Oppanna.com

ಮಹಾಜನ ಕಟ್ಟಿ ಮಹಾಜನರ ಬೆಳೆಶಿದ ಮಹೋಪಾಧ್ಯಾಯರ ಮಹಾವೆಗ್ತಿತ್ವ!

ಬರದೋರು :   ಒಪ್ಪಣ್ಣ    on   16/12/2011    32 ಒಪ್ಪಂಗೊ

ಕಳುದ ವಾರ ಚಂದ್ರಂಗೆ ಗ್ರಹಣ ಹಿಡುದ್ದು.
ಅವನಷ್ಟಕೇ ಬಾನಲ್ಲಿ ಹೋವುತ್ತವನ, ಪಕ್ಕನೆ ರಾಹುವೋ ಕೇತುವೋ ಅಡ್ಡತಡದು ನಿಲ್ಲುಸಿರೆ ಎಂತಕ್ಕು?
– ಅವನ ಓಡಾಟ ಒಂದರಿಯೇ ನಿಲ್ಲುತ್ತು. ಪುನಃ ಸುರು ಅಪ್ಪನ್ನಾರ ಆಸ್ತಿಕ ಭಕ್ತರಿಂಗೆ ಆಹಾರವೂ ನಿಲ್ಲುತ್ತು!
ಹಾಂಗೇ ಆತಿದಾ,
ಬೇರೆಂತದೋ ಶುದ್ದಿ ಹೇಳೇಕು ಹೇದು ಬೈಲಿಂಗೆ ಬಂದುಗೊಂಡಿತ್ತಿದ್ದೆ ಮೊನ್ನೆ. ಅಷ್ಟಪ್ಪಗ ಬಂತದಾ – ದೊಡ್ಡಬಾವನ ಸಮೋಸ!
ಸಮೋಸಲ್ಲಿ ಗುರು-ಶುಕ್ರ-ಶೆನಿ ಎಲ್ಲವೂ ಇಪ್ಪ ಸಾಧ್ಯತೆ ಇರ್ತು. ಹಾಂಗೆ, ಆ ಸಮೋಸಲ್ಲಿ ರಾಹುಕೇತುಗಳಷ್ಟೇ ಕಡ್ಪದ ವಿಶಯ ಒಂದಿತ್ತು.
ಅದರ ಓದಿ ಅಪ್ಪದ್ದೇ, ತಲೆಲಿ ತಿರುಗಿಂಡಿದ್ದಿದ್ದ ಮಹಾ ಪ್ರವಾಹ ಒಂದರಿಯೇ ನಿಂದು, ಕೂದಲ್ಲಿ – ನಿಂದಲ್ಲಿ, ಅದೇ ಶುದ್ದಿ ತಲೆಲಿ ತಿರುಗೆಂಡು, ಮತ್ತೆ ಬೇರೆ ಯೇವ ಶುದ್ದಿಯೂ ತಲೆಗೆ ಬಾರ – ಆ ನಮುನೆಯ ಗ್ರಹಣ!
ನೆಮ್ಮದಿಯ  ಮನಸ್ಸಿಂಗೆ ಊಟವೇ ಇಲ್ಲದ್ದೆ, ಉಪವಾಸಲ್ಲಿ ಇದ್ದತ್ತು.
ಆ ನಮುನೆ ಗ್ರಹಣ ಹಿಡಿಯಲೆ ಒಂದು ಕಾರಣ ಇಲ್ಲದ್ದೆ ಇರ – ಅಲ್ಲದೋ? ಎಂತ ಇತ್ತು ಆ ಸಮೋಸಲ್ಲಿ ಅಂಬಗ?
ಅದುವೇ ಕಂಡಿಗೆಅಜ್ಜನ ಶುದ್ದಿ!
~
ಚೆಲ, ಇದೆಂತರ ಶುದ್ದಿ ಕಳುಗಿದ ನಮ್ಮ ದೊಡ್ಡಬಾವಾ – ಹೇಳಿಗೊಂಡು ಸೀತ ದೊಡ್ಡಬಾವನತ್ರೆ ಮಾತಾಡ್ಳೆ ಹೋಪದು ಗ್ರೇಶಿದೆ.
ಬೇಲಿ ಹಾಕಲೆ ಬಟ್ಯ ಬತ್ತೆ ಹೇಳಿದ್ದರ ಕಾದು, ಹತ್ತನ್ನೊಂದು ಗಂಟೆ ಆದರೂ ಬಾರದ್ದೆ, ಇಂದು ಬತ್ತಿಲ್ಲೆ –ಹೇಳಿ ನಿಜ ಆಗಿ ಹೆರಟೆ ದೊಡ್ಡಬಾವನಲ್ಲಿಗೆ.

ಯುಗಪುರುಷನ ಮುಗುಳುನೆಗೆ

ದೊಡ್ಡಬಾವ° ಮಾಷ್ಟ್ರ ಆಗಿಪ್ಪದು ನೀರ್ಚಾಲು ಶಾಲೆಲಿ. ಆ ಶಾಲೆಯ ಕಟ್ಟಿ ಬೆಳೆಶಿದ ವೆಗ್ತಿ ಬಗ್ಗೆಯೇ ನಾವು ಮಾತಾಡ್ಳೆ ಹೆರಟದು.
ಶಾಲಗೆ ಅಜ್ಜನ ದಿನದ ಲೆಕ್ಕಲ್ಲಿ ಇಂದು ರಜೆ ಆಡ, ಮನಗೆ ಬೇಗ ಬಂದಿಕ್ಕಿದ್ದ°.
ಅಜ್ಜನ ವೆಗ್ತಿ ದರ್ಶನ ಆಗಿಂಡಿದ್ದತ್ತು, ಆದರೆ ವೆಗ್ತಿತ್ವದರ್ಶನ ಆಯೆಕ್ಕಾತು ದೊಡ್ಡಬಾವಾ – ಹೇಳಿದೆ.
ಶಾಲೆಅಂಗಿ ತೆಗದು, ಒಸ್ರಸುತ್ತಿಗೊಂಡು ಚಿಟ್ಟೆಲಿ ಕೂದಿದ್ದ ದೊಡ್ಡಬಾವ ಮಾತಾಡ್ಳೆ ಸುರುಮಾಡಿದ.
~
ಅಜ್ಜನ ಚರಿತ್ರೆ ಬೇರೆ ಅಲ್ಲ, ನೀರ್ಚಾಲು ಶಾಲೆಯ ಚರಿತ್ರೆ ಬೇರೆ ಅಲ್ಲ – ಹಾಂಗಾಗಿ ಅಜ್ಜನ ಬಗ್ಗೆ ತಿಳಿತ್ತ ಮದಲು ಶಾಲೆಯ ಬಗ್ಗೆಯೂ ಗೊಂತಿರೇಕು – ಹೇಳ್ತದು ದೊಡ್ಡಬಾವನ ಅಭಿಪ್ರಾಯ.
ಹಾಂಗಾಗಿ, ಸೀತ ಅಜ್ಜನ ಶುದ್ದಿಗೆ ಹೋವುತ್ತರ ಮದಲು, ನಮ್ಮೂರಿನ ಇತಿಹಾಸ ನೋಡಿಕ್ಕುವೊ°..

