ಈ ಒರಿಶದ ಆಟಿ ತಿಂಗಳು ಮುಗುಕ್ಕೊಂಡು ಬಂತು, ಇನ್ನು ಬತ್ತದು ಸೋಣ, ಕಾಲಚಕ್ರ ನಿರಂತರ.
ಆಟಿ ತಿಂಗಳಿನ ವಿಶೇಷ ಎಲ್ಲ ಮೊನ್ನೆ ಮಾತಾಡಿದ್ದು ನಾವು. ಇನ್ನು ಬಪ್ಪದಿನಂಗಳಲ್ಲಿದೇ ರಜ ರಜ ಕಾಲ ವಿಶೇಷಂಗಳ ಸೇರುಸುತ್ತ ಆಲೋಚನೆ ಇದ್ದು ಒಪ್ಪಣ್ಣಂಗೆ.
ಇದರ ಎಡಕ್ಕಿಲೆ ಅನಿಸಿದ್ದು ಎಂತರ ಹೇಳಿರೆ, ಈ ಆಟಿ, ಸೋಣ, ಕನ್ನೆ — ಎಂತರ ಇದು ಹೀಂಗಿರ್ತ ಹೆಸರುಗೊ?- ಬೆಂಗ್ಳೂರಿಲೇಹುಟ್ಟಿ ಬೆಳದ ಶುಭತ್ತೆಯ ಮಕ್ಕೊಗೆ ಗೊಂತೇ ಇಲ್ಲೆ. ಅಲ್ಲ, ಅವರ ಪರಂಚುದು ಅಲ್ಲ ಆತಾ, ಅವಕ್ಕೆ ಹುಟ್ಟಿ ಬೆಳದ ವಾತಾವರಣಲ್ಲಿ ಆಟಿಗೂ ಪುರುಸೊತ್ತಿಲ್ಲೆ, ಶಾಂತಾಣಿಗೂ ಪುರುಸೊತ್ತಿಲ್ಲೆ.
ಒಪ್ಪಣ್ಣ ಹೀಂಗೇ ಸೀದ ಹೇಳಿಗೊಂಡೇ ಹೋದರೆ ಎಷ್ಟೋ ಶುಭತ್ತೆಯ ಮಕ್ಕೊಗೆ ಇದೆಲ್ಲ ಎಂತರ ಹೇಳಿಯೇ ತಲೆಗೆ ಹೋಗ. ಅದಕ್ಕೆಬೇಕಾಗಿ, ’ಅದೆಂತರ?’ ಹೇಳ್ತ ವಿವರ ರಜ್ಜ ಕೊಡುವ°. ಅದಾಗಲೇ ಗೊಂತಿಪ್ಪ ಒಪ್ಪಣ್ಣ–ಒಪ್ಪಕ್ಕಂಗೊಕ್ಕೆ ಹಳೆ ಮರಪ್ಪಿಂಗೂ, ಗೊಂತಿಲ್ಲದ್ದ ಒಪ್ಪಣ್ಣ–ಒಪ್ಪಕ್ಕಂಗೊಕ್ಕೆ ಕಲ್ತುಗೊಂಬಲೂ ಆತು. ಒಂದರಿಯೇ ಪೂರ್ತಿ ಕೊಡುದು ಕಷ್ಟ, ಆದ ಕಾರಣ ರಜ್ಜ ರಜ್ಜವೇ ’ಶುದ್ದಿ’ಗಳಲ್ಲಿ ಹೇಳಿಗೊಂಡು ಹೋಪ°, ಆಗದೋ?
ಮಾಷ್ಟ್ರುಮಾವನ ಹತ್ರೆ ಈ ಬಗ್ಗೆಸುಮಾರು ವಿಚಾರ ಮಾಡಿದೆ, ಅವಕ್ಕೆ ಜ್ಯೋತಿಷ್ಯದ ಗಣಿತವೂ, ಆಧುನಿಕ ವಿಜ್ಞಾನವೂಅರಡಿಗು. ಎರಡನ್ನೂ ವಿಮರ್ಶೆ ಮಾಡಿ– ತೂಗಿ ಹೇಳ್ತ ಪಾಂಡಿತ್ಯ ಇದ್ದು. ಮಾಷ್ಟ್ರ° ಅಲ್ದೋ, ಹಾಂಗಾಗಿ ಎಂತ ಹೆಡ್ಡಂಗೂ ಅರ್ತ ಅಪ್ಪಾಂಗೆ ಹೇಳ್ತ ಗುಣ ಇದ್ದು, ಎನಗೇ ಅರ್ತ ಆಯಿದು ಹೇಳಿರೆ – ನೋಡಿ ನಿಂಗೊ! ;-(
ಬೈಲಕರೆಲಿ ಜೋಯಿಷಪ್ಪಚ್ಚಿ ಇದ್ದವಲ್ದ, ಅವರತ್ರೆ ರಜ್ಜ ಪೂರ್ವಾಪರ ಎಲ್ಲ ಕೇಳಿಗೊಂಡೆ. ಅವಕ್ಕೆ ಜ್ಯೋತಿಷ್ಯದ ಗಣಿತವೂ, ಫಲವಿಮರ್ಶೆಯೂ ಅರಡಿಗು. ನಮ್ಮ ಗುರುಗೊಕ್ಕೆ ಎಲ್ಲ ಆಪ್ತರಾದ ಜೋಯಿಶರು ಅವು. ಪ್ರಕಾಂಡ ಪಂಡಿತರು, ಲೊಟ್ಟೆ ಅರಡಿಯಅವಕ್ಕೆ. ನೇರಾ ನೇರ.
ಇಬ್ರತ್ರೂ ಕೇಳಿ ಅಪ್ಪಗ ತುಂಬ ಶುದ್ದಿ ಸಿಕ್ಕಿತ್ತು. ಅದರಲ್ಲಿ ರಜ ರಜ ಹೆರ್ಕಿ ಒಂದು ಶುದ್ದಿ ಮಾಡಿ ನಿಂಗಳತ್ರೆ ಹೇಳ್ತೆ.
ರಾಶಿ:
ಆಕಾಶ ಇರುಳಿಡಿ ನಕ್ಷತ್ರವೇ ನಕ್ಷತ್ರ. ಬಾಲಮಂಗಳಲ್ಲಿ ಬತ್ತ ’ಚುಕ್ಕೆ ಸೇರಿಸಿ’ ನಮುನೆಯ ಪರಿಸ್ಥಿತಿ. ಗುರ್ತ ಮಡಿಕ್ಕೊಂಬದುಹೇಂಗಪ್ಪಾ! ಒಂದೊಂದರಿ ನೋಡಿರೆ ಒಂದೊಂದು ಕಲ್ಪನೆ. ಈ ಭೂಮಿಯ ಸುತ್ತದ ೩೬೦ ’ಭಾಗೆ’ (ಡಿಗ್ರಿ)ಯ ಹನ್ನೆರಡು ತುಂಡುಮಾಡಿದವು. ೩೦ ಭಾಗೆ ಬತ್ತ ನಮುನೆ, ಈ ತುಂಡುಗೊಕ್ಕೆ ’ರಾಶಿ’ ಹೇಳಿ ಹೆಸರು. ಒಂದೊಂದು ತುಂಡಿಲಿ ಕಾಣ್ತ ನಕ್ಷತ್ರಪುಂಜದ ಆಕಾರಕ್ಕೆ ಸಿಕ್ಕುತ್ತ ನಮುನೆಯ ಹೆಸರಿನ ಆ ಭಾಗಕ್ಕೆ ಕೊಟ್ಟವು. (ಏಡಿನ) ಕುಟ್ಟನ ತಲೆಯ ಹಾಂಗೆ ಕಾಣ್ತ ನಮುನೆಯ ನಕ್ಷತ್ರಪುಂಜಇಪ್ಪ ೩೦ಭಾಗೆಯ ಜಾಗೆಗೆ “ಮೇಷ” ಹೇಳಿ ದಿನಿಗೆಳಿದವು. ಹೋರಿಯ ನಮುನೆ ಕಾಣ್ತ ನಕ್ಷತ್ರಪುಂಜ ಇರ್ತ ಜಾಗೆಗೆ “ವೃಷಭ” ಹೇಳಿದವು, ಗೆಂಡೆಂಡತ್ತಿ ಒಟ್ಟಿಂಗಿಪ್ಪ ನಮುನೆಯ ಚಿತ್ರ ಕಾಂಬ ಮತ್ತೊಂದು ತುಂಡಿಂಗೆ “ಮಿಥುನ” ಹೇಳಿದವು… ಈ ನಮುನೆಹನ್ನೆರಡು ಹೆಸರು ಮಡಗಿದವು. ಜೋಯಿಶಪ್ಪಚ್ಚಿಯ ಹತ್ರೆ ಕೇಳಿರೆ ಹೇಳ್ತವು, ಪುರುಸೊತ್ತಿದ್ದರೆ.
ನಕ್ಷತ್ರ:
ಸೂರ್ಯನ ಚಲನೆ ತುಂಬ ನಿಧಾನ, ಆದರೆ ಮನುಷ್ಯಂದು?
