Oppanna.com

ಮನೆಯ ಬೆನ್ನೆಲುಬು

ಬರದೋರು :   ಒಪ್ಪಣ್ಣ    on   27/09/2013    8 ಒಪ್ಪಂಗೊ

ಚಾತುರ್ಮಾಸ್ಯ ಇಡೀ ಮಾಣಿಮಠಲ್ಲೇ ಆತು.
ಕಿರೀಟೋತ್ಸವದ ಗವುಜಿಲಿ ಗುರುಗಳ ಕಳುಶಿ ಕೊಟ್ಟು ನಾವು ಇತ್ಲಾಗಿ ಬಂತು.
ನೆರೆಕರೆಲಿ ಒಂದು ಸುತ್ತು ಬಂದು ನೋಡುವಾಗ ಶುದ್ದಿ ಹಲವು ಆಗಿ ಕಳುದ್ದು!
ನಮ್ಮ ನೆರೆಕರೆಲೇ ಆದ ಒಂದು ಸಂಗತಿಯ ಶುದ್ದಿ ಆಗಿ ಮಾತಾಡುವೊ. ತುಂಬ ಊ..ದ್ದ ಶುದ್ದಿ ಆವುತ್ತೋ ಹೇದು ಹೆದರಿಕೆ.
ಸಾರ ಇಲ್ಲೆ, ಎರಡು ವಾರ ಆಗಿ ಮಾತಾಡುವೊ°, ಅಲ್ಲದೋ?

ಬಿರುಮ ಪೂಜಾರಿ ಹೇದರೆ ಊರಿಂಗೇ ದೊಡ್ಡ ಮನಿಶ್ಶ°.
ಕಾರ್ಬಾರದ ಕಾಲಲ್ಲಿ ನಿತ್ಯವೂ ಹೆಗಲಿಂಗೊಂದು ಟರ್ಕಿ ಶಾಲು ಹಾಕೆಂಡು ಬೈಲಕರೆಂಗೆ ಹೋಕು – ಹೊತ್ತೋಪಗ.
ಬೆಣ್ಚಿ ಕಂತುವನ್ನಾರ ಅಂಗುಡಿಮಾವನ ಕುರ್ಶಿಲಿ ಕೂದುಗೊಂಡು ಪಂಚಾತಿಕೆ ಮಾಡುಗು – ಕೋಳಿಕಟ್ಟ ಇಲ್ಲದ್ದ ದಿನ.
ಅಲ್ಲಿಂದ ಕಳ್ಳು ಅಂಗುಡಿಗೆ ಹೋಗಿ ರಜಾ ತೀರ್ಥ ತೆಕ್ಕೊಂಡು ಮನೆಗೆ ಬಕ್ಕು.
ಆರೂ ಅದರ ಬಿರ್ಮ ಹೇಳಿ ಹೇಳವು, “ಬಿರ್ಮಣ್ಣೆ” ಹೇಳುಗಷ್ಟೆ.
ಯಥಾಶೆಗ್ತಿ ಕೃಷಿ ಇಪ್ಪ ದೊಡ್ಡ ಮನೆತನ; ಅದಲ್ಲದ್ದೆ ಮರ ಕೊಯ್ತ ಒಯಿವಾಟು.
ಒಪ್ಪಣ್ಣಂಗೆ ನೆಂಪು ಬಪ್ಪಗಳೇ ಅದು ಒಯಿವಾಟು ಪೂರಾ ಬಿಟ್ಟು – ಅಜ್ಜಜ್ಜ ಆಯಿದು. ಮಾತು ಸರಿ ತೊಳಚ್ಚಿಗೊಂಡು ಇತ್ತಿಲ್ಲೆ.
ಆರೂ ಜೆನ ಮಕ್ಕೊಗೂ ಮದುವೆ ಕಳುದ ಮತ್ತೆ ಒಂದು ಒಳ್ಳೆ ದಿನ ನೋಡಿ ಅದು ಹೋತು. ಹೋಗಲಿ.
~
ಅದರ ಮಕ್ಕಳ ಪೈಕಿ ಒಂದರ ಹೆಸರು ಸಾಂತು – ಹೇದು.
ಒಳುದೋರ ಮೋನಪ್ಪಣ್ಣ, ಜಿನ್ನಪ್ಪಣ್ಣ, ಕಾಂತಪ್ಪಣ್ಣ – “ಅಣ್ಣ” ಸೇರ್ಸಿಯೇ ಊರೋರು ದಿನಿಗೆಳ್ತರೂ, ಈ ಸಾಂತುವಿನ ಮಾಂತ್ರ “ಸಾಂತು” ಹೇಳಿಯೇ ಹೇಳುಗಷ್ಟೆ.
ಎಂತಗೆ?! ಒಳುದೋರಷ್ಟು ಗಾಂಭೀರ್ಯದ ಜೀವನ ನೆಡೆಶುತ್ತಿಲ್ಲೆ ಅದು – ಹೇಳ್ತದು ಸ್ಪಷ್ಟ.
ಅಪ್ಪನ ಹಾಂಗೇ ಮರದ ಒಯಿವಾಟಿಲಿ ಜೀವನ ಸುರು ಮಾಡಿರೂ, ಮತ್ತೆ ಕಳ್ಳಿನ ರುಚಿ ರಜ್ಜ ಬಲಲ್ಲೇ ಸಿಕ್ಕಿತ್ತಾಡ.
