- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
1964 ರಲ್ಲಿ ಅಜ್ಜ ತೀರಿಹೋದ ಮೇಲೆ ಅವರ ಸ್ಮರಣಾರ್ಥ ಹೆರತಂದ ” ಗುರುದಕ್ಷಿಣೆ” ಸಂಚಿಕೆಲಿ, ಅವರ ಹೆರಿಮಗ ದಿ. ಶ್ರೀ ತೆಕ್ಕುಂಜ ಗೋಪಾಲಕೃಷ್ಣ ಭಟ್, ಬರದ ಕೆಲವು ವಾಕ್ಯಂಗೊ ಹೀಂಗಿದ್ದು ಃ
“…..ನಿರಂತರವಾದ ಸ್ವಾಧ್ಯಾಯವನ್ನು ಕೈಗೊಂಡು ಅದ್ವೈತಸಂಬಂಧೀ ಗ್ರಂಥಗಳನ್ನು ಸ್ವಂತ ಪರಿಶ್ರಮದಿಂದ ಓದಿ, ಜೀರ್ಣಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದರು. ಕೊನೆಯ ವರ್ಷಗಳಲ್ಲಂತೂ ಶಾಂಕರ ಭಾಷ್ಯವನ್ನು ಎಡೆಬಿಡದೆ ಪಠನ ಮಾಡುತ್ತಿದ್ದರು. ಹೀಗಾಗಿ ಅವರ ಕೃತಿಯಲ್ಲಿ ಅದ್ವೈತ ಪ್ರಕ್ರಿಯೆ ಸಾಮಾನ್ಯರಿಗೆ ದುರವಗಾಹವಾಗಿದೆಯೆಂದು ಹೇಳುವುದನ್ನು ಕೇಳಿದ್ದೇನೆ. ಹಾಗೆಯೇ, ಅವರು ದೇವೀ ಭಕ್ತರಾಗಿದ್ದು ದೇವೀ ಪರವಾದ ಕೃತಿಗಳನ್ನು ರಚಿಸಿದ್ದರು. ಅವುಗಳಲ್ಲಿ ಸರಳತೆಯೂ ಇದೆಯೆಂದು ವಾಚಕರು ಗಮನಿಸಲವಕಾಶವಿದೆ.”
“ಅವರ ಧಾರ್ಮಿಕತೆಯೂ ಮೇಲ್ಮಟ್ಟದ್ದಾಗಿತ್ತು. ನಿತ್ಯವಿಧಿಗಳನ್ನು ಕ್ರಮಪ್ರಕಾರವಾಗಿ ನೆರೆವೇರಿಸುವುದರಲ್ಲಿ ಅವರು ತೀವ್ರಾಸಕ್ತಿ ವಹಿಸಿಕೊಂಡಿದ್ದರು. ಬೆಳಗ್ಗಿನ ಜಾವದ್ದಲ್ಲೇ ಎದ್ದು ಸ್ನಾನವನ್ನು ತೀರಿಸಿ,ಸಂಧ್ಯಾವಂದನೆಯನ್ನು ಮುಗಿಸಿ ಯಾವುದೋ ಪಾರಾಯಣವನ್ನು ಮಾಡುತ್ತಾ ಸುಮಾರು ಎಂಟು ಗಂಟೆಯ ವರೆಗೆ ಅವುಗಳಲ್ಲೆ ವ್ಯಾಪೃತರಾಗುತ್ತಿದ್ದರು. ಭಸ್ಮವನ್ನು ಹಾಕಿಕೊಂಡು ಹೊರಚಾವಡಿಯಲ್ಲಿ ಬಂದು ಕುಳಿತುಕೊಂಡರೆ ಕೈಲಾಸಪತಿಯೇ ಕುಳಿತಿದ್ದಂತೆ ಕಾಣುತಿದ್ದರು…”
