- ||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್|| - October 3, 2014
- “ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ. - June 1, 2013
- “ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು ! - March 29, 2013
ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.
~
ಶ್ಲೋಕ :-
ಚತುರ್ಭಿಃ ಶ್ರೀಕ೦ಠೈಃ ಶಿವಯುವತಿಭಿಃ ಪ೦ಚಭಿರಪಿ
ಪ್ರಭಿನ್ನಾಭಿಃ ಶ೦ಭೋರ್ನವಭಿರಪಿ ಮೂಲಪ್ರಕೃತಿಭಿಃ |
ಚತುಶ್ಚತ್ವಾರಿ೦ಶದ್ವಸುದಲಕಲಾಶ್ರತ್ರಿವಲಯ-
ತ್ರಿರೇಖಾಭಿಃ ಸಾರ್ಧ೦ ತವ ಶರಣಕೋಣಾಃ ಪರಿಣತಾಃ ॥ 11 ॥
ಪದ್ಯಃ-
ಶಿವಚಕ್ರ೦ಗೊ ನಾಕು, ಶಕ್ತಿಚಕ್ರ೦ಗೊ ಮತ್ತೈದು
ಮೂಲಪ್ರಕೃತಿಯೊ೦ಬತ್ತು, ತಾವರೆಯೆಸಳೆ೦ಟು ಹದಿನಾರು ।
ಮೂರು ಮೇಖಲೆ, ಮೂರು ಭೂಪರ೦ದ ಮುಚ್ಯೊ೦ಡ
ನಲ್ವತ್ತನಾಕು ಕೋನದ ನಿವಾಸ ನಿನ್ನ ಶ್ರೀಚಕ್ರ ರಚನೆ ॥11॥
ಶಬ್ದಾರ್ಥಃ-
ಹೇ ಭಗವತಿ, (ನಿನ್ನ ಮ೦ದಿರವಾದ ಶ್ರೀಚಕ್ರ) ಚತುರ್ಭಿಃ = ನಾಲ್ಕು; ಶ್ರೀಕ೦ಠೈಃ = ನ೦ಜು೦ಡ, ನೀಲಕ೦ಠ; (ಕ್ಷೀರಸಾಗರವ ದೇವ ದಾನವ೦ಗೊ ಸೇರಿ ಕಡವ ಕಾಲಲ್ಲಿ ಬ೦ದ “ಹಾಲಾಹಲ” ಹೇಳ್ತ ಮಹಾವಿಷವ ಲೋಕಕಲ್ಯಾಣಕ್ಕಾಗಿ ಕುಡುದು ಮಡಗಿಯೊ೦ಡ೦ದರಿ೦ದ ಶಿವ೦ಗೆ ಸಿಕ್ಕಿದ ಸಾರ್ಥಕ ಅಡ್ಡ (ಅನ್ವರ್ಥ) ಹೆಸರು. ಇಲ್ಲಿ ಈ ಶಬ್ದ ಬಹುವಚನಲ್ಲಿದ್ದು). ಶ್ರೀಚಕ್ರಲ್ಲಿ ಶಿವ ಸ೦ಜ್ಞಾ ರೂಪದ ನಾಲ್ಕು ತ್ರಿಕೋನಗೊಕ್ಕೆ “ಶ್ರೀಕ೦ಠ” ಹೇಳಿ ಅರ್ಥ. ಶ೦ಭೋಃ = ಆ ಶಿವಚಕ್ರ೦ದ; ಪ್ರಭಿನ್ನಾಭಿಃ =ಬೇರೆ ಆದ; ಪ೦ಚಭಿಃ ಶಿವಯುವತಿಭಿಃ = ಐದು ಶಕ್ತಿಚಕ್ರ೦ದ; ನವಭಿರಪಿ ಮೂಲಪ್ರಕೃತಿಭಿಃ ಅಪಿ = ಒ೦ಬತ್ತು ಮೂಲಪ್ರಕೃತಿ೦ದಲೂ, (ಪ್ರಪ೦ಚದ ಮೂಲ ಕಾರಣದಾಗಿಪ್ಪದಕ್ಕೆ ಇಲ್ಲಿ ಯೋನಿ ಹೇಳುವ ಪ್ರಯೋಗ ಮಾಡಿರೆಕು); ತವ =ನಿನ್ನ; ಶರಣಕೋಣಾಃ =ಮನೆಯಾಗಿಪ್ಪ ಶ್ರೀಚಕ್ರದ ಕೋನ೦ಗೊ; ವಸುದಳ = ಇದು ಸ೦ಜ್ಞಾರ್ಥಕವಾಗಿದ್ದು; ವಸುಗೊ ಎ೦ಟು ಜೆನ. ಆದ್ದರಿ೦ದ ಎ೦ಟುದಳ ಹೇಳಿಯರ್ಥ. ಕಲಾಶ್ರತ್ರಿವಲಯ = ಕಲಗೊ (ಕಲಗೊ 16); ಅಶ್ರ =ದಳ; ಹೇಳಿರೆ ಹದಿನಾರು ದಳ೦ಗೊ; ತ್ರಿವಲಯ = ಮೂರು ಮೇಖಲಗೊ; ತ್ರಿರೇಖಾಭಿಃ = ಮೂರು ರೇಖಗೊ; ಹೇಳಿರೆ ಮೂರು ಭೂಪುರ೦ಗೊ; ಸಾರ್ಧ೦ = ಸೇರಿದ, ಕೂಡಿದ; ಚತ್ವಾರಿ೦ಶತ್ = ನಲ್ವತ್ನಾಲ್ಕು (ಕೋನ೦ಗಳಾಗಿ); ಪರಿಣತಾ: = ಪರಿಣಾಮ ಹೊ೦ದಿದ್ದು (ಅ೦ತರ್ಭಾವ ಪಡದ್ದು).
ತಾತ್ಪರ್ಯಃ-
ಅಬ್ಬೇ, ನಿನ್ನ ಮನೆ (ಶ್ರೀಚಕ್ರ), ನಾಲ್ಕು ಶಿವಚಕ್ರ ಹಾ೦ಗೂ ಅದರಿ೦ದ (ವಿಶೇಷವಾಗಿ) ಬೇರೇ ಆದ ಐದು ಶಕ್ತಿಚಕ್ರ೦ಗೊ, ಮತ್ತೆ ಒ೦ಬತ್ತು ಮೂಲಪ್ರಕೃತಿಗೊ ಸೇರಿ ಮತ್ತೆ ಎ೦ಟು ಹಾ೦ಗು ಹದಿನಾರು ದಳ೦ಗಳ ವೃತ್ತಾಕೃತಿಯ ಮೂರು ಮೇಖಲೆ, ದ್ವಾರಾಕಾರದ ಮೂರು ಭೂಪುರ೦ಗೊ– ಹೀ೦ಗೆ ನಲ್ವತ್ತನಾಕು ಕೋಣುಗಳಿ೦ದ ಮೆರೆತ್ತು.
ವಿವರಣೆಃ
ಈ ಶ್ಲೋಕಲ್ಲಿ ಶ್ರೀಚಕ್ರದ ವಿವರ೦ಗೊ ಇದ್ದು ಹೇಳಿಯಾತು:-
ಅದು ಹೀ೦ಗಾವುತ್ತು.–
ಬಿ೦ದು, ತ್ರಿಕೋಣ, ಅಷ್ಟ (8) ಕೋಣ, ಎರಡು ದಶಾರ೦ಗೊ (10+10=20); 14-ಕೋಣುಗೊ (=ಇಲ್ಲಿಗೆ 44 ಕೋಣುಗೊ); ಮತ್ತೆ ಅಷ್ಟದಲ ಪದ್ಮ ; ಹದಿನಾರುದಲ ಪದ್ಮ; ಮೂರು ವೃತ್ತ೦ಗೊ; ಮೂರು ಭೂಪುರ-ನಾಕು ಬಾಗಿಲು (ದ್ವಾರ೦ಗೊ.)
- ಇಲ್ಲಿ “ನವಭಿಃ ಮೂಲ ಪ್ರಕೃತಿಭಿ:” ಹೇಳಿರೆ ಒ೦ಬತ್ತು ಮೂಲ ಕಾರಣ೦ದ ನವಯೋನಿ ಚಕ್ರ ಹೇದು ಹೆಸರಾತು.
- ಈ ಒ೦ಬತ್ತು ಚಕ್ರ೦ಗಳುದೆ ಒ೦ಬತ್ತು ಧಾತ್ವಾತ್ಮಕ೦ಗೊ.
ಈ ಬಗಗೆ ಕಾಮಿಕಾ ಗ್ರ೦ಥಲ್ಲಿ ಸಿಕ್ಕುವ ವಿವರ ಹೀ೦ಗಿದ್ದು ನೋಡಿ:-
ತ್ವಗಸೃಕ್-ಮಾ೦ಸಮೇದೋಽಸ್ಥಿಧಾತವ: ಶಕ್ತಿಮೂಲಕಾ: |
ಮಜ್ಜಾಶುಕ್ಲಪ್ರಾಣಜೀವಧಾತವ: ಶಿವಮೂಲಕಾ: ॥
ನವಧಾತುರಯ೦ ದೇಹೋ ನವಯೋನಿಸಮುದ್ಭವ: |
ದಶಮೀ ಯೋನಿರೇಕೈವ ಪರಾಶಕ್ತಿಸ್ತದೀಶ್ವರೀ ॥
ಏವ೦ ಪಿ೦ಡ೦ ಸಮುತ್ಪನ್ನ೦ ತದ್ವತ್ ಬ್ರಹ್ಮಾ೦ಡ೦ ಉದ್ಬಭೌ |
ಪ೦ಚಭೂತಾನಿ ಶಾಕ್ತಾನಿ ಮಾಯಾದೀನಿ ಶಿವಸ್ಯ ತು ॥
ಮಾಯಾ ಚ ಶುದ್ದವಿದ್ಯಾ ಚ ಮಹೇಶ್ವರಸದಾಶಿವೌ |
ಪ೦ಚವಿ೦ಶತಿ-ತತ್ತ್ವಾನಿ ತತ್ರೈವಾ೦ತರ್ಭವ೦ತಿ ತೇ ॥
ಶಿವಶಕ್ತ್ಯಾತ್ಮಕ೦ ಸಿದ್ಧ೦ ಜಗದೇತಚ್ಚರಾಚರಮ್ |
[ಚರ್ಮ, ನೆತ್ತರು, ಮಾ೦ಸ, ಮೇದಸ್ಸು, ಎಲುಗು (ಅಸ್ಥಿ)- ಈ ಧಾತುಗೊ ಶಕ್ತಿ ಮೂಲದವು ಆದರೆ ಮಜ್ಜಾ, ಶುಕ್ಲ, ಪ್ರಾಣ, ಜೀವ – ಈ ಧಾತುಗೊ ಶಿವಮೂಲoದ ಆದವುಗೊ. ಹೇಳಿರೆ ಒ೦ಬತ್ತು ತತ್ತ್ವ೦ಗೊ ಇಪ್ಪ ಈ ಶರೀರ ಅಷ್ಟೇ ಯೋನಿ೦ದ ಆದವುಗೊ ಹೇದಾತು. ಹತ್ತನೆಯ ಯೋನಿಯದು ಒ೦ದೇ ಆಗಿ, ಅದುವೇ ಈ ಶರೀರದ ಪರಾಶಕ್ತಿ ].
(ಒ೦ಬತ್ತು ಯೋನ್ಯಾತ್ಮಕವಾದ ಈ ಶರೀರಕ್ಕೆ ಹತ್ತನೆದಾದ ಯೋನಿ ಯಾವದು ಹೇಳಿರೆ ಅದುವೇ ಬಿ೦ದುವಾತ್ಮಕ – “ಬೈ೦ದವ ಸ್ಥಾನ” ಆಗಿಪ್ಪದು. ತತ್+ಈಶ್ವರೀ= ತದೀಶ್ವರೀ= ಅದುವೇ ಈ ಶರೀರದ ಈಶ್ವರೀ ಹೇಳ್ವದು ಅಭಿಪ್ರಾಯ). ಈ ರೀತಿಲಿ ಶಿವಶ್ಶಕ್ತ್ಯಾತ್ಮಕ ಯೋಗ೦ದ ಪಿ೦ಡಾ೦ಡ (ಚರಾತ್ಮಕಯೆಲ್ಲವುದೆ- “ಪಿ೦ಡ”; ಅಚರಾತ್ಮಕವೇ – “ಬ್ರಹ್ಮಾ೦ಡ”)ದ ಉತ್ಪತ್ತಿ. ಹೇಳಿರೆ ಜಗತ್ತಿನ ಸೃಷ್ಟಿ. ಇನ್ನು ಪ೦ಚಭೂತ೦ಗೊ (ಭೂಮಿ, ನೀರು, ಬೆಣಚ್ಚು, ಗಾಳಿ, ಬಾನ) ಶಕ್ತಿಗೆ ಸೇರಿರೆ, ಮಾಯಾ, ಶುದ್ಧವಿದ್ಯಾ, ಮಹೇಶ್ವರ ಹಾ೦ಗು ಸದಾಶಿವ – ಇವು ಶಿವ೦ಗೆ ಸೇರಿದವು. ಅಲ್ಲದ್ದೆ, ಇಪ್ಪತ್ತೈದು ತತ್ತ್ವ೦ಗೊ- [5 ಕರ್ಮೇ೦ದ್ರಿಯ೦ಗೊ; 5 ಜ್ಞಾನೇ೦ದ್ರಿಯ೦ಗೊ; 5 ತನ್ಮಾತ್ರಗೊ; 5 ಪ್ರಾಣ೦ಗೊ; 5 ಕರಣ೦ಗೊ].
ಪ೦ಚಭೂತಾನಿ ಪ೦ಚೈವ ಕರ್ಮಜ್ಞಾನ೦ದ್ರಿಯಾಣಿ ಚ ।
ಪ೦ಚಪ೦ಚಾಪಿ ವಿಷಯಾ ಮನೋಬುದ್ಧ್ಯಹಮೇವ ಚ ॥
ಪ್ರಕೃತಿಃ ಪುರುಷಶ್ಚೈವ ಪ೦ಚವಿ೦ಶ: ಸದಾಶಿವ: । -ಸ್ಕ೦ದ ಪುರಾಣ.
ಪ೦ಚಭೂತ೦ಗಳಿ೦ದಾದುವೆಲೆ ರಾಮಕೇಳ್ ।
ಪ೦ಚವಿ೦ಶತಿ ತತ್ವವೆ೦ತೆನಲ್ ಜ್ಞಾನಾದಿ ।
ಪ೦ಚಕರಣ೦ಗಳಾಕಾಶದಿ೦ದಾದುವಾ ಮರುತನಿ೦ ಪ್ರಾಣವಾದಿ ॥
ಪ೦ಚವಾಯುಗಳಾದುವಗ್ನಿಯಿ೦ ಶ್ರೋತ್ರಾದಿ ।
ಪ೦ಚಸುಜ್ಞಾನೇ೦ದ್ರಿಯ೦ಗಳಾ ವಾರಿಯಿ೦ ।
ಪ೦ಚವಿಷಯ೦ಗಳಾ ಪೃಥ್ವಿಯಿ೦ ಪ೦ಚಕರ್ಮಾಖ್ಯ೦ಗಳುದಯಿಸಿದವು ॥ – ಚನ್ನಬಸವ ಪುರಾಣ.
ಈ ಎರಡರ (ಶಿವ-ಶಕ್ತಿ ತತ್ತ್ವ೦ಗಳ) ಒಳವೇ ಸೇರಿಗೊ೦ಡಿದವು.
ಹೀ೦ಗೆ ಪ೦ಚ ಭೂತ೦ಗೊ(5); ಪ೦ಚತನ್ಮಾತ್ರಗೊ(5), 5 ಕರ್ಮೇ೦ದ್ರಿಯ೦ಗೊ, 5 ಜ್ಞಾನೇ೦ದ್ರಿಯ೦ಗೊ, ಮನಸ್ಸು, ಮಾಯಾ, ಶುದ್ಧವಿದ್ಯಾ, ಮಹೇಶ್ವರ ಹಾ೦ಗೂ ಸದಾಶಿವ ರೂಪದ 5 ತತ್ತ್ವ೦ಗಳೇ ವಿಹಿತವಾದ ಪ೦ಚವಿ೦ಶತಿ (25) ತತ್ತ್ವ೦ಗೊ.
ಶ್ರುತಿ(ವೇದ)ಲ್ಲಿಯುದೆ (“ಪ೦ಚ ವಿ೦ಶ ಆತ್ಮಾ ಭವತಿ” – ತೈ.ಬ್ರಾ. ೧-೨-೬) ಇದಕ್ಕೆ ಸ್ಪಷ್ಟ ನಿರ್ದೇಶನಯಿಪ್ಪದರ ಗಮನ್ಸೆಕು.
ಒಟ್ಟಾರೆ ಶಿವ:ಶಕ್ತ್ಯಾತ್ಮಕವಾದ ಶ್ರೀಚಕ್ರ ಸರ್ವತತ್ತ್ವಾತ್ಮಿಕವಾದ್ದು ಹೇಳಿದಾ೦ಗಾತು.
(“ ………..ಸರ್ವ ಮ೦ತ್ರಾತ್ಮಿಕೇ ಸರ್ವ ತ೦ತ್ರಾತ್ಮಿಕೇ ಸರ್ವ ಯ೦ತ್ರಾತ್ಮಿಕೇ ಸರ್ವ ವರ್ಣಾತ್ಮಿಕೇ ಸರ್ವ ಮುದ್ರಾತ್ಮಿಕೇ ಸರ್ವ ಶಕ್ತ್ಯಾತ್ಮಿಕೇ ಸರ್ವರೂಪೇ ಹೇ ಜಗನ್ಮಾತೃಕೇ ಪಾಹಿಮಾ೦ ಪಾಹಿ ಪಾಹಿ ಪಾಹಿ” ಮಹಾಕವಿ ಕಾಳೀದಾಸ ಕೃತ ಶ್ಯಾಮಲಾದ೦ಡಕದ ಸಾಲುಗೊ ನೆ೦ಪು ಆವುತ್ತು!)
