ಶಂಬಜ್ಜನ ಬಾಯಿಲಿ ಅದೆಷ್ಟು ಜಾನಪದ ಕತೆಗೊ ಇದ್ದತ್ತೋ, ಕಾಂಬುಅಜ್ಜಿಗೂ ಗೊಂತಿದ್ದಿರ.
ಹಳೇ ಹಳೇ ಕತೆಗೊ. ಎಲ್ಲವುದೇ ನಮ್ಮ ಊರಿನ, ನಮ್ಮ ಜೆನಜೀವನ ಪದ್ಧತಿಗಳ ಕತೆಗೊ.
ಎಂತಾರು ಸನ್ನಿವೇಶಕ್ಕೆ, ಯೇವದಾರು ಪುಣ್ಯಕ್ಷೇತ್ರಕ್ಕೆ, ಆರಾರು ಹೆರೀ ಜೀವಕ್ಕೆ – ಹೊಂದಿಗೊಂಡ ಆಗಿರ್ತು ಅದು.
ಗುರುವಾಯೂರು ದೇವಸ್ಥಾನದ್ದೋ, ಅನಂತ ಶಯನದ್ದೋ, ಕೊಚ್ಚಿಯ ರಾಜಂದೋ, ತೆಂಕ್ಲಾಗಿಯಾಣ ಮಂತ್ರವಾದಿದೋ – ಮಣ್ಣ ಆಗಿಕ್ಕು.
“ಮದಲಿಂಗೆ ಹೇಳುದು ಕೇಳಿದ್ದೆ ಆನು, ತೆಂಕಲಾಗೀ…” – ಹೇದು ಶಂಬಜ್ಜ ಕತೆ ಸುರುಮಾಡಿರೆ, ಒಳ್ಳೆ ಪಳಮ್ಮೆಗಳ ಸೇರ್ಸಿದ ವಿವರಣೆಯ ಒಟ್ಟಿಂಗೆ ರಂಗು ರಂಗಾಗಿ ರೈಸುಗು. ರಂಗಮಾವನೂ ರಂಗೇರಿ ಕೂದು ಕೇಳಿಗೊಂಡಿತ್ತಿದ್ದವು.
ಶಂಬಜ್ಜ ಈಗ ಇಲ್ಲದ್ದರೂ, ಶಂಬಜ್ಜ ಹೇಳಿದ್ಸರ ಕೇಳಿದೋರು ಬೈಲಿಲಿ ಧಾರಾಳ ಇದ್ದವು. ಅವು ಹೇಳಿದ ಕೆಲವು ಕತೆಗೊ ಇನ್ನೂ ಅತ್ತಿತ್ತೆ ಓಡಾಡಿಗೊಂಡಿದ್ದು.
ಅದರ್ಲಿ ಒಂದು – ಇದು.
~
ನೂರಾರೊರಿಶ ಹಳೇಕಾಲದ ಶುದ್ದಿ.
ಮಹಾ ಉದಾಸಿನದೋನು ಒಬ್ಬ ಮಾಣಿ.
ಅಬ್ಬೆಪ್ಪನ ಹೆದರಿಕೆ ಇಲ್ಲೆ; ಮನೆಯ ಹಂಗಿಲ್ಲೆ – ಊರ ದೇವಸ್ಥಾನದ ಜೆಗಿಲಿ ಸ್ವಸ್ಥ ಜೀವನ!
ವೇದ ಕಲಿಯಲೆ ಇಲ್ಲೆ, ಗಣಿತ ಬರವಲೆ ಇಲ್ಲೆ, ಶ್ಲೋಕ ಕಂಠಸ್ಥ ಮಾಡ್ಳೆ ಇಲ್ಲೆ – ಮೂರೂ ಹೊತ್ತು ಉಂಬದು, ತಿಂಬದು, ಒರಗುದು ಇಷ್ಟೇ ಇದ್ದದು. ಹೇಂಗೂ ದೇವಸ್ಥಾನದ ಜೆಗೆಲಿಲಿ ಬಿದ್ದುಗೊಂಬದು ಅಲ್ಲದೋ – ಮಹಾಪೂಜೆ ಆದಪ್ಪದ್ದೇ, ಪ್ರಸಾದ ಭೋಜನ ಇರ್ತು. ಹೊಟ್ಟೆ ತುಂಬುಲೆ ಧಾರಾಳ ಸಾಕು!
ಅದೇ ದೇವಸ್ಥಾನದ ಅದೇ ಜೆಗಿಲಿ ದುಡುದು ತಿಂಬೋರೂ, ವಿದ್ಯಾರ್ಥಿಗಳೂ ಇಕ್ಕು.
ಜೋಯಿಷರು ಆಚಿಕ್ಕೆ ಕವಡೆ ಮಡಿಕ್ಕೊಂಡು ಕೂರುಗು, ವಿದ್ಯಾರ್ಥಿಗೊ ಈಚಿಕ್ಕೆ ವೇದ ಉರು ಹೇಳಿಗೊಂಡು ಕೂರುಗು; ವೈದ್ಯರು ಅತ್ಲಾಗಿ ಕಷಾಯದ ಅಳಗೆ ಮಡಿಕ್ಕೊಂಡು ಕೂರುಗು, ಮಾವುತ ಆನೆಗಳ ನೋಡಿಗೋಂಡಿಕ್ಕು, ಸ್ಥಾನಿಕ ಹೂಗು ಕಟ್ಟಿಗೊಂಡಿಕ್ಕು – ದೇವಸ್ಥಾನ ಹೇದರೆ ಇಡೀ ಊರಿನ ಪ್ರತಿಬಿಂಬ ಅಲ್ಲದೋ?
ಆದರೂ, ಈ ಮಾಣಿ ಅವರ ತಂಟೆಗೆ – ಸಹವಾಸಕ್ಕೆ ಹೋಯಿದನಿಲ್ಲೆ.
ಇವ° ಹೀಂಗೇ – ಹೇದು ಎಲ್ಲೋರಿಂಗೂ ಗೊಂತಿಪ್ಪ ಕಾರಣ ಆರೂ ಎಂತದೂ ಹೇಳುಲೆ ಬತ್ತವಿಲ್ಲೆ.
ಒಟ್ಟಿಲಿ ಹೇಳ್ತರೆ – ಜೀವನಲ್ಲಿ ಗುರಿ ಹೇಳುದೇ ಇದ್ದತ್ತಿಲ್ಲೆ ಆ ಮಾಣಿಗೆ.
ಈ ಮಾಣಿಗೆ ದಿನಾಗುಳೂ ಮಜ್ಜಾನ ಪೂಜೆ ಆದ ಮತ್ತೆ ಪ್ರಸಾದಊಟ.
ಅದರಿಂದ ಮದಲೂ – ಮತ್ತೆಯೂ ಚೆಂದದ ಒರಕ್ಕು.
ಜೀವನ ಹಾಂಗೇ ಸಾಗಿಂಡಿತ್ತು.
~
ಅದೊಂದು ದಿನ.
ಮಹಾಪೂಜೆ ಆತು, ತೀರ್ಥ ಪ್ರಸಾದ ವಿತರಣೆ ಆತು.
ಆಚೊಡೆಲಿ ಭೋಜನ ಪ್ರಸಾದವೂ ಸುರು ಆತೋ ತೋರ್ತು. ಆದರೆ, ಈ ಮಾಣಿ ಒರಗಿತ್ತಿದ್ದನೋ ಎಂತೋ – ದೊಡ್ಡ ಬಟ್ಟಲಮ್ಮಾ – ಹೇದು ಏವತ್ರಾಣ ಹಾಂಗೆ ಮದಾಲೇ ಹೋಪಲೆ ಎಡಿಗಾತಿಲ್ಲೆ.
ಊಟಕ್ಕೆ ತಡವಾತು, ಎತ್ತಿಗೊಳೇಕು – ಹೇದು ಕೂದುಗೊಂಡಿದ್ದಲ್ಲಿಂದ ಒಂದೇ ಹಾರಾಣ – ಛಂಗನೆ ಹಾರಿ ಓಡಿದ, ಭೋಜನ ಶಾಲೆಗೆ.
