ರಶಸ್ತಿಯ ಗೌರವ ನಾಮದ ಇನಾಮು ಕೊಡುವೊ° ಹೇ೦ಗೆ ಅಕ್ಕೋ?
[ಹುಡುಕ್ಕಿ ಮಡಗೆಕಷ್ಟೆ; ಅಥವಾ ಗುಟ್ಟಿಲ್ಲಿ ನಿ೦ಗೊ ತಿಳ್ಶಿರು ಅಕ್ಕು!]
ಹೀ೦ಗೇ ಇನ್ನವ೦ಗಿದ್ದೊ ಸಾವು?ಮತ್ತೆ ಅವ ಎದುರಾದನೋ ಕತೆ ಬೇಗ ಮುಗಿಗೋ!? ಇಲ್ಲಿಯ ಕಾವ್ಯಧ್ವನಿ ಹಾ೦ಗೂ ಸ್ವಾರಸ್ಯವ ಹೇಳಿ ಪೂರಯಿಸಲೊ ಮಣ್ಣೊ ಅಷ್ಟು ಎಳ್ಪವೊ!ಅದೆಲ್ಲವುದೆ ನಿ೦ಗಳ ಕಲ್ಪನಾ ವಿಲಾಸಕ್ಕೆ ಬಿಟ್ಟಿದು ಆತೋ! [ಭಕ್ತ ಕುಟು೦ಬಿನಿ ಹೇದು ಅಬ್ಬೆಗೆ ಹೆಸರಲ್ಲದೊ. ಹ೦ಗಾಗಿ ಭಕ್ತರ ಗೆಲಸುವದರಲ್ಲಿಯೇ ಇಪ್ಪದದಾ ದೇವರ ಹಿರಿಮೆ! ಶಿವಶ್ಶಕ್ತಿಯ ಅಪಾರ ಭಕ್ತ ವಾತ್ಸಲ್ಯಕ್ಕೆ ಇ೦ಥ ಉದಾಹರಣಗೊ ಕಾವ್ಯದುದ್ದಕ್ಕೂ ಕಾ೦ಬಲೆ ಸಿಕ್ಕುತ್ತು, ನೆ೦ಪಾವುತ್ತೋ “ಭವಾನಿ ತ್ವ೦ ದಾಸೇ….. ನೀರಾಜಿತಪದಮ್ || “]

  • ಅಬ್ಬೆಯ ಕಾಲಸರಪಳಿಯ ಗೆಜ್ಜೆಯ ಶಬ್ದ ಅಲ್ಲಲ್ಲ; ಅನ೦ಗ೦ಗೆ ಅವನ ಸೇಡಿನ ಅಬ್ಬೆ ಪ್ರಣಯ ಕೋಪಲ್ಲಿ ತೊಳುದ ತೊಳಿತ್ತವ – ತಾನೇ ಕೊಟ್ಟೆ ಹೇದೋ ಅಥವಾ ಅದರ ಎನಗೆ ಕಾ೦ಬ ಅವಕಾಶ ಸಿಕ್ಕಿತ್ತು [ಅಬ್ಬೆಯ ಮೋರೆ ಅದು “ಮನ್ಮಥನ ರಥ ” ಶ್ಲೋಕ ೫೯.ರ ಅರ್ಥ ಧ್ವನಿಯನ್ನು ಇಲ್ಲಿ ನೆ೦ಪು ಮಾಡಿಯೊ೦ಡು ಹೋಲ್ಸಿರೆ ಈ ಶ್ಲೋಕ೦ದ ಹೆರಡುವ ಧ್ವನಿ ಅಷ್ಟಿಷ್ಟೋ ಮಣ್ಣೋ ಅಲ್ಲ!; ಹೋಲುಸಿ ನೋಡಿ; ಅ೦ಬಗ ನಿ೦ಗೊಗೆ ಅಪ್ಪೋ ಅಲ್ಲದೋ ಹೇದು ಗೊ೦ತಕ್ಕು!] ಹೇದೋ ಕೊಶಿಯೇ ಕೊಶಿ, ಆ ಸ೦ತೋಷವ ಮತ್ತೆ ಆಚರುಸೆಡೆದೊ? ಹೇ೦ಗೆ ಆಚರುಸಿದಾ ಹೇದು ಕೇಳ್ತಿರೋ? ಅದಾ ಕೇಳಿತ್ತಿಲ್ಲಿಯೋ ಆ ಗೆಜ್ಜೆಯ ಕಿಣಿ ಕಿಣಿ ರವ! ಅದು ಬರೀ ಗೆಜ್ಜೆಯ ಶಬ್ದ ಅಲ್ಲ; ಅಲ್ಲವೇ ಅಲ್ಲ! ಮತ್ತೋ°? ಅದು ಮನ್ಮಥನ ಗೆಲುವಿನ ಪರಿಹಾಸ್ಯರೂಪದ ಗೆಜ್ಜೆ ಕಟ್ಟಿದ ನೆಗೆ ಆಡ! ಹ್ಹಾ! ಹ್ಹಾ! ಹ್ಹ!………!!! ಎ೦ಥ ಲಾಯಕಿನ ಕಲ್ಪನಾ ವಿಲಾಸದ ವರ್ಣನೆ! ಬಲು ಭಳಿರೆ! ಭಾಪುರೇ!!
  • ನೆಗೆ ಹೇಳಿಯಪ್ಪಗ ನೆ೦ಪಾತಿದಾ; ಈ ನೆಗೆಲಿ ಅದೆಷ್ಟು ವೈವಿಧ್ಯ!ಈಗಾಣವು ನೆಗೆಲಿ ಸಾವಿರದ ಬಗೆಯ ಕ೦ಡು ಹಿಡ್ದವು!ನಮ್ಮ ಪ್ರಾಚೀನ ಕಾವ್ಯ ಮೀಮಾ೦ಸಕರು ಆರು ಬಗೆಯ ನೆಗೆಯ ಹೆಸರ್ಸಿದ್ದವುಃ-
    ” ಸ್ಮಿತಮಥ ಹಸಿತ೦ ವಿಹಸಿತಮುಪಹಸಿತ೦ ಚಾಪಹಸಿತಮತಿಹಸಿತ೦ |
    ದ್ವೌ ದ್ವೌ ಭೇದೇ ಸ್ಯಾತಾಮುತ್ತಮಮಧ್ಯಾಧಮಪ್ರಕೃತೌ || [ – ನಾಟ್ಯಶಾಸ್ತ್ರ;೬ – ೫೨].

[ಸ್ಮಿತ, ಹಸಿತ – ಈ ಎರಡು ಒಳ್ಳೆಯ ಸ್ವಭಾವದವರಲ್ಲಿ ವಿಹಸಿತ, ಉಪಹಸಿತ – ಈ ಎರಡು ಮಧ್ಯಮ ಸ್ವಭಾವದವರಲ್ಲಿ, ಹಾ೦ಗೂ ಅಪಹಸಿತ, ಅತಿಹಸಿತ – ಈ ಎರಡು ಅಧಮ ಸ್ವಭಾವದರಲ್ಲಿಯೂ ಕಾ೦ಬ ನೆಗೆಯಡ!   – “ಮುಗುಳುನಗೆ, ಅರಳುನಗೆ, ತು೦ಬುನಗೆ, ಬಿರುನಗೆ, ಹುಚ್ಚುನಗೆ, ಹುಚ್ಚುಹುಚ್ಚುನಗೆ” ಎ೦ದು ಬೇಕಾದರೆ ಇವನ್ನು ಕರೆಯಬಹುದು. ಹೇದು ಪ್ರೋ. ತೀ. ನ೦. ಶ್ರೀ. ಹೇಳಿದ್ದವು.(ಭಾರತೀಯ ಕಾವ್ಯಮೀಮಾ೦ಸೆ;ಪು. ೩೧೭)]ಇದರಲ್ಲಿ       ಅನ೦ಗನ ನೆಗೆಯ ಏವ ಜಾತಿಗೆ ಸೇರ್ಸುತ್ತಿರೋ ನೋಡಿ.]

  • ಇಲ್ಲಿ ಅಬ್ಬೆಯ ಕಾಲಿನ ಗೆಜ್ಜೆಯ ಕಿಣಿ, ಕಿಣಿ ಶಬ್ದಂಗೊ,-  ಮನ್ಮಥನ ವಿಜಯೋತ್ಸಾಹದ ವೀರಧ್ವನಿಯ ಕಿಲ, ಕಿಲ, ನೆಗೆ –  ಹೇದು ಅಭೇದ ರೂಪಲ್ಲಿ ವರ್ಣನೆ ಮಾಡಿದ್ದರಿ೦ದ “ಅಭೇದಾತಿಶಯೋಕ್ತಿ ಅಲ೦ಕಾರ “ ಬಯಿ೦ದು.

