ಅನಂತ ಶಯನನ ಅನಂತ ಸಂಪತ್ತಿನ ಬಗ್ಗೆ ಬೈಲಿಲಿ ಮಾತುಕತೆ ಸುರುಮಾಡಿದ್ದೇ ಸುರು, ಒಳ್ಳೊಳ್ಳೆ ಒಪ್ಪಂಗೊ ಬಂದು ಮಾಹಿತಿಗೊ ತುಂಬಿತ್ತು.
ಅವನಷ್ಟಕೇ ಕೊಶೀಲಿ ಮನುಗಿದವನ ಏಳುಸಿದವು – ಹೇಳಿ ಕೆಲವು ಜೆನ ಅಜ್ಜಂದ್ರು ಪರಂಚಿಗೊಂಡವು ಬೈಲಿಲಿ.
ಅಲ್ಲಿ ಸಿಕ್ಕಿದ್ದರ ಎಂತ ಮಾಡ್ತವು, ಹೇಂಗೆ ಮಡಗುತ್ತವು – ಇತ್ಯಾದಿಗಳ ಬಗ್ಗೆ ಸಾವಿರ ಗುಮಾನಿ ಸುರು ಆಯಿದಾಡ.
ಅದೇನೇ ಇರಳಿ, ಅನಂತಶಯನಂಗೆ ಬೇಕಾದಲ್ಲಿ ಅವ° ಮಡಿಕ್ಕೊಂಗು. ಅಲ್ಲದೋ?
~
ನಮ್ಮ ಬೈಲಿಲಿ ಎಂತ ಆಗಿಂಡಿದ್ದು? ತೆಕ್ಕೊಳಿ – ಧಾರಾಳ ಮಳೆ.
ಅಪ್ಪು, ಮಳೆ ಇಲ್ಲೆ ಮಳೆ ಇಲ್ಲೆ ಹೇಳಿದೋರಿಂಗೆ ಈಗ ಮಳೆಂದಾಗಿ ಛಳಿ ಹಿಡುದ್ದು!
ಸಾರಡಿ ತೋಡಿಲಿ ಬೆಳ್ಳ ಮೊಗಚ್ಚಿದ್ದಡ, ಅಲ್ಲೇ ಆಡಿಗೊಂಡಿದ್ದಿದ್ದ ನೆಗೆಮಾಣಿಯ ಸ್ಲೇಟು ಬೆಳ್ಳಕ್ಕೆ!
ಅವಂಗೆ ಇನ್ನು ಇಂಗ್ಳೀಶು ಕಲಿವಲೆ ಆರೂ ಪರಂಚವು ಹೇಳಿ ಕೊಶಿ ಅಡ! 😉 ಆದರೆಂತ; ಬೈಲಿನವಕ್ಕೆಲ್ಲ ಇನ್ನು ಪುರುಸೊತ್ತೇ ಇದಾ!
ಮಳೆ ಸುರುಅಪ್ಪ ಸಮೆಯಲ್ಲೂ, ಬಿರಿತ್ತ ಸಮೆಯಲ್ಲೂ ಗುಡುಗು ಸೆಡ್ಳು ಬಂದು ಬಡಿತ್ತದು ಇದ್ದು. ಆದರೆ ಈಗ ಹಾಂಗಿಲ್ಲೆ!
ಮಳೆಸುರು ಆಗಿ ಅದಾಗಲೇ ಸುಮಾರು ಸಮೆಯ ಆತು ಇದಾ.
ಮಳೆಗಾಲಲ್ಲೇ ಬಪ್ಪ ಒಂದು ಪರ್ವಮಾಸ ನಾಳೆಂದ ಸುರು ಆವುತ್ತು – ಅಪ್ಪು, ನಾಳೆಂದ ಆಟಿ ಸುರು.
ಹಾಂಗಾಗಿ ಅದರ ಬಗ್ಗೆಯೇ ಮಾತಾಡುವನೋ ಈ ವಾರ?
~
ಸೂರ್ಯ° ಕರ್ಕಾಟಕ ರಾಶಿಗೆ ಬಂದು, ನಿಂದು, ಸಿಂಹ ಮಾಸಕ್ಕೆ ಹೋಪನ್ನಾರದ ಆ ಒಂದು ತಿಂಗಳಿನ ಸಮೆಯವೇ ಕರ್ಕಾಟಕ ಮಾಸ.
ಸೌರಮಾಸಂಗಳ ಬಗ್ಗೆ ಮಾಷ್ಟ್ರುಮಾವ° ವಿವರುಸಿದ್ದರ ಅದಾಗಲೇ ಹಲವೂ ಸರ್ತಿ ಹೇಳಿದ್ದು ಬೈಲಿಲಿ.
ಪುನಾ ಪುನಾ ವಿವರುಸಿರೂ ಅರ್ತ ಆಗದ್ದೆ ನಾವೆಲ್ಲೊರುದೇ ಬೋಚಬಾವಂದ್ರೋ?
ಅದಿರಳಿ,
ಕರ್ಕಾಟಕಕ್ಕೇ ಅಲ್ಲದೋ – ತುಳುವಿಲಿ ಆಟಿ ಹೇಳ್ತದು; (ತಮಿಳಿಲಿ ಇದರ ಆಡಿಮಾಸಂ – ಹೇಳ್ತವಡ).
ಅದೆಲ್ಲ ಸರಿ, ಈ ಆಟಿಯ ವಿಶೇಷ ಎಂತರ?
ಆಟಿಲಿ ವಿಶೇಷ ಎಂತದೂ ಇಲ್ಲೆ ಹೇಳ್ತದೇ ಒಂದು ವಿಶೇಷ!
ಆಟಿಲಿ ಯೇವ ಶುಬಕಾರ್ಯವೂ ಮಡಗವು – ಒರಿಶಾವಧಿ ಆವುತ್ತ ಪೂಜೆಗೊ ಬಿಟ್ರೆ!
ಮದಲಿಂಗೇ ಹಾಂಗೇ – ವಿಪರೀತ ಮಳೆ ಈ ಸಮೆಯಲ್ಲಿ.
ಹಾಂಗೆ ನೋಡಿರೆ, ಮಳೆ ಸುರು ಆಗಿ ಒಂತಿಂಗಳು ಆಗಿಯೂ ಬಿಟ್ಟತ್ತದಾ. ಗುಡುಗು-ಸೆಡ್ಳು ಎಲ್ಲ ಬಂದು ನಿಂದಿದು.
ಇನ್ನು ಎಂತ ಇದ್ದರೂ ನಿಶ್ಶಬ್ದ – ಬರೇ ಮಳೆಯ ಬಸಾಲನೆ ಬಪ್ಪ ಶೆಬ್ದ ಮಾಂತ್ರ!
ಸುತ್ತಮುತ್ತ ಎತ್ತ ನೋಡಿರೂ ಬತ್ತ ಧಾರೆಧಾರೆ ಮಳೆ! ದಿನದ ಯೇವ ಹೊತ್ತು ಕಂಡರೂ – ಕೇವಲ ಜಡಿಮಳೆನೀರು.
ಇದರಿಂದಾಗಿಯೇ ಆಟಿಲಿ ಯೇವದೇ ಶುಬಕಾರ್ಯ ಇಲ್ಲದ್ದದಾಯಿಕ್ಕು – ಹೇಳಿ ಮಾಷ್ಟ್ರುಮಾವ° ಗ್ರೇಶಿದ್ದವು.
ಈ ಆಚಾರ ಎಲ್ಲ ದಿಕ್ಕೆ ಇಲ್ಲೆ, ಕೇವಲ ತುಳುನಾಡಿಲಿ ಮಾಂತ್ರ. ತುಳುನಾಡಿಂಗೆ ಹೊಂದಿಗೊಂಡಿಪ್ಪ ನಮ್ಮ ಜೀವನಶೈಲಿಲಿಯೂ ಅದೇ ಬಯಿಂದು.
ಲೋಕತ್ರ ಇಲ್ಲೆ, ಲೋಕಲ್ಲು ಮಾಂತ್ರ – ಹೇಳಿ ಮುಳಿಯಬಾವ° ಪ್ರಾಸ ಹಿಡಿಗು!
ಎಲ್ಲದಕ್ಕೂ ಒಂತಿಂಗಳು ವಿರಾಮ.
ಜೆಂಬ್ರ ಮಾಡ್ಳಿಲ್ಲೆ ಹೇಳಿರೆ ಹೇಂಗಿರ್ತ ಜೆಂಬ್ರಂಗೊ? – ಮದುವೆಗೆ ಸಮ್ಮಂದಪಟ್ಟ ಕಾರ್ಯಂಗೊ, ಬದ್ಧ, ಮೂರ್ತ, ಸಟ್ಟುಮುಡಿ, ಅತವಾ ಉಪ್ನಾನ ಇತ್ಯಾದಿ ಶುಬಕಾರ್ಯಂಗೊ!
ಕಾರ್ಯಂಗೊಕ್ಕೆ ವಿರಾಮ ಆದರೇ ಅಲ್ಲದೋ –ಬಟ್ಟಮಾವಂದ್ರಿಂಗೆ ವಿರಾಮ ಅಪ್ಪದು?
ಹೋಯ್ – ನಮ್ಮ ಬೈಲಿನ ಬಟ್ಟಮಾವಂಗೂ ಹಾಂಗೇ ಆಯಿದು, ಅವುದೇ ಬತ್ತವಡ ಸದ್ಯಲ್ಲೇ.
~
ಅಂತೂ, ಆಟಿಲಿ ಪೂಜೆಗೊ ಮಾಂತ್ರ ಇಕ್ಕಷ್ಟೆ.
ಒರಿಶಾವಧಿ ನೆಡೆತ್ತ ಪೂಜೆಗೊ, ಜನ್ಮ ನಕ್ಷತ್ರ ಲೆಕ್ಕಲ್ಲಿ ಮಾಡ್ತ ಪೂಜೆಗೊ, ದುರ್ಗಾ ಪೂಜೆಗೊ – ಹೀಂಗೆಂತಾರು.
ಅಂಬಗ ಪೂಜೆ ಶುಬಕಾರ್ಯ ಅಲ್ಲದೋ – ಕೇಳುಗು ಬಿಂಗಿಪೆಂಗಣ್ಣ; ಹಾಂಗೆಲ್ಲ ಪೆರಟ್ಟು ಕೇಳಿರೆ ಒಪ್ಪಣ್ಣನ ಕೈಲಿ ಉತ್ತರ ಇಲ್ಲೆ!