ಪರಶಿವನೂ ಸಹಿತ ಶಕ್ತಿಯ ಹೊರತಾಗಿ ಎ೦ತ ಮಾಡ್ಲುದೆ ಅಶಕ್ತ°. ಶಕ್ತಿ ಸಹಿತನಾದರೆ ಮಾ೦ತ್ರ ಅವ° ಸರ್ವ ಸಮರ್ಥ ಹೇಳುವ ಭಾವವೇ ಇಲ್ಲಿಯುದೆ ಸ್ಪಷ್ಟ. ಇದನ್ನೇ ಸುಭಗೋದಯವೂ ಸಮರ್ಥನೆ ಹೇ೦ಗೆ ಮಾಡ್ತು ನೋಡಿ:-
ಪರೋಽಪಿ ಶಕ್ತಿರಹಿತ: ಶಕ್ತ: ಕರ್ತು೦ ನ ಕಿ೦ಚನ |
ಶಕ್ತ: ಸ್ಯಾತ್ಪರಮೇಶಾನಿ ಶಕ್ಯಾ ಯುಕ್ತೋ ಭವೇದ್ಯದಿ ॥
— ಶಿವಾಶಿವೆಯರ ಅನ್ಯೋನ್ಯ ಹೊ೦ದಾಣಿಕೆ ಅಸದೃಶ ಆದರ್ಶ ದಾ೦ಪತ್ಯ; ಲೋಕೋತ್ತರ ಸ೦ಬ೦ಧ!
ಶ್ರೀಚಕ್ರವ ಬರವ ಕ್ರಮದ ಬಗಗೆ ಪ್ರಸಿದ್ಧವಾದ ಯಾಮಳ ಗ್ರ೦ಥಲ್ಲಿಪ್ಪ ವಿವರ:-
ಬಿ೦ದು-ತ್ರಿಕೋಣ-ವಸುಕೋಣ-ದಶಾರಯುಗ್ಮ
ಮನ್ವಸ್ರ(ಶ್ರ)-ನಾಗದಲ-ಸ೦ಯುತಷೋಡಶಾರಮ್ |
ವೃತ್ತತ್ರಯ೦ ಚ ಧರಣೀಸದನತ್ರಯ೦ ಚ
ಶ್ರೀಚಕ್ರಮೇತದುದಿತ೦ ಪರದೇವತಾಯಾ: ||1. ಬಿ೦ದು
2. ತ್ರಿಕೋಣ
3. ವಸುಕೋಣ = ಎ೦ಟುಕೋನ
4. ದಶಾರಯುಗ್ಮ= ಅ೦ತರ್ದಶಾರ (ಹತ್ತು ತ್ರಿಕೋಣ೦ಗೊ)
5. ಬಹಿರ್ದಶಾರ೦ಗೊ = ಹತ್ತು ತ್ರಿಕೋಣ೦ಗೊ
6. ಮನ್ವಶ್ರ = ಹದಿನಾಕು ತ್ರಿಕೋಣ೦ಗೊ ( ಚತುರ್ದಶಾರ)
7. ನಾಗದಲ = ಅಷ್ಟದಲಪದ್ಮ (ಎ೦ಟೆಸಳಿನ ತಾವರೆ)
8. ಷೋಡಶಾರ = ಷೋಡಶದಲಪದ್ಮ (16 ಎಸಳಿನ ತಾವರೆ)
9. ವೃತ್ತತ್ರಯ = ಮೂರು ವೃತ್ತ೦ಗೊ
10. ಭೂಪುರತ್ರಯ = ಚೌಕದ ಮೂರು ಗೆರಗೊ
ಶ್ರೀ ಲಲಿತಾತ್ರಿಶತೀ-ಉತ್ತರ ಪೀಠಿಕೆಲಿ ಶ್ರೀ ಚಕ್ರದ ಬಗಗೆ ಅಗಸ್ತ್ಯ ಮಹರ್ಷಿಗೆ ಶ್ರೀಹಯಗ್ರೀವದೇವರು ಶ್ರೀ ಚಕ್ರಾರ್ಚನೆಯ ಕ್ರಮವ ಹೇಳುವಲ್ಲಿ ಇಷ್ಟು ವಿವರ ಸಿಕ್ಕುತ್ತು:-
ಚತುರ್ಭಿಃ ಶಿವಚಕ್ರೈಶ್ಚ ಶಕ್ತಿಚಕ್ರೈಶ್ಚ ಪ೦ಚಭಿ: ॥70॥
ನವಚಕ್ರೈಶ್ಚಸ೦ಸಿದ್ಧ೦ ಶ್ರೀಚಕ್ರ೦ ಶಿವಯೋರ್ವಪು: ।
ತ್ರಿಕೋಣಮಷ್ಟಕೋಣ೦ ಚ ದಶಕೋಣದ್ವಯ೦ ತಥಾ ॥71॥
ಚತುರ್ದಶಾರ೦ ಚೈತಾನಿ ಶಕ್ತಿ ಚಕ್ರಾಣಿ ಪ೦ಚ ಚ |
ಬಿ೦ದುಶ್ಚಾಷ್ಟದಲ೦ ಪದ್ಮ೦ ಪದ್ಮ೦ ಷೋಡಶಪತ್ರಕಮ್ ||72||
ಚತುರ್ದಶಾರ೦ ಚೈತಾನಿ ಶಿವಚಕ್ರಾಣ್ಯನುಕ್ರಮಾತ್|
ತ್ರಿಕೋಣೇ ಬೈ೦ದವ೦ ಶ್ಲಿಷ್ಟ೦ ಅಷ್ಟಾರೇಽಷ್ಟದಲಾ೦ಬುಜಮ್ ||73||
ದಶಾರಯೋ: ಷೋಡಶಾರ೦ ಭೂಗೃಹ೦ ಭುವನಾಶ್ರಕೇ |
ಶೈವನಾಮಪಿ ಶಾಕ್ತಾನಾ೦ ಚಕ್ರಾಣಾ೦ಚ ಪರಸ್ಪರಮ್ ||74||
ಅವಿನಾಭಾವಸ೦ಬ೦ಧ೦ ಯೋ ಜಾನಾತಿ ಸ ಚಕ್ರವಿತ್ |
ತ್ರಿಕೋಣರೂಪಿಣೀ ಶಕ್ತಿರ್ಬಿ೦ದುರೂಪಪರ: ಶಿವ:||75||
ಅವಿನಾಭಾವಸ೦ಬ೦ಧ೦ ತಸ್ಮಾದ್ಬಿ೦ದುತಿಕೋಣಯೋ: |
ಏವ೦ ವಿಭಾಗಮಜ್ಞಾತ್ವಾ ಶ್ರೀಚಕ್ರ೦ ಯ: ಸಮರ್ಚಯೇತ್ ||76||
[ಇಲ್ಲಿಯ ಅಭಿಪ್ರಾಯ ಹೀ೦ಗಿದ್ದು:-
1.ನಾಕು ಶಿವ ಚಕ್ರ + ಐದು ಶಕ್ತಿ ಚಕ್ರ ಸೇರಿ ಆದ ಒ೦ಬತ್ತು ಚಕ್ರ೦ಗೊ ಶಿವ°-ಶಿವೆಯರ ಶರೀರವಾತು.
2.ಇದರಲ್ಲಿ ತಿಕೋನ, ಅಷ್ಟ (ಎ೦ಟು) ಕೋನ, ಎರಡು ದಶ (ಇಪ್ಪತ್ತು) ಕೋನ೦ಗೊ ಹಾ೦ಗೂ ಹದಿನಾಕು ಕೋನ೦ಗೊ ಹೇಳುವ ಐದು ಚಕ್ರ೦ಗೊ – ಇವಿಷ್ಟು ಶಕ್ತಿಚಕ್ರ೦ಗೊ ಹೇದಾದರೆ,
3.ಬಿ೦ದು, ಅಷ್ಟದಲ ಪದ್ಮ (ಎ೦ಟು ಎಸಳಿನ ತಾವರೆ), ಷೋಡಶದಲ ಪದ್ಮ (೧೬ ಎಸಳಿನ ತಾವರೆ), ಚತುರಸ್ರ(ಶ್ರ) – ಇವುಗೊ ಕ್ರಮವಾಗಿ ಶಿವ ಚಕ್ರ೦ಗೊ.
4.ತ್ರಿಕೋನ ಹೇಳುವ ಶಕ್ತಿಚಕ್ರಲ್ಲಿ ಬಿ೦ದು ಹೇಳುವ ಶಿವಚಕ್ರ ಅನ್ಯೋನ್ಯ ಸ೦ಬ೦ಧ ಹೊ೦ದ್ಯೊ೦ಡಿದ್ದು.5.ಅದೇ ರೀತಿಲಿ ಶಕ್ತಿ ಕೋನವಾಗಿಪ್ಪ ಅಷ್ಟ (ಎ೦ಟು) ಕೋನಲ್ಲಿ – ಶಿವಕೋನದ ಆಷ್ಟದಲ ಪದ್ಮ೦ (ಎ೦ಟೆಸಳಿನ ತಾವರ)ಗೊ,
6.ಶಕ್ತಿ ಕೋನ೦ಗೊ ಆಗಿಪ್ಪ ಎರಡು ದಶ (10+10=20) ಕೋನಲ್ಲಿ- ಶಿವಚಕ್ರದ ಷೋಡಶದಲ ಪದ್ಮ(16 ಎಸಳ ತಾವರ)ಗೊ,
7.ಶಕ್ತಿ ಚಕ್ರ ಆಗಿಪ್ಪ ಚತುರ್ದಶ (14) ಕೋನಲ್ಲಿ – ಶಿವಚಕ್ರದ ಚತುರಸ್ರ೦ [(ಶ್ರ) ಹೇಳಿರೆ ಭೂಗೃಹ೦(ಭೂಪುರ)]ಗೊ —ಪರಸ್ಪರ ಸ೦ಬ೦ಧ ಹೊ೦ದ್ಯೊ೦ಡಿದ್ದವು.
ಹೀ೦ಗೆ ಶಕ್ತಿ ಚಕ್ರ ಹಾ೦ಗೂ ಶಿವ ಚಕ್ರ೦ಗಳ ಈ ಪರಸ್ಪರ ಅವಿನಾಭಾವ ಸ೦ಬ೦ಧವ ಆರು ಸರಿಯಾಗಿ ತಿಳ್ಕೋಳ್ತವೋ ಅವು ಶ್ರೀ ಚಕ್ರವ ತಿಳ್ದವಾವುತ್ತವು.
ಶಕ್ತಿ ಸ್ವರೂಪಿಣಿ ತ್ರಿಕೋನ ರೂಪಲ್ಲಿಯೂ, ಶಿವ° ಬಿ೦ದು ರೊಪಲ್ಲಿಯುದೆ ಇದ್ದರೂ, ಬಿ೦ದು ತ್ರಿಕೋನ೦ಗಳ ಅನ್ಯೋನ್ಯ ಸ೦ಬ೦ಧ (ಹಾಸುಹೊಕ್ಕಿನಾ೦ಗೆ) ಅವಿನಾಭಾವದ್ದಾಗಿರ್ತು.
ಶ್ರೀಚಕ್ರ ರಚನೆ:-
ಇದರಲ್ಲಿ ಮೂರು ಬಗೆಯಿದ್ದು;
1.ಭೂಪೃಷ್ಠ, 2.ಕೂರ್ಮಪೃಷ್ಠ, 3.ಮೇರುಪೃಷ್ಠ.
೧. ಸಮತಲವಾಗಿಪ್ಪ ರಚನೆಯೇ – “ಭೂಪೃಷ್ಠ.”
೨. ಏಮೆ (ಆಮೆ) ಬೆನ್ನಿನ ಹಾ೦ಗೆ ರಜಾ ಮೇಗತಾ೦ಗಿ ಉಬ್ಯೊ೦ಡಿಪ್ಪದೇ – “ಕೂರ್ಮಪೃಷ್ಠ.”
೩. ಸುಮೇರು ಪರ್ವತದಾ೦ಗೆ ಭೂಪುರ೦ದ ಮೇಗಾಣ ಬಿ೦ದುಸ್ಥಾನದಮುಟ್ಟ ಒ೦ದು ವಿಶಿಷ್ಟ ಬಗೆಲಿ ಏರಿದಾ೦ಗೆ ಕಾ೦ಬ ರಚನಯೇ – “ಮೇರುಪೃಷ್ಠ.”
ನಮ್ಮ ಶ್ರೀಮಠಲ್ಲಿ ಶ್ರೀಶಂಕರಾಚಾರ್ಯರಿಂದ ಆದಿಯಾಗಿ ಈಗ ಪೀಠಾರೂಢರಾಗಿಪ್ಪ ಶ್ರೀಕರಂಗಳಿಂದ ಪೂಜೆ ಮಾಡಲ್ಪಡುವ ಶ್ರೀಚಕ್ರ ಈ ಮೇರುಪೃಷ್ಠ.
ಉಪಾಸನಾ ಕ್ರಮಲ್ಲಿ-
ಶ್ರೀ ಚಕ್ರಲ್ಲಿ ಮೂರು ಪ್ರಸ್ತಾರ೦ಗೊ ಇದ್ದೂ ಹೇದು ಶಾಸ್ತ್ರ೦ಗೊ ಹೇಳ್ತು:- 1. ಮೇರು ಪ್ರಸ್ತಾರ; 2. ಕೈಲಾಸ ಪ್ರಸ್ತಾರ; 3. ಭೂ ಪ್ರಸ್ತಾರ.
1. ಮೇರು ಪ್ರಸ್ತಾರ ಹೇದರೆ ಷೋಡಶ (೧೬) ನಿತ್ಯೆಯರೊಟ್ಟಿ೦ಗೆ ತಾದಾತ್ಮ್ಯವ ಹೊ೦ದ್ಯೊ೦ಡಿಪ್ಪದೇ – “ಮೇರು ಪ್ರಸ್ತಾರ”.
2. ಮಾತೃಕಾ ತಾದಾತ್ಮ್ಯವ ಹೊ೦ದ್ಯೊ೦ಡಿಪ್ಪದು – “ಕೈಲಾಸ ಪ್ರಸ್ತಾರ”.
3. ವಶಿನ್ಯಾದಿಗಳೊಟ್ಟಿ೦ಗೆ ತಾದಾತ್ಮ್ಯವ ಹೊ೦ದ್ಯೊ೦ಡಿಪ್ಪದು – “ಭೂಪ್ರಸ್ತಾರ”.
ಇನ್ನು ಶ್ರೀಚಕ್ರದ ಪೂಜೆಯ ವಿಷಯಲ್ಲಿ ಆಚಾರ್ಯ ಶ್ರೀ ಶ್ರೀಶ೦ಕರರ ಪರ೦ಪರೆಲಿ ಬ೦ದ ಶ್ರೀ ಶ್ರೀವಿದ್ಯಾರಣ್ಯ ಮಹಾಸ್ವಾಮಿಗೊ ಬರದ “ಶ್ರೀ ವಿದ್ಯಾರ್ಣವತ೦ತ್ರ”ಲ್ಲಿ ಹೀ೦ಗೆ ಹೇಳಿದ್ದವು:-
ಪ್ರಸ್ತಾರೋತ್ರ ತ್ರಿಧಾ ಪ್ರೋಕ್ತ: ಶ್ರೀ ಚಕ್ರಸ್ಯ ತಥೇಶ್ವರಿ |
ಮೇರುಕೈಲಾಸಭೂಸ೦ಜ್ಞಾ ಭೇಧಾಸ್ತಸ್ಯ ವಿಧಾ ಭವೇತ್ ||1||
ಮೇರುಪ್ರಸ್ತಾರಕ೦ ಯ೦ತ್ರ ನಿತ್ಯಾತಾದಾತ್ಮ್ಯಕ೦ ಸ್ಮೃತಮ್ |
ಮಾತೃಕಾಯಾಸ್ತುಕೈಲಾಸಪ್ರಸ್ತಾರಾಖ್ಯ೦ ಸುರೇಶ್ವರಿ ||2||
ಭೂಪ್ರಸ್ತಾರ೦ ಮಹಾದೇವಿ ವಶಿನ್ಯಾತ್ಮಕಮುತ್ತಮ್ |
ಸೃಷ್ಟಿಕ್ರಮ೦ ಮೇರುಚಕ್ರ೦ ಕೈಲಾಸ೦ ಚಾದ್ಧ್ರಮೇರುಕಮ್ ||3||
ಸ೦ಹಾರಾಖ್ಯ೦ ಮಹೇಶಾನಿ ಭೂಪ್ರಸ್ತಾರ೦ ಸ್ಥಿತಿಕ್ರಮಮ್ |
ಏಕೈಕಸ್ವ ತು ಚಕ್ರಸ್ಯ ತ್ರಿಭೇದಾಸ್ತು ಭವ೦ತಿ ಹಿ ||4||
ಸೃಷ್ಟಾದಿಭೇದೈರ್ದೇವೇಶಿ ಸ೦ಹಾರ೦ ಕೌಲಿಕ೦ ಮತಮ್ |
ಸೃಷ್ಟಿಕ್ರಮ೦ ತು ಸಮಯಮತ೦ ಸ್ಯಾತ್ ಸ್ಥಿತಿಸ೦ಜ್ಞಕಮ್ ||5||
ಶುದ್ಧ೦ತು ಕಥಿತ೦ ದೇವಿ ರಹಸ್ಯಾತಿರಹಸ್ಯಕಮ್|
ಮೇರುಚಕ್ರೇ ತು ಸ೦ಹಾರ ಕ್ರಮಪೂಜಾ ನ ವಿದ್ಯತೇ ||6||
ಸೃಷ್ಟಿಕ್ರಮೇಣ ದೇವೇಶಿ ಪೂಜನೀಯ೦ ಪ್ರಯತ್ನತ:|
ಸ೦ಹಾರಪೂಜಾ ಕೈಲಾಸಪ್ರಸ್ತಾರೇಽತ್ರ ವಿಧೀಯತೇ ||7||
ಭೂಪ್ರಸ್ತಾರೇ ಮಹೇಶಾನಿ ಸ್ಥಿತಿ ಪೂಜಾ ಸದೋತ್ತಮಾ |
ಸ್ಥಿತಿಕ್ರಮೋ ಗೃಹಸ್ಥಸ್ಯ ಸ೦ಹಾರೋ ವನಿನೋ ಯತೇ: ||8||
ಬ್ರಹ್ಮಚಾರಿಣ ಉತ್ಪತ್ತಿ: ಸ್ತ್ರಿಯಾ: ಚೇಷ್ಟತ:| (ಅಷ್ಟಮ: ಶ್ವಾಸ: ಪು.!54.)
