Oppanna.com

ನಾಕು ತ್ರಿಕಾಲಪೂಜೆ, ಮೂರು ಉಪ್ನಾನ, ಎರಡು ಬದ್ಧ – ಒಂದೇ ಬಾಳೆಲೆ!

ಬರದೋರು :   ಒಪ್ಪಣ್ಣ    on   20/01/2012    33 ಒಪ್ಪಂಗೊ

ಉಸ್ಸಪ್ಪ! ಬಚ್ಚಿತ್ತೋ ಬಚ್ಚಿತ್ತು.
ಇವ° ಎಂತ ಕುಮೇರಿ ಕಡುದ್ದನೋ ಹೀಂಗೊಂದು ಬಚ್ಚಲೇ – ಹೇದು ಸುಭಗಣ್ಣ ಕೋಂಗಿ ಮಾಡುಗು; ಆದರೆ ನವಗೆ ಜೆಂಬ್ರಂಗೊಕ್ಕೆ ಹೋಗಿ ಬಚ್ಚಿದ್ಸು!
ಬೈಲಿನ ಜೆಂಬ್ರದೆಡಕ್ಕಿಲಿ ಉಂಡುಂಡು ಬೆಂಡಾಗಿ ಬಚ್ಚಿದ ಒಪ್ಪಣ್ಣನ ಬಚ್ಚಲು ತಣಿವ ಶುದ್ದಿ!
ಅಂತೇ, ನಿಂಗೊಗೂ ಬಚ್ಚುವನ್ನಾರ ಓದಿ ಒಪ್ಪ ಕೊಟ್ಟಿಕ್ಕಿ, ಆತೋ! 🙂
~

ಕಿಲೆಂದ ತೆರುದು ಬಿದ್ದ ಅಡಕ್ಕೆರಾಶಿಯ ಮನಾರಕ್ಕೆ ಹರಗುವ ಮದಲು ಎಣುಸುತ್ತ ಕ್ರಮ ತರವಾಡುಮನೆಲಿ ಶಂಬಜ್ಜನ ಕಾಲಂದಲೇ ಇದ್ದು.
ಕೊಯಿಲಿನಡಕ್ಕೆ ಜಾಲತುಂಬ ಹರಗಿದ ರಂಗಮಾವಂಗೆ ಯೇವತ್ರಾಣಂತೆ ಎಣುಸಲೇ ಪುರುಸೊತ್ತಿಲ್ಲೆ ಈ ಸರ್ತಿ; ಅಂದಾಜಿಯೇ ಗೆತಿ!
ಇಪ್ಪದೆಲ್ಲಿಂದ, ಅಡಕ್ಕೆ ಕೊಯಿಲಿಂಗೆ ಎಡೆ ಸಿಕ್ಕಿದ್ದೇ ಭಾಗ್ಯ, ಜೆಂಬ್ರಂಗಳ ಕೊಯಿಲುದೇ ಇದ್ದನ್ನೇ..
ಬೈಲಿನೋರು ಜೆಂಬ್ರ ತೆಗವದು ದೊಡ್ಡದೋ, ಈಚೋನು ಹೋವುತ್ಸು ದೊಡ್ಡದೋ – ಹೇಳ್ತದು ರಂಗಮಾವನ ಯಕ್ಷ ಪ್ರಶ್ನೆ.
ಪ್ರೀತಿಲಿ ಹೇಳಿಕೆ ಕಳುಗಿದ ಮನಗೆ ಹೋಗದ್ರೆ ಆವುತ್ತೋ?

ಒಳ್ಳೆ ಮೂರ್ತಲ್ಲಿ ತೆಗದ ಜೆಂಬ್ರ ಚೆಂದಲ್ಲಿ ಕಳಿಯೇಕು ಹೇದು ಎಲ್ಲೋರುದೇ ಜೋಯಿಶಪ್ಪಚ್ಚಿಯಲ್ಲಿಗೆ ಬತ್ತವು – ಮೂರ್ತ ನೋಡುಸುತ್ತವು.
ಆ ಹದಿನೈದು ಗೆರೆಯ ಒಯಿಜಯಂತಿ ಪಂಚಾಂಗ ಪುಟಲ್ಲಿ ಎಷ್ಟೂಳಿ ಮೂರ್ತ ನೋಡುದು?
ನಿನ್ನೆ ಬಂದೋರಿಂಗೂ ಇಂದು ಬಂದೋರಿಂಗೂ, ನಾಳೆ ಬತ್ತೋರಿಂಗೂ – ಕೂಡಿಬಪ್ಪದು ಯೇವದಾರು ಅದೇ ’ಒಳ್ಳೆದಿನಂಗೊ’ ಅಲ್ಲದೋ!
ಒಳ್ಳೆ ಮೂರ್ತ ಬರದು ಕೊಟ್ಟೂ, ಕೊಟ್ಟೂ, ಕೊಡ್ತವು; ಕೊಡುವಗಳೇ ಜೋಯಿಷಪ್ಪಚ್ಚಿಗೆ ಅನುಸುತ್ತು – ಹೋ, ಇದೇ ದಿನ ಆಚ ಮನೆಲಿಯೂ ಇದ್ದು – ಹೇದು.
ರಂಗಮಾವನ ಪ್ರಕಾರ – ಯೇವ ಜೆಂಬ್ರಕ್ಕೆ ಹೋಪದಪ್ಪಾ – ಹೇಳ್ತ ಕನುಪ್ಯೂಸು ಮದಾಲು ಬಪ್ಪದು ಜೋಯಿಷಪ್ಪಚ್ಚಿಗೇ ಅಡ!

ಅದಿರಳಿ,
~

ಜೆಂಬ್ರಕ್ಕೆ ಹೋಪಗಳೂ ಹಾಂಗೇ, ಭಾರೀ ಆಲೋಚನೆ ಮಾಡಿ ಹೆರಡುದು.
ಕೆಲವು ಮನೆಯ ಸುರೂವಾಣ ಜೆಂಬ್ರ, ಕೆಲವು ಕುಟುಂಬದ ಅಖೇರಿಯಾಣ ಜೆಂಬ್ರ, ಕೆಲವು ದಿಕ್ಕೆ ಪ್ರೀತಿಯ ಜೆಂಬ್ರ, ಕೆಲವು ಅಪುರೂಪದ ಜೆಂಬ್ರ, ಇತ್ಯಾದಿ.
ಬಂದ ಹೇಳಿಕೆಕಟ್ಟವ ಬಿಡುಸೀ-ಬಿಡುಸೀ, ಅಳದೂ – ತೂಗೀ – ಎಲ್ಲ ಮಾಡಿ, ಅಕೇರಿಗೆ ಯೇವದಾರು ಜೆಂಬ್ರ “ಪಾಸು” ಆವುತ್ತು, ಅದಕ್ಕೆ ಹೆರಡುದು ಕ್ರಮ; ಅಪ್ಪೋಲ್ಲದೋ!

ಬೋಚಬಾವ° ಆದರೆ ಎಲ್ಲಿ ಏವ ಜೆಂಬ್ರಕ್ಕೆ ಹೋದರೆ ಹೆಚ್ಚು ಹೊಡವಲೆಡಿಗು ನೋಡುಗು, ಆದರೆ ಸಾಮಾನ್ಯವಾಗಿ ಒಪ್ಪಣ್ಣ ಹಾಂಗಲ್ಲ. 😉
ಪೆಂಗಣ್ಣನ ಹಾಂಗೆ ಊರು ತಿರುಗುತ್ತರೆ, ಇದಕ್ಕೆ ಹೋಯಿದೆ ಹೇದು ಆಚಿಗೆ ಹೇಳುದು, ಅದಕ್ಕೆ ಹೋಗಿತ್ತಿದ್ದೆ ಹೇದು ಈಚವರತ್ರೆ ಹೇಳುದು.
ಎಲ್ಲಿಗೂ ಹೋಪಲಿಲ್ಲೆ, ಎದ್ದೊಂಡು ಕಂಬುಳಕ್ಕೆ ಹೋತು ಅಕೇರಿಗೆ.
~

ಹೀಂಗೆಲ್ಲ ಅಡ್ಡ ಹಿಡುದು, ತೂಗಿ, ಹೋವುತ್ತ ಜೆಂಬ್ರಂಗಳಲ್ಲಿ – ಒಂದರಿಂದ ಹೆಚ್ಚು ಪಾಸು ಆದರೆ ಮಾಡುತ್ಸು?!
ಅದು ದೊಡಾ ತಾಪತ್ರೆ.
ಹೋಗದ್ದೆ ಗೊಂತಿಲ್ಲೆ, ಹೋಪಲೆ ಎಡಿತ್ತಿಲ್ಲೆ. ಎಂತ ಮಾಡ್ತಿ ನಿಂಗೊ! ಹು!
ಮೊನ್ನೆ ಆಯಿತ್ಯವಾರ ಹಾಂಗೇ ಆತಿದಾ.

ಬಂದ ಹೇಳಿಕೆಗಳಲ್ಲಿ ಯೇವದಕ್ಕೆಲ್ಲ ಹೋವುತ್ಸು ಹೇದು ಆಚಮನೆ ದೊಡ್ಡಣ್ಣನ ಅಭಿಪ್ರಾಯವನ್ನೂ ತೆಕ್ಕೊಂಬಲೆ ಅಲ್ಲಿಗೆ ಹೋಗಿತ್ತಿದ್ದೆ.
ಅಳದೂ ತೂಗೀ ಹಿಡುದೂ ಲೆಕ್ಕ ಹಾಕಿ, ಎಲ್ಲಾ ಹೇಳಿಕೆಗಳಲ್ಲಿ ’ಇನ್ನಾಣಜೆಂಬ್ರಕ್ಕೆ ಹೋಪೊ°’ ಹೇದು ಬಿಟ್ಟು ಬಿಟ್ಟು – ಅಕೇರಿಗೆ ಮೂರು ಜೆಂಬ್ರಂಗೊ ಒಳುದಿಕಿತ್ತು!
ಮೂರುದೇ ನಮ್ಮ ಬೈಲಿಲೇ ಆದ್ಸು.
ಮೂರುದೇ ವಿಶೇಷದ್ದೇ.
ಮೂರುದೇ ಒಂದೇ ದಿನ!

ಬೈಲಿನ ಒಂದೊಂದು ಹೊಡೆಲಿ ಇದ್ದರೂ, ಈ ಮೂರಕ್ಕೂ ಹೋಗಿ ಮೋರೆ ತೋರ್ಸಿಕ್ಕಿ, ಸುದಾರ್ಸಿಕ್ಕಿ ಬಂದದು; ಹಾಂಗೇ ಒಪ್ಪಣ್ಣಂಗೆ ಬಚ್ಚಿದ್ದದು, ಅಂತೇ ಅಲ್ಲ – ಆತೋ!
ಅದೇನೇ ಇರಳಿ, ಮೂರೂ ವಿಶೇಷದ್ದು ಹೇಳಿತ್ತಿದ್ದೆ ಅಲ್ಲದೋ, ಹಾಂಗಾಗಿ ಅದನ್ನೇ ಈ ವಾರ ಮಾತಾಡಿರೆ ಎಂತ!!
~

ಮದಲಿಂಗೆ ಅವಿಭಕ್ತ ಕುಟುಂಬಂಗೊ ಇದ್ದತ್ತು – ಹೇಳ್ತು ನಾವು.
ಈಗ ಸಂಸಾರಂಗೊ ಹೊಡಿಹೊಡಿ ಚಿಲ್ಲರೆ ಆದರೂ, ಬೈಲಿನ ಕೆಲಾವು ಮನೆಗಳಲ್ಲಿ ಅವಿಭಕ್ತತೆ ಕಾಣ್ತು. ಅಂತಾಲ್ಲಿ ಜೆಂಬ್ರ ಎದ್ದರೆ ಇದು ಕಂಡೇ ಕಾಣ್ತು.

ಅವಿಭಕ್ತ ಮನೆಗಳಲ್ಲಿ ಹಲವಾರು ತಲೆಗೊ, ಅವರ ನೆಡುವಿನ ತಲೆಮಾರು ಅಂತರಂಗೊ.
ಈ ಬೇರೆಬೇರೆ ತಲೆಗಳಲ್ಲಿ ಹತ್ತರತ್ತರೆ ಎಳಗುತ್ತ ಜೆಂಬ್ರಂಗಳ ಒಂದೇ ದಿನ ಮಾಡಿ ಮುಗುಶುಗು.

