ಕಳುದ ವಾರ ನೆಕ್ರಾಜೆಲಿ ತ್ರಿಕಾಲಪೂಜೆ ಇದ್ದತ್ತಲ್ದೋ, ಮಾಷ್ಟ್ರುಮಾವನ ಮಗಳು ಎಜಮಾನ್ರ ಸಮೇತ ಬಂದಿತ್ತು. ಮದುವೆ ಕಳುದ ಮತ್ತೆ ಇಬ್ರುದೇ ಬಯಿಂದೇ ಇಲ್ಲೆ – ಹೇದು ನೆಕ್ರಾಜೆ ಅಪ್ಪಚ್ಚಿಯ ಒತ್ತಾಯದ ಹೇಳಿಕೆ ಮೇರೆಗೆ.
ತ್ರಿಕಾಲ ಪೂಜೆ ಕಳುಶಿ ಮಾಷ್ಟ್ರುಮಾವನ ಮನೆಗೆ ಬಂದು, ಒಂದಿರುಳು ನಿಂಬಲೆ ಬಂದವು.
ಆಟಿ ಸಮ್ಮಾನ ಕಳುದೊರಿಶವೇ ಆದ ಕಾರಣ ತಂಟ್ಯಭಾವಂಗೆ ಈ ಸರ್ತಿ ಪತ್ರೊಡೆ ಮಾಂತ್ರ ಸಿಕ್ಕಿದ್ದು.
ಆ ಪತ್ರೊಡೆ ಒಪ್ಪಣ್ಣಂಗೂ ಸಿಕ್ಕಿದ್ದು ಹೇಳುವೊ°.
~
ಬೆಂಗ್ಳೂರಿಲಿ ಕೆಸವು ಸಿಕ್ಕುತ್ತಿಲ್ಲೆ, ಪತ್ರೊಡೆ ತಿಂಬಲೇ ಸಿಕ್ಕುತ್ತಿಲ್ಲೆ ಹೇದು ಮಾಷ್ಟ್ರುಮಾವನ ಹತ್ರೆ ಒಪ್ಪಕ್ಕ ಕತೆ ಹೇಳಿತ್ತು. ಹಾಂಗೆ ಕೆಸವಿನ ಸೊಪ್ಪು ಎರಡು ಕಟ್ಟ ಕಟ್ಟಿ ಹಿಡ್ಕೊಂಡತ್ತು. ಎಲ್ಲೋರಿಂಗೆ ಟಾಟ ಮಾಡಿ ತಂಟ್ಯ ಕಾರಿಲಿ ಒಪಾಸು ಹೆರಟತ್ತು.
ಮಾಷ್ಟ್ರುಮಾವನ ಮಗಳು ಈಗ ಕತೆ ಹೇಳುಗು, ಆದರೆ ಅದು ಸಣ್ಣ ಇಪ್ಪಾಗ ಮಾಷ್ಟ್ರುಮಾವನೇ ಅದಕ್ಕೆ ಕತೆ ಹೇಳಿಗೊಂಡು ಇತ್ತಿದ್ದವು.
ಕಾಲಿಲಿ ಮನುಗುಸಿ ಒರಗುಸುವಗಳೇ ಕತೆ ಇಲ್ಲದ್ದೆ ಒರಕ್ಕು ಬಾರ ಅದಕ್ಕೆ, ತೊಟ್ಳಿಲಿ ತೂಗುವಗಳೂ ಹಾಂಗೇ..
ರಜ ದೊಡ್ಡ ಆಗಿ ಶಾಲಗೆ ಹೋಪಲೆ ಸುರು ಅಪ್ಪಗ ಎಂಗೊಗೇ ಕತೆ ಹೇಳಿಗೊಂಡು ಇದ್ದತ್ತು ಆ ಕೂಸು! ಈಗಳೂ ಹಾಂಗೇಡ, ತಂಟ್ಯಭಾವ ಒಪ್ಪಿಗೊಳ್ತ° 😉 .
ಅದಿರಳಿ.