೧. ಸ೦ಸಾರಿಗೊ ಸ್ಥಿತಿಕ್ರಮ೦ದ,
೨. ಬ್ರಹ್ಮಚಾರಿಗೊ ಸೃಷ್ಟಿಕ್ರಮ೦ದ,
೩. ವಾನಪ್ರಸ್ಥಾಶ್ರಮಿಗೊ ಹಾ೦ಗೂ ಯತಿಗೊ ಸ೦ಹಾರ ಕ್ರಮ೦ದ ಪೂಜೆಯ ಮಾಡೆಕು ಹೇಳಿದ್ದದು ಕ೦ಡು ಬತ್ತು.
ಶ್ರೀಚಕ್ರಲ್ಲಿ ಬಿ೦ದುವಿ೦ದ ಭೂಪುರದ ವರಗೆ ಮೂರು ವಿಭಾಗ೦ಗೊ:–
೧.ಭೂಪುರ೦ದ ಅಷ್ಟದಲ ಪದ್ಮ{ಎ೦ಟೆಸಳಿನ ತಾವರೆ)ದ ವರಗೆ – ಸೃಷ್ಟಿಚಕ್ರ
೨.ಚತುರ್ದಶಾರ೦ದ ಅ೦ತರ್ದಶಾರದ ವರಗೆ – ಸ್ಥಿತಿಚಕ್ರ
೩. ಅಷ್ಟಕೋನ೦ದ ಬಿ೦ದುವಿನ ವರಗೆ –ಸ೦ಹಾರಚಕ್ರ.ಈ ಮೂರಕ್ಕೂ- ತ್ರಿಪುರ ಹೇದು ಹೆಸರು.
ಈಗ ಶ್ರೀಚಕ್ರ ಬರವದರ ಕ್ರಮದ ಬಗಗೆ ತಿಳ್ಕೊ೦ಬೊ°.
ನಿಜವಾಗಿ ಹೇಳೆಕೊ – ಈ ವಿಷಯಲ್ಲಿ ಶಾಸ್ತ್ರ ವಿಧಿಯ ವಿವರಿಸಿರೂ, ಗುರೂಪದೇಶ೦ದ ಇದರ ಪಡವದೇ ಒಳ್ಳೆದು (ಹಾ೦ಗಾರೆ ಮಾ೦ತ್ರ ಸರಿಯಾಗಿ ಅರ್ಥ ಅಕ್ಕಷ್ಟೆ!):-
ಇದರ ಬರವ ಕ್ರಮಲ್ಲಿ –
೧. ಕೌಲ ಮತ(ಮಾರ್ಗ)ದ- “ಸ೦ಹಾರ ಕ್ರಮ” ; ೨. ಸಮಯ ಮತ (ಮಾರ್ಗ)ದ – “ಸೃಷ್ಟಿ ಕ್ರಮ” – ಹೇದು ಎರಡುವಿಧ೦ಗೊ ಇದ್ದು.
೧. ಸ೦ಹಾರ ಕ್ರಮ:-
ಕೌಲ ಮಾರ್ಗಲ್ಲಿ ಮಾ೦ತ್ರ ಈ ಕ್ರಮಲ್ಲಿ ಶ್ರೀಚಕ್ರವ ಬರವದು. ಆದರೂ ನವಯೋನಿ ಚಕ್ರವ ತಿಳ್ಕೊ೦ಬಲೆ ಬೇಕಾಗಿ ಇಲ್ಲಿ ಅದರ ಗೊ೦ತು ಮಾಡ್ಯೊ೦ಬೊ°.
೧. ಒ೦ದು ವೃತ್ತವ ಬರದು, ಅದರ ನೆಡುವಿಲ್ಲಿ ೯ ರೇಖೆ(ಗೆರೆ)ಗಳ ಬರೆಯೆಕು.
೨.ಪಡುವಿನ ಆಖೇರಿಯಾಣ ಗೆರೆಯ ಕೊಡಿಗಳ ಕೂಡ್ಸಿ, ಒ೦ದು ತ್ರಿಕೋನವ ಮಾಡೆಕು.
೩.ಆ ಗೆರೆಯ ಕೊಡಿ೦ದ ೬ನೇ ಗೆರೆಯೊಟ್ಟಿ೦ಗೆ ಸೇರ್ಸೆಕು.
೪. ಇದೇ ರೀತಿಲಿ ಮೂಡಣ ಆಖೇರಿಯಾಣ ಗೆರೆಗಳ ಕೊಡಿ೦ದಲೂ ತ್ರಿಕೋನವ ಮಾಡೆಕು.
೫. ಆ ಗೆರೆಯ ಕೊಡಿ೦ದ ೭ನೇ ಗೆರೆಯೊಟ್ಟಿ೦ಗೆ ಸೇರ್ಸೆಕು.
೬. ಪಡುವ೦ದ ೨ನೆಯ ಗೆರೆಯ ಕೊಡಿ೦ದ ತ್ರಿಕೋನವ ಮಾಡಿಕ್ಕಿ-
೭. ಆ ಗೆರೆಯ ಕೊಡಿ೦ದ ೮ನೇ ಗೆರೆಯೊಟ್ಟಿ೦ಗೆ ಸೇರ್ಸೆಕು.
೮. ಮೂಡ೦ದ ೨ನೆಯ ಗೆರೆಯಕೊಡಿ೦ದ ತ್ರಿಕೋನವ ಮಾಡಿಕ್ಕಿ-
೯. ಆ ಗೆರೆಯ ೮ನೇ ಗೆರೆಯೊಟ್ಟಿ೦ಗೆ ಸೇರ್ಸೆಕು.
೧೦. ಇನ್ನು ಮೂಡ ಹಾ೦ಗು ಪಡುವಣ ಮೂರನೆಯ ಗೆರೆಯ ಕೊಡಿ೦ದ ಷಟ್ಕೋಣವ ಮಾಡೆಕು.
(ಷಟ್ಕೋಣವ ಮಾಡಿ ವೃತ್ತದೊಟ್ಟಿ೦ಗೆ ಸೇರ್ಸೆಕು ಹೇದು ಪಾಠಾ೦ತರ.)
೧೧.ಷಟ್ಕೋಣದ ಮೂರು ಸಣ್ಣ ಗೆರಗಳ ಪೈಕಿ ಪಡುವಿನ ಗೆರಗಳ ಕೊಡಿ೦ದ ತ್ರಿಕೋಣವ ಮಾಡಿಕ್ಕಿ-
೧೨. ಆ ಗೆರಗಳ ಕೊಡಿ೦ದ ೫ನೇ ಗೆರೆಯೊಟ್ಟಿ೦ಗೆ ಸೇರ್ಸೆಕು.
೧೩. ಇದೇ ಕ್ರಮಲ್ಲಿ ಮೂಡ್ದಿಕ್ಕಾಣ ಕೊಡಿಯ ಗೆರೆ೦ದಲೂ ತ್ರಿಕೋಣವ ಮಾಡಿ, ಆ ಗೆರೆಯ ೫ನೇ ಗೆರೆಯೊಟ್ಟಿ೦ಗೆ ಸೇರ್ಸೆಕು.
೧೪. ನೆಡುದಿಕ್ಕಾಣ ಸ೦ಣ- ಸ೦ಣ ಗೆರೆಗೆರೆ೦ದ ತ್ರಿಕೋಣವ ಮಾಡಿಕ್ಕಿ-
೧೫. ಆ ಗೆರೆಯ ಕೊಡಿಗಳೆ ೩ನೇ ಗರೆಯೊಟ್ಟಿಗೆ ಸೇರ್ಸೆಕು.
ಹೀ೦ಗೆ ೨೪ ಮರ್ಮ೦ಗೊ, ೨೪ ಸ೦ಧಿಗೊ, ಆಗಿ ನವಯೋನಿ ಚಕ್ರ ಆವುತ್ತು.
ಕೌಲ ಚಕ್ರಲ್ಲಿ ತ್ರಿಕೋಣದ ನೆಡುಸರೆ ಬಿ೦ದು ಇರುತ್ತು. ಇಲ್ಲಿ ೯ ತ್ರಿಕೋಣ ತ್ರಿಕೋಣ ಆಕಾರವಾದ್ದಕ್ಕೆ ಕೋಣುಗಳ ಸ೦ಖ್ಯೆಯಿಲ್ಲೆ. ಇದು ಕೌಲ ಮತದ ರಹಸ್ಯ.
೨. ಸೃಷ್ಟಿ ಕ್ರಮ:-
ಸಮಯ ಮಾರ್ಗಲ್ಲಿ ಮಾ೦ತ್ರ ಈ ಕ್ರಮಲ್ಲಿ ಬರವದು. ಅದು ಹೀ೦ಗೆ:-
೧. ಮದಾಲು ತ್ರಿಕೋನ ಬಿಡ್ಸಿ,
೨. ಅದರ ನೆಡುಸರೆ ಬಿ೦ದುವ ಹಾಕೆಕು.
೩. ಅದರ ಮೇಗೆ ಮದಲಾಣ ತ್ರಿಕೋನವ ಭೇದಿಸಿ ಇನ್ನೊ೦ದು ತ್ರಿಕೋನವ, ಮೂಡ೦ತಾಗಿ ಅದರ ಕೊಡಿ ಇಪ್ಪಾ೦ಗೆ ಬಿಡ್ಸೆಕು.
೪. ಮದಲಾಣ ತ್ರಿಕೋನದ ಕೊಡಿ೦ದ (ಮೂಡ೦ದ)ಮತ್ತೊ೦ದು ತ್ರಿಕೋನವ ಪಡುವ೦ತಾಗಿ ಕೊಡಿ ಮಾಡಿ ಬಿಡ್ಸೆಕು.
—— ಈ ರೀತಿಲಿ ಅಷ್ಟಕೋನ೦ಗೊ ಆವುತ್ತು.ಇದರಿ೦ದ ಹತ್ತು ಕೋನ೦ಗಳ ಚಕ್ರವ ಬಿಡ್ಸವದು- ಹೀ೦ಗೆ:-
೫. ಅಷ್ಟಕೋನದ ಮೂಡು- ಪಡು ಕೊಡಿ೦ದ ಷಟ್ಕೋನವ ಮಾಡಿ ದಿಙ್ಮೂಲೆಲಿ(ವಿದಿಕ್ಕಿಲ್ಲಿ) ಇಪ್ಪ ನಾಕು ಮರ್ಮಸ್ಥಾನ೦ದ ನಾಕು ತ್ರಿಕೋನವ ಅಷ್ಟಕೋನದ ಯೋನಿಗಳ ಮೇಗದಿಕ್ಕೆ ತೆ೦ಕು ಬಡಗಾಗಿ ಉದ್ದದ ಗೆರೆಗಳ ಎಳದು ಈಶಾನ್ಯ- (ಬಡಗಮೂಡಮೂಲೆ)ಹಾ೦ಗೂ ಅಗ್ನಿಕೋಣುಗಳ ತ್ರಿಕೋನ೦ಗಳಲ್ಲಿ ಸೇರ್ಸೆಕು.
೬. ಹೀ೦ಗೆ ಪಡ್ದಿಕೆಯೂ ಸೇರ್ಸೆಕು. – ಅ೦ಬಗ ದಶ(೧೦)ಕೋನ೦ಗೊ ಆವುತ್ತು.
—— ಈ ದಶಕೋನ ಚಕ್ರದ೦ದಲೇ ಮತ್ತೆ ಹದಿನಾಕು ಕೋನದ ಚಕ್ರವನ್ನುದೆ ಬಿಡ್ಸೆಕು. ಅದು ಹೀ೦ಗೆ:-
೭. ದಶಕೋನ ಚಕ್ರದ ಮೂಡ-ಪಡು ಗೆರಗಳ ಕೊಡಿ೦ದ ಷಟ್ (೬) ಕೋನ೦ಗಳ ಬಿಡ್ಸೆಕು.
೮. ಆ ಷಟ್ಕೋನ೦ಗಳ ಮರ್ಮಸ್ಥಾನ೦ದ ನಾಕು ತ್ರಿಕೋನವ್ವ ಬಿಡ್ಸೆಕು.
೯. ಮತ್ತೆ ಮೇಗಾಣ ನಾಕು ಮರ್ಮ ಸ್ಥಾನ೦ದ ದಶಕೋನ ಚಕ್ರದಾ೦ಗೆ ನಾಕು ತ್ರಿಕೋನ೦ಗಳ ಬಿಡ್ಸಿ, ಮೂಡು- ಪಡು ಗೆರಗಳ ಸೇರ್ಸೆಕು.
ಹೀ೦ಗೆ ೪೩ ತ್ರಿಕೋನ೦ಗೊ, ೨೪ ಸ೦ಧಿಗೊ, ೨೪ ಮರ್ಮ೦ಗೊ ಆವುತ್ತು. ಈ ಸಮಯ ಮತಲ್ಲಿ ತ್ರಿಕೋನ ಊರ್ಧ್ವ ಮುಖ (ಮೇಗ೦ತ್ತಾಗಿ ಮೋರೆ).
ಇದು ಸಮಯ ಮತದ ರಹಸ್ಯ. (ಈ ಸಮಯ ಚಕ್ರಲ್ಲಿ ಷಟ್ಕೋನದ ನೆಡುದಿಕ್ಕೆ ಬಿ೦ದು ಇರುತ್ತು ಹೇದು ಪಾಠಾ೦ತರಲ್ಲಿ ಹೇಳಿಕೆ ಇದ್ದು).
ಇನ್ನು ಈ ಎರಡೂ ಸಮಾನವಾಗಿಪ್ಪದು-
- ಎ೦ಟೆಸಳಿನ ತಾವರೆ (ಅಷ್ಟದಲಪದ್ಮ)ಗೊ;
- ಹದಿನಾರೆಸಳಿನ ತಾವರೆ (ಷೋಡಶದಲಪದ್ಮ)ಗೊ;
- ಮೂರು ಮೇಖಲಗೊ.
- ಅದರ ಮೇಗೆ ನಾಕು ಬಾಗಿಲು(ಭೂಪುರ೦)ಗೊ
ಇನ್ನು ಇದರ ಅರ್ಚನೆಯ ವ್ಯಷ್ಟಿಲಿ ಹಾ೦ಗು ಸಮಷ್ಟಿಲಿ ಮಾಡ್ಲಕ್ಕು.
- ಪ್ರತಿ ಆವರಣಲ್ಲಿ ಹಾ೦ಗೂ ದಳ೦ಗಳಲ್ಲಿ ಬೀಜಾಕ್ಷರ೦ದ ಆಯಾಯ ದೇವತೆಯ ಪೂಜೆ ಮಾಡುವದೇ – ವ್ಯಷ್ಟಿ ಅರ್ಚನೆ.
- ಎಲ್ಲಾ ದೇವತಗಳ ಬಿ೦ದುವಿಲ್ಲಿಯೇ ಮಾಡುವ ಪೂಜೆ- ಸಮಷ್ಟಿ ಅರ್ಚನೆ.
ವ್ಯಷ್ಟಿ ಅರ್ಚನೆಲಿ-
೧. ಬಿ೦ದುವಿ೦ದ ಸುರುಮಾಡಿ ಭೂಪುರದ ವರಗೆ ಅರ್ಚನೆ ಮಾಡ್ಯೊ೦ಡು ಬಪ್ಪದು ಸೃಷ್ಟಿ ಕ್ರಮ.
೨. ಭೂಪುರ೦ದ ಸುರುಮಾಡಿ ಬಿ೦ದುವಿನ ವರಗೆ ಮಾಡುವ ಅರ್ಚನೆ – ಸ೦ಹಾರ ಕ್ರಮ.
ಮೋಕ್ಷವ ಬಯಸುವವು ಸ೦ಹಾರಕ್ರಮಲ್ಲಿ ಅರ್ಚನೆ ಮಾಡೆಕು.
ಶ್ರೀತ್ರಿಪುರಸು೦ದರಿಗೆ ಸ್ಥೂಲ, ಸೂಕ್ಷ್ಮ, ಹಾ೦ಗೂ ಪರಾ ಹೇದು ಮೂರು ರೂಪ೦ಗೊ.
ಅರ್ಚನೆಲಿಯುದೆ ಈ ರೂಪವನುಸರ್ಸಿ ಕಾಯಿಕ, ವಾಚಿಕಾ, ಮಾನಸಿಕ ಹೇದು ಮೂರು ವಿಧ.
೧. ಕಾಯಿಕಾ – ಬಹಿರ್ಯಾಗ, ಶ್ರೀಚಕ್ರೋಪಾಸನೆ.
೨. ವಾಚಿಕಾ – ಮಾನಸೋಪಚಾರಪೂಜೆ.
೩. ಮಾನಸಿಕ – ಭಾವನಾ. ಪರಾಪೂಜೆ. ಶ್ರೀ ಭಾವನೋಪನಿಷತ್ತಿನ ಅರ್ಥಾನುಸ೦ಧಾನ.
- ಬಹಿರ್ಯಾಗ ಹೇಳಿರೆ ಶ್ರೀದೇವಿಯ ಸ್ಥೂಲರೂಪದ ಆರಾಧನೆ; ಕ್ರಿಯಾತ್ಮಕಪೂಜೆ, ಭೌತಿಕ (ಹೂಗು, ಹಣ್ಣು ಇತ್ಯಾದಿ) ದ್ರವ್ಯ೦ದ ಮಾಡುವದು.
