ನಾಗರೀಕತೆ ಬೆಳದತ್ತು ಹೇದು ಅಪ್ಪಾಗ ಮನಿಶ್ಶ° ಆದೋನು ಇತರೇ ಜೀವಿಗಳ ಅಳವಡುಸಿಗೊಂಬಲೆ ಕಲ್ತ°. ತನ್ನ ಬುದ್ಧಿವಂತಿಗೆಲಿ ದನ, ನಾಯಿ, ಪುಚ್ಚೆ, ಕುದುರೆ, ಕತ್ತೆ – ಹೀಂಗಿರ್ಸ ಹಲವು ಜೀವಿಗಳ ಪಳಗುಸಿ, ತನ್ನ ಆಜ್ಞೆಗಳ ಪಾಲುಸುತ್ತ ಹಾಂಗೆ ಮಾಡಿದ°. ಇದು ಮುಂದಾಣ ಸಮಗ್ರ ಬೆಳವಣಿಗೆಗೂ ಕಾರಣ ಆತು.
ಬೌಶ್ಷ ಅತೀ ಮದಲೇ ಮನುಷ್ಯನ ಒಟ್ಟಿಂಗೆ ಇದ್ದದು ನಾಯಿಗೊ ಆಗಿರೇಕು. ಬೇಟೆ, ರಕ್ಷಣೆ ಇತ್ಯಾದಿ ವಿಷಯಂಗೊಕ್ಕೆ ನಾಯಿಯ ಸಕಾಯ ಪಡದೇ ಬದ್ಕಿದ್ದದು ಮನುಷ್ಯನ ಜೀವನ. ಅಲ್ಲಿಂದ ತೊಡಗಿ ಇಂದಿನ ಒರೆಂಗೂ ನಾಯಿಗೊ ಇಲ್ಲದ್ದರೆ ಎಡಿಯಲೇ ಎಡಿಯ. ಕೃಷಿ ಭೂಮಿ ಇಪ್ಪೋರ ಕಾಪಾಡುತ್ತರಿಂದ ಹಿಡುದು, ರೂಪತ್ತೆಯ ಮನೆಯೊಳ ತಿರುಗುತ್ತರ ಒರೆಂಗೆ ಎಲ್ಲಾ ದಿಕ್ಕೆಯೂ ನಾಯಿಗೊ ಬೇಕು.
~
ಆಚಕರೆ ಸಂಕುವಿನ ಮಗ° ಸೂರಿಯ ನೆಂಪಿದ್ದನ್ನೇ? ಸಣ್ಣ ಇಪ್ಪಾಗಳೇ ಶಾಲೆಕಂಡು, ಮಹಾ ಬಿಂಗಿ. “ಇಂದು ಏಕೆ ಶಾಲಗೆ ಹೋಯಿದಿಲ್ಲೆ” ಹೇದು ಆರೂ ಕೇಳುವೋರಿಲ್ಲೆ. ಕೇಳ್ತರೆ ಅದರ ಅಮ್ಮನೇ ಕೇಳೇಕಟ್ಟೆ. ಅಪ್ಪಂಗೆ ಕೇಳುಲೆ ಪುರುಸೊತ್ತೇ ಇಲ್ಲೆ; ಕಳ್ಳುಕುಡಿವದರ ಎಡೆಲಿ. ಅಮ್ಮ ಕೇಳಿರೆ ಅಮ್ಮಂಗೊಂದು ಪೆಟ್ಟು ನಿಗಂಟೇ.
ಹಾಂಗೆ, ತಿಂಗಳಿಂಗೊಂದರಿ ಶಾಲಗೆ ಹೋದರೆ ಹೋತು, ಬಂದರೆ ಬಂತು. ಅಂತೂ ಹತ್ತೊರಿಶ ಏಳ್ನೆ ಕಲ್ತಮತ್ತೆ ಶಾಲೆ ಬಿಟ್ಟತ್ತು. ಮತ್ತೆ ಏನಿದ್ದರೂ ಊರೊಳದಿಕೆ ಕೆಲಸ. ಹಗಲು ಹಲವು ವೇಷ ಹಾಕಿ ದುಡಿತ್ತೋನ ಹಾಂಗೆ ಮಾಡಿರೂ, ನಿಜವಾದ ಸಂಪಾದನೆ ಇರುಳೇ ಸರಿ! ಹಗಲು ಹಲವು ವೇಷದ ನವರಾತ್ರಿ; ಇರುಳು ಮಾರುವೇಷದ ಶಿವರಾತ್ರಿ. ಎಂತ ಸಿಕ್ಕಿತ್ತೋ ಅದರ ಕಳ್ಳುದು.
