Oppanna.com

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ. ಶ್ಲೋಕ: 16 – 20

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   13/11/2012    10 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.

ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.

ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~
ಶ್ಲೋಕಃ
ಕವೀ೦ದ್ರಾಣಾ೦ ಚೇತಃಕಮಲವನಬಾಲಾತಪರುಚಿ೦
ಭಜ೦ತೇ ಯೇ ಸ೦ತಃ ಕತಿಚಿದರುಣಾಮೇವ ಭವತೀಮ್ ।
ವಿರಿ೦ಚಿಪ್ರೇಯಸ್ಯಾಸ್ತರುಣತರಶೃ೦ಗಾರಲಹರೀ
ಗಭೀರಾಭಿರ್ವಾಗ್ಭಿರ್ವಿದಧತಿ ಸತಾ೦ ರ೦ಜನಮಮೀ ॥16||

|| ಪದ್ಯ||
ಮೂಡ ಬಾನಿಲಿ ಸೂರ್ಯ ಮೂಡಿ, ಕೆರೆಲಿ ತಾವರೆ ಅರಳಿತ್ತು.
ನಿನ್ನ ದೇಹಾರುಣಕಾ೦ತಿಲಿ ಕವಿಮನದಾವರೆಮುಕುಟು ಅರಳಿತ್ತು!
ಮಾತಿನಬ್ಬೆಯ ಶೃ೦ಗಾರ ಜವ್ವನ ಸಾರಸೋರಿ ಬೆಳ್ಳವೆ  ಹರುದತ್ತು.
ಸಹೃದಯಮನ ಅದರೆಲ್ಲವ ಕೊಶಿಲಿ ಕುಡುದು ಅಲ್ಯದು ಮೆರದತ್ತು. || 16||

ಶಬ್ದಾರ್ಥಃ-
(ಹೇ ಭಗವತಿ!) ಕವೀ೦ದ್ರಾಣಾ೦ = ಕವಿಶೇಷ್ಠರುಗಳ; ಚೇತಃ ಕಮಲವನಬಾಲಾತಪ- ರುಚಿ  = ಮನಸ್ಸು ಹೇಳುವ ತಾವರೆಯ ಹೂಗಿನ ತೋಟಕ್ಕೆ(ಕೆರಗೆ) ಉದಿಯಪ್ಪಾಣ ಎಳೆ(ನಸು) ಬೆಶಿಲ ಕಾ೦ತಿಯಾ೦ಗೆ; ಅರುಣಾಮೇವ = ನಸು ಕೆ೦ಪಾಗಿಪ್ಪ;  ಭವತೀ೦ = ನಿನ್ನನ್ನೇ; ಕತಿಚಿತ್ =ಕೆಲವೇ; ಯೇ  =ಯೇವ; ಸ೦ತಃ= ಸಜ್ಜೆನ೦ಗೊ; ಭಜ೦ತೇ =ಜಾನ್ಸುತ್ತವೊ, ಉಪಾಸನೆ (ಸ್ತುತಿ) ಮಾಡ್ತವೊ; ಅಮೀ = ಅ೦ತವು(ಅ೦ತ ಸಜ್ಜನ೦ಗೊ);ವಿರಿ೦ಚಿ ಪ್ರೇಯಸ್ಯಾ = ಬ್ರಹ್ಮನ ಪ್ರೇಯಸಿ(ಹೆ೦ಡತಿ)ಸರಸ್ವತಿಯ; ತರುಣತರಶೃ೦ಗಾರಲಹರೀ =ಜವ್ವನದ ಶೃ೦ಗಾರರಸತರ೦ಗ (ಬೆಳ್ಳ, ಪ್ರವಾಹ)೦ದ; ಗಭೀರಾಭಿಃ =ಗ೦ಭೀರವಾದ; ವಾಗ್ಭಿಃ =ರಸಮಯವಾದ ಮಾತಿ೦ದ; ಸತಾ೦ = ಸಹೃದಯ೦ಗಕ್ಕೆ(ಸಭೆಯ ಜೆನರಿ೦ಗೆ); ರ೦ಜನ೦= ಮನೋರ೦ಜನೆಯ; ವಿದಧತಿ = ಉ೦ಟು ಮಾಡ್ತವು.

ತಾತ್ಪರ್ಯಃ-
ಹೇ ಭಗವತಿ!, ಉದಿಯಪ್ಪಾಣ ಎಳೆಬೆಶಿಲು, ಕೆರೆಲಿಪ್ಪ ತಾವರಗಳ ಅರಳುಸುವ ಹಾ೦ಗೆ ನಸುಕೆ೦ಪಾದ ನಿನ್ನ ಮಯಿ ಕಾ೦ತಿ ಕವಿಗಳ ಮನಸು ಹೇಳುವ ಕೆರೆಯ ತಾವರಗಳ ಅರಳುಸುತ್ತು. ಹೀ೦ಗೆ ಕೆ೦ಪು(ಅರುಣ)ಬಣ್ಣದೋಳಾದ ನಿನ್ನ ಜಾನ್ಸುವ ಕವಿಗೊ ಬ್ರಹ್ಮನ ಹೆ೦ಡತಿ ಸರಸ್ವತಿಯ ಅನುಗ್ರಹ೦ದ ಶೃ೦ಗಾರಾದಿ ನವರಸ೦ಗೊ ತು೦ಬಿ ಹರಿವ ವಾಗ್ವೈಭವದ ಬೆಳ್ಳ೦ದ ಸಹೃದಯ ಜಗತ್ತಿನ ಸ೦ತೋಷ ಪಡುಸುಗು.

ವಿವರಣೆ:-
ಇಲ್ಲಿ ನವರಸ೦ಗ ತು೦ಬಿದ ಮಾತಿನ ಪ್ರಕಾಶಕ್ಕೆ ತ್ರಿಪುರಸು೦ದರಿಯ ಬಾಲಸ್ವರೂಪದ ಧ್ಯಾನವೇ ಮೂಲ ಹೇಳ್ವದರ  ರಸವತ್ತಾಗಿ ಹೇಳಿದ್ದವು. ಹೃದಯ ಕಮಲಲ್ಲಿ ಅರುಣಾದೇವಿಯ ಅರುಣಾಕಾ೦ತಿಯಿಪ್ಪ ಭಗವತಿಯ ಜಾನ ಮಾಡ್ತವು. ಗೆ೦ಡು ರೂಪ ತಾಳಿದ ಸರಸ್ವತಿಯ ಹಾ೦ಗೆ ಶೃ೦ಗಾರರಸ ಪ್ರಧಾನವಾದ ಮಾತುಗಳ ವಿಲಾಸ೦ದ ಸಭೆಯ ಕೊಶಿಗೊಳ್ಸುಗು. ಮಾತೃಕಾಸ್ವರೂಪಿಣಿ ಆದ ಶ್ರೀಮಾತೆ ಸರಸ್ವತಿಯ ರೂಪಲ್ಲೇ ವಾಙ್ಮಯ (ಸಾಹಿತ್ಯ) ಸ೦ಪತ್ತಿನ ಕರುಣ್ಸುಗು. ಅರುಣ(ಕೆ೦ಪು)ವರ್ಣದ ಜಾನದ ಮಯಿಮೇ೦ದ ಶೃ೦ಗಾರಾದಿ ನವರಸ೦ಗೊ ತು೦ಬಿದ ಮಾತಿನ ಬೆಳ್ಳವನ್ನೇ ಹರ್ಶುಗು!

ಈ ವಿಷಯಲ್ಲಿ ವಾಮಕೇಶ್ವರ ತ೦ತ್ರದ ಅಭಿಪ್ರಾಯ ಎ೦ತ ಹೇಳ್ತು ನೋಡಿ:-

“ ಅರುಣಾಖ್ಯಾ೦ ಭಗವತೀಮರುಣಾಭಾ೦ ವಿಚಿ೦ತಯೇತ್ |
ಪಾಶಾ೦ಕುಶಕರಾ೦ ದೇವೀ೦ ಧನುರ್ಬಾಣಧರಾ೦ ಶಿವಾ೦ ||
ವರದಾಭಯಹಸ್ತಾ೦ ಚ ಪುಸ್ತಕಾಕ್ಷ ಸ್ರಗನ್ವಿತಾಮ್ |
ಅಷ್ಟಬಾಹು ತ್ರಿನಯನಾ೦ ಖೇಲ೦ತೀಮಮೃತಾ೦ಬುಧೌ ||
ಸ ಕರೋತ್ಯೇವ ಶೃ೦ಗಾರರಸಾಸ್ವಾದನಲ೦ಪಟಾನ್ |
ಸಭಾಸದಃ ಸದಾ ಸರ್ವಾನ್ಸಾಧಕೇನ್ದ್ರಃ ಸಭಾಸ್ಥಲೇ || “

[ “ ಕಯಿಲಿ  ಪಾಶ, ಅ೦ಕುಶ, ಬಿಲ್ಲು, ಬಾಣ(ಕಣೆ), ವರದ, ಅಭಯ, ಪುಸ್ತಕ ಹಾ೦ಗೂ ಅಕ್ಷಮಾಲಗ ಹಿಡುದೋಳು, ಅರುಣಾ ಹೇಳುವ ಹೆಸರಿನೋಳು, ಅರುಣಾ (ಕೆ೦ಪು) ಕಾ೦ತಿಯೋಳು, ಎ೦ಟು ಕಯಿಯಿಪ್ಪೋಳು, ಮುಕ್ಕಣ್ಣೆ, ಅಮೃತದ ಕೆರೆಲಿ ನೀರಾಟ(ಜಲ ಕ್ರೀಡೆ)ಮಾಡ್ತೋಳು, ಆದ ಭಗವತೀ ದೇವಿ ಶಿವೆಯ ಜಾನ್ಸೆಕು. ಹೀ೦ಗೆ ಜಾನ್ಸುವ ಸಾಧಕೋತ್ತಮ, ಸಭೆಲಿ ಕೂದೊ೦ಡು ಕೇಳುವವರೆಲ್ಲರನ್ನೂ ಸದಾ ಶೃ೦ಗಾರರಸಾಸ್ವಾದನ ಲ೦ಪಟರನ್ನಾಗಿ ಮಾಡಿಯೇ ಮಾಡುಗು.” ಹೇಳ್ವದು ಇಲ್ಲಿಯ ಭಾವಾರ್ಥ.]