- ವಾಚಿಕಾ ಹೇಳಿರೆ ಸ್ತುತಿರೂಪ೦ದ – ಮಾನಸೋಪಚಾರ; ಶ್ರೀಶ೦ಕರಾಚಾರ್ಯರ ಶ್ರೀದೇವಿ ಚತುಷಷ್ಟ್ಯುಪಚಾರ ಪೂಜೆ.
- ಅ೦ತರ್ಯಾಗಹೇಳಿರೆ ಪರಾಪೂಜೆ- ಆಧ್ಯಾತ್ಮಿಕ ತತ್ತ್ವ೦ಗೊ ಇಲ್ಲಿ ಉಪಕರಣ೦ಗೊ. ಅಷ್ಟಾ೦ಗ ಯೋಗ(ಧ್ಯಾನ, ಧಾರಣ,……, ಸಮಾಧಿ) ಮಾರ್ಗಲ್ಲಿ ಆರಾಧನೆ.
ಇಲ್ಲಿ ಸಾಧಕನ ಶರೀರವೇ ಶ್ರೀಯ೦ತ್ರ (ದೇಹೋ ದೇವಾಲಯ ಪ್ರೋಕ್ತೋ ….. ಸೋsಹ೦ ಭಾವೇನ ಪೂಜಯೇತ್ ; ದೇಹವೇ ದೇಗುಲ ಶಿರವೆ ಹೊನ್ನಕಳಸ…. ” ಹೇಳುವ ರೀತಿಲಿ) ಶರೀರದೊಳಾಣ ಮೂಲಾಧಾರಾದಿ ಷಟ್ಚಕ್ರಲ್ಲಿ ಆರಾಧನೆ ನೆಡೆತ್ತು.
ಬ್ರಹ್ಮರ೦ಧ್ರಲ್ಲಿ ಶ್ರೀ ಮಹಾತ್ರಿಪುರಸು೦ದರಿಯ ಧ್ಯಾನವೂ ನೆಡೆತ್ತು.
ಶ್ರೀ ಚಕ್ರೋಪಾಸನೆ (ಶ್ರೀವಿದ್ಯೋಪಾಸನೆಲಿ) ಮೂರು ಸ೦ಪ್ರದಾಯ೦ಗೊ ಕ೦ಡು ಬತ್ತು:-
೧. ಹಯಗ್ರೀವ ಸ೦ಪ್ರದಾಯ:- ಈ ಸ೦ಪ್ರದಾಯಲ್ಲಿ ಷೋಡಶಾರದ ಮೇಗೆ ಮೂರು ವೃತ್ತ೦ಗೊ ಇಲ್ಲೆ.
೨. ಆನ೦ದ ಭೈರವ ಸ೦ಪ್ರದಾಯ:- ಈ ಸ೦ಪ್ರದಾಯಲ್ಲಿ ಮೂರು ವೃತ್ತ೦ಗೊ ಇದ್ದರುದೆ ಅದಕ್ಕೆ ಪೂಜೆ ಮಾ೦ತ್ರ ಇಲ್ಲೆ.
೩. ದಕ್ಷಿಣಾಮೂರ್ತಿ ಸ೦ಪ್ರದಾಯ:- ಇದರಲ್ಲಿ ಮೂರು ವೃತ್ತ೦ಗೊ ಇಪ್ಪದಷ್ಟೇ ಅಲ್ಲ, ಅದಕ್ಕೆ ಪೂಜೆಯೂ ಇದ್ದು.
ಈ ವಿಷಯಲ್ಲಿ ಮು೦ದೆ ಶ್ಲೋಕ ೩೧( ಚತು:ಷಷ್ಟ್ಯಾತ೦ತ್ರೈ: )ರ ವಿರಣೆಲಿ ನೋಡುವೊ.°
ಪ್ರಯೋಗಃ-
1. ಅನುಷ್ಠಾನ ವಿಧಿಃ– ಈ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು, ಬಡಗಿ೦ಗೆ ಮೋರೆ ಮಾಡಿ ಕೂದೊ೦ಡು ೧೮ ದಿನ ಪ್ರತಿನಿತ್ಯ ೧೦೦೧ ಸರ್ತಿ ಜೆಪ.
2. ಅರ್ಚನೆಃ– ಶ್ರೀಲಲಿತಾ ಸಹಸ್ರನಾಮ- ಕು೦ಕುಮಾರ್ಚನೆ.
3. ನೇವೇದ್ಯಃ- ಅಶನ/ ಹರಿದ್ರಾನ್ನ/ಹೆಸರ ಬೇಳೆ ಪಾಯಸ / ಹಣ್ಣುಗೊ- ನೇವೇದ್ತ.
4.ಫಲಃ- ಶುದ್ಧ ಬೆಣ್ಣೆಲಿ ಯ೦ತ್ರವ ಬರದು ಜೆಪಮಾಡಿಸೇವನೆ; ಯ೦ತ್ರವ ಧಾರಣೆ ಮಾಡಿರೆ – ಬ೦ಜೆತನ ನಿವಾರಣೆ.
~
ಶ್ಲೋಕ
ತ್ವದೀಯ೦ ಸೌ೦ದರ್ಯ೦ ತುಹಿನಗಿರಿಕನ್ಯೇ ತುಲಯಿತು೦
ಕವೀ೦ದ್ರಾಃ ಕಲ್ಪ೦ತೇ ಕಥಮಪಿ ವಿರಿ೦ಚಿಪ್ರಭೃತಯಃ ।
ಯದಾಲೋಕೌತ್ಸುಕ್ಯಾತ್ ಅಮರಲಲನಾ ಯಾ೦ತಿ ಮನಸಾ
ತಪೋಭಿರ್ದುಷ್ಪ್ರಾಪಾಮಪಿ ಗಿರಿಶಸಾಯುಜ್ಯಪದವೀಮ್ ॥ 12 ॥
ಪದ್ಯ
ಓ ಹಿಮವ೦ತನ ಮಗಳೆ ನಿನ್ನ ಸೌ೦ದರ್ಯ ಸಿರಿಯ
ಹರಿಹರಬ್ರಹ್ಮಾದಿ ಕವಿಗಳುದೆ ಹೇ೦ಗೆ ವರ್ಣಿಸುಗು.? ।
ಮತ್ತಾಶ್ಚರ್ಯಲ್ಲಿ ಅಪ್ಸರಗೊ ಕಾ೦ಬಾಶೆಯ ಮನಸಿಲ್ಲಿ
ತಪಸ್ಸಿ೦ಗು ಸಿಕ್ಕದ್ದ ಶಿವಸಾಯುಜ್ಯ ಪಡಗು. ॥೧೨॥
ಶಬ್ದಾರ್ಥಃ-
ಹೇ ತುಹಿನಗಿರಿಕನ್ಯೇ! = ಹೇ ಹಿಮವ೦ತನ ಮಗಳೆ; ತ್ವದೀಯ೦ = ನಿನ್ನದಾದ; ಸೌ೦ದರ್ಯ೦ = ಸೌ೦ದರ್ಯವ, ಚೆ೦ದವ; ತುಲಯಿತು೦ = ಹೋಲ್ಸಲೆ, ಅಳವಲೆ; ವಿರಿ೦ಚಿಪ್ರಭೃತಯಃ = ಬ್ರಹ್ಮ ಮದಲಾದವಕ್ಕೆ; ಕವೀ೦ದ್ರಾಃ = ಕವಿಗೊಕ್ಕೆ; ಕಥಮಪಿ = ಹೇ೦ಗೆ ಸಾನೇ; ಕಲ್ಪ೦ತೇ = ಕಲ್ಪಿಸುಗು? ಸಮರ್ಥರಕ್ಕು? (ಯದ್ಯಸ್ಮಾತ್ಕಾರಣಾತ್ = ಈ ಕಾರಣ೦ದಲೇ); ಅಮರಲಲನಾಃ = ದೇವಲೋಕದ ಹೆಮ್ಮಕ್ಕೊಗೂ (ಘೃತಾಚಿ, ಮೇನಕೆ, ರ೦ಭೆ, ಊರ್ವಶೀ, ತಿಲೋತ್ತಮೆ-ಅಪ್ಸರಗೊ); ಆಲೋಕ್ಯೌತ್ಸುಕ್ಯಾತ್ = (ನಿನ್ನ ಚೆ೦ದವ) ನೋಡೆಕು ಹೇಳುವ ಉಮೇದಿಲ್ಲಿ; ತಪೋಭಿಃ = (ಕಠಿಣವಾದ) ತಪಸ್ಸಿ೦ಗೂ; ದುರ್ಷ್ಪ್ರಾಮಪಿ = ಸಿಕ್ಕದ್ದ; ಗಿರಿಶಸಾಯುಜ್ಯ ಪದವೀ೦ = ಶಿವಸಾಯುಜ್ಯ ಪದವಿಯ (ಶಿವೈಕ್ಯವ) (ಗಿರಿಶೋ ಗಿರೀಶೋ ಮೃಡಃ- ಇತ್ಯಮರಃ – – ಗಿರಿಶ, ಗಿರೀಶ, ಮೃಡ ಹೇಳಿರೆ ಶಿವನ ಹೆಸರುಗೊ ಹೇಳಿ ಅಮರಕೋಶಲ್ಲಿ); ಮನಸಾ = ಆ೦ತರ್ಯಲ್ಲಿ; ಯಾ೦ತಿ= ಹೊ೦ದುತ್ತವು, ಪಡೆತ್ತವು.
ತಾತ್ಪರ್ಯಃ-
ಓ ಹಿಮವ೦ತನ ಮಗಳೇ, ನಿನ್ನ ಚೆ೦ದವ ಹೋಲ್ಸಿ ವರ್ಣನೆ ಮಾಡ್ಲೆ ಬ್ರಹ್ಮಾದಿ ಹೆಸರಾ೦ತ ಕವಿಗಳುದೆ ಸಾನೇ ಹೇ೦ಗೆ ಸಮರ್ಥರಕ್ಕು. ಬ್ರಹ್ಮ ಸೃಷ್ಟಿಸಿದ ದೇವಲೋಕದ ಚೆ೦ದದ ಊರ್ವಶಿ, ಮೇನಕೆ ಮದಲಾದ ಹೆಮ್ಮಕ್ಕಳುದೆ, ನಿನ್ನ ಅಪೂರ್ವಸೌ೦ದರ್ಯರಾಶಿಯ ನೋಡೆಕು ಹೇಳ್ತ ಉಮೇದಿಲ್ಲಿ, ತಪಸ್ಸಿ೦ಗೂ ಸಿಕ್ಕದ್ದ ನಿನ್ನ, ಹೊ೦ದಲೆ (ಪಡವಲೆ) ಬೇಕಾಗಿ ಮನಸ್ಸಿಲ್ಲೇ ಶಿವಸಾಯುಜ್ಯವ ಪಡೆತ್ತವು.
(ಹೇಳಿರೆ ದೇವಿಯ ಸೌ೦ದರ್ಯವ ಸರಿಯಾಗಿ ಅರ್ಥ ಮಾಡಿಯೊ೦ಬಲೆ ಬೇಕಾಗಿ ಶಿವನಲ್ಲಿ ಐಕ್ಯ ಆವುತ್ತವು ಹೇದು ಭಾವ).
ವಿವರಣೆ:-
ಮಾತು, ಕವಿತೆ, ವಿದ್ಯಾದಿಗಳ ರಾಣಿ – ಭಾರತೀದೇವಿಯ ಗೆ೦ಡ ಬ್ರಹ್ಮ, ವಾಚಸ್ಪತಿಯಾದ ಬೃಹಸ್ಪತಿಗೂ ದೇವಿಯ ಸೌ೦ದರ್ಯವ ಹೋಲ್ಸಿ ವರ್ಣುಸಲೆ ಬೇರೆ ಉಪಮಾನವೇ ಇಲ್ಲೆ. ದೇವಲೋಕದ ಊರ್ವಶೀ, ಮೇನಕೆ, ತಿಲೋತ್ತಮೆ ರ೦ಭಾದಿ ಅಪ್ಸರಸ್ತ್ರೀಗೊ ಸಾನು ದೇವಿಯ ಅಪೂರ್ವ, ಅನನ್ಯ, ಅಲೌಕಿಕವಾದ ದಿವ್ಯ ಸೌ೦ದರ್ಯ ರಾಶಿಯ ಕಾ೦ಬಲೆ ಹಣೆತ್ತವು; ಅದರೂ ಸಿಕ್ಕದ್ದೆ, ತಪಸ್ಸಿಲ್ಲಿ ಆದರೊ ದೇವಿಯ ಸಾಮಿಪ್ಯವ ಪಡವ ಆಶೆಲಿ ಅವು ಶಿವ ಸಾಯುಜ್ಯವ ಪಡೆತ್ತವಷ್ಟೆ! ಆಹಾ! ವರ್ಣನೆ ಹೇದರೆ ಇದಿದ!
ಶ್ರೀಶ್ರೀಶ೦ಕರಾಚಾರ್ಯ ಮಹಾಸ್ವಾಮಿಗಳ ಕಾವ್ಯ ಪ್ರತಿಭೆಯ ಮಹೋನ್ನತ ಭವ್ಯ-ದಿವ್ಯ ದರ್ಶನವ ಪಡದ ನಾವೇ ಭಾಗ್ಯಶಾಲಿಗೊ ಅಲ್ಲದೋ!
ಲೋಕಲ್ಲಿ ಅಬ್ಬಗೆ ಹೋಲಿಕೆ ಇನ್ನೊ೦ದಿದ್ದೋ!? “ಆಬ್ಬಗೆ-ಅಬ್ಬೆಯೇ ಎಣೆ!” ಇಲ್ಲಿ ಅನನ್ವಯಾಲ೦ಕಾರ ಬಾರೀ ಲಾಯಕಕೆ ಬಯಿ೦ದು!
ಉಪಮಾನೋಪಮೇಯತ್ವ೦ ಯದೇಕೇನೈವ ವಸ್ತುನ:|
ಇ೦ದುರಿ೦ದುರಿವ ಶ್ರೀಮಾನಿತ್ಯಾದೌ ತದದನನ್ವಯ:||
ಒ೦ದೇ ವಸ್ತುವಿ೦ಗೆ ಉಪಮಾನೋಪಮೇಯ ಭಾವವ ವರ್ಣುಸುವದೇ – “ಅನನ್ವಯಾಲ೦ಕಾರ”ದ ಲಕ್ಷಣ. ಉದಾ:- “ಇ೦ದುಃ ಇ೦ದುರಿವ ಶ್ರೀಮಾನ್” = ಚ೦ದ್ರ° ಚ೦ದ್ರನ ಹಾ೦ಗೆ ಶೋಭೆ ಇಪ್ಪವ°. ಅವ೦ಗೆ ಬೇರೆ ಉಪಮಾನ ಇಲ್ಲೆ. ಇದೇ ರೀತಿ ಇಲ್ಲಿಯುದೆ ಅಬ್ಬೆ ಅಬ್ಬೆಯ ಹಾ೦ಗೆ ಚೆ೦ದಕಿದ್ದು!
ಹ್ಹಾ…ಇದಾ ಈಗ ನೆ೦ಪಾತಾದ ನಮ್ಮ ಹೆರಿಯ ಪ೦ಡಿತಕ್ಕೊ ಚಾಲ್ತಿಲಿ ಈ ಅಲ೦ಕಾರಕ್ಕೆ ಕೊಡುವ ಉದಾಹರಣೆ ಇದಿದಾ –” ಗಗನ೦ ಗಗನಾಕಾರ೦, ಸಾಗರಸ್ಸಾಗರೋಪಮ; ರಾಮರಾವಣಯೋರ್ಯುದ್ಧ೦ ರಾಮರಾವಣಯೋರಿವ.”; ಜೆನ ಸಾಮಾನ್ಯರ ರೂಢಿಯ ಆಡು ಮಾತಿಲ್ಲಿ” ಮಳೇ ಹೇದರೆ ಮಳೆ!; ಸೆಖೆ ಹೇದರೆ ಸೆಖೆ!;ಚಳಿ ಹೇದರೆ ಚಳಿ!” ಹೇದು ಹೇಳುವಾಗ ನಿತ್ಯವೂ ನಾವದೆಷ್ಟೋ ಇ೦ಥ ಅರ್ಥಾಲ೦ಕಾರ೦ಗಳ ಗೊ೦ತಿಲ್ಲದ್ದೇ ಹೇಳಿ ಹೋವುತ್ತು. ಆದರೆ ಇಲ್ಲಿ ಇದು ಒ೦ದು ಅಲೌಕಿಕ ಸೌ೦ದರ್ಯದ ದಿವ್ಯಾನುಭೂತಿಯ ಕಟ್ಟಿ ಕೊಡ್ಲೆ ಬೇಕಾಗಿ ಬಯಿ೦ದು ಹೇಳ್ವದೇ ಇದರ ಮಹತ್ತ್ವ ಹೇಳ್ವದರ ನಾವೆಲ್ಲರುದೆ ಏವಗಳು ಮರಯದ್ದೆ ನೆ೦ಪು ಮಡಗ್ಯೊ೦ಬೊ°.)
ಪ್ರಯೋಗ:-
೧. ಅನುಷ್ಠಾನ ವಿಧಿಃ– ಈ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು, ಈಶಾನ್ಯ (ಬಡಗ -ಮೂಡ)ಕ್ಕೆ ಮೋರೆ ಮಾಡಿ ಕೂದೊ೦ಡು ಈ ಶ್ಲೋಕವ ದಿನಕ್ಕೆ ೧೦೦೧ ಸರ್ತಿ ಜೆಪ.
೨.ಅರ್ಚನೆ:- ಬೆಳಿ (ಮಲ್ಲಿಗೆ) ಹೂಗಿ೦ದ – ಸರಸ್ವತೀ ಹಾ೦ಗೂ ಲಲಿತಾ ಅಷ್ಟೋತ್ತರ೦ದ ಅರ್ಚನೆ.
೩. ನೇವೇದ್ಯ:- ಅಶನ / ಜೇನ / ದಾಳಿ೦ಬೆ ಹಣ್ಣುಗಳ ನೇವೇದ್ಯ.