ದುಡುದ್ದು ಪೂರಾ ಗಡಂಗಿಂಗೆ ಎರದತ್ತು; ಅಲ್ಲಿ ಸಿಕ್ಕಿದ್ದರ ತಲಗೆ ಎರದತ್ತು.
ತಲಗೇ ಎರದರೆ ಮತ್ತೆಂತಕ್ಕು? ಮಾರ್ಗದ ಕರೆಲಿ ಬಿದ್ದುಗೊಂಡು, ಆರಾರ ಹತ್ತರೆ ಬೈಗಳು ತಿಂದುಗೊಂಡು ಇರ್ಸು ಅದರ ಕ್ರಮ.
ವಿಪರೀತ ಕುಡಿತಂದಾಗಿ ಈಗ ದೇಹವೂ ಜೀರ್ಣ ಆಗಿಂಡಿದ್ದು.
ಹೊಟ್ಟಗೆ ಹಶು ಇಲ್ಲೆ, ಜಠರಕ್ಕೆ ಶೆಗ್ತಿ ಇಲ್ಲೆ!
ಈಗ ಸಾಂತುವಿಂಗೇ ಒರಿಶ ಹತ್ತರುವತ್ತು ಅಪ್ಪಲಾತು. ಅದರ ಅಣ್ಣಂದ್ರೆಲ್ಲಾ ಒಯಿವಾಟು ಅವರವರ ಮಕ್ಕೊಗೆ ಕೊಟ್ಟು ಪುಳ್ಯಕ್ಕಳ ಒಟ್ಟಿಂಗೆ ಆಡಿಂಡು, ಟೀವಿ ನೋಡಿಗೊಂಡು ಇದ್ದವು.
~
ಸಾಂತುಗೆ ಒಂದು ಹೆಂಡತ್ತಿ, ಮೂರು ಜೆನ ಮಕ್ಕೊ.
ಹೆಂಡತ್ತಿ ಎಷ್ಟು ತಾಳ್ಮೆ,ಸೌಮ್ಯ ಸ್ವಭಾವದ್ದು – ಹೇದರೆ, ಅದರಿಂದಾಗಿಯೇ ಆ ಮನೆ ಇಂದಿಂಗೂ ಒಳುದ್ದು – ಹೇಳ್ತವು ಎಲ್ಲೋರುದೇ. ಮದುವೆ ಆದ ಲಾಗಾಯ್ತು ಬೀಡಿ ಕಟ್ಟಿ, ಕೆಲಸಕ್ಕೆ ಹೋಗಿ, ಗೊಬ್ಬರ ಹೊತ್ತು, ಎಂತಾರು ಮಾಡಿ ರಜ ಪೈಶೆ ಮಾಡಿ ಮನಗೆ ತಂದುಗೊಂಡು ಇತ್ತು. ಮನೆಗೆತ್ತಿಯಪ್ಪದ್ದೇ ಸಾಂತು ಎದುರು ಸಿಕ್ಕಿರೆ ಸೌಟ ಕಡೆಲಿ ಎರಡು ಜೆಪ್ಪಿ ಆ ಪೈಸೆ ಎಳಕ್ಕೊಂಬಲಿದ್ದು. ಅದಲ್ಲದ್ದರೆ ಬಚಾವು, ಕೊತ್ತಂಬರಿ ಕರಡಿಗೆಲಿಯೋ, ದೇವರ ಪಟದ ಅಡಿಲಿಯೋ – ಐವತ್ತೋ-ನೂರೋ ಆಪತ್ಕಾಲಕ್ಕೆ ಒಳಿಶಿಗೊಂಡಿತ್ತು.
ಉಂಬಲೆ ತಿಂಬಲೆ ಭೂಮಿಲಿ ಬೆಳದರೂ – ಮಕ್ಕೊಗೆ ಶಾಲೆ ಕಲಿಯಲೆ ಪೈಶೆಯೇ ಆಯೇಕನ್ನೆ!
ಮಕ್ಕಳೂ ಹಾಂಗೇ – ಇಬ್ರು ಮಗಳಕ್ಕೊ ಆದ ಮತ್ತೆ ಹುಟ್ಟಿದ್ದು ಒಂದು ಮಗ.
ಮನೆಗೇ ಬೆಣಚ್ಚಾಗಲಿ ಹೇಳ್ತ ಲೆಕ್ಕಲ್ಲಿ ಸಾಂತುವಿನ ಹೆಂಡತ್ತಿ ಆ ಮಗಂಗೆ “ಸೂರ್ಯ” ಹೇದು ಹೆಸರು ಮಡಗಿತ್ತು.
ಬಾಯಿಮಾತಿಲಿ ದಿನಿಗೆಳುವಾಗ ಸೂರಿ ಆಗಿತ್ತು.
ಮಕ್ಕೊ ಎಲ್ಲೋರುದೇ ಉಶಾರಿಯೇ, ಅಪ್ಪನಾಂಗೆ.
ಸುರುವಾಣ ಮಗಳು ಒಂದೇ ಸರ್ತಿ ಪೈಲು,
ಎರಡ್ಣೇ ಮಗಳು ಎರಡು ಸರ್ತಿ ಪೈಲು;
ಮೂರ್ನೇದು ಮಗ – ಮೂರೇ ಸರ್ತಿ ಪಾಸು!! ಮತ್ತೆಲ್ಲ ಪೈಲೇ!!