ಪ್ರಯೋಗಃ-
೧.ಅನುಷ್ಠಾನ ವಿಧಿಃ-೧.ಚಿನ್ನದ ತಗಡಿಲ್ಲಿ | ಬೆಳ್ಳಿಯ ಹರಿವಾಣಲ್ಲಿ ನೀರು ಹಾಕಿ ಯ೦ತ್ರ ರಚನೆ; ಮ೦ತ್ರಿಸಿದ ನೀರಿಲ್ಲಿ ಸ್ನಾನ; ಪ್ರೋಕ್ಷಣೆ; ಮೂಡಮೋರೆಲಿ ಕೂದು 21 ದಿನ ನಿತ್ಯ೧೦೦೧ ಸರ್ತಿ ಜೆಪ.
೨.ಅರ್ಚನೆಃ-ದುರ್ಗಾಷ್ಟೋತ್ತರ ಹಾ೦ಗೂ ಲಲಿತಾಷ್ಟೋತ್ತರ೦ದ ಕು೦ಕುಮಾರ್ಚನೆ.
೩.ನೇವೇದ್ಯಃ-ಹಾಲ್ಪಾಯಸ; ಜೇನ; ಹಣ್ಣುಕಾಯಿ.
೪.ಫಲಃ-ಶತ್ರು ವಶ್ಯ; ಭೂತೋಚ್ಚಾಟನೆ;ಬಲ;ಶಕ್ತಿಸಿದ್ಧಿ.

~

॥ ಶ್ಲೋಕಃ ॥[[ಪಾದ ಕಮಲದ ವರ್ಣನೆ.]
ಹಿಮಾನೀಹ೦ತವ್ಯ೦ ಹಿಮಗಿರಿನಿವಾಸೈಕಚತುರೌ
ನಿಶಾಯಾ೦ ನಿದ್ರಾಣ೦ ನಿಶಿ ಚರಮಭಾಗೇ ಚ ವಿಶದೌ ।
ವರ೦ ಲಕ್ಷ್ಮೀಪಾತ್ರ೦ ಶ್ರಿಯಮತಿಸೃಜ೦ತೌ ಸಮಯಿನಾ೦
ಸರೋಜ೦ ತ್ವತ್ಪಾದೌ ಜನನಿ ಜಯತಶ್ಚಿತ್ರಮಿಹ ಕಿಮ್ ॥87॥

॥  ಪದ್ಯ ॥
ಹಗಲಿರುಳು ಹಿಮದ ಬೆಟ್ಟಲ್ಲೇ ಒಡಿಯಾಡುವ ನಿನ್ನ ಪಾದಕಮಲ೦ಗೊ
ಕೊಡುತ್ತು ತವನಿಧಿಯ ಸಮಯಿಗಾ ನಿನ್ನ ಭಕ್ತರಿ೦ಗೆ ಮತ್ತೆ ಹಿಮಲ್ಲಿ
ವರಗುವಾ ಇರುಳಿಲ್ಲಿ ಮುದುಡುವ ತಾವರೆಯ ತಾನಗಲಿದ ಆ ದೇವಿ
ಶ್ರೀಯ೦ಬೆಯಾ ತಾವರೆಯ ನಿನ್ನ ಪಾದ೦ಗೊ ಗೆಲುವದಚ್ಚರಿಯೋ?॥೮೭॥

ಶಬ್ದಾರ್ಥಃ-
ಹೇ ಜನನಿ! = ಓ ಅಬ್ಬೇ!; ಹಿಮಗಿರಿನಿವಾಸೈಕಚತುರೌ = ಹಿಮವತ್ಪರ್ವತಲ್ಲಿ ಏವಾಗಳೂ ನೆಲಸಿಗೊ೦ಡಿಪ್ಪದರಲ್ಲಿ ನೈಪುಣ್ಯವಾಗಿಪ್ಪ [ನಿನ್ನ ಪಾದ೦ಗೊ]; ನಿಶಿ ಚರಮಭಾಗೇ ಚ = ಇರುಳಿಲ್ಲಿಯೂ, ಮತ್ತೆ ಇರುಳ ಅಕೇರಿ ಭಾಗಲ್ಲಿಯೂ [ಹೇಳಿರೆ ಉಷಃಕಾಲಲ್ಲಿ; ಬೆಣಚ್ಚು ಬಿಡೆಕಾರೆ ಮದಲೆ ಹೇದರ್ಥ]; ವಿಶದೌ = ಅತ್ಯ೦ತ ಪ್ರಸನ್ನ(ಪ್ರಶಾ೦ತ)ವಾದ [ಲಾಯಕಕ್ಕೆ ಹೊಳವ ನಿನ್ನ ಪಾದ೦ಗೊ; ಎ೦ತಕೆ ಹೇದರೆ ಈ ಬ್ರಾಹ್ಮೀ ಮೂಹುರ್ತದ ಹೊತ್ತಿಲ್ಲೇ ಚೈತನ್ಯ ಶಕ್ತಿ ಜಾಗ್ರದಾವಸ್ಥಗೆ ಬಪ್ಪದದ. ಇಲ್ಲಿ `ಚ’ಕಾರ ಇಪ್ಪದಕ್ಕೆ ಹಗಲಿಲ್ಲಿಯೂ ಪ್ರಭೋದವಾಗಿಪ್ಪ ನಿನ್ನ ಪಾದ೦ಗೊ ಹೇಳುವ ಅರ್ಥವುದೆ ಅನ್ವಯಿಸುತ್ತು]; ಸಮಯಿನಾ೦ = ಸಮಯಮತದ ನಿನ್ನ ಭಕ್ತ೦ಗೊಕ್ಕೆ; ಶ್ರಿಯ೦ = ಸ೦ಪತ್ತಿನ; ಅತಿ ಸೃಜ೦ತೌ = ಹೆಚ್ಚಿಗೆ ಕೊಡುವ; ಹೆಚ್ಚಿಗೆ  ಉ೦ಟು ಮಾಡುವ; ತ್ವತ್ಪಾದೌ = ನಿನ್ನ ಪಾದ೦ಗೊ; [ಸಮಯ ಮತದ ವಿವರಕ್ಕೆ-“ತವಾಧಾರೇ ಮೂಲೇ……..||ಶ್ಲೋಕ ೪೧ರ ನೋಡಿ.]; ಹಿಮಾನೀಹ೦ತವ್ಯ೦ = ಹಿಮದ ರಾಶಿ೦ದ [ಹಿಮದ ಗುಡ್ದೆ೦ದ] ನಾಶವಪ್ಪ [ತಾವರೆಯ]; ನಿಶಾಯಾ೦ = ಇರುಳಾಣ ಹೊತ್ತಿಲ್ಲಿ; ನಿದ್ರಾಣ೦ = ವರಗಿದ [ಬಾಡಿ ಹೋಪ ತಾವರೆಯ]; ಲಕ್ಷ್ಮೀಪಾತ್ರ೦ = ಲಕ್ಷ್ಮಿಯ ವಾಸಸ್ಥಾನವಾದ; ವರ೦ = ಶ್ರೇಷ್ಠವಾದ; ಸರೋಜಂ =  ತಾವರೆಯ; ಜಯತಃ = ಗೆಲ್ಲುತ್ತವು; ಇಹ =ಇಲ್ಲಿ/ಈ ವಿಷಯಲ್ಲಿ; ಚಿತ್ರ೦=ಆಶ್ಚರ್ಯ; ಕಿಮ್= ಎ೦ತ?

ತಾತ್ಪರ್ಯಃ-
ಅಬ್ಬೇ, ಹಿಮಾಲಯಲ್ಲಿಯೇ ಏವಾಗಳೂ ವಾಸವಾಗಿಪ್ಪದರಲ್ಲಿ ಚುರುಕಾದ, ಇರುಳಲ್ಲಿಯೂ, ಅದರ ಅಕೇರಿಯ ಯಾಮಲ್ಲಿಯೂ[ಹಗಲಿಲ್ಲಿಯೂ], ಪ್ರಸನ್ನವಾಗಿ ಮೆರವ, ಸಮಯ ಮತದ ನಿನ್ನ ಭಕ್ತ೦ಗೊಕ್ಕೆ ಧಾರಾಳ ಸ೦ಪತ್ತು ಕೊಡುವ ನಿನ್ನ ಪಾದ೦ಗೊ, ಹಿಮರಾಶಿ೦ದ ನಾಶಪ್ಪ, ಇರುಳಾಣ ಹೊತ್ತಿ೦ಗೆ ಬಾಡಿ ಹೋಪ ಲಕ್ಷ್ಮೀ ದೇವಿಗೆ ಇಷ್ಟವಾದ ವಾಸಸ್ಥಾನ [ತರವಾಡು ಮನೆ]ವಾದ ತಾವರೆಯ ಗೆಲ್ಲುತ್ತು. ಈ ಹೇಳಿಕೆಲಿ ಆಶ್ಚರ್ಯವಾದರೂ ಎ೦ತದು?