ಹಾಂಗೆ ಊಟಕ್ಕೆ ಹೋಪಗ – ಜೆಗಿಲಿಲಿ ಇನ್ನೂ ಜೋಯಿಶಮಾವ ಪ್ರಶ್ನೆ ಮಡಗಿಂಡೇ ಇದ್ದವು.
ಆರೋ ಕೇಳುಲೆ ಬಂದೋರ ಕಷ್ಟಸುಖ ವಿವರಣೆ ಆಗಿಂಡಿತ್ತೋ ತೋರ್ತು.
ಕವಡೆ ತಿರುಗುಸಿ ಗೆರೆಪೆಟ್ಟಿಗೆಯ ಗ್ರಹಚಕ್ರ ತುಂಬ ಲೆಖ್ಖಾಚಾರದ ಕವಡೆಗಳ– ಆರೂಢಂದ ಲೆಕ್ಕ ಹಾಕಿ ಗುರು ಶುಕ್ರ ಶೆನಿ ಮಾಂದಿ ರಾಹು ಕೇತು – ಹೇದು ಯೇವಯೇವ ಪೆಟ್ಟಿಗೆಲಿ ಯೇವದು ಬರೆಕ್ಕೋ, ಆಯಾ ಸ್ಥಾನಲ್ಲಿ – ಮಡಗಿ ಫಲ ಹೇಳಿಗೊಂಡಿತ್ತಿದ್ದವು.
ಜೋಯಿಷರಿಂಗೆ ಹಾಂಗೇ ಇದಾ – ಆರಾರು ಎಂತಾರು ಪ್ರಶ್ನೆ ಕೇಳಿರೆ, ಮೂರ್ತಿತ್ವೇ ಪರಿಕಲ್ಪಿತಃ ಶಶಭೃತೋ – ಹೇದು ಕವಡೆರಾಶಿಯ ಸುತ್ತು ತಿರುಗುಸುದು; ಕೈಲಿ ಒಂದು ಮುಷ್ಟಿ ತೆಗವದು. ಕರ್ಕಾಟಕ – ವೃಶ್ಚಿಕ – ಮೀನ – ಹೇದು ನಾಕುನಾಕೇ ತೆಗದು ಶೇಷ ಎಷ್ಟು ಒಳುತ್ತು – ಹೇದು ನೋಡುಸ್ಸು. ಬಂದ ಶೇಷವೇ ಆರೂಢ ಸ್ಥಾನ, ಇಡೀ ಪ್ರಶ್ನೆಯ ಲೆಖ್ಖಾಚಾರ ಆರೂಢಕ್ಕೆ ಅನುಸರ್ಸೆಂಡು ಇರ್ಸು. ಅದರ ಹಿಡುದು ಫಲ ಹೇಳುದು ಇದಾ. ಹಾಂಗಾಗಿ ಜೋಯಿಷಮಾವಂಗೆ ಗಣಿತವೂ ಬೇಕು, ಫಲಹೇಳುಲೂ ಅರಡಿಯೇಕು.
ಈ ಜೋಯಿಶಮಾವನೂ ಹಾಂಗೇ – ಗ್ರಹಚಕ್ರ ತುಂಬೆಲ್ಲಾ ಲೆಕ್ಕ ಮಾಡಿದ ಕವಡೆಗೊ ಮಡಗಿಂಡು, ಅದರ ಫಲ ಹೇಳಿಗೊಂಡಿತ್ತಿದ್ದವು. ಕೇಳ್ಳೆ ಬಂದೋರು ಕೇಳಿಗೊಂಡೂ ಇತ್ತಿದ್ದವು.
ಆದರೆ, ನಮ್ಮ ಈ ಮಾಣಿಗೆ ಹಶು-ಅಂಬೆರ್ಪು ಬಿಡೆಕ್ಕೇ, ಓಡ್ತ ಅಂಬೆರ್ಪಿಲಿ ಈ ಕವಡೆ ಲೆಕ್ಕಾಚಾರದ ಗ್ರಹಚಕ್ರದ ಮೇಗೆಯೇ ಓಡಿದ. ಕವಡೆಗಳ ಮೇಗಂಗೆ ಕಾಲು ತಟ್ಟಿತ್ತತ್ತೆ! ಛೇ!!
ಅವನ ಅಂಬೆರ್ಪಿಲಿ ಕವಡೆ ಚೆಲ್ಲಾಪಿಲ್ಲಿ ಆತು. ಲೆಕ್ಕಮಾಡಿ ಮಡಗಿದ ಕವುಡೆ ಪೂರಾ ಚೆದುರಿ ಹೋದ್ಸರಲ್ಲಿ ಅವಕ್ಕೆ ಬಂತು ಪಿಸುರು! ಪುನಾ ಮಡಗೇಕಾರೆ ಈಗಾಣ ನಮುನೆ ಒಯಿಜಯಂತಿ ಪಂಚಾಂಗ ಇದ್ದೋ? ಇಲ್ಲೆ; ಕಲಿದಿನಂದ ಹಿಡುದು ಪುನಾ ಎಲ್ಲಾ ಗ್ರಹಂಗಳನ್ನೂ ಲೆಕ್ಕ ಮಾಡಿಯೇ ಆಯೇಕಟ್ಟೆ!! ಮದಲೇ ಉಂಬ ಹೊತ್ತಿನ ಹಶು ಬೇರೆ, ಅದರ ಮೇಗಂದ ಫಲ ಕೇಳಿಂಡಿದ್ದವರ ತಾಳ್ಮೆ ಪರೀಕ್ಷೆ ಮಾಡ್ತ ನಮುನೆಲಿ ಉಂಬ ಅಂಬೆರ್ಪಿನ ಮಾಣಿಯ ಲೂಟಿ!
ಆ ಮಾಣಿಗೆ ಹೇಳ್ತೋರು ಕೇಳ್ತೋರು ಆರೂ ಇಲ್ಲದ್ದ ಕಾರಣ ಬೈವದಕ್ಕೆ ಏನೂ ಹೆದರಿಕೆ ಇಲ್ಲೆ ಇದಾ!
ಆ ಜೋಯಿಶಮಾವ ಸಮಾ ಬೈದವುದೇ – ಬೋಚ, ತಿಂಬ್ರಾಂಡಿ, ಗುಮನ ಇಲ್ಲೆ, ಜೆಬಾದಾರಿಕೆ ಇಲ್ಲೆ, ಅಷ್ಟು ಬಂಙ ಬಂದು ಲೆಕ್ಕಮಾಡಿ ಮಡಗಿದ ಕವುಡೆಗೊ ಚೆದುರುಸಿ ಮಡಗಿದೆ – ಹಾಂಗೆ ಹೀಂಗೆ ಹೇದು.
ಅಂಬೆರ್ಪಿಲಿ ಹೋವುತ್ತ ಮಾಣಿಗೆ ಈ ಬೈಗಳು ಕೇಳುಲೆ ಸುರು ಆತಲ್ಲದೋ – ಒಂದರಿಯೇ ತಿರುಗಿ
“ಹೋ ಅದುವೋ, ಅದು ಸಾರ ಇಲ್ಲೆ. ಆನು ಮಡಗಿ ಕೊಡ್ತೆ” – ಹೇಳಿದನಾಡ.
ಈ ಅಜ್ಞಾನಿ ಎಂತ್ಸರ ಮಡಗಿ ಕೊಡುಸ್ಸು? – ಹೇದು ಸಸಾರ ಆದರೂ, ಮಾಣಿಗೆ ರಜ ಬೈವಲೆ ಅವಕಾಶ ಸಿಕ್ಕಲಿ ಹೇದೋ ಏನೋ, “ಆತು ಮಡಗು” – ಹೇಳಿದವಾಡ.
ನೋಡಿಂಡಿದ್ದ ಹಾಂಗೇ, ಈ ಮಾಣಿ ತನ್ನ ಕಾಲು ತಟ್ಟಿ ರಟ್ಟಿದ ಕವುಡೆಗಳ ಎಲ್ಲವನ್ನೂ – ಮದಲು ಇದ್ದ ಆಯಾ ಸ್ಥಾನಲ್ಲೇ ಮಡಗಿದನಾಡ!
