ಬಾಯಿಕಟ್ಟಿದ ಹಾಂಗಪ್ಪದು ಒಂದೊಂದರಿ; ಎಂತರ ಶುದ್ದಿ ಹೇಳೇಕು ಗೊಂತಾವುತ್ತಿಲ್ಲೆ.
ಬೈಲಿನ ಲೆಕ್ಕಕ್ಕೆ ಹೇಳ್ತರೆ ಇದು ಎರಡ್ಣೇ ಸರ್ತಿ ಹೀಂಗಪ್ಪದು; ಹೀಂಗಿರ್ಸ ದಿನ ಬಪ್ಪಲಾಗ ಹೇದು ಪಾರೆಅಜ್ಜಿಯ ಹತ್ತರೆ ಎಷ್ಟು ಸರ್ತಿ ಕೇಳಿಗೊಂಡ್ರೂ ಸಾಲ್ತಿಲ್ಲೆ.
ಇಲ್ಲಿ ಎಲ್ಲೋರಿಂಗೂ ಅಕ್ಕಾದವರ ಹಾಂಗೆ ಮಾಡಿ ಒಂದರಿ ಹುಟ್ಟುಸುದು ಎಂತಗೆ? ಮತ್ತೆ ಪುನಾ ಕರಕ್ಕೊಂಬದು ಎಂತಗೆ? ಎಲ್ಲವೂ ಮಾಯೆ!
ಅಕ್ಕಾದೋರು ದೂರ ಆದರೆ ಮತ್ತೆ ಎಷ್ಟು ಬೇಜಾರಾವುತ್ತು! ದೇವರಿಂಗೆಂತ ಗೊಂತು!?
~
ಬೈಲಿಲೇ ಅಡ್ಡದಾಂಟಿ ಸೂರಂಬೈಲಿಂಗೆ ಹೆರಟದು ಒಂದರಿ; ಮಾರ್ಗದ ಕರೆಲಿ ಎಡಪ್ಪಾಡಿಭಾವ ಗಡಿಬಿಡಿಲಿ ಬಂದುಗೊಂಡಿಪ್ಪದು ಕಂಡತ್ತು.
ಎಡಪ್ಪಾಡಿಭಾವಂಗೆ ಒಂದೊಂದರಿ ಮನೆಂದ ಹೆರಟು – ಓ ಅಲ್ಲಿ ಕರಿಮಾರ್ಗದ ಕರೆಂಗೆತ್ತುವಗ ಎಂತಾರು ಬಾಕಿ ಆದ್ಸು ನೆಂಪಾಗಿಯೋ ಮಣ್ಣ ಒಪಾಸು ಬಪ್ಪದಿದ್ದು. ಹಾಂಗೇಯೋ ಗ್ರೇಶಿ; “ಎಂತಾತು?” – ಕೇಟೆ. ಎಡಪ್ಪಾಡಿ ಭಾವ “ಗೊಂತಾಯಿದಿಲ್ಲೆಯೋ – ದೊಡ್ಡಮಾವ°…” ಹೇಳಿದ°.
ಎಂತರ ದೊಡ್ಡಮಾವ°? ಎಂತಾತು? – ನಿರೀಕ್ಷೆಯೇ ಇಲ್ಲದ್ದ ಶುದ್ದಿ ಆದರೆ ನಮ್ಮ ಮನಸ್ಸು ವಾಕ್ಯ ಪೂರ್ತಿ ಮಾಡ್ಳೂ ಒಪ್ಪುತ್ತಿಲ್ಲೆ.
“ದೊಡ್ಡಮಾವನ ದಿನ ಕಳಾತಡ” – ಎಡಪ್ಪಾಡಿ ಭಾವ!
“ಆ°…ಎಂ…ಎಂತ…?? ನಿನ್ನೆ ಕಂಡಿದೆ ಅವರ…” – ಒಂದು ಕ್ಷಣ ಬೆಪ್ಪಣ್ಣನೇ ಆಗಿ ಹೋತು ನಾವು!
ಎಡಪ್ಪಾಡಿಭಾವ ಕೊಡೆಯಾಲಕ್ಕೆ ಹೆರಟೋನಿಂಗೆ ಶುದ್ದಿ ಗೊಂತಾಗಿ ಈಗ ಒಪಾಸು ಬತ್ತಾ ಇಪ್ಪದಾಡ.
ನಾವು ಹೆರಟದು ಸೂರಂಬೈಲಿಂಗೆ ಆದರೂ – ಎಡಪ್ಪಾಡಿ ಭಾವನ ಹಿಂದಂದಲೇ ದೊಡ್ಡಮಾವನ ಮನೆಹೊಡೆಂಗೆ ಹೆರಟತ್ತು.
ಶ್ಶೋ ದೇವರೇ.. ಎಂತಗೆ ದೇವರು ಹೀಂಗೆ ಮಾಡ್ತವಪ್ಪಾ, ಬೈಲಿಂಗೆ!?
ಎಡಪ್ಪಾಡಿಭಾವನತ್ರೆ ಮಾತಾಡಿಗೊಂಡೇ ಹೋದ್ಸು. ಎಂತಾದ್ದು, ಎಂತಕತೆ – ಇತ್ಯಾದಿ – ದೊಡ್ಡಮಾವನ ಸಂಗತಿಗಳನ್ನೇ.
ಬೈಲಿಂಗೆ ನೆಂಟ್ರು ಬಪ್ಪದು ಮಾಂತ್ರ; ಹೋಪಲಿಲ್ಲೆ- ಹೇದು ನಾವು ಅಂದೊಂದರಿ ಮಾತಾಡಿದ್ದತ್ತು.
ನಾವು ಮಾತಾಡಿರೆ ಆ ದೇವರು ಕೇಳೇಕೆ. ಅಂದು ದೊಡ್ಡಜ್ಜನ ಕರಕ್ಕೊಂಡು ಹೋಗಿಪ್ಪಗ “ಬೈಲಿನೋರು ಹೋಪ” ಸುರೂವಾಣ ಅನುಭವ ನವಗಾತು.
ಈಗ ಎಡಪ್ಪಾಡಿಭಾವ ಶುದ್ದಿ ಹೇಳುವಾಗಳೂ ಅದೇ ನಮುನೆ ಆವುತ್ತಾ ಇದ್ದು!
ನಮ್ಮ ಹತ್ತರಾಣೋರು, ಅದೂ – ನಮ್ಮ ಹೆರಿಯೋರು, ಆತ್ಮೀಯರಾಗಿ ಇಪ್ಪವರನ್ನೇ ಅವಂದೇ ಮೇಗಂಗೆ ಕರಕ್ಕೊಂಬದು.
