Oppanna.com

ಛೇ ಛೇ ಪ್ರಕೃತಿಯೇ!! ಸಂವತ್ಸರ ಇಡೀ ವಿಕೃತಿಯೇ!!

ಬರದೋರು :   ಒಪ್ಪಣ್ಣ    on   19/11/2010    29 ಒಪ್ಪಂಗೊ

ಬೈಲಿಂಗೆ ಇಡೀಕ ಮಂಗನ ಉಪದ್ರ ಕಂಡದರ ಬಗ್ಗೆ ನಾವು ಕಳುದ ವಾರ ಮಾತಾಡಿಗೊಂಡಿದು.
ಮಂಗನ ಉಪದ್ರದ ಒಟ್ಟಿಂಗೆ ಮಂಗನ ಹಿಡಿತ್ತೋರ ಉಪದ್ರ, ಅಜ್ಜಕಾನ ಬಾವ ಮಂಗನ ಓಡುಸಿದ ಕತೆ, ಮಾಷ್ಟ್ರುಮಾವನ ಹತ್ರೆ ಸಿಕ್ಕಿದ ವಿಚಾರಂಗೊ, ದೊಡ್ಡಮಾವನ ಸಂಶಯಂಗಳನ್ನುದೇ ಮಾತಾಡಿಗೊಂಡಿದು.
ಸುಮಾರು ಪೂರಕ ಒಪ್ಪಂಗಳಲ್ಲಿ ಹಂದಿ ಉಪದ್ರವೋ – ಹೀಂಗುರ್ತ ಸಮಕಾಲೀನ ತೊಂದರೆಗಳ ಬಗ್ಗೆಯೂ ಮಾತಾಡಿದ್ದವು ಬೈಲಿನೋರು.

ಮಂಗಂಗೆ ನಾವು ಉಪದ್ರ ಮಾಡ್ತ ಕಾರಣ ಮಂಗಂಗೊ ನವಗೆ ಉಪದ್ರ ಮಾಡ್ತದು – ಹೇಳ್ತ ಅಭಿಪ್ರಾಯ ಸಮಷ್ಟಿಲಿ ಮಾಡಿಗೊಂಡಿದು.
ಉಪದ್ರವೇ ಮಾಡದ್ದೆ ಇರೆಕ್ಕಾರೆ ಅವು ಮಂಗಂಗಳೋ? – ಹೇಳಿ ಶೇಡಿಗುಮ್ಮೆ ಬಾವ ಅಜ್ಜಕಾನಬಾವನ ನೋಡಿಗೊಂಡು ನೆಗೆಮಾಡಿದ. 😉
ಪರಿಸರ ಒಳುಶುತ್ತದರ ಮೂಲಕ ನಾವು ಈ ಉಪದ್ರವ ಸಂಪೂರ್ಣ ದೂರಮಾಡಿಗೊಂಡು, ಮದಲಾಣ ಹಾಂಗೇ, ಬೇರೆ ಜೀವಿಗಳ ಒಟ್ಟಿಂಗೆ ಒರ್ಮೈಸಿಗೊಂಡು ಹೋವುತ್ತದು ಅರಡಿಯೇಕು ಹೇಳ್ತ ವಿಚಾರವ ಎಲ್ಲೋರುದೇ ಒಪ್ಪಿಗೊಂಡಿದು.