ಉದಾಹರಣೆಗೆ, ಹೆರೀ ಅಜ್ಜನ ಪುಳ್ಳಿಯ ಮದುವೆಯೂ, ಸಣ್ಣಜ್ಜನ ಪುಳ್ಳಿಯ ಬಾರ್ಸವೂ – ಒಟ್ಟೊಟ್ಟಿಂಗೆ ಬತ್ತರೆ, ಒಂದೇ ದಿನ ಮಾಡಿ ಮುಗುಶುಗು.
ದೊಡ್ಡವನ ಮಗಳ ಮದುವೆ ಏರ್ಪಾಡು ಸುರು ಆತೋ – ಆ ಬದ್ಧವೂ, ಮತ್ತೊಬ್ಬನ ಮಗನ ಉಪ್ನಾನವೂ –ಒಟ್ಟಿಂಗೆ ಮಾಡುಗು.
ಹೀಂಗೆ ಮಾಡಿರೆ, ವೆವಸ್ತೆಗೂ ಸುಲಬ, ಬಂದೋರಿಂಗೂ ಸುಲಬ, ಸುದಾರಿಕೆಗೂ ಸುಲಬ.

~

ಮೊನ್ನೆ ಆಯಿತ್ಯವಾರ ಜೆಂಬ್ರದ ಕೊಯಿಲು ಹೇಳಿದೆ ಅಲ್ಲದೋ, ಎಂತೆಲ್ಲ ಇತ್ತು ಹೇದು ನಿಂಗೊಗೆ ಅರಡಿಗೋ?
ಮೊನ್ನೆ ಇದ್ದ ಜೆಂಬ್ರಂಗೊ ಎಲ್ಲವುದೇ ಅವಿಭಕ್ತ ಮನೆಗಳದ್ದೇ!
ಈಗಾಣ ಕಾಲಲ್ಲಿ ಅಪುರೂಪ ಆಗಿಂಡು, ಮುಂದಕ್ಕೆ ಕಾಂಬಲೇ ಸಿಕ್ಕದ್ದ ನಮುನೆ ಸನ್ನಿವೇಶಂಗೊ, ಜೆಂಬ್ರಂಗೊ.

ಅದೇವದೆಲ್ಲ?!

~

ಎರಡು ಬದ್ಧ:

ಬೈಲಕರೆ ಜೋಯಿಶಪ್ಪಚ್ಚಿ ಮನೆ ಅರಡಿಗಲ್ಲದೋ?
ಅಲ್ಲೇ ಆಚೊಡೆ ಗುಡ್ಡೆಯ ಹತ್ತಿ ಇಳುದರೆ ಸುಣ್ಣಂಗಳ ಗೆದ್ದೆ ಸಿಕ್ಕುತ್ತು. ಅದನ್ನೂ ದಾಂಟಿರೆ ಸಿಕ್ಕುದೇ ಅರಿಎಣ್ಮೆ.
ಮದಲಿಂಗೆ ಅಕ್ಕಿಯೂ (ಅರಿ), ಎಳ್ಳುದೇ (ಎಣ್ಮೆ) ಗೆದ್ದೆ ಮಾಡಿಂಡಿತ್ತವೋ ಏನೋ – ಈಗ ಅಡಕ್ಕೆತೋಟ ಮಾಂತ್ರ ಇಪ್ಪದು.
ಎಷ್ಟೋ ಒರಿಶ ಮದಲು – ಅಬ್ರಾಜೆ ಮೂಲಂದ ಬಂದೋರು, ಈಗ ಬೈಲಿನ ಪ್ರತಿಷ್ಠಿತ ಮನೆಗಳಲ್ಲಿ ಒಂದು – ಹೇಳಿ ಸುಮನಕ್ಕ° ಹೆಮ್ಮೆಲಿ ಹೇಳುಗು.

ಹೆರಿಯೋರು ಆರೂ ಇಲ್ಲೆ ಈಗ; ಅಪ್ಪಚ್ಚಿಯಕ್ಕೊ ಆ ದೊಡ್ಡ ಮನೆಯ ಚೆಂದಲ್ಲಿ ತೆಕ್ಕೊಂಡು ಹೋವುತ್ಸು ನೋಡಿರೆ, ಆ ಮನೆಲಿಪ್ಪದು ಒಬ್ಬನೇ ಹೇಳ್ತ ಭಾವನೆ ಬತ್ತು.
ಈಗಾಣ ಜೀವನದ ಅನುಕೂಲಕ್ಕೆ ಬೇರೆಬೇರೆ ದಿಕ್ಕೆ ಇದ್ದರೂ, ಅಲ್ಯಾಣ ಮನೆ, ಮಾತಾಡ್ತ ಕ್ರಮ, ಮಾತಾಡುಸುತ್ತ ಕ್ರಮ ಮನೋಚಿಂತನೆಗೊ ಎಲ್ಲವೂ ಒಂದೇ!
ಮನೆಯ ಪ್ರತಿಯೊಬ್ಬನೂ ಬಂದು ಅತಿಥಿಗಳ “ಏನು ಮಾವ°, ಏನು ಅಪ್ಪಚ್ಚಿ, ಎಂತ ಒಪ್ಪಣ್ಣ” – ಹೇಳಿ ಮಾತಾಡುಸುದು ಆ ಮನೆಯ ವೈಶಿಷ್ಠ್ಯ.
ಒಪ್ಪಣ್ಣ ಸಣ್ಣ ಇಪ್ಪಗ ದೊಡ್ಡವರೊಟ್ಟಿಂಗೆ ಅಲ್ಲಿಗೆ ಪೂಜಗೋ ಮಣ್ಣ ಹೋದರೆ, ಅಲ್ಲಿಪ್ಪ ಅಣ್ಣ ತಂಗೆಕ್ಕೊ ಎಲ್ಲ ಧೈರ್ಯಲ್ಲಿ ದೊಡ್ಡಕೆ ಎಲ್ಲೋರಿಂಗೂ ಕೇಳುವ ಹಾಂಗೆ “ಏನು, ಏನು” ಹೇದು ಆ ತುಂಬಿದ ಸಭೆಲಿ ಕೇಳುವಗ ಒಪ್ಪಣ್ಣಂಗೆ ನಾಚಿಗೆ ಆಗಿ “ಒಳ್ಳೆದು” ಹೇಳುಲೇ ಮರಗು, ಹುಃ! 😉

ಅಂಬಗಾಣ ಕೂಚಕ್ಕಂಗಳೇ ಈಗಾಣ ಮದಿಮ್ಮಾಳುಗೊ!!
ಆ ಮನೆಯ ಮೂರೂ ಅಪ್ಪಚ್ಚಿಯಕ್ಕಳೂ ಈ ಒರಿಶ ಕನ್ಯಾದಾನ ಮಾಡಿ ಪುಣ್ಯಕಟ್ಟಿಗೊಳ್ತಾ ಇದ್ದವು – ಹೇಳಿ ಆಚಮನೆದೊಡ್ಡಣ್ಣ ಲೆಕ್ಕಮಾಡಿ ಹೇಳಿದ°.
ಬೈಲಿನೋರಿಂಗೆ ಒಂದು ಪಾಚ ಅದಾಗಲೇ ಉಂಡಾಯಿದು, ಇನ್ನೆರಡು ಬಾಕಿದ್ದು.
ಆ ಎರಡು ಪಾಚದ ನಿಗಂಟು ಮಾಡ್ತ ಕಾರ್ಯವೇ ಮೊನ್ನೆ ಇದ್ದದು – ಜೋಡುಬದ್ಧ!

~

ಆಚಮನೆ ದೊಡ್ಡಣ್ಣನ ಬೈಕ್ಕಿನ ಹಿಂದಾಣ ಸೀಟು ನವಗೇ ಇಪ್ಪದ ಹೇಳ್ತದು – ಅವ° ಬೈಕ್ಕು ತೆಗವನ್ನ ಮದಲೇ ನಿಗಂಟಾಯಿದು.
ಉದಿಯಪ್ಪಗ ಬೇಗ ಹೆರಟು ಬದ್ಧಕ್ಕೆ ಹೋಪೊ°, ಮತ್ತುದೇ ಎರಡು ಜೆಂಬ್ರಕ್ಕೆ ಹೋಪಲಿದ್ದು ನವಗೆ – ಹೇಳಿತ್ತಿದ್ದ° ಮುನ್ನಾದಿನ, ಹಾಂಗೆ ಬೇಗ ಒಂಬತ್ತುಗಂಟಗೆ ಎದ್ದು ಹೆರಟದು! 😉

~

ಎರಡು ಬದ್ಧಕ್ಕೆ ಎರಡು ಮದಿಮ್ಮಾಳುಗೊ.
ಎರಡು ಸಂಸಾರಂಗೊ, ಎರಡು ’ಬರವಣಿಗೆಗೊ’.
ದೂರಂದ ಬರೆಕಾದ ಮದಿಮ್ಮಾಯ ಬರೆಕಷ್ಟೆಡ, ಹಾಂಗೆ ಆ ಮದಿಮ್ಮಾಳು ಬೇಜಾರಲ್ಲೇ ಇದ್ದತ್ತು.
ಆದರೆ ಹತ್ತರಂದ ಬರೆಕಾದ ಮದುಮ್ಮಾಯ ಅದಾಗಲೇ ಬಂದಿದ್ದ ಕಾರಣ, ಈಚ ಮದಿಮ್ಮಾಳು ನೆಗೆನೆಗೆಲಿ “ಎಂತ ಒಪ್ಪಣ್ಣಾ” ಕೇಳಿತ್ತು, ಎರಡೆರಡು ಸರ್ತಿ!
ದೊಡ್ಡಾದ ಮತ್ತೆ ನವಗೂ ನಾಚಿಗೆ ಇಲ್ಲೆ, ಒಳ್ಳೆದು ಹೇಳಿದೆ ಜೋರು ಸೊರಲ್ಲಿ.

ಎರಡೂ ಹೊಡೆ ಭಾವಭಾವಂದ್ರು ಎದುರೆದುರಾಗಿ ಕೂದು, ಮಾವಂದ್ರು, ದೊಡ್ಡಪ್ಪಂದ್ರು ಎಲ್ಲೋರುದೇ ಕಳಲ್ಲಿ ಇದ್ದೊಂಡು, ಕರಿಕನ್ನಡ್ಕವ ಮೂಗಿಂಗೆ ಮಡಗಿ, ಜಾತಕ ಮಡುಸಿ -ಪಂಚಾಂಗ ಬಿಡುಸಿ, ಮೂರ್ತ ನೋಡಿ – ಗವೂಜಿಲೇ ಸುರುಆತು ಬರವಣಿಗೆ.
ಮದುಮ್ಮಾಯ -ಮದಿಮ್ಮಾಳು ನೆಗೆಮೋರೆಲೇ ಇತ್ತವು, ಎಲ್ಲೋರುದೇ ಓರೆಕಣ್ಣಿಲಿ ನೋಡಿ ನೆಗೆಮಾಡುಸಿದವು; ನೆಂಟ್ರುಗೊ ಗುರ್ತ ಮಾತಾಡಿಗೊಂಡವು, ಹೆರಿಯೋರು ಒಯಿವಾಟು ಮಾತಾಡಿಗೊಂಡವು;
ಅಂತೂ ಎಲ್ಲೋರುದೇ ಜೆಂಬ್ರದ ಕುಶಿಲಿ ಇತ್ತಿದ್ದವು;
ಆದರೆ ರಂಗಮಾವಂಗೆ – ಕೊಯಿಲಿನಡಕ್ಕೆ ಹರಗಿ ಆಯಿದಿಲ್ಲೆ, ಆದರೆ ಜಾಲಿಂಗಾರೂ ಬಂದು ಬಿದ್ದತ್ತು, ಬಚಾವು – ಹೇಳಿಗೊಂಡು ಕೊಶಿ ಆದ್ಸರ ಹೊಸಾ ಗುರ್ತದ ಭಾವಯ್ಯನ ಹತ್ತರೆ ಹೇಳಿ ಕೊಶಿ ಮಾಡಿದವು!

