ಒಪ್ಪಣ್ಣನ ಮನಸ್ಸು ತುಂಬಾ ಮವುನ ಆಯಿದು.
ಅದು ಹಾಂಗೇ, ಒಂದೊಂದರಿ ತುಂಬಾ ಅರಳುತ್ತು – ಎಂತಾರು ಕೊಶಿ ಬಂದರೆ.
ಹಾಂಗೇ ಮವುನ ಆಗಿ ಮುದುಡುತ್ತು – ಎಂತಾರು ಬೇಜಾರವೋ ಮತ್ತೊ ಆದರೆ.
ಎಂತ ಮಾಡುದು, ಮನುಶ್ಶ ಆಗಿ ಹುಟ್ಟಿದ ಮತ್ತೆ ಸಂಬಂಧಂಗೊ, ಭಾವನೆಗೊ ಬೆಳದೇ ಬೆಳೆತ್ತು.
ಹುಟ್ಟುವಗಳೇ ಅದು ಶುರು ಆವುತ್ತು, ನಿತ್ಯ ಬೆಳೆತ್ತಾ ಇರ್ತು – ಕೊನೆ ಒರೆಂಗುದೇ – ಅಷ್ಟೇ ಅಲ್ಲ, ಕೊನೆಗಾಲ ಕಳುದ ಮತ್ತುದೇ ಆ ಬಂಧ ಹಾಂಗೇ ಒಳಿತ್ತು.
– ಅನಂತ ಕಾಲದ ಒರೆಂಗೂ.
~
ದನಗೊ ಹತ್ತರೆ ಆಗಿ ಬಿಟ್ರೆ ನಮ್ಮ ತುಂಬಾ ಹಚ್ಚಿಗೊಳ್ತವು.ನಮ್ಮದೇ ಮನೆಯ ಒಳಾಣವು ಹೇಳುವಷ್ಟುದೇ ಹತ್ತರೆ.
ಇದೆರಡೂ ಅಲ್ಲದ್ದೆ ಹದಾಕೆ ಹದಾಕೆ ಇಪ್ಪ ದನಗಳೂ ಇದ್ದು, ಹೆಚ್ಚಿನ ದನಗೊಕ್ಕುದೇ ಇದೇ ಅಭ್ಯಾಸ.
~
ಒಪ್ಪಣ್ಣನ ಮನೆ ಹಟ್ಟಿಯ ಮೋಳಮ್ಮನ ಶುದ್ದಿ ಒಂದರಿ ಮಾತಾಡಿದ್ದಲ್ಲದೋ – ಗೊಂತಿದ್ದೋ?
ಗೊಂತಿಲ್ಲದ್ದರೆ ಅದರ ಮದಾಲು ನೋಡಿಕ್ಕಿ – ಇಲ್ಲಿದ್ದು (ಸಂಕೊಲೆ).
ಈ ವಾರ ಅದೇ ಮೋಳಮ್ಮಂದೇ ಶುದ್ದಿ!
ಪ್ರೀತಿಯೋರ ಶುದ್ದಿ ಎಷ್ಟು ಮಾತಾಡಿರೂ ಬೊಡಿತ್ತಿಲ್ಲೆ ಇದಾ!
ಆ ಮೋಳಮ್ಮ ಇಡೀ ಬೈಲಿನ ಪ್ರೀತಿಯ ದನ ಆಗಿತ್ತು. ಎಲ್ಲೋರ ಕೊಂಗಾಟವ ತೆಕ್ಕೊಂಡು ಇತ್ತು.
ಬೈಲಿನ ಎಲ್ಲೋರನ್ನೂ ಗುರ್ತ ಮಡಿಕ್ಕೊಂಡು ಇತ್ತು. ಎಲ್ಲೋರಿಂಗೂ ಅದರ ಗುರ್ತ ಇದ್ದತ್ತು.
ಆ ಮೋಳಮ್ಮ ಇನ್ನಿಲ್ಲೆ…! 🙁
ಮೊನ್ನೆ ಶೆನಿವಾರ ಉದಿಯಪ್ಪಗ ಅಮ್ಮನ ಕೈಂದ ಬೆಲ್ಲತುಂಡು ತಿಂದದು, ಮತ್ತೆ ಅರ್ದ ಗಂಟೆಲಿ – ಎದ್ದಿಕ್ಕಿ ಹೋದ ಹಾಂಗೆ ಹೋತು. ಇನ್ನು ಮೋಳಮ್ಮನ ಬಗ್ಗೆ ನೆಂಪು ಮಾಂತ್ರ.
~
ಸತ್ತೆಮ್ಮೆಗೆ ಒಂದು ಕುತ್ತಿ ಹಾಲಿತ್ತಡ – ಒಂದು ಹೇಳಿಕೆ ನಮ್ಮೋರಲ್ಲಿ. ಆದರೆ ಇದು ಸತ್ತ ಮತ್ತೆ ಅಲ್ಲ, ಬದುಕ್ಕಿಪ್ಪಗಳೇ ಇದರ ಶುದ್ದಿ ಹೇಳಿದ್ದು.
ಸತ್ತ ಮೇಲೆ ಅಂತೂ ಮತ್ತೊಂದರಿ ನೆಂಪು ಮಾಡಿಗೊಂಡದು, ಅಷ್ಟೆ.
ಎಂದಿಂಗೂ ಮರದು ಹೋಗದ್ದ ಮೋಳಮ್ಮನ ಮತ್ತೊಂದರಿ ನೆಂಪು ಮಾಡಿರೆ ಎಂತ ಅಲ್ಲದೋ?
ಹಾಂಗೆ ನೋಡಿರೆ ಅದಕ್ಕೆ ಸಾವೇ ಇಲ್ಲೆ! ಅಷ್ಟು ಚಿರಂತನ, ಚಿರನೂತನ.
~
ಮೋಳಮ್ಮ ಹುಟ್ಟುವಗ ಹಟ್ಟಿಲಿ ಅಷ್ಟೆಂತ ಅನುಕೂಲ ಇತ್ತಿಲ್ಲೆಡ್ಡ. ಮನೆಲೇ ಇತ್ತಿಲ್ಲೆ, ಇನ್ನು ಹಟ್ಟಿಲಿ ಎಲ್ಲಿಂದ, ಅಲ್ಲದೋ?
ಅನುಕೂಲ ಇಲ್ಲದ್ದರೂ, ಇಪ್ಪದರಲ್ಲೇ ಬೆಳೆತ್ತವು ನಮ್ಮ ದನಗೊ.
ಕೊಟ್ಟದು ಸಾಕು, ಸಿಕ್ಕಿದ್ದು ತಿಂಗು. ಊರ ದನಗೊ ಹಾಂಗೇ ಅಲ್ಲದೋ?!
ಅವಕ್ಕೆ ಬೇಕಾದ್ದು ಮನುಶ್ಶರ ಪ್ರೀತಿ – ಅಷ್ಟೇ.
ಹಾಂಗೇ, ಅಜ್ಜಿಗೋಪಿಯ ಮಗಳಾಗಿ ಕಪ್ಪು ಕಂಜಿ ಹುಟ್ಟಿತ್ತು.
ಹುಟ್ಟಿತ್ತು – ಹೇಳುವಗ ಇನ್ನೊಂದು ನೆಂಪಾವುತ್ತು. ಅದು ಹುಟ್ಟಿದ್ದು ಒಪ್ಪಣ್ಣ ಹುಟ್ಟಿದ ಸಮೆಯಲ್ಲೇ ಅಡ.
ಬರೇ ಒಂದೆರಡು ತಿಂಗಳು ವಿತ್ಯಾಸ, ಅದಿರಳಿ.
~
ಸಣ್ಣ ಕಂಜಿಗಳ ಮನೆಲೇ ಕಟ್ಟುದಿದಾ – ಸುಮಾರು ದೊಡ್ಡ ಅಪ್ಪನ್ನಾರವೂ.
ತುಂಬಾ ಮದಲಿಂಗೇ ಆ ಕ್ರಮ ಇತ್ತು! ಕ್ರಮೇಣ – ಹುಲಿಯೋ ಮಣ್ಣ ತೆಕ್ಕೊಂಡು ಹೋಪದು ಬೇಡ ಹೇಳ್ತ ಉದ್ದೇಶಂದ ಹಾಂಗೆ ಮುಂದರುಸಿದ್ದೋ ಎಂತ್ಸೋ – ಅಂತೂ ಇಂದಿಂಗೂ ಅದು ನೆಡಕ್ಕೊಂಡು ಬಯಿಂದು ಬೈಲಿಲಿ.
ಹಾಂಗೆ, ಮೋಳಮ್ಮನನ್ನೂ ಮನೆಲೇ ಕಟ್ಟಿದ್ದು.
~
ಕಂಜಿಯ ಬಣ್ಣ ತೊಳದು ಮಡಗಿದ ಕೆಂಡದ ಹಾಂಗೆ. 🙂 ಶುದ್ಧ ಕಪ್ಪು.
ಕಪ್ಪುದಾ ಪೊಣ್ಣೂಲೂ ಬೇಲೇಗೆಡ್ಡೇ – ಬೊಳ್ದೂತಾ ಪೊಣ್ಣೂಲೂ ಸೇಲೇಗೆಡ್ಡೇ – ಹೇಳಿ ಬಟ್ಯ ಒಂದೊಂದರಿ ಪಾಡ್ದನ ಹೇಳುಗು, ಬೇಲಿ ಹಾಕುವಗ ಉರು ಅಪ್ಪದಕ್ಕೆ.
ಹಾಂಗೇ, ಈ ಕಂಜಿಯೂ ಕಪ್ಪೇ.
ಅದಕ್ಕೆ ಸೇಲೆ ಅರಡಿಯ, ಆದರೆ ಕೊಂಗಾಟ – ಮಾಡ್ಳೂ ಅರಡಿಗು, ತೆಕ್ಕೊಂಬಲೂ ಅರಡಿಗು.
ಕೊಂಗಾಟ ಮಾಡುವವರ ಅದುದೇ ಮಾಡಿ, ಇನ್ನೂ ಇನ್ನೂ ಕೊಂಗಾಟ ಮಾಡುಸಿಗೊಂಬಲೆ ಅರಡಿಗು. 🙂
ಸಣ್ಣ ಇಪ್ಪಗಳೇ ಅಮ್ಮನ ಅದಕ್ಕೆ ಭಾರೀ ಪ್ರೀತಿ. ಅಮ್ಮಂಗದೇ!
ಹಟ್ಟಿಂದ ತಂದು ಮನೆಒಳ ಬಿಟ್ಟ ಕೂಡ್ಳೇ ಪುಟ್ಟುಕಂಜಿಯ ಸವಾರಿ ಸುರು.
ಎಲ್ಲೋರನ್ನೂ ಗುರ್ತ ಮಾಡಿಗೊಂಡು, ಎಲ್ಲೋರ ಹತ್ತರೂ ಮಾತಾಡುಸಿಗೊಂಡು, ಕೋಣೆಂದ ಕೋಣಗೆ ನೆಡಕ್ಕೊಂಡು, ಲಾಗ ಹಾಯ್ಕೊಂಡು – ದೇವರೊಳ ಇಡೀ ಚೆಂಡಿ ಮಾಡಿಗೊಂಡು..
ಇಡೀ ಮನೆ ಅದರದ್ದೇ ಅಲ್ಲದೋ – ಇನ್ನೆಂತ ಇದ್ದು ಹೆದರ್ಲೆ!
~
ರಜ ಗುರ್ತ ಆತು, ರಜ ದೊಡ್ಡವೂ ಆತು. ಮನೆಂದ ಬಿಟ್ಟು ಹಟ್ಟಿಲೇ ಕಟ್ಟುವಷ್ಟು ದೊಡ್ಡ ಆತು
ಆದರೂ ಒಂದೊಂದರಿ ಅದರ ಬಿಟ್ಟಿಪ್ಪಗ ಮನೆ ಒಳಂಗೆ ಬಪ್ಪದಿತ್ತು.
ಮೊದಲಾಣ ನೆಂಪಿಲಿ – ಎಲ್ಲ ಸರಿ ಇದ್ದೋ – ಹೇಳಿ ತನಿಕೆ ಮಾಡಿ ಹೋಯ್ಕೊಂಡಿತ್ತು.
ಬಂದಿಪ್ಪಗ ಅಮ್ಮನ ಕೈಂದ ಎಂತಾರು ವಸೂಲಿ ಮಾಡಿಗೊಂಡೇ ಹೆರಡುಗಷ್ಟೇ.
ಉದಿಯಪ್ಪಗಾಣ ದೋಸೆಯೋ, ಡಬ್ಬಿಯೊಳಾಣ ಬೆಲ್ಲತುಂಡೋ, ಹಣ್ಣಿಂಗೆ ನೇಲುಸಿದ ಬಾಳೆಗೊನೆಯೋ, ಉಂಬಲೆ ತಂದು ಮಡಗಿದ ಬಾಳೆಕೀತೋ – ಎಂತದೂ ಅಕ್ಕು ಅದಕ್ಕೆ.
ನಾವಾಗಿ ಕೈಯಾರೆ ಕೊಟ್ಟು ಹೆರನೂಕೆಕ್ಕು, ಪುನಾ ಹಟ್ಟಿಗೆ ಹೋಯೆಕ್ಕಾರೆ! 🙂
ಅಲ್ಲದ್ದರೆ ಮನೆಲೇ ನಿಂಗು, ಹೇಳುವನ್ನಾರವೂ.
~
ನಾವೇ ಹಟ್ಟಿಗೆ ಹೋದರೆ ಅಂತೂ ಕೇಳುದೇ ಬೇಡ, ಹತ್ತರೆ ಕೂದವನ ಕೈಯ ನಕ್ಕಿಯೊಂಡು, ಎನ್ನನ್ನೂ ಕೊಂಗಾಟ ಮಾಡು – ಹೇಳುಗು. ಅದರ ಭಾಶೆಲಿ.
ಅದು ಎಲ್ಲೋರಿಂಗೂ ಅರ್ತ ಅಕ್ಕು.
ಮೂಗು ನಕ್ಕಲೆ ಸುರು ಮಾಡಿರೆ ಅಕ್ಕಚ್ಚು ಕೇಳ್ತಾ ಇದ್ದು..
ತಲೆ ಆಡುಸಿರೆ ತಿಂಬಲೆ ಎಂತಾರು ಕೊಂಡ – ಹೇಳ್ತದುದೇ ಎಲ್ಲೋರಿಂಗೂ ಅರ್ತ ಅಕ್ಕು
ಎಲ್ಲಾ ಕ್ರಿಯೆಗೂ, ಪ್ರತಿಕ್ರಿಯೆಗೂ ಅದರದ್ದೇ ಆದ ಸಂಜ್ಞೆಗೊ ತಯಾರಿತ್ತು ಅದರ ಹತ್ತರೆ.
ಎಲ್ಲಾ ದನಗೊಕ್ಕುದೇ ಅದು ಇರ್ತು, ಆದರೆ ಮೋಳಮ್ಮಂಗೆ ಇದು ಸಣ್ಣ ಪ್ರಾಯಲ್ಲೇ ಅಭ್ಯಾಸ ಆಗಿತ್ತು.
~
ಕಂಜಿ ದೊಡ್ಡ ಆಗಿ ಗಡಸು ಆತು.
ಗಡಸಿಂಗೆ ರಜಾ ಗಾಂಭೀರ್ಯತೆ ಬಂತು. ಎಲ್ಲಾ ಜೀವಿಗೊಕ್ಕುದೇ ಹಾಂಗೇ ಅಲ್ಲದೋ?
ಬಾಲ್ಯದ ಚೆಲ್ಲಾಟ ಕ್ರಮೇಣ ಹೋಗಿ, ಯವ್ವನದ ಗಾಂಭೀಯತೆ ತುಂಬಿರೇ ಅದು ಚೆಂದ.
ಮೊದಲಾಣ ಸಣ್ಣ ಸಣ್ಣ ಕಿತಾಪತಿಗೊ ಎಲ್ಲ ಬಿಟ್ಟು, ದೊಡ್ಡವರ ಹಾಂಗೆ (ಅಪ್ಪಮ್ಮನ ಹಾಂಗೆ) ನಟನೆ ಮಾಡ್ಳೆ ಆರಂಭ ಆವುತ್ತು. ಅಲ್ಲದೋ?
ಹಾಂಗೇ ಈ ಮೋಳಮ್ಮಂದೇ ಸುರು ಮಾಡಿತ್ತು. ಆದರೂ ಅದರ ಕೊಂಗಾಟ ನೆಡಕ್ಕೊಂಡೇ ಇತ್ತು.
ಅಷ್ಟಪ್ಪಗ ಒಂದು ವಿಶೇಷ ಸಂಗತಿ ಗೊಂತಾತು.
ಕೆಲವು ದನಗೊಕ್ಕೆ ಅಪುರೂಪದ ಪರಿಮ್ಮಳ ಇರ್ತು ಮೋರೆಲಿ.
ಒಂದು ನಮೂನೆ ತುಪ್ಪದ ಪರಿಮ್ಮಳ, ತುಪ್ಪವೂ ಅಲ್ಲ, ಜೇನ-ತುಪ್ಪ ಕಲಸಿದ ಪರಿಮ್ಮಳ, ಅಲ್ಲಲ್ಲ – ಕೇಸರಿಯ ಪರಿಮ್ಮಳ, ಅಲ್ಲ – ಜಾಯಿಕಾಯಿಯ ಪರಿಮ್ಮಳ, ಅಲ್ಲ – ಗಂಧ ಅರದ ಕೈಯ ಪರಿಮ್ಮಳ, ಅಲ್ಲಲ್ಲ!!
