ಆಟಿಲಿ ಅರೆಗ್ಗಾಲವೇ ಬಯಿಂದಿಲ್ಲೆಯೋ ಹೇದು!
ಮಳೆ ಬಿರುದತ್ತೋ ನಿಂಗಳ ಹೊಡೆಲಿ? ನವಗಂತೂ ತಲೆ ಹೆರ ಹಾಕಲೆ ಎಡೆ ಇಲ್ಲೆ; ಹಾಂಗುದೇ ಮಳೆ!
ನೋಡಿಂಡಿದ್ದ ಹಾಂಗೇ ಹಲಸ್ನಾಯಿ ನಾನಾ ಬಗೆಗೊ ಮಾಡಿ ತಿಂದೂ ಆತು; ಹಳಸುತ್ತರ ಮದಲೇ ಮುಗುಶಿಯೂ ಆತು!
ಇನ್ನೆಂತರ? ಆಟಿಲಿ ಸುಮ್ಮನೇ ಕೂದುಗೊಂಬದು.
ಕೂದುಗೊಂಡು ಪುರುಸೊತ್ತಾದರೆ ಶುದ್ದಿ ಹೇಳುದು, ಅಲ್ಲದೋ?
ಬೇರೆ ಅದರಿಂದ ಒಳ್ಳೆ ಕಾರ್ಯ ಮಾಡ್ಳಾದರೂ ಎಂತ ಇದ್ದು ಬೇಕೇ?
ಬೈಲಿಲಿ ಒಳ್ಳೆ ಜೆಂಬ್ರಂಗೊ ಮಾಡಿರೆ ಅಲ್ಲದೋ, ನವಗೂ ಒಳ್ಳೆಕಾರ್ಯ ಮಾಡ್ಳೆ ಅವಕಾಶ ಸಿಕ್ಕುತ್ತದು! 😉
ಹೇಂಗೂ, ಆಟಿಲಿ ಒಳ್ಳೆ ಜೆಂಬ್ರ ತೆಗವಲೇ ಆಗ ಹೇಳ್ತದು ನಮ್ಮ ಪರಿವಾಡಿ!
ಓ, ಹೇಳಿದಾಂಗೆ – ಅದೆಂತಕೆ ಹಾಂಗೆ? ಆಟಿಲಿ ಒಳ್ಳೆಜೆಂಬ್ರ ಮಾಡ್ಳಾಗ ಹೇಳಿಗೊಂಡು? – ಉಮ್ಮಪ್ಪ!
ಅದೆಂತಕಾದಿಕ್ಕಪ್ಪಾ – ಹೇಳಿಗೊಂಡು ಮೊನ್ನೆ ಯೋಚನೆ ಮಾಡಿಂಡಿಪ್ಪಾಗಳೇ ತಲಗೆ ಒಂದು ವಿಶಯ ಬಂದಿಕ್ಕಿತ್ತು.
ಅದೆಂತರ?
~
ನಮ್ಮ ಸಂಸ್ಕಾರಲ್ಲಿ ಹಲವಾರು ’ಹೇಳಿಕೆ’ಗೊ ಇದ್ದು.
ಹೇಳಿಕೆ ಹೇಳಿತ್ತುಕಂಡ್ರೆ, ಜೆಂಬ್ರದ ಹೇಳಿಕೆ ಮಾಂತ್ರ ಅರಡಿಗು ನಮ್ಮ ಬೋಚಬಾವಂಗೆ! ಇದು ಆ ಹೇಳಿಕೆ ಅಲ್ಲ!
ಈ ಹೇಳಿಕೆಗೊ ಒಂದರ್ಥಲ್ಲಿ ಕಟ್ಟುಪಾಡುಗೊ; ಚೆಂದದ ಜೀವನ ನೆಡೆಶಲೆ ಇಪ್ಪ ಸೂಕ್ತಿಗೊ.
ಅಜ್ಜಿಯಕ್ಕಳ ತಲೆಮಾರಿನ ಜೀವನಲ್ಲಿ ಕಂಡುಗೊಂಡ ಸತ್ಯಂಗಳ, ದಾರಿಗಳ ಮುಂದಾಣೋರಿಂಗೂ ನೆಂಪೊಳಿಶಿ ಹೇಳ್ತ ವಾಕ್ಯಂಗೊ!
ಹ್ಮ್, ಹಾಂಗೆ ಮಾಡ್ಳಾಗ, ಅದರ ಕಿಟ್ಳಾಗ, ಇದರ ತಟ್ಳಾಗ, ಹೀಂಗೇ ಮಾಡೇಕು,ಹಾಂಗೆಯೇ ಮಾಡೇಕು – ಹೇಳಿ ಹಲವಾರು ಸೂಚನೆಗೊ ನಮ್ಮ ಮನೆಗಳಲ್ಲಿ ಹೆರಿಯೋರು ಹೇಳ್ತದರ ನಾವು ಕೇಳಿದ್ದು. ನೆಂಪಿದ್ದೋ?
ಕೆಲವಕ್ಕೆ ಸೋದಾಹರಣೆಲಿ ವಿವರಣೆ ಕೊಟ್ಟುಗೊಂಡು ಹೇಳುಗು; ಕೆಲವಕ್ಕೆ ಉದಾಹರಣೆ ಇರ, ಬರೇ ಹೇಳಿಗೊಂಡು ಹೋಕು – ಅಷ್ಟೆ.
ಅದೊಂದು ನಂಬಿಕೆಗಳ ಕಟ್ಟ. ಹಾಂಗೇ ನೆಡದರೆ ಸರಿ, ಹೊರತು – ಅದಕ್ಕೆ ತಪ್ಪಿಗೊಂಡು ಮುಂದುವರುದತ್ತು ಹೇಳಿ ಆದರೆ ಪಕ್ಕನೆ ಹೇಳಿಯೇ ಬಿಡುಗು – ಹಾಂಗೆ ಮಾಡ್ಳಾಗ! – ಹೇಳಿ.
ಹಾಂಗೆ ಮಾಡಿರೂ, ಮಾಡದ್ದರೂ ಅವಕ್ಕೇನೂ ತೊಂದರೆಇಲ್ಲೆ, ಆದರೂ ಹೇಳುಗು; ಹೇಳಿಯೇ ಹೇಳುಗು.
ಕೆಲವಕ್ಕಂತೂ – ಎಂತಕೆ ಮಾಡ್ಳಾಗ ಹೇಳ್ತರ ನಿರ್ದಿಷ್ಟ ಕಾರಣ ಅವಕ್ಕೂ ಅರಡಿಯ, ಅತವಾ ಅರಡಿಯಲೂ ಸಾಕು.
ಕಾಂಬುಅಜ್ಜಿ ಅಂತೂ ಅವರ ಜೀವನಲ್ಲಿ ಸಿಕ್ಕಿದ ಎಲ್ಲಾ ಕಿರಿಯರಿಂಗೂ ಈ ಬುದ್ಧಿವಾದಂಗಳ ಹೇಳಿಗೊಂಡಿತ್ತವು.
ಇದೇ ಕಾರಣಕ್ಕೆ ಸಣ್ಣ ಇಪ್ಪಗ ಒಪ್ಪಣ್ಣಂಗೆ ಒಂದೊಂದರಿ ’ಕಾಂಬುಅಜ್ಜಿ ಜೋರು’ ಹೇಳಿಯೂ ಅನುಸಿದ್ದದು ಇದ್ದು! 😉
~
ಹೇಳಿದಾಂಗೆ, ಈ ವಾರ ಬೈಲಿಲಿ ಅದರ ಬಗ್ಗೆಯೇ ಮಾಡಿರೆ ಹೇಂಗೆ?
ಮತ್ತೆ, ಒಂದು ವೇಳೆ ಅಜ್ಜಿಯಕ್ಕೊಗೇ ಮರದರೂ ಬೈಲಿನೋರಿಂಗೆ ಮರೆಯ – ಅಲ್ಲದೋ?! 🙂
ಇದೇ ಲೆಕ್ಕಲ್ಲಿ ಮೂರ್ಸಂದೆ ಹೊತ್ತಿಂಗೆ ಮಾಷ್ಟ್ರುಮಾವನ ಮನೆಗೆ ಹೋದೆ. ಮಾಷ್ಟ್ರಮನೆ ಅತ್ತೆಯ ಕೈಲಿ ಕೇಳುವೊ° – ಹೇಳಿಗೊಂಡು!
ಒಪ್ಪಣ್ಣ ಎತ್ತುವ ಹೊತ್ತಿಂಗೆ ಅವು ಅವರ ಅಪ್ಪನ ಮನೆಲಿ ಆಟಿಗೆ ಕೂದು, ದುರ್ಗಾಪೂಜೆ ಉತ್ಥಾನ ಕಳಿಶಿಂಡು ಎತ್ತಿ, ಒಂದರಿಯಾಣ ಕೆಲಸ ಆಗಿ ಕೂದ್ದಟ್ಟೇ. ಒಳುದ ಸಣ್ಣಪುಟ್ಟ ಕೆಲಸಂಗಳ ಮಾಡ್ಳೆ ಹೇಂಗೂ ಮಾ.ಮ.ಮಗಳು ಇದ್ದನ್ನೇ! 🙂
ಅಂತೂ, ಇವು ಕಾಲುನೀಡಿ ಕೂದೊಂಡು ಶುದ್ದಿ ಮಾತಾಡಿಗೊಂಡು ಹೋಪಗ – ಈ ಸಂಗತಿಯನ್ನೂ ಹೇಳಿದೆ.
ಕಾಂಬುಅಜ್ಜಿ ಹೇಳಿಗೊಂಡಿದ್ದದರಿಂದ ಹಿಡುದು – ಈಗ ಬಂಡಾಡಿ ಅಜ್ಜಿ ಹೇಳ್ತಲ್ಲಿ ಒರೆಗಾಣ ದೊಡ್ಡ ಸಂಗ್ರಹ ಮಾಡ್ತ ಬಗ್ಗೆ ಹೇಳಿದೆ.
‘ಒಪ್ಪಣ್ಣಂಗೆ ಮರುಳು’ ಗ್ರೇಶಿಗೊಂಡವೋ ಏನೋ – ಒಂದರಿ ನೆಗೆಮಾಡಿದವು!
ಅಂತೂ ದೊಡ್ಡ ಪಟ್ಟಿಯೇ ಸುರು ಆತು. ಎಡೆಡೆಲಿ ಅವಕ್ಕೆ ಅರಡಿಗಾದ್ಸರನ್ನೂ ಸೇರುಸಿಗೊಂಡವು.
ಮಾಷ್ಟ್ರುಮಾವ° ನೀರಡಕ್ಕೆ ಕೆರಸಿಗೊಂಡು ಒಂದೊಂದೇ ನೆಂಪುಮಾಡಿ ಕೊಟ್ಟುಗೊಂಡಿತ್ತಿದ್ದವು.
~
ಪಟ್ಟಿ ಬೆಳದ ಹಾಂಗೇ ನವಗೆ ಅದರ ನೆಂಪುಮಡಿಕ್ಕೊಂಬಲೆ ಕಷ್ಟ ಆದ ಕಾರಣ ಆ ಕ್ರಮಂಗಳ ಬೇರೆಬೇರೆ ರೀತಿಲಿ ವಿಂಗಡಣೆ ಮಾಡಿ ನೆಂಪುಮಡಿಕ್ಕೊಂಡತ್ತು ನಾವು.
ಅದು ಹೇಂಗೆ ಹೇಳಿತ್ತುಕಂಡ್ರೆ:
ನೆಡವಳಿಕೆ:
ಹಲವಾರು ಅಂಶಂಗೊ ನಮ್ಮ ನಡವಳಿಕೆಗೆ ಸಮ್ಮಂದ ಪಟ್ಟ ಹಾಂಗೆ ಇದ್ದು:
- ಎರಡು ಕೈಲಿ ತಲೆ ತೊರುಸುಲಾಗ! ಎಂತಾರು ಯೋಚನೆ ಮಾಡ್ತ ಸಂದರ್ಭಲ್ಲಿ ಹೀಂಗೆ ಮಾಡಿರೆ ಪಕ್ಕನೆ ಹೆರಿಯೋರು ಬೈಗು!
ಹಾಂಗೇ – ತಲೆಮೇಲೆ ಕೈ ಮಡಿಕ್ಕೊಂಬಲಾಗ ಹೇಳುಗು. - ತಲೆಕಸವು ಬಿಕ್ಕಿ ಹಾಕಿಗೊಂಡಿಪ್ಪಲಾಗ, ಚೆಂದಲ್ಲಿ ಬಾಚಣಿಗೆ ಮುಟ್ಟುಸಿ ಮನಾರ ಮಾಡಿ ಬಡುಗಿರೇಕು – ಹೇಳ್ತದು ಉದ್ದೇಶ. ಬೌಶ್ಷ ತಿತಿದಿನ (ಅಪರ ಕಾರ್ಯದ ದಿನ) ತಲೆಬಾಚದ್ದೆ ಇರೆಕ್ಕಪ್ಪ ಕಾರಣವೇ ಆಯಿಕ್ಕು ಹೇಳಿದವು ಮಾಷ್ಟ್ರುಮಾವ°.!
ಕೂಸುಗೊ ಅಂತೂ, ತಲೆಕಸವಿನ ಒಂದು ಜೊಟ್ಟಾದರೂ ಕಟ್ಟೇಕು!
– ಬೆಂಗುಳೂರಿಲಿ ಶುಬತ್ತೆ ಪಾರ್ಟಿಗೊಕ್ಕೆಲ್ಲ ಹೋಪಾಗ ತಲೆಕಸವಿನ ಬಿಕ್ಕಿಗೊಂಡೇ ಹೋಕು.
ಪೇಟೆಲಿ ಅದುವೇ ಪೇಶನು ಅಡ, ಅಪ್ಪೋ? ಉಮ್ಮಪ್ಪ! - ಮಂಚಲ್ಲಿಯೋ, ಕುರ್ಚಿಲಿಯೋ ಮಣ್ಣ ಕೂದುಗೊಂಡು ಕಾಲು ಆಡುಸಲಾಗ.
ಮಗ° ಹೀಂಗೆ ಕಾಲು ಆಡುಸಿರೆ, ಅಪ್ಪಂಗೆ ಜೀವನಲ್ಲಿ ಸಾಲ ಆವುತ್ತು – ಹೇಳಿ ಅಜ್ಯಕ್ಕೊ ಹೆದರುಸುಗು.
- ಕಾಲು ತೊಳವಾಗ ಹಿಂಗಾಲು ಒಣಕ್ಕಿಪ್ಪಲಾಗ.
ಹೇಳಿತ್ತುಕಂಡ್ರೆ, ಕಾಲಿನ ಮುಂದಾಣ ಹೊಡೆಂಗೆ ಮಾತ್ರ ಆಗಿ ನೀರು ಹಾಕುಲಾಗ – ಹಿಮ್ಮಡಿದೆ ಚೆಂಡಿ ಆಯೆಕ್ಕು
ಅಲ್ಲದ್ದರೆ, ಆ ಒಣಕ್ಕಿನ ಜಾಗೆಲೆ ಆಗಿ ಶೆನಿ ಹತ್ತಿಗೊಂಡು ಬತ್ತನಾಡ ನಮ್ಮ ಮೇಲಂಗೆ!
ಉಮ್ಮ, ದಾರಿಕುರೆ ಸರೀ ಹೋಯೇಕು ಹೇಳ್ತ ಉದ್ದೇಶಲ್ಲಿ ಹೀಂಗೆ ಮಾಡಿದ್ದವೋ – ಎಂತ್ಸೋ!. - ಮೂರ್ಸಂದೆ ಹೊತ್ತಿಂಗೆ ಮನುಗುಲಾಗ, ಓದುಲಾಗ, ಉಂಬಲಾಗ, ತಿಂಬಲಾಗ!
ಅದೊಂದು ಸಂಧ್ಯಾಕಾಲ ಆದ ಕಾರಣ – ಅಂತರ್ಮುಖಿ ಆಗಿದ್ದೊಂಡು ದೇವರ ಸ್ಮರಣೆ ಮಾಡೇಕು ಹೇಳ್ತ ಉದ್ದೇಶಲ್ಲಿ ಹೀಂಗೆ ಬಂದ್ಸೋ – ಎಂತ್ಸೊ! ಅಲ್ಲದೋ? - ಮುತ್ತೈದೆ ಹೆಮ್ಮಕ್ಕೊ ಬೊಟ್ಟು ಹಾಕದ್ದೆ ಇಪ್ಪಲಾಗ.
ವಿಶೇಷವಾಗಿ ದೇವರದೀಪ ಹೊತ್ತುಸುವಗ ಇತ್ಯಾದಿ – ಪಾತಿ ಅತ್ತೆ ಎರಡೆರಡು ಸರ್ತಿ ಕಣ್ಣಾಟಿ ನೋಡಿಕ್ಕಿ ಬಕ್ಕು, ಬೊಟ್ಟು ಸರಿ ಇದ್ದನ್ನೇ ಹೇಳಿಗೊಂಡು! - ಕನ್ನಟಿ ಹೇಳುವಗ ನೆಂಪಾತು, ಒಡದ ಕನ್ನಟಿ ನೋಡ್ಳಾಗ.
ನಮ್ಮ ಮನಸ್ಸುದೇ ಒಡಗು ಹೇಳ್ತ ಹೆದರಿಕೆಯೋ ಎಂತ್ಸೋ! - ಒಡದ ಬಳೆ ಹಾಕಲಾಗ – ಹೇಳ್ತದು ಇನ್ನೊಂದು ನಿಯಮ.
ಹಾಕುತ್ತ ಆಭರಣಂಗೊ ಕಮ್ಮಿ ಆದರೂ, ಎಲ್ಲವೂ ಪರಿಪೂರ್ಣ ಇರೇಕು – ಹೇಳ್ತ ಕಾರಣವೋ ಏನೋ! - ಇರುಳು ಉಗುರು ತೆಗವಲಾಗ; ತೆಗದ ಉಗುರಿನ ಹನಿಕ್ಕದ ಎದುರಂಗೆ ಇಡ್ಕಲಾಗ!
ಮನೆಂದ ದೂರ ಇಡ್ಕೇಕು.
ಹತ್ತರೆಯೇ ಇಡ್ಕಿರೆ ಅದು ಮನೆಗೇ ಮಾಟ – ಹೇಳಿ ಹೆದರುಸುಗು ಅಜ್ಯಕ್ಕೊ!
ಹೇಳಿದಾಂಗೆ, ಉಗುರು ಕಚ್ಚುಲಾಗ, ಉಗುರು ತುಂಡು ತಿಂದುಹೋತಿಕ್ಕಲಾಗ – ಹೇಳ್ತದು ಕಟ್ಟುಪಾಡು. - ಬಿದ್ದ ಹಲ್ಲಿನ ಜಾಲಿಂಗೆ ಇಡ್ಕಲಾಗ!
ಆ ಹಲ್ಲಿನ ಮಾಡಿಂಗೇ ಇಡ್ಕೇಕು ಹೇಳುಗು ಬಂಡಾಡಿ ಅಜ್ಜಿ! - ಬಂಡಾರಿಕೊಟ್ಟಗೆಲಿ ಕುಚ್ಚಿತೆಗೆಶಿಕ್ಕಿ ಮೀಯದ್ದೆ ಎಂತದೂ ಮುಟ್ಳಾಗ.
ಮೈಲಿ ಇಡೀ ಇಪ್ಪ ತಲೆಕಸವಿನ ತುಂಡುಗೊ ಊರಿಡೀ ಬಿಕ್ಕದ್ದ ಹಾಂಗೆ ಈ ಕ್ರಮ ಬಂದದಾಯಿಕ್ಕು. - ತಲಗೆ ಎಣ್ಣೆ ಕಿಟ್ಟಿದ ಕೂಡ್ಳೇ ಮೀವಲಾಗ.
ತಿತಿದಿನ ಎಣ್ಣೆಕೊಟ್ಟ ತಕ್ಷಣ ಮೀಯಲೆ ಹೇಳ್ತವಲ್ಲದೋ – ಹಾಂಗೆ ಈ ಕ್ರಮ ಬಂದದೋ ಏನೋ – ಹೇಳಿಗೊಂಡವು ಮಾಷ್ಟ್ರುಮಾವ°. - ಉಂಡ ಕೈ ಒಣಗುಸುಲಾಗ – ಹೇಳ್ತದು ಇನ್ನೊಂದು ವಿಶಯ!
ಉಂಡಾದ ಮತ್ತೆಯೂ ಉಂಬಲೆ ಕೂದಲ್ಲೇ ಕೂದುಗೊಂಡು, ಏನಾರು ಲೊಟ್ಟೆಪಟ್ಟಾಂಗ ಹಾಕಿ ಹೊತ್ತು ಕಳವಲೆ ಸುರುಮಾಡಿರೆ ಹೀಂಗೆ ಬೈಗು! - ಉಂಬಲೆ ಕೂದಿಪ್ಪಗ – ಎಡಕ್ಕಿಲಿ ಒಂದರಿ ಎದ್ದು, ಕೈತೊಳದು –ಪುನಾ ಉಂಬಲೆ ಕೂದಿಕ್ಕಲಾಗ!
ಒಬ್ಬನ ಊಟ ಎಲ್ಲಿ, ಎಷ್ಟು ಹೇಳ್ತರ ಚಿತ್ರಗುಪ್ತ ಬರಕ್ಕೊಳ್ತನಾಡ. ನಾವು ಹೀಂಗೆ ಎರಡೆರಡು ಊಟವ ಒಂದೇ ಬಾಳೆಲಿ ಮಾಡಿರೆ ಚಿತ್ರಗುಪ್ತಂಗೆ ಕನುಪ್ಯೂಸು ಆವುತ್ತೋ ಏನೋ! ಉಮ್ಮಪ್ಪ! - ಮನೆಂದ ಹೆರಡುವಗ ಕಾಲು ತೊಳಕ್ಕೊಂಡು ಹೋಪಲಾಗ.
ಇದು ನಮ್ಮ ಮನೆಲೇ ಆಯಿಕ್ಕು, ಬೇರೆವರ ಮನೆಂದಲೇ ಆಗಿಕ್ಕು – ಹೆರಡುವಗ ಕಾಲು ತೊಳಕ್ಕೊಂಡತ್ತುಕಂಡ್ರೆ, ಮನೆಯನ್ನೂ ತೊಳದ ಹಾಂಗೆ – ಎಲ್ಲವೂ ಹರಹರ ಅಕ್ಕು, ಹೇಳುಗು ಮದಲಿಂಗೆ. - ಉಡುಗುವಾಗ ಹಿಡಿಸುಡಿಯ ಬೇರೆಯವರ ಕಾಲಿಂಗೆ ಮುಟ್ಸುಲಾಗ.
ಹಿಡಿಸುಡಿ ಕಿಟ್ಟೆಡಾ, ಮೀಸೆಬತ್ತಿಲ್ಲೆ – ಹೇಳಿ ಎಳೆಮಕ್ಕೊಗೆ ಹೆದರುಸುಗು, ಅಲ್ಲದೋ? 😉 - ದೇವರಿಂಗೆ ಮಡುಗುಲಿಪ್ಪ ಹೂಗಿನ ಮೂಸುಲಾಗ.
ಒಂದರಿ ಮೂಸಿರೆ ಅದು ’ಪ್ರಸಾದ’ ಹೇಳಿ ಆತು. ಹಾಂಗಾಗಿ, ಮೂಸದ್ದೇ ದೇವರಿಂಗೆ ಸಮರ್ಪಣೆ ಮಾಡೇಕು.
ಈಗಾಣ ಬಾಯಮ್ಮನ ಮಲ್ಲಿಗೆ ಮಾಲೆಗಳ ಅದು ಬಳ್ಳಿ ತುಂಡುಸುವ ನೆಪಲ್ಲಿ ಬಾಯಿ ಹಾಕಿ ಕಚ್ಚುತ್ತದರ ಕಂಡ ಮಿಂಚಿನಡ್ಕಬಾವ° ಹೇಳ್ತವು – ಬಾಯಮ್ಮ ನಕ್ಕಿದ ಹೂಗು – ಹೇಳಿಗೊಂಡು!!
ಹಾಂಗೆಯೇ, ನಿನ್ನೇಣ ಹೂಗಿನ ಇಂದು ಹಾಕಲಾಗ. - ಯೇವದಾರು ತಿಂತ ವಸ್ತು ಇದ್ದರೆ ಕಚ್ಚಿ ತಿಂಬಲಾಗ – ಹೇಳುಗು.
ಬಾಳೆಹಣ್ಣೋ, ಮಾಯಿನಣ್ಣೋ ಮತ್ತೊ ಇದ್ದರೆ, ಕಚ್ಚಿ ಕಚ್ಚಿ ತಿಂತ ಪುಳ್ಯಕ್ಕಳ ಕಂಡ್ರೆ ಅಜ್ಜಿ ಪರಂಚುಗು – ತುಂಡುಸಿ ತಿನ್ನೋ – ಹೇಳಿಗೊಂಡು! - ಊಟದ ಬಾಳಗೆ ನೀರು ಅಂತೊಂಬಲಾಗ ಹೇಳ್ತ ಸಂಗತಿ ಗೊಂತಿದ್ದೋ?
ಕೆಲವು ಸರ್ತಿ ಅಶನಕ್ಕೆ ಬಳುಸಿದ ಮಜ್ಜಿಗೆ ಬಯಂಕರ ಹುಳಿ ಆದರೆ ಬಟ್ಯ ಅರ್ದ ಗ್ಲಾಸು ನೀರು ಎರಕ್ಕೊಂಗು.
ನಾವು ಹಾಂಗೆ ಮಾಡಿಕ್ಕಲೆ ಗೊಂತಿಲ್ಲೆ ಇದಾ!
(ಬಾಳಗೆ ನೀರು ಹಾಕಲಾಗ- ಹೇಳಿದ್ದಕ್ಕೆ ಬೋಚಬಾವನ ತೋಟದ ಬಾಳೆಗೆಡುಗೊ ಕಳುದೊರಿಶ ಒಯಿಶಾಕಲ್ಲಿ ಒಣಗಿದ್ದಾಡ!) - ಹನಿಕ್ಕಲ್ಲಿ ತಲೆಬಾಚಲಾಗ ಹೇಳ್ತವು ಅಜ್ಯಕ್ಕೊ.