ಸೂರ್ಯನ ಚಲನೆಯನ್ನೇ ಕಾಲದ ಮೂಲ ಹಿಡುದರೆ ನಿಖರತೆ(Accuracy) ಸಾಲ, ಅದಕ್ಕೆ ಅದರಿಂದ ಬೇಗ ಚಲನೆ ಅಪ್ಪ ಚಂದ್ರನಆಧಾರ ಮಡಿಕ್ಕೊಂಡು ಕಾಲದ ಗುರ್ತ ಹಿಡಿವಲೆ ಸುರು ಮಾಡಿದವು. ಚಲನೆ ವೇಗ ಆದ ಹಾಂಗೆ, ಚಲಿಸುವ ದಾರಿಯನ್ನೂ ಸಣ್ಣ ಸಣ್ಣತುಂಡು ಮಾಡೆಕ್ಕಲ್ದ, ಗುರ್ತಕ್ಕೆ ಬೇಕಾಗಿ. ಇಡೀ ೩೬೦ ಭಾಗೆಯ ಬರೇ ೧೨ ತುಂಡು ಮಾಡಿರೆ ಸೂಕ್ಷ್ಮತೆ ಸಾಕಾವುತ್ತಿಲ್ಲೆ – ಹಾಂಗಾಗಿಅದೇ ೩೬೦ ಭಾಗೆಯ ೨೭ ತುಂಡು ಮಾಡಿದವು. ಎರಡೂಕಾಲು ತುಂಡು ಒಂದು ರಾಶಿಗೆ ಬತ್ತ ನಮುನೆ. ಈ ಸಣ್ಣ ತುಂಡುಗೊಕ್ಕೆನಕ್ಷತ್ರ’ ಹೇಳಿದವು. ಈ ಹೊಸ ತುಂಡಿನ ಗುರ್ತ ಹಿಡಿವಲೆ ಬೇಕಾಗಿ ಪುನಾ ನಕ್ಷತ್ರ ಪುಂಜಂಗಳ ಸಹಾಯ ಮಡಿಕ್ಕೊಂಡವು, (ರಾಶಿಯ ಹಾಂಗೇ). ಕೇವಲ ಕಲ್ಪನೆಗೊ: ಅಶ್ವಿನಿ, ಭರಣಿ, ಕೃತ್ತಿಕಾ,… ಇತ್ಯಾದಿ ೨೭ ನಕ್ಷತ್ರಂಗೊ. ಜೋಯಿಷಪ್ಪಚ್ಚಿಯಲ್ಲಿಗೆಒಂದಿರುಳಿಂಗೆ ಬಂದರೆ ಜಾಲಿಂಗೆ ಕರಕ್ಕೊಂಡು ಹೋಗಿ ಸೂಟೆ ಹಿಡುದು ತೋರುಸುಗು. ರೇಡಿಯಲ್ಲಿ ’ರವಿವಾಸರೀಯ ಸಂಗೀತ’ ಕೇಳುದರ ಎಡಕ್ಕಿಲಿ. 😉 ’
ರಾಶಿ, ನಕ್ಷತ್ರ – ಎಲ್ಲವುದೇ ಭೂಮಿಯ ಸುತ್ತ ಇಪ್ಪ ನಕ್ಷತ್ರಂಗಳ ಮಾಡಿದ ನಿರ್ದಿಷ್ಟ ವರ್ಗೀಕರಣ. ಸೌರವ್ಯೂಹಂದ ಬಹಳ ಬಹಳದೂರಲ್ಲಿಪ್ಪ ನಕ್ಷತ್ರಂಗಳ ಪ್ಲೇಟು ಅದು. ಭೂಮಿಯ ಒಟ್ಟೊಟ್ಟಿಂಗೆ ಅದುದೇ ತಿರುಗುತ್ತು. ತಿರುಗಲೇ ಬೇಕು. ಈ ಮಂಡಲಲ್ಲಿ ’ಅಂಟಿನಿಂದ’ ಬಗೆ ಯೇವದೂ ಇಲ್ಲೆ, ಎಲ್ಲವೂ ಚಲನೆಲಿ ಇಪ್ಪದು ಹೇಳಿ ಮಾಷ್ಟ್ರು ಮಾವ ವಿವರುಸಿದವು
ಗ್ರಹ:
ಮೇರು ಪರ್ವತದ ಸುತ್ತ ಎಲ್ಲರು ತಿರುಗುತ್ತವು ಹೇಳಿ ಬಟ್ಟಮಾವ° ಮಂತ್ರಲ್ಲಿ ಹೇಳಿರೂ, ಸೂರ್ಯನ ಸುತ್ತ ಭೂಮಿ ತಿರುಗುದು ಹೇಳ್ತವಿಚಾರ ಆರ್ಯಭಟ್ಟಂಗೆ ಅಂದೇ ಗೊಂತಾಯಿದು. ನಕ್ಷತ್ರದ ಸುತ್ತಕೆ ಗ್ರಹಂಗೊ ತಿರುಗುದು. ಗ್ರಹದ ಸುತ್ತಕೆ ಉಪಗ್ರಹ ತಿರುಗುದು – ಅದಕ್ಕೆ ದಕ್ಕಿತ ಗಣಿತ ಮಾಡಿಯೂ ಮಡಗಿದ. ಆದರೂ ಜ್ಯೋತಿಷ್ಯಕ್ಕೆ ಬೇಕಾದ ಹಾಂಗೆ ಮಾರ್ಪಾಡು ಮಾಡಿಯೇ ಮಾಡಿದವು. ಸಾಮಾನ್ಯ ಮನುಷ್ಯಂಗೆ ಅರ್ತುಗೊಂಬಲೆ ಬೇಕಾಗಿ ಜ್ಯೋತಿರ್ಗಣಿತಲ್ಲಿ ಎಲ್ಲ ಗ್ರಹಂಗಳೂ ಭೂಮಿಯ ಸುತ್ತ ತಿರುಗುತ್ತದರ ಬರದ್ದವು. ಬರಿಕಣ್ಣಿಲಿ ನೋಡಿ ನೋಡಿಯೇ ’ಇಂಥವ° ಇಂಥಾ ದಿನ ಇಂಥಾ ದಿಕ್ಕೆ ಬತ್ತ°’ ಹೇಳಿ ಲೆಕ್ಕಾಚಾರ ಹಾಕಿದವು ನಮ್ಮ ಅಜ್ಜಂದ್ರು.
ಅಷ್ಟಪ್ಪಗ ಒಂದು ವಿಚಾರ ಬಂತು, ಗ್ರಹ ಹೇಳಿರೆ ಯೇವದು?
ರವಿ(ಸೂರ್ಯ), ಚಂದ್ರ, ಕುಜ(ಮಂಗಳ / ಕು=ಭೂಮಿ, ಭೂಮಿಯ ಮಗ ಕು–ಜ), ಬುಧ, ಗುರು, ಶುಕ್ರ, ಶೆನಿ, ಇಷ್ಟು ಜೆನ ಕಣ್ಣಿಂಗೆಕಾಂಬ ಗ್ರಹಂಗಳೂ, ರಾಹು, ಕೇತು ಹೇಳ್ತ ಕಣ್ಣಿಂಗೆ ಕಾಣದ್ದ ಛಾಯಾ ಗ್ರಹಂಗಳೂ ಇದ್ದು. ಸೂರ್ಯ–ಚಂದ್ರರ ಛಾಯೆಯನ್ನೇರಾಹು–ಕೇತು ಹೇಳುದು ಹೇಳಿ ಜೋಯಿಶಪ್ಪಚ್ಚಿ ಹೇಳಿದವು. ಒಳುದು ಏಳು ಜೆನಂಗಳದ್ದು ’ವಾರ’ದ ಹೆಸರು ಇದ್ದನ್ನೇ! ಮತ್ತೆ ಇಬ್ರನಮುನೆಯವು ನಮ್ಮ ನೆಡುಕೆಯೇ ಓಡಿಗೊಂಡು ಇದ್ದ ಕಾರಣ ಆಕಾಶಲ್ಲಿ ಕಾಣ್ತಿಲ್ಲೆ! ;-(
ಸೌರಮಾನ:
ಸೂರ್ಯ ನಿಜವಾಗಿ ಒಂದು ನಕ್ಷತ್ರ, ಜ್ಯೋತಿಷ್ಯಲ್ಲಿ ಅವಂಗೆ ಗ್ರಹದ ಸ್ಥಾನ.
ಭೂಮಿ ಸೂರ್ಯಂಗೆ ಒಂದು ಸುತ್ತು ಬಪ್ಪಗ, ಸೂರ್ಯನ ಬೇರೆ ಬೇರೆ ದಿಕ್ಕೆ ಕಾಣ್ತು. ಅದು ಸೂರ್ಯನ ಚಲನೆಯ ಹಾಂಗೆ ಕಾಂಬದು – ಅನುಪಾತೀಯ ಚಲನೆ (Relative Movement) – ಹೇಳಿ ಮಾಷ್ಟ್ರು ಮಾವ° ಹೇಳಿದವು. ಅಂತೂ ಜ್ಯೋತಿಷ್ಯ ಲೆಕ್ಕಲ್ಲಿ ಸೂರ್ಯಭೂಮಿಗೆ ಸುತ್ತು ಬಂದ ಹಾಂಗೇ ಕಾಂಬದು. ಹಾಂಗೇ ನಂಬೆಕ್ಕುದೇ. ವಿಜ್ಞಾನಲ್ಲಿ ಹಾಂಗೆ, ಜ್ಯೋತಿಷ್ಯಲ್ಲಿ ಹೀಂಗೆ. ಈಜಿಪ್ಟುನಾಗರಿಕತೆಲಿ ಸೌರಮಾನದ ಉಪಯೋಗ ಕಂಡುಗೊಂಡು ಇತ್ತಡ. ಗ್ರೆಗೊರಿಯನ್ ಕೆಲೆಂಡರು (ಈಗಾಣ ಶಾಲೆ ಕೆಲೆಂಡರಿಂಗೆ ಹಾಂಗೆ ಹೆಸರಡ) ಅದರಿಂದಲೇ ಬಂದದಡ. ನಮ್ಮಲ್ಲಿ ಹೇಂಗೂ ಇದ್ದನ್ನೆ. ಅಂದಿಂಗೂ, ಇಂದಿಂಗೂ.
ಸೂರ್ಯನ ಮೂಲಲ್ಲಿ ಮಡಿಕ್ಕೊಂಡು ಮಾಡ್ತ ಗಣಿತಕ್ಕೆ ಸೌರಮಾನ ಹೇಳ್ತದು ಹೇಳಿ ಜೋಯಿಷಪ್ಪಚ್ಚಿ ಹೇಳಿದವು.