ಹ್ಮ್, ಉಪದ್ರ ಎಂತಾರು ಬತ್ತರೆ ನವಗೆ ಬೇರೆಂತೂ ಶುದ್ದಿ ತಲಗೆ ಬತ್ತಿಲ್ಲೆ! ಬರೇ ಉಪದ್ರದ್ದು ಮಾಂತ್ರ!
ಈ ಒರಿಶಲ್ಲಿ ಅತ್ಯಂತ ಉಪದ್ರ ಇಪ್ಪ ಪರಿಸ್ತಿತಿ ಇದ್ದಡ, ಬೈಲಿನ ಎಲ್ಲೋರುದೇ ಹೇಳುಗು.
ಹಾಂಗಾಗಿ, ಈ ವಾರ ಅದನ್ನೇ ಮಾತಾಡಿಗೊಂಬೊ, ಆಗದೋ?
~
ಮೊನ್ನೆ ಗಣೇಶಮಾವ ಬಂದಿಪ್ಪಗ ಅವರ ಬೈಕ್ಕಿನ ಹಿಂದೆ ಕೂದುಗೊಂಡು ಜೋಯಿಶಪ್ಪಚ್ಚಿಯಲ್ಲಿಗೆ ಹೋದ್ದು, ಹೊತ್ತಪ್ಪಗ.
ಹೆರಾಣೋರಿಂಗೆ ಆದರೆ ಜೋಯಿಶಪ್ಪಚ್ಚಿ ಕಾಂಬಲೆ ಕಾರಣ ಬೇಕಕ್ಕು, ನವಗೆ ಬೇಕೋ?
ಬೈಲಿಲೇ ಒಂದರಿ ಒಚ್ಚಿರಾತು. ಎಂತಕೆ ಬಂದದು ಹೇಳಿ ಅವೆಂತೂ ಕೇಳವು..
ಚಿಕ್ಕಮ್ಮ ಒಂದು ಮುಕ್ಕುಳಿ ಕೊತ್ತಂಬರಿ ಕಶಾಯ ಕೊಡ್ತನ್ನಾರ ಕೂಪದು, ಅದು ಇದು ಮಾತಾಡಿಗೊಂಡು!
ಹೊತ್ತಪ್ಪಗ ಹರಟೆ ಹೊಡವದು ಅವಕ್ಕೂ ಕೊಶಿಯ ವಿಶಯವೇ ಅಡ, ಗಣೇಶಮಾವ ಹೇಳಿದವು.
ಈ ಸರ್ತಿ ಜೋಯಿಶಪ್ಪಚ್ಚಿಗೆ ಮೋರೆಲಿ ನೆಗೆ ಇತ್ತಿಲ್ಲೆ, ಒಟ್ಟು ಏನೋ ಆವುತ್ತಾ ಇದ್ದು ಹೇಳ್ತ ಭಯ ಇದ್ದ ಹಾಂಗೆ ಇತ್ತು!
ಅದೆಂತರ?
~
ಒಂದೊರಿಶಕ್ಕೆ ಒಂದು ಹೆಸರು – ಈ ಒರಿಶ ಇಂತಾ ಸಂವತ್ಸರ ಹೇಳಿ ಹೆಸರು ಮಡಗಿದ್ದವಡ.
ವತ್ಸರ ಹೇಳಿತ್ತುಕಂಡ್ರೆ ಒರಿಶ ಹೇಳಿ ಅರ್ತ ಅಡ. ಆ ಶೆಬ್ದವ ವಿಶೇಷವಾಗಿ ಸಂವತ್ಸರ ಹೇಳಿಯೂ ಹೇಳ್ತವು.
(ಅರುವತ್ತು ಸಂವತ್ಸರ ಚಕ್ರಂಗಳ ಬಗ್ಗೆ ಬೈಲಿಲಿ ಹೇಳಿದ ಶುದ್ದಿ ಸಂಕೊಲೆ ಇಲ್ಲಿದ್ದು, ಓದಿಕ್ಕಿ. )
ಹೀಂಗೇ, ಒಂದೊಂದು ಒರಿಶವ ಒಂದೊಂದು ಹೆಸರಿಲಿ ದಿನಿಗೆಳಿ ಒಟ್ಟು ಅರುವತ್ತು ಸಂವತ್ಸರಕ್ಕೆ ಒಂದು ಚಕ್ರ ಆವುತ್ತು – ನಮ್ಮ ಅಜ್ಜಂದ್ರ ಲೆಕ್ಕಲ್ಲಿ.
ಒಂದು ತಲೆಮಾರು ಹೇಳಿತ್ತುಕಂಡ್ರೆ ಮೂವತ್ತೊರಿಶ. ಹಾಂಗೆ, ಒಂದು ಸಂವತ್ಸರ ಚಕ್ರಕ್ಕೆ ಎರಡು ತಲೆಮಾರು ಲೆಕ್ಕ ಹಿಡಿಗು ಜೋಯಿಶಪ್ಪಚ್ಚಿ.
ಅದಿರಳಿ.
~

ವಾಯುಭಾರ ಕುಸಿತವೋ, ಸುಂಟರಗಾಳಿಯೋ! ಅಲ್ಲ ಬಂಡಾಡಿ ಅಜ್ಜಿಯ ಮಂತು ತಿರುಗಿದ್ದೋ!!

