ಅದಾ, ಆಟಿ ಸುರು ಆಗಿಯೇ ಬಿಟ್ಟತ್ತು!
ಹೇಮಾರ್ಸಿ ಮಡಗಿದ ವಸ್ತುಗಳ ಒಂದೊಂದೇ ತೆಗದು ಹೆರತರೇಕು. ಬೈಲಿನೋರೆಲ್ಲ ಚೆಂದಕೆ ರುಚಿ ಸವಿಯೇಕು.
ಜಡಿಕುಟ್ಟಿ ಬತ್ತ ಮಳೆ ಎಡಕ್ಕಿಲಿ ಒಂದೊಂದೇ ಹಪ್ಪಳ, ಉಂಡ್ಳಕಾಳುಗೊ ಕಾಲಿಆಯೇಕು. ಪೆರಟ್ಟಿ ಮಾಡಿದ್ದರೆ ಅದರ ಪಾಯಿಸ ಉಂಬಲೂ ಸಮೆಯ ಆತು.
ಈ ಮಳಗೆ ಪಾಯಿಸ ಮಾಡಿತ್ತುಕಂಡ್ರೆ, ನೆಗೆಮಾಣಿ ಕೈಲು ಲೆಕ್ಕಲ್ಲಿ ತಿಂಗು, ಪೆಂಗಣ್ಣ ಕುಡ್ತೆಲೆಕ್ಕಲ್ಲಿ ತಿಂಗು, ಬೋಚಬಾವ ಸೇರುಲೆಕ್ಕಲ್ಲಿ ತಿಂಗು!
ತಿನ್ನಲಿ, ಗೌಜಿಲಿ ಎಲ್ಲೋರುದೇ ತಿನ್ನಲಿ. ಆದರೆ, ಪ್ರತಿಯೊಬ್ಬನೂ ಅವರವರ ಪ್ರಮಾಣಲ್ಲೇ ತಿನ್ನೇಕು.
ಬದಲಿಕ್ಕಿರೆ ಮತ್ತೆ ಕೇಜಿಮಾವನ ಕಾಣೆಕ್ಕಟ್ಟೆ – ಮತ್ತೂ ಬೇಕಾರೆ ಕೇಜಿಅಜ್ಜನ ಹತ್ತರೇ ಹೋಯೆಕ್ಕಷ್ಟೆ! 😉
ಅದಿರಳಿ.
ಅದಪ್ಪು, ನಾವು ಮಾತಾಡುವಗ ಕೈಲು -ಕುಡ್ತೆ-ಸೇರು ಹೇಳ್ತಲ್ಲದೋ?
ಅದೆಂತರ – ಹೇಳ್ತ ಬಗ್ಗೆ ವಿವರ ಅರಡಿಗೋ?
– ಬೈಲಿಲೇ ಹುಟ್ಟಿಬೆಳದೋರಿಂಗೆ ಗೊಂತಿಕ್ಕು, ಆದರೆ ಬೈಲಿಲೇ ಹುಟ್ಟಿರೂ ಟೀವಿ ಎಡೆಲೇ ಬೆಳದೋರಿಂಗೆ ಗೊಂತಿಕ್ಕೋ?
ಅದರ್ಲಿಯೂ ನಮ್ಮ ಶುಬತ್ತೆಯ ಮಕ್ಕೊಗೆ ಗೊಂತಿಪ್ಪದು ಒಪ್ಪಣ್ಣಂಗೆ ಸಂಶಯ ಇದ್ದು!
ಅಂಬಗ ಈ ವಾರ ಅದರ ಬಗ್ಗೆಯೇ ಮಾತಾಡುವನೋ? ಹೇಂಗೂ ಆಟಿಯ ಪುರುಸೊತ್ತು ಇದ್ದೇ ಇದ್ದು- ಅಲ್ದೋ.
~
ರಂಗಮಾವಂಗೆ ಮೊಳಪ್ಪು ಬೇನೆ ಜೋರಾಯಿದು; ಕೂದರೆ ನಿಂಬಲೆಡಿಯ, ನಿಂದರೆ ಕೂಬಲೆಡಿಯ.
ನಿಂಬಗಳೂ ಕೂಬಗಳೂ ಮೊಳಪ್ಪಿಂಗೇ ಅಲ್ಲದೋ ಜಾಸ್ತಿ ಶ್ರಮ ಬೀಳ್ತದು?! ಹಾಂಗಾಗಿ ಕೆಣುದ್ದು ಅವು!
ಬಾಲ್ಯದ ಅಮೋಘ ಶ್ರಮಜೀವಿಯ ಪರಿಸ್ಥಿತಿ ಹೀಂಗಾತು ಹೇಳ್ತರ – ನವಗಲ್ಲ, ಸ್ವತಃ – ರಂಗಮಾವಂಗೇ ಗ್ರೇಶುಲೆಡಿತ್ತಿಲ್ಲೇಡ!
ಸಣ್ಣ ಪ್ರಾಯಲ್ಲಿ ಕೆಲಸದ ಶ್ರಮ ತೆಕ್ಕೊಂಡದು ಜಾಸ್ತಿ ಆತೋ ಕಾಣ್ತು – ಹೇಳಿ ಅವ್ವೇ ಹೇಳಿಗೊಳ್ತವು ಅಂಬಗಂಬಗ, ಪಾಪ.
ಈ ಬೇನಗೊ ಒರಿಶ ಇಡೀ ಯೇವಗ ಜಾಸ್ತಿ ಆಗದ್ದರೂ, ಆಟಿ ಸಮೆಯಲ್ಲಿ ಜಾಸ್ತಿ ಅಪ್ಪದು ಇಪ್ಪದೇ.
ಅದರ್ಲಿಯೂ, ವ್ಯಾಯಾಮ ತೆಕ್ಕೊಂಡಿದ್ದ ಶರೀರಕ್ಕೆ ಒಂದರಿಯೇ ಮನೆಯೊಳ ಕೂದಿಪ್ಪ ಅವಕಾಶ ಸಿಕ್ಕಿಪ್ಪಗ – ದೇಹಲ್ಲಿ ಜಡ ಒಂದುಲೆ ಸುರು ಆವುತ್ತಡ.
ಈಗ ರಂಗಮಾವ° ಸದ್ಯ ಸಮಗಟ್ಟು ತೋಟಕ್ಕೆ ಹೋಗದ್ದೆ ಒಂದು ವಾರ ಕಳಾತಡ.
ಈಗ ಜಡಿಕುಟ್ಟಿ ಮಳೆಯೂ ಇದ್ದಲ್ಲದೋ? ಹಾಂಗೆ ಮನೆಂದಲೇ ಹೆರಡುದು ಕಮ್ಮಿ.
ಜಾಲಿಲೇ ಎಂತಾರು ಮಾಡ್ಳೆ ಎಡಿಗಾರೆ ಮಾಡುಗು ಅಷ್ಟೆ. ಅದುದೇ ಯೇವತ್ರಾಣ ನಮುನೆಲಿ ಇಲ್ಲೆ, ತುಂಬ ಕಮ್ಮಿ.
ತೋಟಕ್ಕೆ ಹೋಪ ವಿಶಯಲ್ಲಿ ಒಂದು ವಾರ ಹೇಳಿರೆ ರಂಗಮಾವಂಗೆ ಒಂದೊರಿಶ ಇದ್ದ ಹಾಂಗೇ!
ಒಂದಿನ ಹೋಗದ್ದರೆ ರೂಪತ್ತೆಗೆ ಧಾರವಾಹಿ ತಪ್ಪಿದಷ್ಟೇ ಬೇಜಾರಾವುತ್ತು. 😉
~
ಮನೆಯೊಳವೇ ಇದ್ದರೂ ಅಂತೇ ಕೂರೇಕು ಹೇಳಿ ಏನಿಲ್ಲೆ, ಅಲ್ಲದೋ?
ಏನಾರು ಗುರುಟಿಗೊಂಡು, ಅರಟಿಗೊಂಡು, ನೇರಂಪೋಕು (time-pass) ಲೋಟನು (tricks) ಮಾಡಿಗೊಂಡು ಕೂರುಗು, ರಂಗಮಾವ°.
ಕಳುದೊರಿಶ ಆಟಿಯ ಪುರುಸೊತ್ತಿಲಿ – ರೀಪಿನ ತುಂಡಿನ ಸಪಾಯಿ ಮಾಡಿ ಕಡ್ತಲೆ ಕತ್ತಿ ಮಾಡಿ ಪುಳ್ಳಿಮಾಣಿಗೆ ಕೊಟ್ಟಿದವು.
ಪಕ್ಕನೆ ನೋಡಿರೆ ಅದು ನಿಜವಾದ ಕತ್ತಿಯೋ – ಗ್ರೇಶೇಕು! ಅಷ್ಟು ಲಾಯಿಕ ಆಯಿದದು. ಕತ್ತಿಯ ಹಿಡಿ, ಅಲಗು, ಕತ್ತಿಯ ಆಕಾರ, ರಚನೆ – ಎಲ್ಲವುದೇ ಪರಿಪೂರ್ಣ!
ಶ್ರದ್ಧೇಲಿ ಕೂದು ಸಮಯ ಕೊಡ್ತ ತಾಳ್ಮೆ ಇದ್ದೋರಿಂಗೆ ಮಾಂತ್ರ ಅಕ್ಕಷ್ಟೆ ಅದು. ವಿನುವಿಂಗೆ ಆಟಾಡುವಗ ಅಜ್ಜನ ಹೆದರುಸಲೆ ಈ ಕತ್ತಿ ತುಂಬ ಉಪಯೋಗ ಆಗಿಂಡಿತ್ತು. 🙂
~
ಈ ಒರಿಶ ಪುನಾ ಆಟಿ ಬಂತು. ಮತ್ತೆ ರಂಗಮಾವಂಗೆ ಪುರುಸೊತ್ತು ಆತು.
ಅಂತೇ ಹೊತ್ತು ಕಳದರೆ ಆಗ, ಎಂತರ ಮಾಡದು? ಹಾಂ! ನೆಂಪಾತು.
~
ರಂಗಮಾವ° ಇಪ್ಪ ತರವಾಡುಮನೆ ಇಂದು-ನಿನ್ನೇಣದ್ದು ಅಲ್ಲ. ತಲೆಮಾರುಗಳಿಂದ ಇಳುದು ಬಂದ ಮನೆ.
ಎಷ್ಟು ಪುಳ್ಯಕ್ಕಳ ಬಾಳಂತನ ಆಯಿದೋ ಅಲ್ಲಿ – ಉಮ್ಮ, ಆ ಬಾಳಂತಿ ಕೋಣೆಯಹತ್ತರೇ ಕೇಳೆಕ್ಕಟ್ಟೆ! ಇಷ್ಟು ತಲೆಮಾರುಗಳಲ್ಲಿ ಇಳುದು, ಒಳುದು ಬಂದ ಅಗಾಧ ಸಾಧನಂಗೊ ಇದ್ದು ಅಲ್ಲಿ.
ಉದಾಹರಣೆಗೆ, ಉಪ್ಪರಿಗೆ ಅಟ್ಟಲ್ಲಿ ಹಳೆಕಾಲದ ಹಳೆನಮುನೆ ಪಾತ್ರಂಗೊ ಇದ್ದು.
ಎಲ್ಲವನ್ನೂ ಒಂದರಿ ಹೆರ ತೆಗದು, ಉದ್ದಿ, ಮನಾರ ಮಾಡಿ ಪುನಾ ಹೇಮಾರ್ಸಿ ಮಡಗಿರೆ ಎಂತ – ಹೇಳಿ ಕಂಡತ್ತು ರಂಗಮಾವಂಗೆ.
~
ಕಳುದ ಆಯಿತ್ಯವಾರ ರಜಾ ಮಳೆಕಮ್ಮಿ ಇಪ್ಪಗ ಒಪ್ಪಣ್ಣ ಹೋಗಿತ್ತಿದ್ದ°.
ಜಾಲಿಲೇ ಇದ್ದ ಪಾತಿ ಅತ್ತೆ ಕೈಲಿ “ಮಾವ° ಇಲ್ಲೆಯೋ?” – ಕೇಳಿದ್ದಕ್ಕೆ “ಅಟ್ಟದ ಹರಗಾಣ ಪೂರಾ ಜೆಗಿಲಿಗೆ ತಯಿಂದವು” ಹೇಳಿ ಪಾತಿಅತ್ತೆ ಲೊಟ್ಟೆಪಿಸುರಿಲಿ ಪರಂಚಿದವು, ಒಳವೇ ಇದ್ದ ರಂಗಮಾವಂಗೆ ಕೇಳುವ ಹಾಂಗೆ!
ಒಳ ಹೋಗಿ ನೋಡಿರೆ, ಅಷ್ಟು ದೊಡ್ಡ ಜೆಗಿಲಿಲಿ ಈಗ ಒಂದು ಹಸೆ ಹಾಕುವಷ್ಟೂ ಜಾಗೆ ಇಲ್ಲೆ! ಪಾತಿಅತ್ತೆ ಹೇಳಿದ ಸಂಗತಿ ಅಪ್ಪು – ಹೇಳಿ ತೋರಿತ್ತು.
ರಂಗಮಾವ° ಇದೇ ಕೆಲಸ ಮಾಡಿಗೊಂಡಿತ್ತಿದ್ದವು – ಉಪ್ಪರಿಗೆಲಿ ಇದ್ದಿದ್ದ ಹಳೇ ಹಳೇ ಕ್ರಮದ ಪಾತ್ರಂಗಳ ಒಂದೊಂದಾಗಿ ತಂದು, ಮನಾರ ಮಾಡಿ ಎಣ್ಣೆಕಿಟ್ಟಿ – ಒಣಗಲೆ ಮಡಗಿತ್ತಿದ್ದವು.
“ಬಾ ಒಪ್ಪಣ್ಣಾ – ಇನ್ನೂ ಇಷ್ಟೇ ಇದ್ದು, ಒಣಗುಸಲೆ ಜೆಗಿಲಿಲಿ ಹರಗಲೆ ಜಾಗೆ ಇಲ್ಲೇಡ, ನಿನ್ನ ಪಾತಿಅತ್ತೆ ಪರಂಚುತ್ತು!” – ಹೇಳಿದವು, ಅದೇ ಲೊಟ್ಟೆಪಿಸುರಿಲಿ!
~
ಮರದ ಪಾತ್ರಂಗೊ ಸುಮಾರಿತ್ತು.
ರಜ್ಜ ಅಟ್ಟಂದ, ರಜ್ಜ ಅಟ್ಟುಂಬೊಳಂದ, ರಜ್ಜ ಕೊಟ್ಟಗೆಂದ – ಎಲ್ಲವನ್ನುದೇ ತಂದು ತಂದು ಜೆಗಿಲಿಲಿ ಜೋಡುಸಿ ಮಡಗಿತ್ತಿದ್ದವು.
ಇಷ್ಟು ಸಣ್ಣ ಪೆಟ್ಟಿಗೆಂದ, ದೊಡ್ಡ ಮರಿಗೆಯ ಒರೆಂಗೆ ತರಾವಳಿ ಪಾತ್ರಂಗಳ ಕಂಡತ್ತು ಜೆಗಿಲಿಲಿ.
ಹಳೇ ವೇಷ್ಟಿಯ ಮನಾರಕ್ಕೆ ಹರಗಿ; ಎಲ್ಲವನ್ನೂ ಒಟ್ಟಿಂಗೆ ಮಾಡಿ ಮಡಗಿಪ್ಪಗಳೇ ಒಪ್ಪಣ್ಣ ಎತ್ತಿದ್ದು.