ಸೂರ್ಯ° ಆಕಾಶಲ್ಲಿ ಸುತ್ತುವಗ ಬೇರೆ ಬೇರೆ ರಾಶಿಲೆ ಆಗಿ ಹೋವುತ್ತ ಅಲ್ದಾ? ಒಂದು ರಾಶಿಂದ ಇನ್ನೊಂದು ರಾಶಿಗೆ ಸೂರ್ಯದಾಂಟುತ್ತ ದಿನವ ’ಶೆಂಕ್ರಾಂತಿ’ ಹೇಳುದು. ಸಾಮಾನ್ಯ ನಮ್ಮ ಕೆಲೆಂಡರು ತಿಂಗಳಿನ ಅರ್ದಲ್ಲಿ ಬತ್ತು ಅದು. (ಜೆನವರಿ ಹದಿನಾಕು – ಮಕರ ಶೆಂಕ್ರಾಂತಿ, ಅಯ್ಯಪ್ಪ° ಕಾಂಬ ದಿನ– ಗೊಂತಿದ್ದನ್ನೇ, ಏ°?). ಒಂದರಿ ನಿಂಗೊ ಒಯಿಜಯಂತಿ ಪಂಚಾಂಗ ಬಿಡುಸಿ ನೋಡಿರೆಅದರಲ್ಲಿ ದಪ್ಪಕೆ ಬರಕ್ಕೊಂಡು ಇದ್ದು, ಶೆಂಕ್ರಾಂತಿ ಯೇವತ್ತು ಹೇಳುದರ. “ಮೇಷ ಸಂಕ್ರಮಣ” ಹೇಳಿರೆ, ಮೇಷಕ್ಕೆ ಸೂರ್ಯ ಕಾಲುಮಡಗಿದ – ಹೇಳಿ ಅರ್ತ. ಮರದಿನಂದ ಮೇಷ ಮಾಸ (ತಿಂಗಳು).
ಅಲ್ಲಿಂದ ಮತ್ತೆ ಅವನ ರಜ್ಜರಜ್ಜವೇ ಚಲನೆ ಅಪ್ಪದು ಕಾಣ್ತು. ತುಂಬ ದೂರಲ್ಲಿಪ್ಪ ರಾಶಿ–ನಕ್ಷತ್ರಕ್ಕೆ ಅನುಪಾತಿಸಿದರೆ, ಸೂರ್ಯನ ಚಲನೆ ತುಂಬ ವೇಗವಾಗಿ ಇದ್ದು. ಹಾಂಗಾಗಿ ಸೂರ್ಯ ಒಂದು ರಾಶಿಂದ ಇನ್ನೊಂದು ರಾಶಿಗೆ ಹೋವುತ್ತ ಹೇಳಿ ಕಾಂಬದು ನವಗೆ. ೩೦ ಭಾಗೆ(ಡಿಗ್ರಿ) ಉದ್ದ ಇಪ್ಪ ಆ ರಾಶಿಯ ಇನ್ನೊಂದು ಕೊಡಿಯಂಗೆ ಎತ್ತಲೆ ಬೇಕಪ್ಪ ಸಮಯ ಸಾಧಾರಣ ೩೦ ಹೊದ್ದು(ದಿನ), ದಿನಕ್ಕೆ ಒಂದುಭಾಗೆಯ ಹಾಂಗೆ. (ಮೇಷ ತಿಂಗಳ ೧೮ ಹೊದ್ದು – ಹೇಳಿತ್ತು ಕಂಡ್ರೆ, ಸೂರ್ಯ ಮೇಷಕ್ಕೆ ಬಂದು ೧೮ ದಿನ ಆಯಿದು ಹೇಳಿ ಲೆಕ್ಕ.) ಇಂದು ಆಟಿ ತಿಂಗಳ ೨೮ನೇ ಹೊದ್ದು, ಸಿಂಹ ರಾಶಿಗೆ ಬತ್ತ ’ಸೋಣೆ ಶೆಂಕ್ರಾಂತಿ’ಗೆ ಇನ್ನು ೩ ಹೊದ್ದು ಬಾಕಿ ಇದ್ದು. ಹನ್ನೆರಡು ಶೆಂಕ್ರಾಂತಿಗೆ ಒಂದು ಸೌರ ಒರಿಷ. ಇದು ಸೂರ್ಯಂಗೆ ಒಂದು ಸುತ್ತು ಬಪ್ಪಲೆ ಬೇಕಾದ ಸಮಯ.
ಅರುವತ್ತು ಒರಿಶಕ್ಕೆ ಒಂದು ಸಂವತ್ಸರ. ಪ್ರಭವ–ವಿಭವ–ಶುಕ್ಲ, ನಿಂಗಳ ಮಕ್ಕೊಗಾರು ಕಲಿಶಿ,ಆತೋ? ಒಂದು ಸಂವತ್ಸರಚಕ್ರ ಪೂರ್ತಿ ಕಳುದ್ದಕ್ಕೆ ಮೊನ್ನೆ ಮಾಷ್ಟ್ರುಮಾವಂಗೆ ಷಷ್ಠ್ಯಭ್ಧಿ ಮಾಡಿದವು. ಗೊಂತಿದ್ದನ್ನೆ, ಆಚಕರೆ ಮಾಣಿಯ ಖುದ್ದು ಸುದಾರಿಕೆಲಿ ನೆಡದ್ದು ಅದು. 😉
ಚಾಂದ್ರಮಾನ:
ಚಂದ್ರ ವೈಜ್ಞಾನಿಕವಾಗಿ ಭೂಮಿಯ ಉಪಗ್ರಹ, ಆದರೆ ಜ್ಯೋತಿಷ್ಯಲ್ಲಿ ಅವಂಗೆ ಗ್ರಹದ ಸ್ಥಾನ.
ಅವನ ಚಲನೆ ಬಯಂಕರ ವೇಗಲ್ಲಿ ಹೋಪದು. ಈಗ ಇದ್ದಲ್ಲಿ ಮತ್ತೆ ಇರ್ತಯಿಲ್ಲೆ. ಇಂದಿದ್ದಲ್ಲಿ ನಾಳೆ ಇಲ್ಲೆ. ಒಂದು ನಮುನೆ ನಮ್ಮ ಗುಣಾಜೆ ಕುಂಞಿ ಮಾಣಿಯ ಹಾಂಗೆ! ಗೋಳಲ್ಲಿ ಒಂದು ಸುತ್ತು ಹಾಕಲೆ ಸೂರ್ಯ ಒಂದು ಒರಿಶ ತೆಕ್ಕೊಳ್ತರೆ ಇವಂಗೆ ಒಂದು ತಿಂಗಳಿಲಿ ಎಡಿತ್ತು. ಅವನ ವೇಗದ ಚಲನೆಯ ಗುರ್ತ ಮಡಿಕ್ಕೊಂಬಲೆ ಮೈಲು ಕಲ್ಲುಗಳೂ ಹತ್ತರತ್ತರೆ. ಅದುವೇ ನಕ್ಷತ್ರಂಗೊ. ಮೆಸಪೊಟೋಮಿಯ ನಾಗರಿಕತೆಲಿ ಚಂದ್ರನ ಆಧಾರದ ಮೇಗೆಯೇ ಕಾಲ ನಿರ್ಣಯ ಮಾಡಿಗೊಂಡಿದ್ದಡ.
ಈ ಒಂದು ಮಾಸಲ್ಲಿ ಅವ° ಪೂರ್ತಿ ಬೆಳಿ ಇಪ್ಪವ ಸಣ್ಣ ಸಣ್ಣ ಆಗಿ, ಪೂರ್ತಿ ಕಪ್ಪಾಗಿ, ಮತ್ತೆ ರಜ ರಜ ಬೆಳಿ ಆಗಿ ಪೂರ್ತಿ ಬೆಳಿ ಅಪ್ಪದಿದ್ದು. ಪಂಜ ಚಿಕ್ಕಯ್ಯನ ತಲೆಕಸವಿಂಗೆ ಕಪ್ಪು ಬಣ್ಣ ಮೆತ್ತುವಗ ಈ ಶುದ್ದಿ ಬಯಿಂದು. ನೆಂಪಿದ್ದೋ? ಪೂರ್ತಿ ಕಪ್ಪಿಂದ ಪೂರ್ತಿ ಬೆಳಿ (ಶುಕ್ಲ ಬಣ್ಣ)ಅಪ್ಪದಕ್ಕೆ ಶುಕ್ಲಪಕ್ಷ ಹೇಳಿಯೂ, ಅದರ ಪೆರಟ್ಟು ಆವುತ್ತದಕ್ಕೆ ಕೃಷ್ಣಪಕ್ಷ ಹೇಳಿಯೂ ಹೇಳುದು. ಎರಡು ಉತ್ತುಂಗಕ್ಕೆ ಹುಣ್ಣಮೆ, ಅಮವಾಸೆ – ಹೇಳಿ ಹೆಸರು. ಆಚಕರೆ ಮಾಣಿ ಮೀವದು ಈ ಎರಡು ಪರ್ವದಿನಂಗಳಲ್ಲಿ ಅಡ, ಪಾಲಾರು ಅಣ್ಣ ಹೇಳಿದ್ದು. ಹದಿನೈದು ತಿಥಿಯ ಆ ಅವಧಿಗೆ ಪಕ್ಷ ಹೇಳುದು. ಸಾಮಾನ್ಯ ಒಂದು ತಿಥಿ ಒಂದು ದಿನ ಇರ್ತು, ಒಂದು ಪಕ್ಷ ಹೇಳಿರೆ ತೋರಮಟ್ಟಿಂಗೆ ಹೇಳ್ತರೆ ೧೫ ದಿನ.
