ಸುಮಾರು ಮೂವತ್ತು ಒರಿಷ ಹಿಂದೆ ನಮ್ಮ ಸಮಾಜ ಕಣ್ಡಷ್ಟು ದೊಡ್ಡ ಬದಲಾವಣೆ ಅದರ ಹಿಂದೆ ಸದ್ಯಕ್ಕೆಲ್ಲಿಯೂ ಕಂಡಿದಿಲ್ಲೆ.
ಆ ಮೂವತ್ತೊರಿಷನ್ದ, ಒರಿಷಮ್ಪ್ರತಿ ಹೇಳ್ತಾಂಗೆ ಅನ್ತಾ ಬದಲಾವಣೆಗೊ ನೆಡಕ್ಕೊಂಡು ಬತ್ತಾ ಇದ್ದು.
ಕೆಲವು ಜೆನ ಅದರ ’ಸಾಮಾಜಿಕ ಕ್ರಾಂತಿ’ ಹೇಳುಗು, ಇನ್ನು ಕೆಲವು ಜೆನ ಅದರ ’ಆಧುನಿಕತೆಯ ಹೊಡೆಂಗೆ ಪ್ರಯಾಣ’ ಹೇಳುಗು, ಮತ್ತೆ ಕೆಲವು ಜೆನ ಅದರ ’ಬೆಗುಡು’ ಹೇಳುಗು; ಬಟ್ಯನಾಂಗಿರ್ತೋರು ‘ಕಲ್ಜುಗೊ ಅಂತ್ಯ’ ಹೇಳುಗು.
ಆರು ಎಂತದೇ ಹೇಳಿರೂ, ಬದಲಾವಣೆ ನಿರಂತರ; ಬದಲಾವಣೆಗೇ ಬದಲಾವಣೆಯ ಬದಲುಸಲೆ ಎಡಿಯ!
~
ಬೆಳಿ ಬಣ್ಣದ ಮುಂಡು ಸುತ್ತಿಗೊಂಡಿದ್ದ ಅಜ್ಜಂದ್ರಿಂಗೆ ಕಪ್ಪು ಬಣ್ಣದ ಪೇಂಟು ಹಾಕುತ್ತ ಪುಳ್ಳ್ಯಕ್ಕೊ ಹುಟ್ಟಿದವು.
ತಲೆ ತುಂಬ ಜೊಟ್ಟು ಇದ್ದದು ಸಣ್ಣ ಸಣ್ಣ ಆಗಿ, ಮೆಲ್ಲಂಗೆ ಕಾಣೆಯೇ ಆಗಿ ಹೋತು!
ಶುದ್ದಾಚಾರನ್ಗೊ ಎಲ್ಲ ’ಮೂಢನಂಬಿಕೆ’ ಹೇಳ್ತ ಲೆಕ್ಕಕ್ಕೆ ಕರೆಂಗೆ ಒಳುದತ್ತು.
ಶಂಚಮೇ ಮಯಶ್ಚಮೇ – ಹೇದು ಮಂತ್ರ ಹೇಳಿಗೊಂಡಿದ್ದ ಅಪ್ಪಂಗೆ – ಪಟ ಪಟ ಇಂಗ್ಳೀಶು ಮಾತಾಡ್ತ ಮಕ್ಕೊ!
ಈಗೀಗ ಅಂತೂ ಕಂಪ್ಯೂಟ್ರು ಇದ್ದನ್ನೇ! ಅದಿದ್ದರೆ ಹೆಂಡತ್ತಿ-ಮಕ್ಕಳೂ ಬೇಡ ಕೆಲವು ಜೆನಕ್ಕೆ – ಹೇದು ಪೆರ್ಲದಣ್ಣನ ಮನೆದೇವರು ಪರಂಚುತ್ತವಾಡ! 😉
ಅದಿರಳಿ.ಈ ಮಾರ್ಪಾಡು ನಮ್ಮ ಊರಿಲಿ – ನಮ್ಮ ಸಮಾಜಲ್ಲಿ ಮಾಂತ್ರ ಅಲ್ಲ; ಸರ್ವತ್ರ – ಇಡೀ ಲೋಕಲ್ಲಿ ಆದ ಬದಲಾವಣೆ.
ಇದೇ ರೀತಿ ಬದಲಾವಣೆಗೆ ಸಿಕ್ಕಿದ ಆದ ಒಂದು ಮನೆಯ ಶುದ್ದಿ ಇಂದು ಮಾತಾಡಿರೆ ಹೇಂಗೆ?
~
ಗಿರಿಯಡ್ಕ ಸುಬ್ರಾಯಜ್ಜ ಹೇದು ಕೇಳಿದ್ದಿರೋ? ಇಲ್ಲೆ ಆಯಿಕ್ಕು. ಅವು ಮದಲಾಣ ಕಾಲಲ್ಲಿ ದೊಡ್ಡ ಅಡಿಗೆಯೋರು ಅಡ.
ಯೇವ ಕಾಲ? – ಮಧೂರು ಗೆಣಪ್ಪಣ್ಣಂಗೆ ಅಂದೊಂದರಿ ಮೂಡಪ್ಪ ಸೇವೆ ಆಗಿತ್ತಾಡ – ಆ ಕಾಲಲ್ಲಿ.
ಅವರ ಮೇಲಡಿಗೆ ಸುಬ್ರಾಯಜ್ಜ – ಹೇಳಿಗೊಂಡೇ ಇದ್ದದಾಡ; ಊರೋರು – ಪ್ರೀತಿಲಿ.
ಅವರಿಂದ ಮತ್ತೆ ಅವರ ಮಗ – ರಾಮಜ್ಜ.
ತಕ್ಕಮಟ್ಟಿಂಗೆ ಅಡಿಗೆ ವ್ಯಾಪ್ತಿಲೇ ಇದ್ದದು.
ಮದುವೆ ಆತು; ದೇವರ ದಯಂದ ನಾಕು ಜೆನ ಮಕ್ಕಳೂ ಆದವು. ಮೂರು ಜೆನ ಮಾಣಿಯಂಗೊ; ಒಂದು ಕೂಸು.
ರಾಮಜ್ಜನೂ ಅಡಿಗೆಲಿ ಹೆಸರು ಮಾಡಿದ್ದವು; ಆದರೆ ಮನೆಗೆ ಸೊತ್ತು ಎಂತದೂ ಮಾಡಿದ್ದವಿಲ್ಲೆ.
ಎಂತಗೆ? ಮಾಡ್ಳೆ – ಅಷ್ಟು ಸಮೆಯ ಇತ್ತಿದ್ದವೇ ಇಲ್ಲೆ ಇದಾ!
ನೆಡು ಪ್ರಾಯ ಬಪ್ಪಗ ತೀರಿ ಹೋಗಿಯೂ ಆಯಿದು!
ರಾಮಜ್ಜನ ದೊಡ್ಡ ಮಗ ಸುಬ್ರಾಯ ಮಾವ. ಅವರ ಶುದ್ದಿಯೇ ನಾವಿಂದು ಮಾತಾಡುದು.
~
ಸುಬ್ರಾಯ ಮಾವಂಗೆ ಜೆಬಾದಾರಿಕೆ ಬಂದದು ಬಹು ಸಣ್ಣ ಪ್ರಾಯಲ್ಲಿ.
ಹತ್ತನೇ ಕ್ಲಾಸಿಲಿ ಕಲ್ತುಗೊಂಡಿಪ್ಪಾಗ – ಅಪ್ಪ ರಾಮಜ್ಜ ತೀರಿಗೊಂಡ ಕಾರಣ, ಮತ್ತೆ ಮೂರು ಜೆನ ಸಣ್ಣ ಮಕ್ಕಳ ಸಾಂಕಾಣಿಕೆಲಿ ಅಬ್ಬೆಗೆ ಹೆಗಲು ಕೊಡ್ತ ಉದ್ದೇಶಲ್ಲಿ ಶಾಲೆ ಬಿಟ್ಟವು.
ಮನೆಲಿ ದೊಡ್ಡ ಮಟ್ಟಿನ ಉದ್ಪತ್ತಿ ಇಲ್ಲದ್ದ ಕಾರಣ ಅಪ್ಪ-ಅಜ್ಜನ ವ್ಯಾಪ್ತಿ ಅಡಿಗೆಯನ್ನೇ ಆಯ್ಕೆ ಮಾಡಿದವು.
ಅಪ್ಪನೊಟ್ಟಿಂಗೆ ಅಡಿಗೆಗೆ ಬಂದುಗೊಂಡಿದ್ದ ಕೆಲವು ಜೆನಂಗೊ ಕೈ ಬಿಟ್ಟಿದವಿಲ್ಲೆ, ಅಪ್ಪ ಹೋಗಿಂಡಿದ್ದ ಕೆಲವು ಮನೆಯೋರೂ ಕೈ ಬಿಟ್ಟಿದವಿಲ್ಲೆ. ದೆಶೆ ಒಳ್ಳೆದಿತ್ತು; ಕೈ ಬೆಳದತ್ತು.