ಅಲ್ಲ, ಅಷ್ಟು ಮಾಂತ್ರ ಅಲ್ಲ, ಒಂದೊಂದಿನ ಗುಡ್ಡೆಗೆ ಹೋಗಿ ಬೋಂಟೆ ಮಾಡ್ಳೂ ಇದ್ದತ್ತು.
ಆಚಕರೆ ತಟ್ಟಿಂದ ಮೇಗೆ ಇಪ್ಪ ಮುಕಾರಿಗುಡ್ಡೆಯೋ, ದೊಡ್ಡಮಾಣಿ ಮನೆಮೇಲ್ಕಟೆ ಇಪ್ಪ ಕುತ್ತಗುಡ್ಡೆಯೋ, ಕುಕ್ಕಿಲ ಮಾವನ ಹಿತ್ತಿಲಿನ ಕರೆಲಿ ಇಪ್ಪ ಕೇಪುಳು ಗುಡ್ಡೆಯೋ, ಕೈರಂಗಳ ದೊಡ್ಡಪ್ಪನ ಮನೆಬೆನ್ನಾರೆ ಇಪ್ಪ ಬೋಳುಗುಡ್ಡೆಯೋ, ಸಾರಡಿ ಅಪ್ಪಚ್ಚಿ ಮನೆ ಬುಡಲ್ಲಿರ್ತ ತೋಡೋ, ವಾಟೆ ದೊಡ್ಡಪ್ಪನ ತೋಟದ ಆಚಿಕ್ಕೆ ಇಪ್ಪ ಅಡ್ಕಸ್ಥಳ ಹೊಳೆಯೋ – ಯೇವದೂ ಅಕ್ಕು ಸೂರಿಗೆ; ಬೇಟೆ ಮಾಡ್ಳೆ. ಮೊಲವೋ, ಕಾಟುಕೋಳಿಯೋ, ಉಡುವೋ, ಏಮೆಯೋ – ಎಂತ ಸಿಕ್ಕಿತ್ತೋ ಅದು. ಮಾರ್ತ ಸಂಗತಿ ಆದರೆ ಮಾರುದು, ತಿನ್ನೇಕು ಕಂಡ್ರೆ ಮನೆಗೆ ಕೊಂಡೋಗಿ ಅದರ ಅಮ್ಮನ ಕೈಲಿ ಅಡಿಗೆ ಮಾಡುಸುದು. ಮಗನ ಈ ಸಾಹಸಂದಾಗಿ ಮನೆಯೋರಿಂಗೂ ಕೂದಲ್ಲಿಂಗೇ ಅಪುರೂಪದ ಮಾಂಸಂಗೊ ಸಿಕ್ಕುತ್ತದು ಅಪ್ಪು.
~
ಬೋಂಟೆ ಮಾಡ್ಳಿದ್ದು ಹೇಯಿದೆ ಅಲ್ಲದೋ – ಸೂರಿ ಒಂದಕ್ಕೇ ಬೋಂಟೆ ಮಾಡ್ಳೆಡಿತ್ತೋ? ಇಲ್ಲೆ. ಅದಕ್ಕೆ ಎಂತ ಮಾಡಿತ್ತು?
ಉಶಾರಿ ಇಪ್ಪ ಊರನಾಯಿ ಒಂದರ ಸಾಂಕಿದ್ದತ್ತು. ಕಂದು ಮೈಬಣ್ಣ, ಸೂರಿಯ ಹಾಂಗೇ. ಕರಿಮುಸುಡು. ಎರಡು ಕೋರೆಹಲ್ಲುದೇ, ಕಾಲುಗಳಲ್ಲಿ ಬೇಟೆ ಉಗುರುದೇ ಇದ್ದ ಕಾರಣವೇ ಆ ನಾಯಿ ಅಷ್ಟು ಉಶಾರಿ – ಹೇದು ಆಚಮನೆ ದೊಡ್ಡಪ್ಪ° ಯೇವಗಳೂ ಹೇಳುಲಿದ್ದು. ಅದರ ಉಶಾರಿಗೆ ತಕ್ಕ ಸಾಂಕಾಣ ಆ ಸೂರಿದು. ಸಾಂಕಿದ್ದು ಹೇದರೆ ರೂಪತ್ತೆ ಸಾಂಕಿದ ಹಾಂಗೆ ಕೊಂಗಾಟ ಮಾಡ್ಳೆ ಮಾಂತ್ರ ಕಲಿಶಿದ್ದಲ್ಲ. ಪೋಲೀಸುಗೊ ಹೇಳಿಕೊಡ್ತ ಹಾಂಗೆ ಹೇಳಿಕೊಟ್ಟಿದು. ಕೂರು ಹೇದರೆ ಕೂರುಗು, ಮನುಗು ಹೇದರೆ ಮನುಗ್ಗು; ಚಂಡಿದೆಪ್ಪು – ಹೇದರೆ ಗೋಣಿಲಿ ಮನುಗಿ ಹೊಡಚ್ಚುಗು, ಪತ್ತ್-ಪತ್ತ್ ಹೇಳಿರೆ ಸೀದ ಹೋಗಿ ಎದುರು ಕಂಡ ಜೀವಿಯ ಹಿಡಿಯಲೆ ಹೆರಡುಗು. ಎಲ್ಲೇ ನಿಂದುಗೊಂಡು ಎಲ್ಲಿಂದಲೇ ದಿನಿಗೆಳಿರೂ ಬಕ್ಕು.