~
ಜೋಯಿಷಪ್ಪಚ್ಚಿ ಪಂಚಾಂಗದ ಒಂದು ಪುಟ ಬಿಡುಸಿ ಮಡುಸಿ ನೋಡುವಗ ಎರಡ್ಣೇ ಮದುಮ್ಮಾಯನೂ ಎತ್ತಿದವು.
ಎಲ್ಲೋರಿಂಗೂ ಆಸರಿಂಗೆ ಬಂತು; ಒಪ್ಪಣ್ಣಂಗೂ ಎರಡ್ಣೇ ಸರ್ತಿ ಕೆಂಪುಚಾಯ ಸಿಕ್ಕಿತ್ತು!
ಊಟಂದ ಮದಲು ಹೆರಡ್ತು ಹೇದು ಗೊಂತಾದರೆ ಅಲ್ಯಾಣ ಅಪ್ಪಚ್ಚಿಯಕ್ಕೊ ಬಿಡವು; ಹಾಂಗಾಗಿ ಎಂತ ಮಾಡುದು? – ಹೇಳಿ ಆಚಮನೆ ದೊಡ್ಡಣ್ಣ ತಲೆಬೆಶಿ ಮಾಡಿಗೊಂಡಿತ್ತಿದ್ದ°.
ಹೇಳದ್ದೆ ಪದ್ರಾಡು ಹೊಡವದೇ ಹೆಚ್ಚು ಒಳ್ಳೆದು – ಹೇದು ನಾವು ಸಲಹೆ ಕೊಟ್ಟತ್ತು; ಅನಿವಾರ್ಯ ಆದ ಕಾರಣ ಒಪ್ಪಿದ°!
ಚಾಯ ಕುಡುದು ಒಂದು ಎಲೆಡಕ್ಕೆ ತಿಂಬನ್ನಾರ ನಾವಿದ್ದತ್ತು;
ಎರಡ್ಣೇ ಕಟುಂಬ ಮನೆ ಒಳ ಅಪ್ಪ ಗವುಜಿ, ಏನೊಳ್ಳೆದು ಕೇಳ್ತ ಗಲಾಟೆ ಆಗಿಂಡಿದ್ದ ಹಾಂಗೇ – ಒಪ್ಪಣ್ಣಂದೇ ಇಲ್ಲೆ, ಆಚಮನೆ ದೊಡ್ಡಣ್ಣಂದೇ ಇಲ್ಲೆ!
ಅಂತೂ ಜೋಡು ಬದ್ಧಕ್ಕೆ ಹಾಜರು ಹಾಕಿತ್ತು ನಾವು – ಹೇಳ್ತದರ ಅಲ್ಯಾಣ ಅಪ್ಪಚ್ಚಿಯಕ್ಕಳೂ ಒಪ್ಪುಗು! ಹು!!
ರಣ ಬೆಶಿಲಿಂಗೆ ದೊಡ್ಡಣ್ಣನ ಬೈಕ್ಕು ಸೀತ ಕರಿಮಾರ್ಗದ ಮೇಗೆ ಬಂದು ತಿರುಗಿದ್ದು ಇನ್ನಾಣ ಅಪುರೂಪದ ಜೆಂಬ್ರಕ್ಕೆ; ಅಮೈ ಹೊಡೆಂಗೆ.
~

ಮೂರು ಉಪ್ನಾನ:

ವಿಟ್ಳಸೀಮೆಯ ಪೌರೋಹಿತ್ಯ ವಂಶಲ್ಲಿ ಒಂದಾದ “ಅಮೈ” ಮತ್ತೊಂದು ಅವಿಭಕ್ತ ಕುಟುಂಬ.
ವಿಶಾಲವಾದ ಆವರಣ, ಅದಾಗಿ ದೊಡ್ಡ ಜೆಗಿಲಿ, ಅದಾಗಿ ದೇವರಕೋಣೆ – ಇದೆಲ್ಲವೂ ನೋಡುವಗ ಹಳೇಕಾಲದ ಮಾದರಿ ಅವಿಭಕ್ತ ಕುಟುಂಬ ಹೇಳಿ ಎಂತವಂಗೂ ಅನುಸುಗು.
ದೊಡ್ಡಮನಸ್ಸಿನ ದೊಡ್ಡ ಮನೆತನಕ್ಕೆ ದಕ್ಕಿತ ದೊಡ್ಡಮನೆ!
ಈಗ ಕೆಲವು ಜೆನ ಅವರವರ ಉದ್ಯೋಗ ಸವುಕರಿಯ ನೋಡಿಗೊಂಡು ಒಂದೊಂದು ಹೊಡೆಲಿ ಇದ್ದವು; ಎಲ್ಲೋರುದೇ ಆ ಮನೆಲೇ ಇಲ್ಲೆ, ಆದರೆ, ಎಲ್ಲೋರದ್ದೂ ಮೂಲಮನೆ ಅದುವೇ.
ಆಚಮನೆ ದೊಡ್ಡಣ್ಣಂಗೆ ಅಲ್ಲಿಪ್ಪ ಹೆಚ್ಚಿನೋರನ್ನೂ ಗೊಂತಿದ್ದ ಕಾರಣ, ಅಲ್ಲಿಗೆ ಎತ್ತುವನ್ನಾರವೂ ದಾರಿಲಿ ಅದೇ ಶುದ್ದಿಯ ಮಾತಾಡಿಂಡು ಹೋದ್ಸು.
ಅವರ ದೊಡ್ಡಮನೆಲಿ ಜಾಗೆ ಸಾಕಾಗದ್ದೆ, ಮನೆಯ ಹಿಂದೆ ಕೋಣೆಗಳ ಕಟ್ಟಿದ್ಸಡ, ಮನೆಲಿ ತುಂಬ ತುಂಬುವಷ್ಟು ಮಕ್ಕೊ ಆ ಮನೆಗೆ ಒದಗಿದ್ದವಡ.
ಮನೆ ಕಟ್ಟುದು ದೊಡ್ಡದಲ್ಲ, ಆ ಮನೆಗೆ ಜೆನ ತುಂಬುಸುದೇ ಮುಖ್ಯ – ಹೇಳಿದ° ದೊಡ್ಡಣ್ಣ.

~

ಈಗಾಣ ಕಾಲಲ್ಲಿ, ಮನೆಲಿ ಜೆಂಬ್ರ ಮಾಡುದೇ ಅಪುರೂಪ. ಉಪ್ನಾನದ ಹಾಂಗಿರ್ತ ದೊಡ್ಡಜೆಂಬ್ರ ನೆಡವದೇ ಸಂಗತಿ.
ಹಾಂಗಿರ್ಸರಲ್ಲಿ, ಒಟ್ಟಿಂಗೇ ಮೂರು ಉಪ್ನಾನ, ಒಂದೇ ದಿನ ಮಾಡಿರೆ ಹೇಂಗೆ?!

ಒಂದು ಉಪ್ನಾನಕ್ಕೆ ಜೆನ ಎಷ್ಟಕ್ಕು?
ದೊಡಾ ಮನೆತನದ ಎಲ್ಲಾ ನೆಂಟ್ರುಗೊ; ವಂಶವೃಕ್ಷದ – ಕೊಟ್ಟ, ತಂದ ಮನೆಯ ಗೆಲ್ಲುಗಳ ಎಲೆಗೊ.
ಗೃಹಸ್ಥನ ಮಗಂಗೆ ಉಪ್ನಾನ ಮಾಡುದು ಹೇಳಿತ್ತುಕಂಡ್ರೆ, ಭೌತಿಕ ಜೀವನದ ಆಪ್ತೇಷ್ಟರು, ಮಿತ್ರವರ್ಗ, ಚೆಂಙಾಯಿಗೊ,
ಅವನ ನೆಂಟ್ರು, ಮಾವಗಳ ಮನೆ ನೆಂಟ್ರು,
ಮನೆಯ ಹಿತೈಷಿಗೊ, ನೆರೆಕರೆ, ಮಿತ್ರವರ್ಗ- ಎಲ್ಲೋರುದೇ ಬಕ್ಕು. ಬಂದೇ ಬರೆಕ್ಕು ಹೇಳುಸ್ಸು ಮನೆಯೋರ ಆಶಯ!
ಶಿಷ್ಯವರ್ಗ ಇಪ್ಪ “ಗುರು”ತ್ವದ ಮನೆ ಆದರೆ ಕೇಳುದೇ ಬೇಡ, ಶಿಷ್ಯವರ್ಗವೇ ಇದ್ದು ನೂರಾರು ಮನೆಗೊ.

ಆದರೆ ಇದು, ಒಂದಲ್ಲ ಮೂರು ಉಪ್ನಾನಂಗೊ! ಹಾಂಗಾಗಿ ಮೂರು ಸಂಸಾರದ ನೆಂಟ್ರುಗೊ, ಚೆಂಙಾಯಿಗೊ!!
ಅದೂ ಒಂದು ಅಪುರೂಪದ ಸನ್ನಿವೇಶವೇ, ಅಲ್ಲದೋ? – ಹೀಂಗೆಲ್ಲ ನೇರಂಪೋಕು ಮಾತಾಡಿಗೊಂಡು ಸುಮಾರು ಹೊತ್ತು ಬೈಕ್ಕು ಬಿಟ್ಟಪ್ಪಗ ಜೆಂಬ್ರದ ಮನೆ ಎತ್ತಿತ್ತು.
~

ಎಂಗೊ ಎತ್ತುವಗ ಮೂರ್ತ ಕಾರ್ಯಕ್ರಮಂಗೊ ಎಲ್ಲ ಮುಗುದು, ಒಸಗೆ ಆಗಿಂಡಿದ್ದತ್ತು.
ಮೂರುಮೂರು ವಟುಗೊ ಒಂದೇ ಚೆಪ್ಪರಲ್ಲಿ ದ್ವಿಜೋತ್ತಮಂಗೊ ಅಪ್ಪದರ ಕಣ್ಣುತುಂಬ ನೋಡಿತ್ತು.
ಮುಕ್ಕಾಲುಗಂಟೆ ಸಾಲಿಲಿ ನಿಂದು ಒಸಗೆ ಹಾಕಿಕ್ಕಿ ಹಿಂದೆಬಂತು!
ಸನಾತನ ದ್ವಿಜಕುಲಕ್ಕೆ ಸೇರ್ಲೆ ಧನಾತ್ಮಕ ಸ್ಪರ್ಧೆ ಇದ್ದ ಹಾಂಗೆ ಕಂಡತ್ತು, ಆ ಮೂರು ವಟುಗಳ ನಡುವೆ.
ಅಪೂರ್ವ, ಅಲ್ಲದೋ?

~

ಊಟದ ಹಂತಿ ಸುರುಆತು ಹೇಳಿ ಅಪ್ಪದ್ದೇ, ಜೋರು ಗಲಗಲ!
ಬರೇ ಗಲಗಲ ಅಲ್ಲ, ಇದು ಗಲ-ಗಲ-ಗಲ! ಮೂರುಮೂರು ಪ್ರತಿ. 😉

ಆಗಲಿ, ವೈದೀಕ ಗುರುಗಳ ಮನೆಲಿ ಬ್ರಹ್ಮತ್ವದ ಉಪ್ನಾನದ ಗವುಜಿ ನೋಡಿಕ್ಕಿ, ಉಂಬಲೆ ಕೂದತ್ತು.
ಊಟವೂ ಮೂರುಮೂರು ಪ್ರತಿ ಆಗೆಡದೋ, ಅಲ್ಲದ್ದರೆ ವಟುಗೊಕ್ಕೆ ಬೇಜಾರಾಗದೋ – ಕೇಳಿದೆ ದೊಡ್ಡಣ್ಣನ ಹತ್ತರೆ!
ಬಾಳೆಲೆ ಒಂದೇ ಇದ್ದರೆ ಆತು, ಮತ್ತೆ ನಿನ್ನಿಷ್ಟ ಹೇಳಿದ°.
ಅಷ್ಟು ಹೇಳಿರೆ ಸಾಕು, ಮೂರುಸೌಟು ಪಾಯಿಸವೂ, ಮೂರು ಹೋಳಿಗೆಯೂ ಹೊಡದು, ಮೂರೂವಟುಗೊಕ್ಕೆ ಮನಸ್ಸುತುಂಬ ಹರಸಿದ° ಒಪ್ಪಣ್ಣ!

