Oppanna.com

ಗೋವುಗೊ ನಮ್ಮ ಸಂಬಂಧಿಕರೇ! ಕ್ಷೀರಸಂಬಂಧಿಕರೇ!

ಬರದೋರು :   ಒಪ್ಪಣ್ಣ    on   02/06/2017    5 ಒಪ್ಪಂಗೊ

ತರವಾಡು ಮನೆ ಕಾಂಬು ಅಜ್ಜಿಯ ಮದುವೆ ಆಗಿ ಬಪ್ಪಗ ಒಂದು ಕಂಜಿಯನ್ನೂ ಕೊಟ್ಟು ಕಳುಸಿದ್ದವಾಡ, ಅವರ ಅಪ್ಪನ ಮನೆಂದ; ಗಂಗೆ – ಹೇದು ಹೆಸರು.
ತರವಾಡು ಮನೆಯ ಹಟ್ಟಿಲಿಯೇ ದೊಡ್ಡ ಆಗಿ, ಕಂಜಿ ಹಾಕಿ, ಹಾಲು ಕೊಟ್ಟು, ಜೆನ್ಮ ಸಾರ್ಥಕ ಮಾಡಿ ಮುಕ್ತಿ ಸೇರಿದ್ದು.
ಇಂದಿಂಗೂ ಅಲ್ಯಾಣ ಹಟ್ಟಿಯ ದನಗೊ ಆ ಗಂಗೆಯ ಮೂಲದ್ದೇ.

ಒಂದೊಂದರಿ ಒಪ್ಪಣ್ಣಂಗೆ ಕಾಂಬು ಅಜ್ಜಿಯನ್ನೂ, ಗಂಗೆಯನ್ನೂ ಒಂದೇ ನಮುನೆ ಅನುಸುದು.
ಕಾಂಬು ಅಜ್ಜಿ ಹುಟ್ಟಿದ ಮನೆಂದ ಕೊಟ್ಟ ಮನೆಗೆ ಬಂತು. ಒಟ್ಟಿಂಗೆ ಗಂಗೆಯೂ ಸಂಗಾತಕ್ಕೆ ಹೇದು ಮೊದಲಾಣ ಹಟ್ಟಿಂದ ಹೊಸ ಹಟ್ಟಿಗೆ ಬಂತು.
ಕಾಂಬು ಅಜ್ಜಿಗೆ ಹೊಸ ಮನೆ, ಗಂಗೆಗೆ ಹೊಸ ಹಟ್ಟಿ.
ಕಾಂಬುಅಜ್ಜಿಗೆ ಆ ಮನೆಲಿ ಎಲ್ಲೋರುದೇ ಹೊಸಬ್ಬರೇ; ಹಟ್ಟಿಲಿಪ್ಪ ಗಂಗೆಯ ಹೊರತು.
ಗಂಗೆಗೂ ಎಲ್ಲೋರುದೇ ಹೊಸಬ್ಬರೇ, ಮನೆಲಿಪ್ಪ ಕಾಂಬುವಿನ ಹೊರತು.
ಸುರುಸುರುವಿಂಗೆ ಅಸಕ್ಕಪ್ಪಗ, ಮತ್ತೆ ಶಂಬಜ್ಜ ಏನಾರು ಪಿರಿಪಿರಿ ಹೇಳಿರೆ – ಹಟ್ಟಿಲಿಪ್ಪ ಗಂಗೆಯ ಕೊರಳು ಉದ್ದಿಗೊಂಡು ಅಪ್ಪನ ಮನೆ ನೆಂಪುಮಾಡಿಗೊಂಡಿತ್ತವಾಡ ಕಾಂಬು ಅಜ್ಜಿ, ಸೊಸೆ ಪಾತಿಅತ್ತೆಯ ಕೈಲಿ ಬೊಕ್ಕುಬಾಯಿಲಿ ಹೇಳಿ ನೆಂಪುಮಾಡಿಗೊಂಡಿತ್ತಿದ್ದವಾಡ.
ಎಷ್ಟು ಹೊತ್ತು ಕೊರಳು ತಿಕ್ಕಿರೂ ತಿಕ್ಕುಸಿಗೊಂಡು ಇದ್ದತ್ತು ಗಂಗೆ; ಅದಕ್ಕೂ ಕಾಂಬುಅಜ್ಜಿಯ ಸಾಂಗತ್ಯ ಇಷ್ಟ ಆಗಿಂಡು ಇದ್ದಿಕ್ಕು.

