ಭಾರತೀಯರಿಂಗೆ ಪ್ರತಿ ದಿನವೂ ಹೊಸತ್ತು.
ಒಂದೊಂದು ಕಾಲಲ್ಲಿ ಒಂದೊಂದು ಹಬ್ಬ- ಹರಿದಿನಂಗೊ. ಆಯಾ ಕಾಲಕ್ಕೆ ಆಯಾ ಗೌಜಿ, ಇದ್ದ ಹಾಂಗೇ ಅನುಬವಿಸುದು ನಮ್ಮ ವಿಶೇಷತೆ. ಕೆಲವೆಲ್ಲ ಹಬ್ಬವ, ಅದರಲ್ಲಿಪ್ಪ ಸೂಕ್ಷ್ಮ ವಿಶೇಷವ ಆಯಾ ಕಾಲಕ್ಕೇ ಒಪ್ಪಣ್ಣ ಹೇಳ್ತ ಮರಿಯಾದಿ ಇದ್ದು, ಹೇಳಿದ್ದು ಇದ್ದು ಇದರಿಂದ ಮದಲುದೇ.
ಹಬ್ಬದ ಶುದ್ದಿಗೊ, ಹಳೆ ಶುದ್ದಿಗೊ ಎಲ್ಲ ಕೇಳಿ ಕೇಳಿ ಕಳಾಯಿಯ ಗೀತತ್ತೆಯ ಹಾಂಗಿಪ್ಪ ಹಳೆ ಕ್ರಮದ ಜೆನಂಗೊಕ್ಕೆ ಬೊಡಿವಲೆ ಸುರು ಆದರೂ, ಹೊಸಬ್ಬರು – ನಮ್ಮ ಹಳೆ ಕ್ರಮಂಗೊ ಗೊಂತಿಲ್ಲದ್ದ ಮಕ್ಕೊಗೆ ತುಂಬ ಕೊಶಿ ಆವುತ್ತಡ. ಹಳತ್ತು ಶುದ್ದಿ ಹೇಳುದಾದರೆ ಹೊಸಬ್ಬರಿಂಗೆ ಕುಶಿ, ಹಳಬ್ಬರಿಂಗೆ ಒರಕ್ಕು ತೂಗುತ್ತು, ಹೊಸತ್ತು ನಮುನೆ ಶುದ್ದಿ ಆದರೆ ಹಳಬ್ಬರಿಂಗೆ ಕುಶಿ, ಹೊಸಬ್ಬರಿಂಗೆ ಉದಾಸ್ನ ಆವುತ್ತು!
ಎಂತರ ಮಾಡುದು ಬೇಕೆ, ಎರಡನ್ನೂ ತಕ್ಕಡಿ ತೂಗಿಯೊಂಡು ಹೋಪದು ಇದಾ! 😉
ಕಾಲ ಹೇಂಗೆ ಓಡುತ್ತು, ಪುರುಸೊತ್ತಿಲ್ಲದ್ದೇ!
ಆಟಿ – ಸೋಣೆ ಹೇಳಿ ಬಂಡಾಡಿ ಅಜ್ಜಿ ಲೆಕ್ಕ ಮಾಡಿಮಾಡಿ ಪುಳ್ಳಿಗೆ ಮದುವೆ ನಿಘಂಟು ಆಗಿಯೇ ಬಿಟ್ಟತ್ತು – ಮೀನ ತಿಂಗಳ್ಳಿ ಅಡ. ದಿನ ಹೋಪದು ಗೊಂತೇ ಆವುತ್ತಿಲ್ಲೆ ಹೇಳಿ ಬೇಜಾರು ಮಾಡ್ತ ರಂಗಮಾವನ ಎದುರಾಣ ಹಲ್ಲುದೇ ಹೋಗಿ ಬಿಟ್ಟತ್ತು, ಅವೀಗ ಪಾತಿ ಅತ್ತೆಗೆ ಪರಂಚುವಗ ಸ್ಪಷ್ಟ ಆವುತ್ತಿಲ್ಲೆಡ!