~
ಮಾಷ್ಟ್ರು
ಅವು ಶಾಲಗೆ ಹೋಗಿಂಡಿದ್ದದರ, ಪಾಠ ಮಾಡಿಗೊಂಡಿದ್ದದರ ಈಗಾಣ ಮಕ್ಕೊ ಆರೂ ಕಂಡದಿಲ್ಲೆ, ಆದರೂ ಅವರ ಎಲ್ಲೋರುದೇ “ಮಾಷ್ಟ್ರು” ಹೇಳುಗು.
ಎಂತಗೆ? ಈಗಾಣೋರ ಅಬ್ಬೆಪ್ಪನ ಕಾಲದ ಸಂಗತಿ ಅದು! ಓ ಅಲ್ಲಿ ಬೈಲಿನ ಕರೆಲಿ – ಸೂರಂಬೈಲು ಶಾಲೆಲಿ ಹೆಡ್ಮಾಷ್ಟ್ರಾಗಿದ್ದಿದವಾಡ ದೊಡ್ಡಮಾವ°.
ಪಂಜೆಕುಂಞಜ್ಜಿ, ಕುಂಬ್ಳೆಜ್ಜಿ, ಸಾರಡಿ ಅಪ್ಪಚ್ಚಿ – ಇತ್ಯಾದಿ ಈಗಾಣ ನೆಡುಪ್ರಾಯದೋರಿಂಗೇ ಮಾಷ್ಟ್ರು.
ಸುರುವಿಂಗೆ ಮಾಷ್ಟ್ರು ಕೆಲಸಕ್ಕೆ ಸೇರಿದ್ದು, ಮತ್ತೆ ಸ್ನಾತಕೋತ್ತರ ಕಲಿವಿಕೆ ಮಾಡಿಗೊಂಡು, ರಜ್ಜ ಸಮೆಯ ರಾಮಜ್ಜನ ಕೋಲೇಜಿಲಿ ಲೆಗುಚ್ಚರು ಆಗಿಂಡು, ಒಪಾಸು ಬಂದು ಊರಿಲಿ ಮಾಷ್ಟ್ರ ಆಗಿ ಮುಂದುವರುದ್ದಾಡ.
ಅಂಬಗಾಣೋರು – ಅದರಿಂದ ಮದಲಾಣೋರು – ಈಗಾಣೋರು – ಎಲ್ಲೋರುದೇ ಅವರ “ಮಾಷ್ಟ್ರು” ಹೇಳಿಯೇ ಹೇಳುಗು.
ದೊಡ್ಡಳಿಯನನ್ನೂ ಸೇರಿ.
ಕಾಸರಗೋಡಿಲಿ ಕನ್ನಡ ಒಳಿಶುತ್ತ ಕಾರ್ಯವ ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದವು – ಹೇಳ್ತದರ್ಲಿ ಸಂಶಯ ಇಲ್ಲೆ. ಏಕೇದರೆ, ಈಗಾಣ ನೆಡುಪ್ರಾಯದ ಕನ್ನಡ ಜವ್ವನಿಗ ಸುಮಾರು ಜೆನಕ್ಕೆ ಪಾಟಮಾಡಿದ್ದೇ ಅವ್ವು, ಅಲ್ದೋ?
ಹೇಳಿದಾಂಗೆ, ದೊಡ್ಡಮಾವ ಬರದ ಬಯಲಾಟದ ಕತೆ ಒಂದು ಮಕ್ಕಳ ಪಾಠಪುಸ್ತಕಲ್ಲಿ “ಪಾಠ” ಆಗಿತ್ತಾಡ!
ತಾನು ಕಲಿಶಿದ ಶಾಲೆಲಿ ತಾನು ಬರದ ಒಂದು ಲೇಖನವನ್ನೇ ಪಾಠ ಆಗಿ ಹೇಳ್ತರೆ “ಕ್ರಿಯಾ ಸಾರ್ಥಕ್ಯ” ಅದುವೇ ಅಲ್ಲದೋ?
ಹಾಂಗಿರ್ತ ಸಾರ್ಥಕತೆ ಅವರ ಮಾಷ್ಟ್ರತ್ತಿಕೆಲಿ ಇದ್ದತ್ತಾಡ; ಸಾರಡಿ ಅಪ್ಪಚ್ಚಿ ಹೇಳುಗು. ನಾವೆಲ್ಲ ಕಣ್ಣುಬಿಡುವ ಮದಲೇ ಅವಕ್ಕೆ ಪೆನ್ಶನುದೇ ಆಯಿದು.
~
ಕೃಷಿ:
ಪ್ರಾಯ ಆಗಿ ನಿವೃತ್ತಿ ಆದ್ದದು ಶಾಲೆಂದ ಮಾಂತ್ರ. ತನ್ನ ಪ್ರೀತಿಯ ಕೃಷಿ ಚಟುವಟಿಕೆಂದ ಅಲ್ಲನ್ನೇ?
ಕತ್ತಿ ಹಿಡ್ಕೊಂಡು ತೋಟಕ್ಕೆ ಹೋದರೆ ಕಣ್ಣಿಂಗೆ ಬಿದ್ದ ಎಲ್ಲ ಕೆಲಸವನ್ನೂ ಮಾಡುಗಡ, ಎಡಪ್ಪಾಡಿಭಾವ ಹೇಳುಗು.
ಬಂಙದ – ಮರ ಹತ್ತುದು, ಗೆದ್ದೆ ಹೂಡುದು – ಹೀಂಗಿರ್ಸ ಎಲ್ಲವನ್ನೂ ಸರಾಗಲ್ಲಿ ಮಾಡುಗಾಡ.
ಮಾಷ್ಟ್ರ° ಆದೋರು ಬರೇ ಬೆಳಿಒಸ್ತ್ರ ಸುತ್ತಿಂಡು ಪೇಟಗೆ ಹೋಪಲೆ – ಹೇದು ಆರೂ ಗ್ರೇಶುತ್ತದು ಬೇಡ; ಎಲ್ಲ ಕೆಲಸವೂ ಅರಡಿಗು ದೊಡ್ಡಮಾವಂಗೆ. ದೊಡ್ಡ ಮನೆಯ ಎದುರು ದೊಡ್ಡ ಜಾಲು; ಆ ಜಾಲತುಂಬ ಹರಗಿ ಮನುಗಿದ ಅಡಕ್ಕೆಯೇ ಇದಕ್ಕೆ ಸಾಕ್ಷಿ!
ತೋಟಂದ ಮನೆಗೆ ಒಪಾಸು ಬಪ್ಪಾಗ ಗುರುಟುಲೆ ಇಪ್ಪದರ ಎಂತಾರು ತಕ್ಕು – ಹೇಳಿದ ಎಡಪ್ಪಾಡಿಭಾವ°.
ಹಾ°, ಅದಪ್ಪು – ಒಪ್ಪಣ್ಣಂಗೆ ಮರದೇ ಹೋಗಿತ್ತು.