ಉಮ್ಮ, ಅದರ ವಿವರುಸುದು ಕಷ್ಟವೇ. ಚೂರಿಬೈಲು ಡಾಗುಟ್ರುಬಾವ ಹೇಳುಗು “ಅದು ಗೋರೋಚನದ ಪರಿಮ್ಮಳ” ಹೇಳಿಗೊಂಡು.
ಅಪ್ಪಡ, ಅದು ಗೋರೋಚನ ಅಡ. ತುಪ್ಪಳದ ಅಡಿಲಿ ತುಪ್ಪದ ಹಾಂಗೆ ವಿಶೇಷ ವಸ್ತುವೊಂದು ಆ ಮೋರೆಲಿ ಇದ್ದುಗೊಂಡು, ಕೊಂಗಾಟ ಮಾಡಿದವಂಗೆ ಪರಿಮ್ಮಳ ಬಪ್ಪ ಹಾಂಗೆ ಇಪ್ಪದು.
ಇದರಿಂದಾಗಿ, ಎಲ್ಲೋರುದೇ ಆ ಗಡಸಿನ ಮೋರೆ ಮೂಸುದೇ!
ಅದಕ್ಕುದೇ ಕೊಶಿ. ಕೊಂಗಾಟದ ದನುವಿಂಗೆ ಕೊಂಗಾಟದ್ದೇ ನೆಂಪು!
ಗಂಗೆ ಕೊರಳಿನ ಒಳ್ಳೆತ ಒಡ್ಡುಸಿಕೊಡುಗು, ಉದ್ದಲೆ! ಕಳ್ಳಿ!!
~
ಗುಡ್ಡಗೆ ಹೋಪಲೆ ಸುರು ಮಾಡಿತ್ತು, ದೊಡ್ಡ ದನಗಳ ಒಟ್ಟಿಂಗೆ.
ಆ ಸಮೆಯಲ್ಲೂ ಒಂದೊಂದರಿ ಅದರ ಪೂರ್ವಾಶ್ರಮ ನೆಂಪಾಗಿ ಸೀತ ಮನೆ ಒಳಂಗೆ ಬಂದುಗೊಂಡು ಇತ್ತು.
ಬಂದರೆ ಎಂತಾರು ಸಿಕ್ಕದ್ದೆ ಮನೆಂದ ಹೆರಡ.
ದಾರಿಲಿ ಅಡ್ಡ ನಿಂದುಗೊಂಗು – ಆರನ್ನೂ ಹೋಪಲೆ ಬಿಡೆ – ಹೇಳಿಗೊಂಡು.
ಅದಕ್ಕೆ ಪ್ರೀತಿಲಿ ಬೈಕ್ಕೊಂಡೇ ಅಮ್ಮ ಬಾಯಿಚೀಪೆ ಮಾಡಿ ಕಳುಸುಗು.
ಸಿಕ್ಕಿದ್ದು ಚಾನ್ಸು – ಇನ್ನೊಂದರಿ ಬತ್ತೆ; ಹೇಳಿಗೊಂಡು ಹಟ್ಟಿಗೆ ಹೋಕು ಮೋಳಮ್ಮ.
~
ಅದರ ಅಬ್ಬೆ – ಗೋಪಿಅಜ್ಜಿ ಹೋದಮತ್ತೆ ಆ ಜಾಗೆ – ಹಟ್ಟಿಯ ಈಚ ಕರೇಣ ಜಾಗೆ – ಮೋಳಮ್ಮಂಗೆ.
ಬೊಳುಂಬು ಮಾವನ ಬೇಂಕಿಲಿ ಎದೂರಂಗೆ ಒಂದು ಜೆನ ಕೂದಂಡು ಇರ್ತಲ್ಲದೋ – ಆರಾರು ಎಂತೆಂತ ಮಾಡ್ತವು -ನೋಡಿಗೊಂಡು, ಅದೇ ನಮುನೆ ಆತು ಈ ದನದ ಕತೆಯುದೇ!
ಆರಾರು ಎಂತೆಂತ ಮಾಡಿಗೊಂಡಿದ್ದವು – ಆರು ಹಟ್ಟಿ ಹೊಡೆಂಗೆ ಬತ್ತವು, ಆರು ಅಕ್ಕಚ್ಚು ತತ್ತವು, ಆರು ಹಿಂಡಿ ಡಬ್ಬಿಗೆ ಕೈ ಹಾಕುತ್ತವು – ಪೂರಾ ಲೆಕ್ಕ ಮಡಿಕ್ಕೊಂಬ ಕೆಲಸ ಇದುವೇ ಮಾಡೆಡದೋ! – ಈಚ ಕರೆಣ ಜಾಗೆ ಸಾರ್ಥಕ ಆಗೆಡದೋ!
ಮನೆಯೋರು ಹಟ್ಟಿಯ ನೋಡುವ ಹೆಚ್ಚಿನ ಸರ್ತಿಯೂ ಮೋಳಮ್ಮ ಮನೆಯ ನೋಡಿಗೊಂಡು ಇಕ್ಕು!
~
ಹಳೆಯ ಮುಳಿಮನೆಂದ ಹೊಸ ಹಂಚಿನ ಮನೆಗೆ ಹೋವುತ್ತ ಸಂಕ್ರಮಣ!
ಹಳೆಮನೆಂದ ನೂರುಮಾರು ದೂರಕ್ಕೆ ಪಾಯ ತೆಗದ್ದವು. ಪಾಯ ತೆಗದು ಮಣ್ಣು ಕಲಸಿದ್ದವು.
ಮಣ್ಣ ಗೋಡೆಯ ಕೆಲಸವುದೇ ಸುರು ಮಾಡಿದ್ದವು.
ಅತ್ತಿತ್ತೆ ಸಣ್ಣ ನೀರು ಸಾಗುಸಲೆ ಪಡಿಗೆ ಕುತ್ತಿದ್ದವು, ಹಾಳೆಚಿಳ್ಳಿದೇ ಮಡಗಿದ್ದವು.
ಕೆಲಸದ ಐತ್ತ, ಚೋಮನವು ಹೊತ್ತಪ್ಪಗ ಮನಗೆ ಹೋಯಿದವು.
ಮೋಳಮ್ಮ ಒಂದರಿ ಮೇಲ್ತನಿಕೆ ಮಾಡೆಡದೋ – ಎಂತೆಲ್ಲ ಆಯಿದು ಕೆಲಸ ಹೇಳಿಗೊಂಡು!
ಕಲಸಿದ ಮಣ್ಣಿನ ಪೂರಾ ನೆಡದು ನೆಡದು ಪಾಕಬಯಿಂದೋ, ಒಣಗಿದ್ದೋ ನೋಡಿತ್ತು.
ಎಡಿಗಾದಷ್ಟು ಸಗಣ ಹಾಕಿತ್ತು, ಹಾಳೆಕಡೆಗಳ ತಿಂದುಗೊಂಡತ್ತು – ಮರದಿನ ಚೋಮ ಬಂದು ಪರಂಚಿಯೇ ಪರಂಚಿತ್ತು!
ಹೆ, ಆರು ಪರಂಚಿರೆ ಮೋಳಮ್ಮಂಗೆ ಎಂತ ಬೆಶಿ! ಕೇರೇ ಇಲ್ಲೆ.
ಲೆಖ್ಖವೇ ಅಲ್ಲ. ಅಲ್ಲಿಗೆ ಅಪ್ಪಮ್ಮ, ಎಂಗೊ ಹೋಪಲಕ್ಕಡ, ಮೋಳಮ್ಮ ಎಂತಕೆ ಹೋಪಲಾಗ?! 😉
~
ಮನೆಕಟ್ಟಿ ಆತು, ಮನೆಯ ಹತ್ತರೆ ಹಟ್ಟಿಯುದೇ.
ಒಕ್ಕಲುದೇ ಆತು. ಪುನಾ ಹಟ್ಟಿಲಿ ಕರೇಣ ಸೀಟುದೇ ಸಿಕ್ಕಿತ್ತು ಮೋಳಮ್ಮಂಗೆ.
ಮನೆಬಾಗಿಲು ನೋಡ್ಳೆ.
ಹಗಲೊತ್ತು ಗುಡ್ಡಗೆ ಹೋದರೂ, ಹೊತ್ತಪ್ಪಗ ಎತ್ತಿಗೊಂಗು!
ಈಗ ಮೋಳಮ್ಮಂಗೆ ಮನೆ ಬಾಗಿಲು ಮಾಂತ್ರ ಅಲ್ಲ, ತೋಟದ ದಾರಿಯುದೇ ಕಾಣ್ತು.
ಅಮ್ಮ ಹಸಿಯೋ ಎಂತಾರು ತತ್ತರೆ ದೂರಂದ ತಪ್ಪಗಳೇ ಗೊಂತಾವುತ್ತು.
ಮನಗೆ ಆರಾರು ಬಂದರುದೇ ಅದಕ್ಕೆ ಗೊಂತಕ್ಕು.
ಹಟ್ಟಿಗೆ ಸಂಬಂಧಿತ ಎಲ್ಲಾ ಮೇಲುಸ್ತುವಾರಿಗೆ ಅನುಕೂಲವಾಗಿತ್ತು ಅದರ ಜಾಗೆ.
ಹಟ್ಟಿಗೆ ಗುರಿಕ್ಕಾರ್ತಿ ಆಗಿತ್ತು ಹೇಳಿರೂ ಸರಿಯೇ ಇದಾ!! 😉
~
ಪ್ರಕೃತಿಸಹಜವಾಗಿ ಮೋಳಮ್ಮ ಅಮ್ಮ ಅಪ್ಪ ಕಾಲ ಹತ್ತರೆ ಬಂತು.
ಎಲ್ಲೊರಿಂಗೂ ಕೊಶಿ. ಗಡಸು ತೊಡಮಣಿಕ ಆತು.
ಸುರೂವಾಣ ಕಂಜಿ – ಭಾರೀ ವಿಶೇಷದ್ದು.
“ಕಪಿಲೆ” ಬಣ್ಣದ ಕಂಜಿ ಇದಾ! ಲಕ್ಷಕ್ಕೊಂದುದೇ ಇರ್ತಿಲ್ಲೆಡ, ತುಂಬಾ ವಿಶೇಷಡ, ಮೋಂತಿಮಾರುಮಾವ ಹೇಳಿತ್ತಿದ್ದವು.
ಗೋರೋಚನದ ಅಬ್ಬೆ, ಕಪಿಲೆಬಣ್ಣದ ಕಂಜಿಯ ಕೊಟ್ಟು ಹಟ್ಟಿಯ ಬೆಲೆ ಇನ್ನುದೇ ಜಾಸ್ತಿ ಮಾಡಿತ್ತು ಹೇಳಿ ಅಮ್ಮಂಗೆ ಕೊಶಿಯೋ ಕೊಶಿ!
~
ಇದೇ ತೊಡಮಣಿಕ ಆಗಿಪ್ಪಗ ಮೋಹನಬಂಟನಲ್ಲಿ ಒಂದು ಸರಿಗೆಯ ಉರುಳಿಂಗೆ ಬಿದ್ದು, ಅದರ ಬಿಡುಸಿಗೊಂಡು ಬಂದ ಶುದ್ದಿ ನಾವಂದು ಮಾತಾಡಿದ್ದು. ಸಂಕೊಲೆ ಇಲ್ಲಿದ್ದು.
ಆ ಶುದ್ದಿ ಓದದ್ದರೆ ಒಂದರಿ ಓದಿಕ್ಕಿ, ಇದಕ್ಕೆ ಪೂರಕವಾಗಿದ್ದು.
ಹಾಂಗೆ, ಒಂದೇಒಂದು ದಿನ ಅದು ಹಟ್ಟಿಗೆ ಬಪ್ಪದರ ತಪ್ಪುಸ!
ಅಷ್ಟೂ ನಿಷ್ಟೆ ಅದಕ್ಕೆ.
~
ಇನ್ನಾಣ ಕಂಜಿ ಬಂತು, ಇದರದ್ದೇ ಬಣ್ಣ.
ಆ ಕಂಜಿಯನ್ನು ಇದರದ್ದೇ ಆದ ರೀತಿಲಿ ಬೆಳೆಶಿತ್ತು.
ಮುಂದೆ ಸುಮಾರು ಕಂಜಿ ಹಾಕಿತ್ತು ಈ ಮೋಳಮ್ಮ.
ಹಟ್ಟಿ ಬೆಳಗಿಯೊಂಡೇ ಇತ್ತು. ಒಟ್ಟಿಂಗೆ ಮೋಳಮ್ಮನ ಕುಟುಂಬವುದೇ.
ಅಂತೂ ಅದರ ಅವಧಿಲಿ ಒಪ್ಪಣ್ಣನ ಮನೆಲಿ ಹಾಲಿಂಗೆ ಕೊರತ್ತೆ ಆಯಿದಿಲ್ಲೆ.
ಕರವಲೆ ಸುರು ಮಾಡುವಗ ಒಂದು ಚೆಂಬು ಕೊಡುಗು, ಬತ್ತುಸುಲೆ ಅಪ್ಪಗ ಅರ್ದ ಗ್ಳಾಸು ಆದರೂ ಕೊಟ್ಟೇ ಕೊಡುಗು.
ಕರವಲೆ ಹೋದವಕ್ಕೆ ಬೇಜಾರು ಮಾಡದ್ದಷ್ಟು ಆದರೂ ಕೊಟ್ಟೇ ಕೊಡುಗು. ಲೀಟರು ಲೆಕ್ಕಲ್ಲಿ ಅಲ್ಲದ್ದರೂ ಚಮ್ಚ ಲೆಕ್ಕಲ್ಲಿ ಆದರೂ..!
ಅದರ ಕರವಲೆ ಹೋಪಗ ಪ್ರೀತಿಯೇ ನೆಂಪಕ್ಕಷ್ಟೆ, ಹಾಲಿನ ನೆಂಪಲ್ಲ.
~
ಮೋಳಮ್ಮನ ಕರೆತ್ತ ಸಮೆಯಲ್ಲಿ ಉರುವೆಲಿನ ಹತ್ತರೆ ನಿಂದುಗೊಂಡಿದ್ದರೆ – ಚೆಂಬುದೇ ಬೇಡ,ನೀರುದೇ ಬೇಡ, ಕಂಜಿಯುದೇ ಬೇಡ – ಸೀತ ಹೋಗಿ ಒಂದು ಹನಿ ಕರದು ಹಾಲು ಕುಡಿತ್ತ ದುರ್ಬುದ್ಧಿ ಪ್ರೀತಿ (?) ಒಪ್ಪಣ್ಣಂಗೆ ಇತ್ತು.
ಅದೆಂತೂ ಬೈಕ್ಕೊಂಡಿತ್ತಿಲ್ಲೆ. ಎಂತಕೆ ಹೇಳಿರೆ, ಅದರ ಹಾಲನ್ನೇ ಅಲ್ಲದೋ ನಾವು ಕುಡಿವದು!
ಅದಕ್ಕೂ ಅದು ಗೊಂತಿತ್ತು.
ಕರವದು ಅಪುರೂಪ ಆದರೂ ಅದರ ಮೈಗೆ ಹತ್ತಿ ಹಾರುದು ಸಾಮಾನ್ಯದ ಮಾತು ಆಗಿತ್ತು.
ಮೋಳಮ್ಮನ ಭುಜವ-ಮೈಯ ಪ್ರೀತಿಲಿ ಹಿಡ್ಕೊಂಡು ಅದರ ಮೇಲೆ ಎರಾಗಿ ನಿಂಬದು.
ಅದು ಅತ್ತಿತ್ತೆ ಹಂದದ್ದ ಹಾಂಗೆ ಗಟ್ಟಿ ನಿಂದುಗೊಂಬದು – ಸುಮಾರು ಹೊತ್ತು ಹಾಂಗೇ ನಿಂದು, ಮತ್ತೆ ಮೆಲ್ಲಂಗೆ ಕೊರಳು ಉದ್ದಲೆ ಸುರು ಮಾಡುದು.
ಅದು ಪಕ್ಕನೆ ಹಂದಿದ ಹಾಂಗಾಗಿ ನಮ್ಮ ಕಾಲಮೇಲೆಯೋ ಮಣ್ಣ ಪಾದ ಮಡಗಿರೆ ನಮ್ಮಂದ ಜಾಗ್ರತೆಲಿ ಕಾಲು ತೆಗವದು,ಒಂದು ವೇಳೆ ಅದಕ್ಕೆ ಕೊರಳು ಬಚ್ಚಿರೋ, ಬೇನೆ ಆದರೋ – ನಿದಾನಕ್ಕೆ ಹಂದುಸಿ; ಬೇನೆ ಆಗದ್ದ ಹಾಂಗೆ ಮೋರೆ ತಿರುಗುಸುದು – ಎಲ್ಲವುದೇ ಜಾಗ್ರತೆಲಿ ಇದ್ದ ಕಾರಣ ಎಷ್ಟು ಸಣ್ಣ ಬಾಬೆಗೂ ಮೋಳಮ್ಮನ ಹತ್ತರೆ ಹೋಪಲೆ ಹೆದರಿಕೆ ಆಗ.
~
ಸುಮಾರೊರಿಶ ಅಪ್ಪಗ ಕಂಜಿ ಹಾಕುತ್ತ ಮೋಳಮ್ಮ ಕಂಜಿ ಹಾಕುದರ ನಿಲ್ಲುಸಿತ್ತು.
ಈಗೀಗ ಸರಿಯಾಗಿ ಹೋರಿಗಳೂ ಸಿಕ್ಕುತ್ತವಿಲ್ಲೆ ಹೇಳ್ತ ತೊಂದರೆಯೂ ಇತ್ತು ಅದರ್ಲಿ!
