Oppanna.com

"ಅಡಿಗೆ ಸತ್ಯಣ್ಣ" – 45 (ಅಡಿಗೆ ವಿಶೇಷಾಂಕ!)

ಬರದೋರು :   ಚೆನ್ನೈ ಬಾವ°    on   16/01/2014    8 ಒಪ್ಪಂಗೊ

ಚೆನ್ನೈ ಬಾವ°

ಬೈಲಿಲಿ ಒಂದರಿಯಾಣ ಅನುಪ್ಪತ್ಯಂಗೆ ಎಲ್ಲ ಮುಗಾತು ಹೇದು ಕಾಂಬಲೆ ಸುರುವಪ್ಪಗ ಮತ್ತಾಣ ಜೆಂಬ್ರಂಗೊ ಅನಿರೀಕ್ಷಿತವಾಗಿ ಎಳಗಿತ್ತು. ಅನಿರೀಕ್ಷಿತವಾಗಿ ಬಂದ್ಸರ ಮತ್ತೆ ಮುಂದೆ ಹಾಕುವಾಂಗೆ ಇಲ್ಲೆ. ಅಂದಂದಿಂಗೆ ಆಯೇಕೆ. ವೊರುಶದ ಸುರುವಿಲ್ಲಿಯೇ ಬೈಲಿಲಿ ಕೆಲವು ಗಟ್ಟಿ ಹೆಮ್ಮರಂಗೊ ಉರುಳಿದ್ದದು ನುಂಗಲಾರದ ತುತ್ತು ಆಗಿಹೋತು. ಎಂತ ಮಾಡ್ಸು ಎಂತ ಹೇಳ್ಸು ಹೇದು ತಲೆಯೂ ಓಡ ಕಾಲೂ ಹಂದ!. ಅಂದರೆಂತ ಮಾಡ್ಸು… ಏವುದೂ ನಮ್ಮ ಕೈಲಿ ಇಲ್ಲೆ ಅದಾ ಹೇಳ್ವದಟ್ಟೇ ಸಮಾಧಾನ.
ಕಳುದ ದಶಂಬ್ರ 14ಕ್ಕೆ ಅಡಿಗೆ ಸತ್ಯಣ್ಣನಲ್ಲಿಗೆ ಅಪ್ರೂಪಲ್ಲಿ ಸೊಸೆ, ಪುಳ್ಳಿ ಬಂದ ಶುದ್ದಿ ಓದಿದ್ದು ನೆಂಪಿದ್ದ! https://oppanna.com/?p=36374 . ಸೊಸೆ ಪುಳ್ಳಿ ಬಂದ ಸಮಯಲ್ಲಿ ಸತ್ಯಣ್ಣಂಗೆ ಎರಡು ದಿನ ಪುರುಸೊತ್ತಿದ್ದು ಅವರೊಟ್ಟಿಂಗೆ ಮನೆಲಿ ಸಂತೋಷಲ್ಲಿ ಕಳುದ್ದದಾತು. ಅವು ಬಂದ ಮರದಿನ ಅಡಿಗೆ ಸತ್ಯಣ್ಣ ಪುಳ್ಳಿಯೊಟ್ಟಿಂಗೆ ಆಡಿದ್ದದಾತು. ಏನಾರು ಮಾಡೇಕಾರೆ ಮರದಿನ ಆತಟ್ಟೇ ಹೇದು ಆ ಶುದ್ದಿಲಿ ಹೇದಿತ್ತಿದ್ದು. ಮತ್ತೆ ಮರದಿನಾಣ ಶುದ್ದಿ ಎಂತಾರಡ ಹೇದು ಬೈಲಿಲಿ ವೊರ್ತಮಾನ ಬೈಂದಿಲ್ಲೆ. ಬೈಲಿಲಿ ಕೆಲಾವು ಜೆನ ಹೇದೊಂಡಿತ್ತಿದ್ದವು ಅಡಿಗೆ ಸತ್ಯಣ್ಣನಲ್ಲಿಗೆ ನೆಂಟ್ರು ಬಂದಿಪ್ಪಗ ಎಂತೂ ವಿಶೇಷ ಅಡಿಗೆ ಮಾಡಿದ್ದನಿಲ್ಲೆಯಾ ಅಂಬಗ! ‘ಕ್ಷೀರಭಟ್ಟನ ಮನೆಲಿ ಹಾಲಿಂಗೇ ತತ್ವಾರ’ – ಹೇದಾಂಗೆ ಆತನ್ನೇ!! ಕಾರ್ಯಕ್ಕಾರೆ ಹಾಂಗಲ್ಲ ಇದಾ. ಅಡಿಗೆ ಸತ್ಯಣ್ಣ ಹೀಂಗೀಂಗೆ ಮಾಡಿದ್ದದಿದಾ ಹೇದು ಉದ್ದಿನಬೇಳೆ, ಸಾಸಮೆ, ಮೆಣಸು, ಜೀರಿಗೆ ಹೇದು ವಿವರಣೆ ಕೊಟ್ರೆ ನವಗದು ತಲೆಬುಡ ಗೊಂತಾಗ. ನಾವು ಎಂತಿದ್ದರೂ ಮಾಡಿ ಹಾಕಿದ್ದರ ಒಪ್ಪಣ್ಣನೊಟ್ಟಿಂಗೆ ಬಲದ ಹೊಡೆಲಿ ಕೂದೊಂಡು ತಿಂಬಲೆ ಬೇಕಾರೆ ಕೈ ಸೇರುಗು. ನಮ್ಮಂದ ಅರಡಿಗಪ್ಪದು ಅಟ್ಟು ಮಾಂತ್ರ. ಅಂದರೂ ಶುದ್ದಿ ಇಲ್ಲೆ ಹೇದಕ್ಕೋ?!
ಮದಲಿಂಗೊ ಒಬ್ಬ ಹೇಯ್ದನಡ – “ಬಟ್ಟಜ್ಜನ ಮನೆ ಅನುಪ್ಪತ್ಯಲ್ಲಿ ಪಾಕಾಯ್ತನ ಎಂತ್ಸರ ಹೇದು ಕೇಳೆಕು ಹೇದಿಲ್ಲೆ. ಬಾಳೆಕಾಯಿ ಸಮಯಲ್ಲಿ ಬಾಳೆಕ್ಕಾಯಿ ತಾಳು ಕೊದಿಲು ಮೇಲಾರ ಆತು ಕುಜ್ವೆ ಸಮಯಲ್ಲಿ ಕುಜ್ವೆ ತಾಳು ಕೊದಿಲು ಮೇಲಾರ ಆತು”. ಅಂಬಗ ಅಡಿಗೆ ಸತ್ಯಣ್ಣನಲ್ಲಿ ತೊಂಡೆ ಚಪ್ಪರಕ್ಕೆ ಸುತ್ತು ಬಂದು ಹೆರ್ಕಿದ್ದದೂ ಬಸಳೆ ಕೊರದ್ದದೂ ಆದಿಕ್ಕೋದು ನಿಂಗೊ ಕೇಟಿರೋ..- ಅದು ಸುಳ್ಳಕ್ಕು. ಕಾಲ ಬದಲಿದ್ದು ಈಗ!
