ದೊಡ್ಡಜ್ಜ° ಹಾಂಗೊಂದು ಅಂಬೆರ್ಪು ಮಾಡಿಕ್ಕಿ ನಮ್ಮ ಬಿಟ್ಟಿಕ್ಕಿ ಹೋದವಲ್ಲದೋ – ಆ ವಾರ ಇಡೀ ಹಾಂಗಾತು.
ನಾಳೆ-ನಾಡ್ತಾಗಿ ಅಲ್ಲಿ ಉತ್ತರಕ್ರಿಯಾದಿ ಕಾರ್ಯಕ್ರಮಂಗೊ ಆವುತ್ತು – ಒಂದು ಗಳಿಗ್ಗೆ ಹೋಯೇಕು.
ದೊಡ್ಡಜ್ಜ° ಇಲ್ಲದ್ದ ದೊಡ್ಡಜ್ಜನಮನೆ ಹೇಂಗಿರ್ತು – ಇಷ್ಟನ್ನಾರ ಒಪ್ಪಣ್ಣ ಹೋಗಿಪ್ಪಾಗ ಅವು ಇದ್ದೇ ಇತ್ತಿದ್ದವು; ಈ ಸರ್ತಿ ನೋಡೇಕು!
ಈ ಸರ್ತಿ ಹೋಗಿಪ್ಪಾಗ ಜಾಲಕೊಡಿಯಂದಲೇ “ಬಾ ಒಪ್ಪಣ್ಣ” ಹೇಳವು; “ತೋಟಕ್ಕೆ ಹೋಪೊ°” ಹೇಳಿ ನುಸಿ ಕಚ್ಚುಸುವ ಹೆದರಿಕೆ ಇಲ್ಲೆ ಇದಾ! 🙁
ಕಾಲನ ಮೈಮೆ. ಅದಿರಳಿ..
~
ಯೇವದೇ ವಸ್ತು ಆಗಿರಳಿ, ನಮ್ಮ ಕೈಕ್ಕಾಲಿಂಗೆ ತಾಂಟುತ್ತಾಂಗೆ “ಧಾರಾಳ” ಆಗಿದ್ದರೆ ಅದರ ಮೌಲ್ಯ ನವಗೆ ಅರಡಿಯ.
ಅದರ ಬೆಲೆ ಅರಡಿಯೇಕಾರೆ ಆ ವಸ್ತು ಇಲ್ಲದ್ದೆ ಆಯೇಕು; ಕಾಣೆ ಆಯೇಕು; ನವಗೆ ಸಿಕ್ಕದ್ದ ಹಾಂಗೆ ಆಯೇಕು – ಹೇಳಿ ಶಂಬಜ್ಜ° ಒಂದೊಂದರಿ ಹೇಳುಗಡ.
ಎಷ್ಟೋ ವಿಶಯಂಗೊ ವಸ್ತುಗೊ ನಾವು ಗೋಷ್ಬಾರಿ ಮಾಡಿ ಉದಾಸ್ನ ಮಾಡ್ತು; ಆದರೆ ಆ ವಿಶಯ ನಮ್ಮಂದ ಸಂಪೂರ್ಣ ದೂರ ಆದ ಮತ್ತೆ “ಛೇ, ಮದಲು ಹೀಂಗೆ ಮಾಡ್ತಿತೇನ್ನೇ” ಹೇದು ಕಂಡುಹೋಕಡ. ದೊಡ್ಡಜ್ಜ° ಹೋದ ಮತ್ತೆಯೋ ಏನೋ – ಈಗೀಗ ಆ ಬಗ್ಗೆ ತುಂಬ ನೆಂಪಾವುತ್ತು!
ನಮ್ಮೆದುರೇ ಅಪ್ಪ ಕೆಲವು ಸನ್ನಿವೇಶಂಗಳ ನೋಡುವಾಗ ಈ ವಾರ ಆ ಶುದ್ದಿಯನ್ನೇ ಮಾತಾಡಿರೆ ಹೇಂಗೇದು ಕಾಂಬದು ಒಪ್ಪಣ್ಣಂಗೆ!
~
ನಾವು ಹಾತೊರದರೆ ಎಲ್ಲವೂ ಹಾಂಗೇ.
ಕೈಗೆ ಸಿಕ್ಕುವನ್ನಾರ ನಮ್ಮ ಮನಸ್ಸು ಅದಕ್ಕೆ ಭಯಂಕರ ಬೆಲೆ ಕಟ್ಟುತ್ತು.
ಕೈಂದ ಇಡ್ಕಿ (ಕಳದು) ಹೋದ ಮತ್ತೆಯೂ ಭಯಂಕರ ಬೆಲೆ ಕಟ್ಟುತ್ತು.
ಕೈಲಿ ಇಪ್ಪಗ ಅದರ ಗೋಶುಬಾರಿ ಮಾಡಿ ಬಿಡ್ತು! ಅದುವೇ ಜೀವನ. ಅಲ್ಲದೋ? – ಹೇಳುಗು ಶಂಬಜ್ಜ°.
ಅಜ್ಜಕಾನ ಭಾವಂಗೆ ಸಿನೆಮ ನೋಡ್ತ ಅಭ್ಯಾಸ ಇದ್ದಲ್ಲದೋ – ಅವ° ಹೇಳಿತ್ತಿದ್ದ°, ಸಿನೆಮಂಗಳಲ್ಲಿಯೂ ಇದೇ ನಮುನೆ ಕತೆಗೊ ಇರ್ತಾಡ. ಮಾಣಿಯೂ ಕೂಸುದೇ ಒಟ್ಟಿಂಗಿಪ್ಪಾಗ ಬೆಲೆ ಅರಾಡಿಯದ್ದೆ, ಮಾಣಿ ಕೂಸಿನ ಕಳಕ್ಕೊಂಡಪ್ಪಗ ಅತವಾ ಕೂಸು ಮಾಣಿಯ ಕಳಕ್ಕೊಂಡಪ್ಪಗ – ಅಯ್ಯೋ ಎಲ್ಲ ಹೋತು ಹೇಳ್ತ ಹಾಂಗೆ ಕೂಗಿಂಡು ಪದ ಹೇಳ್ತವಾಡ!