ಅದೆಲ್ಲ ಯೇವದು – ಎಂತರ ಹೇಳಿ ತಿಳಿಯಲೆ ಪುರುಸೊತ್ತಿಲಿ ನಿಂದುಗೊಂಡೆ, ಕೆಲವೆಲ್ಲ ಒಪ್ಪಣ್ಣಂಗೇ ಗುರ್ತ ಸಿಕ್ಕಿತ್ತಿಲ್ಲೆ.
ಗೊಂತಾದ್ದನ್ನೂ, ಗೊಂತಾಗದ್ದನ್ನೂ -ರಂಗಮಾವ° ಅವರದ್ದೇ ರೀತಿಲಿ ವಿವರುಸಿಗೊಂಡು ಹೋದವು.
ವೇಷ್ಟಿಯ ಕರೇಲಿ ಕಾಲುನೀಡಿ ಕೂದುಗೊಂಡವು – ತುಂಬ ಹೊತ್ತು ಮಡುಸಿದ್ದರೆ ಮೊಳಪ್ಪುಬೇನೆ ಆವುತ್ತಡ ಅವಕ್ಕೆ!
~
ಅಲ್ಲಿದ್ದ ಬೇರೆಬೇರೆ ಪಾತ್ರಂಗೊ ಯೇವದೆಲ್ಲ, ಗೊಂತಿದ್ದೋ?
ಸುರುವಿಂಗೆ ರಜ ಅಳತೆಮಾಡ್ತ ನಮುನೆ ಗುಂಡಿ ಪಾತ್ರಂಗೊ ಇದ್ದತ್ತು. ಒಂದೊಂದೇ ತೆಗದು ವಿವರುಸಿದವು ರಂಗಮಾವ°:
1. ಹರಗಿ ಮಡಗಿದ ವೇಷ್ಟಿಯ ಒಂದು ಮೂಲೆಲಿ ಮರದ ಕುಡ್ತೆ ಮಡಿಕ್ಕೊಂಡಿತ್ತಲ್ಲದೋ; ಅದರ ತೋರುಸಿದವು ರಂಗಮಾವ°.
ಇದಾ, ಇದು ಹಳೆಕಾಲದ ಕುಡ್ತೆ. ಎನ್ನ ಅಜ್ಜನಕಾಲಂದಲೇ ಇದ್ದು.
ಈಗ ಪೇಟೆಲಿ ಕೀಜಿದೋ, ಹಿತ್ತಾಳೆದೋ ಎಲ್ಲ ಬಪ್ಪಲೆ ಸುರು ಆದ ಮತ್ತೆ ಇದರ ಉಪಯೋಗ ಕಮ್ಮಿ ಆದ್ಸು. ಹಾಂಗಾಗಿ ಇದರ ಮಾಡ್ತ ಆಚಾರಿಗಳೂ ಕಮ್ಮಿ ಆದ್ದು – ಹೇಳಿದವು.
ಮಾಡ್ತದೋ? – ಅಪ್ಪು, ಇಷ್ಟು ಅಂಗುಲ ಉದ್ದ, ಇಷ್ಟು ಅಂಗುಲ ವ್ಯಾಸದ ಪಾತ್ರ ಮಾಡಿ ಕುಡ್ತೆಯ ರಚನೆಮಾಡಿಗೊಂಡಿದ್ದದು – ಹೇಳಿದವು.ಸಾಮಾನ್ಯ ನಮ್ಮ ನಿತ್ಯಜೀವನದ ಅಳತೆಗೊಕ್ಕೆ ಕುಡ್ತೆಯೇ ಸಣ್ಣ ಮಟ್ಟಿನ ಅಳತೆ.
ಆ ಕುಡ್ತೆಲಿಯೂ ನಾಕು / ಆರು ಅಂತರಿಕೆ ಇದ್ದೊಂಡಿತ್ತು, ಕಾಲುಕುಡ್ತೆ, ಅರ್ದಕುಡ್ತೆ – ಎಲ್ಲ ಲೆಕ್ಕ ಹಿಡಿಯಲೆ.
ಒಟ್ಟು ಮೂರು ಕುಡ್ತೆ ಹತ್ತರತ್ತರೇ ಮಡಿಕ್ಕೊಂಡಿತ್ತು. ಅದರ್ಲಿ ಒಂದು ತುಂಬ ಕ್ಷೀಣ
2. ಕುಡ್ತೆಯ ಹತ್ತರೆಯೇ ಮಡಿಕ್ಕೊಂಡಿದ್ದದು – ಕುಡ್ತೆದೇ ಆಕಾರ, ಆದರೆ ಗಾತ್ರಲ್ಲಿ ದೊಡ್ಡದು – ಸೇರು.
ಆರು ಕುಡ್ತಗೆ ಒಂದು ಸೇರು ಅಡ.
ಸಾಮಾನ್ಯಮಟ್ಟಿಂಗೆ ಎಂತರ ಅಳೆತ್ತರೂ ಮದಲಿಂಗೆ ಸೇರಿಲೇ ಅಳಕ್ಕೊಂಡಿದ್ದದು.
ಈಗಾಣ ಕಾಲಲ್ಲಿ ಕೇಜಿ ಇದ್ದ ನಮುನೆಯ ಅಳತೆ.
ಕೇಜಿ ಹೇಳಿತ್ತುಕಂಡ್ರೆ ಭಾದಿಯ ಹೇಳ್ತದು. ಸೇರು ಹೇಳಿತ್ತುಕಂಡ್ರೆ ಗಾತ್ರವ ಹೇಳ್ತದು.
ರಂಗಮಾವ° ತೋರುಸಿದವು – ಮರದ ಓಟೆಯ ನಮುನೆ ಕಂಡತ್ತು. ಹಲಸಿನ ಮರವೋ ಕಾಣ್ತು, ಕೆಂಪುಕೆಂಪು ಇದ್ದು.
ನಿತ್ಯೋಪಯೋಗದ ಈ ಪಾತ್ರವ ತೊಳೆತ್ತ ಕ್ರಮ ಇಲ್ಲೆ! – ಹಾಂಗಾಗಿ ರಂಗಮಾವ° ಲಾಯಿಕಂಗೆ ಉದ್ದಿ ಮಡಗಿದ್ದವು.
ಬೌಷ್ಷ ನಮ್ಮ ಸಂಸ್ಕೃತಿಲಿ ಇದೊಂದರನ್ನೇ ಆಯಿಕ್ಕು – ನಿತ್ಯವೂ ಉಪಯೋಗ ಮಾಡಿರೂ ತೊಳೆಯದ್ದು!! – ಹೇಳಿದವು ರಂಗಮಾವ°.
3. ಆರು ಕುಡ್ತಗೆ ಒಂದು ಸೇರು ಹೇಳಿದ್ದನ್ನೆ, ಆ ಸೇರಿನ ಹತ್ತರೆಯೇ ಇನ್ನೊಂದು ಪಾತ್ರ ಮಡಿಕ್ಕೊಂಡಿತ್ತು, ಸೇರಿಂದಲೂ ದೊಡ್ಡದು.
ಅದುವೇ ಹಾನೆ. ಬಟ್ಯ ಇದರ “ಬಳ್ಳ” ಹೇಳುಗು.
ಒಂದು ಹಾನೆಗೆ ಎಂಟು ಕುಡ್ತೆ.
ಮನಾರಕ್ಕೆ ಮಡಗಿದ ಹಾನೆಯ ತೆಗದು ತೋರುಸಿದವು ರಂಗಮಾವ° – ಕಾಂಬಗ ಸೇರಿಂದ ರಜ ಸಪುರ, ಆದರೆ ರಜ್ಜ ಎತ್ತರ – ಅಣ್ಣನ ನಮುನೆ ಕಂಡತ್ತು.
ಅಡಿಲಿ ಒಂದು ನಕ್ಷತ್ರಚಿಹ್ನೆ ಕೆತ್ತಿ ಇದ್ದತ್ತು.
ಮದಲಿಂಗೆ ಆಳುಗೊಕ್ಕೆ ಕೂಲಿಯ ಲೆಕ್ಕದ ಬತ್ತ ಕೊಟ್ಟುಗೊಂಡು ಇದ್ದದು ಇದೇ ಹಾನೆ ಲೆಕ್ಕಲ್ಲಿ ಅಡ..
ಕೆರಿಶಿ, ಅಳಗೆ ಮಾರಿಗೊಂಡು ಬಂದೋರಿಂಗುದೇ ಹಾನೆಲೆಕ್ಕಲ್ಲೇ ಅಳತೆ ಮಾಡಿ ಬತ್ತವ ಕೊಟ್ಟುಗೊಂಡಿದ್ದದು – ಹೇಳಿದವು.
ಹಳೆಕಾಲದ ಪೈಶೆವೆವಸ್ತೆಯ ಗ್ರೇಶಿ ಹೋತು ಒಂದರಿ.
4. ಎಂಟುಕುಡ್ತೆಯ ಹಾನೆಂದಲೂ ಕುತ್ತಕೆ ಉದ್ದದ್ದು ಇನ್ನೊಂದಿತ್ತು, ಅದೆಂತರ – ಕುತ್ತಿ.
ಒಂಬತ್ತು ಕುಡ್ತಗೆ ಒಂದು ಕುತ್ತಿ – ಹೇಳಿದವು ರಂಗಮಾವ°.
ಸರಿಯಾಗಿ (ಎಂಟು) ಒಂಬತ್ತು ಕುಡ್ತೆಯ ಅಳತೆ ನಿಂಬಲ್ಲಿ ಒಂದು ಒಟ್ಟೆ ಇದ್ದತ್ತು, ಆ ಅಳತೆ ಕಳುದ ಕೂಡ್ಳೇ ಮತ್ತಾಣದ್ದು ಆ ಒಟ್ಟೆಲೆ ಆಗಿ ಹೆರ ಚೆಲ್ಲುತ್ತ ನಮುನೆ ವೆವಸ್ತೆ.
ಯಬ್ಬಾ, ಹಳೆಕಾಲದ ಅಜ್ಜಂದ್ರ ತಲೆಯೇ!
ಮದಲಿಂಗೆ ತುಪ್ಪ, ಜೇನು, ಎಣ್ಣೆ – ಇತ್ಯಾದಿ ದ್ರವವಸ್ತುಗಳ ಅಳವಲೆ ಮದಲಿಂಗೆ ಇದನ್ನೇ ಬಳಸಿಗೊಂಡಿದ್ದದಾಡ.
ಓಯ್, ಬಟ್ಯ ಇದರ್ಲೇ ಕಳ್ಳು ಅಳಕ್ಕೊಂಡಿದ್ದದು – ಹೇಳಿ ರಂಗಮಾವ° ಒಂದರಿ ನೆಗೆಮಾಡಿದವು.
5. ಸೇರು, ಹಾನೆ, ಕುತ್ತಿ ಎಲ್ಲವೂ ಹತ್ತರತ್ತರೆ, ಮೂರುಜೆನ ಅಕ್ಕತಂಗೆಕ್ಕಳ ಹಾಂಗೆ 😉
ಆದರೆ ಅದರಿಂದ ತುಂಬ ದೊಡ್ಡದು – ದೊಡ್ಡ ಕಲಶದ ಆಕಾರದ್ದೊಂದು ಪಾತ್ರ ಇದ್ದತ್ತು, ಆಚ ಹೊಡೆಲಿ.
ಅದಕ್ಕೆ ಕಳಸಿಗೆ (/ಕಳಸೆ) ಹೇಳ್ತವಾಡ. ಹದ್ನಾಕು ಸೇರಿಂಗೆ ಒಂದು ಕಳಸಿಗೆ ಅಡ.
ಗೋಣಿಂದ ಬತ್ತವ ಸೀತ ಇದಕ್ಕೆ ಸೊರುಗಿ ಆದ ಮತ್ತೆ, ಒಂದು ಲಟ್ಟಣಿಗೆಯ ಹಾಂಗಿರ್ತ ಒಂದು ಕೋಲಿಲಿ ಬಾಯಿಪೂಜ ಮಾಡಿ ಅಳತೆ ಧೃಡಮಾಡಿಗೊಂಬದಾಡ.
ಮೂರು ಕಳಸಿಗೆಗೆ ಒಂದು ಮುಡಿ ಆತಿದಾ – ಒಂದು ಮುಡಿಗೆ – ಹದ್ನಾಕು ಮೂರ್ಲಿ ನಲುವತ್ತೆರಡು ಸೇರು!!
ಬೆಳುಲ ಬಳ್ಳಿಲಿ ಲಾಯಿಕಕ್ಕೆ ಕಟ್ಟಿದ ಮುಡಿಲಿ ನಲುವತ್ತೆರಡು ಸೇರು ಹಿಡಿತ್ತದಾ!! ಕೊಯಿದ ಸಮೆಯಲ್ಲಿ ಮುಡಿ ಕಟ್ಟಿ ಮಡಗಿರೆ ಒರಿಶಾನುಗಟ್ಳೆಗೆ ಎಂತದೂ ಆಗ ಅದು!
ಅದಿರಳಿ, ಮುಡಿಂದಲೂ ದೊಡ್ಡದೊಂದು ಕೋರ್ಜಿ ಹೇಳಿ ಅಳತೆ ಇದ್ದಾಡ.
ದೊಡ್ಡಪ್ರಮಾಣಲ್ಲಿ ಬತ್ತ ಬೆಳೆತ್ತ ಊರಿಲಿ – ಹೆಚ್ಚಾಗಿ ಬಡಗಾಲಾಗಿ (ಉಡುಪಿ-ಕುಂದಾಪುರ ಹೊಡೆಲಿ) ಇದರ ಬಳಕೆ ಜಾಸ್ತಿ ಆಡ.
ಬೌಶ್ಷ ಎಂಟು ಮುಡಿಗೆ ಒಂದು ಕೋರ್ಜಿ ಹೇಳ್ತದು – ಹೇಳಿದವು ರಂಗಮಾವ°. ಅವಕ್ಕೆ ಸಮಗಟ್ಟು ನೆಂಪಿಂಗೆ ಬಯಿಂದಿಲ್ಲೆ.
“ಹಳೇ ಮಗ್ಗಿ ಪುಸ್ತಕದ ಹಿಂದಾಣ ಬೈಂಡಿಲಿ ಸ್ಪಷ್ಟವಾಗಿ ಬರಕ್ಕೊಂಡಿಕ್ಕು – ನೀ ನೋಡಿಗೊ ಒಪ್ಪಣ್ಣ” ಹೇಳಿದವು.
ಅದಿರಳಿ, ಅಳತೆಗಳ ಬಗ್ಗೆ ನಾವು ಇನ್ನೊಂದರಿ ಮಾತಾಡುವೊ, ಆಗದೋ? ಈ ಸರ್ತಿ ಇಲ್ಲಿ ನಮ್ಮ ಎದುರಿದ್ದ ಪಾತ್ರಂಗಳೇ ಸಾಕು! 🙂
6. ಕಳಸಿಗೆಯ ಹತ್ತರೆಯೇ ಅಡ್ಡಕೆ ಮನಿಶಿಗೊಂಡಿದ್ದದು ಐದಾರು ಒನಕ್ಕೆಗಳ.
ಬೇರೆಬೇರೆ ಎತ್ತರ, ಬೇರೆಬೇರೆ ತೋರ!
ಎರಡು ನಮುನೆ ಒನಕ್ಕೊಗೊ ಕಂಡತ್ತು ಅಲ್ಲಿ.