ಮೂರು ಹಂತಿ ಮಾಡಿರೂ ಜೆನ ಮುಗುದ್ದಿಲ್ಲೆ!
ಈಗಾಣ ಕಾಲದ ಬಫೆ ಇದ್ದರೆ ಅಂದಾಜಿ ಮಾಡ್ತರಲ್ಲಿ ದೊಡ್ಡಣ್ಣ ಸೋಲುಗು; ಹಂತಿಊಟ ಆದರೆ ಅಂದಾಜಿ ಹೇಳುಗು ಅವ°; ಅಂತೂ ಇಂತೂ ಕೂಡುಸಿ ಕಳದು ಒಂದೂವರೆ ಸಾವಿರ ಅಕ್ಕು – ಹೇಳಿ ಒಂದಂದಾಜಿ ಮಾಡಿದ°.
ಒಂದು ಉಪ್ನಾನಕ್ಕೆ ಐನ್ನೂರು ಜೆನರ ಅಂದಾಜಿ ಹಿಡುದರೂ, ಮೂರು ಉಪ್ನಾನಕ್ಕೆ ಒಂದೂವರೆ ಸಾವಿರ ಜೆನ ಅಕ್ಕು!

ಅದಾಗಿ, ಒಂದರಿ ಶರ್ಮಪ್ಪಚ್ಚಿಯ ಒಟ್ಟಿಂಗೆ, ಒಂದರಿ ಮುಳಿಯಾಲಅಪ್ಪಚ್ಚಿ ಒಟ್ಟಿಂಗೆ, ಒಂದರಿ ಎರುಂಬುಅಪ್ಪಚ್ಚಿ ಒಟ್ಟಿಂಗೆ – ಮೂರು ಸರ್ತಿ ಚಾಯಕುಡುದು,
ಮೂರು ಅಡಕ್ಕೋಳು ಬಾಯಿಗೆ ಹಾಕಿಂಡು,
ಮೂರ್ಸಂದಿಅಪ್ಪಗ,
ಮೂರುಪ್ನಾನದ ಮನೆಂದ ಹೆರಟಾತು.
ಹೆರಟದು ಎಲ್ಲಿಗೆ? ಇನ್ನೊಂದು ಅಪೂರ್ವದ ಜೆಂಬ್ರದಲ್ಲಿಗೆ.
~

ನಾಲ್ಕು ತ್ರಿಕಾಲಪೂಜೆ (ಪೂರ್ಣಮಂಡಲ):

ಬೈಲಿಲಿ ಮೊನ್ನೆ ತ್ರಿಕಾಲಪೂಜೆಯ ಶುದ್ದಿ ಮಾತಾಡಿದ್ದು, ಅಲ್ಲದೋ? (ಸಂಕೊಲೆ)
ಆದಿಮಾಯೆ ದುರ್ಗೆಯ ವಿವಿಧರೂಪಲ್ಲಿ ಅರ್ಚನೆ ಮಾಡಿ ಆರಾಧನೆ ಮಾಡ್ತ ಗವುಜಿ,
ದಿನಕ್ಕೆ ಹನ್ನೆರಡು ಸಾವಿರ ಪುಷ್ಪಾಂಜಲಿ ಮಾಡಿ ಮೂರೂಹೊತ್ತು ಮಾಡ್ತ ವಿಶೇಷದ ಪೂಜೆಯೇ ತ್ರಿಕಾಲಪೂಜೆ. ಅದು ಗೊಂತಿಪ್ಪದೇ.
ಅದಿರಳಿ,

ಪೂರ್ಣ ಮಂಡ್ಳ; ಪೂರ್ಣಮಂಡಲ

ಒಂದು ತ್ರಿಕಾಲ ಪೂಜೆಲಿ ಹನ್ನೆರಡು ಸಾವಿರ ಸರ್ತಿ ಪುಷ್ಪಾಂಜಲಿ ಮಾಡ್ತವು.
ಅಂಬಗ ನಲುವತ್ತೆಂಟು ಸಾವಿರ ಸರ್ತಿ ಮಾಡಿರೆ, ನಾಲ್ಕು ತ್ರಿಕಾಲಪೂಜೆಯಷ್ಟು..!!
ನಲುವತ್ತೆಂಟರ ಸಂಕೆಯ ಮಂಡಲ ಹೇಳಿಯೂ ಹೇಳ್ತವಲ್ಲದೋ – ಹಾಂಗಾಗಿ ಆ ನಾಲ್ಕು ತ್ರಿಕಾಲಪೂಜೆಯ “ಪೂರ್ಣಮಂಡಲ” ತ್ರಿಕಾಲಪೂಜೆ – ಹೇಳಿಯೂ ಹೇಳ್ತವಡ.

ಒಪ್ಪಣ್ಣ ಹೇಳುಲೆ ಹೆರಟದೂ ಈ ತ್ರಿಕಾಲಪೂಜೆಯ ಬಗ್ಗೆಯೇ!
ಅದೆಂತ ನಾಲ್ಕು ಮಂಡ್ಲ ಹಾಕಿದ ಪೂಜೆ ಅಲ್ಲ; ಬದಲಾಗಿ ಒಂದೇ ಮಂಡ್ಳಕ್ಕೆ ಮಾಡುವ ದೊಡ್ಡ ತ್ರಿಕಾಲಪೂಜೆ!
~
ಮನ್ನೆ ಅಮೈಂದ ಹೋದ್ಸು ಇದಕ್ಕೇ!

ಅಲ್ಲೇ ಸಾಲೆತ್ತೂರಿನ ಹತ್ತರೆ ಮಲಾರುಮಾವನ ಮನೆ ಇದ್ದಲ್ಲದೋ- ಅಲ್ಲಿಗೆ.
‘ಬತ್ತೆ ಬತ್ತೆ ಹೇದು ಬಪ್ಪಲೇ ಇಲ್ಲೆ ಒಪ್ಪಣ್ಣ, ಈ ಸರ್ತಿ ತಪ್ಪುಸಿರೆ ಮಾಷ್ಟ್ರುಮಾವನ ಕೈಲಿ ಹೇಳುವೆ’ – ಹೇದು ಮಲಾರುಮಾವ° ಮೊನ್ನೆ ಜೋರುಮಾಡಿತ್ತಿದ್ದವು.
ಆ ಪ್ರಕಾರ ದೊಡ್ಡಣ್ಣನನ್ನೂ ಹೆದರುಸಿ ಹೆರಡುಸಿತ್ತು ನಾವು.
ಎಂಗೊ ಎತ್ತಿಅಪ್ಪದ್ದೇ, “ಅದಾ, ಬೆಶಿ ಇಲ್ಲದ್ದರೆ ಬೆಣ್ಣೆ ಕರಗುತ್ತಿಲ್ಲೆ ಇದಾ” ಹೇಳಿ ಮಲಾರುಮಾವ° ಎದುರುಗೊಂಡವು.
ಅಮೈಂದ ಹಾಕಿದ ಮೂರು ಅಡಕ್ಕೋಳು ಮುಗಿವಗ ಮಲಾರು ಜಾಲುದೇ ಎತ್ತಿತ್ತು.

ಒಪ್ಪಣ್ಣ ಎತ್ತುವಗ ಎರಡೊತ್ತು ಪೂಜೆ ಕಳುದ ಲೆಕ್ಕಲ್ಲಿ ಮಂಡ್ಳ ಇಡೀಕ ಹೂಗಿನ ಹರವು ಬೆಳದ್ದು. ಪರಕ್ಕಜೆ ಬಟ್ಟಮಾವ° ಮಂಡ್ಳದ ಎದುರೆ ಗಂಭೀರಲ್ಲಿ ಕೂದು ದೀಪಾರಾಧನೆ ಸುರುಮಾಡಿದ್ದವು.
ಉದಿ, ಮಧ್ಯಾನ್ನದ ಗವುಜಿ ಮುಗುದು, ಈಗ ವೈದೀಕರೆಲ್ಲ ಇರುಳಾಣಪೂಜೆ ಪುಷ್ಪಾಂಜಲಿಗೆ ಕೂಯಿದವು.
ವಿಶಾಲ ಮಂಡ್ಳ, ತುಂಬ ಹೂಗು, ದೊಡ್ಡ ವೃತ್ತ, ತುಂಬ ಜೆನ ಬಟ್ಟಮಾವಂದ್ರು – ಪೂರ್ಣ ಮಂಡಲ ಹೇಳಿ ನೋಡುವಗಳೇ ಮನಸ್ಸಿಂಗೆ ಗೊಂತಾಗಿಂಡು ಇದ್ದತ್ತು.
ಕಜೆಸತ್ಯಣ್ಣ ಸಿಕ್ಕಿ ಇರುಳಾಣ ತಾಳಮದ್ದಳೆಯ ಗವುಜಿಯನ್ನೂ ವಿವರುಸಿದವು.

ವಿಶೇಷದ ಪೂಜೆಯೂ, ತಾಳಮದ್ದಳೆಯೂ ಇದ್ದರೆ ನಾವು ಅದು ಮುಗಿಯದ್ದೆ ಹೆರಡುಗೋ?
ಪೂಜೆ, ಮಂಗಳಾರತಿ, ಅಷ್ಟಾವಧಾನ, ಎಲ್ಲವೂ ಚೆಂದಲ್ಲಿ ಕಳುದತ್ತು. ಪ್ರಸಿದ್ಧ ಕಲಾವಿದರ ಕೂಡುವಿಕೆಲಿ ದೇವಿಮಹಾತ್ಮೆ ತಾಳಮದ್ದಳೆಯೂ ಮುಗಾತು.
ಅಷ್ಟಾವಧಾನ ಸೇವೆಗೂ, ತಾಳಮದ್ದಳೆಗೂ ತೆಂಕಬೈಲು ಶಾಸ್ತ್ರಿಅಜ್ಜ° ಬಂದದು ಆ ದಿನದ ವಿಶೇಷ!

ಅಲ್ಲೇ ಕರೆಲಿ ಒಂದು ತಲೆಕೊಂಬು ಹಿಡುದು ಮನುಗಿ ಒರಗಿತ್ತು, ಮರದಿನ ಎದ್ದು ದೊಡ್ಡಣ್ಣನ ಬೈಕ್ಕಿನ ಹಿಂದಾಣ ಸೀಟು ಬೆಶಿಮಾಡಿ ಊರಿಂಗೆತ್ತಿತ್ತು.
ಕಾರ್ಯಕ್ರಮದ ಸವಿವರ ಬೇಕಾರೆ ಇನ್ನೊಂದರಿ ಮಾತಾಡುವೊ°;
– ಇಷ್ಟು ಊರುಸುತ್ತಿದ ಒಪ್ಪಣ್ಣಂಗೆ ಮಾತಾಡಿಯೇ ಬಚ್ಚಿತ್ತು!