ಹನಿಕ್ಕ – ಹೇಳಿತ್ತುಕಂಡ್ರೆ ಎಂತರ ಗೊಂತಿದ್ದನ್ನೇ? ಜೋರು ಗಾಳಿಮಳೆಗೆ ಹನಿ ಬಡಿವಲೆ ಸಾಧ್ಯ ಇಪ್ಪ ಮನೆಯ ಜೆಗಿಲಿ ಹೆರಾಣ ಭಾಗ! ಅಲ್ಲಿ ನಿಂದೊಂಡು ತಲೆಬಾಚಲಾಗ ಹೇಳ್ತದು ಹೇಳಿಕೆ. - ನೆಡು ಇರುಳು ಕಳುದು ಉಂಬಲಾಗ ಹೇಳ್ತವು.
ಬೂತ, ಪ್ರೇತಂಗೊ ಉಂಬ ಹೊತ್ತು ಅಡ ಅದು. ನಮ್ಮ ಊಟ ಏನಿದ್ದರೂ ಅದರಿಂದ ಮದಲೇ ಮುಗುಶಿಗೊಳೆಕ್ಕು – ಹೇಳ್ತವು. ದೊಡ್ಡಜ್ಜನಲ್ಲಿ ತ್ರಿಕಾಲಪೂಜೆ ದಿನ ಊಟ ತಡವಪ್ಪಗ ಈ ವಿಶಯ ನೆಂಪಪ್ಪಲಿದ್ದು ಒಂದೊಂದರಿ! 😉 - ಕೆರಮಣೆಲಿ, ಕಡವಕಲ್ಲಿಲಿ, ತಲೆಕೊಂಬಿಲಿ – ಕೂಪಲಾಗ.
ಅಪ್ಪು, ಕೆರಮಣೆಲಿ ಕೆರವಗ ಕೂಪಲಕ್ಕು, ಆದರೆ ಅಂತೇ – ಊಟಕ್ಕೋ ಮಣ್ಣ ಕೂರ್ತರೆ ಕೂಬ ಹಾಂಗೆ ಇಲ್ಲೆ.
ಕಡವಕಲ್ಲಿಲಿ ಕೂದರೆ ದೇಹದೊಡ್ಡ ಆವುತ್ತು ಹೇಳಿ ನೆಗೆಮಾಣಿಯ ಹೆದರುಸಿದ್ದಕ್ಕೆ ಈಗ ಕೂರು ಹೇಳಿರೂ ಕೊರ್ತನಿಲ್ಲೆ ಅವ°! 😉
ನಿತ್ಯ ಜೀವನ:
ನಿಷೇಧಂಗಳಲ್ಲಿ ಸುಮಾರು ಅಂಶಂಗೊ ನಮ್ಮ ನಿತ್ಯ ಜೀವನಕ್ಕೆ ಸಮ್ಮಂದಪಟ್ಟದು:
- ಕಾಲಿ ತೊಟ್ಳಿನ ತೂಗುಲಾಗ! ತೊಟ್ಳಿನೊಳ ಬಾಬೆ ಇದ್ದರೆ ಮಾಂತ್ರ ತೂಗೇಕು.
ಅಷ್ಟೇ ಅಲ್ಲದ್ದೆ, ತೊಟ್ಳಿಂಗೆ ಕಾಲು ಮಡುಗುಲಾಗ; ತೊಟ್ಳಿಲಿ ನಿಂಬಲಾಗ. ತೊಟ್ಳಿನ ಕಾವ ದೇವತೆಯ ಅಂಶಕ್ಕೆ ಗೌರವ ಕೊಡ್ತ ಉದ್ದೇಶ ಇದರ ಹಿಂದೆ ಇದ್ದಿಕ್ಕಲ್ಲದೋ? - ಮನೆಲಿ ಕಂಚಿನ ವಸ್ತುಗೊ ಕೈ ತಪ್ಪಿಯೂ ಒಡವಲಾಗ. ಒಡದರೆ ಅದು ಮನೆಗೆ ಅನಿಷ್ಟ ಹೇಳ್ತದು ನಂಬಿಕೆ.
- ಒಡದ ಕಾಯಿಗಡಿಯ ಜೋಡುಸಲಾಗ ಹೇಳುಗು ಮದಲಿಂಗೆ.
ಬೌಶ್ಶ ಅಪರಕಾರ್ಯ ಆರಂಭದ ದಹನದ ದಿನಕ್ಕೆ ಹೀಂಗೆ ಉದ್ದೇಶಪೂರ್ವಕ ಜೋಡುಸಲಿದ್ದು. ಆ ಕಾರಣಲ್ಲಿಯೋ ಏನೋ! - ತೆಂಕ ಮೋರೆ ಮಾಡಿಗೊಂಡು ಕೂಪಲಾಗ!
ಅದು ಉಂಬಲೇ ಆಗಲಿ, ಮೆಟ್ಟುಕತ್ತಿಲಿ ಕೊರವಲೇ ಆಗಲಿ, ಮಂತ್ರ ಹೇಳುಲೇ ಆಗಲಿ, ಜೆಪಕ್ಕೇ ಆಗಲಿ – ತೆಂಕಮೋರೆ ನಿಷಿದ್ಧ!
ಮಂತ್ರಪಠಣ ಕಾಲಲ್ಲಿ ಅಭಿಮುಖ ಆದರೆ ಅಕ್ಕು ಹೇಳುಗು ಬಟ್ಟಮಾವ°. ಅಭಿಮುಖ ಹೇಳಿತ್ತುಕಂಡ್ರೆ, ಎದುರಾಎದುರು ಕೂದುಗೊಂಬ ಪ್ರಮೇಯ! - ತೆಂಕಬಡಗ ಆಗಿ ಸೌದಿ ಓಶಲಾಗ!
ದಹನದ ಕಾಷ್ಟಕ್ಕೆ ಇದೇ ದಿಕ್ಕಿಲಿ ಓಶುತ್ತ ಕಾರಣ ನಿತ್ಯಜೀವನಲ್ಲಿ ಈ ನಿಷೇಧ ಇಪ್ಪದಾಯಿಕ್ಕು. - ಮೂರು ಒಲೆ ಹಾಕಲಾಗ ಅಡ.
ಒಂದು ಒಲೆ ಅಕ್ಕು, ಅತವಾ ಒಂದರಿಂದ ಹೆಚ್ಚಿನ ಯೇವದೇ ಸಮಸಂಕ್ಯೆ ಅಕ್ಕು (ಎರಡು, ನಾಕು, ಆರು…).
ಆದರೆ ಮೂರು ಒಲೆ ಆಗಿ ಹಾಕಲೇ ಆಗ ಅಡ. - ಹಾಲಿಂಗೆ ಉಪ್ಪು ಹಾಕಿ ಉಂಬಲಾಗ ಅಡ!
ಮಜ್ಜಿಗೆಗೆ ಆದರೆ ಉಪ್ಪು ಹಾಕುತ್ತವು, ಆದರೆ ಹಾಲಿಂಗೆ ಉಪ್ಪು ಹಾಕುತ್ತ ಮರಿಯಾದಿ ಇಲ್ಲೆ! - ಜೇನು-ತುಪ್ಪ ಸಮಪ್ರಮಾಣಲ್ಲಿ ಕಲಸಲೆ ಆಗ!
ಎರಡುದೇ ಒಂದೇ ಪ್ರಮಾಣಲ್ಲಿ ಹಾಕಿ ಕಲಸಿರೆ ಅದು ವಿಷಕ್ಕೆ ಸಮಾನ ಹೇಳುಗು ಚೌಕ್ಕಾರುಮಾವ°.
ಆದ ಕಾರಣ ಚೂರ್ಣ ಇತ್ಯಾದಿ ಕಲಸುವಗ ಯೇವದಾರು ಒಂದರ ರಜ ಜಾಸ್ತಿಯೇ ಹಾಕುತ್ಸು! - ಮಧ್ಯಾಂತಿರುಗಿ ತೊಳಶಿ ಕೊಯಿವಲಾಗ ಹೇಳ್ತದು ಒಂದು ವಾಡಿಕೆ.
ಅತಿಮೀರಿ ಅಗತ್ಯ ಕಂಡ್ರೆ ಗೆಂಡುಮಕ್ಕೊ ಕೊಯಿದಿಕ್ಕಲಕ್ಕು ಆದರೆ, ವಿಶೇಷವಾಗಿ ಹೆಮ್ಮಕ್ಕೊ ಕೊಯಿವಲೇ ಆಗ! - ಮಧ್ಯಾಂತಿರುಗಿ ಮಜ್ಜಿಗೆ ಕಡವಲಾಗ ಮತ್ತೆ ಆರಿಂಗಾರು ಕೊಡ್ಳೂ ಆಗ.
ಒಂದುವೇಳೆ ಕೊಡ್ತರೆ, ಒಂದು ಕಲ್ಲು ಉಪ್ಪೋ, ಒಂದು ಇಡಿಮೆಣಸೋ ಮಣ್ಣ ಹಾಕಿ ಕೊಡೆಕ್ಕು. - ಹಿಡಿಸುಡಿಯ ಕುತ್ತಕಂಡೆ ಮಡುಗಲಾಗ.
ಅದರ ಕಡೆ ನೆಲಕ್ಕಲ್ಲಿ ನಿಂದು, ಕಡ್ಡಿಗಳ ಪೂರ ಅರಳುಸಿ ಮಡಗಿರೆ ಮನೆಲಿ ಕೆಟ್ಟ ದಿನಂಗಳೂ ಅರಳ್ತಾಡ! - ಇರುಳು ಕೂಕಿಲು ಹಾಕುಲಾಗ ಹೇಳಿ ಪಾತಿಅತ್ತೆ ವಿನುವಿನ ಬೈಗು.
ಇರುಳು ಬಿಗಿಲು ಹಾಕಿರೆ ಕೊಲೆಗೊ ಬತ್ತವು, ಅವರ ದೆನಿಗೆಳಿದ ಹಾಂಗೆ – ಹೇಳ್ತದು ವಾಡಿಕೆ.
ಈ ಶುದ್ದಿ ಸಣ್ಣ ಇಪ್ಪಾಗ ಗೊಂತಾದ ಒಪ್ಪಣ್ಣ, ಒಂದಿನ ಇರುಳು ಉಂಡಿಕ್ಕಿ ಕೈ ತೊಳವಗ ಸಣ್ಣಕೆ ಕೂಕಿಲು ಹಾಕಿ ಓಡಿಗೊಂಡು ಮನೆಒಳ ಬಂದಿಕ್ಕಿದ್ದು ಈಗಳೂ ನೆಂಪಾವುತ್ತು! ಕೊಲೆಗೊ ಬಂದು ಹೆರ ಕಾದು ನಿಂದಿತ್ತವೋ ಏನೊ! ಉಮ್ಮಪ್ಪ!! - ಇರುಳು ವಸ್ತ್ರ ಒಗವಲಾಗ ಹೇಳ್ತದು ಇನ್ನೊಂದು ಬಹುಮುಖ್ಯ ಕಟ್ಟುಪಾಡು.
ಒಂದುವೇಳೆ ಅನಿವಾರ್ಯ ಆದರೆ ಕೈಲೇ ಕುಸುಂಬಿ ಹಾಕಲಕ್ಕು, ಆದರೆ ಕಲ್ಲಿಲಿ ಬಡಬಡನೆ ಬಡುದು ಒಗದು ಆರುಸುದು ನಿಷಿದ್ಧ! - ಇರುಳು ಕಸವು ಉಡುಗಲಕ್ಕು, ಆದರೆ ಕಸವು ಇಡ್ಕುಲಾಗ.
ಮದಲಾಣ ಕಾಲಲ್ಲಿ ಸೂಕ್ಷ್ಮದ ವಸ್ತುಗೊ ಕಸವಿನ ಒಟ್ಟಿಂಗೆ ಕಾಣೆ ಆಗಿ, ಕಸವು ಇಡ್ಕಿದ್ದರ್ಲಿ ಪೂರ್ತಿ ಕಾಣೆ ಆಗಿ ಹೋವುತ್ಸು ಬೇಡ ಹೇಳಿ ಹಾಂಗೆ ಮಾಡಿದ್ದಾಯಿಕ್ಕು ಅಜ್ಯಕ್ಕೊ. ಅಲ್ಲದೋ? - ಗ್ರಹಣದ ಸಮೆಯಲ್ಲಿ ಆಹಾರ ಉಂಬಲಾಗ ಹೇಳ್ತದು ಇಡೀ ಲೋಕಕ್ಕೇ ಗೊಂತಿದ್ದು ಈಗ.
ಸಾಮಾನ್ಯವಾಗಿ ಗ್ರಹಣಕಾಲಂದ ಒಂದೆರಡು ಜಾವ (೧ ಜಾಮ = ಮೂರು ಗಂಟೆ) ಮೊದಲು, ಮತ್ತೆ – ಇಪ್ಪ ಅವಧಿಲೇ ಊಟ ನಿಷಿದ್ಧ – ಹೇಳ್ತದು ಒಯಿಜಯಂತಿ ಹೇಳ್ತಾಡ, ಮಾಷ್ಟ್ರುಮಾವಂಗೆ ಅರಡಿಗು. - ತೋಟಂದ ಬಾಳೆಗೊನೆಯ ಕಡುದು ಮನೆಗೆ ತಪ್ಪಾಗ, ಅದರ ಮೋತೆಯ ತುಂಡುಸಿ ತರೆಕ್ಕಾಡ.
ಎರಡನ್ನೂ ಒಟ್ಟಿಂಗೇ ತಪ್ಪಲಾಗ ಹೇಳ್ತದು ಸಂಪ್ರದಾಯ. - ಮನೆಲಿ ಪೂಜೆ ಆಯ್ಕೊಂಡಿಪ್ಪಾಗ ಉಡುಗುಲಾಗ ಆಡ.
ಮನೆಲಿಡೀ ಪಸರಿಸೆಂಡಿಪ್ಪ ದೈವೀಕ ಅಂಶವ ದೂಡಿದ ಫಲ ಆವುತ್ತು ಹೇಳ್ತದು ಅಜ್ಜಂದ್ರ ವಿಶ್ವಾಸ.
ಹಾಂಗಾಗಿ, ಪೂಜೆ ಆಗಿ, ನೀರು ಮಡಗಿದ ಮತ್ತೆಯೇ ಉಡುಗಿ ಬಾಳೆ ಹಾಕುತ್ಸು ಮರಿಯಾದಿ. ಅಲ್ಲದೋ? - ಕೆಲವು ವಸ್ತುಗಳ ಕೈಂದ ಕೈ ಕೊಡ್ಳಾಗ.
ಉದಾಹರಣೆಗೆ ಹೊತ್ತಿಂಡಿದ್ದ ದೀಪವ, ಕತ್ತಿ-ಪೀಶಕತ್ತಿ ಇತ್ಯಾದಿ ಆಯುಧಂಗಳ, ಹಿಡಿಸುಡಿ –ಇತ್ಯಾದಿ ವಸ್ತುಗಳ ಕೈಯಾನ ಕೈ ಪಗರುಸಲೇ ಇಲ್ಲೆ. ಒಬ್ಬ ಕೆಳ ಮಡಗಿದ್ದರ ಇನ್ನೊಬ್ಬ ತೆಕ್ಕೊಳ್ತದು ಮರಿಯಾದಿ.
ಹಾಂಗೆ ಕೈಯಾರೆ ಕೊಟ್ರೆ ಅವರ ಹತ್ತರೆ ಜಗಳ ಆವುತ್ತು ಹೇಳ್ತದು ನಂಬಿಕೆ! - ಎರಡು ದೀಪ ಒಟ್ಟಿಂಗೆ ಹೊತ್ತುಸುಲಾಗ ಹೇಳ್ತವು.
ಈಗಾಣ ಕರೆಂಟಿನ ಕಾಲಲ್ಲಿ ಈ ಮಾತು ನೆಡೆಯ, ಆದರೆ ಮದಲಿಂಗೆ ಎಣ್ಣೆ ದೀಪ ಎರಡೆರಡು ಹೊತ್ತುಸಿರೆ ಒಂದರ ನಂದುಸಲೆ ಹೇಳುಗು ಅಜ್ಜಿ! - ಸಣ್ಣವು ಸೂಡಿದ ಹೂಗಿನ ದೊಡ್ಡವು ಸೂಡ್ಳಾಗ – ಹೇಳಿ ಒಂದು ನಂಬಿಕೆ ಇದ್ದು, ಹೆಮ್ಮಕ್ಕಳ ವಲಯಲ್ಲಿ.
ಹೇಳಿದಾಂಗೆ, ದೊಡ್ಡವು ಸೂಡಿದ್ದರ ಸಣ್ಣವು ಸೂಡ್ಳಕ್ಕಾಡ –ದೊಡ್ಡವರ ಪ್ರಸಾದ ಹೇಳಿ ಲೆಕ್ಕ ಆಡ ಅದು! - ಕೂದುಗೊಂಡಿಪ್ಪವಕ್ಕೆ ಅಥವಾ ನಿಂದುಗೊಂಡಿಪ್ಪವಕ್ಕೆ ಸುತ್ತು ಬಪ್ಪಲಾಗ ಹೇಳುಗು.
ದೇವರಿಂಗೆ ಸುತ್ತು ಬಂದ ಹಾಂಗೆ ಮನಿಶ್ಶರಿಂಗೆ ಸುತ್ತು ಬಂದರೆ ಆಯುಷ್ಯ ಕಮ್ಮಿ ಆವುತ್ತಾಡ! - ಮನುಷ್ಯ-ಮನುಷ್ಯಂಗೆ ಅತ್ತಿತ್ತೆ ಮೆಟ್ಟಿಕ್ಕಲೆ ಆಗ.
ಕಾಲಿಲಿ ಹುಳು ಅಕ್ಕು ಹೇಳಿ ಬೈಗು ಅಜ್ಯಕ್ಕೊ. ಹಾಂ! - ಬಾಳೆ ಎಲೆಯ ಕೀತುಕೀತು ಹರಿವಲಾಗ ಹೇಳುಗು.
ಒಂದು ವೇಳೆ ಹರುದಿಕ್ಕಿರೆ ಸೋದರಮಾವಂಗೆ ಸಾಲ ಆವುತ್ತಾಡ.
ಅಪ್ಪೋ? ಉಮ್ಮಪ್ಪ!!. - ಹಾಲು-ಮಜ್ಜಿಗೆ ಎರಡನ್ನೂ ಒಟ್ಟಿಂಗೆ ಆಗಿ ಒಬ್ಬನ ಕೈಲೇ ಕೊಡ್ಳಾಗ ಅಡ.
ಅತವಾ, ಎರಡನ್ನೂ ಒಟ್ಟಿಂಗೇ ಆಗಿ ತೆಕ್ಕೊಂಡೂ ಹೋಪಲಾಗ ಅಡ. - ದನಗಳ ಬೆನ್ನು ಮುಟ್ಳಾಗ ಹೇಳುಗು ಮದಲಿಂಗೆ.
ಹಾಂಗೆ ಮುಟ್ಟಿರೆ ದನಗಳ ಬೆಳವಣಿಗೆ ನಿಲ್ಲುತ್ತಾಡ. - ಎಲೆಬಳ್ಳಿ ಜಾಲಕರೆಲೇ ಇದ್ದರೂ, ಇರುಳು ಎಲೆ ಚೂಂಟುಲಾಗ ಅಡ.
ಸುಣ್ಣದ ಅಳಗೆಂದ ಸುಣ್ಣವನ್ನೂ ತೆಗವಲಾಗ ಅಡ!! ಚೆಲ, ಇದು ಮಾಷ್ಟ್ರುಮಾವಂಗೆ ಕಷ್ಟವೇ ಅಲ್ಲದೋ –ಗ್ರೇಶಿದೆ.
ಅಲ್ಲಡ, ಅದಕ್ಕೊಂದು ಪಿರಿ ಇದ್ದಾಡ – ಒಂದು ವೇಳೆ ಹಾಂಗೆ ಎಲೆಕೊಯ್ಯೆಕ್ಕಾಗಿ ಬಂದರೆ “ಮದುವೆಗೆ ಹೋಪಲಿದ್ದು” ಹೇಳೆಕ್ಕಡ ಬಳ್ಳಿಯ ಕೈಲಿ!! ಚೆಲ, ಈ ಅಜ್ಜಂದ್ರೇ!. - ಓದಿಗೊಂಡಿಪ್ಪ ಪುಸ್ತಕವ ಬಿಡುಸಿ ಮಡುಗಲಾಗ ಅಡ.
ಹಾಂಗೆ ಬಿಡುಸಿ ಮಡಗಿರೆ ಅದರ ಕಲಿ ಓದುಗು – ಹೇಳ್ತದು ನಂಬಿಕೆ!
ಹಾಂಗೇ, ಸರಸ್ವತೀ ರೂಪದ ಪುಸ್ತಕಲ್ಲಿ ಕೂಬಲಾಗ, ಅದಕ್ಕೆ ಮೆಟ್ಳಾಗ ಹೇಳಿ ಎಲ್ಲ ನಮ್ಮ ನಂಬಿಕೆ.
ಶುಬತ್ತೆ ಟಿಶ್ಯೂ ಟಿಶ್ಯೂ ಹೇಳಿಗೊಂಡು ಮೋರೆಚೋಲಿ ಉದ್ದಿಗೊಂಗು ಇದೇ ಪೇಪರಿಲಿ!! - ಒಂದು ತೆಂಗಿನಕಾಯಿಯ ತಲೆಲಿ ಹೊತ್ತುಗೊಂಡು ಬಪ್ಪಲಾಗ ಅಡ.
ತೆಂಗಿನಕಾಯಿ ಕಟ್ಟವನ್ನಾರೂ ಹೊತ್ತುಗೊಂಡು ಬಪ್ಪಲಕ್ಕು, ಆದರೆ ಒತ್ತೆ ಆಗಿ ಹೊತ್ತುಗೊಂಡು ಬಪ್ಪದು ಅಶಕುನ ಹೇಳ್ತದು ನಂಬಿಕೆ. - ಹೇಳಿದಾಂಗೆ, ಬಡಗ ತಲೆ ಹಾಕಿ ಮನುಗುಲಾಗ ಹೇಳ್ತದು ಶಾಸ್ತ್ರ ಹೇಳ್ತಡ.
ಸಣ್ಣ ಇಪ್ಪಗ ತೊಟ್ಳಿಂದಲೇ ಈ ವೆವಸ್ತೆ ಸುರು ಆವುತ್ತು. ಮೂಡ ತಲೆ ಹಾಕಿಯೇ ಮನುಗುತ್ಸು ಹೆಚ್ಚು ಸೂಕ್ತ ಹೇಳ್ತಾಡ ಶಾಸ್ತ್ರ. - ಹೊಸ್ತಿಲಿಲಿ ಕೂಪಲಾಗ ಹೇಳ್ತವು ಅಜ್ಯಕ್ಕೊ.
ವಾಸ್ತುಪುರುಷ ವಾಸ ಆಗಿ ಇಪ್ಪ ಹೊಸ್ತಿಲಿ ಕೂದು / ನಿಂದು ಮಾಡಿರೆ ಅವಂಗೆ ಕೋಪ ಬತ್ತಾಡ. - ಉಪ್ಪು ಸಾಲ ಕೊಡ್ಳಾಗ ಅಡ.
ಬೇರೆ ಯೇವದೇ ವಸ್ತುವಿನ ಸಾಲಕ್ಕೆ ಕೊಂಡು ಹೋದರೂ, ಉಪ್ಪಿನ ಪೈಸೆ ಕೊಟ್ಟೇ ಕೊಂಡು ಹೋಕು ಹಳ್ಳಿಯೊಳ!
ದೇವರೊಳ:
ಕೆಲವು ಕ್ರಮಂಗೊ ದೇವರೊಳಂಗೆ ಸಮ್ಮಂದ ಪಟ್ಟದಿದ್ದು:
- ಶಂಖವ ನೆಲಕ್ಕಲ್ಲಿ ಮಡುಗುಲಾಗ. ಮೊಗಚ್ಚಿ ಮಡುಗುಲಾಗ ಹೇಳಿಗೊಂಡು.
ಹಾಂಗಾಗಿ, ತಲೆಮೇಲ್ಕಟೆ ಇಪ್ಪ ಹಲಗೆಲಿ, ಪೂರ್ವಪಶ್ಚಿಮ ಆಗಿ ಕವುಂಚಿ ಮಡಗುತ್ತದು ಹೆಮ್ಮಕ್ಕಳ ಕ್ರಮ. - ಜಯಗಂಟೆಯ, ಉರುಳಿಯ ಕವುಂಚಿ ಮಡುಗುಲಾಗ ಹೇಳ್ತವು.
ಹಾಂಗಾಗಿ, ಜಯಗಂಟೆ ಹೆಟ್ಟಿ ಆದ ಕೂಡ್ಳೇ ಅದರ ಕೋಲೂ ಸೈತ ಮೊಗಚ್ಚಿ ಮಡಗ್ಗು ಬಟ್ಟಮಾವಂದ್ರು. - ದರ್ಭೆಯ ಮೂಡಪಡುವಾಗಿ ಮಡುಗೇಕು ಹೇಳ್ತದು ಇನ್ನೊಂದು ನಂಬಿಕೆ.
ಅಪರ ಕಾರ್ಯದ ದಿನ ತೆಂಕಮೋರೆ ಆಗಿ ಮಡಗುತ್ತ ಕಾರಣವೋ ಏನೋ! ಉಮ್ಮ!! - ಪೂಜೆ ಹೂಗಿನ ನೆಲಕ್ಕಲ್ಲಿ ಮಡುಗಲಾಗ.
ಪೂಜೆ ಆದ ಮತ್ತೆ ಮಡಗಿರೂ ಸಾರ ಇಲ್ಲೆ. ಸಮರ್ಪಣೆ ಅಪ್ಪಲೆ ಇಪ್ಪ ಹೂಗಿನ ಸೆಸಿಂದ ನೇರವಾಗಿ ದೇವರ ತಲಗೇ ಎತ್ತೇಕು, ಅದರ ಎಡಕ್ಕಿಲಿ ಅದು ಎಲ್ಲಿಯೂ ನೆಲ ಮುಟ್ಳೆ ಆಗ ಅಡ!! - ಒತ್ತೆನೆಣೆಲಿ ಆರತಿ ಮಾಡ್ಳಾಗ ಹೇಳ್ತದು ಶಾಸ್ತ್ರ.
ಏಕಾರತಿಗೆ ಎರಡಾದರೂ ಇರೇಕು. ಕೆಲವು ಸರ್ತಿ– ತ್ರಿವರ್ತಿ ಸಂಯುಕ್ತಂ – ಮೂರು ನೆಣೆ ಇರೇಕು ಹೇಳ್ತವು ಶಾಸ್ತ್ರ ಅರಡಿವೋರು.