ಶೇಡಿಗುಮ್ಮೆ ಬಾವ ಕಲ್ಲುಗುಂಡಿ, ಕೊಡೆಯಾಲ ಹೇಳಿ ತಿರುಗುವಗ ಯೇವತ್ತಿನ ಹಾಂಗೆ ಚಡ್ಡಿ ಹಾಕಲೆ ಎಡಿಯದ್ದೆ ದೊಡ್ಡವರ ಹಾಂಗೆ ಕಾಂಬಲೆ ತೋರ್ತು ಮುಂಡು ಸುತ್ತಿದ್ದಡ. ತೋರ ಆಗಿ ಗುರ್ತವೇ ಸಿಕ್ಕದ್ದಷ್ಟು ಆಯಿದ°, ಮಳೆಗಾಲದ ನೀರು ಮೈಗೆ ಹಿಡುದು ಬೊದುಳಿದ ಹಾಂಗೆ ಆದ್ದೋ ಏನೋ! ಉಮ್ಮ!!
ಅಂತೂ ಕಾಲ ಮುಂದೆ ಓಡ್ತಾ ಇದ್ದು…
ಈ ಒರಿಷದ (ದೀಪಾವಳಿ) ಹಬ್ಬ ಕಳಾತು ಓ ಮೊನ್ನೆ. ಎಲ್ಲರಿಂಗುದೇ ಒಳ್ಳೆ ಗೌಜಿ ಆಯಿಕ್ಕು! ಅಲ್ದಾ?
ಹಬ್ಬ ಕಳುದ ಮತ್ತೆ, ಹಬ್ಬದ ಮರದಿನಂದ ಶುರು ಅಪ್ಪದು ’ಕಾರ್ತಿಕ ಮಾಸ’ ಇದಾ.
ಚಾಂದ್ರಮಾನ ಲೆಕ್ಕಾಚಾರಲ್ಲಿ ಚಂದ್ರ ಯೇವ ನಕ್ಷತ್ರಲ್ಲಿ ಇಪ್ಪಗ ಹುಣ್ಣಮೆ ಬತ್ತೋ – ಆ ತಿಂಗಳಿಂಗೆ ಆ ನಕ್ಷತ್ರದ ಹೆಸರು ಮಡಗುಗು. ಈ ಸರ್ತಿ ಕೃತ್ತಿಕಾ ನಕ್ಷತ್ರಲ್ಲಿ ಇಪ್ಪಗ ಹುಣ್ಣಮೆ ಬಪ್ಪದು. ಹಾಂಗಾಗಿ ಕಾರ್ತಿಕ ಮಾಸ.
ನಮ್ಮೋರಿಂಗೆ ಕಾರ್ತಿಕ ಮಾಸ ಹೇಳಿತ್ತು ಕಂಡ್ರೆ ಒಳ್ಳೆತ ಶ್ರದ್ಧೆಯ ಸಮಯ. ಹಳಬ್ಬರಿಂಗೆ ಅಂತೂ ಈ ತಿಂಗಳಿನ ಸೋಮವಾರ ಹೇಳಿರೆ ತುಂಬಾ ವಿಶೇಷ.. ಶಿವದೇವಸ್ಥಾನಂಗಳಲ್ಲಿ ಅಂತೂ ದೀಪಾರಾಧನೆಯ ಗೌಜಿ. (ನಮ್ಮ ಗುರುಗಳೂ ಈ ತಿಂಗಳಿನ ದೀಪ-ಬೆಣಚ್ಚಿನ ಶುದ್ದಿ ಹೇಳಿದ್ದವು ಕಳುದ ವಾರ, ಓದಿದ್ದಿರಲ್ದಾ? )
ಇಡೀ ತಿಂಗಳು ಶಿವಾರಾಧನೆಗೆ ಪ್ರಾಶಸ್ತ್ಯ, ಶಿವಂಗೇ ಮನ್ನಣೆ. ಸದಾಶಿವದೇವರಿಂಗೆ ಕುಶಿಪಡುಸುಲೆ ಇಡೀ ತಿಂಗಳಿನ ವಿನಿಯೋಗ. ಶಿವನ ಇಷ್ಟದ ಸೋಮವಾರ ಅಂತೂ ಅವಂಗೇ ನಿಷ್ಠೆ. ಅವನದ್ದೇ ಧ್ಯಾನ, ಅವನದ್ದೇ ಪೂಜೆ, ಅವನ ಮೇಲೆಯೇ ಒಲವು. ಮನೆಯ ಎಲ್ಲೊರುದೇ, ಗೆಂಡುಮಕ್ಕೊ – ಹೆಮ್ಮಕ್ಕೊ ಹೇಳಿ ಬೇದ ಇಲ್ಲದ್ದೆ ಶಿವನ ಧ್ಯಾನ.