ಕಂಡಿಗೆ ಶಾಮಡಾಗುಟ್ರು ಬಂದು – ಇದಕ್ಕೆ ಇಂಜೆಕ್ಷನು ಕೊಡುದು ಒಳ್ಳೆದು – ಹೇಳಿದವು.
ನಿಜವಾಗಿ ಹಾಂಗೆ ಹೇಳಿರೆ ಎಂತ ಹೇಳಿ ಒಪ್ಪಣ್ಣಂಗೆ ಅರಡಿಯದ್ದರೂ, ಅದು ಬೇಪಲೇ ಬೇಡ (ಬೇಡ್ಳೇ ಬೇಡ) ಹೇಳಿ ಒಪ್ಪಣ್ಣ ಹಟ ಹಿಡುದ್ದು ಅಂದು! ಇಂಜೆಕ್ಷನು ಕೊಡ್ತ ಬೇನೆ ಆ ಮೋಳಮ್ಮಂಗೆ ಬೇಡ ಹೇಳ್ತ ಯೋಚನೆಯೋ ಎಂತ್ಸೋ! 🙂
ದೊಡ್ಡ ಜಾತಿ ದನದ ಇಂಜೆಕ್ಷನಿನ ಈ ಮೋಳಮ್ಮಂಗೆ ಕೊಟ್ಟು, ಮೋಳಮ್ಮ ಕಂಜಿ ಹಾಕುದರ ಮನೆಲಿ ಆರುದೇ ಬಯಸಿದ್ದವಿಲ್ಲೆ.
ಕಂಜಿ ಹಾಕುವಗ ಹಾಕುಗು, ಹಾಕದ್ದರೂ ಸಾರ ಇಲ್ಲೆ- ಅಪ್ಪ ಹೇಳಿದ ಮತ್ತೆ ಅದಕ್ಕೊಂದು ವಿರಾಮ ಸಿಕ್ಕಿತ್ತು.
ಅದರಿಂದ ಮತ್ತೆ ಅದು ಕಂಜಿಯೇ ಹಾಕಿದ್ದಿಲ್ಲೆ! ಎಂದೆಂದಿಂಗೂ.
ಆದರೆ ಎಲ್ಲಾ ಪುಳ್ಳಿಯಕ್ಕಳೂ ಅದರ ಕೆಚ್ಚಲಿಂಗೆ ಬಾಯಿ ಹಾಕಿಗೊಂಡೇ ಇತ್ತಿದ್ದವು.
ಮಾತೃ ಹೃದಯದ ಅಜ್ಜಿ ಅಲ್ಲದೋ – ಅಂತೇ ನಿಂದುಗೊಂಡು ಇತ್ತು, ಮಾತಾಡದ್ದೆ.
~
ಹಟ್ಟಿಲಿ ಒಂದು ಗಾಂಭೀರ್ಯ ಮೂರ್ತಿಯಾಗಿ, ಎಲ್ಲೋರಿಂಗೂ ಅಕ್ಕಾದ, ಬೇಕಾದ ಒಂದು ವೆಗ್ತಿತ್ವ ಆಗಿಬಿಟ್ಟತ್ತು ಈ ಮೋಳಮ್ಮ.
ನಮ್ಮ ಸಂಸರ್ಗಂದಾಗಿ ಸುಮಾರು ಭಾಷಾ ಜ್ಞಾನ ಉಂಟಾಯಿದು.
ಅದರ ಕೆಲೆಯಾಣಲ್ಲೇ ಅನೇಕ ಭಾವಾರ್ಥಂಗೊ ಗೊಂತಕ್ಕಡ, ಅಮ್ಮ ಹೇಳುಗು.
ಗುಡ್ಡೆಂದ ಬಂದು ಹಟ್ಟಿದಾರಿಲಿ ಕಾವಗ ಒಂದು ನಮುನೆ ಕೆಲೆಯಾಣ,
ಗುರ್ತಪರಿಚಯ ಮಾತಾಡ್ಳೆ ಒಂದು ನಮುನೆ ಕೆಲೆಯಾಣ,
ಹಿಂಡಿ ಕೇಳುಲೆ ಇನ್ನೊಂದು ನಮುನೆ ಕೆಲೆಯಾಣ,
ಮೂರುಸಂದ್ಯೆಗೆ ತಿಂಬಲೆ ಹಾಕುಲೆ ಇನ್ನೊಂದುನಮುನೆ ಕೆಲೆಯಾಣ
– ಹೀಂಗೆ ಅದರದ್ದೇ ಭಾಶೆಲಿ ಅದು ಬೇರೆಬೇರೆ ನಮುನೆ ವಿಷಯಂಗಳ ಹೇಳಿಗೊಂಡಿತ್ತು. ಅದು ಹೇಳಿದ್ದೆಲ್ಲವೂ ಅಮ್ಮಂಗೆ ಅರ್ತ ಅಕ್ಕು.
~
ಮೋಳಮ್ಮನ ಪ್ರಾಯದ್ದೇ ಆದ ಇನ್ನೊಂದು ದನ ಇತ್ತು, ಬೆಳೀದು. ಅದು ಕಜೆದೊಡ್ಡಮ್ಮನ ಮನೆಂದ ತಂದದು.
ಆ ದನವುದೇ, ಈ ಮೋಳಮ್ಮಂದೇ – ಹಳೆಕಾಲದ ಮನೆಯ ಅಕ್ಕತಂಗೆಕ್ಕಳ ಹಾಂಗೆ ಇತ್ತಿದ್ದವು.
ಒಂದೇ ಒಂದು ಜಗಳ ಆಗಲೀ, ತಾಡಿಗೊಂಡದಾಗಲೀ, ಅತ್ತಿತ್ತೆ ಮಾಡಿಗೊಂಡದರ ಕಂಡವು ಇಲ್ಲೆ!
ಮೋಳಮ್ಮಂಗೆ ಸರಿಸುಮಾರು ಇಪ್ಪತ್ತೊರಿಶ ಅಪ್ಪಗ ಆಚ ದನ ತೀರಿಗೊಂಡತ್ತು. 🙁
ಒರಿಶ ಇಪ್ಪತ್ತಪ್ಪಗಳೂ ಜವ್ವನ್ತಿಯ ಹಾಂಗೇ ಕಂಡುಗೊಂಡು ಇತ್ತು ಮೋಳಮ್ಮ.
~
ಮತ್ತೂ ಮೂರು ನಾಕೊರಿಶ ಅಪ್ಪಗ ಮೋಳಮ್ಮನ ಎಡ ಕಣ್ಣಿಲಿ ಬೆಳೀ ಒಂದು ಪರದೆ ಬಂತು.
‘ಹೂಗು ಬಪ್ಪದು’ ಹೇಳ್ತವಡ ಹಳ್ಳಿ ಬಾಶೆಲಿ, ಹಾಂಗೆ ಆದರೆ ಮತ್ತೆ ಕಾಣ್ತಿಲ್ಲೆ.
ಅಪ್ಪು, ಮೋಳಮ್ಮಂಗೆ ಈಗ ಎಡದ ಕಣ್ಣು ಕಾಣ್ತಿಲ್ಲೆ. 🙁
ಮದಲಿಂಗೆ ಅಷ್ಟು ದೂರಲ್ಲಿ ನಮ್ಮ ಕೈಲಿ ಎಂತರ ಇಪ್ಪದು ಹೇಳಿ ಗುರುತುಸುತ್ತ ಮೋಳಮ್ಮ ಈಗ ಬರೇ ಪರಿಮ್ಮಳಲ್ಲಿಯುದೇ, ಬಲದ ಕಣ್ಣಿಂದಾಗಿಯುದೇ ಗುರುತುಸುದು.
ಕರಗುಸುಲೇ ಎಡಿಗಾಯಿದಿಲ್ಲೆ, ಈ ಕಟು ಸತ್ಯವ. ಆದರೂ, ಎಂತ ಮಾಡುದು, ಪ್ರಾಯ ಅಪ್ಪಗ ಒಂದೊಂದೇ ಅಂಗಾಂಗಂಗೊ ಕೈ ಕೊಡ್ಳೆ ಸುರು ಮಾಡ್ತಲ್ಲದೋ!
~
ಕಣ್ಣಿನ ದೃಷ್ಟಿ ಕಮ್ಮಿ ಆದ ಮೇಗೆ ಅದಕ್ಕೆ ಮದಲಾಣ ಹಾಂಗೆ ನೆಡಕ್ಕೊಂಬಲೆ ಎಡಿತ್ತಿಲ್ಲೆ.
ಎದುರು ಎಂತ ಇದ್ದು ಹೇಳ್ತದರ ನಿಖರವಾಗಿ ಗುರುತುಸುಲೆ ಎಡಿಯದ್ದ ಕಾರಣ, ದೂರದ ಗುಡ್ಡಗೆ ಹೋಪದು ಒಳ್ಳೆದಲ್ಲ ಹೇಳ್ತದು ಮನೆಯ ಸಮಷ್ಟಿಯ ನಿರ್ಧಾರ ಆಗಿತ್ತು.
ಹಾಂಗೆ, ಹಟ್ಟಿಂದಲೇ ಒಳಗೊಂಡು, ಎದುರಾಣ ಗುಡ್ಡೆಯ ಸೇರಿದ ಹಾಂಗೆ ಒಟ್ಟಾಗಿ ಒಂದು ಬೇಲಿ ಹಾಕಿದ ಜಾಗೆ ತೆಯಾರು ಮಾಡಿ ಆತು – ಮೋಳಮ್ಮಂಗೆ ಬೇಕಾಗಿಯೇ.
ಇನ್ನು ಮೋಳಮ್ಮ ಹೆರಾಣ ಗುಡ್ಡಗೆ ಹೋಪಲಿಲ್ಲೆ. ವಳಚ್ಚಲಿಲೇ ತಿರುಗಾಟ. ಎಷ್ಟು ಬೇಕಾದರೂ, ಮನಸ್ಸು ಬಂದಷ್ಟು ಸರ್ತಿ!
~
ಮೋಳಮ್ಮ ಎಂತ ಅರ್ಗೆಂಟು ಮಾಡಿದ್ದಿಲ್ಲೆ. ಹೆರ ಹೋಗಿಯೇ ಕಳಿಯೆಕ್ಕು ಹೇಳಿ ಹಟ ಮಾಡಿದ್ದಿಲ್ಲೆ.
ಅದಕ್ಕೂ ಅರ್ತ ಆಗಿಯೊಂಡು ಇತ್ತು, ಮರದಿನಂದ ಅದರದ್ದೇ ಆದ ಒಳಚ್ಚಾಲಿಲಿ ತಿರುಗುಲೆ ಸುರು ಮಾಡಿತ್ತು.
ಕಣ್ಣಳತೆಯ ಜಾಗೆ ಆದ ಕಾರಣ ಮನುಷ್ಯರ ಕಣ್ಣಿಂಗೆ ಬಿದ್ದುಗೊಂಡೇ ಇತ್ತು.
ತೋಟಕ್ಕೆ ಹೋಗದ್ದ ಹಾಂಗೆ ಒಂದೊಂದರಿ ನೋಡಿಗೊಂಡ್ರೆ ಆತು.
ಕದ್ದು ತಿಂಗು ಹೇಳ್ತ ಹೆದರಿಕೆಲಿ ಅಲ್ಲ, ಬದಲಾಗಿ – ತೋಟದ ಗುಂಡಿಗೊ ಕಾಣದ್ದೆ ಎಂತಾರು ಅಪ್ಪಲಾಗ ಹೇಳ್ತ ಸದುದ್ದೇಶಲ್ಲಿ.
ಎಡಿಗಪ್ಪ ಕಾಲಲ್ಲಿ ಮೋಳಮ್ಮ ದಾರಾಳ ತೋಟಕ್ಕೆ ಹೋಯಿದು. ಈಗ ಮೋಳಮ್ಮನೂ ತೋಟಕ್ಕೆ ಹೋಪ ಪ್ರಯತ್ನ ಮಾಡಿತ್ತಿದ್ದಿಲ್ಲೆ.
~
ಒಪ್ಪಕ್ಕ ರಾಮಜ್ಜನ ಕೋಲೇಜಿಂಗೆ ಹೋಪಕಾರಣ ಪರೀಕ್ಷೆಯೋ, ಲೇಬೋ – ತಪ್ಪಲಿಲ್ಲೆ.
ಎಂತಾರು, ಯೇವದಾರು ಇದ್ದೇ ಇರ್ತು. ಹಾಂಗೆ ರಜೆ ಇದ್ದರೆ ಓದದ್ದೆ ಕಳಿಯ.
ಒಪ್ಪಕ್ಕನ ಒಂದು ಅಬ್ಯಾಸ, ಮರದ ಬುಡಲ್ಲಿ ಓದುದು.
ಮನಾರದ ಒಂದು ಗೋಣಿಯೂ, ಸಣ್ಣ ಒಸ್ತ್ರವೂ ತೆಕ್ಕೊಂಡು ಮರದ ಬುಡಲ್ಲಿ ಹಾಕಿಯೊಂಬದು. ಅದರ ಮೇಗೆ ಎಲ್ಲ ಪುಸ್ತಕಂಗಳ ಹರಗಿ ಮಡಗಿ ಒಂದೊಂದೇ ತೆಗದು ಓದುದು.
ಪುತ್ತೂರು ದೇವಸ್ಥಾನದ ಗೆದ್ದೆಲಿ ಸಂತೆಯೋರು ಮಾಡಿದ ನಮುನೆಲಿ! 😉
ಒಪ್ಪಕ್ಕ ಈಗ ಓದುದು ಮೋಳಮ್ಮನ ಜಾಗೆಲಿ ಅಲ್ಲದೋ?
ಹಾಂಗೆ ಒಂದರಿ ಮೋಳಮ್ಮನೂ ಓದಲೆ ಬಂತು. ಮೋರೆ, ಕೈ ಎಲ್ಲ ಮೂಸಿ ಮೂಸಿ ವಿಚಾರಣೆ ಆದ ಮತ್ತೆ ಪುಸ್ತಕಂಗಳನ್ನೂ ಒಂದೊಂದೇ ಓದಲೆ ಸುರುಮಾಡಿತ್ತಡ.
ಕ್ರಯದ ಪುಸ್ತಕಂಗೊ ಅಲ್ಲದಾ, ಇನ್ನು ತಿಂದೇ ಬಿಡ್ತು ಹೇಳಿ ಒಪ್ಪಕ್ಕಂಗೆ ಹೆದರಿಕೆ ಅನುಸಿ – ಜೋರು ಬೈದತ್ತಡ – ಎಂತ ಮೋಳಮ್ಮ, ಹೋವುತ್ತೆಯಾ ಇಲ್ಲೆಯಾ – ಕಂಡದು ಪೂರ ಬೇಕು ನಿನಗೆ – ಹಪ್ಪಾ! ಹೇಳಿಗೊಂಡು.
ಅದರ ಕೇಳಿ ಅತ್ಲಾಗಿ ಹೋದ ಮೋಳಮ್ಮ, ಮರದಿನ ಒಪ್ಪಕ್ಕ ಓದಲೆ ಹೋದರೂ ಹತ್ತರೆ ಬಯಿಂದಿಲ್ಲೆಡ.
(ನಿನ್ನ ಅಕ್ಷರ ನೋಡಿಯೇ ಅದು ಬಾರದ್ದು ಹೇಳಿ ಒಪ್ಪಕ್ಕನ ನಂಬುಸಲೆ ಹೆರಟದಕ್ಕೆ ಡಬಾರನೆ ಒಂದು ಶಬ್ದ ಕೇಳಿತ್ತು, ಬೆನ್ನಿನ ಹೊಡೆಂದ! 😉 )
~
ಈಗ ಒಂದಾರು ತಿಂಗಳಿನ ಹಿಂದೆ, ಮೋಳಮ್ಮ ಒಂದರಿ ಬಿದ್ದತ್ತು.
ಮನಗೆ ಬತ್ತ ಮಾರ್ಗಲ್ಲೇ. ಎಲ್ಲೋರಿಂಗೂ ಕಾಂಬಲ್ಲೇ! ಅತ್ತಿತ್ತೆ ಓಡಾಡಿಗೊಂಡು ಇದ್ದದು ಒಂದರಿಯೇ ಬಿದ್ದು ಒಶ ಇಲ್ಲದ್ದ ಹಾಂಗಾಗಿಬಿಟ್ಟತ್ತು.
ಅಡ್ಡತಲೆ ಹಾಕಿ ಕಣ್ಣು ಹೊರಳುಸಿತ್ತು. ಅಮ್ಮಂಗೆ ಹೆದರಿಕೆ, ಬೇಜಾರ ಗಡಿಬಿಡಿ – ಎಲ್ಲವೂ ಆತು.
ಎಲ್ಲೋರು ಸೇರಿ ನೀರು ತಳುದು ಆತು, ಬೆಳುಲಿಲಿ ಮೈ ಬೆಶ್ಚಂಗೆ ಮಾಡಿ ಶೇಕ ಕೊಟ್ಟೂ ಆತು!
ಕುಲದೇವರಿಂದ ಹಿಡುದು ಇಷ್ಟದ ಎಲ್ಲಾ ದೇವರ ನೆಂಪಾತೋ ತೋರುತ್ತು ಅಮ್ಮಂಗೆ.
ರಜ ಹೊತ್ತಿಲಿ ಅದರಷ್ಟಕೇ ಸರಿ ಆಗಿ ಎದ್ದು ನಿಂದತ್ತು.
ಅಬ್ಬ! ಎಲ್ಲೋರಿಂಗೂ ಜೀವ ಬಂದ ಹಾಂಗಾತು.
~
ಬಿದ್ದಲ್ಲಿಂದ ಅದೇ ಆಗಿ ನೆಡಕ್ಕೊಂಡು ಬಂತೋ – ಏನು ಮಾಡಿರೂ ಹಟ್ಟಿ ಒಳಂಗೆ ಹೋಗ.