ಮೂರು ತಲೆಮಾರು ಮದಲಿಂಗೆ ನಮ್ಮ ಊರಿಲಿ ಶಾಲೆಗೊ ಇಷ್ಟು ಧಾರಾಳ ಇದ್ದತ್ತಿಲ್ಲೆ.
ಆ ಸಮೆಯಲ್ಲೇ, ನಮ್ಮ ಊರಿಂಗೂ ಒಂದು ಕೋಲೇಜು ಬೇಕು – ಹೇದು ಯೋಚನೆ ಮಾಡಿ, ಅಂಬಗಾಣ ಹೆರಿತಲೆಗೊ ಒಂದುಸೇರಿ – ಊರ ಹತ್ತು ಸಮಸ್ತರು ನಿಶ್ಚಯ ಮಾಡಿದವಡ.
ಮಹಾಜನತೆಗೆ ಬೇಕಾಗಿ ಮಾಡ್ತ ಕಾರಣ ’ಮಹಾಜನ’ ಹೇಳಿಯೇ ಹೆಸರು ನಿಶ್ಚಯ ಆತಾಡ. ಮೆಡ್ರಾಸು ಗೋರ್ಮೆಂಟಿನ ಒಪ್ಪಿಗೆ ಪಡಕ್ಕೊಂಡು ಕೋಲೇಜುದೇ ಸುರು ಆತು.

ಎಲ್ಲಿ? ಧರ್ಮಕೇಂದ್ರಲ್ಲೇ ವಿದ್ಯಾಕೇಂದ್ರ ಆರಂಭ ಆತು – ಪೆರಡಾಲ ದೇವಸ್ಥಾನವೇ ಕ್ಲಾಸು.
ಇದು ನೆಡದ್ದು ಸಾವಿರದ ಒಂಭೈನೂರ ಒಂಭತ್ತರಲ್ಲಿ ಆಡ – ಚೌಕ್ಕಾರುಮಾವ ಹಳೆನೆಂಪಿಲಿ ಹೇಳುಗು.
ಅಲ್ಲೇ ಎರಡೊರಿಶ ನೆಡದು, ಮತ್ತೆ ಅದರದ್ದೇ ಆದ ಸ್ವಂತ ಜಾಗೆಗೆ ಬಂತು – ನೀರ್ಚಾಲು ಪೇಟೆಕರೆಯ, ಇಪ್ಪತ್ತೆಕ್ರೆ ವಿಶಾಲ ಜಾಗೆ.
ಅಲ್ಲಿಂದ ನಿರಂತರವಾಗಿ, ಇಂದಿನ ಒರೆಂಗೂ ವಿದ್ಯಾದಾನ ಮಾಡಿಗೊಂಡು ಬತ್ತಾ ಇದ್ದತ್ತು ಈ ನೀರ್ಚಾಲು ಮಹಾಜನ ಸಂಸ್ಕೃತ ಕೋಲೇಜು.

ವಿದ್ವಾನು – ಶಿರೋಮಣಿ ಕಲ್ತುಗೊಂಡು ಮಕ್ಕೊ ಬೇರೆಬೇರೆ ದಿಕ್ಕೆ ಉದ್ಯೋಗ ಮಾಡಿಗೊಂಡು ಶಾಲೆಗೂ ಹೆಸರು ತಂದುಗೊಂಡು ಇತ್ತಿದ್ದವು.
ಅಂಬಗಾಣ ಕಾಲಲ್ಲಿ ಅಲ್ಲಿ ಎ-ವಿದ್ವಾನ್, ಬಿ-ವಿದ್ವಾನ್ ಹೇಳಿ ಎರಡು ಕೋರ್ಸುಗೊ ಪ್ರಮುಖವಾಗಿ ಇದ್ದತ್ತಾಡ.
ಒಂದರ್ಲಿ ಸಂಸ್ಕೃತವೇ ಮುಖ್ಯ, ಮತ್ತೊಂದರ್ಲಿ ಸಂಸ್ಕೃತ-ಕನ್ನಡ ಇದ್ದುಗೊಂಡಿತ್ತಾಡ.
ಎ ವಿದ್ವಾನ್ ಮಾಡಿರೆ ಸಂಸ್ಕೃತ ಪಂಡಿತರು, ಬಿ-ವಿದ್ವಾನ್ ಕನ್ನಡಪಂಡಿತರು ಮಾಡಿಗೊಂಡಿತ್ತವಡ.
ಅಂತೂ, ವಿದ್ವತ್ತು ವಿದ್ವತ್ತೇ.
~
ಕಾಲಕ್ರಮೇಣ, ಭಾಷಾವಾರು ಪ್ರಾಂತ್ಯ ಹೇಳಿಗೊಂಡು – ಕಾಸರಗೋಡು ಹೇಳ್ತ ಕನ್ನಡಭೂಮಿಯ ತೆಕ್ಕೊಂಡು ಹೋಗಿ ಮಲೆಯಾಳಿಗಳ ಮೊಟ್ಟೆಲಿ ಮಡಗಿದವಲ್ಲದೋ – ಸಾಮಾನ್ಯ ಅದೇ ಸಮೆಯಲ್ಲಿ ಈ ಕೋರ್ಸುಗೊಕ್ಕೆ ಬೇಡಿಕೆ ಇಲ್ಲದ್ದೆ ಆತಾಡ.
ಒರಿಶ ಹೋದ ಹಾಂಗೆ ಮಕ್ಕೊ ಬಪ್ಪದು ಕಮ್ಮಿ ಕಮ್ಮಿ ಆಗಿ, ಒಂದು ಹಂತಲ್ಲಿ ಬೇರೆ ಜಾಗೆಂದ ಮಕ್ಕಳ ಬರುಸಿ ವಿದ್ಯಾಭ್ಯಾಸ ಕೊಡ್ತ ಹಾಂಗೆ ಮಾಡೇಕಾತಾಡ. ಅದೆಲ್ಲ ಎಷ್ಟು ಸಮೆಯ ನೆಡಗು!
ಊರ ಮಕ್ಕೊಗೇ ಬೇಡ ಹೇಳಿ ಆದರೆ, ಊರ ಶಾಲೆ ಎಷ್ಟು ದಿನ ತಡಕ್ಕೊಂಗು?!
ಅನಿವಾರ್ಯವಾಗಿ ಅಜ್ಜನಕಾಲದ ಕೋಲೇಜಿನ ಮುಚ್ಚೇಕಾಗಿ ಬಂತು.