ಈ ಸಂವತ್ಸರ ಚಕ್ರಲ್ಲಿ ಎಲ್ಲವೂ ಬತ್ತು. ಎಲ್ಲವೂ ಹೇಳಿರೆ ಎಲ್ಲವೂ!!
ಚಕ್ರ ಅಲ್ಲದೋ – ಅಲ್ಲಿಪ್ಪ ಪ್ರತಿ ಕಣಂಗಳೂ – ಮೇಲೆ ಹೋಗಿ ಕೊಬಳಿಂಗೂ ಮುಟ್ಟುತ್ತು, ಕೆಳ ಹೋಗಿ ಹೊಂಡಕ್ಕೂ ಎತ್ತುತ್ತು!
ಚಕ್ರಲ್ಲಿಪ್ಪ ಒಂದೊಂದು ಒರಿಶಕ್ಕೆ ಒಂದೊಂದು ವೈಶಿಷ್ಟ್ಯ ಅಡ – ಅದು ಅನುಕೂಲಕರ ಆದಿಕ್ಕು ಪ್ರತಿಕೂಲಕರ ಆದಿಕ್ಕು, ಒಟ್ಟಿಲಿ ಒಂದು ವೈಶಿಷ್ಟ್ಯ ಗುಣ!
ಇದೆಲ್ಲವನ್ನುದೇ ಆಯಾ ಸಂವತ್ಸರದ ಹೆಸರಿಲೇ ತುಂಬುಸಿಗೊಂಡಿದವಡ ನಮ್ಮ ಅಜ್ಜಂದ್ರು
– ಹೇಳಿತ್ತುಕಂಡ್ರೆ, ಸಂವತ್ಸರದ ಹೆಸರಿಲೇ ಆ ಸಂವತ್ಸರದ ಗುಣ ಹೇಂಗೆ ಹೇಳಿ ಅರ್ತುಗೊಂಬಲೆ ಎಡಿಗಡ, ಜೋಯಿಶಪ್ಪಚ್ಚಿ ಹೇಳಿದವು.

ಆ ಒರಿಶದ ಗುಣಂದಾಗಿ ಆ ಸಂವತ್ಸರಕ್ಕೆ ಆ ಹೆಸರು ಬಂದದೋ, ಆ ಹೆಸರಿಂದಾಗಿ ಆ ಗುಣ ನಿಗಂಟಾತೋ – ಆರಿಂಗೊಂತು!
ಅಂತೂ, ಸಂತ್ಸರಚಕ್ರಲ್ಲಿ ಎಲ್ಲವೂ ಇದ್ದು – ಹೇಳಿ ಸಂವತ್ಸರ ಚಕ್ರವ ಹೇಳಿಗೊಂಡು ಹೋದವು. ಪ್ರಬವಾ-ವಿಬವಾ-ಶುಕ್ಲಾ-ಪ್ರಮೋದೂತಾ.