~
ಕರಕುಶಲ:
ದೊಡ್ಡಮಾವ ಎಂತರ ಗುರುಟುಗು? – ನಿಂಗೊಗೆ ಗೊಂತಾತೋ?
ಕಾಪಿ ಮರದ ಗೆಲ್ಲು, ಇಂಜಿರ ಬಳ್ಳಿಯ ಬುಡ, ಹಲಸಿನ ಗೆಂಟು, ತಾಳೆಮರದ ಗೊರಟು, ಜಿಂಕೆ ಕೊಂಬು – ಹೀಂಗಿರ್ಸರ ಪ್ರಕೃತಿಲಿ ಕಂಡದರ ಮನಗೆ ತಂದು ಮಡಗ್ಗು.
ಪುರುಸೋತಿಲಿ ಕೂದುಗೊಂಡು ಅದರ ರಜಾ ಆಯೆತ ಮಾಡಿ, ಚೆಂದ ಮಾಡಿ – ಆ ಕಸವುಗಳಿಂದ ಚೆಂದದ ಮೂರ್ತಿ ಮಾಡುಗು.
ಕಸದಿಂದ ರಸ ತಯಾರಿ ಮಾಡ್ತ – ಹಳ್ಳಿಗರ ಮಟ್ಟಿಂಗೆ ವಿಶಿಷ್ಟ ಹವ್ಯಾಸ – ಇದ್ದತ್ತು ದೊಡ್ಡಮಾವಂಗೆ.
ಅಪ್ಪು, ಗುರುಟುತ್ತ ಕಾರ್ಯ ದೊಡ್ಡಮಾವನ ಅತಿ ಪ್ರಿಯವಾದ ಹವ್ಯಾಸ ಆಡ. ಈಗಾಣೋರು ಇದರನ್ನೇ “ಕರಕುಶಲ ವಸ್ತು ತಯಾರಿಕೆ ಮಾಡುದು” ಹೇದು ಚೆಂದ ಮಾತಿಲಿ ಹೇಳುಗಲ್ಲದೋ? ಮದಲಿಂಗೆ “ನೇರಂಪೋಕು” ಹೇಳುಗು.
ದೊಡ್ಡಮಾವನ ದೊಡ್ಡಮನೆತುಂಬ ಹೀಂಗಿರ್ಸ ಹಲವು ಸಾಮಾನುಗೊ ಮಡಿಕ್ಕೊಂಡಿದ್ದು, ಎಲ್ಲವನ್ನೂ ನೋಡೇಕಾರೆ ಅರ್ಧದಿನ ಪುರುಸೋತು ಬೇಕೇಬೇಕು.
ನೆಡೆತ್ತಾ ನೆಡೆತ್ತಾ ಶಾಂಬಾವನ ಮನೆ ಮೇಲ್ಕಟೆ ಎತ್ತಿಗೊಂಡು ಬಂದ ಹಾಂಗೇ ಓ ಅಲ್ಲಿ ಗುಡ್ಡೆಲಿ ದೊಡ್ಡಮಾವನೇ ಆಂಜಿದ ಹಾಂಗಾತು ಮನಸ್ಸಿಂಗೊಂದರಿ. ಅವು ಅಲ್ಲೆ ಓಡಾಡಿಗೊಂಡು, ಅಲ್ಲೆ ಸಿಕ್ಕಿಗೊಂಡು ಇದ್ದದು ಧಾರಾಳ ನೆಡದ್ದು.
~
ಯಕ್ಷಗಾನ ಆಸಕ್ತಿ:
ದೊಡ್ಡಮಾವನ ಹಲವು ಕಲಾಸಕ್ತಿಗಳಲ್ಲಿ ಯಕ್ಷಗಾನವೂ ಒಂದು.
ಅರ್ಥಗಾರಿಕೆಯ ಹಿರಿಮೆಯ ತಾಳಮದ್ದಳೆಂದ ಹಿಡುದು, ವೇಷಗಾರಿಕೆ ಹಿರಿಮೆಯ ಆಟದ ಒರೆಂಗೆ ಹಲವು ಮೇಳ, ಹಲವು ಕಲಾವಿದರ ಅರಡಿಗು.
ಆಟ ನೋಡುದು ಮಾಂತ್ರ ಅಲ್ಲ ಅದರ ವಿಮರ್ಶೆ ಮಾಡ್ತದುದೇ ಅವರ ಸಾಮರ್ತಿಗೆ ಆಡ. ಅವರ ಹೆರಿಯೋರು ಸ್ವತಃ ಯಕ್ಷಗಾನರಂಗಲ್ಲೇ ಇದ್ದದು ಕಾರಣವೋ ಏನೋ, ಆದರೆ ಅದೇ ವಾತಾವರಣವ ಈಗಳೂ ಮುಂದುವರುಸಿದ್ದವು ಮನೆಲಿ.
ದೊಡ್ಡಬಾವನೂ ಒಂದೊಂದರಿ ಆಟನೋಡಿಂಡು ನೆಡಿರುಳು ಸಮೋಸ ಕಳುಗುತ್ತದು ಇದೇ ದೊಡ್ಡಮಾವ° ಮೂಡುಸಿದ ಆಸಕ್ತಿ ಅಲ್ಲದೋ?
ದೊಡ್ಡಳಿಯ ಒಂದೊಂದರಿ ದೇವೇಂದ್ರನೋ, ಮಹಿಷಾಸುರನೋ ಎಲ್ಲ ಆಗಿ ದೊಡ್ಡಮಾವನನ್ನೇ ದೊಡ್ಡಕಣ್ಣು ಮಾಡಿ ಹೆದರ್ಸುತ್ತನಾಡ – ಮೊನ್ನೆ ದೊಡ್ಡಮಾವನೇ ಹೇಳಿ ಹೆದರಿತ್ತಿದ್ದವು. 😉
ಸರ್ವೆಭಾವನೂ ದೊಡ್ಡಮಾವನೂ, ಒಂದೊಂದರಿ ಉಂಬಗ ಆಟದ ಬಗ್ಗೆ ಮಾತಾಡ್ಳೆ ಸುರುಮಾಡಿರೆ ಕೂದೋರಿಂಗೆ ಕೊದಿ ಹಿಡಿತ್ತಾಡ; ಮಾಡಿದ ಅಡಿಗೆ ತಣುದು ಕೋಡುತ್ತಾಡ!
ಇದಾ, ನಮ್ಮ ಬೈಲಿಲಿ ತಾಳಮದ್ದಳೆಯ ಶುದ್ದಿ (https://oppanna.com/?p=1693) ಹೇಳಿದ್ದು ಕೇಳಿದ್ದಿರೋ? ಅವರ ಶುದ್ದಿಗಳಲ್ಲಿ ಬಪ್ಪ ಹಳೆ ಹವ್ಯಕ ಶಬ್ದಂಗೊ, ಬಳಕ್ಕೆಗೊ ಎಲ್ಲವುದೇ ಅನುಭವಿಸಲೆ ಬಹು ಕೊಶಿ!
