Oppanna.com

ತೆಕ್ಕುಂಜ ಶಂಕರ ಭಟ್ಟ ವಿರಚಿತ – ಶ್ರೀ ಸೋಮನಾಥಾಷ್ಟಕಂ

ಬರದೋರು :   ತೆಕ್ಕುಂಜ ಕುಮಾರ ಮಾವ°    on   17/08/2011    13 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ದಿವಂಗತ ತೆಕ್ಕುಂಜ ಶಂಕರ ಭಟ್ಟರು ಸಂಸ್ಕೃತಲ್ಲಿ ಘನವಿದ್ವಾಂಸರಾಗಿತ್ತಿದ್ದವು. ಕುರ್ನಾಡು ಗ್ರಾಮಲ್ಲಿ 1923 ರಲ್ಲಿಯೇ ಅಮ್ಮೆಂಬಳ ಸೋಮನಾಥ ಸಂಸ್ಕೃತ ಶಾಲೆಯ ಸ್ಥಾಪಿಸಿ ನಡಸಿಗೊಂಡು ಇತ್ತಿದ್ದವು. ಕುರ್ನಾಡು ಗ್ರಾಮ ಮಾಂತ್ರ ಅಲ್ಲ ಆಸುಪಾಸಿನ ಹಲವು ಗ್ರಾಮದ ಮಕ್ಕೊ ಈ ಶಾಲೆಲಿ ಕಲ್ತು ಮುಂದಾಣ ವಿದ್ಯಾಭಾಸ ಮಾಡಿಗೊಂಡು ಜೀವನಲ್ಲಿ ಯಶಸ್ಸು ಸಾಧಿಸಿದ್ದವು. ಸುಮಾರು 28 ವರ್ಷ ಪ್ರಧಾನ ಪಂಡಿತರಾಗಿ ಕೆಲಸ ಮಾಡಿ ಗ್ರಾಮಲ್ಲಿ “ಹೆಡ್ಮಾಷ್ಟ್ರು” ಹೇಳಿ ಹೆಸರುವಾಸಿಯಾದವು.

ಇದಲ್ಲದ್ದೆ ಆಯುರ್ವೇದ ಚಿಕಿತ್ಸಾ ಪದ್ದತಿಯ ಶಾಸ್ತ್ರೀಯವಾಗಿ ಕಲ್ತು ಗ್ರಾಮಲ್ಲಿ ಇದರ ಉಪವೃತ್ತಿಯನ್ನಾಗಿ ಶುರುಮಾಡಿ ಅಕೇರಿವರೆಗೂ ವೈದ್ಯ ವೃತ್ತಿ ಮುಂದುವರಿಸಿಗೊಂಡು ಇತ್ತಿದ್ದವು. ಇದಕ್ಕೆ ಬೇಕಾದ ಕೆಲವು ಔಷಧಂಗಳ ಮನೆಲಿಯೇ ತಯಾರು ಮಾಡಿಗೊಂಡು ಇತ್ತಿದ್ದವು. ಹಿಳ್ಳೆ ಮಕ್ಕಳ, ಬಾಣಂತಿಯಕ್ಕಳ ಚಿಕಿತ್ಸೆಲಿ “ಸಿದ್ದಹಸ್ತರು” ಹೇಳಿ ಪ್ರಸಿದ್ದಿ ಪಡದಿತ್ತಿದ್ದವು.