ಸಿನೆಮಲ್ಲಿ ಆಯೇಕು ಹೇದು ಏನಿಲ್ಲೆ, ಮಾಣಿ ಕೂಸೇ ಆಯೇಕು ಹೇದು ಏನಿಲ್ಲೆ, ನಮ್ಮ ನಿತ್ಯಜೀವನಲ್ಲಿಯೂ ಹಾಂಗೇ! ಅಲ್ಲದೋ?
~
ಸಣ್ಣ ಇಪ್ಪಾಗ ಒಪ್ಪಣ್ಣನ ಅಂಗಿಯ ಅಟ್ಟಿಲಿ ಒಂದು ಕಳಕಳದ ಅಂಗಿ ಇದ್ದತ್ತು.
ಆ ಅಂಗಿ ಕಾಂಬಲೆ ವಿಶೇಷ ಅಲ್ಲ; ಅದರ ಒಸ್ತ್ರ ವಿಶೇಷ ಅಲ್ಲ, ಅದರ ಕ್ರಯ ವಿಶೇಷ ಅಲ್ಲ – ಒಪ್ಪಣ್ಣನ ಅಣ್ಣ ಪ್ರೀತಿಲಿ ತೆಗದು ಕೊಟ್ಟ ಅಂಗಿ ಅದು – ಅದೇ ವಿಶೇಷ. ಆ ಅಂಗಿಯ ಯೇವ ಜೆಂಬ್ರಕ್ಕೂ ಹಾಕಿದ್ದು ಒಪ್ಪಣ್ಣಂಗೂ ನೆಂಪಿಲ್ಲೆ. ಆದರೂ – ಅದು ತುಂಬಾ ವಿಶೇಷ. ಅಟ್ಟಿಲಿ ಅದರಷ್ಟಕ್ಕೇ ಇದ್ದತ್ತು; ಪ್ರತಿ ಸರ್ತಿ ಅದರ ಕಾಂಬಗಳೂ – ಅಣ್ಣ ಕೊಟ್ಟ ಅಂಗಿ- ಹೇಳ್ಸು ನೆಂಪಾಗಿಂಡಿದ್ದತ್ತಷ್ಟೆ.
ಒಂದಾರಿ ಎಂತಾತು ಹೇದರೆ – ಒಪ್ಪಣ್ಣ ಸಣ್ಣ ಇಪ್ಪಾಗ ಕುಂಞಿತ್ಲು ಕುಂಞಿಡಾಗುಟ್ರ ಮದುವೆ ಬೆಂಗುಳೂರಿಲಿ ಕಳಾತಲ್ಲದೋ! ಬಸ್ಸಿಲಿ ಹೋವುತ್ತಬತ್ತ ವೆವಸ್ತೆ ಇದ್ದಕಾರಣ ದಾರಿ ತಪ್ಪಲಿಲ್ಲೆ ಇದಾ – ಒಪ್ಪಣ್ಣನೇ ಹೋದ್ಸು!
ಹಾಂಗೆ ಹೋಪಗ ಈ ಅಂಗಿ “ಮದುವೆಗೆ ಹಾಕಲೆ ಹೇದು” ಬೇಗಿಲಿ ತುಂಬುಸಲೆ ನೆಂಪಿಲಿ ಮಡಗಿತ್ತಿದ್ದು!
ಊರಿಂದ ಹೆರಟು, ಬೆಂಗುಳೂರಿಂಗೆ ಎತ್ತಿ, ಬೆಂಗುಳೂರಿಲಿ ಮೀಯಾಣ ಎಲ್ಲ ಆಗಿ – ಅಂಗಿ ಹಾಕಲೆ ನೋಡ್ತೆ – ಬೇಗಿಲಿ ಆ ಅಂಗಿ ಕಾಣ್ತಿಲ್ಲೆ! ತುಂಬುಸೆಂಡು ಹೆರಟ ಹಾಂಗೆ ನೆಂಪು; ಆದರೆ ಬೇಗಿಲಿ ಕಾಣ್ತಿಲ್ಲೆ. ಎಲ್ಲಿ ಹೋಗಿಕ್ಕು? ಬಸ್ಸಿಲಿ ಏನಾರು? ಛೇ; ಅಲ್ಲ, ಕುಂಞಿತ್ಲಿಲಿ ಅಂಬೆರ್ಪಿಲಿ ಏನಾರು? ಅಲ್ಲ ಮೀಯಲೆ ಹೋಗಿಪ್ಪಾಗ ಆರಾರು..? ಛೇ ಛೇ!!
ಆ ಮದುವೆ ಜೆಂಬ್ರ ಇಡೀ ಈ ಅಂಗಿದೇ ತಲೆಲಿ. ಅಣ್ಣ ತೆಗದು ಕೊಟ್ಟ ಅಂಗಿ; ಅಯ್ಯೋ – ಹೋತಾನೇ!
ಎಲ್ಲಿ ಹೋತಪ್ಪಾ? ಛೇ, ಅದರ ಒಸ್ತ್ರ ಭಾರೀ ಚೆಂದ ಇತ್ತು; ಕಾಂಬಲೂ ಹಾಂಗೇ – ಅದರ ಬಣ್ಣವೇ ಕಣ್ಣಿಂಗೆ ಒಂಬುತ್ತ ನಮುನೆದು; ಅದರ ಉದ್ದಗಲ ಹಾಳಿತ ಎನಗೆ ಸರೀ ಆವುತ್ತ ನಮುನೆದು; ಎಲ್ಲಿ ಹೋತಪ್ಪಾ!
ಜೆಂಬ್ರಲ್ಲಿ ಉಂಡಿದನೋ, ಒಸಗೆ ಮಾಡಿದನೋ ನೆಂಪಿಲ್ಲೆ.
ಒಪಾಸು ಬಸ್ಸಿಲಿ ಊರಿಂಗೆತ್ತಿ, ಮನಗೆತ್ತಿ ಕವಾಟಿಲಿ ಕಣ್ಣಿಂಗೆ ಕಾಂಬನ್ನಾರ – ಅದೇ ಇದ್ದದು ತಲೆಲಿ.