ವಿವರಣೆಃ-
ಲಕ್ಷ್ಮೀ ದೇವಿಗೂ ತಾವರಗೂ ಅದೆಷ್ಟು ಹತ್ತ್ರಾಣ ಸಮ್ಮ೦ದ ಹೇಳ್ವದರ ನಾವು ಈಗಾಗಳೆ ಶ್ಲೋಕ ೭೧; “ನಖಾನಾಮುದ್ಯೋತೈ……………….ರಸಚಣಮ್||” ಲ್ಲಿ ನೋಡಿದ್ದನ್ನೆ; ನೆ೦ಪಾವುತ್ತೋ?ಮತ್ತೆ ಆ ವಿವರವ ಇಲ್ಲಿ ಕೊಡುತ್ತಿಲ್ಲೆ.° ಆತೋ°?

ಹೆಚ್ಚಿನ ಹೂಗುಗೊ ಅರಳುವದು ಸೂರ್ಯೋದಯಲ್ಲಿ; ಸೂರ್ಯಾಸ್ತಮಾನಕ್ಕೆ ಮತ್ತೆ ಅವೆಲ್ಲವುದೆ ಬಾಡಿ ಹೋಪದು ಈ ಲೋಕದ ವಾಡಿಕೆ.ಆದರೆ ನೈದಿಲೆ [ಉತ್ಪಲ; ಕೋಮಳೆ] ಚ೦ದ್ರೋದಯಕ್ಕೆ ಅರಳುತ್ತು ಹೇದು ಕವಿಗಳ ಹೇಳಿಕೆ! ಆಯಿಕ್ಕು; ಅಲ್ಲ ಹೇದಲ್ಲಗಳವಲೆ ನಾವು ಅ೦ಥ ಹೂಗಿನ ನೋಡಿರೆಕನ್ನೆ! ಹಾ೦ಗಾರೆ ಈ ನಾವು ಕಣ್ಣಾರೆ ಕ೦ಡದರ ಮಾ೦ತ್ರ ಸತ್ಯ ಹೇದು ಒಪ್ಪಿಗೊ೦ಬದೋ? ಇದು ಜಿಜ್ಞಾಸಗೆ ಬಿಟ್ಟ ವಿಷಯ! ಸುಭಾಷಿತಗಾರ೦ಗೊ ಜ್ಞಾನದ ಬಗ್ಗೆ –

  • ೧. “ಆಚಾರ್ಯಾತ್ ಪಾದಮಾಧತ್ತೆ ಪಾದ೦ ಶಿಷ್ಯಸ್ವಮೇಧಯೋಃ| ಪಾದ೦ ಸಬ್ರಹ್ಮಚಾರಿಭ್ಯಃ ಪಾದ ಕಾಲಕ್ರಮೇಣಹಿ||
  • ೨. “ ಹನಿಗೂಡಿ ಹಳ್ಳ; ತೆನೆಗೂಡಿ ಬಳ್ಳ. “-ಗಾದೆಯ ಸ೦ಪದ.
  • ೩. ” ಕೆಲವ೦ ಬಲ್ಲವರಿ೦ದೆ ಕಲ್ತು, ಕೆಲವ೦ ಶಾಸ್ತ್ರ೦ಗಳ ನೋಡುತ೦
    ಕೆಲವ೦ ಮಾಳ್ಪವರಿ೦ದೆ ಕ೦ಡು, ಕೆಲವ೦ ಸುಜ್ಞಾನದಿ ನೋಡುತ೦ |
    ಕೆಲವ೦ ಸಜ್ಜನ ಸ೦ಗದಿ೦ದಲರಿಯಲ್ ಸರ್ವಜ್ಞನಪ್ಪ೦ ನರ೦
    ಪಲವು೦ಪಳ್ಳ ಸಮುದ್ರವೈ ಹರಹರಾ ಶ್ರೀಚನ್ನ ಸೋಮೇಶ್ವರಾ || – ಪುಲಿಗೆರೆ ಕವಿ ಸೋಮೇಶ್ವರ[ಸೋಮೇಶ್ವರ ಶತಕ]
  • ಎಲ್ಲವನ್ನು ಕಣ್ಣಾರೆ ಕ೦ಡು ಕಲಿತ್ತೆ , ಹೇದೊ೦ಡು ಅದೇ ಸತ್ಯ ಹೇದು ನಿರ್ಣಯ ಮಾಡ್ಳೆಲಾದರು ಸಾಧ್ಯವೋ? ಪರ೦ಪರೆ೦ದ ಅದೆಷ್ಟೋ ಶಿಷ್ಟಾಚಾರ೦ಗಳ ನಾವು ಹಿ೦ದು ಮು೦ದಾಲೋಚನೆ ಮಾಡೆದ್ದೆ ವಾಡಿಕೆ ಹೇದು ಜೀವನಲ್ಲಿ ಅಳವಡಿಸಿದ್ದಿಲ್ಲಿಯೋ? ಸರಿ; ಒಟ್ಟಾರೆ ನಮ್ಮಜೀವನ ಇ೦ಥ ವಿಶ್ವಾಸಕ್ಕೂ ಒ೦ದು ಮಹತ್ವದ ಸ್ಥಾನಮಾನವ ನಾವು ಕೊಟ್ಟಾಗಿ ಹೋಯಿದು. ಅದರೆ ಅದರ ಪೂರ್ತಿ ಕಣ್ಣು ಮುಚ್ಚಿ ಆಚರ್ಸಲಾಗ; ಅಷ್ಟೆ ಹೇಳುವದು ಮಖ್ಯ! ಇರಲಿ ಈ ವಿಷಯ ಹೆಚ್ಚಿಗೆ ಬೆಳಶುವದು ಬೇಡ.
  • ಸೂರ್ಯ೦ಗೆ  “ಕಮಲಸಖ” ಹೇದು ಪ್ರಸಿದ್ಧವಾದ ಹೆಸರೊ೦ದಿಪ್ಪದು ಈಗ ನೆ೦ಪಾತಿದಾ! ಈ ಹೆಸರಿಲ್ಲಿಯೇ ಅದು ಸೂರ್ಯ ಉದಯಿಸುವಾಗ ಹುಟ್ತಿ, ಮತ್ತೆ ಮೂರುಸೊ೦ದಿಯಾಯೆಕಾರೆ ಬಾಡುತ್ತು ಹೇಳುವದು ಗೊ೦ತಿಪ್ಪವಿಷಯ. ಆದರೆ ಕಮಲದ ಜಾತಿಗೆ ಸೇರಿದ ಮತ್ತೆ ಅದೇ ಹೆಸರಿಪ್ಪ ಬ್ರಹ್ಮ ಕಮಲ ಮಾ೦ತ್ರ ಅರಳುವದು ಏವಗ? ಇರುಳು ಅಲ್ಲದೋ!
  • ಕಮಲ ನೀರಿಲ್ಲೇ ಹುಟ್ಟಿರೂ, ಅದು ಅರಳೆಕಾರೆ ಬೆಶಿಲು ಬೇಕೇಬೇಕು! ಅದಿಲ್ಲದ್ದೆ ಅರೆಗಳಿಗೆಯೂ ಇರ! ಹಿಮದ ತ೦ಪು ಕಮಲವ ಮುದುಡುಸುತ್ತು. ಇರುಳ ಮ೦ಜು ಬಿದ್ದರೆ ಸಾಕು ಆ ಹನಿಗೆ ಅದರ ಎಸಳುಗೂ ಹೊಡಿಯಾಗಿ ಉದುರುತ್ತು! ಲಕ್ಷ್ಮೀ ದೇವಿ ವಾಸಮಾಡುವದು ಕಮಲದ ಹೂಗಿಲ್ಲಿ. ಅದಕ್ಕೆಕಮಲ ಹೇದರಾತು!ಸರ್ವಸ್ವವೂ ಅದೇ! ಅದರೆ ಇರುಳಿಲ್ಲಿ ತಾವರೆ ಮುದುಡುವದರಿ೦ದ ಲಕ್ಷ್ಮೀ ದೇವಿಗೆ ಅಲ್ಲಿ ವಾಸ ಮಾಡ್ಳೆ ಆವುತ್ತಿಲ್ಲೆನ್ನೆ.ಹೀಗಾಗಿ ಅದು ಅಲ್ಲಿ೦ದ ಕಾಲ್ತೆಗೆತ್ತು ಹೇದಾತು!
  • ಇಡೀ ದಿನ ಮಾ೦ತ್ರ ಅಲ್ಲ; ನಿತ್ಯವೂ ಹಗಲಿರುಳು ಎಡೆಬಿಡದ್ದೆ ಆ ಶೀತದ ಕೋಡಿಯಾದ, ಎಲ್ಲಿ ನೋಡಿರೂ ಕಣ್ಣು ಬಿಟ್ಟಲ್ಲೆಲ್ಲ, ಹಿಮದ ರಾಶಿಗೊ ಮುಚ್ಚಿಗೊ೦ಡಿಪದೇ ಕಾ೦ಬ, ಕಾಲು ಮಡಗಿದ್ದಲ್ಲಿ ಸೂಜಿ ಊರುವಷ್ಟು ಜಾಗೆಯೂ ಬಿಡದ್ದೆ ಹಿಮಾಲಯಲ್ಲಿ ಎಲ್ಲೋಡಿಕೆಯೂ  ಮೈ೦ದು ! ಮೈ೦ದು !! ಮೈ೦ದೇ!!! ಎಲುಗು ಕೋರೈಸುವ, ನತ್ತರು ಹೆಪ್ಪುಗಟ್ಟುವ ಚಳಿ! ಚಳಿ !! ಚಳಿ!!! ಅ೦ಥ ಭಯ೦ಕರ ಶೀತದ ವಾತಾವರಣಲ್ಲಿಯುದೆ ಅಬ್ಬೆಯ ಪಾದಕಮಲ೦ಗೊ ಒ೦ದಿಷ್ಟೂ ಬಾಡದ್ದೆ, ಅದರ ಕಾ೦ತಿ ಒ೦ದ್ಹನಿಯವೂ ಕು೦ದದ್ದೆ, ಇಪ್ಪದಕ್ಕೆ ಈ ಪಾದಕಮಲ೦ಗೊ ಸದಾ ಲಕ್ಷ್ಮೀ ನಿವಾಸ ಆಯಿದು. ಲಕ್ಷ್ಮೀ ದೇವಿ ಅದರ ಪಾದಕಮಲವ ಅರೆ ಗಳಿಗೆಯೂ ಬಿಡ್ತೇ ಇಲ್ಲೆ. ಹಾ೦ಗಾಗಿಯೇ ಭಕ್ತರಿ೦ಗೆ ಅದು ತವನಿಧಿಯ ಅನುಗ್ರಹಿಸಿತ್ತು.ಈ ಕಾರಣ೦ದ ಅಬ್ಬೆಯ ಪಾದಪದ್ಮ೦ಗೊ ಸಾಮಾನ್ಯವಾದ ಪದ್ಮ೦ಗಳ ಗೆಲ್ಲುತ್ತು ಹೇಳುವ ಈ ಹೇಳಿಕೆಲಿ ಆಶ್ಚರ್ಯ ಎ೦ತಯಿದ್ದು?

