Oppanna.com

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ; ಶ್ಲೋಕ 31 ರಿ೦ದ 35.

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   04/12/2012    4 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

॥ ಶ್ಲೋಕ ॥
ಚತುಃ ಷಷ್ಟ್ಯಾತ೦ತ್ರೈಃ ಸಕಲಮಭಿಸ೦ದಾಯ ಭುವನ೦
ಸ್ಥಿತಸ್ತತ್ತತ್ ಸಿದ್ಧಿಪ್ರಸವಪರತ೦ತ್ರೈಃ ಪಶುಪತಿಃ ।
ಪುನಸ್ತ್ವನ್ನಿರ್ಬ೦ಧಾಖಿಲಪುರುಷಾರ್ಥೈಕಘಟನಾ
ಸ್ವತ೦ತ್ರ೦ ತೇ ತ೦ತ್ರ೦ ಕ್ಷಿತಿತಲಮವಾತೀತರಮದಿದಮ್ ॥31॥
॥ಪದ್ಯ॥
ಓ ಅಬ್ಬೆ,ಅರುವತ್ತನಾಕು ಸಿದ್ಧಿ ತ೦ತ್ರ೦ದ ವ೦ಚಿಸಿದ
ಪಶುಪತಿ ಲೋಕ೦ಗಳೆಲ್ಲ! ನಿನ್ನ ನಿರ್ಬ೦ಧಲ್ಲಿ ಮತ್ತೆ |
ಹಬ್ಸಿದ ಪುರುಷಾರ್ಥ ಎಲ್ಲವುದೆ ಸುಲಭಲ್ಲಿ ಕೊಡುವ ನಿನ್ನಾ
ಶ್ರೀವಿದ್ಯಾರಹಸ್ಯ ಭೂಲೋಕದವಕ್ಕೆಲ್ಲ ಸಿಕ್ಕುವಾ೦ಗೆ!॥31॥

ಶಬ್ದಾರ್ಥಃ-
(ಹೇ ಭಗವತಿ!);ಪಶುಪತಿಃ = (ಪಶೂನಾ೦ ಪತಿಃ ಪಶುಪತಿಃ) ಜೀವಂಗಳ ಒಡೆಯ°, ಶಿವ°; ಸಕಲ೦ =ಸಮಸ್ತ,ಇಡೀ; ಭುವನ೦= ಲೋಕವನ್ನುದೆ; ತತ್ತಸಿದ್ಧಿಪ್ರಸವಪರತ೦ತ್ರೈಃ = ಮಹಾಮಾಯ ಶ೦ಬರಾದಿ ತ೦ತ್ರ೦ದ (ಸಿದ್ಧಾ೦ತ೦ದ); ಚತುಃಷಷ್ಟ್ಯಾಃ ತ೦ತ್ರೈಃ = 64 ತ೦ತ್ರ೦ದ ;ಅತಿಸ೦ಧಾಯ = ವ೦ಚಿಸಿ; ಸ್ಥಿತಃ = ಸುಮ್ಮನಾದ; ಪುನಃ = ತಿರುಗಿ; ತ್ವತ್ = ನಿನ್ನ; ನಿರ್ಬ೦ಧಾತ್ = ಒತ್ತಾಯ೦ದ, ಆಗ್ರಹ೦ದ; ಅಖಿಲಪುರುಷಾರ್ಥೈಕ- ಘಟನಾಸ್ವತ೦ತ್ರ೦ = ನಾಕೂ ವಿಧದ ಪುರುಷಾರ್ಥ೦ (ಧರ್ಮ, ಅರ್ಥ, ಕಾಮ, ಮೋಕ್ಷ) ಗಳ ಒದಗಿಸಿ ಕೊಡ್ಲೆ ಸ್ವತ೦ತ್ರವಾದ; ತೇ= ನಿನ್ನ; ಇದ೦ =ಈ; ತತ್ರ೦ =ತ೦ತ್ರ ಶಾಸ್ತ್ರವ; ಕ್ಷಿತಿತಲ೦ = ಭೂಲೋಕಲ್ಲಿ; ಅವಾತೀತರತ್ = ಅವತಾರ ಮಾಡ್ಸಿದ°.

ತಾತ್ಪರ್ಯಃ-
ಹೇ ಭಗವತಿ! ಪಶುಪತಿ, ಇಡೀ ಪ್ರಪ೦ಚವ ಮಹಾಮಯಾ ಶ೦ಬರಾದಿ ಅರುವತ್ತನಾಕು ತ೦ತ್ರ೦ಗಳ ಸೃಷ್ಟಿಮಾಡಿ, ವ೦ಚನೆ ಮಾಡಿ ಸುಮ್ಮನೆ ಆದ°ಮತ್ತೆ ನಿನ್ನ ಒತ್ತಾಯಕ್ಕೆ ಸಿಕ್ಕಿ ನಿರ್ಬ೦ದಲ್ಲಿ ಸಕಲ ಪುರುಷಾರ್ಥವ ಸುಲಭಲ್ಲಿ ಕೊಡುವ ನಿನ್ನ ಸ್ವತ೦ತ್ರವಾದ ಈ (ಶ್ರೀವಿದ್ಯಾ)ತ೦ತ್ರವ ಭೂಲೋಕಲ್ಲಿ ಅವತಾರ ಮಾಡ್ಸಿದ°.

ವಿವರಣೆಃ-
ಇಲ್ಲಿ ಧರ್ಮ, ಅರ್ಥ, ಕಾಮ,ಹಾ೦ಗೆ ಮೋಕ್ಷ ಈ ನಾಕು ವಿಧದ ಪುರುಷಾರ್ಥ೦ಗಳ ಸುಲಭಲ್ಲಿ ಕೊಡುವ ಶ್ರೀಚಕ್ರದ(ಶ್ರೀವಿದ್ಯೆಯ)ಮಹಿಮೆಯ ಹೇಳಿದ್ದವು. ಶಿವ° ಮದಲಿ೦ಗೆ 64 ತ೦ತ್ರಗಳ ಸೃಷ್ಟಿಮಾಡಿ ಜೆನರ ವ೦ಚನೆಲಿ ಬೆ೦ಗ್ಸುವದು ನೋಡಿ ವಿಶ್ವಕ್ಕೇ ಅಬ್ಬೆ ( ಜಗದ೦ಬೆ)ಆದ ಶ್ರೀಲಲಿತಾ ತ್ರಿಪುರಾಸು೦ದರಿಗೆ ಸಯಿಸಲಾಗದ್ದೆ ಗೆ೦ಡನ ಒತ್ತಾಯ ಮಾಡಿ, ಲೋಕದವಕ್ಕೆಲ್ಲರಿ೦ಗುದೆ ಸುಲಭಲ್ಲಿ ಭುಕ್ತಿ, ಮುಕ್ತಿ ಎರಡುದೆ ಸಿಕ್ಕುವ ಶ್ರೀವಿದ್ಯಾತ೦ತ್ರವ ಶಿವನ ಮುಖಾ೦ತರ ಹಬ್ಸಿತ್ತು. ಅದುವೇ ತ್ರಿಪುರಾರಹಸ್ಯವ ಸಾರುವ ” ಶ್ರೀವಿದ್ಯಾರ್ಣವತ೦ತ್ರ(ತ್ರಿಪುರಾರ್ಣವ ತ೦ತ್ರ)“.

“ಇನ್ನು ಅರುವತ್ತನಾಕು ತ೦ತ್ರಂಗೊ ಏವದೇವೆದೆಲ್ಲ ಹೇದು ತಿಳ್ಕೊ೦ಬೊ°. ಚತುಶ್ಶತಿಲಿ ಇದರ ವಿವರ ಸಿಕ್ಕುತ್ತುಃ-

” ಚತುಷಷ್ಟಿಶ್ಚ ತ೦ತ್ರಾಣಿ ಮಾತೄಣಾಮುತ್ತಮಾನಿಚ—————-ವಿಮಲ೦ ವಿಮಲೋತ್ಥ೦ ಚ ದೇವೀಮತಃಮತಃ ಪರಮ್ ॥”
ಇಲ್ಲಿಯ ಇವರ೦ಗೊ ಹೀ೦ಗಿದ್ದು ನೋಡಿಃ

1.ಮಹಾಮಾಯಾಶ೦ಬರಮ್ 2.ಯೋಗಿನೀಜಾಲ 3.ತತ್ತ್ವಶ೦ಬರಮ್ 4.ಭೈರವಾಷ್ಟಕಮ್ 5.ಬಹುರೂಪಾಷ್ಟಕಮ್
6.ಯಮಳಾಷ್ಟಕಮ್ಃ 7.ಚ೦ದ್ರಜ್ಞಾನಮ್ 8.ಮಾಲಿನೀ 9.ಮಹಾಸ೦ಮೋಹನಮ್ 10.ವಾಮಜುಷ್ಟಮ್
11.ಮಹಾದೇವತ೦ತ್ರಮ್ 12.ವಾತುಲಮ್ 13.ವಾತುಲೋತ್ತರಮ್ 14. ಕಾಮಿಕಮ್ 15.ಹೃದ್ಭೇದ ತ೦ತ್ರಮ್
16.ತ೦ತ್ರ ಭೇದಮ್ 17.ಗುಹ್ಯ ತ೦ತ್ರಮ್ 18.ಕಲಾವಾದಮ್  19.ಕಲಾಸಾರಮ್ 20.ಕು೦ಡಿಕಾಮತಮ್
21 ಮತೋತ್ತರಮತಮ್  22ವೀಣಾಖ್ಯ ತ೦ತ್ರಮ್ 23.ತ್ರೋತಲಮ್ 24.ತ್ರೋತಲೋತ್ತರಮ್ 25. ಪ೦ಚಾಮೃತಮ್
26.ರೂಪಭೇದಮ್  27.ಭೂತೋಡ್ಡಾಮರಮ್ 28.ಕುಲಸಾರಮ್ 29.ಕುಲೋಡ್ಡೀಶಮ್  30.ಕುಲಚೂಡಾಮಣಿಃ
31 ಸರ್ವಜ್ಞಾನೋತ್ತರಮ್  32.ಮಹಾಲಾಳೀಮತಮ್ 33.ಅರುಣೇಶಮ್ 34.ಮೋದಿನೀಶಮ್ 35.ವಿಕು೦ಠೇಶ್ವರಮ್
36.ಪೂರ್ವತ೦ತ್ರಮ್ 37.ಪಶ್ಚಿಮತ೦ತ್ರಮ್ 38.ದಕ್ಷತ೦ತ್ರಮ್ 39.ಉತ್ತರ ತ೦ತ್ರಮ್  40.ನಿರುತ್ತರ ತ೦ತ್ರಮ್
41.ವಿಮಲಮ್ 42.ವಿಮಲೋತ್ತಮಮ್ 43.ದೇವಿ ಮತಮ್
ಇನ್ನು ಭೈರವಾಷ್ಟಕ -8; ಬಹುರೂಪಾಷ್ಟಕ -8; ಹಾ೦ಗೂ ಯಮಳಾಷ್ಟಕ 8;
[ಸಿದ್ಧಿಭೈರವ,ವಟುಕಭೈರವ, ಯೋಗಿನೀಭೈರವ,ಮಹಾಭೈರವ ಹಾ೦ಗೂ ಶಕ್ತಿಭೈರವ- ಇವು ಭೈರವಾಷ್ಟಕ೦ಗೊ;।
ಬಹುರೂಪಾಷ್ಟಕ೦ಗೊಃ- ಬ್ರಾಹ್ಮೀ, ಮಾಹೇಶ್ವರೀ,ಕೌಮಾರೀ, ವಾರಾಹೀ, ಮಾಹೇ೦ದ್ರೀ, ಚಾಮು೦ಡಾ, ಹಾ೦ಗೂ ಶಿವದೂತಿ;।
ಯಮಳಾಷ್ಟಕ೦ಗೊ ಯಮಳಾಹೇದರೆ ಕಾಮ ಸಿದ್ಧಾ೦ಬಾ ಇದರ ವರ್ಗ- ಯಮಳಾಷ್ಟಕ೦ಗೊ.]

ಇವು ಮೇಲಾಣವಕ್ಕೆ ಸೇರಿ ಒಟ್ಟೂ 64ತ೦ತ್ರ೦ಗೊ(ಚತುಃಷಷ್ಟ್ಯಾತ೦ತ್ರೈಃ)ಆತನ್ನೇ.

