Oppanna.com

ಬಲಿಗೆ ಕೊಶಿ ಕೊಡುವ°, ಹಬ್ಬವನ್ನೇ ಬಲಿ ಕೊಡುದು ಬೇಡ..!

ಬರದೋರು :   ಒಪ್ಪಣ್ಣ    on   06/11/2015    5 ಒಪ್ಪಂಗೊ

ಸಂಸ್ಕೃತ ಸಮಸ್ಯೆಗೊ ಮನಸ್ಸಿಂಗೆ ಕೊಶಿ ಕೊಡ್ತು, ಆದರೆ ಬಾಕಿ ಸಮಸ್ಯೆಗೊ?
ಈಗೀಗ ಒಂದೊಂದು ಹೊಸ ಹೊಸತ್ತು ಸುರು ಅಪ್ಪದು, ಪ್ರತಿ ದಿನವೂ – ಎಂತದೂ ಇಲ್ಲದ್ದರೂ ಒಂದೊಂದು ಎಳದು ಹಾಕುತ್ತವು.
ಸಮಾಜಲ್ಲಿ ನೆಮ್ಮದಿ ಇಲ್ಲೆ ಹೇದು ಪ್ರಶಸ್ತಿ ಒಪಾಸು ಕೊಡುಸ್ಸು ಕೆಲವು ಜೆನ ಆದರೆ, ಪ್ರಶಸ್ತಿ ಕೊಟ್ಟದರ್ಲೇ ಸಮಸ್ಯೆ ಇದ್ದತ್ತು – ಹೇದು ನೆಗೆ ಮಾಡ್ತೋರು ಮತ್ತೆ ಕೆಲವು ಜೆನ.
ಅದಿರಳಿ.
~

ಮಳೆಗಾಲ ಕಳಾತು ಹೇದರೆ ಹಲವು ಹಬ್ಬಂಗಳ ಚೊರಿ ನಮ್ಮ ಬೈಲಿಲಿ ಕಾಂಗು. ಯೇವಗ ಎಷ್ಟೇ ಹಬ್ಬ ಬಂದರೂ, ನಿಜವಾಗಿ ’ಹಬ್ಬ’ ಹೇದು ಬೈಲಿಲಿ ಹೇಳುಸ್ಸು ದೀಪಾವಳಿಯನ್ನೇ. ಅಲ್ದೋ?
ದೀಪಾವಳಿ ಹೇದರೆಂತ್ಸು, ಅದರ ಆಚಣೆ ಮಾಡುಸ್ಸು ಹೇಂಗೆ – ಎಂತೆಲ್ಲ ಇದ್ದು – ಹೇದು ನಾವು ಅಂದೇ ಒಂದರಿ ಮಾತಾಡಿದ್ದು, ನೆಂಪಿದ್ದನ್ನೇ?
https://oppanna.com/oppa/balindra-baleendra-hariyo-hari
ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಂದ ತೊಡಗಿ ಶುಕ್ಲಪಕ್ಷ ದ್ವಾದಶಿ ಒರೆಂಗೂ – ಹಬ್ಬದ ಗೌಜಿ ಜೋರಿರ್ತು ನಮ್ಮ ಊರಿಲಿ.
~