ಇಪ್ಪತ್ತೊರಿಷಕ್ಕೇ ಒಂದು ಸಾವಿರ ಜೆನರ ಅಡಿಗೆಲಿ ಉಪ್ಪು-ಮೆಣಸು ಹಾಕುವ ಸಾಧನೆ ಮಾಡಿದ್ದವಾಡ; ಈಗಳೂ ಅರಡಿವೋರು ಹೇಳುಗು.
ಉಪ್ಪು-ಮೆಣಸು ಹಾಕುದು ಹೇದರೆ ಅದು ಮೇಲಡಿಗೆಯ ಮರಿಯಾದಿ; ಗೊಂತಿದ್ದನ್ನೇ?
~
ಸುಬ್ರಾಯ ಮಾವ° ಬರೇ ಅಡಿಗೆ ಮಾಂತ್ರ ಮಾಡಿಗೊಂಡಿದ್ದದಲ್ಲ; ಮನೆಗೆ ಸೊತ್ತು ತಂದು ಹಾಕಿಗೊಂಡೂ ಇತ್ತಿದ್ದವು.
ಇಬ್ರು ತಮ್ಮಂದ್ರು; ಒಂದು ತಂಗೆಗೆ ಕಲಿಯಲೆ ಬೇಕಾದ ವೆವಸ್ತೆಯನ್ನೂ ಮಾಡಿದ್ದವು.
ತನಗೆ ಹೇಂಗೂ ಕಲಿವಿಕೆ ಮುಗಿಶಲೆ ಎಡಿಗಾಯಿದಿಲ್ಲೆ; ತಮ್ಮಂದ್ರು-ತಂಗೆಗೆ ಹಾಮ್ಗಪ್ಪದು ಬೇಡ – ಕಲಿತ್ತಷ್ಟು ಕಲಿಯಲಿ ಹೇದು ಶಾಲಗೆ ಕಳುಗಿದವು.
ನಿನ್ನೊಟ್ಟಿಂಗೆ ಅಡಿಗೆಗೆ ಬಂದರೆ ಸಕಾಯ ಅಕ್ಕನ್ನೇ ಮಗೋ – ಹೇದು ಅಬ್ಬೆ ಕೇಳಿರೂ ಒಪ್ಪದ್ದೇ, “ಶಾಲೆಗೆ ಹೋಗದ್ದರೆ ಇನ್ನಾಣ ಕಾಲಲ್ಲಿ ಬೂಸು”- ಹೇದು ಪ್ರಾಯದ ಅಬ್ಬೆಗೆ ಗೊಂತುಮಾಡುಸಿತ್ತಿದ್ದವು.
ಹಾಂಗೆ ಕಲ್ತು ಕಲ್ತು – ದೊಡ್ಡ ತಮ್ಮಂಗೆ – ಗೋವಿಂದ ಮಾವಂಗೆ – ಹತ್ತನೆ ಆತು.
ವಿಜಯ ಬೇಂಕಿಲಿ ಚಾಕ್ರಿ ಆಗಿ ಕೆಲಸ ಸಿಕ್ಕಿತ್ತು.
ಅಂಬಗ ಎಲ್ಲ ಹತ್ತನೆ ಆದೋರೇ ಕಮ್ಮಿ; ಹಾಂಗಾಗಿ ಕೆಲಸ ಪಕ್ಕನೆ ಸಿಕ್ಕಿಗೊಂಡಿತ್ತಿದಾ. ಈಗ ಹತ್ತನೆ ಆದರೆ ಬಟ್ಯನ ಮನೆಗೇ ಕೆಲಸಕ್ಕೆ ಹೋಯೆಕ್ಕಟ್ಟೆ. ಅದಿರಳಿ.
ಗೋವಿಂದ ಮಾವಂಗೆ ದೊಡ್ಡ ಸಂಬಳ ಅಲ್ಲದ್ದರೂ – ತನ್ನ ಖರ್ಚು ನೋಡಿಗೊಂಬಷ್ಟು ಬತ್ತನ್ನೇ.
ರಜ ರಜ ಒಳುದರೆ ಅಬ್ಬೆಗೆ ಹೇದು ಎಂತಾರು ತಕ್ಕು. ಪುರುಸೊತ್ತಿದ್ದ ದಿನ ಅಣ್ಣನೊಟ್ಟಿಂಗೆ ಕಡವಲೆ ಹೋಕು.
ಸುಬ್ರಾಯ ಮಾವಂಗೆ ಇನ್ನು ಕಲಿಶಲೆ ಇಪ್ಪದು ಒಂದು ತಂಗೆಯೂ ಒಬ್ಬ ತಮ್ಮನೂ.
~
ಅಬ್ಬೆಯ ಪ್ರೀತಿಯ ಮಗಳು ಶಂಕರಿ. ಶುಕ್ಲ ಪಕ್ಷ ಚಂದ್ರನ ಹಾಂಗೆ ಬೆಳದು ದೊಡ್ಡಾತು. ಹತ್ತನೇ ಆಗಿ ಇನ್ನು ಕಲಿತ್ತಿಲ್ಲೆ ಅಣ್ಣ- ಹೇಳಿತ್ತಾಡ.
ಆತು ಹೇದು ಎರಡೊರಿಷ ಕಳುದು ಒಳ್ಳೆ ಪೊದು ನೋಡಿ ಕೊಟ್ಟೇ ಬಿಟ್ಟವು.
ಪ್ರೀತಿಯ ತಂಗೆಯ ಪ್ರೀತಿಲೇ ಕಳುಸಿಕೊಟ್ಟವು ಸುಬ್ರಾಯಮಾವ.
~
ತಮ್ಮ ರಾಮಚಂದ್ರ ಮಾವ ಇನ್ನೂ ಸಣ್ಣ.
ಕಲಿವಿಕೆ ಆಗಿಂಡಿದ್ದತ್ತು. ಎಂಟನೆ – ಒಂಭತ್ತನೆ – ಹತ್ತನೆ – ಕೋಲೇಜು – ಇತ್ಯಾದಿ.
ಮನೆಯ ಎಲ್ಲೋರಿಂದಲೂ ಉಶಾರಿ ರಾಮಚಂದ್ರ ಮಾವ ಹೇದು ಸ್ವತಃ ಸುಬ್ರಾಯ ಮಾವಂಗೇ ಹೆಮ್ಮೆ ಇದ್ದತ್ತು.
ಕಲಿತ್ತಷ್ಟೂ ಕಲಿಶೆಕ್ಕು ಅವಂಗೆ – ಹೇದು ಸುಬ್ರಾಯ ಮಾವ ಅಬ್ಬೆಯ ಹತ್ರೆ ಹೇಳಿಗೊಂಡಿತ್ತವಾಡ.
~
ಸುಬ್ರಾಯ ಮಾವಂಗೆ ಪ್ರಾಯ ಆತು ಪ್ರಾಯ ಆತು – ಹೇದು ಅಬ್ಬೆ ಬೊಬ್ಬೆ ತಡವಲೆಡಿಯದ್ದೆ ಮದುವೆ ಆತು.
ಪಾರ್ವತಿ ಅತ್ತೆ ಮನೆಗೆ ಬಂದವು; ಎರಡೊರಿಷಲ್ಲಿ ಸೂರ್ಯ ಭಾವನೂ, ಪದ್ಮತ್ತಿಗೆಯೂ ಬಂದವು. ಅದಿರಳಿ.
~
ರಾಮಚಂದ್ರ ಮಾವನ ಕಲಿವಿಕೆ ಕೋಲೇಜಿಂಗೆ ಎತ್ತಿತ್ತು.
ಕರಿ ಪೇಂಟು, ಕೆಂಪಂಗಿ ಸುರ್ಕೊಂಡು, ಬಾಚಣಿಗೆಲಿ ಓರೆ ಬಗತ್ತಲೆ ತೆಗದು, ತಲೆ ಬಾಚಿಂಡು ಕೋಲೇಜಿಂಗೆ ಹೋಪಗ ಕಾಲ ಮುಂದುವರುದ್ದಪ್ಪಾ – ಹೇದು ಅಬ್ಬೆ ಹೇಳಿಗೊಂಡಿತ್ತಿದ್ದವು.
ಅಲ್ಲದ್ದರೂ – ಕಾಲ ತುಂಬ ಮುಂದುವರುದಿತ್ತು.