ಶಾಲೆಲಿ ಸಂಸ್ಕೃಕಲುಶಿಗೊಂಡು ತಮ್ಮ ಸ್ವಾಧ್ಯಾಯನವ ಮುಂದುವರಿಸಿಗೊಂಡು ಸಂಸ್ಕೃತಲ್ಲಿ ಕವಿತಾ ರಚನೆ ಮಾಡುವ ಹವ್ಯಾಸವನ್ನೂ ಬೆಳೆಶಿತ್ತಿದ್ದವು. ಹಲವು ಪತ್ರಿಕೆಲಿ ಪ್ರಕಟವೂ ಆಗಿತ್ತಿದ್ದು. ಇವರ ನಿಧನಾ ನಂತರ ಶಿಷ್ಯ ಜೆನಂಗೊ ಸೇರಿ ಹೆರ ತಂದ ಸ್ಮರಣ ಸಂಚಿಕೆಲಿ (1965 ರಲ್ಲಿ) ಇವರ ನಾಲ್ಕು ಅಪ್ರಕಟಿತ ಶ್ಲೋಕವ ಪ್ರಕಟ ಮಾಡಿದ್ದವು. ಈ ಎಲ್ಲಾ ನಾಲ್ಕು ಶ್ಲೋಕದ ಕನ್ನಡಾನುವಾದವ ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಮಾಡಿದ್ದವು. ಅದರಲ್ಲಿ ಒಂದು ಕುರ್ನಾಡು ಗ್ರಾಮದ ಅಮ್ಮೆಂಬಳ ಸೋಮನಾಥ ದೇವರ ಬಗ್ಗೆ ಬರದ ಅಷ್ಟಕ – ಕನ್ನಡಾನುವಾದ ಸಹಿತ ಇಲ್ಲಿದ್ದು

ಶಿವಂ ಶಂಕರಂ ಶಾಂತಮೋಂಕಾರಗಮ್ಯಂ

ಪರಬ್ರಹ್ಮರೂಪಂ ನಿರಾಕಾರಮಾದ್ಯಂ ||

ಸ್ಮರಂತಂ ಸ್ಮರಾರಿಂ ಸರಾಮಾಭಿರಾಮಂ

ಭಜೇಹಂ ಭಜೇಹಂ ಭಜೇ ಸೋಮನಾಥಂ ॥ ೧ ॥

ಮಂಗಲರೂಪನಾಗಿಯೂ, ಲೋಕಕ್ಕೆ ಕಲ್ಯಾಣಕರನಾಗಿಯೂ, ಶಾಂತಗುಣವುಳ್ಳವನಾಗಿಯೂ, ‘ಓಂ” ಎಂಬ ಅಕ್ಷರಕ್ಕೆ ವಾಚ್ಯನಾಗಿಯೂ, ಪರಬ್ರಹ್ಮದ ಸಗುಣ ಮೂರ್ತಿಯಾಗಿಯೂ, ನಿರ್ಗುಣಮೂರ್ತಿಯಾಗಿಯೂ, ಭಕ್ತಜನರನ್ನು ಸದಾಸ್ಮರಿಸುತ್ತಿರುವವನಾಗಿಯೂ, ಕಾಮನ ವೈರಿಯಾಗಿಯೂ, ವಾಮಾಂಕದಲ್ಲಿರುವ ಪಾರ್ವತಿಯಿಂದ ಸುಂದರನಾಗಿಯೂ, ಇರುವ ಶ್ರೀ ಸೋಮನಾಥ ಸ್ವಾಮಿಯನ್ನುನಿರಂತರವಾಗಿ ಸೇವಿಸುವೆನು.