ಕಾಲ ಬೆಳದತ್ತು, ಕಾಂಬು ಅಜ್ಜಿ ಮನೆ ತುಂಬುಸಿರೆ, ಗಂಗೆ ಆಗಿ ಹಟ್ಟಿ ತುಂಬುಸಿತ್ತು.
ಮನೆಲಿ ರಂಗಮಾವ°, ಮಾಲಚಿಕ್ಕಮ್ಮ ದೊಡ್ಡ ಆದ ಹಾಂಗೇ, ಗಂಗೆಯ ಕಂಜಿಗಳ ಸಂಖ್ಯೆ ಹಟ್ಟಿಲಿ ಬೆಳದತ್ತು.
ಮನೆಲಿ ಕಾಂಬು ಅಜ್ಜಿಗೆ ಕೈತುಂಬ ಕೆಲಸ, ಹಟ್ಟಿಲಿ ಗಂಗೆಗೆ ಹಟ್ಟಿತುಂಬ ಸಂಸಾರ.

ಆದರೆ, ಕಾಂಬು ಅಜ್ಜಿಗೆ ನೆಡು ಪ್ರಾಯ ಬಪ್ಪಗಳೇ ಗಂಗೆ ಗಡಸು ಹೋಗಿ ಅಜ್ಜಿ ಆಗಿತ್ತು!
ಕಾಂಬು ಅಜ್ಜಿ ಅಪ್ಪ ಮೊದಲೇ ಗಂಗೆ ಅಜ್ಜಿ ಆಗಿತ್ತು..
ಒಂದು ದಿನ ಗಂಗೆ ದೇವರ ಪಾದ ಸೇರುವಗ ಕಾಂಬು ಅಜ್ಜಿ – ಇಂದು ನೀನು, ನಾಳೆ ಆನು – ಹೇದು ಎರಡು ದಿನ ಉಣ್ಣದ್ದೆ ದುಖ್ಖುಸಿದ್ದವಾಡ.
~
ಹಟ್ಟಿಲಿ ಹುಟ್ಟಿದ ಎಲ್ಲಾ ಕಂಜಿಗಳೂ ಅದೇ ಹಟ್ಟಿಲಿ ಬೆಳೆತ್ತು ಹೇಳಿ ಏನಿಲ್ಲೆ. ಕೆಲವು ಕೈ ಪಗರಿ ಹೋವುತ್ತು, ಬೇರೆ ಮನೆಗೊಕ್ಕೆ. ಗಂಗೆಯೂ ಹಾಂಗೇ ಬಂದದಲ್ಲದೋ – ಕೇಳ್ತವು ರಂಗಮಾವ°.
ರಂಗಮಾವನಲ್ಲಿಯೂ ಹಾಂಗೆಯೇ. ಹುಟ್ಟಿದ ಕಂಜಿಗಳಲ್ಲಿ ಎಷ್ಟೋ ಕಂಜಿಗೊ ಅವರ ಕೈ ಪಗರಿ ಹೋಯಿದು.
ಕೆಲಸಕ್ಕೆ ಬತ್ತೋರಲ್ಲಿಗೆ, ನೆಂಟ್ರಲ್ಲಿಗೆ, ಹತ್ತರಾಣ ಬಂಧುಗೊಕ್ಕೆ, ದೂರದ ಸಾಂಕಾಣದೋರಿಂಗೆ – ಹಲವೂ ಹಟ್ಟಿಗೊಕ್ಕೆ ಗಂಗೆಯ ಕುಟುಂಬ ವಿಸ್ತಾರ ಆಯಿದು.
ಮನೆಯ ಕೂಸಿಂಗೆ ಪ್ರಾಯ ಬಪ್ಪಗ ಅಬ್ಬೆಪ್ಪ ಚಿಂತನೆ ಮಾಡ್ತವಿಲ್ಲೆಯೋ – ಹಾಂಗೆ, ತರವಾಡು ಮನೆಯ ಹಟ್ಟಿಲಿ ಒಂದು ಕಂಜಿ ಹುಟ್ಟಿರೆ – ಕಂಜಿ ಸಣ್ಣ ಇಪ್ಪಾಗಳೇ ಇದರ ಎಲ್ಲಿಗೆ ಕೊಡುದು – ಹೇದು ಚಿಂತನೆ ಮಾಡುಗು ಕಾಂಬು ಅಜ್ಜಿ.
ರಜ್ಜ ದೊಡ್ಡ ಆದಪ್ಪದ್ದೇ “ಇಂದಾ, ಇಂದು ನಿಕ್ಕ್” – ಹೇದು ಕೆಲಸಕ್ಕೆ ಬತ್ತ ರತ್ನಂಗೋ, ವೇದಂಗೋ, ಕಮಲಂಗೋ – ಕೊಡುಗು, ಸಾಂಕಲೆ.
ಅವರ ಮನೆಗಳಲ್ಲಿ ಸಣ್ಣ ಹಟ್ಟಿ ಇದಾ, ಒಂದೊಂದು ಇಕ್ಕಷ್ಟೆ.