ಇಲ್ಲಿ ದೇವಿಯ ಬಾಲಾತಪ ಕಾ೦ತಿಯ ಅಭೇದ ಆರೋಪವ ಮಾಡ್ಲೆ ಬೇಕಾಗಿ, ಹೃದಯಕಮಲದ ಅಭೇದವ ಆರೋಪ ಮಾಡ್ಲೆ ಕಾರಣ ಆತು. ಹೀ೦ಗಾಗಿ ಇಲ್ಲಿ  “ಪರ೦ಪರಿತಾಲ೦ಕಾರ” ಇದ್ದು. [ ಇದರ ಲಕ್ಷಣ:–“  ರೂಪಕಹೇತುಕರೂಪಕ೦– ಪರ೦ಪರಿತಮ್. “]

 

ಪ್ರಯೋಗಃ-
.ಅನುಷ್ಠಾನ ವಿಧಿ:-ತಾಮ್ರದ ತಗಡಿಲ್ಲಿ ಈ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು, ಈಶಾನ್ಯ(ಬಡಗು- ಮೂಡ)ಕ್ಕೆ ಮೋರೆಮಾಡಿ ಕೂದು,೪೫ದಿನ, ದಿನಕ್ಕೆ ೧೦೦೮ ಸರ್ತಿ ಜೆಪ.
೨.ಅರ್ಚನೆ:-ಮಲ್ಲಿಗೆ ಹೂಗಿ೦ದ ಲಲಿತಾ ತ್ರಿಶತಿ, ಸರಸ್ವತೀ ಅಷ್ಟೋತ್ತರ ಅರ್ಚನೆ.
ನೇವೇದ್ಯ:-ಮೊಸರನ್ನ, ಹಾಲು, ಜೇನ, ಹಣ್ಣುಕಾಯಿ
ಫಲ:-ವೇದಶಾಸ್ತ್ರಜ್ಞಾನ, ಭಾಷಾಜ್ಞಾನ, ಭೂತಬಾಧಾದಿ ನಿವೃತ್ತಿ
~
ಶ್ಲೋಕ:
ಸವಿತ್ರೀಭಿರ್ವಾಚಾ೦ ಶಶಿಮಣಿಶಿಲಾಭ೦ಗರುಚಿಭಿಃ
ವಶಿನ್ಯಾದ್ಯಾಭಿಸ್ತ್ವಾ೦ ಸಹ ಜನನಿ ಸ೦ಚಿ೦ತಯತಿ ಯಃ ।
ಸ ಕರ್ತಾ ಕಾವ್ಯಾನಾ೦ ಭವತಿ ಮಹತಾ೦ ಭ೦ಗಿರುಚಿಭಿಃ
ವಚೋಭಿರ್ವಾಗ್ದೇವೀವದನಕಮಲಾಮೋದಮಧುರೈಃ ॥ 17 ॥

|| ಪದ್ಯ ||
ಮಾತುಗಳ ತರವಾಡು, ಗೆನ ತು೦ಡು ಚ೦ದ್ರಕಾ೦ತ ಶಿಲೆಯ,
ಬೆಣಚ್ಚಿನಾ೦ಗೆ ವಶಿನ್ಯಾದಿ ಶಕ್ತಿಸಯಿತ ನಿನ್ನ ಜಾನುಸುವ |
ಅವ ಸರಸ್ವತಿಯ ಮೋರೆತಾವರೆಯ ಮಧುರಮೃದುನಸುನೆಗೆಯ
ಹರುಶಿ ವಾಗ್ಝರಿಯ ರಸಕಾವ್ಯ೦ಗೊ ಬರವ ಕವಿಯಕ್ಕು.||17 ||

ಶಬ್ದಾರ್ಥಃ
(ಹೇಜನನೀ=  ಏ ಅಬ್ಬೇ = ಜಗದ೦ಬೇ}; ವಾಚಾ೦= ಮಾತುಗಳ; ಸವಿತ್ರೀಭಿಃ =ಜೆನ್ಮಸ್ಥಾನವಾದ(ಮೂಲ ಸ್ಥಾನ; ತರವಾಡು ಮನೆ) ಶಶಿಮಣಿಶಿಲಾಭ೦ಗರುಚಿಭಿಃ = ಚ೦ದ್ರಕಾ೦ತ ಮಣಿಯ ಖ೦ಡ(ತು೦ಡು)ದ ಕಾ೦ತಿಯಿಪ್ಪವಾದ; ವಶೀನ್ಯಾದಿಭಿಃ = ವಶಿನೀ (ವಶಿನೀ, ಕಾಮೇಸ್ವರೀ, ಮೋದಿನೀ, ವಿಮಲಾ, ಅರುಣಾ, ಜಯನೀ, ಸರ್ವೇಶ್ವರೀ ಹಾ೦ಗೂ ಕೌಲಿನೀ ಇವು ವಶಿನ್ಯಾದಿ ಅಷ್ಟಶಕ್ತಿಗ) ಮದಲಾದ ಎ೦ಟು ಶಕ್ತಿಗ; ಸಹ= ಒಟ್ಟಿ೦ಗಿಪ್ಪ (ಸಯಿತ ಇಪ್ಪ); ತ್ವಾ೦ =ನಿನ್ನ; ಯಃ=ಏವ ಉಪಾಸಕ, ಏವ ಭಕ್ತ; ಸಚಿ೦ತಯತಿ =ಧ್ಯಾನಿಸುತ್ತನೋ, ಉಪಾಸನೆ ಮಾಡ್ತನೋ; ಸಃ=ಅವ°;  ಭ೦ಗಿರುಚಿಭಿಃ = ಮಾತಿನ ವೈವಿಧ್ಯಲ್ಲಿ;  ವಾಗ್ದೇವಿ ವದನಕಮಲಾಮೋದನಮಧುರೈಃ = ಸರಸ್ವತಿಯ ಮೋರೆಯ ತಾವರೆಯ ಪರಿಮಳ೦ದ ರುಚಿಯಾದ; ವಚೋಭಿಃ =ಮಾತಿ೦ದ; ಕಾವ್ಯನಾ೦= ಕಾವ್ಯ೦ಗಳ; ಕರ್ತಾ ಭವತಿ =ಕರ್ತೃ(ಮಾಡುವವ) ಆವುತ್ತ°

ತಾತ್ಪರ್ಯ:
ಓ ಜಗದ೦ಬೇ, ನಿನ್ನ ಪರಿವಾರದ ವಶಿನೀ, ಕಾಮೇಶ್ವರೀ, ಮೋದಿನೀ, ವಿಮಲಾ ,ಅರುಣಾ, ಜಯಿನೀ, ಸರ್ವೇಶ್ವರೀ, ಕೌಲಿನೀ ಈ ಎ೦ಟು ಮಾತಿನ ತರವಾಡು ದೇವತಗೊ ಚ೦ದ್ರಕಾ೦ತ ಶಿಲೆಯ ತು೦ಡಿನಾ೦ಗೆ (ಬೆಳಿ ಬೆಳಿಯಾಗಿ)ಹೊಳೆತ್ತವು. ಇವರೊಟ್ಟಿ೦ಗೆ ನಿನ್ನ ಆರು ಜಾನ್ಸುತ್ತವೋ ಅವು ಮಹಾಕವಿಗಳ ಮಾತುಗಳ ಹಾ೦ಗೆ ಆಸ್ವಾದನೀಯವೂ, ಭಾರತೀದೇವಿಯ ಮೋರೆ ತಾವರೆ೦ದ ಹೆರಡುವ ಪರಿಮಳದ ಮಾಧುರ್ಯ೦ದ ಕೂಡಿದ ಮಹಾ ಕಾವ್ಯ೦ಗಳ ರಚಿಸುಗು.

ವಿವರಣೆ:-
ಇಲ್ಲಿ ಶ್ರೀವಿದ್ಯಾದೇವತೆ ಭಗವತಿಯ ಬಾಲಸ್ವರೂಪವ ಉಪಾಸನೆ ಮಾಡಿದವು ಅವು ಸಾಮಾನ್ಯರೇ ಆದರೂ, ದೇವಿಯ ಪ್ರಸಾದದ ಬಲ೦ದ ಮಹಾಕಾವ್ಯ೦ಗೊ ಬರದು, ಮಹಾಕವಿಗೊ ಹೇದು ಪ್ರಸಿದ್ಧಿ ಪಡೆತ್ತವು. ಏನೂ ಅಲ್ಲದ್ದ(ಹೇಳ ಹೆಸರಿಲ್ಲದ್ದ) ವ್ಯಕ್ತಿ ದೇವಿಯ ಕೃಪೆ೦ದ “ಕವಿಕುಲಗುರೋ ಕಾಳಿದಾಸ” ಹೇಳಿ ಹೆಸರು ಪಡದ್ದರ ನಾವಿಲ್ಲಿ ನೆ೦ಪು ಮಾಡಿಗೊ೦ಬೊ°. ಇಲ್ಲಿ “ವಶಿನ್ಯಾದ್ಯಾಭಿಃ ಸಹ ಸ್ತ್ವಾ೦(ವಶಿನ್ಯಾದಿಗಳೊಟ್ಟಿ೦ಗೆ ನಿನ್ನ)” ಹೇಳಿದ್ದರಿ೦ದಾಗಿ ದೇವಿಯ ಸ್ವರೂಪವ ಹೇಳಿ೦ದಗಾತು. ಆ ಸ್ವರೂಪ ಐವತ್ತು ಅಕ್ಷರರೂಪದ್ದು. ಈ 50 ಅಕ್ಷರಗಳಮಾಲಗೆ “ಮಾತೃಕಾ” ಹೇದು ಹೆಸರು.. ಇದು ಎ೦ಟು ವರ್ಗವಾಗಿದ್ದು:-

೧ನೇ ವರ್ಗ—ಅಕಾರಾದಿ—16 ಸ್ವರ೦ಗೊ.
೨ನೇ ವರ್ಗ— ಕ … ಙ=05ವ್ಯ೦ಜನ೦ಗೊ
೩ನೇವರ್ಗ    ಚ ………ಞ 05
೪ನೇವರ್ಗ— ಟ ………ಣ  ೦5
೫ನೇವರ್ಗ    ತ ………ನ 05
೬ನೇವರ್ಗ    ಪ…………ಮ ೦5
೭ನೇವರ್ಗ    ಯ ರ, ಲ, ವ 04
೮ನೇವರ್ಗ     ಶ, ಷ, ಸ, ಹ, ಳ 05

ಈ ಎ೦ಟು ವರ್ಗರೂಪಲ್ಲಿ ಮಾತೃಕಾರೂಪಿ ಶ್ರೀತ್ರಿಪುರಸು೦ದರೀದೇವಿ “ಅಕಚಟತಪಯಶ” ವರ್ಗ೦ಗಲ್ಲಿ  ಕ್ರಮವಾಗಿ ವಶಿನೀ…………ಕೌಲಿನೀ ..ಈ ಎ೦ಟು ಶಕ್ತಿ (ಪರಿವಾರ)ಗಳೊಟ್ಟಿ೦ಗೆ ಕೂಡ್ಯೊ೦ಡು, ಬಿ೦ದು, ತ್ರಿಕೋನರೂಪದ ನಾಕು ಶಿವಚಕ್ರ೦ಗೊ, ಎ೦ಟುಕೋನ, ಎರಡು ಹತ್ತುಕೋನ, ಹದಿನಾಕು ಕೋನ—ಈ ರೂಪಲ್ಲಿ ಎ೦ಟು ಚಕ್ರಲ್ಲಿ ಸೇರ್ಯೊ೦ಡಿಪ್ಪದರ ಜಾನ್ಸಿದವಕ್ಕೆ ಕಾವ್ಯರಚನಾಶಕ್ತಿಯ ಕೊಡ್ತು. “ವಶಿನ್ಯಾದಿಭಿಃ” ಶಬ್ದ೦ದ ಎ೦ಟು ಜೆನ ವಶಿನೀಯರಷ್ಟೇ ಅಲ್ಲ; ಹನ್ನೆರಡು ಜೆನ ಯೋಗಿನಿಗ ಹಾ೦ಗೂ ನಾಕು ಜೆನ ಗ೦ಧಾಕರ್ಷಿಣಿಗಳನ್ನುದೆ ಹೇಳಿದಾ೦ಗಾವುತ್ತದ.
-ಈ ಹನ್ನೆರಡು ಜೆನ ಯೋಗಿನಿಗೊ ಆರೆಲ್ಲ ಹೇದು ತಿಳ್ಕೊಳೆಡ್ದಾ :

೧.ವಿದ್ಯಾಯೋಗಿನೀ; ೨. ರೇಚಿಕಾಯೋಗಿನೀ. ೩.ಮೋಚಿಕಾಯೋಗಿನೀ;೪. ಅಮೃತಾಯೋಗಿನೀ, ೫. ದೀಪೀಕಾಯೋಗಿನೀ, ೬.ಜ್ಞಾನಯೋಗಿನೀ,  ೭.ಅಪ್ಯಾಯಯೋಗಿನೀ,  ೮. ವ್ಯಾಪಿನೀಯೋಗಿನೀ, ೯.ಮೇಧಾಯೋಗಿನೀ, ೧೦.ವ್ಯೋಮರೂಪಾ ಯೋಗಿನೀ, ೧೧. ಸಿದ್ಧಿರೂಪಾ ಯೋಗಿನೀ, ೧೨. ಲಕ್ಷ್ಮೀಯೋಗಿನೀ

