- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಎಂಗಳ ರಾಮಪ್ಪಚ್ಚಿ ಹುಟ್ಟು ಕೃಷಿಕ. ಒಂದು ಮೂರೋ ನಾಲ್ಕನೆಯೋ ಕ್ಲಾಸು ಕಲ್ತಿರೆಕ್ಕು ಮತ್ತೆ ಶಾಲೆಯ ಮೋರೆ ನೋಡಿದ್ದವಿಲ್ಲೆ ಅಪ್ಪಚ್ಚಿ. ನೋಡದ್ದಿಪ್ಪಲೆ ಮನೆಲಿ ಚೋರಿಂಗೆ ಗೆತಿಯಿಲ್ಲೆ ಹೇಳ್ತ ಕಾರಣ ಅಲ್ಲ ಎಂತಗೇಳಿರೆ ಅಂಬಗಳೇ ರಾಮಪ್ಪಚ್ಚಿಯ ಅಪ್ಪಂಗೆ ಹದಿನೈದು ಕಂಡಿ ಅಡಕ್ಕೆ ಆಯ್ಕೊಂಡಿದ್ದತು. ಮೂರು ಕೂಸುಗಳೇ ಆದ ಮತ್ತೆ ಈ ರಾಮಪ್ಪಚ್ಚಿ ಹುಟ್ಟಿದ್ದೂಳಿ ಮನೇಲಿ ರಾಜಮರ್ಯಾದೆ ಕೇಳೆಕ್ಕಾ? ಇಂತಿಪ್ಪ ರಾಮಪ್ಪಚ್ಚಿ ಶಾಲೆಗೆ ಹೋಗದ್ದಿಪ್ಪಲೆ ಕಾರಣ ಎಂತೇಳಿರೆ ಕೊಂಗಾಟಲ್ಲಿ ಬೆಳದ ಮಾಣಿಗೆ ಅದೊಂದರಿ ಲೆಕ್ಕದ ಟೀಚರ್ ನಿಂಗೆ ಭಾಷೆ ಅರ್ಥ ಆಗುವುದಿಲ್ವ! ಎಷ್ಟು ಸಲ ಹೇಳಿ ಕೊಡುವುದು? ಇಷ್ಟೇ ಹೇಳಿದ್ದದು ಅದರನ್ನೇ ದೊಡ್ಡದು ಮಾಡಿ ಅಪ್ಪನಲ್ಲಿ ಅಯ್ಯ ಆನು ಶಾಲೆಗೆ ಹೋವುತ್ತಿಲ್ಲೆ ಟೀಚರ್ ಸುಮ್ಮನೆ ಬೈತ್ತು ಕಣ್ಣನೀರು ಹಾಕಿದ್ದದೇ ಅಲ್ಲ ಎಂಗಳ ಮಾಣಿ ಕಲ್ತು ಎಂತಪ್ಪಲೆ ಇದ್ದು? ಕೂಸುಗಳನ್ನೂ ಕೊಟ್ಟರೆ ಆಸ್ತಿಯೆಲ್ಲ ಇಂವಂಗೆ, ಹೀಂಗಿಪ್ಪಗ ಆರೋ ಎಂತದೋ ಆ ಟೀಚರಿನ ಬೈಗುಳ ಎನ್ನ ಮಾಣಿ ಕೇಳೆಕ್ಕಾ?’ ರಾಮಪ್ಪಚ್ಚಿಯ ಅಬ್ಬೆ ಮೊಸಳೆ ಕಣ್ಣೀರು ಹಾಕಿದ್ದದೇ ಶಾಲೆಕಂಡು ರಾಮಪ್ಪಚ್ಚಿಯ ಶಾಲೆ ಹೆರ್ಪಾಯಣ ನಿಂದತೂಳಿ ಎಂತಾರೂ ಜೆಂಬ್ರ ಅಪ್ಪಗ ಸಿಕ್ಕುವ ರಾಮಪ್ಪಚ್ಚಿಯ ದೊಡ್ಡಕ್ಕ ಲಕ್ಷ್ಮಿಯತ್ತೆ ಹೇಳ್ತವು.