ಪ್ರಕಾಂಡ ಪಾಂಡಿತ್ಯ ಇಪ್ಪ ತನಗೇ ಅದರ ಅಲ್ಲಿ ಮಡಗಲೆ ಕಷ್ಟ, ಈ ಮಾಣಿ ಅರೆಕ್ಷಣ ಕಂಡ ನೆಂಪಿಲಿ ಒಪಾಸು ಅವೆಲ್ಲವನ್ನೂ ಅದರ ಜಾಗೆಲಿ ಮಡಗಿದ್ದನಲ್ಲದೊ- ಜೋಯಿಶಮಾವಂಗೆ ಅದ್ಭುತ ಆಶ್ಚರ್ಯ!!
ಕತೆ ಕೇಳಿದ ಒಪ್ಪಣ್ಣಂಗೂ.
~
ಸಮ, ಅವು ಮತ್ತೆ ಉಂಬಲೆ ಹೋಗಿಕ್ಕು, ಉಂಡಿಕ್ಕು. ಆದರೆ ವಿಷಯ ಅದಲ್ಲ – ಈ ಜೋಯಿಶಮಾವಂಗೆ “ಮಾಣಿ ಅಸಾಧಾರಣ” – ಹೇಳ್ತ ಸಂಗತಿ ಅರಡಿತ್ತು. ವಿಷ್ಯಂಗಳ ಮೆದುಳಿಂಗೆ ತೆಕ್ಕೊಳ್ತ ಆ ಸಾಮರ್ಥ್ಯ ಅಗಾಧವಾಗಿದ್ದು. ಆದರೆ, ಇಷ್ಟೂ ಸಮೆಯ ಬಳಸಿಗೊಳದ್ದೇ ಇದ್ದದು – ಹೇಳ್ತ ಸತ್ಯ ಅರಡಿಗಾವುತ್ತು. ಹಾಂಗಾಗಿ, ಆ ದಿನಂದ ಮತ್ತೆ ತಾನೇ ಆ ಮಾಣಿಗೆ ಗುರು ಆಗಿ ನಿಂದು, ವೇದ-ಮಂತ್ರ-ಸಂಸ್ಕೃತ-ವ್ಯಾಕರಣ ಇತ್ಯಾದಿಗಳ ಹೇಳಿಕೊಡ್ತನಾಡ.
ಮಾಣಿಯೂ ಕಲ್ತ°, ಎಲ್ಲವನ್ನೂ ನೆಂಪು ಮಡಗಿ – ಪ್ರಕಾಂಡ ಪಂಡಿತ ಆಗಿ ಹೋವುತ್ತ°.
ಆ ಪಂಡಿತ ಮಾಣಿಯೇ “ನಾರಾಯಣ”. ಮುಂದೆ ಮೇಪ್ಪತ್ತೂರು ನಾರಾಯಣ ಭಟ್ಟಾತಿರಿ – ಹೇಳ್ತ ಹೆಸರಿಲಿ ಪ್ರಸಿದ್ಧಿ ಆವುತ್ತನಾಡ.
ಮುಂದೆ ಆ ನಾರಾಯಣ ತನ್ನ ಜೀವಮಾನವ ಇಡೀ ಆ ದೇವಸ್ಥಾನದ ಜೆಗಿಲಿಲಿಯೇ ಕಳೆತ್ತ.
ಸೋಮಾರಿ ಆಗಿ ಅಲ್ಲ, ಮೂಢ ಆಗಿ ಅಲ್ಲ – ಬದಲಾಗಿ ಪ್ರಕಾಂಡ ಜ್ಞಾನಿಯಾಗಿ.
ಆ ದೇವಸ್ಥಾನವೇ “ಗುರುವಾಯೂರು” ಶ್ರೀಕೃಷ್ಣ ದೇವಸ್ಥಾನ.
ತನ್ನ ಅಜ್ಞಾನದ ಜೀವನಂದ ಜ್ಞಾನದ ಜೀವನದ ದಾರಿಗೆ ಕಾರಣ ಗುರುವಾಯೂರಿನ ಶ್ರೀಕೃಷ್ಣನೇ ಹೇದು ನಾರಾಯಣ ಭಟ್ರಿಂಗೆ ಗೊಂತಿದ್ದು. ಕೃಷ್ಣ ಭಕ್ತರಾಗಿ ಜೀವನ ಇಡೀ ನಾರಾಯಣ ಸೇವೆಲೇ ಕಳದ ಭಟ್ರು ಮುಂದೆ “ನಾರಾಯಣೀಯಂ” – ಹೇಳುವ ಮಹದ್ಗ್ರಂಥ ಬರೆತ್ತವು. ಲಕ್ಷಾಂತರ ಶ್ಲೋಕದ ಭಾಗವತ ಪುರಾಣವ ಸಾವಿರ ಶ್ಲೋಕಕ್ಕೆ ಇಳುಸಿ, ಸಾರವ ಪರಿಶುದ್ಧವಾಗಿ ಮಡಗಿದ್ದವಾಡ ಆ ರಚನೆಲಿ. ಈಗಳೂ ಸಂಸ್ಕೃತ ವ್ಯಾಕರಣ ವಿದ್ಯಾರ್ಥಿಗೊಕ್ಕೆ ಆ ಗ್ರಂಥ ಅತ್ಯುಚ್ಚ ಪಠ್ಯ ಆಡ.
ಇದಿಷ್ಟು ಶಂಬಜ್ಜ ಯೇವಗಳೂ ಹೇಳುಗು.
~
ಶಂಬಜ್ಜನ ಬಾಯಿಲಿ ಇದೇ ನಾರಾಯಣ ಭಟ್ರ ಇನ್ನೂ ಕೆಲವು ಕತೆಗೊ ತಿರುಗೆಂಡು ಇದ್ದತ್ತು.
ಪೂರ ಹೇಳಿರೆ ಇದುವೇ ಒಂದು ನಾರಾಯಣೀಯ ಅಕ್ಕೋ ಏನೋ, ಒಂದು ಹೇಳಿಕ್ಕುತ್ತೆ –
ಈ ಭಟ್ರು ಅವರ ವಾರ್ಧಕ್ಯಲ್ಲಿ – ಗುರುವಾಯೂರು ಗೋಪುರಲ್ಲಿ ಕೂದುಗೊಂಡು ಸಂಸ್ಕೃತ ಸಾಹಿತ್ಯ ರಚನೆಯೋ, ವೇದ ಪುರಾಣಂಗಳ ಅಧ್ಯಯನವೋ, ವ್ಯಾಕರಣ ಗ್ರಂಥ ರಚನೆಯೋ – ಎಂತದೋ ಮಾಡಿಗೊಂಡು ಇಪ್ಪಗ, ಸುಮಾರು ದಿನಂದ ಒಬ್ಬ ವಟು ಲೂಟಿಮಾಡಿಗೊಂಡು ಇತ್ತಿದ್ದನಾಡ. ದಿನವೂ ಸಹಿಸಿರೂ, ಅದೊಂದು ದಿನ ಈ ಅಜ್ಜಯ್ಯಂಗೆ ಪಿಸುರೇ ಬಂತು.
“ಹೋವುತ್ತೆಯೋ, ಇಲ್ಲೆಯೋ ಅತ್ಲಾಗಿ” – ಹೇದು ಕೈಲಿ ನೂಕಿದವಾಡ ಆ ಮಾಣಿಯ.
“ಎನ್ನ ನೀನೇ ಬಪ್ಪಲೆ ಹೇಳುದ್ದು. ಹೋಯೆಕ್ಕೋ – ಇದಾ, ಹೋವುತ್ತೆ” – ಹೇದು ಓಡ್ಳೆ ಹೆರಟನಾಡ.
ನಾರಾಯಣ ಭಟ್ರಿಂಗೆ ಗೊಂತಾತು –ಇದು ಸಾಕ್ಷಾತ್ ಶ್ರೀಕೃಷ್ಣನೇ ಬಂದ್ಸು – ಹೇದು.