ಸಣ್ಣ ಇಪ್ಪಗ ಕಲ್ತ ಪಟ್ಟಿ ಮತ್ತೊಂದರಿ ನೆಂಪಾದ ಹಾಂಗಾತದಾ!
ಪಟ್ಟಿ ಹೇಳಿಗೊಂಡು ಹೋದ ಹಾಂಗೆಯೇ, ಆ ಒರಿಶದ ವೈಶಿಷ್ಟ್ಯವನ್ನುದೇ ಹೇಳಿಗೊಂಡೇ ಹೋದವು.
ಎಲ್ಲವೂ ನೆಂಪೊಳಿಯದ್ರೂ, ಮನಸ್ಸಿಂಗೆ ಒಳುದ ಕೆಲವೆಲ್ಲ ಇಲ್ಲಿದ್ದಿದಾ..
ಆರಂಭದ ಪ್ರಭವಂದ ತೊಡಗಿ, ಪ್ರಜಾಸಂಖ್ಯಾಭಿವೃದ್ಧಿಗೆ ಪ್ರಜೋತ್ಪತ್ತಿ, ಕೃಷಿಗೆ ಅನುಕೂಲದ ಬಹುಧಾನ್ಯ, ಕರ್ಚು ಜೋರಪ್ಪ ವ್ಯಯ, ಸಾಧಾರಣವಾದ ಸಾಧಾರಣ, ಸರ್ವವನ್ನೂ ಜಯಿಸುತ್ತ ಸರ್ವಜಿತು, ಭಾವನೆಗಳ ಹೇಳ್ತ ವಿಕಾರಿ, ಸೌಮ್ಯ, ಕ್ರೋಧಿ, ರೌದ್ರಿ, ಕ್ರೋಧನ, ಆನಂದ, ರಾಕ್ಷಸ – ಎಲ್ಲವನ್ನುದೇ ವಿವರುಸಿಗೊಂಡು ಹೋದವು.
(ಸಂಪೂರ್ಣ ಪಟ್ಟಿ ಇಲ್ಲಿ ಸಿಕ್ಕುತ್ತು: https://oppanna.com/makkoge/samvatsarango)
~

ಜೋಇಶಪ್ಪಚ್ಚಿಯ ಹತ್ರೆ ಇಪ್ಪದು ಮಲೆಯಾಳ ಪಂಚಾಂಗ.
ಅವಕ್ಕೆ ಅದುವೇ ಆಯೆಕ್ಕಿದಾ.. ಅಲ್ಲದ್ದರೆ ಹಿಡಿಯ.
ಆ ಮಲೆಯಾಳ ಪಂಚಾಂಗಲ್ಲಿಪ್ಪ ಅರುವತ್ತು ಸಂವತ್ಸರದ ಪಟ್ಟಿಯನ್ನೂ ತೋರುಸಿದವು. ನಾವುದೇ ಒಂದರಿ ನೋಡಿದ ಹಾಂಗೆ ಮಾಡಿತ್ತು.
ಮಲೆಯಾಳ ಅಕ್ಷರ ಪೂರ್ತಿ ನವಗೂ ಅರಡಿಯ ಇದಾ! ಹಾಂಗೆ ಅವರತ್ತರೆ ಹೇಳಿದ್ದಿಲ್ಲೆ! ಆದರೆ ಗಣೇಶಮಾವಂಗೆ ಅಂದಾಜಿ ಆಯಿದು!! 😉
~

ಗ್ರೇಶದ್ದೆ ಬಂದ ಮಳೆ! ಮಮ್ಮದೆಯ ಮೀನಿನ ಹೆಡಗೆ ಬಸ್ಸಿನ ಅಡಿಲಿ!!