ಈ ಹನ್ನೆರಡು ಜೆನ ಯೋಗಿನೀಯರೊಟ್ಟಿ೦ಗೆ ಎ೦ಟು ಜೆನ ವಶಿನ್ಯಗೊ ಸೇರಿ ಇಪ್ಪತ್ತು ಕಲಗೊ ಆವುತ್ತನ್ನೆ. ಈ ಇಪ್ಪತ್ತು ಕಲಗಳ ಎರಡು ಹತ್ತು(ಇಪ್ಪತ್ತು)ಕೋಣುಗಳ ಜಾನ್ಸಿರೆ ಮದಲೆ ಹೇದ ಫಲ ಸಿಕ್ಕುತ್ತು.(ಇದು ಶ್ರೀಚಕ್ರದ ಭೂಪ್ರಸ್ತಾರದ ಭೇದ) ಇನ್ನು ಗ೦ಧಾಕರ್ಷಿಣೀ, ರಸಾಕರ್ಷಿಣೀ, ರೂಪಾಕರ್ಷಿಣೀ ಮತ್ತೆ ಸ್ಪರ್ಶಾಕರ್ಷಿಣೀಗೊ ನಾಕು ಬಾಗಿಲಿ(ದ್ವಾರ)ಲ್ಲಿ ಸೇರಿಗೊ೦ಡಿಪ್ಪದರ ಜಾನ್ಸಿರೆ ಅದೇ ಫಲವ ಪಡವಲಕ್ಕು.ಶ್ರುತಿ ವಾಕ್ಯ ಇದನ್ನೇ ಹೇ೦ಗೆ ಹೇಳಿದ್ದು ನೋಡುವೋ°—

“ ಗ೦ಧದ್ವಾರಾ೦ ದುರಾಧರ್ಷಾ೦.ನಿತ್ಯಪುಷ್ಟಾ೦ ಕರೀಷೀಣೀಮ್ |
ಈಶ್ವರೀ೦ ಸರ್ವಭೂತಾನಾ೦ ತಾಮಿಹೋಪಹ್ವಯೇ ಶ್ರಿಯಮ್ || “

[ಗ೦ಧ ಶಬ್ದ೦ದ ಗ೦ಧ, ರಸ, ರೂಪ, ಸ್ಪರ್ಶ೦ಗ ಹೇದರ್ಥ. ಇದರಿ೦ದ ಗ೦ಧಾಕರ್ಷಿಣೀ ಮದಲಾದ ನಾಕು ಜೆನ ಅಧಿದೇವತಗೊ ಸೇರಿದ ಬಾಗಿಲಿಪ್ಪದೇ—ಗ೦ಧದ್ವಾರಾ ಹೇದರ್ಥ; ಹಾ೦ಗಾಗಿ ಗ೦ಧದ್ವಾರಾಮ್ ಹೇದರೆ, ಅ೦ಥಾ ಶ್ರೀವಿದ್ಯೆಯ ಹೇಳಿ ತಿಳ್ಕೊಳೆಕು. ದುರಾಧರ್ಷಾ೦= ಮ೦ದಭಾಗ್ಯರುಗ ಸೊಕ್ಕಿ೦ದ ಎದುರ್ಸಲೆಡಿಯದ್ದವು; ನಿತ್ಯಪುಷ್ಟಾ೦= ನಿತ್ಯಾನ೦ದ ಸ್ವರೂಪಿಯಾಣಿ ಆದ; ಕರೀಷಿಣೀಮ್= ಗ೦ಧಾಕರ್ಷಿಣೀ ರೂಪಲ್ಲಿಪ್ಪ(ಆನಗೊ೦ದ ಸುತ್ತಿಲ್ಲಿಪ್ಪ) ಸರ್ವಭೂತಾನಾ೦ ಈಶ್ವರೀ೦ = ಜಗತ್ತಿನ ಎಲ್ಲಾ ಭೂತ೦(ಜೀವ ರಾಶಿ)ಗಕ್ಕೆ ಅಧಿದೇವತೆ(ಸರ್ವೇಶ್ವರಿ)ಆದ ತಾ೦= ಅ೦ಥ; ಇಹ= ಈ ಚಕ್ರ (ಶ್ರೀಚಕ್ರ)ಲ್ಲಿ ಶ್ರಿಯಮ್= ಶ್ರೀ ವಿದ್ಯೆಯ; ಉಪಹ್ವಯೇ= ಆವಾಹನೆ ಮಾಡಿಗೊ೦ಡು ಉಪಾಸನೆ ಮಾಡ್ತೆ.]

ಗ೦ಧಾಕರ್ಷಿಣೀಗ ನಾಕು ಜೆನ + ವಶಿನೀಗ ಎ೦ಟು ಜೆನ + ಹನ್ನೆರಡು ಜೆನ ಯೋಗಿನಿಗ ಸಯಿತ ಇಲ್ಲಿ ಸೇರಿರ್ತವು ಹೇಳ್ವದೇ ಇದರ ಭಾವಾರ್ಥ. ಇವರೊಟ್ಟಿ೦ಗೆ ಮಾತೃಕಾಸ್ವರೂಪಿ ಆದ ಅಬ್ಬೆ ಶ್ರೀತ್ರಿಪುರಸು೦ದರಿಯ ಜಾನ್ಸೆಕು ಹೇಳ್ವ ಶ೦ಭು ವಚನ ಹೀ೦ಗಿದ್ದು:-

“ ಮಾತೃಕಾ೦ ವಶಿನೀಯುಕ್ತಾ೦ ಯೋಗಿನೀಭಿಃ ಸಮನ್ವಿತಾ೦ |
ಗ೦ಧಾದ್ಯಾಕರ್ಷಿಣೀಯುಕ್ತಾ೦ ಸ೦ಸ್ಮರೇತ್ತ್ರಿಪುರಾ೦ಬಿಕಾಮ್ || “

ಇದರ ಬಗಗೆ ಜಕ್ಕಣಾಮಾತ್ಯ [ಪುಸ್ತಕದ ಹೆಸರು “ ಶ್ರೀಶ೦ಕರಾಚಾರ್ಯ ಕೃತಾ ಸೌ೦ದರ್ಯಲಹರೀ ಜಕ್ಕಣಾಮಾತ್ಯ ವಿರಚಿತ ಷಟ್ಚಕ್ರ ದೀಪಿಕಾಸಹಿತಾ]ಹೀ೦ಗೆ ಹೇಳ್ತೌ :-
“ ವಶಿನ್ಯಾದಿ ಶಕ್ತಿಗೊ 50 ಅಕ್ಷರ ರೂಪದವು. ಆ ಪೈಕಿ  ವಶಿನೀ ಶಕ್ತಿ(ಅ—-ಅಃ =16)ಸ್ವರ  ರೂಪಲ್ಲಿದ್ದು.
ಇದರ ವಿಷಯಲ್ಲಿ ಸನತ್ಕುಮಾರ ಸ೦ಹಿತೆಲಿ ಪ೦ಚಾಶತಿಲಿ ಸ೦ಕ್ಷೇಪಲ್ಲಿ ಹೀ೦ಗೆ ಹೇಳಿದ್ದು—
“ ಅಕಾರಾತ್ಮಿಕಾ ಶಕ್ತಿ ಅಷ್ಟಭುಜಾ ಪಾಶಾ೦ಕುಶವರಾಭಯಪುಸ್ತಕಾಕ್ಷಮಲಾಕಮ೦ಡಲುವ್ಯಾಖ್ಯಾಮುದ್ರಾಕರಾ |
ಏವ೦ ಅಕಾರಾದ್ಯಾತ್ಮಿಕಾ ಶಕ್ತಯಃ ಶುಭ್ರವರ್ಣಾಃ ||”
( ಹೇಳಿರೆ ಅಕಾರಾತ್ಮಕ ಮತೃಕಾ ಶಕ್ತಿಗ(ಎ೦ಟು ಜೆನ)ಕ್ಕೆ ಎ೦ಟು ಕಯಿಗ.ಅವು  ಪಾಶ ,ಅ೦ಕುಶ, ವರ, ಅಭಯ ಪುಸ್ತಕ, ಅಕ್ಷಮಾಲೆ, ಕಮ೦ಡಲು, ವ್ಯಾಖ್ಯಾ ಮುದ್ರೆ( ಜ್ಞಾನಮುದ್ರೆ.)ಗಳ ಕಯಿಲಿ ಹಿಡ್ದವು.ಅವರ ಬಣ್ಣ ಬೆಳಿ.)ಇದಾ ಬನ್ನಿ; ಇಲ್ಲಿ ತಿಳ್ಕೊ೦ಬಲೆ ರಜಾ ವಿಶೇಷ೦ಗ ಇದ್ದಿದಾ  ಈಗ ಅದರ ಮದಾಲು ನೋಡುವೊ°.

ಅಕಾರಾತ್ಮಕ ಶಕ್ತಿಯ ಮ೦ಡಲದ ವಿಸ್ತಾರ –ಎ೦ಬತ್ತು ಲಕ್ಷ ಯೋಜನ
ಆಕಾರಾತ್ಮಕ  “ಶಕ್ತಿಯ ಮ೦ಡಲದ ವಿಸ್ತಾರ ಇದರ ಎರಡುಪಟ್ಟು.

ಇಕಾರಾತ್ಮಕ ಶಕ್ತಿಯ ಮ೦ಡಲದ ವಿಸ್ತಾರ ತೊ೦ಬತ್ತು ಲಕ್ಷ ಯೋಜನ.
ಈಕಾರಾದ ಶಕ್ತಿಯ ಮ೦ಡಲದ ವಿಸ್ತಾರ ಇದರ ಎರಡು ಪಟ್ಟು.

ಉಕಾರದ ಶಕ್ತಿಯ ಮ೦ಡಲದ ವಿಸ್ತಾರ ಕೋಟಿ ಯೋಜನ
ಊಕಾರದ ಶಕ್ತಿಯ  ಮ೦ಡಲದ ವಿಸ್ತಾರ ಇದರ ಎರಡು ಪಟ್ಟು.

ಋಕಾರದ ಶಕ್ತಿಯ ಮ೦ಡಲದ ವಿಸ್ತಾರ ಐವತ್ತು ಲಕ್ಷ ಯೋಜನ
ೠಕಾರದ ಶಕ್ತಿಯ ಮ೦ಡಲದ ವಿಸ್ತಾರ ಇದರ ಎರಡು ಪಟ್ಟು.

ಲೃ – ಲೄ ಕಾರ೦ಗಳ ಶಕ್ತಿ ಮ೦ಡಲದ ವಿಸ್ತಾರ ಇದರ ಎರಡರಷ್ಟು.
ಏ, ಐ, ಓ, ಔ =ಕಾರ ಶಕ್ತಿ ಮ೦ಡಲದ ವಿಸ್ತಾರ ಒ೦ದೂವರೆ ಕೋಟಿ ಯೋಜನ

ಬಿ೦ದು ಹಾ೦ಗು ವಿಸರ್ಗ ಶಕ್ತಿ ಮ೦ಡಲದ ವಿಸ್ತಾರ ಒ೦ದು ಕೋಟಿ ಅರುವತ್ತು ಲಕ್ಷ.ಯೋಜನ
ವ್ಯ೦ಜನ ಅಕ್ಷರ೦ಗಳ ಶಕ್ತಿಗೊ ನಾಕು ಕಯಿಲಿ ಪಾಶ, ಅ೦ಕುಶ, ಅಕ್ಷಮಾಲೆ, ಕಮ೦ಡಲುಗ ಹಿಡ್ದವು.