ಮೆಲ್ಲಂಗೆ ದೂಡಿ ಅತು, ಹಿಂಡಿ ಹಿಡುದು ಒಳ ದಿನಿಗೆಳಿ ಆತು, ಉಹೂಂ!
ಹಟ್ಟಿ ಬಾಗಿಲಿಲಿ ನಿಂದಿದು, ದೊಡ್ಡ ಒಂದು ಕಲ್ಲು ಹೊಸ್ತಿಲಿನ ದಾಂಟಿರೆ ಹಟ್ಟಿಯೇ ಮತ್ತೆ.
ದಾಂಟುತ್ತೇ ಇಲ್ಲೆ ಹೊಸ್ತಿಲಿನ.
ಹೆದರಿಕೆಯೋ, ಬೇಡ ಹೇಳಿಯೋ, ಆಗ ಹೇಳಿಯೋ – ಎಂತರ ಅರಡಿಯ ನಮ್ಮ ಕಣ್ಣಿಂಗೆ.
ಅದಾಗಿಯೇ ಇಷ್ಟಪಟ್ಟ ಜಾಗೆಗೆ ಅದುವೇ ಹೋಗ, ಮತ್ತೆಂತ ಮಾಡ್ತದು?
ಅಲ್ಲೇ ಅತ್ಲಾಗಿ ಇದ್ದ ಕಂಜಿಗಳ ಹಟ್ಟಿಗೆ ಕರಕ್ಕೊಂಡು ಹೋದ್ದು ಅದರ.
ಮೋಳಮ್ಮನ ಪುಳ್ಳ್ಯಕ್ಕಳೇ ಇಪ್ಪದು ಅಲ್ಲಿ. ಪುಳ್ಳಿಯಕ್ಕೊ, ಪುಳ್ಳಿಯ ಮಗಳಕ್ಕೊ – ಎಲ್ಲ.
ಮೊನ್ನೆ ಮೊನ್ನೆ ಒರೆಂಗೂ ಹಟ್ಟಿಯ ಈಚ ಕರೇಲಿ ನಿಂದು ಇಡೀ ಮನೆಯ ನೋಡಿಗೊಂಡಿದ್ದ ಮೋಳಮ್ಮ ಈಗ ಆಚ ಕಂಜಿಗಳಹಟ್ಟಿಲಿ ಪುಳ್ಳರುಗಳ ಒಟ್ಟಿಂಗೆ ಬದುಕ್ಕುಲೆ ಸುರುಮಾಡಿತ್ತು.
~
ಒಂದೆರಡು ತಿಂಗಳಿಲಿ ಮತ್ತೆ ಅದರ ಆರೋಗ್ಯ ಸರಿ ಆತು, ಅದರಷ್ಟಕೇ.
ಅದರಷ್ಟಕೇಯೋ ಅಲ್ಲ ಅಮ್ಮನ ಸಾಂಕಾಣಲ್ಲಿಯೋ – ಒಪ್ಪಣ್ಣಂಗರಡಿಯ.
ಅಂತೂ ಸುದಾರಣೆ ಆತು. ಅದುವೇ ಆಗಿ ಅದರ ಹಳೆ ಜಾಗೆಗೆ ಬಂದು ನಿಂದುಗೊಂಡತ್ತು.
ಪುನಾ ಮೊದಲಾಣ ಮೋಳಮ್ಮ ಸಿಕ್ಕಿತ್ತು.
ಮನೆಯ ಹೊಡೆಂಗೆ ನೋಡಿಗೊಂಡು ಇತ್ತು.
ಎಂತ ಕಾಣ್ತೋ ಗೊಂತಿಲ್ಲೆ, ಆದರೆ ಸ್ವರಂಗೊ ಕೇಳಿಗೊಂಡಿತ್ತಲ್ಲದೋ – ಅಷ್ಟೇ ಸಾಕು ಅದಕ್ಕೆ, ಪಾಪ.
ಆರೋಗ್ಯ ಅಂತೂ ತುಂಬಾ ಸೂಕ್ಷ್ಮ ಆಗಿ ಬಿಟ್ಟತ್ತು. ಮದಲಿಂಗೆ ಎಳ್ಳಿಂಡಿ ಗಟ್ಟಿ ಹೇಳಿರೆ ಅದರ ಜೀವ!
“ಮೋಳಮ್ಮ – ಇದಾ ಎಳ್ಳಿಂಡಿ” ಹೇಳಿರೆ ಸಾಕು, ಅದಕ್ಕೆ ಗೊಂತಕ್ಕು.
ಕಣ್ಣು, ಮೂಗು, ಕೆಮಿ – ಮೂರನ್ನೂ ಅರಳುಸಿ ನಮ್ಮ ಹೊಡೆಂಗೆ ಬಕ್ಕು.
ಈಗ ಹಲ್ಲು ಪೂರ ಉದುರಿದ್ದು, ಗಟ್ಟಿ ಕೊಟ್ರೆ ತಿಂಬಲೆ ಎಡಿತ್ತಿಲ್ಲೆ.
ಆರೋಗ್ಯ ಸೂಕ್ಷ್ಮ ಆದ ಮೇಗೆ ಎಳ್ಳಿಂಡಿಯನ್ನೂ ಜಾಸ್ತಿ ಕೊಡ್ಳೆ ಗೊಂತಿಲ್ಲೆ, ಅಜೀರ್ಣ ಅಕ್ಕಡ – ಅಮ್ಮ ಬೈಗು!
ಪಾಪ..
~
ವಳಚ್ಚಲಿಲಿ ಮೆಲ್ಲಂಗೆ ತಿರುಗುಗು.
ಎಲ್ಲಿಗೂ ಹೋಪಲಿಲ್ಲದ್ದರೆ ಜಾಲಿನ ಹತ್ತರಾಣ ಗೇಟಿನ ಬುಡಲ್ಲಿ ನಿಂಗು.
ಮನೆಲಿ ಮಾತಾಡುದಕ್ಕೆ ಕೆಮಿಕೊಟ್ಟೊಂಡು.
ಅದೇ ನಮುನೆ ಇತ್ತು ಆ ಮೋಳಮ್ಮ.
ಅದರ ಚಟುವಟಿಕೆಲಿ ಇದ್ದ ಚುರುಕ್ಕು ಕಮ್ಮಿ ಆಯಿದು.
ಪ್ರಾಯ ಆದ್ದು ಕಾಂಬಲೆ ಸುರು ಆತು. ಮೈ ಜಗ್ಗಿತ್ತು. ಹೊಳೆತ್ತ ಪಳಪಳ ಕಮ್ಮಿ ಆತು.
ನೊಂಪು ಇದ್ದ ಮೈಲಿ ಉಣುಂಗು ತುಂಬಲೆ ಸುರು ಆತು. ಆದರೆ ಅದರ ಪ್ರೀತಿ ಹಾಂಗೇ ಇತ್ತು.
~
ಎಲ್ಲ ಸರಿಯಾಗಿಯೇ ಇತ್ತು.
ಮೊನ್ನೇಣ ಶುದ್ದಿ ಶುಕ್ರವಾರದ ದಿನ ಜಾಲಿನ ಗೇಟು ತೆಗದಿತ್ತಿದ್ದು.
ಸೀತ ಜಾಲಿಂಗೆ ಬಂತು. ಅಮ್ಮ ಮಾಡಿದ ದಾಸನ ಗೆಡು, ಗುಲಾಬಿಗೆಡುವಿನ ರುಚಿ ನೋಡ್ಳೆ ಹೋತು.
ಇದಾ, ಹಿಂಡಿ ತಿನ್ನು ಬಾ, ಅದುಬೇಡ – ಹೇಳಿ ಒಪ್ಪಕ್ಕ ಎಷ್ಟೂಹೇಳಿರೂ ಕೇಳಿದ್ದಿಲ್ಲೆ.
ಮನೆಯ ಆಚ – ಈಚ ಹೊಡೆಲಿ ಪೂರ ಒಂದರಿ ನೆಡಕ್ಕೊಂಡು ಬಂತು. ಎಲ್ಲ ಸರಿ ಇದ್ದಲ್ಲದೋ ಹೇಳಿ ನೋಡಿಕ್ಕಿ ಪುನಾ ಹಟ್ಟಿಗೆ ಹೋತು.
~
ಮರದಿನ ಶೆನಿವಾರ.
ಉದಿಯಪ್ಪಗ ಏಳೆಕ್ಕಾದ ದನ ಎದ್ದಿದೇ ಇಲ್ಲೆ.
ಬೇಗ ಎದ್ದು ಅಕ್ಕಚ್ಚಿಂಗೆ ಕಾದು ನಿಂಬ ದನ ಅಂದು ಏಳುಲೇ ಮನಸ್ಸಿಲ್ಲದ್ದೆ ಮನುಗಿದ್ದು.
ಅಮ್ಮ ಎರಡು ಮೂರು ಸರ್ತಿ ಏಳು-ಏಳು-ಹೇಳಿತ್ತು.ಉಹೂಂ!
ಎಂತದೋ ಒಂದು ದಿವ್ಯ ಉದಾಸಿನತೆಲಿ ಮನಿಕ್ಕೊಂಡಿದು.
ಬಾಯಿಲಿ ಅಕ್ಕಿ ಕಡಕ್ಕೊಂಡೇ ಇತ್ತು.
ಹಾಂಗೆ ಮೆಲುಕು ಹಾಕುತ್ತರೆ ದನ ಆರೋಗ್ಯವಾಗಿದ್ದು ಹೇಳಿ ಲೆಕ್ಕ ಅಡ, ಅಜ್ಜನ ತಿತಿ ಹೇಳಿಕೆಗೆ ಬಂದ ಗಣೇಶಮಾವ ಹೇಳಿದವು.
ಏಳುಲೆ ಶೆಗ್ತಿ ಇಲ್ಲದ್ದಾಯಿಕ್ಕು ಹೇಳಿ ಅಪ್ಪ ಒಂದು ಬೆಲ್ಲತುಂಡು ಕೊಡ್ಳೆ ಹೇಳಿದವು ಅಮ್ಮನ ಹತ್ರೆ.
ಬೆಲ್ಲಲ್ಲಿ ಗುಲ್ಗೂಸು ಇದ್ದಡ ಅಲ್ಲದೋ – ಹಾಂಗೆ ದನಗೊಕ್ಕೆ ಬೆಲ್ಲ ಕೊಟ್ರೆ ರಜ್ಜ ಹೊತ್ತಿಲಿ ಶೆಗ್ತಿ ಬತ್ತು ಹೇಳ್ತ ಲೆಕ್ಕಲ್ಲಿ.
ಅಪ್ಪ ಬೇಂಕಿಂಗೆ ಹೆರಟವು.
ಗಣೇಶಮಾವ ಹೇಳಿಕೆ ಹೇಳಿಕ್ಕಿ ಮಾಷ್ಟ್ರುಮಾವನಲ್ಲಿಗೆ ಹೆರಟವು. ನಾವು ಒಂದರಿ ನೀರ್ಚಾಲಿಂಗೆ ಹೆರಟತ್ತು, ಷ್ಟೋರಿಂಗೆ.
ಒಪ್ಪಕ್ಕ ಹೇಂಗೂ ಶಾಲಗೆ ಹೋಯಿದನ್ನೆ!
ಮನೆಲಿ ಅಮ್ಮ ಮಾಂತ್ರ.
~
ಉಶಾರಿಲ್ಲೆ ಹೇಳ್ತ ಲೆಕ್ಕಲ್ಲಿ ಕಂಡಿಗೆಶಾಮಡಾಗುಟ್ರ ಬಪ್ಪಲೆ ಹೇಳಿ ಆತು.
ಬಂದು ನೋಡಿದ ಅವಕ್ಕುದೇ ಬೇಜಾರಾತು.
ಎಂತ ಮಾಡುದು, ಮೋಳಮ್ಮ ಅದಾಗಲೇ ಹೋಗಿ ಆಗಿತ್ತು…
ಪಿತೃಪಕ್ಷದ ಸಮೆಯಲ್ಲಿ, ಶುಕ್ರವಾರದ ಶುಭದಿನ ಕಳುದ ಮರದಿನ, ರಾಹುಕಾಲವೂ ಅಲ್ಲದ್ದ ಹೊತ್ತು ನೋಡಿ, ತೆಂಕಕ್ಕೆ ತಲೆ ಮಡಗಿ ಮೋಳಮ್ಮ ಹೆರಟತ್ತು.
ಆರು ಇಲ್ಲದ್ದರೂ, ಅದರ ಸಮೆಯ ಕಳುದ ಮತ್ತೆ ಒಂದು ಕ್ಷಣವೂ ಕಾಯಿದಿಲ್ಲೆ.
ಮನೆಲಿ ಇದ್ದದು ಅಮ್ಮ ಮಾಂತ್ರ.
~
ಮತ್ತೆ ದ್ವಾರಕದಣ್ಣನ ಕೆಲವು ಆಳುಗಳ ಬರುಸಿ, ಗುಂಡಿಗೆ ಹಾಕುತ್ತ ಕಾರ್ಯ.
ಜೀವಿತಾವಧಿಯ ಒಂದೊಂದು ಘಟನೆಗಳೂ ಅಮ್ಮಂಗೆ ಉಮ್ಮಳುಸಿ ಉಮ್ಮಳುಸಿ ಬಂತು.
ಒಂದು ತಲೆಮಾರು ಹಿಂದೆ ಸಣ್ಣ ಇಪ್ಪಗ ಚೆಲ್ಲು ಚೆಲ್ಲು ಆಡಿ ಕೊಶಿ ಕೊಟ್ಟೋಂಡಿದ್ದ ಮೋಳು..
ರಜ ದೊಡ್ಡ ಆದ ಮತ್ತೆ ಕೊಂಗಾಟ ಮಾಡ್ಳೆ ಕೊಂಗಾಟ ಮಾಡಿಗೊಂಡಿದ್ದ ಮೋಳು..
ಗಡಸು ಆದ ಮತ್ತೆ ಪ್ರೀತಿಲಿ ತೆಳ್ಳವು ತಿಂದ ಮೋಳಮ್ಮ..
ಮತ್ತೆ ತೊಡಮಣಿಕ ಆಗಿಪ್ಪಗ ಸರಿಗೆ ಉರುಳಿನ ತುಂಡುಸಿ ತಂದ ಮೋಳಮ್ಮ..
ಕಂಜಿಗಳ ಸಾಂಕಿ, ಒಳ್ಳೆ ಬುದ್ಧಿ ಕಲಿಶುವ ಮೋಳಮ್ಮ..
ಸೌಖ್ಯ ಇಲ್ಲದ್ದೆ ಆದ ಮೋಳಮ್ಮ..
ವಳಚ್ಚಲಿಲೇ ಸುತ್ತಿ ಸುತ್ತಿ ಜಾಲಿನ ಹತ್ತರೆ ಬಂದು ನಿಂದುಗೊಂಡಿದ್ದ ಮೋಳು..
ನಿನ್ನೆ ಮನೆ ಎದುರು ದಾಸನಗೆಲ್ಲು ತಿಂದ ಮೋಳು..
ಆಗ ಕೈಂದ ಬೆಲ್ಲತುಂಡು ಪ್ರೀತಿಲಿ ತಿಂದ ಮೋಳಮ್ಮ..
ಈಗ ಎಲ್ಲವನ್ನೂ ಬಿಟ್ಟು, ನೆಂಪು ಮಾತ್ರ ಆಗಿ ಹೋದ ಮೋಳಮ್ಮ..
ಗುಂಡಿಗೆ ಹಾಕುವಗ ದುಃಖ ಬಂದೇ ಬಿಟ್ಟಿದು.
ಒಂದು ಸೂಡಿ ಬೆಳುಲು ಬಾಯಿಯ ಹತ್ತರೆ ಹಾಕಿ, ಒಂದು ಬೆಳೀ ವಸ್ತ್ರ ಮುಚ್ಚಿ, ಗುರುಗಳ ಮಂತ್ರಾಕ್ಷತೆ ಹಾಕಿ – ಸೀದ ದೇವರ ಹತ್ತರಂಗೆ ಹೋಗು ಅಬ್ಬೇ – ಅಮ್ಮಂಗೆ ಹೇಳುಲೇ ಎಡಿಗಾಯಿದಿಲ್ಲೆ.
ಬಂಙಲ್ಲಿ ಹೇಳುವಗ ಕೆಲಸದೋರಿಂಗೂ ದುಃಖ ಬಯಿಂದಡ.
ಪ್ರತ್ಯಕ್ಷ ನೋಡ್ಳೇ ಮನೆಯೋರು ಬೇರೆ ಆರುದೇ ಇತ್ತಿದ್ದಿಲ್ಲೆಯೊ ಅಲ್ಲಿ!
ಎಂಗೊ ಬಪ್ಪಗ ಒಂದು ಹಸಿಮಣ್ಣಿನ ರಾಶಿ ಮಾಂತ್ರ ಇದ್ದದು!
ಅಮ್ಮ ಕೂಡುಸಿ ಕಳದು ಹೇಳಿತ್ತು – ಇಪ್ಪತ್ತೈದು ಒರಿಶ, ಐದು ತಿಂಗಳು, ಐದು ದಿನ ಬದುಕ್ಕಿದ್ದು ಅದು – ಹೇಳಿಗೊಂಡು.
~
ಶರಣರ ಗುಣವನ್ನು ಮರಣದಲ್ಲಿ ಕಾಣಾ – ಹೇಳಿ ಒಂದು ಗಾದೆ ಇದ್ದಡ ಗಟ್ಟದ ಮೇಗೆ.