- ಬಳೆ ಇಪ್ಪ ಒನಕ್ಕೆ:
ಉದ್ದದ ಮರದ ತುಂಡು, ಅದರ ಒಂದು ಕೊಡಿಲಿ ಲೋಹದ ಬಳೆ. ಈ ನಮುನೆ ಒನಕ್ಕೆ ಸಾಮಾನ್ಯವಾಗಿ ಮೆರಿವಲೆ ಉಪಯೋಗ ಮಾಡ್ತದು.
ಬಳೆಯ ಪೆಟ್ಟು ಬಿದ್ದಪ್ಪಗ ಒಳ ಜಾಗೆ ಇರ್ತಲ್ಲದೋ – ಹಾಂಗಾಗಿ ಹೇಳಿದವು ರಂಗಮಾವ°. ಧಾನ್ಯಂಗಳ ಕೇವಲ ಚೋಲಿಮಾಂತ್ರ ಹೋಪ ಹಾಂಗೆ ಮಾಡ್ತು.
ಬತ್ತ ಮೆರಿತ್ತ ಸಮೆಯಲ್ಲಿ ಇದೆಲ್ಲ ಹೆರ ಬಂದು ಕಮಲ, ಸುಂದರಿ, ಲಚ್ಚುಮಿ, ಗಿರ್ಜ – ಎಲ್ಲೋರುದೇ ಒಂದೊಂದರ ತೆಕ್ಕೊಂಡು ಮೆರಿಗು, ಶಂಬಜ್ಜನ ಕಾಲಲ್ಲಿ. - ಮುಂಡು ಒನಕ್ಕೆ:
ಇದಕ್ಕೆ ಕೊಡಿಲಿ ಬಳೆ ಇಲ್ಲೆ. ಹಾಂಗಾಗಿ, ಹಾಕಿದ ಪೆಟ್ಟಿಂಗೆ ಎದುರು ಎಂತ ಸಿಕ್ಕಿರೂ ಹೊಡಿಹೊಡಿ ಆಗಿ ಹೋವುತ್ತು.
ಸಾಮಾನ್ಯವಾಗಿ ಅಕ್ಕಿ ಇತ್ಯಾದಿ ಹೊಡಿಮಾಡ್ಳೆ ಇದರ ಬಳಸುತ್ತು – ನಿತ್ಯಕ್ಕೆ ಏನಾರು ಹೊಡಿ ಮಾಡೇಕಾದ್ದಿದ್ದರೆ ಇದರ ಉಪಯೋಗ ಮಾಡುಗು ಮದಲಿಂಗೆ.
ಈಗ ಮಿಶ್ರಮಾಡ್ತ ಮಿಕ್ಷರು ಬಯಿಂದಿದಾ – ಹಾಂಗಾಗಿ ಗುದ್ದುತ್ತ ಜೆಂಬಾರ ಆರಿಂಗೆ ಬೇಕು!?
7. ಸೌಟು (/ ಕೈಲು):
ಇತ್ಲಾಗಿ ಒಂದು ಹೊಡೇಲಿ ಪಾತ್ರಸಾಮಾನುಗಳ ಮನಾರಕ್ಕೆ ಮಡಗಿತ್ತಿದ್ದವು ರಂಗಮಾವ°.
ಸುಮಾರು ಸೌಟುಗೊ, ನಾನಾ ಗಾತ್ರದ್ದು.
ತುಪ್ಪ ಬಳುಸಲೆ ಅಪ್ಪ ನಮುನೆ ಸಣ್ಣ ಚಮ್ಚಂಗಳಿಂದ ಹಿಡುದು, ಪಾಯಿಸ ಬಳುಸುತ್ತ ಅಗಲಬಾಯಿಯ ಗುಂಡಿ ಸೌಟಿನ ಒರೆಂಗೆ, ನಮುನೆ ನಮುನೆದು.
ಬೌಷ್ಷ ಹಲಸಿಂದೇ ಆಗಿರೇಕು – ಕಾಣ್ತ ಮಟ್ಟಿಂಗೆ ಹಾಂಗೆ ಅನುಸಿತ್ತು.
ಈಗ ಎಲ್ಲವುದೇ ಲೋಹದ್ದೇ ಇದಾ, ಷ್ಟೀಲಿಂದು ಬತ್ತು, ಯೇವ ಆಕಾರ ಬೇಕಾರುದೇ.
ಆದರೆ ಆ ಷ್ಟೀಲಿನ ಪಾತ್ರಂಗೊ ತೆಯಾರಪ್ಪಲೆ ಮೂಲ ರೂಪುರೇಷೆ ಇದುವೇ ಅಲ್ಲದೊ – ಹೇಳಿದವು ರಂಗಮಾವ°, ಅಭಿಮಾನಲ್ಲಿ.
8. ಕರಟ ಸೌಟು:
ಇದರ ಕಂಡಿದಿರೋ? ಮೊನ್ನೆಮೊನ್ನೆ ಒರೆಂಗೂ ಇದ್ದತ್ತು.
ಸಮಾ ಅರ್ದಂದ ತುಂಡಾದ ದೊಡ್ಡ ಕರಟವ ಕೋನಲ್ಲಿ ಹಿಡುದು ಎರಡು ಒಟ್ಟೆ ತೆಗೆತ್ತದು. ಆ ಒಟ್ಟೆ ಒಳದಿಕಂಗೆ ಒಂದು ಬೆದುರ ಕೋಲುಹಾಕುತ್ತದು.
ಕೋಲು ಹಿಡಿಯಾದರೆ, ಕರಟ ಬಾಯಿ. ಮುಗಾತು – ಅಷ್ಟೇ ಅಲ್ಲದೋ ಸೌಟು ಹೇಳಿತ್ತುಕಂಡ್ರೆ!!
ಮದಲಿಂಗೆ ಮರದ ಸೌಟುಗೊ ಎಲ್ಲೋರ ಮನೆಗಳಲ್ಲಿಯೂ ಕಾಂಬಲೆ ಸಿಕ್ಕ, ಅಪುರೂಪ. ಆದರೆ ಕರಟ ಸೌಟು ಸರ್ವರಿಂಗೂ ಎಡಿಗಾದ್ದು.
ಬಟ್ಯನ ಮನೆಂದ ಹಿಡುದು ಮತ್ತಡಿಯ ಮನೆಯೊರೆಂಗೆ, ಎಲ್ಲೋರುದೇ ಇದನ್ನೇ ಬಳಸಿಗೊಂಡಿದ್ದದು.
ರಂಗಮಾವ° ಮನಾರಕ್ಕೆ ತೆಗದು ಮಡಿಕ್ಕೊಂಡ ಕಾರಣ ಇನ್ನೂ ಏನೂ ಆಯಿದಿಲ್ಲೆ, ಚೆಂದಕೆ ಒಳುದು ಬಯಿಂದು.
9. ಒನಕ್ಕೆ ಕರಟ:
ಸೌಟು ಹೇಂಗಿರ್ತು ಹೇಳಿ ಅಂದಾಜಿ ಆತನ್ನೇ? ಇದೊಂದು ಸೌಟಿಲೇ ರಜ ವಿತ್ಯಾಸ ಇಪ್ಪಂತಾದ್ದು.
ಇಡೀ ಕರಟವ ರಜ್ಜವೇ ಬಾಯಿ ಬಿಡುಸುದು, ಪಾತ್ರ ದೊಡ್ಡದು ಸಿಕ್ಕುತ್ತ ಹಾಂಗೆ. ಅದರ ಕರೆಂಗೆ ಸೌಟಿಂದಲೂ ಉದ್ದದ ಬೆದುರತುಂಡು ಸಿಕ್ಕುಸುತ್ತದು.
ಇದು ಕಾಂಬಲೆ ಒನಕ್ಕೆಯ ನಮುನೆ ಉದಾಕೆ ಒಂದು ಕೋಲು ಆದ ಮತ್ತೆ ಉರೂಟಿನ ಬುರುಡೆಯ ಹಾಂಗೆ ಇರ್ತು. ಹೇಳಿ ತೆಗದು ತೋರುಸಿದವು ರಂಗಮಾವ°.
ಇದೆಂತಕೆ ಇರ್ತದಂಬಗ? – ಕೇಳಿದೆ.
ಬೆಶಿನೀರಹಂಡೆ ಒಳಾಂದ ತೋಡಲೆ, ದೂರಕ್ಕೆ ಚೇಪುಲೆ – ಈ ಒನಕ್ಕೆ ಕರಟವ ಬಳಸಿಗೊಂಡಿತ್ತಿದ್ದವಾಡ. ಬಾಳಂತಿಮೀಶಲೆ, ಅಭ್ಯಂಜನ ಸ್ನಾನಕ್ಕೆ – ಇತ್ಯಾದಿಗೊಕ್ಕೆ ಇದು ಬೇಕಾಗಿಂಡಿತ್ತಾಡ.
ಈಗ ಮೀವಕೋಣೆಲಿ ಮಳೆಬರುಸುತ್ತ ಷವರುಬಾತು ಬಂದ ಮತ್ತೆ ಇಂತದ್ದಕ್ಕೆ ಜಾಗೆ ಎಲ್ಲಿದ್ದು, ಅಲ್ಲದೊ?
10. ಎಶಿಮುಚ್ಚಲು ಕಂಡು ಗೊಂತಿದ್ದಲ್ಲದೋ?
ಚೇರೆ ಮರದ ಬುಡಲ್ಲಿ ಬತ್ತ ಬೀಣೆಯ ತುಂಡುಸಿ, ಹದಾ ಒಣಗಿ ಅಪ್ಪಗ ಅದರ ಉರೂಟಿಂಗೆ ಕೆತ್ತಿ ಮುಚ್ಚಲಿನ ಹಾಂಗೆ ಮಾಡಿರೆ ಎಶಿಂಚಲು ತೆಯಾರು.
ಹೆಜ್ಜೆ ಅಳಗ್ಗೆ ಮುಚ್ಚೇಕಾರೆ ಇದೇ ಆಯೆಕ್ಕು. ಬೌಶ್ಷ ಈ ಒಂದು ವಸ್ತು ನಮ್ಮ ಬೈಲಿನ ಹೆಚ್ಚಿನ ಮನೆಗಳಲ್ಲೂ ಇದ್ದೋ ತೋರ್ತು. ಅಲ್ಲದೋ?
11. ಚೇರೆಮರದ ಬೀಣೆಯ ಬಗ್ಗೆ ಮಾತಾಡುವಗ ದಾಣೆ ನೆಂಪಾತು.
ಅಡಕ್ಕೆಮರದ ಕಡೆತುಂಡು ಸಲಕ್ಕೆಯ ಸಮಾಕೆ ಗೀಸಿ, ಸಪಾಯಿ ಮಾಡಿರೆ, ಸರ್ತದ ಸೌಟಿನ ಹಾಂಗೆ ಆವುತ್ತು.
ತರವಾಡುಮನೆಲಿ ಐದಾರು ದಾಣೆಗೊ ಇದ್ದು. ಒಂದೊಂದು ಒಂದೊಂದು ಗಾತ್ರದ್ದು, ಒಂದೊಂದು ಎತ್ತರದ್ದು.
ತುಂಬ ಹೊತ್ತುಕಾಸೇಕಾದಲ್ಲಿ ಇದರ ಉಪಯೋಗ ಮಾಡ್ತವು. ಎಷ್ಟು ಹೊತ್ತು ಕಾಸಿರೂ ಬೆಶಿ ಕೈಗೆ ಬತ್ತಿಲ್ಲೆ ಇದಾ!
12. ಪ್ರತಿ ಹಳೆಮನೆಗಳಲ್ಲೂ ತೊಟ್ಳು ಇದ್ದೇ ಇಕ್ಕು.
ಬೆಳೀ ಬಳ್ಳಿ ಎರಡರ ಅಟ್ಟದ ಅಡ್ಡಕ್ಕೆ ಕಟ್ಟಿ, ಅದಕ್ಕೆ ನೇಲುಸುತ್ತದು ಈ ತೊಟ್ಳಿನ.
ಹಲಸಿನ ಮರ ಅತವಾ ಕಾಸರ್ಕನ ಮರಲ್ಲಿ ತೊಟ್ಳು ಮಾಡಿಗೊಂಡಿತ್ತಿದ್ದವಡ ಮದಲಿಂಗೆ. ಕೆಲವು ದಿಕ್ಕೆ (ನಾಗರ)ಬೆತ್ತದ್ದು ಇದ್ದತ್ತು.
ಅನುಕೂಲ ಇದ್ದೋರಲ್ಲಿ ಹಿತ್ತಾಳಿಯ ತೊಟ್ಳುದೇ ಇಲ್ಲದ್ದಲ್ಲ!
ರಂಗಮಾವನ ಹತ್ತರೆ ಇದ್ದದು ಹಲಸಿನ ಮರದ್ದು. ಬೌಶ್ಶ, ರಂಗಮಾವನೇ ಮನುಗಿದ್ದು ಅದರ್ಲಿಯೋ ಕಾಣ್ತು- ಸಣ್ಣ ಇಪ್ಪಾಗ!
13. ಸುಮಾರು ತರಾವಳಿ ಭರಣಿಗೊ ತರವಾಡುಮನೆಲಿ ಇದ್ದು.
ಸಣ್ಣದು, ದೊಡ್ಡದು, ಉರೂಟಿಂದು, ಚಕ್ರಮುಚ್ಚಲಿಂದು, ಬೆಳಿದು , ಕಪ್ಪಿಂದು – ಅನೇಕ ವಿಧದ್ದು.
ಉಪ್ಪಿನ ಕಾಯಿ ಹಾಕಲೆ, ಉಪ್ಪಿನ ಸೊಳೆ ಹಾಕಲೆ, ಉಪ್ಪು ಹಾಕಿ ಮಡುಗಲೆ – ಎಲ್ಲದಕ್ಕೂ ಈ ಭರಣಿಯೇ ಆಯೆಕ್ಕಷ್ಟೆ.
ಆಹಾರದ ಯೇವದೇ ಅಂಶವ ಎಳಕ್ಕೊಳದ್ದೆ, ಯೇವದೇ ಅಂಶವ ಆಹಾರಕ್ಕೆ ಬಿಡದ್ದೆ ಇರ್ತ ವಸ್ತು ಈ ಪಿಂಗಾಣಿ ಆದ ಕಾರಣ, ಖಾರದ ವಸ್ತುಗಳ ಅದರ್ಲಿ ಹಾಕಿ ಮಡುಗಿಂಡು ಇತ್ತಿದ್ದವು ಅಜ್ಜಿಯಕ್ಕೊ.
14. ಇದರ ಹತ್ತರೆ ಸುಮಾರು ಮರಿಗೆಗೊ ಮಡಿಕ್ಕೊಂಡಿತ್ತು.
ಮರಿಗೆ ಹೇಳಿತ್ತುಕಂಡ್ರೆ ಎಂತರ? ಸಣ್ಣ ಪಾತ್ರ. ಈಗಾಣೋರು ಬೌಲು ಹೇಳುಗು.
ಆದರೆ ನಮ್ಮ ಅಜ್ಜಂದ್ರಿಂಗೆ ಬೌಲಿಲಿಯೇ ಸುಮಾರು ನಮುನೆ ಮಾಡ್ಳೆ ಗೊಂತಿತ್ತು!