ಬಿಂಗಿಬಿಟ್ಟು ಚೆಂದಲ್ಲಿ ಕೇಳಿರೆ, “ಮೂರ್ತ ಮಾಡೇಕಾದ ಕಾರ್ಯಂಗೊ ನೆಡವಲಿಲ್ಲೆ, ಮೂರ್ತದ ಅಗತ್ಯ ಇಲ್ಲದ್ದೆ, ನಿತ್ಯಸುಮುಹೂರ್ತಲ್ಲಿ ಮಾಡ್ಳಕ್ಕಾದ ಕಾರ್ಯವ ಮಾಡ್ಳಕ್ಕು” – ಹೇಳುಗು ನಮ್ಮ ಬಟ್ಟಮಾವ°.
~
ಈ ಮಳೆಗಾಲದ ಮಳೆಗೆ ಶೀತಹಿಡುದರೂ, ಎಡೆಡೇಣ ಬೆಶಿಲಿಂಗೆ ಉಷ್ಣ ಆವುತ್ತಡ.
ಆಟಿಟರ್ದೊ ಅರೆಗ್ಗಾಲೊ; ಮಾಯಿಟರ್ರ್ದೊ ಮರಿಯಾಲೊ – ಹೇಳುಗು ಬಟ್ಯ°.
ಬೆಶಿಲು ಬಯಂಕರ ಖಾರ ಅಡ; ಆ ಖಾರವ ಕಾಂಬಗ ಬಟ್ಯಂಗೆ ಅರೆಗ್ಗಾಲ – ಬೇಸಗೆಯ ನೆಂಪು ಬಕ್ಕಾಡ. ಅಷ್ಟೂ ಖಾರ!
ಮಳೆಗಾಲದ ಶೀತಕ್ಕೆ ಕಂಬುಳಿ, ಬೇಸಗೆಯ ಸೆಕಗೆ – ಕಂಬುಳಿಯೂ ಬೀಸಾಳೆಯೂ ಒಟ್ಟಿಂಗೇ ಮಡಿಕ್ಕೊಳೇಕಾದ ಸಂದರ್ಭ!! 😉
ಈ ಮಿಶ್ರಂದಾಗಿ ಸಣ್ಣ ಮಕ್ಕೊಗೆ ಹವೆಗೆ ಬೇಗ ಆರೋಗ್ಯವಿತ್ಯಾಸ ಬತ್ತಾಡ, ಪಾತಿಅತ್ತೆ ಹೇಳುಗು ಒಂದೊಂದರಿ!
ಶೀತ-ಉಷ್ಣಂಗಳ ಸಮಪಾಕ ಶೀತೋಷ್ಣ ಹವೆಯ ಆಟಿ ಒರಿಶದ ವೈಚಿತ್ರ್ಯಕಾಲಲ್ಲಿ ಒಂದು!
~
ಆರೋಗ್ಯ ವಿತ್ಯಾಸ ಬತ್ತಲ್ಲದೋ – ಅದಕ್ಕೆ ಪಿರಿ ಮದ್ದುಗಳೂ ಇದ್ದು.
ತುಳುನಾಡಿನ ಕೆಲವು ಆಚರಣೆಗಳಲ್ಲಿ – ಆಟಿಲಿ ಹಾಲೆಮರದ ಎಸರು ಕುಡಿವದೂ ಒಂದು.
ಹೇಳಿದಾಂಗೆ, ಹಾಲೆಮರ ಅರಡಿಗಲ್ಲದೋ? ಅಂದೊಂದರಿ ಕಾಡಿನ ಮರಂಗಳ ಶುದ್ದಿ ಮಾತಾಡುವಗ ಹೇಳಿದ್ದು.
ಚೇರೆ ಮರದ ಕಿರಿಯಬ್ಬೆ ಮಗನ ಹಾಂಗೆ ಕಾಣ್ತಡ ಬೋಚಬಾವಂಗೆ.
ತುಳುವರು ಬಲೀಂದ್ರ ಕಂಬ ಹಾಕುದು ಇದನ್ನೇ. ಪ್ರತಿ ಗೆಂಟಿಲಿಯೂ ನಾಗು ಎಗೆ ಬಂದು ಬೆಳದ ಒಂದು ಮೇಣದ ಮರ.
ಈ ಹಾಲೆಮರದ ಕೆತ್ತೆಯ ಗುದ್ದಿ, ಎಸರು ತೆಗದು ಆಟಿಲಿ ಮನೆಯೋರೆಲ್ಲರೂ ಕುಡಿಗು.
ತಿಂಗಳ ಬಾಕಿ ಒಳುದ ದಿನ ಆ ಮೇಣ ಖಾರ ಆದರೂ, ಆಟಿಲಿ ಅದು ದೇಹಕ್ಕೆ ಒಳ್ಳೆದು – ಹೇಳ್ತದು ತುಳುವರ ನಂಬಿಕೆ.
~
ಸೌರಮಾಸ ಆಟಿಲಿ ಒಂದು ಚಾಂದ್ರಮಾಸದ ಅಮವಾಸ್ಯೆ ಬಕ್ಕಲ್ಲದೋ – ಆಟಿ ಅಮಾಸೆ ಹೇಳುಗು ಬಟ್ಯ.
ಸಮುದ್ರಸ್ನಾನ ಹೇಳಿ ಕೇಳಿದ್ದಿರೋ?
ಸಾಧಾರಣವಾಗಿ ಈ ಸಮೆಯಲ್ಲಿ ಶಾಂತವಾಗಿಪ್ಪ ಸಮುದ್ರರಾಜನ ಸಣ್ಣ ಸಣ್ಣ ಅಲೆಗಳಲ್ಲಿ ಮಿಂದು ಪಾವನರಪ್ಪ ವಿಶೇಷ ಆಚರಣೆ – ಸಮುದ್ರ ಸ್ನಾನ.
ಸೋಮೇಶ್ವರ ದೇವಸ್ಥಾನದ ಹತ್ತರಾಣ ಕಡಲಕರೆಲಿ ಈ ಸಮುದ್ರಸ್ನಾನ ತುಂಬಾ ವಿಶೇಷ ಅಡ.
ನಮ್ಮ ಕಣಿಯಾರದ ಕಡಲಿಂಗೂ ಒಂದರಿ ಹೋಗಿ ಮಿಂದಿಕ್ಕುಗು ಬೈಲಕರೆಯ ಹಲವು ಜೆನಂಗೊ!
ಹೇಂಗೂ ಆಟಿಲಿ ಬೇರೆ ಜೆಂಬ್ರಂಗಳ ಗಡಿಬಿಡಿ ಇಲ್ಲೆ – ಹಾಂಗಾಗಿ ಹೀಂಗೇನಾರು ಮಾಡ್ತದು – ಹೇಳುಗು ಪಾರೆ ಮಗುಮಾವ°. 😉
~
ಆರು ಎಷ್ಟೇ ನೆಮ್ಮದಿಲಿ ಇರ್ಲಿ – ಆದರೆ ಅಡಕ್ಕೆ ತೋಟ ಇದ್ದೋರಿಂಗೆ ಇದೊಂದು ತಲೆಬೆಶಿಯ ಸಮೆಯವೇ ಸೈ!
ಬೈಲಿಲಿ ಹೆಚ್ಚಿನೋರಿಂಗೂ ಅಡಕ್ಕೆತೋಟ ಇರ್ತು ಇದಾ, ಈ ಸಮೆಯಲ್ಲಿ – ಒಯಿವಾಟು ಹೇಂಗಿದ್ದು ಭಾವಾ – ಕೇಳೇಕು ಅವರ ಕೈಲಿ!!
ಮದಲಾಣ ಒಂತಿಂಗಳಿನ ಮಳಗೆ ರಜರಜ ನಳ್ಳಿ ಉದುರುದೋ, ಬೂಸುರು ಹಿಡಿವದೋ – ಎಲ್ಲ ಸುರು ಆಗಿರ್ತು.
ಸಿಂಗಾರ ದಪ್ಪ ಬಂದದು ಕಂಡು ಕೊಶಿ ಆದ ಬೈಲಿನ ಮಾವಂದ್ರಿಂಗೆ ನಳ್ಳಿ ಉದುರುತ್ತದು ಕಂಡು ಬೇಜಾರ ಅಪ್ಪ ಸಮೆಯ!
ಮದ್ದು ಬಿಡುದು ಒಂದು ಮಹಾ ಕಾರ್ಯ ಇದ್ದನ್ನೇ? ನಳ್ಳಿ ಉದುರುತ್ತದಕ್ಕೆ ಅದೇ ಆಯೆಕ್ಕಟ್ಟೆ ರಾಮ ಬಾಣ!!
ಮದ್ದು?
ಅಪ್ಪು, ಸುಬಗಣ್ಣ ಹೇಳ್ತ ಅರಿಷ್ಟಕುಪ್ಪಿಯ ಮದ್ದು ಅಲ್ಲ, ಅಡಕ್ಕಗೇ ಒಂದು ಮದ್ದು ಬತ್ತು – ಮೈಲುತೂತು!
ಮದ್ದು ಬಿಟ್ಟ ಮರದಿನ ಒಂದು ಮೈಲು ದೂರಕ್ಕೆ ಅದರ ತೂತುತೂತು ಕಾಣ್ತು ಹೇಳಿ ಹಾಂಗೆ ಹೇಳ್ತದೋ ಏನೋ! ಉಮ್ಮಪ್ಪ.
ಕೋಪರು ಸಲ್ಪೇಟು ಹೇಳಿ ವಿಜ್ಞಾನದ ಹೆಸರಡ. ಚೆಂಬಿನ ಕರಗುಸಿ ಮಾಡ್ತದಡ ಅದರ, ಹಾಂಗಾಗಿ ಒಳ್ಳೆತ ಕ್ರಯ ಇದ್ದಾಡ ಅದಕ್ಕೆ.
ಈ ಮೈಲುತೂತನ್ನೇ ಬಿಡ್ತದೋ? ಅಲ್ಲಪ್ಪ, ಅದಕ್ಕೆ ರಜ್ಜ ಕೆಣಿಗೊ ಇದ್ದು.
ಸುಣ್ಣದ ಚಿಪ್ಪು ಬೈಲಕರೆ ಅಂಗುಡಿಂದ ಸುರೂವಿಂಗೆ ತಪ್ಪಲಿದ್ದು.
ಮದ್ದು ಬಿಡ್ತ ಜೆನ ಬಂದರೆ ಮಾಂತ್ರ – ಆ ಸುಣ್ಣವ ಕಬ್ಬಿಣದ ಡಬ್ಬಿಗೆ ಹಾಕಲಿದ್ದು.
ಅದಕ್ಕೆ ಒಂದು ಕೊಡಪ್ಪಾನ ತಣ್ಣೀರು ಎರವಲಿದ್ದು, ಅದಾ – ಕೊತಕೊತ ಕೊದಿಯಲೆ ಸುರು ಆವುತ್ತು.