ವಿದ್ಯಾದಾನಲ್ಲೇ ಇಪ್ಪ ಒಂದು ಸಂಸ್ಥೆ ಮುಚ್ಚುದು ಹೇಳಿರೆ ಸಮಂಜಸವೋ?
ಉನ್ನತ ಶಿಕ್ಷಣದ ಕೋಲೇಜಿನ ಬದಲು ಪ್ರಾಥಮಿಕ – ಪ್ರೌಢ ಶಿಕ್ಷಣದ ಶಾಲೆಗಳ ಆರಂಭ ಮಾಡುವ ಯೋಚನೆ ಬಂತಾಡ.
ಹಾಂಗಾಗಿ, ಆ ಸಮೆಯಲ್ಲೇ ಕೋಲೇಜಿನ ಒಟ್ಟಿಂಗೆ ಶಾಲೆಗೊ ಸುರು ಆತು.
ಅಂದಿಂದ ಇಂದಿನ ಒರೆಂಗುದೇ ನೀರ್ಚಾಲು ಶಾಲೆ ಹೆಮ್ಮೆಲಿ ತಲೆ ಎತ್ತಿ ನಿಂದುಗೊಂಡಿದ್ದು, ನಿರಂತರ ಹೊಸಮಕ್ಕಳ ದಿನಿಗೆಳಿ ಜೀವನಪಾಠವ ಕಲಿಶಿಗೊಂಡಿದ್ದು.
– ಇದು ಶಾಲೆ / ಕೋಲೇಜಿನ ಬಗ್ಗೆ, ತೂಷ್ಣಿಲಿ.
ವಿವರವಾಗಿ ಬೇಕಾರೆ, ಕೋಲೇಜಿಂಗೇ ಒಂದು ಬ್ಲೋಗು ಇದ್ದು(http://mschsnirchal.blogspot.com), ಅಲ್ಲಿ ನೋಡ್ಳಕ್ಕಡ.
ಆ ಬ್ಲೋಗಿನ ಅಜ್ಜನೇ ಉದ್ಘಾಟನೆ ಮಾಡಿದ್ದಾಡ.
ಹಳೆಕಾಲಲ್ಲಿ ಹುಟ್ಟಿ ಹೊಸತ್ತುಗಳ ಬಗ್ಗೆ ಆಸಕ್ತಿ ಎಷ್ಟಿತ್ತು ಹೇಳ್ತದು ಇದರ್ಲಿ ಗೊಂತಾವುತ್ತು – ದೊಡ್ಡಬಾವ° ಹೇಳಿದ°.
ಆ ಬ್ಲೋಗಿಂಗೆ ಈಗ ದೊಡ್ಡಭಾವನೇ ಸಂಪಾದಕ – ಹೇಳ್ತದು ನವಗೆ ಹೆಮ್ಮೆಯ ವಿಶಯ.
~
ನಮ್ಮ ಊರಿನ ವಿದ್ಯಾವಂತರ ಪೈಕಿ ನೀರ್ಚಾಲಿನ ಗೊಂತಿಲ್ಲದ್ದವಿಲ್ಲೆ.
ನೀರ್ಚಾಲು ಹೇಳಿತ್ತುಕಂಡ್ರೆ, ಅದೊಂದು ಸರಸ್ವತಿ ನದಿ.
ಒಂದು ತಲೆಮಾರು ಮದಲಿಂಗೆ ಅಂತೂ – ಪುತ್ತೂರು, ಮಡಿಕೇರಿ, ಮೈಸೂರು – ಹೊಡೇಣ ಶಾಲೆಗಳ ಕನ್ನಡಪಂಡಿತರ ಪೈಕಿ ನೂರಕ್ಕೆ ಎಪ್ಪತ್ತುಜೆನಂಗಳೂ ನೀರ್ಚಾಲಿಲಿ ಕಲ್ತೋರಡ, ಮಾಷ್ಟ್ರುಮಾವ ಏಳುತೋರುಸಿ ಹೇಳುಗು ಒಂದೊಂದರಿ.
ಎಷ್ಟು ಸಾವಿರ ಜೆನ ಅಲ್ಲಿ ಕಲ್ತು ಹೆರ ಬಯಿಂದವೋ –ಉಮ್ಮಪ್ಪ.
ಇದಾ, ಇದೊಂದು ಗಮ್ಮತ್ತು ಕೇಳಿ:
ಚೌಕ್ಕಾರುಮಾವನ ಅಪ್ಪ – ನೀರ್ಚಾಲು ಕೋಲೇಜಿಲಿ ಕಲ್ತದಡ.
ಚೌಕ್ಕಾರುಮಾವನೂ – ನೀರ್ಚಾಲು ಕೋಲೇಜಿಲಿ ಕಲ್ತೋರು.
ಚೌಕ್ಕಾರುಮಾವನ ಮಗ -ಚೌಕ್ಕಾರುಭಾವ – ನೀರ್ಚಾಲು ಶಾಲೆಲಿ ಕಲ್ತದು.
ಚೌಕ್ಕಾರುಮಾವನ ಪುಳ್ಳಿ – ನೀರ್ಚಾಲು ಶಾಲೆಲಿ ಕಲ್ತದು..
ಚೌಕ್ಕಾರುಮಾವನ ಪುಳ್ಳಿಗೆ ಮದುವೆ ಆಗಿ, ಅವರ ಮತ್ತಾಣ ತಲೆಯೂ ಅಲ್ಲೇ ಕಲಿಗಷ್ಟೆ…
– ಹೀಂಗೆ ಎಷ್ಟು ಮನೆಗೊ, ಎಷ್ಟು ತಲೆಗೊ ಇದ್ದೋ.. ಸರಸ್ವತಿಗೆ ಮಾಂತ್ರ ಅರಡಿಗಷ್ಟೆ.
ಅದಿರಳಿ.
~
ಕೋಲೇಜು ಇದ್ದು, ಶಾಲೆ ಸುರು ಆತು – ಹೇಳಿ ಮಾತಾಡುವಗ ಆ ಬೆಳವಣಿಗೆಗಳ ಹಿಂದೆ ಘಟ್ಟಿ ಜೆನ ಇದ್ದವು ಹೇಳಿಯೇ ಅರ್ತ,
ಎಲ್ಲ ಸಂಸ್ಥೆಗೂ ಹಾಂಗೇ, ಈ ಸಂಸ್ಥೆಗುದೇ.
ನೀರ್ಚಾಲು ಮಹಾಜನ ಕೋಲೇಜಿನ ಪ್ರತಿ ಏಳುಬೀಳುಗಳ ಎದುರಿಸಿ ಧೈರ್ಯಲ್ಲಿ ಮುಂದೆ ತೆಕ್ಕೊಂಡು ಹೋದ ವೆಗ್ತಿತ್ವವೇ ನಮ್ಮ ಕಂಡಿಗೆ ಅಜ್ಜ.
ಸಮೋಸಲ್ಲಿ ’ಅವು ಹೋದವು’ ಹೇಳಿಯೇ ಇದ್ದಪ್ಪಗ ಒಪ್ಪಣ್ಣಂಗೆ ಅಷ್ಟುದೇ ಬೇಜಾರಾದ್ಸು.
ಹಾಂಗೆ, ಕೋಲೇಜಿನ ಬಗ್ಗೆ ಇದ್ದ ಎಂಗಳ ಮಾತುಕತೆ ಕ್ರಮೇಣ ಅಜ್ಜನ ಬಗ್ಗೆ ಮುಂದುವರುದತ್ತು.
~
ಕಂಡಿಗೆ ಅಜ್ಜನ ಕಂಡಿದಿರೋ?
ಸಾಮಾನ್ಯ ನಮ್ಮ ಊರಿಲಿದ್ದೊಂಡು ಅವರ ಕಾಣದ್ದವು ಅಪುರೂಪವೇ ಸರಿ!
ನಿಂಗೊಗೆ ಗುರ್ತ ಇಲ್ಲದ್ದೆ ಹೋಗಿದ್ದರೆ, ಅವರ ಗುರ್ತ ಅಪ್ಪಲೆ ಮೊನ್ನೆ ಬೈಲಿಲಿ ಮಾತಾಡಿದ ಶುದ್ದಿಯೇ ಇದ್ದು.
ದೊಡ್ಡಬಾವಂದೇ, ಶ್ರೀಅಕ್ಕಂದೇ ಸೇರಿ ಬೈಲಿಲಿ ಕಂಡಿಗೆ ಅಜ್ಜನ ಇತಿಹಾಸದ ಒರ್ತಮಾನ ಹೇಳಿದ್ದವು. (ಸಂಕೊಲೆ)

ಅಲ್ಲಿ ಹೇಳಿದ ವಿಚಾರಂಗೊ ಅಷ್ಟೇ ಅಲ್ಲದ್ದೆ, ಕೆಲವು ಅಪೂರ್ವ ಸಂಗತಿಗಳ ದೊಡ್ಡಬಾವ ವಿವರುಸಲೆ ಸುರುಮಾಡಿದ°; ಕೇಳಿಗೊಂಡು ಹೋದ ಹಾಂಗೇ ರೋಮಾಂಚನ ಅಪ್ಪಲೆ ಸುರುಆತು ಒಪ್ಪಣ್ಣಂಗೆ.
ಒಟ್ಟಿಂಗೇ, “ಛೇ, ಇನ್ನಿಲ್ಲೆನ್ನೆ” ಹೇದು ಬೇಜಾರವೂ ಅಪ್ಪಲೆ ಸುರು ಆತು.
~

ಬ್ಲೋಗು ಉದ್ಘಾಟನೆ ಮಾಡಿದ ಅಜ್ಜ!