ತ್ರಿಶೂಲಂ ವಹಂತಂ ತ್ರ್ಯವಸ್ಥಾತಿದೂರಂ

ತ್ರಿಧಾ ಭಾಸಮಾನಂ ನಿಜಾನಂದಹೇತುಂ ॥

ಮಕಾರಾರ್ಥರೂಪಂ ಮಹಾಯೋಗಮಾಯಂ

ಭಜೇಹಂ ಭಜೇಹಂ ಭಜೇ ಸೋಮನಾಥಂ ॥೨॥

ತ್ರಿಶೂಲಧಾರಿಯೂ, ಜಾಗ್ರತ್ – ಸ್ವಪ್ನ – ಸುಷುಪ್ತಿಗಳೆಂಬ ಮೂರವಸ್ಥೆಗಳನ್ನು ದಾಟಿದವನೂ, ಸೂರ್ಯ- ಚಂದ್ರ- ಅಗ್ನಿ- ಗಳೆಂಬ ಮೂರು ತೇಜೋರೂಪಗಳಿಂದ ಪ್ರಕಾಶಿಸುವವನೂ, ಉಪಾಸಕನಿಗೆ- ಆತ್ಮಜ್ಞಾನವನ್ನುಂಟುಮಾಡುವವನೂ, ಕಾಲಸ್ವರೂಪನಾಗಿರುವವನೂ, ಮಹಾತ್ಮಳಾದ ಯೋಗಮಾಯೆಯನ್ನು ತನ್ನ ಅರಸಿಯಾಗಿ ಮಾಡಿಕೊಂಡವನೂ, (ಅಥವಾ – ತನ್ನ ಮಹತ್ತಾದ ಯೋಗಶಕ್ತಿಯಿಂದ ಲೋಕದ ಸಕಲ ಸ್ಥಿತಿಗತಿಗಳನ್ನು ಪರಿಶೀಲಿಸುವವನೂ) ಆದ ಶ್ರೀ ಸೋಮನಾಥ  ಸ್ವಾಮಿಯನ್ನು ಸೇವಿಸುವೆನು.

ಗಣಾಧ್ಯಕ್ಷತಾತಂ ಗುಣಾಪಾರಪೂರಂ

ಫಣಾಧಾರಿಭೂಷಂ ನಿರಾಗಂ ನಿರಾಶಂ ॥

ನಿರಾಲಂಬರೂಪಂ ಸದಾನಂದಪುಂಜಂ

ಭಜೇಹಂ ಭಜೇಹಂ ಭಜೇ ಸೋಮನಾಥಂ ॥ ೩ ॥

ಪ್ರಥಮಗಣಗಳಿಗೆ ಅಧಿಪತಿಯಾದ ವಿನಾಯಕನಿಗೆ ಜನಕನಾಗಿರುವ, ಸಾಗರದ ನೀರಿನಂತೆ ಅಪರಿಮಿತ ಸದ್ಗುಣಗಳಿಂದ ತುಂಬಿರುವ, ನಾಗಭೂಷಣನಾಗಿರುವ, ಉಪಾಸಕರ ಮೇಲೆ ನಿರಂತರ ಪ್ರೀತಿಯುಳ್ಳ, ನಿಸ್ಪ್ರಹನಾದ, ಪಂಚಭೂತಗಳು ಮುಂತಾದ ಆಲಂಬನ ಪದಾರ್ಥಗಳಿಂದ ಉಂಟಾಗದ – ಕೇವಲ ಜ್ಞಾನಮಯವಾದ  ರೂಪವುಳ್ಳ ಸತ್ಯ ಮತ್ತು ಆನಂದಗಳಿಂದ ತುಂಬಿರುವ, ಶ್ರೀ ಸೋಮನಾಥ ಸ್ವಾಮಿಯನ್ನು ಸೇವಿಸುವೆನು.

ಲಸತ್ ಫಾಲನೇತ್ರಂ ಸದಾ ಭಾಸಮಾನಂ

ಮುದಾ ಸೇವ್ಯಮಾನಂ ಮಹಾಯೋಗಪೀಠಂ ॥

ಅಕಾರಪ್ರಕಾಶಂ  ಜಟಾಜೂಟಶೋಭಂ

ಭಜೇಹಂ ಭಜೇಹಂ ಭಜೇ ಸೋಮನಾಥಂ ॥ ೪ ॥

ಹೊಳೆಯುತ್ತಿರುವ ಹಣೆಗಣ್ಣುಳ್ಳವನೂ, ಸಾರ್ವಕಾಲಿಕವಾದ  ಪ್ರಕಾಶವುಳ್ಳವನೂ, ಭಕ್ತಿಯಿಂದ ಸೇವಿಸಲ್ಪಡುವವನೂ, ಯೋಗಾಭ್ಯಾಸಕ್ಕೆ ಯುಕ್ತವಾದ – ದರ್ಭೆ, ಕ್ರಷ್ಣಾಜಿನ, ಮ್ರದುವಸ್ತ್ರಗಳೆಂಬ ಆಸನದಲ್ಲಿರುವವನೂ, ಓಂಕಾರದಲ್ಲಿನ ಆದ್ಯಕ್ಷರ ರೂಪವಾಗಿ ಪ್ರಕಶಿಸುವವನೂ, ಜಟಾಮಂಡಲದಿಂದ ಶೋಭಿಸುವವನೂ, ಆಗಿರುವ ಶ್ರೀ ಸೋಮನಾಥ ಸ್ವಾಮಿಯನ್ನು ಸೇವಿಸುವೆನು.