ಅಂತ್ಯಕಾಲ ಎಷ್ಟು ಸುಲಬ ಆವುತ್ತೋ – ಜೀವನ ಅಷ್ಟು ಪುಣ್ಯರೂಪಲ್ಲಿ ನೆಡದ್ದು ಹೇಳಿ ಲೆಕ್ಕ ಅಡ ಮದಲಿಂಗೆ.
ಇದುದೇ ಹಾಂಗೇ ಆತು,
ಅನಾಯಾಸೇನ ಮರಣಂ – ವಿನಾದೈನ್ಯೇನ ಜೀವನಂ – ಶಂಕರಾಚಾರ್ಯ ಕೇಳಿಗೊಂಡದು ಎರಡೇ ವಿಶಯ.
ಮೋಳಮ್ಮಂಗೆ ಅದೆರಡುದೇ ಸಿಕ್ಕಿದ್ದು – ಹೇಳಿ ಅಪ್ಪ ಪೇಟೆಂದ ಬಂದ ಕೂಡ್ಳೇ ಹೇಳಿದವು.
ಅದಪ್ಪು, ಒಂದೇ ಒಂದು ದಿನ ಅದು ದೈನ್ಯತೆಗೆ ಒಳಗಾಯಿದಿಲ್ಲೆ.
ಅದುವೇ ಎಲ್ಲೋರ ಚಾಕುರಿ ಮಾಡಿದ್ದಷ್ಟೇ ಹೊರತು, ಆರುದೇ ಅದರ ಚಾಕುರಿ ಮಾಡೆಕ್ಕಾಗಿ ಬಯಿಂದಿಲ್ಲೆ.
ಸ್ವಂತ ಶೆಗ್ತಿ ಅದಕ್ಕಾಗಿಯೇ ಇತ್ತು. ಇಲ್ಲದ್ದೆ ಆದ ಒಂದು ಕ್ಷಣ ಈ ಭೂಮಿ ಮೇಲೆ ಇತ್ತಿಲ್ಲೆ.
ಯೇವದೇ ಕಷ್ಟ ಇಲ್ಲದ್ದ ಸುಖಮರಣ ಆ ಮೋಳಮ್ಮಂದು ಆತು.
ಪುಣ್ಯವಂತೆ!
~
ದನಗೊ ಕಂಜಿ ಆಗಿಪ್ಪಗಳೇ ಮನುಶ್ಶರ ಒಡನಾಟಲ್ಲಿದ್ದರೇ ಅಲ್ಲದೋ – ದೊಡ್ಡ ಅಪ್ಪಗಳೂ ಅದೇ ನಮುನೆ ಬೆಳವದು?
ಸಣ್ಣ ಇಪ್ಪಗಳೇ ಕೇವಲ ಹಾಲಿನ ಮಿಶನು ಹೇಳಿ ಬೆಳೆಶಿರೆ ಈ ಆತ್ಮೀಯತೆ ಬೆಳೆತ್ತಿಲ್ಲೆ.
ಸುಮಾರು ಹತ್ತೊರಿಶಂದ ಕೇವಲ ಗೋಮೂತ್ರ, ಗೋಮಯ ಮಾಂತ್ರಾ ಕೊಟ್ಟುಗೊಂಡು ನಮ್ಮೊಟ್ಟಿಂಗೆ ಇದ್ದ ಮೋಳಮ್ಮ “ನವಗೆ ಭಾರ” ಹೇಳಿ ಒಂದೇ ಒಂದು ದಿನ ಯೋಚನೆ ಮಾಡಿರೂ ಅದು ನಮ್ಮೊಟ್ಟಿಂಗೆ ಇರ್ತಿತಿಲ್ಲೆ!
ಹಾಂಗೆ ಯೋಚನೆ ಮಾಡುದೂ ತಪ್ಪೇ ತಪ್ಪು! ಇಲ್ಲೆ, ಹಾಂಗೆ ಯೋಚನೆಗೆ ಮನಸ್ಸೇ ಬತ್ತಿಲ್ಲೆ.
ಎಂತಕೆ ಹೇಳಿರೆ ನಮ್ಮ ಹಳ್ಳಿಗಳ ಸಂಸ್ಕಾರವೇ ಹಾಂಗೆ.
ಈಗಾಣ ಯಾಂತ್ರಿಕ ಜಗತ್ತಿಲಿ ಕಾಲು ಶತಮಾನಂದಲೂ ಜಾಸ್ತಿ ದನಂಗೊ ಬದುಕ್ಕುತ್ತವೇ ಇಲ್ಲೆ,
ಒಂದು ವೇಳೆ ಬದುಕ್ಕುತ್ತೆ ಹೇಳಿರೂ ಬದುಕ್ಕುಸುತ್ತವೇ ಇಲ್ಲೆ!
ಮೋಳಮ್ಮ ಅದರ ಪುಳ್ಳಿಯ ಪುಳ್ಳಿಯನ್ನುದೇ ನೋಡಿದ್ದು, ಹೋಪ ಮೊದಲು.!!
ಪುಣ್ಯವಂತೆ!
~
ಮನೆಗೆ ಬಪ್ಪದರ ದನಗೊ ತೆಕ್ಕೊಳ್ತವು ಹೇಳಿ ಒಂದು ಮಾತಿದ್ದು.
ಒಂದು ದನ ಗಾಯ ಮಾಡಿಗೊಂಡರೂ – ಮನೆಯವಕ್ಕೆ ಬಪ್ಪದೊಂದಿತ್ತು, ಅದರ ಆ ದನ ಎಳಕ್ಕೊಂಡತ್ತು ಪಾಪ – ಹೇಳ್ತವು ಹಳ್ಳಿಲಿ.
ಹಾಂಗೆ ಈ ಮೋಳಮ್ಮ ಹೋದ ಮತ್ತೆ ಅಯ್ಯೋ, ನವಗೋಸ್ಕರ ಅದು ಹೋತನ್ನೆ ಹೇಳಿಯೇ ಅನುಸಿ ಅನುಸಿ ಮನಸ್ಸು ಮುದ್ದೆ ಆಯ್ಕೊಂಡಿತ್ತು ಒಪ್ಪಣ್ಣಂಗೆ.
ಒಪ್ಪಣ್ಣನ ಪ್ರಾಯವೇ ಆದರೂ ಕಾಲು ಶತಮಾನಲ್ಲಿ ಅದರ ಜೀವಮಾನವ ಯಶಸ್ವಿಯಾಗಿ ನಿರ್ವಹಿಸಿ ದೇವರ ಹತ್ತಂಗೆ ಹೋತು.
ಅದೇ ಪ್ರಾಯದ ಒಪ್ಪಣ್ಣ ಇಂದಿನ ಒರೆಂಗೆ ಎಂತೆಲ್ಲ ಸಾದುಸಿದ್ದ ಹೇಳುದರ ನೋಡ್ಳೆ ಹೆರಟ್ರೆ ಮೋಳಮ್ಮನ ಜೀವನದ ಸಾರ್ತಕತೆ ಅರಡಿಗು!
~
ಇಷ್ಟು ಒರಿಶ ನಮ್ಮೊಟ್ಟಿಂಗೆ ಇದ್ದುಗೊಂಡು ಮೋಳಮ್ಮ ಅಷ್ಟೆಲ್ಲ ಸಂಪಾದನೆ ಮಾಡಿದ್ದನ್ನೆ,
ಅದು ಹೋಪಗ ಎಂತರ ತೆಕ್ಕೊಂಡು ಹೋಯಿದು?
ಕುಟುಂಬದ ಒಡನಾಟ? ಆ ಕಂಜಿಯಕ್ಕಳ ಪ್ರೀತಿ?
ಮನೆಯೋರು ಮಾಡಿದ ಕೊಂಗಾಟ?
ಅದು ಸಂಪಾಲುಸಿದ ಪುಣ್ಯ?
ಅದರ ಗೋರೋಚನದ ಪುಣ್ಯದೇಹ?
ಮನೆಯೋರ ಪ್ರೀತಿ? ಅದರ ಪ್ರೀತಿ?
ನೆಂಪು?
ಇಲ್ಲೆ, ಯೇವದನ್ನೂ ಕೊಂಡು ಹೋಯಿದಿಲ್ಲೆ. ಎಲ್ಲವನ್ನು ನವಗೋಸ್ಕರ ಬಿಟ್ಟಿಕ್ಕಿ ಹೋಯಿದು.
ಎಂದೆಂದಿಂಗೂ ನಮ್ಮದಾಗಿಪ್ಪ ಸೊತ್ತು ಅದೊಂದೇ.
ಮೋಳಮ್ಮ ಇಲ್ಲೆ, ಅದರ ಪ್ರೀತಿ, ಅದರ ನೆಂಪು ಎಂದಿಂಗೂ ಇರ್ತು!
~
ವಳಚ್ಚಲಿಲಿ ಮತ್ತೆ ಹುಲ್ಲು ಚಿಗುರಿಗೊಂಡಿದ್ದು.
ಇನ್ನೊಂದು ಮೋಳಮ್ಮಂಗೆ ತಿಂಬಲೆ.
ಸಾಂಕುವ ಮನಸ್ಸು ಅಮ್ಮಂಗಿದ್ದು, ಬದುಕ್ಕುವ ಮನಸ್ಸು ದನಗೊಕ್ಕೆ ಇಕ್ಕೋ?
ಒಂದೊಪ್ಪ: ದನಗಳ ಪ್ರೀತಿ ನಿರಂತರ. ಆದರೆ ನಮ್ಮದು? ಹಾಲು ಕರವ ಸಮೆಯ ಮಾಂತ್ರವೋ?
ಸೂ:
- ಎಲ್ಲೋರ ಮನೆಲಿಯೂ ಇಂತಾ ಒಂದು ಗೋಮಾತೆ ಇದ್ದೇ ಇಕ್ಕು.
ಈ ಶುದ್ದಿಯ ಓದುವಗ ಅದರ ಒಂದರಿ ಆದರೂ ನೆಂಪಾದರೆ,
ಈಗ ಇಪ್ಪ ಕಂಜಿಯ ಒಂದರಿ ಆದರೂ ಮುದ್ದು ಮಾಡು ಮನಸ್ಸಾದರೆ ಒಪ್ಪಣ್ಣನ ಈ ಶುದ್ದಿ ಸಾರ್ಥಕ. - ಕಳುದೊರಿಶ ಮಾತಾಡಿದ ಮೋಳಮ್ಮನ ಉರುಳಿನ ಶುದ್ದಿ!! : ಸಂಕೊಲೆ
- ತೊಡಮಣಿಕ° : ಸುರೂವಾಣ ಕಂಜಿ ಹಾಕಿದ ಗಡಸು
ವಿ.ಸೂ: ಮೋಳಮ್ಮನ ಕೆಲವು ಪಟಂಗೊ:
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ದೇವರೆ…..ಲಾಯಿಕಿ ಆಯದುೆ ಬರದ್ದದು….
ಓದಿ ಕಣ್ಣೀರು ಬ೦ತು…..
ಈ ಶುದ್ದಿಯ ಆನು ಇ೦ದು ಓದಿದ್ದಷ್ಟೆ…
ಕಣ್ತು೦ಬಿ ಬ೦ತು ಓದಿ ಅಪ್ಪಗ..ಃ-(
ನಿಜವಾಗಿ ಮೋಳಮ್ಮನ ನೊಡದ್ದರೂ,ನಿ೦ಗೊ ಬರದ್ದರ ಓದುವಾಗ ಮೋಳಮ್ಮನ ಕಣ್ಣಿಲಿ ಕಾಣ್ತ ಹಾ೦ಗೇ ಆತು..
ಮೋಳಮ್ಮ ಮರಳಿ ಮರಳಿ ಹುಟ್ಟಿ ಬರಳಿ…
ದನಗಳ ಪ್ರೀತಿ ಮಾಡುವ ಮನಸ್ಸುಗಳೂ ಸಾವಿರ ‘ಸಾವಿರ’ ಆಗಲಿ…
ಸಂಸ್ಕೃತದ ‘ಧನ’ವೇ ಕನ್ನಡಲ್ಲೆ ‘ದನ’ ಆತು..
ಇಂದು ಅದರ ಕಳ್ಕೊಂಡು ಸಮಾಜ ಬಡವಾತು..!
ನಮ್ಮಲ್ಲಿ ದನ ಸತ್ತರೆ ಅದರ ಎಳಕ್ಕೊಂಡು ಹೋಪಲೆ ಆಗ ಶವವ ಹೊತ್ತುಗೊಂಡು ಹೋಯೆಕ್ಕು ಹೇಳಿ ಇದ್ದು ದನದ ಶವ ಮುಟ್ಟಿದರೆ ಹೊತ್ತರೆ ಮೀಯೆಕ್ಕು ಹೇಳಿಯೇ ಇಲ್ಲೆ…ಅದು ನವಗೆ ಅಸ್ಟು ಪವಿತ್ರ. .ಈ ಕ್ರಮಂಗ ಊರಿಲಿ ಇಂದಿಂಗೂ ನೆಡೆತ್ತಾ ಇದ್ದು.
ಕಳುದ ವಾರ ಈ ಶುದ್ದಿ ಕೇಳುವ ಒ೦ದು ದಿನ ಮೊದಲು ಪುಣ್ಯಕೋಟಿಯ (ಗೋವಿನ ಹಾಡಿನ) ನೃತ್ಯ ರೂಪಕ ನೋಡಿತ್ತಿದ್ದೆ. ಭಾವಪರವಶವಾಗಿ ಅದರ ನೋಡಿದ ನೆನಪು ಮಧುರವಾಗಿ ಇಪ್ಪಗ ಆತಿದ ಈ ಮೋಳಮ್ಮನ ‘ಜೀವನ ಚರಿತ್ರೆ’ ಓದಲೆ ಸಿಕ್ಕಿದ್ದದು!
ಒಪ್ಪಣ್ಣ! ಆ ಗೋಗೀತೆಯಷ್ಟೇ ಪ್ರಭಾವಶಾಲಿಯಾಗಿ ಮಾತೆಯ ಈ ಗಾಥೆ ಮೂಡಿ ಬ೦ತು.
ಗೋ ಸ೦ಕುಲಕ್ಕೆ ವಿರಳ ಆದ ಸಹಜ ಜೀವನ–ಸಹಜ ಮರಣವ ಅನುಭವಿಸಿದ ಮೋಳಮ್ಮ೦ದು ‘ವಿಜಯಗಾಥೆ’ಯೆ.
ಅದು ದೈವದತ್ತವಾದ ಶರೀರವ ಧರ್ಮಸಾಧನವಾಗಿ ಪೂರ್ತಿಯಾಗಿ ಉಪಯೋಗಿಸಿದ ಪುಣ್ಯಾತ್ಮೆಯ ಚರಿತೆ.
ಪರೋಪಕಾರವ ಪರಿಪರಿಯಾಗಿ ಪೂರೈಸಿ ಪರ೦ಧಾಮವ ಪ್ರವೇಶಿಸಿದ ಧನ್ಯತೆ ಮೋಳಮ್ಮನದ್ದು.
“ಶರೀರಮಾದ್ಯ೦ ಖಲು ಧರ್ಮಸಾಧನಮ್”, “ಪರೋಪಕಾರಾರ್ಥಮಿದ೦ ಶರೀರಮ್” ಹೇಳುವ ಎರಡು ಸೂಕ್ತಿಗಕ್ಕುದೆ ದೃಷ್ಟಾ೦ತದ ಹಾ೦ಗೆ ತೋರುತ್ತು ಈ ಹೃದಯಸ್ಪರ್ಶಿ ವೃತ್ತಾ೦ತ.
ಅಥವಾ ಇ೦ತಹ ನಿತ್ಯ ಜೀವನದ ದೃಷ್ಟಾ೦ತ೦ಗಳೆ ನಮ್ಮ ಹಿರಿಯರ ಬಾಯಿಲ್ಲಿ ಅ೦ತಾ ಮಾತುಗಳ ಹೇಳುಸಿದ್ದಾಗಿಕ್ಕು!! ಹೇಳಿ ಅನುಸುತ್ತು ಈ ಶುದ್ದಿ ಓದುವಗ.
{ ಸಹಜ ಜೀವನ–ಸಹಜ ಮರಣವ ಅನುಭವಿಸಿದ ಮೋಳಮ್ಮ೦ದು ‘ವಿಜಯಗಾಥೆ’ಯೆ! }
ಸಹಜ ಜೀವನ – ಸಹಜ ಮರಣ ಹೇಳ್ತ ಕಲ್ಪನೆ ಭಾರೀ ಕೊಶಿ ಆತು.
ಒಪ್ಪಣ್ಣನ ಬಡ್ಡುಮಂಡಗೆ ಅದು ಹೊಕ್ಕಿತ್ತಿದ್ದೇ ಇಲ್ಲೆ.
ಕೊಶಿ ಆತು ಡಾಗುಟ್ರಣ್ಣ, ಒಪ್ಪ ಕಂಡು!
ಹರೇರಾಮ..
oppanno odi bejarude athu.enthade adaru innu adara nempu mantra.
navu adara haalu majjige tuppa tindu undu madiddu hangagi astu punya sikkiddu aste.namma hattili hutti sumaaru samaya baduki aaringu
chakri maadusuva hange ittille.adu gattigetti karunamayi
punyashali.adara makko pulliyakko namma hattili baduki baalali.
good luck.
{ chakri maadusuva hange ittille }
ಅದುವೇ ಮನೆಯೋರ ಚಾಕುರಿ ಮಾಡಿದ್ದು, ಮನೆಯೋರ ಕೈಲಿ ಅದು ಸೇವೆ ಮಾಡುಸಿಗೊಂಡಿದಿಲ್ಲೆ, ಅಲ್ಲದೋ?
ಒಪ್ಪ ಕಂಡು ಕೊಶಿ ಆತು ಅಮ್ಮ!