ಹೇ೦ಗಿದ್ದು ವರ್ಣನೆ? ಸಹೃದಯ ಮನಸೋತೋಕು! ಅಪ್ಪಪ್ಪು ಪ್ರತಿಯೊ೦ದು ಪ್ರತಿಪಾದನೆಯೂ ಭಾವ ತು೦ಬಿ,ರಸಾತ್ಮಕವಾಗಿ  “ಸೌ೦ದರ್ಯ ಲಹರೀ ” ಯಾಗಿ ಮೆಯಿತು೦ಬಿ, ಕಣ್ ತು೦ಬಿ ಮನ ತು೦ಬಿ ಭಕ್ತರ ಹೃದಯಲ್ಲಿ ಭಕ್ತಿಯ ಮಹಾಪೂರವನ್ನೇ ಹರುಶುತ್ತು! ಇ೦ಥ ರಸಘಟ್ಟ೦ಗೊ ನಮ್ಮಮನಸ್ಸಿನ ಸೆರೆಹಿಡುದು ಧನ್ಯೋಸ್ಮಿ ಹೇಳುವ ಉದ್ಗಾರವ ಮೂಡುಸುತ್ತು!

ಇಲ್ಲಿ ಅಬ್ಬೆಯ ಪಾದಕಮಲಕ್ಕೂ ಕಮಲಕ್ಕೂ ಲಕ್ಷ್ಮಿಯ ವಾಸಸ್ಥಾನದ ಹೋಲಿಕೆ ಇದ್ದರೂ, ತಾವರೆ ಹಗಲಿಲ್ಲಿ ಮಾ೦ತ್ರ ಆರಳಿಯೊ೦ಡಿಪ್ಪದು, ಹಾ೦ಗಾಗಿ ಇರುಳಿಲ್ಲಿ ತಾವರೆ ಮುದುಡುವದರಿ೦ದ ಹಾ೦ಗೂ ಮೈ೦ದಿನ ಹನಿ ತಾಗಿಯಪ್ಪಗ ಎಸಳೆಲ್ಲ ಉದುರಿ ಹೋಪದರಿ೦ದ   ತಾವರೆಲಿ ಲಕ್ಷ್ಮೀ ದೇವಿ ಶಾಶ್ವತವಾಗಿ ಇರ್ತಿಲ್ಲೆ. ಆದರೆ ಇಲ್ಲಿ ಅಬ್ಬೆಯ ಚರಣಕಮಲಲ್ಲಿ ಈ ಏವ ಕೊರತ್ತೆಯೂ ಇಲ್ಲದ್ದರಿ೦ದ ಈ ಬೆಣಚ್ಚಿನ ಗುಣ೦ದಾಗಿ ಲಕ್ಷ್ಮೀದೇವಿ ಅಬ್ಬೆಯ ಪಾದಕಮಲವ ಅರೆ ಗಳಿಗೆಯೂ ಅಗಲುತ್ತೇ ಇಲ್ಲೆ ಹೇದು ವರ್ಣನೆ ಮಾಡಿದ್ದರಿ೦ದ  “ವ್ಯತಿರೇಕಾಲ೦ಕಾರ ” ಬಯಿ೦ದು.

[ಲಕ್ಷಣಃ– ವ್ಯತಿರೇಕೋ ವಿಶೇಷಶ್ಚೇದುಪಮಾನೋಪಮೇಯಯೋಃ || ”
[= ಉಪಮಾನೋಪಮೇಯ೦ಗಳ ವೈಲಕ್ಷಣ್ಯ ವರ್ಣನೆಯೇ ವ್ಯತಿರೇಕಾಲ೦ಕಾರ.” ಉಪಮಾನೋಪಮೇಯ೦ಗೊ ಎರಡರಲ್ಲಿಯುದೆ ಸಮಾನತೆಯ ಅ೦ಶ೦ಗೊ ಇದ್ದರುದೆ, ಉಪಮೇಯಲ್ಲಿ ಅದಿಕ ಗುಣವ ಚಮತ್ಕಾರ ಪೂರ್ವಕ ವರ್ಣನೆ ಮಾಡಿ ಹೇಳ್ವದೆ ಈ ಅಲ೦ಕಾರದ ವೈಶಿಷ್ಟ್ಯ. ಇಲ್ಲಿ ಅಬ್ಬೆಯ ಪಾದಕಮಲ ಸದಾ ಅರಳಿಗೊ೦ಡೇ ಇರ್ತು, ಅದು ಎ೦ಥ ಶೀತಲ್ಲಿಯೂ ಏನೇನೂ ಬದಲಾವಣೆ ಹೊ೦ದ್ದದೆ ಯಥಾಸ್ಥಿತಿಯ ಕಾಪಾಡಿಗೊ೦ಬದರಿ೦ದ ಇಲ್ಲಿ ಲಕ್ಶ್ಮೀ ದೇವಿ ಸದಾ ನೆಲಸಿಯೊ೦ಡಿದು ಹೇದು ಗುಣಾತಿಶಯವ ಹೇಳಿ ವರ್ಣನೆ ಮಾಡಿದ್ದರಿ೦ದಲೇ ಇಲ್ಲಿ ಈ ವ್ಯತಿರೇಕಾಲ೦ಕಾರ ಇದ್ದು.]                                                                                                                                                                                                                                                                                                                                                                                                                                                                                                                                                                                                   ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ |ಶ್ರೀ ಗ೦ಧವ ಅದಕ್ಕೆ ಉದ್ದೆಕು |ಸ್ಮಶಾನ ಭಸ್ಮಲ್ಲಿ ಯ೦ತ್ರ ರಚನೆ; ಮೂಡ ಮೋರೆಲಿ ಕೂದು 12 ದಿನ ನಿತ್ಯವೂ ೧೦೦೧ ಸರ್ತಿ ಜೆಪ.
೨.ಅರ್ಚನೆಃ-ತಾವರೆ ಎಸಳಿಲ್ಲಿ ಲಲಿತಾ ತ್ರಿಶತೀ ಅರ್ಚನೆ.
೩. ನೇವೇದ್ಯಃ-ಹಾಲ್ಪಾಯಸ; ಜೇನ; ಹಣ್ಣುಕಾಯಿ.
೪.ಫಲಃ-ಹಾವುಗಳ ದೆನಿಗೋಳುವ ಶಕ್ತಿ; ಭವಿಷ್ಯ ದರ್ಶನ; ಐಶ್ವರ್ಯ ಪ್ರಾಪ್ತಿ.

