Oppanna.com

ಸುಧಾಮನಾದರೂ, ಕುಚೇಲನಾದರೂ ಒಂದು ಮುಷ್ಟಿ ಪ್ರೀತಿಲಿ ಕೃಷ್ಣಾನುಗ್ರಹ ಆವುತ್ತು..!

ಬರದೋರು :   ಒಪ್ಪಣ್ಣ    on   26/08/2016    6 ಒಪ್ಪಂಗೊ

ಒಂದೊಂದು ದಿನಾಚರಣೆ ಹೇದು ಮಾಡಿದ ಮತ್ತೆ ಆ ದಿನ ಆ ವಿಶಯವೇ ತಲೆಲಿಪ್ಪದು ಅಪ್ಪೋ.

ಒಂದೊಂದು ದಿನಾಚರಣೆ ಹೇದು ಮಾಡಿದ ಮತ್ತೆ ಆ ದಿನ ಆ ವಿಶಯವೇ ತಲೆಲಿಪ್ಪದು ಅಪ್ಪೋ.
ಓ ಮನ್ನೆ ಸೊತಂತ್ರ ಆಚರಣೆ ಆತು, ದಿನ ಇಡೀ ನಮ್ಮ ಹಳಬರು ಹೋರಾಡಿ ಕಾದಾಡಿದ ಕತೆಗಳೇ ಸುತ್ತಿಗೊಂಡು ಇದ್ದತ್ತು.
ಅದರಿಂದ ಮತ್ತೆ ಚೆಂಗಾಯಿಗಳ ದಿನಾಚರಣೆ ಆತು, ಊರಿಲಿಲ್ಲದ್ದ ಹಳೇ ಹಳೆ ಪ್ರೆಂಡುಗಳ ಹುಡ್ಕಿ ಮಾತಾಡಿ ಆತು.
ಹಾಂಗೇ ಇಂದು  ಅಷ್ಟೆಮಿ ಕಳುದ ನವಮಿ ಇದಾ. ನಿನ್ನೆ ಇಡೀ ದಿನ ಕೃಷ್ಣಂದೇ ಸುದ್ದಿ.

ಕೃಷ್ಣನ ಕತೆಗಳಲ್ಲಿ ಹಲವಾರು ಕತೆ ಇದ್ದು.
ಅವ ಎಂಟನೇ ಬಾಬೆ ಆಗಿ ಹುಟ್ಟಿದ ಕತೆ,
ಅಲ್ಲಿಂದ ಅವನ ಅಪ್ಪ ಹೆಡಗೆಲಿ ಕೂರ್ಸಿ ಕೊಂಡೋದ ಕತೆ,
ಪೂತನಿಯ ಮೋಕ್ಷಕೊಟ್ಟ ಕತೆ,
ಮತ್ತೆ ದೊಡ್ಡಾಗಿ ಮಾವನ ಸಂಹಾರ ಮಾಡಿದ ಕತೆ,
ಅದಾಗಿ ಕಾಳಿಂಗನ ಮರ್ದನ ಮಾಡಿದ ಕತೆ,
ಗುಡ್ಡೆ ಪೊರ್ಪಿ ಮಳೆಂದ ದನಂಗಳ ಒಳಿಶಿದ ಕತೆ,
ಹದಿನಾರು ಸಾವಿರ ಹೆಂಡತ್ತಿಯಕ್ಕೊ ಆದ ಕತೆ,
ಮಹಾಭಾರತಲ್ಲಿ ಬಪ್ಪ ಕತೆ,
ಮಹಾ ಚಾಣಾಕ್ಷ ಸಂಧಾನಕಾರ ಅಪ್ಪ ಕತೆ,
ಅರ್ಜುನಂಗೆ ಸಾರಥಿ ಆದ ಕತೆ,
ಅರ್ಜುನಂಗೆ ಭಗವದ್ಗೀತೆ ಹೇಳಿದ ಕತೆ,
ಕಾಡಿಲಿ ಮನುಗಿ ಬೆರಳ ಕೊಡಿಯಂಗೆ ಬಾಣ ತಾಗುಸಿದ ಕತೆ –
ಹೀಂಗೆ ಅವನ ಜನ್ಮದ ಪ್ರತಿ ಹಂತವೂ ಕತೆಗಳಿಂದ ತುಂಬಿ ಹೋಯಿದು.