ಇಷ್ಟಿದ್ದರೆ ಸಾಕನ್ನೇ? ಯಜಮಾನನ ಆಜ್ಞೆ ಕೇಳಿರೆ ಸಾಕನ್ನೇ, ಬೋಂಟೆನಾಯಿಗೆ?
~
ಸೂರಿ ಎಲ್ಲಿಗೇ ಬೋಂಟೆಗೆ ಹೋವುತ್ತರೂ ಈ ನಾಯಿಯ ಹಿಡ್ಕೊಂಡು ಹೋಪಲಿದ್ದು. ಗುಡ್ಡೆ ತಲೆಒರೆಂಗೆ ಸಂಕೊಲೆಲಿ ಕೊಂಡೋಪದು. ಅಲ್ಲಿಗೆತ್ತಿದ ಮತ್ತೆ ಸಂಕೊಲೆ ಬಿಡುಸುದು. ಒಂದೊಂದೇ ಪೊದೆಲಿಂಗೆ ಕಲ್ಲಿಡ್ಕಿಂಡು “ಮೊಲ ಹಂದುತ್ತೋ” ನೋಡುದು. ಒಂದು ಮೊಲ ಹಂದಿದ ಕೂಡ್ಳೇ ನಾಯಿಯ ಕೈಲಿ “ಪತ್ತ್ ಪತ್ತ್” ಹೇಳುದು. ನಾಯಿ ಹೇದರೆ ನಾಯಿ, ಹೋಗಿ ಹಾರಿ ಕಚ್ಚಿ ಎರಡು ಕುಡುಗಿದ್ದರಲ್ಲಿ ಪಾಪದ ಮೊಲ ಅಡ್ಡತಲೆ ಹಾಕಿ ಆವುತ್ತು. ಮೊಲ ನೆಲಕ್ಕುರುಳಿದ ಮತ್ತೆ ನಾಯಿ ಪುನಾ ಸಂಕೊಲೆ ಒಳ. ಮೊಲವ ಆರಿಂಗಾರು ತಿಂತೋರಿಂಗೆ ಮಾರಿರೆ ಪೈಶೆ ಸೂರಿಯ ಕಿಸೆ ಒಳ. ರಜ ಕಳುದರೆ ಸೂರಿ ಗಡಂಗಿನ ಒಳ!
ಊರಿಲಿ ಆ ಸೂರಿ ಹೇಂಗೇ ಇರಳಿ; ಆ ನಾಯಿಗೆ ಮಾಂತ್ರ “ಎಜಮಾನ”ನೇ ಸರಿ. ಆ ಮನೆಗೆ ಆರೇ ಬರಳಿ, ಆರೇ ಹೋಗಲಿ – ಈ ನಾಯಿಗೆ ಹೆದರದ್ದೋರಿಲ್ಲೆ. ಆ ದಾರಿ ಆಗಿ ನೆಡಕ್ಕೊಂಡು ಹೋಪೋರುದೇ “ಸೂರಿಯ ನಾಯಿ ಇದ್ದರೆ” – ಹೇದು ಮುಕಾರಿಗುಡ್ಡೆಲೆ ಆಗಿ ದೂರದ ದಾರಿಲಿ ಹೋಪೋರು ಇತ್ತಿದ್ದವು. ಆರಿಂಗೇ ಕೊರಪ್ಪಿರೂ, ಆರಿಂಗೇ ಕೇಳದ್ದರೂ ಆ ನಾಯಿ “ಸೂರಿ”ಯ ಆಜ್ಞೆಗಳ ಶಿರಸಾ, ಮನಸಾ, ವಚಸಾ ಪಾಲುಸಿಗೊಂಡಿತ್ತು.