~~~~
’ಉಪವಾಸ’ ಮಾಡಿದ್ದಿರಾ ಯೇವತ್ತಾರು?
ಉಪವಾಸಲ್ಲೇ ಸುಮಾರು ನಮುನೆ ಇದ್ದು. ಹದಿನೈದು ದೋಸೆ ತಿಂಬವ° ಹನ್ನೊಂದೇ ತಿಂದು ಉಪವಾಸ ಮಾಡ್ತ° ಅಜ್ಜಕಾನ ಬಾವ°. ದಿನ ಇಡೀ ಮಸಾಲೆಪೂರಿ ತಿನ್ನದ್ದೆ ಉಪವಾಸ ಮಾಡ್ತ° ನಮ್ಮ ಗುಣಾಜೆ ಮಾಣಿ,
ಶಾಂಬಾವನ ಹೆಂಡತ್ತಿ ಚೆಕ್ಕರ್ಪೆ ತಿಂದು ಇರುಳಿಂಗೆ ಉಪವಾಸ ಮಾಡ್ತು, ತೋರ ಅಪ್ಪದಕ್ಕಡ. ಬೆಂಗ್ಳೂರಿನ ಶುಬತ್ತೆಯ ಮಗಳು ಯೇಪುಲು ಮಾಂತ್ರ ತಿಂದು ಕೆಲವು ಸರ್ತಿ ಉಪವಾಸ ಮಾಡ್ತು – ಡಯೆಟ್ಟು ಹೇಳುದಡ ಅದಕ್ಕೆ.
ಮಾರ್ಗದ ಕರೆಯ ಬೇಡ್ತವು (ಬೇಡುವವು / ಬಿಕ್ಷುಕರು) ಅಂತೂ ನಿತ್ಯವೂ ಉಪವಾಸ ಮಾಡ್ತವು. ಅದೆಲ್ಲ ಬೇರೆ.
ಇಲ್ಲಿ ಹೇಳ್ತಾ ಇಪ್ಪದು ಆ ನಮುನೆ ಉಪವಾಸ ಅಲ್ಲ – ಹಳೇ ಕ್ರಮದ ಉಪವಾಸ.
ಎಂತದೇ ಆಹಾರ ಇಲ್ಲದ್ದೆ, ದಿನ ಇಡೀ ಏಕಧ್ಯಾನಲ್ಲಿ ಇಪ್ಪ ವೆವಸ್ತೆಗೆ ಉಪವಾಸ ಹೇಳುದಡ.