ಅದರ ಎಡಕ್ಕಿಲಿ ಇನ್ನೊಂದು ಕತೆ ಇದ್ದು – ಅದುವೇ ಕುಚೇಲನ ಕತೆ. ಅದೂ ಗೊಂತಿಕ್ಕು ನಿಂಗೊಗೆ!
~

ಅಪ್ಪು, ಇದು ಹಳೇ ಕತೆ. ಲೊಟ್ಟೆಕತೆ ಹೇಳಿಯೂ ಹೇಳುಗು ಕೆಲವು ಜೆನ. ಅದಿರಳಿ.
ಸುಧಾಮ ಮತ್ತೆ ಕೃಷ್ಣ – ಇಬ್ರೂ ಶಾಲೆ ಚೆಂಗಾಯಿಗೊ  ಯೇವ ಶಾಲೆ ಹೇದು ಒಪ್ಪಣ್ಣಂಗರಡಿಯ. ಅತವಾ ಕೃಷ್ಣ ಎಂತಗೆ ಶಾಲೆಗೆ ಹೋದ್ಸು – ಮಾಟ್ರಂಗೆ ಕಲಿಶಲೋ – ಹೇದೂ ಅರಡಿಯ; ಅಂತೂ ಅವ್ವಿಬ್ರೂ ಒಟ್ಟಿಂಗೇ ಕಲ್ತದಾಡ.
ಸುಧಾಮ ಹೇದರೆ ಪಾಪದ ಬಟ್ರಮಗ. ಕೃಷ್ಣ ಹೇದರೆ ಯಾದವ ಚಕ್ರವರ್ತಿಯ ಹುಡುಗ ಇದಾ. ಆದರೂ ಅವರೊಳಾಣ ಏಕತರ ಭಾವನೆಂದಾಗಿ ಅವು ಚೆಂಗಾಯಿಗೊ ಆದವು. ಒಟ್ಟಿಂಗೇ ಕಲ್ತವು, ಒಟ್ಟಿಂಗೇ ಹಾರಿ ಬೆಳದವು.

ಸಮಾವರ್ತನೆ ಆತು, ಕಲಿವಿಕೆ ಆತು.
ಅದಾದ ಮತ್ತೆ ಅವ್ವವ್ವು ಅವರವರ ಮನೆಗೆ ಎತ್ತಿದವೋ – ಸುಧಾಮ ಬಡ ಬ್ರಾಹ್ಮಣ ಆಗಿಯೇ ಇತ್ತಿದ್ದ°. ಅದರೂ ಅದರೆಡಕ್ಕಿಲಿ ಮದುವೆ ಆತು, ಮಕ್ಕೊ ಆದವು.
ಕೃಷ್ಣ ಯಾದವ ಚಕ್ರವರ್ತಿ ಆದ°.
~

ಸುಧಾಮಂಗೆ ಆ ಕಷ್ಟಂಗೊ, ನಷ್ಟಂಗೊ, ತೊಂದರೆಗೊ ಎಲ್ಲವೂ ಸಾಮಾನ್ಯವೇ. ಆದರೆ ಅವನ ಹೆಂಡತ್ತಿಗೆ – ರಜಾ ಆರಾಮಲ್ಲಿ ಬದ್ಕುವೊ° – ಹೇದು ಕಂಡತ್ತೋ ಏನೋ. ಅಲ್ಲ, ಮಕ್ಕೊಗೆ ಸಮಗಟ್ಟು ತಿಂಬಲಿಲ್ಲೆ – ಹೇದು ಕಂಡತ್ತೋ ಏನೊ. “ಹೋಗಿ, ನಿಂಗಳ ಮಿತ್ರ ಇದ್ದಲ್ಲದೋ – ಕೃಷ್ಣ – ಅವನತ್ರೆ ಎಂತಾರು ಖರ್ಚಿಂಗೆ ಕೇಳಿಗೊಂಡು ಬನ್ನಿ” – ಹೇದು ಕೆಮಿತಿಂಬಲೆ ಸುರು ಆತು.
ಸುರು ಸುರುವಿಂಗೆ ಕೆಮಿ ತಿಂದುಗೊಂಡು ಇದ್ದದು, ಮತ್ತೆ ತಲೆಯೇ ತಿಂಬಲೆ ಸುರು ಆತು.
ಹೆಂಡತ್ತಿ ಹೇದರೆ ಯೇವ ಕಾಲಕ್ಕೂ ಅದೇ ನಮುನೆ ಇದಾ.
ಹಾಂಗೆ, ಹೆಂಡತ್ತಿಯ ಒತ್ತಾಯ ತಡೆಯದ್ದೆ ಒಂದು ದಿನ “ಆತಂಬಗ, ಇಂದು ಕೃಷ್ಣನಲ್ಲಿಗೆ ಹೋಗಿ ಮಾತಾಡಿಕ್ಕಿಯೇ ಬಪ್ಪದು” – ಹೇದು ನಿಜಮಾಡಿದನಾಡ. ಸಕಾಯ ಕೇಳದ್ರೂ, ಒಂದರಿ ಕಂಡು ಬಂದದರ್ಲಿ ದೋಷ ಇಲ್ಲೆ – ಹೇದು ನಂಬಿಗೊಂಡ°.