ಮನ್ನೆ ಕುಂಬ್ಳೆಜ್ಜನ ಶುದ್ಧದ ದಿನಾವೆ ಹೊಸಮನೆ ಅಜ್ಜನ ಶುದ್ಧವೂ ಇತ್ತಿದ್ದ ಕಾರಣ ನವಗೆ ಕುಂಬ್ಳೆಜ್ಜನ ಶುದ್ಧಕ್ಕೆ ಹೋತಿಕ್ಕಲೆ ಎಡಿಗಾಯ್ದಿಲ್ಲೆ. ಅಂದರೂ ನಮ್ಮ ಪೈಕಿಯೋರು ಅಲ್ಲಿ ಇತ್ತಿದ್ದವದಾ. ಕುಂಬ್ಳೆಜ್ಜನಲ್ಲಿ ಹೇದಮತ್ತೆ ಅಡಿಗೆ ಸತ್ಯಣ್ಣನೇ ಹೇದು ಪ್ರತ್ಯೇಕ ಹೇಳ್ಳೆ ಇಲ್ಲೆ. ಸುಭಗಣ್ಣ°, ಚುಬ್ಬಣ್ಣ°, ಬೆಟ್ಟುಕಜೆ ಅಣ್ಣ°, ವಜ್ರಾಂಗಿ ಭಾವ° ಶ್ರೀ ಅಕ್ಕಾ°, ದೊಡ್ಡಭಾವ° ಎಲ್ಲೋರು ಹೋಗಿತ್ತವು ಅಲ್ಲಿಗೆ. ಉಮ್ಮಾ ಒಪ್ಪಣ್ಣ ಹೋಯ್ದನೋ ಗೊಂತಿಲ್ಲೆ. ಮಾಷ್ಟ್ರು ಮಾವನ ಮನೆಂದ ಎಲ್ಲೋರು ಹೋಯ್ದವು ಹೇದಟ್ಟೇ ನಾವು ಕೇಟದು. ಅಲ್ಲಿ ಸತ್ಯಣ್ಣನ ಕಂಡಪ್ಪಗ ಶ್ರೀ ಅಕ್ಕ ಕೇಳಿಯೇ ಬಿಟ್ಟವು – “ಸೊಸೆ ಪುಳ್ಳಿ ಬಂದ ಲೆಕ್ಕಲ್ಲಿ ಮನೆಲಿ ಸತ್ಯಣ್ಣನ ಲೆಕ್ಕಲ್ಲಿ ಎಂತ ಪೆಸಲ್ಲು ಮಾಡಿದ್ದಿಲ್ಲ್ಯ ಸತ್ಯಣ್ಣ?! ನಿಂಗೊ ಪುಳ್ಳಿಗೆ ನಾಕು ಪದ ಜೋಗುಳ ಹೇದಿಕ್ಕಿ ನಿವೃತ್ತಿ ಮಾಡಿದ್ದ ಸತ್ಯಣ್ಣ?!”. “ಅಲ್ಲಪ್ಪ, ಮರದಿನ ಇದಾ….” – ಹೇದು ಸತ್ಯಣ್ಣ ವರದಿ ಒಪ್ಪುಸಿದ. ಹಾಂಗೆ ಸತ್ಯಣ್ಣ ಅಕ್ಕನತ್ರೆ ಎಂತೆಂತೆಲ್ಲ, ಹೇಂಗೆ ಮಾಡ್ಸು ಹೇದ್ದರ ಇದಾ ಇಲ್ಲಿ ಇಂದು –2.10.2013
ಉದಿಯಪ್ಪಗಾಣ ಕಾಪಿಗೆ ಬಾಳೆಹಣ್ಣು ಕೊಟ್ಟಿಗೆ:
ಅರ್ಧ ಕೆ.ಜಿ.ಬೆಳ್ತಿಗೆ ಅಕ್ಕಿಯ ಮುನ್ನಾಣ ದಿನ ಮನುಗುದರ ಮದಲೇ ಬೊದುಲುಲೆ ಹಾಕಿ ಮಡಗಿತ್ತಿದ್ದನಡ ಸತ್ಯಣ್ಣ. ಬೊದುಲಿದ ಅಕ್ಕಿಯ ಲಾಯ್ಕಲ್ಲಿ ತೊಳದು ಅದರ ಒಟ್ಟಿಂಗೆ 12 ಒಳ್ಳೇತ ಹಣ್ಣಾದ ಕದಳಿ ಬಾಳೆಹಣ್ಣುಗಳ ಹಾಕಿ ರಜ್ಜ ತರಿ ತರಿ ಅಪ್ಪಹಾಂಗೆ ಕಡೆಯೆಕ್ಕು. ಕಾಲು ಕೆ.ಜಿ.ಬೆಲ್ಲ, ಒಂದು ಕಪ್ ತೆಂಗಿನ ತುರಿಯ ಹಾಕಿ ಒಟ್ಟಿಂಗೆ ಕಡೇರಿ. ಬಾಳೆಎಲೆಲಿ ಒಂದೂವರೆ ಸೌಟು ಹಿಟ್ಟಿನ ಹಾಕಿ ಎಲೆಯ ಕೊಟ್ಟಿಗೆಯ ಹಾಂಗೆ ಮಡ್ಸಿ ಅಟ್ಟಿನಳಗೆಲಿ ಮಡುಗಿ ಬೇಶಿದರೆ ಬಾಳೆಹಣ್ಣು ಕೊಟ್ಟಿಗೆ ರೆಡಿ.
ಕೊಟ್ಟಿಗೆಗೆ ಕೂಡುಲೆ ನೀರುಳ್ಳಿ ಚಟ್ನಿ:
ಸುಮಾರು 5-6 ಕುಮ್ಟೆ ಮೆಣಸು ಮತ್ತೆ 2 ಚಮಚ ತೆಂಗಿನೆಣ್ಣೆ ಹಾಕಿ ಹೊರುದು ಮಡುಗಿ, ಒಂದುವರೆ ಕಪ್ ತೆಂಗಿನ ತುರಿಯ ಒಟ್ಟಿಂಗೆ 25 ಗ್ರಾಂ ಹುಳಿ, ರುಚಿಗೆ ತಕ್ಕ ಉಪ್ಪು, 1 ಈರುಳ್ಳಿ ತುಂಡು ಮಾಡಿ ಹಾಕಿ, ಮೆಣಸು ಹೊರುದು ಹಾಕಿ ರಜ್ಜವೇ ನೀರು ಹಾಕಿ ನುಣ್ಣಂಗೆ ಕಡದು ತೆಗದರೆ ನೀರುಳ್ಳಿ ಚಟ್ನಿ ರೆಡಿ.