ಈ ಅಪ್ರೂಪಲ್ಲಿ ಬೆಂಗುಳೂರಿಂಗೆ ಹೆರಡಾಣದ ಗವುಜಿಲಿ ಅಂಗಿ ಕವಾಟಿಲೇ ಬಾಕಿ ಆಗಿದ್ದತ್ತು ಇದಾ. 😉
ಬೆಂಗುಳೂರಿಂಗೆ ಹೋಪ ಮದಲೂ ಆ ಅಂಗಿಯ ಅಷ್ಟಾಗಿ ಹಾಕಿದ್ದಿಲ್ಲೆ, ಬಂದ ನಂತರವೂ ಹಾಕಿದ್ದು ಇಂತಿಷ್ಟೇ ಹೇಳಿ ಇದ್ದು.
ಆದರೆ, ಅದು ಇಡ್ಕಿಹೋತೋ ಹೇದು ಅಪ್ಪಾಗ “ಅಯ್ಯೋ ಹೋತಾನೇ” ಹೇದು ಆದ್ಸು ಮನಸ್ಸಿಂಗೆ. ಅಟ್ಟೇ!
ಅದು ಕೈಲೇ ಇಪ್ಪಗಳೂ ಅದರ ಬೆಲೆ ಗೊಂತಿತ್ತಿಲ್ಲೆ; ಸಿಕ್ಕಿದ ಮೇಗೂ ದೊಡ್ಡ ವಿಶೇಷ ಆಯಿದಿಲ್ಲೆ. ಆದರೆ ಇಡ್ಕಿ ಹೋತು ಹೇಳಿ ಅಪ್ಪಗ ಭಾರೀ ಬೆಶಿ! ಅದರ ಬಗ್ಗೆ ಇಪ್ಪ ಎಲ್ಲಾ ಬಾವನೆಗೊ, ಎಲ್ಲಾ ಘಟನೆಗೊ ಅಂಬಗಳೇ ನೆಂಪಪ್ಪದು ಜಾಸ್ತಿ!!
ಈಗ ಆ ಅಂಗಿಯ ಕೊಟ್ರೂ ಹಾಕಲೆಡಿಯ. ಅದಿರಳಿ!
~
ನೆರಿಯದಜ್ಜಂಗೆ ಪೂಜೆ ಅರಡಿಗು. ಪೂಜೆಗೆ ಕೂಪಗ ಪವಿತ್ರ ಬೇಕಿದಾ – ಪ್ರತೀ ಸರ್ತಿ ಪವಿತ್ರ ಕಟ್ಟುಸ್ಸೆಂತಕೆ ಹೇದು ಒಂದು ಪವಿತ್ರ ಉಂಗಿಲು ಮಾಡಿದವಾಡ – ಚಿನ್ನದ್ದಲ್ಲ, ಚೆಂಬಿಂದು.
ಅಂಬಗಾಣ ಕಾಲಲ್ಲಿ ಚಿನ್ನಕ್ಕೆ ಬಂಙ ಇದಾ. ಮತ್ತೆ ಚಿನ್ನವೇ ಆಯೇಕು ಹೇದು ಹಟ ಹಿಡಿಯಲೆ ಆಟಿಸಮ್ಮಾನಕ್ಕೆ ಮಾಡುಸುತ್ತ ನಮುನೆದಲ್ಲ; ಪೂಜಗಿಪ್ಪದು – ಪವಿತ್ರ ಉಂಗಿಲು! ಶುದ್ಧಲ್ಲಿ ಪೂಜಗೆ ಕೂದಿಪ್ಪಾಗ ಮಾಂತ್ರ ಹಾಕಿಂಡಿದ್ದದಾಡ.
ಆರ್ಥಿಕ ಸಂಕಷ್ಟ ಇಪ್ಪಾಗ ಅವರ ಮೇಗೆ ತಂದದೇ ಈ ಪೂಜಾ ಕಾರ್ಯಂಗೊ ಇದಾ – ಹಾಂಗಾಗಿ ಆ ಪವಿತ್ರ ಉಂಗಿಲು ಅವರ ಜೀವನದ ಅವಿಭಾಜ್ಯ ಅಂಗ ಆಗಿದ್ದತ್ತು.
ಒಂದು ದಿನ ಇದ್ದಕ್ಕಿದ್ದ ಹಾಂಗೇ ಆ ಪವಿತ್ರ ಉಂಗಿಲು ಕಾಣೆ!
ಎಲ್ಲಿಯೋ ಪೂಜಗೆ ಹೋದಲ್ಲಿ ಇಡ್ಕಿ ಹೋದ್ಸೋ, ಅಲ್ಲ ಮನೆಲೇ ಪೂಜೆ ಮಾಡುವಗ ಎಣ್ಣೆಪಸೆಗೆ ಮೆಲ್ಲಂಗೆ ಪೀಂಕಿ ಹೂಗಿನೊಟ್ಟಿಂಗೆ ಬಿದ್ದದೋ, ಅಲ್ಲ ಪೂಜೆ ಆಗಿ ದನಗೊಕ್ಕೆ ಗೋಗ್ರಾಸ ಕೊಡುವಗ ಬಿದ್ದುಹೋದ್ಸೋ – ಗೊಂತಿಲ್ಲೆ. ಆದರೆ ಆ ಉಂಗಿಲು ಕಾಣೆ.
ಅದಾದ ಮತ್ತೆ ಅದೆಷ್ಟೋ ಸಾವಿರ ಪೂಜೆ ಮಾಡಿಕ್ಕು, ದೀರ್ಘಾಯುಷ್ಯ ಎಂಭತ್ತೈದು ಒರಿಶ ಒರೆಂಗೆ.
ಅವರ ಆಯಿಸ್ಸಿನ ಕೊನೆಗಾಲ – ಹತ್ತು ಎಂಭತ್ತೈದು ಒರಿಶ ಅಪ್ಪಗ ಮನಸ್ಸು ರಜಾ ಅಮಲಿನ ಹಾಂಗೆ ಇದ್ದತ್ತಾಡ.
ಅಷ್ಟಪ್ಪಗ ಮನುಗಿದಲ್ಲಿಂದ ಎದ್ದುಕೂದು ಹೊದಕ್ಕೆಯ ಎಡೆಲಿ ಹುಡ್ಕಿಗೊಂಡಿತ್ತಿದ್ದವಾಡ – ಎಂತರ? “ಪವಿತ್ರ ಉಂಗಿಲು ಕಾಣೆ ಆಯಿದು” ಅದರ!!