ಅಜ್ಜ ಬರದ “ಶ್ರೀ ಸತ್ಕೃತಿ ಮಂಜರೀ’ ಲಿ ೧೬ ಸ್ತೋತ್ರ ಇಪ್ಪದು. ಇದರ ಕನ್ನಡನುವಾದ ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಮಾಡಿದ್ದವು. ಶುರುವಾಣ ೮ ಸ್ತೋತ್ರ ಇಲ್ಲಿದ್ದು ಃ
ಅಕ್ಷೈರಗಮ್ಯಂ ಮನಸೋಪ್ಯತೀತಂ
ಗುಣೈರ್ವಿಹೀನಂ ಶ್ರುತಿವಿತ್ತಿದೂರಂ ॥
ಅಸ್ತೀತಿವೇದ್ಯಂ ಕಥಮಪ್ರಮತ್ತೋ
ಜಾನಾಮಿ ದೇವಂ ಪುರುರೂಪಮಾಧ್ಯಂ ॥೧॥
ಯಾವ ದೇವನು- ಇಂದ್ರಿಯಗಳಿಂದ ತಿಳಿಯಲ್ಪಡುವುದಿಲ್ಲವೋ, ಮನಸ್ಸಿನಿಂದ ಎಣಿಸಲಿಕ್ಕೆ ಸಹ ದೂರವಾಗಿರುವನೋ, ಸತ್ವರಜತಮಗಳೆಂಬ ಗುಣಗಳಿಲ್ಲದವನೋ, ವೇದಗಳ ಅನುಭವಕ್ಕೆ ಸಹ ದೂರವಾಗಿರುವನೋ, ” ಇದ್ದಾನೆ” ಎಂದಿಷ್ಟು ಮಾತ್ರ ತಿಳಿಯಲಿಕ್ಕೆ ಸಾಧ್ಯವಾಗಿರುವನೋ,ಅಂತಹ- ಮಾಯೆಯಿಂದ ಪ್ರಪಂಚದಷ್ಟು ದೊಡ್ಡ ರೂಪವುಳ್ಳ ದೇವನನ್ನು, ನಾನು ಪ್ರಮಾದರಹಿತನಾಗಿಯಾದರೂ ಹೇಗೆ ತಾನೆ ತಿಳಿಯಲಾಪೆನು ? ತಿಳಿಯಲಾರೆನು.
ತಥಾಪಿ ಶಿಷ್ಟೈರನುಶಿಷ್ಯಮಾಣಂ
ನೇತೀತಿವಾಕ್ಯೈಶ್ಚಿತಿಭಾಸಮಾನಂ ॥
ಅಹಂ ಸ ಏವೇತಿ ವಿಭಾವಯಾಮಿ
ಮಾನೈರವಿಷ್ಟಂ ಹೃದಯೈಕನಿಷ್ಟಂ ॥೨॥
ಆದರೂ – ವಿದ್ವಾಂಸರು, “ಪ್ರಪಂಚದ ದ್ರಶ್ಯವಸ್ತುಗಳಲ್ಲಿ ಯಾವುದೂ ಪರಮಾತ್ಮನಲ್ಲ”ವೆಂದು “ಶ್ರುತಿಗಳು ಉಪದೇಶಿಸುತ್ತವೆ”ಯೆಂತ ಬೋಧಿಸಿರುವ ಮಾಯೆಯಲ್ಲಿ ಪ್ರತಿಬಿಂಬಿತವಾಗಿ ಈಶ್ವರನೆಂದು ಹೇಳಲ್ಪಡುವ, ಯಾವ ಪ್ರಮಾಣಕ್ಕೂ ಸಿಲುಕದಿರುವ, ಸಕಲಪ್ರಾಣಿಗಳ ಹೃದಯಾಂತರಾಳದಲ್ಲಿ ವಾಸಿಸುತ್ತಿರವ, ಆ ಪರಮಾತ್ಮನನ್ನು- ನನ್ನ ಆತ್ಮನೇ ಆಗಿರುವನೆಂದು ಧ್ಯಾನಿಸುತ್ತೇನೆ.