ಮನುಷ್ಯಂಗೆ ಚಂದ್ರನಲ್ಲಿಗೆ ಹೋಗಿ ಇಳುದು ಆಯಿದು. ಬಾಹ್ಯಾಕಾಶಲ್ಲಿ ಮನೆ ಮಾಡ್ಳಕ್ಕು ಹೇದು ತಿಳ್ಕೊಂಡಾಯಿದು; ಏಡ್ಸು, ಕೇನ್ಸರು – ಹೀಂಗಿರ್ಸ ಮಹಾ ಭಯಂಕರ ರೋಗಂಗಳ ಪತ್ತೆ ಮಾಡಿ ಅಯಿದು; ನೆಡಿರುಳು ವಿಮಾನ ಹಾರ್ಲೆ ಸುರು ಆಯಿದು; ಅಲ್ಲಲ್ಲಿ ಕಂಪ್ಯೂಟ್ರು ಇದ್ದು – ಹೇಳ್ತ ಒರ್ತಮಾನಂಗಳೂ ಬಪ್ಪಲೆ ಸುರು ಆಯಿದು.
ಕಾಲ ಮದಲಾಣ ಹಾಂಗಿಲ್ಲೆ; ಒತ್ತರೆ ಬದಲಾವುತ್ತಾ ಇದ್ದು.
~
ಕಲಿತ್ತ ಮಾಣಿಗೆ ಸುಬ್ರಾಯಮಾವ ಬೇಕುಬೇಕಾದ ಹಾಂಗೆ ವೆವಸ್ಥೆ ಮಾಡಿಗೊಂಡಿತ್ತವು.
ಕೋಲೇಜಿಂಗೆ ಹೋಪಲೆ ಬೈಕ್ಕು. ಬಣ್ಣಬಣ್ಣದ ಪೇಂಟಂಗಿಗೊ, ವಾರಕ್ಕೊಂದರಿ ಕಿಸೆ ತುಂಬ ಪೈಸೆ; ಮಜ್ಜಾನಕ್ಕೆ ತಣ್ಕಟೆ ಊಟ ಮೆಚ್ಚದ್ದಕ್ಕೆ ಬೆಶಿಬೆಶಿ ಹೋಟ್ಳೂಟಕ್ಕೆ ಪೈಶೆ- ಎಲ್ಲವುದೇ.
ಓದಲೆ ಕಷ್ಟ ಅಪ್ಪದು ಬೇಡ – ಹೇದು ಮನೆಯ ಯೇವ ತಾಪತ್ರೆಯೂ ಅವಂಗೆ ಕೊಟ್ಟಿದವಿಲ್ಲೆ. ಒಂದರಿಯೂ ಅಡಕ್ಕೆ ಹೆರ್ಕಲೆ ದೆನಿಗೆಳಿದ್ದವಿಲ್ಲೆ. ಅಣ್ಣ ದಿನಿಗೆಳ ನೊಂಪಣ್ಣನ ಹಾಂಗೆ ಬೆಳದ ಸಣ್ಣ ತಮ್ಮ.
ಅಂತೂ ಇಂತೂ – ನೊಂಪಣ್ಣಂಗೆ ಕೋಲೇಜು ಕಲ್ತಾತು.
ಒಳ್ಳೆ ಕೆಲಸ ಸಿಕ್ಕೆಕ್ಕಾರೆ ಬೆಂಗ್ಳೂರಿಂಗೆ ಬರೆಕ್ಕಷ್ಟೆ ಅಣ್ಣಾ – ಹೇಳಿರೆ ಸುಬ್ರಾಯಮಾವ ಬೇಡ ಹೇಳುಗೋ?
ಹಾಂಗೆ ಬೆಂಗ್ಳೂರಿಂಗೆ ಹೆರಟೂ ಆತು.
ಬೆಂಗುಳೂರಿನ ಜೀವನಕ್ಕೆ ಬೇಕಾದ ದೊಡ್ಡಪೈಶೆಯ ವ್ಯವಸ್ಥೆ ಮಾಡಿದ್ದು ಸುಬ್ರಾಯಮಾವನೇ.
ಊರಿಂದ ಪ್ರತಿ ಸರ್ತಿ ಹೆರಡುವಾಗಳೂ ಕಟ್ಟಕಟ್ಟ ಬಗೆ ಬಗೆಯ ಕಳುಸಿಕೊಟ್ಟುಗೊಂಡು ಇದ್ದದು ಅವರ ಅಬ್ಬೆಯೇ.
~
ಗೋವಿಂದ ಮಾವಂಗೆ ಕೆಲಸಕ್ಕೆ ಅನುಕ್ಕೂಲ ಅಪ್ಪ ಹಾಂಗೆ ಪುತ್ತೂರಿಲಿ ಸಣ್ಣ ಬಿಡಾರವೂ ಆತು. ಅವರ ಮೂಲ ಮನೆಂದಲೇ ಇಳುಶಿ ಕಟ್ಟಿದ ಹಾಂಗಿತ್ತು; ಅದೆಂತ ಬೇರೆ ಪಾಲು ಅಲ್ಲ.
ಒಂದೊಳ್ಳೆ ದಿನಲ್ಲಿ ಗೋವಿಂದ ಮಾವನ ಮದುವೆ ಎಳಗಿತ್ತು.
ಎಲ್ಲೋರುದೇ ಸೇರಿ ಜೆಂಬ್ರ ರೈಸಿತ್ತು.
~
ಅಪ್ಪನ ಜೆಬಾದಾರಿಕೆ ತೆಕ್ಕೊಂಡ ದೊಡ್ಡಣ್ಣ ಸುಬ್ರಾಯಮಾವಂಗೆ ದಿನ ದಿನವೂ ಶ್ರಮ ಜೀವನವೇ.
ಗಂಧದ ಕೊರಡು ಕಲ್ಲಿನ ಮೇಗೆ ತಿರುಗಿದ ಹಾಂಗೆ ಕಾಲಚಕ್ರಲ್ಲಿ ಸುಮಾರು ತಳದವು ಸುಬ್ರಾಯಮಾವ.
ಒಂದೊಂದರಿ ತೋಟಲ್ಲಿ ಕೆಲಸ ಮಾಡುವಾಗ ’ಹತ್ತನೆ ಕಲ್ತು, ಮತ್ತೆಯೂ ಮುಂದೆ ಕಲ್ತಿದ್ದಿದ್ದರೆ ಈಗ ಎಲ್ಲಿ ಇರ್ತಿತನೋ ಏನೋ’ ಹೇದು ಕಾಂಬಲೂ ಸಾಕು. ಆದರೆ, ಮನೆಗೆ ಎಜಮಾನ ಆಗಿಪ್ಪದು ಹೇದರೆ ಸುಲಾಬ ಇಲ್ಲೆ; ಎಲ್ಲವನೂ ಬಿಟ್ಟು ಬದ್ಕಲೆ ಅರಡಿಯೇಕು.
ಅಡಿಗೆ ಇದ್ದ ದಿನ ಸಂಪಾದನೆ. ಅಡಿಗೆಗೆ ಹೋಪಲಿಲ್ಲದ್ದದ್ದ ದಿನ ಮನೆಲಿ ದುಡಿಸ್ಸು; ಸಂಪಾದನೆಯ ಸದ್ವಿನಿಯೋಗ ಮಾಡಿ ಜಾಗೆ ಬೆಳಗುಸ್ಸು. ಅಂತೂ – ಅವರ ಅವಿರತ ದುಡಿಮೆಂದಾಗಿ ತೋಟ ಬೆಳಗಿತ್ತು. ತೋಟದ ಉದ್ಪತ್ತಿ ಒಳ್ಳೆತ ಬಪ್ಪದು ರಜ ಸಮಯ ಅಪ್ಪಗಳೇ – ಹತ್ತರಾಣ ಜೆನ ಜಾಗೆ ಕೊಡ್ತೇನೆ ಭಟ್ರೇ – ಹೇಳಿತ್ತಾಡ.
ಸರಿ ಹಾಂಗಾರೆ, ಆ ಜಾಗೆಗೆ ಒಂದು ಕ್ರಯ ಮಾಡಿದವು, ಮೆಲ್ಲಂಗೆ ಬೇಲಿ ಮುಂದೆ ಹಾಕಿದವು. ಅಂತೂ ಇಂತೂ ರಜ ಸಮೆಯ ಅಪ್ಪಗ ಹತ್ತರಾಣ ಜಾಗೆಗಳ ಕ್ರಯ ಮಾಡಿ ಮಾಡಿ – ಏನೂ ಇಲ್ಲದ್ದ ಆರಂಭಂದ ಹದ್ನೈದೆಕ್ರೆ ಅಡಕ್ಕೆ ತೋಟದ ಒರೆಂಗೆ ಬಂದು ನಿಂದತ್ತು!!
ಪ್ರತಿ ಅಡಕ್ಕೆ ಮರಕ್ಕೆ ಸುಬ್ರಾಯ ಮಾವನ ಗುರ್ತ ಇದ್ದು.
ಒಟ್ಟಿಂಗೆ ಅತ್ತೆ – ಬಾವಂದ್ರನ್ನೂ.
