ಒಪ್ಪಣ್ಣಂಗೆ ಸಿನೆಮ ನೋಡ್ಳೆ ಪುರುಸೊತ್ತೂ ಆವುತ್ತಿಲ್ಲೆ, ಪುರುಸೊತ್ತಿಪ್ಪಗ ಒಳ್ಳೆ ಸಿನೆಮವೂ ಇರ್ತಿಲ್ಲೆ.
ಮತ್ತೆ ಈಗಾಣ ಸಿನೆಮಂಗೊ – ಒಂದು ಸರ್ತಿ ನೋಡಿರೆ ತಲಗೂ ಹೋವುತ್ತಿಲ್ಲೆ, ಅಲ್ಪ ಸರ್ತಿ ನೋಡ್ಳೆ – ಪುರುಸೊತ್ತು ಪೈಶೆ ಆರತ್ರಿದ್ದು!
ಹ್ಹು!
~
ಮೊನ್ನೆ ಹೊತ್ತೋಪಗ ಸುಳ್ಯಲ್ಲಿ ಬೈಲಿನ ಕಾರ್ಯಕ್ರಮ ಮುಗುಶಿ ತರವಾಡು ಮನೆ ಜಾಲಿಲೆ ಆಗಿ ನೆಡಕ್ಕೊಂಡು ಬಂದೆ.
ಜಾಲಿಲೆ ಹಾಂಗೆ ನೆಡಕ್ಕೊಂಡು ಬಪ್ಪಗ ಒಂದು ಗಳಿಗೆ ಮನೆಮೆಟ್ಟುಕಲ್ಲು ಹತ್ತದ್ರೆ ಸಮ ಆವುತ್ತೋ? ಪಾತಿ ಅತ್ತೆಗೆ ಬೇಜಾರಕ್ಕು ಹೋಗದ್ರೆ. ಹಾಂಗೆ ಹೋದೆ.
ರಂಗಮಾವ° ಅಡಕ್ಕೆ ಕೆರಸಿಗೊಂಡು ಇತ್ತಿದ್ದವು. ಪಾತಿಅತ್ತೆ ಅಡಿಗೆ ಕೋಣೆಲಿ ಎಂತದೋ ಕಣ ಕಣ ಮಾಡಿಗೊಂಡು ಇತ್ತಿದ್ದವು, ವಿದ್ಯಕ್ಕ° ರೂಮಿನ ಒಳದಿಕ್ಕೆ ಇತ್ತು, ವಿನು ಮಾಣಿ ಅಜ್ಜಂಗೆ ಲೂಟಿ ಮಾಡಿಗೊಂಡು ಇತ್ತಿದ್ದ°.
ಶಾಂಬಾವ° ಕೆಮಿಗೆ ಒಂದು ವಯರು ಸಿಕ್ಕುಸಿಗೊಂಡು ಸಣ್ಣ ಲೇಪ್ಟೋಪಿಲಿ ಸಿನೆಮ ನೋಡಿಗೊಂಡು ಇತ್ತಿದ್ದ°.
ಎರಡು ಸರ್ತಿ ದಿನಿಗೆಳಿದವು ರಂಗಮಾವ° – ಯೇಯ್, ಕೇಳಿದ್ದಿಲ್ಲೆ.
’ಕೆಮಿ ಒಳ ಸ್ಪೀಕರು ತುರ್ಕುಸಿರೆ ಹೆರ ಬೆಡಿ ಹೊಟ್ಟಿರೂ ಗೊಂತಾಗ ಇವಂಗೆ’ – ಹೇದು ರಂಗಮಾವ° ಪರಂಚಿದವು.
’ಹೆ ಹೆ, ಬೆಡಿ ಹೊಟ್ಟಿರೂ ಗೊಂತಾಗ, ಬೆಡಿ ಹೊಟ್ಟಿರೂ ಗೊಂತಾಗ’ – ಹೇದು ವಿನು ಮಾಣಿ ತನಿಯಾವರ್ತನೆ ಮಾಡಿಗೊಂಡು ಲಾಗ ಹಾಕಿದ°.
ರಜ್ಜ ಹೊತ್ತಪ್ಪಗ ಶಾಂಬಾವಂಗೆ ಗೊಂತಾತು. ತಿರುಗಿ ನೋಡಿದ°, ಕಣ್ಣಕರೆಲಿ ನೀರು!!
ಕೆಮಿಂದ ಪೀಂಕುಸಿ ಮಾತುಕತೆ ಸುರುಮಾಡಿದ°.