ತತ್ ತ್ವಂ ಪದಾರ್ಥೌ ಪರಿಶೋಧ್ಯ ಬುದ್ಧ್ಯಾ
ವಾಕ್ಯಾರ್ಥಭೂತಂ ವಿಬುಧೈರ್ವಿಭಾವ್ಯಂ ॥
ಲಕ್ಷ್ಯೈಕಗಮ್ಯಂ ಲಯಮೇತಿ ಸರ್ವಂ
ಯತ್ರೈಕಭೂತಂ ಮನಸಾ ಪ್ರಪದ್ಯೇ ॥೩॥
ಪರಮಾತ್ಮನನ್ನು ತಿಳಿದುಕೊಂಡ ಜ್ಞಾನಿಗಳು – “ತತ್ವಮಸಿ” ಎಂಬ ವಾಕ್ಯದ ಅರ್ಥವನ್ನು ವಿಮರ್ಷಿಸಿ ಅಲ್ಲಿ ಲಕ್ಷ್ಯಾರ್ಥದ ಮೂಲಕ ತತ್ವವನ್ನು ಅರಿತು, “ಅಹಂಬ್ರಹ್ಮಾಸ್ಮಿ” “ನಾನೇ ಬ್ರಹ್ಮಸ್ವರೂಪನು” ಎಂದು ಯಾವುದನ್ನು ಧ್ಯಾನಿಸುತ್ತಿರುವರೋ,ನಿರಂತರವಾದ ಏಕಾಗ್ರತೆಯ ಮೂಲಕ ಯಾವುದು ತಿಳಿಯಲ್ಪಡುವುದೋ, ಮಹಾಪ್ರಳಯ ಕಾಲದಲ್ಲಿ ಪರಮಾಣು ಮೊದಲ್ಗೊಂಡು ಮೂಲ ಪ್ರಕೃತಿಯ ವರೆಗಿನ ಸಕಲ ಪದಾರ್ಥಗಳು ಯಾವುದರಲ್ಲಿ ಒಂದಾಗಿ ಸೇರಿಕೊಳ್ಳುವುವೋ, ಅಂತಹ ಪರಮಾತ್ಮ ತತ್ವವನ್ನು ಮನಸ್ಸಿನಿಂದ ಧ್ಯಾನಿಸುವೆನು.
ನಾನೇಹನೇತೀತಿ ವಿಭಾವ್ಯಮಾನಂ
ಮಾನೈರ್ವಿಮಾನೈರನುಮೀಯಮಾನಂ ॥
ನಾನಾಗುಹಾಸು ಪ್ರತಿಭಾಸಮಾನಂ
ಭಜೇ ವಿಭಾಂತಂ ಪ್ರತಿಭಾತಿ ಸರ್ವಂ ॥೪॥
ವೇದಗಳಲ್ಲಿ – ” ಪರಮಾತ್ಮ ತತ್ವದಲ್ಲಿ ಪ್ರಪಂಚದ ಯಾವ ವಸ್ತುಗಳೂ ಅಂಟಿಕೊಂಡಿಲ್ಲ” ಎಂದು ಬೋಧಿಸಲ್ಪಟ್ಟಿರುವ, ವ್ಯಾಪ್ತಿ ಜ್ಞಾನದಿಂದಲೂ – ಅನುಭವ ಜ್ಞಾನದಿಂದಲೂ ಊಹಿಸಲ್ಪಡುವ, ತನ್ನ ಪ್ರಭೆಯಿಂದಲೇ ಸೂರ್ಯಾದಿಸಮಸ್ತ ಪದಾರ್ಥಗಳನ್ನು ಪ್ರಕಾಶಗೊಳಿಸುವ, ಅನೇಕ ಕೋಟಿ ಜೀವರುಗಳ ಹ್ರದಯಾಕಾಶದಲ್ಲಿ – ಅವರವರ ಧ್ಯಾನಗಳಿಗೆ ತಕ್ಕಂತೆ ಹೊಳೆಯುತ್ತಿರುವ, ಆ ಪರಮಾತ್ಮ ತತ್ವವನ್ನು ನಾನು ಸೇವಿಸುವೆನು.