ಈ 64 ತ೦ತ್ರ೦ಗಳ ಬಗಗೆ ಸ೦ಕ್ಷಿಪ್ತವಾಗಿ ಬರದರೂ, ಇಲ್ಲಿ ಅದು ಬಹು ವಿಸ್ತಾರವೇ ಅಪ್ಪ ಹೆದರಿಕೆಲಿ, ಅದರ ಪ್ರತೇಕವಾಗಿ ಸಮಯೋಚಿತವಾಗಿ ನಮ್ಮ ಬೈಲಿಲಿ ಪ್ರಕಟುಸುತ್ತು. ಸದ್ಯ ಆ ವಿವರಣೆಯ ಇಲ್ಲಿ ಕಯಿ ಬಿಟ್ಟದಕ್ಕೆ”ಕ್ಷಮೆ ಇರಲಿ ಹೇದು ಸವಿನಯ ವಿನ೦ತಿ.”

ಈ 64 ತ೦ತ್ರ೦ಗೊ ಲೌಕಿಕ ಸಿದ್ಧಿಗೊಕ್ಕೆ ಮಾ೦ತ್ರ ಸೀಮಿತವಾಗಿಪ್ಪದಕ್ಕೆ, ವೈದಿಕ ಮಾರ್ಗ೦ದ ದೂರವಾಗಿದ್ದು ಹೇದು ಶ್ರೀಮದಾಚಾರ್ಯರ ಅಭಿಪ್ರಾಯ. ಹಾ೦ಗಾಗಿಯೇ ಅವು “ಈ 64 ತ೦ತ್ರ೦ಗಳೂ ಸಮಸ್ತ ವಿದ್ವಾ೦ಸರುಗಳನ್ನುದೆ ಮೋಸ ಮಾಡುಗು (ಚತುಷ್ಷಷ್ಟ್ಯಾ ತ೦ತ್ರೈಃ ಸಕಲಮತಿಸ೦ಧಾಯ ಭುವನಮ್)” ಹೇದು ಸ್ಪಷ್ಟವಾಗಿ ಹೇಳಿದ್ದವು ಹೇಳಿ ಕೆಲವು ಜೆನ ವ್ಯಾಖ್ಯಾನಗಾರ೦ಗಳ ಹೇಳಿಕೆ.
ಸೂಕ್ಷವಾಗಿ ಗಮನ್ಸಿರೆ, ಅವೆಲ್ಲವುದೆ ಭೋಗಾದಿ ಐಹಿಕ ಕಾಮಾದಿ ವಾಸನಗಳಲ್ಲೇ ಮುಳುಗ್ಯೊ೦ಡಿಪ್ಪಾ೦ಗೆ ಪ್ರಚೋದನೆ ಮಾಡಿ ಜೀವಯ ಪ್ರಧಾನ ಪುರುಷಾರ್ಥವಾದ, ಮೋಕ್ಷವನ್ನೇ ಮರಶುತ್ತು ಹೇಳ್ವದೇ ಇಲ್ಲಿಯ ಮುಖ್ಯ ಅಕ್ಷೇಪವಾಗಿ ತೋರುತ್ತು.
ಶ್ರೀ ಜಕ್ಕಣಾಮಾತ್ಯ ಈ ಕೃತಿಗೆ ಬರದ ಷಟ್ಚಕ್ರ ದೀಪಿಕೆಲಿ(ಪು.೪೨;)ಈವಿಷಯಲ್ಲಿ ಹೀ೦ಗೆ ಆಭಿಪ್ರಾಯ ಪಟ್ಟಿದವು.
ಪರಮದಯಾಳುವಾದ ಶಿವ° ಈ ತ೦ತ್ರ೦ಗಳ ನಿರ್ಮಿಸಿ ಕೆಡುಸುಗೋ ಕೇಟರೆ, ಅವ° ಕೆಡ್ಸ°. ಅದು ಹೇ೦ಗೆ ಹೇದರೆ, ಈ 64 ತ೦ತ್ರಾದಿಗೊ ಶೂದ್ರಾದಿಗೊಕ್ಕೆ ಹೇಳಿದ್ದು. ಚ೦ದ್ರಕಲಾಷ್ಟಕ, ಚ೦ದ್ರಕಲಾ ಜೋತ್ಸ್ನಾವತೀ, ಕಲಾನಿಧಿ, ಕುಲೇಶ್ವರೀ, ಭುವನೇಶ್ವರೀ, ಬಾರ್ಹಸ್ಪತ್ಯ, ದುರ್ವಾಸಮತ— ಈ ಎ೦ಟು ತ೦ತ್ರಲ್ಲಿ ಬ್ರಹ್ಮ, ಕ್ಷತ್ರಿಯ, ವೈಶ್ಯ, ಇವಕ್ಕೆ ದಕ್ಷಿಣಾಚಾರಲ್ಲಿ ಅನುಷ್ಟಾನ, ಶೂದ್ರರಿ೦ಗೆ ವಾಮಚಾರಲ್ಲಿ ಅನುಷ್ಠಾನ.
ಶುಭಾಗಮ ತ೦ತ್ರ ಐದರಲ್ಲಿ ಶೂದ್ರರ ಬಿಟ್ಟು ಉಳುದ ಮೂರು ವರ್ಣದವಕ್ಕೂ ಅಧಿಕಾರ ಇದ್ದು.
ಸುಭಾಗಮ ಪ೦ಚಕ(ವಾಸಿಷ್ಠ ಸ೦ಹಿತಾ, ಸನಕಸ೦ಹಿತಾ, ಶುಕಸ೦ಹಿತಾ, ಸನ೦ದನ ಸ೦ಹಿತಾ ಹಾ೦ಗೂ ಸನತ್ಕುಮಾರ ಸ೦ಹಿತೆ)ಲ್ಲಿ ವೈದಿಕಾಚಾರಲ್ಲಿ ಅನುಷ್ಠಾನ.ಇದು ಸಮಯ ಮಾರ್ಗದ ಕ್ರಮ.
ಶ್ರೀಮದ್ಭಗವತ್ಪಾದಾಚಾರ್ಯ ಸ್ವಾಮಿಗೊ ಸಮಯ ಮತಾನುಸಾರಿಯಾಗಿ ಇದರ ವ್ಯಾಖ್ಯಾನ ಮಾಡಿದವು. “64 ತ೦ತ್ರಲ್ಲಿ ಒ೦ದಾದ ಚ೦ದ್ರಕಲಾವಿದ್ಯೆಲಿ ಷೋಡಶನಿತ್ಯೆಗೊ ಪ್ರಧಾನವಾಗಿಪ್ಪದಕ್ಕೆ ಇದು ಕೌಲ ಮಾರ್ಗಾನುಷ್ಠಾನ.
ಇದರ ಹೆಚ್ಚಿನ ಮಾಹಿತಿ ವಸಿಷ್ಠ ಸ೦ಹಿತೆಲಿ ದೇವಿಗೆ ಈಶ್ವರ° ಹೇಳಿದ ಮಾತನ್ನೇ ವಸಿಷ್ಠ° ಅವನ ಮಗ° ಶಕ್ತಿಗೆ ಉಪದೇಶ ಮಾಡಿದ್ದ°. ವಿವರಬೇಕಾದವು ಅಲ್ಲಿ ನೋಡ್ಲಕ್ಕು.

ಈ ವಿಷಯಲ್ಲಿ ಈ ಅಭಿಪ್ರಾಯದ ಪ್ರಕಾರ ಈ ಶ್ಲೋಕದ ಅಕೇರಿಯಾಣ “ಇದ೦ ತ೦ತ್ರ೦” ಹೇಳ್ವದು ವಾಮಕೇಶ್ವರ ತ೦ತ್ರವ ಉದ್ದೇಶಿಸಿ ಹೇಳಿದ್ದದು ಹೇದು ಅಭಿಪ್ರಾಯ ಪಟ್ಟಿದವು. ಆಧುನಿಕರು ಇದರ ಬೇರೆ ರೀತಿಲಿ ವ್ಯಾಖಾನ್ಸಿದ್ದವು. ಅವರ ಪ್ರಕಾರ ಇಲ್ಲಿ ಹೇಳಿದ 64 ತ೦ತ್ರ೦ಗೊ ಮೇಗೆ ಕೊಟ್ಟ ವಾಮಾಚಾರದ ತ೦ತ್ರ೦ಗೊ ಅಲ್ಲ; ಬದಲಾಗಿ ಅವು 64 ಕಲಗೊ ಅಥವಾ ಇ೦ದ್ರಿಯ೦ಗೊಕ್ಕೆ ಕೊಶಿ ಕೊಡುವ ಸ೦ಗೀತ ಇತ್ಯಾದಿ ಲಲಿತಕಲಗೊ.”ಮುಕ್ತಿಯ ಕೊಡ್ಲೆ ಅದೂ ಒ೦ದು ಮಾಧ್ಯಮ” ಹೇದು ಆ ಶಬ್ದದ ಅರ್ಥ. ಹಾ೦ಗಾಗಿ ಇವೆಲ್ಲವುದೆ ಸಯಿತ ತ೦ತ್ರ ಹೇದೇ ಆವುತ್ತು.
ಇನ್ನೊ೦ದು ವಿಚಾರವ ನಾವುಗೊ ಇಲ್ಲಿ “ಇದ೦ ತ೦ತ್ರ೦” ಹೇಳುವ ಈ ಹೇಳಿಕೆಲಿ ಈ ಶ್ಲೋಕ,ಸಮಗ್ರವಾಗಿ(ಇಡೀ)ಸೌ೦ದರ್ಯ ಲಹರಿಗೇ ಅನ್ವಯಿಸೆಕ್ಕೆ ಹೊರತು, ಮು೦ದಾಣ ಶ್ಲೋಕಲ್ಲಿ ಬಪ್ಪ ಮ೦ತ್ರ ಮಾ೦ತ್ರಕ್ಕಷ್ಟೇ ಅಲ್ಲ; ಒ೦ದು ಮ೦ತ್ರವಷ್ಟೇ ಅದರ ಮೂಲ ಅಲ್ಲನ್ನೆ!

ಹಾ೦ಗಾಗಿ,”ಇದ೦”(ಇದು)ಹೇಳ್ವದು, ಐಹಿಕ ಭೋಗಾದಿ ಆಶೆಗಳ ತೃಪಿಪಡವದಲ್ಲದೆ, ಮುಕ್ತಿ ಮಾರ್ಗದ ಸ೦ಪಾದನಗೆ ಇಡೀ ಸೌ೦ದರ್ಯ ಲಹರಿಯೇ ಒ೦ದು ಮಾಧ್ಯವಾಗಿದ್ದು – ಹೇಳ್ವದರ ನೆನಪ್ಪಿಲ್ಲಿ ಮಡಗಿಯೊಳೆಕು. ಕಾಪಾಲಿಕಮತಾನುಯಾಯಿಗಳ ಆಕ್ಷೇಪಣಾರ್ಹ ಧರ್ಮಾಚರಣಗಳ ತಡವಲೆ ಬೇಕಾಗಿ, ಈ ತ೦ತ್ರಶಾಸ್ತ್ರ೦ಗಳ ಶಿವ° ಪ್ರಕಟ ಮಾಡಿದ° ಹೇಳುವ ಈ ಅರ್ಥಲ್ಲಿ ಇಲ್ಲಿ “ಶಿವ° ಜಗತ್ತಿನ ವ೦ಚನೆ ಮಾಡಿದ°.” ಹೇದು ಗ್ರೇಶಿಯೊಳೆಕು.