~

ಒಂದೇ ಬಾಳೆಲೆ:

ಶಾಸ್ತ್ರಪ್ರಕಾರವಾಗಿ ಊಟ ಮಾಡುವಗ ಕೈನ್ನೀರು ತೆಗೇಕು.
ಅಶನ ತುಂಬಿದ ಬಾಳೆಲೆಗೆ ನೀರು ಸುತ್ತುಗಟ್ಟಿಕ್ಕಿ, ಕೈನ್ನೀರು ತೆಗದು ಉಂಬಲೆ ಸುರುಮಾಡಿರೆ, ವಿವಿಧ ಭಕ್ಷ್ಯ, ಭೋಜ್ಯಂಗಳ ಸೇವಿಸಿ, ಸಂತೃಪ್ತಿ ಆಗಿ, ಅಮೃತ-ಅಪಿಧಾನ ಅಪ್ಪನ್ನಾರವೂ ಅದೇ ಬಾಳೆಲೆ.
ಎಡೆಲಿ ಹರುದರೂ ಬದಲುಸಲಿಲ್ಲೆ.
ಕೊಟ್ಟ ಬಾಳೆಲೆಲಿ ಉಂಣೇಕು, ಬದಲುಸಲಾಗ – ಹೇಳ್ತದು ವಾಡಿಕೆ.
ಬಾಳೆ ಬದಲುಸಿರೆ ಹೆಂಡತ್ತಿ ಬದಲುಗು – ಹೇದು ಒಪ್ಪಣ್ಣನ ಅಂದೇ ಹೆದರುಸಿ ಮಡಗಿದ್ದವು ಹೆರಿಯೋರು! 😉
ಒಂದು ಮಧ್ಯಾಹ್ನದ ಊಟಕ್ಕೆ ಒಂದೇ ಬಾಳೆಲೆ ಬೇಕಾದ್ಸು – ಹೇಳ್ತರ ನಾವು ಒಪ್ಪುತ್ತು.
ಕೈನ್ನೀರು ತೆಗವಗ ಚಿತ್ರಗುಪ್ತಂಗೆ ಮಡುಗಲೆ ಇದ್ದಲ್ಲದೋ – ಅಷ್ಟಪ್ಪಗ ಅವ° ಬರಕ್ಕೊಳ್ತನಾಡ, ಇಂತಾ ಮನಿಶ್ಶ°, ಇಂತಾ ದಿನ ಮದ್ಯಾನ್ನ, ಇಂತಾ ದಿಕ್ಕೆ ಉಂಡಿದ°, ಇವನ ಲೆಕ್ಕದ ಊಟ ಸಂದಿತ್ತು – ಹೇದು.
ಒಂದೇ ಹೊತ್ತಿಲಿ ಇರುವಾರ ಉಂಡಿಕ್ಕಲಾಗ ಹೇಳ್ತದು ಅದರ ಹಿಂದಾಣ ತತ್ವ.
ಕೈನ್ನೀರು ತೆಗೆಯದ್ದೆ ಉಂಡ್ರೆ ಹೇಂಗೆ? – ಹೇದು ಅಜ್ಜಕಾನದೋನೋ, ಆಚಕರೆ ಮಾಣಿಯೋ ಮಣ್ಣ ಬೆಳವು ಮಾತಾಡುಗು ಒಂದೊಂದರಿ, ರಂಗಮಾವ° ಇದ್ದರೆ ಬೈಗಳೂ ತಿಂಗು.

ಅದೇನೇ ಇರಳಿ.
ಈ ಜೆಂಬ್ರಂಗಳ ಎಡೆಲಿ ಈ ಒಂದು ಬಾಳೆಯ ಮಧ್ಯಾಹ್ನ ಊಟ ಯೇವ ಮನೆದು ಬಗದ್ದು ಹೇಳ್ತ ಸಂಗತಿಯ – ಜೋಯಿಷಪ್ಪಚ್ಚಿ ದಿನ ನಿಗಂಟು ಮಾಡಿದ ಕೂಡ್ಳೇ ನಿಗಂಟು ಮಾಡ್ತನಡ°, ಚಿತ್ರಗುಪ್ತ;
~

ಜೆಂಬ್ರಂಗೊಕ್ಕೆ ದಿನಿಗೆಳುವಗ ಆತ್ಮೀಯತೆ ಇರ್ತು.
ಅದರ್ಲಿಯೂ ಅಪೂರ್ವ ಜೆಂಬ್ರಂಗೊ ಇದ್ದರೆ ಬಪ್ಪಲೇ ಬೇಕು ಹೇಳ್ತ ಪ್ರೀತಿಯ ಶರ್ತವೂ ಇರ್ತು.
ಹಾಂಗಪ್ಪಗ, ಎಷ್ಟು ಕಷ್ಟ ಆದರೂ ಹೋಗದ್ದೆ ಕಳಿಯದ್ದ ಪರಿಸ್ಥಿತಿ.

ಕೆಲವು ದಿಕ್ಕಂಗೆ ಮೂರ್ತಕ್ಕೆ, ಕೆಲವು ದಿಕ್ಕಂಗೆ ತೀರ್ತಕ್ಕೆ, ಕೆಲವು ದಿಕ್ಕಂಗೆ ಊಟಕ್ಕೆ, ಕೆಲವು ದಿಕ್ಕಂಗೆ ಒರಗಲೆ – ಹೀಂಗೆ ಹೋಗಿ ನಮ್ಮಾಂಗಿರ್ತೋರು ಸುದಾರುಸುದು! ಅಲ್ಲದೋ?
ಅದರ್ಲೇ ಒಂದು ಗವುಜಿ! ಅದರ್ಲೇ ಒಂದು ಗಮ್ಮತ್ತು.

ಇದೆಂತ ಒಪ್ಪಣ್ಣಂಗೆ ಮಾಂತ್ರ ಅಪ್ಪದಲ್ಲ; ಹೀಂಗೆ ಇಪ್ಪ ಅನುಬವ ನಿಂಗೊಗೂ ಆಯಿಕ್ಕು.
ಆದರೆ ಮನ್ನೆ ಒಂದು ದಿನ ಸಿಕ್ಕಿದ ಆ ಮೂರೂ ಜೆಂಬ್ರಂಗಳೂ ಅಪೂರ್ವದ್ದು ಹೇಳ್ತದಕ್ಕೆ ಬೈಲಿಂಗೆ ಒಂದು ಶುದ್ದಿ ಮಾಡಿ ಹೇಳಿದ್ದು.

ಒಂದೊಪ್ಪ: ಅಂತೂ ಇಂತೂ ನಾವೆಲ್ಲರೂ ಒಂದು ಬಾಳೆ ಎಲ್ಯಾರು ಹುಡ್ಕಿಗೊಳ್ತು ಜೀವನಲ್ಲಿ. ಅಲ್ಲದೋ?

33 thoughts on “ನಾಕು ತ್ರಿಕಾಲಪೂಜೆ, ಮೂರು ಉಪ್ನಾನ, ಎರಡು ಬದ್ಧ – ಒಂದೇ ಬಾಳೆಲೆ!

  1. ಒಪ್ಪಣ್ಣ ,

    ಬೈಲಿನ ಅವಿಭಕ್ತ ಕುಟುಂಬಂಗಳ ಒಮ್ಮನಸ್ಸಿನ ತೋರ್ಸುವ, ಅವರ ವಿಶಾಲ ಹೃದಯದ ಪರಿಚಯ ಮಾಡ್ಸಿಗೊಂಡು, ವೈಭವಲ್ಲಿ ಆದ ಈ ಬೈಲಿನ ಪ್ರತಿಷ್ಠಿತ ಮನೆಗಳ ಜೆಂಬರದ ವಿವರಣೆ ಲಾಯಕ ಬಯಿಂದು ನಿನ್ನ ಶುದ್ದಿಲಿ. ಈಗಾಣ ಕಾಲಲ್ಲಿ ತುಂಬಾ ಅಪರೂಪ ಆದ ಹೀಂಗಿರ್ತ ಕುಟುಂಬಂಗ ಈಗಾಣ ಕಾಲದವಕ್ಕೆ ಮಾದರಿಯಾಗಿ ಒಳ್ಕೊಂಡಿದವು!! ಹಿರಿಯರು ಹಿರಿತನದ ಜವಾಬ್ದಾರಿಯ ವಹಿಶಿಗೊಂಡು, ಕಿರಿಯರ ಮನಸ್ಸರ್ತು ಅದಕ್ಕೆ ಪೂರಕ ಆಗಿದ್ದುಗೊಂಡು, ಕಿರಿಯರು ಹಿರಿಯರ ಆದೇಶಕ್ಕೆ ಗೌರವ ಕೊಟ್ಟು ಪರಸ್ಪರ ಪ್ರೀತಿ ವಿಶ್ವಾಸಲ್ಲಿ ಇಪ್ಪ ಮನೆತನಂಗೊಕ್ಕೆ ಖಂಡಿತಾ ದೈವಾನುಕೂಲ ಒದಗಿ ಬತ್ತು, ಬತ್ತಾ ಇರಲಿ.

    ಒಪ್ಪಣ್ಣ,

    ಒಂದು ಜೆಂಬರ ಮಾಡುದು ಹೇಳಿದರೆ ಈಗಾಣ ಕಾಲಲ್ಲಿ ಸುಮಾರು ಆಲೋಚನೆ ಮಾಡೆಕ್ಕಾವುತ್ತು. ಹಾಂಗೆ ಇಪ್ಪಗ ಹೀಂಗೇ ಜೊತೆಲಿ ಕಾರ್ಯಕ್ರಮ ಮಾಡುವಾಗ ಎಲ್ಲರ ಸಹಕಾರ ಎಷ್ಟಿದ್ದು ಹೇಳಿ ನವಗೆ ಕಾಣ್ತು ಅಲ್ಲದಾ?
    ನೀನು ಹೇಳಿದ ಹಾಂಗೆ [ ವಂಶವೃಕ್ಷದ – ಕೊಟ್ಟ, ತಂದ ಮನೆಯ ಗೆಲ್ಲುಗಳ ಎಲೆಗೊ.] ಎಲ್ಲವೂ ಸೇರಿದ ಸಂಸಾರ ಎಲೆಗಳ ಹಾಂಗೆ ಕೊಶೀಲಿ ಅತ್ತಿತ್ತೆ ಹೋಪದರ ನೋಡುಲೇ ಒಂದು ಚೆಂದ ಅಲ್ಲದಾ? ನಮ್ಮ ನಮ್ಮವ್ವೇ ಸುದರಿಕೆ ಮಾಡ್ತದರಲ್ಲಿ ಇಪ್ಪ ಆತ್ಮೀಯತೆ ಬೇರೆ ಎಲ್ಲಿಯೂ ಸಿಕ್ಕ ಅಲ್ಲದ?

    ಪೂರ್ಣ ಮಂಡಲ ತ್ರಿಕಾಲ ಪೂಜೆಯ ವಿವರ ಗೊಂತಾತು. ತುಂಬಾ ಕೊಶೀ ಆತು. ಅಬ್ಬೆಯ ಪೂರ್ಣ ರೂಪ ಕಂಡ ಹಾಂಗೆ ಆತು. ನಾಲ್ಕು, ಮೂರು, ಎರಡು ಸೇರಿದರೆ ಒಂಬತ್ತು ಆತು. ಹೇಳಿದರೆ ನವ. ನವ ರೀತಿಲಿ ವಿವರಣೆ ಬಂದ ಹಾಂಗೆ ಆತು ಒಪ್ಪಣ್ಣ. ಎಷ್ಟೇ ಜೆಂಬರ ಆದರೂ ತುಂಬುಲೆ ಇಪ್ಪದು ಒಂದು ಹೊಟ್ಟೆ. ಅದಕ್ಕೆ ಬೇಕಪ್ಪದು ಒಂದೇ ಬಾಳೆಲೆ! ಈ ವಿವರಣೆ ಲಾಯ್ಕಾಯಿದು. ಒಂದು ಮನೆಯ ಜೆಂಬರಂಗ ನಾಲ್ಕು, ಮೂರು ಎರಡು ಆದರೂ ಮನಸ್ಸು ಒಂದೇ!!

    ನಮ್ಮ ಬೈಲಿನ ಎಲ್ಲಾ ಮನೆಗಳಲ್ಲಿಯೂ ಹೀಂಗೇ ಒಂದೇ ಕಡೆ ಜೆಂಬರಂಗ ಅಪ್ಪ ಹಾಂಗೆ ಆಗಿ ಎಲ್ಲಾ ಕುಟುಂಬಂಗ, ಮನಸ್ಸುಗ ಒಂದಾಗಿರಲಿ!!!

    1. ಅಕ್ಕಾ, ಮೂರೂ ಲೇಖನದ ಸಾರವ ಒಟ್ಟುಗೂಡುಸಿಗೊಂಡು ಚೆಂದದ ಒಪ್ಪ ಕೊಟ್ಟಿ.
      { ನಾಲ್ಕು, ಮೂರು, ಎರಡು ಸೇರಿದರೆ ಒಂಬತ್ತು ಆತು. ಹೇಳಿದರೆ ನವ. ನವ ರೀತಿಲಿ }
      ಹೋ, ಇದಪ್ಪನ್ನೇ! ನಾವು ಯೇಚನೆಯೇ ಮಾಡಿದ್ದಿಲ್ಲೆ ಹೀಂಗೊಂದು.
      ಒಂಬತ್ತು ಹೇದರೆ “ಪರಮಮೈತ್ರ” ಅಡ, ಜೋಯಿಶಪ್ಪಚ್ಚಿ ಲೆಕ್ಕಮಾಡಿ ಹೇಳಿದವು.