ವಟು ಓಡಿದ ಹಾಂಗೇ ಹಿಂದಂದಲೇ ಅಜ್ಜನೂ ಓಡಿದವಾಡ, ಎಷ್ಟೋ ದೂರ.
ಮತ್ತೆ ಬಾಲವಟು ಕೃಷ್ಣನ ರೂಪಲ್ಲಿ ಕಂಡು ಅದೃಶ್ಯನಾದನಡ.
ನಾರಾಯಣ ಭಟ್ಟಾತಿರಿಗೆ ಪೂರ್ಣ ಆಶೀರ್ವಾದ ಇದ್ದು ಹೇದು ಆಕಾಶವಾಣಿಯೂ ಕೇಳಿತ್ತಡ. ಈಗಾಣ ನಮುನೆ ರೇಡ್ಯ ಬೇಡ ಇದಾ ಅಂಬಗ!
ಅದಿರಳಿ.
~
ಆ ಮಾಣಿಯ ಜೀವನಲ್ಲಿ ಅಷ್ಟು ಬದಲಾವಣೆಗೆ ಕಾರಣ ಎಂತರ? – ಗುರುವಾಯೂರಿನ ಶ್ರೀಕೃಷ್ಣನೇ ಆಡ.
ಗುರುವಾಯೂರಿನ ಪರಮ ಗುರು ಆ ಶ್ರೀಕೃಷ್ಣನ ಅನುಗ್ರಹಲ್ಲೆ ಸೋಮಾರಿ ಮಾಣಿ ಪ್ರಕಾಂಡ ಪಂಡಿತನಾಗಿ ಹೋದ್ಸು – ಹೇದು ಶಂಬಜ್ಜ ಯೇವಗಳೂ ನೆಂಪು ಹೇಳುಗು.
ಆ ಗುರುವಾಯೂರು ದೇವರ ಬಗ್ಗೆ ಹಲವಾರು ಕತೆಗೊ ನಮ್ಮ ಅಜ್ಜಂದ್ರ ಬಾಯಿಲಿ ಓಡಾಡಿಗೊಂಡು ಇದ್ದು. ಹಳಬ್ಬರು ಜೀವಮಾನಲ್ಲಿ ಒಂದರಿಯಾದರೂ ಹೋಗಿ ಕೃಷ್ಣನ ಕಂಡಿಕ್ಕಿ ಬಕ್ಕು.
ಶಂಬಜ್ಜನ ಜೀವಮಾನಲ್ಲಿ ಹಲವೂ ಸರ್ತಿ ಗುರುವಾಯೂರು ಕೃಷ್ಣನ ಕಂಡಿಕ್ಕಿ ಬಯಿಂದವುದೇ. ನಾವುದೇ ದೇವರೆತ್ತುಸಿ ಅಪ್ಪಗ ಆ ಗುರುವಾಯೂರು ಕೃಷ್ಣನ ನೆಂಪು ಮಾಡಿಗೊಂಡು, ಕಂಡು, ಜೀವನದ ಗುರಿಯ ಘಟ್ಟಿ ಮಾಡಿಗೊಂಬೊ.
ನಮ್ಮ ಜೆನಜೀವನಲ್ಲಿ ಗುರುವಾಯೂರು ಕೃಷ್ಣನ ಪ್ರಭಾವಳಿ ಆ ನಮುನೆ ಇದ್ದು.
~
ಮೊನ್ನೆ ಕೈರಂಗಳ ರಾಮಕತೆ ಕಳಾತಲ್ಲದೋ, ಸುರೂವಾಣ ಎರಡು ದಿನವೂ, ಅಕೇರಿಯಾಣ ಎರಡು ದಿನವೂ ಒಪ್ಪಣ್ಣಂಗೆ ಹೋಪಲಾತಿಲ್ಲೆ. ಒಳುದ ಎಲ್ಲಾ ದಿನವೂ ಹೋಗಿತ್ತಿದ್ದೆ. ಹಾಂಗೆ ಹೋಗಿಪ್ಪಗ ಕೈರಂಗಳ ದೊಡ್ಡಪ್ಪ ಸಿಕ್ಕಿ ತುಂಬ ಮಾತಾಡಿದವು. ರಾಮಕತೆ ಮುಗುದಪ್ಪದ್ದೇ ಅವು ಗುರುವಾಯೂರಿಂಗೆ ಹೋಗಿ ಕೃಷ್ಣನ ಕಂಡಿಕ್ಕಿ ಬತ್ತವಾಡ- ಹೇಳಿದವು.
ಅವು ಆ ಕ್ಷೇತ್ರದ ಹೆಸರು ತೆಗದ್ದೇ, ಶಂಬಜ್ಜ ಹೇಳಿದ ನಾರಾಯಣ ಭಟ್ಟಾತಿರಿಯ ಕತೆ ನೆಂಪಾತು.
ಹಳೇ ಜಾನಪದ ಕತೆ ಆದ ಕಾರಣ ಬೈಲಿಂಗೆ ಹೇಳಿಕ್ಕುವೊ – ಹೇದು ಕಂಡತ್ತು.
~
ಗುರಿಯ ಕಾಂಬಲೆ ಎಡಿಗಾಗದ್ದ ಮಾಣಿಗೆ ಗುರಿ ತೋರ್ಸಿ, ಜೀವನ ಪೂರ್ತಿ ಪಾಂಡಿತ್ಯಕ್ಕೆ ಗುರುವಾಗಿ ನಿಂದ ಗುರುವಾಯೂರಿನ ಕೃಷ್ಣನ ಕತೆ; ಒಂದರಿ ನೆಂಪುಮಾಡಿಕ್ಕುವೊ.
ನಮ್ಮ ನಮ್ಮ ಗುರಿ ಯೇವದು ಹೇಳ್ತರ ನಾವು ಕಾಂಬದೇ ಗುರು ಅನುಗ್ರಹ ಸಿಕ್ಕಿದ ಮತ್ತೆ. ಅದಲ್ಲದ್ದೇ ಹೋದರೆ ಅಂತೇ ಉಗುರು ಕಚ್ಚಿಗೊಂಡು ಕೂರೇಕಷ್ಟೇ!
ಗುರು ಅನುಗ್ರಹ ಎಲ್ಲೋರಿಂಗೂ ಒಲಿಯಲಿ. ನಮ್ಮ ಗುರಿ ಸ್ಪಷ್ಟಮಾಡಿಗೊಂಬೊ.
ಭಟ್ಟಾತಿರಿಗೆ ಒಲುದ ಗುರು ಭಾಗ್ಯ ಎಲ್ಲೋರಿಂಗೂ ಸಿಕ್ಕಲಿ – ಹೇಳ್ತದು ಬೈಲಿನ ಆಶಯ.
~
ಒಂದೊಪ್ಪ: ಗುರು ಸಿಕ್ಕಿದ ಮತ್ತೆಯೇ ಗುರಿ ಸಿಕ್ಕುಗು; ಗುರಿ ಸ್ಪಷ್ಟ ಆದ ಮತ್ತೆಯೇ ಗುರುಸೇವೆ ಒಲಿಗಷ್ಟೆ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
Narayana Bhatta ra ee ankana odi hosa visaya gontatu. Dhanyavadang oppanna bavange 🙂
ಮಾಹಿತಿಗಳ ಭಂಡಾರವೆ ಹೆರ ಬಂತದ..ಒಂದು ಒಪ್ಪ..