ಎತಾರ್ತಲ್ಲಿ – ಮನೆಯೋರು, ಹೆರಿಯೋರು, ಕುಟುಂಬದೋರು ಎಲ್ಲೋರುದೇ ’ಇಂತಾ ದಿನ ನವಗೆ ಹಬ್ಬ’ ಹೇದರೆ ಅದುವೇ ಒಂದು ಕಾರಣ ಆತಿಲ್ಯೋ. ಹಬ್ಬದ ಗೌಜಿ ಮಾಡ್ಳೆ ಬೇರೆ ಕಾರಣ ಬೇಕೋ?
ಆದರೂ, ನಮ್ಮ ಅಜ್ಜಂದ್ರ ಲೆಕ್ಕಲ್ಲಿ ಕೆಲವು ಕಾರಣಂಗೊ ಇದ್ದು. ಹಾಂಗಾಗಿ ಅದೇ ದಿನ ಹಬ್ಬ ಬಪ್ಪದು ಇದಾ – ಹೇಳುಗು ರಂಗಮಾವ°.
ಆದರೆ, ಅದೇ ದಿನ ಬೇರೆ ಮತಲ್ಲಿಯೂ ದೀಪಾವಳಿ ಹಬ್ಬವ ಆಚರಣೆ ಮಾಡ್ತವು. ಅವಕ್ಕೆಂತ ಕಾರಣ – ಕಾರಣ ಎಂತದೋ ಬೇರೆ ಇಕ್ಕು, ಆದರೂ ಹಬ್ಬದ ಗೌಜಿ ಅದೇ ದಿನ.
~

ನಮ್ಮ ಪುರಾಣಂಗಳಲ್ಲಿ – ಲೋಕಕ್ಕೆ ಕಂಟಕಕಾರ ಆದ ನರಕಾಸುರನ ಕೃಷ್ಣ ಕೊಂದು ಲೋಕಕ್ಕೆ ಮಂಗಳ ಮಾಡಿದ ದಿನವೇ ನರಕ ಚತುರ್ದಶಿ ಆಡ.
ಆ ದಿನದ ಸಂಭ್ರಮಕ್ಕೆ ಹಬ್ಬ ಸುರು ಆದ್ಸಾಡ.