ಹೀಂಗೆ ಶಾಲೆ ಬಿಟ್ಟ ರಾಮಪ್ಪಚ್ಚಿ ತುಂಡುಕೋಣ ಕಟ್ಟಿಗೊಂಡು ಕೊಟ್ಟಾರೆ ಹಿಡ್ಕೊಂಡು ಅಪ್ಪನ ಹಿಂದೆ ಹೋಗಿ ಹೋಗಿಯೇ ಮರ ಹತ್ತುವ ಕೆಲಸ ಸಾನು ಕಲ್ತು ಮೀಸೆ ಮೂಡ್ತ ಜವ್ವನಿಗ ಅಪ್ಪಗ ತೋಟಕ್ಕೆ ಮದ್ದು ಬಿಡ್ಲೆ ಜೆನ ಬೇಡ ಹೇಳುವಷ್ಟರ ಮಟ್ಟಿನ ಕೃಷಿಕ ಆದ್ದದು ರಾಮಪ್ಪಚ್ಚಿಯ ಅಪ್ಪಂಗೆ ಖುಷಿಯಾದರೆ ಆನು ಹೇಳಿದ್ದು ಕೇಳಿದಿಯನ್ನೇ, ಆ ಟೀಚರಿನ ಬೈಗುಳ ತಿಂದುಗೊಂಡು ಶಾಲೆಗೆ ಕಳಿಸಿದ್ದರೆ ಮಾಣಿ ಪುಸ್ತಕದ ಬದನೆಕಾಯಿ ಕಲಿತ್ತಿತ್ತನೇ ಬಿಟ್ಟು ನಮ್ಮ ಕೈಗೆಲ್ಲಿ ಸಿಕ್ಕುತ್ತಿತ್ತ! ಉದ್ಯೋಗ ಹೇಳಿ ಹೋದರೆ ಇಪ್ಪ ಈ ಜಾಗೆಯ ಚೇಟಂಗೋ ಬೇರಿಗೋ ಕೊಡೆಕ್ಕಾವುತ್ತಿತ್ತು, ಈಗ ನೋಡಿ ಎಂಗಳ ಮಾಣಿ ಯೇವುದರಲ್ಲಿ ಕಡಮ್ಮೆ! ಕೂಸುಗಳ ಹೇಂಗೂ ಕೊಟ್ಟಾತು ಇನ್ನು ಇವಂಗೂ ಒಂದು ಮದುವೆ ಮಾಡ್ಸೆಕ್ಕು ಹೇಳಿದ ರಾಮಪ್ಪಚ್ಚಿಯ ಅಬ್ಬೆ ಅಂತೆ ಕೂಯ್ದವಿಲ್ಲೆ. ದೂರದ ಸಂಬಂಧಿ ಕೃಷ್ಣಭಾವನ ಮಗಳು ಗೌರಿಯ ತಂದು ಕಟ್ಟಿಯೇ ಬಿಟ್ಟತು.
ಗೌರಕ್ಕ ಪಾಪ ಒಳ್ಳೆಯ ಹೆಮ್ಮಕ್ಕೊ. ಅತ್ತೆ ಮಾಂವನ ಕೈಕಾಲು ಹಂದುವನ್ನಾರ ಅದಕ್ಕೆ ಬಂಙ ಗೊಂತಾಯ್ದಿಲ್ಲೆ. ಆದರೆ ಅವೆರಡು ಜೆನವೂ ಹೋದ ಮತ್ತೆ ಗೊಂತಪ್ಪಲೆ ಸುರುವಾತು. ರಾಮಪ್ಪಚ್ಚಿಯವು ಮೂರು ಜೆನಕ್ಕೆ ಒಬ್ಬ ಮಾಣಿಯಾದರೂ ಇತ್ತಿದ್ದ ಆದರೆ ಗೌರಕ್ಕ ಹೆತ್ತದೇ ಒಂದು ಕೂಸು. ನಂತ್ರ ಗರ್ಭಕೋಶಲ್ಲಿ ಗೆಡ್ಡೆ ಬೆಳದ್ದೂಳಿ ತೆಗದಪ್ಪಗ ಒಂದಾದರೂ ಇದ್ದನ್ನೇ ಹೇಳ್ತ ಸಮಾಧಾನ ರಾಮಪ್ಪಚ್ಚಿಗಾದರೆ ಒಬ್ಬ ಮಾಣಿ ಬೇಕಿತ್ತು ಈ ಹದಿನೈದು ಕಂಡಿ ತೋಟಕ್ಕೆ ಹೇಳಿ ಒಳೊಳಂದ ಬೇನೆ ಇಲ್ಲದ್ದೆ ಇಲ್ಲೆ ಗೌರಕ್ಕಂಗೆ. ಎಂತಾರೂ ಆಗಲಿ ಆನು ಹೇಂಗಾರೂ ಶಾಲೆಕಂಡು ಮಗಳಾದರೂ ಓದಿಕ್ಕಿ ಮುಂದೆ ಬರಲಿ, ಆದರೆ ಅದೆಂತದ್ದೋ ದೊಡ್ಡದೊಡ್ಡದು ಕಲುಸುಲೆ ಇಲ್ಲೆ. ಡಿಗ್ರಿ ಆದಾಂಗೆ ಮದುವೆ ಹೇಳ್ತ ಶರ್ತದೊಟ್ಟಿಂಗೆ ಕೂಸಿಂಗೆ ಡಿಗ್ರಿ ಮಾಡಿಸಿಯೂ ಆತು, ಒಳ್ಳೆ ನೆಂಟಸ್ತಿಕೆ ಕೂಡಿ ಬಂದದೂ ಅಪ್ಪಗ ಗೌರಕ್ಕಂಗೆ ಖುಷಿಯೋ ಖುಷಿ. ಆದರೆ ರಾಮಪ್ಪಚ್ಚಿಯ ತಲೆಬೆಶಿ ಎಂತೇಳಿರೆ ಕೂಸಿಂಗೆಪ್ಪ ಮನೆ ಇಪ್ಪದು ಕೊಡೆಯಾಲಲ್ಲಿಯಾದರೂ ಅಳಿಯ ಅಪ್ಪೋನು ಇಪ್ಪದು ಜರ್ಮನಿಲಿ. ಅಷ್ಟು ದೂರಕ್ಕೆ ಇಪ್ಪ ಒಂದು ಮಗಳ ಕಳ್ಸಿರೆ ಮತ್ತೆ ಇಲ್ಲಿ ನಾವೆಂತರ ಮಾಡುದು? ರಾಮಪ್ಪಚ್ಚಿ ಪರಂಚುಲೆ ಸುರು ಮಾಡಿದ್ದದೇ ನಾವೆಂತ ಈಗ ತೊಂಡಂಗೊ ಆಯ್ದಿಲ್ಲೆನ್ನೆ! ಅಂವಂಗೆ ಐದು ವರ್ಷದ ಪ್ರಾಜೆಕ್ಟು ಅದರ ಮುಗಿಸಿಕ್ಕಿ ಅಂವ ಊರಿಲಿ ಸೆಟ್ಲು ಆವುತ್ತಾ ಹೇಳಿ ಅವನ ಅಪ್ಪನೇ ಹೇಳಿದ್ದಲ್ಲದ! ಒಂದೈದು ವರ್ಷ ಹೀಂಗೆ ಬಂದು ಹಾಂಗೆ ಹೋವುತ್ತಿಲ್ಲೆಯ! ಒಳ್ಳೆ ಸಮ್ಮಂದ ಬಪ್ಪಗ ಕೂಸುಗಳ ಕೊಡೆಕ್ಕು, ಈಗ ಎನ್ನನ್ನೇ ನೋಡಿ ನಿಂಗಳಂದ ಒಳ್ಳೆ ಪೊದು ಬಂದರೂ ಅತ್ತೆಮಾಂವನ ನೋಡಿ ಕೊಟ್ಟದು ಅಲ್ಲಿಗೇ ಕುಟುಕಿತು ಗೌರಕ್ಕ. ಆತು ಮಾರಾಯ್ತಿ, ಆನೆಂತ ಹೇಳ್ತಿಲ್ಲೆ ನೋಡ ಮಗಳ ಬಿಟ್ಟಿಕ್ಕಿ ನೀನು ಹೇಂಗೆ ಕೂರ್ತೆಳಿ ರಾಮಪ್ಪಚ್ಚಿ ಹೀಂಗೆ ಹೇಳಿಯಪ್ಪಗ ಮಾತ್ರ ಗೌರಕ್ಕನ ಮೋರೆ ಬಾಡಿದ ದಾಸನ ಹೂಗು.
ಅಂತೂ ಗೌಜಿಲಿ ಮಗಳ ಮದುವೆ ಕಳುದತು, ಮಗಳು ಅಳಿಯ ಜರ್ಮನಿಗೆ ಹೋಗಿಯೂ ಆತು. ಹೀಂಗೆ ಬಂದು ಹಾಂಗೆ ದಿನ ಹೋವುತ್ತು ಹೇಳಿದ ಗೌರಕ್ಕಂಗೆ ಮಾತ್ರ ದಿನಕ್ಕೆ ನಾಲ್ಕು ಸರ್ತಿ ಮಗಳಲ್ಲಿ ಮಾತಾಡಿರೂ ಮುಗಿಯ. ಅದೊಂದರಿ ಪೋನು ಮಾಡಿಯಪ್ಪಗ ಅಬ್ಬೆ ನೀನುದೆ ಅಪ್ಪಂದೆ ಒಂದರಿ ವಿಸಿಟಿಂಗ್ ವೀಸಾಲಿ ಇಲ್ಲಿಗೆ ಬನ್ನಿ, ವ್ಯವಸ್ಥೆ ಮಾಡ್ತೆಯ ಹೇಳಿದ್ದದೇ ಗೌರಕ್ಕಂಗೆ ಸ್ವರ್ಗಕ್ಕೆ ಮೂರು ಗೇಣು. ಬಪ್ಪಲಕ್ಕನ್ನೇ ಮಗಳೇ ಆದರೆ ಅಪ್ಪ ಎಂತ ಹೇಳ್ತವೋ! ಹೇಳಿದ ಗೌರಕ್ಕ ರಾಮಪ್ಪಚ್ಚಿಲಿ ವಿಷಯ ಪ್ರಸ್ತಾಪ ಮಾಡಿಯಪ್ಪಗ ಕೋಪಲ್ಲಿ ಕುದ್ದವು ಅಪ್ಪಚ್ಚಿ. ಇಪ್ಪ ಮನೆ ತೋಟ ಬಿಟ್ಟು ಎಲ್ಲಿಗೆ ಅಪ್ಪನ ಮನಗೆ ಹೋಪದು? ಅಡಕ್ಕೆ ಹಣ್ಣಪ್ಪಲಾತು, ಕಾಯಿ ಕೊಯ್ಸೆಕ್ಕು…..