~
ಒಂದು ದಿನ ಎಂತಾತು ಕೇಟರೆ, ಅದೊಂದು ಮಳೆಗಾಲ.
ಊರೊಳದಿಕ್ಕೆ ಮರ್ಳುನಾಯಿ ಇದ್ದು – ಹೇದು ಒಂದು ವದಂತಿ ಸುರು ಆಗಿ ಹಲವು ದಿನ ಆಗಿತ್ತು.
ಎಲ್ಲೋರುದೇ ಅವರವರ ನಾಯಿಯ ಜಾಗ್ರತೆ ಮಾಡಿಗೊಳ್ತಾ ಇದ್ದವು. ಸೂರಿಯೂ ಮಾಡಿದ್ದತ್ತು.
ಆ ಹೊತ್ತೋಪಗ, ಮಳೆಗಾಲದ ಛಳಿಗೆ ರಜಾ ಬೆಶಿ ಅಪ್ಪಲೆ ಸೂರಿ ಕಳ್ಳುಕುಡಿಯಲೆ ಬೈಲಕರೆಂಗೆ ಹೋಯಿದು.
ಕುಡುದು ಒಪಾಸು ಬಪ್ಪಗ ನಶೆ ಏರಿಗೊಂಡಿದ್ದತ್ತು.
ಮನೆಗೆತ್ತುವಾಗ ಕೆಲವು ಜೆನ ಮಾತಾಡ್ಸು ಕೆಮಿಗೆ ಬಿದ್ದತ್ತು – “ಕುಶಾಲಪ್ಪುವಿನ ನಾಯಿ ಜೊಗುಳಿ ಅರುಶಿಗೊಂಡು ಬೈಲಿನ ಎಲ್ಲಾ ಮನೆಗೊಕ್ಕೆ ಹೋಯಿದಾಡ” – ಹೇದು.
ಇನ್ನೊಬ್ಬ° ಹೇಯಿದ° – “ಅಕ್ಕಮ್ಮನ ಮನೆ ನಾಯಿಗೆ ಕಚ್ಚಿದ್ದಾಡ” – ಹೇದು.
ಮತ್ತೊಂದು ಜೆನ ಹೇಳಿತ್ತು – “ಕುಂಞಿಕಿಟ್ಣನ ನಾಯಿಗೂ ಕಚ್ಚಲೆ ಬಯಿಂದಾಡ. ಅಷ್ಟಪ್ಪಗ ಮನೆಯೋರು ಓಡುಸಿದವಡ”
“ಬಾಬುವಿನ ನಾಯಿಯ ಹುಡ್ಕಿಂಡು ಮನೆ ಜೆಗಿಲಿ ಒಳಂಗೇ ಬಯಿಂದಾಡ ಆ ನಾಯಿ” – ಮತ್ತೊಬ್ಬ ಆರೋ ಹೇಳಿದವು.
“ನಿನ್ನ ನಾಯಿಯ ನೋಡಿಗೊಂಡಿದಿಯೋ? ಅದಕ್ಕೆ ಕಚ್ಚಿಪ್ಪಲೂ ಸಾಕು”- ನಾಣುವಿನ ಮಗ ಉದಯ ಸೂರಿಯ ತಲಗೆ ಹುಳುಬಿಟ್ಟತ್ತು.
ಎಲ್ಲೋರುದೇ ಹೇಳುದು ಕೇಳಿ ಅಪ್ಪಗ ಸೂರಿಗೆ ಎಂತ ಅನುಸಿತ್ತಪ್ಪಾ?
ಮದಲೇ ಕುಡುದ ನಶೆ; ಅದರೆಡೆಲಿ ಹೀಂಗಿರ್ಸ ಮಾತುಕತೆಗೊ.
ಅದರೆಡಕ್ಕಿಲಿ ತನ್ನ ನಾಯಿಯೂ ಜೆಗಿಲಿಲಿ ಇದ್ದ ಸಂಗತಿ – ಇದೆಲ್ಲವನ್ನೂ ಗ್ರೇಶಿತ್ತು.
ಮನಿಶ್ಶಂಗೆ ನೇರ್ಪಲ್ಲಿಪ್ಪಗಳೇ ಕೆಲವು ಸರ್ತಿ ಒಂದು ಹೇಳಿದ್ದದರ ಇನ್ನೊಂದಾಗಿ ತೆಕ್ಕೊಂಬದು.