ಅಟ್ಟುಂಬೊಳ:
ಹಾಂಗೇ ಕೆಲವು ಕ್ರಮಂಗೊ ಅಡಿಗೆ ಕೋಣಗೆ ಹೊಂದಿಗೊಂಡು ಇಪ್ಪದೂ ಇದ್ದು
- ಸೇರಿನ ತೊಳವಲಾಗ ಹೇಳುಗು.
ಇದರ ಬಗ್ಗೆ ನಾವು ಒಂದರಿ ಮಾತಾಡಿದ್ದು.
ನಿತ್ಯ ಉಪಯೋಗ ಮಾಡಿಯೂ ತೊಳೆಯದ್ದ ಒಂದೇ ಒಂದು ಪಾತ್ರವೇ ಸೇರು!
ಅದರ ತೊಳದರೆ ಮತ್ತೆ ಮನೆಯೇ ತೊಳದು ಹೋಕು ಹೇಳ್ತದು ನಮ್ಮ ನಂಬಿಕೆ. - ಅಕ್ಕಿಅಳಗೆಯ ಡಬ್ಬಿಯ ಕಾಲಿ ಮಾಡ್ಳಾಗ ಅಡ.
ಒಂದು ವೇಳೆ ಪೂರ್ತಿ ಕಾಲಿ ಮಾಡೇಕಾದ ಪರಿಸ್ಥಿತಿ ಬಂದರೂ, ಕೂಡ್ಳೇ ಒಂದು ಮುಷ್ಟಿ ಅಕ್ಕಿ ಹಾಕುತ್ತ ಕ್ರಮ ಇದ್ದಾಡ.
ಇದೇ ಪರಿಸ್ಥಿತಿ ಕಾಯಿಅಟ್ಟವ ಕಾಲಿ ಮಾಡುವಗಳೂ ಬತ್ತು. ಎಲ್ಲಾ ಕಾಯಿಯ ತೆಗದಾದ ಕೂಡ್ಳೇ, ಒಂದೆರಡು ಕಾಯಿಯ ಪುನಾ ಆ ಕಾಯಿ ಅಟ್ಟಕ್ಕೆ ಹಾಕುಗು ಬಟ್ಯ. ಅದಕ್ಕೆ ಪೊಲ್ಸು(ಶೋಭೆ) ಹೇಳುಗು ತುಳುವಿಲಿ. - ಅಶನದಳಗೆಯ ಒಲೆಲಿ ಓರೆ ಮಡಗಲಾಗ ಅಡ.
ಒಂದು ವೇಳೆ ಅದು ಓರೆ ಆದರೆ, ಮನೆ ಯೆಜಮಾನನ ಹಣೆಬಾರವೂ ಓರೆ ಅಕ್ಕು ಹೇಳ್ತದು ನಂಬಿಕೆ. - ಅಬ್ಬೆಪ್ಪ° ಇಪ್ಪವು ಕುಂಬ್ಳಕಾಯಿಯ ಗಡಿ ತುಂಡುಸುಲಾಗ ಅಡ.
ಗಡಿಯ ತುಂಡುಮಾಡ್ಳಕ್ಕಾರೂ, ಇಡಿ ಕುಂಬ್ಳವ ಗಡಿ ಮಾಡ್ಳೆ ಆಗ ಅಡ! - ಒಲೆ ಅಂತೇ ಹೊತ್ತುಸುಲಾಗ ಅಡ.
ಎಂತಾರು ಮಡಗಿರೆ ಮಾಂತ್ರ ಒಲೆ ಹೊತ್ತುಸಲೆ ಅಕ್ಕಾಡ! - ಕಡೆಬಾಳೆಲಿ ಉಂಬಲಾಗ ಅಡ. ಒಂದು ವೇಳೆ ಉಣ್ತ ಪ್ರಮೇಯ ಬಂದರೂ, ಕಡೆಬಾಳೆಯ ಕೊಡಿಹೊಡೆಯ ಸಣ್ಣ ನಾರು ತೆಗದು ಗೆಂಟು ಕಟ್ಟಿ – ಕೊಡಿ ಕಲ್ಪನೆಮಾಡಿಗೊಳೆಕ್ಕಡ!
- ಒಲೆಕ್ಕಟೆಗೆ ಮೆಟ್ಳಾಗ ಹೇಳುಗು ಮಾಷ್ಟ್ರಮನೆ ಅತ್ತೆ.
ಪಕ್ಕನೆ ಕಾಣದ್ದೆ ಕಿಚ್ಚಿನ ಮೆಟ್ಟಿಕ್ಕುದು ಬೇಡ ಹೇಳಿ ಆ ಕಾರಣ ಹಿಡುದ್ದೋ ಏನೋ! ಏನೇ ಆಗಿರಳಿ, ಆ ಕ್ರಮ ಹಾಂಗೆ ಬಯಿಂದು! - ತೆಂಕಬಡಗ ಆಗಿ ಸೌದಿ ಓಶುಲಾಗ.
ಮಳೆಗಾಲಕ್ಕೆ ಸೌದಿ ಓಶುತ್ತ ಸಂದರ್ಭ ಬಂದಪ್ಪಾಗ ಮೂಡಪಡು ಆಗಿಯೇ ಓಶೆಕ್ಕು.
ಇನ್ನೂ ಏನೇನೋ ಇದ್ದು. ಪ್ರತಿ ಕೋಣಗೂ ಒಂದೊಂದು ಕಟ್ಟುಗೊ, ಕಟ್ಟಕಟ್ಟ ಕಟ್ಟುಗೊ.
~
ಅಬ್ಬ! ಇಷ್ಟಾದರೂ ಮುಗುದ್ದಿಲ್ಲೆ.
ಇನ್ನೂ ಸುಮಾರಿದ್ದು, ಇದ್ದೇ ಇದ್ದು. ಇಲ್ಲಿ ಬಿಟ್ಟು ಹೋದ್ಸದಿದ್ದರೆ ನೆಂಪು ಮಾಡಿಕ್ಕಿ ಆತೋ?
ಕಳುದವಾರ ಹಲಸ್ನಾಯಿ ವಿಶೇಷವ ನೆಂಪುಮಾಡಿಕೊಟ್ಟಿದಿ ಇದಾ, ಅದೇ ನಮುನೆಲಿ!
ಒಂದರಿಯಾಣ ಪಟ್ಟಿ ಎಲ್ಲ ಮುಗುದ ಮತ್ತೆ ಮಾಷ್ಟ್ರುಮಾವ° ಹೇಳಿದವು: ಈ ನಿಷೇಧಂಗೊ ಎಲ್ಲವುದೇ ಒಟ್ಟಾಗಿ ಒಂದು ಜನಾಂಗದ ಜೀವನ ಪದ್ಧತಿಯ ತೋರುಸುತ್ತು. ಉದಾಹರಣೆಗೆ, ಈ ಮೇಲ್ಕಂಡ ಸಮಾನ ಆಚರಣೆಗೊ ಇದ್ದಾರೆ ಅವು ನಮ್ಮೋರು, ಮಾಂಸಾಹಾರಿಗೊ ಆಗಿದ್ದೊಂಡು ಹಂದಿ ತಿಂಬಲಾಗ ಹೇಳಿ ಬಂದರೆ ಅದು ಮಾಪ್ಳೆಗೊ – ಹೀಂಗೆಲ್ಲ ಇಪ್ಪದು, ಒಂದು ಕಾಲಲ್ಲಿ ನಿಷೇಧಂಗೊ ಆಗಿ ಬೆಳದು ಬಂದದು! – ಹೇಳಿದವು.
ಇದೆಲ್ಲ ಮೂಢನಂಬಿಕೆಗೊ ಅಲ್ಲ; ಇವೆಲ್ಲ ಮೂಲ ನಂಬಿಕೆಗೊ.
ನಮ್ಮ ಸಂಸ್ಕಾರದ ಮೂಲಂಗೊ ಅಲ್ಲೇ ಇಪ್ಪದು. ಹಲವಾರು ಕಟ್ಟುಪಾಡುಗಳಿಂದಾಗಿ ’ಇದು ನಮ್ಮ ಜೀವನ’ ಹೇಳ್ತದು ರಚನೆ ಅಪ್ಪದು.
ಇದೆಲ್ಲ ಎಷ್ಟೋ ಒರಿಶ ಹಿಂದೆ ಆದ ಕಾರಣ ಇಂದು ನಾವು ಈ ನಮುನೆಲಿ ಬದ್ಕುತ್ತು. ಆ ಹಳೆತನಕ್ಕೆ ’ಸನಾತನ’ ಹೇಳ್ತದು – ಹೇಳಿದವು ಮಾಷ್ಟ್ರುಮಾವ°.
ಜಾಸ್ತಿ ಎಂತೂ ಅರ್ತ ಆಗದ್ದರೂ, ಮಾಷ್ಟ್ರುಮನೆ ಅತ್ತೆ ಗಂಟೆ ನೋಡಿಗೊಂಡು ಏಳುವಗ ’ಏಳುಗಂಟೆ ಕಾಪಿ’ಗೆ ಸಮೆಯ ಆತು ಹೇಳಿ ಅರ್ತ ಆತು. ಅವ್ವೇ ಮಾಡಿದ ಪಷ್ಟ್ಲಾಸು ಬಾಳೆಹಣ್ಣು ಹಲುವದೊಟ್ಟಿಂಗೆ, ಅವರ ಅಪ್ಪನ ಮನೆಂದ ತಂದ ಸಜ್ಜಿಗೆ ಕ್ಷೀರವನ್ನೂ ರುಚಿನೋಡಿಗೊಂಡು, ಕಾಪಿಯನ್ನೂ ಕುಡ್ಕೊಂಡು ಮನಗೆತ್ತಿದೆ!
~
ಹಳಬ್ಬರ ಜೀವನಲ್ಲಿ ನೆಮ್ಮದಿಲಿ ಬದ್ಕಲೆ ಹೇಂಗೆ ಇರೆಕ್ಕು, ನಮ್ಮ ಕ್ರಮಂಗೊ ಹೇಂಗೆ ಮಾರ್ಪಾಡು ಆಯೇಕು ಹೇಳ್ತರ ಚೆಂದಕೆ ಮನನ ಮಾಡಿಂಡಿತ್ತಿದ್ದವು.
ಈಗ ಹಲವಾರು ಕ್ರಮಂಗೊ ಮರಕ್ಕೊಂಡು ಬಯಿಂದು. ಎಷ್ಟೋ ಕ್ರಮಂಗೊ ನೆಂಪಿದ್ದರೂ “ ಮದಲಿಂಗೆ ಹೀಂಗೆ ಮಾಡ್ಳಾಗ ಹೇಳುಗು” ಹೇಳಿ ನೆಂಪುಮಾಡಿಗೊಂಡೇ ಮಾಡ್ತು.
ಇನ್ನಾಣ ಮುಂದುವರುದ ಸಮಾಜಲ್ಲಿ ಎಲ್ಲವನ್ನೂ ಒಳಿಶಿಗೊಂಡು ಹೋತಿಕ್ಕಲೆ ಎಡಿಯ, ಕನಿಷ್ಟ ಎಷ್ಟು ಸಾಧ್ಯವೋ, ಅಷ್ಟು ಕ್ರಮಂಗಳ ನೆಂಪು ಮಡಾಗಿ, ಮುಂದರುಸಿಗೊಂಡು ಹೋವುತ್ಸರ ಬಗ್ಗೆ ಯೋಚನೆ ಮಾಡುವನೋ?
ಒಂದೊಪ್ಪ: ಶುದ್ದಿ ಓದಿಕ್ಕಿ ಒಪ್ಪ ಕೊಡದ್ದೆ ಹೋಪಲಾಗ! 😉
ಸೂ: ನಿಂಗಳ ಹೆರಿಯೋರು ನೆಂಪುಮಾಡಿಗೊಂಡಿದ್ದ, ಇಲ್ಲಿ ಬಿಟ್ಟು ಹೋದ ’ನಿಷೇಧಂಗಳ’ ಬೈಲಿಂಗೆ ತಿಳಿಶಿಕೊಡುವಿರೋ?
(ಚಿತ್ರ: ಅಂತರ್ಜಾಲ)
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ತಲೆ ಕಸವು ಬಿಕ್ಕಿ ಹಾಕುಲಾಗ ಹೇಳಿ ಹೇಳುದು ಎಂತಕೆ ಹೇಳಿರೆ…
https://oppanna.com/lekhana/doddamatu/harate-hanevara-gedda ಲಿ ಗೆಡ್ಡದ ಮಹತ್ವದ ಬಗ್ಗೆ ಹೇಳಿದ್ದವಲ್ಲ… ಹಾಂಗೆ ನಮ್ಮ ತಲೆಕಸವಿಂಗೂ ಮೆದುಳಿನ್ಗೂ ಸಂಬಂಧ ಇದ್ಡದ… ‘ತಲೆಕಸವು ಬಿಕ್ಕಿ ಹಾಕಿಗೊಂಡು ಇದ್ದರೆ ಮನಸ್ಸು ನಿಯಂತ್ರನಲ್ಲಿ ಇರುತ್ತಿಲ್ಲೇ…’ (ಗುರುಗೋ ಯಾವುದೋ ಒಂದು ಪ್ರವಚನಲ್ಲಿ ಹೇಳಿದ್ದು) ಈಗಣ ಕೂಸುಗೊಕ್ಕೆ,ಮಾನ್ಯಂಗೊಕ್ಕೆ ಎಲ್ಲ ಮನಸ್ಸಿನ ನಿಯಂತ್ರನಲ್ಲಿ ಮಡುಗುಲೆ ಎಡಿಯದ್ದೆ ಇಪ್ಪಲೇ ಇದೂ ಒಂದು ಕಾರಣ …
೧.ಒಪ್ಪಣ್ಣ,ಶ್ರೀ ಅಕ್ಕ,ಪ್ರಸಾದಣ್ಣ, ಪೆರ್ವದಣ್ಣ,ಚುಬ್ಬಣ್ಣ ಹಾಂಗೂ ಇನ್ನಿತರರು ಎಲ್ಲ ಸೇರಿ ‘ನಿಷೇಧಂಗಳ’ ಪಟ್ಟಿ ಮಾಡಿದ ಹಾಂಗೆ ಪಟ್ಟಿ ಮಾಡುದು ಮೊದಲ ಹಂತ. ಬೊಳುಂಬು ಮಾವ ಹೇಳಿದ ಹಾಂಗೆ ಹೊಸತ್ತನ್ನೂ ಸೇರುಸಿಗೊಲ್ಲೆಕ್ಕು(ಹೊಗೆಸೊಪ್ಪು,ಚಾ,ಕಾಪಿ,ಐಸ್ ಕ್ರೀಂ,ಚೋಕಲೇಟ್…)
೨.ಶರ್ಮಪ್ಪಚ್ಚಿ, ವೆಂಕಟಕೃಷ್ಣ, ಮಹೇಶಣ್ಣ, ಮಂಗಳೂರು ಮಾಣಿ ಹಾಂಗೂ ಇನ್ನಿತರರು ಎಲ್ಲ ಚರ್ಚೆ ಮಾಡಿದ ಹಾಂಗೆ ಆರೋಗ್ಯಕರವಾಗಿ ಚರ್ಚೆ ಮಾಡಿ ಮೂಲ ಉದ್ದೇಶಂಗಳ ತಿಳುಕ್ಕೊಲ್ಲೆಕ್ಕಾದ್ದು ಎರಡನೇ ಹಂತ. ದೀಪಿ ಹಂಚಿಗೊಂಡ ಹಾಂಗೆ ಅವರವರ ಅನುಭವಂಗಳ ಹಂಚಿಗೊಂಡರೆ ಇತರರಿಂಗೆ ಸಹಾಯ ಆವುತ್ತು… ಇದರಿಂದಾಗಿ ಇನ್ನೊಬ್ಬ ಅದೇ ತಪ್ಪು ಮಾಡಿ ತೊಂದರೆ ಅನುಭವಿಸುದು ತಪ್ಪುತ್ತು…
೩. ಹಳೆಮನೆ ಮಾವ ಹೇಳುವ ಹಾಂಗೆ ಹೆಚ್ಚಿಂದರಲ್ಲೂ ಧನಾತ್ಮಕ ಅಂಶ ಇಪ್ಪ ಕಾರಣ ಸಾಧ್ಯವಿದ್ದಷ್ಟು ಅಳವಡಿಸಿಗೊಂದರೆ ಒಳ್ಳೇದು… ಮತ್ತೆ ನಾವು ಸಮಾಜ ಜೀವನಲ್ಲಿ ಇಪ್ಪಗ ಸಮಾಜದ ಹಿತದ ದೃಷ್ಟಿಂದಲೂ ಆಲೋಚನೆ ಮಾಡೆಕ್ಕಾವುತ್ತು… ಪ್ರತಿಯೊಬ್ಬನೂ ಎನಗೆ ಬೇಕಾದ ಹಾಂಗೆ ಇರುತ್ತೆ ಹೇಳಿರೆ ಸಮಾಜ ಜೀವನಕ್ಕೆ ತೊಂದರೆ ಆವುತ್ತು…
ಮೊದಲು ದೊಡ್ಡ ದೊಡ್ಡ ತಪ್ಪುಗಳ ನಾವಿಂದು ಮಾಡುತ್ತಾ ಇಪ್ಪದರ ಬಗ್ಗೆ ಹೆಚ್ಚಿಗೆ ಗಮನ ಕೊಡೆಕ್ಕು. ಉದಾಹರಣೆಗೆ ಮಾಣಿಯಂಗ ಸಂಧ್ಯಾವಂದನೆ ಮಾಡದ್ದೆ ಇಪ್ಪದು… ಕೂಸುಗೋ ರಜಸ್ವಲಾ ನಿಯಮಂಗಳ ಪಾಲಿಸದ್ದೆ ಇಪ್ಪದು…
ಬರೆ ವೈಜ್ಹಾನಿಕ ದ್ರುಷ್ಟಿಂದ ಆಲೋಚನೆ ಮಾಡಿರೂ ಸಾಲ. ಕೆಲವದರ ದೇವರ ವಿಷಯಲ್ಲೂ ನಂಬೆಕ್ಕಾವುತ್ತು… ಆ ನಂಬಿಕೆಯಾ ಹಿಂದೆ ಒಂದು ಜ್ಹಾನ ಇದ್ದು…ಆ ಜ್ಹಾನಂಗ ಥಿಯರಿ ಮೂಲಕ ವೇದ,ಉಪನಿಷತ್ತು,ಭಗವದ್ಗೀತೆ ಮೊದಲಾದವುಗಳಲ್ಲಿ ಹೇಳಲ್ಪಟ್ಟಿದು.ಪ್ರಾಕ್ಟಿಕಾಲ್ ಆಗಿ ಪ್ರಯೋಗ ಮಾಡಿಯೂ ಕಲಿವಲಾವುತ್ತು… ಆದರೆ ಅದರ ಅರ್ಥ ಮಾಡಿಗೊಮ್ಬಲೆ ರಜ ಕಷ್ಟ ಇದ್ದು… ಹಾಂಗಾಗಿ ಅದು ಅರ್ಥ ಅಪ್ಪನ್ನಾರ ದೇವರ ಮೇಲೆ ನಂಬಿಕೆ ಮಡಿಗಿ ಕೆಲವು ಕ್ರಮಂಗಳ ಆಚರಿಸಿಗೊಮ್ಬದು ಒಳ್ಳೇದು… ವಿಜ್ಹಾನದ ಬಗ್ಗೆ ಏನೇನೂ ಗೊಂತಿಲ್ಲದ್ದ ಪ್ರಾಯಸ್ತರಿಂಗೆ ವಿಜ್ಹಾನ ಕಲಿಶುಲೇ ಹೇಂಗೆ ಕಷ್ಟ ಇದ್ದೋ ಹಾಂಗೆ ಅಧ್ಯಾತ್ಮ ಜ್ಹಾನ ಏನೇನೂ ಗೊಂತಿಲ್ಲದ್ದವಕ್ಕೆ ಅದರ ವಿವರುಸುಲೇ ಕಷ್ಟ ಇದ್ದು…
ಎನ್ನ ಒಂದು ಅನುಭವವ ಹಂಚಿಗೊಳ್ಳುತ್ತೆ…
ಆನು ಕಾಲೆಜಿಲ್ಲಿ ವಿಜ್ಹಾನದ ವಿದ್ಯಾರ್ಥಿನಿ ಆಗಿದ್ದಿದ್ದ ಸಮಯ. ರಜಸ್ವಲೆಯಾಗಿ ದೇವಸ್ಥಾನಕ್ಕೆ ಹೊಪಲಾಗ ಹೇಳಿ ಕೆಲವು ಜೆನ, ರಜಸ್ವಲೆಯಾಗಿ ೨೧ ದಿನ ಕಳುದರೆ ಪುನ: ರಜಸ್ವಲೆಯಾಗಿ ೭ ದಿನ ವರೆಗೆ ಹೋಪಲಾಗ ಹೇಳಿ ಕೆಲವು ಜೆನ, ಇನ್ನು ಕೆಲವು ಜೆನ ಅದೆಲ್ಲ ಮೂಢ ನಂಬಿಕೆ… ‘ಮೊದಲಾಣವಕ್ಕೆ ಕ್ಲೀನ್ ಆಗಿ ಇಪ್ಪಲೇ ಗೊಂತಿತ್ತಿಲ್ಲೇ… ಹಾಂಗಾಗಿ ಆ ನಂಬಿಕೆ ಬಂದದು’ ಹೇಳಿಗೊಂಡು ದೇವಸ್ಥಾನಕ್ಕೆ ಹೋಪವು ಕೆಲವು ಜೆನ. ಆರಿಂಗೂ ಸರಿಯಾಗಿ ಹೇಳುಲೇ ಗೊಂತಿಲ್ಲೇ… ಆನು ವಿಜ್ಹಾನದ ವಿದ್ಯಾರ್ಥಿನಿ ಬೇರೆ… ಒಬ್ಬೊಬ್ಬ ಒಂದೊಂದು ಹೇಳುದು,ಒಬ್ಬೊಬ್ಬ ಒಂದೊಂದು ಮಾಡುದು ಇದರಿಂದ ಸಾಕಾಗಿ ಹೋಗಿತ್ತು… “ಆಗ ಹೇಳಿ ಇಪ್ಪದರ ಹೆಚ್ಹಾಗಿ ಮಾಡದ್ದ ಜೆನ, ಆ ದಿನ ದೇವರ ಹತ್ತರೆ ‘ಆರೂ ಸರಿಯಾಗಿ ತಿಳಿಸುತ್ತಾ ಇಲ್ಲೇ… ಅಕ್ಕೋ ಆಗದೋ ಎನಗೆ ಗೊಂತಿಲ್ಲೇ… ನೀನೇ ಹೇಳಿಕೊಡು…’ ಹೇಳಿ ಪ್ರಾರ್ಥಿಸಿಗೊಂಡು ದೇವಸ್ಥಾನಕ್ಕೆ ಹೋದೆ”.
ಈಗ ಹರೇರಾಮದ ಸಹಾಯಂದ, ಗುರುಗಳ ಮಾರ್ಗದರ್ಶನಲ್ಲಿ, ಪ್ರಾಕ್ಟಿಕಾಲ್ ಆಗಿ ಪ್ರಯೋಗ ಮಾಡಿ ಜೀವನ ಮತ್ತು ದೇವರ ಬಗ್ಗೆ ಹಲವು ವಿಚಾರಂಗಳ ತಿಳುಕ್ಕೊಂಡಿದೆ. ಆನು ಮೊದಲು ಮೇಲಿನ ತಪ್ಪು ಮಾಡಿ ಮುಂದೆ ಮದುವೆ ಆದ ಮೇಲೆ ಸಂತತಿಯ ಪಡವಲೇ ಕಷ್ಟ ಪಟ್ಟದು… ಗುರುಗಳ ಅನುಗ್ರಹಂದ ಸಂತತಿಯ ಪಡಕ್ಕೊಂಡದು… ಹೀಂಗೆ ಹಲವು ವಿಚಾರಂಗ ಇದ್ದು…
ದಯವಿಟ್ಟು ಆರುದೆ ಸರಿಯಾಗಿ ತಿಳಿಸುವವು ಇಲ್ಲೇ ಹೇಳಿ ಆನು ಮಾಡಿದ ಹಾಂಗೆ ತಪ್ಪು ಮಾಡಿ ಕಷ್ಟ ಅನುಭವಿಸೆಡಿ… ಸಾಧ್ಯ ಇದ್ದಷ್ಟರ ಇಲ್ಲಿ ಚರ್ಚಿಸಿ ತಿಳುಕ್ಕೊಂಬ… ನಮಗೆ ಚರ್ಚಿಸಿ ಪರಿಹಾರ ಸಿಕ್ಕದ್ದರೆ ಗುರುಗೋ ಇದ್ದವನ್ನೇ… ಅಚಾರಂಗ,ಕ್ರಮಂಗಳ ಅಳವಡಿಸಿಗೊಂಬ… ಸಮಾಜಲ್ಲಿಪ್ಪ ಋಣಾತ್ಮಕ ಅನ್ಶಂಗಳ ವರ್ಜಿಸಿ,ಧನಾತ್ಮಕ ಅನ್ಶಂಗಳ ಅಳವಡಿಸಿಗೊಂಡು ಎಲ್ಲರೂ ನೆಮ್ಮದಿಯ,ಆರೋಗ್ಯಕರ ಮತ್ತು ಆನಂದದ ಜೀವನ ನಡೆಸುವ…
“ಕಟ್ಟುಪಾಡುಗೊ; ಚೆಂದದ ಜೀವನ ನೆಡೆಶಲೆ ಇಪ್ಪ ಸೂಕ್ತಿಗೊ”
“ಇದೆಲ್ಲ ಮೂಢನಂಬಿಕೆಗೊ ಅಲ್ಲ; ಇವೆಲ್ಲ ಮೂಲ ನಂಬಿಕೆಗೊ”
ನೂರಕ್ಕೆ ನೂರೈವತ್ತು ಸತ್ಯವಾದ ಮಾತು, ಒಪ್ಪಣ್ಣ. ಹೆಚ್ಚಿನ ಎಲ್ಲಾ ಈ ನೆಡವಳಿಕೆಗೊಕ್ಕೆ ಸರಿಯಾದ ಹಿನ್ನೆಲೆ ಇದ್ದು. ನಮಗೆ ಆ ಹಿನ್ನೆಲೆಗೊ ನಡೆವಳಿಕೆ ಯ ಹಾಂಗೇ ಹರಿದು ಬೈಂದಿಲ್ಲೆ ಅಷ್ಟೆ. ಅದರೊಟ್ಟಿಂಗೆ ಕೆಲವು ಮೂಢನಂಬಿಕೆಗಳೂ ಸೇರಿಕ್ಕು. ಆ ಬೆರೆಳೆಣಿಕೆಯ ಕೆಲವು ಮೂಢನಂಬಿಕೆಗಳಿಂದಾಗಿ, ನಮ್ಮ ಸಮಾಜದ ಹಿತ ದೃಷ್ಟಿ ಕಾಪಾಡುವಂತಹ ಸೂಕ್ತಿಗಳೆಲ್ಲವನ್ನು ಬಿಟ್ಟು ಬಿಡುದು ಹೆಡ್ಡುತನ.