ನೀನು ಬೇಕಾರೆ ಹೋಗು ಎನ್ನ ಒತ್ತಾಯ ಮಾಡೆಡ ತಿಂಬ ದೋಸೆಯ ಅಲ್ಲಿಯೇ ಬಿಟ್ಟಿಕ್ಕಿ ಎದ್ದು ಹೋದ್ದದೇ ಮಗಳಿಂಗೆ ಹಾಂಗೆ ವರದಿ ಒಪ್ಸಿತು ಗೌರಕ್ಕ. ಅಪ್ಪನಲ್ಲಿ ಸ್ವತಃ ಮಗಳೇ ಮಾತಾಡಿರೂ ರಾಮಪ್ಪಚ್ಚಿ ಮಾತ್ರ ಹೋಪಲೆ ಒಪ್ಪಿದ್ದವಿಲ್ಲೆ. ಅಬ್ಬೆಯ ಬೇಕಾರೆ ಕಳ್ಸುತ್ತೆ ಮೋಳೆ ಆದರೆ ಇಪ್ಪತ್ತೇ ದಿನಕ್ಕೆ, ಅದರಂದ ಹೆಚ್ಚು ದಿನ ಅಲ್ಲಿ ಕೂರ್ಸಿರೆ ಎನಗೊಂದು ಬೇಶುಲೂ ಬತ್ತಿಲ್ಲೆ ಇಲ್ಲಿ ಇಪ್ಪ ನಿಜ ಸಂಗತಿ ಬಾಯಿ ಬಿಟ್ಟವು ಮಗಳತ್ರೆ. ಆತಪ್ಪ ಇಪ್ಪತ್ತೇ ದಿನಕ್ಕೆ ವೀಸಾ ಮಾಡ್ಸುತ್ತೆ, ಒಂದರಿ ಅಬ್ಬೆ ಬರಲಿ ದೇಶ ನೋಡಿದಾಂಗೆ ಆವುತ್ತು ಮಗಳಿಂಗೆ ಖುಷಿಯೋ ಖುಷಿ, ಆ ಖುಷಿಯ ಹಾಳು ಮಾಡ್ಲೆ ರಾಮಪ್ಪಚ್ಚಿಗೂ ಮನಸು ಬೈಂದಿಲ್ಲೆ.
ಗೌರತ್ತೆ ಜರ್ಮನಿಗೆ ಹೆರಟು ನಿಂದದು ಈಗ ಸಮಸ್ಯೆ ಅಲ್ಲ. ಹುಟ್ಟಿದ ಲಾಗಾಯ್ತಿಂದ ಮನೆ ತೋಟ ಹೇಳಿಗೊಂಡು ಸುತ್ತಾಮೂಲೆ ಸುಳಿಯಾಮೂಲೆ ಬಂದುಗೊಂಡಿಪ್ಪ ರಾಮಪ್ಪಚ್ಚಿ ಮೋಸ ಮಾತ್ರ ಅಡಿಗೆಯ ವಿಷಯಲ್ಲಿ. ಒಂದು ಗ್ಲಾಸು ಚಾಯ ಮಾಡ್ಲೆ ಬಾರದ್ದಿಪ್ಪ ಅಪ್ಪಚ್ಚಿಗೆ ಇಪ್ಪತ್ತು ದಿನ ಹೇಂಗೆ ಸುದಾರ್ಸುದು ಹೇಳ್ತ ಬೆಶಿಲಿ ಅಕ್ಕಂದಿರಿಂಗೆ ಪೋನು ಮಾಡಿಯಪ್ಪಗ ಒಬ್ಬೊಬ್ಬಂದು ಒಂದೊಂದು ಸಮಸ್ಯೆ. ಅಲ್ಲದ್ದರುದೇ ಕೊಟ್ಟ ಕೂಸುಗೊ ನಾವು ಹೇಳಿಯಪ್ಪಗ ಬಪ್ಪಷ್ಟು ಸ್ವತಂತ್ರಲ್ಲಿ ಇದ್ದವಾ? ನಿಂಗೆಷ್ಟು ಎನ್ನ ಕಳ್ಸಿದ್ದಿ ಅಣ್ಣನ ಮನೆಗೆ?ಇದಾ ಅವಲಕ್ಕಿ ತಂದದು ಇದ್ದು, ದೋಸೆಹಿಟ್ಟು ಫ್ರಿಜ್ಜಿಲಿ ಮಡುಗುತ್ತೆ, ಹತ್ತು ಚಪಾತಿಯೂ ಮಾಡಿ ಮಡುಗಿದ್ದೆ, ಜೇನ ಇದ್ದು, ಮಸರಿಂಗೆ ಹೆಪ್ಪಾಕುದರ ಹೇಳಿ ಕೊಡ್ತೆ, ಚಾಯ ಮಾಡ್ಲೆ ಬಾರದ್ದರೆ ಹಾಲನ್ನೇ ಕುಡಿಯಿ ಹೇಂಗೂ ಈಗ ಡೈರಿಗೆ ಹಾಲು ಕೊಡ್ಲೆ ಇಲ್ಲೆನ್ನೆ, ಮತ್ತೆ ಹೆಜ್ಜೆ ಮಡುಗುದೆಂತದೂ ಕಷ್ಟ ಇಲ್ಲೆ ಪ್ರತಿದಿನಕ್ಕೆ ನಿಂಗೊಗೆ ಎಷ್ಟು ಬೇಕಾವ್ತು