ಮಾಡಾವಕ್ಕ ಶಾಲಗೆ ಹೋಪಗ ಅದರ ಕ್ಲಾಸಿಲಿದ್ದತ್ತು. ಮೂರೊರಿಶ ಕಳುದು ಒಪ್ಪಣ್ಣ ಹೋಪಗ ಒಪ್ಪಣ್ಣನ ಕ್ಲಾಸಿಲಿಯೂ ಇದ್ದತ್ತು.
ನಾಕೊರಿಶ ಕಳುದು ನೆಕ್ರಾಜೆ ಕುಂಞಕ್ಕ ಹೋಪಾಗ ಅದರ ಕ್ಲಾಸಿಲಿಯೂ ಇದ್ದತ್ತು!
ಹಾಂಗಿರ್ತ ಸೂರಿ ಅದು!
~
ಸೂರಿ ಸಣ್ಣ ಇಪ್ಪಾಗಳೇ ಭಾರೀ ಉಶಾರಿ ಅಡ; ಅದರ ಅಪ್ಪನ ಹಾಂಗೇ!
ಆರ್ನೇ ಒರಿಶಲ್ಲೇ ನಾಕು ಗ್ಲಾಸು ಕಳ್ಳು ಕುಡಿವಷ್ಟೂ ಉಶಾರಿ ಆಡ; ಅದರಿಂದ ಎರಡು-ಮೂರೊರಿಶ ದೊಡ್ಡೋರು – ಅಪ್ಪಚ್ಚಿ ದೊಡ್ಡಪ್ಪನ ಮಕ್ಕೊ – ಒಂದೇ ಗ್ಲಾಸಿಂಗೆ ತಲೆ ತಿರುಗೆಂಡು ಇದ್ದೋರ ಎದುರು ಇದು “ಹೀರೋ” ಆಗಿಂಡು ಇತ್ತಾಡ!
ಅದರ ಅಣ್ಣತಮ್ಮಂದ್ರು ಕಲಿತ್ತರಲ್ಲಿ ಉಶಾರಿ ಆದರೆ, ಇದು ಬಿಂಗಿ ಮಾಡ್ತರಲ್ಲಿ ಉಶಾರಿ. ಎಲ್ಲಾ ಮಾಷ್ಟ್ರನ ಕೈಂದ ಪೆಟ್ಟು ತಿಂದರೂ, ಪಾಪ ಓದಲೆ ಬಂದುಗೊಂಡಿತ್ತಿಲ್ಲೆ. ಅದರ ಅಮ್ಮಂಗೆ ಅದೇ ತಲೆಬೆಶಿ.
ಆದರೆ, ಸಿಂಗಾರ ತೆಗದು ಕೊಡ್ಳೆ, ಅಗತ್ಯಕ್ಕೆ ಬೊಂಡ ತೆಗದು ಕೊಡ್ಳೆ, ಹತ್ತಲೆಡಿಯದ್ದ ಮರಂದ ಗೆಲ್ಲು ಜಾರ್ಸಲೆ, ವಿಷತುಂಬಿದ ಹಾವಿಂಗೆ ವೆವಸ್ತೆ ಮಾಡ್ಳೆ – ಎಲ್ಲದಕ್ಕೂ ಈ ಸೂರಿಯೇ ಆಯೇಕು; ಎಲ್ಲೋರಿಂಗೂ.
ಸಣ್ಣ ಪ್ರಾಯಲ್ಲೇ ಊರಿಂಗೇ ಚಿರಪರಿಚಿತ ಆಗಿ ಹೋತು.
ಕುಡಿಯಲೆ ಉಶಾರಿಯೇ ಆದ ಕಾರಣ ಅದಕ್ಕೆ ಹೊಂದಿಗೊಂಡಿಪ್ಪ ಎಲ್ಲಾ ಗುಣಂಗಳೂ ಅದರ ಆಶ್ರಯಲ್ಲಿ ಬೆಳದತ್ತು. ಪಾನುಪರಾಗದ ನಮುನೆ ತುಪ್ಪುಸ್ಸಿ, ಬೀಡಿ ಸಿಗ್ರೇಟಿನ ನಮುನೆ ಎಳೆಸ್ಸು, ಹೊಗೆಸೊಪ್ಪಿನ ನಮುನೆ ಅಗಿಸ್ಸು – ಎಲ್ಲವುದೇ ಅಭ್ಯಾಸ ಆಗಿ ಹೋತು. ಮನೆಲಿ ಪಾಪ, ಅದರ ಅಪ್ಪಂಗೇ ಕುಡಿಯಲೆ ಪೈಶೆ ಸಾಲ್ತಿಲ್ಲೆ, ಇನ್ನು ಇದಕ್ಕೆಲ್ಲಿಂದ!
ಅಮ್ಮ ಹುಗ್ಗುಸಿ ಮಡಗುತ್ತ ಎಲ್ಲಾ ಮೂಲೆ-ಮೂಲೆಗೊ, ಕೋಣೆ ಕೋಣೆಗೊ ಮುಗುದ ಮತ್ತೆ – ಬೇರೆಂತರ?!
ಒಂದೇ ಅವಕಾಶ – ಶಾಲೆ ಬಿಟ್ಟು ಕೆಲಸಕ್ಕೆ ಹೋವುಸ್ಸು!!