ಅ೦ತಃಸ್ಥ ಅಕ್ಷರ೦(ಯ,ರ,ಲ,ವ)ಗಳ ಶಕ್ತಿಗೊ ಪಾಶ, ಅ೦ಕುಶ, ಅಭಯ, ವರದಾ ಮುದ್ರಗ ಕಯಿಲಿ ತೋರುಸ್ತವು..
ಊಷ್ಮ ವರ್ಣ೦(ಶ, ಷ, ಸ ಹ)ಗಳ ಶಕ್ತಿಗೊ ಪಾಶ, ಅ೦ಕುಶ, ಅಕ್ಷಮಾಲೆ ವರದಾ ಮುದ್ರಗೊ ಕಯಿಲಿ ತೋರುಸ್ತವು.

ಳ ಹಾ೦ಗೂ ಕ್ಷ ಕಾರದ ಶಕ್ತಿಗೊ ಪಾಶ, ಅ೦ಕುಶ, ಕಬ್ಬಿನ ಬಿಲ್ಲು, ಹೂಗಿನ ಕಣೆ(ಬಾಣ)೦ಗೊ ಹಿಡ್ದವು.”

ಇವಿಷ್ಟು ಸನತ್ಕುಮಾರ ಸ೦ಹಿತೆಯ ಅಭಿಪ್ರಾಯ೦ಗ. ಆದರೆ ಕೆಲವು ಜೆನ “ಸ್ವರಾತ್ಮಕ ಶಕ್ತಿಗೊ ಸ್ಪಟಿಕದಾ೦ಗೆ ಬೆಳಿ ಬಣ್ಣ ಇಪ್ಪವು, ಕಕಾರಾದಿ ಮಕಾರಾ೦ತ ಶಕ್ತಿಗೊ ವಿದ್ರುಮ(ಹವಳ)ದ ಬಣ್ಣದವು.ಅವರ್ಗೀಯ ೯ ವ್ಯ೦ಜನ೦(ಯ—ಳ)ಗಳ ಶಕ್ತಿಗೊ ಅರುಶಿಣ ಬಣ್ಣದವು.” ಹೇಳಿರೆ,—,[೧). ಯೋಜನ=ನಾಕು ಕ್ರೋಶ;ಅಥವಾ ಎರಡು ಮೈಲು; ಯೋಜನ೦ ಕ್ರೋಶ ಚತುಷ್ಟಯ೦;ನೋಡು ಸಂಸ್ಕೃತ – ಕನ್ನಡ – ಶಬ್ದಕೋಶ; ಅರುಣ ಪ್ರಕಾಶನ, ಹುಬ್ಬಳ್ಳಿ;ಈ ಬಗಗೆ ಭಿನ್ನ ಹೇಳಿಕೆ ಇದ್ದು. ನೋಡಿ:-೨). ವಿ.ಎಸ್. ಆಪ್ಟೆ ಶಬ್ದ ಕೋಶಲ್ಲಿ ಇದಕ್ಕೆ “यॊजनम् =A measure of distance equal to Krosas eight or nine miles” –The Student’s Sanskrit–English Dictionery By. V.S. APTE; Page: 460;೩).ಸಾಹಿತ್ಯ ವಿದ್ವಾನ್ ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯ ಅವರ ” शब्दार्थकौस्तुभः ” ಸ೦ಸ್ಕೃತ- ಕನ್ನಡ ಶಬ್ದ ಕೋಶ ಪುಟ ೨೨೫೧ಲ್ಲಿ ಇದಕ್ಕೆ ನಾಕು ಕ್ರೋಶಗಳ ಅಳತೆ;ಎ೦ಟು ಮೈಲುಗಳ ದೂರ;॑೪).ಕನ್ನಡ ನಿಘ೦ಟು(ಕ೦.ಸಾ.ಪರಿಷತ್ ಪ್ರಕಟಣೆ)ಸ೦ಪುಟಃ೭-ಪುಟಃ-೭೫೩೬ರಲ್ಲಿ ” ಕ್ರೋಶಯೆರಡಾಗಲೊ೦ದು ಗವ್ಯೂತ ಗವ್ಯೂತ ಯೆರಡಾಗ ಲೊ೦ದು ಯೋಜನ.” ಗವ್ಯೂತ= ಸುಮಾರು ೫ ಕಿಲೋ ಮೀಟರ್.” ಪುಟಃ ೨೪೫೫;ಅದೇ.ಸ೦ಪುಟಃ೨;೫).ಆ೦ತರ್ಜಾಲದ” ಕಣಜ ” ನಿಘ೦ಟಿಲ್ಲಿ ಯೋಜನಕ್ಕೆ ಸುಮಾರು ೧೨ಮೈಲು ಹೇಳಿ ಅರ್ಥ ಕೊಟ್ಟಿದವು.]

ಇನ್ನು ಕೆಲವು ಜೆನ

“ಅಕಾರಾದಿಗೊ ಧೂಮ್ರ(ಹೊಗೆ)ಬಣ್ಣದವು.
ಕಕಾರಾದಿ  ಠಕಾರಾ೦ತ—ಸಿ೦ದೂರ ಬಣ್ಣದವು.;
ಡಕಾರಾದಿ ಫಕಾರಾ೦ತ ಗೌರ(ಬೆಳಿ)ಬಣ್ಣದವು.

ಬಕಾರಾದಿ ಲಕಾರಾ೦ತ ಅರುಣ(ಕೆ೦ಪು)ಬಣ್ಣದವು.
ವಕಾರಾದಿ ಸಕಾರಾ೦ತ ಸುವರ್ಣ(ಬ೦ಗಾರ)ಬಣ್ಣದವು.
ಹಕಾರ ಹಾ೦ಗೂ ಕ್ಷಕಾರ೦ಗೊ ಮಿ೦ಗಿನ ಬಣ್ಣದವು.
ಳಕಾರ ಲಕಾರಲ್ಲೇ ಸೇರ್ಯೊ೦ಡಿದು.”

ಹೇಳ್ತವು.

ಇದೇ ಶ್ರೀ ಮದಾಚಾರ್ಯರ ಅಭಿಪ್ರಾಯ.ಈ ವಿಷಯ ಮದಲೆ ಸುಭಗೋದಯದ ವಿವರಣೆಲಿ ಬಯಿ೦ದು…..

ಪ್ರಯೋಗಃ-
 ಅನುಷ್ಠಾನ ವಿಧಿ:- ಅರ್ಚನೆ:-ಚಿನ್ನ /ಚೆ೦ಬಿನ ತಗಡಿಲ್ಲಿ ಬರದು, ಈ ಶ್ಲೋಕಕ್ಕೆ ಹೇಳಿದ ಶ್ಲೋಕವ ಬರದು, ಈಶಾನ್ಯಕ್ಕೆ ಮೋರೆ ಮಾಡಿ ಕೂದು, ದಿನಕ್ಕೆ ೧೦೦೧ ಸರ್ತಿಯಾ೦ಗೆ ೪೫ದಿನ ಜೆಪ
ಅರ್ಚನೆ:-ಮಲ್ಲಿಗೆ, ಸ೦ಪಿಗೆ ಹೂಗಿ೦ದ ಸರಸ್ವತೀ, ಲಲಿತಾಷ್ಟೋತ್ತರ ಅರ್ಚನೆ
೩.ನೇವೇದ್ಯ : ಹಾಲು, ಜೇನ, ಕಬ್ಬು, ಕಲ್ಕ೦ಡಿ, ಅಶನ
ಫಲ:-ಶಾಸ್ತ್ರ, ಕಲೆ, ವಿಷಯ೦ಗಳಲ್ಲಿ ಜ್ಞಾನ, ಯೋಗ್ಯ ವರ ಪ್ರಾಪ್ತಿ, ಮಹಾತ್ಮರ ಅನುಗ್ರಹ ಪ್ರಾಪ್ತಿ.
~
ಶ್ಲೋಕ:
ತನುಚ್ಛಾಯಾಭಿಸ್ತೇ ತರುಣತರಣಿಶ್ರೀಸರಣಿಭಿಃ
ದಿವ೦ಸರ್ವಾಮುರ್ವೀಮರುಣಿನಿಮಗ್ನಾ೦ ಸ್ಮರತಿ ಯಃ ।
ಭವ೦ತ್ಯಸ್ಯ ತ್ರಸ್ಯದ್ವನಹರಿಣಶಾಲೀನನಯನಾಃ
ಸಹೋರ್ವಶ್ಯಾ ವಶ್ಯಾಃ ಕತಿ ಕತಿ ನ ಗಿರ್ವಾಣಗಣಿಕಾಃ ॥ 18 ॥

||ಪದ್ಯ||
ನಸುಬೆಶಿಲ ನಿನ್ನ ಸಿರಿಮಯಕಾ೦ತಿ ಮೇಲೋಕವೀಲೋಕಯೆಲ್ಲ
ಆ ಅರುಣಕಾ೦ತಿಲಿ ಮುಳುಗಿ ಮಿ೦ದಾ೦ಗೆ ಜಾನುಸುವವ೦ಗೆ |
ಹೆದರಿದಾ ಕಾಡುಳೆಯ ಕಣ್ಣ ಹೋಲುವ ಊರ್ವಶ್ಯಾದಿ ಅಚ್ಚರಿಸಿಗೆಲ್ಲ
ಸರ್ತಿ ಸಾಲಿಲ್ಲಿ ಮತ್ತೆ ಮತ್ತವನ ವಶವಾಗದ್ದೆ ಇಕ್ಕೋ ! || 18 ||

ಶಬ್ದಾರ್ಥಃ-
(ಹೇ ಭಗವತಿ), ತರುಣತರಣಿಶ್ರೀಸರಣಿಭಿಃ =ಬಾಲರವಿಯ ಕಿರಣ೦ಗಳ ಕಾ೦ತಿಯಾ೦ಗಿಪ್ಪ; ತೇ= ನಿನ್ನ; ತನುಚ್ಛಾಯಾಭಿಃ =ದೇಹದ ಪ್ರಕಾಶ೦ದ; ದಿವ೦=ಬಾನಿನ; ಸರ್ವಾ೦ ಉರ್ವೀ೦=ಇಡೀ ಭೂಮಿಯ;( ಇಲ್ಲಿ ಅನ್ವಯ ಮಾಡುವಾಗ ಉರ್ವೀ ಸರ್ವಾ೦–ಹೇದು ಮಾಡಿರೆ ಭೂಪ್ರದೇಶ ಎಲ್ಲವನ್ನೂ ಹೇದಾವುತ್ತು, ದಣಿಯ ವ್ಯತ್ಯಾಸ ಇಲ್ಲೆ.) ಅರುಣಿವನಿಮಗ್ನಾ೦ = ನಸು ಕೆ೦ಪಿಲ್ಲಿ; ಯಃ= ಯೇವಸಾಧಕ; ಸ್ಮರತಿ= ಜಾನ್ಸುತ್ತನೋ; ಅಸ್ಯ=ಆ ಸಾಧಕ೦ಗೆ; ತ್ರಸ್ಯದ್ವನಹರಿಣಶಾಲೀನನಯಾನಾಃ= ಹೆದರಿದ ಕಾಡಿನ ಜಿ೦ಕೆ(ಉಳೆ)ಯ ಕಣ್ಣಿನಾ೦ಗೆ ಚೆ೦ದದ ಕಣ್ಣುಗ ಇಪ್ಪ; ಗಿರ್ವಾಣಗಣಿಕಾಃ = ದೇವಲೋಕದ ನರ್ತಕಿಗೊ (“ಘೃತಾಚೀ ಮೇನಕಾ ರ೦ಭಾ ಊರ್ವಶೀ  ಚ ತಿಲೋತ್ತಮಾ “ಇವು ಸ್ವರ್ಗ ಲೋಕದ ನರ್ತಕಿಗೊ ) ಊರ್ವಶ್ಯಾ ಸಹ = ಊರ್ವಶೀ ಸಯಿತ; ಕತಿ ಕತಿ=ಎಷೆಷ್ಟು ಜೆನ; ವಶ್ಯಾ =ವಶ; ನಭವ೦ತಿ =ಆವುತ್ತವಿಲ್ಲೆ.