ಮರದಿನ ಮನೆಗೆ ಬಂದ, ಯುದ್ಧದ ಬಚ್ಚಲು ಹೋಪಲೂ, ಮೈಯ ಕೊಳೆ ಹೋಪಲೂ ಆತು ಹೇದು ಕೃಷ್ಣ ಎಣ್ಣೆ ಕಿಟ್ಟಿ ಮಿಂದನಾಡ.
ಹಾಂಗೆ ನಾವುದೇ ಆ ದಿನ ಮೈಗೆ ಎಣ್ಣೆ ಕಿಟ್ಟಿ ಮೀಸ್ಸು ಕ್ರಮ. ಕಾರಣ ಎಂತದೇ ಇರಳಿ, ಆ ದಿನ ಎಣ್ಣೆ ಕಿಟ್ಟಿ ಮೀವದು ಒಳ್ಳೆದೇ 😉
ಅದೇ ದಿನ ಲಕ್ಷ್ಮೀ ಪೂಜೆ ಹೇದು ಮಾಡ್ತವು. ಲಕ್ಷ್ಮಿ ಬಪ್ಪ ಜಾಗೆ ಆದ ಎಲ್ಲಾ ವೆವಹಾರ ಕೇಂದ್ರಲ್ಲಿಯೂ ಪೂಜೆ ಮಾಡ್ತವು.
~
ಹಬ್ಬದ ಅಮಾಸೆ ಹೇದರೆ ಎಲ್ಲಾ ಮನೆಲೂ ಸಂಭ್ರಮವೇ. ಆದರೆ ಆಚಮಮೆ ದೊಡ್ಡಪ್ಪನಲ್ಲಿ ಅದೇ ದಿನ ದೊಡ್ಡಜ್ಜನ ತಿತಿ.
ದೊಡ್ಡಜ್ಜಂಗೆ ತಿತಿ ಮಾಡುಸ್ಸು ಸುಮಾರು ಒರಿಶ ಆತು, ಈಗ ಅಲ್ಲಿ ಕೂಗುಲೆ ಆರೂ ಇಲ್ಲೆ; ಆದರೂ ಒಂದೊಂದರಿ ಒಪ್ಪಣ್ಣಂಗೆ ಗ್ರೇಶಿ ಹೋಪದು – ಆ ತೀರಿ ಹೋದ ಒರಿಶ ಆ ಮನೆಯೋರ ಮನಸ್ಥಿತಿ ಹೇಂಗೆ ಇದ್ದಿಕ್ಕು, ಹೇದು. ಹಬ್ಬದ ಗೌಜಿ, ಹಬ್ಬದ ಅಮಾಸೆ – ಅದೇ ದಿನ ಆ ಮನೆಲಿ ಎಜಮಾನ ತೀರಿ ಹೋದ್ಸು, ಒಂದು ಕ್ಷಯ ಸೂತಕ! ಛೇ..!
ಅದಿರಳಿ.
~
ಮರದಿನ ಆಶ್ವಯುಜ ಶುಕ್ಲಪಕ್ಷ ಸುರು, ಪ್ರಥಮಿ ತಿತಿ – ಹೇದರೆ ಪಾಡ್ಯ.
ಆ ದಿನಕ್ಕೆ ಒಂದು ಕತೆ ಇದ್ದು, ಒಂದು ಕಾರಣ ಇದ್ದು. ಅದೇಂತರ ಹೇದರೆ – ಬಲಿ ಚಕ್ರವರ್ತಿಯ ಕತೆ.
ನಿಂಗೊಗೆ ನೆಂಪಿಕ್ಕು, ಜನಪ್ರಿಯ ಬಲಿ ಚಕ್ರವರ್ತಿ ಇಂದ್ರ ಪದವಿಗೆ ಬೇಕಾಗಿ ನೂರು ಅಶ್ವಮೇಧ ಮಾಡ್ಲೆ ಹೆರಟದು, ನೂರ್ನೇ ಅಶ್ವಮೇಧಕ್ಕಪ್ಪಗ ಇಂದ್ರಂಗೆ ತಲೆಬೆಶಿ ಆಗಿ ವಿಷ್ಣುವಿನ ಹತ್ರೆ ಬೇಡಿಗೊಂಡನಾಡ – ಹೇಂಗಾರು ನಿಲ್ಲುಸಿ ಹೇದು. ಅದಕ್ಕೆ ವಿಷ್ಣು ವಾಮನ ರೂಪಲ್ಲಿ ಬಂದು ಅಹಂಕಾರ ಭಂಗ ಮಾಡಿದ್ದಾಡ. ನಿಂಗೊಗೆ ಗೊಂತಿಕ್ಕು. ಕುಂಞಿ ಮಾಣಿ ಆಗಿ ಬಂದು ಆನು ಕೇಳಿದ್ದು ಕೊಡು – ಹೇದುಪ್ಪುಸಿದ್ದಾಡ. ಬಲಿ ಒಪ್ಪಿದ್ದದು, ಹಾಂಗೆ ಮೂರು ಪಾದದಷ್ಟು ಜಾಗೆ ಕೇಳಿದ್ದು. ಒಂದು ಎರಡು ಪಾದಲ್ಲಿ ಮಹಾಕಾರ ಪಡದು ಭೂಮಿಯನ್ನೂ ಆಕಾಶವನ್ನೂ ಕಬಳುಸಿದ್ದದು. ಮೂರ್ನೇ ಪಾದಲ್ಲಿ ಬಲಿಯ ತಲಗೇ ಮೆಟ್ಟಿ, ಅವನ ಸೀತ ಪಾತಾಳಕ್ಕೆ ದೂಡಿದ್ದು – ಕತೆ ನೆಂಪಿಕ್ಕು.
ಆದರೆ, ಪ್ರಜಾನುರಾಗಿಯಾದ ರಾಜನ ಕೋರಿಕೆಯ ಮೇಗೆ, ಒರಿಶಕ್ಕೆ ಒಂದರಿ ಭೂಲೋಕಕ್ಕೆ ಬಪ್ಪ ನಂಬಿಕೆ. ಬಲಿಗೆ ಪ್ರಜೆಗೊ ಹೇದರೆ ಭಾರೀ ಪ್ರೀತಿ, ಪ್ರಜೆಗೊಕ್ಕೂ ಅತೀ ಪ್ರೀತಿಯ ರಾಜ ಬಲಿ.
ಪ್ರೀತಿಯೋರು ನಮ್ಮ ಕಾಂಬಲೆ ಬಪ್ಪಗ ನಾವು ಚೆಂದಲ್ಲಿ ಇರ್ತು – ಅಲ್ದೋ? ಹೊಸ ಒಸ್ತ್ರ ಹಾಕಿಗೊಂಬದು, ಚೀಪೆ ಅಡಿಗೆ ಮಾಡುಸ್ಸು, ಮನೆ ಎದುರು ಹೂಗು – ರಂಗೋಲಿ ಬರೆಸ್ಸು, ಹೀಂಗೆಲ್ಲ ಮಾಡುಸ್ಸು ಕ್ರಮ ಇದ್ದಪ್ಪೋ.
ಅದೇ ನಮುನೆ ಬಲಿ ಚಕ್ರವರ್ತಿ ಬಪ್ಪಗಳೂ ನಾವು ಹಾಂಗೇ ಗೌಜಿ ಮಾಡ್ತು.
ಪ್ರೀತಿಯ ರಾಜ° ಬಲಿ ಬಪ್ಪ ದಿನ ನಾವುದೇ ಹಬ್ಬ ಮಾಡುಸ್ಸು. ಕೊಶಿಲಿ ಮನೆ ಎದುರು ದೀಪ, ರಂಗೋಲಿ, ಹೂಗಿನ ಮಾಲೆ ಇತ್ಯಾದಿಗಳ ಕಟ್ಟುಸ್ಸು.
ಚೀಪೆ ಚೀಪೆ ಊಟ ಮಾಡುಸ್ಸು, ಹೊಸ ಅಂಗಿ ಒಸ್ತ್ರ ಹಾಕಿಗೊಂಬದು, ಹೊಸ ಚಿನ್ನ ಮಾಡುಸುದು – ಹೀಂಗೆಲ್ಲ.