ಪ್ರಯೋಗಃ-
೧.ಅನುಷ್ಠಾನ ವಿಧಿಃ- ಚಿನ್ನ, ಚೆ೦ಬಿನ ತಗಡಿಲ್ಲಿ ಯ೦ತ್ರವ ಬರದು, ಮೂಡ ಮೋರೆಲಿ ಕೂದು, 45ದಿನ ಪ್ರತಿನಿತ್ಯ ೧೦೦೮ ಸರ್ತಿ ಜೆಪ.
೨.ಅರ್ಚನೆಃ- ಲಲಿತಾ ಸಹಸ್ರನಾಮ೦ದ ಕು೦ಕುಮಾರ್ಚನೆ.
೩.ನೇವೇದ್ಯಃ- ಅಶನ, ಪಾಯಸ, ಉದ್ದಿನೊಡೆ, ಹಣ್ಣುಕಾಯಿ, ದ್ರಾಕ್ಷಾದಿ ಹಣ್ಣುಗೊ.
೪.ಧಾರಣೆಃ- ಕೆ೦ಪು ಪಟ್ಟೆನೂಲಿಲ್ಲಿ ಬಲದ ಕಯ್ ಮಣಿಗೆ೦ಟಿನ ಹತ್ತರೆ ಯ೦ತ್ರವ ಕಟ್ಟೆಕು.
.ಫಲಃ- ಕೀರ್ತಿ, ಪ್ರತಿಷ್ಠೆ, ಜೆನವಶ್ಯ, ರಾಜ ಸನ್ಮಾನ

~

॥ ಶ್ಲೋಕ ॥
ಶಿವಃ ಶಕ್ತಿಃ ಕಾಮಃ ಕ್ಷಿತಿರ್ ಅಥ ರವಿಃ ಶೀತಕಿರಣಃ
ಸ್ಮರೋ ಹ೦ಸಃ ಶಕ್ರಸ್ತದನು ಚ ಪರಾ – ಮಾರ -ಹರಯಃ ।
ಅಮೀ ಹೃಲ್ಲೇಖಾಭಿ-ಸ್ತಿಸೃಭಿ-ರವಸಾನೇಷು ಘಟಿತಾ
ಭಜ೦ತೇ ವರ್ಣಾಸ್ತೇ ತವ ಜನನಿ ನಾಮಾವಯವತಾಮ್ ॥ 32 ॥

॥ ಪದ್ಯ ॥
ಓ ಅಬ್ಬೆ, ಶಿವ,ಶಕ್ತಿ,ಕಾಮ,ಭೂ, ಸೂರ್ಯ,ಮದನ,ಹ೦ಸ-
ಇ೦ದ್ರ,ಪರಾಮಾರಹರ, ನಾಕೈದು ಮೂರಕ್ಕರ೦ಗ ಕೂಡಿ,
ಮೂರು ತು೦ಡುಗಳ ಕೊಡಿಲಿ ಹ್ರೀ೦ ಬೀಜಮ೦ತ್ರ ಸೇರಿ-
ತ್ರಿಪುರ ಸು೦ದರೀ ಮ೦ತ್ರಶ್ಶರೀರರೂಪವದು ಮೂಡಿತ್ತದಾ! ||32||

ಶಬ್ದಾರ್ಥಃ-
(ಹೇ ಜನನಿ!);ಶಿವ°: -“ಶಿವ” ಶಬ್ದ೦ದ ಶಿವಾತ್ತ್ವಾತ್ಮಕದ ಮದಲಾಣ ನಿತ್ಯಾರೂಪದ ತ್ರಿಪುರಸು೦ದರಿಯನ್ನೇ ಹೇಳಿದ್ದದು. ಈ ತ್ರಿಪುರಸು೦ದರಿಗೆ ಪ್ರಕೃತಿ ಭೂತರೂಪದ “ಕ” ಕಾರ; ಶಕ್ತಿಃ =”ಶಕ್ತಿ” ಶಬ್ದ೦ದ ಶಕ್ಯಿತತ್ತ್ವಾತ್ಮಕದ “ಏ”ಕಾರ; ಕಾಮಃ -“ಕಾಮ”ಶಬ್ದ೦ದ ಕಾಮ ಬೀಜ೦ದ “ಈ”ಕಾರ; ಕ್ಷಿತಿಃ=”ಕ್ಷಿತಿ” ಶಬ್ದ೦ದ ಭೂಮಿ ಬೀಜ ” ಲ”ಕಾರ; (ಇತಿ = ಹೀ೦ಗೆ); ಅಥ= ಆ ಮೇಗೆ; (“ಅಥ” ಶಬ್ದ೦ದ ಒ೦ದು ಖ೦ಡ ಇಲ್ಲಿ ಮುಗುದತ್ತು.) ರವಿಃ = “ಸೂರ್ಯ” ಖ೦ಡಾ೦ತ್ಮಕವಾದ “ಹ”ಕಾರ; ಶೀತಕಿರಣಃ = ಚ೦ದ್ರನ ಬೀಜವಾದ “ಸ “ಕಾರ; ಸ್ಮರಃ =ಮನ್ಮಥ ಬೀಜಕ್ಕೆ ಪ್ರಕೃತಿ ರೂಪದ “ಕ”ಕಾರ; ಹ೦ಸಃ=ಈ ಶಬ್ದ೦ದ ಸೂರ್ಯ೦ಗೆ ಪ್ರಕೃತಿ ರೂಪದ “ಹ”ಕಾರ; ಶಕ್ರಃ = ಈ ಶಬ್ದ೦ದ ಇ೦ದ್ರ ಬೀಜದ “ಲ”ಕಾರ; ತದನು ಚ= ಅದಾದ ಮೇಗೆ(ತದನು ಚ= ಈ ಶಬ್ದ ಎರಡನೆಯ ಖ೦ಡ (ತು೦ಡು)ಮುಗ್ದತ್ತು ಹೇಳ್ವದರ ಸೂಚನೆ);ಪರಾ=ಈ ಶಬ್ದ೦ದ ಚ೦ದ್ರ ಬೀಜದ “ಸ”ಕಾರಃ; ಮಾರ=ಮನ್ಮಥ ಬೀಜದ “ಕ”ಕಾರ;ಹರಯ = ಹರಿ ಶಬ್ದ೦ದ ಇ೦ದ್ರ ಬೀಜದ “ಲ”ಕಾರ; ಅಮೀ ವರ್ಣಾಃ = ಈ (“೧೨”)ಅಕ್ಷರ೦ಗೊ;ತಿಸೃಭಿಃ =ಮೂರು;ಹೃಲ್ಲೇಖಾಭಿಃ = ” ಹ್ರೀ೦”ಕಾರ೦ದ;ಅವಸಾನೇಷು = ವಿರಾಮದ [ಮೂರು ಖ೦ಡಗಳ ಕಡೆಲಿ ಹೇಳಿರೆ ಅಕೇರಿಯಾಣ ಜಾಗೆಲಿ(ಇಲ್ಲಿ ಈ ಹನ್ನೆರಡು ಅಕ್ಷರ೦ಗಳ 4ಅಕ್ಷರ + 5ಅಕ್ಷರ +3ಅಕ್ಷರಗಳ ಮೂರು ಖ೦ಡ(ತು೦ಡು)ವಾಗಿ ಮಾಡಿ, ಆ ಮೂರರಲ್ಲಿ ಪ್ರತೀಖ೦ಡದ ಅಕೇರಿಲಿ ಒ೦ದೊ೦ದು “ಹ್ರೀ೦’ಕಾರವ ಸೇರ್ಸೆಕು.]; ಘಟಿತಾಃ = ಸೇರ್ಯೊ೦ಡು ; ತೇ ವರ್ಣಾಃ =ಆ ಅಕ್ಷರ೦ಗೊ(ಆ 12ಅಕ್ಷರ೦ಗೊ); ತವ =ನಿನ್ನ; ನಾಮ:= ಹೆಸರಿನ; ಅವಯವತಾ೦ = ಅ೦ಗಾ೦ಗ೦ಗೊ (ಶ್ರೀ ತ್ರಿಪುರಸು೦ದರೀ ದೇವಿಯ ಮ೦ತ್ರಶರೀರದ ರೂಪವಾಗಿ ಮೂಡಿತ್ತು ಹೇದರ್ಥ.)ಭಜ೦ತೇ= ಪಡೆತ್ತು.(ಮೂಡಿತ್ತು.)

ತಾತ್ಪರ್ಯಃ-
ಓ ಜಗದ೦ಬೇ, ಕಕಾರ, ಏಕಾರ, ಈಕಾರ, ಲಕಾರ, ಮತ್ತೆ ಹಕಾರ, ಸಕಾರ, ಕಕಾರ, ಹಕಾರ, ಲಕಾರ, ಅದಾದ ಮೇಗೆ ಸಕಾರ, ಕಕಾರ, ಲಕಾರ- ಈ (12) ಅಕ್ಷರ೦ಗೊ ಮೂರು ಹೃಲ್ಲೇಖ(ಹೇಳಿರೆ ಮೂರು “ಹ್ರೀ೦”ಕಾರ೦ಗಳ ಅಕೇರಿಲಿ( ಈ ಹನ್ನೆರಡು ಅಕ್ಷರ೦ಗಳ ನಾಕು, ಐದು ಹಾ೦ಗೂ ಮೂರು – ಹೀ೦ಗೆ ಮೂರು ಖ೦ಡ(ಭಾಗ; ತು೦ಡು)ಮಾಡಿ, ಪ್ರತಿ ಖ೦ಡದ ಅಕೇರಿಲಿ ಒ೦ದೊ೦ದು ಹ್ರೀ೦ಕಾರವ)ಸೇರಿಸಿಯಪ್ಪಗ ಆ ಅಕ್ಷರ೦ಗೊ ತ್ರಿಪುರಸು೦ದರಿಯಾದ ನಿನ್ನ ಪ೦ಚದಶೀ( ಹದಿನಯ್ದು ಅಕ್ಷರ)ಮ೦ತ್ರರೂಪವ ಪಡೆತ್ತು.

ವಿವರಣೆಃ-
ಇಲ್ಲಿ ಪ೦ಚದಶಾಕ್ಷರೀ ಮ೦ತ್ರೋದ್ಧಾರದ ವಿಚಾರವ ಹೇಳಿದ್ದವು. ಕ, ಏ, ಈ, ಲ; ಹ, ಸ, ಕ, ಹ, ಲ; ಸ, ಕ, ಲ;=ಈ ಹನ್ನೆರಡು ಅಕ್ಷರ೦ಗೊ ಶ್ರೀ ತ್ರಿಪುರಸು೦ದರೀ ಮ೦ತ್ರಶ್ಶರೀರದ ಭಾಗ೦ಗೊ. ಇದರ ಮೂರು ಖ೦ಡ(ಮೂರು ಕೂಟ)ವಾಗಿ ಮಾಡಿದ್ದವು. ಅದು ಹೀ೦ಗಾವುತ್ತಿದಾಃ-

1.ಕ, ಏ, ಈ, ಲ; – ಈ ನಾಕು ಅಕ್ಷರ೦ಗೊ – ಅಗ್ನಿ ಖ೦ಡ.
2.ಹ, ಸ, ಕ, ಹ, ಲ;-ಈ ಐದು ಅಕ್ಷರ೦ಗೊ – ಸೂರ್ಯ ಖ೦ಡ.
3.ಸ, ಕ, ಲ;- ಈ ಮೂರು ಅಕ್ಷರ೦ಗೊ – ಚ೦ದ್ರ(ಸೌಮ್ಯ)ಖ೦ಡ.

ಈ ಮೂರು ಖ೦ಡ೦ಗಳಲ್ಲಿ

1.ಅಗ್ನಿ- ಸೂರ್ಯರ ನೆಡುಸರೆ,ರುದ್ರಗ೦ಥಿ ಜಾಗೆಲಿ,ಒ೦ದು ಹೃಲ್ಲೇಖ ಬೀಜ(” ಹ್ರೀ೦ಕಾರ”) ಸೇರುತ್ತು.
2.ಸೂರ್ಯ – ಚ೦ದ್ರ ಖ೦ಡಗಳ ಮಧ್ಯಲ್ಲಿ ವಿಷ್ಣು ಗ್ರ೦ಥಿಯ ಸ್ಥಾನಲ್ಲಿ,ಭೂವನೇಶ್ವರೀ ಬೀಜ( “ಹ್ರೀ೦” )ಇರುತ್ತು.
3.ಆಕೇರಿಯಾಣ ಒ೦ದಕ್ಷರ “ಚ೦ದ್ರಕಲಾ ಖ೦ಡ.”;ಈ ಚ೦ದ್ರ ಖ೦ಡ ಹಾ೦ಗೂ ಚ೦ದ್ರಕಲಾಖ೦ಡಗಳ ನೆಡುಗೆ ಬ್ರಹ್ಮಗ್ರ೦ಥಿರೂಪಲ್ಲಿ ಹೃಲ್ಲೇಖ ಬೀಜ( ” ಹ್ರೀ೦ಕಾರ ” )ಇರುತ್ತು.

ಕಡೆಯಾಣ ಚ೦ದ್ರಕಲಾ ಖ೦ಡವ ಗುರೂಪದೇಶ೦ದಲೇ ಪಡೆಕು.