ಕೆಲವು ಕಂಜಿಗಳ ಪಾತಿಅತ್ತೆಯ ಅಕ್ಕನ / ತಂಗೆಯ ಮನೆಗೆ; ಬೇರೆ ನೆಂಟ್ರುಗಳ ಮನೆಗೆ ಕೊಡುಗು. ಆ ಕಂಜಿಗಳ ಕೈ ಎತ್ತಿ ಕೊಡುವಗ ಕಾಂಬು ಅಜ್ಜಿಗೆ ಆ ಮನೆಗೊಕ್ಕೆ ಹೋದರೆ ಅವರ ಗುರ್ತವೂ ಹಿಡಿಗು. “ಹೂಂ..” – ಹೇಳುವಗ, “ಅಪ್ಪು ಮೋಳೇ ಆ ಬಂದೆ ಎನ್ನ ತಂಗೆ ಮನೆಗೆ, ನಿನ್ನ ನೋಡಿ ಹೋಪಲೆ” – ಹೇಳುಗು ಕಾಂಬು ಅಜ್ಜಿ. ಅಪ್ಪು; ನೆಂಟ್ರ ಮನೆಗೆ ಹೋದರೆ ಆಯಾ ಹಟ್ಟಿಗೊಕ್ಕೆ ಹೋಗಿ ಅಲ್ಲಿ ಕೊಟ್ಟ ಕಂಜಿ / ಗಡಸು / ಹೋರಿಯ ಕೊರಳು ಉದ್ದಿ, ಬೆಲ್ಲ ತುಂಡು ಕೊಡ್ಳೂ ಇರ್ತು.
~
ಒಂದೊಂದರಿ ಹೋರಿ ಕಂಜಿ ಆದರೆ ಒಂದೊಂದರಿ ಬೇರ ಮಾಡುದೂ ಇದ್ದತ್ತು.
ಬೇರ ಹೇದರೆ – ಎಲ್ಯಾರು ದೂರಲ್ಲಿ ಗಾಡಿಗೆ ಜೋಡು ಬೇಕಾದರೆ – ಅದ್ರಾಮಂಗೆ ಗೊಂತಾಗಿಂಡು ಇದ್ದತ್ತು ಇದಾ; ಹಾಂಗೆ ಅದಕ್ಕೆ ಅದೇ ಬೇರ.
ಇಲ್ಲಿ ನೂರು ರುಪಾಯಿಗೆ ಕಂಜಿ ತೆಗದತ್ತು; ಅಗತ್ಯ ಇಪ್ಪ ಮನೆಲಿ ಇನ್ನೂರಕ್ಕೆ ಮಾರಿತ್ತು.
ಹಾಂಗೆ ರಂಗಮಾವ° ಕೊಟ್ಟುಗೊಂಡು ಇದ್ದರೂ – ಆ ಹೋರಿ ಕಂಜಿ ಎಲ್ಲಿಗೆ ಹೋದ್ಸು – ಹೇದು ಅದ್ರಾಮನ ಹತ್ರೆ ವಿಚಾರ್ಸುಗು ಕಾಂಬು ಅಜ್ಜಿ.
ಹಾಂಗಾಗಿ ಯೇವ ಗಡಸಿನ ಎಷ್ಟನೇ ಬೋರಿಕಂಜಿ ಯೇವ ಹೊಡೆಂಗೆ ಹೋಯಿದು – ಹೇದೂ ಕಾಂಬು ಅಜ್ಜಿಗೆ ಗೊಂತಾಗಿಂಡು ಇದ್ದತ್ತು.
ಅವುಗಳನ್ನೂ ಸಂಬಂಧ ಹೇಳುವಾಗ ನಮ್ಮ ಮನುಷ್ಯರ ಸಂಬಂಧದ ನಮುನೆಯೇ ಹೇಳಿಗೊಂಡಿತ್ತಿದ್ದವು ಕಾಂಬು ಅಜ್ಜಿ..
ಗಂಗೆಯ ಸಣ್ಣ ಮಗಳ ಎರಡ್ಣೇ ಮಗ° – ಹೇದರೆ ಯೇವದೋ ಒಂದು ಬೋರಿಕುಟ್ಟ ಹೇದು ಇಬ್ರಾಯಿಗೆ ಗೊಂತಕ್ಕು.
~
ಎಲ್ಲಿಗೂ ಕೊಡದ್ದ ಕಂಜಿಗೊ ತರವಾಡು ಮನೆಲೇ ದೊಡ್ಡ ಅಕ್ಕು.
ಅಲ್ಯಾಣ ಗೆದ್ದೆ ಹೂಡ್ಳೆ, ಅಲ್ಯಾಣ ಗಾಡಿ ಎಳವಲೆ ಹೋರಿ ಕಂಜಿಗೊ. ಅಲ್ಲಿಯಾಣ ಹಾಲ ಪಾತ್ರ ತುಂಬುಸುಲೆ ಹೆಣ್ಣು ಕಂಜಿಗೊ – ತಯಾರಾಗಿಂಡು ಇತ್ತಿದ್ದವು.
~
ಹಾಂಗಾರೆ ದನಗೊಕ್ಕೆ ಪ್ರಾಯ ಆದರೆ?
ರಂಗಮಾವನ ಎದುರು ಆರಾರು ಹೀಂಗೆ ಕೇಳಿರೆ, ಅವಕ್ಕೆ ಪಿಸುರೇ ಎಳಗ್ಗು. ಅಪ್ಪು ಅವಕ್ಕೀಗ ಬೀಪಿ ಸುರು ಆದ ಮತ್ತೆ ಪಕ್ಕನೆ ಹೇಳಿ ಹೋವುತ್ತು.
ಅಲ್ಲದ್ದರೂ – ಪ್ರಾಯ ಆದರೆ!?
ನವಗೆ ಪ್ರಾಯ ಆದರೆ ಎಂತ ಮಾಡ್ತು?
ಅಷ್ಟಕ್ಕೂ ಪ್ರಾಯ ಅಪ್ಪದು ಹೇಳಿರೆ ಎಷ್ಟಾಯೆಕ್ಕು? – ಇದಕ್ಕೆ ಮೊದಾಲು ಉತ್ತರ ಕೊಡೆಕ್ಕಾವುತ್ತು ರಂಗಮಾವಂಗೆ.