ಅಕ್ಕಿ ಹೇಳಿ ತೆಗದು ಮಡುಗಿಕ್ಕಿ ಹೋವುತ್ತೆ, ಹೇಂಗೂ ಮಡ್ಡಿ ಬೇಶಿ ಅಭ್ಯಾಸ ಇದ್ದನ್ನೆ’ ಗೌರಕ್ಕನ ಮಾತಿಂಗೆ ಅಲ್ಲ ಮಾರಾಯ್ತಿ ಎನ್ನ ಎಂತ ಗೋಣ ಹೇಳಿ ಗ್ರೇಶಿದ್ದೆಯಾ! ಅಲ್ಲ ನಿನಗೆ ಹೋಯೆಕ್ಕೆಯಾ? ಹತ್ತರೆ ನಿಂದು ಕೇಳಿಯಪ್ಪಗ ಗೌರಕ್ಕನ ಕರುಳು ಚುರ್ರ್ ಹೇಳಿರೂ ಹೆಮ್ಮಕ್ಕೊಗೆ ಇದೇ ಆತು ಚಾಕ್ರಿ ಮಾಡುದು, ಮಗಳ ದೆಸೆಂದ ಫಾರಿನ್ ನೋಡ್ತ ಅವಕಾಶ ಸಿಕ್ಕಿಯಪ್ಪಗ ಇವಕ್ಕೆ ಬೇಶುಲೆ ಬತ್ತಿಲ್ಲೇಳಿ ಆನು ಕೂರೆ ನಿರ್ಧಾರ ಮಾಡಿಕ್ಕಿ ಇಲ್ಲೆ ಎನಗೆ ಹೋಯೆಕ್ಕೆ ಹೇಳಿಕ್ಕಿ ಹೆರ್ಪಾಯಣಕ್ಕೆ ಹೆರಟವು ಗೌರಕ್ಕ.
ಗೌರಕ್ಕ ವಿಮಾನ ಹತ್ತಿ ಮಗಳ ಮನೆಗೆ ಎತ್ತಿಯಾತು. ಇತ್ಲಾಗಿ ರಾಮಪ್ಪಚ್ಚಿಗೆ ಅಯೋಮಯ. ಹುಟ್ಟಿದ ಲಾಗಾಯ್ತು ಅಡಿಗೆ ವಿಷಯಕ್ಕೆ ತಲೆ ಹಾಕದ್ದ ರಾಮಪ್ಪಚ್ಚಿಗೆ ಫ್ರಿಜ್ಜಿಲಿ ಯೇವದು ಎಲ್ಲಿದ್ದು ಹೇಳಿ ಹುಡುಕುಲೇ ಹೊತ್ತೋಯ್ಕೊಂಡಿತ್ತು. ಅದೆಲ್ಲಿದ್ದು? ಇದೆಲ್ಲಿದ್ದು?’ ಗಂಟೆಗೊಂದರಿ ಗೌರಕ್ಕಂಗೆ ಪೋನು ಮಾಡ್ವಗ ಸುರುವಿಂಗೆ ಸಮಾಧಾನಲಿ ಹೇಳಿದ ಗೌರಕ್ಕ ಈಗ ಗೊಂತಾತ ಮನೇಲಿ ಹೆಮ್ಮಕ್ಕೊ ಇಲ್ಲದ್ದರೆ ಬಂಙ! ಹಂಗ್ಸಿದ್ದರ ಕೇಳಿಯೂ ಮಾತಾಡದ್ದೆ ಮಡ್ಡಿಯೋ ! ಅರೆಬೆಂದದೋ! ಎಂತದೋ ಮಾಡಿ ತಿಂಬದರೊಟ್ಟಿಂಗೆ ಫ್ರಿಜ್ಜಿನ ತಂಗುಳಿನೊಟ್ಟಿಂಗೆ ಹದಿನೈದು ದಿನ ಕಳುದತು. ಅಲ್ಲಿ ಗೌರಕ್ಕ ಬಾಯಿಮಾತಿಲಿ ಹಾಂಗೆ ಹೇಳಿರೂ ಮನೆಯ ತಲೆಬೆಶಿ ಇಲ್ಲೇಳಿ ಅಲ್ಲ. ಮೋಳೆ ಅಪ್ಪ ಎಂತ ಮಾಡ್ತವಾ! ಅಟ್ಟುಂಬೊಳ ಹೇಂಗಾಯ್ದ! ಆ ಮೋತಿಗೆ ಸರಿಯಾಗಿ ಹೊಟ್ಟೆಗೆ ಚೋರಾದರೂ ಇದ್ದಾ ಇಲ್ಲೆಯಾ! ಪಾಪ ಹಟ್ಟಿಗೆ ಹುಲ್ಲಾಯೆಕ್ಕು, ಸೊಪ್ಪಾಯೆಕ್ಕು ಅಬ್ಬೆಯ ಮಾತು ಕೇಳಿ ಅಬ್ಬೆ ಆರಾಮಲ್ಲಿರು, ಗೆಂಡುಮಕ್ಕೊಗುದೆ ಹೆಮ್ಮಕ್ಕಳ ಕಷ್ಟ ಗೊಂತಾಗಲಿ…ಇನ್ನೊಂದು ಹತ್ತುದಿನಕ್ಕೆ ಹೋವುತ್ತೆನ್ನೆ ಊರಿಂಗೆ ಮಗಳು ಹೇಳ್ವಗ ಅದುದೇ ಅಪ್ಪೂಳಿ ಸುಮ್ಮನಾದವು ಗೌರಕ್ಕ.