ಒಪ್ಪಣ್ಣ ಈ ನಾರಾಯಣೀಯ ಕ್ರುತಿಯ ಎನ್ನ ಅಪ್ಪನ ಮನೆಲಿ ಆನು ಸಣ್ಣಾಗಿಪ್ಪಗ ದೊಡ್ಡವು ಮೂರ್ಸಂಧಿ ಅಪ್ಪಗ ಓದುದು ಕೇಳಿದ್ದೆ.. ಆರಿ೦ಗಾರು ಅಸೌಖ್ಯ ಇದ್ದರೆ ಅವು ನಿಯಮಲ್ಲಿ ದಿನಕ್ಕೆ ಇ೦ತಿಷ್ಟು ಶ್ಳೋಕದ ಹಾ೦ಗೆ ಓದುಗು.. ಈ ಕ್ರುತಿ ಅಪ್ಪನ ಮನೆಲಿ ಈಗಳೂ ಇದ್ದು.. ಆನು ಇದರ ಕನ್ನಡ ಅನುವಾದ ಓದಿದ್ದೆ.. ತು೦ಬ ಲಾಯಿಕ ಇದ್ದು.. ನೀನು ಬರದ ಲೇಖನ ಓದುವಗ ನೆನಪಾತು.. ಭಟ್ಟಾತಿತರಿ ಯ ಕಥೆ ಓದಿ ಮರದಿತ್ತು.. ಈಗ ನೆನಪಿಸಿದ್ದು ಅನುಕೂಲ ಆತು.. ಒಪ್ಪಕೆ ಬರದ್ದೆ ಒಪ್ಪಣ್ಣ.. ಹೊಸ ಹೊಸ ವಿಷಯ೦ಗ ನಿನ್ನ ಮ೦ಡೆಗೆ ಹೊಳೆತ್ತು,, ಸ೦ತೋಷ.. ಓದ್ಲೆ ಖುಷಿ ಆವುತ್ತು…
ಅ೦ದು ತುಂಬ ಹಿ೦ದೆ ಬೈಲಿಲಿ ಕೆಲವು ಮನೆಗಳಲ್ಲಿ ಹೊತ್ತೋಪಗ ಮಿ೦ದು ಜಪ ಮಾಡಿಕ್ಕಿ ಹಳಬ್ಬರು ಪುರಾಣ೦ಗಳ ರಾಗಲ್ಲಿ ಓದಿಕೊ೦ಡಿತ್ತವು.. ಎನ್ನ ಅಪ್ಪನ ಮನೆಲಿ ಆ ಪಧ್ಧತಿ ಇತ್ತು.. ನೆರೆ ಕರೆಯವು ಸೇರಿಕೊ೦ಗು ಕೇಳುಲೆ.. ಎ೦ಗೊಗೆ ಅರ್ಥ ಆಗದ್ದರೂ ರಾಗ ಕೇಳುವಗ ಅಲ್ಲೇ ಒರಗಿ೦ಡಿತ್ತೆಯ..
ಅಬ್ಬ..ಎಷ್ಟು ಮಾಹಿತಿ ಕೊಟ್ಟವು ಲಕ್ಷ್ಮಿ ಅಕ್ಕನೂ ಗಣೇಶಣ್ಣನೂ!
ಧನ್ಯವಾದ.
ಒಪ್ಪಣ್ನನ ಬೈಲು ನಿಜಾರ್ಥಲ್ಲಿ ಬೈಲು ಎನಿಸಿಕೊಂಬದು ಹೀಂಗೆ ಎಲ್ಲೋರೂ ಬರೆದರೆ ಮಾತ್ರ!
Bhaari olle maahiti kottidi… Dhanyavadagalu…
ತುಂಬಾ ಲಾಯಕಿದ್ದು ಶಂಬು ಅಜ್ಜನ ಕತೆ. ಕತೆಯ ಸಂದೇಶವೂ ಲಾಯಕಿದ್ದು. ಸಣ್ಣ ಆದಿಪ್ಪಗ ಕಥೆ ಹೇಳಿ ಗೊಂಡಿದ್ದ ಸಾರಡ್ಕ ಅಜ್ಜನ ನೆಂಪಾತು.
ಓಹ್! ಲಕ್ಷ್ಮೀ ಪ್ರಸಾದ್ ಅಕ್ಕನುದೆ ಸಾಕಷ್ಟು ವಿವರವಾಗಿ ತಿಳಿಶಿದ್ದವು, ಆನು ಟೈಪ್ ಮಾಡ್ತಾ ಇಪ್ಪಗ ಆವುತ್ತು ಅವು ಒಪ್ಪ ಕೊಟ್ತದು! ಅದುವೇ ಸಾಕಿದ್ದತ್ತು!!!
ಒಪ್ಪಣ್ಣ೦ಗೆ ಲಾಯಿಕದ ಲೇಖನ ಬರದ್ದದಕ್ಕೆ ಒಪ್ಪ೦ಗೊ
ಓಮ್ ನಮೋ ನಾರಾಯಣಾಯ.
ನಾರಾಯಣೀಯ೦-ಲ್ಲಿ ಒಟ್ಟು ೧೦೩೬ ಶ್ಳೋಕ೦ಗೊ. (ಶ್ರೀಮದ್ಭಾಗವತದ ೧೮೦೦೦ ಶ್ಲೋಕ೦ಗಳ ಸತ್ವ ಮಾ೦ತ್ರವಾಗಿ ತೆಗೆದು ಮಡುಗಿದ ಅದ್ಭುತ, ಮನೋಹರ ಕೃತಿ). ಇದರ ೧೦೦ ದಶಕ೦ಗಳಲ್ಲಾಗಿ ಹ೦ಚಿದ್ದವು. ವಿಜಯತ್ತೆ ಹೇಳಿದ ಹಾ೦ಗೆ ಶ್ರೀ ಮೇಲ್ಪತ್ತೂರು ನಾರಾಯಣ ಭಟ್ಟಾತಿರಿ ರೋಗಶಾ೦ತಿ ಹೇಳ್ತ ನಿಮಿತ್ತಕ್ಕೆ ಆವುತ್ತು ಈ ಮಹತ್ ಗ್ರ೦ಥ ರಚನೆ ಮಾಡಿದ್ದದು. ಎಲ್ಲಾ ದಶಕ೦ಗಳ ಅಕೇರಿಯಾಣ ಶ್ಲೋಕದ ಉತ್ತರಾರ್ಧ ನೋಡಿರೆ ಗೊ೦ತಕ್ಕು – ಪ್ರತೀ ದಶಕಲ್ಲಿಯುದೆ ಮುಗುಶುವದು ಎನ್ನ ರೋಗ೦ಗಳ ಗುಣಪಡಿಸು ಗುರುವಾಯೂರಪ್ಪಾ… ಹೇಳ್ತ ಪ್ರಾರ್ಥನೆಯೊಟ್ಟಿ೦ಗೆ.
ಕೇರಳದ ತಿರುನಾವಾಯ ಹೇಳ್ತಲ್ಲಿ ಸಾಮಾನ್ಯ ಆರು ಶತಮಾನದಷ್ತು ಮೊದಲು ಅವು ಹುಟ್ಟಿದ್ದದು. ಅಚ್ಯುತ ಪಿಶಾರಡಿ ಹೇಳ್ತ ಅವರ ಗುರುಗೊಕ್ಕೆ ಸೌಖ್ಯ ಇಲ್ಲದ್ದೆ ಆದಪ್ಪಗ ಅವು ಗುರುವಾಯೂರಪ್ಪನ ಹತ್ತರೆ ಮನಸ್ಸು ಕರಗಿ ಪ್ರಾರ್ಥನೆ ಮಾಡ್ತವು – ಗುರುಗಳ ರೋಗವ ಹೇ೦ಗಾರು ಗುಣಪಡಿಸು, ಪಗರಕ್ಕೆ ಆ ರೋಗವ ಆನು ಅನುಭವಿಸಲೆ ಕೂಡಾ ರೆಡಿ ಇದ್ದೆ ಹೇದು. ಕೃಷ್ಣನ ಮಹಿಮೆ ಕೇಳ್ಳಿದ್ದೊ!? “ಓಹೊ! ನೀನು ಅನುಭವಿಶುಲೆ ರೆಡಿ ಇದ್ದೆಯೊ? ಅ೦ಬಗ ಹಾ೦ಗೆಯೇ ಆಗಲಿ” ಗ್ರೇಶಿದನೋ ಎ೦ತ್ಸೊ! ಗುರುಗೊಕ್ಕೆ ಗುಣ ಆತು, ನಾರಾಯಣ ಭಟ್ಟಾತಿರಿಗೊಕ್ಕೆ ವಾತ ಸುರುವಾತು. ಎಷ್ಟು ಜಾಸ್ತಿ ಆತು ಹೇಳಿರೆ ಹ೦ದಲೆ ಎಡಿಯದ್ದಷ್ಟುದೆ ಆತು.