ಅವರ ಒಂದೇ ಉಂಗಿಲು ಹಾಂಗೆ ಕಾಣೆ ಆಗಿದ್ದ ಸಮೆಯಲ್ಲಿ ಮನಸ್ಸಿಂಗೆ ತುಂಬ ಹಚ್ಚಿಗೊಂಡಿದವಾಡ; ಸುಮಾರು ಹುಡ್ಕಿದ್ದವಾಡ ಆ ಸಮೆಯಲ್ಲಿ. ಮತ್ತೆ ಜೀವಿತದ ಕೊನೆಗಾಲಲ್ಲಿ ಪುನಾ ಆ ಪವಿತ್ರ ಉಂಗಿಲು ನೆಂಪಾಗಿ ತುಂಬ ಬೇಜಾರಾಗಿತ್ತು.
ಹತ್ತೂ ಕೈಗೆ ಉಂಗಿಲು ಹಾಕುವ ಅನುಕೂಲ ಇದ್ದತ್ತು, ಆದರೂ – ಆ ಒಂದು ಉಂಗಿಲು ಅವರ ಮನಸ್ಸಿಂದ ಹೋಗಿತ್ತಿಲ್ಲೆ!
ಕೈಲಿ ಇಪ್ಪಗ ಅದರ ಬೆಲೆ ಬರೇ ಹತ್ರುಪಾಯಿ ಆಗಿಕ್ಕು; ನೂರು ರುಪಾಯಿ ಆಗಿಕ್ಕು.
ಆದರೆ, ಅದು ಇಡ್ಕಿಹೋದ ಮತ್ತೆ ಅದರ ಬೆಲೆ – ಎಷ್ಟೋ ಸಾವಿರ ರುಪಾಯಿಯ ಹಾಂಗೆ – ಮನಸ್ಸಿನ ಪೂರ್ತಿ ತೆಕ್ಕೊಂಡಿದ್ದತ್ತು!
ಅಲ್ಲದೋ?
~
ಕಾನಾವಣ್ಣನ ನೆರೆಕರೆಲಿ ತೆಂಗಿನಹಿತ್ಲು ಹೇಳ್ತ ಜಾಗೆ ಇದ್ದು.
ಅಜ್ಜನಕಾಲಂದ ಬಂದ ಹತ್ತೆಕ್ರೆ ಜಾಗೆಲಿ ಚೆಂದಕೆ ಬದ್ಕಿತ್ತಿದ್ದವು ರಾಮಮಾವ°. ಅವರ ಮಗ° ಶಂಕರಭಾವಂಗೆ ಒಯಿವಾಟು ಸಿಕ್ಕಿ ಅಪ್ಪದ್ದೇ – ಇದೆಲ್ಲ ಕಷ್ಟ ಹೇದು ಅನುಸಲೆ ಸುರು ಆತು. ಅಂಬಗ ಯೇವದಕ್ಕೂ ಕ್ರಯ ಇದ್ದತ್ತಿಲ್ಲೆ ಇದಾ – ಹತ್ತೊರಿಶ ಹಿಂದೆ – ಆ ಜಾಗೆಯ ಮೂರುಕಾಸಿಂಗೆ ಮಾರಿ ಕೊಡೆಯಾಲಲ್ಲಿ ಪೇಟೆಬಿಡಾರ ಮಾಡಿ ಕೂದುಗೊಂಡ°.
ರಾಮಮಾವ° ಇದ್ದಿದ್ದರೆ ಬೇಜಾರು ಮಾಡಿಗೊಳ್ತಿತವು – ಹೇದು ಅವರ ಎಜಮಾಂತಿ ಗಂಗತ್ತೆ ಹೇಳಿದ್ದರ ಆರುದೇ ಕೇಳಿದ್ದವಿಲ್ಲೆ!
ಶಂಕರಭಾವಂಗೆ ಪೇಟೆಲಿ ಅಂತೇ ಕೂದರೆ ಹೊಟ್ಟೆ ತುಂಬುತ್ತೋ? ಸಂಸಾರ ತೂಗೇಕು ಹೇದು ಸಣ್ಣ ಅಂಗುಡಿ ಮಡಗಿದನಾಡ.
ಕ್ರಮೇಣ ಅಂಗುಡಿಯೂ ಚೆಂದಕ್ಕೇ ನೆಡದತ್ತು ಹೇಳುವೊ° – ಒಂದರ ಮೇಗೆ ಒಂದು ಮಾಳಿಗೆ ಎಲ್ಲ ಬಿದ್ದತ್ತು.
ಆದರೊಂದು ಸಂಗತಿ ಆಯಿದು – ಮನೆಗೆ ಬಂದರೆ ಗಂಗತ್ತೆ ದಿನಾಗುಳೂ ಹೇಳ್ತಾಡ – ಆ ಜಾಗೆ ಇದ್ದಿದ್ದರೆ… ಹೇದು.
ಅವರ ಯೆಜಮಾನ್ರು ರಾಮಮಾವ° ಮನುಗಿದಲ್ಲೇ ಮಣ್ಣಾಯೇಕು ಹೇಳ್ತದು ಗಂಗತ್ತೆಯ ಆಶೆ. ಅಬ್ಬೆ ಹೇಳ್ಸರ ಕೇಳಿಕೇಳಿ ಈಗ ಮಗಂಗೂ ಆ ಬಗ್ಗೆ ಯೇಚನೆ ಬಪ್ಪಲೆ ಸುರು ಆತಾಡ – ಆ ಜಾಗೆ ಪುನಾ ಮಾಡಿಗೊಂಬೊ° ಹೇದು.
ಈಗ ಕ್ರಯ ಕಂಡಾಬಟ್ಟೆ ಏರಿದರೂ – ಕೈಲಿ ಇಪ್ಪ ಪೈಶೆಲಿ ಇನ್ನೊಂದು ಅಷ್ಟೇ ದೊಡ್ಡ ಇನ್ನೊಂದು ಜಾಗೆ ಮಾಡ್ಳೆಡಿಗು ಶಂಕರಭಾವಂಗೆ. ಆದರೆ, ಇನ್ನೊಂದು ಜಾಗೆ ಮಾಡಿರೆ ಪಿತ್ರುಗಳ ಇಡೀ ಸಾಂಕಿದ, ತನ್ನ ಬಾಲ್ಯವ ಕಂಡ “ಆ ಜಾಗೆ ಮಾಡಿದ” ಹಾಂಗಕ್ಕೋ?