ಈಗ ನಮ್ಮಲ್ಲಿ ಅದೇ ನಡೆತ್ತಾ ಇಪ್ಪದರ ನಾವೆಲ್ಲ ಕಾಣುತ್ತು. ಇದೆಲ್ಲ ಸಂಸ್ಕಾರದ ಅವನತಿಯ ಲಕ್ಷಣ. ಅಮೆರಿಕದ ಸಂಸ್ಕಾರ ನಮ್ಮಲ್ಲಿ ಬೇಡ. ನಾವು ನಮ್ಮ ಬೆರಳೆಣಿಕೆಯ ಋಣಾತ್ಮಕ (negative) ಅಂಶಂಗಳ ಮಾತ್ರ ನೋಡಿ, ವಿದೇಶೀಯರ ಬೆರಳೆಣಿಕೆಯ ಧನಾತ್ಮಕ (positive) ಅಂಶಂಗಳ ಖುಷಿ ಪಟ್ಟು, ನೆಚ್ಚಿದರೆ, ಆರದ್ದು ಅಧೋಗತಿ? ಇದೆಲ್ಲ ಗೊಂತಪ್ಪದು, ಎಲ್ಲ ಮುಗುದ ಮತ್ತೆ!
ಕ್ರಮಂಗೊ ಇಪ್ಪ ಹಾಂಗೆ ಇರ್ತಿಲ್ಲೆ. ಇಂತ ಆಚರಣೆ ಏಕೆ ಬಂತು ಹೇಳಿ ವಿಚಾರ ಮಾಡೆಕ್ಕಾದ ಅಗತ್ಯ ಇದ್ದು.ಆಚರಿಸುದು, ಬಿಡುದು ಮತ್ತೆ ಮಾಡೆಕ್ಕಾದ ಸಂಗತಿ. ಆಗ-ಹೇಳುವ ಹೆಚ್ಚಿನ ಕೆಲಸಕ್ಕೂ ಅಪರ ಕ್ರಿಯೆಯ ಸಂಬಂಧ ಇದ್ದು,[ಹನಿಕ್ಕಾಲಿಲಿ ಕೊಟ್ತು,ಪಿಕ್ಕಾಸು ಮಡುಗಲಾಗ,ಹನಿಕ್ಕಾಲಿಲಿ ತಲೆಗೆ ಎಣ್ಣೆ ಹಾಕುಲಾಗ,ಕೋಲು ಬೆರಳಿಲಿ ಗಂಧ ಹಾಕುಲಾಗ..ಇತ್ಯಾದಿ]ಕೆಲವಕ್ಕೆ ಪೌರಾಣಿಕ ಕಾರಣ ಇದ್ದು.[ಬಡಗತಲೆ ಹಾಕಿದ ಆನೆಯ ತಲೆ ಕಡಿದು ಗಣಪತಿಗೆ ಮಡುಗಿದ್ದು,ನಳ ಕಾಲು ತೊಳವಾಗ ಕಡೆಕಾಲು ಚೆಂಡಿ ಆಗದ್ದರ ನೋಡಿ ಶನಿ ಹಿಡ್ಕೊಂಡದು]ಕೆಲವು ಊರ ವಾಡಿಕೆಲಿ ಬತ್ತು.ಇಂತಾ ನಂಬಿಕೆಗೊ ಎಲ್ಲಾ ಸಮಾಜಲ್ಲೂ ಎಲ್ಲಾ ದೇಶಲ್ಲೂ ಇದ್ದು.ಕ್ರಮ,ಸನ್ನಿವೇಶ ಬೇರೆ.ಯಾವುದು ಸಾಧ್ಯ ಇದ್ದೊ,ಯುಕ್ತವಾದ್ದೊ ,ಅರ್ಥಪೂರ್ಣವೊ-ಹೇಳಿ ನೋಡಿ ಆಚರಿಸೆಕ್ಕು.ಅದು ಮುಖ್ಯ.ಮೊದಲಾಣವರ ವಿಚಾರ ಶಕ್ತಿಯ ಬಗ್ಗೆ ಗೌರವ ಬೇಕು ,ಅವರ ಸೀಮಿತ ಸೌಕರ್ಯಲ್ಲಿ ಅವು ಕಂಡುಕೊಂಡ ವಿಷಯ ಸರಿಯೊ,ತಪ್ಪೊ ಏನೊ ಆಗಿಕ್ಕು,ಇರಲಿ-ಮಹತ್ವದ್ದು ಹೇಳುದು ಸತ್ಯ.
ಉತ್ತಮ ವಿಚಾರ.
ಒಪ್ಪಣ್ಣೊ,
ನಮ್ಮ ಸನಾತನ ಸಂಸ್ಕೃತಿಲಿ ಪೂಜೆ ಮಾಡ್ತದು, ಜೆಪ ಮಾಡ್ತದು ಹೇಂಗೆ ಇಂದಿನ ವರೆಗೆ ನೆಡಕ್ಕೊಂಡು ಬಯಿಂದೋ ಹಾಂಗೆ ಕೆಲವೊಂದು ಕಟ್ಟುಪಾಡುಗಳೂ ಬಯಿಂದು. ನಿತ್ಯ ಜೀವನಲ್ಲಿ ನಾವು ಎಂತದೆ ಮಾಡುವಾಗಲೂ ಮನೆಲಿಪ್ಪ ಹಿರಿತಲೆ ಆ ಕೆಲಸ ಮಾಡಿದರೆ ಅಕ್ಕೋ ಆಗದೋ ಹೇಳಿ ಹೇಳಿಯೇ ಹೇಳ್ತು. ಹಾಂಗೆ ನಾವು ನಿತ್ಯ ಮಾಡುವ ಸಣ್ಣ ಸಣ್ಣ ಕೆಲಸಕ್ಕೆದೆ, ಹೊತ್ತುಗೊತ್ತು, ಕ್ರಮ ಇದ್ದೆ ಇದ್ದು. ತಪ್ಪಾದಲ್ಲೇ ಮನೆ ಹಿರಿಯರು ಆಕ್ಷೇಪಿಸಿಯೇ ಆಕ್ಷೇಪಿಸುಗು. ಕೆಲವಿಂದಕ್ಕೆ” ಎಂತಕ್ಕೆ” ಕೇಳಿದರೆ ಉತ್ತರ ಇರ. ಆದರೆ ಆಗ ಹೇಳುಗು.
“ಅದಾಗ-ಇದಾಗ” ಹೇಳುದರಲ್ಲಿ ಹೆಚ್ಚಿಂದುದೆ ನಮ್ಮಲ್ಲಿ ಅಪರಕ್ರಿಯೆ ಮಾಡ್ತ ಸಂದರ್ಭಲ್ಲಿ ಮಾಡ್ತ ಕ್ರಿಯೆಗಳ ನೆನಪ್ಪಿಸುವ ಹಾಂಗಿಪ್ಪ ಕಾರ್ಯಂಗಳ ಮಾಡ್ಲಾಗ ಹೇಳುಗು. ಅಪರ ಕ್ರಿಯೆ ಮಾಡೆಕ್ಕಾಗಿ ಬಪ್ಪದು ಯಾವಾಗ? ನಮ್ಮ ಹತ್ತರಾಣ ಬಂಧು ತೀರಿ ಹೋದಪ್ಪಗ ಅಲ್ಲದ? ಆ ಸಮಯಲ್ಲಿ ನಾವು ತುಂಬಾ ಆಘಾತ ಪಟ್ಟಿರ್ತು ಆ ಸಮಯಲ್ಲಿ ಮಾಡ್ತ ಎಲ್ಲಾ ಕೆಲಸಂಗಳನ್ನೂ ಇಷ್ಟ ಪಟ್ಟು ಮಾಡುದಾಗಿರ್ತಿಲ್ಲೆ. ಮನಸ್ಸು ನೊಂದುಗೊಂದು ಮಾಡುದಾಗಿರ್ತು. ನಿತ್ಯ ಜೀವನಲ್ಲಿ ಅದೇ ಕಾರ್ಯ ಮಾಡುವ ಸಂದರ್ಭ ಬಂದಪ್ಪಗ ಬಹುಶ ಆ ನೆನಪುಗ ಪುನಃ ಬತ್ತು ಹೇಳಿ ಅಪ್ಪ ಕಾರಣಕ್ಕೆ ಆದಿಕ್ಕು ಮಾಡ್ಲಾಗ ಹೇಳಿ ಹೇಳಿದ್ದು. ಅಥವಾ ಮನಸ್ಸಿಂಗೆ ಒಂದು ಹೆದರಿಕೆದೆ ಆಗಿಕ್ಕು, ಅದೇ ಕಾರ್ಯ ಮಾಡಿ ನಮ್ಮ ಹತ್ತರೆ ಇಪ್ಪೋರ ಕಳಕ್ಕೊಂಗಾ ಹೇಳಿ.. ಬಂಧುಗಳ ಕಳಕ್ಕೊಂಬಲೇ ಆರಿಂಗೂ ಮನಸ್ಸಿರ್ತಿಲ್ಲೇ ಅಲ್ಲದಾ? ಮತ್ತೆ ಕೆಲವೆಲ್ಲ ಏನಾದರೊಂದು ಸಂದರ್ಭ ಘಟನೆಗೆ ತಕ್ಕ ಹಾಂಗೆ ಬೆಳಕ್ಕೊಂಡು ಬಂದಿಕ್ಕು. ಇದರ ಮೂಲ ಎಲ್ಲಿ ಹೇಳಿ ಹುಡುಕ್ಕುದರಿಂದ ಎಂತಕ್ಕೆ ಮಾಡಿದವು ಹೇಳಿ ಅರ್ಥೈಸಿಗೊಂಬ ಪ್ರಯತ್ನ ಸಾಕು. ನಾವು ಎಷ್ಟು ಅನುಸರಿಸೆಕ್ಕು ಹೇಳುದು ವೈಯ್ಯಕ್ತಿಕ ವಿಚಾರ. ನಮ್ಮ ಹಿರಿಯೋರು ಅಷ್ಟು ಶಾಸ್ತ್ರಬದ್ಧವಾಗಿ ಹೇಳಿ ಕೊಟ್ಟದರ ನಾವು ಹೇಂಗೆ ಅನುಸರಿಸುತ್ತು ಹಾಂಗೆ ಕೆಲವೊಂದು ನಿಷೇಧಂಗಳನ್ನು ಅನುಸರಿಸಿದರೆ ಸಾಕು.
ಕೆಲವು ನಿಷೇಧಂಗ..
– ಅಪ್ಪನ ಮನೆಂದ ಮಂಗಳವಾರ ಶುಕ್ರವಾರ ಹೆರಡ್ಲಾಗ.. ಹೆಮ್ಮಕ್ಕೋ ಲಕ್ಷ್ಮೀ ಸ್ವರೂಪರು ಹೇಳುವ ಕಾರಣಲ್ಲಿ ಆದಿಕ್ಕು, ಅಪ್ಪನ ಮನೆಂದ ಹೆರಡುವಾಗ ಲಕ್ಷ್ಮಿಯ ದಿನಂಗಳಲ್ಲಿ ಹೆರಡ್ಲಾಗ ಹೇಳಿ ಮಾಡಿದ್ದದು.
– ಹಸೆ/ಹಾಸಿಗೆ ಮಡ್ಸದ್ದೆ ಹೆರಡ್ಲಾಗ.. ಒಂದು ದಿಕ್ಕಂದ ಹೆರಟವ ಸೌಖ್ಯಲ್ಲಿ ಹೋಗಿ ಇನ್ನೊಂದು ದಿಕ್ಕಂಗೆ ಹೋಗಿ ಎತ್ತೆಕ್ಕು ಹೇಳ್ತ ಉದ್ದೇಶ. ಹಾಂಗೆ ಮಾಡದ್ದರೆ ಉಶಾರಿಲ್ಲದ್ದೆ ಮನುಗುವ ಹಾಂಗೆ ಅಕ್ಕು ಹೇಳಿ ಶಾಸ್ತ್ರ!! ಬಹುಶ ಎದ್ದಿಕ್ಕಿ ಹಸೆ ಮಡ್ಸುತ್ತ ಕ್ರಮ ರೂಢಿಗೆ ಬರಲಿ ಹೇಳಿ ಮಾಡಿದ್ದಾಯಿಕ್ಕು. ಈಗಾಣ ಕಾಲಲ್ಲಿ ಬಿಡ್ಸಾಡಿ ಹಾಸಿಗೆ ಎಲ್ಲಾ ಮನೆಗಳಲ್ಲಿ ಇಪ್ಪಗ ಮಡ್ಸುತ್ತದು ಎಂತರ?
-ಸೋಮವಾರ , ಶನಿವಾರ ಹೆಮ್ಮಕ್ಕೋ ತಲಗೆ ಮೀವಲಾಗ. ಹಾಂಗೆ ಮಾಡಿದರೆ ಸುಮಾರು ಶಿವ ದೇವಸ್ಥಾನ ನಾಶ ಮಾಡಿದ ಫಲ ಹೇಳಿ ಶಾಸ್ತ್ರ!! ಗೆಂಡಗುದೇ ಶ್ರೇಯಸ್ಕರ ಅಲ್ಲ ಹೇಳ್ತವು. ವಿಶೇಷ ಕಾರಣ ಅರಡಿಯ.
-ಪೂಜೆ ಆಯ್ಕೊಂಡಿಪ್ಪಗ ಹೆರಟು ಹೋಪಲಾಗ.. ಒಂದು ದಿಕ್ಕೆ ಪೂಜೆ ಆಯ್ಕೊಂಡು ಇಪ್ಪಗ ಆ ಜಾಗೆಂದ ಹೋಪಲಾಗ ಹೇಳ್ತವು. ದೇವರಿಂಗೆ ಅವಮರಿಯಾದಿ ಮಾಡುದು ಹೇಳಿ ಆವುತ್ತು ಹೇಳಿಯೋ ಗೊಂತಿಲ್ಲೆ.
– ಒರಗಿಪ್ಪಗ ಮಕ್ಕೊಗೆ ಪ್ರಸಾದ ಹಾಕುಲಾಗ.. ಹೇಳ್ತವು. ಕಾರಣ ಗೊಂತಿಲ್ಲೆ.
-ಅಪ್ಪನ ಮನೆಂದ ಹನ್ನೊಂದನೇ ದಿನ ಹೆರಡ್ಲಾಗ.
– ಸುತ್ತಿಗೊಂಡಿಪ್ಪ ವಸ್ತ್ರಲ್ಲಿ ಇನ್ನೊಬ್ಬಂಗೆ ಗಾಳಿ ಹಾಕಲಾಗ..
-ಮನೆಯ ಒಳಂಗೆ ಹೊಗ್ಗುವಾಗ ತೆಂಕ ಬಾಗಿಲಿಲಿ ಒಳ ಬಪ್ಪಲಾಗ / ಹೆರಡ್ಲಾಗ.. ಅಪ್ಪನ ಮನೆಂದ ಅಂತೂ ಆಗಲೇ ಆಗ..
-ಮೈ ಚೆಂಡಿ ಮಾಡಿ ಉದ್ದದ್ದೆ ಬಪ್ಪಲಾಗ.. ತಲೆಂದ ನೀರಿಳಿಶಿ ಗೊಂಡು ಬಪ್ಪಲಾಗ…
-ಅಬ್ಬೆ ಅಪ್ಪ ಇಪ್ಪವ್ವು ತೆಂಕ ಮೋರೆ ಹಾಕಿ ಉಂಬಲಾಗ ..
ಇದೆಲ್ಲ ಅಪರಕ್ರಿಯೆ ಮಾಡುವಾಗಾಣ ಕಾರ್ಯಂಗೋ ಅಲ್ಲದಾ? ಹಾಂಗೆ ಮಾಡ್ಲಾಗ ಹೇಳುದು.
-ಅಪ್ಪನ ಮನೆಂದ ಪುಚ್ಚೆ ನಾಯಿ ತಪ್ಪಲಾಗ../ ಕೊಂಡು ಹೋಪಲಾಗ..
ಈ ಪ್ರಾಣಿಗೋ ಅಪ್ಪನ ಮನೆಂದ ಕೊಂಡು ಹೋದರೆ ಸೌಭಾಗ್ಯಕ್ಕೆ ತೊಂದರೆ ಹೇಳ್ತ ಭಾವನೆ. ಸರಿಯಾದ ಕಾರಣ ಗೊಂತಿಲ್ಲೆ.
-ಬಂದ ನಾಯಿಗೆ ಅಶನ ಹಾಕಲಾಗ.. ಬಂದ ನಾಯಿ ಯಮ ಸ್ವರೂಪಿ, ಹಾಂಗಾಗಿ ಅದಕ್ಕೆ ಊಟ ಹಾಕುಲಾಗ ಹೇಳುಗು ಮದಲಾಣವ್ವು
-ಹೆಮ್ಮಕ್ಕೋ ತುಳಸಿ ನೆಡ್ಲಾಗ.. ಅದು ಸೌಭಾಗ್ಯವತಿಗೆ ಶ್ರೇಯಸ್ಕರ ಅಲ್ಲ ಹೇಳುಗು.
-ಯಾವ ಮನೆಗೆ ಆದರೂ ಹೊಗ್ಗಿದ ಬಾಗಿಲಿಲಿಯೇ ಹೆರ ಬರೆಕ್ಕು..
-ಮನೆಗೆ ಆರಾರು ಬಂದರೆ ಊಟ ಆಗಿ ಅವು ಹೆರಡುವ ಮೊದಲು ಉಂಡ ಬಾಳೆ ತೆಗದಾಯೇಕ್ಕು.. ನಾವು ಹೋದಲ್ಲಿಯೂ ಉಂಡ ಬಾಳೆ ತೆಗೆಯದ್ದೆ ಹೆರಡ್ಲಾಗ..
ಇದು ಬಹುಶ ಪ್ರೇತ ಭಟ್ಟನ ಓಡುಸುತ್ತ ಕಾರ್ಯಕ್ರಮಕ್ಕೆ ಸಂಬಂಧಿಸಿ ಹೇಳಿದ್ದಾಯಿಕ್ಕು. ಅವು ಹೊಗ್ಗಿದ ಬಾಗಿಲಿಲಿ ಹೆರ ಹೋಪದಲ್ಲನ್ನೇ!! ಅವು ಉಂಡ ಬಾಳೆಯ ಅಕೇರಿಗೆ ತೆಗವದಲ್ಲದಾ ಹಾಂಗೆ ಆದಿಕ್ಕು.
ಒಪ್ಪಣ್ಣ ಹೇಳಿದ ಹಾಂಗೆ, ಹೀಂಗಿಪ್ಪ ವಿಷಯಂಗ ಇನ್ನೂ ಸುಮಾರಿಕ್ಕು.. ನಮ್ಮ ನಮ್ಮ ಅಗತ್ಯತೆಗೆ ಅನುಗುಣವಾಗಿ ಅದರ ಮಾಡಿಗೊಂಡು ಹೋದರಾತು. ಮದಲಿಂದ ಹೇಳಿಗೊಂಡು ಬಂದದರಲ್ಲಿ ಕೆಲವೊಂದು ಶಬ್ಧ, ಭಾವನೆಗ ವೆತ್ಯಾಸ ಬಕ್ಕು. ಆದರೆ ಅದರ ಮೂಲ ಉದ್ದೇಶ ಎಂತ ಆದಿಕ್ಕು ಹೇಳಿ ಅರ್ಥೈಸಿಗೊಂಡು ಮುಂದರಿವ°. ಬೈಲಿಲಿಯೂ ಒಂದು ‘ಆಗಂಗಳ’ ಪಟ್ಟಿ ಇಪ್ಪದು ಒಳ್ಳೇದಾತು. ಇದುದೇ ಒಂದು ಒಳ್ಳೆಯ ಮಾಹಿತಿ ಸಮಾಜಕ್ಕೆ. ಈ ಎಲ್ಲವನ್ನೂ ಒಂದು ವೇಳೆ ನಾವು ಮಾಡದ್ದರೂ ಮೊದಲಾಣವ್ವು ಹೇಳಿದ್ದದರ ನಮ್ಮ ಮುಂದಾಣವಕ್ಕೆ ಹೇಳಿ ಕೊಡುದು ನಮ್ಮ ಕರ್ತವ್ಯ.
“ಈ ಎಲ್ಲವನ್ನೂ ಒಂದು ವೇಳೆ ನಾವು ಮಾಡದ್ದರೂ ಮೊದಲಾನವ್ವು ಹೇಳಿದ್ದದರ ನಮ್ಮ ಮುಂದಾಣವಕ್ಕೆ ಹೇಳಿ ಕೊಡುದು ನಮ್ಮ ಕರ್ತವ್ಯ.”
…………….
ಎಂತಕೋ…..??
—————
ನಾವು ಮಾಡುತ್ತಿಲ್ಲೆ,ನವಗೆ ಮಾಡ್ಲೆ ಎಡಿತ್ತಿಲ್ಲೆ,ನವಗೆ ಮಾಡ್ಲೆ ಮನಸ್ಸಿಲ್ಲೆ..ನವಗೆ ಗೊಂತಿಲ್ಲೆ..
ಆದರೂ ಮುಂದಾಣವಕ್ಕೆ ಹೇಳಿಕೊಡುವದು ನಮ್ಮ ಕರ್ತವ್ಯ..ಹೇಂಗೆ..ಹೇಂಗೆ..??
ಇದರಲ್ಲಿ ಕೆಲವೆಲ್ಲ ಪುಳ್ಯಕ್ಕಳ ಹದ್ದುಬಸ್ತಿಲಿ ಮಡುಗುಲೆ ಅಜ್ಜಂಗೊ ಮಾಡಿದ ಕೆಣಿಗೊ. ಆದರೆ ಅವು ನಮ್ಮ ಒಳ್ಳೆಯ ಭವಿಷ್ಯಕ್ಕೆ ಬೇಕಾಗಿ ಹೇಳುವುದು. ಹಾಂಗಾಗಿ ನಾವು ಖಂಡಿತವಾಗಿ ಅವರ ಮಾತುಗಳ ಪಾಲಿಸೆಕ್ಕು.
ಲೇಖನ ತುಂಬಾ ಒಪ್ಪ ಆಯಿದು ಒಪ್ಪಣ್ಣ…
ಒಪ್ಪಂಗೊ… 🙂
ಮಹೇಶಣ್ನನ ಮಾತು ನೂರಕ್ಕೆ ನೂರು ಸರಿ.
ಹೀಂಗೆ ವಿಚಾರ ಮಾಡೇಕ್ಕದಾ….
ಸುಮ್ಮನೆ ಒಬ್ಬ ಹೇಳಿದ್ದದರ…. ಹಿರಿಯರು ಹೇಳಿ ಕಣ್ಣು ಮುಚ್ಚಿ ಅನುಸರಿಸುವವು…
ಜಗತ್ತಿನ ಶ್ರೇಷ್ಠ ಬುದ್ದಿವಂತರು ಹೇಳಿಕೊಂಬಲೆ ಹೆಮ್ಮೆ ಪಡುವವು ಮಾಡೆಕ್ಕಾದ ಕೆಲಸ ಅಲ್ಲ..!!
ವಿಚಾರ ಶಕ್ತಿ ಇಲ್ಲದ್ದವು ಮಾಡುವ ಕೆಲಸ.
ಹೀಂಗೆ ಪಟ್ಟಿ ಮಾಡಿ..ಒಂದೊಂದೇ ವಿಷಯವ ಕೂಲಂಕುಶ ಚರ್ಚೆಗೆ ಅವಕಾಶ ಮಾಡಿಕೊಡಿ..
ಆಮೇಲೆ ಪಂಡಿತರು,ಗುರುಗೊ ಒಂದು ಅಭಿಪ್ರಾಯದೇ ಕೊಡಲಿ.
ಮತ್ತೆ ಯಾವುದೆಲ್ಲಾ ಆರಿಂಗೆ ಆಚರಿಸೆಕ್ಕು ಹೇಳಿ ಅನಿಸುತ್ತು ಅವು ಆಚರಿಸಲಿ.
ಅದು ಬಿಟ್ಟು ಸುಮ್ಮನೆ..ಹಿಂದೆ ಹಾಂಗಿತ್ತು ಹೀಂಗಿತ್ತು..ಈಗಾಣವಕ್ಕೆ ಬುದ್ದಿ ಇಲ್ಲೆ,
ಎಂತದೂ ಆಚರಣೆ ಮಾಡ್ತವಿಲ್ಲೆ ಹೇಳಿ ಅಲವತ್ತು ಕೊಂಬದಕ್ಕೆ ಅರ್ಥ ಇಲ್ಲೆ.
ಒಪ್ಪಣ್ನ ಈ ಚರ್ಚೆಗೆ ಇಲ್ಲಿ ಅವಕಾಶ ಮಾಡಿ ಕೊಡುವ ಮನಸ್ಸು ಮಾಡಿದರೆ ಒಳ್ಳೆದು.
ಇಲ್ಲಿ ಅಭಿಪ್ರಾಯ ಬರದವರಲ್ಲಿ ತುಂಬಾ ತಿಳಿದವು,ಅನುಭವ ಇಪ್ಪವು ಇದ್ದವು,
ಓದುವವು ಇನ್ನೂ ಹೆಚ್ಚು ಇದ್ದವು.
ಎಲ್ಲೊರಿಂಗೂ ಪ್ರಯೋಜನ.ನೆಟ್/ಬ್ಲಾಗ್ ಗೆಬಂದು ಸಮಯ ಕಳದ್ದಕ್ಕೆ ಸಾರ್ಥಕ.
ಎಂತ ಹೇಳ್ತಿ..??