ಪ್ರಾಣಂ ತಥಾಪಾನಮಥಾಕ್ಷವೃತ್ತೀಃ
ಸಂಸ್ಥಾಪ್ಯ ಚಿತ್ತೇ ಧೃತಿಮಾನ್ ಸುಯೋಗೀ ॥
ಯಂ ಪ್ರೇಕ್ಷತೇನನ್ಯಸಮಾಧಿವೃತ್ಯಾ
ಸರ್ವಂ ಪ್ರಪದ್ಯೇ ಶಿವಮಕ್ಷರಂ ತಂ ॥೫॥
ಬಹುಕಾಲದ ಅಭ್ಯಾಸದಿಂದ ಶ್ವಾಸಧಾರಣ ಶಕ್ತಿಯನ್ನು ಸಂಪಾದಿಸಿದ ಮಹಾಯೋಗಿಯು ತನ್ನಯೋಗದ ಬಲದಿಂದ ಪ್ರಾಣಾಪಾನಗಳೆಂಬ ಎರಡು ಬಗೆಯ ವಾಯುಗಳನ್ನು ಸ್ಥಿರಗೊಳಿಸಿ, ಶ್ರೋತ್ರಾದೀಂದ್ರಿಯಗಳ ಮೂಲಕ ಮನೋವೃತ್ತಿಯನ್ನು ಹೊರಹೋಗದಂತೆ ನಿಲ್ಲಿಸಿ, ಯಾವ ಪರಮಾತ್ಮ ತತ್ವವನ್ನು ಜೀವಾತ್ಮನೊಡನೆ ಅಭೇದಭಾವನೆಯಿಂದ ಧ್ಯಾನಿಸುತ್ತಿರುವನೋ, ಅಂತಹಾ ನಾಶರಹಿತವಾದ, ಮಂಗಲರೂಪವಾದ, ಸರ್ವವ್ಯಾಪಿಯಾದ, ಪರಮಾತ್ಮ ತತ್ವವನ್ನು ಶರಣಾಗತನಾಗುವೆನು.
ಘಟೇಷು ಬಿಂಬಂ ಸವಿತುರ್ವಿಲೋಕ್ಯ
ನಾನಾತ್ವಮೈಕ್ಷಂತ ಯಥಾ ವಿಮೂಢಾಃ ॥
ಏಕೋಪಿ ದೇವೋ ಬಹುಧಾ ವಿಭಕ್ತ
ಸ್ತಂ ಸರ್ವಧೀಸಾಕ್ಷಿಣಮಾಶ್ರಯೇಹಂ ॥೬॥
ಭೂಮಿಯ ಮೇಲೆ ನೀರು ತುಂಬಿದ ಅನೇಕ ಪಾತ್ರೆಗಳನ್ನಿರಿಸಿದಾಗ – ಪ್ರತಿಯೊಂದು ಪಾತ್ರೆಯಲ್ಲೂ ಸೂರ್ಯನ ಪ್ರತಿಬಿಂಬವು ಬೀಳುವುದು. ಮೂಢರಾದವರು ಆ ಹಲವು ಪ್ರತಿಬಿಂಬಗಳನ್ನು ಕಂಡು – ( ಆಕಾಶದಲ್ಲಿನ ನಿಜ ಸುರ್ಯನನ್ನು ಕಾಣದೆ) ಸೂರ್ಯರು ಅನೇಕರು ಎಂದು ಭ್ರಮೆಗೊಳ್ಳುವರು.ಹಾಗೆಯೇ ಒಂದೇ ಪರಮತ್ಮ ತತ್ವವು, ದೇವ-ಮನುಷ್ಯ-ತಿರ್ಯಂಚ-ಕ್ರಿಮಿಕೀಟ-ಪತಂಗಾದಿ ಸಕಲದೇಹಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಪ್ರತಿಬಿಂಬಿಸಿದ್ದನ್ನು ಕಂಡು, ” ಹಲವು ಆತ್ಮಗಳು” ಎಂದು ಅಜ್ಞಾನಿಗಳು ಭ್ರಾಂತಿಹೊಂದುವರು, ವಸ್ತುಶಃ ತಾನು ಸೂರ್ಯನಂತೆ ಸರ್ವ ಶರೀರಗಳಲ್ಲೂ ಅಭಿನ್ನವಾಗಿ ವ್ಯಾಪಿಸಿಕೊಂಡಿದ್ದು, ಅಂತಃಕರಣಕ್ಕೆ ಸಾಕ್ಷಿರೂಪವಾಗಿರುವ ಆ ಆತ್ಮ ತತ್ವವನ್ನು ನಾನು ಆಶ್ರಯಿಸುವೆನು.