ಉದಿಯಪ್ಪಗ ಎಡೆಹೊತ್ತಿಂಗೆ
ಉದಿಯಪ್ಪಣ ಬಾಳೆಹಣ್ಣು ಕೊಟ್ಟಿಗೆ ನೀರುಳ್ಳಿ ಚಟ್ನಿ ಗಡದ್ದು ಆದಕಾರಣ ಉದಿಯಪ್ಪಾಣ ಎಡೆಹೊತ್ತಿಂಗೆ ಕಾಪಿ, ಚಾಯ, ಜೀರಿಗೆ ಕಷಾಯ, ಪುಳ್ಳಿಗೆ ಜಾಯಿ ಮಾಂತ್ರ. 😀
ಮಧ್ಯಾಹ್ನದ ಊಟಕ್ಕೆ
ನುಗ್ಗೆಸೊಪ್ಪು ತಾಳು:
ಮದ್ಯಾಹ್ನಕ್ಕೆ ಊಟಕ್ಕೆ ಕಜೆ ಕೊಚ್ಚಿಲಕ್ಕಿ ಅಶನ. ಮತ್ತೆ ಬೆಂದಿ.. ಮನೆಲಿಯೇ ಇಪ್ಪ ಬಗೆಗಳಲ್ಲಿ ಎಂತಾರು ಮಾಡುವ ಹೇದು ಕಂಡತ್ತು ಸತ್ಯಣ್ಣಂಗೆ. ಪೇಟೆಲಿ ಇಪ್ಪವಕ್ಕೆ ಪೇಟೆದರ ತಿಂದು ಬೊಡುದಿಕ್ಕಿದಾ. ಹಾಂಗೆ ಜಾಲಕರೇಲಿ ಇದ್ದ ನುಗ್ಗೆ ಮರಂದ ನುಗ್ಗೆ ಸೊಪ್ಪು ತಂದು ಅಜಪ್ಪಿ ಮಡಗಿದ. ಅದರ ನುಗ್ಗೆಸೊಪ್ಪು ತಾಳು ಮಾಡಿದ್ಸಡ. ಹೇಂಗೆ ಕೇಟ್ರೆ-
1 ಕಟ್ಟು ನುಗ್ಗೆ ಸೊಪ್ಪಿನ ಲಾಯ್ಕಲ್ಲಿ ತೊಳದು, ಸಣ್ಣಕ್ಕೆ ಕೊಚ್ಚೆಕ್ಕು. ಬಾಣಲೆಲಿ 2 ಚಮಚ ತೆಂಗಿನೆಣ್ಣೆ ಹಾಕಿ ರಜಾ ಹೊರಿಯೆಕ್ಕು. ಅದಾಗಿ 2 ಚಮಚ ಸಾಸಮೆ, 3 ಚಮಚ ಉದ್ದಿನಬೇಳೆ, 1 ಕೆಂಪು ಮೆಣಸು ಹಾಕಿ, 2 ಚಮಚ ತೆಂಗಿನೆಣ್ಣೆ ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಹೊರುದು ಮಡಗಿದ ನುಗ್ಗೆಸೊಪ್ಪಿನ ಹಾಕೆಕ್ಕು. 1/2 ಕಪ್ ನೀರು ಹಾಕಿ, 1 ಚಮಚ ಉಪ್ಪು, 1 ಚಮಚ ಮೆಣಸಿನೊಡಿ, 1/2 ಅಚ್ಚು ಬೆಲ್ಲ, 1/2 ಚಮಚ ಅರಶಿನೊಡಿ ಹಾಕಿ ಮೊಗಚ್ಚೆಕ್ಕು. ನೀರು ಆರಿಅಪ್ಪಗ 1/2 ಕಪ್ ತೆಂಗಿನ ತುರಿ ಹಾಕಿ ಇಳಿಶಿರೆ ನುಗ್ಗೆಸೊಪ್ಪು ತಾಳು ರೆಡಿ.
ಕುಡು ಚಟ್ನಿ :
ಓ.. ಮನ್ನೆ ಕಕ್ಕೆಪ್ಪಾಡಿಲಿ ಒಂದಿಕ್ಕೆ ಹೋದಲ್ಲಿ ಸತ್ಯಣ್ಣಂಗೆ ಕುಡು ದಾನಲ್ಲಿ ಸಿಕ್ಕಿದ್ದತ್ತಡ. ಅದರ ಚಟ್ನಿ ಕಡವ ಹೇದು ಅದರ ತೆಯಾರಿ ಮಾಡಿದನಡ. ಕುಡು(ಹುರುಳಿ) ಚಟ್ನಿ. ಹೇಂಗೆ ಕೇಟ್ರೆ-
50 ಗ್ರಾಂ ಕುಡು ತೆಕ್ಕೊಂಡು ಲಾಯ್ಕ ಹೊರುದು, 6-7 ಕೆಂಪು ಮೆಣಸು, 2 ಚಮಚ ತೆಂಗಿನೆಣ್ಣೆ ಹಾಕಿ ಹೊರುದು ಮಡಗಿಕ್ಕಿ, 1 ಕಪ್ ತೆಂಗಿನತುರಿಯೊಟ್ಟಿಂಗೆ 2 ಚಮಚ ಉಪ್ಪು, ರೆಜ್ಜ ಹುಳಿ, ಹೊರುದ ಕುಡು ಹಾಕಿ ಗಟ್ಟಿಗೆ ಕಡದು ತೆಗದರೆ ಕುಡು ಚಟ್ನಿ ರೆಡಿ.