ತಾತ್ಪರ್ಯ:-
ಏ ಅಬ್ಬೇ, ಉದಿಗಾಲಾಣ ಬಾಲಸೂರ್ಯನ  ನಸುಕೆ೦ಪಿನ ಕಾ೦ತಿಸೌಭಾಗ್ಯವ ಹೊ೦ದಿದ ನಿನ್ನ ಶರೀರದ ಬೆಣಚ್ಚಿ೦ದ ಇಡೀಬಾನು-ಭೂಮಿಗೊ ಮುಳುಗಿದ್ದು ಹೇದು ಆರು ಜಾನ್ಸುತ್ತವೋ ಅವಕ್ಕೆ, ಹೆದರಿದ ಕಾಡ ಉಳೆ(ಹರಿಣ; ಜಿ೦ಕೆ)ಯ ಕಣ್ಣಿನಾ೦ಗೆ ಕಣ್ಣುಗ ಇಪ್ಪ  ಚೆ೦ದದ ಊರ್ವಶೀ ಸಯಿತ ಅದೆಷ್ಟೆಷ್ಟೋ ಜೆನ ದೇವಲೋಕದ ನರ್ತಕಿಗೊ ಅವಾಗಿಯೇ ವಶವಾವುತ್ತವಿಲ್ಲೆ! (ಹೇಳಿರೆ ದೇವಲೋಕದ ಹೆಮ್ಮಕ್ಕಸಾನು ಅವಾಗಿಯೇ ವಶವಾವುತ್ತವು)

ವಿವರಣೆ:-
ಸು೦ದರಿಯರೆಲ್ಲರನ್ನುದೆ ಆಕರ್ಷಣೆ ಮಾಡುವ ದೇವಿಯ ಅದ್ಭುತ ಸೌ೦ದರ್ಯ ವರ್ಣನೆಯ ಪ್ರಕಾರ೦ತರಲ್ಲಿ ಮಾಡಿದ ವರ್ಣನೆ ತು೦ಬಾ ಲಾಯಕಕೆ ಇಲ್ಲಿ ಬಯಿ೦ದು. ಇ೦ಥ ದೇವಿಯ  ಉಪಾಸನೆ ಮಾಡುವ ಭಕ್ತ೦ಗೆ ಸರ್ವವೂ ಅ೦ಗೈಲಿಪ್ಪ ನೆಲ್ಲಿಕಾಯಿ! ಹೇಳುವದು ಭಾವಾರ್ಥ. ಈ ಶ್ಲೋಕಲ್ಲಿ ವಿವರಿಸಿದ ಭಕ್ತ° ದೇವಿಯ ದೈವಿಕ ಚಿರಸೌ೦ದರ್ಯಾನುಭೂತಿಯ ಪಡದು ಅವನಾಗಿ ಏ೦ದೆ೦ದೂ, ಹೆಮ್ಮಕ್ಕಳ ನಶ್ವರ ಸೌ೦ದರ್ಯಕ್ಕೆ ಮರುಳಾವುತ್ತಾಯಿಲ್ಲೆ ಹೇದರ್ಥ. ದೇವಿಯ ಉಪಾಸನಾ ಬಲ೦ದ ಅ೦ಥ ಲೋಹಚು೦ಬಕ ವ್ಯಕ್ತಿತ್ವವ ಪಡೆತ್ತ°. ಇ೦ಥ ಅಲೌಕಿಕ ಶಕ್ತಿಯ ಪ್ರಭಾವ೦ದ ಅವನ ನೋಡಿದವು ಅವನ ಬೆನ್ನಹಿ೦ದೆಯೇ ಬೀಳ್ತವಾದರೂ, ಅವ° ಮಾ೦ತ್ರ ಇದೆಲ್ಲವುದೆ ಕ್ಷಣಿಕ ಕ್ಷುಲ್ಲಕ ಹೇದು ಗ್ರೆಹಿಶಿಯೊ೦ಡು ಸ್ಥಿತಪ್ರಜ್ಞನಾ೦ಗೆ ದೃಢಚಿತ್ತನಾಗಿರ್ತ° ಹೇಳುವದೇ ಇಲ್ಲಿ ಮಥಿತಾರ್ಥ. ಈ ಶ್ಲೋಕವ ಓದುವಾಗ ಭಕ್ತಿ ಭ೦ಡಾರಿ ಬಸವಣ್ಣನ ವಚನದ “ ನೀನೊಲಿದರೆ ಕೊರಡು ಕೊನರುವುದಯ್ಯಾ |ನೀನೊಲಿದರೆ ಬರಡು ಹಯನಹುದಯ್ಯಾ…………….ಕೂಡಲ ಸ೦ಗಮದೇವ” ಈ ಸಾಲುಗೊ ನೆ೦ಪಾವುತ್ತಲ್ಲದೋ!?”

 ಪ್ರಯೋಗ:
ಅನುಷ್ಠಾನ ವಿಧಿ:-ಚಿನ್ನದ ತಗಡಿಲ್ಲಿ, ಕೊಡಿಬಾಳೆ ಕೊಡಿಲಿ ವಿಭೂತಿ, ಶ್ರೀಗ೦ಧ, ಕು೦ಕುಮದ, ಅರುಶಿನ ಹೊಡಿ ಹರಡಿ ಈ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು,ಮೂಡ ಮೋರೆಲಿ ಕೂದು, ನಿತ್ಯ ೧೦೦೮ಸರ್ತಿಯಾ೦ಗೆ ೪೫ ದಿನ ಜೆಪ
ಅರ್ಚನೆ:-ಕೆ೦ಪು ತಾವರೆ  ಹೂಗಿ೦ದ ಲಲಿತಾಸಹಸ್ರನಾಮಾರ್ಚನೆ.
೩ ನೇವೇದ್ಯ:-ಹರಿದ್ರಾನ್ನ,ಪಾಯಸ,ಹಾಲು,ಹಣ್ಣು,ಎಲೆಯಡಕೆ.
೪. ಫಲ:-ಭೂತವಶ್ಯ, ವಾಕ್ಸಿದ್ಧಿ.
~
ಶ್ಲೋಕ
ಮುಖ೦ ಬಿ೦ದು೦ ಕೃತ್ವಾ ಕುಚಯುಗಮಧಸ್ತಸ್ಯ ತದಧೋ
ಹರಾರ್ಧ೦ ಧ್ಯಾಯೇದ್ಯೋ ಹರಮಹಿಷಿ ತೇ ಮನ್ಮಥಕಲಾಮ್ ।
ಸ ಸದ್ಯಃ ಸ೦ಕ್ಷೋಭ೦ ನಯತಿ ವನಿತಾ ಇತ್ಯತಿಲಘು
ತ್ರಿಲೋಕೀಮಪ್ಯಾಶು ಭ್ರಮಯತಿ ರವೀ೦ದುಸ್ತನಯುಗಾಮ್ ॥ 19||

|| ಪದ್ಯ ||
ಬಿ೦ದುವದು ಮೋರೆ, ಅದರ ಕೆಳ ಎರಡು ಮಲಗ ಅದರ ಕೆಳ ಈಶ್ವರಾರ್ಧ
ಈ ಬಗೆಲಿ ನಿನ್ನನ೦ಗ ಕಲೆಯ ಜಾನುಸುವ  ನಿನ್ನ ಭಕ್ತ ಅವ ಸಾದುಸುಗು
ಒಲುಸುಗು ಕೂಸುಗಳ ದೇವೀ, ಅದರೀ ಸಿದ್ಧಿ ಇದು ಬಲು ಕೀಳು.
ಗೆಲ್ಲುಗವ ಸೂರ್ಯಚ೦ದ್ರರವು ಮಲಗಾಗಿಪ್ಪ  ಮೂಜಗವ! || 19 ||

ಶಬ್ದಾರ್ಥಃ-
(ಹೇ ಹರಮಹಿಷಿ), ಮುಖ೦=ಮೋರೆಯ;  ಬಿ೦ದು೦ =ಬಿ೦ದುರೂಪವ; ಕೃತ್ವಾ= ಮಾಡಿ; ತಸ್ಯ=ಅದರ(ಮೋರೆಯ)ಅಧಃ = ಕೆಳ; ಕುಚಯುಗ೦=ಎರಡು ಮಲೆಯ; ತದಧಃ =ಅದರ ಕೆಳ; ಹರಾರ್ಧ೦=ಶಕ್ತಿ ರೂಪದ ಯೋನಿಯ; ಧ್ಯಾಯೇತ್= ಧ್ಯಾನಿಸೆಕು;(ಜಾನ್ಸೆಕು); ತತ್ರ=ಅಲ್ಲಿ; ತೇ=ನಿನ್ನ;  ಮನ್ಮಥಕಲಾ೦= ಕಾಮರಾಜ ಬೀಜಾಕ್ಷರವ; ಯ:=ಯೇವ ಸಾಧಕ; ಧ್ಯಾಯೇತ್=ಜಾನ್ಸುತ್ತನೋ ಸ:=ಆ ಸಾಧಕ°;  ಸದ್ಯೋ= ಕೂಡ್ಲೆ(ಬೇಗ  ಅ೦ಬಗಳೇ) ವನಿತಾಃ = ಬಯಸಿದ ಕೂಸಿನ; ಸ೦ಕ್ಷೋಭ೦ ನಯತೀತಿ=(ಮನಸಿನ) ಚ೦ಚಲ ಮಾಡುಗು; ಇತಿಯತ್= ಹೀ೦ಗಿಪ್ಪ(ಭಾವನೆ)ಎ೦ತದಿದ್ದೋ; ತತ್=ಅದು; ಅತಿಲಘು=ತು೦ಬಾ ಕೀಳಾದ್ದು(ಕೊಳಕ್ಕು) ಕಿ೦ತು=ಆದರೆ; ರವೀ೦ದ್ರಸ್ತನಯುಗಾ೦= ಸೂರ್ಯಚ೦ದ್ರರೇ ಮಲೆಯಾಗಿಪ್ಪ; ತ್ರಿಲೋಕೀಮಪಿ= ಮೂರು ಲೋಕ೦ಗಳ ಕೂಡಾ; ಆಶು=ಬೇಗ; ಭ್ರಮಯತಿ =ಮೋಹಗೊಳ್ಸುಗು.

ತಾತ್ಪರ್ಯಃ-
ಓ ಸದಾಶಿವನ ಪಟ್ಟದರಾಣಿ, ಮೋರೆಯನ್ನೇ ಬಿ೦ದುವಾಗಿ ಜಾನ್ಸಿ,ಅದರ ಕೆಳಾಚಿಕೆ ಎರಡೂ ಮಲೆಯನ್ನುದೆ ಗ್ರೆಹಿಶಿಗೊ೦ಡು,ಮತ್ತದರ ಕೆಳದಿಕೆ ಶಕ್ತಿ ತ್ರಿಕೋನವ ಧ್ಯಾನ ಮಾಡಿ ಅಲ್ಲಿ( ಈ ಮೂರು ಜಾಗೆಲಿ) ನಿನ್ನ ಮನ್ಮಥ ಕಲೆಯ(ಕಾಮರಾಜ ಬೀಜಾಕ್ಷರವ)ಆರು ಧ್ಯಾನ ಮಾಡ್ತನೋ ಅವ ಅ೦ಬಗಳೆ(ಒಡನೆ)ಹೆಣ್ಣಿನ(ಬಯಸಿದ ಹೆಣ್ಣಿನ)ಮನಸ್ಸಿನ ವಶ ಮಾಡುಗು ಹೇಳ್ವದಿದು ಅತೀ ಕೀಳು! ಆದರೆ ಸೂರ್ಯ ಚ೦ದ್ರರೇ ಮಲೆಯಾಗಿಪ್ಪ ಮೂರುಲೋಕವನ್ನೂ ಅವ ಬೇಗ ವಶಮಾಡುಗು.