~
ಮಾಷ್ಟ್ರುಮಾವ° ಕತೆ ಅವರ ಮಗಳಿಂಗೆ ಹೇಳಿಗೊಂಡಿತ್ತಿದ್ದವು ಹೇಯಿದೆ ಅಲ್ದೋ, ಒಂದೊಂದರಿ ಹೊತ್ತೋಪಗ ಚಾಯ ಕುಡಿವಲೆ ಹೋಗಿಪ್ಪಾಗ ಒಪ್ಪಣ್ಣನ ಕೆಮಿಗೂ ಬಿದ್ದಿದು.
ಹಲವೂ ಕತೆಗೊ, ಬೇಡ ಕಾಡಿಲಿ ಸಿಕ್ಕಿಬಿದ್ದ ಕತೆ, ಅನನಾಸು ತಿಂದ ಕತೆ, ಬೀಮನ ಕತೆ, ರಾಮನ ಕತೆ, ಹದ್ದಿನ ಕತೆ, ಮಂಗನ ಕತೆ – ಹೀಂಗಿರ್ಸು!
ಒಂದೊಂದರಿ ಒಂದೊಂದು. ಒಂದೇ ಕತೆ ಪುನಾ ಪುನಾ ಹೇಳುದೂ ಇತ್ತು. ಒಪಾಸು ಹೇಳುವಾಗ ಮಂಗ ಇಪ್ಪಲ್ಲಿ ಹದ್ದು, ಹಾವು ಇಪ್ಪಲ್ಲಿ ಅಳಿಲು ಎಲ್ಲ ಅಪ್ಪಲಿದ್ದು. ಆದರೆಂತಾತು, ಮಾಷ್ಟ್ರುಮಾವಂಗೂ – ಮಗಳಿಂಗೂ ಇಬ್ರಿಂಗೂ ಮತ್ತಾಣ ಸರ್ತಿಗೆ ಬದಲಿರೆ ತಲೆಬೆಶಿ ಇಲ್ಲೆ.
~
ಹಾಂಗೆ ಹೇಳಿದ ಹಲವೂ ಕತೆಗಳಲ್ಲಿ, ಒಪ್ಪಣ್ಣ ಕೇಳಿದ, ಒಪ್ಪಣ್ಣಂಗೆ ನೆಂಪಿಪ್ಪ ಒಂದು ಕತೆ – “ಹಾವಿನ ಕುಂಞಿ”ದು.
ಮಾಷ್ಟ್ರುಮಾವ ಹೇಳಿದ ಧಾಟಿ, ಆ ಶಬ್ದಂಗೊ ಒಪ್ಪಣ್ಣಂಗೆ ನೆಂಪಿರ. ಆದರೆ ಆ ಕತೆ ಓರೆ ಓರೆ ನೆಂಪಿದ್ದು.
ಅದರ ಹಿಂದೆ ಇಪ್ಪ ತತ್ವ ಈಗಳೂ ನೆಂಪಿದ್ದು.
~
ಒಂದು ಊರಿಲಿ ದೊಡಾ ಕೆರೆ ಇತ್ತಡ.
ಆ ಕೆರೆಯ ಕರೆಲಿ ದೊಡಾ ಗೋಳಿ ಮರ ಇತ್ತಡ.
ಮರದ ಬುಡಲ್ಲಿ ಒಂದು ಪುಂಚ ಇತ್ತಡ.
ಆ ಪುಂಚಲ್ಲಿ ಒಂದು ನಾಗರ ಹಾವಿನ ಸಂಸಾರ ಇತ್ತಡ.
ಅಲ್ಲಿ ಒಂದು ಕುಂಞಿ ನಾಗರ ಹಾವುದೇ ಇದ್ದತ್ತಡ.
ಅದರ ಅಪ್ಪ ದೊಡ್ಡ ನಾಗರ ಹಾವು ಹೇದರೆ ಇಡೀ ಊರಿನೋರೇ ಹೆದರಿಗೊಂಡು ಇತ್ತಿದ್ದವಡ.
ಪ್ರಾಣಿಗೊ ಎಲ್ಲ ಓಡಿಗೊಂಡು ಇತ್ತವಡ.
ಮನುಶ್ಯರು ಎಲ್ಲೋರುದೇ ಭಕ್ತಿಲಿ ಕೈ ಮುಗುಕ್ಕೊಂಡು ಇತ್ತವಡ.