ಎಷ್ಟೋ ವಿಷಯಕ್ಕೆ ನಮ್ಮಲ್ಲಿ ಚಾಂದ್ರಮಾನ ತಿತಿಗೊ ಬೇಕಾವುತ್ತು.( ಉದಾ: ನಿನ್ನೇಣ ’ಕೃಷ್ಣ ಜನ್ಮಾಷ್ಟಮಿ’ ಹೇಳಿತ್ತು ಕಂಡ್ರೆ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ. ಹೇಳಿದಾಂಗೆ, ಮೂಡೆ ಕೊಟ್ಟಿಗೆ ತಿಂದಿರೋ? ಏ°? )
ಮಾಪುಳೆಗೆ ನೋಂಬು ಹಿಡಿವದು, ಬಿಡುದು ಎಲ್ಲ ಚಾಂದ್ರಮಾನ ಲೆಕ್ಕಲ್ಲೇ. ಒಂದು ತಿಂಗಳ ಉಪವಾಸ ಕಳುದು ಮೊಯಿಲಾರಿಂಗೆ- ಜೋಯಿಷಪ್ಪಚ್ಚಿಗೂ ಕಾಣದ್ದ ಚಂದ್ರ ಕಾಣ್ತಡ, ಶುದ್ಧ ಅಮವಾಸೆ ಆದರೂ. ಹಾಂಗೆ ನಮ್ಮ ಊರಿಲಿ ಒಂದು ದಿನ ಮೊದಲೇ ನೋಂಬು ಬಿಡ್ತವಡ. ಪಾಪ! ’ಹಶು ಆಗಿ ಕಣ್ಣು ಕಾಣ್ತಿಲ್ಲೆ!’ ಹೇಳಿ ಅದಕ್ಕೇ ಅಲ್ದೋ ಹೇಳುದು! ;-(
ನಿತ್ಯ ನಕ್ಷತ್ರ
ಆಕಾಶಲ್ಲಿ ಚಂದ್ರ ತಿರುಗುದು ನಕ್ಷತ್ರ ಇಪ್ಪ ದಾರಿಲೇ ತಾನೇ? ಅವ° ರಜ ಗುಣಾಜೆ ಕುಂಞಿಮಾಣಿಯ ಹಾಂಗೆ ಬೀಸ ಬೀಸಕ್ಕೆ ಹೋಪಕಾರಣ, ಒಂದು ದಿನಕ್ಕೆ ಒಂದು ನಕ್ಷತ್ರದ ಹತ್ತರೆ ಇರ್ತನಡ, ಆ ನಕ್ಷತ್ರಕ್ಕೆ ’ನಿತ್ಯ ನಕ್ಷತ್ರ’ ಹೇಳುದು. ಅದಕ್ಕೆ ರಜ್ಜ ಎಳಕ್ಕದ ಅಜ್ಜಂದ್ರುಅವಂಗೆ ಇಪ್ಪತ್ತೇಳು ಹೆಂಡತ್ತಿಯಕ್ಕೊ, ದಿನಕ್ಕೊಂದರ ಒಟ್ಟಿಂಗೆ ನಿಂಬದು ಹೇಳಿ ಎಲ್ಲ ಅಪವಾದ ಹಾಕಿದ್ದು, ಪಾಪ! ಆಗಾತ ಅವಂಗೆ ಅಂತೇ ಆಶೆ ಬರುಸುಲೆ! ಅದೆಂತದೇ ಇರಳಿ, ಸಂಕಲ್ಪಕ್ಕೆ ಕೂದ ಬಟ್ಟಮಾವಂಗೆ ಅಂತೂ ಈ ನಿತ್ಯ ನಕ್ಷತ್ರ ಬೇಕೇ ಬೇಕು.
ಚಂದ್ರ ಇಪ್ಪ ರಾಶಿಗೆ ’ಜನ್ಮ ರಾಶಿ’ ಹೇಳಿ ಹೆಸರು. ಬಾಬೆ ಹುಟ್ಟುವಗ ಅವು ಇಪ್ಪ ರಾಶಿಯನ್ನೂ ನಕ್ಷತ್ರವನ್ನೂ ಜಾತಕಲ್ಲಿ ಬರದು ಮಡಗುತ್ತದರ ನಾವು ಕಾಣ್ತು.
ಮಹಾ ನಕ್ಷತ್ರ
ಆಕಾಶಲ್ಲಿ ಸೂರ್ಯ ತಿರುಗುದುದೇ ಚಂದ್ರ ತಿರುಗುದ ದಾರಿಲೇ. ನಮ್ಮೋರ ಒಳ ಆದ ಹಾಂಗೆ ಜಾಗೆ ತಕರಾರು, ದಾರಿ ತಗಾದೆ, ಎಂತದೂ ಬತ್ತಿಲ್ಲೆ ಅವಕ್ಕೆ. ಇದೇ ನಕ್ಷತ್ರಂಗಳ ಮೇಲೆ ಆಗಿ ಸೂರ್ಯನೂ ಹಾದು ಹೋಪದು. ಸೂರ್ಯ ಇರ್ತ ನಕ್ಷತ್ರವ ’ಮಹಾ ನಕ್ಷತ್ರ’ ಅತವಾ ’ಮಳೆ ನಕ್ಷತ್ರ’ ಹೇಳ್ತವು. ಹಳ್ಳಿಲಿ ಇದರ ಉಪಯೋಗ ತುಂಬ ಇದ್ದು. ’ಹುಬ್ಬೆ ಮಳೆ ಅಬ್ಬೆ ಹಾಲಿನ ಹಾಂಗೆ’, ’ಆರಿಲ್ಲದ್ರೂ ಆನಿದ್ದೆ’ ಹೇಳಿ ಆರ್ದ್ರೆ ಹೇಳಿತ್ತು, ’ಕೃತ್ತಿಕೆ ಕಾವದು’ ಹೇಳ್ತ ನಾಣ್ಣುಡಿಗೊ ಕೃಷಿ ಬಟ್ಟಕ್ಕಳ ಜನಜೀವನಲ್ಲಿ ತಲೆಮಾರಿಂದ ನೆಡಕ್ಕೊಂಡು ಬಯಿಂದು. ಒಂದು ಮಹಾನಕ್ಷತ್ರ ಹೆಚ್ಚುಕಮ್ಮಿ ೧೩ ದಿನ ಇರ್ತು. ಕೃಷಿ ಕಾರ್ಯಂಗೊ ಎಲ್ಲ ಈ ಅವಧಿಯ ಮೇಲೆ ಅತ್ಯಂತ ಅವಲಂಬಿತ ಆಗಿ ಇದ್ದು, ಗಟ್ಟದ ಮೇಲೂ, ಕೆಳವೂ.
ತಿಂಗಳು
ಈಗ ನೋಡಿದ ಪ್ರಕಾರ ಎರಡು ನಮುನೆ ತಿಂಗಳುಗೊ ಇದ್ದು – ಚಾಂದ್ರಮಾನ ತಿಂಗಳು, ಸೌರಮಾನ ತಿಂಗಳುಗೊ.
ಸೌರಮಾನ ತಿಂಗಳುಗೊ ಹೇಳಿರೆ, ಆ ತಿಂಗಳಿಲಿ ಸೂರ್ಯ ಇಪ್ಪ ರಾಶಿಯ ಹೆಸರು. ಮೇಷ ರಾಶಿಲಿ ಸೂರ್ಯ ಇಪ್ಪ ೩೦ ಹೊದ್ದಿನ“ಮೇಷ ತಿಂಗಳು” ಹೇಳುದು (ವಿಷು ಹೇಳ್ತದು ಅದರ ನಾವು, ಎಪ್ರಿಲ್ ಹದಿನಾಕಕ್ಕೋ ಮತ್ತೊ ಬತ್ತು ಅದು. ಗೊಂತಿದ್ದಲ್ದಾ?). ವೃಷಭ ರಾಶಿಲಿ ಇಪ್ಪ ಸಮಯ ಬೇಸಗೆ ತಿಂಗಳು .. ಇತ್ಯಾದಿ. ಕೋಷ್ಟಕ (ಗೆರೆಪೆಟ್ಟಿಗೆ) ೧ ರ ನೋಡಿ.
ರಾಶಿಯ ಹೆಸರು
|
ಹವ್ಯಕ ತಿಂಗಳ ಹೆಸರು
|
ಕಾಲಾವಧಿ(ಅಂದಾಜಿ)
|
ಮೇಷ
|
ಮೇಷ
|
ಎಪ್ರಿಲ್ ೧೫-ಮೇ ೧೪
|
ವೃಷಭ
|
ಬೇಸಗೆ
|
ಮೇ ೧೫- ಜೂನು ೧೪
|
ಮಿಥುನ
|
ಕಾರಾ
|
ಜೂನು ೧೫-ಜುಲಾಯಿ ೧೪
|
ಕರ್ಕಾಟಕ
|
ಆಟಿ
|
ಜುಲಾಯಿ ೧೫-ಅಗೋಷ್ಟು ೧೪
|
ಸಿಂಹ
|
ಸೋಣೆ
|
ಅಗೋಷ್ಟು ೧೫- ಸಪ್ತಂಬ್ರ ೧೪
|
ಕನ್ಯಾ
|
ಕನ್ನೆ
|
ಸಪ್ತಂಬ್ರ ೧೫- ಅಕ್ಟೋಬರ ೧೪
|
ತುಲಾ
|
ತುಲೆ
|
ಅಕ್ಟೋಬರ ೧೫-ನವೆಂಬ್ರ ೧೪
|
ವೃಶ್ಚಿಕ
|
ವೃಶ್ಚೀ
|
ನವೆಂಬ್ರ ೧೫-ದಶಂಬ್ರ ೧೪
|
ಧನು
|
ಧನು
|
ದಶಂಬ್ರ ೧೫-ಜೆನವರಿ ೧೪
|
ಮಕರ
|
ಮಕರ
|
ಜೆನವರಿ ೧೫-ಪೆಬ್ರವರಿ ೧೪
|
ಕುಂಭ
|
ಕುಂಭ
|
ಪೆಬ್ಬ್ರವರಿ ೧೫- ಮಾರ್ಚಿ ೧೪
|
ಮೀನ
|
ಮೀನ
|
ಮಾರ್ಚಿ ೧೫- ಎಪ್ರಿಲ್ ೧೪
|
ಗೆರೆಪೆಟ್ಟಿಗೆ ೧. ಹವ್ಯಕ ಸೌರಮಾನ ತಿಂಗಳುಗೊ
|
ಧನು ಮಕರ ಕುಂಬ– ಪನೆ ಮರದ ಕಂಬ ಹೇಳಿ ಎಂಗೊ ಸಣ್ಣ ಇಪ್ಪಗ ಬೊಬ್ಬೆ ಹೊಡದ್ದು ನೆಂಪಾತು, ಇದರ ಬರವಗ. ಈಗ ಪನೆಮರವನ್ನೂ ಗುರ್ತ ಇಲ್ಲೆ , ಒಯಿಶಾಕವೂ ಗೊಂತಿಲ್ಲೆ.