~
ಅದರ ಅಣ್ಣತಮ್ಮಂದ್ರು ಶಾಲೆಗೆ ಹೋಗಿಂಡಿಪ್ಪಾಗಳೇ, ಸೂರಿ ಶಾಲೆ ಬಿಟ್ಟು ಕೆಲಸ ಸುರುಮಾಡಿತ್ತು.
ಕೆಲಸ ಎಂತರ? ಊರೋರ ನಮುನೆ ಸಾಬೀತಿನ ಕೂಲಿಕೆಲಸ ಅಲ್ಲ.
ಊರಿಂದ ಗಟ್ಟದ ಮೇಗೆಯೋ – ತೆಂಕ್ಲಾಗಿಯೋ ಹೋಪ ಲೋರಿಲಿ ಕಿಳಿ (ಕ್ಲೀನರು) ಆಗಿಂಡು ಇಪ್ಪ ಕಾರ್ಯ!
ಇಂದು ಮಡಿಕೇರಿ, ನಾಳೆ ಕೊಯಂಬುತ್ತೂರು, ನಾಳ್ತು ಚೆನ್ನೈ, ಮತ್ತಾಣ ವಾರ ಹೈದ್ರಾಬಾದು – ಒಂದೊಂದಿನ ಒಂದೊಂದೂರಿನ ಪ್ರಯಾಣ.
ಅಲ್ಲಲ್ಲಿ ಆಯಾ ಊರಿನ ಕುಡಿಸ್ಸು, ತಿಂನ್ಸು, ಅಗಿಸ್ಸು ಅಭ್ಯಾಸ ಮಾಡಿಂಡೇ ಮುಂದುವರಿವದು. ಹಾಂಗಾಗಿ ಹಲವೂರಿನ ರುಚಿಗೊ – ಅಭಿರುಚಿಗೊ ಅಭ್ಯಾಸ ಆತು. ಇದರೆಡಕ್ಕಿಲಿ ಸೂರಿಯ ಅಕ್ಕಂದ್ರಿಂಗೆ ಮದುವೆಯೂ ಆಗಿ ಕಳಾತು.
ಸೂರಿ ದೂರಕ್ಕೆ ದೂರವೇ ಒಳುದತ್ತು.
ಅದರ ಅಪ್ಪಂಗೆ “ಮಗೆ ಓಳುಳ್ಳೆ?” ಕೇಳಿರೆ ಗೊಂತೇ ಇಲ್ಲದ್ದ ಪರಿಸ್ಥಿತಿ.
ಅಮ್ಮಂಗೆ “ಮಗೆ ಎಂಚ ಉಳ್ಳೆ?” ಕೇಳಿರೆ ಉತ್ತರವೇ ಗೊಂತಿಲ್ಲದ್ದ ಬಗೆ!!
ಅಪುರೂಪಕ್ಕೊಂದೊಂದರಿ ಊರಿಂಗೆ ಬತ್ತು.
ನಾಕು ದಿನ ಮನೆಲಿ ನಿಲ್ಲುತ್ತು – ಅಪ್ಪಮ್ಮಂಗೆ ಅಷ್ಟೇ ಗೊಂತು.
ಎರಡ್ಣೇ ದಿನ ಕೈಕಾಲಿ ಆದ ಕಾರಣ ಅಮ್ಮನತ್ತರೆ ಪೈಸೆ ಕೇಳ್ಳೆ ಸುರು ಆವುತ್ತು. ಕೊಡದ್ರೆ ಅಪ್ಪಂಗೂ-ಅಮ್ಮಂಗೂ ಎಲ್ಲೋರಿಂಗೂ ಪೆಟ್ಟು ನಿಘಂಟೇ!!
~
ಸೂರಿಯ ದಾರಿ ಸುಮಾರು ತಪ್ಪಿದ್ದು, ಇನ್ನು ಸರಿ ಮಾಡುಸ್ಸು ಕಷ್ಟ – ಹೇದು ಅಮ್ಮಂಗೆ ಗೊಂತಾತು.
ಅಪ್ಪಮ್ಮಂಗೇ ಪೆಟ್ಟು ಹಾಕುತ್ತು, ಇನ್ನು ಒಳುದೋರಿಂಗೆ ಎಂತ ಗೆತಿ – ಹಾಂಗಾಗಿ ಸಾಂತುವಿನ ಅಣ್ಣತಮ್ಮಂದ್ರೂ ದೊಡ್ಡ ತಲೆ ಹಾಕಿದ್ದವಿಲ್ಲೆ. ತನ್ನ ಮಗನ ಅವಸ್ಥೆಗೆ, ಅನಿವಾರ್ಯವಾಗಿ ಒಂದು ನಿರ್ಧಾರ ತೆಕ್ಕೊಂಡತ್ತು ಅದರ ಅಮ್ಮ.
ಸಾಂತುವನ್ನೂ ಕರಕ್ಕೊಂಡು, ಬೇಜಾರಲ್ಲೇ ಆ ಮನೆಯ ಬಿಟ್ಟತ್ತು; ಅದರ ಅಪ್ಪನ ಮನೆಗೆ ಹೋತು.
ಅಲ್ಲಿಂದ ಮತ್ತೆ ಸೂರಿಯ ಅಪ್ಪಮ್ಮ ಸೂರಿಯ ಅಜ್ಜನಮನೆಲೇ ಆದವು. ಮನೆಲಿ ಬಾಗಿಲು – ಬೀಗ!