      ಅವಿಭಕ್ತ ಕಾರ್ಯಕ್ರಮಂಗೊಕ್ಕೆ ಇನ್ನೂ ಪ್ರೋತ್ಸಾಹ ಸಿಕ್ಕಲಿ, ಚೆಂದದ ಒಪ್ಪಕ್ಕೆ ವಂದನೆಗೊ.

  2. ಚೊಲೊ ವರ್ಣನೆ ಮಾಡಿದ್ದೆ ಒಪ್ಪಣ್ನಾ..>

    1. ಪ್ರಶಾಂತಣ್ಣಾ, ಪ್ರೋತ್ಸಾಹಕ್ಕೆ ವಂದನೆಗೊ.
      ನಿಂಗ್ಳೂ ಏನಾರ ಊರ ಶುದ್ದಿ ಹೇಳಿ ಅಲ್ದ, ಚೊಲೋ ಇರ್ತು!

  3. ಹಲವು ಕಾರ್ಯಕ್ರಮ ಒಂದೆ ದಿನ ಸುಧಾರಿಸಿದ ಅನುಭವ ಲಾಯ್ಕ ಆಯಿದು.

  4. ಯೇ ದೇವರೇ…!!
    ಒಪ್ಪಣ್ಣನೇ ನೀನೇ..
    ಅಂತೂ ಸುದಾರುಸಿದೆ ಅನ್ನೆ..
    ಲೇಖನ ಓದಿ ತುಂಬ ಖುಶಿ ಆತು..
    ನಿನ್ನ ಶುದ್ದಿಗೊ ಹೇಳಿರೆ ಶುದ್ದಿಗಳೇ…! 🙂

    ಮಾಣಿಗೆ ಹೆಚ್ಚಿಗೆ ಹೇಳಿಕೆಗೊ ಬತ್ತಿಲ್ಲೆ, ಬಿಂಗ್ರಿ ಕಟ್ಟುಗು ಹೇಳಿ ಆದಿಕ್ಕು 😉

    1. ಯೇ ಮಾಣೀ,
      ಬಿಂಗ್ರಿಕಟ್ಟುವೆ ಹೇದು ಅಲ್ಲ, ನೀನು ಓದುತ್ತ ಮಾಣಿ ಅಲ್ಲದ – ಉಪದ್ರ ಆಗದ್ದೆ ಇರಳಿ ಹೇದು ಆಯಿಕ್ಕು ನಿನಗೆ ಜಾಸ್ತಿ ಹೇಳಿಕೆಗೊ ಬಾರದ್ಸು.

      ಓದಿ, ಒಳ್ಳೆ ಕೆಲಸ ಎಲ್ಲ ಆಗಲಿ, ಮತ್ತೆ ನೋಡು – ಹೋದಲ್ಲಿ ಬಂದಲ್ಲಿ ಪೂರ ಹೇಳಿಕೆಗಳೇ! 🙂

  5. ಜೆಂಬ್ರದ ಸೀಸನ್ನಿನ ವಿಶೇಷ ಲೇಖನ ಚೆಂದಕೆ ಬಂತು. ಕೂಡುಕುಟುಂಬದ ಜೆಂಬಾರಂಗಳ ನೋಡ್ಳೇ ಚೆಂದ. ಸುದರಿಕೆಗೆ ಬೇಕಾದಷ್ಟು ಜೆನ. ಅಲ್ಯಾಣ ಅತ್ಮೀಯತೆ ಬೇರೆಯೆ. ತುಂಬಿದ ಸಭೆಲಿ “ಏನು” ಏನು” ಹೇಳಿ ವಿಚಾರುಸುವಗ ನಾಚಿಕೆ ಆಗಿ “ಒಳ್ಳೆದು” ಹೇಳಿ ಹೇಳಲೆ ಒಪ್ಪಣ್ಣಂಗೆ ಮರದು ಹೋದ್ದು ಕೇಳಿ ನೆಗೆ ಬಂತು. ಏಕೆ ಹೇಳಿರೆ, ಎನಗುದೆ ಹಾಂಗಿಪ್ಪ ಅನುಭವ ಆಯಿದು!! ಜೋಡುಬದ್ದದ ವಿವರಣೆಲಿ ಇದ್ದದರ ಇದ್ದ ಹಾಂಗೇ ಹೇಳಿದ್ದ ಒಪ್ಪಣ್ಣ. ಒಂದೇದಿನಲ್ಲಿ ನೆಡವ ಜೆಂಬಾರಕ್ಕೆ ಹಾಜರಿ ಹಾಕಿ ಸುದಾರುಸಿಕಾಗಿ ಬತ್ತದು ಎಲ್ಲೋರ ಅನುಭವದ ಮಾತು. ಹೇಳುವಗ ಹೋಗದ್ದೆ ಕಳಿಗೊ.

    ಲೇಖನದ ಹೆಡ್ಡಿಂಗು ನೋಡುವಗ, ಪೇಟೆಯ ಕೆಲವು ಸಭಾಂಣಲ್ಲಿ ನೆಡೆತ್ತ ಅವಸ್ಥೆ ನೆಂಪಾತು. ಒಂದೇ ಸಭಾಂಗಣದ ಕಟ್ಟಡಲ್ಲಿ, ಮದುವೆ, ಬಸರಿ ಸನ್ಮಾನ, ಉಪನಯನ, ಅಲ್ಲೇ ಇನ್ನೊಂದು ದಿಕ್ಕೆ, ತಿಥಿಯುದೆ. ಅದಕ್ಕೆ ಊಟವುದೆ ಒಂದೇ ಕೇಟರಿಂಗಿನವು. ಮದುವೆ ಊಟವೇ, ತಿಥಿಗುದೆ !! ಕಾರ್ಯಕ್ರಮಂಗೊ ಎಲ್ಲ ಬೇರೆ, ಬೇರೆ ಕುಟುಂಬಂಗಳದ್ದು. ಎಲ್ಲಾ ಒಂದು ರೀತಿಯ ಹೊಂದಾಣಿಕೆ ಅಷ್ಟೆ.

    1. ಬೊಳುಂಬುಮಾವಾ, ಒಳ್ಳೆದು ಒಳ್ಳೆದು ಹೇದು ನಿಂಗೊಗೂ ನಾಚಿಗೆ ಆದ್ಸು ಕಂಡು ಒಪ್ಪಣ್ಣಂಗೆ ನೆಗೆ ಬಂತು.
      ಆದರೆ ಬೊಳುಂಬುಗುರಿಕ್ಕಾರ್ರು ಹಾಂಗಲ್ಲ, ಅವು ಎಲ್ಲೋರಿಂಗೂ “ಒಳ್ಳೆದು”ಆಗಲಿ – ಹೇದು ಗುರುಸೇವೆ ಮಾಡುವೋರು, ಅಲ್ಲದೋ? 🙂

      ಸಭಾಂಗಣದ ಅವ್ಯವಸ್ಥೆಯ ಒಂದೇ ಗೆರೆಲಿ ಚೆಂದಕೆ ವಿವರುಸಿದ್ದು ಲಾಯಿಕಾಯಿದು! 🙂

  6. ಒಪ್ಪಣ್ಣ ನಿಂಗ ಹೇಳಿದ ಹರಿಯೊಲ್ಮೆಯ ಎರಡು ಬದ್ಧಂಗೊಕ್ಕೆ ಆನು ಹೋಯಿದೆ. ಭಾರಿ ಗೌಜಿ. ಎರಡು ಬದ್ಧ ಅಲ್ಲದ್ದೆ ಪುಟ್ಟು ಮಾಣಿಯ ಉಪನಯನವೂ ಇದ್ದತ್ತು. ಅವು ಎನ್ನ ಸೋದರತ್ತೆಯ ಕುಟುಂಬ. ಅಲ್ಲೇ ಹತ್ತರೆ ಎನ್ನ ದೊಡ್ಡ ಸೋದರಮಾವನ ಮನೆ. ಹಾಂಗಾಗಿ ಸಣ್ಣ ಇಪ್ಪಗಳೇ ಹೋಗಿ ಆಡಿಗೊಂಡಿತ್ತಿದ್ದ ಮನೆ. ಆ ಮನೆಗೆ ಹೋಗಿಯಪ್ಪಗ ಬಾಲ್ಯದ ನೆನಪಾತು. ಸುಮನಕ್ಕನ ನೆಂಪಾತು.

    ಅಲ್ಲಿ ಒಪ್ಪಣ್ಣನ ಅಮ್ಮ ಸಿಕ್ಕಿದವು. ಪಟ್ಟಂಗ ಜೋರಾಗಿ ನಡದತ್ತು….ಬೈಲಿನ ಎಲ್ಲೋರ ಸುದ್ದಿಯೂ ಬಂತು.

    1. ಅನುಅಕ್ಕಂಗೆ ನಮಸ್ಕಾರಂಗೊ.
      ಎಂಗೊ ಬೇಗ ಬದ್ಧದ ಮನೆಂದ ಹೆರಟ ಕಾರಣ ನಿಂಗಳ ಕಂಡಿದಿಲ್ಲೆ ಆಯಿಕ್ಕು! 😉

      ಅಮ್ಮಂಗೆ ನಿಂಗೊ ಸಿಕ್ಕಿ ಬೈಲಿನೋರ ಬಗ್ಗೆ ಮಾತಾಡಿದ್ದರ ಹೇಳಿದವು, ತುಂಬ ಕೊಶಿ ಆತು ಅವಕ್ಕೆ.
      ಅದಪ್ಪು, ನೆರೆಕರೆಗೆ ಬಂದರೂ – ಒಪ್ಪಣ್ಣನ ಮನಗೆ ಬಯಿಂದಿಲ್ಲಿ ನಿಂಗೊ! ಇನ್ನಾಣ ಸರ್ತಿ ಪುರುಸೊತ್ತು ಮಾಡಿಕ್ಕಿ, ಆತೋ? 🙂

  7. ಮೂರೂ ಜೆ೦ಬ್ರ೦ಗೊಕ್ಕೂ ಹೊಗಿ ಬ೦ದಾ೦ಗೆ ಅತು ಒಪ್ಪಣ್ಣಾ.