ಇನ್ನು ಒಳ ಒಂದು ಇಳುದು ನೆಲವೇ ಮಾಲಿಗೊಂಡಿಪ್ಪಗ ನೇರ್ಪದ್ದೇನಾರೂ ಬಪ್ಪಲಿದ್ದೋ?
ಜಾಸ್ತಿ ಯೋಚನಾಶೆಗ್ತಿಯೂ ಇಲ್ಲದ್ದ ಆ ಕಳ್ಳುಶೆಗ್ತಿಲಿ ತಲಗೆ ಎಂತದೋ ಯೋಚನೆ ಬಂತು. ಆರೂ ಗ್ರೇಶದ್ದ ಒಂದು ಭೀಭತ್ಸ ಕೆಲಸವನ್ನೇ ಮಾಡಿ ಹಾಕಿತ್ತು.
ನಾಯಿಯ ಆ ಸಂಕೊಲೆಂದ ಬಿಡುಸಿತ್ತು.
ಹಟ್ಟಿಕೋಣೆಲಿ ಮಡಗಿದ್ದ ಒಂದು ಕೊಟ್ಟಿನ ಹಿಡ್ಕೊಂಡು ಬಂತು.
ನಾಯಿಗೆ ಒಂದು ಕಡುದತ್ತು.
ಸಂಕೋಲೆಂದ ಬಿಡ್ಸಿಪ್ಪಗ ನಾಯಿ ಯೇವತ್ರಾಣ ಹಾಂಗೆ ಬೋಂಟೆಗೆ ಹೋವುತ್ಸದರ ಆಲೋಚನೆ ಮಾಡಿಕ್ಕಟ್ಟೇ ವಿನಾ ತನ್ನದೇ ಯಜಮಾನ ತನಗೇ ಬಡಿತ್ತ ಸಂಗತಿ ಆ ಮೂಕಪ್ರಾಣಿಗೆ ಅಂದಾಜಿ ಆಗದ್ದ ಕಾರಣ ಅದು ಓಡ್ಳೂ ಹೆರಟಿತ್ತಿದ್ದಿಲ್ಲೆ.
ಆದರೆ, ಪೆಟ್ಟಿನ ಉರಿ ಮರ್ಕಕ್ಕೆ “ಅಯ್ಯೋ, ಉಳ್ಳೋ” ಹೇದು ಚೀರಾಡಿ, ಬೊಬ್ಬೆ ಹೊಡದು ಒಂದೇ ಓಟ ಓಡಿತ್ತು. ಎಲ್ಲಿಗೆ? ಸಿಕ್ಕಿದಲ್ಲಿಗೆ.
ಕುಡುದ ಅಮಲಿನ ಪೆಟ್ಟು ರಜಾ ಮಾಲಿದ ಕಾರಣ ಅಂಬಗಳೇ ಸತ್ತಿದಿಲ್ಲೆ. ಭಯಾನಕ ಗಾಯವ ಹಿಡ್ಕೊಂಡು ನಾಯಿ ಬೈಲಿನೊಳವೇ ಓಡಿಗೊಂಡು ಬಂತು. ಅದು ಹೋದಲ್ಲೆಲ್ಲಾ ನೆತ್ತರ ದಾರಿ. ನಾಯಿಯೇ ಅಲ್ಲ, ಆರೋ ಮನುಷ್ಯರೇ ಕೂಗುತ್ತವು – ಹೇದು ಸಂಶಯ ಬಪ್ಪಷ್ಟು ವಿಕಾರ ಶಬ್ದಲ್ಲಿ ಕೂಗು – ಇದೆರಡನ್ನೂ ಮಾಡಿಗೊಂಡು ಆ ನಾಯಿ ಓಡಿತ್ತು. ಓಡಿಯೇ ಓಡಿತ್ತು.
ನಾಯಿ ಹೇಳಿದರೆ ವಿಶ್ವಾಸ. ವಿಶ್ವಾಸ ಹೇಳಿದರೆ ನಾಯಿ! ಇದೆರಡು ಒಂದಕ್ಕೊಂದು ಚೇರ್ಚೆ ಅಲ್ಲದೊ?
ಹೊಟ್ಟೆಗೆ ಅಶನ ಹಾಕಿದವ ಎಂತ ಕಟುಕನೇ ಆದರೂ ಅವನ ಕೆಲಸವ ನಿಯತ್ತಿಲಿ ಮಾಡ್ತ ನಾಯಿಯ ನಾವು ದೂರುಲೆ ಇದ್ದೊ?
ಅದು ತೋರ್ಸುದು ಆರಲ್ಲೇ ಆದರೂ ತನ್ನ ವಿಶ್ವಾಸವ ಅಲ್ಲದಾ? ಇಲ್ಲಿಯೂ ಹಾಂಗೇ ಆತು.