ಪುರುಸೊತ್ತಿಲಿ ಊರಿಂಗೆ ಗೋವಿಂದ ಮಾವನ ಸಂಸಾರವೂ ತೋಟಕ್ಕೆ ಹೋಗದ್ದೆ ಇರವು.
~
ಮತ್ತಾಣದ್ದು ರಾಮಚಂದ್ರ ಮಾವನ ಕತೆ.
ಬೆಂಗುಳೂರಿಲಿ ಕೆಲಸಲ್ಲಿ ಇರ್ತ ಕಾರಣ ಮದುವೆಗೆ ಕೂಸುಡ್ಕಲೆ ಕಷ್ಟ ಆಯಿದಿಲ್ಲೆ ಸುಬ್ರಾಯ ಮಾವಂಗೆ.
ಕೂಸಿನ ಜಾತಕ ಎಷ್ಟೂ ಸಿಕ್ಕಿತ್ತು; ಆದರೆ ಈ ಮಾಣಿಗೇ ಅದಾಗ – ಇದಾಗ ಹೇದು ಹಠ ಬಂದದು.
ಅಂತೂ ಎಲ್ಲವೂ ಅಕ್ಕಾದ ಒಂದು ಜಾತಕ ಸಿಕ್ಕಿತ್ತು; ಮದುವೆಯೂ ಆತು.
ಬೆಂಗ್ಳೂರಿಲಿ ಸಂಸಾರವೂ ಸುರು ಆತು.
ಬ್ರಮ್ಮಚಾರಿ ಆಗಿಪ್ಪಾಗ ಸಂಬಳ ಇಡೀ ಒಬ್ಬಂಗೇ. ಆದರೆ ಈಗ ಹಾಂಗೆಯೋ?
ಸಂಸಾರ ರಥಕ್ಕೆ ಎಣ್ಣೆ ಎರೇಡದೋ? ಬೆಂಗ್ಳೂರಿನ ಹಾಂಗಿರ್ತ ಬೆಂಗ್ಳೂರಿಲಿ ಎಲ್ಲದಕ್ಕೂ ವಿಪರೀತ ಕ್ರಯ.
ಹೊಟ್ಟೆ ಹಶುವಿಂಗೆ ಒಂದಾರಿ ಹೋಟ್ಳಿಂಗೋಗಿ ಬಂದರೆ ಎರಡು ಕಿಲ ಅಡಕ್ಕೆ ಹೊಡಿ!
ಎಲ್ಲವೂ ಪೈಸೆಕೊಟ್ಟು ತೆಗದೇ ಆಗೆಡದೋಳಿ!
ಊರಿನ ಹಾಂಗೆ ಗೆದ್ದೆಲಿ ಬೆಳೆತ್ತೋ? ತೋಟಲ್ಲಿ ಆವುತ್ತೋ? – ಈ ಪ್ರಶ್ನೆ ರಾಮಚಂದ್ರಮಾವನ ತಲೆಗೆ ಬಪ್ಪಲೆ ತುಂಬ ಸಮಯ ಹಿಡುದ್ದಿಲ್ಲೆ.
ಕೈಲಿಪ್ಪ ಸಂಬಳ ಸಾಲ್ತಿಲ್ಲೆ ಹೇದು ಅಪ್ಪಾಗ ಇನ್ನೆಂತ ಮಾಡುಸ್ಸು?
ಊರಿಲಿ ಪಾಲು ಕೇಳ್ತದೇ ನ್ಯಾಯ – ಹೇದು ರಾಮಚಂದ್ರಮಾವನ ಹೆಂಡತ್ತಿಯೂ ಒಪ್ಪಿದವಾಡ.
ಆ ದಿನ ಬಂದೇಬಿಟ್ಟತ್ತು.
ಸುಬ್ರಾಯಮಾವನ ದುಡಿಮೆಯ ಜಾಗೆಲಿ ರಾಮಚಂದ್ರಮಾವ ಮೂರನೇ ಒಂದಂಶ ಪಾಲು ಕೇಳಿದವಾಡ!!
~
ಅಣ್ಣ ಆಗಿಂಡು, ಅಪ್ಪನ ಜಾಗೆಲಿ ನಿಂದಂಡು ಎಲ್ಲಾ ತಮ್ಮಂದ್ರ ಮಕ್ಕಳ ಹಾಂಗೆ ಕಂಡು, ಮಕ್ಕಳ ತಮ್ಮಂದ್ರ ಹಾಂಗೆ ಕಂಡು, ಇಡೀ ಮನೆಯ ಬೆಳಗಿ, ಚೆಂದ ಮಾಡಿದ ಸುಬ್ರಾಯಮಾವಂಗೆ ಈಗ ಜೀವಮಾನದ ಅತ್ಯಂತ ದೊಡ್ಡ ಕ್ಷಣ.
ಎಲ್ಲವೂ ಒಂದು ಸಮುಷ್ಟಿಲಿ ಹೋಗಲಿ – ಹೇದು ಗ್ರೇಶಿದ್ದಿದ್ದ ಸುಬ್ರಾಯಮಾವನ ಮನೆ ಪಾಲಾವುತ್ತೋ – ಅದೂ ಆಗಿ ಬಿಡ್ಳಿ.
ಎಂತದೋ ಗಳಿಗೆಲಿ ಪಾಲು ಕೇಳಿದ – ಹೇದು ಮಾತುಕತೆಗೆ ಹೆರಟವು.
ಹಿಂದಾಣೋರಿಂದ ದೊಡ್ಡ ಸೊತ್ತು ಬಾರದ್ದರೂ – ತನ್ನ ಸ್ವಂತ ದುಡಿಮೆಲಿ ಇಷ್ಟೂ ದೊಡ್ಡ ಆಡಳ್ತೆ ಎದ್ದರೂ – ತಮ್ಮಂದ್ರ ಸಂಸಾರವ ಬಾಯಿಮುಚ್ಚಿ ತಾನೊಬ್ಬನೇ ಅನುಭವಿಸೆಂಡು ಹೋಪದು ಹೇಂಗೆ – ಹೇದು ತಾತ್ವಿಕ ಪ್ರಶ್ನೆ ಸುಬ್ರಾಯ ಮಾವಂಗೆ ಬಂತು.
ಅವರ ಎಜಮಾಂತಿ ಪಾರ್ವತಿಅತ್ತೆಯೂ ಎಂತೂ ಎದುರುತ್ತರ ಹೇಳಿದ್ದವಿಲ್ಲೆ.
ಹಾಂಗಾಗಿ, ಒಂದು ಶುಭಗಳಿಗೆಲಿ ನಾಕು ಜೆನ ಹೆರಿಯೋರ ಸೇರ್ಸೆಂಡು ಜಾಗೆಯ ಪಾಲುಪಟ್ಟಿ ಮಾಡಿದವು.
ಜಾಗೆ, ತೋಟ, ಹಟ್ಟಿ, ಅಟ್ಟಲ್ಲಿ ಇಪ್ಪ ಸೊತ್ತುಗೊ, ಪುತ್ತೂರಿಲಿ ಇಪ್ಪ ಸಣ್ಣ ಜಾಗೆ – ಎಲ್ಲವನ್ನೂ ಪಾಲಿಂಗೆ ಮಡಗಿದವು.
ಗೋವಿಂದ ಮಾವಂಗೆ ಸುಬ್ರಾಯಣ್ಣನ ಮೇಗೆ ಒಳ್ಳೆತ ಪ್ರೀತಿಯೂ ಅಭಿಮಾನವೂ ಇದ್ದು. ಅಣ್ಣ ಕೊಟ್ಟದು ಸಾಕು – ಹೇದು ಆಲೋಚನೆ ಮಾಡಿದ್ದವು. ಆದರೆ ರಾಮಚಂದ್ರಮಾವಂಗೆ ಸುಬ್ರಾಯಣ್ಣನಿಂದಲೂ, ಪೈಶೆ ಮೇಗೆ ಪ್ರೀತಿಯೂ ಅಭಿಮಾನವೂ ಇಪ್ಪದಿದಾ. ಹಾಂಗಾಗಿ, ಊರ ಜಾಗೆ ಬೇಡ; ಇಲ್ಯಾಣ ಕಿರಿಂಚಿ, ತೋಟ, ಮಣ್ಣು – ಯೇವದೂ ಬೇಡ.
ಬೇಕಾದ್ಸು ಬರೇ ಪೈಶೆ ಮಾಂತ್ರ! ಎಲ್ಲದಕ್ಕೂ ಮೌಲ್ಯ ಹಿಡುದು – ಅಷ್ಟು ಮೌಲ್ಯವ ಕೊಡೇಕು – ಹೇದು ಬೇಡಿಕೆ ಆತಾಡ.