ನ ಸ್ತ್ರೀಪುಮಾನ್ ಕ್ಲೀಬಮನಂತರೂಪಂ
ನಾಸಚ್ಚಸಚ್ಚೋಭಯವಾದಶೂನ್ಯಂ ॥
ನ ಸ್ಥೂಲಹ್ರಸ್ವಾದಿವಿಕಾರಯೋಗಂ
ಸಮಾಶ್ರಯಂತಂ ಸರಸಂ ವಿಮನ್ಯೇ ॥೭॥
ಯಾವ ಆತ್ಮ ತತ್ವವು – ಸ್ತ್ರೀಪುರುಷನಪುಂಸಕತ್ವರಹಿತವಾಗಿಯೂ,ಸತ್ಪದಾರ್ಥವಲ್ಲದೆಯೂ, ಅಸತ್ಪದಾರ್ಥವಲ್ಲದೆಯೂ, ಸದಸದ್ವಿಲಕ್ಷಣ ಪದಾರ್ಥವಲ್ಲದೆಯೂ, ಸ್ಥೂಲ-ಸೂಕ್ಷ್ಮ-ಹೃಸ್ವಾದಿ ವಿಕಾರಶೂನ್ಯವಾಗಿಯೂ, ಪ್ರಪಂಚದ ಸಕಲಪದಾರ್ಥಗಳ ಒಳಗೂ ಹೊರಗೂ ತುಂಬಿಕೊಂಡಿದ್ದು ಸ್ನೇಹಮಯವಾಗಿಯೂ, ಇರುವುದೋ, ಅಂತಹಾ ಆತ್ಮ ತತ್ವವನ್ನು ನಾನು ಧ್ಯಾನಿಸುವೆನು.
ಆಕಾಶಮೇಕಂ ಬಹುರೂಪಮಾಹುಃ
ತಥೈವದೇವಃ ಪ್ರತಿಭಾತಿ ಸೋಯಂ ॥
ಓಂಕಾರನೀಢಸ್ಥಿತಮಾದಿಭೂತಂ
ಸಮಾಲಲಂಬೇ ವಿರಜಂ ವಿಶೋಕಂ ॥೮॥
ಸರ್ವವ್ಯಾಪಿಯಾದ ಒಂದೇ ಆಕಾಶವು – ಮಡಿಕೆ-ಕುಡಿಕೆ-ಮನೆ-ಮಠ-ಇತ್ಯಾದಿಗಳಲ್ಲಿ ಪ್ರವೇಶಿಸಿದ್ದು-ಮಡಿಕೆಯೊಳಗಣ ಆಕಾಶ-ಕುಡಿಕೆಯೊಳಗಣ ಆಕಾಶ-ಮನೆಯೊಳಗಣ ಆಕಾಶ-ಮಠದೊಳಗಣ ಆಕಾಶ -ಎಂಬಿತ್ಯಾದಿ ರೀತಿಯಿಂದ, ಉಪಾಧಿಗಳ ನಿಮಿತ್ತವಾಗಿ ಭಿನ್ನಭಿನ್ನ ರೂಪವಾಗಿ ವ್ಯವಹರಿಸಲ್ಪಡುವುದು. ಅದೇ ರೀತಿಯಾಗಿ ಪರಮಾತ್ಮನು- ಸರ್ವವ್ಯಾಪಿಯಾಗಿ ಏಕ ರೂಪದಿಂದ ಇದ್ದರೂ, ಬೇರೆ ಬೇರೆ ನಾಮ ರೂಪಗಳಿಂದ ಕೂಡಿದ ಶರೀರಗಳೊಳಗೆ ಪ್ರವೇಶಮಾಡಿದಾಗ ಅವನು, ಮನುಷ್ಯ-ಮೃಗ-ಪಕ್ಷಿ ಎಂಬಿತ್ಯಾದಿ ವ್ಯವಹಾರಗಳಿಗೆ ಪಾತ್ರನಾಗುವನು. ಅಂತಹಾ, ಓಂಕಾರವೆಂಬ ಗೂಡಿನೊಳಗಿನ ಪಕ್ಷಿಯಂತೆ ತೋರುವ, ಅನಾದಿಪುರುಷವೆನಿಸಿದ, ಪಾಪರಹಿತನಾದ, ದುಃಖಶೂನ್ಯನಾದ, ಪರಮಾತ್ಮನನ್ನು ನಾನು ಆಶ್ರಯಿಸುವೆನು.