~
ಶಾಂಬಾವ° ತುಂಬ ಭಾವುಕ°.
ಹೆರಾಂದ ರಜ್ಜ ದುಡುಕನ ಹಾಂಗೆ ಕಂಡ್ರೂ, ಮನಸ್ಸಿನ ಒಳ ಪಾತಿ ಅತ್ತೆಯೇ!
ಸಿನೆಮ ನೋಡಿದ್ದರ್ಲಿ ಜೆನ ಕಂಗಾಲು!
ಎಂತಾತು ಶಾಂಬಾವಾ – ಕೇಟೆ.
ಸಿನೆಮಲ್ಲಿ ಬಂದ ಕತೆಯ ನಿಧಾನಕ್ಕೆ ವಿವರ್ಸಿದವು.
~
ಜಪಾನಿನ ಒಂದೂರಿಲಿ ಒಬ್ಬರು ಮಾಷ್ಟ್ರು ಇದ್ದಿದ್ದವಾಡ.
ದಿನವೂ ಶಾಲೆಗೆ ಹೋಪದು, ಬಪ್ಪದು, ಒಳುದ ಸಮಯವ ಸಂಸಾರದ ಒಟ್ಟಿಂಗೆ ಕಳವದು.
ನೆಮ್ಮದಿಯ ಕುಟುಂಬ ಅದು.
ಒಂದರಿ ಅವಕ್ಕೆ ಒಂದು ನಾಯಿಕುಂಞಿ ಸಿಕ್ಕುತ್ತಾಡ. ಆರೋ ಎಲ್ಲಿಂದಲೋ ಎಲ್ಲಿಗೋ ಕೊಂಡೋಪ ಸಣ್ಣ ಕುಂಞಿ.
ಆರದ್ದಾದರೆ ಎಂತಾತು, ದಾರಿಲಿ ಹಶುವಿಲಿ ಬಿದ್ದು ಸಾವದು ಬೇಡ – ಹೇದು ಮನೆಗೆ ತಂಡವಾಡ.
’ಆರದ್ದೋ ನಾಯಿಕುಂಞಿ ಸಿಕ್ಕಿದ್ದು, ಬೇಕಾದವು ತೆಕ್ಕೊಂಡು ಹೋಗಿ’ – ಹೇದು ಪೇಪರಿಲಿ ಕೊಡ್ತವಾಡ.
ಕೆಲವು ದಿನ ಆರದ್ದೂ ಸುದ್ದಿಲ್ಲೆ, ಮತ್ತೆ ಒಬ್ಬೊಬ್ಬನೇ ಪೋನು ಮಾಡ್ಳೆ ಸುರು ಮಾಡ್ತವಡ.
ಆದರೆ, ಅಷ್ಟ್ರಲ್ಲಿ ಆ ಕುಂಞಿ ಆ ಮಾಷ್ಟ ಒಟ್ಟಿಂಗೆ ಹಚ್ಚಿಗೊಂಡಿರ್ತಡ.
ಆ ಮಾಷ್ಟ್ರುದೇ ಹಾಂಗೇ – ಆ ನಾಯಿಯ ತುಂಬ ಆಟಾಡ್ಸಿಗೊಂಡು, ಹತ್ತರೆ ಮಾಡಿಗೊಂಡಿರ್ತಾಡ.
ಹಾಂಗಾಗಿ, ಆರಿಂಗೂ ಕೊಡದ್ದೆ,ತಾನೇ ಸಾಂಕುಲೆ ತೀರ್ಮಾನ ಮಾಡ್ತವಾಡ.
ಆ ದಿನಂದ ಅವರ ಮನೆ ಸದಸ್ಯರಲ್ಲಿ ಒಂದಾಗಿ ಬೆಳದತ್ತು ಆ ನಾಯಿ.
ರಜ ದೊಡ್ಡಾತು, ಭಾವನಾತ್ಮಕ ಸಂಬಂಧವೂ ದೊಡ್ಡಾತು.
ಆ ಮಾಷ್ಟ್ರನೊಟ್ಟಿಂಗೆ ಪೇಟೆ ತಿರುಗಲೆ ಹೋವುಸ್ಸು, ಬಸ್ಸು, ಆಟ ಆಡುಸ್ಸು, ಲಾಗ ಹಾಕುಸ್ಸು – ಎಲ್ಲ ಮಾಡಿತ್ತು. ಎಂತ ಮಾಡ್ತರೂ ಮಾಷ್ಟ್ರನ ಒಟ್ಟಿಂಗೇ!
