Oppanna.com

“ಬೋಳಂತಕೋಡಿ- ಒಂದು ನೆನಪು” -ಅರ್ತಿಕಜೆ

ಬರದೋರು :   ಶ್ರೀಅಕ್ಕ°    on   24/03/2012    3 ಒಪ್ಪಂಗೊ

ಬೋಳಂತಕೋಡಿ ಹೇಳಿದರೆ ನವಗೆ ನೆಂಪಪ್ಪದು ವೈದಿಕ ಮನೆತನ. ಆ ಸಂಸ್ಕೃತಿಯ ಧಾರೆಲಿ ಬಂದ ಒಂದು ಅಮೂಲ್ಯ ಚೇತನ ತನ್ನ ಜೀವನದ ದಾರಿಯ ತಾನೇ ರೂಪಿಸಿ ಈ ಲೋಕಲ್ಲಿ ತನ್ನದೇ ಒಂದು ಛಾಪಿನ ಮೂಡಿಸಿ ಮರೆಯಾದ ವ್ಯಕ್ತಿ ಬೋಳಂತಕೋಡಿ ಈಶ್ವರ ಭಟ್. ಕನ್ನಡ ಸಾಹಿತ್ಯಕ್ಕೆ, ಕನ್ನಡದ ಉಳಿವಲೆ, ಬೆಳವಲೆ ತನ್ನ ಶ್ರಮ ಮೀರಿ ಪ್ರಯತ್ನ ಮಾಡಿದವ್ವು ಈಶ್ವರ ಮಾವ°. ನಮ್ಮ ಬೈಲಿನ ಅರ್ತಿಕಜೆ ಮಾವ°, ಅವರ ಮತ್ತೆ ಈಶ್ವರ ಮಾವನ ಸುಮಾರು ಮೂರು ದಶಕಂಗಳ ಮೇಲಿನ ಆತ್ಮೀಯ ಒಡನಾಟ, ಕನ್ನಡ ಸಾಹಿತ್ಯಕ್ಕೆ ಕೆಲಸ ಮಾಡಿದ ಅನುಭವ, ರಸಮಯ ಕ್ಷಣಂಗಳ ತುಂಬಾ ನೆನೆಸಿಗೋಳ್ತವು. ಪುತ್ತೂರಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಈಶ್ವರ ಮಾವ°, ಉಪಾಧ್ಯಕ್ಷರಾಗಿ ಅರ್ತಿಕಜೆ ಮಾವ° ಜೊತೆಲಿ ಮೊಳೆಯಾರರು ಮಾಡಿದ ಕನ್ನಡದ ಸೇವೆಯ, ಅವರ ಸವಿನೆನಪುಗಳ ಬೈಲಿಂಗೆ ದೀರ್ಘವಾಗಿ ಇನ್ನೊಂದರಿ ಹೇಳಿಗೊಂಬ ಇಚ್ಛೆಲಿ ಇದ್ದವು. ಪುತ್ತೂರಿಲಿ ಇಂದು ನಡೆತ್ತಾ ಇಪ್ಪ ‘ಬೋಳಂತ ಕೋಡಿ ಕನ್ನಡ ಪ್ರಶಸ್ತಿ’ ಯ ಸಮಾರಂಭದ ಹಿನ್ನಲೆಲಿ ಬೋಳಂತಕೋಡಿಯವರ ಜೀವನದ ಭವ್ಯದಾರಿಯ ಬೈಲಿಂಗೆ ಪರಿಚಯಿಸುತ್ತಾ ಇದ್ದವು ಅರ್ತಿಕಜೆ ಮಾವ°.