ಸುರೇಶಾದಿಸೇವ್ಯಂ  ಸುರಾರಾತಿಶತ್ರುಂ

ಸ್ವರಾದೌ ಸುಸೇವ್ಯಂ ಸ್ವಭಕ್ತಾರ್ತಿನಾಶಂ ॥

ಶರೀರಪ್ರಭಾವಂ ಶರೈರ್ಯುಕ್ತಹಸ್ತಂ

ಭಜೇಹಂ ಭಜೇಹಂ ಭಜೇ ಸೋಮನಾಥಂ ॥ ೫ ॥

ಇಂದ್ರಾದಿ ದೇವತೆಗಳಿಂದ ಸೇವಿಸಲ್ಪಡುವವನೂ, ದೇವವೈರಿಗಳಾದ ರಾಕ್ಷಸರಿಗೆ ವೈರಿಯಾದವನೂ,  ಸ್ವರ್ಗ ಮುಂತಾದ ಮೂರು ಲೋಕಗಳಲ್ಲೂ ಪೂಜ್ಯನೂ, ತನ್ನ ಭಕ್ತರ ಸಂಕಟಗಳನ್ನು ನಾಶಮಾಡುವವನೂ, ಶರೀರವನ್ನು ಧರಿಸಿ ಅದರ ಮೂಲಕ ತನ್ನ ಪ್ರಭುಶಕ್ತಿಯನ್ನು ಪ್ರಕಟಪಡಿಸುವವನೂ, ಕೈಗಳಿಂದ ಬಾಣಗಳನ್ನು ಧರಿಸಿರುವವನೂ ಆದ ಶ್ರೀ ಸೋಮನಾಥ ಸ್ವಾಮಿಯನ್ನು ಸೇವಿಸುವೆನು.

ಭವಾಭಾವಮೂಲಂ ಭವಾನೀಕಲತ್ರಂ

ಭವಾರೋಗ್ಯಭೂತಂ ಭಯತ್ರಸ್ತಮಿತ್ರಂ ॥

ಪ್ರಭಾಸಂ ಪ್ರಭೂತಂ ಪ್ರಭಾವಂ ತಮಾದ್ಯಂ

ಭಜೇಹಂ ಭಜೇಹಂ ಭಜೇ ಸೋಮನಾಥಂ ॥ ೬ ॥

ಸಂಸಾರನಶಕ್ಕೆ ಹೇತುವಾದ, ಪಾರ್ವತೀಪತಿಯಾದ, ಸಂಸಾರವೆಂಬ ರೋಗಕ್ಕೆ ವೈದ್ಯನೆನಿಸಿದ, ಭೀತಿಗೊಂಡವರಿಗೆ ಮಿತ್ರನಂತೆ ರಕ್ಷಕನಾದ, ಜ್ಯೋತಿರ್ಮಯನಾದ, ಇಡೀ ವಿಶ್ವದಲ್ಲಿ ತುಂಬಿಕೊಂಡಿರುವ, ಜ್ಞಾನವೆಂಬ ಪ್ರಕಾಶದಿಂದ ತುಂಬಿದ, ಅನಾದಿ ಪುರುಷನಾದ, ಶ್ರೀ ಸೋಮನಾಥ ಸ್ವಾಮಿಯನ್ನು ಸೇವಿಸುವೆನು.