ಜೆನಂಗ ನಮುನೆ ನಮುನೆಲಿ ಉಪವಾಸ ಮಾಡ್ತವಿದಾ! ಕಡ್ಪದವು ಇಡೀ ದಿನ ಆಹಾರವೇ ಇಲ್ಲದ್ದೆ ಇದ್ದರೆ, ಕೆಲವು ಜೆನ ಉದಿಯಪ್ಪಗ ಒಂದು ಫಲಾರ(ಫಲಾಹಾರ) ಮಾಡ್ತವು. ಪಲಾರ ಹೇಳಿರೆ – ಪೂರ್ವಕಾಲಲ್ಲಿ ಫಲಂಗಳ (ಹಣ್ಣುಗಳ) ತಿಂದೊಂಡು ಇದ್ದರೂ, ಈಗೀಗ ಕೊಳೆ ಅಲ್ಲದ್ದ ಅಡಿಗೆ ಮಾಡಿ ಉಣ್ತವು. (ಅಕ್ಕಿಂದ ಆದ ಆಹಾರಂಗೊ ’ಕೊಳೆ’ ಹೇಳಿ ಲೆಕ್ಕ ಇದ್ದು. ಇದರ ಬಗ್ಗೆ ಇನ್ನೊಂದರಿ ಮಾತಾಡುವೊ°)
ಆ ಮಟ್ಟಿಂಗೆ ಶುಬತ್ತೆಯ ಮಗಳ ಮೆಚ್ಚೆಕ್ಕೇ – ಯೇಪುಲು ತಿಂದು ನಿಜವಾದ ’ಪಲಾರ’ ಮಾಡ್ತು – ಈಗಳೂ..!
~~~~~
ಕಾರ್ತಿಕ ಸೋಮವಾರದ ದಿನ ನಮ್ಮೋರಲ್ಲಿ ಉಪವಾಸದ ಒಂದು ವಿಧ ಆದ ’ಒಪ್ಪತ್ತು’ (ಒಪ್ಪೊತ್ತು) ಮಾಡ್ತ ಕ್ರಮ ಇದ್ದು. ಅದರ ಹೇಳ್ತ ಬಗ್ಗೆ ಈ ಶುದ್ದಿ.
ದಿನಲ್ಲಿ ಎರಡು ಹೊತ್ತು ಪಲಾರ ಮಾಡಿ, ಒಂದು ಹೊತ್ತು ಉಂಬ ವಿಧಾನಕ್ಕೆ ನಮ್ಮ ಬಾಶೆಲಿ ’ಒಪ್ಪತ್ತು’ ಹೇಳುದು. [ಒಂದು – ಹೊತ್ತು = ಒಪ್ಪತ್ತು ಹೇಳಿದವು ಮಾಷ್ಟ್ರುಮಾವ, ಅವಕ್ಕೆ ಸಂದಿ ಎಲ್ಲ ಅರಡಿಗಿದಾ.]
ಉದಿಯಪ್ಪಗ ಬೇಗ ಎದ್ದು, ಹಿಂದಾಣ ದಿನದ ಕೊಳೆಯ ಎಲ್ಲ ತೆಗದು, ಸಗಣ ನೀರು ತಳುದು ಶುದ್ದ ಮಾಡಿ ಮಡುಗ್ಗು. ಮತ್ತೆ ಮಿಂದಿಕ್ಕಿ ಶುದ್ದಲ್ಲಿ ಬಂದು ಒಳಂಗೆ ನೀರು ತಂದು ಮಡಗ್ಗು. ಗೆಂಡುಮಕ್ಕೊ ನೀರೆಳದು ದೇವರೊಳಂಗೆ ತಂದರೆ, ಹೆಮ್ಮಕ್ಕೊ ನೀರೆಳದು ಅಟ್ಟುಂಬೊಳಾಂಗೆ (ಅಡಿಗೆಮನೆಗೆ) ಅಡಿಗ್ಗೆ ತಕ್ಕು – ನಿನ್ನೇಣ ನೀರು ಅಶುದ್ದ ಹೇಳಿ ಲೆಕ್ಕ ಇದಾ!
ಉದಿಯಪ್ಪಗ ಪಲಾರಕ್ಕೆ ಎಂತಾರು ಕೊಳೆ ಅಲ್ಲದ್ದು ಮಾಡುಗು – ಸಜ್ಜಿಗೆ ಒಗ್ಗರುಸುದೋ, ಹಸರು ಬೇಶುದೋ, ಹೀಂಗೆಂತಾರು. ಸೌದಿ ಒಲೆಲೇ ಮಾಡುಗು ಅದರ. (ರೂಪತ್ತೆ ಮನೆಲಿ ಮೈಕ್ರೋವೇವ್ ಒಲೆಲೇ ಮಾಡುದು, ಗೋಬರುಗೇಸಿಂಗೆ ಸಗಣ ಸಾಕಾವುತ್ತಿಲ್ಲೆಡ, ಎರಡೇ ಜರ್ಸಿ ದನ ಇಪ್ಪದಿದಾ! ಸೌದಿ ಒಲೆ ಇಲ್ಲೆ ಈಗ!). ಹಾಂಗೆ ಉದಿಯಪ್ಪಗಾಣ ಆಹಾರ ಆದ ಮತ್ತೆ – ಉಪವಾಸ ಆರಂಭ, ಯೇವತ್ತಿನಂತೆ ಎಡೆಹೊತ್ತಿಲಿ – ಮಜ್ಜಿಗೆ ನೀರೋ, ಚಾಯವೋ – ಎಂತದೂ ತೆಕ್ಕೊಳವು. ಜೊಗುಳಿನೀರು ಬಂದರೂ ತುಪ್ಪುಗು. ಮಾಪುಳೆಯ ನೋಂಬಿನ ಹಾಂಗೆ ನಾಕು ಜೆನ ಇಪ್ಪಗ ಮಾಂತ್ರ ತುಪ್ಪುದಲ್ಲ, ಆತ್ಮಸಾಕ್ಷಿಯ, ನಿಷ್ಠೆಯ ಉಪವಾಸ!
ಕೆಲವು ಮನೆಲಿ ಶಿವಪೂಜೆ ಮಾಡ್ತವು ಮದ್ಯಾನ್ನಕ್ಕೆ. ಮಂಗಳಾರತಿ ಆಗಿ ಪ್ರಸಾದ ಸೇವನೆ. ಪೂಜೆ ಇದ್ದರೂ, ಇಲ್ಲದ್ರೂ – ಮದ್ಯಾನ್ನಕ್ಕೆ ಬೆಣ್ತಕ್ಕಿ ಊಟ. ಯೇವತ್ತಿನ ಹಾಂಗೆ ಕೊಯಿಶಕ್ಕಿ ಮಾಡವು. ಕೊಯಿಶಕ್ಕಿ ಹೇದರೆ ಬತ್ತವ ಬೇಶಿ ಮಾಡ್ತದು ಇದಾ – ಬಟ್ಟಮಾವಂಗೆ ಶುದ್ದಕ್ಕೆ ಸಾಲ, ಬಟ್ಟೆತ್ತಿಗೂ!
ಯೇವತ್ತೂ ಮದ್ಯಾನ್ನ ಉಂಡಿಕ್ಕಿ ಒರಗಿರೂ, ಉಪವಾಸ – ಒಪ್ಪತ್ತಿನ ದಿನ ಒರಗವು. ’ಒರಗಿರೆ ಉಪವಾಸದ ಪಲ ಹೋವುತ್ತು’ ಹೇಳಿ ಹೇಳುಗಡ ನೆರಿಯದಜ್ಜ. ಮಾಷ್ಟ್ರಮನೆ ಅತ್ತೆ ಹೇಳಿದವು.
ಇರುಳಿಂಗೆ ಮತ್ತೆ ಪಲಾರ – ಸಜ್ಜಿಗೆ ಒಗ್ಗರುಸುದೋ, ಬಾಳೆ ಹಣ್ಣೋ, ಎಂತಾರು. ತೆಕ್ಕೊಂಡ್ರೂ ಆತು, ಇಲ್ಲದ್ರೂ ಆತು.
ಎಡೆಹೊತ್ತಿಲಿ ಅಂತೂ ಶಿವಧ್ಯಾನ ಮಾಡಿಯೇ ಮಾಡುಗು – ಉದಿಯಾಂದ ಇರುಳು ಮನುಗುವ ಒರೆಗೂ. ಶಿವಪಂಚಾಕ್ಷರಿ ಸ್ತೋತ್ರ, ಶಿವಾನಂದ ಲಹರೀ, ಶಿವಮಾನಸ ಸ್ತೋತ್ರ, ಶಿವಾಪರಾಧ ಕ್ಷಮಾಪಣ ಸ್ತೋತ್ರ, ತೋಟಕಾಷ್ಟಕ – ಹೀಂಗೇ ಕೆಲವು. ಶಂಕರಾಚಾರ್ಯ ತುಂಬ ಬರದ್ದವಿದಾ ಶಿವನ ಶ್ಲೋಕಂಗೊ, ಒಂದೊಂದರ ಹೇಳುಗು.