~
ಗುರುಭಕ್ತಿ:
ದೊಡ್ಡಮಾವ ಅಪ್ರತಿಮ ಗುರುಭಕ್ತರಾಡ.
ಬಾಲ್ಯಲ್ಲಿ ಶಿಷ್ಯರಾಗಿ ಗುರುಗಳ ಕೈಂದ ಕಲ್ತುಗೊಂಡು, ಮುಂದೆ ಸ್ವತಃ ಗುರುಗಳಾಗಿ ಎಷ್ಟೋ ಮಕ್ಕೊಗೆ ವಿದ್ಯಾದಾನ ಮಾಡಿಗೊಂಡಿದ್ದ ದೊಡ್ಡಮಾವಂಗೆ “ಜೀವನಕ್ಕೆ ಗುರುಗೊ ಅಗತ್ಯ” ಹೇದು ಅರಡಿಗಾಯಿದು.
ಹಾಂಗಾಗಿ, ನಮ್ಮ ಗುರುಪೀಠವ ಮನಸಾರೆ ಒಪ್ಪಿ ನಂಬಿಗೊಂಡು ನೆಡಕ್ಕೊಂಡಿದ್ದಿದ್ದವಾಡ. ಗುರುಸೇವೆಲಿ, ಶ್ರೀಮಠದ ಕಾರ್ಯಂಗಳಲ್ಲಿ ಶ್ರದ್ಧಾಭಕ್ತಿಲಿ ಅಗ್ರಪಂಕ್ತಿಲಿ ತೊಡಗುಸಿಗೊಂಡಿದ್ದಿದ್ದವಾಡ – ಎಡಪ್ಪಾಡಿಭಾವ ಉವಾಚ.
ಅಭಿಮಾನ – ಗೌರವ:
ಇದರೆಡಕ್ಕಿಲಿ ಎಡಪ್ಪಾಡಿ ಭಾವಹೇಳಿದ ಒಂದು ವಿಷಯ ತುಂಬಾ ಸತ್ಯ.
ಮಕ್ಕಳ ಮೇಗೆ ಹೆರಿಯೋರು ಅಭಿಮಾನ ಮಡುಗೇಕು. ಯುವ ಶೆಗ್ತಿ ಎಂತಾರು ಸಾಧನೆ ಮಾಡ್ತು ಹೇಳ್ತದರ ಹೆರಿಯೋರು ನಂಬೇಕು. ಹಾಂಗಾರೆ ಮಾಂತ್ರ ಆ ಸಾಧನೆ ಮಾಡ್ಳೆಡಿಸ್ಸು; ಸಾಧನೆಗೆ ಪ್ರೇರೇಪಣೆ ಮಾಡಿದ ಹೆರಿಯೋರ ಗೌರವಿಸಲೆ ಎಡಿಸ್ಸು. ದೊಡ್ಡಮಾವಂಗೆ ಮಕ್ಕಳ ಮೇಗೆ ಅಭಿಮಾನ ಇದ್ದತ್ತಾಡ; ಮಕ್ಕೊಗೆ ಅವರ ಮೇಗೆ ಗೌರವ ಇದ್ದತ್ತಾಡ. ಅವರ ಮನೆ ಮಕ್ಕಳ ಕತೆ ಮಾಂತ್ರ ಅಲ್ಲ; ಆ ಊರಿನ ಎಲ್ಲಾ ಮಕ್ಕಳ ಕತೆ. ಎಲ್ಲರಿಂಗೂ ದೊಡ್ಡಮಾವ ಹೆರಿಯೋರು, ಬೇಕಾದೋರು.
ಎಲ್ಲೋರಿಂಗೂ ದೊಡ್ಡಮಾವನ ಸಹಕಾರ / ಮಾರ್ಗದರ್ಶನ ಒಂದಲ್ಲ ಒಂದು ರೀತಿಲಿ ಸಿಕ್ಕಿಕ್ಕು – ಹೇಳ್ತದು ಶತಃಸಿದ್ಧ.
ಎಲ್ಲ ವಿಚಾರಲ್ಲಿಯೂ ಅನುಭವಿ ಆದ ಕಾರಣ ಬೈಲಿಲಿ ಎಲ್ಲೋರಿಂಗೂ ಬೇಕಾದ ಸಾತ್ವಿಕ ವೆಗ್ತಿಯೂ ಆಗಿತ್ತಿದ್ದವು ಹೇಳ್ತದು ಎಲ್ಲೋರುದೇ ಒಪ್ಪುವ ಮಾತು.
ಇದೆಲ್ಲ ಸರಿ, ಹೇಂಗೆ ತೀರಿಹೋದ್ಸು – ಕೇಟೆ ಎಡಪ್ಪಾಡಿ ಭಾವನತ್ರೆ.
~
ಸುಖಮರಣ:
ದೇಹಂದ ಆತ್ಮ ಬೇರೆ ಅಪ್ಪಗ ಬೇನೆ ಅಪ್ಪಲಾಗಾಡ. ಜೀವನಲ್ಲಿ ಮಾಡಿದ ಪಾಪಕರ್ಮಂಗಳೇ ಆ ಹೊತ್ತಿಂಗೆ ಬೇನೆ ಆಗಿ ಪ್ರತಿಫಲನ ಅಪ್ಪದಾಡ. ಆ ಹೊತ್ತಿಂಗೆ ಬೇನೆ ಆಗದ್ದೆ ಇರೆಕ್ಕಾದರೆ ಪುಣ್ಯವಂತರೇ ಆಗಿರೆಕ್ಕಾಡ – ಇದು ಲೋಕ ಪ್ರತೀತಿ.
ಅನಾಯಾಸೇನ ಮರಣಂ – ಹೇದು ಶಂಕರಾಚಾರ್ಯರು ಹೇಳಿದ್ಸು ಇದೇ ತಾತ್ಪರ್ಯಂದ ಆಡ.
ನಮ್ಮ ದೊಡ್ಡಮಾವ ಹೋಪಗ ಹೀಂಗೇ – ಅನಾಯಾಸಲ್ಲೇ ಹೋಯಿದವು ಹೇಳ್ತದು ಬೇಜಾರದ ಎಡಕ್ಕಿಲಿಪ್ಪ ಸಣ್ಣ ನೆಮ್ಮದಿ.