ಸುಮಾರು ದೂರ ಓಡಿ ಅಪ್ಪಗ ಎಂತ ಅನುಸಿತ್ತೋ ಆ ನಾಯಿಗೆ! ಬಾಯಿ ಬಚ್ಚಿತ್ತು. ಕಣ್ಣು ಕಸ್ತಲೆ ಬಂದಿಕ್ಕು. ಅದರೆಡಕ್ಕಿಲಿಯೂ – ತನ್ನ ಯಜಮಾನನ ನೆಂಪಾತು. ತನ್ನ ಸಾಂಕಿದ ಮನೆಯ ನೆಂಪಾತು. ತಾನು ನಂಬುವ ತನ್ನ ಆತ್ಮೀಯ ಸೂರಿಯ ನೆಂಪಾತು. ಒಪಾಸು ಮನೆಗೇ ಬಂತು. ಬೇನೆಗಾಯ ಹಿಡ್ಕೊಂಡು ಒಪಾಸು ಬೇನೆಮಾಡಿದ ಅದೇ ಯಜಮಾನನ ಹತ್ತರೆ ಬಂದು ಸಹಾಯ ಕೇಳಿದಾಂಗೆ ನಿಂದತ್ತು.
ನಾಯಿಯ ಮನಸ್ಸು ಎಷ್ಟು ಮುಗ್ಧ ಹೇದರೆ ಅದು ಯಜಮಾನನ ಎಂತ ತಪ್ಪನ್ನೂ ಕ್ಷಮಿಸುಗು.
ಆದರೆ, ವಿಕಾರ ಶಬ್ದಲ್ಲಿ ಕೂಗಿಂಡು ಓಡಿದ ಕಾರಣ “ನಾಯಿಗೆ ಮರುಳೇ ಹಿಡುದ್ದು” – ಹೇದು ಅಷ್ಟಪ್ಪಗಳೇ ಸೂರಿ ಕುಡುದ ಅಮಲಿಲೇ ನಿಘಂಟು ಮಾಡಿದ್ದತ್ತು. ಆಗಾಣ ಕೊಟ್ಟಿನ ಇನ್ನೂ ತೊಳದು ಮಡಗಿದ್ದತ್ತಿಲ್ಲೆ, ಅದೇ ಕೊಟ್ಟಿಲಿ ಇನ್ನೊಂದು ಕಡುದತ್ತು. ಈ ಸರ್ತಿ ನಾಯಿ ಓಡಿದ್ದಿಲ್ಲೆ. ಅಲ್ಲೇ ಬಿದ್ದು ನಾಕು ಸರ್ತಿ ಹೊಡಚ್ಚಿತ್ತು. ಶಾಂತ ಆತು.
ಯೆಜಮಾನಂಗೆ ಬೇಕಾಗಿ ಯೇವ ಹೊತ್ತಿಂಗೆ, ಹೇಂಗೆ ಬೇಕಾದರೂ ಕೆಲಸಕ್ಕೆ ತಯಾರಿದ್ದ ನಾಯಿ ಅದೇ ಯೆಜಮಾನನ ಅಮಲಿನ ಮರುಳಿಂಗೆ ತನ್ನ ಜೀವ ಸಮರ್ಪಣೆ ಮಾಡಿತ್ತು.
ಇದುದೇ ಅದರ ವಿಶ್ವಾಸವೇ ಅಲ್ಲದೋ ಯಜಮಾನನ ಮೇಗೆ?
ವಿವರವಾಗಿ ಮರದಿನ ಸುಕುಮಾರ ಹೇಯಿದ ಸಂಗತಿ ಕೇಳಿ ಒಪ್ಪಣ್ಣಂಗೆ ಕರುಳೇ ಹಿಂಡಿದ ಹಾಂಗಾತು!
ನಾಯಿ ಕಿರ್ಚೆಂಡು ಓಡಿದ ಸಂಗತಿ ನವಗೂ ಕೇಳಿದ್ದತ್ತು, ಆದರೆ ಅದು ಸೂರಿಯ ನಾಯಿ – ಹೇದು ಅಂದಾಜಿ ಆತಿಲ್ಲೆ! ಒಂದು ವೇಳೆ ಅಂದಾಜಿ ಆದೋರಿಂಗೂ, ಕಾರಣ ಎಂತರ ಹೇದು ಅಂದಾಜಿ ಆಗಿರ.