ಅಪ್ಪ° ಮನುಗಿದ ಜಾಗೆ ಕೊಡೆಕ್ಕಾತಿಲ್ಲೆ ಹೇದು ನಿತ್ಯವೂ ಕಾಂಬಲೆ ಸುರು ಆಯಿದು! ಇದರೆಡಕ್ಕಿಲಿ ಆ ಜಾಗೆಯ ಈಗಾಣ ಸ್ಥಿತಿ-ಪರಿಸ್ಥಿತಿಗಳ ನೋಡೆಂಡು, ಸಾಧ್ಯ ಆದರೆ ಕ್ರಯಚ್ಚೀಟು ಮಾಡ್ಸೆಂಡು ಬಪ್ಪೆಲೆ ಹೆರಟನಡ ಒಂದರಿ.
ಏಯ್, ಈ ಭಾವನ ಕೈಂದ ತೆಕ್ಕೊಂಡ ಜೆನ ಮತ್ತೆ ಆರಿಂಗೋ ಕೊಟ್ಟು, ಅಲ್ಲಿಂದ ಇನ್ನಾರಿಂಗೋ ಹೋಗಿ – ಈಗ ಆ ಜಾಗೆಲಿ ಒಂದು ಪಳ್ಳಿ ತುಂಬುತ್ತಷ್ಟು ಸಂಸಾರ ಇದ್ದಾಡ!
ಆ ಜಾಗೆ ಇನ್ನು ಸಿಕ್ಕುತ್ತೇ ಇಲ್ಲೆ ಹೇದು ಗೊಂತಾದ ಮತ್ತೆ ಅದರ ಬಗ್ಗೆ ಒಲವುದೇ ಕಂಡಾಬಟ್ಟೆ ಜಾಸ್ತಿ ಆಯಿದಾಡ!
ಕೈಲಿಪ್ಪಗ ಬೇಡ, ಒಂದರಿ ಕೊಡುವೊ° – ಹೇದು ಕಂಡುಗೊಂಡಿತ್ತು. ಈಗ ಕೊಟ್ಟು ಕೆಟ್ಟೆ, ಅದು ಬೇಕಾತು – ಅನುಸೆಂಡಿದ್ದು.
ಒಪಾಸು ಸಿಕ್ಕುತ್ತಿಲ್ಲೆ ಹೇದು ಗೊಂತಾದ ಮತ್ತೆ ಅದರ ಬೆಲೆ ಗೊಂತಾದ್ದು ಭಾವಯ್ಯಂಗೆ!
ಎಲ್ಲವೂ ಕಾಲನ ಮೈಮೆ!
~
ಬೆಟ್ಟುಕಜೆಮಾಣಿ ಓ ಮನ್ನೆ ಕುಂಟಾಂಗಿಲ ಭಾವಂಗೆ ಪೋನು ಮಾಡಿತ್ತಿದ್ದ°.
ಅಂತೇ ಪೋನುಮಾಡಿದ್ದ° ಹೇಳುಲೆ ಒಪ್ಪಣ್ಣಂಗೆ ಲೊಟ್ಟೆ ಅರಡಿಯ – ಕುಂಟಾಂಗಿಲ ಭಾವಂಗೆ ಪೋನು ಬಪ್ಪಗ ನಾವೂ ಅಲ್ಲೇ ಇದ್ದ ಕಾರಣವೇ ನವಗೆ ಗೊಂತಾದ್ದು ಇದಾ!
ಬೆಟ್ಟುಕಜೆ ಮಾಣಿಗೆ ಎಂತಾರು ಭಾವನೆಗಳ ಹಂಚಿಗೊಳೇಕು ಹೇದು ಜಾನ್ಸಿರೆ ಸೀತ ಕುಂಟಾಂಗಿಲಭಾವಂಗೇ ಪೋನುಬಡಿಸ್ಸಡ. ಅವ್ವಿಬ್ರು – ವೇಷ್ಟಿ ಎರಡು – ಶಾಲು ಒಂದು – ಹೇದು ಹಳೆಮನೆ ಅಣ್ಣ ಒಂದೊಂದರಿ ಮೋರೆಪುಟಲ್ಲಿ ನೆಗೆಮಾಡುಗು! 😉
ಅದಿರಳಿ.
ಮೊನ್ನೆ ಬೆಟ್ಟುಕಜೆಮಾಣಿ ಪೋನುಮಾಡಿದ್ದು ಎಂತ್ಸಕೆ ಹೇದರೆ – ಅವಂಗೆ ಎರಡು ಶುದ್ದಿಗೊ ಒಟ್ಟೊಟ್ಟಿಂಗೆ ಬಂದ ವಿಚಿತ್ರ ಸನ್ನಿವೇಶ ಆದ್ಸಡ.
ಒಂದು ಶುದ್ದಿ – ಬೆಟ್ಟುಕಜೆಮಾಣಿ ಸೋದರಮಾವ° ಆದ ಶುಭಶುದ್ದಿ.
ಇನ್ನೊಂದು? – ಬೆಟ್ಟುಕಜೆಮಾಣಿಯ ಸೋದರಮಾವ° ತೀರಿಹೋದ ಅಶುಭ!
ಒಂದರ್ಲಿ ಕೊಶಿ, ಇನ್ನೊಂದರ್ಲಿ ಬೇಜಾರ.
ಒಂದರ್ಲಿ ಬಾಬೆಯ ನೋಡ್ತ ತವಕ; ಇನ್ನೊಂದರ್ಲಿ ಸಣ್ಣ ಬಾಬೆ ಆಗಿಪ್ಪಾಗ ನೋಡಿಂಡ ಮಾವ° ಇನ್ನಿಲ್ಲದ್ದೆ ಆದ್ಸು!
ತಾನು ಸೋದರಮಾವ° ಆದ ಕೊಶಿಯ ಒಟ್ಟೊಟ್ಟಿಂಗೇ – ಈ ಹೊಸಾ ಸೋದರಮಾವನ ಕಾಂಬಲೆ ತನ್ನ ಸೋದರಮಾವನೂ ಇರೇಕಾತು – ಹೇಳ್ತ ಬೇಜಾರ ಆಯಿದಾಡ!