ನಿನ್ನೆ-ಮೊನ್ನೇಣ ಹಾಂಗೇ ಉದಿಯಪ್ಪಗ ತನ್ನಷ್ಟಕ್ಕೇ ಎದ್ದು, ಸ್ವಶುಚಿ ಮಾಡಿಗೊಂಡು, ಶುಭ್ರ ಆಯಿದವಾಡ. ಮಜ್ಜಾನಕ್ಕಪ್ಪಗ ಪಕ್ಕನೆ ಆ ದೇವರಿಂಗೆ ಇವು ಬರೆಕ್ಕು ಹೇದು ಅನುಸಿತ್ತೋ ಏನೋ – ಆಯಾಸ-ನಿತ್ರಾಣ ಜೋರಾತಾಡ. ಮಗನ ಕಾರಿಲಿ ಕೂದುಗೊಂಡದು ಒಂದು ಗೊಂತಿದ್ದು.
ಕಾರು ಕಾಸ್ರೋಡಿಂಗೆ ಹೋತು – ಆತ್ಮ ದೇವರ ಹತ್ತರಂಗೆ ಹೋತು – ಎಡಪ್ಪಾಡಿ ಬಾವ ಈ ವಿಷಯ ಹೇಳುವಾಗ ನಾವು ದೊಡ್ಡಮಾವನ ಮನೆಜಾಲಿಂಗೆ ಎತ್ತಿತ್ತಿದ್ದು.
~
ದೊಡ್ಡಮಾವ ಆಸ್ಪತ್ರೆಗೆ ಹೋದೋರು ಬರೆಕ್ಕಷ್ಟೆ ಅಡ. ಡಾಗುಟ್ರು ಎಂತದೋ ಬರದು ದಸ್ಕತ್ತು ಮಾಡಿ ಕೊಡೆಕ್ಕಷ್ಟೆ ಅಡ.
ತಡವಕ್ಕು – ದೊಡ್ಡಕ್ಕ ಹೇಳಿದವು. ದೊಡ್ಡಮಾವ° ಬಪ್ಪನ್ನಾರ ಕೂದುಗೊಂಬಲೆ ಎಡಪ್ಪಾಡಿಭಾವಂದೇ ನಾವುದೇ ಅಲ್ಲೇ ಜೆಗಿಲಿಕರೆಲಿ ಕೂದುಗೊಂಡತ್ತು.
ಇಷ್ಟನ್ನಾರ ದೊಡ್ಡಮಾವ ಸ್ವತಃ ಮೌನಿ ಆಗಿದ್ದರೂ – ಆ ಮನೆ ಗಲಗಲ ಇದ್ದತ್ತು.
ಈಗ ದೊಡ್ಡಮಾವನ ಅಗಲುವಿಕೆಲಿ ಮನೆ ಮೌನ ಆಯಿದು!
~
ಮನೆ ಮಟ್ಟಿಂಗೆ ಆರ್ಥಿಕ, ಮೌಲ್ಯಿಕ, ಸಾಂಸ್ಕೃತಿಕ ಸುಭದ್ರತೆಯ ಧೃಡಮಾಡಿಗೊಂಡೇ, ಜೀವನವ ಪೂರ್ತಿ ಮಾಡಿ ಹೆರಟವು ದೊಡ್ಡಮಾವ. ನಾಲ್ಕು ಜೆನ ಪ್ರಬುದ್ಧ ಮಕ್ಕಳ ಹೆಮ್ಮೆಯ ಅಪ್ಪ ಆಗಿ, ಎಲ್ಲೋರಿಂಗೂ ಒಂದೊಂದು ಅಶನದ ದಾರಿ ತೋರ್ಸಿದ್ದವು.
ಮಕ್ಕಳ ಹೇಂಗೆ ಬೆಳೆಶೇಕು – ಹೇಳ್ತ ಸಂಗತಿಯ ಸ್ವತಃ ಅನ್ವಯ ಮಾಡಿಗೊಂಡು ಇನ್ನೊಬ್ಬಂಗೆ ದಾರಿದೀಪ ಆಯಿದವು ಹೇಳ್ತದಕ್ಕೆ ಒಗ್ಗಟ್ಟಿಲಿಪ್ಪ ಅವರ ಮಕ್ಕಳೇ ಸಾಕ್ಷಿ.
ಮಕ್ಕಳೊಟ್ಟಿಂಗೆ ಚೆಸ್ ಆಡುದರಿಂದ ಹಿಡುದು ಅತಿಸೂಕ್ಷ್ಮ ವಿಚಾರಂಗಳ ವಿನಿಮಯ ಮಾಡುವಲ್ಲಿ ಒರೆಂಗೂ- ಪುತ್ರಂ ಮಿತ್ರವದಾಚರೇತ್’ ಹೇಳ್ತದರ ಅಕ್ಷರಷಃ ಪಾಲುಸಿಗೊಂಡ “ಮಾಷ್ಟ್ರು” ಆ ಮನೆಯ, ನಮ್ಮ ಬೈಲಿನ, ಇಡಿಯ ಸಮಾಜದ ಆಸ್ತಿ ಆಗಿದ್ದಿದ್ದವು. ಸಾವಿರಾರು ಶಿಷ್ಯರಿಂಗೆ ಆ ಗುರುಗಳ ಆಶೀರ್ವಾದ ಬೇಕೇಬೇಕು.
ಎಷ್ಟೋ ಹಳೆ ತಲೆಮಾರಿನ ಕತೆಗೊ ಅವರ ಬಾಯಿಲಿ ಓಡಾಡಿಗೊಂಡಿದ್ದತ್ತು. ಕುಂಬ್ಳೆ ಸೀಮೆಯ ಹಳೆ ಕ್ರಮದ ಉಚ್ಛಾರಣೆಯ – ಮಾತುಕತೆಯ ಕೊಂಡಿ ಆಗಿತ್ತಿದ್ದವು. ಶೈಕ್ಷಣಿಕ, ಕೃಷಿಕ, ಕಲಾವಿದ, ಕೌಶಲ್ಯ, ಸಾಹಿತ್ಯಿಕ – ಬಹುಮುಖದ ವೆಗ್ತಿತ್ವ ಹೊಂದಿದ ದೊಡ್ಡಮಾವ ಬೈಲಿಂಗೆ ಇನ್ನೂ ಹಲವು ಸಮೆಯ ಶುದ್ದಿ ಹೇಳೇಕಾತು. ಮನೆ ಜೆಗಿಲಿಲಿಪ್ಪ ಮರದ ಕುರ್ಚಿ-ಮೇಜಿಲಿ ದೊಡ್ಡಮಾವ ಕೂದುಗೊಂಡಿದ್ದರೆ ಆ ಬ್ರಹ್ಮ ಹೇಳಿದಾಂಗೆ, ದೊಡ್ಡಮಾವಂಗೆ ಕಂಡಹಾಂಗೆ ಹೊಸ ಸೃಷ್ಟಿಗೊ ಆಗಿಂಡಿತ್ತಾಡ.
ಹೀಂಗೇ.. ಹಲವು ಆಲೋಚನೆಗೊ ಬಂದು ಹೊಕ್ಕತ್ತು, ಹೊಕ್ಕು ಹೆರಟತ್ತು.