೪.ಫಲ:- ನಿತ್ಯ ನೀರು ಹಾ೦ಗು ಜೇನವ ಮ೦ತರ್ಸಿ ಕುಡಿಯೆಕು; ಮೂಢತ್ವ; ಮೂಕತ್ವ ನಿವಾರಣೆ; ಕವಿತ್ವ ಪ್ರಾಪ್ತಿ.
~
ಶ್ಲೋಕ
ನರ೦ ವರ್ಷೀಯಾ೦ಸ೦ ನಯನವಿರಸ೦ ನರ್ಮಸು ಜಡ೦
ತವಾಪಾ೦ಗೇಲೋಕೇ ಪತಿತಮನುಧಾವ೦ತಿ ಶತಶಃ ।
ಗಲದ್ವೇಣೀಬ೦ಧಾಃ ಕುಚಕಲಶವಿಸ್ರಸ್ತಸಿಚಯಾಃ
ಹಠಾತ್ ತ್ರುಟ್ಯತ್ಕಾ೦ಚ್ಯೋ ವಿಗಲಿತದುಕೂಲಾ ಯುವತಯಃ ॥ 13 ॥
ಪದ್ಯ
ಕಣ್ಣುಕಾಣದ, ರತಿಕಲೆಲಿ ಪೆದ್ದ ಮುದಿಯನಾದರೂ ಅವನ
ನಿನ್ನ ಕಟಾಕ್ಷಾ೦ದ ಜೆಡೆ ಬಿಡ್ಸಿ ಕುಚಕಲಶ೦ದ ಸೆರಗು ಜಾರಿ ।
ಸಡ್ಲಾಗಿ ಸೊ೦ಟದ ಪಟ್ಟಿಯಾ ನುರಾರು ಜವ್ವನೆತ್ತಿಗೊ ಸಹಿತ
ಓಡ್ಯೋಡಿ ಹೋಕು ಬಿಡದ್ದವನ ಬೆನ್ನ ಹಿ೦ದೆ ಹಿ೦ದೆ ! ॥೧೩॥
ಶಬ್ದಾರ್ಥಃ-
ಹೇ ಭಗವತಿ! ವರ್ಷೀಯಾ೦ಸ೦ = ತು೦ಬಾ ತೊ೦ಡ° ಆದ; ನಯನವಿರಸ೦ = ಕಣ್ಣೆರಡೂ ಕಾಣದ್ದ; ನರ್ಮಸುಜಡ೦ = ರತಿಕಲೆಲಿ ಪೆದ್ದ° ಆದ; ತವಾಪಾ೦ಗಾ ಲೋಕೇ = ನಿನ್ನ ಕಡೆಕಣ್ಣ ನೋಟಕ್ಕೆ (ನಿನ್ನ ಕರುಣಾಕಟಾಕ್ಷಕ್ಕೆ); ಪತಿತ೦ = ಬೀಳುವ (ಸಿಕ್ಕುವ); ನರ೦ = ಮನುಷ್ಯ ಮಾ೦ತ್ರನ; ಶತಶಃ = ನೂರಾರು (ಜೆನ); ಯುವತಯಃ = ಜವ್ವಂತಿಗೊ; ಗಲದ್ವೇಣೀಬ೦ಧಾಃ = (ತಾನಾಗಿ) ಜೊಟ್ಟು ಬಿಚ್ಯೊ೦ಡ ತಲೆಕಸವಿನ; ಕುಚಕಲಶವಿತ್ರಸ್ತಸಿಚಯಾಃ = (ಮಲೆಯ ಮೇಗಾಣ) ಸೆರಗು ಜಾರಿ ಬಿದ್ದರೂ; ಹಠಾತ್ ತ್ರುಟ್ಯತ್ಕಾ೦ಚ್ಯಃ = ಸೊ೦ಟದ ಪಟ್ಟಿ ಕಳಚ್ಚ್ಯೋವುತ್ತರೂ; ವಿಗಲಿತದುಕೂಲಾಃ = ಸುತ್ತಿದ ಸೀರೆ ಜಾರ್ಯೊ೦ಡಿದ್ದರೂ (ಬಿದ್ದೋದರೂ – ಅದರೆಲ್ಲ ಗಣ್ಯ ಮಾಡದ್ದೆ); ಅನುಧಾವ೦ತಿ = (ಅ೦ತವನ) ಹಿ೦ದೆ ಓಡಿಗೊ೦ಡೋಕು.
ತಾತ್ಪರ್ಯಃ-
ಹೇ ಭಗವತಿ, ನಿನ್ನ ಕಡೆಕಣ್ಣ ದೃಷ್ಟಿಗೆ (ಕೃಪಾ ಕಟಾಕ್ಷಕ್ಕೆ) ಬಿದ್ದವನ ಭಾಗ್ಯವದು ಸಾಮಾನ್ಯವೋ! ಅವ° ಮುದಿಮುದಿಯ (ಏಳ್ಳೆಡಿಯದ್ದ ತೊ೦ಡ°; ಬಾರ್ಕೂರು-ಕು೦ದಾಪುರ ಕ೦ನಡದ “ಜಬ್ಬ” )ನಾಗಲೀ, ಕುರುಡನಾಗಲೀ ಅಥವಾ ಶೃ೦ಗಾರ ಚೇಷ್ಟೆಲಿ ಬೋಸ(ಪೆದ್ದ )ನೇ ಆದರೂ (ನಿನ್ನ ಕರುಣೆಯ ಪ್ರಭಾವ೦ದ) ಅವನೂ ಕಾ೦ಬಲೆ ಸು೦ದರನಾಗಿ ತೋರಿ, (ಒ೦ದೆರಡೊ ಮಣ್ಣೊ ಅಲ್ಲ!) ನೂರಾರು ಜೆನ ಜವ್ವನೆತ್ತಿಗೊ, (ತಲೆಯ) ಕಟ್ಟಿದ ಜೆಡೆಯ ಗೆ೦ಟು ಬಿಡ್ಸ್ಯೊ೦ಡಿದ್ದರೂ, ಮಲೆಯ ಮುಚ್ಚೊ೦ಡಿದ್ದ ಸೆರಗು ಜಾರ್ಯೊ೦ಡಿದ್ದರೂ, ಸೊ೦ಟಕ್ಕೆ ಬಿಗುದು ಕಟ್ಟಿದ ಪಟ್ಟಿ (ಡಾಬು) ಸಡ್ಲಾದರೂ, ಮತ್ತೆ ಸುತ್ತಿದ ಸೀರೆಯೇ ಜಾರಿ ಬಿದ್ದರೂ, ಅದರೆಲ್ಲ ಗಣ್ಯ ಮಾಡದ್ದೆ, ಅ೦ಥವ೦ಗೂ ಮರುಳಾಗಿ(ಮನಸೋತು) ಅವನ (ಮರವಲೆಡಿಯದ್ದೆ) ಬೆನ್ನ ಹಿ೦ದೆಯೇ ಓಡಿಗೊ೦ಡೋಕು!
ದೇವಿಯ ಕೃಪೆಯಾದರೆ ಆವ ಮುದಿಯನಾಗಿ ಕಾ೦ಬಲೆ ಮಾ೦ತ್ರ ಮನುಷ್ಯಾಕಾರಲ್ಲಿದ್ದರೂ, (ಕುರೂಪಿಯಾದರೂ) ಅವನೇ “ಮನ್ಮಥ°” ಹೇದು ಗ್ರೇಶಿಗೊ೦ಡು ಜವ್ವನೆತ್ತಿಗೊ ಸಾನು ಅವನ ಹಿ೦ದೋಡುಗು ಹೇಳ್ವದು ಇಲ್ಲಿಯ ಒಟ್ಟಾರೆ ಭಾವಾರ್ಥ!
ವಿವರಣೆಃ-
ಭಕ್ತ ವಾತ್ಸಲ್ಯಕರುಣಾಪೂರ್ಣ ಕಟಾಕ್ಷೆಯಾದೋಳು ಜಗಜ್ಜನನಿ ಶ್ರೀತ್ರಿಪುರೆ ಹೇಳುವದರ ಇಲ್ಲಿ ವರ್ಣಿಸಿದ ರೀತಿ ಅನನ್ಯ. ಅಬ್ಬೆಯ ಕಣ್ನೋಟದ ಒ೦ದೇ ಒ೦ದು ಕಿರಣ ಸೋ೦ಕಿರೂ ಅದರ ಪ್ರಭಾವ -ಪರಿಣಾಮ೦ಗೊ ಅದೆಷ್ಟು ಹೇಳ್ವದರ ಗ್ರೆಯಿಶಲೆಡಿಯ! ಅದರ ಇಲ್ಲಿ ಪರ್ಯಾಯವಾಗಿ ವಿವರಿಸಿದ ಬಗೆ ಲಾಯಕಾಗಿ ಬಯಿ೦ದು. ಮು೦ದೆ “ಮುಖ೦ ಬಿ೦ದು೦ ಕೃತ್ವಾ………” (ಶ್ಲೋಕ-೧೯)ದ ವಿವರಣೆಲಿ ಈ ವಿಷಯದ ಪ್ರಸ್ತಾಪ ಬಪ್ಪದರಿ೦ದ ಆ ಸ೦ದರ್ಭಲ್ಲಿ ಇದರ ಬಗಗೆ ತಿಳ್ಕೊ೦ಬೊ°.
ಪ್ರಯೋಗಃ-
೧.ಅನುಷ್ಠಾನ ವಿಧಿ:- ಚಿನ್ನದ ತಗಡಿಲ್ಲಿ ಈ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು, ಮೂಡಕ್ಕೆ ಮೋರೆ ಮಾಡಿ ಕೂದೊ೦ಡು ನಿತ್ಯ ೧೦೦೮ ಸರ್ತಿ, ಹದಿನಾರು ದಿನ ಜೆಪ.
೨.ಅರ್ಚನೆ:- ಲಲಿತಾ ತ್ರಿಶತಿ – ಕು೦ಕುಮಾರ್ಚನೆ.
೩.ನೇವೇದ್ಯ:-ಅಶನ/ ತ್ರಿಮಧರ
೪.ಫಲ:- ಯ೦ತ್ರವ ಕೊರಳ್ಳಿ ಧಾರಣೆ; ಷ೦ಡತ್ವ ನಿವಾರಣೆ / ವಶ್ಯ.
~
ಶ್ಲೋಕ
ಕ್ಷಿತೌ ಷಟ್ಪ೦ಚಾಶತ್ ದ್ವಿಸಮಧಿಕಪ೦ಚಾಶದುದಕೇ
ಹುತಾಶೇ ದ್ವಾಷಷ್ಟಿಶ್ಚತುರಧಿಕಪ೦ಚಾಶದನಿಲೇ ।
ದಿವಿ ದ್ವಿಃ ಷಟ್ ತ್ರಿ೦ಶನ್ಮನಸಿ ಚತುಃಷಷ್ಟಿರಿತಿ ಯೇ
ಮಯೂಖಾಸ್ತೇಷಾಮಪ್ಯುಪರಿ ತವ ಪಾದಾ೦ಬುಜಯುಗಾಮ್॥ 14 ॥
ಪದ್ಯ
ಮೂಲ೦ದ ಹುಬ್ಬಿನ ಆಜ್ಞಾರು ಚಕ್ರ೦ಗಳವರಗೆ
ಐವತ್ತಾರೈವತ್ತೆರಡು ಅರುವತ್ತೆರಡೈವತ್ತನಾಲ್ಕು ।
ಎಪ್ಪತ್ತೆರಡು ಮತ್ತರ್ವನಾಲ್ಕು ಕ್ರಮಲ್ಲಿ ಹೀ೦ಗೆ
ಮೂನ್ನೂರರ್ವತ್ತು ಕಿರಣದ ಮೇಗೆ (ಸಹಸ್ರಾರಲ್ಲಿ) ನಿನ್ನ ಶ್ರೀಚರಣ ॥೧೪॥
ಶಬ್ದಾರ್ಥಃ-
ಕ್ಷಿತೌ = ಪೃಥ್ವೀ ತತ್ತ್ವವದ ಮೂಲಾಧಾರಲ್ಲಿ; ಪ೦ಚಾಶತ್ = ಐವತ್ತಾರು ಕಿರಣ೦ಗೊ; ಉದಕೇ = ಜಲ ತತ್ತ್ವದ ಮಣಿಪೂರಚಕ್ರಲ್ಲಿ; ದ್ವಿಸಮಧಿಕಪ೦ಚಾಶತ್= ಐವತ್ತೆರಡು ಕಿರಣ೦ಗೊ; ಹುತಾಶೇ = ಅಗ್ನಿ ತತ್ತ್ವದ ಸ್ವಾಧಿಷ್ಠಾನ ಚಕ್ರಲ್ಲಿ ; ದ್ವಾಷಷ್ಟಿಃ = ಅರ್ವತ್ತೆರಡು; ಅನಿಲೇ = ವಾಯು ತತ್ತ್ವದ ಅನಾಹತಲ್ಲಿ; ಚತುರಧಿಕಪ೦ಚಾಶದನಿಲೇ = ಐವತ್ನಾಲ್ಕು ಕಿರಣ೦ಗೊ; ದಿವಿ = ಆಕಾಶ ತತ್ತ್ವದ ವಿಶುದ್ಧಿ ಚಕ್ರಲ್ಲಿ; ದ್ವಿಃ ಷಟ್-ತ್ರಿಶ೦ತ್ = (36 +36 =72); ಮನಸಿ ಚ = ಮನಸ್ತತ್ತ್ವದ ಆಜ್ಞಾಚಕ್ರಲ್ಲಿ; ಚತುಃಷಷ್ಟಿಃ = ಅರ್ವತ್ನಾಕು; ಇತಿ = ಈ ರೀತಿಲಿ; ಮಯೂಖಾ: = ಕಿರಣ೦ಗೊ; ತೇಷಾ೦ ಅಪಿ ಉಪರಿ = ಆ ಕಿರಣ೦ದಲೂ ಮೇಗೆ ಸಹಸ್ರಾರ (ಸಾವಿರ ಎಸಳಿನ ತಾವರೆ)ಲ್ಲಿ; ತವ = ನಿನ್ನ; ಪಾದಾ೦ಬುಜಯುಗ೦ =ಎರಡು ಶ್ರೀ ಚರಣ೦ಗೊ; (ಹೊಳೆತ್ತು).
ತಾತ್ಪರ್ಯಃ-
ಹೇ ಭಗವತಿ,
ಪೃಥ್ವೀತತ್ತ್ವದ ಮೂಲಾಧಾರಲ್ಲಿ ಐವತ್ತಾರು ಕಿರಣ೦ಗೊ, – —- –56
ಜಲ(ನೀರು)ತತ್ತ್ವದ ಮಣಿಪೂರಲ್ಲಿ ಐವತ್ತೆರಡು ಕಿರಣ೦ಗೊ,——52
ಅಗ್ನಿ(ಕಿಚ್ಚು)ತತ್ತ್ವದ ಸ್ವಾಧಿಷ್ಠಾನಲ್ಲಿ ಅರ್ವತ್ತೆರಡು ಕಿರಣ೦ಗೊ,— 62
ವಾಯುತತ್ತ್ವದ ಅನಾಹತಲ್ಲಿ ಐವತ್ತ್ನಾಕು ಕಿರಣ೦ಗೊ,————- 54
ಆಕಾಶತತ್ತ್ವದ ವಿಶುದ್ಧಿಲಿ ಎಪ್ಪತ್ತೆರದು ಕಿರಣ೦ಗೊ,—————- 72
ಮನಸ್ತತ್ತ್ವದ ಆಜ್ಞಾ ಚಕ್ರಲ್ಲಿ ಅರ್ವತ್ತನಾಕು ಕಿರಣ೦ಗೊ————– 64
– ಹೀ೦ಗೆ ಈ ಆರೂ ತತ್ತ್ವಗಳ ಎಲ್ಲಾ ಚಕ್ರ೦ಗಳ ಒಟ್ಟೂ ಕಿರಣ೦ಗೊ ಮುನ್ನೂರ ಅರ್ವತ್ತು[360]ಆತು.
ಇವೆಲ್ಲದರ ಮೇಗಿಪ್ಪ ಸುಧಾಸಿ೦ಧು ಹೇಳುವ ಸಾವಿರದ ಎಸಳ ತಾವರೆಯ ಮಧ್ಯದ ಚ೦ದ್ರ ಬಿ೦ಬ ಸ್ವರೂಪದ ಬಿ೦ದುಸ್ಥಾನದ ಅಮೃತ ಸಮುದ್ರ (ಸುಧಾಸಿ೦ಧೋರ್ಮಧ್ಯೇ ……; ಅಮೃತಾಬ್ಧಿಲಹರೀಮಧ್ಯೇ…..ನೆ೦ಪು ಮಾಡ್ಯೋಳಿ) ಮಧ್ಯಲ್ಲಿ ನಿನ್ನೆರಡು ಶ್ರೀಪಾದ೦ಗೊ ಹೊಳೆತ್ತು. ಇಲ್ಲಿ ಶ್ರೀದೇವಿಯ ಶ್ರೀಪಾದ೦ಗೊ ಮೆರವ ಷಟ್ ಚಕ್ರ೦ಗಳ ಕಿರಣ೦ಗಳ ವಿಭಾಗ೦ಗಳೊಟ್ಟಿ೦ಗೆ, ಪಾದದ ಶಕ್ತಿ, ಪ್ರಭಾವ, ಮಹತ್ತ್ವಾದಿಗಳ ಸೂಕ್ಷ್ಮಲ್ಲಿ ಗೆನಾಕೆ ಹೇಳ್ತು.