ನಕಾರಸ್ವರೂಪಂ ಮಕಾರೇಣಯುಕ್ತಂ

ಶಿಕಾರಂ ವಹಂತಂ ವಕಾರಸ್ಯವಾಚ್ಯಂ ॥

ಯಕಾರಾರ್ಥಭೂತಂ ಯತೇಶ್ಚಿತ್ತಬಂಧುಂ

ಭಜೇಹಂ ಭಜೇಹಂ ಭಜೇ ಸೋಮನಾಥಂ ॥ ೭ ॥

ನಕಾರ – ಮಕಾರ – ಶಿಕಾರ – ವಕಾರ – ಯಕಾರ – ಗಳೆಂಬ ಪಂಚಾಕ್ಷರಮಯವಾದ ಮಂತ್ರವೇ ದೇಹವಾಗಿರುವವನೂ, ಈ ಪಂಚಾಕ್ಷರಗಳ ಧ್ವನಿಸ್ವರೂಪವನ್ನು ಹೊಂದಿ “ನಾದಬ್ರಹ್ಮ”ನೆನಿಸಿದವನೂ, ಆಗಿದ್ದು, ಸಂಯಮಿಗಳ ಚಿತ್ತದಲ್ಲಿ ಸದಾಬಂಧುವಿನಂತೆ ಬಂಧಿಸಲ್ಪಟ್ಟಿರುವವನೂ, ಆದ ಶ್ರೀ ಸೋಮನಾಥ ಸ್ವಾಮಿಯನ್ನು ಸೇವಿಸುವೆನು.

ಗಲೇ ನೀಲವರ್ಣಂ ಮಹಾಯೋಗಿವಂದ್ಯಂ

ಮಹಾಕಾಲಕಾಲಂ ಮಹಾಂತಂ ವರೇಣ್ಯಂ ॥

ಮಹಾಮೂಲಮಂತ್ರೈಃ  ಸದಾ ಸೇವ್ಯಮಾನಂ

ಭಜೇಹಂ ಭಜೇಹಂ ಭಜೇ ಸೋಮನಾಥಂ ॥ ೮ ॥

ಲೋಕ ರಕ್ಷಣೆಗಾಗಿ ಪಾನಮಾಡಿದ ಸಮುದ್ರದ ವಿಷದ ಲಕ್ಷಣವಾಗಿರುವ – ನೀಲಬಣ್ಣದಿಂದೊಪ್ಪುವ ಕೊರಳುಳ್ಳ ಮಹಾಯೋಗಿಗಳೆನಿಸಿದ ಮಾರ್ಕಾಂಡೇಯಾದಿಗಳಿಂದ ವಂದಿಸಲ್ಪಡುವ, ಮಹಾ ಸಮರ್ಥನಾದ ಯಮನನ್ನು ಸಂಹರಿಸಿದ, ಪೂಜ್ಯನಾದ, ಶ್ರೇಷ್ಟನಾದ, ಭಕ್ತರ ಬಯಕೆಯನ್ನು ಸಲ್ಲಿಸಬಲ್ಲ – ಪಂಚಾಕ್ಷರವೆಂಬ ಮೂಲಮಂತ್ರ ಮೊದಲಾದ – ಹಲವು ಶೈವ ಮೂಲಮಂತ್ರಗಳ ಪುರಶ್ಚರಣೆಗಳ ಮೂಲಕ ಉಪಾಸಕರಿಂದ ಉಪಾಸನೆ ಮಾಡಲ್ಪಡುವ, ಶ್ರೀ ಸೋಮನಾಥ ಸ್ವಾಮಿಯನ್ನು ಸೇವಿಸುವೆನು.