~
ರಜ ಹೊತ್ತಪ್ಪಗ ದೊಡ್ಡಮಾವ ಬಂದವು, ನಿತ್ಯ ಓಡಾಡಿದ ಮನೆಲಿ ಮನುಗಿದವು – ದೇಹ ಮಾಂತ್ರ, ಆತ್ಮ ಇಲ್ಲೆ.
ಇಷ್ಟೆಲ್ಲ ವೈಶಿಷ್ಟ್ಯ ತುಂಬಿದ ಇಂತಾ ವೆಗ್ತಿತ್ವ ನಮ್ಮೊಟ್ಟಿಂಗೆ ಇನ್ನೂ ಹಲವೊರಿಶ ಬೇಕಾತು.
ಇರಳಿ; ದೈವೇಚ್ಛೆ. ದೊಡ್ಡಮಾವ ನಮ್ಮೊಟ್ಟಿಂಗೆ ಇಲ್ಲದ್ದರೂ ಅವರ ಮೇರುವೆಗ್ತಿತ್ವ ನಮ್ಮೊಟ್ಟಿಂಗಿರಳಿ. ನಮ್ಮ ಜೀವನಕ್ಕೆ ಅವರ ವೆಗ್ತಿತ್ವ ಆದರ್ಶವಾಗಿರಳಿ –
ಬೈಲಿಂಗವರ ಆಶೀರ್ವಾದ ಇರಳಿ – ಹೇಳ್ತ ಲೆಕ್ಕಲ್ಲಿ ಆಶೀರ್ವಾದ ಪಡಕ್ಕೊಂಡೆ.
ದೂರದೂರಿಂದ ಮಕ್ಕೊ ಬಪ್ಪಲೆ ಕಾಯ್ತಾ ಇಪ್ಪದ್ದೇ – ಎಡಕ್ಕಿಲಿ ಒಂದರಿ ಸೂರಂಬೈಲಿಂಗೆ ಹೋಗಿಬಪ್ಪಲೆ ಹೆರಟೆ.
ಯೇವತ್ತೂ ದೊಡ್ಡಮಾವ ಕೂದುಗೊಂಡಿದ್ದ ಕುರ್ಚಿಲಿ ಇಂದು ದೊಡ್ಡಳಿಯ ಕೂದು ಎಂತದೋ ಗೀಚಿಗೊಂಡಿತ್ತಿದ್ದ°.
ದೊಡ್ಡಮಾವನ ದೊಡ್ಡ ಆದರ್ಶವ ಅದೇ ರೀತಿಲಿ ದೊಡ್ಡಳಿಯ ಮುಂದುವರಸಲಿ – ಹೇದು ನಮ್ಮ ಸದಾಶಯ ಇದ್ದತ್ತು.
ಸೂರಂಬೈಲು ಶಾಲೆಯ ಹತ್ತರೆ ನೆಡಕ್ಕೊಂಡು ಎತ್ತುವನ್ನಾರವೂ – ಅದೇ ಚಿತ್ರ ತಲೆಲಿತ್ತು. ಸೂರಂಬೈಲು ಶಾಲೆ ನೋಡುವಾಗ ದೊಡ್ಡಮಾವನ ಪುನಾ ನೆಂಪಪ್ಪಲೆ ಸುರು ಆತು.
~
ದೊಡ್ಡಮಾವಂಗೆ ಚಿರಶಾಂತಿ ಸಿಕ್ಕಲಿ, ಅವರ ಅನುಪಸ್ಥಿತಿಯ ನಷ್ವ ಭರುಸುವ ಶೆಗ್ತಿಯ ಅವರ ಸಂಸಾರಕ್ಕೆ, ನಮ್ಮ ಬೈಲಿಂಗೆ ಕೊಡ್ಳಿ.
ದೊಡ್ಡಮಾವ° ಮತ್ತೊಂದರಿ ಬರಳಿ – ಹೇಳ್ತದು ಬೈಲಿನ ಆಶಯ.
~
ಒಂದೊಪ್ಪ: ದೊಡ್ಡ ವ್ಯಕ್ತಿತಂಗೊ ಇಪ್ಪಗಳೂ ಮೌನಲ್ಲಿಕ್ಕು – ಹೋಪಗಳೂ ಮೌನಲ್ಲಿಕ್ಕು.
ಸೂ:
- ಬೈಲಿಲಿ ದೊಡ್ಡಮಾವನ ಚಿತ್ರ-ಪುಟ-ಪರಿಚಯ-ಶುದ್ದಿಗಳ ಓದಲೆ ಅವರ ಜಾತಕಪುಟ: https://oppanna.com/nerekare/doddamava
- ಹೊಸದಿಗಂತ ಪತ್ರಿಕೆಲಿ ಬಂದ ನಿಧನವಾರ್ತೆ:
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಚಿರಶಾಂತಿ ಅವರ ಆತ್ಮಕ್ಕೆ ಭಗವಂತ ಕೊಡಲಿ ಹೇಳಿ ನಮ್ಮ ಪ್ರಾರ್ಥನೆ..ಅವರ ಒಗಟಿನ ಹಾಂಗೆ ಇಪ್ಪ ಮಾತುಗ ಮತ್ತೆ ಮತ್ತೆ ನೆಂಪಾಗ್ತು..ಅವರ ಆಶೀರ್ವದ ಇರಲಿ ನಮ್ಮ ನವಗೆ..
ದೊಡ್ದ ಮಾವನ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳಿ ಪ್ರಾರ್ಥನೆ
೧೯೬೪ರಲ್ಲಿ ರಾಂಭಾವ ಹೆಡ್ಮಾಷ್ಟ್ರು ಆಗಿಪ್ಪಗ ಒಟ್ಟಿಂಗೆ ಕೆಲಸ ಮಾಡ್ಯೋಂದಡಿದ್ದದು, ಮತ್ತೆ ಅವರ ಹತ್ತರಾಣ ಮನೆಂದ ಅಪ್ಪಇ ಮಗಳ ಮದುವೆ ಆದ್ದು,ಹೀಂಗೆ ಹತ್ತರಂದ ಗೊಂತಿಪ್ಪ ರಾಂಭಾವನ ಕಳಕ್ಕೊಂಡದು ಸಂಕಟ,ಬೇಜಾರು ಆದರೂ ಸುಅ ಮರಣ ಹೇಳುವದರ ಕೇಳಿ ಸಮಾಧಾನ.ಅವರ ಸರದಿ ಕಳುತ್ತು. ಇನ್ನು ಹತ್ತರೆ ನಮ್ಮ ಸರದಿ ಯಾವಗ ಹೇಳಿ ಗೊಂತಿಲ್ಲೆ. “ಪುನರಪಿ ಜನನಂ ಪುನರಪಿ ಮರಣಂ”
ಹರೇ ರಾಮ,
ಅಪ್ಪನ ಮೇಲೆ ಪ್ರೀತಿ ತೋರಿದ ಎಲ್ಲೋರಿಂಗೂ ಋಣಿ…
ಅಪ್ಪ° ನವಗೋಸ್ಕರ ಮಾಡೆಕ್ಕಾದ ಎಲ್ಲ ಕಾರ್ಯಂಗಳನ್ನೂ ಸರಿಯಾಗಿ ಮಾಡಿದ್ದವು.