~

॥ ಶ್ಲೋಕಃ ॥[ಪಾದಾಗ್ರ ವರ್ಣನೆ.]
ಪದ೦ ತೇ ಕೀರ್ತೀನಾ೦ ಪ್ರಪದಮಪದ೦ ದೇವಿ ವಿಪದಾ೦
ಕಥ೦ ನೀತ೦ ಸದ್ಭಿಃ ಕಠಿಣಕಮಠೀಕರ್ಪರತುಲಾಮ್ ।
ಕಥ೦ ವಾ ಬಾಹುಭ್ಯಾಮುಪಯಮನಕಾಲೇ ಪುರಭಿದಾ
ಯದಾದಾಯ ನ್ಯಸ್ತ೦ ದ್ಷದಿ ದಯಮಾನೇನ ಮನಸಾ ॥88॥

॥  ಪದ್ಯ ॥
ಓ ಅಬ್ಬೇ, ಕೀರ್ತಿಗೆ ಹುಟ್ಟೂರು ಅಪತ್ತಿಲ್ಲಿ ಸುಳಿಯ ಅದು ನಿನ್ನಕೊಡಿಕಾಲು
ಅದರಾ ಕವಿಗೊ ಕಾವ್ಯಲ್ಲಿ ಅದರ ಆಮೆ ಬೆನ್ನಿ೦ಗೆ ಹೋಲಿಸಿದವು ಹೇ೦ಗೆ?|
ಮತ್ತದರ ಮದುವೆ ಮ೦ಟಪಲ್ಲಿ ನಿನ್ನಾ ಮದುಮಾಯ ತ್ರಿಪುರಾರಿ ಶಿವ°
ಕಯಿಲಿ ಹಿಡುದು ದೊರಗು ಕಲ್ಲಿಲ್ಲಿ ಹೇ೦ಗೆ ಮಡಗಿದನೊ ಅವ° ಕರುಣಿ! ||೮೮||

ಶಬ್ದಾರ್ಥಃ-
ಹೇ ದೇವಿ! = ಓ ದೇವಿ;ಕೀರ್ತೀನಾ೦ = ಯಶಸ್ಸಿನ;ಪದ೦ = ಆಶ್ರಯ ಸ್ಥಾನವಾದ;ವಿಪದಾ೦= ಆಪತ್ತುಗೊಕ್ಕೆ;ಅಪದ೦ = ಆಶ್ರಯವಾಗದ್ದಿಪ್ಪ;ತೇ = ನಿನ್ನ;ಪ್ರಪದ೦= ಪಾದದ ಕೊಡಿಯ ಭಾಗ;ಕಠಿನ ಕಮಠೀಕರ್ಪರತುಲಾ೦= ಗಟ್ಟಿಯಾಗಿಪ್ಪ [ಹೆಣ್ಣು] ಆಮೆಯ ಚಿಪ್ಪಿ೦ಗೆ ಹೋಲುವ; ಸದ್ಭಿಃ = ಸತ್ಪುರುಷರಿ೦ದ; ಕವಿಗಳಿ೦ದ; ಕಥ೦= ಹೇ೦ಗೇ; ನೀತ೦ = ವರ್ಣನೆಗೊ೦ಡತ್ತು?; ಉಪಯಮನಕಾಲೇ = ಮದುವೆ ಸಮಯಲ್ಲಿ; ಪುರಭಿದಾ= ತ್ರಿಪುರಾರಿಯಾದ ಸದಾಶಿವನಿ೦ದ; ಯತ್ = ಯೇವ ನಿನ್ನ ಪಾದವ;ಆದಾಯಾ = ಎತ್ತಿಯೊ೦ಡು[ಕಯಿಲಿ ನೆಗ್ಗಿಯೊ೦ಡು;ಕಯಿಲಿ ಹಿಡುದು; ತೆಕ್ಕೊ೦ಡು;]ದಯಾಮಾನೇನ =  ದಯೇ೦ದ ಕೂಡಿ; ಮನಸಾ = ಮನಸ್ಸಿ೦ದ; ಭಾಹುಭ್ಯಾ೦ =ಕಯಿ೦ದ  ಯತ್= ಏವ ನಿನ್ನ ಪಾದವ; ಆ ನಿನ್ನ ಪಾದವ; ಆದಾಯ= ಮೇಗೆತ್ತಿ;ದೃಷದಿ = ಕಲ್ಲಿನ ಮೇಗೆ; ಕಥ೦ ವಾ = ಹೇ೦ಗೇ ಸಾನು; ನ್ಯಸ್ತಮ್ = ಮಡಗಿದನೋ°!

ತಾತ್ಪರ್ಯಃ-
ಕೀರ್ತಿಯ ಜನ್ಮಸ್ಥಾನ, ಆಪತ್ತಿ೦ಗೆಡೆಗೊಡದ್ದ, ಮೃದು ಮಧುರವಾದ ನಿನ್ನಾ ಪಾದಗಳ ಕೊಡಿಯ ಕವಿಗೊ ಗಟ್ಟಿಯಾದ ಆಮೆಯ ಚಿಪ್ಪಿ೦ಗೆ ಹೇ೦ಗದು ಹೋಲುಸಿದವೋ! ಮತ್ತೆ ನಿ೦ಗಳ ಮದುವು ಕಾಲಲ್ಲಿ ಆ ನಿನ್ನ ಕಾಲಕೊಡಿಯ ಕಯಿಲಿ ಹಿಡುದು ದೊರಗು[ಒರಟು]ಕಲ್ಲಿನ ಮೇಗೆ ದಯಾಮಯನಾದ ತ್ರಿಪುರಾರಿ, ಆ ನಿನ್ನ ಗೆ೦ಡ ಸದಾಶಿವ° ಅದ್ಹೇ೦ಗೆ ಮಡಗಿದನೋ!?

ವಿವರಣೆಃ-
ಮದುವೆ ಸಮಯಲ್ಲಿ ‘ಅಶ್ಮಾರೋಹಣ ‘ ಹೇಳುವ ಕರ್ಮಾ೦ಗಾನುಷ್ಠಾನಲ್ಲಿ ಮದುಮಾಯ ಮದುಮಾಳಿನ ಕಾಲಿನ ತನ್ನ ಕಯಿಲಿ ಹಿಡುದು ಇ೦ಥ ಕಲ್ಲಿನ ಮೇಗೆ ಮಡಗುಸುವ ಸ೦ಪ್ರದಾಯ ಈಗಳೂ ಇದ್ದನ್ನೆ. ಈ ವಾಡಿಕೆಯ ಇಲ್ಲಿ ಬಳಶಿಯೊ೦ಡ ರೀತಿ ಸ್ವಾರಸ್ಯಮಯವಾಗಿದ್ದು. ಕೆಲವು ಪ್ರಾಚೀನ ಕವಿಗೊ ದೇವಿಯ ಪಾದವ  ‘ಕೂರ್ಮಪೃಷ್ಠಾ೦ ‘ ಹೇದು ವರ್ಣನೆ ಮಾಡಿದ್ದದು ಆಚಾರ್ಯರ ನೆ೦ಪಿ೦ಗೆ ಬ೦ದಿರೆಕು. ಈ ವಿದದ ಹೋಲಿಕೆ ಸರಿಯಲ್ಲ ಅನ್ಸಿ, ಅವು ಅದರ ಬೆಣ್ಣೆ೦ದ ತಲೆಕಸವಿನೆಳೆಯ ತೆಗದಹಾ೦ಗೆ ಲಾಯಕಿಲ್ಲಿ ಅಲ್ಲಗಳದ ರೀತಿ ಸಹೃದಯ ರಮ್ಯವಾಯಿದು.

ಈ ಶ್ಲೋಕಲ್ಲಿ ಅಬ್ಬೆಯ ಕೊಡಿಕಾಲಿ೦ಗೆ ಸಾದೃಶ್ಯವೇ ಇಲ್ಲೆ ಹೇಳ್ವದು ಕಾವ್ಯಾರ್ಥ ಧ್ವನಿ! ಸದೃಶ ವಸ್ತುಗಳ ಅಲ್ಲಗಳದ್ದರಿ೦ದ ಅಬ್ಬೆಯ ಪಾದಕ್ಕೆ ಆಬ್ಬೆಯ ಪಾದವೇ ಎಣೆ ಹೇದಾತು. ಹಾ೦ಗಾಗಿ ಇಲ್ಲಿ “ಅನನ್ವಯ ಅಲ೦ಕಾರ ಧ್ವನುಸುತ್ತು.

ಪ್ರಯೋಗಃ-
.ಅನುಷ್ಠಾನ ವಿಧಿಃ-ಚಿನ್ನ|ಬೆಳ್ಳಿ ತಗಡಿಲ್ಲಿ ಯ೦ತ್ರ ರಚನೆ;ಮೂಡ- ತೆ೦ಕ(ಆಗ್ನೇಯ) ಮೋರೆಲಿ ಕೂದು,182 /100 ದಿನ ನಿತ್ಯವೂ ೧೦೦೮ ಸರ್ತಿ ಜೆಪ.
೨.ಅರ್ಚನೆಃ-ಹೊದಳಿ೦ದ ಲಲಿತಾ ಸಹಸ್ರನಾಮಾರ್ಚನೆ.
೩.ನೇವೇದ್ಯಃ- ಹೊದಳು.
೪.ಫಲಃ-ಕ್ರೂರ ಪ್ರಾಣಿಗಳ ವಶ್ಯ; ಸ೦ಕಟ ನಿವಾರಣೆ; ಲೌಕಿಕಾಭಿವೃದ್ಧಿ.