ಮರದಿನ ಗೋಪೂಜೆ, ಅದೂ ಗೌಜಿಯೇ. ಹಟ್ಟಿಲಿಪ್ಪ ಅಬ್ಬೆಗೊಕ್ಕೆ ಪೂಜೆ-ಮಂಗಳಾರತಿ ಮಾಡಿ ಪೂಜೆ ಮಾಡುಸ್ಸು. ನಾವು ಮಾಡುವ°, ನಾವು ಉಂಬ ತಿಂಡಿಯನ್ನೇ ಮಾಡಿ ದನಗೊಕ್ಕೂ ಆ ದಿನ ಕೊಡುಸ್ಸು.
~

ದೀಪಾವಳಿಯ ದಿನದ ಗೌಜಿಗೆ ಹಲವೂ ಕತೆಗೊ ಬಂದು ಸೇರಿದ್ದು.

  • ಕೃಷ್ಣ ನರಕಾಸುರನ ಕೊಂದ ಕತೆ ನೆಂಪಿದ್ದನ್ನೇ, ರಜ್ಜ ಈಗ ಮಾತಾಡಿದ್ದು..
  • ಬಲಿ ಚಕ್ರವರ್ತಿಯ ಕತೆ ನಾವು ಈಗ ಮಾತಾಡಿದ್ದನ್ನೇ!
  • ರಾವಣನ ವಧೆ ಮಾಡಿ ಶ್ರೀರಾಮ ಸೀತಾರಾಮ ಆಗಿಂಡು ಒಪಾಸು ಅಯೋಧ್ಯೆಗೆ ಬಂದ ದಿನವೂ ಹಬ್ಬದ ದಿನ ಆಡ.
  • ಮ್ಲೇಚ್ಚರ ಬಂಧನಲ್ಲಿ ಇದ್ದಿದ್ದ ಐವತ್ತೆರಡು ರಾಜರ ಸಿಕ್ಖರ ಆರ್ನೇ ಗುರು ಹರಗೋಬಿಂದ ಸಿಂಹ ಬಿಡುಸಿ ವಿಜಯ ಸಾರಿದ ದಿನ ಆಡ.
  • ಜೈನರ ಗುರು ತೀರ್ಥಂಕರರ ನಿರ್ವಾಣ ಆಗಿ, ಮರದಿನ ಜ್ಯೋತಿ ರೂಪಲ್ಲಿ ಬಂದು ಅಂಧಕಾರವ ಕಳದ ಸುದಿನ ಆಡ ಈ ಹಬ್ಬ.