ಅಷ್ಟೆಲ್ಲ ಬೇನೆ ಆದರೂ, ಅದೆಲ್ಲ ಬೇನೆ ತೆಕ್ಕೊಂಡು ಓಡಿರೂ, ಆ ಬೇನೆಲಿಯೂ ಅದಕ್ಕೆ ನೆಂಪು ಬಂದದು ಅದರ ಯಜಮಾನನನ್ನೇ. ಅವ ತಪ್ಪಿ ಬಡುದ್ದಾಯಿಕ್ಕು ಹೇಳಿ ಗ್ರೇಶಿತ್ತೋ, ಅಥವಾ ಬಡುದ ಜೆನ ಆರು ಹೇದು ಮರದತ್ತೋ – ಒಟ್ಟು ಮತ್ತೆ ಒಪಾಸು ಬಂದದು ಅದು ಅದೇ ಎಜಮಾನನ ಹತ್ತರೆಂಗೆ.
ಅಂಬಗ ಮರುಳು ಆರಿಂಗೆ?
ನಾಯಿಗೋ?
ಅಥವಾ, ಮರುಳು ನಾಯಿ ಕಚ್ಚಿಕ್ಕು ಹೇದು ಅಂತೇ ಅಂದಾಜಿಲಿ, ಕಳ್ಳುಕುಡುದ ಅಮಲಿಲಿ ಅನ್ಯಾಯವಾಗಿ ಪ್ರೀತಿಯ ನಾಯಿಯ ಕೊಂದ ಸೂರಿಗೆ ಮರುಳೋ?
ಆರೋ ಹೇಳಿದ್ಸರ ಕೇಳಿ ತನ್ನನ್ನೇ ನಂಬಿ ಬೆಳದ ನಾಯಿಯ ಮೇಗೆ ಪ್ರಹಾರ ಮಾಡುಸ್ಸೋ?
ಆ ನಾಯಿಯ ಮೇಗೆ ಸಾಂಕಿದ ಅಧಿಕಾರ ಇಪ್ಪಲೂ ಸಾಕು; ಆದರೆ ಅದರ ಜೀವದ ಮೇಗೆ ಎಂತ ಅಧಿಕಾರ ಇದ್ದು?
ಅಷ್ಟಕ್ಕೂ, ಆ ನಾಯಿಗೆ ಮರುಳುನಾಯಿ ಕಚ್ಚಿದ್ದೇ ಅಪ್ಪೋ-ಅಲ್ಲದೋ ಹೇದು ಧೃಡಮಾಡಿಗೊಂಬಲೆ ಆವುತಿತನ್ನೇ ಈ ಮರುಳಂಗೆ!!
~
ಈಗಳೂ, ಆ ನಾಯಿಯ, ಅದರ ಬುದ್ದಿವಂತಿಕೆಯ, ಕೂಗಿಂಡು ಓಡಿಪ್ಪಗ ಆದ ಅದರ ಮೈ ಗಾಯವ, ಒಪಾಸು ಬಂದ ಸಂಗತಿಯ, ಪುನಾ ಕೊಟ್ಟಿಲಿ ಕಡುದ ಕತೆಯ – ಎಲ್ಲವನ್ನೂ ಗ್ರೇಶಿ ಅಪ್ಪಗ ಒಪ್ಪಣ್ಣಂಗೆ “ನಾವೇ ಅನಾಗರಿಕರು” – ಹೇದು ಅನುಸುಲೆ ಸುರುಅಪ್ಪದಿದ್ದು ಒಂದೊಂದರಿ. ತಾನು ಮಾಡಿದ್ದು ತಪ್ಪು ಹೇದು ಸೂರಿಗೆ ಗೊಂತಪ್ಪಲೆ ಅದೆಷ್ಟು ಸರ್ತಿ ನಶೆ ಇಳಿಯೇಕೋ? ಉಮ್ಮಪ್ಪ!
ಎಂತ ಹೇಳ್ತಿ?
~
ಒಂದೊಪ್ಪ: ಅಮಲಿಲಿ ಮಾಡಿದ ಮರುಳುಗಳಿಂದಲೂ, ಬಿರುದಪ್ಪಗ ಅಪ್ಪ ಪಶ್ಚಾತ್ತಾಪಂಗೊ ಹೆಚ್ಚು ಹಿಂಸೆ ಕೊಡ್ತು! ಅಲ್ಲದೋ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಚೆ, ಆರಾರ ಮಾತಿನ ಕೇಳಿ ಸೂರಿ ಪಾಪದ ನಾಯಿಯನ್ನೇ ಬಲಿ ಕೊಟ್ಟತ್ತಾನೆ, ಕೇಳಿ ಬೇಜಾರಾತು.