ಮೆಂತೆ ತಂಬುಳಿ:
ದನಗ ಇಪ್ಪಲ್ಲಿ ಹಾಲು ಮಜ್ಜಿಗೆಗೆ ಕೊರತೆ ಇರನ್ನೇ. ಮನಾರಲ್ಲೆ ತಂಬುಳಿ ಕಡದರೆಂತ ಹೇದು ಒಂದು ಮೆಂತೆ ತಂಬುಳಿ ಕಡದನಡ ಸತ್ಯಣ್ಣ. ಮೆಂತೆ ತಂಬುಳಿ. ಅದೇಂಗೆ ಮಾಡ್ಸು ಕೇಟ್ರೆ-
1 ಚಮಚ ಮೆಂತೆಯ ರಜ್ಜ ತೆಂಗಿನೆಣ್ಣೆ ಹಾಕಿ ಕೆಂಪಪ್ಪನ್ನಾರ ಹೊರಿಯೆಕ್ಕು.1 ಕಪ್ ತೆಂಗಿನತುರಿಗೆ 1 ಹಸಿಮೆಣಸು, 1 ಚಮಚ ಉಪ್ಪು, 1 ಸಣ್ಣ ತುಂಡು ಬೆಲ್ಲ ಹಾಕಿ ನುಣ್ಣಂಗೆ ಕಡೆಯೆಕ್ಕು. ಕಡವಲೆ ಬೇಕಾದಷ್ಟು ನೀರು ಮಾಂತ್ರ ಹಾಕಿಯೊಳ್ಳಿ. ಮತ್ತೆ 2 ಕಪ್ ಮಜ್ಜಿಗೆ ಹಾಕಿ ತೆಳ್ಳಗೆ ಮಾಡಿ. 1 ಚಮಚ ಸಾಸಮೆ,1 ಕೆಂಪುಮೆಣಸು, 1 ಚಮಚ ತೆಂಗಿನೆಣ್ಣೆ ಹಾಕಿ ಒಗ್ಗರಣೆ ಕೊಟ್ರೆ ಮೆಂತೆ ತಂಬುಳಿ ರೆಡಿ.
ಕಿತ್ತಳೆ ಹಣ್ಣಿನ ಚೋಲಿಯ ಗೊಜ್ಜಿ :
ಸತ್ಯಣ್ಣನಲ್ಲಿಗೆ ಬಪ್ಪಗ ಸೊಸೆ ಕಾಲಿ ಕೈಲಿ ಬಕ್ಕೋ?! ಬೇಗಿಲಿ ಒಂದು ತೊಟ್ಟೆ ಕಿತ್ತಾಳೆ ಹಣ್ಣು ತಂದಿತ್ತಿದ್ದು. ಕಿತ್ತಳೆ ಹಣ್ಣು ತಂದದರ ಮಾಣಿಗೂ ಕೊಟ್ಟು ಎಲ್ಲೋರಿಂಗೂ ತಿಂದಾಗಿತ್ತು. ಚೋಲಿಯ ಇಡ್ಕದ್ದೆ ಸತ್ಯಣ್ಣ ಮಡಿಕ್ಕೊಂಡಿತ್ತಿದ್ದ. ಇದರ ಗೊಜ್ಜಿ ಲಾಯ್ಕಾವುತ್ತಿದಾ. ಮಾಡ್ತೇಂಗೆ ಕೇಟ್ರೆ-
2 ಕಿತ್ತಳೆಹಣ್ಣುಗಳದ್ದು ಚೋಲಿಯ ಸಣ್ಣಕೆ ಕೊಚ್ಚಿ, ರೆಜಾ ತುಪ್ಪಲ್ಲಿ ಲಾಯ್ಕ ಕಾಸೆಕ್ಕು. 2 ಚಮಚ ಹುಳಿಯ ಗಿವುಂಚಿ ನೀರು ತೆಗದು ಮಡಗೆಕ್ಕು. 1 ಅಚ್ಚು ಬೆಲ್ಲ ಹೊಡಿ ಮಾಡಿ ಹುಳಿಯ ನೀರಿಂಗೆ ಹಾಕಿ ಕಲಸೆಕ್ಕು. 2 ಚಮಚ ಉಪ್ಪು ಹಾಕಿ. ಹೊರುದ ಕಿತ್ತಳೆಹಣ್ಣುಗಳ ಚೋಲಿಯೊಟ್ಟಿಂಗೆ ಹಾಕಿ ಲಾಯ್ಕಲ್ಲಿ ಕಲಸಿ ರೆಜಾ ಕೊದಿಶಿ ಬೇಶೆಕ್ಕು. ಸಾಸಮೆ ಮತ್ತೆ 1 ಕೆಂಪು ಮೆಣಸು ಮುರುದು ತೆಂಗಿನೆಣ್ಣೆ ಹಾಕಿ ಒಗ್ಗರಣೆ ಕೊಟ್ರೆ ಕಿತ್ತಳೆ ಚೋಲಿ ಗೊಜ್ಜಿ ರೆಡಿ.
ಕುಂಬಳಕಾಯಿ ಪಾಚ:
ಮದ್ಯಾಹ್ನಕ್ಕೆ ಊಟಕ್ಕೆ ಕುಂಬಳಕಾಯಿ ಪಾಚ ಮಾಡುವ ಹೇಳಿ ಕಂಡತ್ತಡ ಸತ್ಯಣ್ಣಂಗೆ. ರಂಗಂಗೆ ಹೇಳಿ ಅರ್ಧ ಕೆ.ಜಿ.ತೂಕದಷ್ಟು ಕುಂಬಳಕಾಯಿಯ ಮೇಲಾಣ ಚೋಲಿ ತೆಗೆದು, ಮತ್ತೆ ತಿರುಳನ್ನೂ ತೆಗೆದು ತುರಿಮಣೆಲಿ ತುರಿವಲೆ ಹೇಳಿದ. 2 ಹಸಿ ತೆಂಗಿನಕಾಯಿಯ ಹಾಲು ತೆಗದು ಮಡುಗುಲೆ ಹೇಳಿದ. (2 ಗ್ಳಾಸು ದಪ್ಪಹಾಲು ತೆಗೆದು ಬೇರೆಯೇ ಮಡುಗೆಕ್ಕು) 1 ಕಪ್ ಬೆಳ್ತಿಗೆ ಅಕ್ಕಿಯ ಬೊದುಲಿಸಿದ್ದದರ ನುಣ್ಣಂಗೆ ಕಡದು ಮಡುಗಿದ ರಂಗ ಸತ್ಯಣ್ಣ ಹೇಳೆಕ್ಕಾದರೆ ಮದಲೇ! 😉 ದಪ್ಪ ಹಾಲು ತೆಗದು ಮತ್ತಾಣ ತೆಳ್ಳಂಗೆ ಹಾಲಿನ ಕೊದಿವಲೆ ಮಡಗಿ, ಕೊದುದಪ್ಪಗ ತುರುದು ಮಡಗಿದ ಕುಂಬಳಕಾಯಿಯ ಹಾಕಿ, ಬೆಂದಪ್ಪಗ 1 ಕೆ.ಜಿ.ಸಕ್ಕರೆ ಹಾಕಿ, ಕೊದುದ ಮತ್ತೆ ಅಕ್ಕಿ ಹಿಟ್ಟಿನ ಹಾಕಿ ಕೊದಿಶಿದ ಮತ್ತೆ ಒಲೆಂದ ಇಳಿಶಿ ದಪ್ಪ ಹಾಲಿನ ಹಾಕಿಕ್ಕಿ,ರಜ್ಜ ಏಲಕ್ಕಿ ಹೊಡಿಯೂ, ಬೀಜದ ಬೊಂಡುದೇ ಹಾಕಿರೆ ಕುಂಬಳಕಾಯಿ ಪಾಚ ರೆಡಿ!