ವಳಚ್ಚಲಿಲಿ ಚಿಗುರಿದ ಹುಲ್ಲು ತಿಂಬಲೆ ಇನ್ನೊಂದು ಮೋಳಮ್ಮ ಖಂಡಿತವಾಗಿಯೂ ಬಕ್ಕು ಹೇಳಿ ಎನ್ನ ನಂಬಿಕೆ. ಅಲ್ಲದಾ ಒಪ್ಪಣ್ಣ?
ಬರೀ ನೆನಪಾಗಿ ಹೋದ ಮೋಳಮ್ಮ ಗೋಮಾತೆಗೆ ನಮನ.
{ ಖಂಡಿತವಾಗಿಯೂ ಬಕ್ಕು ಹೇಳಿ ಎನ್ನ ನಂಬಿಕೆ. ಅಲ್ಲದಾ ಒಪ್ಪಣ್ಣ? }
ಅಪ್ಪು ವಿನುತಕ್ಕ,
ಎನಗೆ, ಎಂಗೊಗೆ, ನವಗೆ – ಎಲ್ಲೋರಿಂಗೂ ಅದೇ ಹಾರಯಿಕೆ.
ಎಲ್ಲೋರ ಮನೆಲಿ ಒಂದೊಂದು ಮೋಳಮ್ಮ ಬರಳಿ – ಹೇಳಿಗೊಂಡು!
‘Punyakoti’ya kate nempatu Molammana kate odi.Molammange bhavapoorna shraddanjali.
ಶಾಂಬಾವಾ..
ಶುದ್ದಿಗೆ ಒಪ್ಪ ಕೊಡುವಗ ನಿಂಗಳ ಮೋರೆ ಕಂಡುಗೊಂಡಿತ್ತಿಲ್ಲೆ, ಈಗ ಕಾಂಬಲೆ ಸುರು ಆತು.
ಚೆಂದದ ಮೋರೆಲಿ, ಚೆಂದದ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ.
ಬೈಲಿಂಗೆ ಬತ್ತಾ ಇರಿ, ಬಪ್ಪ ವಾರ ಕಾಂಬೊ 😉
Namma Doddabhavana erpadu more kambange madiddadu.
ಮೋಳಮ್ಮ ನಿಜಕ್ಕೂ ಗೋಮಾತೆಯೇ. ಅದಕ್ಕೆ ಅಶ್ರುತರ್ಪಣವಾಗಿ ಬಂದ ಈ ಲೇಖನ ಬಹಳ ಕಾಲ ನೆನಪಿಲ್ಲಿ ಒಳಿಗು. (ಇದೇ ದನದ ಬಗ್ಗೆ ಹಿಂದೆ ಬರದ ಲೇಖನ ಕೂಡ…)
Oorina nempaatu.Maneli modalu itta Gowri danada nempaatu. Eega oorilide (maneli)dana saankaana ille. Aanu illi bengalooru emba concrete kaadili ippa kaarana…lekhana nijakkoo tumbaa bhaavnaatmakavaagiddu…Thanks
ಒಪ್ಪಣ್ಣಾ……!!!!!
ಹೃದಯವೇ ಕೂಗಿ ಕಣ್ಣೀರಿಡುವ ಹಾಂಗೆ ಶುದ್ದಿ ಬರದ್ದೆನ್ನೇ!!!!
ಹೀಂಗೆ ಬರೆಯೆಕ್ಕಾದರೆ ಆ ಮೋಳಮ್ಮ ನಿಂಗಳ ಒಟ್ಟಿನ್ಗೆ ಮನೆ ಸದಸ್ಯೆ ಆಗಿದ್ದದೆ ಕಾರಣ ಅಲ್ಲದಾ?
ಅದು ಗೋಮಾತೆ ಆಗಿದ್ದ ಕಾರಣ ಹಟ್ಟಿಲಿ ಇರೆಕ್ಕಾತು… ಆದರೆ ಅದಕ್ಕೆ ಮನೆಯೊಳವೇ ನಿಂಗಳಲ್ಲಿ ಜಾಗೆ ಅಲ್ಲದಾ?
ಒಂದು ಸಾರ್ಥಕ ಜೀವನ ಅದರದ್ದು… ಎಷ್ಟು ತಲೆಮಾರು ಕಂಡು ಹೋತು… ಸಾವಗಳೂ ಮನೆಯೋರ ಒಳ್ಳೇದನ್ನೇ ಬಯಸಿ ಹೋತು…
ಅದರ ಇಡೀ ಜೀವನ ವೃತ್ತಾಂತ ಲಾಯ್ಕಲ್ಲಿ ಬರದ್ದೆ… ಅಮ್ಮಂಗೂ ಅದಕ್ಕೂ ಇದ್ದ ಬಾಂಧವ್ಯ ಓದಿ ಕಣ್ಣು ತುಂಬಿ ಬಂತು….
ನಿಂಗಳ ಎಲ್ಲೋರ ಹತ್ತರೆಯೂ ಅದರ ನೆನಪ್ಪುಗ ಜೀವಮಾನ ಪೂರ್ತಿ ಇಕ್ಕು.. ಮುಂದಾಣವಕ್ಕೆ ಹೇಳುಲೆ !!! ಇನ್ನೊಬ್ಬಂಗೆ ಮಾದರಿ ಅಪ್ಪಲೆ…
ಪುಣ್ಯವಂತೆ!!!! ಹೋದ ಮೇಲೂ ಎನ್ನ ಹಾಂಗಿಪ್ಪ ಎಷ್ಟೋ ಜನರ ಮನಸ್ಸು ತುಂಬಿಕ್ಕಿ ಹೋತು…!!!!
ಹೀಂಗಿಪ್ಪ ಗೋಮಾತೆಗಳ ಸಂಖ್ಯೆ ಎಲ್ಲಾ ಮನೆಗಳಲ್ಲಿಯೂ ಹೆಚ್ಚಾಗಲಿ…
ಮೋಳಮ್ಮನ ಹಾಂಗಿಪ್ಪ ಮಾತೆಯರಿಂದಾಗಿ ಆದರೂ ಗೋಹತ್ಯೆ ಪೂರ್ತಿ ನಿಲ್ಲಲಿ…
ಕಟುಕರ ಮನೆಲಿ ಹೀಂಗಿಪ್ಪ ಒಂದೊಂದು ಅಬ್ಬೆ ಇದ್ದರೆ ಆರಿಂಗೂ ಕಡಿವಲೆ ಮನಸ್ಸು ಬಾರ ಅಲ್ಲದಾ?
ಹಾಂಗೆ ಈ ಅಬ್ಬೆಯ ಸಂತತಿ ಒಳುದರೆ, ವಿಶ್ವಮಾತೆಗೆ, ಜಗಜ್ಜನನಿಗೆ ನಾವು ನಿಜವಾದ ಗೌರವ ಕೊಟ್ಟ ಹಾಂಗೆ ಅಕ್ಕು ಅಲ್ಲದಾ?
ಒಂದೊಪ್ಪ ಲಾಯ್ಕಾಯಿದು.. ಒಪ್ಪಣ್ಣನ ಮನೆಲಿ, ಮನೆಯೋರ ಮನಲ್ಲಿ ಖಂಡಿತಾ ದನಂಗ ಇಪ್ಪಲೇ ಇಷ್ಟ ಪಡುಗು… ನಿಂಗಳ ಮನೆಯನ್ನೇ ಹಾರೈಸುಗು…
{ ಅದು ಗೋಮಾತೆ ಆಗಿದ್ದ ಕಾರಣ ಹಟ್ಟಿಲಿ ಇರೆಕ್ಕಾತು… ಆದರೆ ಅದಕ್ಕೆ ಮನೆಯೊಳವೇ ನಿಂಗಳಲ್ಲಿ ಜಾಗೆ ಅಲ್ಲದಾ?
}
ಮೋಳಮ್ಮ ಬದುಕ್ಕಿಪ್ಪಷ್ಟು ಸಮೆಯ ಹಟ್ಟಿಲಿ-ಮನೆಲಿ ಆಗಿ ಇತ್ತು.
ಅದು ಹೋದಮೇಗೆ ನಮ್ಮೆಲ್ಲರ ಮನಸ್ಸಿಲೇ ಇದ್ದು ಶ್ರೀಅಕ್ಕಾ..
ಕೊಶೀ ಆತು, ಚೆಂದದ ಒಪ್ಪ ಕಂಡು.
ಹರೇರಾಮ.
ಅಪ್ಪು ಒಪ್ಪಣ್ಣ…ಇದೆಲ್ಲ ಭಾವನಾತ್ಮಕ ಸಂಬಂಧ..ಪ್ಯಾಕೆಟ್ ಹಾಲಿಲಿ ಇದ್ದೋ….
ಒಪ್ಪಣ್ಣೋ ಎಂತರ ಬರೆಕೂ ಹೇಳಿ ಗೊಂತಾವ್ತಾ ಇಲ್ಲೆ..
ಆ ಮೋಳಮ್ಮ ನಿಜವಾಗಿಯೂ ಧನ್ಯೆ…
ಕಣ್ತುಂಬಿ ಬಂತು….
(ಒಂದೊಪ್ಪ: ದನಗಳ ಪ್ರೀತಿ ನಿರಂತರ. ಆದರೆ ನಮ್ಮದು? ಹಾಲು ಕರವ ಸಮೆಯ ಮಾಂತ್ರವೋ?) ಕೊಶಿ ಆತು…
Kanthumbi banthu.
Danagala preethi ge yelleye ille.
ಮೋಳಮ್ಮ ಹೋಪಗ ಎಲ್ಲವನ್ನೂ ಬಿಟ್ಟಿಕ್ಕಿ ಹೋಯಿದು..!
ಹೆಚ್ಚು ಕಮ್ಮಿ ಬಾಲ್ಯ ಯೌವನ ವ್ರಿದ್ದಪ್ಯದ ಪರಿಚಯ ಮಾಡಿ ಕೊಟ್ಟ ಹಾಂಗತು, ದನದ ಒತ್ತಿಂಗೆ ಜೀವನದ ಮೌಲ್ಯವನ್ನೂ ಹೇಳಿಕೊಟ್ಟೆ ಒಪ್ಪಣ್ಣ.
ನಿತ್ಯ ಉತ್ಸಾಹಿ ಮೋಳಮ್ಮ; ಮನೆ ಹೊಡೆಂಗೇ ಸದಾಗಮನ, ಈ ಮಾತು ಮನಸ್ಸಿಂಗೆ ತುಂಬಾ ಹಿಡುಶಿತ್ತು ಎನಗೆ
ಎನ್ನ ಮನಸ್ಸಿಲಿ ಚಿತ್ರವಾಗಿ ಮಾಸಿ ಹೋದ ಹಲವಾರು ನೆಂಪುಗ ಈ ಶುದ್ಧಿ ಓದಿದ ಮೇಲೆ ನೆಮ್ಪಿನ್ಗೆ ಬಂತು…ಅದರ್ಲಿಯೂ ಒಂದು ,ಸಣ್ಣದಿಪ್ಪಗ ಮಾಷ್ಟ್ರು ಮಾವನ ಮಗಂಗೆ ಒಂದು ಪೂಜೆಯ ಸಮಯಲ್ಲಿ ಇದೇ ಉಂಬೆಯ ಹಾಲು ಹೇಳಿ ಆನು ಮಜ್ಜಿಗೆ ಬಳ್ಸಿದ್ದು.ಅಂತೂ ಹಾಂಗಾದರೂ ಅವ ಒಂದು ತುತ್ತು ಮಜ್ಜಿಗೆಲಿ ಉಂಡಿದ.ಮತ್ತೆ ಅವಂಗೆ ಗೊಂತಾದ ಮೇಲೆ ಕೂಗಿ ಊಟವ ಅರ್ಧಕ್ಕೇ ನಿಲ್ಸಿದ…ಈ ಮೋಳು ಇಹಲೋಕ ಬಿಟ್ಟು ಹೋಯೇಕ್ಕಾರೆ ರೆಜಾ ಮೊದಲು ಅದರ ತಲೆ ಉದ್ದಿ ನೋಡುವಾಗ ಮೆಲುಕು ಹಾಕಿಗೊಂಡಿತ್ತು.. ಆನುದೇ ಮಾಷ್ಟ್ರು ಮಾವನೂ ನೆಟ್ಟಿಕಾಯಿ ತಪ್ಪಲೆ ಹೋಗಿ ಬಂದ ಮೇಲೆ ನೋಡುವಾಗ ಈ ಮೋಳು ನಮ್ಮ ಬಿಟ್ಟು ಹೋಗಿ ಆಯಿದು..ಅಂತೂ ಒಂದು ತೃಪ್ತಿ ಎಂಥ ಹೇಳಿರೆ ಇದರ ಕೊನೆ ಕ್ಷಣಲ್ಲಿಯೂ ಒಂದರಿ ಇದರ ಸ್ಪರ್ಶ ಮಾಡು ಯೋಗ ಎನಗೆ ಸಿಕ್ಕಿದ್ದು..ಎನಗೆ ನೆಂಪು ಬಪ್ಪಗಳೇ ಆನು ಇದರ ನೋಡ್ತಾ ಇದ್ದೆ…ಅಂತೂ ಈ ಮೋಳು ಎಲ್ಲೋರ ಪ್ರೀತಿಗೆ ಪಾತ್ರವಾಗಿ ಗುರುಗಳ ಅನುಗ್ರಹವನ್ನೂ ಪಡದು ಸಾರ್ಥಕ ಜೀವನವ ತೋರ್ಸಿ ಕೊಟ್ಟಿದು…ಮತ್ತೊಂದರಿ ಮೋಳು ಹುಟ್ಟಿ ಬಂದು ದೀಪಾವಳಿಯ ದೀಪ ಬೆಳಗುವ ಯೋಗ ಈ ಕೆದಗೆ ಬರಲಿ ಹೇಳಿ ಮೋಳುವಿನ ಹತ್ತರೆ ಪ್ರಾರ್ಥನೆ..
ಗಾವೋ ವಿಶ್ವಸ್ಯ ಮಾತರ:
ಹರೇ ರಾಮ..
ಗಣೇಶಮಾವಾ..
ಕಡೆಗಳಿಗೆಲಿ ನಿಂಗೊ ಅದರ ಮುಟ್ಟಿ, ಮಾತಾಡುಸಿದ್ದರ ಕೇಳಿ ಒಪ್ಪಣ್ಣಂಗೆ ತುಂಬಾ ಕೊಶೀ ಆತು.
ಪುಣ್ಯವಂತರಿಂಗೆ ಸಿಕ್ಕುವ ಅಪೂರ್ವ ಅವಕಾಶ!
ಇತಿಹಾಸ ಪುರಾಣಂಗಳ ಕಾಲಂದಲೂ ನಮ್ಮ ಸಂಸ್ಕೃತಿಯ ಪ್ರಧಾನ ಅಂಗವಾಗಿದ್ದ ಗೋಮಾತೆ, ಮನುಷ್ಯನ ದೇಹಪೋಷಣೆ, ಕೃಷಿ, ಸಾಂಚಾರ -ಸಾರಿಗೆ, ಆರ್ಥಿಕ ಚಟುವಟಿಕೇಲಿ ಅದ್ಭುತ ಪಾತ್ರವಹಿಸಿ, ’ಕಾಮಧೇನು’ ಹೇಳುವ ಕಲ್ಪನೆಗೆ ಎಡೆ ಮಾಡಿಕೊಟ್ಟಿದು.
ಋಣಾನುಬಂದಂದಾಗಿ ಅಪರೂಪದ ಹಸುಗಳೂ ನಮ್ಮ ಮನೆ ಸೇರಿ ಭಾವನಾತ್ಮಕ ಆನಾಂದ ಕೊಡುವ ಸಾಧನಂಗೊ ಆಗಿ ಸಿಕ್ಕುವದು.
ಮೂರು ತಲೆಮಾರಿಂಗೆ ಹಾಲು ಕೊಟ್ಟ, ಮನೆಯ ಎಲ್ಲ ವಯಸ್ಸಿನವರ ಪ್ರೀತಿ ಸಂಪಾದಿಸಿ, ಎಷ್ಟು ಕಮ್ಮಿ ಕೊಟ್ಟರೂ ಪ್ರೀತಿಪೂರ್ವಕ ಸ್ವೀಕರಿಸಿ, ಸದಾ ಹರಸಿದ ಗೋರೋಜನದ ಎಲ್ಲ ವಿಶೇಷತೆ ತೋರುಸಿದ ಅಪುರೂಪದ ಆ ದನ ಒಂದು ಶಾಶ್ವತ ನೆಂಪು.
ದನಕ್ಕೂ ಮಾನವನ ಪ್ರೀತಿ ಯಾವ ರೀತಿ ಶಕ್ತಿ ಕೊಡುತ್ತು, ನವಗೂ ಅವರ ಪ್ರೀತಿ ಯಾವ ನೆಮ್ಮದಿ ಕೊಡುತ್ತು ಹೇಳುವುದಕ್ಕೆ ಒಂದು ಅದ್ಭುತ ಉದಾಹರಣೆ ಅಗಲಿದ ಈ ಮೋಳು, ಈ ಅಮ್ಮ, ಈ ದೇವಿ.
{ ಈ ಮೋಳು, ಈ ಅಮ್ಮ, ಈ ದೇವಿ }
ಒಂದೇ ವಾಕ್ಯಲ್ಲಿ ಒಂದೇ ದನುವಿನ ಮೂರುರೂಪಲ್ಲಿ ಕಂಡ ರೀತಿ ಕೊಶಿ ಆತು.
ಮಾಷ್ಟ್ರುಮಾವನ ಒಪ್ಪವ ಕಾದೊಂಡು ಇದ್ದಿದ್ದ ಒಪ್ಪಣ್ಣಂಗೆ ತುಂಬಾ ಕೊಶಿ ಆತು.