ಇನ್ನು, ನಾವು ಮಾಡೆಕಾದ್ಸು ಬಾಕಿ…
ನಾಳ್ತು ಎಪ್ರಿಲ್ 6 ರಿಂದ 9 ರ ವರೇಗೆ ಸದ್ಗತಿ ಕಾರ್ಯಂಗಳ ಮನೇಲಿಯೇ ಮಾಡುದು ಹೇಳಿ ನಿಘಂಟು ಮಾಡಿದ್ದೆಯೊ°.
ನಿಂಗೊ ಎಲ್ಲೋರೂ ಬಂದು ಎಂಗಳ ದೇಹ ಶುದ್ಧಿ ಮಾಡಿ ಕೊಡೇಕು ಹೇಳಿ ಪ್ರಾರ್ಥನೆ.
ದೊದ್ದಮಾವನ ಆತ್ಮಕ್ಕೆ ಶಾ೦ತಿ ಸಿಕ್ಕಲಿ ಹೇಳಿ ದೇವರಲ್ಲಿ ಪ್ರಾರ್ಥನೆ.
ದೊಡ್ಡ ಮಾವನ ಆತ್ಮಕ್ಕೆ ಶಾಂತಿ ಸಿಕ್ಕಲಿ..
ನಮ್ಮ ಮೇಲೆ ಹಿರಿಯರ ಆಶೀರ್ವಾದ ಇರಲಿ.
ದೊಡ್ಡಮಾವನ ದೊಡ್ಡ ಆದರ್ಶವ ಅದೇ ರೀತಿಲಿ ದೊಡ್ಡಳಿಯ ಮುಂದುವರಸಲಿ…
ಅವರ ಜೀವನದ ಅನುಭವದ ಆಳ, ವಿಸ್ತಾರ ಬಗ್ಗೆ ತುಂಬಾ ಲಾಯಿಕಲಿ ವಿವರ ಕೊಟ್ಟು ಶ್ರದ್ಧಾಂಜಲಿ ಸಲ್ಲಿಸಿದ ಒಪ್ಪಣ್ಣಂಗೆ ಧನ್ಯವಾದಂಗೊ.
ದೊಡ್ಡ ಮಾವನ ಹತ್ತರಂದ ಕಂಡು ಮುಖತಹ ಮಾತಡದ್ದಿದ್ದರೂ ಬೈಲಿಲ್ಲಿ ಅವರ ಲೇಖನ ಓದಿದ್ದೆ. ನಮ್ಮ ಭಾಷೆಯ ಶಬ್ದಂಗಳ ದೊಡ್ಡ ಸಂಗ್ರಹದ ದೊಡ್ಡಮಾವ ಇನ್ನಿಲ್ಲೆ ಹೇಳುವದು ನವಗೆಲ್ಲರಿಂಗೂ ದೊಡ್ಡ ನಷ್ಟವೇ.
ಅವರ ಅಗಲಿಕೆಯ ದುಃಖವ ಸಹಿಸುವ ಶಕ್ತಿಯ ಪರಮಾತ್ಮ ಅವರ ಕುಟುಂಬದವಕ್ಕೆ ಮತ್ತೆ ಆತ್ಮೀಯರಿಂಗೆ ಕೊಡಲಿ, ಅವರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ.
ಹರೇ ರಾಮ. ರಾಮ ಮಾಸ್ತ್ರ[ದೊಡ್ಡ್ಡಮಾವ] ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ, ಅವರ ಕಳಕ್ಕೊಂಡ ದುಕ್ಕ ಸಹಿಸುತ್ತ ಶಕ್ತಿ ಅವರ ಮನೆಯವಕ್ಕೆ ದೇವರು ಕೊಡಲಿ ಹೇಳಿ ನಾವೆಲ್ಲ ಪ್ರಾರ್ತಿಸುವೊ೦.
RIP ದೊಡ್ಡಮಾವ 🙁
ದೊಡ್ಡಮಾವಂಗೆ ನಮನಂಗೊ.
ದೊಡ್ಡಮಾವ ಇನ್ನಿಲ್ಲೆ ಹೇಳ್ತ ಶುದ್ದಿ ನಿನ್ನೆಯೇ ಕೇಳಿದ್ದೆ. ತುಂಬಾ ಬೇಜಾರು ಆತು. ಅವು ಎನ್ನ ಅತ್ತೆ ಮಗ ಭಾವಯ್ಯ, ಅವರೊಟ್ಟಿಂಗೆ ಇದ್ದು, ಅವರ ಅನುಭವದ ಮಾತುಗಳ ಕೇಳಿದವರಲ್ಲಿ ಆನೂ ಒಬ್ಬ.
ಹಿರಿಯರಾದರೂ ಮಕ್ಕಳ ಹಾಂಗಿಪ್ಪ ಎಂಗಳೊಟ್ಟಿಂಗೆ ಮಕ್ಕಳ ಹಾಂಗೇ ಬೆರೆತು ಸರಿಯಾದ ಮಾರ್ಗದರ್ಶನ ತೋರುಸಿದವು ಅವು. ಒಳ್ಳೆ ಕುಶಾಲಿಲ್ಲಿಯೂ ಮಾತಾಡುಗು. ಎನ್ನ ಅಪ್ಪ (ಬೊಳುಂಬು ಅಜ್ಜ), ಅವರ ಸೋದರ ಮಾವ. ಅವು ಹೇಳಿರೆ ಅವಕ್ಕೆ ಭಾರೀ ಪ್ರೀತಿ. ಅವು ಬರಕ್ಕೊಂಡಿದ್ದಿದ್ದ, ಪದ್ಯ ಕಥೆಗಳ ಪರಸ್ಪರ ವಿಮರ್ಶೆ ಮಾಡಿಯೊಂಡಿದ್ದಿದ್ದು ಈಗಳೂ ನೆಂಪಾವ್ತು. ಎನ್ನ ಅಪ್ಪ ಗತಿಸಿ ಹೋದ ಮೇಲೆ ಅವು ಬರದ ಲೇಖನಂಗಳ ಒಟ್ಟುಗೂಡುಸಿ ಒಂದು ಹಸ್ತಪ್ರತಿ ಮಾಡಿ ಅಪ್ಪಗ, ಅದಕ್ಕೆ ದೊಡ್ಡಮಾವ, ತನ್ನ ಮಾವನ ವ್ಯಕ್ತಿತ್ವದ ಬಗ್ಗೆ ಪ್ರೀತಿಲಿ ಬರದು ಕೊಟ್ಟದು ಈಗಳೂ ಸವಿ ನೆನಪು.