ಹಾಂಗೂ ಹೀಂಗೂ ಹದಿನೈದು ದಿನ ಕಳುದತು. ಮತ್ತೆ ಊರಿಂಗೆ ಬಪ್ಪ ಗೌಜಿಲಿ ಇಪ್ಪಗಳೇ ಕೊರೊನಾ ಸುರುವಾಯ್ದು, ವಿಮಾನ ನಿಲ್ಸಿದ್ದವು ಹೇಳ್ತ ವಾರ್ತೆ ಬಂದದೇ ಕಂಗಾಲು ಗೌರಕ್ಕ. ಇತ್ಲಾಗಿ ಇನ್ನು ಐದು ದಿನಲ್ಲಿ ಹೆಂಡತಿ ಬತ್ತನ್ನೇ ಹೇಳಿ ಕೂದ ರಾಮಪ್ಪಚ್ಚಿಗೂ ಒರಕ್ಕು ಹಾರಿ ಹೋತು. ಫ್ರಿಜ್ಜಿಲಿ ಮಡುಗಿದ್ದದು, ತೆಗದು ಮಡುಗಿದ ಅಕ್ಕಿ, ಮಾಡಿದ ಅಟ್ಟಣೆಗೊ ಎಲ್ಲವೂ ಖಾಲಿಯಾಯ್ಕೊಂಡು ಬಂದಿದ್ದತು. ಈ ಹೊತ್ತಿಲಿ ವಿಮಾನ ಇಲ್ಲದ್ದರೆ ಇನ್ನು ತಿಂಬದೆಂತರ! ಬೇಶುದೇಂಗೆ? ಹೇಳ್ತ ಬೆಶಿಲಿ ಇದಾ ಹೇಂಗಾರೂ ಅತ್ತೆಗೆ ಬಪ್ಪಲೆ ವ್ಯವಸ್ಥೆ ಮಾಡು ಅಳಿಯನಲ್ಲಿ ಹೇಳಿದ್ದದೇ ಆನೆಂತರ ಮಾಡಲಿ ಮಾಂವ? ಒಂದು ತಿಂಗಳು ಫ್ಲೈಟ್ ನಿಲ್ಸಿದ್ದವು, ಇನ್ನು ಬಪ್ಪಗ ಎಂಗೊ ಎಲ್ಲರುದೆ ಒಟ್ಟಿಂಗೆ ಬತ್ತೆಯೊ ಆಗದೋ…ರಜ್ಜ ಅಡ್ಜೆಸ್ಟ್ ಮಾಡಿ ಪ್ಲೀಸ್ ಮಾತು ಕೇಳಿದ್ದದೇ ಆಕಾಶ ತಲೆಂಗೆ ಬಿದ್ದಾಂಗಾತು ರಾಮಪ್ಪಚ್ಚಿಗೆ.