- ಅಶನ ಬಗ್ಗುಸಲೆ ಉಪಯೋಗುಸುತ್ತ ಮರಿಗೆ ಅರಡಿಗೋ? – ಎಲ್ಲೋರ ಮನೆಗಳಲ್ಲೂ ಇದು ಇದ್ದೇ ಇಕ್ಕು.
ತೀರಾ ಮದಲಿಂಗೆ ಮರದ್ದು ಇದ್ದತ್ತು, ಕ್ರಮೇಣ ಲೋಹದ್ದು ಬಂದುಬಿಟ್ಟತ್ತು!
ಹಳೆಕಾಲದ ಮನೆಗಳಲ್ಲಿ ಅದು ಇದ್ದೇ ಇಕ್ಕು. ಈಗ ಅದರ ಬಳಕೆ ಕಮ್ಮಿ ಆಯಿದು, ಎಂತ್ಸಕೇ ಹೇಳಿತ್ತುಕಂಡ್ರೆ – ಮರಿಗೆ ಉಪಯೋಗುಸೇಕಾದಷ್ಟು ಜೆನಂಗಳೇ ಇಲ್ಲೆ, ನಮ್ಮೋರ ಮನೆಗಳಲ್ಲಿ! - ಕೈಮರಿಗೆಯ ಕಂಡಿದಿರೋ?
ಈಗ ಷ್ಟೀಲಿಂದು ಬತ್ತು, ಮದಲಿಂಗೆ ಮರದ್ದೇ ಆಯೆಕ್ಕಟ್ಟೆ.
ಸಣ್ಣ ಮರಿಗೆಗೆ ಸಣ್ಣ ಕೈ. ಮರಿಗೆಯ ಕೈಯ ನಮ್ಮ ಕೈಲಿ ಹಿಡ್ಕೊಂಡ್ರೆ, ಹಂತಿಲಿ ಬಳುಸಲೆ ಎಲ್ಲ ಭಾರೀ ಅನುಕೂಲ.
ಜೆಂಬ್ರಂಗಳಲ್ಲಿ ತಾಳು ಬಳುಸಲೆ ರಜ ದೊಡ್ಡ ನಮುನೆ ಮರಿಗೆಗಳಿಂದ ಹಿಡುದು, ಉಪ್ಪಿನಾಯಿ ಮರಿಗೆ ಹೇಳಿಗೊಂಡು ಸಣ್ಣ ಗಾತ್ರದ, ಮುಚ್ಚಲಿಪ್ಪ ಮರಿಗೆಗಳೂ ಇದ್ದು – ನುಸಿಕೂರದ್ದ ಹಾಂಗೆ.
ಒಪ್ಪಣ್ಣ ಇದರ ಬಾಯಿಲಿ ಹೇಳಿಗೊಂಡು ಹೋದರೆ ಗೊಂತಾಗ, ಇದೆಲ್ಲ ನೋಡೇಕಾರೆ ತರವಾಡುಮನೆಗೇ ಬರೆಕಷ್ಟೆ, ಆತೋ? 🙂 - ದೇವರೊಳ ಗಂಧತಳೆತ್ತ ಕಲ್ಲಿದ್ದಲ್ಲದೋ, ಅದರ ಸೀತ ನೆಲಕ್ಕಲ್ಲಿ ಮಡುಗವು ಮದಲಿಂಗೆ.
ಮದಲೇ ಮಣ್ಣಿನ ನೆಲಕ್ಕ, ಅದರ ಮೇಗೆ ಕಲ್ಲು ಮಡಗಿ, ಆ ಕಲ್ಲಿನ ಅರದರೆ ಹೇಂಗಕ್ಕು? ಅದಕ್ಕೆ, ಆ ಕಲ್ಲಿನ – ಮರಿಗೆಯ ಮೇಗೆ ಮಡಗುತ್ತ ಕ್ರಮ ಇತ್ತಾಡ.
ಈಗಾಣೋರು ಷ್ಟೇಂಡು ಹೇಳುಗದರ! ಸಿಮೇಂಟಿನ ನೆಲಕ್ಕ ಬಂದ ಮತ್ತೆ ಇದರ ಉಪಯೋಗ ಕಮ್ಮಿ ಆಗಿಂಡು ಬಯಿಂದು ಹೇಳಿದವು ರಂಗಮಾವ°. - ಅದಪ್ಪು, ವಿಭೂತಿಮರಿಗೆ ಗುರ್ತ ಇದ್ದಲ್ಲದಾ?
ಸಣ್ಣದೊಂದು ಮರಿಗೆಕೆ ಒಂದು ಕೊಕ್ಕೆ ಕೈ. ಆ ಕೈಯ ಕೊಡಿಂಗೆ ಒಂದು ಒಟ್ಟೆ!
ವಿಭೂತಿ ಉಂಡೆಗಳ ತುಂಬುಸಿ, ಅದಕ್ಕೆ ಒಂದು ಬಳ್ಳಿ ಕಟ್ಟಿ ದೇವರ ಕೋಣೆಯ ಅಡ್ಡಕ್ಕೆ ನೇಲುಸುಗು ಮದಲಿಂಗೆ!
ಜೆಪಕ್ಕಪ್ಪಗ ಒಂದರಿ ಮರಿಗೆ ಒಳಂಗೆ ಕೈಹಾಕಿರೆ ಕೈ ತುಂಬ ವಿಭೂತಿ. ಆ ಕೈಯ ಹಣಗೆ ಮುಟ್ಟಿಅಪ್ಪಗ ಹಣೆ ತುಂಬ ವಿಭೂತಿ.
ಈಗ ಮರಿಗೆಯೂ ಇಲ್ಲೆ, ಕೈಲಿಯೂ ವಿಭೂತಿ ಇಲ್ಲೆ, ಹಣೆಲಿಯೂ ಇಲ್ಲೆ, ಜೆಪವೇ ಇಲ್ಲೆ!!! - ಹೋಯ್, ಎಲೆಮರಿಗೆ ಮರದತ್ತೋ?
ಅದಕ್ಕೆ ಒಂದು ಆಯತಾಕಾರದ ಪೆಟ್ಟಿಗೆ. ಅದಕ್ಕೊಂದು ಮುಚ್ಚಲು, ಕರೆಂದ ದೂಡಿ ಹಾಕಿತೆಗೆತ್ತ ನಮುನೆದು.
ಒಂದು ಸೂಡಿ ಎಲೆ, ನಾಕಡಕ್ಕೆ, ಒಂದು ಪೀಶಕತ್ತಿ ಇದೆಲ್ಲವನ್ನೂ ಒಂದರ ಮೇಗೆ ಒಂದು ಹಾಕಿರೆ ಅಕ್ಕೋ?
ಅಂತದ್ದೊಂದು ರಂಗಮಾವನ ಕೈಲಿಯೂ ಇದ್ದು!
ಈಗ ಬೈಲಿಲಿ ರಜ ಅಪುರೂಪ ಆಗೆಂಡು ಬಂದರೂ, ಅದು ಪೂರ್ತಿ ಅಳುದ್ದಿಲ್ಲೆ.
ಮಾಷ್ಟ್ರುಮಾವಂಗೆ ಬಂದ ಪಿತ್ರಾರ್ಜಿತ ಆಸ್ತಿಲಿ ಇದುದೇ ಒಂದು!! ಸುಬಗಣ್ಣನ ಹಾಂಗಿರ್ತೋರಿಂಗೆ ಅದಿಲ್ಲದ್ದೆ ಆಗ!
o ಅದಾ, ಎಲೆಮರಿಗೆ ಸುದ್ದಿ ಬಪ್ಪಗ ಸುಣ್ಣದಕಾಯಿಯ ಬಿಟ್ರೆ ಆಗ.
ಮರದ ಉರೂಟು ಪಾತ್ರ ಸಣ್ಣದು, ಹಣ್ಣಡಕ್ಕೆಯಷ್ಟು ದೊಡ್ಡದು – ಇದರ್ಲಿ ಸುಣ್ಣ ತುಂಬುಸುದು.
ಆ ಪಾತ್ರಕ್ಕೆ ಒಂದು ಹಿತ್ತಾಳೆಯ ಕಡ್ಡಿ ಸಿಕ್ಕುಸೆಂಡು ಇಪ್ಪದು. ಆ ಕಡ್ಡಿಲೇ ಸುಣ್ಣ ತೆಗದು ಎಲಗೆ ಉದ್ದುತ್ತದು.
ಸುಬಗಣ್ಣ ಅಷ್ಟು ಎಲೆ ತಿಂತರೂ, ಅವರ ಉಗುರೆಡಕ್ಕಿಂಗೆ ರಜವೂ ಸುಣ್ಣ ಹಿಡಿಯದ್ದ ಗುಟ್ಟು ಗೊಂತಾತಲ್ಲದೋ? 😉
- ಮೀವಲೆ ಮರಿಗೆ ಇದ್ದದು ಅರಡಿಗೋ?
ಅರಡಿವದು ಹೇಂಗೆ, ನಿಂಗೊ ಸಣ್ಣ ಇಪ್ಪಗ ಉಪಯೋಗ ಮಾಡಿದ್ದು – ಅಲ್ಲದೋ?
ಮಕ್ಕಳ ಮೀಶಲೆ ಅಗಾಲದ ಮರದ ಮರಿಗೆ, ಅದರ್ಲಿ ಹೂಬೆಶಿ ನೀರಿಲಿ ಮಕ್ಕಳ ಕೂರುಸಿರೆ, ನೀರಿಲಿ ತಳಪಳ ಮಾಡಿಂಡು ಮೀತ್ತದರ್ಲಿ ಹೊತ್ತು ಹೋದ್ದದೇ ಗೊಂತಾವುತ್ತಿಲ್ಲೆ ಅವಕ್ಕೆ! - ನೀರುತೋಕುವ ಮರಿಗೆಯ ಗುರ್ತ ಇದ್ದೋ? ಕೇಳಿದವು. ಒಪ್ಪಣ್ಣಂಗೆ ಅದರ ಕಂಡೇ ಗೊಂತಿತ್ತಿಲ್ಲೆ ಆತಾ!
ಹಾಳೆಕಿಳ್ಳಿಯ ಬದಲಿಂಗೆ ತೋಟಕ್ಕೆ / ನೆಟ್ಟಿಬಳ್ಳಿಗೆ ನೀರು ತೋಕಲೆ ಇದ್ದ ವೆವಸ್ತೆ.
ಸೊಂಟದಷ್ಟು ಎತ್ತರದ ಒಂದು ದಂಬೆ, ಅದರ ಒಂದು ಹೊಡೆಯ ಕೈಲಿ ಹಿಡ್ಕೊಂಡು, ಇನ್ನಾಣ ಹೊಡೆಂಗೆ ಬಳ್ಳಿ ಕಟ್ಟುತ್ತದು.
ನೀರು ಎರ್ಕಿದಲ್ಲಿಂಗೆ ಅದ್ದಿ, ಬಳ್ಳಿಯ ಒಂದೇ ಸರ್ತಿ ಎಳದರೆ ನೀರು ರಬಸ್ಸಲ್ಲಿ ರಟ್ಟುತ್ತು – ಇದಾ, ಹೀಂಗೆ ಹೇಳಿ ಮಾಡಿ ತೋರುಸಿದವು. - ಕೈದಂಬೆ ಹೇಳಿ ಒಂದರ ಗೊಂತಿದ್ದೋ?
ನೀರುತೋಕುವ ಮರಿಗೆಯ ನಮುನೆಯೇ, ರಜ ದೊಡ್ಡ ಮಟ್ಟಿಂದು.
ಸಾಮಾನ್ಯ ಒಂದು-ಎರಡು ಕೋಲು ಅಂದಾಜಿ ಗುಂಡಿಂದ ನೀರು ನೆಗ್ಗಲಿಪ್ಪದು.
ನೀರಿಲಿ ಮುಳುಂಗಿದ ಕೈದಂಬೆಯ ಬಳ್ಳಿಲಿ ಎಳದರೆ ಅದರ್ಲಿದ್ದ ನೀರು ಸೀತ ಬಂದು ಉಜಿರುಕಣಿಗೆ ಬೀಳ್ತು. ಜೊಟ್ಟೆ ಇನ್ನುದೇ ಮಡುಗೆಕ್ಕಟ್ಟೆ ಹೇಳ್ತ ಸಮೆಯಲ್ಲಿ ಇದರ ಬಳಸುತ್ತದಡ. - ಜೊಟ್ಟೆಕುತ್ತಿ ( / ಏತ):
ನೀರುತೋಕುವ ಮರಿಗೆಂದ ದೊಡ್ಡ ಕೈದಂಬೆ.
ಕೈದಂಬೆಗೂ ಎಕ್ಕದ್ದಷ್ಟು ಅಡಿಯಂಗೆ ನೀರು ಹೋದರೆ ಮತ್ತೆಂತರ? – ಅದುವೇ ಜೊಟ್ಟೆಕುತ್ತಿ!!
ಈಂದು / ತಾಳೆ ಮರದ ಬುಡಲ್ಲಿರ್ತ ಗೆಂಟಿನ ಒಕ್ಕಿ, ದೊಡ್ಡ ಮರಿಗೆ ಮಾಡ್ತದು. (ಸಣ್ಣ ಮಟ್ಟಿನ ಜೊಟ್ಟೆಗೆ ಡಬ್ಬಿಯೂ ಆಗಿಂಡಿತ್ತು!)
ಆ ಮರಿಗ್ಗೆ ಒಳಾಂತಾಗಿ ನಾಕು ಹೊಡೆಂದ ಒಟ್ಟೆ ತೆಗದು, ರೀಪಿನ ಕೂಡಿಸು ಗುರ್ತದ ಆಕಾರಲ್ಲಿ ಸಿಕ್ಕುಸುತ್ತದು, ಇದುವೇ ಜೊಟ್ಟೆಕುತ್ತಿ! ಅದರಿಂದ ಒಂದು ಕೊಕ್ಕೆ ಹೆರ ಬಂದಿದ್ದೊಂಡು, ಅದಕ್ಕೆ ಉದ್ದದ ಬೆದುರು ಸಿಕ್ಕುಸುತ್ತದು.
ಆ ಬೆದುರಿನ ಇನ್ನೊಂದು ಹೊಡೆಯ ಎಳದ ಹಾಂಗೆ, ಜೊಟ್ಟೆಕುತ್ತಿ ಬಾವಿಒಳಂಗೆ ಹೋಗಿ, ಒಪಾಸು ಮೇಗೆ ಬತ್ತು, ತ್ರಾಸಿನ ನಮುನೆಲಿ.
ಇದರದ್ದೇ ವಿವರವಾದ ಶುದ್ದಿ ಇನ್ನೊಂದರಿ ಮಾತಾಡುವೊ, ಆಗದೋ?
ಇಷ್ಟೇ ಅಲ್ಲ, ಇನ್ನೂ ಸುಮಾರು ನಮುನೆ ಮರಿಗೆಗೊ ಇದ್ದತ್ತು, ಈಗ ಪಕ್ಕನೆ ನೆಂಪು ಬತ್ತಿಲ್ಲೆ ಹೇಳಿಗೊಂಡವು ರಂಗಮಾವ°.
15. ಮರಿಗೆಯ ಬಗ್ಗೆ ಮಾತಾಡಿತ್ತಪ್ಪೋ, ಇನ್ನಾಣದ್ದು ಚೆರಿಗೆ!
ಮರಿಗೆಯ ಹಾಂಗೇ, ಆದರೆ ರಜ್ಜ ಚೆಟ್ಟೆ.