ದೊಡ್ಡ ಮಾವ ನಮ್ಮೊಟ್ಟಿಂಗೆ ಈಗ ಇಲ್ಲದ್ರೂ, ಅವರ ಆದರ್ಶಂಗೊ ಅವರ ನೆನಪುಗೊ ಏವತ್ತುದೆ ನಮ್ಮೊಟ್ಟಿಂಗೆ ಖಂಡಿತಾ ಇಕ್ಕು.
ಎಂಗಳ ಪ್ರೀತಿಯ “ರಾಮ ಭಾವ”ನ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳಿ ಪ್ರಾರ್ಥನೆ.
ದೊಡ್ಡಮಾವನ ಆತ್ಮಕ್ಕೆ ಶಾಂತಿ ಸಿಕ್ಕಲಿ…
ದೊಡ್ಡಮಾವನ ಆತ್ಮಕ್ಕೆ ಶಾಂತಿ ಸಿಕ್ಕಲಿ.
ದೊಡ್ದ ಮಾವನ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳಿ ಪ್ರಾರ್ಥನೆ.
Hare raama….
Doddamavana Baduka -barahango navagella Adarshavagali… avara Atma Devara pada seri sada chira shantili irali….
ಮಾಷ್ಟ್ರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ. ಅವರ ಬರಹ ಓದುದು ಅನುಭವದ ಕಡಲಿಲಿ ಮಿಂದ ಹಾಂಗೆ..! ಹಲವು ವರ್ಷ ಮರಣ ಆಗದ್ದೆ ಒಳಿದರೆ ಎಂತಕ್ಕು ಹೇಳಿ ಊಹೆ ಮಾಡಿ ಬೈಲಿಲಿ ಒಂದು ಕತೆ ಬೈಂದನ್ನೆ? ಅದು ಅವು ಬರದ್ದದಲ್ಲದೊ?ಇಂದು ಪುನಃ ಅದರ ಓದಿದೆ.
ಮಾಷ್ಟ್ರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ. ಅವರ ಬರಹ ಓದುದು ಅನುಭವದ ಕಡಲಿಲಿ ಮಿಂದ ಹಾಂಗೆ..! ಹಲವು ವರ್ಷ ಮರಣ ಆಗದ್ದೆ ಒಳಿದರೆ ಎಂತಕ್ಕು ಹೇಳಿ ಊಹೆ ಮಾಡಿ ಬೈಲಿಲಿ ಒಂದು ಕತೆ ಬೈಂದನ್ನೆ? ಅದು ಅವು ಬರದ್ದದಲ್ಲದೊ?
ಬೈಲಿನ ಹೆರಿತಲೆ ದೇವರ ಪಾದ ಸೇರಿದವು.ತಲೆಮಾರುಗಳ ನೆಡುಗಾಣ ಕೊ೦ಡಿ ಒ೦ದು ತು೦ಡಾದ ಹಾ೦ಗೆ ಅನುಸುತ್ತು,ಮನಸ್ಸಿ೦ಗೆ.
ದೊಡ್ಡಮಾವನ ವೆಗ್ತಿತ್ವ,ಅವರ ಆದರ್ಶ೦ಗೊ ನವಗೆಲ್ಲ ದಾರಿಯ ಬೆಣಚ್ಚಿ ಆಗಿರಳಿ.
ಶೃದ್ಧಾ೦ಜಲಿ.
ತುಂಬಾ ಬೇಜಾರದ ಶುಧ್ಧಿ.
ಬೈಲಿನ ದೊಡ್ಡಮಾವನ ಆತ್ಮಕ್ಕೆ ಶಾಂತಿ ಸಿಕ್ಕಲಿ, ಅವರ ಕುಟುಂಬದವಕ್ಕೆ, ಬೈಲಿನ ಎಲ್ಲೋರಿಂಗೆ, ಅವರ ಅಗಲುವಿಕೆಯ ಸಹಿಸುವ ಶಕ್ತಿ ದೇವರು ನೀಡಲಿ.
ಹರೇ ರಾಮ.
ವಿಷಾದಂಗೊ. ದೊಡ್ಡಮಾವನ ನೇರ್ಲಿ ಕಂಡು ನವಗರಡಿಯದ್ದರೂ ಬೈಲಿಲಿ ಓದಿದ ದೊಡ್ಡ ಮಾವನ ಶುದ್ಧಿಗೊ ಅವರ ದೊಡ್ಡತನವ ಎತ್ತಿ ತೋರ್ಸುತ್ತು. ಪ್ರಾಯಲ್ಲಿ ಮಾಂತ್ರ ದೊಡ್ಡಂವ° ಆಗಿರದ್ದೆ ಅನುಭವಲ್ಲಿಯೂ ಅವ್ವು ದೊಡ್ಡವೆ. ದೊಡ್ಡ ಮಾವನ ಮೋರೆ ಬೈಲಿಲಿ ಫಟಲ್ಲಿ ಸುರೂ ನೋಡಿಯಪ್ಪಗಳೇ ಗ್ರೇಶಿತ್ತಿದ್ದೆ ಇವ್ವು ಬರೇ ಮೋರೆ ಮುಂಡಾಸು ಮಾಂತ್ರ ದೊಡ್ಡವಲ್ಲ ಇವರ ವಿಷಯವೂ ದೊಡ್ಡದಿಕ್ಕು ಹೇದು.
ಈ ಶುದ್ದಿ ಅವರ ಸಮಗ್ರ ಪರಿಚಯವ ಸೂಕ್ಷ್ಮಲ್ಲಿ ನೀಡಿ ಬೈಲಿಲ್ಲಿ ಎಂದೂ ನೆಂಪುನಿಂಬಾಂಗೆ ಮಾಡಿತ್ತು. ಅವರ ಪ್ರಭಾವಳಿ ಬೈಲಿಲಿ ಏವತ್ತೂ ಪ್ರಕಾಶಿಸಿಗೊಂಡಿರಲಿ, ಪ್ರತಿಫಲಿಸಿಗೊಂಡಿರಲಿ. ಅವಕ್ಕೆ ಸದ್ಗತಿ ಪ್ರಾಪ್ತಿಯಾಗಲಿ, ಕುಟುಂಬದೋರಿಂಗೆ ಅವರ ಅಗಲುವಿಕೆಯ ಸಹುಸುವ ಶಕ್ತಿಯ ಆ ಭಗವಂತ° ಕರುಣಿಸಲಿ ಹೇಳಿ ಬೈಲ ಸಂತಾಪದೊಟ್ಟಿಂಗೆ ಇತ್ಲಾಗಿಂದ ಹರೇ ರಾಮ ಹೇಳುತ್ತು.