ಆ ಭಾವನೆಯೇ ಅವನ ಬೇಜಾರಲ್ಲಿ ಮಡಗಿದ್ಸಡ. ಈಗ ಆ ಸೋದರಮಾವ° ಇಲ್ಲೆ ಹೇಳಿದ ಮತ್ತೆ ಅವರ ಬಗ್ಗೆ ನೆಂಪುಗೊ ಜಾಸ್ತಿ ಬಪ್ಪದಾಡ. ಅವು ಬೇಕೇ ಬೇಕಾತು – ಹೇದು ಅನುಸುದಾಡ.
ಎಲ್ಲವೂ ಕಾಲನ ಮೈಮೆ!
~
ಮನಿಶ್ಶರಿಂಗೆ ಪೈಶೆಯ ಬಗ್ಗೆ ಭಾವನೆಯೂ ಸಾಮಾನ್ಯ ಇದೇ ನಮುನೆ– ಕೈಲಿ ಧಾರಾಳ ಇಪ್ಪಗ ಅದರ ಬೆಲೆಯೇ ಗೊಂತಾವುತ್ತಿಲ್ಲೆ.
ಕೈಲಿ ಏನಿಲ್ಲೆ ಹೇದು ಅಪ್ಪಗ – ಛೇ, ಹತ್ರುಪಾಯಿ ಇದ್ದರೆ ಹೊಟ್ಟೆ ತುಂಬುಸುವೆ, ನೂರ್ರುಪಾಯಿ ಇದ್ದರೆ ಅಂಗಿ ತೆಗವೆ, ಸಾವಿರ ಇದ್ದರೆ ಇನ್ನೇನೋ, ಲಕ್ಷ ಇದ್ದಿದ್ದರೆ ಕಾರು ತೆಗೆತ್ತಿತೆ – ಹೀಂಗೇ ಕಂಡುಗೋಂಡೇ ಹೋಪದಿದಾ!
ಏನಾರಾಗಿ ಕೈಂದ ಪೈಶೆ ಕಳಕ್ಕೊಂಡ್ರೂ ಅದೇ ನಮುನೆ – ಛೇ, ಇದ್ದಿಪ್ಪಗ ಅದರ ತೆಗವಲಾವುತಿತು; ಹಾಂಗೆ ಕರ್ಚು ಮಾಡ್ಳಾವುತಿತು; ಹೀಂಗೆ ಮಾಡ್ಳಾವುತಿತು, ಒಳಿಶಲಾವುತಿತು – ಹೇದು ಬೇಜಾರಮಾಡಿಂಡು ಕೂರುಸ್ಸು ಮನಿಶ್ಶನ ಕ್ರಮ.
ಪೈಶೆ ಕೈಗೆ ಬಪ್ಪ ಮದಲೂ, ಕೈಂದ ಹೋದ ಮತ್ತೆಯೂ ಅದರ ಬಗ್ಗೆಯೇ ಹಾತೊರವದು!
~
ಪೈಶೆ, ಅಂಗಿ, ಉಂಗಿಲು – ಎಲ್ಲವೂ ಹೋಗಲಿ; ಒಂದು ಹೋದರೆ ಇನ್ನೊಂದು ತಪ್ಪಲಕ್ಕು ಹೇಳಿ ಆದರೂ ಸಮಾದಾನ ಮಾಡಿಗೊಂಬಲಕ್ಕು. ಮಾನವೀಯ ಸಮ್ಮಂದಂಗಳ ಹಾಂಗೆ ಮಾಡ್ಳೆಡಿತ್ತೋ?
ಒಂದರಿ ಹೋದರೆ ಹೋದ್ದದೇ ಅಲ್ಲದೋ?
ಜೆನಂಗಳೂ ಹಾಂಗೇ – ಅವು ಹೋದ ಮೇಗೆ ಕೆಲವು ಜೆನ ಅತೀ ಪ್ರೀತಿ ತೋರ್ಸುತ್ತ ಮಾತಾಡ್ತವು; ಆದರೆ ಎದುರೇ ಇಪ್ಪಾಗ ಗೋಶುಬಾರಿ ಮಾಡಿ ಪುಸ್ಕ ಮಾಡಿರ್ತವು! ದೊಡ್ಡಜ್ಜನ ವಿಶಯಲ್ಲಿಯೂ ಕೆಲವು ಜೆನ “ಛೇ – ಅವು ಇಪ್ಪಗ ಇನ್ನೂ ಹೆಚ್ಚು ಅರ್ತ ಮಾಡಿಗೊಳೇಕಾತು; ಇನ್ನೂ ಚೆಂದ ಮಾತಾಡಿಗೊಳೇಕಾತು; ಇನ್ನೂ ಹೆಚ್ಚು ಕಲ್ತುಗೊಳೇಕಾತು” – ಇತ್ಯಾದಿತ್ಯಾದಿ ಮಾತಾಡಿಗೊಳ್ತವಾಡ, ಕುಂಟಾಂಗಿಲ ಭಾವ° ಹೇಳಿದ ಓ ಮನ್ನೆ!
ಆರೇ ಒಬ್ಬ ವೆಗ್ತಿಯ ನಾವು ಕಳಕ್ಕೊಂಡ ಮತ್ತೆಯೇ ಅವರ ಬಗೆಗೆ ಗೌರವ, ಅವರ ಪ್ರೀತಿ, ಅವರ ಭಾವ-ಬಂಧಂಗಳ ಬಗ್ಗೆ ಚಿಂತನೆ ಮಾಡುಸ್ಸು; ಒಟ್ಟಿಂಗೇ ಇಪ್ಪಗ ಒಂದು ಗುಮನವೇ ಮಾಡ್ತಿಲ್ಲೆ ನಾವು!
ಅದಕ್ಕೇ ಹೇಳುದು – ಒಟ್ಟಿಂಗಿಪ್ಪಗ ಗೋಶುಬಾರಿ; ಕೈಂದ ತಪ್ಪಿ ಹೋದ ಮೇಗೆ ಭಾರೀ ಪ್ರೀತಿ ತೋರುಸುದು.