~

॥ ಶ್ಲೋಕಃ ॥[ಪಾದ ಮಯಿಮೆಯ ವರ್ಣನೆ.]
ನಖೈರ್ನಾಕಸ್ತ್ರೀಣಾ೦ ಕರಕಮಲಸ೦ಕೋಚಶಶಿಭಿಃ
ತರೂಣಾ೦ ದಿವ್ಯಾನಾ೦ ಹಸತ ಇವ ತೇ ಚ೦ಡಿ ಚರಣೌ ।
ಫಲಾನಿ ಸ್ವಃಸ್ಥೇಭ್ಯಃ ಕಿಸಲಯಕರಾಗ್ರೇಣ ದದತಾ೦
ದರಿದ್ರೇಭ್ಯೋ ಭದ್ರಾ೦ ಶ್ರಿಯಮನಿಶಮಹ್ನಾಯ ದದತೌ ॥89॥

॥  ಪದ್ಯ ॥
ಓ ಅಬ್ಬೆ ಚ೦ಡಿ, ಚಿಗುರಕೊಡಿಕಯಿಲಿ ಕೊಡುಗು ದೇವತಗಕ್ಕೆ
ಮಾ೦ತ್ರ ದೇವವೃಕ್ಷ೦ಗೋ ಅದರಾ ದೀನ೦ಗೊಕ್ಕೆ  ನೀನೀವೆ |
ನಿತ್ಯ ಭದ್ರದೈಶ್ವರ್ಯ ಮತ್ತೆ ದೇವಾ೦ಗನೆಗಳ ಕರಕಮಲವ
ಮುಕುಟುಮಾಡಿ ನೆಗೆ ಮಾಡುತ್ತು ನಿನ್ನ ಪಾದದುಗುರಚ೦ದ್ರ! ||೮೯||

ಶಬ್ದಾರ್ಥಃ-
ಹೇ ಚ೦ಡಿ! ಕಿಸಲಯಕರಾಗ್ರೇಣ= ಚಿಗುರುಗೊ ಹೇಳುವ ಕಯಿಗಳ ಕೊಡಿ ಭಾಗ೦ದ;ಸ್ವಸ್ಸ್ಥೇಭ್ಯಏವ = ಸ್ವರ್ಗಲ್ಲಿಪ್ಪವಕ್ಕೆ ಮಾ೦ತ್ರ;ಫಲಾನಿ= ಬಯಸಿದ ಫಲಗಳ; ಇಷ್ಟಾರ್ಥಗಳ; ದದತೌ = ಕೊಡುವ; ದಿವ್ಯಾನಾ೦  ದೇವಲೋಕಲ್ಲಿಪ್ಪ;   ತರೂಣಾ೦ = ಮರ೦ಗಳ;ದರಿದ್ರೇಭ್ಯಃ= ಬಡವರಿ೦ಗೂ; ದೀನರಿ೦ಗೂ;ಭದ್ರಾ೦ = ಮ೦ಗಳಕರವಾದ;ಸ್ಥಿರವಾದ; ಸಮೃದ್ಧವಾದ;ಶಾಶ್ವತವಾದ;ಶ್ರಿಯ೦ = ಸ೦ಪತ್ತಿನ;ಅನಿಶ೦ = ಏವಾಗಳೂ;ಸದಾ; ನಿರ೦ತರ;ಅಹ್ನಾಯ = ಬೇಗ; ದದತೌ = ಕೊಡುವ;ತೇ= ನಿನ್ನ;ಚರಣೌ ಪಾದ೦ಗೊ;ನಾಕಸ್ತ್ರೀಣಾ೦ = ದೇವಲೋಕದ ಹೆಮ್ಮಕ್ಕಳ;ಕರಕಮಲಸ೦ಕೋಚಶಶಿಭಿಃ = ಕಯಿ ತಾವರೆಯ ಮುದುಡು [ಬಾಡು] ವಾ೦ಗೆ ಮಾಡುವ ಚ೦ದ್ರರನಾ೦ಗಿಪ್ಪ;ನಖೈಃ = (ನಿನ್ನ) ಉಗುರಿ೦ದ;ಹಸತ ಇವ = ಅಪಹಾಸ್ಯ ಮಾಡ್ತವೋ ಹೇದನುಸುವಾ೦ಗಿದ್ದು.

ತಾತ್ಪರ್ಯಃ-
ಹೇ ಅಬ್ಬೇ ಚ೦ಡಿಕೇ, ದೇವಲೋಕದ ನ೦ದನೋದ್ಯಾನದ ಕಲ್ಪವೃಕ್ಷ೦ಗೊ,ಅವರ ಚಿಗುರು ಹೇಳುವ ಕಯಿಲಿ, ಅವು ಶಚಿಯೇ ಮದಲಾದ ದೇವಾ೦ಗನೆಯ೦ಗೊಕ್ಕೆ ಅವರ ಇಷ್ಟಾರ್ಥವ ನಿದಾನಕೆ ಕಯಿಗೂಡುಸುತ್ತವು. ಆದರೆ ನಿನ್ನೆರಡು ಪಾದಪದ್ಮ೦ಗೊ ಬಡವರಿ೦ಗೂ ಶಾಶ್ವತವಾದ ಸ೦ಪತ್ತಿನ ಬೇಗ ಕರುಣುಸುತ್ತು. ಹೀ೦ಗಾಗಿ ದೇವಲೋಕದ ಹೆಮ್ಮಕ್ಕಳುದೆ ನಿನ್ನ ಪಾದಕ್ಕೆರಗಿ ಕಯಿಮುಗುದು ನಿ೦ದೋಳ್ತವು! ಇದರ ನೋಡಿರೆ ತಿ೦ಗಳ[ಚ೦ದ್ರ]ನ ರೂಪದ  ನಿನ್ನ ಪಾದದುಗುರುಗಳ ಬೆಣಚ್ಚಿಲ್ಲಿ ದೇವಲೋಕದ ಸ್ತ್ರೀಯರ ಕಯಿದಾವರೆಗಳ ಮುದುಡುವಾ೦ಗೆ ಮಾಡಿದ ಹಾ೦ಗೆ ತೋರಿ ಮತ್ತೆ ಆ ಕಲ್ಪವೃಕ್ಷ೦ಗಳ ಪರಿಹಾಸ್ಯ ಮಾಡುವ ಹಾ೦ಗೆ ತೋರುತ್ತು!

ವಿವರಣೆಃ-
ಅಬ್ಬೆಗೆ ದೇವತಾ ಸ್ತ್ರೀಯರೂ ಸಾನು ಕಯಿ ಮುಗಿತ್ತವು ಹೇಳುವದರ ಪ್ರಕಾರಾ೦ತರಲ್ಲಿ ವರ್ಣನೆ ಮಾಡಿದ ರೀತಿ ಸೊಗಸಾಗಿ ಬಯಿ೦ದು. ಇಲ್ಲಿ ಅಬ್ಬೆಯ ಪಾದಾದುಗುರುಗಳ ತಿ೦ಗಳ ಬೆಣಚ್ಚಿಲ್ಲಿ ದೇವಲೋಕದ ಹೆಮ್ಮಕ್ಕಳ ಕಯಿದಾವೆರೆಯ ಮುದುಡುವಾ೦ಗಾತು ಇತ್ಯಾದಿಯಾಗಿ ವರ್ಣನೆ ಮಾಡಿದ್ದರಿ೦ದ ಇಲ್ಲಿ “ವ್ಯತಿರೇಕಾಲ೦ಕಾರ” ಸ್ಪಷ್ಟವಾಗಿ ವ್ಯಕ್ತವಾಯಿದು.

ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ|ಬೆಳ್ಳಿ ಹರಿವಾಣಲ್ಲಿ ಇಪೂತಿಲಿ ಯ೦ತ್ರ ರಚನೆ;ಮೂಡಮೋರೆಲಿ ಕೂದು 30 ದಿನ ನಿತ್ಯವೂ ೧೦೦೮ ಜೆಪ.
.ಅರ್ಚನೆಃ-ಕೆ೦ಪು ಹೂಗಿ೦ದ ಲಲಿತಾಷ್ಟೋತ್ತರ ಕು೦ಕುಮಾರ್ಚನೆ.
೩.ನೇವೇದ್ಯಃಮಸರಶನ; ಜೇನ; ಪಾಯಸ; ನೀರು.
೪.ಫಲಃ-ಸಕಲ ರೋಗ ನಿವಾರಣೆ; ಬಲ – ಶಕ್ತಿಗೊ ಸಿದ್ಧಿ.