ಆತಂಬಗ; ಪಂಚಾತಿಗೆಗೆ ಬಂದ ಸರ್ವರ ಅನುಮತಿಯ ಹಾಂಗೆ ಸುಬ್ರಾಯಮಾವ ಆ ಷರತ್ತಿಂಗೆ ಒಪ್ಪಿದವಾಡ.
ಎಷ್ಟೋ ಒರಿಶಲ್ಲಿ ಕಂತು ಕಂತಿನ ಮೂಲಕ ಎಷ್ಟೋ ಲಕ್ಷ ಕೊಡೇಕು – ಹೇದು ಮಾತುಕತೆ ಆತು.
~
ಊರಿಂದ ಸುಬ್ರಾಯಣ್ಣ ಪೈಸೆ ಕೊಡ್ಳೆ ಪುರುಸೊತ್ತಿಲ್ಲೆ; ರಾಮಚಂದ್ರಮಾವನ ಕೈಲಿ ಅದು ಒಳಿತ್ತೋ?
ಬೆಂಗ್ಳೂರಿಲಿ ಎಂತದೋ – ಸೈಟು ತೆಗವಲೆ ಬೇಕಾಗಿ – ಹಾಂಗೊಂದು ಅಂಬೆರ್ಪು ಮಾಡಿದ್ದೋ ತೋರ್ತು.
ಊರಿಂದ ಕಂತು ಕಂತಿಲಿ ರಜರಜವೇ ಸಿಕ್ಕಿದ್ದರಲ್ಲಿ ಹೆಂಡತ್ತಿಗೆ ಸೀರೆಯೂ, ಮಗಂಗೆ ಕಂಪ್ಲೀಟ್ರೂ ತೆಗದಪ್ಪಗ ಪೂರ ಕಾಲಿ!
ಎರಡು ಮೂರು ಕಂತು ಕಾಲಿ ಆದ ಮತ್ತೆ – ಇನ್ನು ಬಪ್ಪದರ್ಲಿ ಸೈಟು ತೆಗವಲೆ ಬಿಡಿ; ಸೌಟು ತೆಗವಲೂ ಒಳಿಯ – ಹೇದು ನಿಘಂಟಾತು ರಾಮಚಂದ್ರ ಮಾವಂಗೆ.
ಇಷ್ಟು ಕೊಟ್ಟರೂ ಊರಿಲಿ ಸುಬ್ರಾಯಮಾವನ ಜಾಗೆ ಚೆಂದಕೆ ನೆಗೆನೆಗೆ ಮಾಡಿಗೊಂಡೇ ಇದ್ದು.
ಪುತ್ತೂರು ಪೇಟೆಲಿಪ್ಪ ಗೋವಿಂದ ಮಾವನ ಜಾಗೆಯೂ ಚೆಂದಕೆ ಇದ್ದು.
ಅಂಬಗ, ಅಂಬೆರ್ಪು ಮಾಡಿ ಕಂಗಾಲಾದ್ಸು ತಾನು ಮಾಂತ್ರ – ಹೇಳ್ತ ಸತ್ಯವೂ ಅರಡಿಗಾತು.
ಇನ್ನೆಂತ ಮಾಡುಸ್ಸು?
“ಪಾಲು ಸರಿ ಆಯಿದಿಲ್ಲೆ, ಎನಗೆ ಕೊಟ್ಟ ಮೌಲ್ಯ ಕಮ್ಮಿ ಆತು” ಹೇದು ಪಂಚಾತಿಗೆ ಮಾಡುಸಿದೋರತ್ರೆ ಹೇಳಿದವಾಡ.
ತನಗೆ ಹೆಣ್ಣುಕೊಟ್ಟ ಮಾವನ ಕೈಲಿ ಹೇಳುಸಿದವಾಡ.
ಬೇರೆ ಆರೋ ಒಕೀಲರ ಕೈಲಿ ಹೇಳಿದವಾಡ.
ಆದರೆ ಸುಬ್ರಾಯಮಾವಂದು ಕರುಳಸಂಬಂಧದ ಪ್ರಶ್ನೆ ಒಂದೇ – ಅವಂಗೇ ಬಂದು ಎನ್ನತ್ತರೆ ಕೇಳುಲಾಗದೋ? ಜೀವನ ಬಂಙಲ್ಲಿದ್ದರೆ ಆನೇ ಕೊಡುವೆನ್ನೇ! – ಹೇದು.
~
ಅಣ್ಣನ ಹತ್ತರೆ ಒಂದರಿ ದರ್ಪ ತೋರ್ಸಿ ಆದೋನಿಂಗೆ, ಇನ್ನು ಹತ್ತರೆ ಬಂದರೆ ಹೆಂಡತ್ತಿ ಎದುರು ಮರಿಯಾದಿ ಹೋದ ಹಾಂಗೆ ಆಗದೋ? ಅದಕ್ಕೆ, ಆ ಸಂಗತಿ ಬಿಡಿ – ಅದೆಲ್ಲದರಿಂದಲೂ ಒಂದು ಹೆಜ್ಜೆ ಮುಂದೆ ಹೋದವಾಡ ರಾಮಚಂದ್ರ ಮಾವ.
ಅದೆಂತರ?
ಈಗ – ಮೊನ್ನೆ ಗೊಂತಾದ ಒರ್ತಮಾನ; ರಾಮಚಂದ್ರ ಮಾವ – ಅವರ ಇಬ್ರೂ ಅಣ್ಣಂದ್ರು ಪಾಲಿಲಿ ಮೋಸ ಮಾಡಿದ್ದವು ಹೇದು ಕೋರ್ಟಿಲಿ ನಂಬ್ರ ಸುರುಮಾಡಿದ್ದವಾಡ – ಹೇದು.
~
ತಮ್ಮಂದ್ರ ಜೀವನಕ್ಕಾಗಿ ತನ್ನ ವಿದ್ಯಾಭ್ಯಾಸವನ್ನೇ, ಮಹದಾಲೋಚನೆಗಳನ್ನೇ ಕೈಬಿಟ್ಟು ದುಡಿವಲೆ ಸುರುಮಾಡಿದ,
ಅಪ್ಪನ ಸ್ಥಾನಲ್ಲಿ ನಿಂದು ಸಾಂಕಿದ ಅಣ್ಣನ,
ಎಷ್ಟೋ ಇರುಳು ಒರಕ್ಕು ಕೆಟ್ಟು ಜೆಂಬ್ರಂಗಳಲ್ಲಿ ಅಡಿಗೆ ಮಾಡಿ ಸಂಪಾದಿಸಿ ಮನೆ ಸಾಂಕಿದೋನ,
ಅಶನ ಬಳುಸಿದ ಕೈಯ,
ತನ್ನದೇ ಅಮ್ಮನ ಹೊಟ್ಟೆಲಿ ತನ್ನಂದ ಮದಲೇ ಹುಟ್ಟಿದ – ಸ್ವಂತ ಅಣ್ಣನ ಎದುರು – ಕೋರ್ಟಿಂಗೆ ಹೋದರೆ ಹೇಂಗಕ್ಕು?
ಮನೆಯೊಳಾಣ ತಗಾದೆಯ ಮನೆಯೊಳವೇ ಇತ್ಯರ್ಥ ಮಾಡಿರೆ ಚೆಂದ ಅಲ್ಲದೋ – ಹೇದು ಆಚಮನೆ ದೊಡ್ಡಪ್ಪ ಹೇಳಿಗೊಂಡಿತ್ತಿದ್ದವು.
ಎರಡು ತಿಂಗಳಾತಾಡ – ಸುಬ್ರಾಯಮಾವನ ಅಬ್ಬೆ ತೀರಿಗೊಂಡಿದವಾಡ.
ಛೇ – ಸಣ್ಣಮಗ ಹೀಂಗೆ ಮಾಡ್ತನ್ನೇ – ಹೇದು ಮನಸ್ಸಿಲಿ ಬೇಜಾರು ಯೇವಾಗಳೂ ಇದ್ದತ್ತು ಅವಕ್ಕೆ.
ಅವು ತೀರಿ ಹೋಪಗ ಆದರೂ ಮಗ ಒಂದರಿ ಬಂದು ಅಬ್ಬೆಯ ಮೋರೆ ನೋಡ್ಳಿ ಹೇದು ಸುಬ್ರಾಯಮಾವ ವಿಷಯ ತಿಳುಸಲೆ ಪೋನು ಮಾಡಿರೆ – ಬೈಲಿಲಿ ಹೇಳುಲಾಗದ್ದ – ಬೈಲಿನೋರು ಕೇಳುಲಾಗದ್ದ ಬಾಶೆಲಿ ಬೈದು ಪೋನು ಮಡಗಿದವಾಡ ರಾಮಚಂದ್ರ ಮಾವ.
ಇದೆಲ್ಲ ಸಂಗತಿ ಆಚಮನೆ ದೊಡ್ಡಪ್ಪ ಹೇಳಿಯೇ ಒಪ್ಪಣ್ಣಂಗೆ ಗೊಂತಾದ್ದು.