ಒಂದೊಂದು ಸಂವತ್ಸರದ ಗುಣಂಗೊ ಆಯಾ ಒರಿಶ ಜೆನಸಮುದಾಯಕ್ಕೆ ಕಾಂಗಡ – ಹಾಂಗೆ ಹೇಳಿದವು ಅಪ್ಪಚ್ಚಿ.
ಇದರ ಉದಾಹರಣೆ ಸಹಿತವೇ ವಿವರುಸಿಗೊಂಡು ಹೋದವು..
ಆಚೊರಿಶಂದ ನಮ್ಮ ಗುರುಪೀಠಕ್ಕೆ ಆದ ಅನುಭವ, ನವಗೆಲ್ಲ ಪ್ರತ್ಯಕ್ಷ ಕಾಂಬ ಒಂದು ಉದಾಹರಣೆ ಹೇದವು ಜೋಯಿಶಪ್ಪಚ್ಚಿ..
ಸರ್ವಜಿತು!
ಎಲ್ಲವನ್ನೂ ಗೆಲ್ಲುತ್ತ ಕಾಲ. ನಮ್ಮದೇ ಆದ ಯೇವ ವೆವಸ್ತೆ ಎಂತ ಇದ್ದೋ, ಅದರ ಮೇಗೆ ಸಾರ್ವಭೌಮತ ಸಾಧುಸುತ್ತ ಕಾಲ.
ನಮ್ಮ ಗುರುಪೀಟವೂ ಗೆದ್ದತ್ತು, ನಮ್ಮದೇ ಆದ ಗೋಕರ್ಣ ದೇವಸ್ಥಾನವ.
ಸರ್ವಧಾರಿ:
ನಮ್ಮ ಗುರುಪೀಠ, ಗೆದ್ದ ಗೋಕರ್ಣವ ಧರುಸಿಗೊಂಡು ಸರ್ವಧಾರಿಯಾಗಿದ್ದ ಸಂದರ್ಭ!
ವಿರೋಧಿ:
ಇಲ್ಲಸಲ್ಲದ್ದ ಆರೋಪಂಗಳ ಹಬ್ಬುಸಿ, ಇಡೀ ಜೆನಾಂಗವನ್ನೇ ಎತ್ತಿಕಟ್ಟಿ ದೊಡ್ಡಮಟ್ಟದ ವಿರೋಧಿ ಬಣವ ಉಂಟುಮಾಡ್ತ ಕಾರ್ಯ ನೆಡದತ್ತು, ಆಚ ಹೊಡೆಯಾಣವರಿಂದ.
ಎಂತದೂ ಹರುದ್ದಿಲ್ಲೆ ಅವರ ಕೈಂದ, ಅದು ಬೇರೆ!
ಸಂವತ್ಸರವೇ ವಿರೋಧಿ, ಇನ್ನು ಆ ಒರಿಶ ವಿರೋಧ ಬಾರದ್ದೆ ಇಕ್ಕೋ – ಹೇಳಿ ಗುರುಗೊ ನೆಗೆಮಾಡಿದ್ದವಡ ಜೋಯಿಶಪ್ಪಚ್ಚಿಯ ಹತ್ತರೆ!
ಬೇಜಾರವನ್ನೂ ನೆಗೆಲೇ ತೆಕ್ಕೊಂಡು ಹೋಯೆಕ್ಕಾರೆ ಗುರುಪೀಟವೇ ಆಯೆಕ್ಕಟ್ಟೆ!
ಅದಿರಳಿ,..
ಇದು ಜೋಯಿಶಪ್ಪಚ್ಚಿ ಕೊಟ್ಟ ಸಣ್ಣ ಉದಾಹರಣೆ, ಅಷ್ಟೆ.
ಹಾಂಗೇ ನೋಡಿಗೊಂಡು ಹೋಪಗ ಈ ಒರಿಶದ ಬಗ್ಗೆ ವಿವರ ಸಿಕ್ಕಿತ್ತು!
~
ವಿಕೃತಿ:
ಈ ಒರಿಶದ ಹೆಸರು ವಿಕೃತಿ ಹೇಳಿಗೊಂಡು.
ಅಪ್ಪು, ಯೇವದೆಲ್ಲ ನಮ್ಮ ಕಾರ್ಯಲ್ಲಿ, ನಂಬಿಕೆಲಿ ಒಳಗೊಂಡಿದೋ – ಅದೆಲ್ಲವೂ ವಿಕೃತಿಯಾಗಿಂಡು ಇದ್ದು.
ಮಳೆ, ಗಾಳಿ, ನೀರು, ಕೃಷಿ, ಜನಜೀವನ, ಪರಿಸರ, ವಾತಾವರಣ – ಎಲ್ಲವೂ ವಿಕೃತಿ ಆಗೆಂಡು ಇದ್ದು!
ಸಂವತ್ಸರದ ಹೆಸರಿಂಗೆ ಸಂಬಂದ ಇದ್ದು ಹೇಳ್ತರ ಮತ್ತೊಂದರಿ ಸಾಬೀತು ಮಾಡಿತ್ತದ!
ಅಲ್ಲದೋ?