ಹೀಂಗೆ ಹತ್ತು ಹಲವು.. ಎಲ್ಲ ಮತಲ್ಲಿಯೂ ಆ ದಿನ ಹಬ್ಬದ ಗೌಜಿಯೇ.
~

ಕೆಲವು ಶತಮಾನಗಳ ಹಿಂದೆ ಬೆಡಿ ಬಿಡುದೂ ಸುರು ಆಯಿದು ನಮ್ಮ ಆಚರಣೆಲಿ. ಈಗಂತೂ ಹಬ್ಬ ಹೇದರೆ ಪಟಾಕಿ, ಪಟಾಕಿ ಹೇದರೆ ಹಬ್ಬ ನೆಂಪಪ್ಪಷ್ಟು.
ಮಕ್ಕಳ ಬೆಡಿಪಟಾಕಿ, ಗುದ್ದು ಪಟಾಕಿಂದ ತೊಡಗಿ, ಹಾವು ಪಟಾಕಿ, ಬೀಡಿ ಪಟಾಕಿ, ಬೆದ್ರ ಹಿಂಡ್ಳು, ಹಾರ್ತದು, ಓಡುತ್ತದು, ಬೀಳ್ತದು, ಹೊಟ್ಟುತ್ತದು, ದೊಡ್ಡ ದೊಡ್ಡ ಕದಿನ – ಗರ್ನಲುಗಳ ಒರೆಗೂ – ಗೌಜಿಯೇ ಗೌಜಿ. ಇರಳಿ – ಅದೂ ಒಂದು ಗೌಜಿಯೇ ಇದಾ. ಜಾಗ್ರತೆ ಇದ್ದರೆ ಆತು.
~
ಅದೆಲ್ಲ ಇರಳಿ. ಈಗಾಣ ಕಾಲಲ್ಲಿ ನಾವು ಗಮನುಸೆಕ್ಕಾದ ಸಂಗತಿ ಎಂತ್ಸರ ಹೇದರೆ, ಈಗೀಗ – ದೀಪಾವಳಿಲಿ ಪಟಾಕಿ ಹೊಟ್ಟುಸೆಡಿ, ಪಟಾಕಿ ಇಲ್ಲದ್ದ ದೀಪಾವಳಿ ಮಾಡಿ – ಹೇದು ಒಂದು ಬೊಬ್ಬೆ ಕೆಲವು ಜೆನರದ್ದು. ಪಟಾಕಿಂದ ಹಾಂಗಿಲ್ಲೆ, ಹೀಂಗಿಲ್ಲೆ, ಉಪದ್ರ ಇದ್ದು ಅದಿದ್ದು ಇದಿದ್ದು – ಹೇದು ಹೆದರ್ಸುದು.
ಆದರೆ, ಒಪ್ಪಣ್ಣಂಗೆ ಎಂತ ಅನುಸುದು ಹೇದರೆ – ಈ ನಿರ್ಬಂಧಂಗೊ, ನಿಷೇಧಂಗೊ ಏಕೆ ನಮ್ಮ ಆಚರಣೆಗೆ ಮಾಂತ್ರ ಬಪ್ಪದು?
ಏಕೆ ಇದು ಬಕ್ರೀದಿಂಗೆ ಬತ್ತಿಲ್ಲೆ? ಆ ದಿನ ಸಾವಿರ ಸಾವಿರ ಕುರಿಗಳ ಕೊಲ್ಲುವಾಗ ಏಕೆ ನೆಂಪಾವುತ್ತಿಲ್ಲೆ?
ಕ್ರಿಸ್ಮಸ್ಸಿಂಗೆ ಅಜ್ಜಂಗೆ ವೇಶ ಹಾಕಿ ನೆಗೆಮಾಡುವಾಗ ಏಕೆ ನೆಂಪಾವುತ್ತಿಲ್ಲೆ?
ಇದೆಲ್ಲ ಏಕೆ ಹಿಂದೂ ಆಚರಣೆಗೆ ಮಾಂತ್ರ ಲಗಾವು ಅಪ್ಪದು!?
ನಾವು ನಮ್ಮ ಆಚರಣೆ ಕ್ರಮವ ಎಂತಕೆ ಬಿಡುದು?