ಯಃ ಸದಾ ಸುಂದರಂ ಸೋಮನಾಥಾಷ್ಟಕಂ

ಭಕ್ತಿದಂ ಸೇವತೇ ಪ್ರತ್ಯಹಂ ಪೂರುಷಃ ॥

ಸ್ವೇಷ್ಟದಂ ಪ್ರಾಪ್ನುಯಾದ್ದಾರ್ಮಿಕೋ ಭೂತಿಮಾನ್

ಭಾರತೀರೂಪವಾನ್ ಭಾಗ್ಯವಾನ್ ಭಾಸತೇ ॥ ೯॥

ಯಾವ ಮನುಷ್ಯನು – ಶಬ್ದಗಳಿಂದ ಸುಂದರವಾಗಿರುವ, ಸೇವಕರಿಗೆ ಭಕ್ತಿಯನ್ನು ಕರುಣಿಸುವ, ಈ ಸೋಮನಾಥಾಷ್ಟಕವನ್ನು, ಪ್ರತಿದಿನವೂ ಪಠಿಸುವನೋ – ಇದರ ಅರ್ಥವನ್ನು ಮನನ ಮಾಡುವನೋ, ಅವನು ತನ್ನ ಮನೋರಥಗಳನ್ನು ಈಡೇರಿಸತಕ್ಕ ( ಧನಕನಕಾದಿ) ವಸ್ತುಗಳನ್ನು ಪಡೆಯುವನು, ಧರ್ಮ ಬುದ್ಧಿಯುಳ್ಳವನಾಗುವನು,ಐಶ್ವರ್ಯವಂತನಾಗುವನು,ಸರಸ್ವತಿಯ ಪ್ರತಿರೂಪದಂತೆ ಮಹಾವಿದ್ಯಾವಂತನಾಗುವನು, ಅದೃಷ್ಟಶಾಲಿಯಾಗುವನು, ಕೀರ್ತಿವಂತನಾಗುವನು.

ಪುಸ್ತಕದ ಮೋರೆಪುಟ

13 thoughts on “ತೆಕ್ಕುಂಜ ಶಂಕರ ಭಟ್ಟ ವಿರಚಿತ – ಶ್ರೀ ಸೋಮನಾಥಾಷ್ಟಕಂ

  1. ಕುಮಾರ’ಮಾವ°’,

    ಒಂದು ಅದ್ಭುತ ಪ್ರತಿಭೆಯ ಬೈಲಿಂಗೆ ತೋರ್ಸಿ ಕೊಟ್ಟದಕ್ಕೆ ತುಂಬಾ ತುಂಬಾ ಧನ್ಯವಾದಂಗೋ. ಇವರ ಹೆಸರು ಮದಲಿಂದಲೇ ಕೇಳಿ ಗೊಂತಿದ್ದು. ಆ ಕಾಲಲ್ಲಿ ವಿದ್ಯಾರ್ಥಿಗೋಕ್ಕೆ ಮಾಂತ್ರ ಅಲ್ಲ, ಎಲ್ಲಾ ಪ್ರಾಯದವಕ್ಕೂ ಸಂಸ್ಕೃತದ ಪ್ರೀತಿ ಹುಟ್ಟುಸಿ, ಆ ಭಾಷೆ ಆಸುಪಾಸಿನ ಸುಮಾರು ಜನ ನಿತ್ಯ ಬಳಕೆ ಮಾಡುವ ಹಾಂಗೆ ಮಾಡಿದ ಮಹಾನ್ ವ್ಯಕ್ತಿ. ಅವರ ಕೃತಿಗಳಲ್ಲಿ ಎಲ್ಲಾ ಅವರ ಮೇರು ಪಾಂಡಿತ್ಯ ಕಾಣ್ತು ಹೇಳಿ ಹೆರಿಯೋರು ಹೇಳಿಗೊಂಡಿತ್ತಿದ್ದವು.

    ಸೋಮನಾಥ ಅಷ್ಟಕ ತುಂಬಾ ಲಾಯ್ಕಾಯಿದು. ಎಷ್ಟು ಚೆಂದದ ವಿವರಣೆ. ಗೌಜಿ ಗದ್ದಲಂದ ದೂರ ಇಪ್ಪ ಅಮ್ಮೆಂಬಳ ಸೋಮನಾಥಂಗೆ ಶಂಕರ ಅಜ್ಜ° ಬರದ ಅಷ್ಟಕವೂ, ಕನ್ನಡಾನುವಾದವೂ ಓದಿ ತುಂಬಾ ಕೊಶೀ ಆತು. ತುಂಬಾ ತುಂಬಾ ತುಂಬಾ ಧನ್ಯವಾದಂಗೋ.