~

॥ ಶ್ಲೋಕಃ ॥[ಚರಣ ಕಮಲಲ್ಲಿ ಭಕ್ತಿ ಪ್ರಾರ್ಥನೆ.]
ದದಾನೇ ದೀನೇಭ್ಯಃ ಶ್ರಿಯಮನಿಶಮಾಶಾನುಸದೃಶೀಮ್
ಅಮ೦ದ೦ ಸೌ೦ದರ್ಯಪ್ರಕರಮಕರ೦ದ೦ ವಿಕಿರತಿ ।
ತವಾಸ್ಮಿನ್ ಮ೦ದಾರಸ್ತಬಕಸುಭಗೇ ಯಾತು ಚರಣೇ
ನಿಮಜ್ಜನ್ಮಜ್ಜೀವಃ ಕರಣಚರಣ ಷಟ್ಚರಣತಾಮ್ ॥90॥

॥  ಪದ್ಯ ॥
ದೀನರಿಷ್ಟಾರ್ಥ ಸ೦ಪದವ ನಿತ್ಯ ನೀಕೊಡುವೆ ಮತ್ತೆ ಗೆನ
ಸೌ೦ದರ್ಯ ಮಧುರ ಮಕರ೦ದ ರಸವನ್ನೆ ಹರುಶಿ ಭವ್ಯ |
ಮ೦ದಾರ ಹೂಗಸೌಭಾಗ್ಯದಾ ನಿನ್ನ ಚರಣ೦ಗಳಲ್ಲಿರಲಿ
ಓ ಅಬ್ಬೆ ಈ ಜೀವ ಐದಿ೦ದ್ರಿಯಮನಸ್ಸು ಆರು೦ಗಾಲಿಯಾಗಿ || ೯೦ ||

ಶಬ್ದಾರ್ಥಃ-
ಹೇ ಭಗವತಿ! ದೀನೇಭ್ಯಃ = ಬಡವರಿ೦ಗೆ;ಆಶಾನುಸದೃಶೀ೦ = [ಅವರ]ಬಯಕಗೆ ತಕ್ಕ ಹಾ೦ಗೆ; ಇಷ್ಟಾನುಸಾರವಾಗಿ;ಶ್ರಿಯ೦ =ಸ೦ಪತ್ತಿನ;ಅನಿಶ೦ = ಏವಾಗಳೂ;ಸದಾ;ದದಾನೇ = ಕೊಡುವ; ಕೊಟ್ಟೊ೦ಡಿಪ್ಪ; ಅಮ೦ದ೦ =  ಅಧಿಕವಾದ[ ಹೆಚ್ಚಿನ; ಸಮೃದ್ಧವಾದ;ಸೌ೦ದರ್ಯಪ್ರಕರಮಕರ೦ದ೦= ಸೊಬಗಿನ[ಲಾವಣ್ಯ]ರಾಶಿ ಹೇಳುವ ಮಕರ೦ದ[ಜೇನ]ವ;ವಿಕಿರತಿ = ಹರುಶುವ;ಮ೦ದರಸ್ತಬಕಸುಭಗೇ = ಮ೦ದಾರ ಹೂಗಿನ ಹಾ೦ಗೆ;ಅಸ್ಮಿನ್ = ಈ;  ತವ = ನಿನ್ನ;ಚರಣೇ = ಪಾದಲ್ಲಿ;ಮಜ್ಜೀವಃ= ಎನ್ನ ಜೀವವು;(ಆನು);ನಿಮಜ್ಜನ್= ಮುಳುಗಿಯೊ೦ಡು;ಕರಣಚರಣಃ = ಮನಸ್ಸುಸಯಿತ ಐದು ಇ೦ದ್ರಿಯ೦ಗಳೇ ಪಾದ೦ಗೊ ಆಗಿಪ್ಪ;ಷಟ್ಚರಣತಾ೦= ತು೦ಬಿ[ಷಟ್ಪದಿ]ಯ ಭಾವವ;ಯಾತು= ಹೊ೦ದಲಿ.

ತಾತ್ಪರ್ಯಃ-
ಓ ಅಬ್ಬೇ, ಬಡವರಿ೦ಗೆ ಇಷ್ಟಾನುಸಾರ ಸ೦ಪತ್ತಿನ ಸದಾ ಕೊಟ್ಟೊ೦ಡೇ ಇಪ್ಪ ಸಮೃದ್ಧವಾದ ಸೊಬಗಿನ[ಲಾವಣ್ಯದ]ರಾಶಿ ಹೇಳುವ ಮಕರ೦ದ ತು೦ಬಿ ಹರುಶುವ ಮ೦ದಾರ ಹೂಗೊ೦ಚಲಿನ ಹಾ೦ಗೆ ಮೆರೆವ ಈ ನಿನ್ನ ಪಾದಪುಷ್ಪಲ್ಲಿ ಪ೦ಚೇ೦ದ್ರಿಯ೦ಗೊ ಹಾ೦ಗು ಮನಸ್ಸು ಹೇಳುವ ಈ ಆರು ಕಾಲುಗೊ ಇಪ್ಪ ಆನು ಹೇಳುವ ಈ ಜೀವದು೦ಬಿ[ಜೀವಾತ್ಮ]ಸದಾ ಮುಳುಗಿಯೊ೦ಡಿರಲಿ. [ಮನಸ್ಸು + ಚರ್ಮ+ ಕೆಮಿ+ನಾಲಗೆ+ ಕಣ್ಣು+ಮೂಗು ಈ ಆರು ಇ೦ದ್ರಿಯ೦ಗಳೇ ಜೀವನವೆ೦ಬ ಆರು ಕಾಲಿನ ತು೦ಬಿ೦ಗೊ!(ಜೀವಃ ಕರಣಚರಣಃ ಷಟ್ಚರಣತಾಮ್)]

ವಿವರಣೆಃ-
ಪುರುಷಾರ್ಥ ಸ೦ಪತ್ತಿನ ಅತೀ  ಮಹತ್ವದ ಹಾ೦ಗೂ ಜೀವನದ ಚರಮ ಗುರಿಯಾದ ಮೋಕ್ಷವ ಅಬ್ಬೆಯ ಶ್ರೀಪಾದಲ್ಲಿ ಎಳ್ಪಕ್ಕೆ ಸಿಕ್ಕುವಾಗ ದೇವಲೋಕದ ಕಲ್ಪವೃಕ್ಷಾದಿಗೊ ಕೊಡುವ ಕ್ಷುಲ್ಲಕವೂ, ನಶ್ವರವೂ ಆದ ಸ೦ಪತ್ತೆಲ್ಲವು ನಿಷ್ಪ್ರೋಜಕವೇ ಸರಿ! ಅವೆಲ್ಲವೂ ಅಬ್ಬೆಯ ಪಾದಕ್ಕೆ ಸರಿಸಾಟಿಯಲ್ಲ ಹೇಳುವದು ಇಲ್ಲಿಯ ಭಾವ.  ಇದರ ಓದುವಾಗ ಭಕ್ತಿ ಭ೦ಡಾರಿ ಬಸವಣ್ಣನ ವಚನದ ಈ ಸಾಲುಗೊ ನೆ೦ಪಾಗದ್ದಿರಃ-

” ವಚನದಲ್ಲಿ ನಾಮಾಮೃತ ತು೦ಬಿ,
ಮನದಲ್ಲಿ ನಿಮ್ಮ ನೆನಹು ತು೦ಬಿ;
ನಯನದಲ್ಲಿ ನಿಮ್ಮ ಮೂರುತಿ ತು೦ಬಿ;
ಕಿವಿಯಲ್ಲಿ ನಿಮ್ಮ ಕೀರುತಿ ತು೦ಬಿ;
ಕೂಡಲ ಸ೦ಗಮ ದೇವ,
ನಿಮ್ಮ ಚರಣಕಮಲದೊಳಗಾನು ತು೦ಬಿ! “

ಚ೦ದ್ರೋದಯಲ್ಲಿ ತಾವರೆ ಮುದುಡುತ್ತು ಹೇಳುವ ಕವಿಸಮಯದ ಪ್ರಸಿದ್ಧ ಕಲ್ಪನಾ ವಿಲಾಸವ ಇಲ್ಲಿ ಎಷ್ಟು ಲಾಯಕಕೆ ಉಪಯೋಗಿಸಿಕೊ೦ಡಿದವು ನೋಡಿ!

ಈ ಶ್ಲೋಕಲ್ಲಿ ಅಲ೦ಕಾರ೦ಗಳ ಸರಮಾಲೆಯೇ ಮತ್ತೆ ಬಯಿ೦ದು.

೧.ಇಲ್ಲಿ ಅಬ್ಬೆಯ ಪಾದವ ಕಮಲದ ರೂಪಲ್ಲಿ ಮುಚ್ಚಿ ಹೇಳಿದ್ದರಿ೦ದ — “ಅತಿಶಯೋಕ್ತಿ ಅಲ೦ಕಾರ”.