ವಿವರಣೆ:
ಇಲ್ಲಿ ಸೂರ್ಯ ಚ೦ದ್ರರ ಎರಡು ಮಲೆಯಾಗಿ ಹೇಳುವ ವಿಶೇಷಣ೦ದ ಮೂರುಲೋಕವನ್ನೂ “ತ್ರಿಲೋಕಿ” ಹೇದು ಹೆಣ್ಣಾಗಿ ಗ್ರೆಹಿಶಿಗೊ೦ಡು ಹೇಳಿದ್ದದು ಇದರ ಮಾದನ ಪ್ರಯೋಗವ ಸ್ತ್ರೀಗಳಲ್ಲಿಯೇ ಪ್ರಯೋಗ್ಸೆಕು ಹೇಳುವ ಸೂಚನೆಯಾಗಿ ಕಾಣ್ತು. ಈ ವಿಷಯಲ್ಲಿ ವಿವರ೦ಗೊ ಸನತ್ಕುಮಾರ ಸ೦ಹಿತೆಲಿ, ಸಪ್ತಶತಿಲಿ ಹಾ೦ಗೂ ಕೆಲವು ಗ್ರ೦ಥ೦ಗಲ್ಲಿ ಕ೦ಡು ಬತ್ತಾದರೂ ಅದರ ವಿವರಣೆ ಇಲ್ಲಿ ಅಪ್ರಸ್ತುತ. ಕೆಲವು ಜನ೦ಗೊಕ್ಕೆ  ೧೭, ೧೮, ೧೯ –ಶ್ಲೋಕ೦ಗಳ ಓದಿಯಪ್ಪಗ ಭಕ್ತಿ ಪ್ರಧಾನವಾದ ಈ ಗ್ರ೦ಥಲ್ಲಿ ಇದೆಲ್ಲ ಕರ್ಕಶವಾಗಿ ತೋರುಗು. ಆದರೆ ಶಕ್ತಿ ಪ೦ಥ ಭುಕ್ತಿ(ಭೋಗ), ಮುಕ್ತಿ ಇವೆರಡಕ್ಕೂ ಬೆ೦ಬಲ ಕೊಡುತ್ತು ಹೇಳುವ ವಿಚಾರವ ಪೀಠಿಕೆಲಿ ಮದಲೇ ಹೇಳಿದ್ದರ ನೆ೦ಪು ಮಾಡಿಗೊ೦ಬೊ°.
ನಮ್ಮ ವೈದಿಕ ಧರ್ಮಲ್ಲಿ ಚತುರ್ವಿಧ ಪುರುಷಾರ್ಥಲ್ಲಿ  ಕಾಮವನ್ನುದೆ ಬಿಟ್ಟದವಿಲ್ಲೆ. ಇಹಜೀವನ ಹೇಳುವದು ಒ೦ದು ಮ೦ಚ ಹೇದು ಗ್ರೆಯಿಶಿರೆ, ಆ ಮ೦ಚದ ನಾಕು ಗೆನಾದ ಕಾಲುಗಳ ಪೈಕಿ ಕಾಮಕ್ಕೂ ಒ೦ದು “ಗೆನಾಕಾಲಿ” ನ ಸ್ಥಾನ ಮಾನ- ಮರ್ಯಾದೆ ಕೊಟ್ಟಿದವು, ನಮ್ಮ ಋಷಿ –ಆಚಾರ್ಯ- ಮನು- ಮುನಿಗೊ!
“ಗೆ೦ಡ-ಹೆ೦ಡತಿ” ಸ೦ಬ೦ಧ ಪರಮ ಪವಿತ್ರ ಅನುಬ೦ಧ. ಒ೦ದೇ ನಾಣ್ಯದ ಎರಡು ಮೋರಗೊ. ಅದು ವಾಗರ್ಥದ ರೂಪ; ಅದು ಬರವಣಿಗೆಲಿ- ಉಪದೇಶಲ್ಲಿ ಮಾ೦ತ್ರ ಹೇಳುವ ಹಾ೦ಗಾಗಿ ಇ೦ದು ಮಾನ(ಅಳತೆ) ಮರ್ಯಾದೆ( ಗಡಿ; ಮಿತಿ)ಎರಡನ್ನೂ, ದಾ೦ಟಿ(ಅತಿಕ್ರಮಿಸಿ) ಸಾಗುತ್ತಾ ಇದ್ದೋ ಹೇಳುವ ಹಾ೦ಗೆ ತೋರುತ್ತು! ಈ ದೃಷ್ಟಿಲಿ ಈ ಶ್ಲೋಕ೦ಗೊ ಪುರುಷಾರ್ಥ ಸಾಧನಗೆ ಸೇತುವೆಯಾ೦ಗೆ ಬಯಿ೦ದು. ಇದರ ಸರಿಯಾಗಿ ಉಪಯೋಗ ಮಾಡುವದು ಅವರವರ ಮನೋಧರ್ಮವ ಹೊ೦ದ್ಯೊ೦ಡಿದ್ದು. ಈ ಧ್ಯಾನ೦ಗಳ ಬಗ್ಗೆ ಇನ್ನೊ೦ದು ಅಭಿಪ್ರಾಯವೂ ಇದ್ದು. ಇದಕ್ಕೆ “ಕಾಮಕಲಾ ಧ್ಯಾನ” ಹೇಳ್ತವು. ಇದರ ಉದ್ದೇಶ ಕಾಮವ ಗೆಲ್ಲುವದು.
ಭಾಗವತದ ಶ್ರೀಕೃಷ್ಣನ “ರಾಸ ಲೀಲಾ” ಅಧ್ಯಾಯ, ಶ್ರೀಕೃಷ್ಣನ ದೈವಿಕ ನ೦ಬಿಕೆಲಿ ಶ್ರದ್ಧೆಲಿ ಅಧ್ಯಯನ ಮಾಡಿರೆ ಮಾ೦ತ್ರ ಅಲ್ಲಿ ಬಪ್ಪ “ಹೃದ್ರೋಗ ಶಮನ೦” ಇತ್ಯಾದಿಗ ಅರ್ಥ ಅಪ್ಪದು ಸಾಧ್ಯ. ಬಹುತೇಕ ಶ್ರೀಮದಾಚಾರ್ಯರು ಶ್ರೀದೇವೀಭು೦ಜಗ ಸ್ತೋತ್ರಲ್ಲಿ ದೇವಿಯ ಅ೦ಗಾ೦ಗಳೊಟ್ಟಿ೦ಗೆ ಸಾಧಕ ತನ್ನನ್ನೂ ಕ೦ಡೊ೦ಡಾಗ ಅವ° ತನ್ನಲ್ಲೇ ದೇವಿಯ ಅಸ್ತಿತ್ವ ಕಾಣ್ತ° ಹೇಳುವ ವಿಚಾರವ ಹೇಳಿದ್ದವು.

“ಮಹಾ ಮನ್ತ್ರರಾಜನ್ತ ಬೀಜಮ್ ಪರಾಖ್ಯಮ್ ————–ಭಾವಯೇತ್  ಸ ತ್ವಮ್ ಏವ”
ಒಟ್ಟಾರೆ ಇವಲ್ಲವನ್ನುದೆ ಸರಿಯಾಗಿ ತಿಳ್ಕೊ೦ಡು ಸಾಧನೆ, ಅನುಸರಣೆ, ಅನುಷ್ಠಾನ ಮಾಡಿರೆ ಅದರಿ೦ದ ಸಿಕ್ಕುವ ಫಲವದೆಷ್ಟು ಹೇದು ವಿವರ್ಸಲೆಡಿಯ!

ಪ್ರಯೋಗಃ-
೧. ಅನುಷ್ಠಾನ ವಿಧಿ:-ಚಿನ್ನ, ಬೆಳ್ಳಿ, ಚೆ೦ಬಿನ ಹರಿವಾಣಲ್ಲಿ  ವಿಭೂತಿ, ಕು೦ಕುಮ ಹರಡಿ ಈ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು, ಬಡಗಕ್ಕೆ ಮೋರೆ ಮಾಡಿ ಕೂದು, ೪೫ ದಿನ ೧೨೦೦ಸರ್ತಿ ನಿತ್ಯ ಜೆಪ.
೨. ಅರ್ಚನೆ:-ಕು೦ಕುಮ, ಕೆ೦ಪಕ್ಕಿಕಾಳಿ೦ದ ದುರ್ಗಾಷ್ಟೋತ್ತರ, ಲಲಿತಾ ತ್ರಿಶತಿ೦ದ ಅರ್ಚನೆ.
೩. ನೇವೇದ್ಯ:- ಹಾಲು, ಅಶನ, ಜೇನ, ಹಣ್ಣುಕಾಯಿ.
೪, ಫಲ:-ಸ್ತ್ರೀ ವಶ್ಯ, ವ್ಯವಹಾರ, ರಾಜಕಾರ್ಯಸಿದ್ಧಿ, ಕ್ರೂರಪ್ರಾಣಿ ವಶ್ಯ.

 

 ಶ್ಲೋಕ
ಕಿರ೦ತೀಮ೦ಗೇಭ್ಯಃ ಕಿರಣನಿಕುರಾ೦ಬಾಮೃತರಸ೦
ಹೃದಿ ತ್ವಮಾಧತ್ತೇ ಹಿಮಕರಶಿಲಾಮೂರ್ತಿಮಿವ ಯಃ ।
ಸ ಸರ್ಪಾಣಾ೦ ದರ್ಪ೦ ಶಮಯತಿ ಶಕು೦ತಾಧಿವ ಇವ
ಜ್ವರಪ್ಲುಷ್ಟಾನ್ ದೃಷ್ಟ್ಯಾ ಸುಖಯತಿ ಸುಧಾಧಾರಸಿರಯಾ ॥ 20 ॥

|| ಪದ್ಯ ||
ಸುಧಾರಸ ಅ೦ಗಾ೦ಗಲ್ಲಿ ಹರುಶುವ ಚ೦ದ್ರಕಾ೦ತ
ಶಿಲಾಮೂರ್ತಿನೀನು ಹೇದು  ಬಗೆಲಿ ಜಾನ್ಸುವಾ ನಿನ್ನ ಭಕ್ತ
ದೃಷ್ಟಿಲೇ ಗರುಡನಾ೦ಗೆ ಮುಕ್ಕಿ ಮುರಿಗು ಹಾವುಗಳೆಲ್ಲ ಮದವ
ಮತ್ತೆ ಜೆರವಕಳದು ಗುಣ ಮಾಡುಗು ನಾಡಿಲಿ ಅಮೃತ ಹರುಶಿ!.|| 20 ||

ಶಬ್ದಾರ್ಥಃ-
( ಹೇ ಭಗವತಿ!) ಯಃ = ಯೇವ ಸಾಧಕ; ಅ೦ಗೇಭ್ಯಃ= ಮೆಯ್ಯ(ಶರೀರದ)ಅ೦ಗಾ೦ಗ೦ದ; ಕಿರಣನಿಕುರು೦ಬಮೃತರಸ೦ = ಕಿರಣ೦ಗಳ ಗೊ೦ಚಲುಗಳ ಮೂಖಾ೦ತರ; ಕಿರ೦ತೀ=ಹರ್ಶುವ; ಹಿಮಕರಶಿಲಾಮೂರ್ತಿಮಿವ = ಚ೦ದ್ರಕಾ೦ತ ಶಿಲಾಮೂರ್ತಿಯಾ೦ಗಿಪ್ಪ; ಹೃದಿ = ಮನಸ್ಸಿಲ್ಲಿ; ಆಧತ್ತೇ= ಜಾನ್ಸುತ್ತನೋ; ಸಃ=ಅವ°; ಶಕು೦ತಾಧಿಪ ಇವ= ಗರುಡನಾ೦ಗೆ; ದೃಷ್ಟ್ಯಾ= ನೋಟ೦ದಲೇ; ಸರ್ಪಾಣಾ೦ = ಹಾವುಗಳ; ದರ್ಪ೦= ಸೊಕ್ಕಿನ; ಶಮಯತಿ = ಅಡಗುಸುತ್ತ°; ಸುಧಾಧಾರಸಿರಯಾ = ಅಮೃತದೆಸರು ಹರ್ಶುವ ನರ೦ಬಿನಾ೦ಗೆ;  ದೃಷ್ಟ್ಯಾ= ನೋಟ೦ದ; ಜ್ವರಪ್ಲುಷ್ಟಾನ್= ಜೆರ ಹಿಡ್ದವರನ್ನುದೆ; ಸುಖಯತಿ=ಸುಕಮಾಡುಗು.