ಹೊತ್ತಪ್ಪಗಾಣ ಕಾಪಿಗೆ ಚಟ್ಟಂಬಡೆ:
ಇದರ ಮಾಡ್ಲೆ ರಂಗಣ್ಣಂಗೆ ಸರ್ವೀಸು ಇಪ್ಪ ಕಾರಣ ಸತ್ಯಣ್ಣ ಪುಳ್ಳಿಯೊಟ್ಟಿಂಗೆ ಆಡಿಯೊಂಡು ಕೂದ 😀
1/4 ಕೆ.ಜಿ.ಕಡ್ಲೆ ಬೇಳೆ, 50 ಗ್ರಾಂ ಉದ್ದಿನಬೇಳೆ, 50 ಗ್ರಾಂ ತೊಗ್ರಿಬೇಳೆಯ ಬೊದುಲ್ಸೆಕ್ಕು. 7-8 ಕಾಯಿಮೆಣಸು, ಒಂದು ತುಂಡು ಶುಂಠಿಯನ್ನು ಸಣ್ಣಕ್ಕೆ ಕೊಚ್ಚೆಕ್ಕು. ಬೊದುಲಿದ ಬೇಳೆಗಳ ನೀರು ತೆಗದು 3 ಚಮಚ ಉಪ್ಪಿನೊಟ್ಟಿಂಗೆ ಗಟ್ಟಿಗೆ ಕಡೆಯೆಕ್ಕು. ಸಣ್ಣ ಅಪ್ಪಲಾಗ ತರಿತರಿ ಆದರೆ ಆತು! ಹಿಟ್ಟು ತೆಗದ ಮೇಗೆ ಅದಕ್ಕೆ ಕೊಚ್ಚಿದ ಕಾಯಿಮೆಣಸು ಮತ್ತೆ ಶುಂಠಿಯ ಹಾಕಿ ಕಲಸೆಕ್ಕು. ರೆಜ್ಜ ಒಣ ಕೊಬ್ಬರಿ ತುಂಡು ಮಾಡಿ ಹಾಕಿದರೆ ಪಷ್ಟಾವುತ್ತು. ಬಾಣಲೆಲಿ ಎಣ್ಣೆ ಮಡಗಿ, ಎಣ್ಣೆ ಕಾದಪ್ಪಗ ಹಿಟ್ಟಿನ ಉಂಡೆಮಾಡಿ, ಅದರ ಕೈಲಿ ಚಪ್ಪಟೆ ತಟ್ಟಿ ಎಣ್ಣೆಗೆ ಇಳಿಶೆಕ್ಕು.ಲಾಯ್ಕ ಕಂದು ಬಣ್ಣ ಬಪ್ಪಗ ತೆಗೆಯೆಕ್ಕು. ಹೊತ್ತಪ್ಪಗಾಣ ಚಾಯದೊಟ್ಟಿಂಗೆ ಎಲ್ಲೋರೂ ಕೂದು ಗರಿಗರಿಯಾಗಿ ಇಪ್ಪಗಳೇ ತಿಂದವು.
ಇರುಳಾಣ ಊಟಕ್ಕೆ
ಅಡಿಗೆ ಸತ್ಯಣ್ಣಂಗೆ ಮೂರ್ಸಂಧಿ ಅಪ್ಪಗ ಒಂದರಿ ಆಚಕರೆ ಪದ್ಯಂಬಟ್ಟನಲ್ಲಿಗೆ ಎಂತದೋ ಮಾತಾಡ್ಳೆ ಹೋಪಲೆ ಇತ್ತಿದ್ದ ಕಾರಣ ಇರುಳಾಣ ಊಟದ ಏರ್ಪಾಡು ಶಾರದಕ್ಕ, ರಮ್ಯ, ಸೊಸೆ ಸೇರಿಗೊಂಡು ಮಾಡಿದ್ಸಡ. ಎಂತರ?! ದೀಗುಜ್ಜೆ ತಾಳು, ಮುಂಡಿ ಬೆಳಿ ಮೇಲಾರ (ಕಡ್ಳೆ ಹಾಕಿ). ಮತ್ತೆ ಮಧ್ಯಾಹ್ನದ್ದು ಒಳುಗಡೆ ಇರುಳಿಂಗೆ ಮುಂದುವರಿಕೆ.
ಮರದಿನ ಉದಿಯಪ್ಪಗ
ಮರದಿನ ಉದಿಯಪ್ಪಗ ಅಡಿಗೆ ಸತ್ಯಣ್ಣಂಗೆ ವಿಟ್ಳಕ್ಕೆ ಹೋಪ ಕೆಲಸ ಇತ್ತಿದ್ದ ಕಾರಣ ಎಂಟುಗಂಟಗೇ ಹೆರಟಾಯ್ದು. ಶಾರದಕ್ಕ ಮಾಡಿದ ತೆಳ್ಳವು, ಶುಂಠಿ ಚಟ್ನಿ ತಿಂದಿಕ್ಕಿ ಬೈಕಿಲಿ ಸತ್ಯಣ್ಣನೊಟ್ಟಿಂಗೆ ಪೆರ್ಲವರೇಂಗೆ ಬಂದ ಸೊಸೆ,ಮಾಣಿಯ ಎದಗೆ ಸಾಂಚಿಸಿಯೊಂಡು ಕುಂಬ್ಳೆ ಬಸ್ಸು ಹಿಡುದತ್ತು, ಸತ್ಯಣ್ಣನ ಬೈಕು ವಿಟ್ಳ ಹೊಡೆಂಗೆ ಓಡಿತ್ತು.