ಕೆಲವು ವರ್ಷದ ಹಿಂದೆ ಎನಗೂ ಉಂಬೆ ಸಾಂಕೆಕ್ಕು ಹೇಳಿ ಆತು, ಅಂಬಗ, ಎನಗೆ ಅನುಭವ ಕಮ್ಮಿ. ನೆರೆಯ ಬೈಲುಮಾವನ ಹತ್ತರೆ ರಜಾ ಕೇಳಿದರೆ ಹೇಂಗೆ ಕಂಡತ್ತು.ಹೋತ್ತೋಪಗ ಹೋತು. ಕಾಪಿ, ಬಾಳೆ ಹಣ್ಣು ,ಜೀಗುಜ್ಜೆ ಪೋಡಿ, ಅತ್ತೆ ಕೊಟ್ಟದರ ಮುಗಿಶಿಕ್ಕಿ ಆನು ಬೈಲುಮಾವನ ಹತ್ತರೆ ಸುರು ಮಾಡಿದೆ…ನಿಂಗಳ ಅನುಭವ ಹೇಳಿ, ಆನೂ ಒಂದು ದನ ಸಾಂಕುತ್ತೆ! ವಿಷಯ ಎಲ್ಲ ವಿವರಿಸಿದವು. ಕೆದಗೆ ಕರಕ್ಕೊನ್ಡು ಹೋಗಿ ತೋರ್ಸಿದವು. ಏಲ್ಲ ಆತು.ಆವಾಗ ಎನಗೆ ಒಂದು ಡೌಟು ಬಂತು..ಕೇಳಿದೆ ಮಾವಾ, ಆನು ಕೆದೆಯೇ ಕಟ್ಟೆಕ್ಕಷ್ಟೇ,ಎಲ್ಲ ತಯಾರು ಆಯಿದು ಆದರೆ ಓಡು ಮಾತ್ರ ನೂರೇ ಇಪ್ಪದು ಅಂದು ಮನೆ ಕಟ್ಸಿಯಪ್ಪಗ ಒಳ್ದು, ನೂರು ಓಡು ಸಾಕಕ್ಕೋ? ಅಲ್ಲ ರಜ ತರೆಕ್ಕಾ?ಒಂದೇ ದನ ಕಟ್ಲೆ.
ಮಾವ ಹೇಳಿದವು- ಒಂದು ದನ ಕಟ್ಟುದಾದರೆ ಓಡು ನೂರು ಸಾಕು. ಹಾಂಗೊಂದು ಪಕ್ಷ ಹತ್ತು ಕಮ್ಮಿ ಆತು ಕಂಡ್ರೆ ರಜ ದೂರ ದೂರ ಹಾಕಿರೆ ಆತು…!!!
ಸಾಮಾನ್ಯವಾಗಿ ಬೋರಿಗೆ ಬೇಕಾಗಿ ದನ ಕೂಗುತ್ತದರ ಕೆಲೆತ್ತದು ಹೇಳುತ್ತವು.ಹಾ೦ಗೆ ಕೆಲವು ಕಡೆ ಕ೦ಜಿ ದೂರ ಹೋದರೆ ಕೂಗುತ್ತದರನ್ನೂ ಕೆಲೆತ್ತು ಹೆಳ್ತವು.ಮದಲಿ೦ಗೆಲ್ಲ ಒ೦ದು ರಜ ಜಾಗಗೆ ಬೇಲಿಯೋ ಬರೆ (Compound)ಯೋ ಹಾಕಿ ಅದರಲ್ಲಿ ಹುಲ್ಲು (ಅದರಷ್ಟಕೆ ಬೆಳವದು) ಸೊಪ್ಪು ಇತ್ಯಾದಿ ಬೆಳವಲೆ ಬಿಟ್ಟೊ೦ಡಿತ್ತಿದ್ದವು ಆ ಜಾಗೆಯ ಒಳಚ್ಚಾಲು ಹೇಳಿಯೊ೦ಡಿತ್ತಿದ್ದವು ಅಥವ ಹೆಳ್ತವು.ಎ೦ತ ದುರ್ದೆಸೆ ಬ೦ತು ನೋಡು ನಮ್ಮ ಮಕ್ಕೋಗೇ ನಮ್ಮ ಶಬ್ದ೦ಗೊ ಗೊ೦ತಿಲ್ಲೆ.ಇರಲಿ ಇದು ಸುವರ್ಣಿನಿ ಒ೦ದರದ್ದೆ ಸಮಸ್ಯೆ ಅಲ್ಲ ಎನ್ನ ಮಕ್ಕೊ ಕೂಡ ಹಿ೦ಗೆ.ನಿನ್ನ ತಿಳುಕ್ಕೊ೦ಬ ಕುತೂಹಲ ಮೆಚ್ಚೆಕಾದ್ದೆ.ಈ ಕುತೂಹಲ ಮಡಗಿಗೊ ಮು೦ದಾಣವಕ್ಕೆ ಇದರ ಅರ್ದವು ಗೊ೦ತಿರ.ಅ೦ದು ಹೇಳಿ ಕೊಡ್ಲಾರು ಅಕ್ಕಾನೆ.ಎ೦ಗೊ೦ ಯವಾಗಳು ಇರೆಯೊ೦ ಅದ.ಒಪ್ಪ೦ಗಳೊಟ್ಟಿ೦ಗೆ.
ಬೇರೆ ಕಡೆ ಇದಕ್ಕೆ ಬೇರೆ ಅರ್ಥ ಇದ್ದರೆ ಎನಗೆ ಗೊ೦ತಿಲ್ಲೆ.ಇದ್ದರೆ ತಿಳುಸಿ
🙁
ಗೋಮಾತೆಯ ಪ್ರೀತಿ ವರ್ಣಿಸುಲೆ ಎಡಿಯ…ಆನು ಹಲವಾರು ವರ್ಶಂದ ದನ ಸಾಂಕತ್ತಾ ಇದ್ದೆ..ಇಂತಹ ಮನಕರಗುವ ಸನ್ನಿವೇಶಂಗ ತುಂಬಾ ಸರ್ತ್ತಿ ಬಯಿಂದು..ಕಳುದ ವರ್ಶ ಒಂದು ಕರವ ದನವ ಮಾರಾಟ ಮಾಡಿದೆ ಕೊಂಡು ಹೊದಲ್ಲಿ 3ದಿನ ಏನೂ ತಿನ್ನದ್ದೆ ಉಪವಾಸ ಇತ್ತು.ಮತ್ತೆ ಆನು ಹೊಗಿಅಪ್ಪಗ ಎನಗೆ ತಾಡಿ ಕಚ್ಹಿ ಎಲ್ಲಾ ಮಾಡಿತ್ತು.ಮತ್ತೆ ಅದರ ಮಾರಿದ ಹಣ ವಾಪಾಸು ಮಾಡಿ ತೆಕ್ಕೊಂಡು ಬಂದೆ.ಇಲ್ಲಿಗೆ ಬಂದ ಕೂಡಲೆ ಸರಿಯಾಗಿ ತಿಂಬಲೆ ಸುರು ಮಾಡಿತ್ತು.ಅಂದಿಂದ ಅದರ ಆರಿಂಗೂ ಕೊಡುತ್ತಿಲ್ಲೆ ಹೇಳಿ ನಿರ್ಣಯ ಮಾಡಿದ್ದೆ….. …. ..ಮೋಳಮ್ಮಂಗೆ ನಮೋ ನಮ;….ಅಂತಹ ಗೋ ಮಾತೆಯ ಒಳಿಶಿ ಬೆಳೆಶುವ ಕಾರ್ಯ ನಮ್ಮಂದ ಆಯೆಕ್ಕು ಅಲ್ಲದ್ದರೆ ಕೇವಲ ಚರಿತ್ರೆಯ ಪುಟಲ್ಲಿ ಸೇರಿಹೋಕು..
ಅಡ್ಕತ್ತಿಮಾರುಮಾವಾ..
ಅನುಭವದ ದನದ ಶುದ್ದಿ ಮನಸ್ಸುಮುಟ್ಟಿತ್ತು. 🙁
ಮನಸ್ಸಿಂಗೆ ಎಷ್ಟು ಬೇಜಾರಾವುತ್ತಲ್ಲದಾ – ಹಾಂಗಿರ್ತದು ಎಂತಾರು ಆಗಿಬಿಟ್ರೆ..
ಮೋಳಮ್ಮಂಗೆ ಒಪ್ಪಣ್ಣನ ಭಾವಪೂರ್ಣ ಶ್ರದ್ಧಾಂಜಲಿ ಓದಿ, ಹೃದಯ ತುಂಬಿ ಬಂತು. ಆ ಮಹಾ ಮಾತೆಗೆ, ಪುಣ್ಯ ಕೋಟಿಗೆ ನಮೋ ನಮಃ. ಮೋಳಮ್ಮನ ಪಡೆದ ನಿಂಗಳ ಕುಟುಂಬ ಧನ್ಯವೇ ಸರಿ. ನಿಂಗೊ ಪರಸ್ಪರ ಕೊಟ್ಟ ಪ್ರೀತಿ, ವಿಶ್ವಾಸ, ಭಾವನಾತ್ಮಕ ಸಂಬಂಧ ಎಲ್ಲವನ್ನೂ ಬಿಟ್ಟಿಕ್ಕಿ ಹೋದ ಆ ಗೋಮಾತೆಯ ಜೀವನ, ಸಾರ್ಥಕತೆ ಕಂಡತ್ತು. ಜೀವನದ ಸಾರ್ಥಕತೆ ಹೇಳಿರೆ ಎಂತರ ಹೇಳ್ತ ಪಾಠವ ಎಂಗೊಗೆ ಕಲಿಶಿತ್ತು.
[ಒಂದು ಸೂಡಿ ಬೆಳುಲು ಬಾಯಿಯ ಹತ್ತರೆ ಹಾಕಿ, ಒಂದು ಬೆಳೀ ವಸ್ತ್ರ ಮುಚ್ಚಿ, ಗುರುಗಳ ಮಂತ್ರಾಕ್ಷತೆ ಹಾಕಿ – ಸೀದ ದೇವರ ಹತ್ತರಂಗೆ ಹೋಗು ಅಬ್ಬೇ – ಅಮ್ಮಂಗೆ ಹೇಳುಲೇ ಎಡಿಗಾಯಿದಿಲ್ಲೆ.]
25 ವರ್ಷಂದಲೂ ಹೆಚ್ಚು ಅದರ ಒಡನಾಟಲ್ಲಿ ಬೆಳೆದ ನಿಂಗಳ ಮನೆಯವರ ವಾತ್ಸಲ್ಯ, ಅವಿನಾವ ಭಾವ ಸಂಬಂಧ ಎಲ್ಲವೂ ಈ ಒಂದು ವಾಕ್ಯಲ್ಲಿ ಅಡಗಿ ಕೂದ ಹಾಂಗೆ ಆತು. ನಿಂಗೊ ಆ ಮಾತೆಯ ಶವ ಸಂಸ್ಕಾರ ಮಾಡಿದ ಕ್ರಮ ಎಲ್ಲರಿಂಗೂ ಒಂದು ಆದರ್ಶವೇ.
{ ಶವ ಸಂಸ್ಕಾರ ಮಾಡಿದ ಕ್ರಮ}
ಸಂಸ್ಕಾರಕ್ಕೆ ಹೂಳಲೆ ಎಳಕ್ಕೊಂಡು ಹೋಯೆಕ್ಕಾವುತ್ತಿದಾ, ದೂರಲ್ಲಿ ಗುಂಡಿ ತೆಗದರೆ ದೂರಕ್ಕೆ ಎಳಕ್ಕೊಂಡು ಹೋಯೆಕ್ಕಾವುತ್ತು!
ಮೋಳಮ್ಮಂಗೆ ಬೇನೆ ಅಕ್ಕು, ಇನ್ನು ಅದರ ಬಂಙ ಬರುಸುದು ಬೇಡ, ಹತ್ತರೆಯೇ ಮಾಡುವೊ° – ಹೇಳಿ ಹಟ್ಟಿಬುಡಲ್ಲೇ ಗುಂಡೆತೆಗದ್ದು ಶರ್ಮಪ್ಪಚ್ಚೀ…
ಒಪ್ಪಣ್ಣ, ಎನಗೆ ಈ ಎರಡು ಶಬ್ದಂಗಳ ಅರ್ಥ ಗೊಂತಿಲ್ಲೆ 🙁 “ಕೆಲೆಯಾಣ & ವಳಚ್ಚಲಿ”. ವಿವರ್ಸುತ್ತೀರಾ?
ವಳಚ್ಚಲು / ಒಳಚ್ಚಾಲು:
– ಆವರಣ ಪ್ರದೇಶ (compound).
ಸುತ್ತ ಬೇಲಿ ಇಪ್ಪ ಖಾಸಗಿ ಪ್ರದೇಶಕ್ಕೆ ಒಳಚ್ಚಾಲು ಹೇಳ್ತವು .
ಕೆಲೆಯಾಣ:
– ’ಕೆಲವದು’ ಹೇಳಿರೆ ದನ/ಎಮ್ಮೆ ಕೂಗುವ-ದಿನಿಗೆಳುವ ಕ್ರಿಯೆ.
ಆ ಕ್ರಿಯಾಪದದ ನಾಮರೂಪವೇ(gerund) ಕೆಲೆಯಾಣ (lowing).
ಧನ್ಯವಾದಂಗೊ…ಒಪ್ಪಣ್ಣ.
ಆನು ಮೊದಲಾಣ ’ಮೋಳಮ್ಮನ ಉರುಳು” ಓದಿದ್ದಿಲ್ಲೆ. ಇನ್ನು ಓದೆಕ್ಕು. ಹಾಂಗಾಗಿ ಇದೇ ಮೊದಲು ಮೋಳಮ್ಮನ ಬಗ್ಗೆ ಓದಿದ್ದು.
ಓದಿದ್ದು ಹೇಳುದಕ್ಕಿಂತ ನೋಡಿದ್ದು ಹೇಳೀರೆ ಸರಿ ಅಕ್ಕು, ಅಷ್ಟು ಲಾಯ್ಕಲ್ಲಿ ಒಪ್ಪಣ್ಣ ಬರದ್ದವು. ಮೋಳಮ್ಮನ ಹುಟ್ಟಿನಿಂದ ಒಂದೊಂದೇ ಘಟನೆಗಳ ನೋಡಿ ತುಂಬಾ ಸಂತೋಷ ಆತು.. ಆದರೆ ಅಕೇರಿಗೆ…ಕಣ್ಣು ಮಂಜಾಗಿ ಓದುಲೆ ಬಙ ಆತು…. 🙁 🙁 🙁
ನಿಜವಾಗಿಯೂ..ಯಾವುದೇ ಪ್ರಾಣಿಗಳ ನಾವು ಪ್ರೀತಿಂದ ನೋಡಿಗೊಂಡರೆ..ಅದರ ಹತ್ತರೆ ಮಾತಾಡಿರೆ ಮಾಂತ್ರ ನವಗೆ ಅರ್ಥ ಅಪ್ಪದು.. ಅದಕ್ಕೂ ಜೀವ ಇದ್ದು..ಭಾವ ಇದ್ದು..ಭಾಷೆ ಇದ್ದು ಹೇಳಿ. ಆನು ಸಣ್ಣಾದಿಪ್ಪಗ ರಜೆಲಿ ಊರಿಂಗೆ ಬಂದರೆ ಹೆಚ್ಚು ಸಮಯ ಕಳವದು ಹಟ್ಟಿಲಿ !! ಎನ್ನ ಅಕ್ಕಂದ್ರು ಅಣ್ಣ ಎಲ್ಲೋರೊ ಎನ್ನ ನೆಗೆ ಮಾಡಿಗೊಂಡಿತ್ತವು…ಇರುಳು ಬೈಪ್ಪಣೆಲಿ ಹಾಸಿಗೆ ಹಾಕುಲಕ್ಕು ಎನಗೆ ಹೇಳಿ !! ……… ಬರದರೆ ಮುಗಿಯ…..ಗೋಮಾತೆಯೊಟ್ಟಿಂಗೆ ಕಳವ ಪ್ರತೀಕ್ಷಣವೂ ನೆಮ್ಮದಿಯ ಕ್ಷಣಂಗೊ…………………………………………………………
ಸುವರ್ಣಿನಿ ಅಕ್ಕಾ..
ದನಗಳ ಬಗ್ಗೆ ನಾವು ಎಷ್ಟು ಚೆಂದ ಬೇಕಾರುದೇ ಹೇಳುಗು.
ಆದರೆ ನಮ್ಮ ಬಗ್ಗೆ ಅವು ಎಷ್ಟು ಚೆಂದಕೆ ಹೇಳುಗು? – ಮೇಲೆ ಹೋದ ಮತ್ತೆ??
ಅಲ್ಲದೋ?
ತುಂಬ ಲಾಯಿಕಲ್ಲಿ ಬರದ್ದಿ, ಇಲ್ಲಿಯೂ – ಮೋರೆಪುಟಲ್ಲಿಯೂ..!!
ಕೊಶಿ ಆತು ಒಪ್ಪಣ್ಣಂಗೆ.