ಸುಸಂಸ್ಕೃತ ಮನೆತನಲ್ಲಿ ಹುಟ್ಟಿ, ಸುಶಿಕ್ಷಿತನಾಗಿ ಬೆಳದು, ಕೋಲೇಜಿಲಿ ಸೇವೆ ಮಾಡಿತ್ತಿದ್ದವು.
ಈಗಾಣ ತಲೆಮಾರು ಹುಟ್ಟೇಕಾರೆ ಮದಲೇ ಅವು ಸೇವೆಂದ ರಿಟೇರ್ಡು. ರಿಟೇರ್ಡು ಅಪ್ಪ ಮದಲು ಕೋಲೇಜಿನ ಪ್ರಿನ್ಸಿಪಾಲು.
ಹಾಂಗಾಗಿ ಕಂಡಿಗೆ ಪ್ರಿನ್ಸುಪಾಲು – ಹೇಳಿಯೂ ಹೇಳ್ತವು ಅವರ ಪ್ರೀತಿಲಿ.
ಸಂಸ್ಕೃತಲ್ಲಿ ಹೇಳ್ತರೆ ಮಹೋಪಾಧ್ಯಾಯ!

ಶಿಸ್ತು, ಪಾರದರ್ಶಕತೆ, ಪ್ರೀತಿಗೆ ಆದರ್ಶಪ್ರಾಯರಾಗಿದ್ದು ಮಕ್ಕೊಗೆ ಪ್ರೀತಿಯ ಗುರುಗೊ ಆಗಿದ್ದಿದ್ದವಾಡ
ರಿಟೇರ್ಡು ಆದ ಮತ್ತೆ ಮೇನೇಜುಮೆಂಟಿಲಿ ಇದ್ದೊಂಡು ಮೇನೇಜು ಮಾಡಿಗೊಂಡಿತ್ತಿದ್ದವಲ್ಲದೋ – ಹಾಂಗೆ, ಈಗಾಣ ಮಾಷ್ಟ್ರಕ್ಕೊಗೆ ಪ್ರೀತಿಯ ’ಮೇನೇಜರು’ ಅಡ.
ಬೆಂಗುಳೂರು ಕಂಪೆನಿಲಿ ಇಪ್ಪ ನಮುನೆಯ ಮೇನೇಜರು ಅಲ್ಲ – ಪ್ರತಿಯೊಬ್ಬನನ್ನೂ ಸ್ವಂತ ಮಗ / ಪುಳ್ಳಿಯ ನಮುನೆ ನೋಡಿಗೊಂಬ ತೀರ್ಥರೂಪ ಸಮಾನ – ಮೇನೇಜರು.
ಒಂದು ತಲೆಮಾರು ಕಾಲ ಹಾಂಗಿಪ್ಪ ಸ್ಥಾನಲ್ಲಿ ಕೂದುಗೊಂಡು, ಹೆಸರು ಹಾಳು ಮಾಡದ್ದೆ ಇರೆಕ್ಕಾರೆ ಎಷ್ಟು ನಿಷ್ಠೆ ಬೇಕು – ನಿಂಗಳೇ ಯೋಚನೆ ಮಾಡಿ.
~

ಕಾಸ್ರೋಡಿನ ಕೇರಳರಾಜ್ಯಕ್ಕೆ ಸೇರುಸಿದ ಮಾರಿತಪ್ಪಿನ ವಿರೋಧಿಸಿ ನಮ್ಮ ಹೆರಿಯೋರು ಹಲವರು ’ಸಂಗ್ರಾಮ’ ಮಾಡಿತ್ತಿದ್ದವು ಅಲ್ಲದೋ?
ಆ ಹೋರಾಟದ ಮುಂಚೂಣಿಲಿ ನಿಂದ ಕನ್ನಡದ ಕಟ್ಟಾಳುಗಳಲ್ಲಿ ಇವುದೇ ಒಬ್ಬ°.
ಮುಂದೆ ಕನ್ನಡ ಭಾಶೆಯನ್ನೇ ಜೀವಾಳ ಆಗಿ ಮಡಗಿ ಒಂದು ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದವು. ಓಟಿಂಗೂ ನಿಂದವು, ಆದರೆ ಅದೃಷ್ಟ ಅವರೊಟ್ಟಿಂಗೆ ಇದ್ದತ್ತಿಲ್ಲೆ.
ಕನ್ನಡ ಶಾಲೆಯ – ಕನ್ನಡ ಮಾಂತ್ರ ಇಪ್ಪ ಶಾಲೆಯ – ಶತಮಾನದ ಕಾಲ ನೆಡೆಶಿಂಡು ಬಪ್ಪದು ನೋಡಿರೆ ಅವರ ಕನ್ನಡಸೇವೆ ಅರ್ಥ ಅಕ್ಕು.
ಈಗಂತೊ – ಗಡಿನಾಡಿನ ಕನ್ನಡ ಹೋರಾಟಂಗೊಕ್ಕೆ ನಾವಿಕನ ಕಳಕ್ಕೊಂಡ ಅನುಭವ.