ಇದನ್ನೇ ಮೂಢನಂಬಿಕೆಗೊ ಹೇಳಿ ಹೇಳುದು… ಹಿರಿಯರು ಒಳ್ಳೆ ಉದ್ದೇಶಕ್ಕೆ ಹೇಳಿದ್ದು ಹೇಳಿಯೇ ಗ್ರೇಶಿದರೂ, ಅದು ಈಗ ಲಾಗು ಆವುತ್ತಾ? ಮತ್ತೆ ಯಾವ ಹಿರಿಯರು ಇದರ ಹೇಳಿದವು? ಈ ನಂಬಿಕೆಗೊ ಎಷ್ಟು ವರ್ಷಂದ ಇದ್ದು? ಈ ನಂಬಿಕೆಗೊ ಶುರು ಅಪ್ಪಂದ ಮದಲು ಇದ್ದವು ನಮ್ಮ ಹಿರಿಯೋರು ಅಲ್ಲದ? ಅವರ ನಾವು ಅನುಸರ್ಸುಲಕ್ಕನ್ನೇ? ಎಂಗೊ ಇಂಥಾ ಗೋತ್ರದವು ಹೇಳಿ ಎದೆಯುಬ್ಬಿಸಿ ಹೇಳುವಾಗ ನಾವು ಆ ಗೋತ್ರ ಹೆಸರಿನ ಋಷಿಮುನಿಗೊ ಈ ಎಲ್ಲಾ ಕ್ರಮಂಗಳ ಹೇಳಿದ್ದವಾ ಹೇಳಿ ವಿಚಾರ ಮಾಡೆಕ್ಕನ್ನೆ!
ಕಸ್ತಲಪ್ಪಗ ಉಗುರು ತೆಗವಲಾಗ ಹೇಳಿದವು. ಮದಲು ಕರೆಂಟು ಇತ್ತಿಲ್ಲೆ, ದೀಪದ ಬೆಣಚ್ಚಿಲಿ ತೆಗೆದರೆ ಬೆರಳು ಕೊಯಿಗು ಹೇಳಿ ಹೇಳಿದ್ದಾದಿಕ್ಕು. ಅದರ ಈಗಳುದೆ ಕುರುಡಾಗಿ ಆಚರ್ಸೆಕ್ಕಾ? ಸ್ವಂತ ಆಲೋಚನೆ ಬೇಡದ! ಹಾಂಗೆ ಹೇಳಿ ಹಿರಿಯೋರಿಂಗೆ ಪೆದಂಬು ಮಾತಾಡೆಕ್ಕು ಹೇಳ್ತ ಅರ್ಥ ಅಲ್ಲ. ಅವು ಹೇಂಗೆ ಬೇಕಾರೆ ಆಚರಿಸಲಿ, ನಮ್ಮ ಮಟ್ಟಿಂಗೆ ಆದರೂ ಇದರೆಲ್ಲಾ ವಿಚಾರ ಮಾಡುಲ್ಲಕ್ಕನ್ನೆ! ಮಕ್ಕೊಗಾದರೂ ಇಂಥಾ ಮೂಢನಂಬಿಕೆಗಳ ಬದಲು ನಿಜವಾದ ಸಂಸ್ಕೃತಿಯ ಜೇನು ಹರಿಯಲಿ!
ಇಂಥಾ ಮೂಢನಂಬಿಕೆಗಳಿಂದ ಮುಕ್ತಿ ಸಿಕ್ಕುವಲ್ಲಿವರೆಗೆ ನಮ್ಮ ಧರ್ಮ ಹಾಳಾಗಿಯೊಂಡೇ ಇರ್ತು. ನಮ್ಮ ಬುಡವೂ ಉಧ್ಧಾರ ಆವುತ್ತಿಲ್ಲೆ. ಇದು ಖಂಡಿತಾ. ಅನಿವಾರ್ಯ ಕಾರಣಗಳಿಂದ ಈ ಮೂಢ ನಂಬಿಕೆಗಳ ಬಿಡುದಲ್ಲ, ವೈಚಾರಿಕ ಕಾರಣಂದ ಬಿಡೆಕ್ಕು.
ಅಜ್ಜಿಕ್ಕಳ ಪ್ರಕಾರ ಬಾಣಂತಿ ೪೦ ದಿನ ಅನ್ನ ಸಾರು ಬಿಟ್ಟು ಬೇರೆಂತೂ ತಿಂಬಲಾಗ. ಹಾಲು, ಹಣ್ಣು ಮುಂತಾದ ’ಶೀತ’ ಪದಾರ್ಥಂಗೊ ಅಂತೂ ಕನಸಿಲೂ ನೆನಸುಲಾಗ. ಮನೆಂದ ಹೆರ ಹೋಪಲಾಗ. ದಿನಾ ಒಂದು ಹಂಡೆ ಬೆಶಿ ಬೆಶಿ ನೀರಿಲಿ ಮೀಯೆಕ್ಕು. ಎಂಗೊಗೆ ಮಗ ಹುಟ್ಟಿದ ಸಮಯಲ್ಲಿ (ಈಗ ಮೂರು ತಿಂಗಳಾತು ಮಗಂಗೆ) ಬಾಣಂತಿಗೆ ಯಾವ ಪಥ್ಯವೂ ಮಾಡಿದ್ದಿಲ್ಲೆ. ಕೊದಿಪ್ಪ ನೀರಿಲಿ ಮಿಂದಿದೂ ಇಲ್ಲೆ. ಮನೆಯೊಳವೇ ಕೂದ್ದದೂ ಇಲ್ಲೆ. ಮನೆಂದ ಹೆರ ಹೋಪಗ ರೋಗಿಯ ಹಾಂಗೆ ತಲೆಗೆ ವಸ್ತ್ರ ಕಟ್ಟಿ ಕಂಬಳಿ ಹೊದ್ದಿದಿಲ್ಲೆ. ಎಲ್ಲ ಡಾಕುಟ್ರನ ಸಲಹೆ ಮೇರೆಗೆ ನಡದ್ದದು. ಒಳ್ಳೆಯ ಡಾಕುಟ್ರನ ಹುಡುಕ್ಕಿದ್ದು ಮಾತ್ರ ಎಂಗೊ ತೆಕ್ಕೊಂಡ ಮುಂಜಾಗ್ರತೆ. ದೇವರ ದಯಂದ ಈವರೆಗೆ ಅಮ್ಮ ಮತ್ತೆ ಶಿಶು ಆರೋಗ್ಯವಾಗಿದ್ದವು. ಮಗುವಿನ ಬೆಳವಣಿಗೆಯೂ ಸರಿಯಾಗಿದ್ದು. ಅದೇ ಸಮಯಲ್ಲಿ ಹುಟ್ಟಿದ ಇನ್ನೊಂದು ಮಗುವಿಂಗೆ ಈಗ ಎದೆಹಾಲು ಸಾಕಾವುತ್ತಿಲ್ಲೆ! ಅರ್ಧ ಎದೆ ಹಾಲು ಉಳುದರ್ಧ ಲಾಕ್ಟೋಜನ್ ಕೊಡುದು. ಅವರ ಮನೆಲಿ ಎರಡು ಜನ ಅಜ್ಯಕ್ಕೊ. ಇಬ್ರೂ ಸೇರಿ ಬಾಣಂತಿಗೆ ತಿನ್ನುಸಿದ್ದು ಅನ್ನ ಸಾರು! ಎನ್ನ ಹೆಂಡತಿ ದೋಸೆ ಇತ್ಯಾದಿ ತಿಂಡಿ, ಹಣ್ಣು ಹಂಪಲು ತಿಂಬದರ ಫೋನಿಲಿ ಕೇಳಿ ಆ ಬಾಣಂತಿಗೆ ಆಶೆ ಆಯ್ಕೊಂಡಿತ್ತು ಪಾಪ!
ಈಗ ಹೇಳಿ, ಅಜ್ಯಕ್ಕಳ ಮಾತು ಪೂರ ಕೇಳೆಕ್ಕಾ ಅಲ್ಲಾ ಡಾಕುಟ್ರನ ಮಾತು ಕೇಳುದು ಅಸಲಾ? ಡಾಕುಟ್ರಕ್ಕಳೂ ಎಲ್ಲ ಸರಿ ಹೇಳ್ತವು ಹೇಳಿ ಅಲ್ಲ. ಹಾಂಗೆಯೇ ಹಿರಿಯೋರುದೇ. ಎನಗೆ ಕಾಂಬ ಪ್ರಕಾರ ಆರನ್ನೂ ಕುರುಡಾಗಿ ನಂಬುಲಾಗ. ಯೋಚನೆಲಿ ಸ್ವಂತಿಕೆ ಮಡಿಕ್ಕೊಳ್ಳೆಕ್ಕು. ಸರಿ ತಪ್ಪು ವಿವೇಚಿಸುವ ಅಭ್ಯಾಸ ಇದ್ದರೆ ಆರ ಮಾತು ಕೇಳೆಕ್ಕಾ ಬೇಡದಾ ಹೇಳ್ತ ಪ್ರಶ್ನೆ ಬತ್ತಿಲ್ಲೆ.
ಎಂತಕ್ಕೂ ಅಜ್ಯಕ್ಕಳ ’ಕ್ರಮ’ ಗಳ ಪಟ್ಟಿ ಮಾಡಿದ್ದಕ್ಕೆ ಒಪ್ಪಣ್ಣನ ಮೆಚ್ಚೆಕ್ಕು. ಅದು ಸರಿ ತಪ್ಪು ಹೇಳ್ತ ವಿಷಯ ನಂತರದ್ದು. ಹಿರಿಯೋರ ನೆನಪಿಸಿಕೊಂಬಲೆ ಇದು ಒಂದು ಒಳ್ಳೆ ಉಪಾಯ ಅಂತೂ ಅಪ್ಪು.
ಒಪ್ಪಣ್ಣಾ, ತುಂಬಾ ಒಳ್ಲೆಯ ಲೇಖನ.ಅಜ್ಜಿಯಕ್ಕಳ ಹಳೇ ನಂಬಿಕೆಗಳ ನೆನಪಿಸಿದ್ದಕ್ಕೆ ಧನ್ಯವಾದಂಗೊ.
ಒಪ್ಪಣ್ಣಾ, ಹಲವಾರು ರೀತಿ ರಿವಾಜುಗೊ ಹಿಂದಾಣ ಕಾಲದ್ದು ನೆಂಪು ಮಾಡಿ ಕೊಟ್ಟ ಒಳ್ಳೆ ಲೇಖನ.
ನಿಷೇಧಂಗೊಕ್ಕೆ ಕಾರಣ ಇಲ್ಲದ್ದೆ ಇರ. ಆದರೆ ಹೆಚ್ಚಿನದಕ್ಕೆ ನವಗೆ ಗೊಂತಿಲ್ಲೆ. ಹೇಳಿ ಕೊಡುವವು ಇಲ್ಲೆ. ಕೆಲವೊಂದು ನಮ್ಮ ಊಹೆಗೆ ಸಿಕ್ಕುವ ಹಾಂಗಿಪ್ಪದು. ಅದರ ನಾವು ಸುಲಾಬಲ್ಲಿ ಒಪ್ಪುತ್ತು. ಬಾಕಿ ಇಪ್ಪದರ ಕೇಳುವಾಗ ಮೂಢ ನಂಬಿಕೆ ಹೇಳಿ ಕಾಣುತ್ತ್ತು.
ಗೋಪಾಲ ಮಾವ ಹೇಳಿದ ಹಾಂಗೆ ಈ ಕಾಲಕ್ಕೆ ಅನ್ವಯ ಅಪ್ಪ ಕೆಲವು ನಿಷೇಧಂಗಳ ನಾವು ನಮ್ಮ ಮಕ್ಕೊಗೆ ಹೇಳೆಕ್ಕಾವುತ್ತು. ಅವರ ಭವಿಷ್ಯದ ಹಿತದೃಷ್ಟಿಂದ
ಆನು ಕೇಳಿದ ಕೆಲವು ನಿಷೇಧಂಗೊ/ರೀತಿಗೊ:
ಅಮವಾಸ್ಯೆ ದಿನ ಮೊಸರು ಕಡವಲೆ ಆಗ. ತಿಂಗಳಿಲ್ಲಿ ಒಂದು ದಿನ ಮೊಸರಿಲ್ಲಿಯೇ ಊಟ ಮಾಡಲಿ ಹೇಳ್ತ ದೃಷ್ಟಿಂದ ಮಾಡಿದ್ದಾದಿಕ್ಕು.
ಒತ್ತೆ ಬಾಳೆ ಎಲೆಯ ಮನೆಗೆ ತಪ್ಪಲೆ ಆಗ. (ಕಾರಣ ಎನಗೆ ಗೊಂತಿಲ್ಲೆ)
ಎಂತಾರೂ ತಿಂಬಗ ಅದರ ತುಂಡು ಮಾಡಿ ತಿನ್ನೆಕ್ಕೇ ವಿನಾ ಕಚ್ಚಿ ಕಚ್ಚಿ ತಿಂಬಲೆ ಆಗ. ( ಆ ಸಮಯಕ್ಕೆ ಆರಾರೂ ಬಂದರೆ, ತುಂಡು ಮಾಡಿದ್ದಾರೆ, ಬಂದವರೊಟ್ಟಿಂಗೆ ಹಂಚಿ ತಿಂಬಲಕ್ಕು ಹೇಳ್ತ ಉದ್ದೇಶವೋ ಎಂತೋ)
ಹಿರಿಯರ ಕಾಲು ಹಿಡಿವಾಗ ಮೂಡ ಪಡು ಮುಖ ಇರೆಕು. ನಿತ್ಯ ದೇವರಿಂಗೆ ಅಥವಾ ಪೂಜೆ ಆವ್ತಲ್ಲಿ ಹೊಡಾಡುವಾಗಲೂ ಇದೇ ಸೂತ್ರ. ಅಪರ ಕ್ರಿಯೆ ದಿನ ಮಾತ್ರ ತೆಂಕ ತಲೆ ಹಾಕಿ ಹೊಡಾಡ್ತ ಕ್ರಮ ಇದ್ದ ಕಾರಣ ಬಾಕಿ ದಿನಕ್ಕೆ ಇದು ನಿಷೇಧ ಆಗಿಕ್ಕು. ಅಥವಾ ಮೇಗ್ನೆಟಿಕ್ ವೇವ್ ಉತ್ತರಂದ ದಕ್ಷಿಣಕ್ಕೆ ಇಪ್ಪದಕ್ಕೂ ಇದಕ್ಕೂ ಎಂತಾರೂ ಸಂಬಂಧ ಇಪ್ಪಲೂ ಸಾಕು.
ನೈವೇದ್ಯ ಮಾಡುವ ಹಾಲಿನ ಪಾತ್ರಂದ ಎರಶುವಾಗ ಊಪಿ ಹದಿಯ ಕರೇಂಗೆ ಮಾಡುವ ಬದಲು ಕೈಂದಲೇ ಕರೇಂಗೆ ಮಾಡೆಕ್ಕು. ಇಲ್ಲದ್ದರೆ ಎಂಜಲಿನ ಅಂಶ ಹಾಲಿಂಗೆ ಬೀಳುಗು ಹೇಳ್ತ ಉದ್ದೇಶ ಆಗಿಕ್ಕು.
ಎಡ ಕೈಲಿ ಯಾವದೇ ವಸ್ತುವಿನ ಕೊಡ್ಲಾಗ. ಬಲಕೈಯಷ್ತು ಎಡಕೈ ಒಗ್ಗುತ್ತಿಲ್ಲೆ ಹೇಳಿ ಆ ರೀತಿ ಹೇಳಿದ್ದಾ?
ಕೆರೆಮಣೆ, ಮೆಟ್ಟುಕತ್ತ್ತಿಲಿ ಅಂತೆ ಕೂದರೆ ಅದರ ಸೈಡಿಲ್ಲಿ ಹೋಪವಕ್ಕೆ ತಾಗ್ಗು ಹೇಳ್ತ ಅಂದಾಜಿಲ್ಲಿ, ಹಾಂಗೆ ಹೇಳಿದ್ದು ಆಗಿಕ್ಕೋ?
ಹಾಂಗೆ ಹರಿತ ಆಯುಧಂಗಳ (ಕತ್ತಿ, ಪೀಶ ಕತ್ತಿ) ಕೈಲಿ ಕೊಡ್ಲಾಗ ಹೇಳುವಲ್ಲಿ, ಅದಿ ಇನ್ನೊಬ್ಬಂಗೆ ತಾಗುವ ಚಾನ್ಸ್ ಜಾಸ್ತಿ ಹೇಳ್ತ ಅಭಿಪ್ರಾಯ ಆಗಿಕ್ಕೋ?
ಹೊತ್ತಿಸಿದ ದೇವರ ದೀಪ ಎಣ್ಣೆ ಮುಗುದು ಬೀರಲೆ ಆಗ ಹೇಳುಗು.
ಹೀಂಗೆ ಇನ್ನೂ ಕೆಲವು ಇಕ್ಕು. ನೆಂಪಾದರೆ ಇನ್ನೊಂದರಿ
ಕಾರ್ಯ ಕಾರಣ ಊಹಿಸಿ ಬರದ ನಿಂಗಳ ಕಮೆಂಟ್ ತುಂಬಾ ಒಳ್ಳೇದಾಯಿದು..
ಈ ರೀತಿ ಯೋಚನೆ ಕೂಡಾ ಕೆಲವರಿಂಗೆ ಬತ್ತಿಲ್ಲೆ..ಎಂತಕೋ..ಏನೋ…
ಈ ರೀತಿ ವಿಮರ್ಷೆ ಮಾಡಿಯೊಂಡರೆ..ಆಚರಿಸೆಕ್ಕೋ ಬಿಡೆಕ್ಕೋ ಹೇಳಿ
ಅವಕ್ಕವಕ್ಕೇ ಒಂದು ತೀರ್ಮಾನಕ್ಕೆ ಬಪ್ಪಲಾವುತ್ತು.
ಇಷ್ಟು ಹೇಳಿ ಬೇಕೋ ಬೇಡದೋ ಹೇಳ್ತ ತೀರ್ಮಾನಕ್ಕೆ
ನಿಂಗಳೇ ಬನ್ನಿ ಹೇಳಿ ಹೇಳಿದರೆ ಆ ಮಾತಿನ ಮೆಚ್ಚಲಕ್ಕು.
.
ನಮ್ಮಲ್ಲಿ ಒಂದು ಆಚರಣೆ ಇಪ್ಪದು ಹೆಮ್ಮಕ್ಕೊ ತಿಂಗಳಿಲ್ಲಿ ಮೂರು ದಿನ ರಜೆ ಕೂಬದು. ಆ ಸಮಯಲ್ಲಿ ಅವರ ದೇಹ ಬಾಕಿ ಇಪ್ಪ ಸಮಯಕ್ಕಿಂತ ಕ್ಷೀಣ ಇರ್ತು ಹೇಳ್ತ ದೃಷ್ಟಿಲಿ, ಅವಕ್ಕೆ ರೆಸ್ಟ್ ಕೊಡೆಕಾದ್ದು ಅಗತ್ಯ ಹೇಳಿ ಕಂಡಿದವು. ಹಾಂಗಾಗಿ ಒಂದು ಶಾಸ್ಟ್ರ ಮಾಡಿದವು, ಅವು ಯಾವದಕ್ಕೂ ಸೇರಲೆ ಆಗ.ಪ್ರತ್ಯೇಕ ಇರೆಕು ಹೇಳಿ (ಈಗ ಹೆಚ್ಚಿನಂಶ ಇಲ್ಲದ್ದ ಆಚರಣೆ).ಒಟ್ಟಿಂಗೆ ಸೇರಿರೆ, ಕೆಲಸ ಮಾಡಿ ಹೋವುತ್ತು. ಹಿಂದಾಣ ಕಾಲಲ್ಲಿ ತುಂಬಾ ಕೆಲಸ ಇಪವಕ್ಕೆ ಅದು ರಜಾ ಕಾಲ.
ಇದರ ತಿಳಿಯದ್ದೆ, ಆ ಸಮಯಲ್ಲಿ, ಮನೆ ಒಳಾಣ ಕೆಲಸ ಮಾಡ್ಲಾಗ, ಹೆರಾಣ ಕೆಲ್ಸ ಮಾಡ್ಲಕು ಹೇಳಿ, ಹಳ್ಳಿಗಳಲ್ಲಿ, ಹುಲ್ಲು ಮಾಡುವದು, ನೀರು ಚೇಪುವದು, ಪಾತ್ರೆಗಳ ತೊಳವದು ಇತ್ಯಾದಿ ಕಷ್ಟದ ಕೆಲಸ ಮಾಡುಸುತ್ತವು.
ಮೂಲ ಉದ್ದೇಶ ತಿಳಿಯೆಕ್ಕಾದ್ದು ಮುಖ್ಯ.
ಒಬ್ಬರಿಂಗೆ ಡಾಕ್ಟ್ರು ಹೇಳಿದವು “ನಿಂಗೊಗೆ ಸಿಹಿ ಮೂತ್ರ ರೋಗ ಇದ್ದು, ಕಾಪಿ ಚಾ ಕುಡಿತ್ತರೆ ಅದಕ್ಕೆ ಸಕ್ಕರೆ ಹಾಕಲಾಗ ಹೇಳಿ”
ಅವು ಅದರ ಸರಿಯಾಗಿ ಪಾಲಿಸಿದವು.
ಕಾಪಿ/ಚಾ ಕ್ಕೆ ಬೆಲ್ಲ ಹಾಕಲೆ ಆಜ್ಞೆ ಕೊಟ್ಟವು ಮನೆಲಿ
ಹೆರ ಹೋದಿಪ್ಪದ ಚಪ್ಪೆ ಚಾ ಕಾಪಿ ಕುಡುದವು. ಸ್ವೀಟ್, ಪಾಯಸ ಕಮ್ಮಿ ಮಾಡಿದ್ದವಿಲ್ಲೆ. (ಡಾ. ಹೇಳಿದ್ದು ಚಾ ಕಾಪಿಗೆ ಸಕ್ಕರೆ ಹಾಕಲಾಗ ಹೇಳಿ ಮಾತ್ರ ಅಲ್ಲದಾ)
ಮೇಲೆ ಹೇಳಿದ್ದರಲ್ಲಿಯೂ ಹಾಂಗೇ. ಪೂಜೆಗೆ ಹೂಗು ಕೊಯಿವಲೆ ಆಗ ಹೇಳಿರೆ, ಅಷ್ಟು ಸಣ್ಣ ಕೆಲಸ ಕೂಡಾ ಮಾಡ್ಲಾಗ ಹೇಳಿ ತಿಳ್ಸ್ಕೊಳೆಕ್ಕಾದ್ದಲ್ಲದ್ದೆ, ಅದು ಮಾತ್ರ ಮಾಡ್ಲಾಗ, ಬಾಕಿ ಇಪ್ಪದೆಲ್ಲಾ ಮಾಡ್ಲಕ್ಕು ಹೇಳಿ ತಿಳ್ಕೊಂಡರೆ ಹೇಗೆ?
ಮೂಲ ಉದ್ದೇಶ ತಿಳಿಯೆಕ್ಕಾದ್ದು ಮುಖ್ಯ.
ನಿಜ..ಸರಿಯಾಗಿ ಹೇಳಿದಿ…
ಶರ್ಮಪ್ಪಚ್ಚಿ ಮನಸ್ಸು ಮಾಡಿದರೆ..
ಇಲ್ಲಿ ಮೇಲೆ ಹೇಳಿದ ಎಲ್ಲ ಆಚರಣೆಗಳಲ್ಲಿ..ಇಂದಿಂಗೆ ಅಗತ್ಯ ಅಥವಾ
ಸಂಸ್ಕಾರಕ್ಕೆ ಸಂಬಂದಿಸಿದ , ಹುರುಳಿಪ್ಪ ಆಚರಣೆಗಳ ಮೇಲೆ ಬೆಳಕು ಚೆಲ್ಲುವ
ಒಂದು ಲೇಖನವೇ ಬರವಲಕ್ಕು.
ಎನಗೆ ಕಾಂಬದು ಅದರ ಅಗತ್ಯವೂ ಇದ್ದು..
ಸುಮ್ಮನೇ…
ಅದಾಗ..ಇದಾಗ ಹೇಳಿದರೆ..
ಹಳಬ್ಬರಿಂಗೆ ಬೇರೆ ಕೆಲಸ ಇತ್ತಿಲ್ಲೆ ಹೇಳಿ ಹೇಳುಗಷ್ಟೇ ವಿನ:
ಜವ್ವನಿಗರು ಗಮನ ಕೊಡವು(ಎದುರಂದ ಆರುದೇ ಹೇಳ್ತವಿಲ್ಲೆ)..
ಮನಸ್ಸು ಮಾಡ್ತಿರಾ..ಶರ್ಮಪ್ಪಚ್ಚಿ…???
ಎಂತಾದರು ಕಾರಣ ಇಲ್ಲದ್ದೆ ಹಿರಿಯವು ಹೀಂಗಿಪ್ಪ ನಿಶೇಧಂಗಳ/ಕ್ರಮಂಗಳ ಮಾಡಿರವು. ಪ್ರತಿಯೊಂದು ವಿಷಯವನ್ನು ಸರಿಯಾಗಿ ವಿಮರ್ಶೆ ಮಾಡಿರೆ ಹಾಂಗೆಂತಕೆ ಮಾಡಿದ್ದವು ಹೇಳಿ ಅರ್ಥ ಅಕ್ಕು. ಕಾಲ ಬದಲಾದ ಹಾಂಗೆ ಕೆಲವು ಕ್ರಮಂಗಳಲ್ಲಿ ಬದಲಾವಣೆ ಆಗಿಕ್ಕು/ಆವ್ತಾ ಇದ್ದು. ಇಲ್ಲಿ ಒಪ್ಪಣ್ಣ ತಿಳುಸಿದ ಪ್ರತಿಯೊಂದು ಕ್ರಮವನ್ನುದೆ ಹಿರಿಯರು ಹೇಳಿದ ಹಾಂಗೆ ಅನುಸರಿಸೆಂಡು ಬಂದದಂತೂ ನಿಜ. ಈಗಳೂ ಹೆಚ್ಚಿನದ್ದನ್ನೂ ಪಾಲಿಸೆಂಡು ಬಪ್ಪದು ನಿಜ. ತರವಾಡು ಮನೆಯ ಮತ್ತೊಂದರಿ ನೆಂಪು ಮಾಡಿದ ಒಪ್ಪಣ್ಣಂಗೆ ಧನ್ಯವಾದಂಗೊ. ಎನ್ನ ಪ್ರೀತಿಯ ಒಪ್ಪಂಗೊ.