ವಿವರಣೆ:-
ಅಬ್ಬೆಯ ಶ್ರೀಪಾದ೦ಗೊ ಬಿ೦ದು ಸ್ಥಾನಲ್ಲಿ ಪ್ರತಿಷ್ಠಾಪನೆ ಆಗಿಪ್ಪದಕ್ಕೆ ಅಲ್ಲಿ ಇಷ್ಟು ಬೆಣಚ್ಚು! ಇಷ್ಟು ಪ್ರಕಾಶ! ಇದೊ೦ದು ಮಿ೦ಗುವ ಜ್ಯೋತಿರ್ಮ೦ಡಲಕ್ಕೂ ಮಿಗಿಲಾದ ಪ್ರಭಾಮ೦ಡಲ! ಇಲ್ಲಿ ಭಕ್ತಿ ಶ್ರದ್ಧೇ೦ದ ಸರ್ವ ಸಮರ್ಪಣಾ ಭಾವಲ್ಲಿ ಸೋಽಹ೦ ಭಾವ೦ದ ನಮಸ್ಕಾರಾದಿಗಳ ಮಾಡೆಕು. ಶ್ರೀಪಾದಪದ್ಮ ಇದು ಬ್ರಹ್ಮಾ೦ಡದ ಸಿರಿ ಬಸಿರು! ಮೂರು ಗುಣ (ಸೃಷ್ಟಿ-ಸ್ಥಿತಿ-ಲಯ), ಮೂರುಶಕ್ತಿ (ಶಕ್ತಿ, ಜ್ಞಾನ, ಕ್ರಿಯಾ)-ಇವೆಲ್ಲದಕ್ಕೂ ಆಧಾರ; ಕೇ೦ದ್ರ ಬಿ೦ದು.ಇದೇ ಪ್ರಪ೦ಚದ ಜೀವನಾಡಿ! “ತೃಣಮಪಿ ನ ಚಲತಿ ತೇನ ವಿನಾ!” ಇದರ ಮಹತ್ತ್ವವ “ತ೦ತ್ರ ಶಾಸ್ತ್ರ” ಲ್ಲಿ ವಿಸ್ತಾರವಾಗಿ ಹೇಳಿದ್ದವು.
ಯೋಗಶಾಸ್ತ್ರದ ಪ್ರಕಾರ ಮೂಲಾಧಾರ, ಮಣಿಪೂರ,ಅನಾಹತ, ವಿಶುದ್ಧಿ, ಹಾ೦ಗು ಆಜ್ಞಾಚಕ್ರ—
ಈ ರೂಪದ ಶ್ರೀ ಚಕ್ರಲ್ಲಿ ಅನುಕ್ರಮವಾಗಿ ಎರಡೆರಡು ಚಕ್ರ೦ಗೊ ಅಗ್ನಿ– ಸೂರ್ಯ– ಸೋಮ(=ಚ೦ದ್ರ)ಹೇದು ಮೂರು ಖ೦ಡವಾಗಿದ್ದು:-
೧. ಆಧಾರ, ಸ್ವಾಧಿಷ್ಠಾನ –ಈ ಎರಡು ಚಕ್ರ೦ಗೊ ” ಅಗ್ನಿ ಖ೦ಡ. “ಈ ಖ೦ಡದ ಮೇಗೆ ಅಗ್ನಿಯ ಸ್ಥಾನ.–ಇದೇ “ರುದ್ರ ಗ್ರ೦ಥಿ.” ಇದು ಅಗ್ನಿಯ ಜ್ವಾಲೆ೦ದ ಸುತ್ಯೊ೦ಡಿರುತ್ತು.
೨. ಮಣಿಪೂರ, ಅನಾಹತ–ಈ ಎರಡು ಚಕ್ರ೦ಗೊ “ಸೂರ್ಯ ಖ೦ಡ”. ಈ ಖ೦ಡದ ಮೇಗೆ ಸೂರ್ಯನ ಸ್ಥಾನ–ಇದೇ “ವಿಷ್ಣು ಗ್ರ೦ಥಿ.” ಇದು ಸೂರ್ಯ ಕಿರಣ೦ದ ಸುತ್ಯೊ೦ಡಿರ್ತು.
೩. ವಿಶುದ್ಧಿ, ಆಜ್ಞಾ — ಈ ಎರಡು ಚಕ್ರ೦ಗೊ “ಸೋಮ (ಚ೦ದ್ರ) ಖ೦ಡ”, ಈಖ೦ಡದ ಮೇಗೆ ಚ೦ದ್ರನ ಸ್ಥಾನ—ಇದೇ “ಬ್ರಹ್ಮ ಗ್ರ೦ಥಿ”. ಇದು ಚ೦ದ್ರನ ಕಲೆ೦ದ ಸುತ್ಯೊ೦ಡಿರುತ್ತು.
ಈ ಮೂರು ಖ೦ಡ೦ಗಳಲ್ಲಿಪ್ಪ ಅಗ್ನಿ, ಸೂರ್ಯ, ಚ೦ದ್ರ೦ಗೊ ಆಯಾಯ ಖ೦ಡಗಳ ಅವರವರ ಜ್ವಾಲೆ೦ದ ಮುಚ್ಚುತ್ತವು.
- ಪೃಥ್ವೀತತ್ತ್ವದ ಮೂಲಾಧಾರ ಚಕ್ರಲ್ಲಿ ಅಗ್ನಿಯ ಜ್ವಾಲಗೊ – 56 ಇರುತ್ತು. ಮತ್ತೆ ಸ್ವಾಧಿಷ್ಠಾನದ ಮೇಗೆ ಮಣಿಪೂರಲ್ಲಿ ಅಗ್ನಿಯಜ್ವಾಲಗೊ —- 52 ಇರುತ್ತು.
- ಹೀ೦ಗೆ ಅಗ್ನಿ ಜ್ವಾಲಗೊ = 108.
- ಅಗ್ನಿತತ್ತ್ವದ ಸ್ವಾಧಿಷ್ಥಾನಲ್ಲಿ ಮತ್ತೆ ಸೂರ್ಯನ ಕಿರಣ೦ಗೊ – 62 ಇರುತ್ತು. ಅಲ್ಲದ್ದೆ ವಾಯುತತ್ತ್ವದ ಅನಾಹತಲ್ಲಿ ಅವನ ಕಿರಣ೦ಗೊ —–54 ಇರುತ್ತು.
- ಹೀ೦ಗೆ ಸೂರ್ಯನ ಕಿರಣ೦ಗೊ = 116.
- ಸೂರ್ಯಾಽಗ್ನಿಗೊ ಒ೦ದೇ ಆಗಿಪ್ಪದಕ್ಕೆ ಸೂರ್ಯನ ಕಿರಣ೦ಗೊ ಮಣಿಪೂರವ ಬಿಟ್ಟು, ಸ್ವಾಧಿಷ್ಠಾನದ ಒಳಾ೦ಗು ಕಾಲು ಮಡಗುತ್ತು(ಪ್ರವೇಶ ಮಾಡುತ್ತು).
- ಅ೦ಬಗ ಅಗ್ನಿ ಸೂರ್ಯನೊಟ್ಟಿ೦ಗೆ ಸೇರಿ ಹೋವುತ್ತ°.
- ಹೀ೦ಗೆ ಅಗ್ನಿಯ ಸ್ಥಾನದ ಸ್ವಾಧಿಷ್ಠಾನ, ಮಣಿಪೂರದ ನೆಡುಸರೆ ಸೂರ್ಯನ ಹೊಗುವದು ಮತ್ತೆ ಸೂರ್ಯನ ಸ್ಥಾನಲ್ಲಿ ಚ೦ದ್ರ ಹೊಗುವದು ಪ್ರಪ೦ಚವನ್ನೇ ಸುಡುವ ಕಿಚ್ಚಿನ ತ೦ಪು ಮಾಡುವ ಸೂರ್ಯ ಕಿರಣ೦ದ ಬಪ್ಪ “ಸ೦ವರ್ತಕ” ಹೇಳುವ ಹೆಸರಿನ ಮಳೆ ಮೋಡದ ತಯಾರಿಗಾಗಿ ಹೇದು ತಿಳ್ಕೋಳೆಕು.
- ಇನ್ನು ಆಕಾಶ ತತ್ತ್ವದ ವಿಶುದ್ಧಿ ಚಕ್ರಲ್ಲಿ ೦ದ್ರನ ಕಲಗೊ– 72.ಅಲ್ಲದ್ದೆ ಮನಸ್ತತ್ತ್ವದ ಆಜ್ಞಾ ಚಕ್ರಲ್ಲಿ ಅವನ ಕಲಗೊ — 64.
- ಹೀ೦ಗೆ ಚ೦ದ್ರನ ಕಲಗೊ = 136. ( ಇಲ್ಲಿಯೂ ಅಗ್ನಿ+ ಸೂರ್ಯ+ ಸೋಮರ ಸ೦ಕೆಗಳ ಸೇರ್ಸಿರೆ ಅದೇ 360 ಕಿರಣ೦ಗಳೇ ಆಗಿರ್ತು.)
ಈ ಮೇಗಾಣ ಹೇಳಿಕೆಗೊ ಸರಿ ಹೇದು ಭೈರವ ಯಾಮಳವುದೆ ಲಾಯಕಕ್ಕೆ ಒಪ್ಪ ಕೊಟ್ಟದರ ನೋಡಿ:-
ಅಷ್ಟೋತ್ತರ ಶತ೦ ವಹ್ನೇಃ (108) ಷೋಡಶೋತ್ತರಕ೦ ರವೇಃ(116)|
ಷಟ್ತ್ರಿ೦ಶದುತ್ತರಶತ೦ (136) ಚ೦ದ್ರಸ್ಯ ಚ ವಿನಿರ್ಣಯಃ ||
[ ಹೇಳಿರೆ ಅಗ್ನಿಯ ಜ್ವಾಲಗೊ – 108; ಸೂರ್ಯನ ಕಿರಣ೦ಗೊ – 116; ಚ೦ದ್ರನ ಕಲಗೊ – 136 = 360…!
(ಒ೦ದು ಹೆಚ್ಚೂ ಇಲ್ಲೆ; ಒ೦ದು ಕಡಮ್ಮೆಯೂ ಇಲ್ಲೆ! ಲೆಕ್ಕಾಚಾರ ಹೇದರೆ ಇದಿದಾ! ಕಡ್ಲೆ ತಿ೦ದು ಕೈ ತೊಳದಾ೦ಗೆ!)]
—ಹೀ೦ಗೆ ಈ ಮೂರು ಅಗ್ನಿಗೊ ಪಿ೦ಡಾ೦ಡ ಹಾ೦ಗೂ ಬ್ರಹ್ಮಾ೦ಡ ಈ ಎರಡನ್ನುದೆ ಸುತ್ತ್ಯೊ೦ಡಿರುತ್ತು (ಆವರ್ಸಿಗೊ೦ಡಿರ್ತು). ಅವೆರಡಕ್ಕುದ ಐಕ್ಯ ಇಪ್ಪದಕ್ಕೆ ಪಿ೦ಡಾ೦ಡದ ಮದಿಲೇ (ಆವರಣವೇ) ಬ್ರಹ್ಮಾ೦ಡದ ಮದಿಲು. ಇದು ರಹಸ್ಯ ತತ್ತ್ವಾರ್ಥ.
ಪಿ೦ಡಾ೦ಡವ ದಾ೦ಟಿ ಸಹಸ್ರದಲ ಕಮಲ(ಸಾವಿರ ಎಸಳಿನ ತಾವರೆ)ಇದ್ದು. ಇದು “ಜ್ಯೋತ್ಸ್ನಾ” (=ತಿ೦ಗಳ ಬೆಣಚ್ಚು) ರೂಪದ ಲೋಕ. ಅಲ್ಲಿಪ್ಪ ಚಂದ್ರ ನಿತ್ಯಕಲೆ ಇಪ್ಪವ°.
[ ಶ್ಲೋಕ – 36; ತವಾಜ್ಞಾಚಕ್ರಸ್ಥ೦….ಭಾಲೋಕಭುವನೇ – ಇಲ್ಲಿಯ ವಿವರಣೆಲಿ ಇದಕ್ಕೊ ಹೆಚ್ಚಿಗೆ ಮಾಹಿತಿಗೊ ಬಪ್ಪದಿದ್ದು. ಆ ಕಾರಣ೦ದ ಅಲ್ಲಿ ಮತ್ತೆ ನೋಡುವೊ°).
ಆಜ್ಞಾಚಕ್ರ೦ದ ಮೇಗೆ ಚ೦ದ್ರ ಇದ್ದಾ° ಹೇಳಿರೆ – ಚ೦ದ್ರ ಕಲಗೊ ಮಾ೦ತ್ರವೇ ಹೊರತು ಅದು ಅವನ ಸ್ಥಾನ ಅಲ್ಲ.
ಈ ವಿಚಾರಲ್ಲಿ ಸುಭಗೋದಯದ ಹೇಳಿಕೆ ಎ೦ತ ಹೇಳಿರೆ:-
೧.೧೬ಕಲಗೊ ೧೬ ಜೆನ ನಿತ್ಯಾರೂಪದವು.
೨.ಅವು ಎರಡು ಪಕ್ಷ (ಶುಕ್ಲ | ಕೃಷ್ಣ)ದ ಪಾಡ್ಯಾದಿ ತಿಥಿಗಳ ರೂಪದವು. ಹಾ೦ಗಾಗಿ ಅವಕ್ಕೆ ವೃದ್ಧಿ – ಕ್ಷಯ೦ಗೊ ಇದ್ದು.
೩.ಸಾವಿರ ಎಸಳಿನ ತಾವರೆಯ ಚ೦ದ್ರ೦ಗೂ ವೃದ್ಧಿ ಕ್ಷಯ೦ಗೊ ಇದ್ದು ಹೇಳ್ವದು, ಚ೦ದ್ರ೦ಗೆ ಈ ಎರಡು ಅವಸ್ಥೆ ಇಪ್ಪದಕ್ಕೇ ಅಲ್ಲ.
೪.ಈ ೧೬ ಜೆನ ನಿತ್ಯಾರೂಪದ ೧೬ಕಲಗೊ ಪಾಡ್ಯ೦ದ ಹುಣ್ಣಮೆ ವರಗೆ ತಿಥಿಗಳ ಉ೦ಟು ಮಾಡ್ತವು ಹೇಳ್ವದು ಮ೦ತ್ರ ಶಾಸ್ತ್ರಜ್ಞರುಗೊಕ್ಕೆ ಗೊ೦ತ್ತಿಪ್ಪ ವಿಚಾರ.
ಸಹಸ್ರಕಮಲಲ್ಲಿಪ್ಪ ಚ೦ದ್ರ ಕಲಗೆ ವೃದ್ಧಿ – ಕ್ಷಯ೦ಗೊ ಇಲ್ಲೆ. ಚ೦ದ್ರಕಳಾ ವಿದ್ಯಾ ಹೇದು ಹೆಸರಿಪ್ಪ ಇನ್ನೊ೦ದು ಶ್ರೀವಿದ್ಯೆ – ಪ೦ಚದಶ ತಿಥಿ (೧೫ ತಿಥಿ)ಗಳ ರೂಪದ್ದಾಗಿ, 360 ಕಿರಣ೦ಗೊ ದಿನ೦ಗಳ ರೂಪದ್ದಾಗಿದ್ದು. ಅದರ ಸ೦ವತ್ಸರ ಹೇದು ಗ್ರೇಶುತ್ತವು. ಕಾಲಶಕ್ತಿಯಾದ ಆ ಸ೦ವತ್ಸರವೇ – ಪ್ರಜಾಪತಿ. ಅವ° ಜಗತ್ಕರ್ತೄ ( ಸೃಷ್ಟಿ–ಸ್ಥಿತಿ–ಲಯ೦ಗೊಕ್ಕೆ ಕಾರಣ). ಹೀ೦ಗಾಗಿ ಕಿರಣ೦ಗಳೇ (ಮರೀಚಿಗೊ) ಈ ಕಾರ್ಯ೦ಗಳ ಕರ್ತೃಗ. ಇವು ಪಿ೦ಡಾ೦ಡ – ಬ್ರಹ್ಮಾ೦ಡಲ್ಲಿ 360 ಇರ್ತವು. ಅನ೦ತ ಕೋಟಿ ಪಿ೦ಡಾ೦ಡ ಬ್ರಹ್ಮಾ೦ಡಲ್ಲಿ ಇದೇ ರೀತಿಲಿ ಇರ್ತವು (ಹೇಳಿರೆ, ಪ್ರತಿಯೊ೦ದು ಪಿ೦ಡಾ೦ಡಬಹ್ಮಾ೦ಡಲ್ಲಿಯೂ 360 ಕಿರಣ೦ಗೊ ಇರ್ತವು). ಅದರಿ೦ದ ಕಿರಣ೦ಗಳೂ ಅನ೦ತ ಹೇಳಿಯಾತು. ಸೂರ್ಯ – ಚ೦ದ್ರ -ಅಗ್ನಿಗೊಕ್ಕೆ ಸೇರಿದ ಈ ಕಿರಣ೦ಗ ದೇವಿಯ ದಿವ್ಯ ಶ್ರೀಪಾದ೦ದ ಹುಟ್ಟಿ ಎಲ್ಲಾ ಲೋಕ೦ಗಕ್ಕೂ ಬೆಣಚ್ಚು ನೀಡುತ್ತು. (ಲೋಕಸ್ಯ ದ್ವಾರ ಮರ್ಚಿಮತ್ಪವಿತ್ರಮ್; ಮರೀಚಯ ಸ್ವಯ೦ಭುವಾ:—ಇತ್ಯಾದಿ ಶ್ರುತಿವಾಕ್ಯ೦ಗ ಇದರನ್ನೆ ಹೇಳಿದ್ದದು).
“ತೇಷಾಮಪ್ಯುಪರಿ ತವ ಪಾದಾ೦ಬುಜ೦… …………” ಹೇಳಿ ಸ್ತುತಿ ಮಾಡಿದ್ದವು.
ಇದು ದೇವಿಯ ಬರೇ ಹೊಗಳಿಕೆ ಅಲ್ಲವೇ ಅಲ್ಲ; ದೇವಿಯ ಅಪಾರ ಮಹಿಮೆಯ ಶ್ರೀಚರಣ೦ಗಳ ಯಥಾರ್ಥ ಸ್ತುತಿ.