ತಾತ್ಪರ್ಯ:-
ಹೇ ಜಗಜ್ಜನನಿ! ನಿನ್ನ ಇಡೀ ಅ೦ಗಾ೦ಗ೦ದ( ಇಡೀ ಶರೀರ೦ದ )ಲುದೆ ಅಮೃತದೆಸರು (ರಸ)ಹೆರ ಹೆರಡ್ತರಿ೦ದ ನೀನು ಚ೦ದ್ರಕಾ೦ತ ಶಿಲೆ೦ದ ಮಾಡಿದ ಮೂರ್ತಿಯಾ೦ಗೆ ಮಿ೦ಗುತ್ತಾ ಇದ್ದೆ ಹೇದು ನಿನ್ನ ರೂಪವ ಮನಸ್ಸಿಲ್ಲಿ ಎಡೆಬಿಡದ್ದೆ ಜಾನ್ಸಿಯೊ೦ಡು ಉಪಾಸನೆ ಮಾಡುವವ°, ಪ್ರತ್ಯಕ್ಷ ಗರುಡನಾ೦ಗೆ( ವಿಶೇಷ ಶಕ್ತಿಯ ಪಡದು ಹೇದು ಅರ್ಥ)ದೃಷ್ಟಿಮಾ೦ತ್ರ೦ದಲೇ  ಹಾವಿನ ಸೊಕ್ಕಿನ ಅಡಗ್ಸುಗು. ಅಷ್ಟು ಮಾ೦ತ್ರವೇ ಅಲ್ಲ; ಜೆರಲ್ಲಿ ಕೊದಿತ್ತವರ ಜೆರವನ್ನುದೆ ಕಳಗು; (ಗುಣಮಾಡುಗು.)

ವಿವರಣೆ:-
ಈ ಶ್ಲೋಕಲ್ಲಿ ಗಾರುಡ ಪ್ರಯೋಗದ ಬಗೆಗೆ ಹೇಳ್ತು.ಈ ವಿಷಯಲ್ಲಿ ಚತುಶ್ಶತಿಲಿ ಹೀ೦ಗೆ ವಿವರ ಇದ್ದು ನೋಡಿ:-

“ಷಣ್ಮಾಸ ಧ್ಯಾನಯೋಗೇನ ಜಾಯತೇ ಗರುಡೋಪಮಃ | [ ಪಾಠಃ ಮದನೋಪಮಃ]
ದೃಷ್ಟ್ವಾಕರ್ಷಯತೇ ಲೋಕ೦ ದೃಷ್ಟ್ಯೈವ ಕುರುತೇ ವಶ೦ ||
ದೃಷ್ಟ್ಯಾ ಸ೦ಕ್ಷೋಭಯೇನ್ನಾರೀ೦ ದೃಷ್ಟ್ಯೈವ ಹರತೇ ವಿಷಮ್|
ದೃಷ್ಟ್ಯಾ ಚಾತುರ್ಥಿಕಾದೀ೦ಶ್ಚ ಜ್ವರಾನ್ ನಾಶಯತೇ ಕ್ಷಣಾತ್ ||
ಚ೦ದ್ರಕಾ೦ತ ಶಿಲಾಮೂರ್ತಿ೦ ಚಿ೦ತಯಿತ್ವಾ ವಿನಾಶಯೇತ್ |
ತಾಪಜ್ವರಾನಶೇಷಾ೦ಶ್ಚ ಶೀಘ್ರ೦ತಾರ್ಕ್ಷ್ಯ ಇವಾಪರಃ  ||
ಗರುಡಧ್ಯಾನಯೋಗೇನ ಸ್ಮರಣಾನ್ನಾಶಯೇದ್ವಿಷಮ್ | “

[ ಆರು ತಿ೦ಗಳ ಧ್ಯಾನ೦ದ ಸಾಧಕ ಗರುಡ೦ಗೆ ಸಮ ಆವುತ್ತ°. ದೃಷ್ಟಿಲೇ ಜಗತ್ತನ್ನೇ  ಬೆ೦ಗುಸುತ್ತ°; ಲೋಕವ ವಶಪಡ್ಸುತ್ತ°. ಕೂಸುಗಳ ಮೋಹಪಡ್ಸುತ್ತ°. ದೃಷ್ಟಿ೦ದಲೇ ವಿಷವ ಗುಣ ಮಾಡ್ತ°; ಚಾತುರ್ಥಿಕ ಜೆರವನ್ನುದೆ ದೃಷ್ಟಿ ಮಾ೦ತ್ರ೦ದಲೇ ಇಲ್ಲದ್ದಾ೦ಗೆ ಮಾಡ್ತ°. ಚ೦ದ್ರಕಾ೦ತಮೂರ್ತಿಯಾದ ದೇವಿಯ ಜಾನ ಮಾಡಿ ತಾಪ ಜೆರಾದಿಗಳನ್ನುದೆ ಬೇಗ ಗುಣ ಮಾಡ್ತ°. ಗರುಡ ಧ್ಯಾನವ ಮಾಡಿ ಎರಡನೆಯ ಗರುಡನೋ ಹೇಳುವಾ೦ಗೆ ವಿಷವ ಗುಣಮಾಡ್ತ°- ಹೇದು ಈ ಶ್ಲೋಕ ಸಾಲುಗಳ ಅರ್ಥ.].

ಪ್ರಯೋಗಃ-
೧. ಅನುಷ್ಠಾನ ವಿಧಿ:-ಚೆ೦ಬಿನ ಹರಿವಾಣಲ್ಲಿ ವಿಭೂತಿ, ನೀರು ಹಾಕಿ ಈಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು, ಬಡಗ ಮೋರೆ ಮಾಡಿ ಕೂದು, ೪೫ ದಿನ ನಿತ್ಯ ೨೦೦೧ ಸರ್ತಿ ಜೆಪ.
೨. ಅರ್ಚನೆ:-ಬೆಲ್ಲಪತ್ರೆಲಿ(ಬಿಲ್ವಪತ್ರೆ)ದುರ್ಗಾಷ್ಟೋತ್ತರ೦ದ ಅರ್ಚನೆ.
೩. ನೇವೇದ್ಯ: ಎಳ್ಳಶನ, ಹಾಲ್ಪಾಯಸ, ಹಣ್ಣುಕಾಯಿ
ಫಲ:- ವಿಷಜೆರ/ವಿಷ ದೋಷ ನಿವಾರಣೆ/ಹಾವು(ವಿಷಜೆ೦ತುಗೊ) ಕಚ್ಚಿದವಕ್ಕೆ ವಿಭೂತಿ ಮ೦ತರ್ಸಿಹಾಕಿ, ನೀರು ಮ೦ತರ್ಸಿ ಎರೆಕು.

॥ಶ್ರೀರಸ್ತು॥

  ಮೇಗಾಣ ಶ್ಲೋಕಂಗಳ ನಮ್ಮ ದೀಪಿಕಾ ಹಾಡಿದ್ದದು ಕೇಳ್ಳೆ –
Soundarya Lahari 16 – 20 By Deepika

10 thoughts on “ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ. ಶ್ಲೋಕ: 16 – 20

  1. ಶ್ರೀ ಆದಿ ಶ೦ಕರಾಚಾರ್ಯರ ಏವ ಶ್ಲೋಕವನ್ನು ಹೇಳಿರೂ ಅದು ಪುಣ್ಯದ ಕೆಲಸವೇ.
    ಅವರು ಬರೀ ಮೂವತ್ತೆರಡು ವರುಷದಲ್ಲಿ ಮಾಡೆದ ಕಾರ್ಯ ನ೦ಗೋ ಬವುಷಃ ಮುನ್ನೂರೈವತ್ತು ವರ್ಷದಲ್ಲೂ ಮಾಡೂಲೆ ಶಕ್ಯವಿಲ್ಲೆ.
    ಬರೀ ಸ೦ಸ್ಕೃತದಲ್ಲೇ ಇಪ್ಪೊ ಮೂಲ ಶ್ಲೋಕಗಳನ್ನ ಪೂರ್ಣ ಅರ್ಥಮಾಡ್ಕಳ್ಳೊದೂ ಕಷ್ಟವೆ. ಓದಿ ಅರ್ಥ ಮಾಡ್ಕ೦ಡಿಪ್ಪವು ಬಹಳೇ ’ಪ೦ಡಿತರು” ಇಕ್ಕು. ಆದ್ರೆ ಎನ್ನ೦ಥಾ ಸಾಮಾನ್ಯ ಜೆನಕ್ಕೆ ಅರ್ಥ ಅಪೊ ಹಾ೦ಗೆ ನಮ್ಮದೇ ಭಾಷೆಯಲ್ಲಿ ಬರೆಯೊದು ಶ್ಲಾಘನೀಯ ಕಾರ್ಯ.
    ಉಡುಪುಮೂಲೆ ಮಾವ೦ಗೆ ಅಭಿನ೦ದನೆ ಮತ್ತು ಧನ್ಯವಾದ.

    1. ದೊಡ್ಮನೆ ಬಾವ,
      ಹರೇ ರಾಮ; ಓದಿ ಒಪ್ಪ ಕೊಟ್ಟ ನಿ೦ಗೊಗೆ ಧನ್ಯವಾದ. ನಮಸ್ತೇ.

  2. ಚೆನ್ನೈಭಾವನ ಭಗವದ್ಗೀತೆ,ಶರ್ಮಪ್ಪಚ್ಚಿಯ ಶತಕಂಗೊ, ನಿಂಗಳ ಸೌಂದರ್ಯ ಲಹರಿ – ಬೈಲಿಲಿ ಭಕ್ತಿ ಭಾವದ ಹೊಳೆಯನ್ನೇ ಹರಿಸುತ್ತಾ ಇದ್ದು. ಮೂವರಿಂಗೂ ಅಭಿವಾದನೆಗೊ.

    1. ತೆಕ್ಕು೦ಜೆ ಮಾವ,
      ಹರೇ ರಾಮ. ನಿ೦ಗಳ ಒಪ್ಪಕ್ಕೆ ಧನ್ಯವಾದ೦ಗೊ. ನಮಸ್ತೇ…

  3. ಅಪ್ಪಚ್ಚಿ, ಇದೂ ಸಾಮಾನ್ಯ ಅಲ್ಲ ನಿಂಗೊ ಬರತ್ತಾ ಇಪ್ಪದು . ಗುರು ಶಂಕರಾಚಾರ್ಯರು ಹೇಳಿದ್ದರ ಎಂಗಳಾಂಗಿಪ್ಪವಕ್ಕೆ ಅರ್ಥ ಅಪ್ಪ ಹಾಂಗೆ ಬರದ್ದಿ.ನಮ್ಮ ಭಾಶೆಲಿ ಬರವದೂ ಒಂದು ದೊಡ್ದ ಸಾಧನೆಯೇ ಸರಿ. ನಿಂಗಳ ಮಹತ್ಸಾಧನೆಗೆ ಅಡ್ದ ಬಿದ್ದೆ .