ಎಲ್ಲರು ಎ೦ತ ಮಾಡುದು ಹೇಳಿ ತಲೆ ಬೆಶಿ ಮಾಡುವಗ ಭಟ್ಟಾತಿರಿಗೊ ಹೇಳಿದವು, ಎನ್ನ ಗುರುವಾಯೂರಿ೦ಗೆ ಕರಕ್ಕೊ೦ಡು ಹೋಗಿ, ಅಲ್ಲಿ, ನಾರಾಯಣ ಜೆಪ ಮಾಡಿ೦ಡು ಕೂರ್ತೆ ಹೇಳಿ. ಹಾ೦ಗೆ ಅಲ್ಲಿಪ್ಪಗ ಮಲಯಾಳ ಭಾಷೆಯ ಪಿತಾಮಹ ತು೦ಜತ್ತ್ ಎಳುತ್ತಛ್ಛನ್ತ್ ಅವರ ಹತ್ರೆ ಹೇಳಿದವಾಡ – “ಭಟ್ಟಾತಿರಿಗಳೇ! ನಿ೦ಗಳ ರೋಗಕ್ಕೆ ಚಿಕಿತ್ಸೆ ಮೀನಿನ ಮೂಲಕ ಸುರುಮಾಡಿ, ಖ೦ಡಿತ ಗುಣ ಸಿಕ್ಕದ್ದೆ ಇರ..” ಇದರ ಕೇಳಿ ಬಾಕಿ ಇಪ್ಪವಕ್ಕೆ ತಲೆಬೆಶಿ ಆತಾಡ – ” ಒಬ್ಬ ಶುಧ್ದ ಬ್ರಾಹ್ಮಣನ ಹತ್ರೆ ಮೀನಿನ ಚಿಕಿತ್ಸೆ ಹೇಳ್ತವನ್ನೆ!” ಹೇಳಿ. ಆದರೆ ಮಹಾಜ್ನ್ಹಾನಿ ನಾರಾಯಣ ಭಟ್ಟಾತಿರಿಗೊಕ್ಕೆ ವಿಷಯ ಅರ್ಥ ಆತು, ಅವು ಮತ್ಸ್ಯಾವತಾರ೦ದ ಸುರುಮಾಡಿ ಮಹಾವಿಷ್ಣುವಿನ ಅವತಾರ೦ಗಳ ಎಲ್ಲವನ್ನೂ ಪ್ರಕೀರ್ತಿಸುತ್ತ “ನಾರಾಯಣೀಯ೦” ರಚಿಸಿದವು. ಅದರ ೯೯ ದಶಕ೦ಗಳ ರಚನೆ ಮುಗಿವಗ ಅವರ ರೋಗವೂ ಮುಗುದತ್ತಡ.
೧೦೦ನೇ ದಶಕ “ಕೇಶಾದಿ ಪಾದ ವರ್ಣನ೦” – ದೇವರ ಅಡಿಮುಡಿ ವರ್ಣನೆ. ಆನು ಪ್ರತೀ ಗುರುವಾರ ಇಲ್ಲಿ ಕೆಲವು ಆಸ್ತಿಕ ಮಲಯಾಳಿಗಳ ಒಟ್ಟಿ೦ಗೆ ಸೇರಿಗೊ೦ಡು ನಾರಾಯಣೀಯ೦ ಪಾರಾಯಣ ಮಾಡ್ತೆ, ತಪ್ಪದ್ದೆ. ಅದರ ಅರ್ಥ ಮಾಡಿಗೊ೦ಡು ಸರಿಯಾದ ರಾಗಲ್ಲಿ ಪಾರಾಯಣ ಮಾಡುವಗ ಸಿಕ್ಕುತ್ತ ಅನುಭವ ವರ್ಣಿಸಲಸದಳ. ಕೇಶಾದಿ ಪಾದ ವರ್ಣನೆ ಮಾಡುವಗ ಕಣ್ಣಿಲ್ಲಿ ನಿಜವಾಗಿ ಆನ೦ದದ ಕಣ್ಣೀರು ಬತ್ತು. ಹೇಳಿರೆ ಗೊ೦ತಪ್ಪಲೆ ಕಷ್ಟ, ಅನುಭವಿಸಿಯೇ ಅರಡಿಯೆಕು.
ದೇವರು ಲೋಕಕ್ಕೆ ಒಳ್ಳೇದು ಮಾಡ್ಲಿ.
ನಾರಾಯಣ ನಾರಾಯಣ ಭಟ್ಟಾತಿರಿ ರಚಿಸಿದ “ನಾರಾಯಣೀಯಂ” ಎನ್ನತ್ತರೆ ಇದ್ದು .ಇದರ ಕೆಲವು ಶ್ಲೋಕಂಗಳ ಆನು ೫ ನೇ ಕ್ಲಾಸ್ ಲಿ ಓದುವಾಗ ಎನ್ಗೊಗೆ ಎಂಗಳ ಗುರುಗ ಶ್ರೀ ಹರಿನಾರಾಯಣ ಶರ್ಮ (ಭಟ್ ?)ಇದರ ವಾಚನ ಮಾಡಿಸಿಕೊಂಡು ಇತ್ತಿದವು.ಎನಗೆ ಗೋಪೀ ಜನಾಯ ಕಥಿತಂ ..ಇತ್ಯಾದಿ ಕೆಲವು ಶ್ಲೋಕಂಗ ಬಾಯಿ ಪಾಠ ಬಂದು ಕೊಂಡು ಇತ್ತು .
ಎನ್ನ ತಮ್ಮ ಈಶ್ವರ ಭಟ್ ವಾರಣಾಸಿ ಇದರ ತುಂಬಾ ಚಂದಕ್ಕೆ ಹೇಳಿಗೊಂಡು ಇತ್ತಿದ .