ಆತನ್ನೆ ಇನ್ನು ಮುಂದಾಣದ್ದೇ ವಿಷಯ ಇಪ್ಪದು. ಅಟ್ಟುಂಬೊಳಕ್ಕೆ ತಲೆ ಹಾಕದ್ದ ರಾಮಪ್ಪಚ್ಚಿಯ ಪಾಕ ಸುರುವಾತು. ಒಂದರಿ ಉರಗೆ ತಂಬುಳಿಲಿ ಉಣ್ಣೆಕ್ಕೂಳಿ ಆದ್ದದೇ ಯೆಜಮಾನ್ತಿಗೆ ಪೋನು ಮಾಡಿ ಹೇಂಗೆ ಮಾಡುದೇಳಿ ಕೇಳಿ ಸುರು ಮಾಡಿದವು ಮಾಡ್ಲೆ. ಎಲ್ಲಾ ಸರಿಯಾಗಿದ್ದತಾತೋ ಆದರೆ ಗೌರಕ್ಕಂಗೆ ಅಕೇರಿಗೆ ಮಜ್ಜಿಗೆ ಸೇರಿಸಿ ಹೇಳಿ ಹೇಳುಲೆ ಬಿಟ್ಟೋಗಿದ್ದತು. ಮತ್ತೆ ಕೇಳೆಕ್ಕಾ ಅದು ತಂಬುಳಿ ಹೋಗಿ ಪಚ್ಚಡಿ ಆತು ಬಿಡಿ. ಈ ರಾಮಪ್ಪಚ್ಚಿಗೆ ಮಾಡ್ಲೆ ಅರಡಿಯದ್ದರುದೇ ಸುಲಬದ್ದು ಯೇವುದೂ ಆಗ ! ಎಂತದೋ ಗ್ವಿಳ್ಳವು ತಿನ್ನೆಕ್ಕೂಳಿ ಕೊದಿ ಹಿಡುದ್ದದೇ ಅಕ್ಕಿ ಬೊದುಲುಲೆ ಹಾಕಿ ಮಿಕ್ಸಿಲಿ ಕಡದು ಹಿಟ್ಟು ರೆಡಿಯಾತು. ಈ ಸರ್ತಿ ಮಾತ್ರ ಪೋನು ಮಾಡಿ ಕೇಳ್ತಿಲ್ಲೆ ಹೇಳಿ ಮೊದಲೇ ತೀರ್ಮಾನ ಮಾಡಿದ್ದರಂದ ಕಾವಲಿ ಮಡುಗಿ ತೆ ಳ್ಳವು ಹಿಟ್ಟು ಬಿಟ್ಟದೇ ದೋಸೆಯೇ ಕಂಡಿದಿಲ್ಲೆ ಕಾವಲಿಲಿ. ಹೆರ ಕೆಲಸಕ್ಕೆ ಬಂದಿತ್ತಿದ್ದ ಸರಸು ದಾನೆ ಅಣ್ಣೆರೆ ದೋಸೆ ಮಲ್ತರ? ಕೇಳಿಯಪ್ಪಗ ಬಂದೊ ಮೈತ್ತೆ ದೋಸೆ ತೋಜೊಂದಿಜ್ಜಿ ಅಪ್ಪಚ್ಚಿ ಕೊಟ್ಟ ಉತ್ತರಕ್ಕೆ ಕಿಟಕಿಂದ ನೋಡಿದ ಸರಸು ಅಣ್ಣೆರೆ ನೀರ್ತೆಲ್ಲವು ಪಂಡ ಬಜೀ ನೀರ್ ಮೈಪುನತ್ತ್, ಉಂದೆಟ್ಟ್ ಅರಿತ್ತ ಬಂದ ಓಲುಂಡು? ಕೇಳಿಯಪ್ಪಗಳೆ ಗೊಂತಾದ್ದು ಹಿಟ್ಟು ತೆಳ್ಳವು ಹಿಟ್ಟಿಂದಲೂ ನೀರಾದ್ದು. ಹೀಂಗಿಪ್ಪ ಎಡವಟ್ಟು ಮಾಡ್ತಾ ಮಾಡ್ತಾ ಗೌರಕ್ಕ ಇಲ್ಲದ್ದೆ ಅಪ್ಪಚ್ಚಿ ಲಾಚಾರಾದರೂ ಹೇಳುಲೆ ಬಿಗುಮಾನ ಬಿಡೆಕ್ಕನ್ನೆ. ಹೆಂಡತಿ ಪೋನು ಮಾಡಿರೆ ನೀನಿಲ್ಲದ್ದೆಯೂ ಆನು ಅಡಿಗೆ ಕಲ್ತೆ ಅಪ್ಪಚ್ಚಿ ಹೇಳಿರೆ ಅತ್ಲಾಗಿಂದ ಹಣೆಬರ ಗೊಂತಿಪ್ಪ ಅಬ್ಬೆಮಗಳಿಂಗೆ ನೆಗೆ.