ಎಂತದೋ ರಾಸಾಯನಿಕ ಪ್ರಕ್ರಿಯೆ ಸುರು ಆಗಿ, ಚಿಪ್ಪು ಪೂರ ನೀರಿಲಿ ಕರಗುತ್ತು. ಬಯಂಕರ ಬೆಶಿಯೂ ಆಗಿ ಬಿಡ್ತು.
ಸುಣ್ಣಬೇಶಿದ ಬೆಳಿಡಬ್ಬಿ ಮುಟ್ಳೆ ಹೋಗಿ ಕೈಲಿ ಹೊಕ್ಕುಳು ಬಂದಿತ್ತು ನೆಗೆಮಾಣಿಗೆ.
– ಅದರಿಂದ ಮತ್ತೆ ಮಾಷ್ಟ್ರುಮಾವನ ಎಲೆಡಬ್ಬಿಲಿ ಸುಣ್ಣದಂಡೆ ಕಂಡ್ರೂ ಮುಟ್ಟುತ್ತನಿಲ್ಲೇಡ! 😉
ಆ ಸುಣ್ಣವನ್ನೂ, ಮೈಲುತೂತು ನೀರನ್ನೂ ಹಾಕಿ ಒಂದು ದೊಡಾ ಹಂಡೆಗೆ ಸಜ್ಜಿಲೆ ನೀರು ಹಾಕುತ್ಸು. ಅದಾ – ಮದ್ದು ಬಿಡ್ತ ಮೈಲುತೂತು ತೆಯಾರು.
ಬೋರ್ಡೋ ಮಿಕ್ಷರು ಹೇಳ್ತದಡ ಇದರ ಪೇಟೆಲಿ.
ಬೋಚಬಾವಂಗೆ ಗೊಂತಾದರೆ ಜೆಂಬ್ರಲ್ಲಿಮಾಡ್ತಮಿಕ್ಷರು – ಹೇಳಿಗೊಂಡು ಬಾಯಿಗೆ ಹಾಕಿಕ್ಕುಗು, ಜಾಗ್ರತೆ!
ಈ ಬೋರ್ಡೋ ಮಿಕ್ಷರು ಅಂಬಗಂಬಗ ತೆಯಾರು ಆಯೇಕಡ.
ಸುಣ್ಣವನ್ನೂ, ಮೈಲುತೂತನ್ನೂ ಮಿಶ್ರ ಮಾಡಿದ ಕೂಡ್ಳೇ ಅಯಾನು ವಿನಿಮಯ ಅಪ್ಪಲೆ ಸುರು ಆವುತ್ತಡ. ಆ ಅಯಾನುಗಳಿಂದಾಗಿ ಅಡಕ್ಕೆ ತೋಟಲ್ಲಿರ್ತ ಶಿಲೀಂಧ್ರ ನಾಶ ಅಪ್ಪದಾಡ.
ಹಾಂಗಾಗಿ, ಮದ್ದು ಇಂದು ಮಾಡಿದ್ದಾದರೆ, ಇಂದೇ ಮುಗಿಯೇಕು – ಬಪ್ಪವಾರಕ್ಕೆ ಏನೂ ಪ್ರಯೋಜನ ಇಲ್ಲೆ; ಸಾರಡಿ ತೋಡಿಂಗೇ ಬಿಡೆಕ್ಕಷ್ಟೇ!
~
ಹೇಳಿದಾಂಗೆ, ನಾವು ಈ ಮದ್ದುಬಿಡ್ತ ಶುದ್ದಿ ವಿವರುಸುವಗ ಸುಬಗಣ್ಣಂಗೆ ಸುಣ್ಣ ಕೊದುದ ಹಾಂಗೇ ಆತು ಒಂದರಿ!
ಎಂತಗೆ? ಇದಾ, ಸಮದಾನಕ್ಕೆ ಕೇಳಿ:
ಈ ಮದ್ದು ಬಿಡ್ತದು ಇದ್ದನ್ನೇ, ಅದು ರಜಾ ಬಂಙದ ಕೆಲಸ!
ಸಪೂರದ ಅಡಕ್ಕೆ ಮರಕ್ಕೆ ದಿನ ಇಡೀ ಹತ್ತಿ-ಇಳುದು ಮಾಡಿ, ಮದ್ದಿನ ಓಟೆಯ ಸರೂತಕ್ಕೆ ಅಡಕ್ಕೆಕಿಲಗೆ ಗುರಿಮಡೂಗಿ ಹಿಡಿಯೇಕು ಅಲ್ಲದೋ?
ಎಲ್ಲೋರಿಂಗೂ ಹರಿತ್ತ ಕೆಲಸ ಅಲ್ಲ- ಊರಿಂಗೊಂದು ಜೆನ ಇಕ್ಕಷ್ಟೆ.
ನಮ್ಮ ಸುಬಗಣ್ಣಂಗೆ ಒಂದು ಸುಂದರನಾಯ್ಕ ತಾಂಟಿಗೊಂಡಿದು ಈ ಕೆಲಸಕ್ಕೆ.
ಊರಿನ ಎಲ್ಲಾ ಅಡಕ್ಕೆಭಾವಯ್ಯಂದ್ರಿಂಗೆ ಅದುವೇ ಆಯೆಕ್ಕಷ್ಟೆ. ಎಲ್ಲೋರುದೇ ದಿನಿಗೇಳ್ತ ಕಾರಣ ಅದಕ್ಕೆ ರಜ್ಜ ಬೇಡಿಕೆಯೂ ಜಾಸ್ತಿ.
ಎಷ್ಟು ಬೇಡಿಕೆ ಹೇಳಿತ್ತುಕಂಡ್ರೆ, ಸುಬಗಣ್ಣನ ಕೈಲಿ ಇಪ್ಪದಕ್ಕಿಂತಲೂ ಲಾಯಿಕದ ಮೊಬಯಿಲು ಅದರ ಕೈಲಿ ಇದ್ದು!
ಹ್ಮ್, ಈ ಮದ್ದು ಬಿಡ್ತದು ಆ ಸಮೆಯಲ್ಲೇ ಆಗೆಡದೋ – ಅಪ್ಪು.
ಸುಬಗಣ್ಣಂಗೆ ದಿನಾಗುಳೂ ಈ ಸುಂದರಂಗೆ ಪೋನುಮಾಡ್ತದು ಕೆಲಸ.
ಈಗೀಗ ಒರಕ್ಕಿಲಿಯೂ ಸುಂದರಂಗೆ ಪೋನುಮಾಡಿದ ನಮುನೆಲಿ ಮಾತಾಡ್ತವು – ಹೇಳಿ ಅವರ ಮನೆದೇವರು ಮೊನ್ನೆ ಬೇಜಾರುಮಾಡಿಗೊಂಡಿತ್ತಿದ್ದವು!
ಇನಿಬರ್ಪೆ, ಗ್ಯಾರೆಂಟಿ – ಹೇಳ್ತಡ ದಿನಾಗುಳೂ; ಆ ಲೆಕ್ಕಲ್ಲಿ ದಿನಾಗುಳೂ ಚಪಾತಿ ಲಟ್ಟುಸುತ್ತದು.
ಬರ್ಪೆ ಹೇಳಿದ್ದಕ್ಕೆ ಅದು ಮನೆಂದ ನೆಡಕ್ಕೊಂಡು ಹೆರಟು ಜಾಲಕೊಡಿಯಂಗೆ ಎತ್ತುವಗ ಯೇವದೋ ಬಂಟ ಬತ್ತು, ಕಾರು ತೆಕ್ಕೊಂಡು.
ಈಗಾಣ ಹೊಸ ಬಂಟಂಗೊ ನಾಕು ದೊಡಾ ತೋಟ ಹಾಕಿರೆ, ಅವು ಸಂಬಳದೊಟ್ಟಿಂಗೆ ಬಗ್ಗುಸಲೆ ಕುಪ್ಪಿಯೂ ಕೊಟ್ರೆ, ಮತ್ತೆ ಮುಗಾತು!!
ನೆಡಕ್ಕೊಂಡು ಬೆಗರು ಹರುಶುದು ಎಂತಕೆ, ಕಾರಿಲಿ ಸೀತ ಅವರ ಮನೆಗೆ ಹೋವುತ್ತು.
ಕಾದು ಕೂದ ಸುಬಗಣ್ಣಂಗೆ ಕಾದು ಕಾದು ಕರಂಚುತ್ತು!
ಲಟ್ಟುಸಿ ಬೇಶಿಹಾಕಿದ ಚಪಾತಿಯ ದನಗೊಕ್ಕೆ ಕೊಡ್ಳೆಡಿತ್ತೋ? ಚೆ ಚೆ, ಸುಬಗಣ್ಣನೇ ಮುಗುಶೇಕಟ್ಟೆ!
ಕೊಶೀಲಿ ಎಡಿಗಾದಷ್ಟು ತಿಂತವು ಸುಬಗಣ್ಣ; ಆದರೆ, “ಇಂದಲ್ಲದ್ದರೆ ನಾಳೆ ಆದರೂ ನಿಂಗಳೇ ತಿಂದು ಮುಗಿಶೇಕು” – ಹೇಳಿ ಮನೆದೇವರು ಜೋರುಮಾಡಿರೆ ಕತೆ ಮುಗಾತು!
ಅದಕ್ಕೇ ಅದ, ಅವು ಅಟ್ಟಿನಳಗೆಲಿ ಬೇಶಿ ಬೆಶಿಮಾಡಿ… ಕಳುದವಾರ ಮಾತಾಡಿದ್ದು ಆ ಬಗ್ಗೆ! ಪಾಪ!!
~
ಓಯ್, ಇದರ್ಲಿ ಸುಬಗಣ್ಣನ ನೆಗೆಮಾಡ್ಳೆ ಎಂತೂ ಇಲ್ಲೆ. ಎಲ್ಲ ಕೃಷಿಕರ ಸಮಸ್ಯೆ.
ಚೆನ್ನೈಬಾವ ನಿನ್ನೆ ಕಟ್ಟಪುಣಿಲಿ ಕೂದು ಮಾತಾಡುವಗ ಒಂದು ಸಲಹೆ ಕೊಟ್ಟವು.
ಹೇಂಗೂ ಸುದರಿಕೆ ಬಳಗಂಗೊ ಇದ್ದು, ಆಟಿಲಿ ಅವಕ್ಕೆ ಪುರುಸೊತ್ತೂ ಇದ್ದು. ಅವ್ವೇ ಈ ಮದ್ದುಬಿಡ್ತ ಕಾರ್ಯ ಏಕೆ ಮಾಡ್ಳಾಗ – ಹೇಳಿಗೊಂಡು!