~
ಈಗ ಹೇಳಿ, ವಿದ್ಯಾಭ್ಯಾಸ ಹೆಚಿಪ್ಪ ತಮ್ಮ ಸಂಸ್ಕಾರವಂತನೋ? ಕಮ್ಮಿ ಕಲ್ತ ಅಣ್ಣ ಹೆಚ್ಚಿಗೆ ಸಂಸ್ಕಾರವಂತನೋ?
ಪೈಸೆ ಆಶೆ ಬಂತುಕಂಡ್ರೆ ಯೇವ ವಿದ್ಯಾವಂತನೂ ಸಂಸ್ಕಾರ ಬಿಡುಗು; ಯೇವ ಮನೆಯೂ ಹಾಳಕ್ಕು ಹೇಳ್ತದು ಆ ಮನೆಯ ಘಟನೆಗಳ ತಾತ್ಪರ್ಯ ಆಡ.
~
ಅದೇನೇ ಇರಳಿ, ಜೀವನವನ್ನೇ ತೇದು ತಮ್ಮಂದ್ರಿಂಗಾಗಿ ಎರದ ಸುಬ್ರಾಯಮಾವನ ನಿವೃತ್ತ ಜೀವನಲ್ಲಿ, ಪ್ರೀತಿಲಿ ಕಲುಶಿದ ತಮ್ಮ ಹೀಂಗೆ ಮಾಡಿದನ್ನೇ – ಹೇದು ಸಂಕಟ ಪಡುವ ಹಾಂಗಾದ್ಸು ದುರ್ದೈವ.
ಅಲ್ಲದೋ?
~
ಒಂದೊಪ್ಪ : ವಿದ್ಯಾವಂತರಾಗಿದ್ದರೆ ಸಾಲ; ಸಂಸ್ಕಾರವಂತರಾಗಿರೆಕ್ಕು. ಅಲ್ಲದೋ?
ಸೂ: ಸುಬ್ರಾಯ ಮಾವನ ಹೆಸರು ಹಾಂಗಲ್ಲ; ಅವರ ಮನೆ ಗಿರಿಯಡ್ಕವೂ ಅಲ್ಲ!
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಹರೇರಾಮ , ಮನೆ ಮನೆ ಕಥೆಯಾಗಿದ್ದು ಹ್ರ್ದದಯ ಸ್ಪಂಧೀ ಚಿತ್ರಣ ಹೀಂಗಿದ್ದದರ ಓದುವಗ ಕಣ್ಣ್ಣೇರು ಹಾಕುತ್ತವು ಅವರ ನಿಜ ಜೀವನಲ್ಲಿ ಅದೇ ತಪ್ಪು ಮಾಡ್ತ್ತವಲ್ಲೋ? ನಿನ್ನ ಲೇಖನಿ ಮೊನೆ ಹರಿತ. ಒೞೇ ಪರಿಣಾಮ ಬೀರ್ಲಿ ಒಪ್ಪಣ್ಣಾ
ಶುದ್ದಿಯ ನಿರೂಪಣೆ ಲಾಯಿಕ ಆಯಿದು.
೧. ಬದಲಾವಣೆ ನಿರಂತರ; ಬದಲಾವಣೆಗೇ ಬದಲಾವಣೆಯ ಬದಲುಸಲೆ ಎಡಿಯ
೨.ಪ್ರತಿ ಅಡಕ್ಕೆ ಮರಕ್ಕೆ ಸುಬ್ರಾಯ ಮಾವನ ಗುರ್ತ ಇದ್ದು.
೩. ಬೆಂಗ್ಳೂರಿನ ಹಾಂಗಿರ್ತ ಬೆಂಗ್ಳೂರು-
ಈ ಮಾತುಗೊ ಪುನಃ ಪುನಃ ಓದಿಸಿತ್ತು.
ಒಪ್ಪಣ್ಣಾ,
ಮನಸ್ಸಿ೦ಗೆ ಮುಟ್ತಿತ್ತು,ಹೃದವಕ್ಕೆ ತಟ್ಟಿತ್ತು ಈ ಶುದ್ದಿ.”ವಿದ್ಯಾವ೦ತರೆಲ್ಲ ಪ್ರಜ್ಞಾವ೦ತರಲ್ಲ” ಹೇಳ್ತ ಮಾತು ನಿಜ.
ನಮ್ಮ ಎದುರು ಈಗಳುದೆ ಇ೦ತಾ ತ್ಯಾಗಮಯಿ ಅಣ್ಣ೦ದಿರು ಇದ್ದವು ಹೇಳ್ತದು ಹೆಮ್ಮೆಯ ಸ೦ಗತಿ.ಆದರೆ ಇ೦ಥಾ ತಮ್ಮ೦ದಿರೂ ಇದ್ದವನ್ನೇ, ಅದು ದೌರ್ಭಾಗ್ಯ.
ರಾಮಜ್ಜ ಊರಿ೦ದ ಊರಿ೦ಗೆ ,ಹೆಗಲಿಲಿ ಬರೀ ಒ೦ದು ಕರ್ಚೀಪು ಹಾಕಿ.ರಾತ್ರಿ ಇಡಿ ಗ೦ಟೆಗಟ್ಟಲೆ ಇನ್ನೊ೦ದು ಅಡಿಗೆಗೆ ನಡೆದು ಹೋವುತ್ತಿದ್ದವು. . ಅವರ ಶರೀರದ ಮೇಲೆ ಅ೦ಗಿ ಬ೦ದದು ಬಹುದಶಕದ ಒತ್ತಾಯದ ಮೇರೆಗೆ…
ಬಟ್ರು ಬಪ್ಪಲೆ ಜೀಪು ಕಳುಸುತ್ತವೂ ,ನಾವೋಗೋ ಹೇಳುದು ಬೇಡ.ಇರಲಿ ನಮ್ಮ ನೀತಿ.ಹೇಳಿ ಪುರಾ ಒ೦ದರಿ ನೆಗೆಮಾಡಿ,ಎಲೆಅಡೆಕ್ಕೆ ಹೊಗೆಸೊಪ್ಪಿನ ಪಿರಿ ಕಾಸುಗು.
ರಾಮಜ್ಜನ ಜೀವನ ಚಕ್ರ ಒ೦ದು ಬಹುದೊಡ್ದ ಹೊತ್ತಗೆ ಅಕ್ಕು.
ಆಚಮನೆ ಗಡ್ದದ ದೊಡ್ದಪ್ಪ೦ಗೆ ಕೇಳಿದರೆ ಗೊ೦ತ್ತಕ್ಕು.ಇರಲಿ.
ಈಗಾಣ ಗ್ಲೋಬಲ್ ಕಾ೦ಪಿಟೀಶನ್ ನೀತಿಲಿ,ಕಾನೂನಿನ ಅಡಿ,೧-೨-೩-೪…… ಇ೦ತ ವಿಭಜನೆಗೆ ಪರ್ಯಾಯ ಎ೦ತರ?
ಬೇರೆ ಬೇರೆ ಗೆಲ್ಲು ನಡುವುದೋ ಅಲ್ಲ ಒ೦ದೆ ಮರವ ಉಳುಶುವುದೋ? ತಿಳಿದವು ಬರೆದರೆ ಹೊಸ ಚಿ೦ತನೆಗೆ ನೆಪ ಅಕ್ಕಲ್ಲೋದೊ?
Elder brothers are suffering in most of the cases.
ಕಥೆ ಲಾಯೆಕ್ಕೈದು. ಈದು ಹವ್ಯಕರ ಮನೆ ಯ ಕಥೆಯಲ್ಲ . ವ್ಯಥೆ. ಇನ್ದು ಹೀನ್ಗಿಪ್ಪದು ನಡ ತ್ತ ? ಮದಲು ಹೀನ್ಗೆ ಇತ್ತಿದಡ.
ತಮ್ಮನ ಶ್ರೇಯಸ್ಸಿಂಗಾಗಿ ಎಲ್ಲವನ್ನೂ ತ್ಯಾಗ ಮಾಡ್ಲೆ ತಯಾರಾದ ಅಣ್ಣ,
ಪೈಸಕ್ಕಾಗಿ ಸಂಬಂಧವನ್ನೇ ತ್ಯಾಗ ಮಾಡ್ಲೆ ತಯಾರಾದ ತಮ್ಮ…
ಅಷ್ಟೆಲ್ಲಾ ಮಾಡಿಯೂ ನೆಮ್ಮದಿಯ ಜೀವನ ಸಿಕ್ಕಿತ್ತೋ? ಅದೂ ಇಲ್ಲೆ.
ಪ್ರೀತಿ ವಿಶ್ವಾಸವೇ ಅಕೇರಿವರೆಗೆ ಒಳಿವದು ಹೇಳಿ ಎಲ್ಲರೂ ತಿಳ್ಕೊಂಬದು ಅಗತ್ಯ.