ಬೋಳಂತಕೋಡಿ ಈಶ್ವರ ಮಾವ°

“ಬೋಳಂತಕೋಡಿ” – ಒಂದು ನೆನಪು

ಸಾಹಿತಿಗೋ ಮಾಂತ್ರವೇ ಭಾಷೆಯ ಬೆಳೆಸುತ್ತವು ಹೇಳುದು ಪೂರ್ಣ ಸತ್ಯ ಅಲ್ಲ, ಅವರ ಹಾಂಗೆಯೇ ಮುದ್ರಿಸುವವ°, ಪ್ರಕಟಿಸುವವ°, ಮಾರಾಟ ಮಾಡುವವ° ಮತ್ತೆ ಪತ್ರಿಕೋದ್ಯಮಕ್ಕೆ ಸಂಬಂಧ ಪಟ್ಟ ಪ್ರತಿಯೊಬ್ಬಂಗೂ ಸಾಹಿತ್ಯದ ಬೆಳವಣಿಗೆಲಿ ಅವರವರದ್ದೇ ಆದ ತೊಡಗಿಸುವಿಕೆ ಇದ್ದು. ಹೀಂಗೆ ಸಾಹಿತ್ಯದ ಪ್ರತಿಯೊಂದು ವಿಭಾಗಲ್ಲಿ ಕೆಲಸ ಮಾಡಿ ಪತ್ರಿಕೋದ್ಯಮಲ್ಲಿ ತೊಡಗಿಸಿಗೊಂಡವರ “ಸಾಹಿತ್ಯದ ಪರಿಚಾರಕಂಗೋ” ಹೇಳಿ ಹೇಳುಲಕ್ಕು. “ಸಾಹಿತ್ಯವನ್ನು ಕಟ್ಟುವ, ಭಾಷೆಯನ್ನೂ ಬೆಳೆಸುವ ಇಂತಹ ಕನ್ನಡ ಪರಿಚಾರಕರ ಪಟ್ಟಿಯಲ್ಲಿ ಪುತ್ತೂರಿನ ಬೋಳಂತಕೋಡಿ ಈಶ್ವರ ಭಟ್ಟರು ಅದ್ವಿತೀಯರು” – ಡಾ|ಹಾ.ಮಾ ನಾಯಕರು ಹೇಳಿದ ಈ ಮಾತುಗೋ ಬೋಳಂತಕೋಡಿ ಈಶ್ವರ ಭಟ್ಟರ (1929-2003) ವಿಶೇಷತೆಯ ತೋರ್ಸುತ್ತು.

ಬದುಕು:
ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ಬೋಳಂತಕೋಡಿಲಿ ಲಕ್ಷ್ಮೀ – ನಾರಾಯಣ ಭಟ್ಟ ದಂಪತಿಗಳ ಮಗನಾಗಿ ಹುಟ್ಟಿದ ಈಶ್ವರಣ್ಣ ಕುಲವಿದ್ಯೆಯಾದ ಪೌರೋಹಿತ್ಯವ ಕರೆಂಗೆ ಮಡಿಗಿ ಆಧುನಿಕ ಶಿಕ್ಷಣಕ್ಕೆ ಮನಸ್ಸು ಮಾಡಿದವು. ಕೋಳ್ಯೂರು ಮತ್ತೆ ಕೊಡ್ಲಮೊಗರು ಶಾಲೆಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಮತ್ತೆ ಪುತ್ತೂರಿನ ಸೈಂಟ್ ವಿಕ್ಟರ್ ಮತ್ತೆ ಬೋರ್ಡ್ ಹೈಸ್ಕೂಲ್ ಗಳಲ್ಲಿ ಕಲಿಯುವಿಕೆಯ ಮುಂದುವರಿಸಿದವು. ಎಸ್.ಎಸ್. ಎಲ್. ಸಿ ಆದ ಮತ್ತೆ ಮಂಗ್ಳೂರಿಂಗೆ ಹೋಗಿ ರಜ್ಜ ಸಮಯ ಪತ್ರಕರ್ತರಾಗಿ ದುಡುದವು. ಅದರಂದ ಮತ್ತೆ ಎಲೋಶಿಯಸ್ ಕಾಲೇಜು ಸೇರಿ ಬಿ ಎ ಪದವಿಯ ಪಡಕ್ಕೊಂಡವು. ಮತ್ತೆ ಬೆಳಗಾವಿಲಿ ಕಾನೂನು ಶಿಕ್ಷಣ ತೆಕ್ಕೊಂಡು 1957 ರಲ್ಲಿ ಪುತ್ತೂರಿಂಗೆ ಬಂದು 1966 ರ ವರೆಗೆ ವಕಾಲತ್ತು ಮಾಡಿದವು. ಇದರ ಎಡೆಲಿ ಫಿಲೋಮಿನಾ ಕಾಲೇಜಿಲಿ ವಾಣಿಜ್ಯನ್ಯಾಯಶಾಸ್ತ್ರ ಪಾಠ ಹೇಳಿದವು.