ಸುಮಾರು ವರ್ಷ ಮೊದಲು ೧೯೮೭-೮೮ ಆಡಿಕ್ಕು ಅಮ್ಬಗ ರಾಮ ಪಾದುಕೆ (ಅಥವಾ ಇಟ್ಟಿಗೆ ಎನಗೆ ಸರಿ ನೆನಪಿಲ್ಲ್ಲೇ )ರಥ ಮೀಯಪದವಿಂಗೆ ಬಂದಪ್ಪಗ ನಾರಾಯಣೀಯಂ ನ 50 ಶ್ಲೋಕಂಗಳ ಕಾವ್ಯವಾಚನ ಕಾರ್ಯಕ್ರಮ ಇತ್ತು ಅದರಲ್ಲಿ ಎನ್ನ ತಮ್ಮ ಈಶ್ವರ ಹಾಡಿದ್ದು ಅದರ ಅರ್ಥವ ವಿವರಿಸಿದ್ದು ಎಂಗಳ ಗುರುಗಳಾದ ಹರಿ ನಾರಾಯಣ ಶರ್ಮರು ..ಆದರೆ ಅವು ಹೇಳಿದ ಅರ್ಥ ಎನಗೆ ಈಗ ರಜ್ಜವೂ ನೆನಪಿಲ್ಲೇ ಆದರೆ ಆಗ ನೋಡಿದ್ದು ಈಗಲೂ ಕಣ್ಣಿಗೆ ಕಟ್ಟುತ್ತು ಅದು ಭಾರೀ ಲಾಯಕ ಆಗಿತ್ತು
ಅಂಬಗ ಎಂಗಳ ಗುರುಗ ಎನ್ನ ತಮ್ಮಂಗೆ ಪ್ರೀತಿಲಿ ಆಶೀರ್ವಾದ ಮಾಡಿ ಕೊಟ್ಟ ಪುಸ್ತಕ “ನಾರಾಯಣೀಯಂ”
ಇದರಲ್ಲಿ ಒಟ್ಟು ನೂರು ದಶಕಂಗ ಇದ್ದು ಒಂದು ದಶಕ ಲ್ಲಿ ಹೆಸರೇ ಸೂಚಿಸುವ ಹಾಂಗೆ ಹತ್ತು ಶ್ಲೋಕಂಗ ಇದ್ದು ಜೊತೆಗೆ ಸುಮಾರು ದಶಕಗಳ ಕೊನೆಗೆ ಪಾಹಿ ಮಾಂ(ರಕ್ಷಿಸು ಎನ್ನ ) ..ಇತ್ಯಾದಿ ಕೇಳುವ ಒಂದು ಶ್ಲೋಕ ಹೆಚ್ಚು ಇದ್ದು.ಎಲ್ಲ ದಶಕಗಳಲ್ಲಿ ಇಲ್ಲೆ
ಹಾಂಗಾಗಿ ಈ ಕೃತಿಲಿ ಒಟ್ಟು 100 x 10 =1000 ಶ್ಲೋಕಂಗ ಮತ್ತು ಹೆಚ್ಚುವರಿಯಾಗಿಪ್ಪ 36 ಶ್ಲೋಕಂಗ ಇದ್ದು
ಒಟ್ಟು ಸಾವಿರದ ಮೂವತ್ತಾರು (1036)ಶ್ಲೋಕಂಗ ಇಪ್ಪ ಬೃಹತ್ ಕೃತಿ ಇದು .ಇದರಲ್ಲಿ ಮೆಪತ್ತೂರು ನಾರಾಯಣ ಭಟ್ಟತಿರಿ ಗ 106 ವರ್ಷ ಬದುಕಿತ್ತಿದವು.”ಇವು ಸಣ್ಣಾದಿಪ್ಪಗ ಹಿರಿಯರು ಹೇಳಿದ್ದರ ಕೇಳದ್ದ್ದೆ ಹೆಂಡತಿ ಒತ್ತಿನ್ಗೆ ಸ್ವಚಂದವಾಗಿ ತಿರುಗಿ ಉಂಡು ತಿಂದು ಜೀವನವ ವ್ಯರ್ಥ ಮಾಡಿಗೊಂಡು ಇತ್ತಿದವು ,ಇವರ ಮನೆಯ ಹಿರಿಯರು ಜ್ಯೋತಿಷ್ಯದ ಪ್ರಕಾಂಡ ಪಂಡಿತರಾಗಿತ್ತಿದವು. ಒಂದು ದಿನ ಉದಿಯಪ್ಪಗ ಒರಕ್ಕಿಂದ ಎದ್ದು ಹೆರ ಬಪ್ಪಗ ಸಣ್ಣ ಪ್ರಾಯಲ್ಲಿ ಕೆಟ್ಟ ಕೆಲಸ ಮಾಡಿದ ಫಲವಾಗಿ ನಾನಾ ರೋಗ ರುಜಿನಂದ ಸಮಸ್ಯೆಂದ ನರಳುತ್ತಾ ಇಪ್ಪ ಒಬ್ಬ ಪ್ರಾಯದ ವ್ಯಕ್ತಿಯ ರಾಶಿ ಚಕ್ರ /ಜಾತಕ ನೋಡಿಕೊಂಡು ಅವು ಇತ್ತಿದವಡ .ಇವು ಅದರ ಗಡಿಬಿಡಿಲಿ ದಂಕಿಕೊಂಡು ದಾಂಟಿದವಡ .ಅಮ್ಬಗ ಇವಕೆ ಶಾಕ್ ಬಡುದ ಹಾಂಗೆ ಆಗಿ ಜ್ಞಾನೋದಯ ಅತು.ಅವರಲ್ಲಿ ಕೂಡಲೇ ಕ್ಷಮೆ ಕೆಳಿದವಡ “ಹೇಳಿ ಈ ಕೃತಿಯ ಪ್ರಸ್ತಾವನೆಲಿ ಬರದ್ದವು.ಅದಕ್ಕೆ ಆಧಾರವಾಗಿ 1) ಭೂ ಖಂಡೇ ಕೇರಳ …
2 )ಮೀಮಾಂಸಾದಿ …ಎರಡು ಶ್ಲೋಕಂಗಳ ಕೊಟ್ಟಿದವು.ಮುಂದೆ ಅಧ್ಯಯನ ಮಾಡಿ ದೊಡ್ಡ ವಿದ್ವಾಂಸರು ಆದವು.ಆದರೆ ಸಣ್ಣಾದಿಪ್ಪಗ ಉಂಡಾಡಿ ಆಗಿದ್ದ ನಿಯಮಾವ ಅನುಸರಿಸದೆ ಇದ್ದ ವ ವೇದಾಧ್ಯಯನ ಅನರ್ಹರಾಗಿದ್ದ ,ಆ ಬಗ್ಗೆ ಆಸಕ್ತಿ ಇಲ್ಲದ್ದ ಭಟ್ತತ್ತಿರಿಗೆ ವೇದ ಹೇಳಿಕೊಟ್ಟ ದೋಷದ ಫಲವಾಗಿ ಅವರ ಗುರುಗೊಕ್ಕೆ ವಾತ ರೋಗ ಬಂತು.ಗುರುವಾಯೂರು ದೇವರ ಭಕ್ತರಾಗಿದ್ದ ಭಟ್ತತಿರಿ ಗ ದೇವರಲ್ಲಿ ಪ್ರಾರ್ಥಿಸಿ ಆ ರೋಗವ ಎನಗೆ ಕೊಡು ಗುರುಗಳ ಕ್ಷಮಿಸು ಹೇಳಿ ಕೇಳಿಗೊಂಡು ಅಪ್ಪಗ ಭಟ್ತತ್ರಿಗೆ ವಾತ ಬಂತು ಗುರುಗ ಉಷಾರಿ ಆದವು ಆದರೆ ಆ ಬೇನೆಯ ಇವಕ್ಕೆ ಅನುಭವಿಸುಲೇ ಎದ್ತತ್ತಿಲ್ಲೇ .ಅಮ್ಬಗ ಆ ಕಾಲಲ್ಲಿ ಪ್ರಸಿದ್ಧರಾಗಿದ್ದ ಕವಿ /ವಿದ್ವಾಂಸರು ನೀನುಮೀನಿಂದ ಸುರು ಮಾಡು ಹೇಳಿ ಸಾಂಕೇತಿಕವಾಗಿ ಹೇಳಿದವಡ .ಅದರ ಅರ್ಥ ಮಾಡಿ ಗೊಂಡ ಭಟ್ತತಿರಿ ಮತ್ಸಾವತಾರಂದ ಆರಂಭಿಸಿ ಕೊನೆತನಕ ಈ ಕೃತಿಯ ದೇವರೆದುರು ರಚಿಸಿ ಸ್ತುತಿಸಿ ಪಾಪಂದ /ರೋಗಂದ ಪಾರು ಮಾಡು ಹೇಳಿ ಪ್ರಾರ್ಥಿಸಿದವು ಇವಕ್ಕೆ ರೋಗ ಮುಕ್ತಿ ಆತು “ಹೇಳಿ ಇದರ ಪ್ರಸ್ತಾವನೆಲಿ ಇದ್ದು.ಇದರಲ್ಲಿ ರಾಶಿ ಚಕ್ರ ಮೆಟ್ಟಿದ ಕಥಾ ಭಾಗ ರಜ್ಜ ಅಸ್ಪಷ್ಟ ಆಗಿ ಇದ್ದು .