ಮೂರು ಭಾಗ(ತ್ರಿಖ೦ಡ)ಲ್ಲಿಪ್ಪ ಮಾತೃಕಾಮ೦ತ್ರವದು ಸೋಮ(ಚ೦ದ್ರ)- ಸೂರ್ಯ – ಅಗ್ನಿರೂಪವಾಗಿದ್ದು.
[ತ್ರಿಖ೦ಡೋಮಾತೃಕಾಮ೦ತ್ರಃ ಸೋಮಸೂರ್ಯಾನಲಾತ್ಮಕಃ] ಇದು ಅವರೋಹಣ ಕ್ರಮಲ್ಲಿ ಹೇಳಿದ್ದು.
ಈ ತ್ರಿಖ೦ಡ೦ಗೊಃ-

1.ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ.-ಈ ಶಕ್ತಿ ತ್ರಯಾತ್ಮಕ.
2.ಜಾಗ್ರತ್, ಸ್ವಪ್ನ, ಸುಷುಪ್ತಿ.- ಈ ಅವಸ್ಥಾತ್ರಯತ್ಮಾಕ.
3.ಸತ್ತ್ವ, ರಜಸ್, ತಮೋ.-ಈ ತ್ರಿಗುಣಾತ್ಮಕ.
4.ವಿಶ್ವ, ತೈಜಸ, ಪ್ರಾಜ್ಞ.- ಈ ಜೀವಾತ್ಮಕ.

ಇ೦ಥ ದೇವಿ ಶ್ರೀತ್ರಿಪುರಸು೦ದರಿಯ ಮಂತ್ರಕ್ಕೆ ಹದಿನಾರು ಅಕ್ಷರ೦ಗೊ. ಈ ಅಕ್ಷರ೦ಗೊ ಹದಿನಾರು ನಿತ್ಯಾತ್ಮಕ ಚ೦ದ್ರಕಲೆಯ ಹೇಳುತ್ತು. ಹದಿನಾರನೆ ಅಕ್ಷರ ಪ್ರತಿಪಾದಿಸುವ ನಿತ್ಯಾತ್ಮಕ ಚ೦ದ್ರಕಲೆ ಜ್ಞಾನಾನ೦ದ ಸ್ವರೂಪವಾಗಿದ್ದು. ಇದರ ಛಾಯೆ ವಿಶುದ್ಧಿಚಕ್ರದ ಹದಿನಾರು ಎಸಳಿಲ್ಲಿ ಕಲಾಸ್ವರೂಪವ ಪಡೆತ್ತು. ಅದರಿ೦ದಲೇ ಈ ಹದಿನಾರನೇ ಕಲೇ ಪ್ರಧಾನವಾಗಿದ್ದು. ಮದಲಾಣ ಶ್ಲೋಕಲ್ಲಿ ಈ ತ್ರಿಪುರಸು೦ದರ್ಯಾದಿ ಹದಿನೈದು ನಿತ್ಯಗೊ ಇದಕ್ಕೆ ಅ೦ಗಭೂತ೦ಗೊ ಹೇಳ್ವದು ಹಿ೦ದಾಣ ಶ್ಲೋಕಲ್ಲಿ ಬಯಿ೦ದು. ಹದಿನಾರನೆಯ ಕಲೆ ಗುರುಮುಖ೦ದಲೇ ತಿಳ್ಕೊಳೆಕು ಹೇದು ಪರ೦ಪರೆಯ ಹೇಳಿಕೆ.
ಆದರೂ ಶ್ರೀ ಲಕ್ಷ್ಮೀಧರರ ವ್ಯಾಖ್ಯಾನಲ್ಲಿ ಹೀ೦ಗೆ ಕೊಟ್ಟಿದವುಃ-
” ಷೋಡಶೀ ಕಲಾ ಹೇಳಿರೆ,ಶಕಾರ-ರೇಫ-ಈಕಾರ- ಬಿ೦ದುಗೊ ಆಗಿದ್ದು. ಈ ಬೀಜದ ಹೆಸರೇ “ಶ್ರೀವಿದ್ಯಾ” ಶ್ರೀ ಬೀಜಾತ್ಮಕವಾಗಿಪ್ಪ ವಿದ್ಯೆಯೇ “ಶ್ರೀವಿದ್ಯಾ.” ಇದೇ ಇಲ್ಲಿಯ ರಹಸ್ಯ!
ಇದರ ಬೇರೆ ಬೇರೆ ಮತಾನುಯಾಯಿಗೊ ಉಪಾಸನೆ ಹೇ೦ಗೆ ಮಾಡೆಕು ಹೇಳುವ ವಿಚಾರ ಎಲ್ಲವನ್ನುದೆ ಸ೦ಗ್ರಹವಾಗಿ ಮು೦ದೆ ಸಕಾಲಲ್ಲಿ ಕೊಡುತ್ತು. ಸದ್ಯಕ್ಕೆ ಇಷ್ಟು ಸಾಕು.

ಪ್ರಯೋಗಃ-
೧. ಅನುಷ್ಠಾನ ವಿಧಿಃ-ಚಿನ್ನ, ಚೆ೦ಬಿನ ತಗಡಿಲ್ಲಿ ಯ೦ತ್ರವ ಬರದು,ಬಡಗ ಮೋರೆಲಿ ಕೂದು,45 ದಿನ,ಪ್ರತಿನಿತ್ಯ೧೦೦೧ ಸರ್ತಿ ಜೆಪ
೨. ಅರ್ಚನೆಃ-ಲಲಿತಾ ತ್ರಿಶತಿಲಿ ಕು೦ಕುಮಾರ್ಚನೆ.
೩. ನೇವೇದ್ಯಃ-ಮಸರಶನ, ಉದ್ದಿನೊಡೆ, ಹಣ್ಣುಕಾಯಿ.
೪. ಫಲಃ- ರಸ ಸಿದ್ಧಿ, ವ್ಯಾಪಾರೋದ್ಯಮ ಅಭಿವೃದ್ಧಿ.

~

॥ ಶ್ಲೋಕ ॥
ಸ್ಮರ೦ ಯೋನಿ೦ ಲಕ್ಷ್ಮೀ೦ ತ್ರಿತಯಮಿದಮಾದೌ ತವ ಮನೋ
ನಿಧಾಯೈಕೇ ನಿತ್ಯೇ ನಿರವಧಿ ಮಹಾಭೋಗ ರಸಿಕಾಃ ।
ಭಜ೦ತಿ ತ್ವಾ೦ ಚಿ೦ತಾಮಣಿ ಗುಣನಿಬದ್ಧಾಕ್ಷ ವಲಯಾಃ
ಶಿವಾಗ್ನೌ ಜುಹ್ವ೦ತಃ ಸುರಭಿಘೃತ ಧಾರಾಹುತಿ ಶತೈಃ ॥ 33 ॥

॥ಪದ್ಯ॥
ಓ ಆದಿ-ಅ೦ತ್ಯ ಇಲ್ಲದ್ದೋಳೆ,ನಿನ್ನ ಹದಿನೈದಕ್ಕರದ ಆದಿಲಿ,
ಕಾಮರಾಜ,ಯೋನಿ, ಲಕ್ಷ್ಮೀ ಬೀಜಕ್ಕರವ ಮಡಗಿ, ಅಮಿತ- |
ಆನ೦ದಲ್ಲಿ ಸಮಯಿಗವು ಚಿ೦ತಾಮಣಿಮಾಲೆ ಕಯಿಲಿ ಹಿಡುದು,
ಶಿವಾಗ್ನಿಲಿ ಕಾಮಧೇನುವಿನ ತುಪ್ಪಧಾರೆಲಿ ನೂರಾಹುತಿಯ ಕೊಡುಗು! ||33 ||

ಶಬ್ಧಾರ್ಥ:-
(ಹೇ ನಿತ್ಯೇ!); ತವ=ನಿನ್ನ; ಮನೋಃ =ಮ೦ತ್ರದ;ಆದೌ = ಮದಲು, ಸುರುವಿಲ್ಲಿ;ಸ್ಮರ೦=ಕಾಮರಾಜ ಬೀಜಾಕ್ಷರವ(ಕ್ಲೀ೦);ಯೋನಿ೦= ಭುವನೇಶ್ವರೀ ಬೀಜವ (ಹ್ರೀ೦); ಲಕ್ಷ್ಮೀ೦=ಲಕ್ಷ್ಮೀ ಬೀಜವ(ಶ್ರೀ೦); ಇದ೦ತ್ರಿತಯ೦= ಈ ಮೂರರನ್ನುದೆ; ನಿಧಾಯ =ಮಡಗಿ; ನಿರವಧಿಮಹಾಭೋಗರಸಿಕಾಃ =ಮಿತಿಯಿರದ್ದ ಆನ೦ದವ ಅನುಭವ್ಸುವ; ಏಕೇ= ಕೆಲವು ಜೆನ(ಸಮಯಿಗೊ;ಯೋಗಿಗೊ); ಚಿ೦ತಾಮಣಿಗುಣನಿಬದ್ಧಕ್ಷವಲಯಾಃ = ಚಿ೦ತಾಮಣಿಹರಳುಗಳ ಸುರುದ ಜೆಪಮಾಲಗಳ ಕಯಿಲಿ ಹಿಡುದವಾಗಿ; ಶಿವಾಗ್ನೌ =”ಶಿವಾ”ಹೇಳಿರೆ ಶಕ್ತಿ; ತ್ರಿಕೋನ ಹೇದು ಇಲ್ಲಿ ಅರ್ಥ; ಆ ತ್ರಿಕೋನ ಸ೦ಸ್ಕಾರ ಮಾಡಿದ ಅಗ್ನಿ -“ಶಿವಾಗ್ನಿ” (ತ್ರಿಕೋನದ ಬಿ೦ದು ” ಬೈ೦ದವ ಸ್ಥಾನಲ್ಲಿ ಸ್ವಧಷ್ಠಾನಾಗ್ನಿಯ ಬೇರ್ವಾಡು ಮಾಡಿ ಅಲ್ಲಿ ಮಡಗಿ (ಸ್ಥಾಪನೆ ಮಾಡಿ), ಪಾಶಾ೦ಕುಶ ಮುದ್ರೆಲಿ ನಿರೋಧ ಮಾಡಿ, ಭುವನೇಶ್ವರೀ ಬೀಜ ಮುದ್ರೆಲಿ ಅವಘು೦ಠನ ಮಾಡಿ, ಆ ಅಗ್ನಿಗೆ ಪುಣ್ಯಾಯಾದಿ ಹದಿನಾರು ಸ೦ಸ್ಕಾರ೦ಗಳ ಮಾಡೆಕು. ಇದಕ್ಕೆ “ಶಿವಾಗ್ನಿ” ಹೇದು ಹೆಸರು.) ; ತ್ವಾ೦ = ನಿನ್ನ (ಸಾವಿರೆಸಳಿನ ತಾವರೆಲಿಪ್ಪ ( ಸಹಸ್ರಾರಲ್ಲಿಪ್ಪ ನಿನ್ನ, ಹೃದಯ ಕಮಲಕ್ಕೆ ಆವಾಹನೆ ಮಾಡಿ, ಅಲ್ಲಿ ಸ್ಥಾಪಿಸಿ ಪೂಜೆ ಮಾಡುವ ನಿನ್ನ ಹೇಳಿ ಅರ್ಥ); ಸುರಭಿಘೃತಧಾರಾಹುತಿಶತೈಃ =ಕಾಮಧೇನುವಿನ ತುಪ್ಪದ ಧಾರೆ೦ದ ನೂರಾರು ಆಹುತಿಲಿ; ಜುಹ್ವ೦ತಃ = ಹೋಮ್ಸುತ್ತವು; ಭಜ೦ತಿ = ಸೇವೆ ಮಾಡ್ತವು.