1960 ರಲ್ಲಿ ನಾಪೊಕ್ಲುವಿನ ವಿಮಲಾ ಅವರ ಮದುವೆ ಆದ ಈಶ್ವರಣ್ಣ, ಉಷಾಪೂರ್ಣಿಮಾ ಮತ್ತೆ ಕಿರಣನಾರಾಯಣ ಹೇಳುವ ಎರಡು ಮಕ್ಕಳ ಪಡದು ಸಂತೃಪ್ತ ಕುಟುಂಬ ಜೀವನ ನಡೆಶಿದವು. ವಕಾಲತ್ತಿನ ಒಟ್ಟಿಂಗೆ ಬೇರೆಬೇರೆ ಕ್ಷೇತ್ರಂಗಳಲ್ಲಿ ತನ್ನ ತಾನು ಪೂರ್ತಿಯಾಗಿ ತೊಡಗಿಸಿಗೊಂಡ ಇವ್ವು 2003 ನೇ ಇಸವಿ ಅಕ್ಟೋಬರ್ 30 ರ ದಿನ ಈ ಜೀವನಯಾನಕ್ಕೆ ಮುಕ್ತಾಯ ಹೇಳಿದವು.

ಸಮಾಜ ಸೇವೆ:
ಆದರ್ಶ ಒಕೀಲರಾಗಿ ವೃತ್ತಿ ಧರ್ಮಕ್ಕೆ ಬದ್ಧರಾಗಿದ್ದ ಬೋಳಂತಕೋಡಿಯವ್ವು ಉದ್ಯೋಗದ ಒಟ್ಟಿಂಗೆ ಸಮಾಜ ಸೇವೆ ಮಾಡ್ಲೆ 1973 ರಲ್ಲಿ ರೋಟರಿ ಕ್ಲಬ್ ನ ಸದಸ್ಯರಾದವು. ಸಮರ್ಪಿತ ಮನೋಭಾವಂದ ಅದರ ಆದರ್ಶಕ್ಕೆ ಅನುಗುಣವಾಗಿ ನೆಡಕ್ಕೊಂಡವು. ರೋಟಾ ರೆಕೊರ್ಡ್ ಪತ್ರಿಕೆಯ ಸುಧಾರಣೆ, ಸಭೆಗಳಲ್ಲಿ ಕನ್ನಡ ಬಳಕೆ, ಸಮಯ ಮತ್ತೆ ನಿಯಮ ಪಾಲನೆ, ಬಡವರಿಂಗೆ ಮನೆಗಳ ನಿರ್ಮಿಸಿಕೊಡುದು ಹೀಂಗಿಪ್ಪ ಹಲವು ಚಟುವಟಿಕೆಗಳ ಮಾಡಿ ಇವ್ವು ಉತ್ತಮ ರೋಟರಿ ಸದಸ್ಯ ಮತ್ತೆ ಅಧ್ಯಕ್ಷ ಹೇಳಿ ನಿರೂಪಿಸಿಗೊಂಡವು.
1976 ರಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿ ನಿಯುಕ್ತಿಯಾದ ಈಶ್ವರಣ್ಣ ದಸರಾ ಹಬ್ಬಕ್ಕೆ ಸಾರ್ವಜನಿಕ ಮತ್ತೆ ಸಾಂಸ್ಕೃತಿಕ ಸ್ವರೂಪವ ತಂದು ಕೊಟ್ಟವು. ಆ ದಿನಂದ ತನ್ನ ಕೊನೆಕಾಲದವರೆಗೂ ಅವು ನಾಡಹಬ್ಬ ಸಮಿತಿಲಿ ಇದ್ದುಗೊಂಡು ಮಾರ್ಗದರ್ಶನ ಮಾಡಿದವು. ಇದರಂದಾಗಿ ಪುತ್ತೂರು ನಾಡಹಬ್ಬಕ್ಕೆ ಕೀರ್ತಿ, ಯಶಸ್ಸು ಸಿಕ್ಕಿತ್ತು.