ಕುಂಞಿ ನಾಗರ ಹಾವು ಇನ್ನೂ ಸಣ್ಣ, ಹರವಲೆ ಕಲಿತ್ತಷ್ಟೆ.
ಈ ಕುಂಞಿಗೆ ಅಪ್ಪ ನಾಗರ ಹಾವೇ ತಿಂಬಲೆ – ಎಲಿ, ಹುಳು, ಹಾತೆ – ಹೀಂಗಿಪ್ಪದರ ಹಿಡುದು ತಂದುಕೊಟ್ಟೊಂಡು ಇತ್ತಡ.
ಆದರೂ ಒಂದೊಂದರಿ ಆ ಕೆರೆಯ ಕಟ್ಟಪುಣಿಲಿ ಹೋಗಿಯೋಂಡು ಹರವಲೆ ಅಭ್ಯಾಸ ಮಾಡಿಗೊಂಡು ಇತ್ತಡ.
ಹೀಂಗೇ ಇಪ್ಪಗ, ಒಂದರಿ ಆ ಕುಂಞಿ ನಾಗರ ಹಾವು ಕೆರೆಯ ಕರೆಲಿ ಹೋಪಾಗ, ಮಳೆ ಬಂದು ಬಿಟ್ಟದಷ್ಟೆ.
ಕೆರೆಯ ಒಳ ಇದ್ದ ಎಲ್ಲ ಕೆಪ್ಪೆಗೊ ಕಟ್ಟಪುಣಿಲಿ ಬೆಶಿಲು ತಿಂದುಗೊಂಡು ಇತ್ತಿದ್ದವಡ.
ಈ ಕುಂಞಿ ಹೋಪಗ ಎಲ್ಲ ಕೆಪ್ಪೆಗಳೂ ಅದರ ಮೇಗೆ ಹಾರಿ, ಅದಕ್ಕೆ ಕಸವು ಇಡ್ಕಿ, ಕಲ್ಲಿಡ್ಕಿ ಎಲ್ಲ ಲೂಟಿ ಮಾಡಿದವಡ.
ಒಂದು ಡೋಂಕ್ರುಕೆಪ್ಪೆ ಅಂತೂ ಅದರ ಓಡುಸಿಗೊಂಡೇ ಬಂತಡ.
ಕುಂಞಿ ಹಾವಿಂಗೆ ಹೆದರಿಕೆ ಆತು.
ಓಡಿಗೊಂಡು ಒಪಾಸು ಅದರ ಮಾಟೆಗೆ ಬಂತು. ಮನೆಲಿ ಕೂದುಗೊಂಡತ್ತು.
ಹೆದರಿಕೆ, ಬೇಜಾರ, ಪಿಸುರು ಎಲ್ಲವೂ ಬಂದುಗೊಂಡು ಇತ್ತು ಆ ಕುಂಞಿಗೆ.
ಚೂರು ಹೊತ್ತಪ್ಪಗ ಅದರ ಅಪ್ಪ ಬಂತು.
ಅಪ್ಪ ತಂತ ಎಲಿಕುಂಞಿಯ ತಿಂಬಗ ಈ ಕುಂಞಿ ಹೆದರಿದ್ದು ಕಂಡತ್ತು.
“ಎಂತಾತು ಕುಂಞೀ” – ಕೇಳಿತ್ತು ಅಪ್ಪ ಹಾವು.
ಕುಂಞಿ ಎಲ್ಲ ಕತೆ ಹೇಳಿತ್ತು, ಆಗ ಕಟ್ಟಪುಣಿಲಿ ಹೋಪಗ ಕೆಪ್ಪೆಗೊ ಎಲ್ಲ ಬಂತು, ಲೂಟಿ ಮಾಡಿತ್ತು, ಬೂಬು ಮಾಡಿತ್ತು – ಹೇಳುವಗ ಕುಂಞಿಗೆ ದುಖ್ಖ ಬಂತು.
“ಕೂಗೆಡ ಕುಂಞೀ” – ಹೇಳಿ ಅಪ್ಪ ಹಾವು ಸಮದಾನ ಮಾಡಿತ್ತಡ.