ದನಗಳನ್ನೂ ನಮ್ಮ ಹಾಂಗೇ ಸಂಬಂಧಲ್ಲೇ ಹೇಳುದು ಆ ಮನೆಯ ಅಭ್ಯಾಸ. ಸಂಬಂಧ ಹೇಳುವಗಳೇ ಮನುಷ್ಯರ ಹಾಂಗೆ ನೋಡುವೋರು ಇನ್ನು ದನಗಳನ್ನೂ ಹಾಂಗೇ ನೋಡವೋ?
ನೋಡ್ತವು.
ನವಗೆ ಎಡಿಯದ್ದೆ ಆದರೆ ಹೇಂಗೋ, ದನಗೊಕ್ಕೂ ಹಾಂಗೇ ನೋಡೇಕು.
ನವಗೆ ರೋಗ ಬಂದರೆ ಹೇಂಗೋ, ದನಗೊಕ್ಕೂ ಹಾಂಗೇ ಆರೈಕೆ ಮಾಡೇಕು.
ನವಗೆ ಬೇನೆ ಆದರೆ ಹೇಂಗೋ, ದನಗೊಕ್ಕೂ ಹಾಂಗೇ ಬೇನೆ ಆವುತ್ತು – ಹೇದು ಕಾಂಬು ಅಜ್ಜಿಯ ವಾದ.
ಆ ಪ್ರಕಾರಲ್ಲಿ ಹಟ್ಟಿಲಿಪ್ಪ ಎಲ್ಲಾ ದನಗಳನ್ನೂ ನೋಡಿಗೊಂಡು ಬಂದಿತ್ತವು ಕಾಂಬು ಅಜ್ಜಿ.
ಬಹುಶಃ ದನಗಳೂ ಅದೇ ತತ್ವಲ್ಲಿ ಬದ್ಕುತ್ತವು ಕಾಣ್ತು; ಕಾಂಬು ಅಜ್ಜಿಯನ್ನೂ ತುಂಬ ಚೆಂದಕೆ ಕಂಡುಗೊಂಡು ಇತ್ತಿದ್ದವು ತರವಾಡು ಮನೆಯ ದನಗೊ.
~