ಪತ್ರಿಕೋದ್ಯಮ:
ವಿದ್ಯಾರ್ಥಿಯಾಗಿಪ್ಪಗಳೇ ‘ರಾಷ್ಟ್ರಬಂಧು’ ಮತ್ತೆ ‘ರಾಷ್ಟ್ರಮತ’ ಇವುಗಳಲ್ಲಿ ಉಪಸಂಪಾದಕರಾಗಿ ದುಡುದ ಈಶ್ವರಣ್ಣ ಕಡೆಂಗೋಡ್ಲು ಶಂಕರ ಭಟ್ಟರ ಸಂಪರ್ಕಲ್ಲಿ ಪಳಗಿದವು. ‘ಸಂಗಾತಿ’ ಮತ್ತೆ ‘ಸರ್ವೋದಯ’ ಪತ್ರಿಕೆಲಿಯೂ ಬರಕ್ಕೊಂಡಿದ್ದ ಇವ್ವು ಶ್ರೀನಿವಾಸ ಉಪಾಧ್ಯಾಯರ ಒಟ್ಟಿಂಗೆ ‘ಪ್ರವಾಸಿ’ ಮಾಸಪತ್ರಿಕೆಯ ರಜ್ಜ ಸಮಯ ನಡೆಶಿದವು. ಮುಂದೆ ಪುತ್ತೂರಿಲಿ ಒಕೀಲರಾಗಿಪ್ಪಗ ‘ಉದಯವಾಣಿ’ ಮತ್ತೆ ‘ಇಂಡಿಯನ್ ಎಕ್ಸ್ ಪ್ರೆಸ್’ ನ ವರದಿಗಾರರಾಗಿಯೂ ಸೇವೆ ಸಲ್ಲಿಸಿದವು.
ವಾರ್ತಾಪತ್ರಿಕೆಗಳ ಸಿದ್ಧ ಮಾಡುದರಲ್ಲಿ ಈಶ್ವರಣ್ಣನದ್ದು ಎತ್ತಿದ ಕೈ. 1992 ರಲ್ಲಿ ಪುತ್ತೂರಿಲಿ ನೆಡದ ದ. ಕ ಜಿಲ್ಲಾ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಮತ್ತೆ ಸಮಾರಂಭದ ವಿವರಂಗಳ ಒಳಗೊಂಡ ವಾರ್ತಾಪತ್ರ ಎಲ್ಲೋರ ಪ್ರಶಂಸೆ ಪಡಕ್ಕೊಂಡತ್ತು. ಪುತ್ತೂರಿನ ಕನ್ನಡ ಚಟುವಟಿಕೆಗಳ ಬಗ್ಗೆ ಅವ್ವು 1993 ರಿಂದ 2003 ರ ವರೆಗೆ ಪ್ರಕಟ ಮಾಡಿದ ‘ಸಮನ್ವಯ’ ವಂತೂ ‘ನ ಭೂತೋ ನ ಭವಿಷ್ಯತಿ’ ಹೇಳುವಷ್ಟು ಕೀರ್ತಿ ಪಡಕ್ಕೊಂಡ ಅನಿಯತಕಾಲಿಕ ಆತು. ರೋಟರಿ ಕ್ಲಬ್ ನ ಸಾಪ್ತಾಹಿಕ ವಾರ್ತಾಪತ್ರಕ್ಕೆ ಕೂಡಾ ಹೊಸತನ ತಂದವ್ವು ಈಶ್ವರಣ್ಣ.