ಸಾಮಾನ್ಯವಾಗಿ ಲೋಹದ್ದೇ ಆಗಿಪ್ಪ ಈ ಪಾತ್ರಕ್ಕೆ ಚೆರಿಗೆ ಹೇಳಿ ಹೆಸರು. ಮದಲಾಣ ದೊಡ್ಡ ಮನೆಗಳಲ್ಲಿ ನಿತ್ಯೋಪಯೋಗ ಇದ್ದಿದ್ದ ಈ ಪಾತ್ರಂಗೊ ಈಗೀಗ ಜೆಂಬ್ರಂಗಳಲ್ಲಿ ಕಾಣ್ತು.
ಅದುದೇ ಚೆಂಬಿಂದೆಲ್ಲ ಅಲ್ಲ, ಷ್ಟೀಲಿಂದೋ, ಕೀಜಿದೋ ಮಣ್ಣ.
16. ಬೇರೆಬೇರೆ ವಿಧದ ಮಣ್ಣಳಗೆಗೊ ಗೊಂತಿದ್ದಲ್ಲದೋ?
- ಹಸಿಮಣ್ಣಿನ ಲಾಯಿಕಂಗೆ ಹುಳಿಬರುಸಿ, ಪಾಕ ಮಾಡಿ, ಆಕಾರಕೊಟ್ಟು, ಬೇಶಿ ಒಣಗುಸಿ, ಕರಿಹಿಡುಸಿರೆ ಮಣ್ಣಳಗೆಗೊ ಉಪಯೋಗಕ್ಕೆ ತೆಯಾರು.
ಹೆಜ್ಜೆ ಮಡುಗಲೆ, ಬತ್ತ ಬೇಶುಲೆ, ನೀರು ಕೊದಿಶಲೆ, ಉಪ್ಪುನೀರು ಮಾಡ್ಳೆ- ಎಲ್ಲದಕ್ಕೂ ಮಣ್ಣಳಗೆಗಳೇ ಆಯೆಕ್ಕು ಮದಲಿಂಗೆ.
ಮಣ್ಣಿನ ಪಾತ್ರಂಗಳ ಜಾಗ್ರತೆಮಾಡಿ ಒಳಿಶುತ್ತದು ಎಷ್ಟು ಕಷ್ಟವೋ, ಅದರ್ಲಿಪ್ಪ ರುಚಿ, ಅದರ ಸರಳತೆ ಅಷ್ಟೇ ಒಳ್ಳೆದು! - ಚೆಟ್ಟೆ ಆಗಿ ಅಗಾಲ ಬಾಯಿ ಇಪ್ಪ ಚೆಟ್ಟೆಗಿಳಿ ಬೆಂದಿಮಾಡ್ಳೆ ಭಾರೀ ಅನುಕೂಲ.
ಈ ಚೆಟ್ಟೆಗುಳಿಲಿ ಮಾಡಿದ ಬೆಂದಿಗೊಕ್ಕೆ ಇಪ್ಪ ಪರಿಮ್ಮಳದ ರುಚಿ ಬೇರೆ ಎಂತ ಮಾಡಿರೂ ಸಿಕ್ಕ – ಹೇಳಿ ಪಾತಿ ಅತ್ತೆ ಹೇಳುಗು ಒಂದೊಂದರಿ. - ಬಾಯೆಡೆ (ಬಾವಡೆ) ಗೊಂತಿದ್ದೋ?
ಅಗಾಲ ಬಾಯಿಯ ಮಣ್ಣಿನ ಬಾಣಲೆ ನಮುನೆ. ಅದರ ಬುಡಕ್ಕೆ ಒಂದು ಪೀಠ.
ಮಳೆಗಾಲಕ್ಕೆ ಪಿರ್ಕು / ನುಸಿ ಕಚ್ಚುದಕ್ಕೆ ಅಡಕ್ಕೆಚೋಲಿಯ ಹೊಗೆ ಹಾಕೆಕ್ಕಾರೆ ಈ ಬಾಯಡೆಯೇ ಆಯೆಕ್ಕು ಮಾಷ್ಟ್ರುಮಾವಂಗೆ! 😉
ಬ್ರಹ್ಮಚಾರಿಗೊ ಅಗ್ನಿಕಾರ್ಯ ಮಾಡ್ತದು ಇದರ್ಲೇ ಇದಾ!
– ಹಾಂ, ಹೇಳಿದಾಂಗೆ – ಇದಕ್ಕೆಲ್ಲ ಕರಟದ ಸೌಟೇ ಹಾಕೆಕ್ಕು. ಲೋಹದ್ದೋ ಮಣ್ಣ ಹಾಕಿರೆ ಮಣ್ಣಳಗೆಗೊ ನಾಕೇ ದಿನಲ್ಲಿ ಒಡಗು.
ಹಗೂರದ ಕರಟದ ಸೌಟು ಹಾಕಿದ ಕಾರಣ ಕಾಂಬುಅಜ್ಜಿಯ ಕಾಲದ ಮಣ್ಣಳಗೆಗೊ ಪಾತಿಅತ್ತೆಗೆ ಸಿಕ್ಕಿತ್ತು!
- ಚಟ್ಟಿಯ ನಮುನೆಯ ಆಕಾರದ್ದೇ ಇನ್ನೊಂದು ಚೀಂಚಟ್ಟಿ ಹೇಳಿ ಇದ್ದು.
ಬಾಣಲೆ ಹೇಳಿಯೂ ಹೇಳ್ತವು ಈಗಾಣೋರು.
ಮದಲಿಂಗೆ ಕಬ್ಬಿಣದ್ದು ಬಂದುಗೊಂಡಿದ್ದದು, ಆದರೆ ಈಗ ಕೀಜಿ, ಇಂಡಾಲಿಯಮ್ಮು – ಹೀಂಗೆಲ್ಲ ಬತ್ತು ಹೇಳಿದವು. - ಮಣ್ಣಿನ ಪಾತ್ರಂಗಳಲ್ಲಿ ಇನ್ನೂ ದೊಡ್ಡದು ಮಾಡ್ತವು. ಅದಕ್ಕೆ ಮಂಡಗೆ ಹೇಳಿ ಹೆಸರು.
ದೊಡ್ಡ ಗಾತ್ರದ ಈ ಪಾತ್ರಂಗೊ ಬೇರೆಬೇರೆ ಉಪಯೋಗಕ್ಕೆ ಬಂದುಗೊಂಡಿತ್ತು.
i. ಬೆಶಿನೀರ ಮಂಡಗೆ ಎಲ್ಲಾ ಮನೆಲಿಯೂ ಇಕ್ಕು.
ಬೆಶಿನೀರ ಒಲೆಲಿ ಸುಮಾರು ಮೂವತ್ತು ಡಿಗ್ರಿ ಓರೆಗೆ ಈ ಮಂಡಗೆ ನಿಂದುಗೊಂಡಿದ್ದದು. ಕರಟದ ಸೌಟು ಅತವಾ ಒನಕ್ಕೆ ಕರಟಲ್ಲಿ ನೀರು ತೋಡಿಗೊಂಡೀದ್ದದು.
ii. ಅಕ್ಕಚ್ಚು ಮಂಡಗೆ ಹೇಳಿತ್ತುಕಂಡ್ರೆ ಹಟ್ಟಿಯ ಹತ್ತರೆಯೇ ಇದ್ದದು.
ದಿನ ಇಡೀ ಮನೆಲಿ ಸಿಕ್ಕಿದ ಪಶುಆಹಾರಂಗಳ ತಂದು, ಅದಕ್ಕೆ ಸಮಾ ನೀರೆರದು, ದನಗೊಕ್ಕೆ ಕೊಡ್ತದು ಹಳೇ ಕ್ರಮ.
ಹಾಂಗೆ ತರಕಾರಿಯ ಚೋಲಿ, ನಿನ್ನೇಣ ಬೆಂದಿ – ಇತ್ಯಾದಿಗಳ ಹಾಕಲೆ ಇದ್ದಿದ್ದ ಮಂಡಗೆಯೇ ಈ ಅಕ್ಕಚ್ಚು ಮಂಡಗೆ.
iii. ನೀರಡಕ್ಕೆ ಮಂಡಗೆ ಹೇಳಿರೆ ಜಾಲಕರೇಲಿ ಇರ್ತದು. ಮಳೆಗಾಲ ಸುರು ಆಯೇಕಾರೆ ಅದರ್ಲಿ ಅಡಕ್ಕೆ ಹಾಕಿ ಮಡಗುತ್ತದು.
ಮಳೆಗಾಲ ಇಡೀ ಅದರ್ಲಿ ನಾರ್ತ ವಾಸನೆ ನೀರಿನೊಳ ಅಡಕ್ಕೆಗೊ ಇಕ್ಕು.
ಬೊಳುಂಬುಮಾವ ಸಣ್ಣ ಇಪ್ಪಗ ಅದರ್ಲಿರ್ತ ಆ ಹುಳುಗಳ ಡೇನ್ಸು ನೋಡಿಗೊಂಡು ಕೂದುಗೊಂಗು ಅಡ!
ಈಗ ಅಪುರೂಪ ಆಗಿಂಡು ಬಯಿಂದು – ಹೇಳಿಕ್ಕಿ ತರವಾಡುಮನೆ ಜಾಲಿಲಿ ಒಂದು ನೀರಡಕ್ಕೆ ಮಂಡಗೆ ಇದ್ದದರ ತೋರುಸಿಗೊಂಡು ಹೇಳಿದವು.
17. ಇವೆಲ್ಲ ಅಲ್ಲದ್ದೆ, ಇನ್ನೂ ಸುಮಾರು ವಸ್ತುಗೊ ಇದ್ದತ್ತು ರಂಗಮಾವನ ರಾಶಿಲಿ.
- ಅಂಗಿ ಇತ್ಯಾದಿ ವಸ್ತುಗಳ ನೇಲುಸಲೆ ಇಪ್ಪ ಕೊಕ್ಕು, ಗಿಳಿಕೊಕ್ಕು ಕಂಡತ್ತು.
ಎದುರಾಣ ಜೆಗಿಲಿಯ ಗೋಡಗೆ ಬಡ್ಕೊಂಡಿದ್ದ ಗಿಳಿಕೊಕ್ಕಿಂಗೆ ಶಂಬಜ್ಜ ಪೇಟೆಮೈಲಿಗೆ ಒಸ್ತ್ರಂಗಳ ಆರುಸಿಗೊಂಡಿತ್ತಿದ್ದವಡ ಮದಲಿಂಗೆ. - ಸೇಮಗೆ ಒತ್ತಲೆ ಮುಟ್ಟು, ಕುದುರೆಮೆಟ್ಟು ಉಪಯೋಗ ಇದ್ದತ್ತಲ್ಲದೋ – ಹಲಸಿನ ಮರದ ಕುದುರೆಮುಟ್ಟುದೇ ಮಡಿಕ್ಕೊಂಡಿತ್ತು.
ಅದರ ಸಂದುಸಂದಿಂಗೆ ರಜ ಎಣ್ಣೆ ಬಿಟ್ಟರೆ ನಾಳೆಯೇ ಸೇಮಗೆ ಒತ್ತಲೆ ಎಡಿಗು – ಅಷ್ಟು ಗಟ್ಟಿಮುಟ್ಟು ಇದ್ದು ಹೇಳಿದವು. - ವಾಚು, ಚಿನ್ನಾಭರಣಂಗಳ ತೆಗದು ಮಡುಗಲೆ ಇರ್ತ ’ಪೆಟ್ಟಿಗೆ’ ಕಂಡತ್ತು.
ಮದಲಾಣ ಲೋಕರು ಅದುವೇ ಅಲ್ಲದೋ? - ಹಾಲು ನೇಲುಸಲೆ ಸಿಕ್ಕ ಉಪಯೋಗುಸುತ್ತದು ಗೊಂತಿದ್ದಲ್ಲದೋ? ಎತ್ತರಲ್ಲಿದ್ದೊಂಡು ಪುಚ್ಚೆ ಕೈಗೆ ಸಿಕ್ಕದ್ದೆ ಇಪ್ಪದು.
ಈ ನಮುನೆಯ ನಾನಾ ವಿಧಂಗೊ ಕಂಡತ್ತು ರಂಗಮಾವನ ರಾಶಿಲಿ..
~
ಎಲ್ಲಾ ಹಳೆಕಾಲದ ಮನೆಗಳಲ್ಲಿ ಈ ನಮುನೆದು ಈಗಳೂ ಕಾಂಬಲೆ ಸಿಕ್ಕುತ್ತು. ಕೆಲವು ದಿಕ್ಕೆ ಇದರಿಂದಲೂ ಜಾಸ್ತಿಯ ಸಂಗ್ರಹ ಕಾಂಗು.
ಇಲ್ಲಿ ಕಂಡದು ನಮ್ಮ ತರವಾಡಿನ ರಂಗಮಾವನ ಸಂಗ್ರಹದ್ದು.
ಇದರಿಂದಲೂ ಜಾಸ್ತಿ ಇದ್ದತ್ತಡ ಮದಲಿಂಗೆ, ಅಂದೊಂದರಿ ಮನೆ ಮಾಡು ಮುರುದು ಕಟ್ಟುವಗ ಹೋಯಿದಡ ಕೆಲವೆಲ್ಲ, ಬೇಜಾರಲ್ಲಿ ಹೇಳಿದವು.
ಈ ಮೈಕೈಬೇನೆಯ ಎಡಕ್ಕಿಲಿಯೂ ಅವು ಶ್ರದ್ಧೇಲಿ ಈ ಚಾಕಿರಿ ಮಾಡುದು ಕಂಡು ಒಪ್ಪಣ್ಣಂಗೆ ಕೊಶೀ ಆತು.
ಪಾತಿಅತ್ತೆಯೂ – ಎದುರಂದ ಪರಂಚಿರೂ, ಮನಸ್ಸಿನ ಒಳಂದ ಈ ವಸ್ತುಗಳ ಕಾಂಬಗ ಇತಿಹಾಸವೇ ನೆಂಪಕ್ಕು.
ಆ ಮನೆಯ ಹಿಂದಾಣ ಜೀವನ ಶೈಲಿಗೊ ಹೇಂಗಿದ್ದತ್ತೋ, ಅವು ಹೇಂಗೆ ಬದ್ಕಿಂಡಿದ್ದಿದ್ದವೋ –ಕಾಂಗು!
~
ರಂಗಮಾವಂಗೆ ಇನ್ನು ನಾಕುದಿನದ ಕೆಲಸ ಇದ್ದೋ ಕಾಣ್ತು.
ಹೆರ ತೆಗದ್ದರ ಲಾಯಿಕಂಗೆ ಉದ್ದಿ, ಮರದಎಣ್ಣೆ ಉದ್ದಿ ಒಣಗಿ ಪುನಾ ಅಟ್ಟಲ್ಲಿ ಮನಾರಕ್ಕೆ ಕೂರುಸುವನ್ನಾರ – ನಾಕು ದಿನ ಬೇಕಕ್ಕು.
ಮಕ್ಕಳ ಮೀಶಿದಾಂಗೆ ಒಂದೊಂದೇ ಜಾಗ್ರತೆಲಿ ಮಾಡ್ತವು.
ಅಂಬೆರ್ಪೇನಿಲ್ಲೆ- ಅಶೋಕೆಗೆ ಹೋಪಲೆ ಇನ್ನುದೇ ದಿನ ಇದ್ದು. ಬೇರೆ ಜೆಂಬ್ರಂಗೊ ಯೇವದೂ ಇಲ್ಲೆ.