ಇಡೀ ದಿನ ದೇಹ, ಮನಸ್ಸು ಶುದ್ದಲ್ಲಿ. ಶಿವನ ಧ್ಯಾನ.
ಈಗಾಣ ಗೆಂಡುಮಕ್ಕೊ- ಹೆಮ್ಮಕ್ಕ ಮಾಡ್ತವು, ಇನ್ನಾಣೋರು ಮಾಡ್ತವಾ? ಶಂಬಜ್ಜನಷ್ಟು ನಿಷ್ಟೆಲಿ ರಂಗಮಾವ ಮಾಡವು, ರಂಗಮಾವಂಗೆ ನಡುಪ್ರಾಯ ಕಳಾತು – ಶಾಂಬಾವ ಇನ್ನುದೇ ಸುರು ಮಾಡಿದ್ದಯಿಲ್ಲೆ. ಚೇ!
ಕುಶಾಲಿಂಗೆ ಒಪ್ಪಕ್ಕನತ್ರೆ ಕೇಳಿದೆ, ’ಯೇವಗ ಸುರು ಮಾಡ್ತೆ ಒಪ್ಪಕ್ಕ° ನೀನು?’ ಹೇಳಿ. ’ಇಲ್ಲಿಗೆ ಬಪ್ಪೋರು ಮಾಡೆಕ್ಕಾದ್ದು, ಆನಲ್ಲ!’ ಹೇಳಿತ್ತು ತೊಡಿ ಪೀಂಟುಸಿಗೊಂಡು. ’ಆತಂಬಗ..!’ ಹೇಳಿದ° ಒಪ್ಪಣ್ಣ. ಅದು ಹೋಪ ಮನೆಲಿದೇ ಇಕ್ಕು, ನೋಡೊ°. 😉
ಹಳೆಕ್ರಮದ ಮನೆಗಳಲ್ಲಿ ಈಗಳೂ ಕಾಣ್ತು ಈ ಕಾರ್ತಿಕ ಸೋಮವಾರದ ಆಚರಣೆ. ಮೊನ್ನೆ ಮಾಷ್ಟ್ರಮನೆ ಅತ್ತೆ ಮಾಡಿತ್ತಡ.
ದೀಪಕ್ಕಂದೇ ಅದಕ್ಕೆ ಎಡಿಗಾದಷ್ಟು ಮಾಡಿದ್ದು. ಹೊತ್ತೋಪಗ ಬಚ್ಚಿ, ಏಳುಲೆಡಿಯದ್ದೆ ಅದರ ಮಲ್ಲಿಗೆ ಗೆಡುದೇ ಉಪವಾಸ ಆ ದಿನ. 😉
ರೂಪತ್ತೆಗೆ ಮದ್ಯಾನ್ನ ಟೀವಿಲಿ ದಾರವಾಹಿ ನೋಡಿ ಅಬ್ಯಾಸಬಲಲ್ಲಿ ಅಲ್ಲಿಗೇ ಒರಕ್ಕು ಬಂತಡ, ಮೊಬೈಲಿಲಿ ಮಾಲಚಿಕ್ಕಮ್ಮಂಗೆ ಪೋನು ಮಾಡಿ ಬೇಜಾರು ಮಾಡಿತ್ತಡ..!!
ಕಳಾಯಿ ಗೀತತ್ತೆ ಮಾಡಿದ್ದೋ – ಇಲ್ಲೆಯೋ ಗೊಂತಿಲ್ಲೆ. ಕೇಳುಲೆ ಹೋದರೆ ಪೆಟ್ಟು ತಿಂಬ ಜೆಂಬಾರ.