“`
ಅಂಬಗ ಅಡಿಗೆ ಸತ್ಯಣ್ಣಂದು ಈ ಸರ್ತಿ ಚಟ್ನಿಗೆ ಒಗ್ಗರಣೆ ಹಾಕಿದ್ಸು ಮಾತ್ರವೇ ಆತೋ?! ಬೇರೆ ಎಂತ್ಸೂ ಇಲ್ಲ್ಯೋದು ಕೇಳ್ತೀರೋ?! ಅಲ್ಲ.. ಅದೂ ಇದ್ದು ಇದಾ –
1
ಹೆಂಡತಿಗೆ ಏವತ್ತೂ ನಾನ್ನೂರು ರುಪಾಯಿಗೆ ಸೀರೆ ತೆಗವ ಒಬ್ಬ ಬಾವಯ್ಯ ಹೆಂಡತಿಯ ಕೋಡಿಗೆ ಎಂಟ್ನೂರು ರುಪಾಯಿ ಸೀರೆಯ ನಾಕು ಕಂತಿಲ್ಲಿ ಚುಕ್ತಾ ಮಾಡ್ತೆ ಹೇದು ಸೀರೆ ತೆಗದನಡ ಅಂಗುಡಿಂದ
ಹೆಂಡತಿಯಾರು ಸುಮ್ಮನೆ ಇಪ್ಪಲಾವ್ತಿತ್ತಿಲ್ಲ್ಯ! – ಬಂದೋರತ್ರೆಲ್ಲ ತೋರ್ಸಿಯೊಂಡು ಕೂದತ್ತು – “ಗೆಂಡ° ಕಂತಿಲ್ಲಿ ತೆಗದ ಸೀರೆ”
ಅಡಿಗೆ ಕೊಟ್ಟಗೆಲಿತ್ತಿದ್ದ ಸತ್ಯಣ್ಣಂಗೆ ಇದರ ಕಂಡಪ್ಪಗ ಒಂದರಿ ಗ್ರೇಶಿಹೋತು – ಎಂಟ್ನೂರರ ಸೀರೆಯ ನಾಕು ಕಂತಿಲ್ಲಿ ತೆಗದ ಈ ಮನುಷ್ಯ ಮುಂದೆ ಮಗುವಿಂಗೆ ಎಂಟಾಣೆ ಚೋಕ್ಲೇಟು ತೆಗವಲೆ ಎಷ್ಟು ಕಂತು ಕೇಳುಗು ! 😀
~~
2
ಅಡಿಗೆ ಸತ್ಯಣ್ಣನೂ, ಸಕಾಯಿ ರಂಗಣ್ಣನೂ ಅನುಪ್ಪತ್ಯ ಒಂದಕ್ಕೆ ದೊಡ್ಡ ಪೇಟಗೆ ಹೋದ್ದಡ ಒಂದರಿ
ದೊಡ್ಡ ಪೇಟೆಲಿಪ್ಪ ದೊಡಾ ಭಾವನ ಮನೆಗೆ ಹೋಯೇಕಾರೆ ದೊಡ್ಡಾ ಪೇಟಾ ದೊಡ್ಡಾ ವಿಮಾನ ನಿಲ್ದಾಣ ದಾಂಟಿ ಹೋಯೇಕ್ಕಡ
ಮಾರ್ಗ ಕರೇಲಿಯೇ ಆ ದೊಡ್ಡಾ ವಿಮಾನ ನಿಲ್ದಾಣ ಇಪ್ಪಕಾರಣ ಮಾರ್ಗಂದಲೇ ವಿಮಾನ ನಿಲ್ದಾಣ ಕಾಂಬಲೆಡಿತ್ತು
ಸತ್ಯಣ್ಣನೂ ರಂಗಣ್ಣನೂ ಅಲ್ಲೆ ಕೂಡಿ ಹೋಪಗ ವಿಮಾನ ಹಾರಿಯೊಂಡು ಹೋಪದು ಕಂಡತ್ತಿಲ್ಲೆ
ವಿಮಾನ ನಿಲ್ದಾಣ ಹತ್ರೆ ಹೆಚ್ಚುಕಮ್ಮಿ ಸಾವಿರದ ಹತ್ರೆ ಬೇರೆ ಬೇರೆ ನಮೂನೆ ಕಾರುಗೊ ನಿಂದೊಂಡಿಪ್ಪದು ಕಂಡತ್ತು
ವಿಮಾನ ನಿಲ್ದಾಣಲ್ಲಿ ಅಷ್ಟು ಕಾರುಗಳ ಕಂಡಪ್ಪಗ ರಂಗಣ್ಣಂಗೊಂದು ಸಂಶಯ ಹುಟ್ಟಿತ್ತು
“ಅಲ್ಲ ಮಾವ°, ವಿಮಾನಲ್ಲಿ ಹೋಪದು ಹೇದರೆ ಎಂತರ ಈ ಕಾರಿನೊಳ ಕೂದೊಂಡು ವಿಮಾನದೊಳ ಹೋಗಿ ಕೂಬದ?!”- ರಂಗಣ್ಣನ ಸಂಶಯ
ಸತ್ಯಣ್ಣ° ಹೇದ°- “ಅಲ್ಲ ರಂಗೋ!, ವಿಮಾನಲ್ಲಿ ಬಂದೋರಿಂಗೆ ಕಾರು ಪ್ರೀ ಕೊಡ್ತವಡ. ಹೇಂಗೆ ಹೋವ್ತೆಯೋ?! 😀
**
3
ಅಡಿಗೆ ಸತ್ಯಣ್ಣಂಗೆ ಪುರುಸೊತ್ತು ಸಿಕ್ಕುವಾಗ ಪೇಪರು ಸಿಕ್ಕಿರೆ ಓದುತ್ತ ಕ್ರಮ ಇದ್ದು.
ಅದು ಇಂದ್ರಾಣದ್ದೇ ಆಯೇಕು ಹೇದೇನಿಲ್ಲೆ. ಏವ ತಾರೀಕೂ ಅಕ್ಕು ಏವ ಇಸವಿಯೂ ಅಕ್ಕು.
ಮನ್ನೆ ಹಾಂಗೆ ತಿತಿ ಅಡಿಗೆ ಆಯಿಕ್ಕಿ ಅಂತೇ ಕೂದೊಂಡಿಪ್ಪಗ ಏವುದೋ ಒಂದು ಪೇಪರು ತಿರುಗೊಸಿಯೊಂಡಿಪ್ಪಗ ಕಣ್ಣಿಂಗೆ ಕಂಡತ್ತು –
“ಕಂಪ್ಯೂಟ್ರು ಕೆಲಸಕ್ಕೆ ಜೆನ ಬೇಕಾಗಿದ್ದಾರೆ. ವಿದ್ಯಾರ್ಹತೆ ಅಗತ್ಯ ಇಲ್ಲ, ಕಂಪ್ಯೂಟ್ರು ಗೊಂತಿದ್ರೆ ಸಾಕು. ಮಾಸಿಕ ವೇತನ 5000/-”
ಪೇಪರತ್ತೆ ಮಡುಸಿಮಡಿಗಿಕ್ಕಿ ಸತ್ಯಣ್ಣ ಹೇದ° ಈ ಐದುಸಾವಿರಕ್ಕೆ ಆ ಕೆಲಸಕ್ಕೆ ಹೋವ್ತಕ್ಕಿಂತ ತಿಂಗಳಿಂಗೆ ನಾಕು ತಿತಿ ಪರಾದಿನಕ್ಕೆ, ಸುಧರಿಕಗೆ, ಸಕಾಯಕ್ಕೆ ಹೋದರೆ 15000 ಮಾಡ್ಳಕ್ಕನ್ನೇ ! 😀
**
4
ಅಡಿಗೆ ಸತ್ಯಣ್ಣನೊಟ್ಟಿಂಗೆ ಸಕಾಯಿ ರಂಗಣ್ಣ ಸೇರಿ ರಜವೇ ಸಮಯ ಆಗಿತ್ತಟ್ಟೆ
ಸಕಾಯಿ ಹೇದಮತ್ತೆ ಸುರುಸುರುವಿಲ್ಲ್ಯೇ ಉಪ್ಪುಮೆಣಸು ಬಾಗ ಬೆಂದ ಹಾಳಿತ ಎಲ್ಲ ನೋಡ್ಳೆ ಇರ್ತಿಲ್ಲೆ ಅದಾ
ಅಂದು ಕೊಲ್ಲಂಪಾರೆಲಿ ಶಿವಪೂಜೆ ನಾಂದ್ರೋಡಿಲ್ಲಿಯೂ ಅದೇ ದಿನ ಶಿವಪೂಜೆ
ಎರಡೂ ಒಂದೇ ದಿನ ಬಂದ್ರೆ ಸತ್ಯಣ್ಣ ಮಾಡ್ಸೆಂತರ!