ಈ ಒರಿಶ ಎಲ್ಲವೂ ವಿಕೃತಿ.
ಶುದ್ಧ ಬೇಸಗೆಲಿ ಸೆಕೆಯೇ ಇಲ್ಲೆ.
ಹೊಸ ಪೇನು ತರೆಕ್ಕು ಗ್ರೇಶಿಗೊಂಡಿದ್ದ ಅಜ್ಜಕಾನಬಾವ ಮುಂದಕ್ಕೆ ತಪ್ಪ ಹೇಳಿಗೊಂಡು ಕೂದ!
ಉದ್ದಿನ ಹಿಟ್ಟು ಕಡದು ಮಡಗಿದ ಬಂಡಾಡಿಅಜ್ಜಿ, ಹಿಟ್ಟುಹುಳಿಬಾರದ್ದಕ್ಕೆ ಪುನಾ ಒಂದಿರುಳು ಒಲೆಕಟ್ಟೆಲಿ ಮಡಗಿದ್ದಡ!
ಹೀಂಗೇ ನೋಡ್ಳೆ ಹೆರಟ್ರೆ ಸುಮಾರು ಉಪದ್ರ ಆಯಿದು ಬೈಲಿನೋರಿಂಗೆ..

ಶುದ್ಧ ಮಳೆಗಾಲ ಮಳೆಯೇ ಇಲ್ಲೆ, ಬರೇ ಸೆಕೆ..
ಹೂಟೆಮಾಡಿ ನೇಜಿಗೆ ಕಾದ ಅಮ್ಮುಪೂಜಾರಿ ಬಿತ್ತಿನಬತ್ತ ಕೈಲಿ ಹಿಡ್ಕೊಂಡೇ ಬಾಕಿ, ಯೇವಗ ಹಾಕುದು ಹೇಳಿ ಅರಡಿಯ.
ಹೂಟಗೆ ಬೇಕಾದ ಮಳೆಯೇ ಬಯಿಂದಿಲ್ಲೆ! ಪಾಪ..
ಅಡಕ್ಕೆ ತೋಟಕ್ಕೆ ಶುದ್ದ ಮಳೆಕಾಲದ ತಿಂಗಳಿಲಿಯೂ ಜೆಟ್ಟು ತಿರುಗುಸಿದವು, ಅಡಕ್ಕೆಬಾವಯ್ಯಂದ್ರು.
ಈಗೀಗ ರಬ್ಬರಿದಾ, ಜಾಸ್ತಿ ನೀರು ಬೇಕಾಗ..

ಮಳೆಗಾಲ ಕಳುದು ಬರೆಕ್ಕಾದ್ದು ಚಳಿಗಾಲ..
ಕಾಲ ಬದಲುತ್ಸು ಯೇವತ್ತು?
ಉಮ್ಮ, ಈ ಸರ್ತಿ ಮಳೆಗಾಲ ಸುರು ಆದ್ದೇ ಆದ್ದು, ಚಳಿಗಾಲದ ಸಮೆಯ ಸುರು ಆತು ಹೇಳಿ ಎಲ್ಲೊರೂ ಗ್ರೇಶಿಗೊಂಡವು.
ಅಪ್ಪೂಳಿ!
ಚಳಿಗಾಲ ಇರೆಕ್ಕಾದ ಕಾಲಲ್ಲಿ ಮಳೆಗಾಲ.
ಮಳೆಗೆ ಈ ಒರಿಶದ ಅಂತಿಮ ನಮಸ್ಕಾರ ಹೇಳೆಕ್ಕಾದ ಕಾಲಲ್ಲಿ ಸ್ವಾಗತದ ಗವುಜಿ!
ಹಿಡುದ ಮಳೆ ಬಿಡ್ತೇ ಇಲ್ಲೆ, ದಿನಂದ ದಿನಕ್ಕೆ ಜೋರಾವುತ್ತು.
ಬರೇ ಮಳೆ ಅಲ್ಲ, ಗುಡುಗು – ಸೆಡ್ಳು.
ಈ ಸರ್ತಿಯಾಣ ಶುದ್ಧ ಚಳಿಗಾಲ ಮಳಗೆ ಪುರುಸೊತ್ತೇ ಇಲ್ಲೆ. ಮಳೆ ಗುಡುಗು, ಸೆಡ್ಳು, ಬೆಳ್ಳ, ಪಳ್ಳ – ಎಲ್ಲವೂ ಈ ಒರಿಶದ ಚಳಿಗಾಲಲ್ಲಿ ನೋಡ್ಳೆ ಸಿಕ್ಕುಗು…
ಕುಂಭದ್ರೋಣ ಮಳೆ ಹೇಳಿರೆ ಹೀಂಗೇ ಇದಾ – ಹೇಳಿ ಆಚಮನೆ ದೊಡ್ಡಣ್ಣ ದೊಡ್ಡದೊಡ್ಡ ಹನಿಗೊ ಬಪ್ಪಗ ಹೇಳುಗು..