    1. ಅಜ್ಜನ ನೋಡಿದ ನೆಂಪೂ ಎನಗೆ ಇಲ್ಲೆ, ಆದರೆ ಅವರ ಬಗ್ಗೆ ತಿಳ್ಕೊಂಬಲೆ ಅವರ ಬಗ್ಗೆ ಬರದ “ಗುರುದಕ್ಷಿಣೆ” ಪುಸ್ತಕ ಸಕಾಯಕ್ಕೆ ಬಂತು.

  2. ಧನ್ಯವಾದಂಗೊ ಕುಮಾರಣ್ಣಂಗೆ.

  3. ಎನ್ನ ಅಪ್ಪ° ತೆಕ್ಕು೦ಜ ಅಜ್ಜನ ಮತ್ತೆ ಅವು ಸ್ಥಾಪಿಸಿದ ಶಾಲೆಯ ವಿಷಯ ಯೇವಗಳೂ ಹೇಳುತ್ತವು.ಮುಡಿಪು ,ಕುರ್ನಾಡು ಪ್ರದೇಶಲ್ಲಿ ಈ ಶಾಲೆ ಭಾರೀ ಪ್ರಸಿದ್ಧವಾಗಿತ್ತಡ.ಎನ್ನ ಅಪ್ಪನೂ ಪ್ರಾಥಮಿಕ ವಿದ್ಯಾಭ್ಯಾಸವ ತೆಕ್ಕು೦ಜ ಅಜ್ಜನ ಹತ್ತರೆ ಕಲ್ತದು ಹೇಳುಲೆ ಹೆಮ್ಮೆ ಅನುಸುತ್ತು.
    ಕುಮಾರ ಮಾವ,ಅವರ ಒಳುದ ರಚನೆಗಳ ಸ೦ಗ್ರಹ ಇದ್ದರೆ ಬೈಲಿಲಿ ಹ೦ಚುವಿರಾ?

  4. ಅರ್ಥ ಸಹಿತ ಅಷ್ಟಕವ ಒದಗಿಸಿದ ಕುಮಾರಣ್ಣಂಗೆ ಧನ್ಯವಾದಂಗೊ.

  5. ಧನ್ಯವಾದ, ಕುಮಾರಣ್ಣ.
    ಸರಳವಾಗಿ, ಅರ್ಥಗರ್ಭಿತವಾಗಿ ಇಪ್ಪ ಈ ಶ್ಲೋಕ೦ಗಳ ಓದಲೆ ಖುಷಿ ಆವುತ್ತು.
    ಇದರ ಓದುವಗ“ಶಿವ೦ ಶ೦ಕರ೦ ಶ೦ಭುಮೀಶಾನಮೀಡೇ” ಹೇಳಿ ಎಸ್ಪಿ ಬಾಲಸುಬ್ರಹ್ಮಣ್ಯ೦ ಹಾಡುವ ಲಯ ನೆ೦ಪಾವುತ್ತು.
    ಕಡೇಯಾಣ (ಒ೦ಭತ್ತನೇ) ಶ್ಲೋಕ ಬೇರೆ ರಾಗಲ್ಲಿದ್ದು. ಅದರಲ್ಲಿಪ್ಪ ಗೆರೆ“ಭಾರತೀರೂಪವಾನ್ ಭಾಗ್ಯವಾನ್ ಭಾಸತೇ” ತು೦ಬಾ ಸು೦ದರ!!