~

ಚಕ್ರವರ್ತಿಯ ಕಾಂಬಲೆ ಹೋಪಾಗ ಕಾಲಿ ಕೈಲಿ ಹೋಪಲಿಲ್ಲೆ ಇದಾ.
ಆದರೆ ಇವನ ಮನೆಲಿ ಎಂತ ಇದ್ದು ಬೇಕೆ? ಚೀಪೆ ಕಾಸುವೊ° ಹೇದರೆ ಶೆಕ್ಕರೆ ತುಪ್ಪ ಬೇಕು, ಒಲಿಪ್ಪೆ ತೆಕ್ಕೊಂಬೊ° ಹೇದರೆ ಕಾಸು ಬೇಕು. ಎರಡೂ ಇಲ್ಲದ್ದ ಇವನ ಕೈಲಿ ಎಂತ ಹರಿಗು?

ಇದ್ದದು ವಿದ್ವತ್ತು ಮಾಂತ್ರ!

ಅಷ್ಟಪ್ಪಗ ಅವನ ಹೆಂಡತ್ತಿ ಹೇಳಿತ್ತಾಡ – ಇದಾ, ರಜಾ ಅವಲಕ್ಕಿ ಇದ್ದು ಮೊನ್ನೆ ತಂದದು, ಅದಕ್ಕೆ ರಜ್ಜ ಬೆಲ್ಲ ಕೆರಸಿ ಕೊಡ್ತೆ – ಹೇದು ಪಕ್ಕನೆ ಒಂದು ಚೀಪೆ ಅವಲಕ್ಕಿ ಮಾಡಿ ಕೊಟ್ಟತ್ತಾಡ.
ನಾಚಿಗೆ ಆತು ಇವಂಗೆ. ಆದರೆ ಒಪ್ಪದ್ದೆ ಬೇರೆ ನಿಮುರ್ತಿ ಇಲ್ಲೆ.
ಆತಂಬಗ – ಹೇಯಿದ°.

ಪಳಪಳ ಹೊಳೆತ್ತ ಬುತ್ತಿಪಾತ್ರಲ್ಲಿ ತುಂಬುಸಿದ ಗ್ರೇಶಿದಿರೋ? ಬಾಳೆಲಿಲಿ ಕಟ್ಟಿ, ಆ ಕಟ್ಟವ ಹೆಗಲ ಒಸ್ತ್ರಲ್ಲೇ ಒಂದು ಗೆಂಟುಕಟ್ಟಿ, ಅದರ ಜಾಗ್ರತೆಲಿ ಸುತ್ತಿಗೊಂಡು ತೆಕ್ಕೊಂಡ°.
ಹೆರಟ°.
ದಾರಿಲಿ ಹಶು ಆದರೂ, ಕೃಷ್ಣಂಗೆ ತೆಕ್ಕೋಂಡ ಸುವಸ್ತುವಿನ ಬಿಡುಸಿದ್ದನಿಲ್ಲೆ ಇದಾ.
~