ಹಾಂಗಾಗಿ ನಾಂದ್ರೋಡಿಂಗೆ ಸತ್ಯಣ್ಣನೂ ಏಳ್ಕಾನ ಏಂಕಟನೂ, ಕೊಲ್ಲಂಪಾರಾಗೆ ರಂಗಣ್ಣನೂ ವಾಂತಿಚ್ಚಾಲು ಗೆಣಪ್ಪಣ್ಣನೂ ಹೇದು ಒರ್ಮೈಸಿಗೊಂಡವು
ಕೊಲ್ಲಂಪಾರೆಲಿ ಅಂದು ಉದಿಯಪ್ಪಂಗೆ ಸಜ್ಜಿಗೆ ಇಡ್ಳಿಯೂ, ಶುಂಠಿಚಟ್ನಿಯೂ
ಉದಿಯಪ್ಪಾಣದ್ದು ಮುಗಿಶಿಕ್ಕಿ ಮಧ್ಯಾಹ್ನದ್ದು ಸುರುವಾಯ್ದು ರಂಗಣ್ಣಂಗೆ
ಅಷ್ಟಪ್ಪಗ ಒಂದು ಸಂಶಯ ಬಂತು ಎಂತ ಮಾಡೇಕು ಹೇದು ಗೊಂತಾಯ್ದಿಲ್ಲೆ.
ಕೂಡ್ಳೆ ಕೊಲ್ಲಂಪಾರೆ ಅಜ್ಜನತ್ರೆ ಕೇಟು ನಾಂದ್ರೋಡಿಂಗೆ ಫೋನು ಮಾಡಿದ ಅಡಿಗೆ ಸತ್ಯಣ್ಣಮಾವನತ್ರೆ ಒಂದರಿ ಮಾತಾಡೆಕ್ಕಾತು ಹೇದು
ಆಚೊಡೆಂದ ಸತ್ಯಣ್ಣ ಬಂದು ಫೋನ ಕೈ ಬಾಯಿ ಹತ್ರೆ ಮಡಗಿ ಹರಿ ಓಂ ಹೇದಪ್ಪದ್ದೆ ರಂಗಣ್ಣ ಹೇದ° – “ಮಾವ°, ಮೇಲಾರಕ್ಕೆ ಶುಂಠಿ ಹಾಕಲಿದ್ದೋ?!”
ಸತ್ಯಣ್ಣಂಗೆ ಅಂದಾಜಿ ಆತು, ಹೇದ° – “ಬೇಡ, ಏವುತ್ರಾಣಂಗೆ ಮಾಡಿರೆ ಸಾಕು. ಎಂತ ಉದಿಯಪ್ಪಾಣ ಚಟ್ನಿ ಕವಂಗಲ್ಲಿ ಅಲ್ಪ ಉಳುದ್ದೋ??!” 😀
**
5
ಅಡಿಗೆ ಸತ್ಯಣ್ಣಂಗೆ ಅಂದು ಎಲ್ಲಿಗೋ ಹೋಪ ರಜಾ ತುರ್ತು ಕೆಲಸ ಇತ್ತಿದ್ದರಿಂದ ಅಂಗಿ ಸುರ್ಕೊಂಡು ಹೆರಟು ನಿಂದ
ಅಷ್ಟಪ್ಪಗ ಶಾರದಕ್ಕ – “ಈ ಸರ್ತಿಯಾಣ ರೇಶನು ಅಕ್ಕಿ ಇಂದು ತರೆಕ್ಕಾತನ್ನೇ” ಹೇತು
ಸತ್ಯಣ್ಣ ಹೋಪವ ಇರುಳಕ್ಕು ಬಪ್ಪಗ. ರೇಶನು ಅಂಗಡಿಗೆ ಇಂದು ಹೋಗದ್ರೆ ಮತ್ತೆ ಒಂದು ವಾರಕ್ಕೆ ಪುರುಸೊತ್ತಿಲ್ಲೆ
ಹಾಂಗಾಗಿ ಸತ್ಯಣ್ಣ ರೇಶನು ಕಾರ್ಡಿನ ರಂಗಣ್ಣನೈಲಿ ಕೊಟ್ಟಿಕ್ಕಿ ಹೋಗಿ ರೇಶನು ಅಕ್ಕು ತಪ್ಪಲೆಡಿಗೋ ಹೇದು ಕೇಟ°
ಇದೆಂತರ ದೊಡ್ಡ ಕೆಲಸ ಹೇದು ಗ್ರೇಶಿದನೋ ಅದಲ್ಲದ್ದೆ ಮತ್ತೆಂತರೆನಗೆ ಕೆಲಸ ಗ್ರೇಶಿದನೋ – ‘ಆತು ಧಾರಳ’ ಹೇದೊಂಡು ರೇಶನು ಕಾರ್ಡು ಕೈಲಿ ತೆಕ್ಕೊಂಡ ಸತ್ಯಣ್ಣನ ಕೈಂದ
ರೇಶನು ಕಾರ್ಡಿನ ಹಿಂದಾಣ ಹೊಡೆ ತಿರುಗಿಸಿದವನೇ ರಂಗಣ್ಣ – “ಇದೆಂತ ಮಾವ ನಿಂಗಳ ಪಟ ಹೀಂಗೊಂದು ಬಂದ್ಸು ಇದರ್ಲಿ?!”