ನಮ್ಮ ಕೆಲೆಂಡರಿನ ತಿಂಗಳಿನ ಹಾಂಗೆ, ಅದುದೇ ಮೂವತ್ತು-ಮೂವತ್ತೊಂದು ದಿನ, ಭರ್ತಿ. ಕೆಲೆಂಡರಿನ ಅರ್ದಂದ ಸುರು ಆದ ತಿಂಗಳು, ಮತ್ತಾಣ ತಿಂಗಳ ಅರ್ದಕ್ಕೆ ಒರೆಂಗೆ ಇರ್ತು. ತಿಂಗಳು ಬದಲಾವುತ್ತ ದಿನದ ಆ ಶೆಂಕ್ರಾಂತಿ ನಮ್ಮ ಊರಿಲಿ ಬಯಂಕರ ವಿಶೇಷ.
ಕಾವೇರಿ ಶೆಂಕ್ರಾಂತಿ / ತುಲೆ ಸಂಕ್ರಮಣಕ್ಕೆ ಮುಜುಂಗೆರೆಲಿ ಗೌಜಿ ಇಪ್ಪದು ಗೊಂತಿಪ್ಪದೇ, ಅಲ್ದೋ! ಅದಲ್ಲದ್ದೆ, ನಮ್ಮ ಪಾರೆಅಜ್ಜಿಬೂತಕ್ಕೆ ಪ್ರತೀ ಶೆಂಕ್ರಾಂತಿಗೆ ದೀಪ ತೋರುಸುತ್ತ ಮರಿಯಾದಿ ಇದ್ದು. ಶೆಂಕ್ರಾಂತಿ ಮರದಿನ ತಿಂಗಳೋಡು, ಹೇಳಿರೆ, ಆ ತಿಂಗಳಿನ ಸುರೂವಾಣ ದಿನ ಹೇಳಿ ಅರ್ತ. ಗುಣಾಜೆ ಮಾಣಿ ಎಷ್ಟು ಸರ್ತಿ ಕೇಳಿರೂ ಅಪ್ಪ ಪೈಸೆ ಕೊಡವು ಆ ದಿನ. ಆ ದಿನ ಕೊಟ್ರೆ ತಿಂಗಳಿಡೀ ಕರ್ಚು ಆವುತ್ತಡ! ಹಾಂಗೊಂದು ನಂಬಿಕೆ, ನಮ್ಮ ಊರಿಲಿ.
ಇಪ್ಪತ್ತೇಳು ನಕ್ಷತ್ರದ ಆ ೩೬೦ ಭಾಗೆಯ ಸುತ್ತುಲೆ ಚಂದ್ರಂಗೆ ಸುಮಾರು ೨೯ ದಿನ ಬೇಕಾವುತ್ತು. ಅದಕ್ಕೆ ಚಾಂದ್ರಮಾನ ಮಾಸ ಹೇಳಿಹೆಸರು.
ಚಾಂದ್ರಮಾನ ಲೆಕ್ಕಲ್ಲಿ ತಿಂಗಳ ಹೆಸರು ರಜಾ ಕಿರಿಕಿರಿ. ಆ ತಿಂಗಳಿನ ಹುಣ್ಣಮೆ ದಿನ ಚಂದ್ರ ಯೇವ ನಕ್ಷತ್ರಲ್ಲಿ ಇರ್ತನೋ, ಆತಿಂಗಳಿಂಗೆ ಆ ನಕ್ಷತ್ರದ ಹೆಸರು. ಹುಣ್ಣಮೆದಿನ ಚಂದ್ರ ಚಿತ್ರಾ ನಕ್ಷತ್ರಲ್ಲಿ ಇದ್ದರೆ ಆ ತಿಂಗಳಿನ ಹೆಸರು “ಚೈತ್ರಾ“, ವಿಶಾಖಾನಕ್ಷತ್ರಲ್ಲಿಪ್ಪಗ ಹುಣ್ಣಮೆ ಬಂದರೆ “ವೈಶಾಖಾ” . . . ಹೀಂಗೆ ಹನ್ನೆರಡು ಚಾಂದ್ರಮಾನ ತಿಂಗಳುಗೊ. ಗೆರೆ ಪೆಟ್ಟಿಗೆ ೨ ರ ನೋಡಿ:
ಹುಣ್ಣಮೆ ಬತ್ತ ನಕ್ಷತ್ರದ ಹೆಸರು
|
ಹವ್ಯಕ ತಿಂಗಳ ಹೆಸರು
|
ಕಾಲಾವಧಿ(ಅಂದಾಜಿ 29 ದಿನ)
|
ಋತು
|
ಚಿತ್ರಾ
|
ಚೈತ್ರ
|
ಎಪ್ರಿಲ್ -ಮೇ
|
ವಸಂತ
|
ವಿಶಾಖಾ
|
ಒಯಿಶಾಕ
|
ಮೇ – ಜೂನು
|
ಜ್ಯೇಷ್ಠ
|
ಜ್ಯೇಷ್ಠ
|
ಜೂನು -ಜುಲಾಯಿ
|
ಗ್ರೀಷ್ಮ
|
ಪೂರ್ವಾ/ಉತ್ತರಾಷಾಡ
|
ಆಷಾಢ
|
ಜುಲಾಯಿ -ಅಗೋಷ್ಟು
|
ಶ್ರವಣ
|
ಶ್ರಾವಣ
|
ಅಗೋಷ್ಟು – ಸಪ್ತಂಬ್ರ
|
ವರ್ಷ
|
ಪೂರ್ವಾಭದ್ರಾ
|
ಭಾದ್ರಪದ
|
ಸಪ್ತಂಬ್ರ – ಅಕ್ಟೋಬರ
|
ಆಶ್ವಿನಿ
|
ಆಶ್ವಯುಜ
|
ಅಕ್ಟೋಬರ -ನವೆಂಬ್ರ
|
ಶರತ್
|
ಕೃತ್ತಿಕೆ
|
ಕಾರ್ತೀಕ
|
ನವೆಂಬ್ರ -ದಶಂಬ್ರ
|
ಮೃಗಶಿರಾ
|
ಮಾರ್ಗಶಿರ
|
ದಶಂಬ್ರ -ಜೆನವರಿ
|
ಹೇಮಂತ
|
ಪುಷ್ಯ
|
ಪೌಷ
|
ಜೆನವರಿ -ಪೆಬ್ರವರಿ
|
ಮಘೆ
|
ಮಾಘ
|
ಪೆಬ್ಬ್ರವರಿ – ಮಾರ್ಚಿ
|
ಶಿಶಿರ
|
ಉತ್ತರೆ
|
ಫಾಲ್ಗುಣ
|
ಮಾರ್ಚಿ – ಎಪ್ರಿಲು
|
ಗೆರೆ ಪೆಟ್ಟಿಗೆ ೨ . ಹವ್ಯಕ ಚಾಂದ್ರಮಾನ ತಿಂಗಳುಗೊ
|
|
೨೯ ದಿನದ ಚಾಂದ್ರಮಾನ ಮಾಸಂದಾಂಗಿ ಒರಿಶಕ್ಕೆ ೩೫೫ ದಿನ ಬೇಕಪ್ಪದು. ಸೌರಮಾನದ ೩೬೫ ದಿನಕ್ಕೆ ೧೦ ದಿನ ಕಮ್ಮಿ ಇದಾ. ಇದರ ಎಜೆಷ್ಟು ಮಾಡೆಕ್ಕಪ್ಪದಕ್ಕೆ ಮೂರು ಒರಿಷಕ್ಕೊಂದರಿ “ಅದಿಕ ಮಾಸ” ಬತ್ತು. ಈ ಪೆಬ್ರವರಿಲಿ ನಾಲ್ಕೊರಿಷಕ್ಕೊಂದರಿ ಒಂದು ದಿನ ಕೊಡ್ತವಡ ಅಲ್ದ, ಸಾಮಾನ್ಯ ಹಾಂಗೇ!