ಪ್ರಕಾಶನ ರಂಗ:
ಇವ್ವೆಲ್ಲಕ್ಕಿಂತ ಪ್ರಮುಖ ಆಗಿಪ್ಪದು ಸಾಹಿತ್ಯ ಪ್ರಕಾಶನ ರಂಗಲ್ಲಿ ಸಾಧನೆ. ಅಣ್ಣಂದಿರಾದ ಬಿ. ಶಂಕರ ಭಟ್ಟ ಮತ್ತೆ ಬಿ. ಎಂ ಶರ್ಮ ರ ಒಟ್ಟಿಂಗೆ ಸೇರಿ ‘ ಕನ್ನಡ ಪ್ರಪಂಚ ಪ್ರಕಾಶನ’ ದ ಮೂಲಕ ಮಕ್ಕೊಗೆ ಬೇಕಾಗಿ ನೂರಕ್ಕೂ ಹೆಚ್ಚು ಕೃತಿಗಳ ಮತ್ತೆ ಪಠ್ಯಪುಸ್ತಕಂಗಳ ಹೆರ ತಂದ ಅವ್ವು, ಒಂದರಿ ನಿಂದಿದ್ದ ಈ ಸಂಸ್ಥೆಯ ಮತ್ತೆ ಆರಂಭ ಮಾಡಿ ವೈವಿಧ್ಯಮಯ ಗ್ರಂಥಂಗಳ ಪ್ರಕಾಶಕ್ಕೆ ತಂದವು.
1982 ರಿಂದ 2003 ರ ವರೆಗೆ ಪುತ್ತೂರು – ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಬೋಳಂತಕೋಡಿಯವ್ವು ‘ನಿರಂಜನ ಅಭಿನಂದನ’ , ‘ಅನುಪಮಾ ಅಭಿನಂದನ’ ‘ಉಗ್ರಾಣ’ ಸಂಪುಟಗಳು, ಎಂ. ಎನ್ ಕಾಮತ್ ಸಂಪುಟಗಳು, ವಿಚಾರ ಪ್ರಪಂಚ, ಕಂಬಾರರ ಕಾವ್ಯ, ಕಾರಂತ ಮಂಥನ ಇತ್ಯಾದಿ ಬೃಹತ್ ಕೃತಿಗೋ ಅಲ್ಲದ್ದೆ ನೂರಕ್ಕೂ ಹೆಚ್ಚು ಗ್ರಂಥಂಗಳ ಪ್ರಕಟಿಸಿದವು. ‘ಕನ್ನಡದಲ್ಲಿ ಅವಧಾನ ಕಲೆ’, ‘ದಕ್ಷಿಣ ಕನ್ನಡದ ಶತಮಾನದ ಕತೆಗಳು’, ಅಬ್ದುಲ್ ಕಲಾಮ್ ರ ‘ಅಗ್ನಿಯ ರೆಕ್ಕೆಗಳು’ ಪ್ರಸಿದ್ಧ ಕೃತಿಗೋ.
ವಿವೇಕಾನಂದ ಕಾಲೇಜಿಲಿ ಬೋಳಂತಕೋಡಿಯವರ ನೇತೃತ್ವಲ್ಲಿ ಸ್ಥಾಪನೆ ಆದ ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಮುಖಾಂತರವೂ ‘ಪಶ್ಚಿಮ ಘಟ್ಟದ ಜೀವವೈವಿಧ್ಯ’, ‘ಯಕ್ಷರಂಗಕ್ಕಾಗಿ’ ಮೊದಲಾದ ಪುಸ್ತಕಂಗೋ ಹೆರಬಯಿಂದು.
ಕನ್ನಡ ಗ್ರಂಥಂಗಳ ಪ್ರಕಟಿಸುದು ಮಾಂತ್ರ ಅಲ್ಲ ಆ ಪುಸ್ತಕಂಗಳ ನಾಡಿನ ಮತ್ತೆ ಹೊರನಾಡಿನ ನಾನಾ ಭಾಗಂಗೊಕ್ಕೆ, ಕೇಂದ್ರಂಗೋಕ್ಕೆ ತಮ್ಮ ಜೊತೆಗಾರರ ಒಟ್ಟಿಂಗೆ ಕೊಂಡುಹೋಗಿ ಮಾರಾಟ ಮಾಡುವಲ್ಲಿ ಯಶಸ್ವಿಯೂ ಆಯಿದವು. ಬೋಳಂತಕೋಡಿ ಅವರ ನೆನಪ್ಪಿನ ಶಾಶ್ವತ ಮಾಡುವ ದೃಷ್ಟಿಂದ ಅವರ ಸುಪುತ್ರ ಕಿರಣ ಬೋಳಂತಕೋಡಿ ಮತ್ತೆ ಬಳಗದವ್ವು ಸೇರಿ ‘ಬೋಳಂತಕೋಡಿ ಕನ್ನಡ ಪ್ರಶಸ್ತಿ’ ಯ ಪ್ರಾರಂಭ ಮಾಡಿ, ಹಿರಿಯ ಸಾಹಿತಿ ಪಳಕಳ ಸೀತಾರಾಮ ಭಟ್ಟ ರಿಂಗೆ ಮಾ. 24 ರಂದು ಕೊಟ್ಟು ಗೌರವಿಸುತ್ತಾ ಇದ್ದವು.