ಆಟಿ ಅಲ್ಲದೋ? ಆರಾಮವೇ ಸರಿ.
ಈಗ ಇಡೀ ಪುರುಸೊತ್ತೇ ಅಲ್ಲದೋ? ಹಾಂಗೆ ಪುರುಸೋತಿಲಿ ಈ ಕಾರ್ಯ!
ಹಳತ್ತರ ಎಲ್ಲ ಒಂದರಿ ಅಜಪ್ಪಿ, ಹೊಸತ್ತು ಮಾಡಿ, ಹಳೆನೆಂಪಿನ ಹೊಸತ್ತುಮಾಡ್ತದು!!
~
ಆಧುನಿಕ ಸಲಕರಣೆಂಗಳಿಂದಾಗಿ ಇದೇವದೂ ಉಪಯೋಗಕ್ಕೆ ಬತ್ತಿಲ್ಲೆ. ಎಷ್ಟೋ ದಿಕ್ಕೆ ಕುಂಬಾಗಿ ಸುರಿವಲೆ ಸುರು ಆದಿಕ್ಕು.
ಈಗ ಆಟಿಲಿ ಹೇಂಗೂ ಪುರುಸೊತ್ತಿದ್ದನ್ನೇ, ಒಂದರಿ ಮನಾರ ಮಾಡಿ ತೆಗದು ಮಡಗಿ – ಮುಂದಾಣೋರಿಂಗೆ ನೋಡ್ಳಾದರೂ ಸಿಕ್ಕುಗು. ಅಲ್ಲದೋ?
ಬನ್ನಿ, ನಮ್ಮ ಮನೆಯೊಳವೂ ಹೀಂಗಿರ್ತ ಸೇರು, ಕೈಲು ಕುಡ್ತೆಗೊ ಇದ್ದೋ ನೋಡುವೊ.
ಇದ್ದರೆ ಲಾಯಿಕಲ್ಲಿ ಒಂದರಿ ಮನಾರ ಮಾಡುವೊ, ಮುಂದಾಣೋರಿಂಗೆ ನೋಡ್ಳಾದರೂ ಸಿಕ್ಕುಗು.
ಒಂದೊಪ್ಪ: ಪುರುಸೊತ್ತಪ್ಪದು ಮುಖ್ಯ ಅಲ್ಲ, ಪುರುಸೊತ್ತಿಲಿ ಎಂತ ಮಾಡ್ತು ಹೇಳ್ತದು ಮುಖ್ಯ – ಹೇಳಿದವು ರಂಗಮಾವ°.
ಸೂ: ಕಲ್ಮಡ್ಕ ಅನಂತನ ಅಜ್ಜನ ಸಂಗ್ರಹಲ್ಲಿದ್ದ ಹಲವಾರು ಪಾತ್ರಂಗಳ ಪಟ ಸದ್ಯಲ್ಲೇ ಬೈಲಿಲಿ ಬತ್ತು. ಕಾದೊಂಡಿರಿ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
oppa shuddi oppanna.kushi aathu.
heengippadu innana kaalalli nodule aparoopa.
hale thalemarina managalalli nodule sikkugu.
kalmadka ananthanallige hodare nodle akku.ondoppa nodi kushi aathu.
good luck.
super
ಲಾಯಕೆ ಬರದ್ದೆ ಭಾವ.. ಸುಮಾರು ವಿಚಾರ ತಿಳುದತ್ತು…
ಕೆಲವು ಸಾಮಗ್ರಿಗಳ ಬಗ್ಗೆ ಎನಗೆ ಗೊಂತೆ ಇತ್ತಿಲ್ಲೇ.ಈ ಶುದ್ಧಿ ಓದಿ ಗೊಂತಾತು.ಶಂಬಜ್ಜನ ವಾಚಿನ ಪೆಟ್ಟಿಗೆ ಲಾಯಿಕ ಇದ್ದು.ಒಂದರಿ ಅಟ್ಟಕ್ಕೆ ಹತ್ತಿ ಇಳುದ ಹಾಂಗೆ ಆತು.ಧನ್ಯವಾದ ಒಪ್ಪಣ್ಣಾ……
ಇದೆಲ್ಲ ಅಪ್ಪನ್ನೆ ಆದರೆ ಅಜ್ಜಿ ಮೊಸರು ಕಡಕ್ಕೊಂಡಿತ್ತಿದ್ದ ಮರದ ಮಂತಿಂಗೆ ಒರಳೆ ಹಿಡುದ್ದೋ ಹೇಳಿ ಕಾಣ್ತು ಹಾಂಗಾಗಿ ಅದರ ವಿಶಯ ಬಯಿಂದಿಲ್ಲೆಯೋ ಹೇಂಗೆ………?
ಓದಿಗೊ೦ಡು ಹೋದ ಹಾ೦ಗೇ ಬಾಲ್ಯದ ದಿನ೦ಗೊ ಕಣ್ಣಿ೦ಗೆ ಕಟ್ಟಿತ್ತು,ಒಪ್ಪಣ್ಣಾ. ಜಾಲಿಲಿ ಪಡಿಗೆ ಬಡುದು ಭತ್ತವ ಬೇರೆ ಮಾಡಿ ಬೆಳುಹುಲ್ಲಿನ ಅಟ್ತಿಮಾಡಿದ್ದದು,ಭತ್ತವ ಬೇಯಿಸಿ ಮೆರುದ್ದದು.ಆಹಾ,ಆ ದಿನ೦ಗಳ ಇನ್ನು ಕಾ೦ಬಲೆ ಇಲ್ಲೆನ್ನೆ.
ಮಣ್ಣಿನ ಅಳಗೆಯ,ಕರಟದ ಸೌಟುಗಳ ಫೈವ್ ಸ್ಟಾರ್ ಹೋಟೆಲುಗಳಲ್ಲಿ ಪ್ರದರ್ಶನಕ್ಕೆ ಮಡುಗುವ ದಇನ ಬಯಿ೦ದು.
ರಾಮನಗರದ ಹತ್ತರೆ ಇಪ್ಪ “ಜನಪದಲೋಕ”ಲ್ಲಿಯೂ ಸ೦ಗ್ರಹ ಮಾಡಿದ್ದವು.
ಅ೦ತೂ ನಮ್ಮ ಮು೦ದೆಯೇ ಇದೆಲ್ಲಾ ಅಳುದತ್ತು,ಒಳುದ್ದದು ಪ್ರಾಚ್ಯವಸ್ತು ಭ೦ಡಾರಕ್ಕೆ ಸೇರಿತ್ತು..
ಮು೦ದೆ ಏನಿದ್ದರೂ ಪ್ಲೇಷ್ಟಿಕ್ಕೂ,ಸ್ಟೀಲೂ…
ಒಳ್ಲೆ ಲೇಖನ. ಮೇಲೆ ಹೇಳಿದ ವಸ್ತುಗಳಲ್ಲಿ ಒಂದು ೩೦% ನೊಡಿದ್ದೆ. ನಮ್ಮ ಹಿರಿಯೊರ ನೆಂಪಿಂಗೆ ಇದರ ಮಡಿಗಿಯೊಲಳ್ಲೆಕ್ಕು. ಇಗಾಣ ಹೆಂಮ್ಮಕ್ಕೊ ಇದೆಲ್ಲ ಹರಗಣ ಹೇಳಿ ಒಲಗೆ ಹಾಕುಗು.
ನಮ್ಮ ಪೂರ್ವಜರು ಎಷ್ತು ಬುದ್ದಿವಂತರು ಹೇಳಿ ಇದರಿಂದ ಗೊಂತವುತ್ತು.
ಒಪ್ಪಣ್ಣಾ,
ತುಂಬಾ ಲಾಯ್ಕದ ಶುದ್ದಿ. ಈ ಶುದ್ದಿಗೆ ಕೈಲಿ ಕೂಡ್ತಷ್ಟು ಅಲ್ಲ, ಮನಸ್ಸು ತುಂಬಿದೇ ಸೇರೆಕ್ಕು ಎಲ್ಲೋರೂ…
ಒಂದು ತರವಾಡು ಮನೆಯ ನಿಜವಾದ ಆಸ್ತಿ ಈ ಮರದ ಅತ್ಯಮೂಲ್ಯ ಸಾಧನಂಗ. ಕೆಲವು ವಸ್ತುಗ ಹಳತ್ತಾದ ಹಾಂಗೆ ಹೊಳವದು ಹೇಳಿ ಇಲ್ಲೆಯಾ, ಅದರಲ್ಲಿ ಈ ವಸ್ತುಗೋ ಬತ್ತಲ್ಲದಾ?
ಎಷ್ಟು ತಲೆಮಾರಿನ ಪ್ರೀತಿಯ, ಲೊಟ್ಟೆಪಿಸುರಿನ, ಅಸಮಾಧಾನವ, ಕೋಪವ, ತಮಾಷೆಯ ಕಂಡಿಕ್ಕು ಈಗ ಅಟ್ಟಲ್ಲಿ ವಿರಮಿಸುತ್ತಿಪ್ಪ ಈ ಹಳೆ ಕಾಲದ ಪಾತ್ರ ಸಾಮಾನುಗೋ!!!! ಹೇಳುಲೆ ಸಾಮರ್ಥ್ಯ ಹೊಂದಿದ್ದರೆ ನಮ್ಮ ನಮ್ಮ ಮನೆಯ ಇತಿಹಾಸವ ಚೆಂದಲ್ಲಿ ಹೇಳ್ತಿತವಿಲ್ಲೆಯೋ!!
ಎಲ್ಲಾ ಹಳೆ ಸಾಮಾನುಗಳ ವಿವರಣೆ ರಂಗಮಾವನ ಹತ್ತರೆ ಕೇಳಿ ಬೈಲಿಂಗೆ ಹೇಳಿದ್ದು ಶೋಕಾಯಿದು ಆತೋ!!!! ಪ್ರತಿಯೊಂದರ ವಿವರ ಕೊಟ್ಟು ಬರದ್ದದರಲ್ಲಿ ಮನಸ್ಸು ಸುಮಾರು ಹಿಂದಂಗೆ ಓಡಿತ್ತು.. ನೀನು ವಿವರ್ಸುತ್ತಾ ಹೋದ ಹಾಂಗೆ ಎಲ್ಲಾ ಪಾತ್ರಂಗಳ ಪಾತ್ರನಿರ್ವಹಣೆ ಕಂಡ ಹಾಂಗೇ ಆತು. ಈಗಳೂ ಸುಮಾರು ಮನೆಗಳಲ್ಲಿ ಹೀಂಗಿಪ್ಪ ವಸ್ತುಗೋ ಇಕ್ಕು. ಹಾಂಗೆ ಹೀಂಗಿಪ್ಪ ವಸ್ತುಗೋ ಇಲ್ಲದ್ದೆ, ಹಿರಿಯರಿಂದ ಹೀಂಗಿಪ್ಪದು ಬರೆಕ್ಕಾತು ಹೇಳಿ ಆಸೆ ಪಡುವ ಮನೆಗಳೂ ಇಕ್ಕು ಅಲ್ಲದಾ? ಎನಗೆ ಅಪ್ಪದು ಹಿರಿಯರ ಸೊತ್ತಾದ ಈ ಅಮೂಲ್ಯ ಆಸ್ತಿಯುದೇ ಯೋಗಲ್ಲಿಯೇ ಸಿಕ್ಕುದು. ನಮ್ಮ ತರವಾಡು ಮನೆಗಳಲ್ಲಿ ಈ ವಸ್ತುಗಳ ಸ್ಥಾನ ಎಂತದು ಹೇಳಿ ಮನೆ ತುಂಬುಸುವ ದಿನ ಗೊಂತಾವುತ್ತು ಅಲ್ಲದಾ? ಆ ದಿನ ಈ ಎಲ್ಲಾ ಹಳೆ ಸಾಮಾನುಗೋಕ್ಕುದೇ ಗೌರವ ಸಂದಾಯ ಆವುತ್ತಲ್ಲದಾ? ಮೊದಲು ನಮ್ಮ ಹಿರಿಯೋರ ಎಲ್ಲ ಚಟುವಟಿಕೆಲಿ ನೆರವಾದ ಹಿರಿ ಜೀವಂಗಳ ಹಾಂಗೆ ಈಗಾಣವು ಮರೆಯದ್ದೆ ನೆನಪ್ಪಿಸುತ್ತವು ಅಲ್ಲದಾ?
ರಂಗಮಾವ°, ಪಾತಿ ಅತ್ತೆ ಈ ಹಿರಿಯರ ಬಳುವಳಿಯ ಒಳಿಶಿಗೊಂಡು ಬಂದ ಹಾಂಗೆ ನಮ್ಮ ಬೈಲಿನ ಎಲ್ಲಾ ಮನೆಗಳಲ್ಲಿ ಹೀಂಗಿಪ್ಪ ಸಂಪತ್ತುಗೋ ಇನ್ನಾದರೂ ಒಳಿಯಲಿ. ಇದುವರೆಗೆ ಅದರ ಚೆಂದಕ್ಕೆ ನೋಡಿಗೊಂಡು ಬಂದೋರಿಂಗೆ ಮನದಾಳದ ಬಂದ ವಂದನೆ, ಮುಂದೆ ನಮ್ಮಲ್ಲಿಪ್ಪದರ ಒಳಿಶುವ° ಹೇಳುವವಕ್ಕೆ ಒಂದು ಸ್ಪೂರ್ತಿಯಾಗಿ ಈ ಶುದ್ದಿ ಬಯಿಂದು.
ನಮ್ಮ ಎಲ್ಲರ ಮನೆಲಿ ಹಳತ್ತು ಹೊಸತ್ತಾಗಲಿ..
ನಮ್ಮ ಹಿರಿಯರ ಕತೆಯ ಈ ಹಳಬ್ಬರು ಮುಂದಾಣವಕ್ಕೆ ಹೇಳಲಿ…
ಬೈಲಿಂಗೆ ಈ ಶುದ್ದಿ ಒಂದು ಆಸ್ತಿ ಆದ ಹಾಂಗೆ ಎಲ್ಲರ ಮನೆಲಿಯೂ ಹೀಂಗಿಪ್ಪ ಆಸ್ತಿ ಸೇರಲಿ..
ಲಾಯಿಕ ಆಯಿದು ವಿವರಿಸಿದು ಅಣ್ಣ. ಕುಡ್ತೆ ಸೇರು ಹೇಳುದು ಅಜ್ಜಿಯ ಹತ್ರ ಕೇಳಿ ಮಾತ್ರ ಗೊಂತಿಪ್ಪದು. ಕೆಲವು ಸಂಗ್ರಹಂಗೊ ನೋಡಿದ ನೆನಪು ಈಗ ಮಾಸಿದ್ದು.
ಪಟಂಗಳ ನಿರೀಕ್ಷೆಲಿ.
ಅದ್ಭುತ ಸಂಗ್ರಹಯೋಗ್ಯ ಶುದ್ದಿ. ರಂಗಮಾವ ಹೇಳಿದ್ದರ ಎಲ್ಲ ಹಾಂಗೇ ನೆಂಪುಮಡುಗಿ ಬೈಲಿಂಗೆ ವಿವರ್ಸಿದ್ದಕ್ಕೆ ತುಂಬಾ ಧನ್ಯವಾದಂಗೊ. ಶೀರ್ಷಿಕೆಯೂ ಒಂದೊಪ್ಪವೂ ಶುದ್ದಿಯಷ್ಟೇ ಪಷ್ಟಾಯಿದು.