ಖಂಡಿತಾ ಅಪ್ಪು , ನಮ್ಮ ಬಗ್ಗೆ ಎಂತ ಹೇಳುಗು? ಮಕ್ಕೊ ಹೇಂಗಿದ್ದವ್ವೇ ಆದರೂ ಅಮ್ಮ ಎಂದಿಂಗೂ ಕೆಟ್ಟದು ಬಯಸ… ಒಳ್ಳೆ ಬುದ್ಧಿ ಬರಲಿ ಹೇಳಿ ದೇವರ ಹತ್ತರೆ ಬೇಡಿಗೊಳ್ಳುಗು…
ಧನ್ಯವಾದ 🙂
ಲೇಖನ ಓದಿದಪ್ಪಗ ಎಂಗೊ ಸಣ್ಣ ಇಪ್ಪಗ ಅಜ್ಜನ ಮನೆಲಿ ಇತ್ತಿದ ದನ, ಕಂಜಿ ಕೊಣ್ಕೊಂಡು ಅದರ ಅಮ್ಮನ ಹತ್ರಂಗೆ ಓಡುವದು, ಜಾಲಿಲ್ಲೀ ಇಡೀ ಅದರ ಆಟ, ಎಲ್ಲವೂ ನೆಂಪಾತು. ಹೆಚ್ಚು ಹಾಲು ಸಿಕ್ಕದ್ದರುದೆ ಅಜ್ಜಿ, ಪುಳ್ಯಕ್ಕೊಗೆ ಇಷ್ಟ ಹೇಳಿ ಎಂಗೊಗೆ ಕರದ ತಂಬಾಲು ಕೊಟ್ಟದು, ಅದರ ರುಚಿ ಎಲ್ಲವುದೆ ನೆನಪಿಂಗೆ ಬಂತು.
ಮೋಳಮ್ಮ, ನಿಜ ದೇವತೆ.
ಅದರ ಕಂಡು ಮಾತಾಡುಸುವ ಭಾಗ್ಯ ಸಿಕ್ಕಿತ್ತನ್ನೆ ನವಗೆ…
ಅಷ್ಟಾದರೂ ಪುಣ್ಯ ಮಾಡಿದ್ದು ನಾವು ಹೇಳಿ ತೋರಿತ್ತು…
ಒಪ್ಪಣ್ಣಾ, ಧರಣಿ ಮ೦ಡಲ ಮಧ್ಯದೊಳಗೆ ಹೇಳಿ ಶುರು ಅಪ್ಪ ಗೋವಿನ ಹಾಡು ಹೇಂಗೆ ಚಿರನೂತನ ಆಗಿ ನಮ್ಮ ಮನಸ್ಸಿಂಗೆ ತಟ್ಟುತ್ತೋ ಹಾ೦ಗೆ ಇದ್ದು ಈ ಲೇಖನ.
ಪ್ರತಿ ಸರ್ತಿ ಓದೊಗಳೂ ಹೃದಯದ ಭಾವನೆಗೋ ಉಕ್ಕಿ ಹರಿತ್ತು.
ಸಮುದ್ರದ ತೆರೆಯ ಏರಿಳಿತದ ಹಾ೦ಗಲ್ಲದೊ ಜೀವನ? ಈ ಇಳಿತವ ಮೆಟ್ಟಿ ನಿ೦ಬ ಆತ್ಮಸ್ಥೈರ್ಯ ನಿನಗೆ,ಕುಟು೦ಬದವಕ್ಕೆ ಸಿಕ್ಕಲಿ ಹೇಳಿ ಮನಸಾ ಹಾರೈಸುತ್ತೆ.
ಕಣ್ತುಂಬಿ ಬಂತು ಒಪ್ಪಣ್ಣ! ನಮ್ಮ ಭಾವನೆಗಳ, ಭಾವನಾತ್ಮಕವಾಗಿ ಅರ್ತ ಮಾಡುದರ್ಲಿ ದನಗೊಕ್ಕೆ ಪಷ್ಟು ಪ್ರೈಸು. ಆನುದೇ ಸಣ್ಣ ಆದಿಪ್ಪಗ ದನಗಳ ಎಬ್ಬಿಗೊಂಡಿದ್ದದು ನೆನಪಾತು.!
ಎಂಗಳಲ್ಲಿಯೂ ಸೀತಮ್ಮ ಹೇಳುವ ದನ ತೀರಿ ಹೋದಪ್ಪಗ, ಗುಂಡಿ ತೆಗವಲೆ ಬಂದ ಚೋಮ ಕಣ್ಣೀರು ಹಾಕಿದ್ದು ಹಾಂಗೆ ನೆನಪಾವ್ತು!! ಎಂತ ಸುಮಧುರ ಪ್ರೇಮ ಅದಲ್ಲದ?
ಬಾರಿ ಒಳ್ಳೆ ಲೇಖನ.ಎಷ್ಟೋ ಸರ್ತಿ ಗೆ೦ಟ್ಲು ಕಟ್ಟಿತ್ತು.ದನಗಳ ಪ್ರಿತಿಯೇ ಹಾ೦ಗೆ.ಒಪ್ಪಣ್ಣನತ್ರೆ ಸಮಧಾನ ಮಾಡಿಗೊ ಹೇಳೆಕಷ್ಟೆ.ಒಪ್ಪ೦ಗಳೊಟ್ಟಿ೦ಗೆ
ಮೋಹನಮಾವಾ..
ಆತ್ಮೀಯತೆ ಕಂಡು ಕೊಶಿ ಆತು..
ಸಮಾಧಾನ ಅಪ್ಪದು ಪುನಾ ಬೇಜಾರಪ್ಪದು – ಸಮುದ್ರದ ಅಲೆಗಳ ನಮುನೆ!!
ಮೋಳಮ್ಮನ ಕೊನೆ ಕ್ಷಣಂಗಳ ಗ್ರೇಶಿ ದು:ಖ ಉಮ್ಮಳುಸಿ ಬಂತು. ಮೋಳಮ್ಮಂಗೆ ಒಪ್ಪಣ್ಣ ಕೊಟ್ಟ ಭಾವಪೂರ್ಣ ಶ್ರದ್ಧಾಂಜಲಿ, ನುಡಿನಮನ ಮನ ಕಲಕಿತ್ತು. ಅದರ ಪ್ರೀತಿ, ಆಟ, ತುಂಟತನ, ರಸಕ್ಷಣಂಗೊ, ಅದರ ಕೊನೆ ದಿನಂಗೊ ಎಲ್ಲ ಕಣ್ಣಿಂಗೆ ಕಟ್ಟಿದ ಹಾಂಗಾತು. ಒಪ್ಪಣ್ಣನ ವಿವರಣೆ ಭಾರೀ ಲಾಯಕಾಗಿತ್ತು. ಮೋಳಮ್ಮನ ದೇಹವ ಗುಂಡಿಗೆ ಹಾಕುವ ಸಮೆಲಿ ಮನೆಯವೆಲ್ಲ ಇದ್ದಿದ್ದರೆ ಒಳ್ಳೆದಿತ್ತು.
ಲೇಖನಲ್ಲಿ ಎಡೆಲಿ ಬಂದ ತುಳು ಪಾಡ್ದನ(!), ಒಪ್ಪಕ್ಕ ಕೆಲವೊಂದರಿ ಓದೆಂಡಿದ್ದಿದ್ದ ಸ್ಟೈಲು, ಒಪ್ಪಣ್ಣನ ಕೃಷ್ಣ ಚಾಮಿ ಹಾಂಗೆ ಹಾಲು ಕುಡುಕ್ಕೊಂಡು ಇದ್ದಿದ್ದದು ಎಲ್ಲ ಕೇಳಿ ನೆಗೆ ಬಂತು.
ತೊಡಮಣಿಕ ಹೇಳ್ತ ಶಬ್ದದ ಅರ್ಥ ಎನ್ನ ಮಂಡಗೆ ಹೊಕ್ಕಿದಿಲ್ಲೆ. ಆರಾರು ಗೊಂತಿದ್ದವು ತಿಳುಸಿ ಕೊಡುತ್ತಿರೊ ?
{ತೊಡಮಣಿಕ ಹೇಳ್ತ ಶಬ್ದದ ಅರ್ಥ}
ಸುರೂವಾಣ ಕಂಜಿ ಹಾಕಿದ ಗಡಸಿಂಗೆ ತೊಡಮಣಿಕ° ಹೇಳುಗು ಮದಲಿಂಗೆ..
{https://oppanna.com/oppa/molammana-urulu}- ಈ ಶುದ್ದಿಲಿ ಅದರ ಬಗ್ಗೆ ವಿವರಣೆ ಇದ್ದು.
ಧನ್ಯವಾದಂಗೊ ಒಪ್ಪಣ್ಣಾ. ಹವ್ಯಕ ಶಬ್ದಂಗಳ ಪಟ್ಟಿ ಮಾಡುತ್ತಾ ಇದ್ದೆ. ನವಗೆ ಕೈಲಾದ ಹಾಂಗೆ. ದೊಡ್ಡ ಮಟ್ಟಿಂಗೆ ಅಲ್ಲ. ಎಂಗಳ ನೆರೆಕರೆಯ ಒಂದು ಹೆಮ್ಮಕ್ಕೊ (ಹವ್ಯಕ ಅಲ್ಲ)ಜಾನಪದ ಶಬ್ದ ಸಂಗ್ರಹ ಮಾಡಿ ಎಂತೋ ಸಂಶೊಧನೆ ಮಾಡುತ್ತ ಇದ್ದು. ಕೊಡವ, ಹವ್ಯಕ, ಕುಂದಾಪುರ ಹೇಳಿ ಬೇರೆ ಬೇರೆ ಕನ್ನಡದ ಬಗ್ಗೆ. ಅದಕ್ಕೂ ಆತು, ನವಗೂ ಆತು ಹೇಳಿ ಒಂದು ಪಟ್ಟಿ ತಯಾರಾವುತ್ತಾ ಇದ್ದು.
ಹವ್ಯಕಲ್ಲಿ ಮರಿಯಪ್ಪ ಭಟ್ರು ಬರದ ಒಂದು ಡಿಕ್ಶ್ನರಿಯೇ ಇದ್ದು.ಎನ್ನ ಹತ್ತರೆ ಅದರ ಒಂದು ಪ್ರತಿ ಇದ್ದು.೩೦ ವರ್ಶ ಹಿಂದೆ ತೆಕ್ಕೊಂಡದು.
ಓ, ಒಳ್ಳೆ ವಿಚಾರವ ತಿಳುಸಿಕೊಟ್ಟಿ. ಧನ್ಯವಾದಂಗೊ. ಅದರ ಪ್ರತಿ ಎಲ್ಲಿಯಾರೂ ಸಿಕ್ಕುತ್ತೊ ನೋಡೆಕು. ನಿಂಗೊಗೆಲ್ಲಿಯಾದರೂ ಸಿಕ್ಕುತ್ತರೆ ಎನಗೆ ಒಂದು ಪ್ರತಿ ಬೇಕಾತು. ಸ್ಕ್ಯಾನ್ ಮಾಡುತ್ತಷ್ಟು ಸಣ್ಣ ಪುಸ್ತಕ ಅದಾಗಿರ ಅಲ್ಲದೊ ?
ಸ್ಕಾನ್ ಮಾಡುವಷ್ಟು ಸಣ್ಣದಲ್ಲ.ಪ್ರತಿ ಈಗ ಸಿಕ್ಕುದು ಸಂಶಯವೇ.ಒಂದೆರಡು ವಾರಕ್ಕೋ ತಿಂಗಳಿಂಗೋ ಆದರೆ ಆನೇ ಕೊಡುವೆ.ಬ್ಂದು ತೆಕ್ಕೊಂಡು ಹೋಗಿ ತಿರಿಗಿ ತಂದು ಕೊಡುವ ಶರ್ತಲ್ಲಿ.
ಕಳದ ವರ್ಷ ಒಂದು ಪುಸ್ತಕ ಪ್ರದರ್ಶನಲ್ಲಿ ಎನಗೆ ಒಂದು copy ಸಿಕ್ಕಿತ್ತು,ತೆಕ್ಕೊಂಡೆ. ಆ ಪುಸ್ತಕದ ಪ್ರಕಾಶಕರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ,ಎಂ.ಜಿ.ಎಂ.ಕಾಲೇಜು, ಉಡುಪಿ, (http://mgmudupi.ac.in/rgpairesearch.php).ಅಲ್ಲಿ ಕೇಳಿರಿ ನವಗೆ ಪುಸ್ತಕದ ಪ್ರತಿ ಸಿಕ್ಕುಗು.
ನಾವು ಆ ಪುಸ್ತಕವ ತುಂಬಾ ಪ್ರತಿ ತರ್ಸಿದರೆ,ಅವು ಅದರ ಪುನಹ print ಮಾಡ್ಲುಸಾಕು.ನಾವು ಯಾವುದೇ ಸಭೆ/ ಸಮಾರಂಭಲ್ಲಿ ಎಂತಾರು ಉಡುಗೊರೆ/ಪ್ರಶಸ್ತಿ ಕೊಡೆಕ್ಕಾರೆ ನಮ್ಮವರ/ನಮ್ಮ ಬಗ್ಗೆ ಇಪ್ಪ/ಯಾವುದೇ ಒಳ್ಳೆ ಪುಸ್ತಕ ಕೊಟ್ಟರೆ ಆ ಪುಸ್ತಕಕ್ಕು ಬೆಲೆ ಇರ್ತು,ಪುಸ್ತಕದ ಬಗ್ಗೆ ತುಂಬಾ ಜೆನಕ್ಕೆ ಗೊಂತಾವುತ್ತು.
ಬೈಲಿನ ಎಲ್ಲೋರ ಗಮನಕ್ಕೆ :
ಕೊಳಚಿಪ್ಪು ಭಾವಯ್ಯ ಹೇಳಿದ ಹಾಂಗೆ ಉಡುಪಿ ಗೋವಿಂದಪೈ ಸಂಶೋಧನಾ ಕೇಂದ್ರಲ್ಲಿ (ಉಡುಪಿ ಎಮ್ ಜಿ ಎಮ್ ಕಾಲೇಜಿಲ್ಲಿ ಇದ್ದು) ವಿಚಾರಿಸಿದೆ. ಅಲ್ಲಿ 25-30 ಪ್ರತಿ ಹವ್ಯಕ ಶಬ್ದಕೋಶ ಇದ್ದಾಡ. ಒಂದು ಪ್ರತಿಗೆ 100 ರೂಪಾಯಿ ಆಡ. ಅಲ್ಲಿಗೆ ಹೋದರೆ ನಗದು ಕೊಟ್ಟು ತಪ್ಪಲಕ್ಕು. ಅವರ ಫೋನ್ ನಂಬ್ರ ಕೊಡುತ್ತೆ. ಬೈಲಿಲ್ಲಿ ಬೇಕಾದವಕ್ಕೆ ವಿಚಾರುಸಿ ತರುಸೆಂಬಲಕ್ಕು. 0820-2521159.
ನಮ್ಮ ಭಾಷೆಯ ಶಬ್ದಕೋಶ ನಮ್ಮ ನಮ್ಮ ಹತ್ರೆ ಇದ್ರೆ ಒಳ್ಳೆದಲ್ದೊ ? ನವಗೂ ನೋಡ್ಳಕ್ಕು, ಮಕ್ಕೊಗೆ ಕಲಿವಲಕ್ಕು.
ಕೊಳಚಿಪ್ಪು ಭಾವಯ್ಯಂಗು, ಡಾಕ್ಟ್ರು ಭಾವಯ್ಯಂಗು ಮನತುಂಬಿದ ಧನ್ಯವಾದಂಗೊ.
ಬೊಳುಂಬುಮಾವಾ..
ನಿಂಗಳ ಆತ್ಮೀಯ ಒಪ್ಪ ಕಂಡು ಮನಸ್ಸು ತುಂಬಿ ಬಂತು!
ಒಪ್ಪಕ್ಕ ಬರೇಪಾಪ ಹೇಳಿ ಗ್ರೇಶಿಕ್ಕೆಡಿ, ಅದು ಮೋಳಮ್ಮಂಗೆ ಮಾಂತ್ರ ಅಲ್ಲ, ಒಪ್ಪಣ್ಣಂಗೂ ಬೈತ್ತು ಒಂದೊಂದರಿ! 🙁
Danangokke olle nenapu shakthi matte buddhi iruttu.Oora danada kanjige atavoo jasti.Enage modalu maneli idda danangala nenapu athu.Oppannange bega samadhana aagali.sahanuthapango.olle lekhana.
{ sahanuthapango }
ತುಂಬಾ ಒಳ್ಳೆ ಪದಪ್ರಯೋಗ!
ಕೂಳಕ್ಕೂಡ್ಳಿನ ಡಾಗುಟ್ರಿಂಗುದೇ ಕೊಶಿ ಅಪ್ಪಂತಾದ್ದು!
ಕೊಶಿ ಆತು ನಿಂಗಳ ಒಪ್ಪ ಕಂಡು.
ಆನು ಶಾಲಗೆ ಹೋಪ ಕಾಲಲ್ಲಿ ಎಂಗಳ ಮನೆಲಿ ಒಂದು ಎತ್ತು,ಜೋಡಿ ಇಲ್ಲೆ ಹೇಳಿ ಕೊಟ್ಟದು ಮರದಿನ ೧೨ ಮೈಲು ನೆಡಕ್ಕೊಂದು ವಾಪಾಸ್ ಬಂದದು ಎನಗೆ ನೆಂಪಿದ್ದು.ದನಗೊ ಮನುಷ್ಯರಿಂದ ಹೆಚ್ಚು ಪ್ರೀತಿ ಮಾಡುಗು.
{ ದನಗೊ ಮನುಷ್ಯರಿಂದ ಹೆಚ್ಚು ಪ್ರೀತಿ ಮಾಡುಗು }
ಸರಿಯಾಗಿ ಹೇಳಿದಿ ಮಾವ°, ಆದರೆ ಆ ಪ್ರೀತಿ ಒಳಿಶಿಗೊಂಬದರ್ಲಿ ಇಪ್ಪದು ನಮ್ಮ ಜೀವನ!
ಅಲ್ಲದೋ?