ಅಂತೇ ಷ್ಟೇಜಿಲಿ ನಿಂದೊಂಡು ’ಕನ್ನಡ ಉಳಿಸಿ’ ಹೇಳುದು ಸುಲಬ.
ಆದರೆ, ಮಲೆಯಾಳ ರಾಜ್ಯಲ್ಲಿ ತಲೆಯೆತ್ತಿ ನಿಂದು, ಕನ್ನಡ ಮಾಧ್ಯಮ ಶಾಲೆಯ ನಡೆಶಿ, ಸಾವಿರಾರು ಕನ್ನಡ ವಿದ್ಯಾರ್ಥಿಗಳ ಹುಟ್ಟುಹಾಕಿ, ಆ ಮೂಲಕ ಕನ್ನಡವ ಚಿರಂತನ ಆಗುಸುದು ಸಣ್ಣ ಕೆಲಸವೋ?
ಅಲ್ಲಲೇ ಅಲ್ಲ!
ದುರದೃಷ್ಟವಶಾತ್ – ಗಡಿನಾಡ ಹೋರಾಟಗಾರ ಹೇಳುವಗ ನವಗೆ ಪಕ್ಕನೆ ನೆಂಪಪ್ಪದು ಬೇರೆ ಒಂದು ಜೆನರ.
ಎಲ್ಲವೂ ರಾಜಕೀಯ – ಹೇಳುಗು ಆಚಮನೆ ಕುಂಞಣ್ಣ! ;-(
~
ಅದಪ್ಪು, ಕೋಲೇಜು ಹೋಗಿ ಶಾಲೆ ಬತ್ತು – ಹೇಳ್ತ ಪರಿಸ್ಥಿತಿ ಉಂಟಾತಲ್ಲದೋ –  ಶಾಲೆಗೆ ಹೆಸರೆಂತರ ಮಡಗುತ್ಸು?
ಮಹಾಜನ ಶಾಲೆ – ಹೇಳಿ ಮಡಗಲಾವುತಿತು; ಆದರೆ ಹಾಂಗೆ ಮಡಗಿದ್ದವಿಲ್ಲೆ ಅಜ್ಜ.
ಬದಲಾಗಿ – ಮಹಾಜನ ಸಂಸ್ಕೃತ ಕೋಲೇಜು ಶಾಲೆ – ಹೇಳಿ ಹೆಸರು ಮಡಗಿದವು.
ಇಲ್ಲಿ ಒಂದು ಸಂಸ್ಕೃತ ಕೋಲೇಜು ಇದ್ದತ್ತು – ಹೇಳ್ತ ಸೂಚನೆಯ ಅದರ ಹೆಸರಿಲೇ ಸೇರುಸಿದವು.
ಸ್ವಾಭಿಮಾನಿಯಾದವಂಗೆ ಪುನಾ ಇಲ್ಲಿ ಸಂಸ್ಕೃತ ಕೋಲೇಜಿನ ಮಾಡೇಕು – ಹೇಳಿ ನೆಂಪುಮಾಡುಸುಗು ಆ ಹೆಸರು!
ಯಬ್ಬಾ! ಅಜ್ಜನ ದೂರದೃಷ್ಟಿಯೇ!!
~
ಸರಳ – ಶುಭ್ರ ವೇಷಭೂಷಣಲ್ಲಿ ಸದಾ ಚೈತನ್ಯಲ್ಲಿ ಕಂಡುಗೊಂಡಿದ್ದಿದ್ದ ಅಜ್ಜನ ಬಗ್ಗೆ ಕತೆಗೊ-ಉಪಕತೆಗೊ-ದಂತಕತೆಗೊ ಅವು ನಮ್ಮ ಒಟ್ಟಿಂಗೆ ಇಪ್ಪಗಾಳೇ ಇದ್ದತ್ತು.
ಬ್ರಿಟಿಷರ ದಾಸ್ಯಂದ ಸ್ವತಂತ್ರ ಅಪ್ಪಲೆ ನೆಡೆತ್ತಾ ಇದ್ದಿದ್ದ ರಾಷ್ಟ್ರವ್ಯಾಪಿ ಹೋರಾಟಲ್ಲಿ ಒಂದಾದ ನಮ್ಮ ಊರಿನ ಕೆಲವೇ ಕೆಲವು ’ನಿಜವಾದ’ ಸ್ವಾತಂತ್ರ್ಯ ಹೋರಾಟಲ್ಲಿ ಒಬ್ಬರಾಗಿದ್ದಿದ್ದವಡ.
ಖಾದಿ ಒಸ್ತ್ರ ಧರಿಸಿದ ಅವರ ಸರಳತೆ ಕಾಂಬಗ ಇದು ಅಂದಾಜಿಆವುತ್ತು.
ಆದರೆ, ಸ್ವಾತಂತ್ರ ಓರಾಟ ಮಾಡಿದವಕ್ಕೆ ಈಗ ಗೋರ್ಮೆಂಟು ಪೆಂಶನು ಕೊಡ್ತಡ ಅಲ್ಲದೋ – ಇವು ಒಂದು ಪೈಸೆ ತೆಕ್ಕೊಂಡಿದವಿಲ್ಲೆ ಇಂದಿನ ಒರೆಂಗುದೇ!
ನಮ್ಮ ಸಮಾಜದ ಕೆಲವೇ ಕೆಲವು ಶ್ರೀಮಂತ-ಉದಾರಿಗಳಲ್ಲಿ ಇವುದೇ ಒಬ್ಬ – ಹೇಳಿ ಹಳಬ್ಬರು ನೆಂಪುಮಾಡುಗಡ.
ಬಡಪ್ಪತ್ತಿನ ಆ ಕಾಲಲ್ಲಿ ಕೈನೀಡಿ ಸಕಾಯ ಮಾಡ್ತ ಗುಣ ಇದ್ದಿದ್ದ ಇವರ ಅಂಬಗಳೇ ಊರವಕ್ಕೆ ಕೊಶಿ ಅಡ.
ಅಪ್ಪು ಮತ್ತೆ – ಒಂದು ವೇಳೆ ದಾನ ಮಾಡ್ತ ಉದಾರತೆ ಇಲ್ಲದ್ದೇ ಹೋಗಿದ್ದಿದ್ದರೆ ಆ ನೀರ್ಚಾಲು ಮಾರ್ಗದಕರೆಯ ಸ್ವಂತಜಾಗೆಲಿ ಶಾಲೆ ಕಟ್ಟುತಿತವೋ? ಲಾಯಿಕದ ತೋಟವೋ, ಗೆದ್ದೆಯೋ ಮಣ್ಣ ಮಾಡಿ ಬೆಳೆ ತೆಗೆತ್ತಿತವು.
ಅದರ್ಲೇ ಗೊಂತಾವುತ್ತು ಅವರ ಶ್ರೇಷ್ಠತೆ – ಹೇಳುದು ದೊಡ್ಡಬಾವನ ಅಭಿಮಾನದ ಮಾತುಗೊ.
~
ಇನ್ನೊಂದು ಆಸಕ್ತಿದಾಯಕ ಶುದ್ದಿ ಇದ್ದು..
ಯಕ್ಷಗಾನದ ಶೇಣಿಅಜ್ಜನೂ – ಇವುದೇ ಸಮಪ್ರಾಯದೋರು.
ಸೂರಂಬೈಲಿಲಿ ನಾಟಕ ಮಾಡ್ತರೆ, ಶೇಣಿಅಜ್ಜ ನಾಯಕ – ಕಂಡಿಗೆಅಜ್ಜ ನಾಯಿಕೆ; ಹೆಸರು ಹೋದ ಜೋಡಿ ಅಡ!
ಅರ್ಥಗಾಂಭೀರ್ಯಲ್ಲಿ ಶೇಣಿಅಜ್ಜ ಹೇಂಗೆ ಒಂದು ತೂಕವೋ, ಅಭಿನಯಲ್ಲಿ – ಸ್ತ್ರೀಪಾತ್ರಲ್ಲಿ ಕಂಡಿಗೆ ಅಜ್ಜಂದೇ ಒಂದು ತೂಕ ಅಡ! – ಜೆಗಿಲಿಲಿ ಕಾಲುನೀಡಿ ದೊಡ್ಡಮಾವ ಹೇಳಿದವು ಈ ಹಳೆಕತೆಯ!
~
ಸಂಸ್ಕೃತಿ-ಸಂಸ್ಕೃತ ಎರಡ್ರಲ್ಲಿಯೂ ವಿಶೇಷ ಹಿಡಿತ ಇದ್ದಿದ್ದ ಅಜ್ಜಂಗೆ ಮಾತಾಡುವಗ ಬೇಕಾದ ಸಂದರ್ಭಕ್ಕೆ ಬೇಕಾದ ಶ್ಲೋಕ-ಸುಭಾಷಿತಂಗೊ ನೆಂಪಾಗಿಂಡಿದ್ದತ್ತಾಡ.
ಧರ್ಮ – ನೀತಿ – ತತ್ವ – ತರ್ಕ –ಯೇವ ವಿಷಯಲ್ಲಿ ಬೇಕಾರೂ ಮಾತಾಡ್ತಷ್ಟು ಹಿಡಿತ ಇದ್ದತ್ತಾಡ.
ಮೊನ್ನೇಣ ಶುದ್ದಿಗೆ ಡಾಮಹೇಶಣ್ಣ ಒಪ್ಪಲ್ಲಿ ಹೇಳಿದ ಹಾಂಗೇ – ಈ ಅಜ್ಜ ಬಹುಭಾಷಾ ಪಂಡಿತರಾಗಿದ್ದಿದ್ದವಡ.
ಅಬ್ಬೆಬಾಶೆ ಹವ್ಯಕ, ನಾಡಭಾಶೆ ಕನ್ನಡ, ರಾಷ್ಟ್ರಭಾಶೆ ಸಂಸ್ಕೃತ, ಲೋಕಭಾಶೆ ಇಂಗ್ಳೀಶು – ನಾಲ್ಕರನ್ನೂ ಅರದು ಕುಡುದಿತ್ತಿದ್ದವಾಡ.
ಒಪ್ಪಣ್ಣಂಗೆ ಆ ಸುರುವಾಣ ಒಂದಾರೂ ಸಮಗಟ್ಟು ಬತ್ತನ್ನೇ – ಹೇಳ್ತದು ಸಮದಾನ!
~