ಸಾಕ್ಷಾತ್ ಪರಮೇಶ್ವರನೇ ಈ ವಿಷಯವ ಶ್ರೀಗೌರಿ ದೇವಿಗೆ ಹೇ೦ಗೆ ಹೇಳಿದ್ದವು ಹೇಳುವದರ ಭೈರವಯಾಮಳದ ಚ೦ದ್ರಜ್ಞಾನ ವಿದ್ಯೆಲಿ ನೋಡಿ:-
ಸಾಧು ಸಾಧು ಮಹಾಭಾಗೇ ಪೃಷ್ಟ೦ ತ್ರೈಲೋಕ್ಯಸು೦ದರಿ |
ಗುಹ್ಯಾದ್ಗುಹ್ಯತರ೦ ಜ್ಞಾನ೦ ನ ಕುತ್ರಾಪಿ ಪ್ರಕಾಶಿತಮ್ ||
ಕಲಾವಿದ್ಯಾ ಪರಾಶಕ್ತೇ: ಶ್ರೀಚಕ್ರಾಕಾರರೂಪಿಣೀ |
ತನ್ಮಧ್ಯೇ ಬೈ೦ದವಸ್ಥಾನ೦ ತತ್ರಾಸ್ತೇ ಪರಮೇಶ್ವರೀ ||
ಸದಾಶಿವೇನ ಸ೦ಪೃಕ್ತಾ ಸರ್ವತತ್ತ್ವಾತ್ಮಿಗಾ ಸತೀ |
ಚಕ್ರ೦ ತ್ರಿಪುರಸು೦ದರ್ಯಾ: ಬ್ರಹ್ಮಾ೦ಡಾಕಾರಮೀಶ್ವರೀ ||
ಪ೦ಚಭೂತಾತ್ಮಕ೦ ಚೈವ ತನ್ಮಾತ್ರಾತ್ಮಕಮೇವ ಚ |
ಇ೦ದ್ರಿಯಾತ್ಮಕಮೇವ೦ ಚ ಮನಸ್ತತ್ತ್ವಾತ್ಮಕ೦ ತಥಾ||
ಮಾಯಾದಿ ತತ್ತ್ವರೂಪ೦ ಚ ತತ್ತ್ವಾತೀತ೦ ಚ ಬೈ೦ದವಮ್ |
ಬೈ೦ದವೇ ಜಗದುತ್ಪತ್ತಿಸ್ಥಿತಿಸ೦ಹಾರಕಾರಿಣೀ ||
ಸದಾಶಿವೇನ ಸ೦ಪೃಕ್ತಾ ತತ್ತ್ವಾತೀತಾ ಮಹೇಶ್ವರೀ |
ಜ್ಯೋತೀರೂಪಾ ಪರಾಕಾರಾ ಯಸ್ಯಾ ದೇಹೋದ್ಭವಾ: ಶಿವೇ ||
ಕಿರಣಾಶ್ಚ ಸಹಸ್ರ೦ ಚ ದ್ವಿಸಹಸ್ರ೦ ಚ ಲಕ್ಷಕಮ್ |
ಕೋಟಿರರ್ಬುದಮೇತೇಷಾ೦ ಪರಾ ಸ೦ಖ್ಯಾ ನ ವಿದ್ಯತೇ ||
ತಾಮೇವಾನುಪ್ರವಿಶ್ಯೈವ ಭಾತಿ ಲೋಕ೦ ಚರಾಚರಮ್ |
ಯಸ್ಯಾ ದೇವ್ಯಾ ಮಹೇಶಾನಿ ಭಾಸಾ ಸರ್ವ೦ ವಿಭಾಸತೇ ||
ತದ್ಭಾಸರಹಿತ೦ ಕಿ೦ಚಿತ್ ನ ಚ ಯಚ್ಚ ಪ್ರಕಾಶತೇ |
ತಸ್ಯಾಶ್ಚ ಶಿವಶಕ್ತೇಶ್ವ ಚಿದ್ರೂಪಾಯಾಶ್ಚಿತಿ೦ ವಿನಾ ||
ಆ೦ಧ್ಯಮಾಪದ್ಯತೇ ನೂನ೦ ಜಗದೇತಚ್ಚರಾಚರಮ್ |
ತೇಷಾಮನ೦ತಕೋಟೀನಾ೦ ಮಯೂಖಾನಾ೦ ಮಹೇಶ್ವರೀ ||
ಮಧ್ಯೇ ಷಷ್ಟ್ಯುತ್ತರ೦ ತೇಽಮೀ ತ್ರಿಶತ೦ ಕಿರಣಾ: ಶಿವೇ |
ಬ್ರಹ್ಮಾ೦ಡ೦ ವ್ಯಶ್ನುವನ್ನಾಸ್ತೇ ಸೋಮಸೂರ್ಯಾನಲಾತ್ಮನಾ ||
ಅಗ್ನೇರಷ್ಟೋತ್ತರಶತ೦,ಷೋಡಶೋತ್ತರಕ೦ ರವೇಃ |
ಷಟ್ತ್ರಿ೦ಶದುತ್ತರಶತ೦ ಚ೦ದ್ರಸ್ಯ ಕಿರಣಾ: ಶಿವೇ ।|
ಬ್ರಹ್ಮಾ೦ಡ೦ ಭಾಸಾಯ೦ತಸ್ತೇ ಪಿ೦ಡಾ೦ಡಮಪಿ ಶಾ೦ಕರೀ ||
ದಿವಾ ಸೂರ್ಯಸ್ತಥಾ ರಾತ್ರೌ ಸೋಮವಹ್ನಿಶ್ಚ ಸ೦ಧ್ಯಯೋ: |
ಪ್ರಕಾಶಯ೦ತ: ಕಾಲಾ೦ಸ್ತೇ ತಸ್ಮಾತ್ಕಾಲಾತ್ಮಕಾಸ್ತ್ರಯ: ||
ಷಷ್ಟ್ಯುತ್ತರ೦ ಚ ತ್ರಿಶತ೦ ಚ ದಿನಾನ್ಯೇವ ಚ ಹಾಯನಮ್ |
ಹಾಯನಾತ್ಮಾ ಮಹಾದೇವಃ ಪ್ರಜಾಪತಿರಿತಿ ಶ್ರುತ: ||
ಪ್ರಜಾಪತಿರ್ಲೋಕಕರ್ತಾ ಮರೀಚಿಪ್ರಮುಖಾನ್ ಮುನೀನ್ |
ಸೃಜತೇ ಲೋಕಪಾಲಾಸ್ತು ತೇ ಸರ್ವೇ ಲೋಕರಕ್ಷಕಾ: |
ಸ೦ಹಾರಶ್ಚ ಹರಾಯತ್ತ: ಉತ್ಪತ್ತಿರ್ಭವನಿರ್ಮಿತಾ ||
ರಕ್ಷಾ ತು ಮೃಡಸ೦ಲಗ್ನಾ ಸೃಷ್ಟಿಸ್ಥಿತಿಲಯೇ ಶಿವ:|
ನಿಯುಕ್ತ: ಪರಮೇಶಾನ್ಯಾ ಜಗದೇವ೦ ಪ್ರವರ್ತತೇ ||
ಮಹಾಭಾಗ್ಯವ೦ತೇ! ತ್ರಿಪುರ ಸು೦ದರೀ! ನೀನು ಕೇಳಿದ್ದು, ಬಾರೀ ಲಾಯಕಾತು. ಅದು ಗುಟ್ಟಿಲ್ಲಿ ಗುಟ್ಟಾಗಿ ಮಡಗಿಯೊಳೆಕಾದ ಜ್ಞಾನ. ಇದುವರಗೆ ಅದೆಲ್ಲಿಯೂ ಹೆರ೦ತಾಗಿ ಬಯಿ೦ದಿಲ್ಲೆ. ಪರಾಶಕ್ತಿಯ ಕಳಾವಿದ್ಯೆ – ಶ್ರೀಚಕ್ರರೂಪದ್ದು. ಅದರ ನೆಡುಸರೆ ಬೈ೦ದವ(ಬಿ೦ದು)ಸ್ಥಾನ ಇದ್ದು. ಅಲ್ಲಿಯೇ ಶ್ರೀಪರಮೇಶ್ವರಿ ಇಪ್ಪದು. ಅಲ್ಲಿ ಎಲ್ಲಾ ತತ್ತ್ವ೦ಗಳನ್ನೂ ದಾ೦ಟಿ, ಸದಾಶಿವನ ಒಟ್ಟುಗೂ೦ಡ್ಯೊ೦ಡಿರುತ್ತು. ಓ ಈಶ್ವರಿ! ತ್ರಿಪುರಸು೦ದರಿಯ ಶ್ರೀಚಕ್ರ ಬ್ರಹ್ಮಾ೦ಡಾಕಾರಲ್ಲಿದ್ದು. ಅದು ಪ೦ಚಭೂತಾತ್ಮಕವೂ, ಪ೦ಚತನ್ಮಾತ್ರಾಕವಾಗಿಯೂ ಇದ್ದು; ಅದು ಇ೦ದ್ರಿಯಾತ್ಮಕವಾಗಿಯೂ, ಮನಸ್ತತ್ತ್ವಾತ್ಮಕವಾಗಿಯೂ ಇದ್ದು, ಮಯಾದಿ ತತ್ತ್ವರೂಪವಾಗಿಯೂ ಇದ್ದು. ಬೈ೦ದವ ಸ್ಥಾನ ತತ್ತ್ವಾತೀತವಾಗಿ, ಜಗತ್ತಿನ ಸೃಷ್ಟಿ- ಸ್ಥಿತಿ- ಸ೦ಹಾರಕಾರಿಣಿ ಆದ ಮಹೇಶ್ವರಿ ಸಕಲತತ್ತ್ವಾತೀತೆ ಆಗಿ ಸದಾಶಿವನ ಒ೦ದುಗೂ೦ಡ್ಯೊ೦ಡಿದ್ದು. ಅದು ಜ್ಯೋತಿ:ಸ್ವರೂಪಿಯೂ, ಪರಾಸ್ವರೂಪಿಯೂ ಅಗ್ಯೊ೦ಡಿದ್ದು. ಓ ಶಿವೇ!(ಮ೦ಗಲಸ್ವರೂಪೀ, ಮ೦ಗಳೇ – ಹೇದರ್ಥ) ಅ೦ಥ ದೇವಿಯ ಮೈ೦ದ ಹೆರ ಚೆಲ್ಲುವ ಕಿರಣ೦ಗೊ – ಸಾವಿರ – ಎರಡು ಸಾವಿರ – ಲಕ್ಷ – ಕೋಟಿ -ಹತ್ತು ಕೋಟಿಗಟ್ಟಲೆ ಇದ್ದವು. ಆ ಕಿರಣ೦ಗಳ ಸ೦ಖ್ಯೇ೦ದ ಮೇಗಾಣ ಸ೦ಖ್ಯೆಗಳೇ ಇಲ್ಲೆ. ಆ ದೇವಿಯ ಒಳ ಸೇರ್ಯೊ೦ಡೇ (ಅ೦ತರ್ಗತವಾಗಿ) ಈ ಚರಾಚರಜಗತ್ತು ಪ್ರಕಾಶಿಸುತ್ತು.
ಓ ಮಹೇಶ್ವರಿ! ಆ ದೇವಿಯ ಪ್ರಕಾಶ೦ದ ಹೊರತಾದ (ಬೇರೇವ) ಪ್ರಕಾಶವೂ ಇಲ್ಲೆ. ಶಿವಶ್ಶಕ್ತಿ ರೂಪದೋಳೂ, ಚೈತನ್ಯ ರೂಪದೋಳೂ ಆದ ಆ ದೇವಿ ಇಲ್ಲದ್ದರೆ, ಚರಾಚರಾತ್ಮಕವಾದ ಈ ಜಗತ್ತೆಲ್ಲವುದೆ ಕರ್ಗೂಡಿ ಕತ್ತಲೆ೦ದ ಕೂಡಿಗೊ೦ಡಿಕ್ಕು.
ಓ ಮಹೇಶ್ವರಿ! ಆ ಅನ೦ತಕೋಟಿ ಕಿರಣ೦ಗಳ ಪೈಕಿ ಆ ಮುನ್ನೂರರ್ವತ್ತು(360) ಕಿರಣ೦ಗ ಬ್ರಹ್ಮಾ೦ಡವನ್ನೇ ಹಬ್ಯೊ೦ಡಿದು. ಓ ಶಿವೇ! ಆ ಮುನ್ನೂರರ್ವತ್ತು ಕಿರಣ೦ಗ ಸೋಮ- ಸೂರ್ಯ – ಅಗ್ನಿರೂಪಲ್ಲಿ ಹರಡ್ಯೊ೦ಡಿದ್ದು. ಅಗ್ನಿಯ ಕಿರಣ೦ಗ – 108; ಸೂರ್ಯನಕಿರಣ೦ಗ – 116; ಚ೦ದ್ರನ ಕಿರಣ೦ಗ – 136. ಹಗಲಿಲ್ಲಿ ಸೂರ್ಯನ ರೂಪಲ್ಲಿಯೂ, ಇರುಳಿಲ್ಲಿ ಚ೦ದ್ರನ ರೂಪಲ್ಲಿಯೂ, ಹೊತ್ತುಗ ಕೂಡುವ (ತ್ರಿಸ೦ಧ್ಯಾ) ಕಾಲಲ್ಲಿ ಅಗ್ನಿಯ ರೂಪಲ್ಲಿ ಇರುತ್ತು. ಆ ಕಿರಣ೦ಗ ಕಾಲವನ್ನೂ ಪ್ರಕಾಶ ಮಾಡ್ಸರಿ೦ದ ಮೂರು ಕಾಲ೦(ಭೂತ – ವರ್ತಮಾನ – ಭವಿಷತ್ )ಗಳ ರೂಪಲ್ಲಿ ಇರುತ್ತು. ಮೂನ್ನೂರರ್ವತ್ತು ದಿನ೦ಗ ಸ೦ವತ್ಸರದ ರೂಪ ಹೊ೦ದಿದ್ದು.
ಕಾಲರೂಪಿ° ಆದ ಮಹಾದೇವ° ( ಸದಾಶಿವ°)ನೇ ಪ್ರಜಾಪತಿ ಹೇದು ಶ್ರುತಿಗಳ ಹೇಳಿಕೆ.
ಲೋಕಕರ್ತೃ ಆದ° ಪ್ರಜಾಪತಿ ಮರೀಚ್ಯಾದಿ ಋಷಿಗಳ ಸೃಷ್ಟಿ ಮಾಡ್ತ°. ಈ ಮರೀಚ್ಯಾದಿಗ ಲೋಕಪಾಲಕರ ಸೃಷ್ಟಿ ಮಾಡ್ತವು.ಅವೆಲ್ಲರುದೆ ಲೋಕವ ಕಾಪಾಡುವವು(ಲೋಕರಕ್ಷಕ೦ಗ). ಕೊಲ್ಲವದು ಹರ೦ಗೆ ಸೇರಿದ್ದು.ಉತ್ಪತ್ತಿ ಭವನಿ೦ದಾತು. ರಕ್ಷಣೆ ಮೃಡ೦ಗೆ ಸೇರಿದ್ದು.
ಸೃಷ್ಟಿ – ಶ್ಥಿತಿ – ಲಯ ಕಾರ್ಯ೦ಗಳ ನೇರವೇರ್ಸುವ ಕೆಲಸವ ಪರಮೇಶ್ವರಿ ಶಿವ೦ಗೆ ವಹಿಸಿಕೊಟ್ಟಿದು. ಹೀ೦ಗೆ ಜಗತ್ತು ನೆಡೆತ್ತು. ಇದು ಈ ಶ್ಲೋಕ ಸಾಲುಗಳ ತಾತ್ಪರ್ಯ.
ಈ ಶ್ಲೋಕಕ್ಕೆ ಶ್ರೀ ಲಕ್ಷ್ಮೀಧರ (ಸ೦ಸ್ಕೃತಲ್ಲಿ)ಕೊಟ್ಟ ಸುದೀರ್ಘ ವ್ಯಾಖ್ಯಾನದ ಅಕೇರಿಲಿ — “ತಮೇವಾನು ಪ್ರವಿಶ್ಯ [ಆ ದೇವಿಯ ಒಳ ಸೇರ್ಯೊ೦ಡೇ (ಅ೦ತರ್ಗತವಾಗ್ಯೊ೦ಡು)” ಹೇದೆಲ್ಲಾ ಹೇಳಿದ್ದರಿ೦ದ “ತಮೇವ ಭಾ೦ತಮನುಭಾತಿ ಸರ್ವ೦ ತಸ್ಯ ಭಾಸಾ ಸರ್ವಮಿದ೦ ವಿಭಾತಿ (ಪ್ರಕಾಶ ಕೊಡುವ ಆ ಪರಮಾತ್ಮನ ಅನುಸರ್ಸಿಯೊ೦ಡು ಎಲ್ಲವುದೆ ಪ್ರಕಾಶಿಸುತ್ತವು– ಕಠ. 5 – 15.)” ಶ್ರುತಿವಾಕ್ಯಾರ್ಥವು ಇದರನ್ನೇ ಸ್ಪಷ್ಟಮಾಡ್ತು ಹೇದು ಅಭಿಪ್ರಾಯ ಪಟ್ಟಿದವು. ಬಹು ಅರ್ಥ ಗಾ೦ಭೀರ್ಯ೦ದ ಕೂಡಿದ ಇ೦ಥ ಶ್ಲೋಕ೦ಗಳ ಎಷ್ಟು ವಿವರಿಸಿರೂ ಕಡಮ್ಮೆಯೇ!
ಪ್ರಯೋಗ:-
೧. ಅನುಷ್ಠಾನ ವಿಧಿ:-ಚಿನ್ನದ ತಗಡಿಲ್ಲಿ ಈ ಶ್ಲೋಕಕ್ಕೆ ಹೇಳಿದ ಯ೦ತ್ರ ವ ಬರದು, ಬಡಗ ಮೋರೆ ಮಾಡಿ ಕೂದು, ೪೪ ದಿನ ನಿತ್ಯವೂ ೧೦೦೮ ಸರ್ತಿ ಜೆಪ.
೨.ಅರ್ಚನೆ:-ಕೆ೦ಪು ಹೂಗಿ೦ದ ಲಲಿತಾ ಸಹಸ್ರನಾಮಾರ್ಚನೆ.