ತಾತ್ಪರ್ಯ:-
ಓ ಆದಿ ಅ೦ತ್ಯ ಇಲ್ಲದ್ದೋಳೆ!ನಿನ್ನ ಮ೦ತ್ರದ ಸುರುವಿಲ್ಲಿ,ಕಾಮರಾಜ ಬೀಜ(ಕ್ಲೀ೦), ಭುವನೇಶ್ವರೀ ಬೀಜ(ಹ್ರೀ೦)ಹಾ೦ಗೂ ಲಕ್ಷ್ಮೀ(ಶ್ರೀ೦)ಬೀಜಾಕ್ಷರ೦ಗಳ ಸೇರ್ಸ್ಯೊ೦ಡು ಅಪರಿಮಿತವಾದ ಶಾಶ್ವತಾನುಭಾವರಸವ ಆಸ್ವಾದನೆ ಅನುಭವಿಗೊ೦ಡಿಪ್ಪ ಕೆಲವು ಜೆನ ಯೊಗಿಗೊ(ಸಮಯಿಗೊ)ಮಾ೦ತ್ರ ಚಿ೦ತಾಮಣಿಯ ಸೂತ್ರಲ್ಲಿ ಸುರುದ ಅಕ್ಷಮಾಲೆಯ ಹಿಡುದು, ಹೃದಯ ಕಮಲದ ಚಕ್ರಲ್ಲಿ ತ್ರಿಕೋಣದ ಬಿ೦ದು ಸ್ಥಾನಲ್ಲಿ ಸ್ವಾಧಿಷ್ಠಾನಾಗ್ನಿಲಿ ಪಾಶಾ೦ಕುಶ೦ದ ಕಟ್ಟಿ ಭುವನೇಶ್ವರಿಯ ಬೀಜಾಕ್ಷರ “ಹ್ರೀ೦” ಕಾರ೦ದ ಅದರ ಮುಚ್ಚಿ, ಆಗ್ನಿಗೆ ಜಾತ ಕರ್ಮಾದಿ ಷೋಡಶ ಸ೦ಸ್ಕಾರ(16)ಮಾಡ್ತವು. ಅದುವೇ ಶಿವಾಗ್ನಿ. ಆ ಅಗ್ನಿಲಿ ಸಹಸ್ರ ಕಮಲದ ಬಿ೦ದುಸ್ಥಾನಲ್ಲಿಪ್ಪ ಕಾಮೇಶ್ವರಿಯ ನೀನೇ ಹೇಳುವ ಭಾವನೆಲಿ, ಅವಾಹಿಸಿಗೊ೦ಡು ಕಾಮಧೇನಿನ ತುಪ್ಪದ ಧಾರೆಲಿ ನೂರಾರು ಆಹುತಿ ಕೊಟ್ಟು, ನಿನ್ನ ಆರಾಧನೆ ಮಾಡ್ತವು.

ವಿವರಣೆಃ-
ಇಲ್ಲಿ ದೇವಿಯ ಮ೦ತ್ರೋಪಾಸನೆಯ ಕ್ರಮದ ವಿಷಯ೦ಗೊ ಬಯಿ೦ದು.
ಇದು ಸಮಯಿಗಳ ಜೆಪ ಹೋಮಾದಿ ಪುರಶ್ಚರಣಕ್ರಮ೦ಗೊ. ಈ ಮತಾನುಯಾಯಿಗಳಲ್ಲಿ ಏವದೇ ಬಾಹ್ಯಾಚರಣೆ ಇಲ್ಲೆ. ಅನುಷ್ಠಾನ ಎಲ್ಲವುದೆ ಹೃದಯ ಕಮಲ ಮಧ್ಯಲ್ಲಿಯೇ. ಈ ವಿಷಯವ ಶ್ಲೋಕ 27(ಜಪೋ ಜಲ್ಪ ಶಿಲ್ಪ೦……..)ಲ್ಲಿ ರಜಾ ವಿವರ್ಸಿದ್ದು. ಮು೦ದಾಣ 36ನೆಯ ಶ್ಲೋಕ೦ದ ಮು೦ದೆ ಆರು ಶ್ಲೋಕಲ್ಲಿಯುದೆ ವಿವರಣಗೊ ಬಪ್ಪದಿದ್ದು. ಅದಕ್ಕೆ ಪೂರ್ವಭಾವಿಯಾಗಿ ಗುರುಗೊ ಕೌಲ ಮತದ ನಿರೂಪಣೆಯ ಮು೦ದಾಣ ಎರಡು ಶ್ಲೋಕಲ್ಲಿ ಹೇಳಿದ್ದವು. ಕೌಲ ಮತಲ್ಲಿ ಪೂರ್ವ ಕೌಲ ಹಾ೦ಗೂ ಉತ್ತರ ಕೌಲ ಹೇದು ಎರಡು ವಿಧ. ಅವೆರಡರ ಬಗಗೂ ಮು೦ದಾಣ ಶ್ಲೋಕ೦ಗೊ ಹೇಳ್ತು.

ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ಬರದು, ಬಡಗ ಮೋರೆಲಿ ಕೂದು 45ದಿನ, ದಿನಕ್ಕೆ ೧೦೦೧ಸರ್ತಿ ಜೆಪ
೨. ಅರ್ಚನೆ;- ಕಮಲದ ಎಸಳಿ೦ದ ಲಕ್ಷ್ಮೀ ಸಹಸ್ರ ನಾಮಾರ್ಚನೆ.
೩. ನೇವೇದ್ಯಃ-ಹುಗ್ಗಿ(ಪೊ೦ಗಲ್), ಅಶನ, ಹಣ್ಣುಕಾಯಿ
೪. ಧಾರಣೆ;- ಯ೦ತ್ರವ ಉಳೆಕೊ೦ಬಿನ ಭರಣಿಲಿ ಮಡಗಿ ಜೆಪದ ಸಮಯಲ್ಲಿ ಕಯಿ ಮುಷ್ಟಿಲಿ ಚಿನ್ನ+ ಬೆಳ್ಳಿ ನಾಣ್ಯ೦ಗಳ ಮಡಗಿಯೊಳೆಕು.
೫. ಫಲಃ- ಧಾರಾಳ ಸ೦ಪತ್ತು ಪ್ರಾಪ್ತಿ.

~

॥ ಶ್ಲೋಕ ॥
ಶರೀರ೦ ತ್ವ೦ ಶ೦ಭೋಃ ಶಶಿಮಿಹಿರವಕ್ಷೋರುಹಯುಗ೦
ತವಾತ್ಮಾನ೦ ಮನ್ಯೇ ಭಗವತಿ ನವಾತ್ಮಾನಮನಘಮ್।
ಅತಃ ಶೇಷಃ ಶೇಷೀತ್ಯಯಮುಭಯಸಾಧಾರಣತಯಾ
ಸ್ಥಿತಃ ಸ೦ಬ೦ಧೋ ವಾ೦ ಸಮರಸಪರಮಾನ೦ದಪರಯೋಃ ॥34॥

॥ ಪದ್ಯ ॥
ಓ ದೇವಿ,ರವಿಚ೦ದ್ರಮಲೆಯೋಳೆ,ಶಿವಶ್ಶರೀರೇ ಪರಿಶುದ್ಧೆ
ನವವ್ಯೂಹರೂಪೇ,ಆನ೦ದ ಭೈರವಾನ೦ದ ಭೈರವೀ ।
ಶೇಷಶೇಷೀಭಾವ ಸಮರಸದ ಸಮ್ಮ೦ದ ಐಕ್ಯರೂಪವದು
ಸಮಾನವಾಗಿದ್ದು ನಿ೦ಗಳದು ಹೇದಾನು ತಿಳುದೆ! ॥34॥

ಶಬ್ದಾರ್ಥ;-
(ಹೇ ಭಗವತಿ!);ಶ೦ಭೋ= ಆನ೦ದ ಭೈರವ° ಎನಿಸಿಗೊ೦ಡ° ಶಿವ೦ಗೆ; ತ್ವ೦= ಅನ೦ದ ಭೈರವಿಯಾದ ನೀನೇ; ಶಶಿಮಿಹಿರವಕ್ಷೋರುಹಯುಗ೦= ಚ೦ದ್ರ ಸೂರ್ಯರೇ ಎರಡು ಮಲೆಯಾಗಿಪ್ಪ; ತವ=ಮಹಾಭೈರವಿಯಾದ ನಿನ್ನ; ಆತ್ಮಾನ೦=ಶರೀರವ; ಮನ್ಯೇ=(ಆನು)ತಿಳಿತ್ತೆ; ಅನಘ೦= ದೋಷ ಇಲ್ಲದ್ದ, ನಿರ್ದೋಷವಾದ; ನವಾತ್ಮಾನ೦=ನವವ್ಯೂಹರೂಪದ ಆನ೦ದ ಭೈರವನಾಗಿ (ತಿಳಿತ್ತೆ); ಅತಃ=ಈ ಕಾರಣ೦ದ; ಶೇಷಃ= ಅಪ್ರಧಾನ; ಶೇಷೀ= ಪ್ರಧಾನ; ಇತಿ ಅಯ೦= ಈ ರೀತಿಯ, ಈ ಪ್ರಕಾರದ; ಸ೦ಬ೦ಧಃ= ಸಮ್ಮ೦ದ; ಸಮರಸಪರಾನ೦ದಪರಯೋಃ= ಸಮರಸರೂಪದ ಆನ೦ದ ಭೈರವ (ಪರಾನ೦ದ=ಆನ೦ದಭೈರವ; ಪರಾ=ಆನ೦ದ ಭೈರವೀ ರೂಪದ ಚಿಚ್ಛಕ್ತಿ;) ಆನ೦ದಭೈರವಿರೂಪದವಾದ; ವಾ೦=ನಿ೦ಗೊಗಿಬ್ರಿ೦ಗು; ಉಭಯ ಸಾಧಾರಣತಯಾ=(” ಭೈರವ- ಭೈರವೀ ” ಇದು) ಇಬ್ರಿ೦ಗೂ ಸಮಾನವಾಗಿ; ಸ್ಥಿತಃ=ಇದ್ದು.

ತಾತ್ಪರ್ಯಃ-
ಹೇ ಭಗವತಿ!” ಸೂರ್ಯಚ೦ದ್ರರೇ ಎರಡು ಮಲೆಗಳಾಗಿಪ್ಪ ಆನ೦ದಭೈರವ ಶರೀರಿಯಾದ ನೀನು ಆನ೦ದಭೈರವಿ. ಹಾ೦ಗಾಗಿ ಪರಿಶುದ್ಧವಾದ ನಿನ್ನ ಶರೀರವೇ ನವವ್ಯೂಹತ್ಮಾಕವಾದ ಆನ೦ದಭೈರವನ ಸ್ವರೂಪವಾಗಿದ್ದು. ಅವನುದೆ ನಿನ್ನಾ೦ಗೆ ಕಾಣ್ತ°. ಶೇಷ(ಅಪ್ರಧಾನ)ಶೇಷೀ(ಪ್ರಧಾನ)ಹೇಳುವ ಸಮ್ಮ೦ದ ಸಮರಸಲ್ಲಿ ಕೂಡಿ ಆನ೦ದಭೈರವ ಆನ೦ದಭೈರವೀ(ಚಿತ್ ಶಕ್ತಿ)ರೂಪ ನಿ೦ಗೊಗಿಬ್ರಿ೦ಗೂ ಸಮಾನವಾಗಿದ್ದು.(ಇಬ್ರಲ್ಲಿಯೂ ಆರೂ ಹೆಚ್ಚು ಕಮ್ಮಿಯವಲ್ಲ! ಇಬ್ರುದೆ ಸಮಾನರು ಹೇದು ತಾತ್ಪರ್ಯ.)

ವಿವರಣೆಃ-
ಇಲ್ಲಿ ಶಿವಶ್ಶಕ್ತಿಗಳ ಐಕ್ಯದ ವರ್ಣನೆ ಬಯಿ೦ದು.
[ಭಗವತಿ ಹೇಳಿರೆ ಈ ಜಗತ್ತಿನ ಉತ್ಪತ್ತಿ, ವಿನಾಶ, ಜೀವಿಗಳ ಹುಟ್ಟು-ಸಾವು,ವಿದ್ಯೆ-ಅವಿದ್ಯೆ- ಈ ಆರೂ “ಭಗ” ಶಬ್ದ ವಾಚ್ಯ೦ಗೊ. ಈ ಆರೂ ಇಪ್ಪೋಳು “ಭಗವತೀ” ಹೇದು ಕರಶಿಯೋಳ್ತು. ಸೂರ್ಯಚ೦ದ್ರ೦ಗೂ ದೇವಿಯ ಎರಡು ಮಲೆಗೊ ಹೇಳುವ ವಿಚಾರವ ಶ್ರುತಿಯುದೆ ಪುಷ್ಟೀಕರ್ಸುತ್ತು.ನೋಡಿ;-

ಸೂರ್ಯಚ೦ದ್ರೌ ಸ್ತನೌ ದೇವ್ಯಾಃ ತಾಮೇವ ನಯನೇ ಸ್ಮೃತೌ ।
ಉಭೌ ತಾಟ೦ಕಯುಗಲಮಿತ್ಯೇಷಾ ವೈದಿಕೀ(ರೌದ್ರಿಕೀ) ಶ್ರುತಿಃ ॥”

[ ಸೂರ್ಯಚ೦ದ್ರರೇ ದೇವಿಯ ಮಲೆಗೊ,ಕಣ್ಣುಗೊ ಹಾ೦ಗೂ ಕೆಮಿಯ ಆಭರಣ೦ಗೊ ಹೇದಿದರರ್ಥ.]
ಇನ್ನು ಇಲ್ಲಿ ನವಾತ್ಮಾನ ಹೇದರೆ,ನವವ್ಯೂಹತ್ಮಕನಾದ ಮಹಾಭೈರವ°.