    1. ಡೀಕೇಶಾಂಬಾವಾ, ನಿಂಗಳ ಕಂಡಿದಿಲ್ಲೆನ್ನೆ ಆ ದಿನ! ಬೇರೆ ಯೇವದಾರು ಜೆಂಬ್ರಕ್ಕೆ ಹೋಗಿತ್ತಿರೋ?
      ಯೇವ ಜೆಂಬ್ರ? ಶುದ್ದಿ ಹೇಳಿ.. 🙂

  8. ಸಣ್ಣ ಇಪ್ಪಗಂದಲೇ ಅವಿಭಕ್ತ ಕುಟುಂಬಲ್ಲಿ ಬೆಳದ ಎನಗೆ ಅವಿಭಕ್ತ ಕುಟುಂಬ ಹೇಳಿರೆ ಭಾರೀ ಪ್ರೀತಿ.
    ಒಪ್ಪಣ್ಣ ಬರದ ಹಾಂಗೆ ಎನ್ನ ಅಪ್ಪನ ಮನೆಲಿ (ಹರಿಯೊಲ್ಮೆ) ಅಪ್ಪ, ಅಪ್ಪಚ್ಚಿಯಕ್ಕೊ ಬೇರೆ ಬೇರೆ ಇದ್ದರೂ ಎಲ್ಲರೂ ಒಂದೇ ಮನೆಲಿಪ್ಪ ಭಾವನೆ ಇದ್ದು ಹೇಳಿ ಎನಗೆ ಭಾರೀ ಹೆಮ್ಮೆ. ಆದರೆ ಅದು ಎನ್ನ ಅಪ್ಪನ ಮನೆ ಹೇಳಿ ಎನಗೆ ಅನ್ಸುದು ಮಾತ್ರ ಅಲ್ಲ ಅಂಬಗ, ಒಪ್ಪಣ್ಣಂಗೂ ಹಾಂಗೆ ಕಂಡಿದು ಹೇಳಿ ಎನಗೆ ತುಂಬಾ ಖುಷಿ ಆತು, ಮನ ತುಂಬಿ ಬಂತು.
    ಆ ದಿನದ ಕಾರ್ಯಕ್ರಮಂಗೊಕ್ಕೆ ಎಂಗೊಗೆ ಭಾಗವಹಿಸುಲೆ ಎಡಿಗಾಯಿದಿಲ್ಲೆ ಹೇಳಿ ಬೇಜಾರದೆ ಇದ್ದು ಎಂಗೊಗೆ.
    ಒಪ್ಪಣ್ಣ, ಆ ದಿನ ಅಲ್ಲಿ ದೊಡ್ಡ ಅಪ್ಪಚ್ಚಿ ಮಗನ ಉಪನಯನದೆ ಇತ್ತಿದ್ದು.
    ‘ಹರಿಯೊಲ್ಮೆ’ಲಿ ಕಾರ್ಯಕ್ರಮಂಗೊ ಒಂದೇ ದಿನ ಇದ್ದ ಹಾಂಗೆ ಅದೇ ದಿನ ಬೇರೆ ೨ ಅವಿಭಕ್ತ ಕುಟುಂಬಂಗಳಲ್ಲಿ ಇದ್ದ ಕಾರ್ಯಕ್ರಮಂಗಳ ಬಗ್ಗೆ ಓದಿದೆ ತುಂಬಾ ಖುಷಿ ಆತು.
    ಒಪ್ಪಣ್ಣ ನೀನು ಭಯಂಕರ ಉಷಾರಿ ಆತಾ? ನಿನ್ನ ಶುದ್ಧಿಗಳಲ್ಲಿ ಎಷ್ಟೆಲ್ಲ ವೈವಿಧ್ಯ ಇದ್ದು? ಒಂದೊಂದು ವಾರ ಒಂದೊಂದು ನಮುನೆ ವಿಷಯ ತುಂಬಾ ಲಾಯಿಕಲ್ಲಿ ಬರೆತ್ತೆ ಆತಾ? ವಿಷಯ ಸಂಗ್ರಹಿಸಿ, ಅದರ ಅಷ್ಟೂ ಲಾಯಿಕಲ್ಲಿ ಬರವ ನಿನ್ನ ಕ್ರಮ ಎಲ್ಲರೂ ಮೆಚ್ಚುವಂತದ್ದೆ.
    ~ಸುಮನಕ್ಕ…

    1. ಸುಮನಕ್ಕೋ,
      ಒಪ್ಪಣ್ಣಂಗೆ ಕಂಡದರ ಕಂಡ ಹಾಂಗೇ (!) ಹೇಳ್ತದು ಕ್ರಮ, ಲೊಟ್ಟೆ ಅರಡಿಯ! ಅಪ್ಪೋಲ್ಲದೋ! 😉
      ಈ ಶುದ್ದಿ ನಿನಗೆ ಕೊಶಿ ಆದ್ಸು ಕಂಡು ಒಪ್ಪಣ್ಣಂಗೂ ಕೊಶಿ ಆತು.

  9. ಜೆಂಬಾರಂಗಳ ಸಮಯಲ್ಲಿ ತುಂಬಾ ಹೇಳಿಕೆಗೊ ಒಟ್ಟೊಟ್ಟಿಂಗೆ ಬಂದಪ್ಪಗ, ಒಂದೊಂದು ದಿನ ಮೂರು ನಾಕು ಜೆಂಬಾರ ಸುದಾರ್ಸೆಕ್ಕವ್ತು.
    ಆದರೆ ಈ ಜೆಂಬಾರಂಗೊ ಹಾಂಗಿಪ್ಪದಲ್ಲ.
    ಎಲ್ಲವೂ ಕೂಡು ಕುಟುಂಬಲ್ಲಿ ಅವರ ಮನೆಗಳಲ್ಲಿಯೇ ನಡದ್ದದು ಹೇಳುವದು ಒಂದು ವಿಶೇಷವೇ ಸೈ.
    ಆದಿನ ಅಮೈ ಉಪ್ನಾನನಕ್ಕೆ ಆನೂದೆ ಹಾಜರು ಹಾಕಿದವನೇ. ಮೂರು ವಟುಗೊಕ್ಕೆ ಒಂದೇ ಮಂಟಪಲ್ಲಿ ಉಪ್ನಾನ. ನೋಡುವದೇ ಒಂದು ಚೆಂದ. ಎನಗೆ ಇದು ಸುರುವಾಣ ಅನುಭವ ಕೂಡಾ.
    ಮನೆಯವು ಎಲ್ಲರೂ ಎಲ್ಲರನ್ನೂ ವಿಚಾರುಸುವದು, ಹೆರಡುವಾಗ ಆತ್ಮೀಯವಾಗಿ ಬೀಳ್ಕೊಡುವದು, ಎಲ್ಲವೂ ಹೃದಯಸ್ಪರ್ಶಿ ಆಗಿತ್ತು.
    ಲೇಖನಲ್ಲಿ ಪೂರ್ಣ ಮಂಡಲ ತ್ರಿಕಾಲ ಪೂಜೆ ಬಗ್ಗೆಯೂ ವಿವರಣೆ ಸಿಕ್ಕಿತ್ತು.
    ಧನ್ಯವಾದಂಗೊ ಒಪ್ಪಣ್ಣಂಗೆ

    1. ಅಪ್ಪಚ್ಚೀ,
      ಅಮೈ ಉಪ್ನಾನಲ್ಲಿ ನಿಂಗೊ ಸಿಕ್ಕಿದ್ದು, ನಾವು ಒಟ್ಟಿಂಗೇ ಒಂದು ಚಾಯ ಕುಡುದ್ದು, ಕುಡಿವಗ ಬೈಲಿನ ಎಲ್ಲೋರ ಬಗ್ಗೆ ಮಾತಾಡಿಗೊಂಡದು ನೆಂಪಾತು.
      ಮತ್ತೆ ಉಂಡಿಕ್ಕಿ ಹೆರಡುವಗ ವಿಟ್ಳ ಒರೆಂಗೆ ನಿಂಗಳ ಕಾರು ಆಚಮನೆ ದೊಡ್ಡಣ್ಣನ ಬೈಕ್ಕಿನ ಹಿಂದೆಹಾಕಿದ್ದುದೇ ನೆಂಪಾತು! 😉

      ಅಮೈ ಆತ್ಮೀಯತೆ ತುಂಬ ಹಾರ್ದಿಕವಾಗಿತ್ತು, ಅಲ್ಲದೋ ಅಪ್ಪಚ್ಚಿ!

  10. ನಿಜ, ಈ ಮೂರೂ ಜೆಂಬ್ರಂಗಳೂ ಇಷ್ಟೊಂದು ಗೌಜಿಲಿ ಅವರವರ ಮನೆಗಳಲ್ಲೇ ಆದ್ಸು ತುಂಬ ವಿಶೇಷ ಆತು…
    ಕಲ್ಯಾಣ ಮಂಟಪಂಗಳಲ್ಲಿ ಮನೆಯ ಅನುಭವ ಸಿಕ್ಕುತ್ತಿಲೆ ಹೇಳುದು ಎಷ್ಟು ಸತ್ಯ ಅಲ್ಲದೋ…?

    1. ಕಲ್ಯಾಣಮಂಟಪಲ್ಲಿ ಆದ ಜೆಂಬ್ರ ಮೂರೂ ಅಲ್ಲ, ಹಾಂಗಾಗಿ ಆ ಆತ್ಮೀಯತೆ ಒಳುತ್ತು. ಅದಪ್ಪು.
      ಹೆರ ಮಾಡುದಾಗಿದ್ದರೆ ನೆಂಟ್ರುಗಳಿಂದ ಅಂಬೆರ್ಪಿಲಿ ಮನೆಯೋರಿಂದ ಹೆರಟು ಮನಗೆತ್ತುತ್ತವು! 😉

      ಅಲ್ಲದೋ?

  11. ಶುದ್ದಿ ಲಾಯ್ಕಾಯ್ದು ಒಪ್ಪಣ್ಣ..
    ಮೂರು ಜಂಬ್ರಂಗೊಕ್ಕೂ ಹೊಗಿ ಬಂದಷ್ಟು ಖುಶಿ ಆತು ಶುದ್ದಿ ಓದಿ… 🙂
    ಈ ಕಾಲಲ್ಲಿಯೂ ಕೆಲವು ಮನೆಗಳಲ್ಲಿ ಕಾಂಬ ಆತ್ಮೀಯತೆಯ ಚಂದ ವಿವರ್ಸಿದ್ದೆ…
    ಕೆಲವು ದಿನ ಒಪ್ಪಣ್ಣ ಅರ್ದ ಉಂಡು ಕೈ ನೀರು ತೆಗವದಡ.. ಚಿತ್ರಗುಪ್ತಂಗೆ ಲೆಕ್ಕ ತಪ್ಪುಸುಲೆ…!!!! ಅಪ್ಪೊ?

    1. “ಹರೇ ರಾಮದ ಭರತ – ಒಪ್ಪಣ್ಣ” ಹೇಳಿ ಗೊಂತಾದ ದಿನಂದ ಒಪ್ಪಣ್ಣ ಎನ್ನ ಸ್ವಂತ ತಮ್ಮನಿಂದಲೂ ಹತ್ತರೆ ಆಗಿ ಹೋದ… ಹರೇ ರಾಮಂದ ಅಷ್ಟೂ………. ಪ್ರಯೋಜನ ಪಡಕ್ಕೊಂಡಿದೆ…. ಅಮ್ಮನ ಹತ್ತರೆ “ಎಂಥ ಮಗನ ಹಡೆದೆಯವ್ವ ನೀನು…” ಹೇಳಿ ಅಭಿನಂದನೆಗಳ ಹೇಳೆಕ್ಕು… ನಿಂಗಳೆಲ್ಲರ ಹತ್ತರೆ ಮಾತನಾಡೆಕ್ಕು ಹೇಳಿ ಆವುತ್ತು… ನಿಂಗಳೆಲ್ಲರ ಮೇಲೆ ಗುರುದೇವತಾನುಗ್ರಹ ಸದಾ ಇರಲಿ ಹೇಳಿ ನಿತ್ಯ ಪ್ರಾರ್ಥಿಸುವವರಲ್ಲಿ ಆನೂ ಒಬ್ಬಳು…

      1. ಬೈಲಿನ ಒಪ್ಪಣ್ಣಂದ್ರ ಮೇಗೆ ಜಯಕ್ಕ ಮಡಗಿದ ಪ್ರೀತಿ ವಿಶ್ವಾಸಕ್ಕೆ ಎಲ್ಲೋರ ಪರವಾಗಿ ಕೃತಜ್ಞತೆ ಸಲ್ಲುಸುತ್ತೆ.
        ಗುರುದೇವತಾನುಗ್ರಹ ಒದಗಿ ಎಂದಿಂಗೂ ಈ ಬೈಲು ಹೀಂಗೇ ನೆಡವಲೆ ನಿಂಗಳ ಮಾರ್ಗದರ್ಶನ ಇರಳಿ.
        ಹರೇರಾಮ… 🙂

    2. ಯೇ ಒಪ್ಪಕ್ಕೋ

      ಇದಾ ನೀನು ಹೀಂಗೆ ಹೇಳಿರೆ?
      ಮೇಲಿಪ್ಪವು ಕೇಳುಗು ಮತ್ತೆ ಎನಗರಡಿಯಾ..
      ಇದಾ ಉಂಬದು ಅರ್ಧ ಆದರೂ ಎರಡರಲ್ಲಿ ಅರ್ಧ ಅಲ್ಲದೋ..
      ಸರಿ ಹೇಳಿಕ್ಕೊಂದರಿ… ಹು ಹು