“ನಿನ್ನ ಕಂಡ್ರೆ ಎಲ್ಲೋರುದೇ ಹೆದರಿ ಓಡುತ್ತವು, ಎನಗೆ ಎಂತಕೆ ಎಲ್ಲ ಲೂಟಿ ಮಾಡ್ಳೆ ಬಪ್ಪದು. ಎಷ್ಟು ಸಮಯ ಆನು ಹೀಂಗೆ ಹುಗ್ಗಿ ಕೂಪದು” – ಕೇಳಿತ್ತಡ ಕುಂಞಿ.
“ನೀನು ಎಂತರ ಹೇಳಿ ಸರೀ ಗೊಂತಪ್ಪನ್ನಾರ ಆ ಕೆಪ್ಪೆಗೊ ಲೂಟಿ ಮಾಡುಗು ಅಷ್ಟೆ” – ಹೇಳಿತ್ತಡ.
“ಹಾಂಗೇಳಿರೆ?” – ಕುಂಞಿಗೆ ಅರ್ತ ಆಗದ್ದೆ ಪುನಾ ಕೇಳಿತ್ತಡ.
“ನೋಡು, ನೀನು ಎಂತರ ಹೇಳಿ ಒಂದರಿ ತೋರ್ಸೆಕ್ಕಾದ್ದು ಇಪ್ಪದು. ಒಂದರಿ ಹೆಡೆತೆಗದು ನಿಲ್ಲು. ಎಡಿಗಾಷ್ಟು ಶಕ್ತಿ ಹಾಕಿ ಒಂದರಿ ಸುಮಿ. ಅಷ್ಟಪ್ಪಗ ನೋಡು ಅವರ ಲೂಟಿ ಎಲ್ಲ ನಿಂಗು” – ಹೇಳಿತ್ತಡ.
~
ಈ ಕತೆಲಿ ಎರಡು ನೀತಿ ಇದ್ದು.
ಒಂದನೇದು ಕೆಪ್ಪೆಯ ದೃಷ್ಟಿಲಿ ನೋಡುವಗ.
ಇನ್ನೊಂದು ಹಾವಿನ ದೃಷ್ಟಿಲಿ ನೊಡುವಗ.
ಇಂದು ಕುಂಞಿ ಆಗಿಕ್ಕು, ಸಾಧು ಆಗಿಪ್ಪು, ಪೆಟ್ಟು ಕೊಟ್ರೆ ತಿಂಗು. ಆದರೆ ಒಂದಲ್ಲ ಒಂದು ದಿನ ಆ ಪೆಟ್ಟು ತಿಂದವನುದೇ ಬೆಳದು ಶಕ್ತಿಶಾಲಿ ಆವುತ್ತ° – ಹೇಳುವದು ಕೆಪ್ಪೆಯ ದೃಷ್ಟಿಲಿ ನೋಡುವಗ ಕಾಂಬ ನೀತಿ.
ಎದುರಾಳಿ ಕಾಂಬಲೆ ಎಷ್ಟೇ ದೊಡ್ಡ ಡೋಂಕ್ರುಕೆಪ್ಪೆಯೇ ಆಗಿರಳಿ, ನಾವು ಕಾಂಬಲೆ ಎಷ್ಟೇ ಸಣ್ಣ ಇರಳಿ. ಆತ್ಮವಿಶ್ವಾಸ ಮಡಗಿ ಒಂದರಿ ತಿರುಗಿ ನಿಂದರೆ – ಎಲ್ಲಾ ತೊಂದರೆಗಳೂ ಅದರಷ್ಟಕ್ಕೇ ನಿವಾರಣೆ ಆವುತ್ತು – ಹೇದು ಹಾವಿನ ದೃಷ್ಟಿಲಿ ನೋಡಿರೆ ಕಾಂಬ ನೀತಿ.
ಹಾಂಗೆ, ಮತ್ತಾಣ ಸರ್ತಿ ಕೆಪ್ಪೆಗೊ ಉಪದ್ರ ಕೊಡ್ಳೆ ಬಪ್ಪಗ ಹೆದರದ್ದೆ ನಿಂದು ಹೆಡೆ ತೆಗದತ್ತಡ ಆ ಕುಂಞಿ.
ಯಬೋ, ಈ ಹಾವು ಜೋರಿದ್ದು – ಹೇಳಿ ಗ್ರೇಶಿಗೊಂಡು ಕೆಪ್ಪೆಗೊ ಎಲ್ಲ ಓಡಿ ಹೋದವಡ.