ಇದರೆಡಕ್ಕಿಲಿ, ಆ ಮಾಷ್ತ್ರ ಒಂದರಿ ಶಾಲಗೆ ಹೋಪಗ ರೈಲಿಂಗೆ ಹತ್ತುವಲ್ಲಿ ವರೆಗೆ ಕರಕ್ಕೊಂಡು ಹೋವುತ್ತು. ಮತ್ತೆ ಒಪಾಸು ಮನೆಗೆ ಬಂದರೂ – ತನ್ನ ಯೆಜಮಾನ ದಿನಾಗುಳೂ ರೈಲಿಂಗೆ ಹತ್ತುಸ್ಸು ಎಲ್ಲಿ ಹೇದು ನಾಯಿಗೆ ಅರಡಿಗಾತು.
ಮರದಿನವೂ ಹೋತು, ಆ ಮಾಷ್ಟ್ರನ ಒಟ್ಟಿಂಗೆ – ರೈಲು ಷ್ಟೇಷನು ಒರೆಂಗೆ.
ದಿನಾಗುಳೂ ಒಟ್ಟಿಂಗೆ ಹೋಗಿ ಹೋಗಿ – ಅದಕ್ಕೆ ಅದೇ ಅಭ್ಯಾಸ ಆವುತ್ತು.
ದಿನಾ ಉದಿಯಪ್ಪಗ ರೈಲು ಹತ್ತುವಲ್ಲಿ ಹೋಗಿ ಮಾಷ್ಟ್ರನ ಬಿಟ್ಟಿಕ್ಕಿ ಬಪ್ಪದು.
ಹೊತ್ತೋಪಗ ಮಾಷ್ಟ್ರ ಬಪ್ಪ ಹೊತ್ತಿಂಗೆ ರೈಲು ಹತ್ರಂಗೆ ಹೋಗಿ ಕರಕ್ಕೊಂಡು ಬಪ್ಪದು.
ಉದಿಯಪ್ಪಗ ಬಿಡ್ಳೆ ಹೋಪದು,
ಹೊತ್ತೋಪಗ ಕರಕ್ಕೊಂಡು ಬಪ್ಪಲೆ ಹೋಪದು.
ಇದುವೇ ಒಂದು ನಿರಂತರ ಚಕ್ರ ಆತು ಅದರದ್ದು.
ಎಲ್ಲ ಚೆಂದಲ್ಲಿ ಇದ್ದತ್ತು.
ಒಂದು ದಿನ, ಎಂತಾತು?
~
ಒಂದು ದಿನ ಯೇವತ್ರಾಣಂತೆ – ಆ ನಾಯಿ ಮಾಷ್ಟ್ರ ರೈಲಿಂಗೆ ಹತ್ತಲೆ ಬಿಟ್ಟಿಕಿ ಒಪಾಸು ಮನೆಗೆ ಬಯಿಂದು.
ಮಾಷ್ಟ್ರು ಶಾಲೆಗೆ ಹೋಯಿದವು.
ಶಾಲೆಲಿ ಯೇವತ್ರಾಣ ಹಾಂಗೇ ಪಾಟ ಮಾಡಿಗೊಂಡು ಇತ್ತಿದ್ದವು.
ಆದರೆ – ವಿಧಿ ನಿಯಮ, ಮಾಷ್ಟ್ರಿಂಗೆ ಬ್ರೈನು ಹೆಮರೇಜು – ಆಗಿ ಶಾಲೆಲೇ ತೀರಿಹೋತು.
ತೀರಿ ಹೋತು, ಅಲ್ಲಿಂದ ಸೀತ ಆಸ್ಪತ್ರೆಗೆ – ಅಲ್ಲಿಂದ ಮನೆಯೋರ ಸಮ್ಮುಖಲ್ಲಿ ಸ್ಮಶಾನಕ್ಕೆ ಹೋಗಿ ಅಂತಿಮ ವಿಧಿ ವಿಧಾನ ನೆಡೆಶಿದವು.
ಸಂತೋಶದ ಕುಟುಂಬಲ್ಲಿ ವಿಧಿಯ ಆಟ ಆಡಿತ್ತು! ಛೇ!
~
ಎಲ್ಲ ಸರಿ. ಆದರೆ ಆ ನಾಯಿಗೆ ಅದರ ಎಜಮಾನ ತೀರಿ ಹೋದ ಸಂಗತಿ ಗೊಂತಾಯಿದಿಲ್ಲೆ ಇದಾ!