ಚಾಂದ್ರಮಾನ ತಿಂಗಳುದೇ, ತಿಥಿ ಹೆಸರುದೇ ಬಟ್ಟಮಾವಂಗೆ ಸಂಕಲ್ಪಕ್ಕೆ ಬೇಕಪ್ಪದು. ಸೌರಮಾನ ತಿಂಗಳುದೇ, ಹೊದ್ದುದೇ ಜೋಯಿಷಪ್ಪಚ್ಚಿಗೆ ಜಾತಕ ಬರವಲೆ ಬೇಕಪ್ಪದು. 😉
ಈಗಾಣ ಹೊತ್ತಿಂಗೆ ಎಲ್ಲೆಲ್ಲಿ ಇದ್ದವು ಹೇಳಿ ಪಂಚಾಂಗಲ್ಲಿ ನೋಡಿ ತಿಳ್ಕೊಂಬಲೂ ಆವುತ್ತು. ನಿಂಗೊಗೆ ಗೊಂತಾಗದ್ರೆ ಜೋಯಿಷಪ್ಪಚ್ಚಿಯ ಹತ್ರೆ ಕೇಳಿ, ಎರಡು ನಿಮಿಶಲ್ಲಿ ಇಡೀ ನಭೋ ಮಂಡಲವ ತೋರುಸಿ ಬಿಡ್ತವು. ರವಿ ಅಲ್ಲಿದ್ದ, ಶುಕ್ರ ಇಲ್ಲಿದ್ದ, ಶೆನಿ ಮೀನಲ್ಲಿದ್ದ, ಚಂದ್ರ ಕನ್ನೆ(ಕನ್ಯಾ ರಾಶಿ)ಲಿದ್ದ ಹೇಳ್ತವು. ಅವರ ಮಕ್ಕೊ ಎಲ್ಲೆಲ್ಲಿದ್ದವು ಹೇಳಿ ಗೊಂತಿಲ್ಲದ್ರೂ ಈ ಗ್ರಹಂಗೊ ಎಲ್ಲೆಲ್ಲಿಪ್ಪದು ಹೇಳ್ತ ಗಣಿತ ಅವಕ್ಕೆ ಬಾಯಿಪಾಟ. ನಾವು ಹುಟ್ಟಿದ ಹೊತ್ತಿಂಗೆ ಸೂರ್ಯ, ಚಂದ್ರ, ಇತರ ಗ್ರಹಂಗೊ ಯಾವ ಯಾವ ರಾಶಿಲಿ ಇತ್ತಿದ್ದವು ಹೇಳಿ ಬರಕ್ಕೊಂಡು ಇಪ್ಪದರ ನಮ್ಮ ನಮ್ಮ ಜಾತಕಲ್ಲಿ ನೋಡ್ಳಕ್ಕು.
ಮದಲಿಂಗೆ ಎಲ್ಲ ಈ ಲೆಕ್ಕಲ್ಲೇ ದಿನ ಹೇಳಿಗೊಂಡು ಇದ್ದದು. ಕೆಲೆಂಡರೂ ಇಲ್ಲೆ, ತಾರೀಕೂ ಇಲ್ಲೆ.
ಮದುವೆ ಕಾಗತ ತೆಗದು ನೋಡಿರೆ ಇದೆಲ್ಲ ಈಗಳೂ ಇದ್ದು ಅದು ಬರಕ್ಕೊಂಡು, ಎಂತರ ಹೇಳಿ ಬಟ್ಟಮಾವಂಗುದೇ, ಜೋಯಿಷಪ್ಪಚ್ಚಿಗೂ, ಕೆಲವು ಜೆನ ಮಾಷ್ಟ್ರು ಮಾವಂಗೂ ಬಿಟ್ರೆ ಬೇರೆ ಆರಿಂಗೂ ಅರಡಿಯ. ’ಅಂತೇ ಒಂದು ಕಾಟಾಚಾರಕ್ಕೆ ಹಾಕಿದ ಹಾಂಗೆ ಹಾಕುದಷ್ಟೆ’ ಹೇಳ್ತ ನಮುನೆ ಆಯಿದು, ಅಲ್ದೋ? ಅಂತೂ ಇದರ ಓದಿದ ಮೇಗೆ ರಾಶಿ, ತಿಂಗಳು, ಭಾಗೆ, ಹೊದ್ದು, ಎಲ್ಲ ರಜ ರಜ ಗೊಂತಾತು, ಅಲ್ದೋ? (ಗೊಂತಾಗದ್ರೆ ಪುನಾ ಪುನಾ ಓದಿಕ್ಕಿ, ಗೊಂತಪ್ಪನ್ನಾರ! 😉 ಅಷ್ಟೇ ಉಳ್ಳೊ!)
ನಿಂಗೊ ಆದರೂ ರಜ ರಜ ಓದಿ, ಕಲೀರಿ, ಒಪ್ಪಣ್ಣ ಆಗಿ.
ಆಟಿ-ಸೋಣ, ಜೋತಿಷ್ಯ, ಸಂಸ್ಕೃತ ಎಲ್ಲ ನಮ್ಮ ಹೆರಿಯೋರು ನಮ್ಮ ಒರೆಂಗೆ ಎತ್ತುಸಿದ್ದವು. ನಮ್ಮ ಮುಂದಾಣ ತಲೆಗೆ ಒಳಿಶುವ°. ರಜ ರಜ ಕರ್ಚಿಗೆ ತಕ್ಕ ಆದರೂ ಕಲ್ತುಗೊಂಬ. ಇದಾ, ಒಪ್ಪಣ್ಣಂಗೆ ರಜ ರಜ ಅರಡಿತ್ತು ಈಗ! 😉
ಮಾಷ್ಟ್ರುಮಾವನ, ಜೋಯಿಷಪ್ಪಚ್ಚಿಯವರ ಪುರುಸೊತ್ತು ಕೇಳಿಗೊಂಡು ಒಂದರಿ ರಜ ಕೇಳಿ ತಿಳ್ಕೊಳಿ, ಗೊಂತಿಲ್ಲದ್ರೆ. ಆಗದೋ? ಏ°?
ಒಂದೊಪ್ಪ: ಇದೇ ಆಟಿ ತಿಂಗಳು ೩೦ ಹೊದ್ದಿಂಗೆ ನಮ್ಮ ದೇಶದ ಸ್ವಾತಂತ್ರ ದಿನಾಚರಣೆ. ಒಂದು ಸಂವತ್ಸರ ಚಕ್ರ ಕಳುದು ಎರಡು ಒರಿಶ ಆತು. ನಾವೆಲ್ಲ ಆಚರಿಸುವ°. ಇಂಗ್ಳೀಶರ ಕೆಲೆಂಡರು ಹಂಗು ಇಲ್ಲದ್ದೇ!
ಸೂ: ಈ ನಮುನೆ ಮಾಹಿತಿಗೊ ಮುಂದಾಣ ದಿನಲ್ಲಿ ಕೊಡ್ತ ಏರ್ಪಾಡು ಇದ್ದು, ಅಕ್ಕನ್ನೇ?
ಯಾವುದೇ ಗ್ರಹಂಗೊ ಸೂರ್ಯನ ತುಂಬಾ ಹತ್ತರೆ ಬಪ್ಪಗ ಅವು ಸೂರ್ಯನ ಒಟ್ಟಿಂಗೇ ಉದಯ ಮತ್ತು ಅಸ್ತಮಾನ ಹೊಂದಿ ತಮ್ಮ ಪ್ರಖರತೆಯ ಕಳಕ್ಕೊಳ್ತವು.ಈ ಚಲನಾ ಕಾಲವ ಜ್ಯೋತಿಷ್ಯಲ್ಲಿ ಮೌಢ್ಯ/ದಗ್ಧ/ಅಸ್ತಂಗತ ಹೇಳಿ ಹೇಳ್ತವು.ಎಲ್ಲಾ ಗ್ರಹಂಗಳಿಂಗೂ ಮೌಢ್ಯ ಕಾಲ ಇದ್ದರೂ ನಾವು ಗುರು ಮತ್ತು ಶುಕ್ರರ ಮೌಢ್ಯ ಮಾತ್ರ ಗಣನೆಗೆ ತೆಕ್ಕೊಂಬದು.ಇದು ಗುರುವಿಂಗೆ ಸೂರ್ಯನ ಎರಡೂ ಹೊಡೆಲಿ ೧೧* ಹಾಂಗೂ ಶುಕ್ರಂಗೆ ಸೂರ್ಯನ ಎರಡೂ ಹೊಡೆಲಿ ೧೦*(ವಕ್ರ ಗತಿ ಆದರೆ ೮*) ಹೇಳಿ ಹೇಳ್ತವು.ಆ ಸಮಯಲ್ಲಿ ನಾವು ಗುರು/ಶುಕ್ರ ಬಲ ಇಲ್ಲೆ ಹೇಳಿ ತೆಕ್ಕೊಂಬದು.
ಹೆಚ್ಚಿನ ವಿವರ/ತಿದ್ದುಪಡಿಗಳ ಜೊಯಿಸರ ಪುಳ್ಳಿ ಒಪ್ಪಣ್ಣನೇ ಹೇಳಕಷ್ಟೆ!!
ಒಪ್ಪಣ್ಣ,
ಗುರು ಮೌಢ್ಯ, ಶುಕ್ರ ಮೌಢ್ಯ ಹೇಳ್ತವಲ್ಲದ. ಇದರಲ್ಲಿ ಗುರು/ಶುಕ್ರ ಅಸ್ತಂಗತ ಆಗಿ ಪುನಃ ಉದಯಿಸುವವರೆಗೆ ಮೌಢ್ಯ ಹೇಳುವದು ಕ್ರಮ. ಇದು ಹೇಂಗೆ ಹೇಳಿ ಕೇಳಿದ ತಂಗೆಗೆ ವಿವರಿಸಲೆ, ಎನಗೆ ಅರಡಿತ್ತಿಲ್ಲೆ. ರೆಜ ಸಹಾಯ ಮಾಡುತ್ತೆಯಾ?
ಒಪ್ಪಣ್ಣ,
ಲೇಖನದ ಪ್ರಿಂಟ್ ತೆಗದು ಮಗಳಿಂಗೆ ಕೊಟ್ಟೆ. ಎನಗೆ ಇಷ್ಟು ಲಾಯಿಕಕೆ ವಿವರುಸಲೆ ಅರಡಿಯ ಹೇಳಿ.
ಕೊಶಿ ಆತು. ಬರದ ಕ್ರಮ ತುಂಬಾ…ತುಂಬಾ ಲಾಯಿಕ್ ಆಯಿದು.