ಮಾಷ್ಟ್ರುಮಾವನ ಮಗಳಿಂಗೆ ಈ ಕತೆ ನೆಂಪಿದ್ದೋ ಇಲ್ಲೆಯೋ ಗೊಂತಿಲ್ಲೆ.
ಆದರೆ ಒಪ್ಪಣ್ಣಂಗೆ ನೆಂಪಿದ್ದು. ಅಂಬಗಂಬಗ ನೆಂಪಾವುತ್ತು.
~
ನಾವುದೇ ತೊಂದರೆಗೊಕ್ಕೆ, ಉಪದ್ರಕ್ಕೆ ಹೆದರಿ ಬಗ್ಗಿರೆ ಹೆದರಿಗೊಂಡೇ ಇರೆಕ್ಕಷ್ಟೆ.
ಹೆದರದ್ದೆ ತಲೆ ಎತ್ತಿ ನಿಂದರೆ ಎಲ್ಲ ತೊಂದರೆಗಳೂ, ಕೆಪ್ಪೆಗಳೂ ದೂರ ಹೋವುತ್ತು.
~
ಒಂದೊಪ್ಪ: ಹೆಡೆತೆಗದು ನಿಂದು ಭಯಭಕ್ತಿ ಹುಟ್ಟುಸದ್ದರೆ ನಾಗಂಗೆ ನಾವು ಪೂಜೆ ಮಾಡ್ತಿತೇ ಇಲ್ಲೆ! 🙂
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಕತೆ ಹೆಣದ್ಸು ಒಪ್ಪ ಆಯಿದು
ಒಪ್ಪ ಕತೆ
ಒಳ್ಳೆ ನೀತಿ. ನಿಜವಾಗಿಯೂ ಈಗಾಣ ಕಾಲಕ್ಕೆ ಸರಿಯಾಗಿ ಹೊಂದುತ್ತ ಕತೆ. ಧೈರ್ಯ ಏವತ್ತುದೆ ಮನಸ್ಸಿಲ್ಲಿ ಇರೆಕು.
ತಗ್ಗಿ ನೆಡದವಂಗೆ ಬೆನ್ನಿಂಗೆರಡು ಗುದ್ದು ಹೇಳಿ ಅಪ್ಪದರ ಬದಲು ಸುಮ್ಮನೇ ಬಡುದವಂಗೆ ತಿರುಗಿ ನಿಂದು ಎರಡು ಮಡುಗಲೆ ನವಗೆ ಅರಡಿಯೆಕು. ಅಂಬಗಳೆ ಈಗಾಣ ಕಾಲಲ್ಲಿ ಬದುಕ್ಕಲೆಡಿಗಷ್ಟೆ. ಏವತ್ತುದೆ “ಒಪ್ಪಣ್ಣ” ಆಗಿಯೊಂಡಿಪ್ಪಲಾಗ ಅಲ್ದೊ ಒಪ್ಪಣ್ಣಾ ?
ಒಳ್ಳೆ ಶುದ್ಧಿ. ದೇವರಲ್ಲಿಯೂ ನಂಬಿಕೆಯೊಟ್ಟಿಂಗೆ ಭಯ,ಭಕ್ತಿಯು ಇದ್ದರೇ ದೇವರೊಲುಮೆ ಸಿಕ್ಕುಗಷ್ಟೆ, ನಂಬುಗಷ್ಟೇ .ಹೇಳ್ವದಕ್ಕೆ ಒಂದು ಒಳ್ಳೆಯ ಉದಾಹರಣೆ .
ಅಪ್ಪೊ ಶಿವರಾಮ, ನಿನ್ನ ಕೇಟವೊ, ಬಯಿಂದಾ ಇಲ್ಲೆ, ಹೇದೆ.
ಮೇಲೆ ಒಪ್ಪಣ್ಣನ ಪಟ ಎಂಗಳ ಮಜಲುಗುಡ್ಡೆ ಪುಟ್ಟಕ್ಕನ ಮಗ ಈಶ್ವರನ ಹಾಂಗೆ ಕಾಣುತ್ತು.