ಸತ್ಯಣ್ಣ° ಹೇದ° – “ಅದು ಗವರ್ಮೆಂಟು ಅಕ್ಕಿ ಹಾಂಗೇ ಇಕ್ಕಟ್ಟೆಯೋ ಗವರ್ಮೆಂಟು ಪಟಂಗಳುದೇ. ಬೇಕಾರೆ ನಾಡದ್ದಿಂಗೆ ನಿನ್ನ ಆಧಾರು ಕಾರ್ಡು ಬಪ್ಪಗ ನೋಡು 😀
**
6
ತುಪ್ಪೆಕ್ಕಲ್ಲ ಬಟ್ಟಮಾವಂಗೆ ಏಕ್ಸಿಡೆಂಟು ಆಯ್ದಡ ಹೇಳ್ತ ವರ್ತಮಾನ ಬೈಲಿನ ಮೂಲಕ ಮುಣ್ಚಿಕ್ಕಾನ ಭಾವಂಗೂ ಗೊಂತಾತು
ಸತ್ಯಣ್ಣ ಬಟ್ಟಮಾವನ ಕಾಂಬಲೆ ಹೋದ ದಿನಾವೇ ಮುಣ್ಚಿಕ್ಕಾನ ಭಾವನೂ ಬಟ್ಟಮಾವನ ನೋಡ್ಳೆ ಹೋದ್ದಾತು.
ಸತ್ಯಣ್ಣ ಅಲ್ಲಿಗೆತ್ತೆಕ್ಕಾರೆ ಮದಲೆ ಪೆರುವದ ಮಾವ° ಉದಿಯಪ್ಪಗ ಸೊಸೈಟಿಗೆ ಹಾಲು ಕೊಡ್ಳೆ ಬಂದವು ಹಾಂಗೆ ಇಲ್ಲಿ ಒರೇಗೆ ಬಂದು ಮಾತಾಡ್ಸಿಕ್ಕಿ ಹೆರಡ್ಳೆ ಗುಡ್ಡೆಬುಡಲ್ಲಿ ಸ್ಕೂಟರಿಂಗೆ ತೊಳಿವದು ಕಂಡತ್ತು.
ಮದಾಲು ಹೋಗಿತ್ತಿದ್ದ ಸತ್ಯಣ್ಣ ಬಟ್ಟಮಾವನ, ಮನೆಯೋರ ಮಾತಾಡ್ಸಿಕ್ಕಿ ಬಟ್ಟಜ್ಜಿ ಕೊಟ್ಟ ಕಾಪಿ ಬಾಳೆಣ್ಣು ಮನಾರ ಮಾಡಿಕ್ಕಿ ಇನ್ನೆಂತ ಹೆರಡುತ್ತೆ ಹೇದು ಏಳ್ಳೆ ಅಂದಾಜಿ ಮಾಡ್ವಾಗ ಜಾಲಬುಡಲ್ಲಿ ಹನಿಕ್ಕರೆಲಿ ಮೆಟ್ಟ ಪೀಂಕಿಸಿಯೊಂಡಿತ್ತಿದ್ದ ಮುಣ್ಚಿಕ್ಕಾನ ಬಾವನ ಸೆಮ್ಮುತ್ತ ಅಜನೆ ಕೇಟತ್ತು
ಹಾಂಗೆ ಮುಣ್ಚಿಕ್ಕಾನ ಬಾವನತ್ರೆಯೂ ಮಾತಾಡಿದಾಂಗಾತು ಹೇದು ಸತ್ಯಣ್ಣ ಮತ್ತೆ ರಜಾ ಹೊತ್ತಂಗೆ ಕುರ್ಚಿ ಗಟ್ಟಿ ಮಾಡಿದ°
ಆಸರಿಂಗೆ ಕುಡುಕ್ಕೊಂಡಿಪ್ಪಾಂಗೆ ಮುಣ್ಚಿಕ್ಕಾನ ಬಾವ° ಕೇಟ° – “ಅದು ಹೇಂಗೆ ಬಟ್ಟಮಾವ ಏಕ್ಸಿಡೆಂಟು ಆದ್ದು?!”
ಸತ್ಯಣ್ಣ ಹೇದ° – ಏ ಭಾವ… ಎಂತಾದ್ದು ಬಟ್ಟಮಾವ ಹೇದು ಬೇಕಾರೆ ಕೇಳು., ಹೇಂಗಾದ್ದು ಹೇದು ಇನ್ನೀಗ ಬಟ್ಟಮಾವಂಗೆ ಅದರ ಏಕುಟು ಮಾಡಿ ತೋರ್ಸುಲೆಡಿಗ! ಅಲ್ಲದ್ದೆ ಹಂದಲೆಡಿಯ ಹೇಯ್ದವು ದಾಕುಟ್ರಕ್ಕೊ 😀
**

*** 😀 😀 😀 ***

8 thoughts on “"ಅಡಿಗೆ ಸತ್ಯಣ್ಣ" – 45 (ಅಡಿಗೆ ವಿಶೇಷಾಂಕ!)

  1. ಸತ್ಯಣ್ಣನ ಹೊಸರುಚಿಗೊ ಸೂಪರ್ ಇದ್ದು. ವೇಣಿ ಅಕ್ಕಂಗೂ, ಬಂಡಾಡಿ ಅಜ್ಜಿಗೂ ಸ್ಪರ್ಧಗೆ ಇಳುದ ಹಾಂಗೆ ಕಂಡತ್ತು. ೫೦೦೦ ಸಂಬಳದ ಕಂಪ್ಯೂಟರ್ ಕೆಲಸಕ್ಕಿಂತ ೧೫೦೦೦ದ ಪರಿಕರ್ಮಿ/ಸಹಾಯಕ ಕೆಲಸ ಒಳ್ಳೆದು ಹೇಳಿದ್ದು ನೈಜತೆಗೆ ಹತ್ರ ಇದ್ದು. ಸತ್ಯಣ್ಣನ ಕೆಲವು ಖಡಕ್ ಮಾತುಗೊ ತುಂಬಾ ಇಷ್ಟ ಆವ್ತು.

  2. ಅಡಿಗೆ ಸತ್ಯಣ್ಣ ಎಲ್ಲಿಗಾರ್ದರೂ ಬಿನ್ನೆರು ಕಟ್ಟಿದ್ದನೋ ಹೇಂಗೆ?.. . 23 ಕ್ಕೆ ಬೈಲಿಲಿ ಕಂಡಿದಾಯಿಲ್ಲೆ… 🙁

    1. ಹಾ೦ಗಿರ ,ಹಾಆಪು ಸೆ೦ಚುರಿಗೆ ಸಿಕ್ಸು ಎತ್ತುಗು!!!!!

  3. ——ಗವರ್ಮೆಂಟು ಪಟಂಗಳುದೇ.ಸರ್ಕಾರದ ಕಾರ್ಯವೈಖರಿಯ ತೋರುಸಿದ್ದದು ರೈಸಿದ್ದು.ಪಾಕ ವಿಧಾನ ಕೊಟ್ಟದರಿಂದ ವೇಣಿಯಕ್ಕಂಗೆ ಒಬ್ಬ ಪ್ರತಿಸ್ಪರ್ಧಿ ಬಂದ ಹಾಂಗೆ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×