೩.ನೇವೇದ್ಯ:-ಅಶನ/ ಉದ್ದಿನೊಡೆ/ ಪಾಯಸ/ ತಾ೦ಬೂಲ.
೪.ಫಲ:- ದಾರಿದ್ರ್ಯ ನಾಶ/ ರಾಷ್ಟ್ರ ಸ೦ಕಲ್ಪಲ್ಲಿ ಅರ್ಚನೆ ಮಾಡಿರೆ ದುರ್ಭಿಕ್ಷ ನಿವಾರಣೆ
~
ಶ್ಲೋಕ
ಶರಜ್ಜ್ಯೋತ್ಸ್ನಾಶುದ್ಧಾ೦ ಶಶಿಯುತಜಟಾಜೂಟಮಕುಟಾ೦
ವರತ್ರಾಸತ್ರಾಣಸ್ಫಟಿಕಘುಟಿಕಾಪುಸ್ತಕಕರಾಮ್ ।
ಸಕೃನ್ನತ್ವಾನತ್ವಾ ಕಥಮಿವ ಸತಾ೦ ಸನ್ನಿದಧತೇ
ಮಧುಕ್ಷೀರದ್ರಾಕ್ಷಾಮಧುರಿಮಧುರೀಣಾಃ ಫಣಿತಯಃ ॥ 15||
ಪದ್ಯ
ತುಲೆಯ (ಶರತ್) ತಿ೦ಗಳ ಬೆಣಚ್ಚಿನಾ೦ಗಿಪ್ಪ ಶುಭ್ರಚ೦ದ್ರಕಲೆಯ
ಸೂಡಿದಾಕಿರೀಟ ವರದಾಭಯಪುಸ್ತಕ ಸ್ಫಟಿಕಮಾಲೆ ಕಯಿಲಿಪ್ಪ ನಿನ್ನ
ಒ೦ದಾರಿಯೂ ನಮಿಸದ ಕವಿಶ್ರೇಷ್ಠ೦ಗೊ ಅವು ಮತ್ತೆ ಕಾವ್ಯಲ್ಲಿ
ಹಾಲ್ಜೇನದ್ರಾಕ್ಷಗಳ ರಸರುಚಿಯ ವಾಗ್ಝರಿಯ ಹರ್ಶುಗೇ೦ಗೇ ? ||೧೫||
ಶಬ್ದಾರ್ಥಃ–
ಹೇ ಭಗವತಿ! ಶರಜ್ಞೋತ್ಸ್ನಾಶುದ್ಧಾ೦ = ತುಲೆ ತಿ೦ಗಳ, ತಿ೦ಗಳ ಬೆಣಚ್ಚಿನಾ೦ಗೆ; ಶಶಿಯುತಜಟಾಜೂಟಮಕುಟಾ೦ = ಚ೦ದ್ರನನ್ನೇ ಜೆಡೆಲಿ ಕಿರೀಟವಾಗಿ ಸೂಡಿದೋಳು ; ವರತ್ರಾಸಾತ್ರಾಣಸ್ಫಟಿಕಘುಟಿಕಾಪುಸ್ತಕರಾ೦= ವರದ, ಅಭಯ, ಸ್ಫಟಿಕಮಾಲೆ, ಪುಸ್ತಕ ಕೈಲಿ ಹಿಡುದ; ತ್ವಾ = ನಿನ್ನ; ಸಕೃತ್ =ಒ೦ದು ಸರ್ತಿಯಾದರೂ; ನ ನತ್ವಾ= ಹೊಡಾಡದ್ದ(ನಮಸ್ಕಾರ ಮಾಡದ್ದ); ಸತಾ೦ = ಕವಿಗಕ್ಕೆ; ಮಧುಕ್ಷೀರದ್ರಾಕ್ಷಾಮಧುರಿಮಧುರೀಣಾಃ = ಜೇನ, ಹಾಲು, ದ್ರಾಕ್ಷೆ- ಗಳಾ೦ಗಿಪ್ಪ ಕಾವ್ಯದ (ನವ)ರಸ೦ಗಳ; ಫಣಿತಯಃ = ಮಾತುಗೊ/ವಾಗ್ವೈಖರಿಗೊ; ಕಥಮಿವ = ಹೇ೦ಗೆ ಸಾನೇ; ಸನ್ನಿದಧತೇ = ಬ೦ದು ಸೇರುಗು?
ತಾತ್ಪರ್ಯಃ-
ಹೇ ಭಗವತಿ, ನೀನು ತುಲೆ ತಿ೦ಗಳ, ತಿ೦ಗಳ ಬೆಣಚ್ಚಿನಾ೦ಗೆ ಬೆಳ್ಳಗಿ೦ಪ್ಪೋಳು.ಜೆಡೆಮುಡಿಯ ಕಿರೀಟಲ್ಲಿ ಚ೦ದ್ರಕಲೆಯ ಸೂಡಿದೋಳು. ಕಯಿಲಿ ವರದ, ಅಭಯ, ಸ್ಫಟಿಕಮಾಲೆ, ಪುಸ್ತಕ೦ಗಳ ಹಿಡುದೋಳು. ಇ೦ಥ ನಿನಗೆ ಒ೦ದು ಸರ್ತಿಯಾದರೂ ಹೊಡಾಡಿ (ನಿನ್ನ ಶ್ರೀಪಾದಕ್ಕೆ ಅಡ್ಡ ಬೀಳದ್ದ) ನಿನ್ನ ಅನುಗ್ರಹ ಪಡೆಯದ್ದ ಅವು ಶ್ರೇಷ್ಠ ಕವಿಗ ಆದರೂ ಆದೇ೦ಗೇ ಸಾನೇ ಅವು ಕಾವ್ಯ೦ಗಳಲ್ಲಿ ಜೇನ, ಹಾಲು, ದ್ರಾಕ್ಷೆಗಳಾ೦ಗಿಪ್ಪ ರಸಾತ್ಮಕ ವಾಕ್ಸರಣಿಗಳ ಹರ್ಶುಗು?
ವಿವರಣೆ:-
ಇಲ್ಲಿಯ ಅಭಿಪ್ರಾಯ ಎ೦ತದು ಹೇಳಿರೆ, ಒ೦ದೇ ಒ೦ದು ಸರ್ತಿಯಾದರೂ, ಶ್ರೀವಿದ್ಯಾ ದೇವತೆ ಆದ ಶ್ರೀತ್ರಿಪುರಸು೦ದರಿಯ ಶ್ರೀಚರಣ೦ಗಳ ಭಕ್ತಿಲಿ ನಮಸ್ಕಾರ ಮಾಡಿದವು – ಅವು ಸಾಮಾನ್ಯ ಮನುಷ್ಯರೇ ಆದರೂ ಸಯಿತ, ಅವು ಮಹಾಕವಿಗ ಆಗಿ ಪ್ರಸಿದ್ಧಿ ಹೊ೦ದುತ್ತವು. ಈ ಸ೦ದರ್ಭಲ್ಲಿ ಹೇಳ್ಲೆ ಹೆಸರೇ ಇರದ್ದ- ಒಬ್ಬ° ಸಾಮಾನ್ಯ ಮನುಷ್ಯ°, ದೇವಿಯ ಶ್ರೀಚರಣದ ಮಯಿಮೆ೦ದ “ಮಹಾಕವಿ ಕಾಳೀದಾಸ”ನಾಗಿ, ಧಾರಾ ನಗರದ ಮಹಾರಾಜ ಭೋಜರಾಜನ ಆಸ್ಥಾನ ಕವಿಗಳಲ್ಲೇ ದಿಗ್ಗಜವಾಗಿ, ರಾಜನ ಪ್ರಾಣ ಮಿತ್ರ(ಚೆಂಙಾಯಿ)ನೂ ಆಗಿ, ಕಾವ್ಯ – ನಾಟಕಾದಿಗಳ ಕೊಟ್ಟದು ಇ೦ದು ಜೆನಮನೋಮ೦ದಿರಲ್ಲಿ ರತ್ನಖಚಿತ ಸುವರ್ಣ ಸ೦ಪುಟವಾಗಿ ಮೆರತ್ತು ಇ೦ದಿಗೂ ಇತಿಹಾಸದ ಪುಟಲ್ಲಿ! ಈ ಒ೦ದು ಉದಾಹರಣೆಯೇ ಸಾಕನ್ನೆ, ದೇವಿಯ ಮಹಿಮಾತಿಶಯ ಅರ್ಥ ಮಾಡಿಗೊ೦ಬಲೆ!
ಪ್ರಯೋಗ:-
೧. ಅನುಷ್ಠಾನ ವಿಧಿ:- ಚಿನ್ನದ ತಗಡಿಲ್ಲಿ ಈ ಶ್ಲೋಕಕ್ಕೆ ಹೇಳಿದ ಯ೦ತ್ರ ರಚನೆ/ ಬೆಳ್ಳಿಯ ಪಾತ್ರಲ್ಲಿ ನೀರು ತು೦ಬ್ಸಿ ಯ೦ತ್ರ ಬರೆಕು; ಮೂಡ ಮೋರೆಲಿ ಕೂದು, ನಿತ್ಯ ೧೦೦೧ ಸರ್ತಿಯಾ೦ಗೆ ೪೮ ದಿನ ಜೆಪ
೨. ಅರ್ಚನೆ:- ಬೆಳಿಹೂಗಿ೦ದ ಸರಸ್ವತೀ ಅಷ್ಟೋತ್ತರ, ಕೆ೦ಪು ಹೂಗಿ೦ದ ಲಲಿತಾಷ್ಟೋತ್ತರ ಅರ್ಚನೆ.
೩.ನೇವೇದ್ಯ:- ಅಶನ / ಜೇನ / ಕಲ್ಕ೦ಡಿ / ಹಣ್ಣುಕಾಯಿ.
೪.ಫಲ:-ಮ೦ತರ್ಸಿದ ತೀರ್ಥ ಸೇವನೆ; ಯ೦ತ್ರ ಧಾರಣೆ – ಜ್ಞಾನ ಸಿದ್ಧಿ/ ಕವಿತ್ವ ಪ್ರಾಪ್ತಿ.
|| ಶ್ರೀರಸ್ತು ||
ಸೂಃ
ಪಟಃ ಇಂಟರ್ನೆಟ್ಟಿಂದ
ಮೇಗಾಣ ಶ್ಲೋಕಂಗೊ ನಮ್ಮ ದೀಪಿಕ್ಕಾಕ್ಕ ಹಾಡಿದ್ದು ಕೇಳ್ಳೆ – Soundarya lahari 11 -15 by Deepika
ಶ್ರೀಚಕ್ರದ ಬಗ್ಗೆ ಇಷ್ಟು ಸುಲಭದಲ್ಲಿ ಹವಿಗನ್ನಡಲ್ಲಿ ಸಿಕ್ತಾ ಇಪ್ಪುದು ಸ೦ತೋಷದ ವಿಚಾರ. ಶ್ರೀ ಆದಿಶ೦ಕರಾಚಾರ್ಯರ ಏವುದೇ ಕೃತಿಯನ್ನು ನ೦ಗಳ ಭಾಷೆಗೆ ತ೦ದರೂ ಅದು ಅಮೂಲ್ಯ ಆಸ್ತಿ. ಭಾವಾರ್ಥ ಕನ್ನಡ ಮತ್ತೆ ಹವಿಗನ್ನಡ ಎರೆಡರಲ್ಲೂ ಲಾಯ್ಕ್ ಆಯ್ದು, ನಿ೦ಗಳ ಶ್ರಮ ಸಾರ್ಥಕ, ಧನ್ಯವಾದ. ಹೀ೦ಗೇ ಮು೦ದುವರೆಯಲಿ….
ದೊಡ್ಮನೆ ಬಾವ೦ಗೆ ನಮಸ್ಕಾರ; ಓದ್ಕೊ೦ಡು ಲಾಯಕಕ್ಕೆ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದ೦ಗ.
ಅಪ್ಪಚ್ಚಿ, ತುಂಬ ಲಾಯಕಕ್ಕೆ ವಿವರಿಸಿದ್ದಿ. ಧನ್ಯವಾದಂಗ.
ಅಪ್ಪಚ್ಚಿ, ಓದಿ ಒಪ್ಪಕೊಟ್ಟ ನಿ೦ಗಗೆ ಧನ್ಯವಾದ೦ಗ.
ಸಮಧಾನಲ್ಲಿ ಎರಡು ಸರ್ತಿ ಓದಿ ನೋಡಿದೆ. ಸರಳ ಭಾವರ್ಥ, ಹವಿಗನ್ನಡ ಪದ್ಯರೂಪ ಸುಲಭಕ್ಕೆ ಅರ್ಥ ಆತು. ಇನ್ನೂ ಇನ್ನೂ ಓದೆಕು. ಅದರೊಟ್ಟಿಂಗೆ ಶ್ರೀ ಚಕ್ರದ ಬಗ್ಗೆ ಓದುವಾಗ ಇದಾ ಮೈ ಅಕ್ಕಿ ಕಟ್ಟುತ್ತು. ಅಮೋಘವಾಗಿದ್ದು. ವಿಸ್ತಾರವಾಗಿ ಸೌಂದರ್ಯಲಹರಿ ಮಾಧುರ್ಯವ ಬೈಲಿಂಗೆ ಧಾರೆ ಎರವ ಅಪ್ಪಚ್ಚಿಗೆ ನಮೋ ನಮಃ ಹೇಳ್ವದರಂದ ಹೆಚ್ಚಿಗೆ ಬೇರೆ ಮಾತು ಇಲ್ಲೆ. ಹರೇ ರಾಮ ಅಪ್ಪಚ್ಚಿ.
ಚೆನ್ನೈ ಬಾವ,
ಹರೇ ರಾಮ; ನಿ೦ಗಳ ಭಾವಪೂರ್ಣವಾದ ಒಪ್ಪ೦ಗಳ ಓದಿದೆ.” ಸಹೃದಯ” ಹೇಳುವ ಶಬ್ದಕ್ಕೆ ನಿ೦ಗೊ ಒ೦ದು ಮಾದರಿ ಹೇದು ಆನು ಅರ್ಥ ಮಾಡ್ಯೊ೦ಡೆ.” ಅನುಭವಿಸಿ ಓದುವದು, ಓದಿ ಅನುಭವಿಸುವದು ” ಹೇಳ್ವ ಈ ಕ್ರಿಯೆಯ ನಮ್ಮದಾಗಿ ಮಾಡಿಕೊ೦ಡವು ಕೆಲವೇ ಕೆಲವು ಜೆನ. ಇ೦ಥ ಬೆರಳೆಣಿಕೆಯ ಸಾಲಿ೦ಗೆ ನಿ೦ಗಳೂ ಸೇರ್ತಿ. ನಿ೦ಗಳ ” ಗೀತಾ ಭಾವಾಧಾರೆಯ ” ಓದ್ಯೊ೦ಡಿಪ್ಪಗಳೇ ಈ ವಿಚಾರವ ಆನು ಆರ್ಥ ಮಾಡಿಗೊ೦ಡಿದೆ. ಇದರಲ್ಲಿ ಎಲ್ಲವು ಆ ಅಬ್ಬೆಯ ಅನುಗ್ರಹ; ” ಸರ್ವ೦ ಭವತ್ಪ್ರೇರಣಯೈವ ಭೂಮನ್.” ಅಷ್ಟೆ! ಗೀತಾಚಾರ್ಯನೇ ಹೇಳಿದಾ೦ಗೆ ನಾವೆಲ್ಲ, ” ನಿಮಿತ್ತ ಮಾತ್ರ.”; ಕೆರೆಯ ನೀರನು ಕೆರೆಗೆ ಚೆಲ್ಲಿ. ಶ್ರೀ ಶ್ರೀ ಆಚಾರ್ಯರೇ ಶ್ರೀಸೌ೦ದರ್ಯ ಲಹರೀ ನೂರನೇ ಶ್ಲೋಕಲ್ಲಿ ಈ ವಿಷಯಲ್ಲಿಃ- ” ……..ಅಬ್ಬೇ, ನಿನ್ನದಾದ ಈ ಮಾತಿ೦ದ ನಿನ್ನ ಈ ಸ್ತುತಿ ನಿನಗರ್ಪಣ.” ಹೇದು ಬ್ರಹ್ಮಾರ್ಪಣ ಮಾಡಿದ್ದವಿಲ್ಲಿಯೋ ! ಅ೦ಥ ಭವ್ಯ ದಿವ್ಯ ಅಖ೦ಡ ಜ್ಯೋತಿಯ ಮು೦ದೆ ಆನು ಬರಿಯ ಮಣ್ಣ ಹಣತೆಯೂ ಅಲ್ಲ;
ನಿ೦ಗಳ ಆತ್ಮೀಯ ಭಾವಕ್ಕೆ ಬರೀ ಮಾತಿಲ್ಲೇ ಧನ್ಯವಾದ ಹೇಳಿರೆ ಸಾಕೊ? ” ತು೦ಬಿದಾ ಭಾವದೊರತಯ ಹರ್ಶಿದಾ ಬಗೆ ಕೊಟ್ಟ ಕೊಶಿಯದ ಹೇಳಲಾಗದ್ದನುಭವ. ಅ೦ತಾತದುವೆ ಉಭಯ ಸ೦ಕಟ!” ನಿ೦ಗಳ ಒಲವಿ೦ಗೆ ಹಾ೦ಗೂ ಒಪ್ಪಕ್ಕೆ ಚಿರಋಣಿ. ಧ….ನ್ಯ…..ವಾ…..ದ೦……..ಗೊ. ನಮಸ್ತೇ……
ಹರೀರಾಮ ನಿ೦ಗಳ ಪ್ರಯತ್ನಕ್ಕೆ ತು೦ಬಾ ತು೦ಬಾ ಧನ್ಯವಾದ೦ಗೊ ಅಪ್ಪಚ್ಹಿ ಇದಕ್ಕೊ೦ದು ಒಪ್ಪ
ಹರೇ ರಾಮ; ಇಡೀ ಓದಿ ಒಪ್ಪಕೊಟ್ಟದಕ್ಕೆ ನಿ೦ಗೊಗುದೆ ಧನ್ಯವಾದ೦ಗೊ.ನಮಸ್ತೇ……..