ರಂಗಮಾವನಲ್ಲಿಗೆ ಹೋಗಿ ಒಂದರಿ ಆದರೂ ನೋಡೆಕ್ಕು ಈ ಅಮೋಘ ಸಂಗ್ರಹವ.
ಭಾರೀ ಲಾಯಿಕಾಇದು ಬರದ್ದು!! ಇದರಲ್ಲಿ ಕೆಲವು ಮಾತ್ರ ನೋಡಿ ಗೊ೦ತಿದ್ದಷ್ಟೆ ಎನಗೆ.ಈಗ ವಿಷಯ ಓದಿದ ಕಾರಣ ಇನ್ನೊ೦ದರಿ ಮನೆಗೆ ಹೋದಿಪ್ಪಗ ಅಜ್ಜಿ ಹತ್ತರೆ ಬೇರೆ ಎಲ್ಲ ಇದ್ದರೆ ತೊರ್ಸುಲೆ ಹೇಳಕ್ಕುಹೇಳಿ ಆಯಿದು..
ರಂಗಮಾವ ಅಟ್ಟದ ತೆಗದು ಅದರ ಉದ್ದಿ ಚೆಂದ ಮಾಡ್ಲೆ ಹೆರಟಪ್ಪಗ ನೀನು ಅಲ್ಲಿಗೆ ಎತ್ತಿದ್ದು ಒಳ್ಳೆದಾತಿದ.
ಇಲ್ಲದ್ದರೆ ಬೈಲಿಂಗೆ ಈ ಶುದ್ದಿ ಸಿಕ್ಕುತಿತ್ತಿಲ್ಲೆ, ಎಂಗಳ ಹಳೆ ನೆಂಪುಗೊ ಹೆರೆ ಬತ್ತಿತಿಲ್ಲೆ, ಮಾಹಿತಿ ಇಲ್ಲದ್ದ ಎಷ್ಟೋ ಜೆನಂಗೊಕ್ಕೆ ಈ ಮಾಹಿತಿ ಸಿಕ್ಕುತಿತ್ತಿಲ್ಲೆ.
ನೆಂಪುಗೊ ಬಾಲ್ಯ ಕಾಲಕ್ಕೆ ಓಡುವಾಗ, ಇಲ್ಲಿ ಹೇಳಿದ ಸುಮಾರು ಸಾಧನಂಗಳ ಉಪಯೋಗ ಮಾಡಿದ್ದು, ಉಪಯೋಗ ಮಾಡುವದರ ನೋಡಿದ್ದು, ಎಲ್ಲವೂ ನೆಂಪು ಆವ್ತಾ ಇದ್ದು.
ಪುಸ್ತಕ ಓದಲೆ ಹೇಳಿ ಒಂದು ವ್ಯಾಸ ಪೀಠ ಉಪಯೋಗ ಆಗಿಂಡು ಇತ್ತಿದ್ದು. ದಪ್ಪ ದಪ್ಪ ಪುಸ್ತಕ ಆದರೆ ಕೈಲಿ ಹಿಡುದು ಬಚ್ಚಲೆ ಇಲ್ಲೆ. ಅದರಲ್ಲಿ ಮಡುಗಿ ಓದಿರೆ ಆತು.
ಬಾವಡೆ ಹೇಳುವಾಗ ಇನ್ನೊಂದು ನೆಂಪಾತು. ಸಣ್ಣ ಮಕ್ಕೊ ಹೆಜ್ಜೆ ಉಂಬಲೆ ಸುರು ಮಾಡುವ ಸಮಯಲ್ಲಿ, ಅದರ ಸರಿಯಾಗಿ ನುರುದು ಕೊಡ್ಲೆ, ಸಣ್ಣ ಬಾವಡೆ ಮತ್ತೆ ಕರಟದ ಉಪಯೋಗ ಮಾಡಿಂಡು ಇತ್ತಿದ್ದವು.
ಒಂದೊಪ್ಪ ಲಾಯಿಕ ಆಯಿದು. ಪುರುಸ್ತೊತ್ತಿನ ಹೇಂಗೆ ಸದುಪಯೋಗ ಮಾಡುತ್ತು ಹೇಳ್ತದು ಮುಖ್ಯವೇ. ಇಲ್ಲದ್ದರೆ ಇಂಗ್ಲಿಶಿಲ್ಲಿ ಒಂದು ಮಾತು ಇದ್ದಲ್ಲದ “Idle mind is devils workshop” ಹೇಳಿ. ಹಾಂಗಾಗದ್ದಿರಲಿ.
ಆನು ಇಲ್ಲೊಬ್ಬ ಆಚಾರಿಯ ಮತ್ತೆ ಮತ್ತೆ ಪೀಡಿಸಿ,ನಾಕೈದು ತಿಂಗಳಿಲಿ ಒಂದು ವ್ಯಾಸಪೀಠವ ಮಾಡಿಸಿದ್ದೆ.೪೦೦ ರೂಪಾಯಿ ಆಯಿದು. ದಪ್ಪ ಪುಸ್ತಕ ಓದಲೆ ಇದು ತುಂಬಾ ಅನುಕೂಲ.
ಲಾಯಿಕ ಅಯಿದು
ಹ್ಹ ಹ್ಹ ಹ್ಹಾ..! ಜಯತ್ತೆಗೆ ಎಂಗಳ ಮನೆ ಸಂಗತಿ ಗೊಂತಾದ್ದು ಸಾಕನ್ನೆ! ಇನ್ನು ಪರಂಚ. ಜೆಗಿಲ್ಲಿ ನಿಂದಲ್ಲಿಂದಲೇ ಓ ಅಷ್ಟು ದೂರ ಇಪ್ಪ ತೆಂಗಿನ ಮರದ ಬುಡಕ್ಕೆ ತುಪ್ಪಲೆ ಪ್ರೇಕ್ಟೀಸು ಆಯಿದು ಈಗ! 😉
ನಿಂಗಳ ಹೊಡೆಲಿ ಹನಿಕ್ಕಾಲಿಂಗೆ ‘ಹನಿಕ್ಕರೆ’ ಹೇಳುದೋ ಜಯತ್ತೆ? ಎನಗೆ ಈ ಶಬ್ದ ಸುರೂ ಕೇಳುವಾಂಗೆ ಆವ್ತಪ್ಪ.
ಒಪ್ಪಣ್ಣಾ.. ನಿನ್ನ ದೊಡ್ಡ ಶುದ್ದಿಗೆ ಎನ್ನ ಕುಞಿ ಒಪ್ಪ- ಈ ಶುದ್ದಿಯೊಟ್ಟಿಂಗೆ ನೇಲುಸಿದ ಪಟಂಗಳಲ್ಲಿ ಇಪ್ಪ ಎಲ್ಲಾ ಸಾಮಾನುಗಳೂ “ಮರದ್ದು”..!!
ಅದಾ.. ಮರದ್ದು ಹೇಳುವಗ ಒಂದು ನೆಂಪಾತು. ಹೊರುದ ತಿಂಡಿಗಳ ಬಾಣಲೆಂದ ತೆಗದು ಎಣ್ಣೆ ಬಳಿವಲೆ ಮಡುಗುತ್ತ ಒಂದು ಸಾಧನ ‘ಸಿಬ್ಬಲು’. ( ಗುಣಾಜೆ ಮಾಣಿಗೆ ಆ ಬಾಯಿಹರ್ಕ ಕೇಂದ್ರ ಮಂತ್ರಿಯ ನೆಂಪಕ್ಕು. ಅದಲ್ಲ, ಇದು ಬರೀ ಸಿಬ್ಬಲು) ಬೆದುರು/ಬೆತ್ತವ ಸಪೂರಕ್ಕೆ ಸಿಗುದು ಮಾಡ್ತದು ಇದರ.
ಮತ್ತೊಂದು ‘ಮುಡಿಕ್ಕುತ್ತು’ ಹೇಳ್ತ ಸಾಮಾನು. ಮುಡಿ ಒಳ ಇಪ್ಪ ಧಾನ್ಯದ ಸೇಂಪಲ್ಲು ನೋಡ್ಲೆ ಇಪ್ಪದು. ಕೊಡಿ ದೂಂಚಿ ಇಪ್ಪ ಕಬ್ಬಿಣದ ವಸ್ತು. ಸಣ್ಣ ದಂಬೆಯಾಂಗೆ ಆಕಾರ. ಮರದ ಹಿಡಿ.
ಒಪ್ಪಣ್ಣಾ…!
ಮರದು ಹೋವ್ತಾ ಇಪ್ಪ ನಮ್ಮ ಬಳಕೆಲಿದ್ದ ವಸ್ತುಗಳ ಪುನಾ ನೆಂಪು ಮಾಡಿದ್ದು ಕುಶೀ ಆತು. ನವಗೆ ಇದರೆಲ್ಲ ನೋಡಿ, ಕೇಳಿ ಗೊಂತಿದ್ದರೂ ಇನ್ನು ಮುಂದಾಣೋರಿಂಗೆಲ್ಲ ಮ್ಯೂಸಿಯಂಲಿ ಮಾತ್ರ ಸಿಕ್ಕುಗಷ್ಟೆಯೋ ಹೇಳಿದ್ದು ಸರೀ ಅಯ್ದು. ಹೀಂಗೇ ಸುಮಾರು ವಸ್ತುಗಳ ನಾವು ಬಳಸದ್ದೇ ಇಪ್ಪ ಕಾರಣ ಆ ಶಬ್ದಂಗಳೇ ನಮ್ಮ ಭಾಷೆಂದ ಕಾಣೆ ಆವ್ತಾ ಇದ್ದು. ಮತ್ತೆ ನವಗೇ ನಮ್ಮ ಭಾಷೆ ಅರ್ಥ ಆಯೆಕ್ಕಾರೆ ಒಟ್ಟಿಂಗೇ ಮರಿಯಪ್ಪ ಭಟ್ಟರ ಹವ್ಯಕ-ಇಂಗ್ಲಿಷ್ ಅರ್ಥಕೋಶ ಒಟ್ಟಿಂಗೆ ಮಡಿಕ್ಕೊಂಬ ದಿನ ದೂರ ಇಲ್ಲೆಯೋ ಹೇಳಿ ಕಾಣ್ತು.
ಒಪ್ಪಣ್ಣ..ಭತ್ತ ಮೆರಿವ ಒನಕೆ ಒಟ್ಟಿಂಗೆ ಹಪ್ಪಳಕ್ಕೆ ಸೊಳೆ ಮೆರಿವ ಬಲಗೆ ಕಂಡತ್ತಿಲ್ಲೆ! ಮತ್ತೆ ಸುಭಗಣ್ಣಂಗೆ ಎಲೆಮರಿಗೆ ಕಂಡಪ್ಪಗ ಎಲೆ ತಿನ್ನೆಕ್ಕೂಳಿ ಆದರೆ ಅದರ ಒಟ್ಟಿಂಗೆ ತುಪ್ಪುಲೆ ಪೀಕದಾನಿ ಮಡುಗುದು ಒಳ್ಳೆದು. ಇಲ್ಲದ್ರೆ ಹನಿಕ್ಕರೆಲಿಪ್ಪ ಹೂಗಿನ ಬುಡಕ್ಕೆ ತುಪ್ಪಿರೆ ಕಮಲ ಹೂಗಿನ ಬುಡಂದ ಹುಲ್ಲು ತೆಗವಲೆ ಪರೆಂಚ್ಚುಗು.
ಒಪ್ಪಂಗಳೊಟ್ಟಿಂಗೆ
ಜಯತ್ತೆ ಕುಕ್ಕಿಲ
ಅದರಲ್ಲಿ ನೇಲುಸಿದ ಹಾಲು, ಬೆಣ್ಣೆ ಎಲ್ಲ, ಮಕ್ಕೊಗೆ, ಪುಚ್ಚೆಗೆ ಸಿಕ್ಕ, ಹಾಂಗಾಗಿಯೊ ?!!
ಸಮಗ್ರ ಲೇಖನ, ಒಪ್ಪಣ್ಣ . ಒಂದರಿ ಅಜ್ಜಿಮನೆಗೆ ಹೋಗಿ ಬಂದ ಹಾಂಗೆ ಆತು.
{•ಹಾಲು ನೇಲುಸಲೆ ಸಿಕ್ಕ ಉಪಯೋಗುಸುತ್ತದು }. “ಸಿಕ್ಕ” – ಅ ಹೆಸರು ಬಪ್ಪಲೆ ಎಂತ ಕಾರಣ ?
ಒಪ್ಪಣ್ಣಾ…
simply superb!!!!!!!….
ನಿ೦ಗೊ ಸೂಚಿಸಿದ ಎಲ್ಲಾ ವಸ್ತುಗಳನ್ನುದೆ ಓದುವಗ ಒ೦ದರಿ ಮನಸ್ಸಿನೊಳ ನೋಡಿಗೊ೦ಡ ಹಾ೦ಗೇ ಆತು. ೯೦% ವಸ್ತುಗಳನ್ನುದೆ ಎನಗೆ ಸಣ್ಣಾಗಿಪ್ಪಗ ಕ೦ಡು ಗೊ೦ತಿದ್ದು. ಬೌಷ ಇನ್ನು ಮು೦ದೆ ಮ್ಯೂಸಿಯ೦ಲ್ಲಿ ಮಾ೦ತ್ರ ಕಾ೦ಬಲೆ ಸಿಕ್ಕುಗೋ ಏನೋ!!
ಅಳತೆಗಳುದೆ ಎನ್ನ ಅಬ್ಬೆ ಹೇಳಿ ಕೊಟ್ಟ೦ಡಿತ್ತಿದ್ದದು ನೆ೦ಪಾತು. ಅಬ್ಬೆ ಶಾಲೆಗೆ ಹೋದ ಬಗೆ ಅಲ್ಲ, ಅ೦ದರುದೆ ಅವರ ಹಿ೦ದಾಣ ತಲೆಮಾರಿ೦ದ ಕೇಳಿ ಕಲ್ತದರ ಎ೦ಗೊಗುದೆ ಹೇಳಿ ಕೊಟ್ಟದಷ್ಟೇ.. ಇದರ ಇದೇ ರೀತಿ ಮು೦ದಾಣ ತಲೆಮಾರಿ೦ಗುದೆ ಎತ್ತುಸೆಕಾದ್ದದು ನಮ್ಮ ಕರ್ತವ್ಯ ಅಲ್ಲದೊ..
ಒ೦ದು ಸಾವಿರ ಒಪ್ಪ೦ಗೊ.
ಓಹ್! ಒಪ್ಪಣ್ಣಾ, ಒಪ್ಪಣ್ಣಾ, ಕೊಶೀ ಆತು ಲೇಖನ ಓದಿ. ಒಟ್ಟಿಂಗೆ ತುಂಬಾ ಬೇಜಾರುದೆ ಆತು, ಈ ಸಾಮಾನುಗೊ ಎಲ್ಲ ಕಾಣೆ ಆವ್ತಾ ಇದ್ದಾನೆ ಹೇಳಿ. ನೀನು ಬರದ್ದರಲ್ಲಿ ಬಂದ ಎಲ್ಲ ಶಬ್ದಂಗಳುದೆ ಎನಗೆ ಗೊಂತಿದ್ದು. ರಂಗ ಮಾವ ಸಾಮಾನುಗಳ ಉದ್ದಿ ಮಡಗಿದವು. ಆನು, ಶಬ್ದಂಗಳ ಎಲ್ಲ ಮನಸ್ಸಿಲ್ಲೇ ಪುನಃ ಉದ್ದೀ, ಉದ್ದೀ ಮಡಗಿದೆ !! ಪ್ರತಿಯೊಂದು ಶಬ್ದಕ್ಕುದೆ ಒಂದೊಂದು ಕತೆ ಬರವಲಕ್ಕು. ಅಷ್ತೊಂದು ನೆಂಪಾತು.