ಮುಂಗುಸಿಯ ಕತೆಯುದೆ ನೆಂಪಿಂಗೆ ಬಂತು.
‘ಪ್ರಾಣಿ ದಯಾ ಸಂಘ’ದವಕ್ಕೆ ಶುದ್ದಿ ಗೊಂತಾಯಿದಿಲ್ಲೆಯೋ ಹೇಳಿ ! ಇದು ಕೇಸು ಜಡಿಯೆಕ್ಕಾದ ಸಂಗತಿಯೆ ಸೈ.
ಒಪ್ಪಣ್ನಾ ,ಕತೆ ಮನ ಕಲಕುವ ಹಾಂಗಿದ್ದು…ನೈಜ ಘಟನೆಯೇ ಹೇದು ಕಾಣುತ್ತು.
ಚೆ ನಾಯಿಯ ಗ್ರೇಶಿರೆ ಬೇಜಾರವ್ಥು ..
ಸೇಡಿಯಾಪು ಕೃಷ್ಣ ಭಟ್ರ ಶ್ವಮೇಧ ಕಾವ್ಯಲ್ಲಿ ಇಪ್ಪ ಹಾಂಗೆ ವಿಚಾರ ಮಾಡದ್ದೆ ಮಾಡಿದ ಕಾರ್ಯ -ಅಕಾರ್ಯವೇ ಆಗಿ ಹೋತು. ವಸ್ತು ಹಳತ್ತೇ.ಶೈಲಿ ಲಾಯಕ ಆಯಿದು.
ಆದರೆ ಕುಡುದ ಅಮಲಿಲ್ಲಿ ಮಾಡಿದ ತಪ್ಪು ಕ್ಷಮಾರ್ಹ ಹೇಳಿ ಕುಡುದ ಮತ್ತಿಲ್ಲಿಪ್ಪ ಸುಪ್ರೀಮ್ ಕೋರ್ಟು ಜಡ್ಜ ತೀರ್ಪು ಕೊಟ್ಟಿದಡ!!!.ಹರೇ ರಾಮ.
ಒಪ್ಪಣ್ಣನ ಶುದ್ದಿ ಇಷ್ಟೆಲ್ಲ ಓದಿಯಪ್ಪಗ ಅಡಿಗೆ ಸತ್ಯಣ್ಣಂಗೆ ಉರಿ ದರಿಸಿತ್ತಡ. ಸೂರಿಯ ಬಲುಗಿ ತಂದು ಮೂರು ಮಾರ್ಗ ಸೇರ್ತಲ್ಲಿ ಇಲಿಟ್ರಿಕ್ಕು ಕಂಬಕ್ಕೆ ಕಟ್ಟಿ ಹಾಕಿ ತೊಳಿಯಡದೋ ಕೇಟ°. ಶಾಂತಂ ಪಾಪಂ ಹೇದು ಅವನ ಸಮಾದಾನ ಮಾಡ್ಳೆ ಸಾಕು ಸಾಕಾತು ಒಪ್ಪಣ್ಣ ಭಾವೋ
ಅದರೆಡಕ್ಕಿಲಿ ಒಂದು ಸಂಶಯವೂ ಅಡಿಗೆ ಸತ್ಯಣ್ಣಂಗೆ – ಎಷ್ಟೇ ಪ್ರೀತಿ ವಿಶ್ವಾಸಂದ ಸಾಕಿದ ನಾಯಿ ಆದರೂ ಎಲ್ಯಾರು ಆನೆಗೆ ಮದ ಬತ್ತಾಂಗೆ ನಾಯಿಗೆ ಪಿಸಿರು ಎಳಗಿರೋ! 🙁
ಅಂಬಗ ಮರುಳು ಆರಿಂಗೆ?! – ಇದರ ಓದಿಯಪ್ಪಗ ಅಡಿಗೆ ಸತ್ಯಣ್ಣಂಗೆ ತೋರಿತ್ತು ಸೂರಿಯ ಮೇಗಂದೆ ಏಕೆ ಸಾರ್ವಜನಿಕ ಹಿತಾಸಕ್ತಿ ಅಡಿಪ್ಪಡೆಲಿ ಕೇಸು ಹಾಕಲಾಗ?!
ಒಟ್ಟಾರೆ ಎಂತ ಹೇದರೆ ಶುದ್ದಿ ಒಟ್ಟು ಮನಕಲಕ್ಕಿತ್ತು. ಮತ್ತೆ ಚಿಂತಿಸಿ ಫಲವೇನು! ಅಲ್ಲದೊ?