ಇನ್ನೆರಡೊರಿಶಲ್ಲಿ ನೀರ್ಚಾಲು ಶಾಲೆಯ ’ಶತಮಾನೋತ್ಸವ’ ಇದ್ದಲ್ಲದೋ – ಆ ಸಮೆಯಲ್ಲಿ ಬೈಲಿಲಿ ಅಜ್ಜನ ಬಗ್ಗೆ ಮಾತಾಡಿಯೇ ಮಾತಾಡ್ತಿತು ನಾವು.
ಸಚಿನ್ನ ನೂರು ಮಾಡದ್ರೆ ಅಷ್ಟೇ ಹೋತು, ಆದರೆ ಕಂಡಿಗದಜ್ಜನ ಹಾಂಗಿಪ್ಪ ಚಿನ್ನಂಗೊ ನೂರು ಮಾಡದ್ರೆ ನಿಜವಾಗಿಯೂ ಸಮಾಜಕ್ಕೆ ದೊಡ್ಡ ನಷ್ಟ.
ಆದರೆ ಅಷ್ಟುಸಮೆಯ ಕಾಲ ಕಾಯಿದನಿಲ್ಲೆ, ಕೆಲಸ ಮಾಡಿದ್ದು ಆತು, ಇನ್ನು ಮೇಗಂಗೆ ಬಾ – ಹೇಳಿಗೊಂಡು ಕರಕ್ಕೊಂಡೇ ಹೋದ.
ಛೇ, ಇಷ್ಟು ಬೇಗ ಹೋಪಲಾವುತಿತಿಲ್ಲೆ – ಹೇಳಿ ಅನುಸುತ್ತು ಒಂದೊಂದರಿ.
ನಮ್ಮ ಬಿಟ್ಟಿಕ್ಕಿ ಹೋದವು.

ಅಜ್ಜ ಮತ್ತೊಂದರಿ ನಮ್ಮ ಊರಿಲೇ ಹುಟ್ಟಿಬಪ್ಪ ಹಾಂಗೆ ಆಗಲಿ.
ಮಹಾಜನತೆಗೆ ಕೊಟ್ಟ ಅಪಾರ ಕೊಡುಗೆ ಇನ್ನೂ ವೃದ್ಧಿ ಆಗಲಿ.
ನಮ್ಮೆಲ್ಲರನ್ನೂ ಮತ್ತೊಂದರಿ ಮುನ್ನಡೆಶಲಿ – ಹೇಳ್ತದು ಬೈಲ ಸಮಸ್ತರ ಪರವಾಗಿ ನಮ್ಮೆಲ್ಲರ ಆಶಯ – ಹೇಳಿ ದೊಡ್ಡಾವ ಹೇಳುವಗ ಎಂಗೊಗೆಲ್ಲರಿಂಗೂ ಬೇಜಾರಾದ್ದು ಅಪ್ಪು.
ನಿಂಗೊಗೆ?

ಒಂದೊಪ್ಪ: ಮಹಾಜನ ನಿರ್ಮಾಣ ಮಾಡಿದ ಈ ಮಹನೀಯರ ಮಹಾನಿರ್ವಾಣ ಸಮಸ್ತ ಸಮಾಜಕ್ಕೇ ಸೂತಕ!

ಸೂ: ಕೆಲವು ಅಪೂರ್ವ ಪಟಂಗಳ ದೊಡ್ಡಬಾವ ತೋರುಸಿದವು. ಕೆಲವರ ಈ ಶುದ್ದಿಯ ಒಟ್ಟಿಂಗೆ ಅಂಟುಸಿದ್ದೆ.

32 thoughts on “ಮಹಾಜನ ಕಟ್ಟಿ ಮಹಾಜನರ ಬೆಳೆಶಿದ ಮಹೋಪಾಧ್ಯಾಯರ ಮಹಾವೆಗ್ತಿತ್ವ!

  1. ಖಂಡಿಗೆ ಅಜ್ಜನ ಬಗ್ಗೆ ಇಷ್ಟೆಲ್ಲ ಲಾಯಿಕದ ವಿವರ ಓದಿ ಖುಶಿ ಆತು, ಆ ಅಜ್ಜ ಇನ್ನು ಇಲ್ಲೆನ್ನೆ ಹೇಳಿ ಬೇಜಾರದೆ ಆತು.
    ಒಪ್ಪಣ್ಣ ಬರದ ಹಾಂಗೆ ಇನ್ನೊಂದರಿ ಹುಟ್ಟಿ ಬರಲಿ ಅಜ್ಜ…
    ಲಾಯಿಕದ ವಿವರಂಗೊ ಅಜ್ಜನ ಬಗ್ಗೆ.
    ~ಸುಮನಕ್ಕ

    1. ಸಾಕೇತದ ಪುಳ್ಯಕ್ಕೊಗೆ ಮಾಂತ್ರ ಅಜ್ಜ ಅಲ್ಲ, ಇವು ಬೈಲಿಂಗಿಡೀ ಅಜ್ಜ ಆಗಿ ನಮ್ಮ ಸಮಾಜಕ್ಕೆ ವಿದ್ಯಾಬುದ್ಧಿ ಕಲುಶಿಕ್ಕಿದವು.

  2. ಈ ಲೇಖನ ಓದುವಗ ಕಣ್ಣಿರು ಬ೦ತು..ಮತ್ತೆ ಒ೦ದರಿ ಆ ಶಾಲೆಗೆ ಹೊದ ಹಾ೦ಗೆ ಆತು.. ಖ೦ಡಿಗೆ ಪ್ರಿನ್ಸಿಪಾಲ್ ಬಾರದ್ದೆ ಎ೦ಗಳ ಶಾಲೆಲಿ ಯಾವ ಕಾರ್ಯಕ್ರಮವೂ ಆಗ.. ಅವರ ಕ೦ಚಿನ ಖ೦ಠ, ನೆನಪಾವುತ್ತು.. ನೀರ್ಚಾಲು ಶಾಲೆ ಹೇಳಿರೆ ಒಪ್ಪಣ್ಣನ ಬೈಲು ಇದ್ದ ಹಾ೦ಗೆ.. ನಮ್ಮವೇ ಮಾಷ್ಟಕ್ಕೊ.. ಮಕ್ಕಳೂ ಹೆಚ್ಚಿನವೂ ನಮ್ಮವೇ.. ಅ೦ತಹ ಶಾಲೆಲಿ ಕಲಿವ ಯೋಗ ಸಿಕ್ಕಿದ್ದಕ್ಕೆ ಹೆಮ್ಮೆ ಆವುತ್ತು..ಒಪ್ಪಣ್ಣ ಧನ್ಯವಾದ೦ಗೊ ಆತಾ..

  3. ಸಚಿನ್ ನೂರು ಮಾದದ್ದರೆ ಬೇಜಾರಿಲ್ಲೆ ಹೇಳಿ ಬರದ್ದದು ನೋಡಿ ಆನಂದ ಆತು,ಒಪ್ಪಣ್ಣೋ.ಬೇಜಾರದ ನಡುವಿಲ್ಲೊಂದೊಪ್ಪ.

    1. ಕೇಜಿಮಾವಾ..
      ವಿಷಯ ಅಪ್ಪೋಲ್ಲದೋ?
      ಈ ಅಜ್ಜ ಹೋದವು ಹೇಳಿ ಕೇಳ್ವುಅಗ ಒಪ್ಪಣ್ಣಂಗೆ ಸುರೂವಿಂಗೆ ಬಂದ ಎರಡು ಆಲೋಚನೆಗೊ:
      – ಚೆ, ಮಹಾಜನ ಕೋಲೇಜು ಬಪ್ಪೊರಿಶ ನೂರು ಮಾಡ್ತು. ಅಷ್ಟು ಸಮೆಯ ಇಪ್ಪಲಾವುತಿತು.
      – ಇವಕ್ಕೇ ನೂರು ಮಾಡಿಕ್ಕಿ ಹೋಪಲಾವುತಿತು. – ಹೇಳಿಗೊಂಡು.

      ಎಲ್ಲದಕ್ಕೂ ದೇವರು ಬಿಡೆಕ್ಕನ್ನೇ!