ಕೃಷ್ಣನ ಅರಮನೆಗೆ ಎತ್ತಿತ್ತು.
ಆನು ಚಕ್ರವರ್ತಿಯ ಮಿತ್ರ, ಎನಗೆ ಒಂದರಿ ಕಾಣೇಕಾತು” – ಹೇಯಿದ°.
ಬಾಗಿಲು ಕಾಯ್ತವಂಗೆ ನಂಬಿಕೆಯೇ ಬಾರ. ಅಂತೂ ಒಳ ಬಿಟ್ಟ°.
~
ಕೃಷ್ಣ ಅವನ ಯೇವತ್ರಾಣ ಬೆಶಿ ಅಂಬೆರ್ಪಿಲಿ ಇದ್ದೋನಿಂಗೆ ಒಂದರಿಯೇ ಸುಧಾಮನ ಕಂಡಪ್ಪಗ ಕೊಶಿ ಆತಾಡ.
ಕೃಷ್ಣನ ರೇಶ್ಮೆ ಒಸ್ತ್ರಂಗೊ – ದೂರದೂರಿಂದ ನೆಡದು ಬಂದು ಮೈ ಇಡೀ ತುಂಬಿದ ಸುಧಾಮನ ಬೆಗರಿಲಿ ಚೆಂಡಿ ಆತಾಡ. ಆದರೂ ಸಾರ ಇಲ್ಲೆ.
ತುಂಬ ಹೊತ್ತು ಮಾತಾಡಿದವು.
ಶಾಲೆಲಿ ಲಾಗಹಾಕಿದ ಕತೆಗೊ, ಕಲ್ತ ಸುದ್ದಿಗೊ, ಈಗಾಣ ಸದ್ಯದ ಜೀವನಂಗೊ, ಹೆಂಡತ್ತಿ ಮಕ್ಕೊ – ಎಲ್ಲದರ ಬಗ್ಗೆಯೂ.
ಹೀಂಗೇ ಸುಮಾರು ಹೊತ್ತಾತು. ಕೃಷ್ಣನ ಹದಿನಾರುಸಾವಿರ ಹೆಂಡತ್ತಿಯಕ್ಕಳ ಕತೆಯೂ ಹೇಳೆಡದೋ – ಹೊತ್ತು ಹಿಡಿಯದ್ದಿಕ್ಕೋ… ಅದಿರಳಿ.

ಸುಧಾಮಂಗೆ ಹೇಳುಲೆ ಎಂತ ವಿಶಯವೂ ಇಲ್ಲೆ.
ಕೇಳುದೋ- ಬೇಡದೋ ಹೇದು ಮನಾಸಿನ ಒಳ ತಿರ್ಗಲೆ ಸುರು ಆತು. ಕೇಳಿದ್ದನೇ ಇಲ್ಲೆ.
ಕೃಷ್ಣನೇ ಮಾತಾಡ್ಸಿದ°.
ಎಲ್ಲ ಆಗಿ, ಅಖೇರಿಗೆ ಕೃಷ್ಣಂಗೆ – ಕುಚೇಲನ ಹೆಗಲಿಲಿ ಇದ್ದಿದ್ದ ಶಾಲಿನ ಕೊಡಿಲಿ ಸಣ್ಣ ಕಟ್ಟ ಕಂಡತ್ತಾಡ.
ಅರೆ, ಅದೆಂತರ? – ಕೊಡು ಕೊಡು ಕೊಡು” ಹೇಳಿದನಾಡ ಕೃಷ್ಣ.

ಅದು ನಿಜವಾಗಿಯೂ ಸುಧಾಮಂಗೆ ಕೊಡ್ಳೆ ನೆಂಪಾಗದ್ದದೋ, ಅಲ್ಲ – ಕೀಳರಿಮೆ / ಮುಜುಗರ ಆದ್ದದೋ ಅರಡಿಯ. ಅಂತೂ ಅವ ಆ ಕಟ್ಟ ಬಿಡುಸಿತ್ತಿದ್ದನೇ ಇಲ್ಲೆ.
ಕೃಷ್ಣನ ಒತ್ತಾಯಕ್ಕೆ – ಬೇಕೋ ಬೇಡದೋ ಹೇಳ್ತ ಮನಸ್ಸಿಲಿ ಆ ಕಟ್ಟವ ಕೃಷ್ಣಂಗೆ ಕೊಟ್ಟ°.