ದನಗಳ ಮನುಷ್ಯರ ಹಾಂಗೇ ಕಂಡ್ರೆ – ಪ್ರಾಯ ಆದ ಮತ್ತೆ ಎಂತ ಮಾಡ್ತದು ಹೇಳ್ತ ಸಂಶಯ ಬಾರ.
ಆಯುಸ್ಸು ಪೂರ್ಣ ಅಪ್ಪನ್ನಾರವೂ ನಮ್ಮ ಹಟ್ಟಿಲೇ ಇಪ್ಪದು, ಕಾಂಬು ಅಜ್ಜಿಯ ನಮುನೆಲಿ.
ಯೇವ ತೋಟವ ಹಸುರು ಮಾಡಿದ್ದವೋ, ಯೇವ ಮಣ್ಣಿನ ಫಲವತ್ತು ಮಾಡಿದ್ದವೋ, ಯೇವ ಗುಡ್ಡೆಲಿ ಓಡಾಡಿ ತಿರುಗಿತ್ತಿದ್ದವೋ – ಅದೇ ಭೂಮಿಲಿ ಮಣ್ಣಾಗಿ ಹೋಪದು ದನಗಳ ಸೌಭಾಗ್ಯ.

ಈಗಾಣ ಕಾಲಕ್ರಮಲ್ಲಿ ನೋಡುವಾಗ ತುಂಬಾ ಹಾಳಾದ ಹಾಂಗೆ ಕಾಣ್ತು. ಬರೇ ಹಾಲಿನ ಮಿಶನು, ಮಾಂಸದ ಮಿಶನು ಆಗಿ ನೋಡ್ತ ಪ್ರಾಣಿಗೊಕ್ಕೂ, ಕಾಂಬು ಅಜ್ಜಿ ಕಂಡುಗೊಂಡಿದ್ದ ಸಂಬಂಧದ ಮೌಲ್ಯಕ್ಕೂ ತುಂಬಾ ದೂರ ಇದ್ದು.
ಪಶುಗಳನ್ನೂ ನಮ್ಮ ಸಂಬಂಧಿಕರ ಹಾಂಗೇ ಕಾಂಬ, ಅದರ ಹಾಲನ್ನೂ ಅಬ್ಬೆ ಹಾಲಿನ ಹಾಂಗೇ ಕಂಡು ಕುಡಿವ ಜನಾಂಗ ಈಗ ಕಡಮ್ಮೆ ಆವುತ್ತಾ ಇದ್ದು.
ಹಾಲು ಕೊಡ್ತು ನಿಲ್ಲುಸಿದರೆ ಮತ್ತೆ ‘ಭೂಮಿ ಭಾರ’ – ಹೇದು ಗ್ರೇಶುದು ಮೊದಲ ತಪ್ಪು.
ಅದರ ಕಟುಕರಿಂಗೆ ಮಾರಿ ಕೈ ತೊಳೆಸ್ಸು ಎರಡ್ಣೇ ತಪ್ಪು!

ದನಗಳ ನಾವು ಹಾಲಿಂಗೋಸ್ಕರ ಮಾಂತ್ರ ನೋಡಿರೆ, ದನಗಳೂ ನಮ್ಮ ತಿಂಬಲೆ ಹಾಕುತ್ತ ಜೆನಂಗೊ ಆಗಿ ಮಾಂತ್ರ ಕಾಂಗು.

ಅಲ್ಲದೋ?
~
ಒಂದೊಪ್ಪ: ಬದ್ಕು ಬದಲಾದ ಹಾಂಗೆ ಸಂಬಂಧವೂ ಬದಲಾತು!

5 thoughts on “ಗೋವುಗೊ ನಮ್ಮ ಸಂಬಂಧಿಕರೇ! ಕ್ಷೀರಸಂಬಂಧಿಕರೇ!

  1. ಒಳ್ಳೆ ಮಾರ್ಕ್ ಬಂದವಕ್ಕೆಲ್ಲಾ ಶುಭಾಶಯಂಗೊ.

  2. ಬರವಣಿಗೆ ಚೆಂದ ಇದ್ದು ಹೇದು ಹೇಳುಲಕ್ಕು. ಹೇದು ಶಬ್ದ ದ ಪ್ರಯೋಗ ಬೇಕಾದಷ್ಟು ಆಯಿದು ಹೇದು ಹೇಳುಲಕ್ಕು.

  3. ಒಳ್ಳೆ ಶುದ್ದಿ ಒಪ್ಪಣ್ಣಾ. ಹಶುಗಳ ರಕ್ಷಿಸೆಕ್ಕಾದ್ದು ನಮ್ಮೆಲ್ಲೋರ ಕರ್ತ್ಯವ್ಯ. ಒಂದೊಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×