ನಮ್ಮೋರ ಮನೆಗಳಲ್ಲಿ ಗೆಂಡುಮಕ್ಕಳೂ, ಹೆಮ್ಮಕ್ಕಳೂ ಜೊತೆಜೊತೆಯಾಗಿ ಸೇರಿ ಮಾಡ್ತ ವೈಶಿಷ್ಟ್ಯಪೂರ್ಣ ಆಚರಣೆ ಈ ಒಪ್ಪತ್ತು. ಉಪವಾಸ ಮಾಡಿರೆ ದೇಹ ಮನಸ್ಸಿನ ಹಿಡಿತಕ್ಕೆ ಬತ್ತಡ. ದೇಹವೇ ಮನಸ್ಸಿಂಗೆ ಒಪ್ಪಿಗೊಳ್ತು, ಅಪ್ಪಿಗೊಳ್ತು. ಅಜ್ಜಂದ್ರು ಉಪವಾಸ ಮಾಡಿ ಮಾಡಿಯೇ ಇದಾ – ನೂರು ಒರಿಶ ಬದುಕ್ಕಿಗೊಂಡು ಇದ್ದದು. ಬಟಾಟೆ ಚಿಪ್ಸುದೇ ತಿಂಗು, ಉಪವಾಸವುದೇ ಮಾಡುಗು. ಇನ್ನಾಣೋರದ್ದು ಹೇಂಗೋ! 🙁
ಗ್ರೇಶಿರೆ ಬೇಜಾರಾವುತ್ತು ಬಾವಾ!
ಅಜ್ಜಂದ್ರೂ ಇಡೀ ದಿನ ಒಪ್ಪೊತ್ತು ಉಪವಾಸಂದಲೂ ಶಿವಧ್ಯಾನ ಮಾಡಿಗೊಂಡಿತ್ತಿದ್ದವು ಹೇಳ್ತದು ಮುಖ್ಯ.
ನವಗೆಲ್ಲ ಉಪವಾಸ ಸುರುಮಾಡಿ ಹತ್ತು ನಿಮಿಶಲ್ಲಿ ಅಶನದಳಗೆದೇ ಧ್ಯಾನ!!!
ಅಪುರೂಪಕ್ಕಾರೂ ಉಪವಾಸ ಮಾಡುವೊ°, ದೇಹ – ಮನಸ್ಸಿನ ಹಿಡಿತಲ್ಲಿ ಮಡಿಕ್ಕೊಂಬ°, ಆಗದೋ?
ಶಿವಾನುಗ್ರಹ ಎಲ್ಲೊರಿಂಗೂ ಇರಳಿ…!
ಒಂದೊಪ್ಪ: ಒಪ್ಪತ್ತು, ಉಪವಾಸ ಮಾಡಿಗೊಂಡಿಲ್ಲದ್ರೆ ನಾಲಗೆಯ ಹಿಡಿತವೇ ತಪ್ಪುತ್ತು.!
ಸೂ: ನಾಳ್ತು ಸೋಮವಾರ (16-11-2009) ಈ ಒರಿಶದ ಅಕೇರಿಯಾಣ ಕಾರ್ತಿಕ ಸೋಮವಾರ. ಅವಕಾಶ ಆದರೆ ಒಪ್ಪೊತ್ತು ಮಾಡಿಕ್ಕಿ ಆತೋ. ಕ್ರಮ ಗೊಂತಾಗದ್ರೆ ಮಾಷ್ಟ್ರಮನೆ ಅತ್ತೆಯ ಹತ್ರೆ ಕೇಳಿಕ್ಕಿ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಶುದ್ದಿ ಲಾಯ್ಕಾಯ್ದು 🙂
ಲಾಯ್ಕಾಯಿದು….