ನಿರೂಪಣೆ ಲಾಯಿಕ ಆಯಿದು.
ಒಂದೊಪ್ಪಃ- “ವಿದ್ಯಾವಂತರಾಗಿದ್ದರೆ ಸಾಲ; ಸಂಸ್ಕಾರವಂತರಾಗಿರೆಕ್ಕು”.. ಎಲ್ಲಾ ಕಾಲಕ್ಕೂ ತಕ್ಕುದಾದ ಮಾತು.
ಸುಬ್ರಾಯ ಮಾವ ಬಳಗೆ ಬೇಲಿ ಹಾಕಿದ ಹಾಂಗೆ ಆತು.ಎರದ ಕೈಗೆ ಕಚ್ಚುವದ ಹೀಂಗೆ ಹೇಳಿ ಗೊಂತಾವುತ್ತು. ಚತ್ರಣ ಲಾಯಿಕ ಆಯಿದು.
ಸಮಾಜಲ್ಲಿ ಆಗ್ತಾ ಇಪ್ಪ ನೈಜ ಸುದ್ದಿಯ ಚಿತ್ರಣ ಎಂದಿನಂತೆ ಲಾಯ್ಕಾಯ್ದು..ಬಗ್ಗಿದವಂಗೆ ಒಂದು ಗುದ್ದು ಜಾಸ್ತಿ ಹೇಳುಗು ಹಿರಿಯರು ಹಾಂಗೆ ಆತನ್ನ ಸುಬ್ರಾಯಮಾವಂಗೆ..ಸುಬ್ರಾಯ ಮಾವಂಗೆ ಮಾತ್ರ ಅಲ್ಲ ಬೈಲಿಲಿ ಅದೆಷ್ಟೋ ಮನೆಗಳಲ್ಲಿ ಆಗ್ತಾ ಇದ್ದು..
ಹೃದಯಸ್ಪರ್ಶಿ ಶುದ್ದಿಗೆ ಒಪ್ಪ೦ಗೊ ಒಪ್ಪಣ್ಣಾ.. ಹೀ೦ಗಿರ್ತ ಅಣ್ಣ ದೇವರ ದಯ೦ದ ಎನಗೆ ಇದ್ದ, ಆದ ಕಾರಣ ಮಾ೦ತ್ರ ಆವ್ತು, ಆನು ಇ೦ದು ಇಪ್ಪ ಸ್ಥಿತಿಲಿ ಇಪ್ಪದು. ಹತ್ತಿ ಬ೦ದ ಏಣಿಯ ಮೆಟ್ಟಿ ದೂಡಿ ಹಾಕಿರೆ ಇಳಿವಲಪ್ಪಗ ಎ೦ತ ಮಾಡುವದು? ಹಾರಿ ಕೈಕ್ಕಾಲು ಮುರುಕ್ಕು೦ಬದೊ? ಪೈಸೆಯ ವ್ಯಾಮೋಹ ಹಲವು ಸ೦ಬ೦ಧ೦ಗಳ ಕಣ್ಣಿ೦ಗೆ ಕಾಣದ್ದ ಹಾ೦ಗೆ ಮಾಡ್ತನ್ನೇ ಹೇಳಿ ಗ್ರೇಶುವಗ ಬೇಜಾರವುತ್ತು..
ಇದು ಸುಬ್ರಾಯ ಮಾವನ ಕಥೆಯೂ ಅಲ್ಲ… ಗಿರಿಯಡ್ಕ ಮನೆಲಿ ನಡೆದ ಕಥೆಯೂ ಅಲ್ಲ.
ಬದಲಾಗಿ ಇದು ಎಲ್ಲರ ಮನೆಲಿ ನೆಡೆತ್ತಾ ಇಪ್ಪ ಕಥೆ… ಮನೆ ಮನೆ ಕಥೆ… ಎಲ್ಲರ ಮನೆಯ ಕಥೆ…
ಒಪ್ಪಂಗಳೊಟ್ಟಿಂಗೆ…,
ಒಪ್ಪಣ್ಣನ ಈ ಸರ್ತಿಯಾಣ ಸುದ್ದಿಗೆ ಒಂದು ಒಪ್ಪ ಕೊಡದ್ದೆ ನಿವೄತ್ತಿ ಇಲ್ಲೆ. ಒಪ್ಪಣ್ಣ ಹೇಳಿದ ಶುದ್ದಿಯಾಂಗೆ ಇಪ್ಪ ಹತ್ತರಂದ ಕಂಡ ಇನ್ನೆರಡು ಕುಟುಂಬಂಗಳ ಶುದ್ದಿ ಇದು.
೧. ಅಪ್ಪಂಗೆ ೮ ಜನ ಮಕ್ಕೋ. ನಾಲ್ಕು ಗಂಡು, ನಾಲ್ಕು ಹೆಣ್ಣು. ಅಪ್ಪ ದೊಡ್ಡಮಗನತ್ತರೆ ಹೇಳಿದ, ಮಗಾ ತಮ್ಮಂದಿರು ಓದಲಿ, ನೀನು ವ್ಯವಸಾಯ ಮಾಡಿಗೊಂಡು ಯೆನ್ನ ಸಹಾಯಕ್ಕೆ ಮನೆಲಿಯೇ ಇರು ಹೇಳಿ. ಅಣ್ಣ ಆತು ಹೇಳಿ ಮನೆಲಿ ಕೂದು ತಮ್ಮಂದಿರ ಯೆಲ್ಲಾ ಓದಿಸಿ ಒಬ್ಬ ಡಾಕ್ಟರ್, ಇನ್ನೊಬ್ಬ ಇಂಜಿನೀಯರ್, ಮತ್ತೊಬ್ಬನ ಲೆಕ್ಚರರ್ ಮಾಡಿದ, ತನ್ನ ದುಡುಮೆಂದ. ತಂಗೆಕ್ಕೋಗೆ ಮದುವೆ ಮಾಡಿಸಿದ.ಎಲ್ಲೋರು ಒಂದು ಸ್ತಿತಿಗೆ ಬಂದಪ್ಪಗ ಅಣ್ಣಂಗೆ ಒಂದು ಆಲೋಚನೆ ಬಂತು “ಈ ಪೊತ್ತೆಂಗಿರಿ ತೋಟವ ಮಾರಿ ಒಂದು ಎಲ್ಲಾ ವ್ಯವಸ್ಥೆ ಇಪ್ಪ ತೋಟ ತೆಗದರೆ ಹೇಂಗೆ ಹೇಳಿ. ಸರಿ ತಮ್ಮಂದಿರತ್ತೆರೆ ಕೇಳಿದ. ಅವೂ ಅಕ್ಕು ಹೇಳಿ ಹೇಳಿದವು. ಜಾಗೆ ಮಾರಾಟಕ್ಕೆ ಎಲ್ಲಾ ರಿಜಿಸ್ತ್ರಿ ಆಫೀಸಿಂಗೆ ಬಂದವು. ಅಲ್ಲಿ ಪೈಸೆ ಎಣಿಸುವಗ ಈ ತಮ್ಮಂದಿರುದೆ ತಂಗೆಕ್ಕಳುದೆ ಮಾರುದೆಲ್ಲ ಅಪ್ಪು, ಎಂಗಳ ಪಾಲಿನ ಪೈಸೆ ಕೊಟ್ಟರೆ ಮಾತ್ರ ದಸ್ಕತ್ ಹಾಕುದು ಹೇಳಿದವು. ಮತ್ತೆಂತರ ಮಾಡುದು, ಎಲ್ಲೋರಿಂಗು ಅವರವರ ಪಾಲಿನ ಪೈಸೆ ಪಾಲು ಮಾಡಿ ಕೊಟ್ಟ. ಈಗ ಆಣ್ಣ ಸುದರಿಕೆಗೆ ಹೋವುತ್ತಾ ಇದ್ದ.
ಒಪ್ಪ ಶುದ್ಧಿ.
ಸುಬ್ರಾಯ ಮಾವನಾಂಗಿಪ್ಪ ಅಣ್ಣಂದ್ರಿಂಗೆ ರಾಮಚಂದ್ರ ಮಾವನಾಂಗಿಪ್ಪ ತಮ್ಮಂದ್ರು ಈಗಳೂ ಇಕ್ಕು.ಆದರೆ ಗೋವಿಂದ ಮಾವನ ಹಾಂಗಿಪ್ಪ ತಮ್ಮಂದ್ರೂ ಇದ್ದವು ಹೇಳ್ವದೇ ಸಮಾಧಾನ ಕೊಟ್ಟ ವಿಷಯ.
ಕತೆ ಲಾಯ್ಕಿದ್ದು.