ಬಾಳೆಲೆ ಬಿಡುಸಿ, ಅದರೊಳ ಇದ್ದಿದ್ದ ಚೀಪೆ ಅವಲಕ್ಕಿ ತೆಗದು ಕೃಷ್ಣ ತಿಂತಾ! – ಅಬ್ಬಾ, ಒಂದರಿಯೇ ಕುಶಿಲಿ ಲಾಗ ಹಾಕಿದನಾಡ.
ಇಷ್ಟೊಳ್ಳೆ ಅವಲಕ್ಕಿ ಆನು ತಿಂದಿದೇ ಇಲ್ಲೆ – ಹೇದು ಒಟ್ಟಿಂಗಿಪ್ಪ ಎಲ್ಲೋರಿಂಗುದೇ ಕೊಟ್ಟನಾಡ.
ಎಲ್ಲೋರಿಂಗೂ ಆ ಅವಲಕ್ಕಿಯ ರುಚಿ ಕೊಶಿ  ಆತಾಡ. ಇವ° ಒಂದು ಹಿಡಿ ತೆಕ್ಕೊಂಡು ಹೋದ್ದಾದರೂ, ಆ ಅರಮನೆಯ ಎಲ್ಲೋರಿಂಗೂ ಸಾಕಪ್ಪಷ್ಟು ಇದ್ದತ್ತಾಡ ಕೃಷ್ಣನ ಆಟಲ್ಲಿ!
~

ಸರಿ, ಸುಧಾಮ ಕೊಟ್ಟ°, ಕೃಷ್ಣ ತಿಂದ°.
ಕೈ ಉದ್ದಿಗೊಂಡು ಎದ್ದುನಿಂದ°. ಅವಂಗೆ ಸಕಾಯ ಕೇಳುಲೆ ಮನಸ್ಸೇ ಬಯಿಂದಿಲ್ಲೆ ಇದಾ.
ಹೆರಡ್ತೆ – ಹೇಳಿದ°, ಕೃಷ್ಣ ಸಂತೋಷಲ್ಲಿ ಬೀಳ್ಕೊಟ್ಟು ಟಾಟ ಮಾಡಿದ°.
ಒಪಾಸು ಬಂದ ಸುಧಾಮ, ಖಾಲಿ ಕೈಲಿ. ಏಕೇದರೆ, ಕೃಷ್ಣನೂ ಕೇಳಿದ್ದನಿಲ್ಲೆ – ಎಂತಾರು ದಾರಿಖರ್ಚಿಂಗೆ ಬೇಕೋ ಹೇದು.

ದಾರಿಲಿ ಬಪ್ಪಗ ತನ್ನ ಮಿತ್ರಂಗೆ ಅಷ್ಟೂ ಅರ್ಥ ಆಯಿದಿಲ್ಲೆಯೋ – ಹೇದು ಬೇಜಾರು ಮಾಡಿಗೊಂಡನೋ, ಅಥವಾ ಅಬ್ಬಾ-ಮಿತ್ರನತ್ರೆ ಪೈಸೆ ಕೇಳಿ ಸಂಬಂಧ ಹಾಳು ಮಾಡಿಗೊಂಡಿದಿಲ್ಲೆ – ಹೇದು ಕೊಶಿ ಪಟ್ಟುಗೊಂಡನೋ – ಗೊಂತಿಲ್ಲೆ.
ಅದೇ ಹಳೆ ಒಸ್ತ್ರಲ್ಲೇ ಒಪಾಸು ಊರಿಂಗೆ ಬಂದ°.
~

ಮನೆಗೆತ್ತಿ ನೋಡ್ತ – ಜಾಲಿಂಗೆತ್ತುವಾಗಳೇ ಆಳುಗೊ ಬಂದು, ಬಲೇ ಅಣ್ಣೇರೆ – ಹೇದು ಒಳ ದಿನಿಗೆಳಿದವು.
ಗುಡಿಚ್ಚೆಲು ಇದ್ದ ಜಾಗೆಲಿ ಭವ್ಯ ಮಾಳಿಗೆ ಮನೆ ಇದ್ದು.
ಹರ್ಕಟೆ ಒಸ್ತ್ರ ಸುತ್ತಿದ್ದ ಹೆಂಡತ್ತಿ ಪಟ್ಟೆಸೀರೆ ಸುತ್ತಿದ್ದು.
ಉಂಬಲಿಲ್ಲದ್ದೆ ಬಚ್ಚಿದ್ದ ಮಕ್ಕೊ ಗೆನಾ ಆಗಿ ನಿಂದಿದವು.
ಮನೆ ತುಂಬಾ ವೆವಸ್ತೆಗೊ, ಆಳು-ಕಾಳುಗೊ ಯಥೇಷ್ಟ.
ತನ್ನ ದಾರಿಲೇ ಬಂದದಪ್ಪು, ಆದರೆ ಇದು ತನ್ನ ಮನೆಯೇ ಅಪ್ಪೋ – ಹೇದು ಸಂಶಯ ಬಂತಾಡ ಸುಧಾಮಂಗೆ.
ಹೆಂಡತ್ತಿಯ ಹತ್ರೆ ಕೇಳಿದನಾಡ – ಎಂತ ಸಂಗತಿ ಇದು? – ಹೇದು.
ಕೃಷ್ಣಾನುಗ್ರಹ ಹೇದರೆ ಇದುವೇ – ಹೇದು ಅವಂಗೆ ಕೂಡ್ಳೆ ಗೊಂತಾತು.