ಲೋರಿಯ ಕೆಲಸ ಮುಗುದಪ್ಪಗ ಸೂರಿ ಬಕ್ಕು. ನಾಕು ದಿನ ಮನುಗ್ಗು; ಪುನಾ ಹೋಕು, ಇನ್ನೆಲ್ಲಿಗೋ!
ಅಂತೂ – ಇಂತೂ ಹಲವೂರಿನ ಗುರ್ತ, ಪರಿಚಯ, ನೆಂಟಸ್ತನ ಬೆಳದೇ ಬೆಳದತ್ತು ಸೂರಿಗೆ.
~
ಹಾಂ, ನೆಂಟಸ್ತನ ಬೆಳದತ್ತು ಹೇಳಿದೆ ಅಲ್ಲದೋ – ಅಪ್ಪು.
ಒಂದರಿ ಊರಿಂಗೆ ಬಂದ ಸೂರಿ ಅದರ ಅಜ್ಜನ ಮನೆಗೆ ಹೋತು – ಅಪ್ಪಮ್ಮನ ಹುಡ್ಕೆಂಡು.
ಎಲ್ಲಿಯೋ ಅದರ ಸಂಪರ್ಕಲ್ಲಿ ಸಿಕ್ಕಿದ ಒಂದು ಮನೆಂದ ಕೂಸು ತಪ್ಪ ವಿಚಾರಲ್ಲಿ; ಮದುವೆಗೆ ಅಪ್ಪಮ್ಮನ ಕೈಲಿ ಪೈಶೆ ಕೇಳುಲೆ.
ಹೇಂಗಾರೂ – ಇಂದಲ್ಲ ನಾಳೆ ಮದುವೆ ಮಾಡಿ ಕಳಿಯೇಕು; ಅದಾಗಿ ಕೇಳುವಾಗಳೇ ಮುಗುಶಿ ಬಿಡುವೊ – ಮದುವೆ ವೆವಸ್ಥೆ ಸುರುಮಾಡಿತ್ತು ಸಾಂತುವಿನ ಹೆಂಡತ್ತಿ.
~
ಅಂತೂ- ಸೂರಿಯ ಮದುವೆ ಏರ್ಪಾಡು ಸುರು ಆತು. ಉಪಾಯಲ್ಲಿ ಮದುವೆಯೂ ಕಳಾತು.
ಕೂಸಿನ ಕಡೆಯೋರು ಹೇದರೆ ಬರೇ ಮನೆಯೋರು ಮಾಂತ್ರ. ಸೂರಿಯ ಕಡೆಯೋರು ಹೇದರೆ ಇದರ ಮನೆಯೋರುದೇ – ಒಟ್ಟಿಂಗೆ ಕಳ್ಳು ಕುಡಿಸ್ಸ ಕೆಲವು ಜೆನವುದೇ, ಸಣ್ಣಕೆ ಮದುವೆ ಕಳಾತು.
ಇಪ್ಪತ್ತೆರಡು ಒರಿಶಲ್ಲಿ ಮದುವೆ ಆತು – ಹೇದು ಮಾಷ್ಟ್ರುಮಾವ ಇಸವಿ ಲೆಕ್ಕ ಹಾಕಿ ಹೇಳಿದವು.
~
ಮದುವೆ ಆಗದ್ದೆ ಮರುಳು ಬಿಡ, ಮರುಳು ಬಿಡದ್ದೆ ಮದುವೆ ಆಗ – ಹೇದು ಟೀಕೆಮಾವ ಒಂದೊಂದರಿ ಟೀಕೆಮಾಡ್ಳಿದ್ದು. ಹಾಂಗೇ ಆತುದೇ, ಸೂರಿಗೆ ಮದುವೆ ಆದಪ್ಪದ್ದೇ, ಇಡೀ ವ್ಯವಸ್ಥೆಯೇ ಬದಲಾತು.
ಪ್ರೀತಿಯೇ ಇಲ್ಲದ್ದೆ ಬರಡಾಗಿದ್ದ ಸೂರಿಯ ಮನಸ್ಸಿಲಿ ಚೂರಿಬೈಲು ದೀಪಕ್ಕನ ಮಲ್ಲಿಗೆತೋಟದ ಹಾಂಗೆ ಹೂಗು ತುಂಬಿ ಬೆಳದತ್ತು!
ನಟ್ಟ ತಿರುಗೆಂಡಿದ್ದ ಹುಡುಗ ಈಗ ಮನೆಲೇ ಇಪ್ಪಲೆ ಸುರು ಆತು. ಹೇಳಿರೆ ನಂಬೆಯಿ ನಿಂಗೊ – ಕುಡಿವದರ ಬಿಟ್ಟೇ ಬಿಟ್ಟತ್ತು! ಮರಿಯಾದಿಯ ಕೆಲಸಂಗೊಕ್ಕೆ ಹೋಪಲೆ ಸುರು ಮಾಡಿತ್ತು. ಅಮ್ಮ ಮಾಡಿಗೊಂಡಿದ್ದ ನೆಟ್ಟಿ ಗೆದ್ದೆಲಿ ಬೆಳೆ ಬೆಳೆಶಿತ್ತು,
ಅಪ್ಪಮ್ಮ ಇನ್ನೊಂದು ಮನೆಲಿ ಇರ್ಸು ಎಂತಗೆ ಹೇದು, ಹೋಗಿ ಅವರನ್ನೂ ಕರಕ್ಕೊಂಡು ಬಂತು, ಚೆಂದಕೆ ನೋಡಿಗೊಂಡಿತ್ತು. ಒಟ್ಟಿಲಿ ಹೇಳ್ತರೆ ಸಭ್ಯ ಗ್ರಾಸ್ಥ ಆತು. ಇದೆಲ್ಲವೂ ಆದ್ಸು ಈಗ- ಐದಾರು ತಿಂಗಳಿಲಿ!