ತಮ್ಮಂಗೆ ಕೊಟ್ಟ ಆ ಕೃತಿಯ ಎಂಗ ಜಾಗ್ರತೆಲಿ ತೆಗದು ಮಡುಗಿತ್ತಿದೆಯ .ಇಲ್ಲಿ ಒಪ್ಪಣ್ಣ ಬರದ ಭಟ್ಟತ್ತಿರಿ ಗಳ ಕಥೆ ಓದಿ ಅಪ್ಪಗ ಎನ್ನತ್ತರೆ ಈ ಕೃತಿ ಇದ್ದು ಹೇಳಿ ನೆನಪಾಗಿ ಹುಡುಕಿ ಎದುರೆ ಮಾಡಿಕ್ಕೊಂದು ಕೂಯಿದೆ .ಆನು ಹಿಂದೆ ಬಾಯಿ ಪಾಠ ಹೇಳಿಗೊಂಡು ಇದ್ದ ಪದ್ಯಂಗ ಎಲ್ಲಿದ್ದು ಹೇಳಿ ಹುಡುಕುವ ಸಲುವಾಗಿ ಪುಸ್ತಕ ತೆರೆದರೆ ಇದರಲ್ಲಿ ಸಾವಿರಕ್ಕಿಂತ ಹೆಚ್ಚು ಶ್ಲೋಕಂಗ ಇದ್ದು ಹೇಳಿ ಗೊಂತಾತು
ಎನ್ನತ್ತರೆ ಇಪ್ಪ ಈ ಕೃತಿ 1962 ಪಬ್ಲಿಶ್ ಆದ ಕೃತಿ. ಇದ್ರಲ್ಲಿ ಇಸವಿ ಹಾಕಿದ್ದು ಸರಿ ಕಾಣ್ತಿಲ್ಲೆ . 260 ಪುಟಂಗ ಇದ್ದು ಇದರ ಬೆಲೆ 3 Rs ಹೇಳಿ ಇದ್ದು.ಇದರ ಪಬ್ಲಿಷೆರ್ಗ The Educational supplies Depot PALGHAT ,
ಈ ಕೃತಿಯ ಹುಡುಕಿ ನೋಡುವ ಪ್ರೇರಣೆ ನೀಡಿದ ಒಪ್ಪಣ್ಣ ಗೆ ಧನ್ಯವಾದಂಗ
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ |ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್ ||
ನಾರಾಯಣ ಭಟ್ಟಾತಿರಿ ಬಗ್ಗೆ ತಿಳುದು ಕೊಷಿ ಆತು ಆನುದೆ ಈ ಕಥೆಯ ಕೇಳಿತ್ತಿಲ್ಲೆ.
ಅಪರೂಪದ ಒಪ್ಪ ಮಾಹಿತಿಯ ಕೊಟ್ಟದಕ್ಕೆ ಒಪ್ಪಣ್ಣಂಗೆ ಮನಃ ಪೂರ್ವಕ ಧನ್ಯವಾದಂಗ
ಹರೇರಾಮ, ನಾರಾಯಣಭಟ್ಟಾದಿರಿ ವಾತ ಸಂಕಟ ಹಿಡುದಿಪ್ಪಗ ಏವ ಮದ್ದು ಮಾಡಿರೂ ಗುಣ ಕಾಣದ್ದೆ ಸೋತು ಹೋದಕಾಲಲ್ಲಿ ಗುರುವಾಯೂರಿಲ್ಲಿ ಕೂದು ನಾರಾಯಣ ಜೆಪ ಮಾಡಿಗೊಂಡಿಪ್ಪಗ ನಾರಾಯಣೀಯಂ ಬರವಲೆ ಸ್ಪೂರ್ತಿ ಬಂದದು ಅದು ಬರದು ಮುಗುದಪ್ಪಗ ಆಶ್ಚರ್ಯ ರೀತಿಲಿ ವಾತರೋಗ ಗುಣಾದ್ದು ಹೇಳುಸ್ಸು ಕೇಳಿದ್ದೆ ಓದಿದ್ದೆ ಆದರೆ ಭಟ್ಟಾದಿರಿಯ ಈ ಕತೆ ಗೊಂತಿತ್ತಿಲ್ಲೆ ಕಷ್ಟಲ್ಲಿ ವೈರಾಗ್ಯ ಹೊಂದಿದವಕ್ಕೆ ಜೀವನ ಪ್ರೀತಿ ಹುಟ್ಟುಲಿಪ್ಪ ವಿಷಯ! ಕುತೂಹಲ ಭರಿತವಾಗಿದ್ದು.
ನಾರಾಯಣ ಭಟ್ರ ಕಥೆ ಎನಗೆ ಹೊಸತ್ತು. ಲಾಯಕ ಇದ್ದು. ಕೃಷ್ಣನ ಕೃಪೆ ಇದ್ರೆ, ಉಂಡಾಡಿ ಗುಂಡನೂ ವಿದ್ವಾಂಸ ಅಕ್ಕಲ್ಲದೊ ?
ಎರಡನೇ ಕತೆ, ಮಾಣಿಯ ಬೈದು ಓಡುಸಿದ ಕತೆ, ನಮ್ಮ ಅನಂತಪುರ ದೇವಸ್ಥಾನದ ಕತೆ ಹಾಂಗಿದ್ದು. ಹಾಂಗೆ ಸುರಂಗ ಮಾರ್ಗವಾಗಿ ಓಡಿದ ಆ ಮಾಣಿ ಅನಂತಶಯನಲ್ಲಿ ಕಾಂಬಲೆ ಸಿಕ್ಕಿದನಾಡ. ಒಪ್ಪಣ್ಣಂಗುದೆ ಈ ಕತೆ ಗೊಂತಿಕ್ಕು.
ಲಾಯಕ ಆಯಿದು. ಉಸಿರು ಹಿಡುದು ಓದುವ ಕಥೆ. ಒಪ್ಪಣ್ಣ ರಾಮಕಥೆಗೆ ಹೋದವೊ ಬಿಟ್ಟವೊ ಗೊಂತಿಲ್ಲೆ. ನಾವಂತೂ ಗುರುವಾಯೂರಿಂಗೆ ಹೋಗಿ ಬಂದಾಂಗೆ ಆತು. ಹರೇ ರಾಮ.
ಪ್ರತಿಯೊಬ್ಬನಲ್ಲಿಯೂ ಒಂದೊಂದು ಪ್ರತಿಭೆ ಸುಪ್ತವಾಗಿರ್ತು. ಅದು ಪ್ರಕಟ ಆಯೆಕ್ಕಾರೆ “ಕವಡೆ” ಕಾಲಿಂಗೆ ಡಂಕಿದ ಹಾಂಗೆ ಒಂದು ನಿಮಿತ್ತ ಬೇಕು. ಜೋಯಿಶರ ಹಾಂಗೆ ದಿವ್ಯ ಚಕ್ಷು ಬೇಕು. ಹಾಂಗೆ ಆಯೆಕ್ಕಾರೆ ಗುರುಬಲವೂ, ದೈವಾನುಗ್ರಹವೂ ಬೇಕು. ಲಾಯಕ ಕತೆಯೂ ಅಪ್ಪು, ಒಳ್ಳೆ ಸಂದೇಶವೂ ಇದ್ದು, ಒಪ್ಪಣ್ಣ.
ಲಾಯ್ಕ ಆಯಿದು. ನಾರಾಯಣೀಯಂ ಬಗ್ಗೆ ಇನ್ನೊಂದು ಕತೆ ಇದ್ದು-ಮತ್ಸ್ಯಾವತಾರಂದ ಸುರು ಮಾಡಿದ ಬಗ್ಗೆ! ಅದನ್ನೂ ಗೊಂತಿದ್ದವು ಬರೆಯೆಕ್ಕು ಹೇಳಿ ಕೇಳಿಕೊಳ್ತೆ.
ಕೃಷ್ಣಂ ವಂದೇ ಜಗದ್ಗುರುಮ್.
ಸುದ್ದಿ ವಿಶೇಷವೂ ವಿಸ್ಮಯವೂ ಆಗಿದ್ದು. ಅಕೇರಿಯಾಣ ಎರಡು ದಿನವೂ ಸುರುವಾಣ ಎರಡು ದಿನವೂ ಬಿಟ್ಟು ಉಳುದ ದಿನ ಕೈರಂಗಳಕ್ಕೆ ಒಪ್ಪಣ್ಣ ಹೋದ್ದು ಅದ್ಭುತ ಆಯ್ದು .
ಒಪ್ಪ ಶುದ್ದಿಗೆ ಹರೇ ರಾಮ .