ಇದೆಲ್ಲ ಹಾಂಗಿರಲಿ, ಇದಕ್ಕಿಂತಲೂ ಗಮ್ಮತ್ತಾದ್ದು ಹೇಳಿರೆ ರಾಮಪ್ಪಚ್ಚಿಯ ಕೊರೊನಾ ಕಷಾಯ. ಇದಾ ಊರಿಲಿ ಕೊರೊನಾ ಜೋರಿದ್ದಡ, ಯೇವುದಕ್ಕೂ ನೆಲನೆಲ್ಲಿ ಕಷಾಯ ದಿನಕ್ಕೆ ಎರಡು ಸರ್ತಿ ಕುಡಿಯಿ ಗೊಂತಾತೋ ಅದೊಂದರಿ ಗೌರಕ್ಕ ಪೋನಿಲಿ ಹೇಳಿದ್ದದೇ ನೆಲನೆಲ್ಲಿ ನೋಡ್ಲೆ ಹೇಂಗಿರ್ತು?’ ಕೇಳಿದ ರಾಮಪ್ಪಚ್ಚಿಗೆ :ಇದಾ ಉದ್ದಕ್ಕೆ ಹೋವುತ್ತು, ಸಪೂರ ಸಣ್ಣ ಸಣ್ಣ ಎಲೆಗೊ…..ನೆಲ್ಲಿ ಎಲೆಯಾಂಗೆ ಕಾಣ್ತು, ಆ ಜಾಲಕರೆಲೆಲ್ಲ ಇದ್ದು ಗುರ್ತ ಹೇಳಿದವು. ಅಂದೇ ಜಾಲಕರೇಂದ ಪೊರ್ಪಿ ತಂದು ನೆಲನೆಲ್ಲಿ ಕಷಾಯ ಮಾಡಿ ದಿನಕ್ಕೆ ಎರಡು ಹೊತ್ತಿನಾಂಗೆ ಕುಡಿವಲೆ ಸುರು ಮಾಡಿ ಎರಡೇ ದಿನ ! ಮೂರನೇ ದಿನ ರಾಮಪ್ಪಚ್ಚಿ ಲೇಟ್ರಿನಿಂದ ಹೆರ ಬಾರವು. ಹೊಟ್ಟೆ ಚುಳ್ಳ್ ಅಪ್ಪದುದೆ, ಒಂದೊಂದು ಲೋಡು ಹೊಂಡಕ್ಕೆ ಹೋಪದುದೆ. ಇನ್ನು ಯೆಜಮಾನ್ತಿಗೆ ಹೇಳಿರೆ ಕಂಡಿತಾ ಬೈಗು ಹೇಳಿದವು ಸೀದಾ ಕೇಶವ ಡಾಕ್ಟ್ರಲ್ಲಿಂಗೆ ಹೋಗಿ ನಡದ ಸಂಗತಿ ಪೂರಾ ಹೇಳಿದವು. ಎರಡು ದಿನಕ್ಕೆ ಮದ್ದು ಕೊಟ್ಟ ಡಾಕ್ಟ್ರಮಾಂವ ಇದಾ ರಾಮ ನೀನು ನಾಳ್ತಿಂಗೆ ಬಪ್ಪಗ ಕಷಾಯ ಮಡುಗಿದ ಆ ಸೆಸಿ ತಾ ಹೇಳಿ ಕಳುಗಿದವು.
ಎರಡು ದಿನ ಕಳಿವಗ ರಜ್ಜ ಕಡಿಮೆಯಾತು ಕಟ್ಟ ಕಡುದ್ದದು. ಆ ಸೆಸಿಯ ಪೊರ್ಪಿ ಡಾಕ್ಟ್ರಮಾಂವನಲ್ಲಿಂಗೆ ಹೋಗಿ ತೋರ್ಸಿ ಇದಾ ಈ ನೆಲನೆಲ್ಲಿ ಎನ್ನ ಹಾಳು ಮಾಡಿತು ತೋರ್ಸಿದ್ದದೇ ಸೆಸಿಯೊಂದರಿ ನೋಡಿ ಬಿದ್ದೂ ಬಿದ್ದು ನೆಗೆ ಮಾಡಿದವು ಡಾಕ್ಟ್ರ್ಮಾಂವ. ಎಂತ ರಾಮ ನಿನ್ನ ಅವಸ್ಥೆ? ನೆಲನೆಲ್ಲಿ ಹೇಳಿ ಸಿಕ್ಕಿದ್ದರೆಲ್ಲ ಕಷಾಯ ಮಾಡಿ ಕುಡುದರೆ ಹೇಂಗಕ್ಕು? ಇದು ಸೋಣೆಕೊಡೆ ಅಲ್ಲದಾ? ಹೊಸ್ತಿಲಿಂಗೆ ಸೋಣೆಲಿ ಚೂಡಿ ಮಡುಗುತ್ತವು ಇದರ, ತಂಪು ಹೇಳಿರೆ ತಂಪು…..ಅಂತೂ ಹೊಟ್ಟೆ ಕ್ಲೀನಾತು ನೆಗೆ ಮಾಡಿಯಪ್ಪಗ ನಮ್ಮ ರಾಮಪ್ಪಚ್ಚಿ ಪೆಚ್ಚು.
ಹೇಂಗೆ ಕಷಾಯ ಸರಿ ಕುಡಿತ್ತಾ ಇದ್ದಿಯನ್ನೇ? ಮನೆಗೆ ಬಂದಪ್ಪಗ ಗೌರಕ್ಕನ ಪೋನು ಬಂದದೇ ನಿನ್ನ ಕಷಾಯ ನಿನಗೇ ಆತು, ನೀನು ಬಪ್ಪದೇ ಬೇಡ ಊರಿಂಗೆ ಹಸಿಬೆಸಿ ಕೋಪಲ್ಲಿ ರಾಮಪ್ಪಚ್ಚಿ ಹೇಳಿದ್ದರ ಅರ್ಥ ಮಾತ್ರ ದೂರದ ಜರ್ಮನಿಲಿ ಕೂದ ಗೌರಕ್ಕಂಗೆ ಅರ್ಥವೇ ಆಯ್ದಿಲ್ಲೆ ಇಷ್ಟನ್ನಾರ.