ಬಂಗಾರದ ಮನುಷ್ಯ ಸಿನೆಮಾ ನೋಡಿದ ಹಾಂಗೆ ಆತು ಒಪ್ಪಣ್ಣನ ಶುದ್ದಿ ಓದಿ ಅಪ್ಪಗ. ಸುಬ್ರಾಯ ಮಾವನ ಕಥೆ ನೈಜವಾಗಿ ಬಯಿಂದು. ಅಷ್ಟೊಳ್ಳೆ ಅಣ್ಣಂಗೆ ಹಾಂಗಿಪ್ಪ ಎರೆಪ್ಪು ತಮ್ಮನ ಗ್ರೇಶಿ ತುಂಬಾ ಬೇಜಾರು ಆತು. ಕಡೇಣ ಒಪ್ಪ, ನಿಜವಾಗಿಯೂ ಈಗಾಣ ಜವ್ವನಿಗರ ಮನಸ್ಸು ತೆರಶುತ್ತ ಮಾತು.
೧. ಮಂತ್ರ ಹೇಳಿಗೊಂಡಿದ್ದ ಅಪ್ಪಂಗೆ – ಪಟ ಪಟ ಇಂಗ್ಳೀಶು ಮಾತಾಡ್ತ ಮಕ್ಕೊ
೨. ಒಳ್ಳೆ ಕೆಲಸ ಸಿಕ್ಕೆಕ್ಕಾರೆ ಬೆಂಗ್ಳೂರಿಂಗೆ ಬರೆಕ್ಕಷ್ಟೆ ಅಣ್ಣಾ
೩. ಹೊಟ್ಟೆ ಹಶುವಿಂಗೆ ಒಂದಾರಿ ಹೋಟ್ಳಿಂಗೋಗಿ ಬಂದರೆ ಎರಡು ಕಿಲ ಅಡಕ್ಕೆ ಹೊಡಿ
೪. ಇನ್ನು ಬಪ್ಪದರ್ಲಿ ಸೈಟು ತೆಗವಲೆ ಬಿಡಿ; ಸೌಟು ತೆಗವಲೂ ಒಳಿಯ
ಎಲ್ಲವೂ ಬರದು ಮಡಗೇಕಾದ ಮಾತುಗೊ ಒಪ್ಪಣ್ನ. ತುಂಬಾ ಕೊಶಿ ಆತು.
ಭಾರೀ ಲಾಯ್ಕಾದು ಒಪ್ಪಣ್ಣ. ಸುಬ್ರಾಯ ಮಾವನ ಹಾಂಗಿಪ್ಪವು ಸುಮಾರು ಜೆನಂಗೋ ಒಂದು ತಲೆಮಾರು ಹಿಂದೆ ಇತ್ತವು. ಸಣ್ಣ ಪ್ರಾಯಲ್ಲೇ ಇಡೀ ಮನೆ ಜವಾಬ್ದಾರಿ ವಹಿಸಿಗೊಂಡು ತಮ್ಮಂದ್ರಿನ್ಗೆ ಕಲಿಶಿ ತಂಗೆಗೊಕ್ಕೆ ಮದುವೆ ಮಾಡುಸಿಡ ಹೀಂಗಿಪ್ಪ ಮಹಾನುಭಾವರ ಆನು ಹತ್ತರಂದ ನೋಡಿದ್ದೆ. ನಮ್ಮ ಸುತ್ತಮುತ್ತ ನಡದ ನಿಜ ಘಟನೆಗೋ ಇದೆಲ್ಲ 🙁
ಬಹಳ ಲಾಯ್ಕ ಆಯಿದು ಒಪ್ಪಣ್ಣ.
ಯೋ ಪಾಪವೇ ಕಂಡತ್ತು ಸುಬ್ರಾಯ ಮಾವನ. ತನ್ನ ವಿದ್ಯಾಭ್ಯಾಸ ನಿಲ್ಲಿಸಿ, ಬೆಗರು ಅರುಶಿ ಕಷ್ಟ ಪಟ್ಟು ತಮ್ಮಂದ್ರ ಕಲಿಶಿ ದೊಡ್ಡ ಮಾಡಿದ ಸುಬ್ರಾಯ ಮಾವನ, ಹಾಂಗೆ ನಡಶಿಗೊಂಡ ರಾಮಚಂದ್ರ ಮಾವನ ಮೇಲೆ ಕೋಪ ಬಂತು.
ಅವಕ್ಕೆ ತನ್ನ ವಿದ್ಯೆ ಉಪಯೋಗಿಸಿ ದೊಡ್ಡ ಹುದ್ದೆ ಹಿಡುದು ಪೈಸೆ ಮಾಡ್ಲೆ ಆವ್ತಿತಿಲ್ಲೆಯಾ?
ಕೆಟ್ಟ ಮಾತೆಲ್ಲ ಬೈವಲೆ ಬಾಯಿ ಹೇಂಗೆ ಬಂತಪ್ಪಾ?
ಗೋವಿಂದ ಮಾವಂಗೆ ಎಷ್ಟು ಪ್ರೀತಿ ಇದ್ದು ಅಣ್ಣನ ಮೇಲೆ. ಹಾಂಗೆ ಇಪ್ಪಲಾಗದ ರಾಮಚಂದ್ರ ಮಾವಂಗೆದೆ?
ಯೋ ಹೀಂಗಿಪ್ಪವೂ ಇದ್ದವಾ ಕಂಡತ್ತು. ಬೇಜಾರದ ಶುಧ್ಧಿ ಈ ವಾರ…
ಅದರೆ ಬರದ್ದು, ವಿವರ್ಸಿದ್ದು ಲಾಯಿಕಾಯಿದು ಯಾವಾಗಲಿನ ಹಾಂಗೆ.
ಚಿತ್ರ – ಚಿತ್ರಣ ಎರಡೂ ಲಾಯಕ ಆಯ್ದು ಭಾವ. ಒಂದೊಪ್ಪ ಒಪ್ಪೆಕ್ಕಾದ್ದೇ. ಆದರೆ… ಪೇಟೆ ಸಂಸ್ಕಾರವೇ ಸುಸಂಸ್ಕಾರ ಹೇಳಿ ಆಯ್ದು ಭಾವ ಈಗಣ ಕಾಲಲ್ಲಿ. 🙁
ಅಲ್ಲಾ… ಎನಕಾಂಬದು… ಅಷ್ತು ವಿದ್ಯಾವಂತ ನಿಂಗಳ ರಾಮಚಂದ್ರ ಮಾವ ಅಷ್ಟಕ್ಕೇ ನಿಲ್ಸಿದ್ದೆಂತಕೇಳಿ. ಓ ಅಲ್ಲಿ ಒಬ್ಬ ಅಡ್ಡ ವಿಭೂತಿ ಪಟ್ಟಿ ಮೇಗಂದ ಕೆಂಪು ಕುಂಕುಮ ಬೊಟ್ಟು ಮಡುಗುತ್ತವ° ಇದ್ದ°. ಅವನತ್ರೆ ಕೇಳಿತ್ತಿದ್ರೆ ಕೆಲವು ಇನ್ನೂ ಐಡಿಯಾಂಗೊ ಕೊಡ್ತಿತ್ತನ್ನೇಪ.. – “ಸಂಪ್ಯ ಪೋಲೀಸು ಸ್ಟೇಶನ್ ಲಿ ಹೋಗಿ ಒಂದು ಕೇಸು – ‘ಬೈದಿದ್ದಾರೆ’, ವಿಟ್ಲ ಪೋಲೀಸ್ ಠಾಣೆಲಿ ಒಂದು ಕೇಸು – ‘ಜೀವ ಬೆದರಿಕೆ’ , ಕೋರ್ಟಿಲ್ಲಿ ಮತ್ತೊಂದು ಕೇಸು -‘ಸೋಲ್ಸಿದ್ದಾರೆ’, ಸಾಲದ್ರೆ ಅದರ ಮೇಗಂದ – ‘ಪೋರ್ಜರಿ ದಸ್ಕತ್ತು ಹಾಕಿ ಲಪಟಾಯಿಸಿದ್ದಾರೆ’ – ಹೇಳಿಯೂ ಹಾಕಲಾವ್ತಿತ್ತು., ಹೆಂಡತಿ ಅಪ್ಪನ ಮನೆಂದಲೂ ಪಾಲು ಕೇಳ್ಳಾವ್ತಿತ್ತು, ಬೇಕಾರೆ ಅದರ ಅಪ್ಪನ ಮನೆಯ ಜಾಗೆಯನ್ನೇ ಅವನ ಹೆಸರಿಂಗೆ ಬರಶಿಗೊಂಡು ಅವರ ಅಲ್ಲಿಂದ ಓಡ್ಸಲಾವ್ತಿತ್ತು…”:( . ಇದ್ದವಪ್ಪಾ ಇದ್ದವು ಹೀಂಗೂ ಮನುಷ್ಯರು ನಮ್ಮ ಕಣ್ಣೆದುರೇ 🙁 🙁