ಆರಾರೂ ಕಾಲ ನಿರ್ಣಯದ ಬಗ್ಗೆ ಕೇಳಿರೆ ಅದನ್ನೇ ಓದಲೆ ಕೊಡುವದು ಹೇಳಿ ಮಾಡಿದ್ದೆ. ಎನಗೂ ಸುಮಾರು ವಿಷಯಂಗೊ ಗೊಂತಾತು.
ಇಂದು ಸೋಣೆ ಸಂಕ್ರಾಂತಿ ಅಡ. ಹೊಸ್ತಿಲಿಂಗೆ ಹೂಗು ಹಾಕಿ ಹೊಡಾಡ್ಲೆ ಸುರು ಮಾಡುವ ದಿನ ಹೇಳಿದ ಮಾಡಾವು ಅಳಿಯ. ಈ ಪೇಟೆಲಿ ಕೂದವಕ್ಕೆ ಎಲ್ಲಾ ಮರದು ತಿಂದು ಆಯಿದು. ನೀನು ಹೀಂಗೆ ನೆಂಪು ಮಾಡ್ತಾ ಇದ್ದರೆ ಎಂಗಳ ಹಾಂಗಿಪ್ಪವು ರೆಜಾ ಆದರೂ ಒಳುಸಲೆ ಪ್ರಯತ್ನ ಮಾಡುವೆಯೊ.
ವಿವರಣೆ ಭಾರಿ ಲಾಯಕ್ಕ ಆಯ್ದು. ಎನ್ನ ಅಜ್ಜನ ಮನೆ ಕಡೆ ಜೋಯಿಸ ಕುಟುಂಬ. ಹಾಂಗಾಗಿ ಗ್ರಹ-ನಕ್ಷತ್ರ-ಜಾತಕ ಅಂದರೆ ಭಾರಿ ನಂಬುಗೆಯೂದೆ. ಆದರೂದೆ ’ಜ್ಯೋತಿಷ್ಯ’ ಹೇಳಿದ ಕೂಡಲೆ ಯಾವಗಲೂದೆ ಎನಗೆ ಒಂದು ಪ್ರಶ್ನೆ ಕಾಡುತ್ತು.. ವರಾಹ ಮಿಹಿರನೇ ಹೇಳಿದ್ದ, ಅಲ್ಲದ್ದೆ ಎಲ್ಲರಿಂಗೂದೆ ಗೊತ್ತಿಪ್ಪ ವಿಷಯವುದೆ. ಅಪ್ಪದರ ಅಥವಾ ಕಾಲನ ನಿಯಮವ ತಪ್ಪುಸುಲೆ ಆರಿಂದಲೂ ಸಾಧ್ಯತೆ ಇಲ್ಲೇಳಿ. ಆದರೂದೆ ’ಪರಿಹಾರ ಜ್ಯೋತಿಷ್ಯ ಫಲ’ ಎಂತಕೆ ಹೇಳ್ತವು ಹೇಳುದು? ನಮ್ಮ ಮನಸ್ಸಿಂಗೆ ಧೈರ್ಯ ಕೊಡ್ಲೆ ಮಾತ್ರವೋ?
ಗೊಂತಿಪ್ಪಲೇ ಬೇಕಾದ್ದದರ ತಿಳಿಸುವ ಲೇಖನ.
{’ಆರಿಲ್ಲದ್ರೂ ಆನಿದ್ದೆ’ ಹೇಳಿ ಆರ್ದ್ರೆ ಹೇಳಿತ್ತು, ’ಕೃತ್ತಿಕೆ ಕಾವದು’….}
ಹೀಂಗಿಪ್ಪ ಕಾಲಕ್ಕೆ ಸಂಬಂಧ ಪಟ್ಟ ಗಾದೆಗಳ ಸಂಗ್ರಹ ಮಾಡಿರೆ ಒಳ್ಳೆದು.
ಈ ಮಾತುಗೋ ನಕ್ಷತ್ರ ಮತ್ತು ಪ್ರಕೃತಿ/ಕೃಷಿಗೆ ಸಂಬಂಧ ಇಪ್ಪದರ ಹೇಳ್ತು. ಇದಕ್ಕೆ ವಿವರಣೆ ನೀಡುವ ಹಾಂಗೆ ನಮ್ಮಲ್ಲಿ ಆರಾರು ಬರದರೆ ತುಂಬಾ ಒಳ್ಳೇದು.
ಕಳುದೊರಿಶ ಈ ವಾರದ ಶುದ್ದಿ..!
ಕಾಲನಿರ್ಣಯದ ಬಗ್ಗೆ ಮಾತಾಡಿದ ಶುದ್ದಿ..!!
ಗುರುಗೊ ಆಶೀರ್ವಾದ ಮಾಡಿದ ಸುರೂವಾಣ ಶುದ್ದಿ…!!!
ಕಾಲೋಚಿತ..!!
olle kelasa oppannna idu. namma hale gaade mathuga, lekkacharanga oliyekkare hingippa ganmbira praythna agatya iddu.
ವಾಹ್! ಅದ್ಭುತ! ಭಾರೀ ಲಾಯ್ಕಾಯಿದು….ಕಾಲಚಕ್ರನ ದಿಗ್ದರ್ಶನವ ತುಂಬಾ ಚೆಂದಲ್ಲಿ ಮಾಡ್ಸಿಕೊಟ್ಟಿದಿ…ಒಳ್ಳೆ ಸಂಗ್ರಹಯೋಗ್ಯ ಬರವಣಿಗೆ…ಮನೋರಂಜನೆಯೊಟ್ಟಿಂಗೆ ಜ್ಞಾನಾಭಿವೃದ್ಧಿಗೊಂದು ಮೂಲವೂ ಆತೀ ಬ್ಲಾಗು…ಎನಗೆ ಗೊಂತಿಲ್ಲದ್ದ ಕೆಲವಾರು ವಿಷಯಂಗಳ ತಿಳ್ಕೊಂಡೆ….
ಮಾಷ್ಟ್ರುಮಾವನ ಹಾಂಗೇ, ಎಲ್ಲೊರಿಂಗೂ ಅರ್ಥಪ್ಪ ಹಾಂಗೆ ವಿವರ್ಸಿಪ್ಪ ಕಾರಣ ಓದ್ಲೂ ಕುಶೀ ಆವ್ತು….
ಮೂರ್ಸಂಧ್ಯ ಹೊತ್ತಿಲಿ, ಮಕ್ಕೊ ಎಲ್ಲ ಕೈಕಾಲು ಮೋರೆ ತೊಳದು, ಸಾಲಾಗಿ ಕೂದು, ನಕ್ಷತ್ರ-ರಾಶಿ-ಸಂವತ್ಸರ-ಋತು ಇತ್ಯಾದಿಗಳ ಬಾಯಿಪಾಠ ಹೇಳುವ ಪರಿಪಾಠವ ಮುದಿ ಅಜ್ಜಿ ಕಡ್ದಾಯ ಮಾಡ್ಸಿಗೊಂಡಿತ್ತಿದ್ದವೂಳಿ ಅಮ್ಮ ಹೇಳಿಯೊಂಡಿದ್ದದು ನೆಂಪಾತು
ಒಹೋಯ್..ಒಪ್ಪಣ್ಣಂಗೆ ಲಾಯ್ಕ ಪಾಟ ಮಾಡುಲೆ ಬತ್ತು ಮಿನಿಯಾ.ಮಾಷ್ಟ್ರು ಮಾಂವ ಒಳ್ಳೆತ ತಿದ್ದಿದ್ದವು. ಒಳ್ಳೆ ಪ್ರಯತ್ನ ಆತಾ..!
ಅಂದಹಾಂಗೆ ಆನು ಜೋತಿಷ್ಯ ಕಲಿಯೆಕ್ಕಾರೆ ಕಲ್ತದು ಎಲ್ಲಾ ಪುನಾ ನೆಂಪಾತಿದ. ನಮ್ಮ ಆಚಾರ ವಿಚಾರದ ಬಗ್ಗೆ ಒಂಚೂರಾದರೂ ಅಗಗ ನೆಂಪಿರಲಿ ಹೇಳಿ ಮಾಸ, ತಿಂಗಳಿನ ಕ್ರಮವ ಆಯಾಯ ಸಂಚಿಕೆಲಿ 'ನೂಪುರ'ಲ್ಲಿ ಹಾಕುದು ಒಳ್ಳೆದಾವ್ತಾ ಇದ್ದು ಹೇಳಿ ಕಾಂಪ್ಲಿಮೆಂಟು ಬಯಿಂದು !
ಎನಗೊಂದು ಡೌಟು.. ನಮ್ಮ ಹವ್ಯಕ ತಿಂಗಳ ಹೆಸರು ಹೇಳಿ ಹಾಕಿದ್ದೆನ್ನೆ ! ಅದು ತುಳುನಾಡ ಸಂಪ್ರದಾಯಂದ ಪ್ರಭಾವಿತ ಅಲ್ದೋ? ಸಂಶೋಧನೆ ಮಾಡ್ತರೆ ನಿಜವಾದ ಹವ್ಯಕ ತಿಂಗಳುಗಳ ಹೆಸರು ಸಿಕ್ಕುಗೋ?
ಅಂದಹಾಮ್ಗೆ ಮರ್ಲು ಎಳಗುದು, ಬಿಡುದು ಎಲ್ಲಾ ಚಾಂದ್ರಮಾನದ ತಿಂಗಳಿನ ಪ್ರಕಾರಲ್ಲೇ ಅಲ್ದೋ? ನಮ್ಮ ಹೊಡೆಲಿ ಕೆಲವಕ್ಕೆ ಅದೆಲ್ಲಾ ಜೋರಿದ್ದಿದಾ! ಚಂದ್ರ ನಮ್ಮ ಮನಃಕಾರಕ ಅಡ. ಹಾಂಗಾಗಿ ಆಗಾಗ, ತಕ್ಷಣಕ್ಕೆ ಬದಲಾಯ್ಕೊಂಡೇ ಇರ್ತ. ಸೂರ್ಯ ಬುದ್ಧಿ ಕಾರಕ. ಹಾಂಗಾಗಿ ನಿಧಾನವಾದರೂ ಪ್ರಧಾನವಾಗಿಯೇ ಮುಂದೆ ಹೋವ್ತ.ಕಲ್ತುಕೊಂಡು ಹೋವ್ತರೆ ನಮ್ಮ ದೇವರು, ಭೂತಕ್ಕಳ, ಪೂಜೆ-ಹೋಮಗಳ ಎಲ್ಲಾ ಕಲ್ಪನೆಗೂ, ಆರಾಧನೆಗೋ ಸೂರ್ಯ, ಚಂದ್ರರೇ ಆಧಾರ.