    ಈ ಶ್ಲೋಕ೦ಗ ಓದಿಯಪ್ಪಗ ಪ್ರತಿಯೊಬ್ಬರ ಮನಸ್ಸಿಲ್ಲಿ ಹೀ೦ಗೆ ಅನಿಸಿಕ್ಕು–

    ಶಿವಸ್ಯಾಷ್ಟಕಂ ಚಾರು ಲಾಲಿತ್ಯಪೂರ್ಣ೦
    ಪರ೦ ಪಾವನ೦ ಕರ್ಣಯುಗ್ಮ೦ ಕರೋತಿ ।
    ಕುಮಾರೇಣ ದತ್ತಂ ಕೃತ೦ ಶ೦ಕರೇಣ
    ಪಠೇಯ೦ ಪಠೇಯ೦ ಪಠೇಯ೦ ಚ ನಿತ್ಯಂ ॥

    “ಸು೦ದರವಾಗಿ ಲಾಲಿತ್ಯಪೂರ್ಣವಾಗಿ ಇಪ್ಪ ಶಿವನ ಈ ಅಷ್ಟಕ ಕೆಮಿಗಳೆರಡನ್ನುದೆ ಪರಮಪಾವನ ಮಾಡ್ತು. ಶ೦ಕರಜ್ಜ ರಚಿಸಿದ, ಕುಮಾರಣ್ಣ ಕೊಟ್ಟ ಈ ಶ್ಲೋಕವ ನಿತ್ಯವೂ ಆನು ಓದೆಕು, ಓದೆಕು, ಮತ್ತೂ ಓದೆಕು..” ಅಪ್ಪೋ?!

    1. ಶಿವಸ್ಯಾಷ್ಟಕಂ ಚಾರು ಲಾಲಿತ್ಯಪೂರ್ಣ೦
      ಪರ೦ ಪಾವನ೦ ಕರ್ಣಯುಗ್ಮ೦ ಕರೋತಿ ।
      ಕುಮಾರೇಣ ದತ್ತಂ ಕೃತ೦ ಶ೦ಕರೇಣ
      ಪಠೇಯ೦ ಪಠೇಯ೦ ಪಠೇಯ೦ ಚ ನಿತ್ಯಂ ॥

      ಭಳಿರೆ ಮಹೇಶಣ್ಣ ಶ್ಲೋಕಕ್ಕೆ ಶ್ಲೋಕ ! super

    2. ಮಹೇಶಣ್ಣನ ಶ್ಲೋಕ ರೂಪದ ಒಪ್ಪ ಅದ್ಭುತವಾಗಿದ್ದು. ! ಅಜ್ಜನ ಶ್ಲೋಕವ ಓದಿ, ಅನುಭವಿಸಿ ಬರದ್ದಕ್ಕೆ ನಮನಂಗೊ.

  6. ಇದು ಲಾಯಕ ಆಯ್ದು ಹೇಳಿರೆ ನಮ್ಮದು ಪೆದಂಬು ಅಲ್ಲದೋ. ತೆಕ್ಕುಂಜ ಶಂಕರ ಭಟ್ಟರು ಬರದ್ದು ಒಳ್ಳೆದಾಯ್ದು ಹೇಳ್ವ ಯೋಗ್ಯತೆ ನವಗಿಲ್ಲೆಪ್ಪ. ತೆಕ್ಕುಂಜ ಕುಮಾರಣ್ಣ ಬೈಲಿಂಗೆ ಇದರ ಕೊಟ್ಟದು ಲಾಯಕ್ಕ ಆಯ್ದು ಹೇಳಿ ಒಪ್ಪ.

  7. ಅತ್ಯಂತ ವಿದ್ವತ್ಪೂರ್ಣ ಶ್ಲೋಕಂಗೋ. ನಿಜವಾಗಿಯೂ ಪ್ರತಿಯೊಬ್ಬನೂ ಕಲ್ತು ಹೇಳೆಕ್ಕಾದ ಒಳ್ಳೆ ಅಷ್ಟಕ . ಬೈಲಿಂಗೆ ಪರಿಚಯಿಸಿದ್ದಕ್ಕೆ ತೆಕ್ಕುಂಜ ಕುಮಾರಣ್ಣ೦ಗೆ ಧನ್ಯವಾದಂಗೋ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×