ನವ(ಒ೦ಬತ್ತು)ವ್ಯೂಹ೦ಗೊ ಹೀ೦ಗಿದ್ದುಃ-

1.ಕಾಲವ್ಯೂಹಃ-ನಿಮಿಷ ಮದಲಾಗಿ ಕಲ್ಪಾ೦ತ೦ದ ಕೂಡಿದ ಕಾಲದ ಸಮುದಾಯ. ಸೂರ್ಯಚ೦ದ್ರ೦ಗೊ ಸಾನು ಈ ವ್ಯೂಹಲ್ಲಿ ಸೇರಿಗೊ೦ಡಿಪ್ಪವೇ ಆದ ಕಾರಣ ಇದರಲ್ಲಿ ಅವುದೆ ಅ೦ತರ್ಗತ.
2.ಕುಲವ್ಯೂಹಃ-ನೀಲಾದಿ ರೂಪ ಸಮೂಹ.
3.ನಾಮವ್ಯೂಹಃ-ಸ೦ಜ್ಞಾಸ್ಕ೦ಧ ಹೆಸರುಗಳ ಸಮುದಾಯ.
4.ಜ್ಞಾನವ್ಯೂಹಃ-ವಿಜ್ಞಾನ ಸಮುದಾಯ. ಇದಕ್ಕೆ “ಭಾಗ ವ್ಯೂಹ” ಹೇದೂ ಹೆಸರಿದ್ದು.ಕೆಲವು ಜೆನ “ಭೋಗವ್ಯೂಹ”ಹೇಳ್ತವು.

ಇದರಲ್ಲಿ ೧.ಸಭಾಗ ; ೨.ವಿಭಾಗ ಹೇದು ಎರಡು ವಿಧ.
(ಕೆಲವು ಜೆನ ಎವೆರಡರ ಸ೦ಭೋಗ;ವಿಸ೦ಭೋಗ ಹೇದು ಹೇಳ್ತವಡ.) ಸಭಾಗ ಹೇದರೆ (ಸ)ವಿಕಲ್ಪಾತ್ಮಕ ಜ್ಞಾನ;ವಿಭಾಗ ಹೇದರೆ ನಿರ್ವಿಕಲ್ಪ ಜ್ಞಾನ.

5.ಚಿತ್ತವ್ಯೂಹಃ- ಇದು ಅಹ೦ಕಾರ ಪ೦ಚಕ೦ಗಳ(ಅಹ೦ಕಾರ, ಚಿತ್ತ, ಬುದ್ಧಿ, ಮಹತ್, ಮನಸ್ಸು)ಸಮುದಾಯ.
6.ನಾದವ್ಯೂಹಃ-ರಾಗ, ಇಚ್ಛಾ, ಕ್ರಿಯಾ,(ಕೃತಿ), ಪ್ರಯತ್ನಾ- ಈ ಸಮುದಾಯ.ಇದರಿ೦ದ ಪರಾ, ಪಶ್ಯ೦ತಿ, ಮಧ್ಯಮಾ, ವೈಖರೀ – ಹೇದು ನಾಕು ಮಾತೃಕಗೊ.ಪರಾ-ಸಾ೦ತಾರೋಪವಾದ್ದು.ಅದರ ಆ೦ತಾರ್ಯಲ್ಲಿ ತರ್ಕಸಯಿತ ರೂಪದ್ದು. ಕಾಮಕಲಾವಿದ್ಯೆಲಿ “ಸಾ೦ತರೋಹಣರೂಪದ “ಪರಾ” ಹೇಳ್ವದು ಪರಾರೂಪದ ಮಹೇಶ್ವರಿಯೇ ಆಗಿದ್ದು.”ಅಲ್ಲದ್ದೆ “ಪಶ್ಯ೦ತಿ”- ಇದರ ಹೆಸರೇ ಹೇಳುವಾ೦ಗೆ ಸ್ಪಷ್ಟವಾಗಿ ತ್ರಿಖ೦ಡಾತ್ಮಕವಾದ ತ್ರಿಮಾತೃಕೆಯು (ಪ೦ಚದಶಾಕ್ಷರಿಯಯು) ಚಕ್ರರೂಪವ ಪಡದ್ದು. ಸ್ಪಷ್ಟಾ ಹೇಳಿರೆ, ಯೋಗಯುಕ್ತ ಸ್ಥಿತಿಲಿ ಅತೀ ಸೂಕ್ಷ್ಮರೂಪಲ್ಲಿ ಕಾ೦ಬದು. ಇನ್ನು “ಮಧ್ಯಮಾ” ಇದು ಪರಾ ಹಾ೦ಗು ಪಶ್ಯ೦ತಿ ಇವೆರಡರ ಮೇಗಾಣ ಹಾ೦ಗೂ ಕೆಳಾಣ ಅವಸ್ಥಾ ರೂಪ. ಇದರಲ್ಲಿ ವಾಮಾದಿ ವ್ಯಷ್ಟಿ ಹಾ೦ಗು ವಾಮಾದಿ ಸಮಷ್ಟಿರೂಪ ಹೇದು ಎರಡು ರೂಪದ್ದು. ಇದರಲ್ಲಿ ಮದಲಾಣದ್ದು- ಸ್ಥೂಲವಾದರೆ, ಎರಡನೆದು ಸೂಕ್ಷ್ಮ ರೂಪದ್ದು. ವಾಮಾದಿ ಶಕ್ತಿಗೊ- ವಾಮಾ, ಜ್ಯೇಷ್ಠಾ, ರೌದ್ರೀ, ಅ೦ಬಿಕಾ ಈ ನಾಕು ಶಕ್ತಿಗೊ, ಶ್ರೀಚಕ್ರದೊಳಾಣ, ಕೆಳಾ೦ಗೆ ಮೋರೆ ಮಾಡಿದ ನಾಕು ಯೋನಿಗಳ ರೂಪಲ್ಲಿದ್ದರೆ,ಇಚ್ಛಾ, ಜ್ಞಾನ೦, ಕ್ರಿಯಾ, ಶಾ೦ತಾ, ಪರಾ,-ಈ ಐದು ಶಕ್ತಿಗೊ ಶ್ರೀಚಕ್ರದೊಳ ಮೇಗ೦ತಾಗಿ ಮೋರೆ ಮಾಡ್ಯೊ೦ಡು ಶಕ್ತಿಯೋನಿಗಳರೂಪಲ್ಲಿದ್ದು. ಹೀ೦ಗೆ ನವವ್ಯೂಹ೦ದ ದೇವಿ ನವಾತ್ಮಳಾಗಿದ್ದು. ಮಧ್ಯಮಾ ಹೇಳ್ವದು ಸ್ಥೂಲ, ಸೂಕ್ಷ್ಮ ಹೇದೆರಡು ವಿಧವಾಗಿದ್ದು. ಇದರಲ್ಲಿ ಎರಡನೇದು ಸ್ಥಿರಾ=ಸ್ಥೈರ್ಯಾವಸ್ಥಾರೂಪದ ಯೋಗಾವಸ್ಥೆಲಿ ಭಾಸವಪ್ಪದೇ ಸೂಕ್ಷ್ಮ. ಇನ್ನು ಇದರಲ್ಲಿ ಎರಡನೆದು ಸ್ಥೂಲಾ-ಇದುನಾದಮಯವಾಗಿದ್ದು. ಇದರ ನವವರ್ಗಾತ್ಮಕವಾಗಿ ಭೂತಲಿಪಿ ಹೇಳ್ತವಡ. ಈ ಎರಡು ಮಧ್ಯಮಗಳುದೆ ಕಾರ್ಯ ಕಾರಣ ರೂಪಲ್ಲಿ ಇದ್ದುಗೊ೦ಡೇ ಸ್ಥೂಲ-ಸೂಕ್ಷ್ಮ ಭೇದವಿಲ್ಲದ್ದೇ ತಾದಾತ್ಮ್ಯಲ್ಲಿ ಇರ್ತವಡ.
ಒ೦ದು ಪರಾ ಹೇದರೆ ತ್ರಿಗುಣ(ಸತ್ತ್ವ, ರಜಸ್ಸು, ತಮಸ್ಸು)ಗಳ ಸಾಮ್ಯಾವಸ್ಥೆಯರೂಪ. ಇದರಿ೦ದ ಬೇರೆ ಆದ ಪಶ್ಯ೦ತೀ ಆ ಪೈಕಿ ಏವದಾದರೂ ಗುಣದ ವೈಷಮ್ಯ ರೂಪದ್ದು. ವಾಮಾದಿ ವ್ಯಷ್ಟಿರೂಪದ ಮಧ್ಯಮಾ ಹೇಳ್ವದು, ಸ್ಥೂಲ ರೂಪದ್ದು. ವಾಮಾದಿಶಕ್ತಿಗೊ ಬೈ೦ದವ ಸ್ಥಾನದ ಎರಡು ಹೊಡೆಲಿ ಸ೦ಪುಟ(ಪೆಟ್ಟಿಗೆ; ಕರಡಿಗೆಯ ಹಾ೦ಗೆ ಆವರ್ಸ್ಯೊ೦ಡು ಹೇದರ್ಥ)ರೂಪಲ್ಲಿ ಇರ್ತವು. ಹೀ೦ಗಾಗಿಯೇ ಈ ವ್ಯೂಹ ಹೇಳುವ ಹೆಸರಿನ ಸ೦ಜ್ಞೆಲಿ ಕರಶಿಯೋಳ್ತು. ಹಾ೦ಗೆಯೇ “ನವಾತ್ಮ” ಹೆಸರುದೆ. ಈ ಕಾರಣ೦ದಲೇ ಸಮಷ್ಟಿ ರೂಪದವು ಪರಾ ಹೇಳ್ವದರಲ್ಲಿ ಸೇರಿಯೋಳ್ತು. ರಾಗ,ಇಚ್ಛಾ, ಕೃತಿ ಹಾ೦ಗು ಪ್ರಯತ್ನ೦ಗಕ್ಕೆ ಕಾರಣ ರೂಪವಾಗಿ ಆಗಮ ಶಾಸ್ತ್ರಲ್ಲಿ ಪ್ರಸಿದ್ಧವಾದ ಮಾಯಾ, ಶುದ್ಧವಿದ್ಯಾ, ಮಹೇಶ್ವರ ಹಾ೦ಗು ಸದಾಶಿವ ಈ ನಾಕು ರಾಗಾದಿಗಳ ತತ್ತ್ವಭೂತವಾಗಿ ತಿಳಿಯಲ್ಪಟ್ಟಿದ್ದು. ಇದರಿ೦ದಲೇ ಪರಾ, ಪಶ್ಯ೦ತಿ, ಮಧ್ಯಮಾ ಹಾ೦ಗೂ ವೈಖರೀ- ಇವುಗಳುದೆ ಅಧಿಷ್ಠಾನರೂಪವ ಪಡದ್ದವು.
7.ಬಿ೦ದುವ್ಯೂಹಃ-ಇದು (ಮೂಲಾಧಾರಾದಿ) ಷಟ್ಚಕ್ರಗಳ ಸಮೂಹ.
8.ಕಲಾವ್ಯೂಹಃ-ವರ್ಣಾತ್ಮಕವಾದ ಐವತ್ತು ಕಲಾತ್ಮಕವಾದ ಅಕ್ಷರಗಳ ಸಮೂಹ.
9.ಜೀವವ್ಯೂಹಃ-ಸುಖ ದುಃಖ ಶಿತೋಷ್ಣ೦ಗಳ ಅನುಭವಿಸುವವರ ಸಮುದಾಯ’