ಅಪ್ಪನ್ನೇ ಕಂಡತ್ತು. ಜಾಸ್ತಿ ನವಗರಡಿಯ – ನೆರೆಕರೆಯೋರು ಒಂದರಿ ಯೋಚನೆ ಮಾಡಿಕ್ಕಿ, ಆತೋ?
~
ಅದಿರಳಿ,
ಆಟಿಲಿ ಇನ್ನೊಂದು ಸಂಗತಿ ನೆಡೆತ್ತು ಬೈಲಿಲಿ- ಅದೆಂತರ?
ಹೆಮ್ಮಕ್ಕೊ ಅವರ ಅಪ್ಪನ ಮನಗೆ ಹೋವುತ್ತದು! ಹೊಸ ಹೆಮ್ಮಕ್ಕೊ ಅಂತೂ ಹೋಗಿಯೇ ಹೋಕು! ಆಟಿಗು ಕುಳ್ಳುನೆ ಹೇಳುಗು ತುಳುವರು.
ಈ ಆಚರಣೆಯೂ ನವಗೆ ತುಳುವರಿಂದ ಬಂದದಾಡ, ಮಾಷ್ಟ್ರುಮಾವ° ಹೇಳುಗು. ಒಳ್ಳೆಕ್ರಮಂಗೊ ಎಲ್ಲಿಂದ ಬಂದರೆ ಎಂತಪ್ಪ, ಒಳ್ಳೆದೇ ತಾನೇ?!
ಈಗ ಒಂತಿಂಗಳು ಕೂಪಲೆ ಪುರುಸೊತ್ತಿಲ್ಲದ್ದರೂ, ಆ ಲೆಕ್ಕಲ್ಲಿ ಒಂದೊಂದು ದಿನ ಆದರೂ ಹೋಗಿಬಕ್ಕು.
ಒರಿಶದ ಯೇವತ್ತು ಹೋಪಲೆ ಎಡಿಯದ್ರೂ, ಆಟಿಲಿ ಒಂದು ಗಳಿಗೆ ಹೋಗಿ ಬತ್ತವು.
ಅಪ್ಪನ ಮನೆ ಬಾಂಧವ್ಯವ ಹಸಿಯಾಗಿ -ಹಸಿರಾಗಿ ಒಳಿಶಲೆ ಈ ಒಂದು ವಿಶೇಷ ಕ್ರಮ ಕೆಲಸಮಾಡ್ತು!
~
ಆಟಿಲಿಪ್ಪ ಮತ್ತೊಂದು ಕೆಲಸ – ನೆಟ್ಟಿತರಕಾರಿ.
ಹೇಮಾರ್ಸಿ ಮಡಗಿದ ಬಿತ್ತುಗಳಲ್ಲಿ ಕೆಲವರ ತೆಗದು, ಸಾಲುಮಾಡಿದ್ದರಲ್ಲಿ ದೂರದೂರಕೆ ಹಾಕಿ, ಹುಟ್ಟಿದ್ದರ ಚೆಂದಕೆ ನೆಟ್ಟು, ಹಟ್ಟಿಗೊಬ್ಬರ ಹಾಕಿರೆ ಬೆಂಡೆಹಾಗಲ ಪಟಕಿಲ ಅಳತ್ತೊಂಡೆಗೊ ಎಳಗಿ ಎಳಗಿ ಬಕ್ಕು!
ಮಳೆಗಾಲಕ್ಕೆ ಜಾಲಿಂಗೆ ಹಾಕಿದ ಮಡ್ಳಿಲಿಯೋ, ಅಲ್ಲ ಹಟ್ಟಿಕರೆಲಿ ಇರ್ತ ತಗ್ಗಿನ ಜಾಗೆಲಿಯೋ- ಎಲ್ಲಿ ಹೋದರೆ ಒಂದೊಂದು ನೆಟ್ಟಿಬಳ್ಳಿ ಕಾಂಗು.
“ಕರ್ಕಟಿ” ಹೇಳಿರೆ ಚೆಕ್ಕರ್ಪೆ ಅಡ. ಕರ್ಕಾಟಕ ಮಾಸಲ್ಲಿ ವಿಶೇಷವಾಗಿ ಅಪ್ಪ ಕಾರಣ ಅದಕ್ಕೆ ಆ ಹೆಸರು ಬಂತಾಡ!!
ಕೃಷಿ ಜಾಸ್ತಿ ಏನೂ ಮಾಡ್ಳೆಡಿಯದ್ದರೂ, ರಜರಜ ಮನೆಹತ್ತರೇ ಮಾಡಿಗೊಂಡು ನಮುನೆನಮುನೆ ಊಟಂಗೊಕ್ಕೆ ಇಪ್ಪ ಬಗೆಬಗೆ ತರಕಾರಿ ಮಾಡಿಗೊಂಗು.
~
ನಮ್ಮೋರ ಮನೆಗಳಲ್ಲಿ ಆಟಿಲಿ ಅಳವಡಿಕೆ ಆಗಿ ಬಂದ ಇನ್ನೊಂದು ಗವುಜಿ – ದುರ್ಗಾ ಪೂಜೆ ಉತ್ಥಾನ.
ಹನ್ನೆರಡು ದಿನ ನಿರಂತರವಾಗಿ ದುರ್ಗಾಪೂಜೆ ಮಾಡಿ ಕೊನೆಯ ದಿನ ಉತ್ಥಾನ ಮಾಡ್ತ ಏರ್ಪಾಡು.
ಇದಕ್ಕೆ ಆಟಿ ತಿಂಗಳ ಹೊಡಾಡಿಕೆ ಉತ್ಥಾನ ಹೇಳಿಯೂ ಹೇಳ್ತವು. (ಆಚೊರಿಶ ಆ ಬಗ್ಗೆ ಮಾತಾಡಿದ ಶುದ್ದಿ ಇಲ್ಲಿದ್ದು.)
ಕಿಸ್ಕಾರ ಇಲ್ಲದ್ದ ಕಾಲಲ್ಲಿ ಕಶಿಕಿಸ್ಕಾರದ ಗೆಡು ಹುಡ್ಕಿಂಡು, ದಿನಕ್ಕೆ ಒಂದೇ ಗೊಂಚಲು ಕೊಯಿದು, ಹನ್ನೆರಡು ದಿನ ಸುದಾರ್ಸುತ್ತದು ಕೊಶಿ ಅಲ್ಲದೋ?
ನೆರಿಯದಜ್ಜ° ನಿತ್ಯವೂ ಹನ್ನೆರಡು ಜಾತವೇದಸೇ ಹೇಳಿ, ಹನ್ನೆರಡು ದಿನಲ್ಲಿ ಒಟ್ಟು ನೂರನಲುವತ್ನಾಕು ಸರ್ತಿ ಹೇಳಿದ್ದರ್ಲಿ, ಆ ಮನೆಯ ಹೆಮ್ಮಕ್ಕೊಗೂ ದುರ್ಗಾಸೂಕ್ತ ಬಂದುಗೊಂಡಿತ್ತು!!
ಇದೆಲ್ಲದರ ಬಗ್ಗೆ ನಾವು ಅಂದೊಂದರಿ ಮಾತಾಡಿದ್ದು. ನೆಂಪಿದ್ದೋ?
ಇಷ್ಟೆಲ್ಲ ಗವುಜಿ ಇದ್ದರೂ ಆಟಿ ಆಟಿಯೇ.
~
ಆಟಿ ಸುರುಆವುತ್ತ ಸಮೆಯಲ್ಲೇ ಇನ್ನೊಂದು ಗವುಜಿಯೂ ಸುರು ಆವುತ್ತು. ಅದೆಂತರ?
ಗುರುಪೂರ್ಣಿಮೆ!
ಅಪ್ಪು, ಪುರಾಣಗುರು ವೇದವ್ಯಾಸರ ಜನ್ಮದಾಚರಣೆಯ ಮೂಲಕ, ಲೋಕದ ಎಲ್ಲಾ ಗುರುಗಳನ್ನೂ ನೆಂಪುಮಾಡ್ತ “ಗುರುಪೌರ್ಣಮಿ”ಯುದೇ ಇದೇ ಆಟಿಲಿ ಬತ್ತು.
ಇದೇ ದಿನ ನಮ್ಮ ಗುರುಗೊ ಚಾತುರ್ಮಾಸ್ಯ ಸುರುಮಾಡ್ತವಲ್ಲದೋ – ಅದೊಂದು ಗೌಜಿ ಸುರು.
ಲೋಕದ ಎಲ್ಲಾ ದಿಕ್ಕಂದಲೂ ಬಂದು ಸೇರಿಗೊಂಡು, ಗುರುಗಳ ಚಾತುರ್ಮಾಸ್ಯದ ಗವುಜಿ ಹಂಚುತ್ತ ಹಬ್ಬ.
ಗುರುಗೊ ಅಂತರ್ಮುಖಿಗೊ ಆಗಿ, ಆಹಾರ ನಿಯಂತ್ರಣ ಮಾಡಿಗೊಂಡು ಅಧ್ಯಯನಲ್ಲಿ ತೊಡಗುತ್ತ ಸಮೆಯ.
ಉಪನ್ಯಾಸ, ಮಾರ್ಗದರ್ಶನಂಗಳ ಕೊಟ್ಟೊಂಡು ಶಿಷ್ಯಸಮೂಹವಗ ಜೊತೆಗೂಡುಸಿಗೊಂಡು ಸಂಘಟನೆಯನ್ನೂ ಬೆಳೆಶುತ್ತ ಸಮೆಯ.
(ಕಳುದೊರಿಶ ಈ ಬಗ್ಗೆ ಶುದ್ದಿ ಮಾತಾಡಿದ್ದು, ಗೊಂತಿದ್ದೋ?)
ಬೈಲಿಂದ ಎಲ್ಲೋರುದೇ ಹೋಗಿ ಸೇರ್ತ ಸಮೆಯ.
ಹೇಳಿದಾಂಗೆ, ಚಾತುರ್ಮಾಸ್ಯದ ಹೇಳಿಕೆಕಾಗತ ಬೈಲಿಂಗೆ ಕೊಟ್ಟದು ಇಲ್ಲಿದ್ದು. ಹೇಳಿಕೆ ಬಯಿಂದಲ್ಲದೋ?!
~
ಗುರುಗೊಕ್ಕೆ ಮಾಂತ್ರ ಅಲ್ಲ, ಬೈಲಿನ ಎಲ್ಲೋರಿಂಗೂ ಅದೇ ನಮುನೆ.
ನಿತ್ಯವೂ ತೋಟ, ಕೆಲಸ, ಕೊಟ್ಟು, ಪಿಕ್ಕಾಸು ಹೇಳಿಗೊಂಡಿದ್ದವು ಒಂತಿಂಗಳು ಪುರುಸೊತ್ತು ಕಾಣ್ತ ಸಮೆಯ.