~
ಓ ಮನ್ನೆ ಆಟಿ ಕಳಾತಲ್ಲದೋ ಸೂರಿಗೆ ಹೊಸಾ ಆಟಿ.
ಉಂಗಿಲು ಸಿಕ್ಕಿತ್ತೋ – ಹೇದು ಮುಳಿಯಭಾವ ಕೋಂಗಿ ಮಾಡುಗು, ಆದರೆ ನವಗೆ ಆ ಸಂಗತಿ ಅರಡಿಯ.
ಆದರೆ ಆಟಿಲಿ ಮರಕೆಸವಿಂಗೆ ದರಿದ್ರವೋ? ಎಷ್ಟು ಕಮ್ಮಿ ಹೇದರೂ – ಒಂದು ಪತ್ರೊಡೆ ಮಾಡ್ಳೆ ತಕ್ಕ ಸಿಕ್ಕದೋ? ಸಿಕ್ಕುಗು.
ಅದೂ – ಸೂರಿಗೆ ಸಿಕ್ಕಿಯೇ ಸಿಕ್ಕುಗು.
ಪ್ರತಿ ಮರ, ಮರದ ಬುಡ, ಪೊದೆಲು ಎಲ್ಲವೂ ಅರಡಿಗಾದ ಜೆನ ಅಲ್ಲದೋ ಅದು; ಇಂಥಾ ಮರಲ್ಲಿ ಇಂಥಾ ಹಕ್ಕಿಯ ಗೂಡು ಇದ್ದು. ಇಂಥಾ ಮಾಟೆಲಿ ಇಂಥಾ ಮೊಲ ಇದ್ದು – ಹೇದು – ಪೂರ್ವಾಶ್ರಮದ ಅನುಭವ ಇದಾ.
ಪಾರೆ ಅಜ್ಜಿಯ ಸ್ಥಾನದ ಎದುರಾಣ ಹೊಡೆಲಿ ಒಂದು ಮರ ಇದ್ದು – ದೊ..ಡ್ಡದು. ಎಲ್ಲಿ ಇಲ್ಲದ್ದರೂ – ಆ ಮರಲ್ಲಿ ಮರಕೆಸವು ಇರ್ತು – ಹೇಳ್ತ ಸಂಗತಿ ಅರಡಿಗು ಸೂರಿಗೆ.
ಪ್ರೀತಿಯ ಹೆಂಡತ್ತಿ ಕೇಳಿತ್ತು, ಮರಚ್ಚೇವು ತಂದು ಕೊಡ್ಳೆಡಿಗೊ – ಹೇದು. ಇಲ್ಲೆ- ಹೇಳುದೇಂಗೆ!? ಸರಿ, ಸೀತ ಹೆರಟತ್ತು.
~
ಒರಿಶಂಪ್ರತಿ ಹತ್ತುತ್ತ ಮರವೇ ಅದು. ಹಲವಾರು ಒರಿಶಂದ ಸರೀ ಗುರ್ತ ಇದ್ದು ಆ ಮರಕ್ಕೆ ಹತ್ತಿ.
ಆ ಮರಲ್ಲಿ ಹಿಡಿಯಲೆ ಎಲ್ಲಿ ಗೆಂಟು ಇದ್ದು, ಎಲ್ಲಿ ಬಳ್ಳಿ ಇದ್ದು – ಎಲ್ಲವುದೇ ಅಭ್ಯಾಸ ಇಪ್ಪದೇ.
ದೊಡ್ಡ ಮರ ಆದರೂ, ಅದಕ್ಕೊಂದು ಕರಿಮಾದರಿ ಬಳ್ಳಿ ಇದ್ದ ಕಾರಣ ಹತ್ತಲೆ ಸುಲಬ ಇದಾ.
ಹಾಂಗೆ, ಹತ್ತಿಗೊಂಡು ಹೋತು – ಮೇಗೆಮೇಗೆ ಹೋಗಿಯೇ ಹೋತು. ಮಾದರಿ ಬಳ್ಳಿ ಹಿಡ್ಕೊಂಡು.
~
ಆದರೆ, ಈ ಬೇಸಗೆಲಿ ಸೊಪ್ಪು ಮಾಡ್ತ ಕಂತ್ರಾಟಿನೋರು ಈ ಬಳ್ಳಿಯ ಬುಡವನ್ನೂ ಕಡುದಿತ್ತಿದ್ದವು, ಬುಡ ಮಾಂತ್ರ ಕಡುದು, ಬಳ್ಳಿಯ ಹಾಂಗೇ ಬಿಟ್ಟ ಕಾರಣ ಹತ್ತುತ್ತ ಜೆನಕ್ಕೆ ಪಕ್ಕನೆ ಗೋಷ್ಟಿ ಆಯಿದಿಲ್ಲೆ. ಆ ಬಳ್ಳಿ ಬೇಸಗೆಂದ ಮಳೆಗಾಲ ಒರೆಂಗೆ ಒಣಗಿತ್ತು, ಮಳೆಗಾಲಲ್ಲಿ ಬೊದುಳಿ ಕುಂಬಾತು.