ಪುತ್ತೂರಿಲಿ ಕನ್ನಡಮ್ಮನ ಪ್ರೀತಿಯ ಮಗನಾಗಿ ಬೆಳದ ಬೋಳಂತಕೋಡಿ ಈಶ್ವರಣ್ಣನ ನೆನಪ್ಪಿನ ಈ ಪ್ರಶಸ್ತಿ ನಾಡಿನ ಕನ್ನಡಮ್ಮನ ಸೇವೆ ಮಾಡಿದ ಸಮರ್ಥ ಜನಂಗೊಕ್ಕೆ ಸಿಕ್ಕಲಿ..
ನಿಸ್ವಾರ್ಥ ಬದುಕಿನ ಈ ಪುಣ್ಯ ಚೇತನದ ಕನಸುಗೋ ಅವರ ಕುಟುಂಬದವರ ಮೂಲಕ, ಅವರ ಆತ್ಮೀಯರ ಮೂಲಕ ನನಸಾಗಲಿ..

ಸೂಃ ಪಟಂಗಳ, ಹೇಳಿಕೆ ಕಾಗತ ಕಳ್ಸಿಕೊಟ್ಟ ನಾ ಕಾರಂತಣ್ಣಂಗೆ, ಕೊಡೆಂಕಿರಿ ಪ್ರಕಾಶಣ್ಣಂಗೆ ಧನ್ಯವಾದಂಗೋ.

ಆಮಂತ್ರಣ ಪತ್ರಿಕೆ:

"ಬೋಳಂತಕೋಡಿ ಕನ್ನಡ ಪ್ರಶಸ್ತಿ" ಕಾಗತ
"ಬೋಳಂತಕೋಡಿ ಕನ್ನಡ ಪ್ರಶಸ್ತಿ" ಕಾಗತ

3 thoughts on ““ಬೋಳಂತಕೋಡಿ- ಒಂದು ನೆನಪು” -ಅರ್ತಿಕಜೆ

  1. ಕಾರಂತರು ಪುತ್ತೂರು ಬಿಟ್ಟ ಮೇಲೆ, ಪುತ್ತೂರಿನ ಕರ್ನಾಟಕ ಸಂಘವ ಸಮರ್ಥವಾಗಿ ಮುನ್ನಡೆಸಿ, ಪುತ್ತೂರು ಹೇಳಿರೆ ಕರ್ನಾಟಕ ಸಂಘ , ಪುತ್ತೂರು ಕರ್ನಾಟಕ ಸಂಘ ಹೇಳಿರೆ ಬೋಳಂತಕೋಡಿ ಹೇಳುವಷ್ಟರ ಮಟ್ಟಿಂಗೆ ಎತ್ತರಕ್ಕೆ ಏರಿಸಿ, ಮೆಚ್ಚುಗೆ ಗಳಿಸಿದ ವೆಗ್ತಿ ಬೋಳಂತಕೋಡಿ ಈಶ್ವರ ಭಟ್ಟರು. ಒಳ್ಳೊಳ್ಳೆ ಸದಭಿರುಚಿಯ ಪುಸ್ತಕಂಗಳ ಪ್ರಕಟಿಸಿದ್ದು ಮಾಂತ್ರ ಅಲ್ಲ, ಹೊಸ ಹೊಸ ಲೇಖಕರ ಪುಸ್ತಕಂಗಳನ್ನೂ ಪ್ರಕಟಿಸಿ ಬೆನ್ನು ತಟ್ಟುವ ಮಹತ್ತರ ಕೆಲಸ ಮಾಡಿದ್ದವು.ಅವರ ಬೈಲಿಂಗೆ ಪರಿಚಯಿಸಿದ ಸಾರ್ಥಕ ಕೆಲಸವ ಮಾಡಿದ ಅರ್ತಿಕಜೆ ಮಾವಂಗೂ, ಶ್ರೀ ಅಕ್ಕಂಗೂ ಅಭಿವಾದನೆಗೊ.

  2. ಬೋಳಂತಕೋಡಿಯವರ ಕಂಡು ಗೊಂತಿಲ್ಲೆ,ಅವರ ಪ್ರಕಾಶನದ ಪುಸ್ತಕಂಗಳ ಕೆಲವು ಓದಿದ್ದೆ.ಅವಧಾನ ಕಲೆ ಪುಸ್ತಕ ಬಹಳ ಲಾಯ್ಕಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×