      1. ಏ ಪೆಂಗಣ್ಣ!! “ಆನು ಎಷ್ಟು ಕೆಲಸ ಮಾಡುತ್ತಾ ಇದ್ದೆ… ಈ ಅಕ್ಕಂಗೆ ಒಪ್ಪಣ್ಣನ ಹತ್ತರೆ ಮಾಂತ್ರ ಪ್ರೀತಿ” ಹೇಳಿ ಹೇಳೆಡ… ‘ಒಪ್ಪಣ್ಣ’ ಹೇಳುವ ಶಬ್ದಲ್ಲಿ ಎಲ್ಲ ಒಪ್ಪಣ್ಣ೦ದ್ರನ್ನೂ… ಒಪ್ಪಕ್ಕಂದ್ರನ್ನೂ ಸೇರುಸಿದ್ದೆ ಆತೋ…

    3. ಯೇ ಒಪ್ಪಕ್ಕೋ, ನೀ ಹೇಳಿದ್ದು ಸರಿ ಇದ್ದು.
      { ಕೆಲವು ದಿನ ಒಪ್ಪಣ್ಣ ಅರ್ದ ಉಂಡು }
      ಇದಿದಾ, ಸರೀ ಆದ್ಸು.
      ಮಿತಾಹಾರ ಯೇವತ್ತೂ ಒಳ್ಳೆದು. ಹೊಟ್ಟೆಲಿ ಹಿಡಿತ್ತು ಹೇದು ಪೂರ್ತ ಉಂಬದಲ್ಲ, ಅರ್ದವೇ ಉಣ್ಣೇಕಡ! 😉

  12. ಒಪ್ಪಣ್ಣೋ ಶುದ್ದಿ ಲಾಯಿಕಾಯಿದು,
    (ಕೆಲವು ದಿಕ್ಕಂಗೆ ಮೂರ್ತಕ್ಕೆ, ಕೆಲವು ದಿಕ್ಕಂಗೆ ತೀರ್ತಕ್ಕೆ, ಕೆಲವು ದಿಕ್ಕಂಗೆ ಊಟಕ್ಕೆ, ಕೆಲವು ದಿಕ್ಕಂಗೆ ಒರಗಲೆ – ಹೀಂಗೆ ಹೋಗಿ ನಮ್ಮಾಂಗಿರ್ತೋರು ಸುದಾರುಸುದು! ಅಲ್ಲದೋ?)- ಕೆಲವು ದಿಕ್ಕಂಗೆ ಉದಿಯಪ್ಪಗಾಣ ಕಾಪಿ ತಿಂಡಿಗೆ ಅಲ್ಲಿ ಸ್ವಲ್ಪಹೊತ್ತಪ್ಪಗ ಮೂರ್ತಕಳುಶಿಕ್ಕಿ ಚಾಯಕುಡುದು ಇನ್ನೊಂದು ದಿಕ್ಕಂಗೆ ಅಲ್ಲಿ ವಾಪಾಸು ಚಾಯಕುಡುದು ಮದ್ಯಾಹ್ನದ ಊಟ ಮುಗುಶಿಕ್ಕಿ ,ಚಾಯ ಆಗದ್ರಕ್ಕೋ ಅದಾಯಿಕ್ಕಿ ರಜಾಒರಗಿಕ್ಕಿ ಹೊತ್ತೋಪಗಾಣಚಾಯವೂ ಆಗಿ ಹೆರಟರೆ ಮತ್ತೊಂದುಕಡೆಲಿ ಇರುಳಾಣ ಪೂಜಗೆ, ಅಲ್ಲಿ ಹೋಗಿಯಪ್ಪಗ ಚಾಯ ಕೊಡದ್ದೆ ಇಕ್ಕೋ ಅಪರೂಪಕ್ಕೆ ಹೋಪಗ ಕುಡಿಯದ್ದರೆ ಅಕ್ಕೋ,ಹಾಂಗೆ ಪೂಜೆ ಆಗಿ ಊಟವೂಮುಗುಶಿ ಹೆರಟು ಮನಗೆತ್ತೀರೆ ಮತ್ತೆ ಮೂರುದಿನಕ್ಕೆ ಅರಿಷ್ಟ ಕುಪ್ಪಿಯೇ ಬೇಕಷ್ಟೇ…… ಅದರ್ಲೇ ಒಂದು ಗವುಜಿ! ಅದರ್ಲೇ ಒಂದು ಗಮ್ಮತ್ತು.ಅಲ್ಲದೋ

    1. ಶೇ.ಪು.ಬಾವಾ!
      ಒಪ್ಪ ಲಾಯಿಕಾಯಿದು, ನಿಸ್ಸಂದೇಹ.

      { ಅರಿಷ್ಟ ಕುಪ್ಪಿಯೇ ಬೇಕಷ್ಟೇ }
      ಅಪ್ಪೋ, ಅಂಬೆರ್ಪೋ?
      ಹೆರಿಯೋರತ್ರೆ, ಗುರಿಕ್ಕಾರ್‍ರ ಕೈಲಿ ಹೇಳೇಕೋ? ಅವು ಬೇಕಾರೆ ನಿಂಗಳ ಮನೆಲಿ ಹೇಳಿ ತರುಸುವ ವೆವಸ್ತೆ ಮಾಡುಗು.. 😉

      1. ಏ ಒಪ್ಪಣ್ಣ ನೀನು ಎಲ್ಲಿಂದ ಹೆರಟು ಎಲ್ಲಿಗೆತ್ತುತ್ತೆಯೋ……, ಉಮ್ಮಪ್ಪ ನವಗರಡಿಯ. ಈ ಅರಿಷ್ಟಕುಪ್ಪಿಗೆ ಹಿರಿಯೋರು ಎಂತಕೋ…! ಆ ಕುಞಿ ಬೈಚ್ಚನ ಅಂಗುಡಿಲಿ ಸಿಕ್ಕುತ್ತದಾ ಅದು, ಹೊಟ್ಟೆ ಸರೆಮಾಡುಲೆ ಇಪ್ಪದು ಆತೋ 😉

  13. ಬಚ್ಚಿಗೊಂಡಾಡರೂ ಹೀಂಗಿದ್ದ ಗೌಜಿಯ ಬೈಲಿನವಕ್ಕೆ ಕೊಡುವ ಒಪ್ಪಣ್ಣನ ಶುದ್ದಿಯ ಓದುದೆ ಒಂದು ಗೌಜಿ…

    “ಅವಿಭಕ್ತ ಮನೆಗಳಲ್ಲಿ ಹಲವಾರು ತಲೆಗೊ, ಅವರ ನೆಡುವಿನ ತಲೆಮಾರು ಅಂತರಂಗೊ.
    ಈ ಬೇರೆಬೇರೆ ತಲೆಗಳಲ್ಲಿ ಹತ್ತರತ್ತರೆ ಎಳಗುತ್ತ ಜೆಂಬ್ರಂಗಳ ಒಂದೇ ದಿನ ಮಾಡಿ ಮುಗುಶುಗು.
    ಹೀಂಗೆ ಮಾಡಿರೆ, ವೆವಸ್ತೆಗೂ ಸುಲಬ, ಬಂದೋರಿಂಗೂ ಸುಲಬ, ಸುದಾರಿಕೆಗೂ ಸುಲಬ.”
    ಎಷ್ಟು ಒಳ್ಳೆ ಪದ್ಧತಿ… ಅದೆಂಥ ಆನಂದ… ಬೈಲಿನೋರೆಲ್ಲರ ಮನೆಲಿ ಈ ಉತ್ಸವದ ವಾತಾವರಣ ಕಾಮ್ಬಲೆ ಶುರು ಆಯೆಕ್ಕು… ನಾವು ಈಗ ಪ್ರಯತ್ನ ಮಾಡಿರೆ ನಮ್ಮ ಮಕ್ಕೋ ಪುಲ್ಲಿಯಕ್ಕಳ ಕಾಲಲ್ಲಿ ಈ ವಾತಾವರಣ ಎಲ್ಲ ಮನೆಲಿ ಕಾಮ್ಬದರಲ್ಲಿ ಸಂಶಯ ಇಲ್ಲೇ…

    “ಸನಾತನ ದ್ವಿಜಕುಲಕ್ಕೆ ಸೇರ್ಲೆ ಧನಾತ್ಮಕ ಸ್ಪರ್ಧೆ ಇದ್ದ ಹಾಂಗೆ ಕಂಡತ್ತು, ಆ ಮೂರು ವಟುಗಳ ನಡುವೆ.”
    ಭಾವಿಸಿ ಭಾವಿಸಿ ಓದಿದಷ್ಟು ಸಾಕಾವುತ್ತಿಲ್ಲೇ…

    1. ಜಯಕ್ಕನ ಸಚ್ಚಿಂತನಾಪೂರ್ವಕ ಒಪ್ಪಕ್ಕೆ ಧನ್ಯವಾದಂಗೊ.
      ಅವಿಭಕ್ತ ಕುಟುಂಬದ ಆನಂದ ಅವರ್ಣನೀಯ. ಆ ಮನೆಗಳಲ್ಲಿ ಜೆಂಬ್ರ ತೆಗವಗಳೂ ಹಾಂಗೇ!

      ಈಗ ಇದು ತುಂಬ ಅಪುರೂಪ ಆಗಿಂಡಿದ್ದು ಹೇಳ್ತದು ಬೇಜಾರ ಅಲ್ಲದೋ? 🙁

  14. [“ಏನು ಮಾವ, ಏನು ಅಪ್ಪಚ್ಚಿ, ಎಂತ ಒಪ್ಪಣ್ಣ” ] – ಕಣ್ತುಂಬ , ಮನತುಂಬ ನೋಡೆಕ್ಕಾದ ಸನ್ನಿವೇಶ, ಕಡೇಪಕ್ಷ ಈ ಶುದ್ದಿ ಓದುತ್ತಾ ಕಲ್ಪಿಸಿಗೊಂಡಾದ್ರೂ ಅನುಭವಿಸಲೇ ಬೇಕು.

    [ಸನಾತನ ದ್ವಿಜಕುಲಕ್ಕೆ ಸೇರ್ಲೆ ಧನಾತ್ಮಕ ಸ್ಪರ್ಧೆ ], [ಊಟವೂ ಮೂರುಮೂರು ಪ್ರತಿ ಆಗೆಡದೋ ….ಬಾಳೆಲೆ ಒಂದೇ ಇದ್ದರೆ ಆತು ] , [ದೊಡ್ಡಣ್ಣನನ್ನೂ ಹೆದರುಸಿ ಹೆರಡುಸಿತ್ತು ] -ಎಂತಹಾ ಭಾವನಾತ್ಮಕ ವರ್ಣನೆ !.

    [ನಮ್ಮಾಂಗಿರ್ತೋರು ಸುದಾರುಸುದು! ಅಲ್ಲದೋ?] – ಅಪ್ಪು ಅಪ್ಪು.

    ಭಾವ., ವಿಷಯ- ‘ನಾಕು ತ್ರಿಕಾಲಪೂಜೆ, ಮೂರು ಉಪ್ನಾನ, ಎರಡು ಬದ್ಧ’ – ಒಂದೇ ಬಾಳೆಲೆ ಆದರೂ ಅದ್ರೊಳ ಅದೆಷ್ಟೋ ಭಾವನಾತ್ಮಕ ಮಹತ್ವದ ವಿಚಾರಂಗೊ ತುಂಬಿಸಿದ್ದಿ, ಇನ್ನೊಂದರಿಯೂ ಓದೇಕು ಹೇಳ್ವಾಂಗೆ ಶುದ್ದಿ ಪ್ರಸ್ತುತಪಡಿಸಿದ್ದಿ ಹೇಳಿ ಮೆಚ್ಚುಗೆ ಹೇಳಿದ್ದು -‘ಚೆನ್ನೈವಾಣಿ’

    1. ಚೆನ್ನೈಭಾವನ ಬೆಶಿಬೆಶಿ ಮೆಚ್ಚುಗೆ ಕಂಡು ಕೊಶಿ ಆತು.
      ಉಸ್ಸಪ್ಪ, ಒಂದೇ ದಿನ ಇಷ್ಟು ಜೆಂಬ್ರ ಸುದಾರ್ಸಿರೆ ಮತ್ತೆ ಬೈಲಿನೋರತ್ರೆ ಮಾತಾಡ್ಳೇ ಒಂದೆರಡು ದಿನ ಕಳಿಯೇಕಾವುತ್ತಿದಾ! 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×