      1. ನಿಜ,ಹವ್ಯಕರಲ್ಲಿ ಇಂತವು ಅಪ್ರೂಪ.ಅವರ ಎನಗೆ ವ್ಯೆಯಕ್ತಿಕವಾಗಿ ತುಂಬಾ ವರ್ಷಂದ ಪರಿಚಯ.ಹವ್ಯಕ ಸ್ಂಪ್ರದಾಯಂಗಳ ಬಗ್ಗೆ ಅಧ್ಯಯನ ಮಾಡ್ತ ಒಂದು ಕೂಸಿನ ಹತ್ತರೆ ಅವರ ಕೇಳುದು ಸಹಜ ಹೇಳಿ ಆನು ಹೇಳಿದ ದಿನವೇ ಅವು ಹೋದ್ದು ಬೇಜಾರಾತು.

  4. ಖಂಡಿಗೆ ದೊಡ್ಡಪ್ಪನ ವ್ಯಕ್ತಿತ್ವವ ವಿಶದಪಡಿಸಿದ್ದಕ್ಕೆ ಧನ್ಯವಾದ. ನಮ್ಮ ಸಮಾಜಕ್ಕೆ ಮತ್ತು ಗಡಿನಾಡ ಕನ್ನಡಿಗರಿಂಗೆ ಒಂದು ದೊಡ್ಡ ವರದಾನವಾಗಿದ್ದ ವ್ಯಕ್ತಿ.

  5. ತುಂಬ ಬೇಜಾರದ ಸಂಗತಿ. ದೊಡ್ಡಭಾವನೊಟ್ಟಿಂಗೆ ಒಂದಾರಿ ಖಂಡಿಗೆ ಅಜ್ಜನ ಮನೆಗೆ ಹೋದ್ಸು ನೆಂಪಾತು. ತುಂಬ ಪ್ರೀತಿ, ಆತ್ಮೀಯತೆಲಿ ಮಾತಾಡ್ತ ಈ ಅಜ್ಜ° ಇನ್ನಿಲ್ಲೆ ಹೇಳುವಾಗ ಬೇಜಾರಾವುತ್ತು…

  6. ಈ ಮಹಾವೆಗ್ತಿತ್ವದ ಬಗ್ಗೆ ಜಾಸ್ತಿ ಗೊಂತಿತ್ತಿಲ್ಲೇ… ಸಕಾಲಿಕ ಲೇಖನ ಮೂಡಿ ಬಪ್ಪಲೆ ಕಾರಣರಾದ ಎಲ್ಲೋರಿಂಗೂ ಧನ್ಯವಾದಂಗ… ಗುರು ಎಂತರ ಹೇಳಿ ಅರ್ಥ ಮಾಡಿಗೊಲ್ಳೆಕ್ಕಾರೆ ಶಿಷ್ಯನ ನೋಡೆಕ್ಕಡ… ಈ ಬೈಲಿಲ್ಲಿಪ್ಪ ಒಬ್ಬೊಬ್ಬ ‘ಮಹಾಜನ’ ವ ನೋಡಿದರೂ ಮತ್ತೊಂದರಿ,ಮಗದೊಂದರಿ ಆ ವ್ಯಕ್ತಿತ್ವಕ್ಕೆ ನಮನ ಸಲ್ಲಿಸುತ್ತು ಮನ…

    1. ನೀರ್ಚಾಲು ಕೋಲೇಜು ಶಾಲೆಂದ ಹೆರಬಪ್ಪ ಒಬ್ಬೊಬ್ಬ ಮಹಾಜನರ ರೂಪಲ್ಲಿಯೂ ಈ ಮಹಾಜನರ ವೆಗ್ತಿತ್ವ ಇರ್ತು. ಅಲ್ಲದೋ ಜಯಕ್ಕಾ?
      ಧನ್ಯವಾದಂಗೊ

  7. ಎಂಗಳ ಶಾಲೆಯ ಎಂಗಳೆಲ್ಲೋರ ಪ್ರೀತಿಯ ಪ್ರಿನ್ಸಿಪಾಲ್ ಅಜ್ಜ° ನಮ್ಮೆಲ್ಲೋರನ್ನೂ ಬಿಟ್ಟಿಕ್ಕಿ ಹೋದ್ದು ಕೇಳುವಗ ತುಂಬಾ ಬೇಜಾರು ಆವುತ್ತು. ಅವರ ಬಗ್ಗೆ ಸಮಗ್ರ ಚಿತ್ರಣ ಕೊಟ್ಟು, ನುಡಿನಮನವ ಸಲ್ಲುಸಿದ ಒಪ್ಪಣ್ಣಂಗೆ ಧನ್ಯವಾದಂಗೊ. ಆನುದೆ ಮಹಾಜನ ಶಾಲೆಲಿ ಕಲ್ತದು ಹೇಳಿಯೊಂಬಲೆ ತುಂಬಾ ಹೆಮ್ಮೆ ಅನುಸುತ್ತು. ಖಂಡಿಗೆ ಅಜ್ಜನ ಹತ್ರಂದ ಕಂಡು, ಅವರ ಪ್ರೀತಿ ಆಶೀರ್ವಾದಂಗಳ ಪಡಕ್ಕೊಂಡ ಆನು ಧನ್ಯ. ಶ್ರೀಯುತರ ಆತ್ಮಕ್ಕೆ ಚಿರಶಾಂತಿಯ ಕೋರುತ್ತೆ. ಲೇಖನ, ಎನ್ನ ಹೈಸ್ಕೂಲು ದಿನಂಗಳನ್ನು ನೆನಪಿಸಿತ್ತು. ಹನ್ನೊಂದು ಗಂಟೆಗೆ ಎರಡು ಪಿರೇಡುಗಳ ಎಡಕ್ಕಿಲ್ಲಿ ಓಡಿ ಹೋಗಿ ಕಟ್ಟೆಲಿ ಎರಡು ಗ್ಲಾಸು ಮಜ್ಜಿಗೆ ಕುಡುದಿಕ್ಕಿ ಬಂದೊಂಡಿತ್ತಿದ್ದು ನೆಂಪಾತು. ಅಶ್ವತ್ಠ ಕಟ್ಟೆಲಿ ಕೂದು ಪರೀಕ್ಷೆಗೆ ಓದಿಯೊಂಡಿದ್ದಿದ್ದು ನೆಂಪಾತು. ಶಾಲೆಲಿ ಕಲುಶಿದ, ಪ್ರೀತಿ
    ತೋರುಸಿದ ಗುರುಗೊ ಎಲ್ಲೋರನ್ನು ನೆಂಪಾತು.

    1. ಅಲ್ಲೇ ಕಟ್ಟೆ ಹತ್ತರೆ ಐಸ್ ಕೇ೦ಡಿ ಮಾರಿಕೊ೦ಡಿತ್ತು..ಅದರ ತಿ೦ದಿದಿಲ್ಲೀರಾ? ಆನೂ ಅದೇ ಶಾಲೆಲಿ ಕಲ್ತದು.. ನಿ೦ಗೊಗೆ ನೆನಪಾದ್ದೆಲ್ಲ ಎನಗೂ ನೆ೦ಪಾವುತ್ತು..