ಅಪ್ಪು – ಪಟಾಕಿ ಅಪಾಯ. ಆದರೆ ಅದಕ್ಕೆ ಜಾಗ್ರತೆ ಮಾಡಿರೆ ಆತು ಅಷ್ಟೆ.
ಪಟಾಕಿ ಹೊಟ್ಟುಸುವಾಗ ತನ್ನ ಆರೋಗ್ಯಕ್ಕೆ ಎಂತೂ ತೊಂದರೆ ಆಗದ್ದ ಹಾಂಗೆ ನೋಡಿಗೊಳ್ಳೆಕ್ಕು, ಇನ್ನೊಬ್ಬನ ಕಣ್ಣು ಕೈಕ್ಕಾಲಿಂಗೆ ಎಂತೂ ಆಗದ್ದ ಹಾಂಗೆ ಜಾಗ್ರತೆ ಮಾಡೇಕು.
ನೆಡು ಇರುಳು ತುಂಬ ತಡವಾದ ಮತ್ತೆ, ಬಾಕಿದ್ದೋರು ಒರಗಿಪ್ಪ ಹೊತ್ತಿಂಗೆಲ್ಲ ಪಟಾಕಿ ಒಡೆಯದ್ದೆ , ತೊಂದರೆ ಮಾಡದ್ದೆ ಇದ್ದರೆ ಆತು.
ಅಷ್ಟೇ – ಹೊರತು, ಪಟಾಕಿಯನ್ನೇ ಬಿಟ್ಟು ನಮ್ಮ ಸಂಭ್ರಮವನ್ನೇ ಬಿಟ್ಟು ಎಂತಕೆ ಚೆಪ್ಪೆ ಮಾಡೇಕು?

ಬೇಡ.

ನಮ್ಮ ರಾಜ° ಬಲಿ ಬಪ್ಪಗ ನಾವು ಸಂಭ್ರಮಿಸುವೊ°.
ಆರಾರದ್ದೋ ಮಾತು ಕೇಳಿ ಹಬ್ಬದ ಗೌಜಿಯನ್ನೇ ಬಲಿ ಕೊಡುದು ಬೇಡ.
ಪಟಾಕಿಯೂ ಇರಳಿ, ಗೋಪೂಜೆಯೂ ಇರಳಿ, ಎಲ್ಲ ಆಚರಣೆಗಳೂ ಸಂಪ್ರದಾಯದಂತೆ ಇರಳಿ.

ಒಂದೊಪ್ಪ: ಪಟಾಕಿ ಹೊಟ್ಟುಸದ್ದೆ ಹಬ್ಬವ ಬಲಿ ಕೊಡುಸ್ಸು ಬೇಡ; ಆದರೆ ಪಟಾಕಿ ತಪ್ಪಿ ಜೀವನ ಬಲಿ ಅಪ್ಪದು ಬೇಡ. ಜಾಗ್ರತೆ ಇರಳಿ.

5 thoughts on “ಬಲಿಗೆ ಕೊಶಿ ಕೊಡುವ°, ಹಬ್ಬವನ್ನೇ ಬಲಿ ಕೊಡುದು ಬೇಡ..!