ಕೆಳ ರಜ್ಜ ಗಟ್ಟಿ ಇದ್ದರೂ – ಮೇಗೆ ಬರೇ ಕುಂಬು.
ಮೇಗೆ ಹತ್ತಿಂಡಿದ್ದ ಸೂರಿಗೆ –ದೇಹದಾಧಾರಕ್ಕೆ ಆ ಕುಂಬು ಬಳ್ಳಿಯನ್ನೇ ಹಿಡ್ಕೊಂಡದು – ಹೇದು ಅದಕ್ಕೆ ಗೊಂತೇ ಇತ್ತಿಲ್ಲೆ!! ಪಾಪ.
ಮೇಗೆಮೇಗೆಯೇ – ಹೋಗಿಂಡಿಪ್ಪಾಗಳೇ, ಅಪ್ಪಲಾಗದ್ದು ಆತು – ಆ ಕುಂಬು ಬಳ್ಳಿ ಕಡುದತ್ತು.
ಒತ್ತೆ ಮರ ಸರ್ತಕೆ ಹೋದ್ದರಲ್ಲಿ ಆಧಾರಕ್ಕೆ ಇದ್ದಿದ್ದ ಒಂದೇ ಒಂದು ಬಳ್ಳಿ ಇದು, ಅದುವೇ ಪೀಂಕಿ ಬಿದ್ದತ್ತು.
ಬಳ್ಳಿಯ ಒಟ್ಟಿಂಗೆ ಸೂರಿಯೂ ಬಿದ್ದತ್ತು!
~
ಸಣ್ಣಮಟ್ಟಿಂಗೆ ಮರಂದ ಬೀಳುದು, ಮೊಲವ ಹಿಡಿವಲೆ ಓಡುವಾಗ ಡಂಕಿ ಬೀಳುದು, ಎಸಡಿ (ಡೆಂಜಿ) ಹಿಡಿಯಲೆ ಹೋಪಾಗ ಜೆರುದು ಬೀಳುದು – ಇದೆಲ್ಲವೂ ಸಾಮಾನ್ಯ ಆ ಜೆನಕ್ಕೆ. ಆದರೆ, ಇಷ್ಟೆತ್ತರಂದ ಬೀಳುಸ್ಸು ಸಾಮಾನ್ಯ ಅಲ್ಲನ್ನೇ!
ಬಿದ್ದದರ್ಲಿ ತಾಗದ್ದೆ ಒಳಿಯಲೆ ಅದು ರಾಜ್ಕುಮಾರೋ? ತಾಗಿತ್ತು.
ತಾಗಿದ್ದೆಲ್ಲಿಗೆ?
ಅದು ದೊಡಾ ಕತೆ, ಬಪ್ಪ ವಾರ ಮಾತಾಡುವೊ… ಆಗದೋ?
~
ಸೂರಿಯ ಇಷ್ಟೂ ಜೀವನಲ್ಲಿ ಹೆಚ್ಚಿನ ಸಮೆಯ ಮನೆಂದ ಹೆರವೇ ಕಳುದತ್ತು.
ಬಾಲ್ಯಲ್ಲಿ ರಜ ಸಮೆಯ, ಮದುವೆ ಆದ ಮತ್ತೆ ರಜ ಸಮೆಯ – ಮಾಂತ್ರ ಅದು ಮನೆಲಿ ಇದ್ದದು.
ಈಗ ಮದುವೆ ಆದ ಮತ್ತೆ ಸರಿ ಆದರೂ – ಪೂರ್ವಾಶ್ರಮಲ್ಲಿ ದಾರಿ ತಪ್ಪಲೆ ಕಾರಣ ಎಂತರ?
ಅದರ ಬಾಲ್ಯಂದಲೇ ಮನೆಲಿ ಕುಡಿಯಲೆ ಕೊಟ್ಟ ಅದರ ಅಪ್ಪನೇ ಅಲ್ಲದೋ?!
ಬಿರುಮ – ಸಾಂತು – ಸೂರಿ : ಮೂರೂ ಜೆನರಲ್ಲಿ ಹರುದು ಬಂದ ಗುಣ – ಕುಡಿಸ್ಸು.
ಆದರೆ ಬಿರುಮಂಗೆ ಕರ್ತವ್ಯದ ಮತ್ತೆಯೇ ಕುಡಿತ ಇದ್ದದು,
ಸಾಂತುವಿಂಗೆ ಕುಡಿತದ ಒಟ್ಟಿಂಗೆ ರಜಾ ರಜಾ ಕರ್ತವ್ಯ ಇದ್ದದು..
ಸೂರಿಗೆ ಆರಂಭಂದಲೇ ಕುಡಿಸ್ಸು ಒಂದೇ ಇದ್ದದು.
ಬಿರುಮ ಆ ಮನೆಯ ಬೆನ್ನೆಲುಬು ಆಗಿಪ್ಪಾಗ ಚೆಂದಕ್ಕೇ ನೆಡಕ್ಕೊಂಡಿತ್ತು.