~

ಸುಧಾಮ ಬಡವ° ಆಗಿ ಕುಚೇಲ ಆಗಿದ್ದಿಕ್ಕು, ಆದರೂ – ಅವನ ಸ್ವಾಭಿಮಾನ ಬಿಟ್ಟಿದನಿಲ್ಲೆ.
ಕೃಷ್ಣಾನುಗ್ರಹ ಸಿಕ್ಕಲೆ ಅದುವೇ ಸಾಕಾತು.
ಅನುಗ್ರಹೀತನಾದ ಅವನ ಕುಟುಂಬಕ್ಕೆ ಸದಾಕಾಲ ಸಮೃದ್ಧಿ ಇದ್ದತ್ತು.

ಜೆನಂಗೊ ಸ್ವಾಭಿಮಾನಲ್ಲಿ ಇದ್ದರೆ ಒಂದಲ್ಲ ಒಂದರಿ ಭಾಗ್ಯ ಲಕ್ಷ್ಮಿಯ ಅನುಗ್ರಹ ಆವುತ್ತು – ಹೇಳ್ತದು ಇದರ ತಾತ್ಪರ್ಯ.
~
ಒಂದೊಪ್ಪ: ಕೃಷ್ಣ-ಕುಚೇಲರ ಸಂಬಂಧವ ನೋಡಿರೆ ಕೃಷ್ಣಾಷ್ಟಮಿಯನ್ನೇ ಮಿತ್ರತ್ವದ ದಿನಾಚರಣೆ ಮಾಡ್ಳಕ್ಕಪ್ಪೋ.

6 thoughts on “ಸುಧಾಮನಾದರೂ, ಕುಚೇಲನಾದರೂ ಒಂದು ಮುಷ್ಟಿ ಪ್ರೀತಿಲಿ ಕೃಷ್ಣಾನುಗ್ರಹ ಆವುತ್ತು..!

  1. ಇವ° ಒಂದು ಹಿಡಿ ತೆಕ್ಕೊಂಡು ಹೋದ್ದಾದರೂ, ಆ ಅರಮನೆಯ ಎಲ್ಲೋರಿಂಗೂ ಸಾಕಪ್ಪಷ್ಟು ಇದ್ದತ್ತಾಡ ಕೃಷ್ಣನ ಆಟಲ್ಲಿ!

    ಉಡುಪಿಲ್ಲ್ಲಿ ಬಳುಸುತ್ತ ಕ್ರಮವೋ?

  2. ಒಪ್ಪಣ್ಣ,
    ಶುದ್ದಿ ಲಾಯ್ಕ ಆಯಿದು ಯೇವತ್ರಾಣ ಹಾಂಗೇ.
    ಸುದಾಮನ ಪರಿಸ್ಥಿತಿ ಕೃಷ್ಣಂಗೆ ಹೇಳದ್ದೇ ಅಂದಾಜು ಆದ್ದದು ಅವ ದೇವರು ಹೇಳ್ತ ಕಾರಣಕ್ಕೆ ಮಾಂತ್ರ ಅಲ್ಲ, ಅವ ತನ್ನ ಬಾಲ್ಯಸಂಗಾತಿಯ ಮನಸ್ಸಿನ ಒದುಲೆ ಅರಡಿಗಾದ ಕಾರಣ. ಅಷ್ಟು ಒರಿಶ ದೂರ ಇದ್ದರೂ ಸುದಾಮನ ಆಂತರ್ಯ ಕೃಷ್ಣಂಗೆ ಗೊಂತಿತ್ತು. ಹೇಳದ್ದೆಯೂ ಸುದಾಮ ಎಲ್ಲ ಹೇಳಿದ ಒಂದು ಮುಷ್ಟಿ ಚೀಪೆ ಅವಲಕ್ಕಿಲಿ, ಕೇಳದ್ದೆಯೂ ಕೃಷ್ಣ ಎಲ್ಲವನ್ನೂ ಕೇಳ್ಸಿಗೊಂಡ ಸುದಾಮನ ಒಂದು ಮುಷ್ಟಿ ಪ್ರೀತಿಲಿ.