ಆದ್ದಾತು, ಇನ್ನು ಮುಂದಾಣೋರ ಆದರೂ – ಪರಸ್ಪರ “ಬೆಲೆ”ಅರ್ತು ವೆವಹಾರ ಮಾಡುವೊ°.
ಬಂಧ ಗಟ್ಟಿ ಇಪ್ಪದರ ಹಾಂಗೇ ಒಳಿಶಿಗೊಂಬ°. ಮೊದಲು ಹಾತೊರದು, ಆಮೇಲೆ ಬೇಜಾರ ಮಾಡಿಗೊಂಡು ಕೂಪ ಹಾಂಗೆ ಮಾಡುಸ್ಸು ಬೇಡ- ಹೇಳ್ತದು ಈ ಶುದ್ದಿಯ ಹಾರೈಕೆ. ಎಂತ ಹೇಳ್ತಿ?
~
ಒಂದೊಪ್ಪ: ಇಲ್ಲದ್ದೆ ಇಪ್ಪಗ ಕೊರಗುದರಿಂದ ಇದ್ದಿಪ್ಪಗ ಸದ್ವಿನಿಯೋಗ ಮಾಡಿದ್ಸರ ನೆಂಪುಮಾಡಿಗೊಂಬೊ°.
ಪಟ: ಇಂಟರ್ನೆಟ್ಟಿಂದ
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಶುದ್ದಿ ಓದಲೆ ಹೇಳಿ ಬೈಲಿಂಗೆ ನುಗ್ಗಿದ್ದಲ್ಲ ಆನು..ಉದಿಯಪ್ಪಗಾಣ ವಾಕಿಂಗ್ ಮಾಡಿಗೊಂಡು ಬಂದದು ಆನು..ದೇವರಾಣೆ!..ಒಂದು ವಾಕ್ಯವ ಮನಸ್ಸಿಲ್ಲದ್ದ ಮನಸ್ಸಿಂದ ಓದಿದೆ..ಮುಂದಾಣದ್ದರ ಓದಿದ್ದಲ್ಲ,ಓದಿಸಿದ್ದು..ಎನ್ನ ಹಾಂಗಿಪ್ಪವನನ್ನೂ!! ಲಾಯ್ಕಾಯ್ದು,ಲಾಯ್ಕಾಯ್ದು..ಇದಾ ಒಪ್ಪಕ್ಕನ ಒಪ್ಪಕ್ಕಿಂತಲೂ ಹೆಚ್ಚು ಅಭಿಮಾನದ ಒಪ್ಪ!
ಶುದ್ದಿ ಲಾಯಕ ಆಯಿದು ಒಪ್ಪಣ್ಣಾ… ಧನ್ಯವಾದ೦ಗೊ..
ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲ ಇಲ್ಲೆಡ. ಆದರೆ ಎಷ್ಟೋ ಜನರ,ಹಿರಿಯರ ಅಪಾರ ತಿಳುವಳಿಕೆ ಹೀಂಗೆ ಅಳಿಸಿ ಹೋದ್ದದು ತುಂಬಾ ಖೇದಕರ.ಎಷ್ಟೋ ವೇದಂಗೊ ಹೀಂಗೆ ಕಾಣೆ ಆಯಿದಡ.!
ಶುದ್ದಿಗೊ ತುಂಬಾ ಲಾಯಿಕ್ಕಿದ್ದು. ತುಂಬಾ ಖುಶಿ ಆಯಿದು. ಇನ್ನು ಮುಂದಿನದ್ದು ಚೆನ್ನಾಗಿ ಬರಲಿ.
ಒಪ್ಪಣ್ಣೋ…, ಒಂದು ಗಂಭೀರ ಶುದ್ದಿಯ ನವಿರಾದ ಹಾಸ್ಯದೊಟ್ಟಿಂಗೆ ಬರವ ಕಲೆ ನಿನಗೆ ಲಾಯ್ಕ ಒಲುದ್ದು.
ಡೊಡ್ಡಜ್ಜನ ನೆಂಪು ಮರವಲೆಡಿಯ.
ಒಳ್ಳೆ ಶುದ್ದಿ ಒಪ್ಪಣ್ಣ
ಒಳ್ಳೆ ಶುದ್ದಿ.
ಪಷ್ಟಾಯ್ದು..ಒಪ್ಪಣ್ಣ…ಜಾಗೆ ವಿಷ್ಯಲ್ಲಿ ಮಾತ್ರ ನೀನು ಹೇಳಿದ ಹಾಂಗೇ..ಈಗ ಕೊಟ್ಟವಕ್ಕೆಲ್ಲಾ ಅಯ್ಯನಮಂಡೇಳಿ ಆಯ್ದು….
ಸಿಕ್ಕುವನ್ನಾರ ಸಿಕ್ಕಲೆ ಬೇಕಾಗಿ ಶತ ಪ್ರಯತ್ನ, ಸಿಕ್ಕಿದ ಮತ್ತೆ ಇದು ಇಷ್ಟೆಯಾ ಹೇಳ್ತ ಭಾವನೆ, ಮತ್ತೆ ಕೈ ತಪ್ಪಿ ಹೋದಪ್ಪಗ ಅಯ್ಯೋ ಹೋತನ್ನೇ ಹೇಳಿ ನಿರಾಶೆ. ಇದು ಸಾಮಾನ್ಯವಾಗೆ ನಾವು ಅನುಭವಿಸುವ ನಿತ್ಯ ಸತ್ಯ.
ಸಣ್ಣ ಮಕ್ಕಳ ಆಟಲ್ಲಿಯೂ ಇದು ಕಾಂಗು. ಒಬ್ಬನ ಕೈಲಿ ಇಪ್ಪ ಆಟ ಸಾಮಾನು ಇನ್ನೊಬ್ಬಂಗೆ ಚೆಂದ ಕಾಂಬದು, ಅದು ಸಿಕ್ಕಲೆ ಬೇಕಾಗಿ ಹಠ ಮಾಡುವದು, ಇವು ಲಡಾಯಿ ಮಾಡುತ್ಸು ಬೇಡ ಹೇಳಿ ಇಬ್ರಿಂಗೂ ಒಂದೇ ನಮುನೆದು ಕೊಟ್ರೆ, ಇಬ್ರಿಂಗೂ ಅದರಲ್ಲಿ ಆಸಕ್ತಿ ಇಲ್ಲದ್ದೆ ಅಪ್ಪದು. ಅಲ್ಲಿಂದಲೇ ಸುರು ಆವ್ತು ಈ ಭಾವನೆಗೊ.