ಈಗಾಣ ಮಕ್ಕೊಗೆ ಬೇಕಾಗಿ ಹೀಂಗಿಪ್ಪ ಇನ್ನೂ ಕೆಲವು ನಿಶೇಧಂಗಳ ನಾವೇ ಮಾಡ್ಯೊಳೆಕಾವುತ್ತು ! ಉದಾಹರಣೆಗೆ, ಟಿವಿ ನೋಡೆಂಡು ಉಂಬಲಾಗ. , ರಿಮೋಟಿಂಗೆ ಬೇಕಾಗಿ ಕಾದಲಾಗ, ಪೇಟೆಯ ಕಾಟಂಕೋಟಿ ತಿಂಬಲಾಗ, ಫೇಸು ಬುಕ್ಕಿಲ್ಲಿ ಸಮಯ ಹಾಳು ಮಾಡ್ಳಾಗ, ಪರೀಕ್ಷೆ ಸಮೆಲಿ ಕಂಪ್ಯೂಟರ್ ಗೇಮು ಆಡ್ಳಾಗ…. ಬರೆತ್ತರೆ ಎಷ್ಟೋ ಇದ್ದು. ಒಪ್ಪಣ್ಣ, ಎನ್ನ ಬೈದಿಕ್ಕೆಡ, ಆತೋ ?!
ಕೊಶಿಯಾತು ಭಾವ ಇದರ ಓದಿಕ್ಕಿ.. ಎನ್ನ ಅಜ್ಜಿ ಹೇಳಿಯೊ೦ಡು ಇದ್ದ ಹಲವಾರು ವಿಚಾರ ನೆ೦ಪ್ಪು ಮಾಡಿಕೊಟ್ಟೆ..
ಹಾ ಮತ್ತೆ ಇಲ್ಲಿ ಹೇಳಿದ್ದು ಯಾವದು ಮೂಡ ನಂಬಿಕೆಗೊ ಅಲ್ಲವೇ ಅಲ್ಲ.. ಪ್ರತೀಯೊ೦ದಕ್ಕು ಒ೦ದ ಮೂಲ ಕಾರಣ ಇದ್ದೇ ಇದ್ದು..
ಕಲವು ನವಗೆ ಊಹಿಸಲೆಡಿಗು.. ಮತ್ತೆ ಕಲವಕ್ಕೆ ಎಡಿಯ, ಬರೀ ನಮ್ಮ ಹಿರಿಯರು ಹೇಳಿದಾ೦ಗೆ ಒಪ್ಪಿಯೊಳೆಕ್ಕು..
ಒ೦ದೊ೦ದಕ್ಕು ಅದರದ್ದೇ ಆದ – scientific back ground ಇರ್ತ್ತು.. ರಜ್ಜ ನಾವು ಅಲ್ಲಿ ಇಲ್ಲೆ ಹುಡಕ್ಕಿರೆ ಗೊ೦ತಾವುತ್ತು..
ಮತ್ತೆ ಎನಗೆ ತಿಳುದ ಕೆಲವು ಮೂಲ ನಂಬಿಕೆಗೊ ಇಲ್ಲಿ ಹೇಳ್ತೆ..
ಇರುಳು ತಲೆ ಕುಚ್ಚಿ ತೆಗಶಲಾಗ,
ಇರುಳು ಮೀವಲಾಗ ಹೇಳ್ತವ್ವು..
ಮೂರ್ಸ೦ಧಿಯಪ್ಪಗ ಉಡುಗಲಾಗ..
ನೆ೦ಟ್ರೂ, ಮನೆಯೋವ್ವೊ ಊರಿ೦ಗೆ ಹೋದ ಕೂಡ್ಲೆ ಅತವ ಹೆರಡುವಾಗ ಉಡುಗಲಾಗ..
ಮತ್ತೆ ಮನೆಯೋವು – ಅಪ್ಪ, ಮಕ್ಕೊ, ದ೦ಪತಿಗೊ ಅತವ ಆರೇ ಆದರು ಹೋದ ಕೂಡ್ಲೆ ಮನೆಯ ಮುಖ್ಯ ಬಾಗಿಲು ಹಾಕಲಾಗ, ರಜ್ಜ ಕಳದು ಹಾಕಲಕ್ಕು .
ಮತ್ತೆ ಮನೆ ಬಾಗಿಲ ಬುಡಲ್ಲಿ ಚಪ್ಪಲಿ ಮಡುಗಲಾಗ..
ಮನೆಯೊಳ ಚಪ್ಪಲಿ ಹೇ೦ಗೂ ಹಾಕಲಾಗ.
ಮತ್ತೆ ಈ ಪೇಟೆಲಿ, ಜೆನ೦ಗೊ ಮೀವಲೆ ಹೋಪಗ ಚಪ್ಪಲಿ ಹಾಕೆ೦ಡು ಮೀತವು, ಇದು ತಪ್ಪು..
ಮನೆ ಎದುರು ಕಾಕೆಗೊ ಒ೦ದೇ ಹಾ೦ಗೆ ಕೂಗಿರೆ ಮನೆಗೆ ನೆ೦ಟ್ರು ಬಕ್ಕು ಹೇಳಿ ಸೂಚನೆ ಅಡ.. 🙂
ನಾವು ಹೆರ ಹೋಪಗ ತೊಳಶೀ ಕಟ್ಟೆಗೆ ಒ೦ದು ಸುತ್ತು ಹಾಕಿ ಹೋಪದು ಉತ್ತಮ.
ಹೆರ ಹೋಪಗ ಕಲವು ಒಳ್ಳೆ ಕಣಿ ಹೇಳಿ ಇದ್ದು:
ದನವ ಕಾ೦ಬದು ( ಹಿ೦ಬದಿ೦ದ ನೋಡಿರೆ ಉತ್ತಮ )
ಹೋರಿಯ – ಮೋರೆ ನೋಡಿರೆ ಉತ್ತಮ .
ಫಲ ಇಪ್ಪ ತೆ೦ಗಿನ ಮರ, ತರಕಾರಿ ಕಾ೦ಬದು.
ಹೀ೦ಗೆಲ್ಲಾ.. ಹತ್ತು ಹಲವು ವಿಚಾರ ತಿಳುಶಿಕೊಟ್ಟ ಒಪ್ಪಣ್ಣ೦ಗೆ ಧನ್ಯವಾದ೦ಗೊ..
*”ಕಲವು ನವಗೆ ಊಹಿಸಲೆಡಿಗು.. ಮತ್ತೆ ಕಲವಕ್ಕೆ ಎಡಿಯ, ಬರೀ ನಮ್ಮ ಹಿರಿಯರು ಹೇಳಿದಾ೦ಗೆ ಒಪ್ಪಿಯೊಳಕು..”
(ಎಂತಕೆ..??)
*”ಒ೦ದೊ೦ದಕ್ಕು ಅದರದ್ದೇ ಆದ – scientific back ground ಇರ್ತ್ತು.. ರಜ್ಜ ನಾವು ಅಲ್ಲಿ ಇಲ್ಲೆ ಹುಡಕ್ಕಿರೆ ಗೊ೦ತಾವುತ್ತು..”
*ಹುಡುಕ್ಕಿಯಪ್ಪಗ ಗೊಂತಾದ್ದದರ ತಿಳಿಸಿದರೆ..ತಿಳಿದುಕೊಂಬಲೆ ಆಗದ್ದವಕ್ಕೆ ಪ್ರಯೋಜನ ಅಕ್ಕನ್ನೇ..ಇದರ ಎಂತಕೆ ನಾವು ಯೋಚನೆ ಮಾಡ್ತಿಲ್ಲೆ..??
*ಕಾರಣ ಕೇಳಿದವಕ್ಕೆ ಹೇಳದ್ದೆ– ಹೀಂಗೆ ಹೇಳಿ ಇದರ ಎಲ್ಲಾ ನಿಂಗೊ(ಪಾಲಿಸೆಕ್ಕು,) ಮಾಡೆಕ್ಕೇ…ಹೇಳಿ ಹೇಳಿದರೆ..!!!
ಈ ತರದ ಹೇರಿಕೆಯ ಪ್ರಜ್ನಾವಂತರಿಂಗೆ ಒಪ್ಪಿಯೊಂಬಲೆ ಕಷ್ಟ ಅಲ್ಲದಾ..???
ಚೆಂದಕೆ ಪಟ್ಟಿ ಮಾಡಿ ಕೊಟ್ಟಿದೆ ಒಪ್ಪಣ್ಣೋ.. ಖುಶಿ ಆತು.
ಈ ಎಲ್ಲ ವಿಚಾರಂಗಳೂ ನಮ್ಮ ಹಿರಿಯೋರ ಅನುಭವದ ಸಾರ ಹೇಳ್ತದಲ್ಲಿ ಎರಡು ಮಾತಿಲ್ಲೆ.
ಕಾಲಕ್ಕೆ ತಕ್ಕ ಹಾಂಗೆ ಬದಲಾವಣೆಯೂ ಅವಷ್ಯಕವೇ.. ಯಾವುದೆಲ್ಲ ಈಗಿನ ಅಗತ್ಯಂಗೊ ಹೇಳಿ ಚರ್ಚೆ ಆಯೆಕ್ಕಾದ್ದೇ..
ಸರಿಯಾದ ಮಾತು, ಮಂಗ್ಳೂರು ಮಾಣೀ! 🙂
ಒಪ್ಪಂಗೊ.
oppanno moola nambikegala bagge baraddu laikaidu.
heriyora kramangala nijavagiyu palusekku.
eega sumaaru aachara vicharango kambale ille.
adarella nadeshiyondu bappastu talmeyu purusottu ille.
olle shuddi..
ಒಪ್ಪ ಆಯಿದು ಹೇಳಿಗೊಂಡು ಚೆಂದಕೆ ಪ್ರೋತ್ಸಾಹ ಕೊಟ್ಟದು ಕೊಶೀ ಆತು.
ಪಟ್ಟಿ ಬೆಳವಲೆ ನಿಂಗಳ ಸಲಹೆಯೂ ಇದ್ದು – ಹೇಳ್ತದು ಒಪ್ಪಣ್ಣಂಗೆ ಮರೆಯ. ಆತೋ? 🙂
ಹರೇ ರಾಮ……
ಅಪ್ಪು ಒಪ್ಪಣ್ಣಾ….. ಇದೆಲ್ಲ ಮೂಢನಂಬಿಕೆಗೊ ಅಲ್ಲ; ಇವೆಲ್ಲ ಮೂಲ ನಂಬಿಕೆಗೊ.
ಇದರಲ್ಲಿ ಯಾವುದೆಲ್ಲಾ ಮೂಲ ನಂಬಿಕೆಗೊ….
ಪುಟ್ಟಕ್ಕೋ..
“ಕಾಲಕ್ಕೆ ತಕ್ಕ ಹಾಂಗೆ ಬದಲಾವಣೆಯೂ ಅವಶ್ಯಕವೇ.. ಯಾವುದೆಲ್ಲ ಈಗಿನ ಅಗತ್ಯಂಗೊ ಹೇಳಿ ಚರ್ಚೆ ಆಯೆಕ್ಕಾದ್ದೇ..”
ಹೇಳಿ
ಅದಾ..ಮಂಗ್ಳೂರ ಮಾಣಿ ಯೂ ಹೇಳ್ತವು..ಕೇಳಿತ್ತಾ…ಅಕ್ಕೋ..
ಪುಟ್ಟಕ್ಕಾ,
ಪ್ರೋತ್ಸಾಹಕ ಒಪ್ಪಕ್ಕೆ ಒಪ್ಪಂಗೊ.
ಹರೇರಾಮ
ವೆಂಕಟಣ್ಣಾ,
ಅವಕ್ಕವಕ್ಕೆ ಅವರವರದ್ದೇ ಆದ ಮೂಡ-ಮೂಲ ನಂಬಿಕೆಯ ಪಟ್ಟಿಗೊ ಇಕ್ಕು. ಎಲ್ಲೋರಿಂಗೂ ಅಕ್ಕಾದ ಹಾಂಗೆ ನವಗೆ ಮಾಡಿಕ್ಕಲೆ ಎಡಿಯ.
ಸಮಗ್ರ ಪಟ್ಟಿಯ ನೋಡಿಗೊಂಡು – ಎನಗೆ ಬೇಕಾದ್ದರ ತೆಕ್ಕೊಳ್ತೆ- ಹೇಳ್ತದು ಬುದ್ಧಿವಂತಿಗೆ. ಅಲ್ಲದೋ? 🙂
ಎಲ್ಲಿಗಾರು ಹೋವ್ತರೆ ಹೊರಟು ಹೋಪಗ ಮನೆಯೋರ ಹತ್ತರೆ ಹೋವುತ್ತೆ ಹೇಳಿ ಹೇಳುಲೆ ಆಗಡ. ಹೋಗಿ ಬತ್ತೆ ಹೇಳೆಕಡ. ವಿಷಯ ಬಾರಿ ಲಾಯಿಕ ಆಯಿದು.
ಲೇಖತ್ತೆ,
ನಿಂಗೊ ನೆಂಪುಮಾಡಿಕೊಟ್ಟ ವಿಶಯ ಆಪ್ಪಾದ್ದೇ..
ನಮ್ಮ ಸಂಸ್ಕಾರಲ್ಲಿ ಆ ವಿಶಯ ಒಂದಾಗಿ ಹೊಂದಿಗೊಂಡು ಬಯಿಂದು. ಅಲ್ಲದೋ? 🙂
ಕಾಯಿ ಕೆರವಗ/ಕಡೆದ ಕಾಯಿಯ ತಿಂಬಲಾಗ ಹೇಳ್ತವು. ತಿಂದರೆ ತಿಂದವರ ಮದುವೆಗೆ ಮಳೆ ಬಕ್ಕಡ. ಇದು ಮಕ್ಕೊ ಕಾಯಿ ತಿನ್ನದ್ದ ಹಾಂಗೆ ಅಜ್ಯಕ್ಕಳ ಕೆಣಿಯೋ ಗೊಂತಿಲ್ಲೆ. ಆದರೆ ಕಳುದೊರಿಷ ಮಾಷ್ಟ್ರು ಮಾವನ ಸಣ್ಣ ಮಗನ ಮದುವೆ/ಸಟ್ಟುಮುಡಿ ದಿನ ಭಾರೀ ಮಳೆ ಬಂದದಂತೂ ಅಪ್ಪು. 😉
ಹಳೆಮನೆ ಅಣ್ಣಾ, ವಿಶಯ ಅಪ್ಪಾತ 😉
ಭಾರೀ ಮಳೆ ಬಂದದು ಎನಗೂ ನೆಂಪಾತೊಂದರಿ. 😉
manchalli koodondu kaalu adisidare mundaana janmalli Taylor agi huttugada
ಹ ಹ ಹಾ…
ಒಪ್ಪಣ್ಣನ ಈ ನಮುನೆ ನೆಗೆ ಮಾಡುಸೇಕಾರೆ ಪಾಲಾರಣ್ಣನೇ ಆಯೇಕಟ್ಟೆ!!
ಈ ರಾಮಾಯಣಂಗಳ ಎಡಕ್ಕಿಲಿ ಪಿಟ್ಕಾಯನ. ಪಷ್ಟಾಯಿದು. ಆತೋ? 😉
ಶುದ್ದಿ ಭಾರಿ ಲಾಯ್ಕಾಯಿದು!!
ಮನೆ೦ದ ಹೆರ ಎನ್ತಾರು ಕೆಲಸಕ್ಕೆ ಹೋರಟಪ್ಪಗ ವಾಪಾಸು ಮನೆ ಯೊಳ೦ಗೆ ಹೋಪಲಾಗ ,ಹೋದರೆ ಹೊರಟ ಕೆಲಸ ಆವ್ತಿಲ್ಲೆ ಹೇಳಿ ಹೇಳ್ತವಲ್ಲದ….ಇದು ಸತ್ಯವೊ ಹೇಳಿ ಅ೦ಸಿತ್ತು ಎನಗೆ ಇ೦ದು.ಎ೦ತಕೇ ಹೇಳಿರೆ—
ಹೊತ್ತೋಪಗ ೪ ಗ೦ಟೆಗೆ ಎನ್ನ ಸ೦ಗೀತ ಕ್ಲಾಸಿ೦ಗೆ ಹೇಳಿ ಆನುದೆ ಅಮ್ಮ೦ದೆ ಮನೆ೦ದ ಹೆರಟೆಯೊ..ಮನೆ ಬೀಗ ಹಾಕಿ ಹೆರಟಪ್ಪಗ ಅಮ್ಮ೦ಗೆ ನೆನಪ್ಪಾತು ಪರ್ಸು ಮರದತ್ತು ಹೇಳಿ..ಮತ್ತೆ ಪುನಾ ಬೀಗ ತೆಗದು ಪರ್ಸು ತಪ್ಪಲೇ ಹೇಳಿ ಒಳ ಹೋತು ಅಮ್ಮ..ಒ೦ದರಿ ಕೂದಿಕ್ಕಿ ಬಾ ಹೇಳಿ ಹೇಳಿದರೂ “ಅದರಲ್ಲಿ ಎ೦ತ ಇದ್ದು..”ಹೇಳಿ ಅಮ್ಮ ಅ೦ತೆ ಬ೦ತು..ಆತು ಹೆರಟೆಯ ಇಬ್ರೂ..ಒ೦ದು ಹತ್ತು ಕಿ.ಮೀ ಹೋದಪ್ಪಗ ಮಳೆ ಹನ್ಕುಲೆ ಸುರು ಆತು..ಅಮ್ಮ ಎಲ್ಯಾರು ಕರೆಲಿ ನಿಲ್ಸು ಹೇಳಿ ಹೇಳಿತ್ತು..ಆದರೆ ಕ್ಲಾಸಿ೦ಗೆ ತಡವಾವ್ತು ಹೇಳಿ ನಿಲ್ಸದ್ದೆ ಚೂರು ಚೆ೦ಡಿ ಆದರೆ ತೊ೦ದರಿಲ್ಲೆ ಹೇಳಿ ಮು೦ದೆ ಹೋದೆಯ..ಇನ್ನೂ ಚೂರು ಮು೦ದೆ ಹೋಪಗ ಖ೦ಡಾಬಟ್ಟೆ ಮಳೆ..ನಿಲ್ಲುಸಿ ಕರೆಲಿ ನಿ೦ಬಲೂ ಜಾಗೆ ಇಲ್ಲೆ..ಪೂರಾ ಚೆ೦ಡಿ..ಮತ್ತೆ ಒ೦ದು ಪೆಟ್ರೊಲ್ ಬ೦ಕ್ ಸಿಕ್ಕಿತ್ತು..ಅಲ್ಲಿ ಹೋಗಿ ನಿಲ್ಸಿದೆ..ಅರ್ಧ ಗ೦ಟೆ ಅಲ್ಲಿಯೇ ನಿ೦ದೆಯ..ಮಳೆ ನಿ೦ಬ ಅ೦ದಾಜೆ ಕ೦ಡಿದಿಲ್ಲೆ..ಮತ್ತೆ ಇನ್ನು ಚೆ೦ಡಿ ಪು೦ಡಿ ಆಯ್ಕ್ಕೊ೦ಡು ಹೇ೦ಗಪ್ಪಾ ಕ್ಲಾಸಿ೦ಗೆ ಹೋಪದು ಮತ್ತೆ ಸುಮಾರು ತಡವೂ ಆತು ಹೇಳಿ ಪುನಾ ತಿರುಗುಸಿ ಮನೆ ದಾರಿಯನ್ನೇ ಹಿಡುದೆಯ 🙁 ಹೆರಟರೆ ದಾರಿಲಿಡೀ ಒ೦ದೊ೦ದು ಫೀಟು ಎತ್ತರಕ್ಕೆ ಎರ್ಕಿದ ನೀರು..ಯಬ್ಬಾ…ಅ೦ತೂ ಇ೦ತೂ ಹೇ೦ಗೋ ಮನೆಗೆ ಎತ್ತಿದೆಯ..
ಇಷ್ಟರ ಒರೆಗೆ ಹೀ೦ಗೆ ಏವತ್ತೂ ಆಗಿತ್ತಿಲ್ಲೆ..ಹೊರಡುವಾಗ ಪುನಾ ಒಳ ಹೋದಕಾರಣ ಹೀ೦ಗೆ ಹೋದ ಕೆಲಸ ಆಗದ್ದದಾ ಎನಾ ಹೇಳಿ ಅಮ್ಮನ ಹತ್ತರೆ ಪರೆ೦ಚಿಗೊ೦ಡೆ..
ಮನೆಗೆ ಬ೦ದು ಈ ಶುದ್ದಿಯ ಓದುವಗ ಇ೦ದು ಎನಗಾದ್ದರ ಹೇಳುವ ಹೇಳಿ ಆತು 🙂
ಕಾಕೆ ಕೂಪಗ ಗೆಲ್ಲು ಮುರುದರೆ..
ಒಂದು ಹೇಳಿಕೆ ಮಾಡ್ಲಕ್ಕು..
“ಕಾಕೆ ಮೂಡಕ್ಕೆ ಮೋರೆಹಾಕಿ ಮರಲ್ಲಿ ಕೂದರೆ..ಗೆಲ್ಲು ಮುರಿತ್ತು..
ಹೇಳಿ ಎನ್ನ ಅಜ್ಜಿ ಹೇಳುಗು..ಮೊದಲಿಂಗೆ…”
ದೀಪಿ ಅಕ್ಕಾ,
ನಿಂಗೊ ಕಂಡ ಒಪ್ಪ ನೋಡಿ ಕೊಶಿ ಆತು – ಹೇಳಿರೆ ನಿಂಗೊ ಎನಗೆ ಬೈವಿರಾ? 😉
{ನಿಂಗಳ ಹೆರಿಯೋರು ನೆಂಪುಮಾಡಿಗೊಂಡಿದ್ದ, ಇಲ್ಲಿ ಬಿಟ್ಟು ಹೋದ ’ನಿಷೇಧಂಗಳ’ ಬೈಲಿಂಗೆ ತಿಳಿಶಿಕೊಡುವಿರೋ?} ..
ಹಾಂಗೆ ಒಳುದ್ದದು ಯೇವುದೂ ಇಲ್ಲೆ ಹೇಳಿ ಕಂಡತ್ತು, ಎಲ್ಲ ಓದಿಯಪ್ಪಗ. ಒಪ್ಪ ಕೊಡದ್ದೆ ಹೋಪಲೆಡಿಯ ಹೇಳ್ತದು ಮನಸಾ ಒಪ್ಪಿದ್ದೆ.
ಕುಮಾರ ಮಾವಾ…
ಪ್ರೋತ್ಸಾಹಕ್ಕೆ ಒಪ್ಪಂಗೊ.
ಹರೇರಾಮ
“ಗ್ರಹಣದ ಸಮಯಲ್ಲಿ ಆಹಾರ ಉ೦ಬಲಾಗ “. ಆದರೆ ಅಬಾಲ ವೃದ್ಧ ಆತುರರಿಗೆ ಇದರಲ್ಲಿ ಆಹಾರ ತೆಕ್ಕೊಂಬಲಕ್ಕು ಹೇಳಿ ನಮ್ಮ ವೈಜಯಂತಿ ಹೇಳ್ತನ್ನೇ ??! ಎಲ್ಲರು ಆತುರರ ಪಟ್ಟಿಗೆ ಸೇರದ್ರೆ ಆತು ಅಷ್ಟೇ !!
ಆತುರ ಹೇಳ್ತ ಸಂಸ್ಕೃತ ಶಬ್ದಕ್ಕೆ ರೋಗಿ ಹೇಳಿ ಅರ್ಥ, ಅಲ್ಲದ್ದೆನಾವು ತಿಳುದ ಹಾಂಗೆ ಕೊದಿಯ° ಹೇಳಿ ಅಲ್ಲ.
ಅದು ಅತುರ ಅಲ್ಲ ” ಬಾಲ ವ್ರುದ್ದಾತುರಾಣಾ೦” ಬಾಲರು, ವ್ರುದ್ದರು ಮತ್ತು ರಾಣಾ೦ =>ರೋಗಿಗೊ ಹೇಳಿ.
ಆತುರ ಎಂಬ ಶಬ್ದಕ್ಕೆ ರೋಗಿ ಹೇಳ್ತ ಅರ್ಥ ಇದ್ದೋ ಇಲ್ಲೆಯೋ ಹೇಳಿ ಮಹೇಶಣ್ಣನತ್ರೆ ಬೇಕಾರೆ ಕೇಳಿನೋಡಿ.
ಮಲೆಯಾಳ ಭಾಷೆಲಿ “ಆತುರ ಶುಶ್ರೂಷಾ ಕೇಂದ್ರಂಗೊ” ಇದ್ದು. ರೋಗಿಗಳ ಶುಶ್ರೂಷೆ ಮಾಡುವ ಜಾಗೆ ಹೇಳಿಯೇ ಅರ್ಥ ಅಲ್ಲಿ.
ಆತುರ ಹೇಳ್ತಕ್ಕೆ ಶಬ್ದಕೋಶಲ್ಲಿ ಕೊಟ್ಟ ಅರ್ಥಂಗೊ ಹೀಂಗಿದ್ದು:
ಬಳಲಿದ, ತೊಂದರೆಗೊಳಗಾದ,್ ಸೋತ, ರೋಗವುಳ್ಳ, ಉತ್ಸುಕ, ಆತುರವುಳ್ಳ, ದುರ್ಬಲ, ಅಶಕ್ತ, ರೋಗ, ಬೇನೆ.
ಆತುರಶಾಲಾ= ವೈದ್ಯಶಾಲೆ, ಆಸ್ಪತ್ರೆ. ದವಾಖಾನೆ
ಆತನ್ನೆ. ಇನ್ನು ಅಪೀಲಿಲ್ಲೆ! 😉
ಮಸರಿಂದ ಬೆಣ್ಣೆ ತೆಗದ ಹಾಂಗಾಯಿದು ಈ ಮಾತುಕತೆಗೊ.
ಸರಿಯಾದ ಉತ್ತರ ಸಿಕ್ಕೇಕಾರೆ “ಆತುರ” ಆಗಿಪ್ಪಲಾಗ, ಅಲ್ಲದೋ? 😉
Sampradayada uttama vishayangalella nenapu madiddakke, danyavadango oppannange, Sampradayalli ippa olledara tekkomba, Pottu nambikegala ella biduva..
ನಿಂಗೊ ಹೇಳಿದ್ದು ನೂರಕ್ಕೆ ನೂರು ಸರಿ ಇದ್ದು – ಹರೀಶಣ್ಣಾ.
ದೊಡ್ಡ ಮನಸ್ಸಿನ ಒಪ್ಪ ಕಂಡು ಮನಸ್ಸು ತುಂಬಿತ್ತು.