ಹೊತ್ತೋಪಗ ಯೇವತ್ರಾಣಂತೆ ರೈಲು ಬಪ್ಪಲ್ಲಿಗೆ ಹೋತು.
ಎಜಮಾನ ಬಂದ ಕೂಡ್ಳೆ ಕರಕ್ಕೊಂಡು ಬಪ್ಪಲೆ.
ರೈಲು ಬಂತು, ಆದರೆ ಜೆನಂಗಳ ಎಡಕ್ಕಿಲಿ ನೋಡಿತ್ತು, ಅದರ ಎಜಮಾನ ಬಯಿಂದಿಲ್ಲೆ!
ಇಂದು ತಡವಾತು ಆಗಿಕ್ಕು – ಹೇದು ಕಾದತ್ತು, ಮತ್ತೂ ಕಾದತ್ತು, ಇನ್ನೂ ಕಾದತ್ತು…
ಕಾದೇ ಕಾದತ್ತು, ಒಂದು ದಿನ ಅಲ್ಲ, ಒಂದು ವಾರ ಅಲ್ಲ, ಒಂದು ತಿಂಗಳಲ್ಲ, ಒಂದು ವರ್ಷ ಅಲ್ಲ!
ಬರೋಬ್ಬರಿ ಹತ್ತು ಒರಿಶ!
ಹತ್ತು ಒರಿಶ, ಒಂದು ನಾಯಿ ಅದರ ಎಜಮಾನಂಗೋಸ್ಕರ ರೈಲು ಬತ್ತಲ್ಲಿ ಕಾವದು!
ಅದರ ನೋಡಿದ ಜೆನಂಗೊಕ್ಕೆ ಗೊಂತಿದ್ದು, ಅದರ ಎಜಮಾನ ಬತ್ತನಿಲ್ಲೆ – ಬಪ್ಪಲೆ ಅವ ಭೂಮಿ ಮೇಗೆ ಇಲ್ಲೆ ಹೇದು.
ಆದರೆ, ಪಾಪ ಆ ನಾಯಿಗೆ ಎಂತ ಗೊಂತು!
ನಾಲ್ಕು ದಿನ ಪ್ರೀತಿ ತೋರ್ಸಿ ಸಾಂಕಿದ ನೆಂಪಿಂಗೆ – ಛಳಿ, ಮಳೆ, ಮಂಜು, ಬೆಶಿಲು, ಇರುಳು – ಎಂತ ಆದರೂ ಹಂದದ್ದೆ ಅದರ ಎಜಮಾನನ ಬರುವಿಕೆಗಾಗಿ ಕಾದತ್ತು.
ಈ ಸಂಗತಿ ಕೂಡ್ಳೇ ಪ್ರಸಿದ್ಧವಾಗಿ, ಜೀವಂತ ದಂತಕತೆಯೇ ಆಗಿತ್ತಾಡ.
ಅದರ ನಿಷ್ಠೆಗಾಗಿ ಇಂದಿಂಗೂ ಜಪಾನಿಲಿ ಅದರ ಗ್ರೇಶಿ ಹೆಮ್ಮೆ ಪಡ್ತವಡ.
~
ಎದುರಂದ ಒಂದು ನಮುನೆ, ಹಿಂದಂದ ಇನ್ನೊಂದು ನಮುನೆ – ನಮ್ಮೋರೇ ಮಾಡ್ತ ಈ ಕಾಲಲ್ಲಿ, ಮನುಷ್ಯನೇ ಅಲ್ಲದ್ದೆ ಮಾನವೀಯತೆ ತೋರುಸಿದ ಆ ನಾಯಿ ತುಂಬಾ ವಿಶೇಶವಾಗಿ ಕಾಣ್ತು.
ತರವಾಡುಮನೆ ಶ್ಯಾಂಬಾವ° ಈ ಸಂಗತಿ ಹೇಳುವಾಗ ಅಡಿಗೆ ಕೋಣೆಂದ ಚಾಯ ತಂದ ಪಾತಿಅತ್ತೆ ಕತೆ ಕೇಳಿಗೊಂಡೇ ನಿಂದಿತ್ತು, ಒಪ್ಪಣ್ಣಂಗೆ ಹೇದು ತಂದ ಚಾಯ ಅತ್ತೆ ಕೈಲೇ ತಣುದತ್ತು.