ಎಂತ ಹೇಳಿತ್ತು ಕಂಡ್ರೆ , ಹಾಳು ಹರಟೆಂದ ಹೀನ್ಗಿಪ್ಪದು ಎಂತಾದರು ಬರೆ .
ಅಂತೆ ಇಲ್ಲದ್ದೆ ಲಾಯಿಲೂಟು ಬರದು ಪೈಸೆ ಮುಡುಚುಲೆ.
ಅಂತೂ ಇಂತೂ ಒಪ್ಪಣ್ಣ ಪಾಠ ಮಾಡುಲೆ ಸುರು ಮಾಡಿದ ….
ಈ ಸರ್ತಿ ಎಲ್ಲೊರ ಒಪ್ಪಂಗಳುದೆ ರಜ ನಿಧಾನ ಅಲ್ಲದೋ ??????? ;-(
ಎಲ್ಲೋರಿನ್ಗೂ ಅರ್ಥ ಅಪ್ಪ ಹಾಂಗೆ ಲಾಯ್ಕ ಬರದ್ದೆ …..
ಅಂದ ಹಾಂಗೆ….. ನಾಳೆಂದ ಸೋಣ ತಿಂಗಳು ಸುರು ಅಲ್ದೋ ???????? 🙂 🙂
ಮುಂದಾಣ ಲೇಖನದ ನಿರೀಕ್ಷೆಲಿ ……
bhava baraddu laika aydu mahiti poorna lekhana…
bari laikiddu oppanna, amma kastaleppaga ashwini barani helu heli baiddadu nempavuttu atoo………
ಲಾಯ್ಕ ಆಯಿದು ಭಾವ…. ಈ ವಿಚಾರಂಗಳ ಎಲ್ಲ ಓದಿ ಅರ್ಥ ಮಾಡಿಯೊಂಡರೆ ಮುಂದಿನ ಪೀಳಿಗೆಗೆ ಉಳಿಗು. ಇಲ್ಲೆ ಹೇಳಿದ್ರೆ ಪಡು[ಪಾಶ್ಚಿಮಾತ್ಯರು]ವಿನವು ಹೇಳಿದ್ದೆ ವೇದವಾಕ್ಯ ಅಕ್ಕು ಅಲ್ಲದೋ?
Oppanna ninna aanu eevaregoo eee blogile nodutta ippadu. Vah! Bhari Kushi Aaatu. Estu vishayava estu chendakke baradde. Hattare irisittare kandita ninna benninge erdu guddu kodsitte. Ninna I seve heenge munduvaeyali heli haaraisutte.
-Nethrakere Udaya Shankara.
http://www.paryaya.blogspot.com
http://www.spardha.wordpress.com
ಅದ್ಭುತ ಒಪ್ಪಣ್ಣ, ಭಾರೀ ಲಾಯಿಕ ಆಯಿದು ಬರದ್ದು.
ಜ್ಯೋತಿಷ್ಯ ಪ್ರಕಾರ, ವಿಜ್ಞಾನ ಪ್ರಕಾರ ಎರಡು ನಮೂನೆಲಿ ನೀನು ಮೊದಲು ತಿಳ್ಕೊಂಡು, ಅದರ ಎಂಗೊಗೆ ಅರ್ಥ ಅಪ್ಪ ಹಾಂಗೆ ಬರವದು ಸುಲಭದ ಕೆಲಸ ಅಲ್ಲ. ಆನು ನಿಧಾನಕ್ಕೆ ಅರ್ಥ ಮಾಡಿಗೊಂಡು ಓದಿದೆ. ತುಂಬಾ ಉತ್ತಮ ಮಾಹಿತಿ ಇದ್ದು.
ಸೌರಮಾನ ತಿಂಗಳು ಮತ್ತು ಚಾಂದ್ರಮಾನ ತಿಂಗಳು ಹೇಂಗೆ ಹೇಳುದರ ಅರ್ಥ ಮಾಡಲೇ ರಜ್ಜ ಟೈಮ್ ತೆಕ್ಕೊಂಡೆ.
ಒಳ್ಳೆಯ ಲೇಖನ, ಅಲ್ಲಲ್ಲಿ ತಿಳಿ ಹಾಸ್ಯದೆ ಇದ್ದು.
ನಿಧಾನಲ್ಲಿ ಓದಿದ ಕಾರಣ ಎನ್ನ ಕಾಮೆಂಟು ರಜ್ಜ ಲೇಟ್ ಆತು ಈ ಸರ್ತಿ.
ಭಾರೀ ಲಾಯ್ಕಾಯಿದು ಬರದ್ದು. ಅದು ಯಾವಾಗಲು ಲಾಯ್ಕವೆ ಇರ್ತು ನೀನು ಬರವದು.
ಈ ಸರ್ತಿ ತುಂಬಾ ಬೇರೆ ರೀತಿಯ ಲೇಖನ.
ಇನ್ನಾಣ ವಾರಕ್ಕೆ ಕಾಯ್ತೆ ಇನ್ನು. ಕಾಂಬಾ ಮಿನಿಯಾ?
joishajjana pulli appu oppanno.prastaru idara odire kushi akku.iddavu eegana generationiliyu idara tilukkomba aasakti makkoge iddu heli.mastru mavananatru joishappachhiyatru keli tilukkondu laiku barade.antu aachakare maniya suddi bareyadre orakku battilleya.ninna ie bloginge shahabas helte aata
Anthu Oppanna Madavu Ishwa Joyisara puLLI aaddadu saarthaka aathu…
ಎನಗೆ ಒರಾಹ ಮಿಹಿರನ ಬೃಹಜ್ಜಾತಕ ಓದಿದ ಹಾಂಗಾತು ಭಾವ…. ಎಂಥದೂ ಅರ್ಥ ಆಯಿದಿಲ್ಲೆ….:-(
ನಾಳೆ ಶಂಕ್ರಾಂತಿ ಅಲ್ದಾ? ಮೀತ್ತ ಪೆರುವಡಿ ಇದ್ದು… ಬಂದು ಸುದಾರ್ಸಿಕೊಡೆಕ್ಕು…. ನಿನ್ನ ಬೆನ್ನಿಂಗೆ ಹಾಳೆ ಕಟ್ಟಿಗೋ… ನಿನಗೆ ಏನೋ ಶೆನಿ ಸುತ್ತುತ್ತಾ ಇದ್ದ ಹಾಂಗೆ ಕಾಣ್ತು. ಬಂದೂ ಬಂದು ಎನ್ನ ಬಾಯಿಗೆ ಕೋಲು ಹಾಕುತ್ಸು ಎಂತಕೆ? ಆನೆಂತ ನಿನ್ನ ಎಮ್ಮೆ ಕಣ್ಣು ತೋಡಿದ್ದನಾ?
ಮತ್ತೆ ಭಾವ, ಈ ಒರ್ಶಂಗಳ ಲೆಕ್ಕ ನಮ್ಮ ಹಿರಿಯೋರು ಎಷ್ಟು ಚೆಂದಕ್ಕೆ ಮಾಡಿದ್ದವು ನೋಡು.. ಪ್ರತಿ ಮಾಸ ಬದಲಪ್ಪಗಳೂ ಪ್ರಕ್ರುತಿಲಿ ಬದಲಾವಣೆ ಕಾಣ್ತು… ಅದೇ ಈಗಾಣೋರ ಕೆಲೆಂಡರು ಲೆಕ್ಕ ನೋಡಿದರೆ ಅರ್ಥಾರ್ಥ ಸಂಬಂಧ ಇಲ್ಲೇ. ಹೊಸ ವರ್ಷ ಹೇಳ್ತವು , ಆದರೆ ಹೊಸತ್ತು ಎಂತದೂ ಕಾಣ್ತಿಲ್ಲೆ. ಅದೇ ನಮ್ಮ ಕೆಲೆಂಡರಿಲಿ ಹೊಸ ವರ್ಷಕ್ಕೆ ಎಷ್ಟೆಲ್ಲ ಬದಲಾವಣೆ ಇರ್ತು ಹೇಳುದು ಎಲ್ಲೋರಿಂಗೂ ಗೊಂತಿಪ್ಪ ಸಂಗತಿಯೇ. ಆದರೂ ಆ ಪಾಶ್ಚಾತ್ಯ ವ್ಯಾಮೋಹ ಬಿಡ್ತಿಲ್ಲೇ ನಮ್ಮ , ಜೋಯಿಶ ಮಾವನ ಹತ್ರೆಯೇ ಕೆಳೆಕ್ಕಷ್ಟೇ ಇದು ಏವ ಶೆನಿ ಹೇಳಿಗೊಂಡು…. ಸಾವಿರಗಟ್ಲೆ ಒರ್ಷ ಮದಲೇ ಕಂಡುಹಿಡುದ ನಮ್ಮ ಹೆರಿಯೋರ ಬುದ್ಧಿ ಶಕ್ತಿಯ appriciate ಮಾಡಲೇ ನಮ್ಮವಕ್ಕೆ ಇಗೋ ಬಿಡ್ತಿಲ್ಲೇ… ಎಲ್ಲಾ ಕರ್ಮ ಫಲ…