ಹರೇರಾಮ
ದೇವರ ದೀಪವ ಬಾಯಿಲಿ ಊಪಿ ನಂದುಸುಲಾಗಡ… ಆಪ್ಪಾ?
ಅಪ್ಪು ಶ್ಯಾಮಣ್ಣ, ಆನು ತಿಳುದಾ೦ಗೆ ಊಪಿ ನಂದುಸುಲಾಗ.. ಇದು ಎ೦ತ ಕೇಟರೆ, ನಮ್ಮ ಬಾಯಿ೦ದ ತಪ್ಪಿ ಆದರೂ ಎ೦ಜಿಲು ದೇಪಕ್ಕೆ ಬೀಳ್ಳಾಗ ಹೇಳಿ..ನಾವು, ಕೈಲಿಯೀ ನನುಸೆಕು.
ಮತ್ತೆ ದೀಪವ ಬೀರ್ಲೆ ಬಿಡ್ಲಾಗ ಹೇಳಿ ಹೇಳ್ತವು, ಇದು ಅಪ್ಪೊ ಹೇಳಿ ಸರೀ ಗೊ೦ತಿಲ್ಲೆ..
ಶಾಮಣ್ಣನ ಚಿಕ್ಕ ಪ್ರಶ್ಣೆಗೆ ಚುಬ್ಬಣ್ಣನ ಚೊಕ್ಕ ಉತ್ತರ.
ಎರಡುದೇ ಕೊಶೀ ಆತಿದಾ! 🙂
ಕೆಲಸಮಾಡಿಕ್ಕಿ ಬಂದ ಕುಟ್ಟಾರೆಯ ಹನಿಕ್ಕಾಲಿಲಿ ಮಡುಗಲೆ ಆಗ,
ಇರುಳು ಮನೆಲಿ ಪೀಪಿ ಊದುಲೆ ಆಗ,
ಮಾಡು ಇಲ್ಲದ್ದ ಜಾಗೆಲಿ ಮನುಗಲಾಗ(ಮೇಗೆ ಹಕ್ಕಿ ಹಾರೀರೆ ಸಣ್ಣಪ್ಪೆಹೇಳಿ ಹೇಳುಗು),
ಕತ್ತಿಯ ಮಡುಗುವಗ ಬೆನ್ನಿಂಗೆ ಬೆನ್ನು ತಾಗುಸಿ ಮಡುಗಲಾಗ,
ಹೊಸ್ತಿಲಿನ ಒಳನಿಂದೊಂಡು ಹೆರಂಗೆ ಎಂತದೂ ಕೊಡ್ಲೆ ಆಗ-ತೆಕ್ಕೊಂಬಲೂ ಆಗ,
ಬೆರಳಿನ ಕತ್ತೆರಿಯಹಾಂಗೆ ಹಿಡುದು ಪೈಸೆ ಕೊಡ್ಲೆ ತೆಕ್ಕೊಂಬಲೆ ಆಗ,
ಬಾಬೆ ಮನುಕ್ಕೊಂಡಿಪ್ಪಗ ಅದರ ದಾಂಟಿ ಹೋಪಲೆ ಆಗ ,
ಚೆಂಡಿ ವಸ್ತ್ರಸುತ್ತಿಗೊಂದಡು ಎಂತದೂ ತಿಂಬಲಾಗ,
ಹೊಸ್ತಿಲಿಲಿ ಕೂದುಗೊಂಡು ತಿಂಬಲಾಗ,
ಇದೆಲ್ಲ ಕೆಲವು ನೆಂಪಾದ್ದದು………..
ಅಜ್ಜಿಯಕ್ಕ ಹೇಳ್ತ ಸಂಗತಿಗೊಕ್ಕೆ ಒಂದೊಂದು ವೈಜ್ನಾನಿಕ ಕಾರಣಂಗೊ ಇದ್ದರುದೇ ಅದರ ಎಲ್ಲಾ ನೆಂಪು ಮಡಗಿ ಪಾಲುಸುಲೆ ಯಾರಿಂಗೆ ಪುರುಸೋತ್ತು , ತಾಳ್ಮೆ ಇದ್ದು ಒಪ್ಪಣ್ಣೋ ……………….?
“ಅಜ್ಜಿಯಕ್ಕ ಹೇಳ್ತ ಸಂಗತಿಗೊಕ್ಕೆ ಒಂದೊಂದು ವೈಜ್ನಾನಿಕ ಕಾರಣಂಗೊ ಇದ್ದು” ಹೇಳಿರೆ ಸಾಲ ಭಾವ..ಎನ್ನಂಗೆ ಗೊಂತಿಲ್ಲದ್ದವಕ್ಕೆ ಅದು ಎಂತಾಳಿಯೂ ಹೇಳೆಕ್ಕು..
ಒಪ್ಪಿಯೊಂಡವು..ನೆಂಪಿಲಿ ಪಾಲಿಸುಗು…
ಅಲ್ಲದಾ ಪ್ರಸಾದಣ್ಣಾ…
..
ಒರಗಿದವರ ಏಳ್ಸುಲೆ ಎಡಿಗು ಒರಗಿದ ಹಾಂಗೆ ಮಾಡುವವರ ಏಳ್ಸುಲೆ ಎಡಿಯನ್ನೆ ಅಣ್ಣೋ………………?
ಏಳ್ಸುವಷ್ಟು ಶಬ್ದ ಮಾಡ್ಲೆ ಎಡಿಯದ್ದವು ಹೇಳಿದವಡ…ಅವು ಒರಗಿದ್ದವೇ ಇಲ್ಲೆ ಹೇಳಿ….!!!
ಗೊರಕ್ಕೆ ಹೊಡದು ಶಬ್ದಮಾಡುವ ಅಭ್ಯಾಸ ಎನಗೆ ಇಲ್ಲೆನ್ನೆ ಭಾವಾ……………….!
ಅಣ್ಣಂದ್ರೇ,
ಚೆಂದದ ಒಪ್ಪಕ್ಕೆ ಮತ್ತೂ ಚೆಂದದ ಪ್ರತಿ ಒಪ್ಪ ಬರವ ಬದಲು ಚರ್ಚೆ ಆರೋಗ್ಯಕರವಾಗಿ ವಿಷಯದ ಮೇಲೆ ಇದ್ದರೆ, ಇದ್ದರೆ ಓದುಲೂ ಒಂದು ಖುಶಿ ಇದಾ..
ಎಂತ ಹೇಳ್ತಿ?
ಬೀರಂತಡ್ಕ ಕಿಶೋರಣ್ಣಾ..
ಚರ್ಚೆ ಆರೋಗ್ಯಕರವಾಗಿ ವಿಷಯದ ಮೇಲೇ ಆಯೆಕ್ಕೂ ಹೇಳಿ ಆನುದೆ ಹೇಳುವದು.
ನಿಂಗಳೂ ಭಾಗವಹಿಸಿ..ನಿಂಗಳ ಅಭಿಪ್ರಾಯ ಹೇಳಿ..
ನಾವೆಲ್ಲಾ ಪರಸ್ಪರ ಗೊಂತಿಲ್ಲದ್ದರ ತಿಳ್ಕೊಂಬ…
ಸತ್ಯಕ್ಕಾದರೂ ಎನಗೆ ಕೆಲವೆಲ್ಲಾ ಎಂತ ಹೇಳಿಯೇ ಅರ್ಥ ಆವುತ್ತಿಲ್ಲೆ..
ಎನ್ನಹಾಂಗೇ ಇಪ್ಪವು ತುಂಬಾ ಜನ ಇದರೆಲ್ಲಾ ಓದುಗು..ಅವಕ್ಕುದೇ ಪ್ರಯೋಜನ ಆವುತ್ತನ್ನೇ..
ಬರವಲೆ ಉದಾಸಿನ ಮಾಡ್ತವು..ಆದರೆ ಓದುವವು ತುಂಬಾ ಜನ ಇದ್ದವು.ಅದು ನಿಂಗೊಗೂ ಗೊಂತಿದ್ದನ್ನೇ…
ಗೊಂತಿಲ್ಲದ್ದದರ..ಗೊಂತಿಲ್ಲೆ ಹೇಳ್ಲೆ ಎನಗೆ ಸಂಕೋಚ ಇಲ್ಲೆ…ಆದರೆ
ತಿಳ್ಕೊಳ್ಳೆಕ್ಕೂ..ಹೇಳುವ ಆಸಕ್ತಿ ಇದ್ದು..
ಅದಕ್ಕಾಗಿ ಇದರೆಲ್ಲ ಬರದ್ದದು..
ಬೇರೆಂತ ಉದ್ದೇಶ ಮಡಿಕ್ಕೊಂಡೂ ಅಲ್ಲ..
ಅದು ಸರಿ ಅಣ್ಣಾ.. ಒಪ್ಪಿದೆಃ)
ಪ್ರಸಾದಣ್ಣಾ..,
ನಿಂಗೊ ಗೊರಕ್ಕೆ ಹೊಡದು ಶಬ್ದ ಮಾಡ್ತೀ ಹೇಳಿ ಆರು ಹೇಳಿದ್ದು..??
ಅವರ ಎನ್ನ ಎದುರು ನಿಲ್ಲಿಸಿ ನೊಡುವ…ಆನು ಹೇಳ್ತೆ…
ಎನಗೆ ಗೊಂತಿದ್ದಪ್ಪಾ..ಆಚಕರೆ ಅಪ್ಪಚ್ಚಿಯಹಾಂಗೆ..ಅಭ್ಯಾಸ..
ನೀಟಂಪ ಮನುಗಿ ಒರಗಿದರೆ…ಉಸುಲು ಮೇಲೆಕೆಳ ಹೋಪದೇ ಗೊಂತಾಗ….
ಹಾಂಗಿಪ್ಪ ಒರಕ್ಕು ಅಲ್ಲದಾ..??
ಸುಮ್ಮನೆ ಹೇಳ್ಲಾಗ…..
hit and run journalism ….(comment).. ಹೇಳಿದರೆ ಎಂತ..??
ಆರಿಂಗಾರೂ ಗೊಂತಿದ್ದಾ…??
ಎನಗೆ ಆರಿಂಗುದೆ ತಾಂಟುವ ಮನಸ್ಸು ಇಲ್ಲೆ ಹಾಂಗಾದ ಕಾರಣ ಸುಮ್ಮನೆ ಕೂದ್ದದು ಅಣ್ಣೋ…….
……ಕಾರಣ ಕೇಳಿದ್ದಕ್ಕೆ….
“ಒರಗಿದವರ ಏಳ್ಸುಲೆ ಎಡಿಗು ಒರಗಿದ ಹಾಂಗೆ ಮಾಡುವವರ ಏಳ್ಸುಲೆ ಎಡಿಯನ್ನೆ ಅಣ್ಣೋ………………?”
ಹೇಳಿ ಬರದ್ದದು ನಿಂಗಳೇ ಅಲ್ಲಾದಾ..ಅಣ್ಣೋ…..?
ಉತ್ತರ ಬರವಲೆ ಮನಸ್ಸಿಲ್ಲದ್ರೆ..ಹಾಂಗೇ ಹೇಳ್ಲಾವುತ್ತೀತು.
(ಇಂಥಹ ಕಮೆಂಟ್ ಗೊಕ್ಕೆ ಆನು ಉತ್ತರ ಕೊಡ್ತಿಲ್ಲೆ ಹೇಳಿ..)
..ಅದಕ್ಕೇ ಆನು ಹೇಳಿದ್ದು..”ಎಡಿಯದ್ದವು ಹೇಳಿದವಡ…ಅವು ಒರಗಿದ್ದವೇ ಇಲ್ಲೆ ಹೇಳಿ…”
ಅಂಬಗ ಹೀಂಗೆ..ಬರವದಾ…..??
“ಗೊರಕ್ಕೆ ಹೊಡದು ಶಬ್ದಮಾಡುವ ಅಭ್ಯಾಸ ಎನಗೆ ಇಲ್ಲೆನ್ನೆ ಭಾವಾ……………….!”.ಹೇಳಿ ಬರೆಯೆಕ್ಕಿತ್ತಾ…??
ಮತ್ತುದೆ ಬರದವು ಸುಮ್ಮನೆ ಕೂದಪ್ಪಗ..ಆನು ಬೇರೆಂತ ಹೇಳೆಕ್ಕಾತು….??
ಅದಕ್ಕೆ ಕೇಳಿದ್ದು hit and run journalism …ಆರಿಂಗಾರೂ ಗೊಂತಿದ್ದಾ…?..ಹೇಳಿ.
ಆನು ತಾಂಟುಲೆ ಕೇಳಿದ್ದಲ್ಲ..
ಈ ವಿಷಯಂಗೊ ಚರ್ಚೆ ಮಾಡೀ..ಮಾಡಿದರೆ ಒಳ್ಳೆದನ್ನೇ…ಹೇಳಿ ..ಹೇಳಿದ್ದು…!
ಆರುದೇ ಮಾತಾಡ್ಲೇ ರೆಡಿ ಇಲ್ಲದ್ರೆ…ಇದರ ಎಲ್ಲ ಮೂಢ ನಂಬಿಕೆಯ ಸಂತೆ..ಹೇಳಿಯೇ ಹೇಳೆಡದಾ..??
ಮೂಲ ನಂಬಿಕೆಗೊ ಇದರೊಟ್ಟಿಂಗೆ ಇದ್ದು..ಹೇಳಿ ಹೇಳುವ “ಶಕ್ತಿ”..ನಮ್ಮಲ್ಲಿ ಆರಿಂಗೂ ಇಲ್ಲೆಯಾ…???
ಎಂತಕೆ ಆರೊಗ್ಯಕರ ಚರ್ಚೆಗೆ ಆರಿಂಗೂ ಮನಸ್ಸಿಲ್ಲೆ…???
ಎನಗೆ ಅರ್ಥ ಆವುತ್ತಿಲ್ಲೆ.!
ವೆಂಕಟಣ್ಣಾ, ಪ್ರಸಾದಣ್ಣಾ, ಬೀರಂತಡ್ಕ ಕಿಶೋರಣ್ಣ,…
ಒಪ್ಪ ಕೊಟ್ಟುಗೊಂಡು ವಿಮರ್ಶೆ, ಚರ್ಚೆ ಮಾಡಿದ್ದು ಕಂಡು ಕೊಶಿ ಆತು.
ಒಂದೊಳ್ಳೆ ವಿಚಾರದ ಬಗೆಗೆ ಇಷ್ಟು ಚೆಂದಲ್ಲಿ ವಿಚಾರ ಮಂಥನ ಆವುತ್ತಾ ಇಪ್ಪದು ಸಂತೋಷವೇ.
~
ಕ್ರಮಂಗೊ ಒಳ್ಳೆದೋ, ಕೆಟ್ಟದೋ – ಈಗಾಣ ಕಾಲಘಟ್ಟಲ್ಲಿ ಚಿಂತನೆ ಮಾಡಿರೆ ಬೇರೆಯೇ ಉತ್ತರ ಸಿಕ್ಕುಗು.
ಅಜ್ಜಂದ್ರ ಕಾಲಘಟ್ಟಲ್ಲಿ ಯೋಚನೆ ಮಾಡಿದ್ದರೆ ಬೇರೆಯೇ ಉತ್ತರ ಸಿಕ್ಕುಗು.
ಅದೆರಡೂ ಒಂದೇ ಆಗಿರೇಕು ಹೇಳಿ ಏನಿಲ್ಲೆ; ಅಲ್ಲದೋ?
ಅಂಬಗಾಣ ಜೀವನಕ್ಕೆ ಯೇವದು ಸೂಕ್ತ ಹೇಳಿ ಕಂಡತ್ತೋ – ಅದರ ’ಇದಮಿತ್ಥಂ’ ಹೇಳಿ ನಿಯಮಂಗೊ ಆಗಿ ಮಾಡಿದವು.
ಈಗಂಗೆ ಅದು ಮೂಲನಂಬಿಕೆಗೊ.
ಅನುಸರುಸುದು, ಬಿಡುದು – ವೆಗ್ತಿಗೆ ಬಿಟ್ಟ ವಿಚಾರ;
ಮಾಡ್ಳೇ ಬೇಕು – ಹೇಳುಲೆ ಇದು ಮಾಪ್ಳೆಗಳ ಧರ್ಮ ಅಲ್ಲನ್ನೇ!
ಕೆಲವೆಲ್ಲ ಕ್ರಮಂಗೊ ಇಂದಿಂಗೂ ‘ಸತ್ಯ’ ಆಗಿಕ್ಕು. ಕೆಲವೆಲ್ಲ ‘ನಂಬಿಕೆ’ಗೊ ಆಗಿಕ್ಕು.
ಅಮ್ಮ ಹೇಳಿರೆ ಸತ್ಯ, ಅಪ್ಪ ಹೇಳಿರೆ ನಂಬಿಕೆ.
ಚೆಂದದ ಬದುಕ್ಕಿಂಗೆ ಎರಡುದೇ ಬೇಕು.
ಬದಲಾದ ಕಾಲಘಟ್ಟಲ್ಲಿ ಜೀವನ ಮಾಡ್ತ ನಾವು, ಮದಲಾಣ ದಾರಿಯ ನೆಂಪುಮಡಗಿಂಡು ಮುಂದಂಗೆ ನೆಡೆತ್ತದು ಒಳ್ಳೆದು – ಹೇಳಿ ಬೈಲಿನೋರ ಆಶಯ!
ಹಾಂಗಾಗಿ, ಹಳೆಕಾಲದ ಕ್ರಮಂಗಳ ಬೈಲಿಲಿ ಪಟ್ಟಿಮಾಡಿಕ್ಕುವೊ° – ಹೇಳಿ ಹೆರಟದಿದಾ.
ಬೇಕಾದಷ್ಟೇ ಅನುಸರುಸುವೊ°, ಅಲ್ಲದ್ದರ ಬಿಡುವೊ°.
ಹೇಮಾರ್ಸಿ ಮಡಗಿದ ಎಲ್ಲವನ್ನೂ ಉಪಯೋಗ ಮಾಡಿಯೇ ಕಳಿಯೇಕು ಹೇಳಿ ಏನಿಲ್ಲೆ.
ಅಲ್ಲದೋ? 🙂
ಒಪ್ಪ ಕೊಟ್ಟ ಎಲ್ಲೋರಿಂಗೂ ಒಪ್ಪಂಗೊ!
ಹಳೆ ನಂಬಿಕೆ, ಆಚರಣೆ, ಹೇಳಿಕೆ, ಎಂತೆಲ್ಲಾ ಇತ್ತಿದ್ದು, ಈಗ ಎಷ್ಟು ಉಳುದ್ದು ಹೇಳಿ ಒಂದರಿ ಅವಲೋಕನ ಮಾಡುವುದೇ ಈ ಶುದ್ದಿಯ ಉದ್ದೇಶ. ಬೈಲಿನೋರು ಇದರೆಲ್ಲ ಏಕೆ ಆಚರುಸುತ್ತವಿಲ್ಲೇಳಿ ಎಲ್ಲೂ ಪ್ರಶ್ನೆ ಮಾಡಿದ್ದಿಲ್ಲೆ ಅಲ್ಲಾ ಇದರೆಲ್ಲಾ ಅನುಸರುಸೆಕ್ಕು ಹೇಳಿ ಗುದ್ದಿ ಕಟ್ಟಿದ್ದಿಲ್ಲೆ ಆರಿಂಗೂ. ಯಾವುದೇ ನಿಷೇಧ, ಕಾರಣ ಇಲ್ಲದ್ದೇ ಉಂಟಪ್ಪಲೆ ಇಲ್ಲೆನ್ನೇ. ಅಂದಿಂಗೆ ಅದು ಬೇಕಿತ್ತು – ನಡವಳಿಗಗೆ ತಂದವು. ಅದು ಎಂತಕೆ ಬೇಕಾಗಿ ಹೇಳಿ ನಾವು ತಿಳಿವ ಕಾರ್ಯಕ್ಕೆ ಇಳುದ್ದಿಲ್ಲೆ ಸರಿಯಾದ ಹೆಜ್ಜೆಲಿ. ಗೊಂತಿಲ್ಲದ್ದರ ಹಾಂಗೆ ಬಿಟ್ಟು ಅಲ್ಲೇ ಹಾಂಗೇ ಉಳುದತ್ತು. ಬೇಕಾದವ ಸರಿಯಾದ ಹೆಜ್ಜೆಲಿ ಈಗ ಅದರ ರಿಸರ್ಚ್ ಮಾಡಿ ಡಾಕುಟ್ರೆಟು ಮಾಡ್ಳಾಗ ಹೇಳಿ ಆರೂ ನಿಷೇಧ ಹಾಕಿದ್ದವಿಲ್ಲೆ. ರಿಸರ್ಚ್ ಮಾಡಿರೆ ಉತ್ತರ ಇಲ್ಲದ್ದೆ ಇಕ್ಕೋ?! ನಮ್ಮ ಕಾಲ ಬುಡಲ್ಲಿ ನವಗೆ ಉತ್ತರ ಸಿಕ್ಕಿದ್ದಿಲ್ಲೆ ಹೇಳ್ತ ಮಾತ್ರಕ್ಕೆ ಮೂಢ ನಂಬಿಕೆ ಹೇಳುವದು ಬಾಲಿಶ. ಪು.ಪುಟ್ಟಕ್ಕ ಹೇಳಿದಾಂಗೆ ಇದೆಲ್ಲ ಮೂಢನಂಬಿಕೆಗೊ ಅಲ್ಲ; ಇವೆಲ್ಲ ಮೂಲ ನಂಬಿಕೆಗೊ ಹೇಳಿ ಹೇಳುವದೇ ಸೂಕ್ತ.
ಹೆಚ್ಚಿನವು ಇಲ್ಲಿ ಹೇಳಿದ್ದು ಹೀಂಗೆಲ್ಲ ಇತ್ತಿದ್ದು ಎಂತಕೆ ಹೇಳಿ ಗೊಂತಿಲ್ಲೆ. ಗೊಂತಿದ್ದವಿದ್ದರೆ ತಿಳಿಸಿಕ್ಕಿ ಹೇಳ್ವ ನೋಟಲ್ಲಿ.
ಒಪ್ಪಣ್ಣನ ಕೊನೆ ಸಾಲುಗೊ – ” ….ಬದಲಾದ ಕಾಲಘಟ್ಟಲ್ಲಿ …….. ಅಲ್ಲದ್ದರ ಬಿಡುವೋ” ಹೇಳ್ವ ಮಾತಿಂಗೆ ಎನ್ನ ಸ್ವರವನ್ನೂ ಸೇರ್ಸುತ್ತೆ.
ಒಪ್ಪಣ್ನ…
ಚೆಂದಕ್ಕೆ… ಆಲೋಚನೆ ಮಾಡಿ ಉತ್ತರ ಕೊಟ್ಟಿದಿ .
ನಿಜವಾಗಿಯೂ ತುಂಬ ಸಂತೋಷ ಆತು..
ಆಯೆಕ್ಕಾದ್ದದುದೇ ಹೀಂಗೇ…
ಆದರೆ ನಿಂಗಳ ಹಾಂಗೇ ಮುಕ್ತ ಮನಸ್ಸಿನವರ ಹಾಂಗೆ ಉಳಿದವರ ಕಾಣುತ್ತಿಲ್ಲೆ..
ಚೆನ್ನೈ ಭಾವ,ನೀರ್ಕಜೆ ಮಹೇಶಣ್ಣ,ಶರ್ಮಪ್ಪಚ್ಚಿ,ಮಂಗ್ಳೂರ್ ಮಾಣಿ,ಇತ್ಯಾದಿ, ಕೆಲವು ವ್ಯಕ್ತಿಗೊ ಬಿಟ್ಟರೆ ಉಳಿದವು ಯೋಚನೆ ಮಾಡುವ ಸ್ತರವೇ ಬೇರೆಯೋ ಹೇಳಿ ಎನಗೆ ಅನಿಸಿದ್ದದು..ತಪ್ಪಲ್ಲನ್ನೇ..
ಈ ಲೇಖನವ ಓದಿದವೆಲ್ಲ..ಅವರವರ ಅಭಿಪ್ರಾಯ ಬರದರೆ ಎಷ್ಟು ಒಳ್ಳೆದಲ್ಲದಾ..
ಇಷ್ಟು ಚರ್ಚೆ ಆದ್ದದು ಮಾತ್ರ ತುಂಬಾ ತುಂಬಾ ಸಂತೋಷ…
ಆರುದೇ ಬೇಜಾರ ಮಾಡೆಡಿ..ಪ್ರೀತಿ ಇರಲಿ..
ಪ್ರಸಾದಣ್ಣಾ,
ನಿಷೇಧಂಗಳ ಪಟ್ಟಿಗೆ ಕೆಲವು ಸೇರುಸಿದ್ದು ಕಂಡು ತುಂಬಾ ಕೊಶಿ ಆತು.
ಪಟ್ಟಿ ಒಬ್ಬರಿಂದಲೇ ಪೂರ್ತಿ ಮಾಡಿಕ್ಕಲೆ ಎಡಿಯ, ಇನ್ನೂ ನೆಂಪಾದ್ದರ ಕೊಡಿ. ಮುಂದಕ್ಕೊಂದು ಅಗಾಧ ಸಂಗ್ರಹ ಮಾಡುವೊ. ಅಲ್ಲದ?
ಪಟ್ಟಿ ನೋಡುವಗಳೇ, ಯೇವದು ಇಂದಿಂಗೂ ಬೇಕಾದ್ದು- ಯೇವದು ಇಂದಿಂಗೆ ಬೇಡದ್ದು – ಹೇಳಿ ಅವಕ್ಕವಕ್ಕೇ ಅರಡಿಯೇಕು. ಹಾಂಗಿರ್ತ ದೊಡ್ಡ ಭಾಂಡಾಗಾರವೇ ಮಾಡುವೊ. ಅಲ್ಲದೋ?
ಯುಕ್ತಿಯುಕ್ತಂ ವಚೋ ಗ್ರಾಹ್ಯಂ ಬಾಲಾದಪಿ ಶುಕಾದಪಿ |
ಅಯುಕ್ತಮಪಿ ನ ಗ್ರಾಹ್ಯಂ ಸಾಕ್ಷಾದಪಿ ಬೃಹಸ್ಪತೇಃ ||..ಅಲ್ಲದಾ…
“ಯುಕ್ತಾ ಯುಕ್ತಿ……ಇದೆಲ್ಲಾ ವಿಚಾರ ಮಾಡಿದವರಿಗೆ ತಾನೇ..”