ಮನೆ ಒಳವೇ ಇದ್ದೊಂಡು ಅಂತರ್ಮುಖಿಯಾಗಿ ಆನಂದಲ್ಲಿ ಕಾಲ ಕಳೆತ್ತ ಸಮಯ.
ಶಾಂತಾಣಿ, ಪುಳಿಂಕೊಟೆ, ಹಪ್ಪಳ – ಹೀಂಗಿರ್ತ ಹೇಮಾರ್ಸಿ ಮಡಗಿದ್ದರ ಕಾಲಿಮಾಡಿಗೊಂಡು, ಮನೆಒಳವೇ ಇರ್ತ ಕಾರ್ಯ ಈ ಆಟಿ.
ಮಕ್ಕೊಗೆ ಶಾಲಗೆ ರಜೆ ಸಿಕ್ಕಿದ ನಮುನೆ ಬೈಲಿನೋರಿಂಗೆ ಆಟಿಯೇ ಒಂತಿಂಗಳ ರಜೆ!!
ಬೈಲಿನೋರಿಂಗೆ ರಜೆ ಆದರೆ ಎಂತ, ಚೆನ್ನೆಮಣೆ, ಪಗಡೆ – ಇತ್ಯಾದಿ ಆಟದ ಸೊತ್ತುಗೊಕ್ಕೆ ಪೂರ್ತಿ ಕೆಲಸ ಸಿಕ್ಕುತ್ತ ಸಮೆಯ!
~
ಹೇಳಿದಾಂಗೆ, ಈ ಮೇಗೆ ಹೇಳಿದ ಶುದ್ದಿಗಳಲ್ಲಿ ಕೆಲವೆಲ್ಲ ಮದಲಿಂಗೆ ಮಾಂತ್ರ ಇದ್ದಿದ್ದದು.
ಕಾಲಗತಿ ಬದಲಾದ ಹಾಂಗೇ, ಜೀವನಕ್ರಮ ಬದಲಾದ ಹಾಂಗೇ – ಈಗೀಗ ಇಂಟರುನೆಟ್ಟು ಬಂದಮೇಗೆ ನಿತ್ಯವೂ ಆಟಿಯ ಹಾಂಗೇ ಆಯಿದು.
ಕೆಲವು ದಿಕ್ಕೆ ತೋಟವೇ ಇಲ್ಲೆ, ಇನ್ನು ತೋಟಕ್ಕೆ ಇಳಿವದೆಲ್ಲಿಂದ, ಅಲ್ಲದೋ? 🙁
ಹೆರಾಣ ಕೆಲಸಂಗಳಿಂದ ವಿಮುಖರಾಗಿ, ಮನೆಯೊಳವೇ ಅಂತರ್ಮುಖಿಗಳ ನಮುನೆಲಿ ಕೂದುಗೊಂಬದಿದಾ.
ಅಂತರ್ಮುಖಿ – ಒಬ್ಬನೇ ಕೂದಂಡು ನೆಗೆಮಾಡಿಗೊಂಡು, ಇಪ್ಪದಲ್ಲದೋ – ಇದುದೇ ಹಾಂಗೇ!
ಹಳೆಶುದ್ದಿಗಳ, ಹಗುರ ಶುದ್ದಿಗಳ ಮಾತಾಡುವೊ° ಹೇಳಿ ಸರ್ಪಮಲೆಮಾವ° ಕಳುದವಾರ ಹೇಳಿಪ್ಪಗ, ಆಟಿಲಿ ಪುರುಸೋತಿದ್ದಲ್ಲದೋ – ಅಂಬಗ ಮಾತಾಡುವೊ° ಹೇಳಿತ್ತಿದ್ದೆ.
ಎಂತಕೆ ಹೇಳಿರೆ, ಆಟಿಲಿ ಬೈಲಿಂಗಿಡೀ ಪುರುಸೋತು. ಒಪ್ಪಣ್ಣಂಗೂ ಪುರುಸೊತ್ತೇ, ಅವಕ್ಕೂ ಪುರುಸೊತ್ತೇ!! 😉
ಹಾಂಗೆ, ಈ ವಾರ ರಜ್ಜ ಹಗುರ – ಹೊತ್ತೋಪಲೆ ಇಪ್ಪ ಶುದ್ದಿ.
ಶುದ್ದಿ ಕೇಳಿ, ನಿಂಗಳ ನೆರೆಲಿ ಎಂತಾರು ಗವುಜಿಗಮ್ಮತ್ತಿದ್ದರೆ, ಹಪ್ಪಳ ಹೊರುದ್ದಿದ್ದರೆ ನವಗೂ ಹೇಳಿಕ್ಕಿ. ಆತೋ?
ಅದೇನೇ ಇರಳಿ, ಸೆಖೆಗಾಲಲ್ಲಿ ಸೆಖೆಯ ಸವಿತ್ತು, ಚಳಿಗಾಲಲ್ಲಿ ಛಳಿಗೆ ಕೊಶಿಪಟ್ಟುಗೊಳ್ತು.
ಹಾಂಗೆಯೇ, ಮಳೆಗಾಲಲ್ಲಿ ಮಳೆಯ ಅನುಭವಿಸೇಕು, ಶುಭ್ರಮಳಗೆ ಆಟ ಆಡ್ಳೆ ಆಟಿ ಆಗದ್ದೆ ಇದ್ದೋ? ಇಲ್ಲೇಪ!
ಅದಕ್ಕೆ ತೋಟ ಇಲ್ಲದ್ದರೂ ಆವುತ್ತನ್ನೇ – ಹೇಳಿ ಬೈಲಿಲಿ ಮಾತಾಡಿಗೊಂಡವು.
ಒಂದೊಪ್ಪ: ತೋಟವೂ ಒಂದು ಆಟವೇ ಆಗಿದ್ದರೆ ಆಟಿಲಿ ಆಡ್ಳೆಡಿಗು – ಹೇಳಿದವು ರಂಗಮಾವ°.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಲಾಯಿಕ್ಕ ಆಯಿದು….
ಆಟಿ ತಿಂಗಳ ವಿಶೇಷ ಬರಹವ ಮನ್ನೆಯೇ ಓದಿತ್ತಿದ್ದೆ. ಬೈಲಿನ ಎಲ್ಲೋರಿಂಗೂ ಪುರುಸೊತ್ತು ಇಪ್ಪಗ, ಎನಗೆ ಮಾಂತ್ರ ಅದೇಕೆ ಪುರುಸೊತ್ತು ಆಯಿದಿಲ್ಲೆ ಹೇಳಿ. ಒಪ್ಪ ಕೊಡ್ಳೇ ಆಯಿದಿಲ್ಲೆ. ತುಂಬಾ ವಿಷಯವ ಎಲ್ಲೋರು ಹೇಳಿದ್ದವು. ಹೇಳಿದ್ದರ ಮತ್ತೆ ಮತ್ತೆ ಎಂತಕೆ ಆನು ಅಗಿಯೆಕು. ಅಲ್ಲದೊ ? ಮಳೆಕಾಲದ ಹಳೆಯ ನೆಂಪುಗಳ ಮತ್ತೆ ಮನಸ್ಸಿಲ್ಲಿ ಬೆಚ್ಚಂಗೆ ಮಾಡಿತ್ತು ಒಪ್ಪಣ್ಣನ ಬರಹ. ಮಳೆಲಿ ಚಂಡಾಪುಂಡಿ ಆಗಿ ಶಾಲೆಂದ ಮನಗೆ ಬಂದಪ್ಪಗ, ಅಬ್ಬೆ ಮಾಡಿ ಕೊಟ್ಟೊಂಡಿದ್ದಿದ್ದ ಬೆಶಿ ಬೆಶಿ ಉಂಡ್ಳಕಾಳು, ಹಪ್ಪಳ, ಕೊಟ್ಟಿಗೆ, ಚೆಂಡಿ ಆದ ಪುಸ್ತಕವ ಒಲೆಕಟ್ಟೆಲಿ ಒಣಗಲೆ ಮಡಗಿ, ಅಲ್ಲೇ ಮಸಿ ಹಿಡುದು ಕಪ್ಪು ಆದ್ದದು,
ಶಾಲೆಯ ಹೆಡ್ಮಾಶ್ಟ್ರು ಒಳ್ಳೆತ ಚೆಂಡಿ ಆದ ದಿನ ಶಾಲಗೆ ರಜೆ ಸಿಕ್ಕಿಯೊಂಡಿದ್ದದು ಎಲ್ಲವುದೆ ನೆಂಪಾತು. ಈಗಾಣ ಮಕ್ಕೊ ಎಲ್ಲ, ಟಿವಿ, ಕಂಪ್ಯೂಟರು ಹೇಳಿ ಆಡೆಂಡು, ಕರುಕುರುನೆ ಕುರೆ ತಿಂಡಿಗಳ ತಿಂದೊಂಡು ಏವತ್ತುದೆ ಆಟಿಲಿದ್ದ ಹಾಂಗೆ ಇರ್ತವಾನೆ. ಅಪರೂಪಕ್ಕ್ಸೆ ಸಿಕ್ಕಿದರೆ ಮಾಂತ್ರ ಅದೊಂದು ಕೊಶಿ ಎಂತ ಹೇಳ್ತಿ ?
ಒಪ್ಪಣ್ಣ,
ನೀನು ಹೇಳಿದ ಹಾಂಗೆ ಆಟಿ ಹೇಳಿದರೆ ಹೆರಾಣ ಕೆಲಸಗಳಿಂದ ವಿಮುಖರಾಗಿ ನಾವು ಅಂತರ್ಮುಖಿಗಳಾಗಿ ಇಪ್ಪ ಕಾಲ. ಪ್ರತಿವಾರದ ನಿನ್ನ ಶುದ್ದಿಯೇ ಯಾವಾಗಲೂ ಅಂತರ್ಮುಖಿ ಅಪ್ಪ ಹಾಂಗೆ ಮಾಡ್ತಲ್ಲದಾ ಎಂಗಳ. ಅಂಬಗ ಪ್ರತಿವಾರವೂ ಆಟಿಯೇ ಎಂಗೊಗೆ ಅಲ್ಲದೋ? 😉 🙂
ಆಟಿ ಹೇಳಿದರೆ ಒಂದರಿಯಂಗೆ ಎಲ್ಲ ಕೆಲಸಂಗಳ ನಿಲ್ಲುಸಿ, ಮನೆಯೋರ ಒಟ್ಟಿಂಗೆ ಇದ್ದುಗೊಂಡು, ಪ್ರಕೃತಿಲಿ ಸಿಕ್ಕುದರ ತಿಂದುಗೊಂಡು, ಪ್ರಕೃತಿ ಬೆಳವಲೆ ಸಮಯ ಕೊಡ್ತ ಕಾಲ ಅಲ್ಲದಾ? ಮಳೆ ಜೋರು ಬಂದಪ್ಪಗ ಎಲ್ಲಿಗೂ ಹೋಪಲೆಡಿಯದ್ದ ಕಾರಣ ಆದಿಕ್ಕು ಮೊದಲಾಣೋರು ಆಟಿಗೆ ಮನೆಲೇ ಮಾಡುವಂಥಹ ಕೆಲಸಂಗಳ ಮಡಿಕ್ಕೊಂಡದು. ರಾಮಾಯಣ, ಭಾಗವತ ಓದುದೋ, ಮಕ್ಕೊಗೆ ಸಂಸ್ಕಾರಂಗಳ ಹೇಳಿ ಕೊಡುದೋ ಇತ್ಯಾದಿಗಳ ಮಾಡಿ ಎಲ್ಲೋರೂ ಹತ್ತರೆ ಅಪ್ಪಲೆ ಇಪ್ಪ ಕಾಲ ಅಲ್ಲದಾ?