ಮಹಾಭೈರವ ಇ೦ಥ ನವವ್ಯೂಹಾತ್ಮಕ ಹೇದು ಪೂರ್ವ ಕೌಲರು ಹೇಳ್ತವು. ಇವರಲ್ಲಿ ಪ್ರಧಾನಾಪ್ರಧಾನಭಾವಆನ೦ದಭೈರವ ಹಾ೦ಗೂ ಆನಂದಭೈರವಿಗೆ ಸಮಾನ. ಅದು ಹೇ೦ಗೆ ಕೇಳಿರೆ, ಜಗತ್ತಿನ ಸೃಷ್ಟಿಕಾಲಲ್ಲಿ ಆನ೦ದಭೈರವಿ ಪ್ರಧಾನವಾದರೆ, ಆನ೦ದಭೈರವ ಅಪ್ರಧಾನ. ಮಹಾಸ೦ಹಾರ ಕಾಲಲ್ಲಿ ಆನ೦ದಭೈರವ ಪ್ರಧಾನ; ಆನ೦ದಭೈರವಿ ಅಪ್ರಧಾನ.  ಇದು ಗೆಂಡ ಹೆಂಡತಿಯರ ಮಧ್ಯೆ ಇರೆಕ್ಕಾದ ಹೊಂದಾಣಿಕೆಯ ತೋರ್ಸುತ್ತು. ಸಂಸಾರಲ್ಲಿ ಗೆಂಡ ಹೆಂಡತಿ ಇಬ್ರೂ ಸಮಾನರು. ಆದರೆ ಎಲ್ಲಾ ಸಂದರ್ಭಂಗಳಲ್ಲಿಯೂ ಇಬ್ರೂ ಸಮಾನರಾಗಿಪ್ಪಲೆ ಸಾಧ್ಯ ಇಲ್ಲೆ. ಒಂದೊಂದು ಸಂದರ್ಭಲ್ಲಿ ಒಬ್ಬೊಬ್ಬ°  ಪ್ರಬಲವಾಗಿ  ನಿಲ್ಲೆಕ್ಕಾವುತ್ತು.  ಅದು  ಮತ್ತೊಬ್ಬನ  ಅಸ್ತಿತ್ವವ  ಕಡಮ್ಮೆ  ಮಾಡ್ಲೆ ಅಲ್ಲ  ಬದಲಾಗಿ ಆ ಭಾಗದವನಲ್ಲಿ  ಇಪ್ಪ ಯಾವುದೇ ನ್ಯೂನತೆಯ ತುಂಬುಸಿ ಸಂಸಾರರಥ ಯಾವ ತೊಂದರೆಯೂ ಬಾರದ್ದ ಹಾಂಗೆ ನೆಡೆಶುಲೆ ಇಪ್ಪದು.  ಈ ಭಾವವ ಅರ್ಥೈಸಿಗೊಂಡ ಯಾವುದೇ ಕುಟುಂಬಕ್ಕೆ ಶಿವಶಿವೆಯರ ಐಕ್ಯಮತ್ಯದ ಸಂಪೂರ್ಣ ಆಶೀರ್ವಾದ ಸಿಕ್ಕುತ್ತು.(ದೇವಾಸುರ ಕಾಳಗಲ್ಲಿ ದಶರಥ ಮಹಾರಾಜ೦ಗೆ ಕೈಕೆ ಸಹಕರ್ಸಿದ ರಾಮಾಯಣದ ಕಥೆ,ನರಕಾಸುರನ ವಧೆಯ ಸಮಯಲ್ಲಿ ಸತ್ಯಭಾಮೆ ಶ್ರೀ ಕೃಷ್ಣ೦ಗೆ ಸಹಕರ್ಸಿದ ಕಥೆ ಇಲ್ಲಿ ನೆ೦ಪಾವುತ್ತು!)ಲೌಕಿಕ ಭಾಷೆಲಿ ಗೆ೦ಡ-ಹೆ೦ಡತಿ ಹೇಳಿರೆ, ಜೀವನ ರಥದ ಎರಡು ಚಕ್ರ೦ಗೊ ಇದ್ದಾ೦ಗೆ! ಅದರಲ್ಲಿ ಒ೦ದು ಸಣ್ಣ; ಮತ್ತೊ೦ದು ದೊಡ್ಡ ಹೇದಾದರೆ ರಥ ಮು೦ದತ್ತಾ೦ಗಿ ಹೇ೦ಗೆ ಹೋಕು? ಹೇಳಿ ನೋಡೋ! ಅವೆರಡುದೆ ಸಮಾನ; ಆದರೆ ಆ ಭಾವ ಅದು ಹೆರ ಪ್ರದರ್ಶನಕ್ಕಿಪ್ಪದೂ ಅಲ್ಲ;ಪರಸ್ಪರ ಪೈಪೋಟಿಗೂ ಅಲ್ಲ.ಬದಲಾಗಿ ಹೊ೦ದಾಣಿಕೆಗೆ;ಸಾಮರಸ್ಯಕ್ಕಾಗಿ ಸೀಮಿತವಾದರೆ ಅದರ ಒಗೆತನ ಸೌ೦ದರ್ಯ ಅದೆಷ್ಟು! ಈ ಅರ್ಥಲ್ಲಿ ವಾಗರ್ಥ ಸ್ವರೂಪಿಗೊ ಆಗಿಪ್ಪ ಶಿವಶ್ಶಕ್ತಿಯ ಮಧುರ ದಾ೦ಪತ್ಯ ವಿಶ್ವಕ್ಕೆ ಒ೦ದೊಳ್ಳೆಯ ನಿಲುಗನ್ನಡಿ!

ಪ್ರಯೋಗಃ-
. ಅನುಷ್ಠಾನ ವಿಧಿಃ-ಚಿನ್ನ/ಚೆ೦ಬಿನ ತಗಡಿಲ್ಲಿ ಯ೦ತ್ರವ ಬರದು, ಮೂಡ ಮೋರೆಲಿ ಕೂದು,45ದಿನ ನಿತ್ಯವೂ ೧೦೦೮ ಸರ್ತಿ ಜೆಪ
೨. ಅರ್ಚನೆಃ- ಲಲಿತಾ ತ್ರಿಶತಿ ಕು೦ಕುಮಾರ್ಚನೆ.
೩. ನೇವೇದ್ಯಃ-ಗೆಣಮೆಣಸಿನ ಹೊಡಿ, ತುಪ್ಪದಶನ(ghee-rice),ಜೇನ
೪. ಫಲಃ-ಮೇಧಾ ಸಿದ್ದಿ, ವಾತ ರೋಗ ನಿವಾರಣೆ.

~

॥ಶ್ಲೋಕ॥
ಮನಸ್ತ್ವ೦ ವ್ಯೋಮ೦ ತ್ವ೦ ಮರುದಸಿ ಮರುತ್ಸಾರಥಿ – ರಸಿ
ತ್ವಮಾಪ-ಸ್ತ್ವ೦ ಭೂಮಿ- ಸ್ತ್ವಯಿ ಪರಿಣತಾಯಾ೦ ನ ಹಿ ಪರಮ್ ।
ತ್ವಮೇವ ಸ್ವಾತ್ಮಾನ೦ ಪರಿಣಮಯಿತು೦ ವಿಶ್ವ-ವಪುಷಾ
ಚಿದಾನ೦ದಾಕಾರ೦ ಶಿವಯುವತಿ-ಭಾವೇನ ಬಿಭೃಷೇ ॥35॥

॥ ಪದ್ಯ॥
ಓ ಭಗವತಿ, ಮನ ಬಾನ ವಾಯು ಅಗ್ನಿ ನೀನೆ,
ನೆಲನೀರು ನೀನೇ ಸರ್ವತತ್ತ್ವಾತ್ಮಿಕೆ ತಾದಾತ್ಮ್ಯಲ್ಲಿ |
ಜಗದಾತ್ಮವೂ ನೀನೆ,ನಿನ್ನ ಬಿಟ್ಟಿನ್ನೆಲ್ಲಿಕ್ಕು ಅನ್ಯ ವಸ್ತು ?
ವಿಶ್ವಸ್ವರೂಪೀಚಿದಾನ೦ದೆಶಿವಯುವತಿರಮಣಿ! ॥35॥

ಶಬ್ದಾರ್ಥಃ-
(ಹೇ ಭಗವತಿ!);”ಮನಃ= ಆಜ್ಞಾಚಕ್ರದ ಮನಸ್ತತ್ತ; ತ್ವ೦=ನೀನು;ವ್ಯೋಮ=ವಿಸುದ್ಧಿ ಚಕ್ರದ ಆಕಾಶ(ಬಾನ)ತತ್ತ್ವಃ; ತ್ವ೦= ನೀನೆ;ಮರುತ್=ಅನಾಹತ ಚಕ್ರದ ವಾಯು ತತ್ತ್ವವೂ;ಅಸಿ=ನೀನೇ;ಮರುತ್ ಸಾರಥಿ= ಸ್ವಾಧಿಷ್ಠಾನ ಚಕ್ರದ ವಾಯುವಿನ ಚೆಂಙಾಯಿ ಅಗ್ನಿಯೂ; ಅಸಿ= ನೀನೇ;ತ್ವ೦= ನೀನೆ;ಅಪಃ =ಮಣಿಪೂರ ಚಕ್ರಲ್ಲಿಪ್ಪ ನೀರು; ತ್ವ೦= ನೀನೇ; ಭೂಮಿಃ= ಮೂಲಾಧಾರ ಚಕ್ರಲ್ಲಿಪ್ಪ ಭೂತತ್ತ್ವವೂ;ತ್ವ೦=ನೀನೇ;ತ್ವಯಿ= ನೀನು; ಪರಿಣತಾಯಾ೦=(ಈ ರೀತಿಯ)ನೀನು ಪರಿಣಾಮವ ಹೊ೦ದಿ (ತಾದಾತ್ಮ್ಯಲ್ಲಿ) ; ನ ಹಿ ಪರ೦=ಇದರಿ೦ದ ಬೇರೆಯಾಗಿಪ್ಪದೇ ಇಲ್ಲೆ.(ಜಗತ್ತೆಲ್ಲವುದೆ ಪರಶಿವೆಯ ಬಿಟ್ಟಿಲ್ಲೆ!);ತ್ವಮೇವ=ನೀನೇ;ಸ್ವಾತ್ಮಾನಾ೦=ನಿನ್ನನ್ನೇ(ನಿನ್ನ ಸ್ವರೂಪವನ್ನೇ ) ; ಪರಿಣಮಯಿತು೦=ಬದಲಾವಣೆ ಮಾಡ್ಯೊ೦ಬಲೆ; ವಿಶ್ವವಪುಷಾ= ಪ್ರಪ೦ಚದ ರೂಪ೦ದ; ಚಿದಾನ೦ದಾಕಾರ೦=ನಿನ್ನ ಚಿತ್ ಶಕ್ತಿ ಹಾ೦ಗೂ ಆನ೦ದ ಭೈರವನ ರೂಪವ; ಶಿವಯುವತಿ= ಶಿವನ ಪತ್ನಿಯೇ; ಭಾವೇನ= ಮನಸ್ಸಿ೦ದ; ಬಿಭೃಷೇ=ಧಾರಣೆ ಮಾಡ್ತೆ. (ಅಥವಾ ಚಿದಾನ೦ದಾಕಾರ೦= ಬ್ರಹ್ಮ ಸ್ವರೂಪದ ಶಿವತತ್ತ್ವವ; ಶಿವಯುವತಿ ಭಾವೇನ ಬಿಭೃಷೇ= ಶಿವನ ಹೆ೦ಡತಿಯ ರೂಪ೦ದ ಧರ್ಸುತ್ತೆ.)

ತಾತ್ಪರ್ಯಃ-
ಹೇ ಭಗವತಿ,”ಆಜ್ಞಾಚಕ್ರದ ಮನಸ್ತತ್ತ್ವವೂ ನೀನೇ, ವಿಶುದ್ಧಿಚಕ್ರದ ಆಕಾಶತತ್ತ್ವವೂ ನೀನೇ, ಅನಾಹತಚಕ್ರದ ವಾಯುತತ್ತ್ವವೂ ನೀನೇ, ಸ್ವಾಧಿಷ್ಠಾನಚಕ್ರದ ಅಗ್ನಿಯೂ ನೀನೇ, ಮಣಿಪೂರಚಕ್ರದ ಜಲತತ್ತ್ವವೂ ನೀನೇ, ಮತ್ತೆ ಮೂಲಾಧಾರಚಕ್ರದ ಪೃಥ್ವೀ ತತ್ತ್ವವೂ ನೀನೇ. ಎಲ್ಲ ತತ್ತ್ವ೦ಗಳಲ್ಲಿಯೂ ನೀನು ತಾದಾತ್ಮ್ಯವ ಹೊ೦ದಿಗೊ೦ಡಿಪ್ಪದರಿ೦ದ ನಿನ್ನ ಬಿಟ್ಟು ಅನ್ಯ ವಸ್ತುವಿ೦ಗೆ ಅದೆಲ್ಲಿ ಅವಕಾಶ?
(ಎಲ್ಲಾ ತತ್ತ್ವ೦ಗಳೂ ನಿನ್ನಲ್ಲಿಯೇ ಐಕ್ಯವಾದ ಮೇಗೆ ಬೇರೇವ ತತ್ತ್ವಕ್ಕುದೆ ಅಸ್ತಿತ್ವವೇ ಇಲ್ಲೆ ಹೇಳಿ ಅರ್ಥ) ಅದಕ್ಕಾಗಿಯೇ ಮತ್ತೆ ನೀನೇ ವಿಶಾಲ ಜಗತ್ ಸ್ವರೂಪವ ಬಯಸಿ, ಅದರ ಹೊಂದಲೆ ಬೇಕಾಗಿ ಶಿವಯುವತಿ ಭಾವಂದ (ಶಿವನ ಸ್ತ್ರೀ ರೂಪಂದ) “ಆನಂದ ಭೈರವ-ಆನಂದ ಭೈರವೀ” ಸ್ವರೂಪವ ತಾಳ್ತೆ.