ಹೇಳಿ (ಒಂದು ಧೀರ್ಘ ಶ್ವಾಸ ಬಿಟ್ಟು ) ಶೇಣಿ ಅಜ್ಜ ಇದ್ದರೆ… ತಾಳ ಮದ್ದಳೆಲಿ ಹೇಳುತ್ತಿತ್ತವು…
ವೆಂಕಟಣ್ಣಾ..
ಶೇಣಿಯಷ್ಟು ಅಲ್ಲದ್ದರೂ, ಸುಮಾರು ಅರ್ಥದಾರಿಗೊ ಇದ್ದವಿದಾ, ಬೈಲಿಲಿ!
ಅವುದೇ ಒಂದು ದೀರ್ಘ ಶ್ವಾಸ ಬಿಟ್ಟು ಹೇಳುಗೋ ಏನೋ. ಉಮ್ಮಪ್ಪ! 🙂
ಮಾರ್ಗೇ ಮಾರ್ಗೇ ನಿರ್ಮಲಂ ಬ್ರಹ್ಮವೃಂದಂ
ವೃಂದೇ ವೃಂದೇ ತತ್ತ್ವಚಿಂತಾನುವಾದ:।
ವಾದೇ ವಾದೇ ಜಾಯತೇ ತತ್ತ್ವಬೋಧೋ
ಬೋಧೇ ಬೋಧೇ ಭಾಸತೇ ಚಂದ್ರಚೂಡ:॥
ಪ್ರತಿ ದಾರಿಲೂ ನಿರ್ಮಲಚಿತ್ತರಾದ ಬ್ರಾಹ್ಮಣರ ಗುಂಪು ಇರ್ತು, ಅವು ಅವರವರೊಳವೇ ತಾತ್ತ್ವಿಕ ಚರ್ಚೆ ಮಾಡ್ಯೋಂಡು ಇರ್ತವು. ಅವರ ವಾದಂದ ತಾತ್ತ್ವಿಕ ವಿಷಯ ಸ್ಪಷ್ಟ ಆವ್ತು. ತತ್ತ್ವಾರ್ಥ ಬೋಧೆಯಪ್ಪಗ ಶಿವನ ದರ್ಶನ ಆವುತ್ತು ಹೇಳಿ ಈ ಶ್ಲೋಕದ ಅರ್ಥ
ಶಿವನ ದರ್ಶನ ಆಯೆಕ್ಕಾದವಕ್ಕೆ ಮಾತ್ರನ್ನೇ….
ಈ ವಿಷಯ ಬೇಕಪ್ಪದು..
ತುಂಬಾ ತುಂಬಾ ಒಳ್ಳೆ ಶ್ಲೋಕ ಕೊಟ್ಟದಕ್ಕೆ ಸಂತೋಷ.
ಈ ಸುಭಾಷಿತದ ಒಂದು ಪಾದ ಮಾಂತ್ರ ಕೇಳಿ ಗೊಂತಿತ್ತಷ್ಟೇ. ಪೂರ್ತಿ ಕೊಟ್ಟದಕ್ಕೆ ವಂದನೆಗೊ.
ತತ್ವ ಚಿಂತಾನುವಾದ ಮಾಡಿಗೊಂಡ ಬ್ರಹ್ಮವೃಂದಲ್ಲಿ ಒಬ್ಬರಾಗಿ, ಜ್ಞಾನ ಹೇಳ್ತ ಶಿವನ ಕಂಡುಗೊಂಡ ಬೈಲಿನೋರ ಪೈಕಿ ಒಬ್ಬರಾದ ವೆಂಕಟಣ್ಣಂಗೆ ವಂದನೆಗೊ.
ಹರೇರಾಮ..
ಪಟ್ಟಿ ಮಾಡಿ ಲೇಖನ ಬರದ್ದದು ಚೆಂದ ಆಯಿದು…
ಆದರೆ ಎನಗೆ ಕಾಂಬದು…
ಹೀಂಗೆ ಬರದರೆ ಮಾತ್ರ ಸಾಲ..ಹಿಂದಾಣವವು ಹೀಂಗೆಲ್ಲಾ ಹೇಳಿಯೋಂಡು ಇತ್ತವು..
ಇದರಲ್ಲಿ ನವಗೆ ಇಂದು ಬೇಕಾದ್ದು ಯಾವುದಾದರೂ ಇದ್ದೋ…ಹೇಳಿ ಅಭಿಪ್ರಾಯ ಕೇಳಿ ಓದುವ ಬಂಧುಗಳ ಚಿಂತನೆಗೆ ಹಚ್ಚುವ ಕೆಲಸ ಮಾಡಿದರೆ ಒಳ್ಳೆದು ಅಲ್ಲದಾ..ಹೇಳಿ..
ಮತ್ತೆ ಮತ್ತೆ ಕೆಲವು ಮೂಢನಂಬಿಕೆಗಳ ಪುನ: ಪುನ: ನೆನಪುಮಾಡುವದರಿಂದ…
ಅದರಿಂದ ಹೆರ ಬಪ್ಪಲೆ ಅನುಕೂಲ ಆಯೆಕ್ಕು ವಿನಾ,ಪುನಹ ಅಜ್ಜನೆಟ್ಟ ಆಲದ ಮರದ ಬುಡಕ್ಕೆ ಹೋಪಹಾಂಗೆ ಆದರೆ..
ನಮ್ಮ ವಿಚಾರ ಶಕ್ತಿಯ…ಅಡವು ಮಡಿಗಿದ ಹಾಂಗೆ ಆಗದಾ..
ಇನ್ನು ಕೆಲವು ಜನರ ಕ್ರಮ ಇದ್ದು..ಆನು ಆಧುನಿಕ ವಿದ್ಯಾಭ್ಯಾಸ ಮಾಡಿದ್ದೆ..ಆದರೂ ಹಳೇ ಅಜ್ಜಂದಿರ/ಅಜ್ಜಿಯಂದಿರ
ಕ್ರಮಂಗಳ ಬಿಟ್ಟಿದಿಲ್ಲೆ ಹೇಳಿ ತೋರ್ಸಿಕೊಂಬದು…(ಮನಗೆ ಆರಾದರೂ ನೆಂಟರೋ,ಮತ್ತೊಬ್ಬರೋ ಬಂದಿಪ್ಪಗ ಮಾತ್ರ)
ಹೀಂಗಿಪ್ಪ ಸಂಧರ್ಭಲ್ಲಿ ಚರ್ಚೆಗೊ..ವಾದಂಗೋ..ಅಭಿಪ್ರಾಯ ಮಂಡನೆ ಆದಷ್ಟು ಒಳ್ಳೆದು…..
ಎಂತ ಹೇಳ್ತಿ..??
.
ಅಲ್ಲ ಅಣ್ಣೋ, ಹಿರಿಯೋರು ಹೇಳ್ತದು ಅವರ ಅನುಭವಂಗಳ ಅಲ್ಲದೋ ? ಆನು ವಿದ್ಯಾಭ್ಯಾಸ ಮಾಡಿದ್ದೆ ಹಾಂಗಾಗಿ ಅವರ ಅನುಭವಂಗೊ ಎಲ್ಲಾ ಮೂಢ ನಂಬಿಕೆ ಹೇಳಿ ಹೇಳುದಾದರೆ ಅವು ಮಾಡ್ಲಾಗ ಹೇಳಿದ್ದದರನ್ನೆಮಾಡಿನೋಡಿ ಬೇಗನೆ ಗೊಂತಕ್ಕು ಥಿಯರಿ ಎಂತದು ಪ್ರಾಕ್ಟಿಕಲ್ ಎಂತದು ಹೇಳಿ.
ಹೇಳಿದಹಾಂಗೆ ನಿಂಗೊ ದೇವರಿಂಗೆ ದೀಪಹೊತ್ತುಸುವವೋ ಹೊತ್ತುಸದ್ದವೋ ಹೇಳಿ ಗೊಂತಾತಿಲ್ಲೆನ್ನೆ…………..?
ದೀಪ ಹೊತ್ತುಸುವುದಕ್ಕೂ..ಇಲ್ಲಿ ಬರವದಕ್ಕೂ ಏನಾದರೂ ಸಂಬಂದ ಇದ್ದಾ..??
(ಎನಗೆ ಗೊಂತಿಲ್ಲೆ..ಆನು ಇಲ್ಲಿಗೆ..ನಿಂಗಳ ಕೂಟಕ್ಕೆ ಹೊಸಬ..)
ಹಿರಿಯವು ಹೇಳಿದ್ದದ್ದರ ಮಾಡ್ಲಾಗ ಹೇಳಿ ಹೇಳಿ ಆನು ಎಲ್ಲಿ ಬರದ್ದೆ ಅಣ್ನಾ..??
ಹಿರಿಯವು ಹೇಳಿದ್ದವು..ಅದು ಅವರ ಅನುಬವ..ಹೇಳಿಯೋಂಡು..
ನಾವು ವಿಚಾರ ಮಾಡಿದರೆ ತಪ್ಪಾ…ಅದೆಲ್ಲಾ ಮೂಢ ನಂಬಿಕೆ ಹೇಳಿ ಆನು ಎಲ್ಲಿಯೂ ಹೇಳಿದ್ದಿಲ್ಲೆನ್ನೇ..ಅದರ ಎಡೆಲಿ ಮೂಢ ನಂಬಿಕೆಗಳೇ ಇಲ್ಲೆ ಹೇಳುವವು..ಕಾರಣವನ್ನೂ ವಿವರಿಸಲಕ್ಕನ್ನೇ…
ಹಿರಿಯವು ಹೇಳಿದ್ದದು ಅವ್ರ ಅನುಭವ….ಸರಿ.ಹಾಂಗದರೆ
ನಾವುದೇ ಹಿರಿಯವು ಅಪ್ಪದು ಯಾವಾಗ..??ಅಲ್ಲ ಅಪ್ಪಲೇ ಇಲ್ಲೆಯಾ..?
ಜೀವನಾನುಭವ ಹೇಳುವದು ಎಲ್ಲೋರಿಂಗೂ ಆವುತ್ತನ್ನೇ..
ಜೀವನಾನುಭವ ಹೇಳುವದು ಒಂದು ಇದ್ದಾ..??
ಹೇಳಿಯೂ ಕೆಲವರಿಂಗೆ ಅನಿಸುತ್ತಿಲ್ಲೆಯಾ…..ಹೇಳಿ ಕಾಣ್ತು ಒಂದೋಂದರಿ……..
ವಿದ್ಯಾಭ್ಯಾಸ..ಹೇಳಿದರೆ ಎಂತದು..??
ಥಿಯರಿಯ ಹಾಂಗೆ ಪ್ರಾಕ್ಟಿಕಲ್ ಇರ್ತಿಲ್ಲೆಯಾ…ಅಥವಾ ಪ್ರಾಕ್ಟಿಕಲ್ ಗೂ ಥಿಯರಿಗೂ ಸಂಬಂದವೇ ಇರ್ತಿಲ್ಲೆಯಾ…(ಸಂಬಂದ ಇಲ್ಲದ್ರೆ )ಹಾಂಗಾರೆ ಅದರ..’ಥಿಯರಿ” ಹೇಳಿ ಹೇಳ್ತವಾ…?? ಹೀಂಗೆಲ್ಲಾ ಕಾಂಬದು ಎಂತಕೋ….ಏನೋ…!!!
hit and run journalism ….(comment).. ಹೇಳಿದರೆ ಎಂತ..??
ಒಪ್ಪಣ್ಣಂಗೆ ಇಂಗ್ಳೀಶು ಅಷ್ಟಾಗಿ ಅರಡಿಯ.
ಆದರೂ, ತಮಾಶೆಗೆ ಕೆಲವು ಸರ್ತಿ ಮಾತಾಡ್ಳಿದ್ದು. 😉
{hit and run journalism}
ನಿಜವಾಗಿಯೂ, “ಬಡುದು ಓಡ್ತ ಕ್ರಮ” ನಮ್ಮ ಬೈಲಿಲಿ ಆರಿಂಗೂ ಇಲ್ಲೆ, ಆದರೆ ಕೊಶಾಲಿಂಗೆ ಹೇಳ್ತರೆ:
ಅಕ್ಕಿಯ ಕಡದ ನಮುನೆ ಲಾಯಿಕಕ್ಕೆ ಒಂದು ವಿಶಯ ಕಡದು, ಅರದು, ವಿಮರ್ಶೆಮಾಡಿರೆ “ಹಿಟ್ಟು” ಸಿಕ್ಕುತ್ತಲ್ಲದೋ?
ನಮ್ಮ ಬೈಲಿಂಗಪ್ಪಗ ಇದುವೇ ಹಿಟ್ಟು ಪತ್ರಿಕೋದ್ಯಮ!! 🙂
ಎಂತ ಹೇಳ್ತಿ?
ವೆಂಕಟಣ್ಣಾ,
ಮೂಢವೋ, ಮೂಲವೋ – ಸುರುವಿಂಗೆ ನಮ್ಮ ಹೆರಿಯೋರ ನಂಬಿಕೆಗಳ ಒಟ್ಟುಸೇರುಸಿ ಒಂದು ಪಟ್ಟಿಮಾಡುವ ಕೆಲಸ ಮಾಡುವೊ. ಅಲ್ಲದೋ?
ಅಲ್ಲದ್ದರೆ, ಇಂತದ್ದೆಲ್ಲ ನಮ್ಮ ಹೆರಿಯೋರ ನಂಬಿಕೆಆಗಿದ್ದತ್ತು – ಹೇಳ್ತದುದೇ ಮರಗು.
ಇತಿಹಾಸ ಅರಡಿಯದ್ದವಂಗೆ ಭವಿಷ್ಯವೂ ಅರಡಿಯ – ಹೇಳುಗು ಮಾಷ್ಟ್ರುಮಾವ.
ಹಾಂಗಾಗಿ,
ಅಜ್ಜ ನೆಟ್ಟ ಆಲದ ಮರ ಅಪ್ಪಂಗೆ ಗೊಂತಾಗಿ, ಅಪ್ಪ ಮಗಂಗೆ ಹೇಳಿರೆಮಾಂತ್ರಾ – “ಅಪ್ಪ ನೆಟ್ಟ ಆಲದ ಮರ” ಗಾದೆಯ ಸನ್ನಿವೇಶವ ದೂರಮಾಡ್ಳಕ್ಕು. ಅಲ್ಲದೋ?
ಇಂತಾದ್ದು ನಮ್ಮ ನಂಬಿಕೆಗೊ – ಹೇಳಿಗೊಂಡು ಮುಂದಾಣೋರಿಂಗ ಹೇಳಿರೆ, ಆಲದ ಮರ, ಗಂಧದಮರ ನೋಡಿ – ಬೇಕಾದ್ದರ ಉಪಯೋಗ ಮಾಡ್ತದು ಅವರ ವಿವೇಚನೆಗೆ ಬಿಡ್ತದು. ಅಲ್ಲದೋ? 🙂
ಒಪ್ಪ ಒಪ್ಪಂಗೊಕ್ಕೆ ಒಪ್ಪಂಗೊ.
ಒಪ್ಪಣ್ಣಾ..
{ಮಳೆ ಬಿರುದತ್ತೋ ನಿಂಗಳ ಹೊಡೆಲಿ? ನವಗಂತೂ ತಲೆ ಹೆರ ಹಾಕಲೆ ಎಡೆ ಇಲ್ಲೆ; ಹಾಂಗುದೇ ಮಳೆ!…} 🙁 ಮಳೆ ಬಿರಿವದು ಬಿಟ್ಟು ಮಳೆ ನೋಡ್ಲೆ ಆಶೆ ಆವ್ತು… ಬೆಶಿಲ್ಲಿ ಹೆರ ಹೋದಿಕ್ಕಲೆ ನಿವೃತ್ತಿ ಇಲ್ಲೆ. ಇಲ್ಲಿ ಹೆರ ಬೆಶಿಲಿಲ್ಲೇ ಕೆಲಸ ಮಾಡ್ತವಕ್ಕೆ ಈಗ ಎರಡು ತಿ೦ಗಳು ೧೨ ರಿ೦ದ ೩ ರ ವರೇ೦ಗೆ ಬಿಡುವು..
ಒಲೆಗೆ ನೀರು ಹಾಕಿ ನ೦ದುಸಲಾಗ ಹೇಳುಗು..
ಹಿಡಿಸೂಡಿಯ ನೆಲಕ್ಕಲ್ಲಿ ಅಡ್ಡ ಹಾಕಲಾಗ ಹೇಳುಗು ಅಪ್ಪ ಇಪ್ಪಗ..
ಪುಸ್ತಕ ಅ೦ತೆ ಬಿಡುಸಿ ಮಡುಗಿಕ್ಕಿ ಹೋದರೆ ಹಲ್ಲಿ ಓದುಗು ಹೇಳಿ ಆನು ಕೇಳಿತ್ತಿದ್ದು.. ಅದು ಕಲಿ ಓದುಗು ಹೇಳಿ ಈಗ ಗೊ೦ತಾದ್ದಿದಾ..
ಪುನಃ ಒಳ್ಳೇ ಶುದ್ದಿ ಬರದ ಒಪ್ಪಣ್ಣ೦ಗೆ ಒಪ್ಪ೦ಗೊ..
ಪೆರುವದಣ್ಣಾ, ಬೆಶಿಲೂರಿಲಿ ಕೂದುಗೊಂಡು ಮಳೆಯ ದಾರಿನೋಡ್ತದರ ಕಂಡು ಮನಸ್ಸಿಂಗೆ ತಟ್ಟಿತ್ತು.
ಬೌಶ್ಷ ನಿಂಗಳ ಪಟವುದೇ ಬೆಶಿಲಿಲಿಪ್ಪಗಳೇ ತೆಗದ್ದೋ ತೋರ್ತು – ಬಯಂಕರ ಬೆಳಿ ಕಾಣ್ತು ನಿಂಗಳ, ಅಲ್ಲದೋ? 🙂
ನಿಷೇಧಶುದ್ದಿಗೆ ಮಾತು ಸೇರುಸಿಗೊಂಡು ಹೋದ್ದು ತುಂಬಾ ಕೊಶಿ ಆತು.
ಒಳ್ಳೆ ಸಂಗ್ರಹಂಗೊ.
ಇನ್ನೂ ಇದ್ದೋ? 🙂
ದೇವರ ದಯ೦ದ ಎನಗೆ ಬೆಶಿಲಿಲ್ಲಿ ಹೊರಿತ್ತ ಕೆಲಸ ಇಲ್ಲೆ. ಆದ ಕಾರಣ ಹಾ೦ಗೆ ಇಪ್ಪದು ಒಪ್ಪಣ್ಣಾ.. ಬೆಶಿಲಿಲ್ಲಿ ಹೋದರೆ ಎರಡೇ ದಿನ ಸಾಕು ಕರಿ ಕರಿ ಅಪ್ಪಲೆ. 😉
[ಕೂದುಗೊಂಡು ಪುರುಸೊತ್ತಾದರೆ ಶುದ್ದಿ ಹೇಳುದು, ಅಲ್ಲದೋ?] – ಅದೆಡಿಯಾ., ಪುರುಸೊತ್ತು ಮಾಡಿ ಕೂದು ಶುದ್ದಿ ಹೇಳೆಕು.
ಎಂತದೇ ಆಗಲಿ, ‘ಎಂತಕೆ’ ಹೇಳುವದು ಮತ್ತೆ ನೋಡುವೋ. ಅಪರೂಪ ಹೇಳುವಷ್ಟರಲ್ಲಿವರೆಂಗೆ ಹೋಗಿಬಿಟ್ಟ ಈ ‘ಎಂತರ’ ಎಂತೆಲ್ಲಾ ಹೇಳಿ ಒಂದು ಪಟ್ಟಿ ತಯಾರಿ ಆತಿಲ್ಲ್ಯೋ ಕೂದೊಂಡು ಈ ಆಟಿ ತಿಂಗಳ್ಳಿ. ಇದರ ಓದಿಕ್ಕಿ ಉಳುದೋರು ಬಿಟ್ಟು ಹೋಗಿದ್ದು ಏನಾರು ಇದ್ದರೆ ಸೇರ್ಸಿ ಶುದ್ದಿ ಬಲ ಮಾಡುವೋ ಅಲ್ಲದೋ. ಶುದ್ದಿಗೆ ಧನ್ಯವಾದ. ವಿಷಯ ಲಾಯಕ್ಕ ಆಯ್ದು ಹೇಳಿ ಒಪ್ಪ.
ಚೆನ್ನೈಭಾವನ ಪ್ರೀತಿಯ ಪ್ರೋತ್ಸಾಹಂಗೊಕ್ಕೆ ಒಪ್ಪಂಗೊ.
ಪುರುಸೋತು ಮಾಡಿ ಶುದ್ದಿ ಹೇಳೇಕು – ಹೇಳ್ತ ಪ್ರೀತಿಯ ಅಪ್ಪಣೆ ಕಂಡು ಕೊಶಿಯ ನೆಗೆಬಂತು! 😀
ಎಂತಕೆಗಳ ಪಟ್ಟಿಮಾಡಿದ ನಿಂಗೊಗೆ ಎಂತರ ಪಟ್ಟಿಮಾಡುದು ಕಷ್ಟ ಆಗ, ಅಲ್ಲದೋ? 🙂
ಹರೇರಾಮ..
ಇಲ್ಲಿ ಬರದ್ದರಲ್ಲಿ ಸುಮಾರೆಲ್ಲ ಎನಗೆ ಸಣ್ಣದಿಂದ ಅಜ್ಜ, ಅಜ್ಜಿ, ಅಪ್ಪ, ಅಬ್ಬೆ, ಅಪ್ಪಚಿಯಕ್ಕೊ, ಚಿಕ್ಕಮ್ಮಂದ್ರು ಹೇಳಿದ್ದೆಲ್ಲ ನೆಂಪಾತು. ಹಾಂಗೆ ಈಗ ಮದುವೆ ಆದ ಮೇಲೆ ಅತ್ತೆ, ಮಾವ ಹೇಳುದುದೆ ಕೇಳಿದ್ದೆ. ಕೆಲವೆಲ್ಲ ಮಾತ್ರ ಸುರು ಕೇಳಿದ್ದು.
ಅದೆಲ್ಲ ಸಣ್ಣದಿಂದಲೇ ಪಾಲಿಸಿಯೊಂಡು ಬಂದ ಕಾರಣ ಈಗಳೂ ಅದರ ವಿರೋಧಿಸುಲೆ ಮನಸ್ಸು ಬತ್ತಿಲ್ಲೆ. ಕೆಲವೊಂದರ ಅನಿವಾರ್ಯ ಕಾರಣಂದ ಪಾಲುಸುಲೆ ಎಡಿಯದ್ದೆ ಅಪ್ಪದಿದ್ದು. ಕೆಲವೊಂದು ಸರ್ತಿ ತಪ್ಪಿ ಆಗಿ ಹೋಪದೂ ಇದ್ದು. ಆದರೂ ಹೆಚ್ಚಿಂದೆಲ್ಲ ಈಗಲೂ ಪಾಲ್ಸುತ್ತೆ.
ಎನಗೆ ಕೆಲವೊಂದು ನೆಂಪಾದ್ದು ಯಾವುದು ಹೇಳಿರೆ
~ ತೋರು ಬೆರಳಿಲ್ಲಿ ಮದ್ದು ಕಿಟ್ಟುಲಾಗ
~ ಒಡದ ತೆಂಗಿನಕಾಯಿಯ ಮೊಗಚ್ಚಿ ಮಡುಗುಲಾಗ
~ ಹಲ್ಲು ಹೋದಲ್ಲಿ ಹೊಸ ಹಲ್ಲು ಬಪ್ಪಲ್ಲಿವರೆಗೆ ನಾಲಗೆ ಮುಟ್ಟುಸುಲಾಗ.
~ ಊಟದ ಬಾಳೆಲಿ ಉಪ್ಪು ಒಳುದರೆ ಅದಕ್ಕೆ ನೀರು ಹಾಕೆಕ್ಕು. (ಒಹ್! ಅಂಬಗ ಒಪ್ಪಣ್ಣ ಬರದ ಹಾಂಗೆ ಬಾಳೆಗೆ ನೀರು ಹಾಕುಲಾಗನ್ನೇ?!)
~ ಮತ್ತೆ ಅಶನ ಮುಟ್ಟಿದ ಕೈ ನೀರು ಮುಟ್ಟಿ ನಾಂದೆಕ್ಕು ಬೇರೆ ಬಗೆ ಮುಟ್ಟುವ ಮೊದಲು (ಇದೆಲ್ಲ ಈಗ ಹೆಚಿನ ಕಡೆ ಕಾಂಬಲೆ ಇಲ್ಲೆ)
ಇನ್ನೆಂತಪ್ಪ ಪಕ್ಕನೆ ನೆಂಪಾವ್ತಿಲ್ಲೆ, ನೆಂಪಾದರೆ ಮತ್ತೆ ಸೇರ್ಸುತ್ತೆ.
ಒಪ್ಪಣ್ಣನ ಒಂದೊಂದು ಲೇಖನಂಗಳೂ ( ಮತ್ತೆ ಬೇರೆಯವು ಇಲ್ಲಿ ಬರವ ಲೇಖನಂಗಳೂ) ಎಲ್ಲವು ಸಂಗ್ರಹಯೋಗ್ಯವಾಗಿದ್ದು.
ಇನ್ನಾಣ ವಾರಕ್ಕೆ ಕಾಯ್ತೆ,
ಸುಮನಕ್ಕ.
ಸುಮನಕ್ಕ,
ಈ ನಿಷೇಧಂಗಳ ಪಟ್ಟಿ ತುಂಬ ದೊಡ್ಡ ಇದ್ದು.
ಎಲ್ಲೋರುದೇ ಸಂಗ್ರಹ ಮಾಡಿಗೊಂಡು, ಉದ್ದದ ಪಟ್ಟಿಮಾಡೇಕು ಹೇಳ್ತದು ಒಪ್ಪಣ್ಣನ ಆಶಯ ಆಗಿದ್ದತ್ತು.
ನಿಂಗೊಗೆ ಗೊಂತಿದ್ದ ಕೆಲವರ ನೆಂಪುಮಾಡಿ ಹೇಳಿದ್ದು ತುಂಬಾ ಕೊಶಿ ಆತು.
ಇನ್ನೂ ಇನ್ನೂ ಬರಳಿ, ಪುರುಸೋತಿಲಿ. ಆತೋ? 🙂
ಇದಾ, ಹೊಸತ್ತೊಂದು:
– ಗೊಂತಿದ್ದದರ ಬೈಲಿಂಗೆ ಹೇಳದ್ದೆ ಇಪ್ಪಲಾಗ! 🙂