[ಹೆಮ್ಮಕ್ಕೊ ಅವರ ಅಪ್ಪನ ಮನಗೆ ಹೋವುತ್ತದು! ಹೊಸ ಹೆಮ್ಮಕ್ಕೊ ಅಂತೂ ಹೋಗಿಯೇ ಹೋಕು! ಆಟಿಗು ಕುಳ್ಳುನೆ ಹೇಳುಗು ತುಳುವರು.]
ಇದು, ಮನೆದೇವರ ಕಿರಿಕಿರಿ ತಡೆಯದ್ದೆ ಕೆಮಿಗೂ ವಿಶ್ರಾಂತಿ ಕೊಡ್ಲೆ ಇಪ್ಪ ಏರ್ಪಾಡೋ? ಉಮ್ಮ!! 😉 😉
ಕುಶಾಲು ಕರೆಂಗೆ ಇರಲಿ!! ಅದಪ್ಪು, ಆಟಿಯ ಲೆಕ್ಕಲ್ಲಿ ಆದರೂ ಅಪ್ಪನ ಮನೆಯ ಒಡನಾಟ ಬಿಟ್ಟು ಹೋಗದ್ದ ಹಾಂಗೆ ಹೋಗಿ ಕೂರ್ತ ಕ್ರಮ ಅಲ್ಲದೋ? ಎನಗೆ ನೀನು ಹೇಳಿದ ಹಾಂಗೆ ಒಂದು ಹೊತ್ತು ಹೋಗಿ ಬಪ್ಪ ಪುರುಸೊತ್ತೇ ಇಪ್ಪದಿದಾ!! 🙁
ಈ ಮಾಸಲ್ಲಿ ಎಲೆಗಳಲ್ಲಿ ಮದ್ದಿನ ಅಂಶ ಹೆಚ್ಚು ಹೇಳಿ ಕೇಳಿ ತಿಳುದ್ದೆ. ಅದು, ಸುಭಗಣ್ಣನ ಸುಂದರ ಬಿಟ್ಟ ಮದ್ದು ಆಗಿರ ಅಲ್ಲದಾ?? 😉 ಆಟಿಲಿ ನಮ್ಮ ಸುತ್ತಲೂ ಸಿಕ್ಕುವ ಉರಗೆಯ ಹಾಂಗಿಪ್ಪ ಎಲೆಗಳ ಅಡಿಗೆಲಿ ಉಪಯೋಗ ಮಾಡೆಕ್ಕಡ್ಡ. ನಮ್ಮ ಆಂತರಿಕ ಶಕ್ತಿ ಹೆಚ್ಚಪ್ಪಲೆ!! ಪ್ರಕೃತಿಯೇ ಶುದ್ಧ ಮಾಡಿ ಕೊಡ್ತ ಕಾರಣ ಅದಕ್ಕೆ ಶಕ್ತಿ ಮತ್ತೂ ಹೆಚ್ಚಿರ್ತೋ ಏನೋ ಅಲ್ಲದಾ?
ಆಟಿಯ ಪೀಠಿಕೆಯ ಶುದ್ದಿ ಲಾಯ್ಕಾಯಿದು. ಇನ್ನು ಮುಂದೆ ಬಪ್ಪ ಶುದ್ದಿಗಳೂ ಒಳ್ಳೆ ವಿಚಾರಂಗಳ ತೆಕ್ಕೊಂಡು ಬಂದು ಎಂಗಳ ಹೆಚ್ಚು ಹೆಚ್ಚು ಅಂತರ್ಮುಖಿಗೋ ಅಪ್ಪ ಹಾಂಗೆ ಮಾಡಲಿ..
ಆಟಿಯ ಶುದ್ದಿ ನೋಡಿ ರಜಾ ಹಗೂರ ಆತು ಮನಸ್ಸು.
ಆದರೆ,ಮದ್ದು ಬಿಡುವ ಸು೦ದರ ಬಾರದ್ದ ಕಾರಣ ಸುಭಗ ಭಾವನೂ ” ಆಟಿಗು ಕುಳ್ಳುವ” ಆಲೋಚನೆಲಿ ಇದ್ದವೊ? ದಿನ ಹೋದ ಹಾ೦ಗೆ ಅಡಕ್ಕೆ ಕಾಡುಕೃಷಿ ಆವುತ್ತೋ ಹೇಳಿ ಕಾಣುತ್ತು,ಈಗ ಅಡಕ್ಕೆಗೆ ಬ೦ದ ಕ್ರಯ ನೋಡಿಯೂ ಕೃಷಿಕರ ಮೋರೆಲಿ ನೆಗೆ ಕಾಣುತ್ತಿಲ್ಲೆ,ಅಲ್ಲದೋ?
ಆಟಿ ಹೇಳಿ ಎನ್ಗೊಂಗೆಂತ ಜಾಸ್ತಿ ಪುರ್ಸೋತ್ತಿಲ್ಲೇ.. 🙁
ಒಪ್ಪಣ್ಣ ಲಾಯ್ಕಿ ಆಯ್ದು ಬರ್ದು.
ಈ ಮಳೆ ಹೇಳಿರಿ ಎನಿಗಂತೂ ತುಂಬಾ ಖುಷಿ. ಮಳೆಯ ಖುಷಿ ಅನುಭವಿಸಿದವ್ಕೇ ಗೊತ್ತು. ಇಂದಿಂದ ಆಟಿದೇ ಸುರು ಆತಲ್ದಾ, ಪಿರಿಪಿರಿ ಮಳೆಯೂ ಇರ್ತು. ಆಟಿ ಕಳೆಂಜ ಬತ್ತದ ಇನ್ನು ಮನೆಮ್ನೆಗೆ ಮಾರಿ ಓಡ್ಸುಲೆ.
“ಆಟಿಡೊಂಜಿ ದಿನ” ಹೇಳಿ ಇಲ್ಲಿ ಕೆಲವು ದಿಕ್ಕೆ ಕಾರ್ಯಕ್ರಮ ಮಡ್ಕೊಳ್ತವು. ಅಲ್ಲಿ ಊರ ತಿಂಡಿಗಳದ್ದೇ ಸಾಮ್ರಾಜ್ಯ. ಹಲಸಿನ, ಮಾವಿನ ಬಗೆ ಬಗೆ ತಿಂಡಿಗೊ, ಪತ್ರೊಡೆ, ಚೇಟ್ಲ ಇತ್ಯಾದಿ ಇರ್ತು.
ಆಟಿ ತಿಂಗಳಿನ ಮಳೆಯ ಅಬ್ಬರ ನೋಡಿ ಆದಿಕ್ಕು, ಮೊದಲಾಣ ಕಾಲಲ್ಲಿ ಯಾವದೇ ಮುಹೂರ್ತ ಇಪ್ಪ ಕಾರ್ಯಕ್ರಮಂಗೊ ಮಾಡಿಂಡು ಇತ್ತಿದ್ದವಿಲ್ಲೆ. ಆದರೆ ಈಗ ಎಲ್ಲವೂ ನೆಡೆತ್ತು. ಕಾಲ ಬದಲಾದ ಹಾಂಗೆ ಆಚರಣೆಗಳೂ ಬದಲುತ್ತಾ ಇದ್ದು.
ಆಟಿಯ ಎಡೆಬಿಡದ್ದೆ ಬಪ್ಪ ಮಳೆ ಈಗ, ಸುವರ್ಣಿನಿ ಅಕ್ಕ ಹೇಳಿದ “ಕಾಣೆಯಾದವರ” ಲೀಸ್ಟಿಂಗೆ ಸೇರಿದ ಹಾಂಗೆ ಇದ್ದು.
ಆಟಿಯ ದಿನಂಗಳ “ಪುಳ್ಳರಾಟ” ನೆಂಪು ಮಾಡಿಸಿ ಕೊಟ್ಟ ಲೇಖನ ಲಾಯಿಕ ಆಯಿದು.