ಆಸ್ತಿ ವಿಶಯಲ್ಲಿ ನೀನು ಹೇಳಿದ್ದು ಕೂಡಾ ಈಗಾಣ ವಾಸ್ತವ ಸಂಗತಿ. ಕೈ ತಪ್ಪಿದ ಜಾಗೆ ಮತ್ತೆ ಕೈ ಸೇರಲೆ ಸಾಧ್ಯ ಇಲ್ಲದ್ದಪ್ಪಗ, ಕೊಟ್ಟ ತಪ್ಪಿಂಗೆ ಪಶ್ಚಾತ್ತಪ ಪಟ್ಟುಗೊಂಬದು.
ಒಪ್ಪಣ್ಣಾ, ಒಳ್ಳೆ ನಿರೂಪಣೆ.
ಅದಕ್ದಕ್ಕೆ ಅಲ್ದೊ ಹಿತಿಲ ಗಿಡ ಮದ್ದಲ್ಲ ಹೇಳುದು., ಹಾನ್ಗೆ ದೊದಡ್ಡಜ್ಜನ ಸನ್ಗತಿಯುಊ.
ಶುದ್ದಿ ಗ್ರೇಶಿ ಆಯ್ಕೆ ಮಾಡಿ ಬರವಲೆ ನಮ್ಮ ಒಪ್ಪಣ್ಣ ಏಕೀನ.
ಒಳ್ಳೆ ವಸ್ತು ಸಂಗ್ರಹಿಸಿದ್ದ. ನಮ್ಮಲ್ಲಿ ಅಬ್ಬೆ ಇಪ್ಪಾಗ ಸರೀ ನೊಡದ್ದೆ, ಹೋದ ಮತ್ತೆ ಹರಿಯೊ ಮುರಿಯೊ ಮಾಡುವವು ಇದ್ದವಿದ. ಅವಕ್ಕೆ ಇದುಕಿವಿ ಮಾತಾವುತ್ತು
ಯಾವುದೇ ವಸ್ತು ಇಪ್ಪಗ ಅದರ ಬೆಲೆ ಗೊಂತೇ ಆವುತ್ತಿಲ್ಲೆ. ಅದರ ಬೆಲೆ ಗೂಂತಪ್ಪಗ ಆ ವಸ್ತು ನಮ್ಮ ಕೈ ಬಿಟ್ಟು ಹೋಗಿ ಆಗಿರ್ತು….ಎಷ್ತು ಅರ್ಥವತ್ತಾಗಿ ವಿವರಿಸಿದ್ದೆ. ಒಂದು ಒಪ್ಪ….
ನಿಜ, ಮೊನ್ನೆ ದೊಡ್ಡಜ್ಜನ ಮನೆಗೆ ಹೋಗಿಪ್ಪಗಳೂ ಹಾಂಗೆಯೇ ತೋರಿಂಡು ಇದ್ದತ್ತು.
ಇನ್ನೂ ಹೋಪಲಿದ್ದು,
ಕಳದು ಹೋದ್ಸರ ಹುಡ್ಕಲೆ…
Alexander Graham Bell ಹೇಳಿದ ಮಾತು ನೆನಪಾತು
“Time goes by so fast, people go in and out of your life. You must never miss the opportunity to tell these people how much they mean to you”
ಒಪ್ಪಣ್ಣ ಹೇಳಿದ ಒ೦ದೊ೦ದು ವಾಕ್ಯವೂ ನಿಜ. ಬರದ್ದು ರಾಶೀ ಚೊಲೋ ಅಯ್ದು ..ಎ೦ದಿನ೦ತೆ.
ಅಪ್ಪಟ ಸತ್ಯವಾದ ಶುಧ್ಧಿ ಒಪ್ಪಣ್ಣಾ…
ಭಾರೀ ಲಾಯಿಕ ಆಯಿದು ಉದಾಹರಣೆ ಒಟ್ಟಿಂಗೆ ವಿವರ್ಸಿದ್ದು ಯಾವತ್ತಿನಂತೆ.
ಹೇಂಗೆ ಇಷ್ಟು ಲಾಯಿಕ ಶುಧ್ಧಿ ಸಂಗ್ರಹಿಸಿ, ಅಷ್ಟು ಲಾಯಿಕ ಬರೆತ್ತೆಯೋ ನೀನು.?
ಇನ್ನಾಣ ವಾರಕ್ಕೆ ಕಾಯಿವದು ಇನ್ನು ಅಂಬಗ ಅಲ್ಲದಾ?
ಹ್ಮ್ಮ್ ಸಂಗತಿ ಅಪ್ಪು. ಇಪ್ಪಗ ಸಸಾರ ಇಲ್ಲದ್ದಪ್ಪಗ ಬೇಸರ. ವಸ್ತು, ವ್ಯಕ್ತಿ, ಪ್ರಾಣಿ ವಿಷಯಂಗೊಕ್ಕೂ ಇದು ಸಮಾನ ಅನ್ವಯ. ಪರಿಸರ ಪರಿಸ್ಥಿತಿ ಕಾರಣಂದಾಗಿ ಈ ತಾತ್ಸಾರ ಭಾವನೆ ನಡಕ್ಕೊಂಡೇ ಇದ್ದು. ಅಂದರೂ ಎಡಿಗಾಷ್ಟು ಮಟ್ಟಿಂಗೆ ಅಭಿಮಾನ ಮತ್ತೆ ಜಾಗ್ರತೆಂದ ಒಳುಶಿಗೊಂಬ ಪ್ರಯತ್ನ ಮಾಡದ್ದರೆ ಕಳದು ಹೋದ ಮೌಲ್ಯಕ್ಕೆ ದುಬಾರಿ ಮೌಲ್ಯ ತೆತ್ತರೂ ಅದು ಮೂಲ ಮೌಲ್ಯಕ್ಕೆ ಸಮ ಆಗ ಹೇಳ್ವ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತವಾಗಿರಲಿ ಹೇಳಿ ಬಯಸುವೊ°.