  1. ಬೈಲಿನ ನೆಂಟ್ರಿಂಗೆಲ್ಲ ದೀಪಾವಳಿಯ ಶುಭಾಶಯಂಗೊ. ದೀಪಾವಳಿ, ದೀಪಂಗಳ ಹಾವಳಿ ಖಂಡಿತಾ ಅಲ್ಲ. ದೀಪಾವಳಿಯ ಗಮ್ಮತಿಲ್ಲಿ ಆಚರಿಸುವೊ. ಎಲ್ಲೋರಿಂಗು ದೀಪಾವಳಿ ಶುಭವನ್ನೇ ತರಲಿ.

  2. ಸಕಾಲಿಕ ಲೇಖನ.
    ಆಚರಣೆಯ ಹಿಂದೆ ಇಪ್ಪ ಮಹತ್ವವ ತಿಳಿಶಿ ಕೊಟ್ಟದು ಲಾಯಿಕ ಆಯಿದು.
    ಪಟಾಕಿಯ ಮಕ್ಕಳ ಕೈಲಿ ಕೊಡದ್ದೆ, ದೊಡ್ಡವರ ಮಾರ್ಗದರ್ಶನಲ್ಲಿ ಹೊಟ್ಟುಸುವದು ಉತ್ತಮ.
    ಪ್ರತಿ ವರ್ಷವೂ ಈ ಸಮಯಲ್ಲಿ ಅವಗಡಂಗೊ ಆವ್ತಾ ಇರ್ತು. ಮತ್ತಾಣ ವರ್ಷಕ್ಕಪ್ಪಗ ಅದು ಮರದು ಹೋವ್ತು. ಮತ್ತೆ ಅದೇ ಅವಗಡಂಗೊ ಪುನರಾವರ್ತನೆ ಆವ್ತಾ ಇರ್ತು. ಈ ವಿಷಯಲ್ಲ್ಲಿ ಜಾಗ್ರತೆ ಇರಲಿ.
    ಎಲ್ಲರ ಬಾಳಿಲ್ಲಿ ಕತ್ತಲೆ ತೊಳದು ಬೆಳಕು ಹರಿಯಲಿ.
    ಬೆಳಕಿನ ಹಬ್ಬ ದೀಪಾವಳಿಯ ಶುಭ ಹಾರೈಕೆಗೋ

  3. ದೀಪಾವಳಿ ಬಗ್ಗೆ ಒಳ್ಳೆ ಶುದ್ದಿ . ಹಬ್ಬದ ಅಮಾವಾಸ್ಯೆದಿನ ದೊಡ್ಡಜ್ಜ ತೀರಿಹೋದ್ದು ಹೇಳಿ ಕಂಡತ್ತು. ಎನ್ನ ಅಜ್ಜನ ಮನೆ ಅಜ್ಜನೂ ಹಬ್ಬದ ಅಮಾವಾಸ್ಯೆ ದಿನವೇ ಹೊದ್ದು. ಅಂದು ಸತ್ತರೆ [ ಅಕಾಲ ಮರಣ ಅಲ್ಲ ] ಮೋಕ್ಷಆಡ. ಭಟ್ರು ಹೇಳಿದ್ದು. ಬಲಿ ಚಕ್ರವರ್ತಿಗೂ ಮೋಕ್ಷ ಸಿಕ್ಕಿದ ದಿನ! ಅಲ್ಲೋ!!?.

  4. ಅಪ್ಪಪ್ಪು…., ದೀಪಾವಳಿಗೆ ಪೊಂಗಲು ಮಾಡೆಕು., ಪೊಂಗಲಿಂಗೆ ಚಟ್ನಿ ಮಾಡೆಕು. ಎನ್ನಾಂಗೆ ಪಟಾಕಿ ಹೊಟ್ಟುಸಲೆ ಅರಡಿಯದ್ದವು ಪಟಾಕಿ ಬಿಡ್ತದಾರು ನೋಡೆಕು. ಒಟ್ಟಾರೆ ದೀಪಾವಳಿ ಅಂತೂ ಕೊಶಿಲಿ ಆಯೇಕು ಎಲ್ಲೋರಿಂಗು. ದೀಪಾವಳಿ ನೆಂಪು ಒರ್ಶ ಪೂರ್ತಿ ಉಳಿಯೆಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×