ನಮ್ಮ ಬಾಲ್ಯದ ನೆಂಪುಗ ಎಲ್ಲಾ ಹೆಚ್ಚಾಗಿ ಆಟಿ ತಿಂಗಳಿಲಿಯೇ ಇಕ್ಕು ಹೇಳಿ ಕಾಣ್ತು.ಅದರ ನೆಂಪು ಮಾಡಿಯೊಂಡು ಹೋಪಗ ಬಾಲ್ಯ ಜೀವನವೇ ಒಂದರಿ ಕಣ್ಣ ಮುಂದೆ ಬತ್ತು.ಎಂತಕೆ ಹೇಳಿರೆ ಮನೆಂದ ಹೆರ ಜೆಡಿಮಳೆ,ಗುಡುಗು ಮಿಂಚು.ಶಾಲೆಗೆ ಹೋಯೇಕ್ಕಾರೆ ಮೊದಲಾಣ ಪ್ರಾಯಲ್ಲಿ ಸಂವತ್ಸರದ ಹೆಸರುಗ,ನಕ್ಷತ್ರಂಗಳ ಪರಿಚಯ ಇತ್ಯಾದಿ ಶಾಸ್ತ್ರೋಕ್ತ ವಿಷಯಂಗ ಅಂಬಗ ಹೆರಿಯೋರು ಹೇಳಿಕೊಡುಗು ಇದಾ!!ಮತ್ತೆ ಹೊತ್ತೊಪಗ ಕಾಪಿಗೆ ಉಂಡ್ಳಕಾಳು,ಸಾಂತಾಣಿ ಸಿಕ್ಕುಗು.ಅಂತೂ ಆ ನೆಂಪುಗಳ ಎಲ್ಲಾ ಮೆಲುಕು ಹಾಕುವ ಸಮಯ.ಈ ಶುದ್ಧಿ ಓದಿಯಪ್ಪಗ ಇಷ್ಟೆಲ್ಲಾ ನೆಂಪು ಆತು.ಧನ್ಯವಾದ ಒಪ್ಪಣ್ಣಾ,,
{… ಸುಬಗಣ್ಣ ಹೇಳ್ತ ಅರಿಷ್ಟಕುಪ್ಪಿಯ }
ಏ ಸುಬಗಣ್ಣ… ಇದ ಓದಿಯಪ್ಪಗ ಒ೦ದ ಸ೦ಗತಿ ಗೊ೦ತಾತು.. 🙂
ನಿ೦ಗೊ ಅಡಕ್ಕೆ ಮರಕ್ಕೆ ಸಾನು ಅರಿಷ್ಟ ಕೊಡ್ತಿ ಹೇಳಿ.. 😉
{.. ಚೆಂಬಿನ ಕರಗುಸಿ ಮಾಡ್ತದಡ ಅದರ, ಹಾಂಗಾಗಿ ಒಳ್ಳೆತ ಕ್ರಯ ಇದ್ದಾಡ ಅ}
ಅಲ್ಲ.. ಇಪ್ಪ ಚೆಂಬಿನ ಎಲ್ಲಾ ಕರಗಿಸಿರೆ.. ನಾಳೆ ಉದ್ಯಪ್ಪಗ ಮೀವಲೆ ಎ೦ತ ಕೊಡಪ್ಪಾನಲ್ಲಿ ಎಡಿಗೋ?? 😀
ಮತ್ತೆ ಕಲಶಕ್ಕೆ ಮಡುಗಲೆ ಒ೦ದೂ ಸಿಕ್ಕಾ ಹೇಳುಗು ಚೆನ್ನೈ ಭಾವ, ಹಾ..!! ಹೇಳಿದ್ಲೇ ಬೇಡ .. 😉
ಲಾಯಕೆ ಆಯಿದು ಭಾವ ಬರದ್ದು..
ಎನಗೆ ಆನು ಸಣ್ಣಾದಿಪ್ಪಗ ಮಳೆ ಗಾಲಲ್ಲಿ ಶಾಲೆಗೆ ಹೋಗಿಯೊ೦ಡಿದ್ದದು ನೆ೦ಪ್ಪಾತು… ಕೊಡೆ ಹಿಡ್ಕೊ೦ಡು ಆ ಮಡಿಕೇರಿಯ ಮಳೆಗೆ ಚೆ೦ಡಾಪು೦ಡಿಯಾಗಿಯೊ೦ಡು ಹೋದ್ದು.. ಮಾರ್ಗಲ್ಲಿ ನೆಡಕ್ಕೊ೦ಡು ಹೋಪಗ ಬಸ್ಸೊ ಕಾರೋ ಮಾರ್ಗಲ್ಲಿಪ್ಪ ಕಿರು೦ಚಿ ರಟ್ಟುಸಿಯೊ೦ಡು ಹೋದ್ದು..ಆಟಿಯ ಸಮಯಲ್ಲಿ ಮಳೆ ಜೋರು ಬತ್ತದೂ ಹೇಳಿ ಲೆಕ್ಕ..
ಅ೦ಬಗ ಮಡಿಕೇರಿಲ್ಲಿ ತಾರಾಮಾರ ಮಳೆ ಬಕ್ಕು.. ಈ ಸಮಯಲ್ಲಿ ಎ೦ಗೊಗೆ “ಮಳೆ ಗಾಲದ ರಜೆ” ಹೇಳಿ ಒ೦ದು ಎರಡು ವಾರ ಸಿಕ್ಕಿಯೊ೦ಡು ಇತ್ತು.. ಮಳೆಗೆ ದಿನಾ ಕರೆ೦ಟು ತೆಗಗು.. ಒ೦ದೊ೦ದಾರಿ ಮೂರು-ನಾಲ್ಕು ದಿನ ಇರಾ.. ಕಾರಣ ಮರ ಬಿದ್ದು ವಯರು ಹೋಗಿಕ್ಕು, ಅಲ್ಲಾ ಟ್ರಾನ್ಸಫೊರ್ಮರ್ ಹಾಳಕ್ಕು.. ಹೀಗೆಲ್ಲ ಅಕ್ಕು ನಮ್ಮ ಮಡಿಕೇರಿಲ್ಲಿ.. ಛೆ..!! ಇರಳಿ ಇದು ಹಳೇ ಕತೆ..
ಆದರೆ ಕರೆ೦ಟಿನ ಸಮಸ್ಯೆ ಈಗಳೂ ಇದ್ದು.. 😉
ಆಟಿಯ ಸಮಯಲ್ಲಿ ಅಪ್ಪ ನಮ್ಮ ಅಡಕ್ಕೆ ತೋಟದವ ಸಮಸ್ಯೆ,ಆಟಿಯ ಹಿನ್ನೆಲೆಯ ಸ೦ಕೋಲೆ ಓದಿಯಪ್ಪ ಸರೀ ತಿಳುದತ್ತು ಭಾವ..
ಮತ್ತೆ ಭಾವ ನೀನು ಹೇಳಿದಾ೦ಗೆ ಈಗ ಮನೆ ಮನೆ ಲಿ ಟೀ.ವಿ, ಕ೦ಪೂಟರು.. ಇದರಿ೦ದಾಗೆ ವರ್ಷ ಇಡೀ ಆಟಿ ಹಾ೦ಗೆ ಆವುತ್ತಾ ಇದ್ದು.. 🙁
– ಹರಿಯೊಲ್ಮೆಲಿ ಸಣ್ಣ ಇಪ್ಪಗ ಮತ್ಥೆ ಈಗ ಊರಿಂಗೆ ಹೊದಿಪ್ಪಗ ಮನೆಲಿ ಮದ್ದು ಬಿಡುವ ದಿನ ಕೊತ ಕೊತ ಕೊದಿವ ಸುಣ್ಣದ ನೀರಿನ ನೋಡಿದ್ದೆ. ಅದು ಮೀವ ಬೆಶಿನೀರ ಕೊಟ್ಟಗೆ ಹತ್ರವೇ ಇರ್ತುದೆ. ಹಾಂಗೆ ಇಂದು ಈ ಲೇಖನ ಓದುವಲ್ಲಿವರೆಗೆ ಎನಗೆ ಅದಕ್ಕೆ ಬೆಶಿ ನೀರು ಹಾಕಿಯೆ ಕೊದಿವದು ಗ್ರೇಶಿದ್ದು ಆನು. ತಣ್ಣೀರು ಹಾಕುದು ಹೇಳಿ ಇಂದೆ ಗೊಂತಾದ್ದು.
– ಮದ್ದು ಬಿಡುಲೆ ಬಪ್ಪ ಜನವ ಕಾಯುವದು ದೊಡ್ಡ ಸಂಗತಿಯೆ ಈಗಾಣ ಕಾಲಲ್ಲಿ.
– ಅಂಬಗ ಮಾಷ್ಟ್ರು ಮಾವನ ಎರಡನೆ ಮಗನ ಹೆಂಡತಿ (ಎನ್ನ ಹೊಸ ಅತ್ತಿಗೆ) ಆಟಿಲಿ ಅಪ್ಪನ ಮನೆಗೆ ಹೋಯಿದವಾಯಿಕ್ಕಲ್ಲದ?
– ನೆಟ್ಟಿ ತರಕಾರಿಯಪ್ಪ ಗೌಜಿಯುದೆ ಸಣ್ಣ ಇಪ್ಪಗ ಅನುಭವಿಸಿದ್ದು ಬಂತು.
– ದುರ್ಗಾ ಪೂಜೆಯುದೆ ಸಣ್ಣ ಇಪ್ಪಗ ಹರಿಯೊಲ್ಮೆಲಿ ಸಿಕ್ಕಿದ್ದು ನೆಂಪಾತು.
– ಮಳೆ ಬಪ್ಪಗ ಅಜ್ಜ, ಅಜ್ಜಿಯ ಒಟ್ಟಿಂಗೆ ಚೆನ್ನೆ ಮಣೆ ಆಡಿದ್ದು ನೆಂಪಾತು.
– ಗುರು ಪೂರ್ಣಿಮೆಯ ಶುಭಾಶಯಂಗೊ ಎಲ್ಲರಿಂಗೆ.
– ಗುರುಗಳ ‘ಚಾತುರ್ಮಾಸ್ಯ’ದ ಹೇಳಿಕೆ ಸಿಕ್ಕಿದ್ದು, ಇಲ್ಲಿಂದಲೆ ಹೊಡಾಡ್ತೆಯೊ ಎಂಗೊ.
ಲೇಖನ ಲಾಯ್ಕಾಯಿದು, ನೆಗೆ ಬರ್ಸಿತ್ತು ಬೋಸ ಭಾವನ ಬಗ್ಗೆ ಓದುವಗ. ಇನ್ನಾಣ ವಾರಕೆ ಕಾಯ್ತೆ.
~ಸುಮನಕ್ಕ.
ಲಾಯಿಕಾಯಿದು……….ಎನ್ಗ ಸಣ್ಣದಿಪ್ಪಗ ಚೆನ್ನೆಮನೆ ಅಪ್ಪನೊತ್ತಿನ್ಗೆ ತ೦ಗಿ ಒಟ್ಟಿ೦ಗೆ ಆಡಿಗೊನ್ಡಿದ್ದದು ನೆನಪ್ಪದತು..ಮರಕೆಸವು ತರ್ಸಿ ಪತ್ರಡೆ ಮಾಡಿಯೆ ಮಾಡುಗು….ಎಲ್ಲವನ್ನು ನೆನಪ್ಪು ಮಾದಿಗೊ೦ಡ ಹಾ೦ಗೆ ಆತು..
oppannana maneli happala timbale hodare akko heli.
aatiliyu oppanna full bc.
oppannana maneliyu maddu bittu aidilleda
avange babuva bappale helule purusottu aidilleyo gontilleppa.
ondu oppakka shale bittu adara mane gatu tegava pata elli sikkittappa.
oppanno rajeli baa chenne aaduva,chess aaduva.
purusottu ille heli heleda.
shuddi koshi aathu.
sakalika baravanige.
ಲಾಯಕ ಆಯಿದು ಒಪ್ಪಣ್ಣಾ. ಮೊದಲಾಣ ಕ್ರಮ೦ಗೊ ಎಲ್ಲಾ ಕಾಣೇ ಆವುತ್ತಾ ಇದ್ದು ಈಗಾಣ ಈ ಕ೦ಪ್ಯೂಟರ್ ಯುಗಲ್ಲಿ.