ನಿನ್ನೆಲ್ಲಮೊನ್ನೆ ಪೇಪರಿಲಿಯೂ ಅದುವೇ..!!
ಬಂಡಾಡಿ ಅಜ್ಜಿಯ ಊರಿಲಿ ಜೋರು ಮಳೇಡ.
ಅಡಕ್ಕೆಮರ ಪೂರ ಮುರುದ್ದರ್ಲಿ ತೋಟಕ್ಕೆ ಹೋಗಿಕ್ಕಲೆ ಗೊಂತಿಲ್ಲೆಡ!
ಆಚಮನೆ ದೊಡ್ಡಣ್ಣನಲ್ಲಿ ತೋಟದ ಕರೆಲಿ ಇಪ್ಪ ಹೊಳೆಲಿ ಮೂರಾಳು ಎತ್ತರ ನೀರು ಬಂದದರ ನೋಡುವಗ – ಅರುವತ್ತೊರಿಶ ಹಿಂದೆ ಹೀಂಗೇ ಆದ್ದದು ನೆಂಪಾತಡ, ದೊಡ್ಡಪ್ಪಂಗೆ.
ಸಾರಡಿತೋಡಿಲಿ ಹೊಸಾ ಸಂಕ ಆದ ಕಾರಣ ನೀರು ಬಂದದು ಉಪದ್ರ ಆಯಿದಿಲ್ಲೆ, ಅಲ್ಲದ್ದರೆ ಅದೊಂದು ತೊಂದರೆಯೇ ಆಗಿ ಹೋವುತಿತು ಹೇಳಿ ಆಚಕರೆ ಸೋಜ ಹೇಳಿತ್ತಡ!
ದೊಡ್ಡಜ್ಜನ ಮನೆಲಿ ಆದ ಹೊಸಾ ಮೊಬಯಿಲಿನ ಕಂಬಕ್ಕೆ ಕೊಟ್ಟ ಪೈಂಟು ಒಣಗಲೇ ಪುರುಸೊತ್ತಿಲ್ಲದ್ದೆ, ಅದಕ್ಕೆ ಹತ್ತಿದ ಬಿಂಗಿಮಕ್ಕೊ ಪೂರ ಕೆಂಪುಕೆಂಪಾದವಡ!!
~

ಕಾಲಕಾಲಕ್ಕೆ ಸರಿಯಾಗಿ ವಾತಾವರಣ ಬದಲದ್ದರೆ ಹೇಂಗಕ್ಕು? ಎಲ್ಲ ವಿಕೃತಿ ಆಗದೋ?
ಎಲ್ಲಾ ಜೀವಿಗೊ ಪ್ರಕೃತಿಯ ಮೇಲೆ ಅವಲಂಬಿತ ಆಗಿಪ್ಪಗ ಹೀಂಗಿ ವಿಕೃತಿಯೇ ಬಂದುಗೊಂಡು ಹೋದರೆ ಎಂತ ಮಾಡ್ತದು?!
ಯೇವದೇ ದಿನ ಸಮಕ್ಕೆ ಚಳಿ ಆದರೆ, ಅಲ್ಲಿಂದ ನೂರ ಎಂಬತ್ತನೇ ದಿನ ಒಳ್ಳೆತ ಮಳೆ ಇರ್ತು ಹೇಳ್ತದು ನೆರಿಯದೊಡ್ಡಪ್ಪನ ಲೆಕ್ಕಾಚಾರ ಆಗಿತ್ತು. ಬೇಸಗೆಲಿ ಚಳಿ ಆದ್ದದರ ಫಲ ಈಗಾಣ ಚಳಿಗಾಲಲ್ಲಿ ಮಳೆ – ಹೇಳ್ತದು ಅವರ ಅಭಿಪ್ರಾಯ.
~