ಪುಳ್ಯಕ್ಕೊಗೆ ಗೊಂತಿಲ್ಲದ್ದ ಆಚರಣೆಗಳ ಬಗ್ಗೆ ಎಲ್ಲ ಚೆಂದಕ್ಕೆ ವಿವರುಸುತ್ತಿ…. 😉
ಮಾಷ್ಟ್ರಮನೆ ಅತ್ತೆ ಹತ್ತರೆ ಮಾತಾಡಿದೆ ಮೊನ್ನೆ ಆದಿತ್ಯವಾರ…ಹೇಳಿದವು, "ನಾಳೆ ಒಪ್ಪೊತ್ತು…ಕಾಪಿಗೆಂತ ಮಾಡ್ಲಿಲ್ಲೆ.." ಹೇಳಿ… 🙂
ಎಂತ ಒಪ್ಪಣ್ಣೋ? ಬರೆವ ಉತ್ಸಾಹ ಇಳುದ್ದೋ ಅಥವಾ ಅರ್ಜೆಂಟೋ?
ಅಂದಹಾಂಗೆ ಷಷ್ಠಿ ಸುದ್ದಿಯ ಬಿಟ್ಟದೆಂತಕೆ? ನಿನಗೊಂದು ಗೊಂತಾ? ಕಾರ್ತಿಕಮಾಸದ ಸಮಯಲ್ಲೇ ಎನ್ನ ಹೆಚ್ಚಿನ ಪ್ರೆಂಡ್ಸ್ಗಳ ಮದುವೆ ಆದದ್ದು..ಬುಕ್ಕುಗೊ ಬಿಡುಗಡೆ ಆದದ್ದು. ಹೊಸ ಯೋಚನೆಗೊ ಸುರುವಾದದ್ದು. ಸಣ್ಣದಿಪ್ಪಾಗ ದೇವಸ್ಥಾನಲ್ಲೆ ಕಾರ್ತಿಕ ಮಾಸದ ವಿಶೆಶ್ಃಅ ಪೂಜೆಗೆ ಗೌಜಿಲಿ ಓಡಾಡಿಕೊಂಡಿದ್ದದ್ದು ನೆಂಪಾವ್ತು. ಅಂದಹಾಂಗೆ ಉಪವಾಸ ನೀನು ಮಾಡಿದೆಯೋ?
ಈ ಸಲಾಣ ನೂಪುರಲ್ಲಿ ಒಪ್ಪಣ್ಣ ಸಂಗೀತದ ಮರುಳಿನ ವಿಶೇಷ ಲೇಖನವ ಹಾಕಿದ್ದವು. ನೋಡಿದ್ದೆಯಾ?
oppanna baraddu bari laiku ayidu ata……….
Layka aydaatho…
cholo bardyo:)
bhari laika baradde oppanna.praya aatu edittilli upavasa madle heli summane heludu.namma neriyada ajjana nodidavakke gontikku.neenu helida hange navage manasiddare deha opputtu.ellavu devaringe preeti devaru namma nadeshutta.bhatta mavana karbariliyu heenge munduvarusugu heli kantu.neriyada ajjana pulli allada.namma gurugala anugraha olleta iddanne allada bhatta mava.matte kamba aata.
ಕಾರ್ತೀಕ ಮಾಸಲ್ಲಿ ಬಪ್ಪ ಎಲ್ಲಾ ಸೋಮವಾರಂಗ ಶುಭ ದಿನ ಹೇಳಿಯೇ ಆಸ್ತಿಕರ ನಂಬಿಕೆ. ಹೀಂಗಾಗಿ ಭಾರೀ ಸಂಖ್ಯೆಲಿ ಶಿವ ದೇವಸ್ಥಾನಂಗಕ್ಕೆ ಹವ್ಯಕರು ಹೋಗಿ ದೇವರ ದರ್ಶನ ಮಾಡುತ್ತವು.ಅದರ್ಲಿಯೂ ದೀಪಕ್ಕಂಗೆ ಕುಂಬ್ಳೆ ಹೋಪಗ ಒಂದರಿ ಮುಜುಂಗಾವಿನ್ಗೆ ಹೋಗದ್ರೆ ಮನಸು ಕೆಳ್ತಿಲ್ಲೆದ… ಮತ್ತೆ ಒಪ್ಪಣ್ಣ ನ ಉಪವಾಸದ ಕ್ರಮ ಹೇಂಗೆ ???????????????
appu appa…..
devaru olledu maadali elloringoo….:P