      1. ಪ್ರಿನ್ಸ್‍ಪಾಲ್ ರು ಬಂದು ಹಳೆ ಲೈಬ್ರೆರಿಯ ಹತ್ರಾಣ ರೂಮಿಲ್ಲಿ ಕೂರುಗು,ಪ್ಯೂನ್ ಗೋವಿಂದ ನಾಯ್ಕ/ಫಕ್ಕೀರ ಅವಕ್ಕೆ ಟೈಪು ಮಾಡ್ಳೆ ಟೈಪುರೈಟರ್ ನ ಬೊಳುಂಬು ಹೆಡ್ ಮಾಷ್ಟ್ರ ಆಫ಼ೀಸಿಂದ ತೆಕ್ಕಂಡು ಬಕ್ಕು,ಈ ಪ್ರಿನ್ಸುಪಾಲ್ ದೊಡ್ಡಪ್ಪ ತುಂಬಾ ಹೊತ್ತು ಟೈಪು ಮಾಡಿಕ್ಕಿ, ಹೆಡ್ ಮಾಷ್ಟ್ರ ಹತ್ತರೆ ಮಾತಾಡಿಕ್ಕಿ, ಸೊಸೈಟಿ ಆಫ಼ೀಸಿಂಗೆ ಹೋಕು-ಇದು ಎನಗೆ ನೆಂಪಾವುತ್ತ ಇಪ್ಪ ಖಂಡಿಗ ದೊಡ್ಡಪ್ಪನ ಪ್ರಿನ್ಸುಪಾಲ್ ರೂಪ-ಅವರ ಆತ್ಮಕ್ಕೆ ಶಾಂತಿ ಸಿಗಲಿ ಹೇಳಿ ದೇವರಲ್ಲಿ ಪ್ರಾರ್ಥಿಸುತ್ತೆ

        1. ಹಳೆವಿದ್ಯಾರ್ಥಿಗಳ ಮಧುರ ನೆಂಪು ಬೈಲಿಲಿ ಕೊಶಿ ಕೊಟ್ಟತ್ತು.
          ಅಜ್ಜ ಅಂತೂ ಅವ್ವೇ ಕಟ್ಟಿದ ಸಾಮ್ರಾಜ್ಯಲ್ಲಿ ಮಿಂಚಿ ನೆಂಪೊಳಿವ ಕೆಲಸ ಮಾಡಿ ಮರೆ ಆಯಿದವು.
          ಅಲ್ಲದೋ?

  8. ಖಂಡಿಗ ಅಜ್ಜನ ನೋಡಿ ಗೊಂತಿಲ್ಲೆ, ಆದರೆ ಅವರ ಹಲವಾರು ಸಾಧನೆಗೊ, ಸಾಮಾಜಿಕ ಕಾರ್ಯಂಗಳ ಬಗ್ಗೆ ಕೇಳಿ ಗೊಂತಿದ್ದು. ಅವರ ವೆಗ್ತಿತ್ವವ ವಿಚಾರ ಮಾಡುವಗ ಕೋಟದ ಕಾರಂತಜ್ಜನ ನೆಂಪಾವುತ್ತು. ಒಬ್ಬ “ಕಡಲತಡಿಯ ಭಾರ್ಗವ” ಅದರೆ, ಖಂಡಿಗದ ಅಜ್ಜ “ಗಡಿನಾಡಿನ ಶ್ರೀ ರಾಮ” !

    1. { ಗಡಿನಾಡಿನ ಶ್ರೀ ರಾಮ }
      ಭಾರೀ ಲಾಯಿಕಾಯಿದು ಈ ಬಿರುದು. ಪೈಕಿಯೋರಿಂಗೆ ಸಲಹೆ ಕೊಡುವನೋ!?

  9. ಸಕಾಲಿಕ ಲೇಖನ ಒಪ್ಪಣ್ಣ..
    ಅಗಲಿದ ಮಹಾ ಚೇತನಕ್ಕೆ ಮತ್ತೊಂದರೆ ಚಿರ ಶಾಂತಿ ಕೋರ್ತಾ ಇದ್ದೆ

  10. ಮಹಾನ್ ಚೇತನದ ಆತ್ಮಕ್ಕೆ ಶಾ೦ತಿ ಸಿಕ್ಕಲಿ.

  11. ಅವಕ್ಕೆ ವೋಟಿಲಿ ಸೋಲಾದಿಕ್ಕು-ಆದರೆ ಘನತೆ ಗೌರವಕ್ಕೆ ಸೋಲಾಯಿದಿಲ್ಲೆ.
    ಅವರ ಆತ್ಮಕ್ಕೆ ಚಿರಶಾಂತಿ ಇರಲಿ.
    ಉತ್ತಮ ಲೇಖನ ಒಪ್ಪಣ್ಣ.

    1. { ಆದರೆ ಘನತೆ ಗೌರವಕ್ಕೆ ಸೋಲಾಯಿದಿಲ್ಲೆ. }
      ನೂರಕ್ಕೆ ನೂರರಷ್ಟು ನಿಜವಾದ ಮಾತು ಗೋಪಾಲಣ್ಣಾ.
      ಅಂಬಗಾಣ ಸ್ಥಳೀಯ ಜೆನಂಗಳ ಮನಸ್ಥಿತಿ ಹೇಂಗಿತ್ತೋ – ಅದಕ್ಕೆ ಅನುಸರಿಸಿ ಫಲಿತಾಂಶ ಬಂತು. ಅಷ್ಟೆ.

      ಈಗಂತೂ – ಓಟಿಲಿ ಗೆದ್ದೋನು ಸೋತ, ಸೋತೋನು ಸತ್ತ – ಹೇಳುಲಕ್ಕು. ಅಲ್ಲದೋ?

  12. ಸಮಗ್ರ ಶುದ್ದಿ. ಖಂಡಿಗೆ ಅಜ್ಜನ ಒಂದರಿ ಕಂಡವಂಗೆ ಎಂದಿಂಗೂ ಅವರ ವ್ಯಕ್ತಿತ್ವ, ಆವರ ಹಸನ್ಮುಖ ಮರೆಯ.
    ಯಕ್ಷಗಾನ ಹವ್ಯಾಸ ಇತ್ತು ಹೇಳಿ ಗೊಂತಿತ್ತು. ‘ಶೇಣಿಅಜ್ಜ ನಾಯಕ – ಕಂಡಿಗೆಅಜ್ಜ ನಾಯಿಕೆ’, ಬಹುಶಃ ಇದು ಎನ್ನ ಹಾಂಗಿರ್ತವಕ್ಕೆ ಹೊಸತ್ತೇ! ಅಜ್ಜ ಬರೇ ವ್ಯಕ್ತಿ ಆಗಿರದ್ದೆ ಸಮಾಜಕ್ಕೆ ಒಂದು ಶಕ್ತಿಯಾಗಿಯೇ ಇತ್ತಿದ್ದವು ಎಂಬುದು ನಿಸ್ಸಂದೇಹ. ಅವರ ಬಗ್ಗೆ ಸಕಾಲಿಕ ಇಲ್ಲಿ ಬರದ ಒಪ್ಪಣ್ಣ ಧನ್ಯ. ಲಕ್ಷೋಪಲಕ್ಷ ಕಂಬನಿಗಳ ಜೊತೆಲಿ ನಾವೂ ಒಂದು.

    1. ಚೆನ್ನೈಭಾವಾ..
      { ಶೇಣಿಅಜ್ಜ ನಾಯಕ – ಕಂಡಿಗೆಅಜ್ಜ ನಾಯಿಕೆ } ಈ ವಿಶಯ ನವಗೂ ಹೊಸತ್ತೇ. ದೊಡ್ಡಮಾವ ಹೇಳುವಗ ಕಣ್ಣು ದೊಡ್ಡಾಯಿದು ನಮ್ಮದು ; ಆಶ್ಚರ್ಯಲ್ಲಿ!!

      ಹವ್ಯಾಸಿ ಆಗಿದ್ದ ಕಾರಣ ಶೇಣಿಅಜ್ಜನ ಹಾಂಗೆ ಹೆಸರು ಮಾಡಿಗೊಂಡಿದವಿಲ್ಲೆ ಆ ಕ್ಷೇತ್ರಲ್ಲಿ. ಅಷ್ಟೇ.

    1. ಪೆರುವದಣ್ಣಾ, ಆದರ್ಶ ಜೀವಿ ಅಜ್ಜ ಹೋಪಗ ಬೈಲಿಲಿ ಬೇರೆಂತೂ ಶುದ್ದಿ ಹೇಳುಲೆ ಮನಸ್ಸು ಕೇಳಿತ್ತಿಲ್ಲೆ ಇದಾ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×