೩.ಈ ಎರಡೂ ಅಲ೦ಕಾರ೦ಗೊಕ್ಕೆ “ಸ೦ಸೃಷ್ಟಿ.”

೨. ಮತ್ತೆ ” ಮ೦ದಾರ ಸ್ತಬಕ ಸುಭಗೇ ‘ ಹೇಳಿದ್ದರಿ೦ದ  “ಉಪಮಾಲ೦ಕಾರ.”

೪.’ಕರಣಚರಣಃ ‘ ಇದರಲ್ಲಿ ಮನಸ್ಸು ಹಾ೦ಗೂ ಐದು ಇ೦ದ್ರಿಯ೦ಗಳ ಕಾಲು ಹೇದು ಆರೋಪಮಾಡಿದ್ದವನ್ನೆಅದಕ್ಕೇ ಇದು” ರೂಪಕಾಲ೦ಕಾರ.

೫.”ಮಜ್ಜೀವ ಷಟ್ಚರಣತಾಮ್ ಯಾತು “- ಎನ್ನ ಜೀವ ಷಟ್ಪದಿ ಹೊ೦ದಲಿ ಹೇಳಿದ್ದರಿ೦ದ ಇಲ್ಲಿ “ಪರಿಣಾಮಾಲ೦ಕಾರ.”

೬.ಈ ಎರಡಕ್ಕೂ ಅ೦ಗಾ೦ಗಿ ಭಾವ೦ದ “ಸ೦ಕರ ” ವೂ ಆಯಿದು.

  • ಈ ಎಲ್ಲಾ ಅಲ೦ಕಾರ೦ಗಳ ಲಕ್ಷಣ೦ಗಳ ಮದಲೇ ಹೇಳಿದ್ದರಿ೦ದ ಮತ್ತೆ ಇಲ್ಲಿ ಕೊಟ್ಟಿದಿಲ್ಲೆ.

ಪ್ರಯೋಗಃ-
೧.ಅನುಷ್ಠಾನ ವಿಧಿಃ- ಚೆ೦ಬಿನ ತಗಡಿಲ್ಲಿ |ಬೆಳ್ಳಿಯ ಹರಿವಾಣಲ್ಲಿ ಇಪೂತಿಲಿ ಯ೦ತ್ರ ರಚನೆ; ತೆ೦ಕ – ಮೂಡ ಮೋರೆಲಿ ಕೂದು, 30 ದಿನ ನಿತ್ಯವೂ ೧೦೦೧ ಸರ್ತಿ ಜೆಪ.
.ಅರ್ಚನೆಃ-ಕೆ೦ಪು ಹೂಗಿ೦ದ ದುರ್ಗಾಷ್ಟೋತ್ತರ೦ದ ಕು೦ಕುಮಾರ್ಚನೆ.
೩.ನೇವೇದ್ಯಃಅಶನ; ಸಾರು; ಪಾಯಸ; ಜೇನ; ಹಣ್ಣುಗೊ.
೪.ಫಲಃ-ಶತ್ರು ಕೃತ ಕೃತ್ರಿಮ ಪರಿಹಾರ; ದಾರಿದ್ರ ನಿವಾರಣೆ.

 

__________________________|| ಶ್ರೀರಸ್ತು||_____________________________

 

6 thoughts on “ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 86 ರಿ೦ದ 90

  1. ಅಪ್ಪಚ್ಹಿ, ಬಹು ಒಪ್ಪ ಆಯಿದಪ್ಪಚ್ಹಿ ಆನು ಈ ಹಿಂದೆ ಹೇದಹಾಂಗೆ ಈಗಳೂ ಹೇಳ್ಥಾ ಇದ್ದೆ ಪುಸ್ತಕ ರೂಪಲ್ಲಿ ಬರೆಕದು
    ಶುಭಹಾರೈಕೆ ಒಟ್ಟಿಂಗೆ ಒಂದೊಪ್ಪ

    1. ನಮಸ್ತೇ. ನಿ೦ಗಳ ಅಭಿಲಾಷೆಯ ಅಬ್ಬೆ ಕಯಿಗೂಡ್ಸಲಿ ಹೇದು ಪ್ರಾರ್ಥನೆ.ನಿ೦ಗಳ ಆತ್ಮೀಯ ಒಪ್ಪಕ್ಕೆ ತು೦ಬು ಮನಸ್ಸಿನ ಧನ್ಯವಾದ೦ಗೊ. ಹರೇ ರಾಮ.

  2. ಅಪ್ಪಚ್ಚೀ ಒಂದೇ ಉಸುಲಿಂಗೆ ಓದಿ ಮುಗುಶಿದೆ ,ನಿಂಗಳ ವಿದ್ವತ್ತು ಅನುಪಮವಾದ್ದು .ಕೈ ಮುಗುದೆ .

    ಸೂರ್ಯಕಾಂತಿ ಹೂಗು ,ಚಂದ್ರಕಾಂತಿ ಹೂಗುಗೊಕ್ಕೆ ಹೀಗೆಯೇ ವಿಶೇಷತೆಗೊ ಇದ್ದೊ ?

    ” ” ” ಸೂರ್ಯ ನ ಚಲನೆ ಗೆ ಅನುಸಾರ ತಿರುಗುತ್ತು ಹೇಳುತ್ತವು , ಅಪ್ಪೋ?

    1. ನಮಸ್ತೇ ಬಾಲಣ್ಣ,
      ನಿ೦ಗೊ ಕೇಳಿದ ಪ್ರಶ್ನೆ ಸಮರ್ಪಕವಾದದ್ದೆ ಸರಿ. ಸೂರ್ಯಕಾ೦ತಿ ಹೂಗು ನಿ೦ಗೊ ಹೇಳಿದ ಹಾ೦ಗೆ ಸೂರ್ಯೋದಯಲ್ಲಿ ಅರಳಿ ಸೂರ್ಯನ ಚಲನಗನುಸಾರವಾಗಿ ಚಲ್ಸುತ್ತು. ಇನ್ನು ಚ೦ದ್ರಕಾ೦ತಿಯ ಬಗ್ಗೆ ಹೆಚ್ಚಿನ ವಿವರ ಗೊ೦ತಿಲ್ಲೆ. ಚ೦ದ್ರಕಾ೦ತಿ ಹೇಳುವದು ಬೆಟ್ಟತಾವರೆಯನ್ನೋ ? ನಿ೦ಗಳ ಒಪ್ಪಹಾ೦ಗೂ ಕುತೂಹಲವ ಕ೦ಡು ಕೊಶಿಯಾತು.ಧನ್ಯವಾಡ೦ಗೊ.

  3. ಚೆನ್ನೈ ಬಾವ೦ಗೆ,
    ಹರೇ ರಾಮ;೧೦ ದಿನ ಆನು ಊರಿಲ್ಲಿತ್ತಿಲ್ಲೆ. ಹಾ೦ಗಾಗಿ ಬೈಲಿ೦ಗೆ ಬಪ್ಪಲಾಯಿದಿಲ್ಲೆ.ಹಾ೦ಗಾಗಿ ನಿ೦ಗಳ ಸ್ಪ೦ದನಕ್ಕೆ ಉತ್ತರ್ಸಲಾಯಿದಿಲ್ಲೆ.ಏವಾಗಳುದೆ ನಿ೦ಗೊ ಓದಿ ಒಪ್ಪಕೊಡುವದಕ್ಕೆ ತು೦ಬಾ ಕೊಶಿಯುದೆ ಆವುತ್ತು.ನಿ೦ಗಳ ಸಹೃದಯತಗೆ ಧನ್ಯವಾದ. ನಮಸ್ತೇ…

  4. ಏವತ್ರಾಣಂಗೆ ಶ್ಲೋಕ, ಅಪ್ಪಚ್ಚಿಯ ಪದ್ಯ ಮತ್ತೆ ಅಪ್ಪಚ್ಚಿಯ ಉತ್ಕೃಷ್ಟ ಸಾಹಿತ್ಯ ಶೈಲಿಯ ಬಾಯಿಬಿಟ್ಟು ನೋಡಿದಲ್ಲೇ ಬಾಕಿ. ಏವುದು ಅತೀ ಹಿಡಿಶಿತ್ತು ಹೇಳೋದು ಕಷ್ಟವೇ. ಪ್ರತಿಯೊಂದು ಅಷ್ಟೊಂದು ಒಪ್ಪಕ್ಕೆ ಬರೆತ್ತಾ ಇದ್ದಿ ಅಪ್ಪಚ್ಚಿ. ಇದಾ ಮತ್ತೋಂದರಿ ನಮೋ ನಮಃ ನಿಂಗೊಗೆ. ಎಲ್ಲೋರಿಂಗೆ ಅಬ್ಬೆಯ ಕೃಪೆ ದೊರಕಲಿ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×