ಒಳ್ಳೇ ಶುದ್ದಿ, ಒಪ್ಪ೦ಗೊ.
ಆನು ಇದರ ಓದಿ ಒ೦ದರಿ ಕಣ್ಣು ಮುಚ್ಚಿ ಕೂದು ಆಟಿ ತಿ೦ಗಳಿನ ಮಳೆಯ ಮನಸ್ಸಿಲ್ಲೇ ಸಿನೆಮದ ಹಾ೦ಗೆ ಕಲ್ಪಿಸಿಯೊ೦ಡೆ. ಎ೦ತ ಕೊಶಿ ಅಲ್ಲದೊ- ಮಳೆ ಜೋರು ಬಪ್ಪಗ ಬೆಶಿ ಬೆಶಿ ಚಾಯವುದೆ ಸೊಳೆ ಹೊರುದ್ದದೋ, ಹಪ್ಪಳವೋ ಒಟ್ಟಿ೦ಗೆ ಒ೦ದು ಒಳ್ಳೆ ಪುಸ್ತಕವುದೆ ತೆಕ್ಕೊ೦ಡು ಓದ್ಯೊ೦ಡು ಕೂಬಲೆ!!
ಇದರ ಓದಿ ಸಣ್ಣಾಗಿಪ್ಪಗಾಣ ಹಳೆ ವಿಷಯ ನೆಂಪಾತು. ಜಿಟಿ ಜಿಟಿ ಮಳೆಲಿ ಪುಸ್ತಕ ಚೆಂಡಿ ಆಗದ್ದಾಂಗೆ ಶಾಲೆಗೆ ಹೋಪದು, ಹಾಂಗೆ ಹೋಪಗ ಚಡ್ಡಿ – ಅಂಗಿ ಚೆಂಡಿ ಅಪ್ಪದು, ಶಾಲೆಲಿ ಹೆಡ್ ಮಾಸ್ತರಿಂಗೆ ಹತ್ತು ಮಕ್ಕೊ ಸೇರಿ ಚೆಂಡಿ ಆದ್ದರ ತೋರ್ಸಿ, ಶಾಲೆಗೆ ರಜೆ ಕೇಳುದು ಎಲ್ಲಾ ನೆಂಪು ಇದ್ದು. ರಜೆ ಸಿಕ್ಕಿ ಮನೆಗೆ ಬಂದು ಮಾಡಿನ ದಂಬೆ ನೀರಿಲಿ ಹಳೆ ಪುಸ್ತಕ ಹರುದು ದೋಣಿ ಮಾಡಿ ಬಿಟ್ಟು ಆಡುದರ ಮರವಲಿಲ್ಲೆ. ಹನಿ ಕಡಿಯದ್ದೆ ಮಳೆ ಬಂದುಗೊಂಡಿಪ್ಪಗ ಏನಾರು ಒಂದು ಹೊರುದ್ದದು ತಿಂಬಲೆ ಮಾಡಿ ಕೊಡುಗು ಅಬ್ಬೆ. ಮಕ್ಕೊಗೆ ಈಗ ಇದರ ಕತೆಯಾಂಗೆ ಹೇಳೆಕ್ಕಷ್ಟೆ.
ಲೇಖನ ಲಾಯಿಕ ಬೈಂದು … ಎಂಗ ಎಲ್ಲಾ ಶಾಲೆಗೆ ಹೋಯಿಕೊಂಡಿತ್ತ ಸಮಯಲ್ಲಿ ಜೋರು ಮಳಗೆ ರಜೆ ಕೊಟ್ಟುಗೊಂಡಿತ್ತವು ,ಜೋರು ಮಳಗೆ ಮಕ್ಕಗೆ ತೋಡು,ಗೆದ್ದೆ ದಾಂಟುಲೆಡಿಯ ಹೇಳಿ… ಈಗ ಕಾಲ ಬದಲಾಯಿದು… ಊರಿಲಿ ತೋಡುಗಳೇ ಕಮ್ಮಿ ಆಯಿದು … ಎಲ್ಲರುದೇ ಪೇಟೆಯ ಇಂಗ್ಲೀಷ್ ಶಾಲಗೆ 2 ಅಥವಾ 4 ಚಕ್ರದ ವಾಹನಲ್ಲೇ ಹೋಪಲೆ ಸುರುಮಾಡಿದ್ದವು … ಕೆಲವು ಚಿಳ್ಳರು-ಪುಳ್ಳರುಗ ಶಾಲೆಯ ಬಸ್ಸಿಲೇ ಹೊಪಲೆ ಸುರುಮಾಡಿದ್ದವು .. ಹಾಂಗಾಗಿ ಇನ್ನಿನ್ನು ಮಕ್ಕ ಮಳೆಲಿ ಶಾಲೆಗೆ ಹೊಪ ಚೆಂದಂಗ ಕಾಣ …
ಲೇಖನ ಲಾಯ್ಕಕ್ಕೆ ಬೈಂದು… ಆಟಿಯ ಬಗ್ಗೆ ಹೆಚ್ಚು ಗೊಂತಿಲ್ಲದ್ದರೂ ಮಳೆಯ ಬಗ್ಗೆ ಅಂತೂ ಗೊಂತಿದ್ದು…. ಕಾಣೆಯಾದವರ ಪಟ್ಟಿಗೆ ಇಲ್ಲಿ ಮೇಲೆ ಹೇಳಿದ ಸುಮಾರು ವಿಷಂಗಳನ್ನೂ ಸೇರ್ಸುಲಕ್ಕಾ ಹೇಳಿ ಕಾಣ್ತು…
ಈಗ ಮಂಗಳೂರು ಹೊಡೆಲಿ ಆಟಿಡೊಂಜಿ ಕೂಟೊ ಹೇಳಿ ಮಾಡುತ್ತವು.
ಆಟಿ ತಿಂಗಳಿಲಿ ಹೆಮ್ಮಕ್ಕೊ ಅಪ್ಪನ ಮನೆಗೆ ಹೋಪದರ ಆಟಿ ಕೂಪದು ಹೇಳಿಕೊಂಡಿದ್ದಿದ್ದವಾಡ.
ಆಟಿ ತಿಂಗಳಿಲಿ ಕೇರಳಲ್ಲಿ ಮಲೆಯಾಳಿಗೊ ರಾಮಾಯಣ ಮಾಸ ಹೇಳಿ ರಾಮಾಯಣ ಪಾರಾಯಣ ಮಾಡುತ್ತವು.ಅದು ತುಂಬಾ ಉತ್ತಮ ಕ್ರಮ ಅಲ್ಲದೊ?
ಆಟಿ ಆಡಿ ಆಡಿ,ಸೋಣೆ ಓಡಿ ಓಡಿ,ಕನ್ನೆ ಕಾಣ ಕಾಣ-ಹೇಳಿ ಮೊದಲಾಣ ಗಾದೆ.ಆಟಿ ತಿಂಗಳ ಕಾಲ ತುಂಬಾ ನಿಧಾನ ಆದ ಹಾಂಗೆ ಕಾಂಬದು ,ಮಳೆಯ ದೆಸೆಂದ.ಅದಕ್ಕಾಗಿ ಈ ಗಾದೆ!
ಆಟಿ ಕಳೆಂಜ ಬಂದು ಮಾರಿ ಕಳೆಯುವ ಕಲ್ಪನೆ ಅದ್ಭುತ. ತುಳುನಾಡಿನ ಸಂಸ್ಕೃತಿಯ ಒಂದು ಸಂಕೇತ.
ಮೊದಲು ಭಾರೀ ಮಳೆ ಬಪ್ಪಾಗ ಮನಸ್ಸಿಲಿ ಬೇಜಾರ ಅಕ್ಕು.ಕವಿ ಕಡೆಂಗೋಡ್ಲು ಶಂಕರ ಭಟ್ರು “ಮನೆಗಳ ಮನಗಳ ಒಳಗೂ ಹೊರಗೂ ಜಿನುಗುತಿರುವ ಹನಿ ಸೋನೆಗಳು”ಹೇಳಿ ಎಷ್ಟು ಚೆಂದಕ್ಕೆ ಬರೆದ್ದವು!
ಲಾಯ್ಕ ಲೇಖನಕ್ಕಾಗಿ ಅಭಿನಂದನೆಗೊ.
ಆಟಿಯ ರಸಧಾರೆ ರಸಮಯವಾಗಿ ಮೂಡಿಬಯಿಂದು.
ಆಟಿಕಳಂಜ ‘ಕಾಣೆಯಾಗಿದ್ದರೆ’ ಪಟ್ಟಿಲಿ ಸೇರಿತ್ತೋ?! ಹೂದೋಟ ಕೃಷಿ ಎಂದು? ಆಟಿಲಿ ಮಕ್ಕೊ ಶಾಲಗೆ ಹೋಗ್ಯೊಂಡು ಬಪ್ಪದೂ ಒಂದು ಚಂದದ ಸನ್ನಿವೇಶ ದೃಶ್ಯ.
ಸುಭಗಣ್ಣ ಬಪ್ಪ ವರ್ಷ ಇನ್ನು ಸುಂದರನ ಕಾವಲೆ ಇಲ್ಲೆಡ. ಮದ್ದು ಬಿಡ್ಳೆ ಒಂದು ಲಾಡರ್ ತಯಾರು ಮಾಡ್ತ ಯೋಜನೆ ಅಜ್ಜಕಾನ ಭಾವ ಸಲಹೆ ಕೊಟ್ಟಿದವಡಪ್ಪ.
[ಆಟಿಲಿ ಆಡ್ಳೆಡಿಗು ] – ಆದರೆ ವಾಸ್ತವಿಕವಾಗಿ ಮನೆಯೊಳವೇ ಅಂತರ್ಮುಖಿಗಳಾಗಿ ಇಪ್ಪದೇ ನಿಜ ಜೀವನ ಆವ್ತಾ ಇದ್ದು ಈ ಶುದ್ದಿ ಓದಿ ಆದರೂ ಆಟಿಯ ಅನುಭವಿಸಿ ಸಂತೋಷಪಡುವಂತಾಗಲಿ ಎಂಬುದು ನಮ್ಮ ಒಪ್ಪ.
ಆಟಿಕಳಂಜ “ಕಾಣೆಯಾದವರ” ಪಟ್ಟಿಲಿ ಸಧ್ಯಕ್ಕೆ ಸೇರಿದ ಹಾಂಗೆ ಇಲ್ಲೆ … ಎಂಗಳ ಬೈಲಿಲಿ ಈಗಲುದೇ ಆಟಿಕಳಂಜ ಬತ್ತು…
Yava bayalu appachhi ningaladdu? ondari aati kalanajana nodle barekku……