(ಒಳುದ ಸ್ತೋತ್ರಂಗ ಇನ್ನಾಣ ಸರ್ತಿಲಿ)
~*~*~
ಅಪೂರ್ವ ಸಾಹಿತ್ಯ ,ಅದ್ಭುತ ಪಾಂಡಿತ್ಯ ಸರಿಯಾಗಿ ಅರ್ಥ ಅಪ್ಪಲೆ ಇನ್ನೂ ಒಂದೆರಡು ಸರ್ತಿ ಓದುತ್ತೆ
ಇಲ್ಲಿ ಇಷ್ಟು ಒಳ್ಳೆ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಂಗ ತೆಕ್ಕುಂಜ ಕುಮಾರ ಮಾವ° ಒಳುದ್ದರ ಕಾಯುತ್ತಾ ಇದ್ದೆ
ಅಪುರೂಪದ ಪಾಂಡಿತ್ಯ.
ಮಹತ್ವಪೂರ್ಣ ಲೇಖನ. ಧನ್ಯವಾದಂಗೊ.
ಪರಮಾತ್ಮನ ಸ್ವರೂಪವ ಎಲ್ಲೋರಿಂಗು ಅರ್ಥ ಆವ್ತ ಹಾಂಗೆ ಎಷ್ಟು ಚೆಂದಕೆ ವಿವರುಸಿದ್ದವು ತೆಕ್ಕುಂಜೆ ಅಜ್ಜ°. ಬೈಲಿಂಗೆ ಒದಗುಸಿ ಕೊಟ್ಟ ತೆಕ್ಕುಂಜೆ ಪುಳ್ಳಿಗೆ ಧನ್ಯವಾದಂಗೊ. ಇನ್ನಾಣ ಕಂತಿಂಗೆ ಕಾಯ್ತಾ ಇದ್ದೆ.
ಕುಮಾರ ಮಾವಾ,
ಸತ್ಯವ ಸತ್ವಯುತವಾಗಿ ಹೇಳಿದ್ದವು ತೆಕ್ಕು೦ಜಜ್ಜ°.{ ಘಟೇಷು ಬಿಂಬಂ.. ಮತ್ತೆ ಆಕಾಶಮೇಕಂ..} ಈ ಎರಡು ಚರಣ೦ಗಳ ಓದಿಯಪ್ಪಗ ರೋ೦ಮಾ೦ಚನ ಆತು.
ಸರಳವಾಗಿ ಕಂಡರೂ ಬಹು ಪ್ರೌಢಿಮೆ ಇದರೊಳ ಅಡಗಿದ್ದು. ಅಜ್ಜನ ಪಾಂಡಿತ್ಯ ಸೊತ್ತಿನ ಬೈಲಿಂಗೆ ವಿಲೇವಾರಿ ಮಾಡುತ್ತ ಇಪ್ಪದ್ದಕ್ಕೆ ತೆಕು ಮಾವಂಗೆ ಧನ್ಯವಾದ ಹೇಳುತ್ತು ‘ಚೆನ್ನೈವಾಣಿ’.
(ಒಳುದ ಸ್ತೋತ್ರಂಗ ಇನ್ನಾಣ ಸರ್ತಿಲಿ) – ಕಾದೊಂಡಿರ್ತೆ…