ಸಾಂತುವಿನ ಕಾಲಕ್ಕಪ್ಪಗ ಕಂಗಾಲಾತು.
ಸೂರಿಯ ಕಾಲಕ್ಕಪ್ಪಗ ಮನೆಗೆ ಬೆನ್ನೆಲುಬೇ ಇಲ್ಲದ್ದೆ ಆತು!

ತಿದ್ದುವೋರೇ ದಾರಿ ತಪ್ಪಿದ್ದರೆ ಮತ್ತೆ, ಸರಿ ಮಾಡುಸ್ಸು ಆರು?
ಅದಕ್ಕೇ ಅಲ್ಲದೋ – ಗೆಡುವಿಪ್ಪಗ ಬಗ್ಗುಸದ್ದರೆ ಮರವ ಬಗ್ಗುಸಲೆಡಿಗೋ ಕೇಳುದು ಹಳಬ್ಬರು!?
ಪ್ರತಿಯೊಬ್ಬನೂ ದಾರಿ ತಪ್ಪಲೂ ಸಾಕು – ಹೇಳ್ತ ವಿಶಯಲ್ಲೇ ನವಗೆಲ್ಲರಿಂಗೂ “ಗುರು”ಗೊ ಇರೆಕ್ಕಾದ್ಸು. ಅಲ್ಲದೋ?
~
ಅದಿರಳಿ, ಸೂರಿಯ ಮುಂದಾಣ ಕತೆ ಬಪ್ಪವಾರ ನೋಡುವೊ°.
~
ಒಂದೊಪ್ಪ: ಅಡ್ಡ-ಪಕ್ಕಾಸು ಎಷ್ಟೇ ಗಟ್ಟಿ ಇರಳಿ, ಬೆರ್ತೋಳು ಗಟ್ಟಿ ಇಲ್ಲದ್ದರೆ ಮನೆ ಮಾಡು ಮೋಸವೇ!

8 thoughts on “ಮನೆಯ ಬೆನ್ನೆಲುಬು

  1. ಸೂರಿಯ ಬದುಕಿಲ್ಲಿ ಸೂರ್ಯ ಬಂದಪ್ಪಗ ಹೀಂಗಪ್ಪಲಾವ್ತಿತಿಲ್ಲೆ. ಅದಕ್ಕೆ ಪೆಟ್ಟು ಜಾಸ್ತಿ ಬಿದ್ದಿರ ಹೇಳಿ ಕಾಣ್ತು. ಒಳ್ಳೆ ಗುಣದ ಅದರ ಹೆಂಡತ್ತಿಯೇ ಅದಕ್ಕೆ ಬೆನ್ನುಲುಬಾಗಿ ನಿಂಗೊ ಎಂತೋ, ಕಾದು ನೋಡುವೊ, ಅಲ್ದೊ ?

  2. ಛೇ! ಲಾಯಿಕ ಬುಧ್ಧಿ ಬಂದು ಎಲ್ಲ ಸರಿ ಅಪ್ಪಗ ಹೀಂಗಾತನ್ನೇ?

  3. ಲಾಯಕ ಆಯಿದು . ನೇರ್ಪ ಬುದ್ಧಿ ಬಂದಪ್ಪಾಗ ಹೀಂಗಾತನ್ನೆ?

  4. ಅಪ್ಪನ ರುಚಿ – ಅಭಿರುಚಿಗಳ ಸಣ್ಣ ಪ್ರಾಯಲ್ಲೇ ಬೆಳೆಶಿಗೊ೦ಡರೂ,ನೇರ್ಪ ದಾರಿಗೆ ಬ೦ದ ಸೂರಿಗೆ ಈ ಕಷ್ಟ ಬಪ್ಪಲಾಗ ಇತ್ತು.
    ಇಲ್ಲಿ ಗೆಡುವಾಗಿಪ್ಪಗ ಬಗ್ಗದ್ದದು ಮರ ಆಗಿ ಬೆಳವಗ ಸೂರ್ಯನ ಬೆಣಚ್ಚಿಯ ಹುಡುಕ್ಕಿಗೊ೦ಡು ಸರ್ತ ಆದರೂ ಆ ಬೀಳಿನ ಹಿಡುದು ನೇಲೊಗ ರಜಾ ನೋಡಿಗೊಳ್ಳೆಕ್ಕಾತು.
    ಮನಸ್ಸಿ೦ಗೆ ತಟ್ಟುವ ಶುದ್ದಿ ಒಪ್ಪಣ್ಣಾ.

  5. ಹರೇರಾಮ , ಒಪ್ಪಣ್ಣ ಕುತೂಹಲ ಹುಟ್ಟುವ ಶುದ್ದಿ ಕುಡಿವದರ ಬಿಡುಸಲೆಡಿತ್ತಲ್ಲೊ? ನೀನು ಬರದ ಆ ಒಂದು ಶಭ್ದ ತೊಳಚ್ಹುವದು ಹೇದು ಅಲ್ಲದೋ ಹೇದು… ತೆರುಚ್ಹುತ್ತಿಲ್ಲೆ ಹೇದಾಯೆಕ್ಕೊ? ಹೇದೊಂದು ಅನುಮಾನ ಮಾತಾಡ್ಳೆ ಸರೀ ಎಡಿಯದ್ದ ಪರಿಸ್ಥಿತಿಗೆ ಹಾಂಗಲ್ಲೊ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×