ರಂಗಮಾವನ ಹಾಂಗೆ, ಎನ್ನ ಅಪ್ಪನುದೆ ಮಳೆಗಾಲಲ್ಲಿ ಎಂತಾರು ಗುರುಟೆಂಡು ಇಕ್ಕು. ಅಪ್ಪನ ಹತ್ರೆ, ಉಳಿ, ಎಲೆಉಳಿ, ಗೀಸುಳಿ, ಗರಗಸ ಎಲ್ಲವುದೆ ಇತ್ತು. ಎನ್ನ ಅಜ್ಜನ ಎನಗೆ ಕಂಡು ಗೊಂತಿಲ್ಲೆ. ಅವರ ಬಗ್ಗೆ ಕೇಳಿ ತುಂಬಾ ಗೊಂತಿದ್ದು. ಅವುದೆ, ಮರ ಕೆತ್ತಿ, ಮರಿಗೆ, ಮಣೆ, ಕೈಲು, ಹೊಳಿಮಣಿಗೆ ಎಲ್ಲ ಮಾಡುವುದರಲ್ಲಿ ಭಾರೀ ಪರಿಣಿತರು. ರಾಮಜ್ಜ ಮಾಡಿ ಎನಗೆ ಕೊಟ್ಟದು ಹೇಳಿ ಅವು ಕೊಟ್ಟ ಸಾಮಾನಿನ ಎಲ್ಲ ತೋರುಸಿ, ಮಾವಂದ್ರು, ನೆರೆಕರೆಯವು ಹೇಳಿದ್ದು ಕೇಳಿದ್ದೆ. ಎನ್ನ ಅಪ್ಪ, ಮರದ ಕೆಲಸ ಮಾಡುವಗ, ಆನುದೆ ಎಷ್ಟೋ ಸರ್ತಿ ಅಪ್ಪಂಗೆ ಗೀಸುಳಿಗೆ ಹಿಡಿಯಲೆ ಕೂಯಿದೆ. (ಎನ್ನ ಕೈ, ಗೀಸುಳಿ, ಮರದ ಎಡಕ್ಕಿಲ್ಲಿ ಅರಚ್ಚಿ ದ್ದು ನೆಂಪಾತು !).
ಎನ್ನ ಅಪ್ಪನುದೆ ಮರಿಗೆ, ಉಪ್ಪಿನಕಾಯಿ ಮರಿಗೆ, ಮಣೆ, ಇಶಿಮುಚ್ಚಲು, ಸೌಟು ಎಲ್ಲ ಮಾಡುಗು.
ಪಾತಿ ಅತ್ತೆಯ ಲೊಟ್ಟೆ ಪಿಸುರಿಂಗೆ , ರಂಗಮಾವನ ಲೊಟ್ಟೆ ಪಿಸುರು ! ಲಾಯಕಾಯಿದು. ಹುಸಿ ಮುನಿಸು ಹೇಳ್ತರ ನಮ್ಮ ಭಾಶೆಲಿ ಚೆಂದಕೆ ಹೇಳಿದ್ದೆ.
ಒಣಕ್ಕರಟಲ್ಲಿ ಬೆಶಿ ಬೆಶಿ ನೀರು ತಲಗೆರದು ಮೀವಲೆ ಅದೆಷ್ಟು ಚೆಂದ. ಅದೇ ಒಣಕ್ಕರಟ ಕುಟ್ಟಿ ಎನ್ನ ಹಲ್ಲೊಂದು ಮುರುದ್ದದುದೆ ನೆಂಪಾತು.
ಸುಣ್ಣದಕಾಯಿಯ ಸುಣ್ಣ ಉದ್ದಲೆ ಇಪ್ಲ್ಪ ಹಿತ್ತಾಳೆಯ ಕಡ್ಡಿ ಹೇಳಿರೆ ಈಗಾಣ ಕಾಲದ ಮೊಬೈಲಿನ, ಐ-ಪಾಡ್ ನ, ಕುಟ್ಳೆ ಉಪಯೋಗಿಸುತ್ತ ಕಡ್ಡಿ ಹಾಂಗಲ್ಲದೊ ?!!
ದಳುಂ ಬುಳುಂ ಹೇಳಿ ಮಕ್ಕೊಗೆ ಕೊಶಿಲಿ ಮೀವಲಿಪ್ಪ ಮೀವ ಮರಿಗೆಯ ನೋಡಿ ಅಲ್ಲದೊ ಈಗಾಣ ಕಾಲದ ಬಾತ್ ಟಬ್ ಹೇಳಿ ಬಂದದು ?
ಹೊಳಿ ಮಣಿಗೆ (ಜಾಲು ಸರಿ ಮಾಡ್ಳೆ ಗುದ್ದಲೆ), ಹೊಡಿ ಮರಿಗೆ (ಶುಕ್ರವಾರ ಪೂಜೆಗೆ ಮಂಡ್ಳ ಹಾಕಲೆ ರಂಗಿನ ಹೊಡಿ ಹಾಕಲೆ ಇಪ ಮರಿಗೆ), ಮಂತು (ಮಸರು ಕಡವಲೆ), ಪತ್ತಾಯ (ಚೆನ್ನೈ ಬಾವ ಹೇಳಿದ ಹಾಂಗೆ), ಕಿಡಿಂಜಲು, ಮುಟ್ಟಾಳೆ ಎಲ್ಲವು ಲೇಖನಲ್ಲಿ ಬಾರದ್ರೂ ನೆಂಪಾತು.
ಈ ಸಾಮಾನುಗಳ ಬಗ್ಗೆ , ಬೈಲಿಲೇ ಹುಟ್ಟಿರೂ ಟೀವಿ ಎಡೆಲೇ ಬೆಳದೋರಿಂಗೆ ಗೊಂತಿಕ್ಕೋ? ಅಪ್ಪು ಒಪ್ಪಣ್ಣಾ. ಸರೀ ಹೇಳಿದೆ ನೋಡು.
ಪುರುಸೊತ್ತಪ್ಪದು ಮುಖ್ಯ ಅಲ್ಲ, ಪುರುಸೊತ್ತಿಲಿ ಎಂತ ಮಾಡ್ತು ಹೇಳ್ತದು ಮುಖ್ಯ ಹೇಳ್ತದುದೆ ಮುತ್ತಿನ ಹಾಂಗಿಪ್ಪ ಮಾತು.
ಮತ್ತೊಂದರಿ ಒಪ್ಪಣ್ಣಂಗೆ ಸಿಹಿ ಒಪ್ಪ !!
( ನಮ್ಮ ಮನೆಯೊಳವೂ ಹೀಂಗಿರ್ತ ಸೇರು, ಕೈಲು ಕುಡ್ತೆಗೊ ಇದ್ದೋ ನೋಡುವೊ.
ಇದ್ದರೆ ಲಾಯಿಕಲ್ಲಿ ಒಂದರಿ ಮನಾರ ಮಾಡುವೊ,) ಮನೆ ಒಳ ಈಗ ಇಲ್ಲದ್ದರೂ ..ಮನದೊಳ !! ಇದ್ದ ಹಳೆ ನೆನಪುಗಳ ಹೆರ ತೆಗದಹಾ೦ಗೆ ಆತು…ಆನು ಸಣ್ಣ ಇಪ್ಪಗ ಎನ್ನ ಅಪ್ಪನ ಮನೆಲಿ ಒನಕ್ಕೆಲಿ ಬತ್ತ ಮೆರಿತಿದ್ದದು ನೆನಪ್ಪತು,, ಕುದುರೆಮೆಟ್ಟು ಅತ್ತೆ ಮನೆಲಿ ನೊಡಿ ಇದು ಎನ್ಥಪ್ಪ ಹೆಳೀ ಗ್ರೆಶೆತಿದ್ದೆ.(ಎಶಿಮುಚ್ಚಲು ಕಂಡು ಗೊಂತಿದ್ದಲ್ಲದೋ?) ಎನ್ನ ಅಪ್ಪನ ಮನೆ ಹತ್ತರೆ ವಿಷ್ನು ಮಾವ ಹೆಳೀ ಇತ್ತಿದ್ದವು ಅವು ಎಶಿಮುಚ್ಚ ಮಾಡಿಎ೦ಗೊಗೆಕೊಟುಗೊ೦ಡು ಇತ್ತಿದ್ದವು, ಮಾಸಿ ಹೂಗಿದ್ದ ಹಳೆ ವಿಶಯ ನೆನಪ್ಪಿ೦ಗೆ ಬಪ್ಪ ಹಾ೦ಗೆ ಮಾಡಿದ ಲೇಕನಕ್ಕೆ ತು೦ಬಾ,,,,,,,ದನ್ಯವಾದ
ಕೋರ್ಜಿ ಹೇಳಿದರೆ ೪೨ ಮುಡಿ.
ಇದೇ ರೀತಿ ಮಜ್ಜಿಗೆ ಸಂಗ್ರಹಕ್ಕೆ ಕಂದಲು,ಕೊಡ ಎಲ್ಲಾ ಇದ್ದು.
ಒಂದು ಕೊಡ ಹೇಳಿರೆ ೧೦ ಕುತ್ತಿ ಅಡ.೨ ಕಂದಲು ಹೇಳಿರೆ ಒಂದು ಕೊಡ.
ಇದೆಲ್ಲಾ ಮನೆಲಿ ಜೆಂಬಾರ ಮಾಡುವ ಕಾಲಕ್ಕೆ ಉಪಯೋಗ ಅಪ್ಪದರ ಆನು ನೋಡಿದ್ದೆ.
ಈಗ ಹೆಚ್ಚಾಗಿ ಉಪಯೋಗ ಇಲ್ಲೆ.
ಲೇಖನ ಲಾಯಿಕಿದ್ದು.
ಅಯ್ಯೊ ! ಎಲ್ಲವನ್ನು ಒಂದರಿಯೆ ಬೇರೆ ಕಡೆ ಬರದ್ದರ ಇಲ್ಲಿ ತಂದು ಅಂಟ್ಸಿಯಪ್ಪಗ ಅದು ಕನ್ನಡಕ್ಕೆ ಬಯಿಂದಿಲ್ಲೆನ್ನೆ?
ವಾಪಸು ಕನ್ನಡಲಿ ಬರವ ಹೇಳಿರೆ ಮೊದಲು ಬರದ್ದರ ಅಳಿಸುಲೆ ಎಡಿತ್ತಿಲ್ಲೆನ್ನೆ?
ಹಾಂಗೆ ಈ ಸರ್ತಿ ಎನ್ನದು ಬೇರೆ English li ಒಪ್ಪ ಅತಾ?
ಸುಮನಕ್ಕ.
ee ella saamanugaLalli kelavella ‘hariyolme’li saNNa ippaga nODida neMpaatu.
kelavella nODadruu ajja ajjiya baayili kELida shabdaMgo OdigoMDu hOda haaMge neMpaatu.
oppaNNa kutti heLire 9 kuDte heLidella? matte adralli 8 kudte appaga oTTe iddare 9nE kuDte haakire chellire 9nE kuDte ya hEnge aLavadappa hELi samshaya bantu.
appu eshiMchalu aanu doDDa appallivarege upayOgisida neMpiddu.
daaNeya upayOga jeMbrada samayalli irtO hELi allada?
toTlu, bharaNi, marige ella sumaru aanu dodda appallivarege hecchina kade kaMDide.
bbayeDeli agnikaarya maaDudu nODidde.
marada sEmage muTTu, sikka ella nODidde.
ee praayallu idella samaanugaLa hera thegadu ottare maaDi muMdaaNOriMge nODle sikkuva haaMge chaMdakke maDuguva raMga maavana kelasava mecchekkaadde.
eMgogella hIMgippa salakaraNegaLa mareyadda haaMge, ranga maava hELida haMge vivarsida oppaNNana lEkhana laaykayidu.
innaNa vaarakke kaayte,
sumanakka.
ತರವಾಡು ಮನೆ ಉಪ್ಪರಿಗೆ ಏಣಿಳಿ ಹತ್ತಿ ಇಳುದಾಂಗೇ ಆತು. ಕಾಣೆಯಾದ ಪಟ್ಟಿ ತಯಾರಿ ಆವ್ತಾ ಇಪ್ಪಗ ಇದರ ಕಾಣೆ ಮಾಡದ್ದೆ ಇಲ್ಲಿ ತೋರ್ಸಿದ್ದು ಲಾಯಕ್ಕಾಯ್ದು. ಕುಡ್ತೆ ಪಾವು ಸೇರು ಹಾನೆ ಕುತ್ತಿ ಕಳಸೆ ಲಟ್ಟಣಿಗೆ ಮುಡಿ ಒನಕ್ಕೆ ಕೈಲು ಸೌಟು ಇಷಿಮುಚ್ಚಾಳು ದಾಣೆ ……………….ಮಂಡಗೆ ಸಿಕ್ಕ , ಅಬ್ಬಬ್ಬ ಎಷ್ಟು ದೊಡ್ಡ ಪಟ್ಟಿ. ಪುಣ್ಯಕ್ಕೆ ಆನು ಸಣ್ಣದಿಪ್ಪಗ ಇವೆಲ್ಲವನ್ನೂ ಕಣ್ಣಾರೆ ಕಂಡಿದೆಪ್ಪ. ಮತ್ತೆ ಅದರೆಲ್ಲ ರಂಗ ಮಾವ ಕೊಂಡೋಗಿ ಜಾಗ್ರತೆಲಿ ಅಟ್ಟಲ್ಲಿ ಜೋಪಾನ ಇರಿಸಿದ್ದವದಾ. ಒಪ್ಪಣ್ಣನ ಕಣ್ಣಿಂಗೆ ಬಿದ್ದದೊಳ್ಳೆದಾತೀಗ. ಸುಣ್ಣದಕಾಯಿಯನ್ನೂ ಬಿಡದ್ದೆ ತೋರ್ಸಿದಿ., ಏವುದರ ಹೇಳುವದು ಏವುದರ ಬಿಡುವದು. ಪ್ರತಿಯೊಂದು ಸೂಕ್ಷ್ಮ ವಿಷಯವೂ ಚೊಕ್ಕ ವಿವರಣೆ . ಪತ್ತಾಯ ಎಲ್ಲಿದ್ದು ಹೇಳಿ ಹುಡುಕ್ಕಿದೆ ಇಲ್ಲಿ ., ‘ಅಂದೊಂದರಿ ಮನೆ ಮಾಡು ಮುರುದು ಕಟ್ಟುವಗ ಹೋಯಿದಡ ಕೆಲವೆಲ್ಲ’ ಹೇಳಿ ಹೇಳಿದ ಮತ್ತೆ ಕೇಳ್ಳೆ ಎಡಿಯ ಇನ್ನು. ಪುರುಸೊತ್ತಿಲಿ ಎಂತ ಮಾಡ್ತು ಹೇಳ್ತದು ಮುಖ್ಯ ಹೇಳಿ ನೊಂಗೊ ಪುರುಸೊತ್ತುಮಾಡಿಗೊಂಡು ಹೇಳಿದ್ದು ಬಹು ಲಾಯಕ್ಕ ಆಯ್ದು ಹೇಳಿ ನಮ್ಮ ಒಪ್ಪ.