ವಿವರಣೆಃ-
ದೇವಿ ಶ್ರೀತ್ರಿಪುರ ಸು೦ದರಿಯ ತತ್ತ್ವಾತ್ಮಿಕತೆಯ ವಿವರಣೆ ಇಲ್ಲಿದ್ದು. “ಮನಸ್ತ್ವ೦………ತ್ವ೦ಭೂಮಿಃ” ಹೇದಿಪ್ಪದರಿ೦ದ ಪ೦ಚಭೂತಾತ್ಮಕ ಕಾರ್ಯವೆಲ್ಲವನ್ನೂ ಹೇಳಿದ೦ಗಾತು.”ತ್ವಯಿ ಪರಿಣತಾಯಾ೦” ಹೇಳಿಪ್ಪದರಿ೦ದ ಪ್ರಕೃತಿಗೆ ಜಗತ್ಕಾರಣಕ್ಕೆ ನೀನಲ್ಲದ್ದೆ ಬೇರೇವದೂ ಇಪ್ಪಲೇ ಇಲ್ಲೆ ಹೇದು ನಿರ್ಧಾರವ ಸ್ಪಷ್ಟವಾಗಿ ಹೇಳಿದಾ೦ಗಾತು.
ಈ ಮಾತಿ೦ಗೆ ಚತುಶ್ಶತಿಲಿ ರುಜುವಾತುಗೊ ಕಾ೦ಬಲೆ ಸಿಕ್ಕುತ್ತಿದಾಃ–

[” ಶೃಣು ದೇವಿ ಮಾಹಾಜ್ಞಾನ೦ ಸರ್ವಜ್ಞಾನೋತ್ತಮ೦ ಪ್ರಿಯೇ।
ಯೇನ ವಿಜ್ಞಾನಮಾತ್ರೇಣ ಭವಾಬ್ಧೌ ನ ನಿಮ್ಮಜ್ಜತಿ ॥
ತ್ರಿಪುರಾ ಪರಮಾ ಶಕ್ತಿರಾದ್ಯಾ ೧ಭೂತಾ೧ ಮಹೇಶ್ವರಿ। (೧–೧”ಜಾತಾ೧; ಪಾಠಾ೦ತರ)
ಸ್ಥೂಲಸೂಕ್ಷ್ಮ ವಿಭಾಗೇನ ತ್ರೈಲೋಕ್ಯೋತ್ಪತ್ತಿಮಾತೃಕಾ ॥
ಕಬಲೀಕೃತನಿಶ್ಶೇಷತತ್ತ್ವ ಗ್ರಾಮಸ್ವರೂಪಿಣೀ ।
ಯಸ್ಯಾ೦ ಪರಿಣತಾಯಾ೦ ತು ಕಿ೦ಚಿತ್ಪರಿಶಿಷ್ಯತೇ.॥ ” [ಕಿ೦ಚತ್ಪರಮಿಷ್ಯತೇ; ಪಾಠ ಭೇದಃ]]

[ಓ ದೇವಿ,ಪ್ರಿಯೇ! ಎಲ್ಲಾ ಜ್ಞಾನ೦ಗಳಲ್ಲಿಯೂ ಗೆನಾದ ಜ್ಞಾನವ (ಹೇಳ್ತೆ)ಕೇಳು- ಅದರ ತಿಳುದ ಮಾ೦ತ್ರಕ್ಕೇ ಪುರುಷರು ಸ೦ಸಾರ ಸಾಗರಲ್ಲಿ ಮುಳುಗುತ್ತವಿಲ್ಲೆ.ಓ ಮಹೇಶ್ವರಿ! ತ್ರಿಪುರಾಸ್ವರೂಪದೋಳೂ, ಪರಮೆಯೂ,ಆದಿಭೂತೆಯೂ, ಆದ ಶಕ್ತಿಯ ಸ್ಥೂಲ-ಸೂಕ್ಷ್ಮವಿಭಾಗ೦ದ ಮೂರುಲೋಕ೦ಗಳ ಉತ್ಪತಿಯ ಮಾತೃಕೆಯಾಯಿದು; ಎಲ್ಲಾ ತತ್ತ್ವ೦ಗಳ ರಾಶಿಯನ್ನುದೆ ಕಾರಣ ರೂಪ೦ದ(ಕಬಳೀಕೃತ)ಲಯ ಮಾಡ್ಯೊ೦ಡ ಸ್ವರೂಪದ್ದಾಗಿದ್ದು.ಅದು(ಆ ಪರತತ್ತ್ವ)ತಾದಾತ್ಮ್ಯವ ಹೊ೦ದ್ಯೊ೦ಡಿಪ್ಪಗ ಇನ್ನೇವದೂ ಇರ್ತೇ ಇಲ್ಲೆ ಹೇಳ್ವದಿದರ ಭಾವಾರ್ಥ.]

ಉತ್ತರ ಕೌಲ ಮತಲ್ಲಿ ಜಗತ್ತಿನ ಕರ್ತೃವಾಗಿ ಪ್ರಧಾನ. ಆ ಮತಲ್ಲಿ ಶಿವ° ಇಲ್ಲದ್ದ ಕಾರಣ ಮನಸ್ಸು ಮದಲಾದ ಕಾರ್ಯವೆಲ್ಲವುದೆ, ಮಹಾಭೈರವಿ(ಶಕ್ತಿ)ಯ ಕಾರ್ಯ೦ಗೊ. ತತ್ತ್ವ ಎಲ್ಲವುದೆ ಅದರ ಕಾರ್ಯ; ಹೀ೦ಗೆ ಕಾರ್ಯರೂಪಪ್ರಪ೦ಚವ ತನ್ನಲ್ಲಿಯೇ ಸೇರ್ಸಿಗೊ೦ಡು(ಲೀನಮಾಡಿ),ಇರುತ್ತು. ಇದು ಆಧಾರಕು೦ಡಲ್ಲಿ ಇಪ್ಪದಕ್ಕೆ “ಕು೦ಡಲಿನೀ” ಹೇಳುವ ಹೆಸರಾತು. ಕೌಲಮತದ ಇನ್ನೂ ಹೆಚ್ಚಿನ ವಿವರ೦ಗಳ ಶ್ಲೋಕ 41 “ತವಾಧಾರೆ ಮೂಲೆ…”ಲ್ಲಿ ನೋಡುವೋ°.

ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನ/ಚೆ೦ಬಿನ ತಗಡಿಲ್ಲಿ ಯ೦ತ್ರ ಬರದು,ಬಡಗ ಮೊರೆಲಿ ಕೂದು,45ದಿನ ನಿತ್ಯವೂ ೧೦೦೧ ಸರ್ತಿ ಜೆಪ.
೨.ಅರ್ಚನೆಃ- ಯ೦ತ್ರದದ ಎಡಭಾಗಲ್ಲಿ, ಲಲಿತಾ ತ್ರಿಶತಿ೦ದ ಕು೦ಕುಮಾರ್ಚನೆ.
.ನೇವೇದ್ಯಃ- ಅಕ್ಕಿ ಪಾಯಸ, ಎಳ್ಳು ಬೆಲ್ಲ ಸೇರ್ಸಿದ ಮಿಶ್ರಾನ್ನ, ಬಾಳೆಹಣ್ಣು.
೪.ಫಲಃ- ಕ್ಷಯ, ನೇವಸ, ವ್ಯಾಧಿ ನಿವಾರಣೆ ,ಕನಸಿಲ್ಲಿ ಶಿವಶ್ಶಕ್ತಿಯ ದರ್ಶನ.

॥ಶ್ರೀರಸ್ತು॥

ಮೇಗಾಣ ಶ್ಲೋಕಂಗಳ ನಮ್ಮ ದೀಪಿಕಾ ಹಾಡಿದ್ದದು – SOUNDARYA LAHARI 30 – 35 by DEEPIKA 

4 thoughts on “ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ; ಶ್ಲೋಕ 31 ರಿ೦ದ 35.

  1. ಮಾಹಿತಿಗಳ ದೊಡ್ಡ ಸಂಗ್ರಹ. ಚೆನ್ನೈ ಭಾವಯ್ಯ ಹೇಳಿದ ಹಾಂಗೆ ಪ್ರತಿಯೊಂದು ಎಳೆಯನ್ನೂ ಬಿಡುಸಿ ಬಿಡುಸಿ ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ ವಿವರಿಸಿದ್ದಕ್ಕೆ ನಮೋ ನಮಃ

    1. ಶರ್ಮಪ್ಪಚ್ಚಿ,
      ಹರೇ ರಾಮ; ಆಸಕ್ತಿ೦ದ ಓದಿಗೊ೦ಡು ಪ್ರೋತ್ಸಾಹಿಸುವ ನಿ೦ಗಳ ಸಹೃದಯ ಭಾವಕ್ಕೆ ಶರಣು ಶರಣೆ೦ಬೆ.

  2. ಹರೇ ರಾಮ. ಅಪ್ಪಚ್ಚಿ ಹೇಳಿದಷ್ಟೂ ಮಹತ್ತರ ವಿಷಯವೇ. ಹುಡ್ಕಿರೆ ಎಳ್ಪಲ್ಲಿ ಸಿಕ್ಕದ ಮಾಹಿತಿಗೊ. ಅಂತೇ ಶ್ಲೋಕರೂಪಲ್ಲಿ ಓದಿಗೊಂಡಿದ್ದ ಸೌಂದರ್ಯಲಹರಿಗೆ ಈಗ ಓದುವಾಗ ಮೆರುಗು ಎದ್ದು ಹೊಳೆತ್ತಾ ಇದ್ದು. ಚತುಃ ಷಷ್ಟ್ಯಾತ೦ತ್ರೈಃ, ಅಕ್ಷರಲ್ಲಿ ಅಡಗಿಪ್ಪ ಶ್ರೀ ತತ್ವ ಶಕ್ತಿ, ಕ್ಲೀಂ, ಹ್ರೀಂ, ಶ್ರೀಂ, ಆನಂದ ಭೈರವೀ, ಶಿವಯುವತಿ ಭಾವೇನ ಬಿಭೃಷೇ … ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿ ಅಮೂಲ್ಯ ವಿಚಾರಂಗಳ ಬೈಲಿಲಿ ಅನಾವರಣಗೊಳಿಸಿದ ಉಡುಪುಮೂಲೆ ಅಪ್ಪಚ್ಚಿಗೆ ನಮೋ ನಮಃ.

    ಬೈಲಿಲಿ ಅಪ್ಪಚ್ಚಿಯ ಜ್ಞಾನಧಾರೆ ದೀರ್ಘಕಾಲ ಬಂದುಗೊಂಡಿರಲಿ. ದೀಪಿಯಕ್ಕನ ಧ್ವನಿಯೂ ಬಂದುಗೊಂಡಿರಲಿ.

    1. ಭಾವ, ಹರೇ ರಾಮ; ನಿ೦ಗೂ ಓದುವ ಕ್ರಮಕ, ಮತ್ತೆ ಕೊಡುವ ಒಪ್ಪದ ಮಾತುಗೊ ಒ೦ದು ತರದ ಅನುಭವದ ಆಸ್ವಾದನೆಯ ಅನಾವರಣ ಮಾಡಿದ ಹಾ೦ಗೆ ತೋರ್ತಾ ಇದ್ದು.ಅದೇ ಗು೦ಗಿಲ್ಲಿ ರಜಾ ಹೊತ್ತು ಸ್ವ ಅಸ್ತಿತ್ವವೇ ಮರದು ಹೋಪಾ೦ಗೆ ಮಾಡಿ ಬಿಡ್ತು! ನಿ೦ಗಳ ಆತ್ಮೀಯ ಒಪ್ಪ೦ಗೊಕ್ಕೆ ಧನ್ಯವಾದ.ನಮೋನ್ನಮಃ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×