    ಕೇಳಿ ಸುದಾಮನ ಮನಸ್ಸಿಂಗೆ ಬೇನೆ ಮಾಡಿದ್ದಾ ಇಲ್ಲೆ ಕೃಷ್ಣ, ಅವನ ಜೀವದ ಗೆಳೆಯನ ಮನಸ್ಸಿಂಗೆ ಬೇನೆ ಮಾಡ್ಲೆ ಕೃಷ್ಣಂಗೆ ಮನಸ್ಸಿತ್ತಿಲ್ಲೆ ಅಲ್ಲದಾ? ಹೇಳಿ ಸಣ್ಣ ಆಗಿ, ಗೆಳೆತನ ಕಳಕ್ಕೊಂಬಲೆ ಸುದಾಮ ತಯಾರಿತ್ತಿದ್ದಾ ಇಲ್ಲೆ. ಎಂಥಾ ಹೊಂದಾಣಿಕೆ ಅವರ ನಡೂಕೆ.
    ಯಾವ ಬಂಧಲ್ಲಿಯೂ ತನಗೆ ಹತ್ರಾಣೋರ ಮನಸ್ಸಿಂಗೆ ಬೇನೆ ಮಾಡುವ ಹಾಂಗೆ ನೆಡಕ್ಕೊಂಬದು ಇಲ್ಲೆ. ಹಾಂಗೆ ಮಾಡಿದರೆ ಕಳಕ್ಕೊಂಬದು ವಿಶ್ವಾಸವ, ಅಲ್ಲದಾ?

    ಒಂದೊಪ್ಪ ಲಾಯ್ಕ ಆಯಿದು.

    1. ಶಿವರಾಮಣ್ಣ,
      ಒಲಿಪ್ಪೆ ಹೇದರೆ ಪ್ರೀತಿಲಿ ಕೊಡುವ ಉಡಿಗೆರೆ. ಈಗಾಣೋರು ಗಿಫ್ಟು ಹೇಳ್ತವಿಲ್ಲೆಯಾ.. ಅದೇ..

  3. ಸಕಾಲಕ್ಕೊದಗಿದ ಸುದ್ದಿ.., ಇದಲ್ಲಿ ವಿಮರ್ಶೆ ಮಾಡುವಾಗ ಅದೆಷ್ಟೋ ಸಂದೇಶಂಗೊ, ಆದರ್ಶಂಗೊ . ಅವರವರ ನೆಲೆಲಿ ಪರಿಪಾಲುಸೆಕ್ಕಾದ ವಿಚಾರಂಗೊ ಇದ್ದು. ಅದುವೇ ಅಲ್ಲೊ ಕೃಷ್ಣ ಲೀಲೆ!!.

  4. ಕೃಷ್ಣ-ಸುಧಾಮರ ಗೆಳೆತನದ ಕತೆಯ ನಮ್ಮ ಮನೆಭಾಷೆಲಿ ಕೇಳಿಯಪ್ಪಗ ಕೊಶೀಯಾತು. ಕಡೇಣ ಒಪ್ಪ ಓದಿಯಪ್ಪಗ ಅಪ್ಪು ಹೇಳಿ ಕಂಡತ್ತು.
    ಈ ಸಮೆಲಿ ಮನ್ನೆ ಹಾಡಿದ ಡುಂಡಿರಾಜನ ಪದ್ಯ ನೆಂಪಾವ್ತಾನೆ.
    ಗೆಳೆಯನ ನೋಡಲು ಹೋದ ಸುಧಾಮ ಕೊಟ್ಟನು ಹಿಡಿ ಅವಲಕ್ಕಿ
    ಸಿಕ್ಕಿತು ಬದಲಿಗೆ ಅಷ್ಟೈಶ್ವರ್ಯ, ನಿಜವಾಗಿಯು ಅವ- ಲಕ್ಕೀ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×