~
ಬಟ್ಟಮಾವ° ಒಂದೊಂದರಿ ಒಂದು ಸುಭಾಶಿತ ಹೇಳುದಿದ್ದು – ಪ್ರಥಮ ವಯಸಿ ಪೀತಂ ತೋಯಮಲ್ಪಂ ಸ್ಮರಂತಂ – ಹೇದು. ಸುರೂವಾಣ ಒರಿಶ ಕೊಟ್ಟ ನೀರಿನ ಕೃತಜ್ಞತೆಗಾಗಿ ಜೀವಮಾನ ಇಡೀ ತಲೆಲಿ ನೀರು ಹೊತ್ತು ನಿಲ್ಲುತ್ತು – ತೆಂಗಿನ ಮರ – ಹೇದು.
ಹಾಂಗೇ, ಒಂದು ಕಲ್ಪವೃಕ್ಷದ ಹಾಂಗೆ ಈ ನಾಯಿ ನವಗೆ ಮಾನವೀಯ ಸಂಬಂಧಲ್ಲಿ ಎದ್ದು ಕಾಣ್ತು.
~
ಒಂದೊಪ್ಪ: ಮನಸ್ಸಿಂಗೆ ಹಚ್ಚಿಕೊಂಡವಕ್ಕೆ ನಿಷ್ಟೆ ತೋರುಸೆಕ್ಕು ಹೇಳ್ತದಕ್ಕೆ ಅನ್ವರ್ಥವೇ – ಹಚ್ಚಿಕೋ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಒ೦ದೊಳ್ಳೆ ನೀತಿ ಇಪ್ಪ ಶುದ್ದಿ . ಧನ್ಯವಾದ .
ಶುದ್ದಿ ತುಂಬಾ ಲಾಯಕಿದ್ದು. ಕತೆಯೋದಿ ಮನಸ್ಸು ತುಂಬಿ ಬಂತು.
ಮಾಷ್ಟ್ರಿಂಗೆ ಬ್ರೈನು ಹೆಮರೇಜು – ಆಗಿ ಶಾಲೆಲೇ ತೀರಿಹೋತು. ಹೋದವು ಮಾಡಿರೆ ಒಳ್ಳೆದಲ್ಲದೊ.
ಸಂಪಾದಕಣ್ಣ, ಸುಮಾರು ವರ್ಷ ಹಿಂದೆ ಆನೂ ಎನ್ನ ಮಕ್ಕಳೂ ಒಟ್ಟಿಂಗೆ `ಹಚ್ಚಿಕೋ’ ಸಿನೆಮಾ ನೋಡಿತ್ತಿದ್ದೆಯೋಂ (ಸಿ. ಡಿ. ಹಾಕಿ ನೋಡಿದ್ದದು). ಕಸ್ತ್ಲಪ್ಪಗ ಎನ್ನ ಗಂಡ ಕೆಲಸ ಮುಗಿಶಿ ಮನೆಗೆ ಬಪ್ಪ ಹೊತ್ತಿಂಗೇ ಅದು ಮುಗಿದ್ದದು. ಎಂಗಳೆಲ್ಲರ ಕಣ್ಣಿಲ್ಲಿ ಹರ್ಕೊಂಡಿತ್ತಿದ್ದ ನೀರು ನೋಡಿ ಅವು ತುಂಬಾ ಗಾಬರಿಯಾಗಿತ್ತಿದ್ದವು. ಸಿನೆಮಾ ನೋಡಿದ ಅವರ ಸ್ಥಿತಿಯೂ ಹಾಂಗೇ ಆಗಿತ್ತು. ನಮ್ಮ ಜನಪದಲ್ಲಿ ನಾಯಿಯ ಪ್ರಾಮಾಣಿಕತೆಯ ಎತ್ತಿ ಹೇಳುವ ಒಂದು ಬೊಳ್ಳು ನಾಯಿಯ ಕಥೆ ಇದ್ದಲ್ದಾ ಅದರ ನೆಂಪಾತು. ಗೊಂತಿಲ್ಲದ್ದವಕ್ಕೆ ಓದ್ಲೆ ಆನು ಬರೆದು ಕಳುಸುತ್ತೆ ಆಗದೋ?
ಹೃದಯಸ್ಪರ್ಶಿ ಸುದ್ದಿ.
ಹಚ್ಚಿಕೋ ಮನಸ್ಸಿಂಗೆ ಹಚ್ಚಿತ್ತು. ಹರೇ ರಾಮ