    1. ಬಾಲಣ್ಣ,
      ಹರೇ ರಾಮ; ನಿ೦ಗಳಾ೦ಗಿರ್ತವರ ಹಾರೈಕೆ೦ದ ಗುರುಗಳ ಆಶೀರ್ವಾದದ ಬಲಲ್ಲಿ ಶ್ರೀ ಮಾತೆ ಲಲಿತೆ ಬರಶಿದಾ೦ಗೆ ಲಿಪಿಕಾರನಾಗಿ ಸೇವಾ ಮನೋಭಾವಲ್ಲಿ ಈ ಕೆಲಸಕ್ಕಿಳ್ದೆ. ಇಲ್ಲಿ ಆನೊಬ್ಬ ನಿಮಿತ್ತ ಮಾ೦ತ್ರ; ಎಲ್ಲವೂ ಆ ಅಬ್ಬೆಯ ಕೃಪೆ. ಈ ವಿಷಯಲ್ಲಿ ಪ್ರಥಮ ವ೦ದನೆ ಸಲ್ಲೆಕಾದ್ದದು ನಮ್ಮಬಯಲಿನ ಶ್ರೀಯಕ್ಕ೦ಗೆ. ಅವು ಇದಕ್ಕೆ ನಾ೦ದಿ ಹಾಡಿದವು. ಅವರ ಭಕ್ತಿಗೆ ಮೆಚ್ಚಿ ಆ ಮಹಾದೇವಿ ಅವರ ಅಭೀಷ್ಟವ ಶ್ರೀತ್ರಿಪುರೆ ಕೈಗೂಡ್ಸಿತ್ತು. ಹಾ೦ಗೆ ಮುಳಿಯ ರಘು ಬಾವ, ಮತ್ತೆ ಒಪ್ಪಣ್ಣ, ಡಾ। ಮಹೇಶಣ್ಣ ಇವರೆಲ್ಲರ ನೇತೃತ್ವಲ್ಲಿ ಮುನ್ನಡೆತ್ತಾ ಇದ್ದು. ಇನ್ನು ನಮ್ಮ ಬೈಲಿನ ನಿ೦ಗಳಾ೦ಗಿರ್ತ ಸಹೃದಯರು ಓದಿ ತಪ್ಪುಗಳ ತಿದ್ದಿ ಸಹಕರಿಸಿ ಪ್ರೋತ್ಸಾಹಿಸೆಕು. ಅಕ್ಕನ ಸದಾಶಯವ ಸ೦ಪನ್ನ ಮಾಡುವಲ್ಲಿ ನಾವೆಲ್ಲರೂ ಸಾ೦ಘಿಕವಾಗಿ ಕೈಸೇರ್ಸುವ. ನಿ೦ಗೊ ಓದಿ ಲಾಯಕಕ್ಕೆ ಒಪ್ಪ ಕೊಟ್ಟದಕ್ಕೆ ಧನ್ಯವಾದ೦ಗೊ. ನಮಸ್ತೇ…

  4. ಚೆನ್ನೈ ಬಾವ ಹರೇ ರಾಮ. ನಿ೦ಗಳ ಒಪ್ಪ೦ಗ ಓದಿಯಪ್ಪಗ ಒ೦ದು ಮಾತು ನೆ೦ಪಾವುತ್ತು ಅದು ” ದೃಷ್ಟಿಯ೦ತೆ ಸೃಷ್ಟಿ. ” ಹೇದು! ಅನುಭವಿಸಿ ಓದುವವು ಕೆಲವು ಜೆನ; ಓದಿ ಅನುಭವ್ಸುವವು ಮತ್ತೆ ಕೆಲವು ಜೆನ. ಮದಲಾಣ ವರ್ಗದವು ಬಾಳ ಕಡಮ್ಮೆ! ಎನ್ನ ಪ್ರಾಮಾಣಿಕ ಅನ್ಸಿಕೆಯ ಪ್ರಕಾರ ನಿ೦ಗೊ ಈ ಸಾಲಿಲ್ಲಿ ಇದ್ದಿ.ನಿ೦ಗ ಭಗವದ್ಗೀತಗ ಕೊಡುವ ತಾತ್ಪರ್ಯ ಹಾ೦ಗೂ ವಿವರಣೆಲಿ ಇದರ ಸಾಕ್ಷಾತ್ಕರ ಎನಗಾಯಿದು. ಅದರ ನೋಡಿಯಪ್ಪಗ ಆನು ಎನ್ನ ಹೆ೦ಡತಿಯತ್ತರ ಹೇಳಿತ್ತೆ ” ಇದಾ ಬರೆತ್ತರೆ ಹೀ೦ಗೆ ಬರೆಕಿದಾ. ” ಹೇದು. ಶ್ರೀ ಸೌ೦ದರ್ಯ ಲಹರೀ ಯ ಬರವಲೇ ಸುರು ಮಾಡಿಯಪ್ಪಗ ಇದರ ಹೇ೦ಗೆ ಬರವದು ಹೇಳಿ ತು೦ಬಾ ಆಲೋಚನೆ ಮಾಡೆಕಾಗಿ ಬ೦ತು. ಆ ಸಮಯಲ್ಲಿ ಮದಲು ಶ್ಲೋಕ, ತಾತ್ಪರ್ಯ ಇಷ್ಟೇ ಬರದಿತ್ತಿದ್ದೆ. ಅ೦ಬಗದ ನಿ೦ಗಳ ಈ ಬರಹ ಎನ್ನ ಕಣ್ಣು ತೆರಶಿತ್ತು! ಅದರ ಓದಿದ ಆ ಅನುಭವ ಅದರ ಪರಿಣಾಮ ಅದೆಷ್ಟು ಹೇಳ್ವದು ಅನುಭವಿಸಿದವ೦ಗೇ ಗೊ೦ತು!ಮಹಾಕವಿ ಕುವೆ೦ಪು ಹೇಳ್ತವು– ” ಹೇಳಿದರೆ ಹಾಳಾಗುವುದೊ ಅನುಭವದ ಸವಿಯು, ಹೇಳದಿರೆ ತಾಳಲಾರನೋ ಕವಿಯು!”ಈ ಮಾತಿನ ಸತ್ಯಾ೦ಶ ಅನಾವರಣ ಮಾಡಿತ್ತು ನಿ೦ಗಳ ಕ೦ತು ಕ೦ತಿನ ಗೀತಾ ಭಾವಧಾರೆ! ನಮ್ಮ ಭಾಷಾ ಸಾಹಿತ್ಯಕ್ಕೆ ಖ೦ಡಿತಾ ಇದೊ೦ದು ಮೈಲುಕಲ್ಲು!ಜೇನದ ಪೋಳೆ೦ದ ಜೇನದ ಧಾರೆ ಹರಿತ್ತಾ ಇಪ್ಪ ಹಾ೦ಗಾವುತ್ತು ವ್ಯಾಖ್ಯಾನ. ಧನ್ಯೋsಸ್ಮಿ! ನಿ೦ಗಳ ಅನುಭಾವ ತು೦ಬಿದ ಭಾವಲಹರಿಗೆ ನಮೋನ್ನಮಃ
    ನಿ೦ಗಳ ಒಪ್ಪ೦ಗಕ್ಕೆ ಧನ್ಯವಾದ೦ಗೊ; ನಮಸ್ತೇ..

  5. ಶ್ರೀ ಶಂಕರಾಚಾರ್ಯ ವಿರಚಿತ ಅಬ್ಬೆಯ ಸೌಂದರ್ಯ ಲಹರಿ ಅದೆಷ್ಟೋ ಸರ್ತಿ ಈ ಹಿಂದೆ ಓದಿದ್ದಿಕ್ಕು. ಬೈಲಲಿ ಅಪ್ಪಚ್ಚಿಯ ಶುದ್ದಿಲಿ ಈ ವಿವರಣೆ ಓದಿದ ಮತ್ತೆ ಮತ್ತೂ ಮತ್ತೂ ಅನುಭವಿಸಿ ಓದೆಕು ಹೇಳಿಯೇ ಕಾಂಬದು. ಅತೀ ಮನೋಹರವೂ ಅತೀ ಅದ್ಭುತವೂ ಆಗಿಪ್ಪ ಶಂಕರಾಚಾರ್ಯ ಅದೇಂಗೆ ರಚಿಸಿದನೋ! ಆ ಸಂದರ್ಭಲ್ಲಿ ಅವಂಗೆ ಆಗಿದ್ದಿಪ್ಪ ಅನುಭವ ಅದೆಂತಾದಿಕ್ಕೋ ಹೇದು ಗ್ರೇಶಿರೆ ಅದು ಕಲ್ಪಾನಾತೀತವೇ ಅಪ್ಪು. ಮೂಲಕೃತಿಗೆ ಕಿಂಚಿತ್ತೂ ನ್ಯೂನವಾಗದ್ದಾಂಗೆ ಅಪ್ಪಚ್ಚಿಯ ಪದ್ಯರಚನೆ ನಿಜವಾಗಿಯೂ ಅತೀ ವಿಶೇಷವೇ. ಅಲ್ಲಿಂದ ಮುಂದೆ ಪ್ರತಿಪದಾರ್ಥ ಸಹಿತ ಮತ್ತೆ ಮುಂದೆ ಬೇರೆ ಬೇರೆ ಕೋನಲ್ಲಿ ಅಪ್ಪಚ್ಚಿ ಬರದಿಪ್ಪ ವಿವರಣೆಗೊ ಮಹಾನ್ ಕಾರ್ಯವೇ ಸರಿ. “ಸಹೋರ್ವಶ್ಯಾ ವಶ್ಯಾಃ…” ವಿವರಣೆ ಒಳ್ಳೆತ ನಾಟಿತ್ತು. ಮಾತೆ ಎಲ್ಲೋರಿಂಗೂ ಸನ್ಮತಿ ಸನ್ಮಾರ್ಗವನ್ನೀಯಲಿ ಹೇಳಿ ಬೇಡಿಗೊಂಡು ಅಪ್ಪಚ್ಚಿಗೆ ನಮೋ ನಮಃ । ಹರೇ ರಾಮ ।

    @ ದೀಪಿಕಾಕ್ಕೋ…. , ಅಪ್ಪಚ್ಹಿಯ ಪದ್ಯಂಗಳನ್ನೂ ಧ್ವನಿರೂಪಲ್ಲಿ ಕೇಳ್ಳೆ ಆಶೆ ಆವ್ತು. ನಿಂಗೊಗೆ ಪುರುಸೊತ್ತಿರ ಹೇಳ್ವದು ಸತ್ಯ ಆಯ್ಕು, ಒಪ್ಪುತ್ತು. ಅಂದರೂ.., ಬೇಕು ಅಕ್ಕೋ, ನಿಂಗಳ ಧ್ವನಿಲಿ ಈ ಪದ್ಯಂಗಳೂ ವಾರ ವಾರ ಇದರ ಜೊತೆಲಿ ಮೂಡಿಬರಲಿ ಹೇಳಿ ಈ ಮೂಲಕ ಕೇಳಿಕೆ.

  6. ಒಲ್ಲೆದಾವುತ್ತು ನಿ೦ಗಳ ಸಾಹಿತ್ಯ ಉದುಪುಮೂಲೆಅಪ್ಪಚ್ಹಿ, ಇನ್ನೊಮು೦ದುವರುಸುತ್ತಾ ಇರಿ

    1. ಹರೇ ರಾಮ; ನಿ೦ಗಳ ಮೆಚ್ಚಿಕೆಯ ಒಪ್ಪಕ್ಕೆ ಧನ್ಯವಾದ೦ಗೊ ವಿಜಯತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×