ಮಳಗೆ ತೆಂಗಿನ ಕೊಬೆ ಚೆಂಡಿ! ಮಂಗಂಗೊಕ್ಕೆ ಕೂಪಲೂ ಜಾಗೆ ಇಲ್ಲೆ!

ಸೆಕೆಗಾಲಲ್ಲಿ ಬೀಸಣಿಕೆ ಹಿಡಿತ್ತ ಸೆಕೆ..
ಮಳೆಗಾಲಲ್ಲಿ ಕೊಡೆಹಿಡಿತ್ತ ಮಳೆ..
ಚಳಿಗಾಲಲ್ಲಿ ಕಂಬುಳಿ ಹೊದೆತ್ತ ಚಳಿ..
– ಇದು ಪ್ರಕೃತಿ ಸಹಜ!

ಬೇಸಗೆಲಿ ಹದಾಚಳಿ,
ಮಳೆಗಾಲಲ್ಲಿ ವಿಪರೀತ ಸೆಕೆ,
ಚಳಿಗಾಲಲ್ಲಿ ಕಂಡಾಬಟ್ಟೆ ಮಳೆ – ಇದುವೇ ವಿಕೃತಿಯ ಲಕ್ಷಣ!!
ಅಲ್ಲದೋ?
~

ಪಂಥಾನಶ್ಚ ವಿಶುಧ್ಯಂತಿ ಸೂರ್ಯ ಸೋಮಾಂಶು ಮಾರುತೈಃ ||
– ಶುದ್ದ ವಾತಾವರಣ ಇರೆಕ್ಕಾರೆ ಸೂರ್ಯನ ಬೆಣಚ್ಚು, ಚಂದ್ರನ ಬೆಣಚ್ಚು, ಗಾಳಿಯ ಓಡಾಟ – ಮೂರುದೇ ಇರೆಕ್ಕಡ, ಜೋಯಿಶಪ್ಪಚ್ಚಿ ಹೇಳಿದವು.
ಆಟಿತಿಂಗಳಿಲಿ ಇದು ಮೂರುದೇ ಸಿಕ್ಕ, ಹಾಂಗಾಗಿ ಆ ಕಾಲವ ಅಷ್ಟೊಂದು ಶುಭಕಾರ್ಯಕ್ಕೆ ಹೊಂದುಸುತ್ತವಿಲ್ಲೆಡ ಜೋಯಿಶಕ್ಕೊ.
ಆದರೆ ಈಗಾಣ ಈ ಚಳಿಗಾಲವೂ ಅದೇ ನಮುನೆ ಆತೋ – ಹೇಳಿ ಬೇಜಾರಾಯಿದು ಜೋಯಿಶಪ್ಪಚ್ಚಿಗೆ.
~

ಮಂಗನ ಉಪದ್ರ ಜೋರಪ್ಪಲೆ ಕಾರಣ ಎಂತರ? – ನಾವು ಮಂಗಂಗೆ ಉಪದ್ರ ಕೊಟ್ಟದೇ ಅಲ್ಲದೋ?
ಹಾಂಗೆಯೇ, ಈ ಪ್ರಕೃತಿ ವಿಕೃತಿ ಅಪ್ಪಲೆ ಕಾರಣ ಎಂತರ? ನಾವು ಪ್ರಕೃತಿಯ ವಿಕೃತಿ ಮಾಡಿದ್ದೇ ಅಡ!!

ಗುಡ್ಡೆ ಗರ್ಪಿ ಮೋಡಂಗಳ ಅಡ್ಡ ತಡೆತ್ತ ಪ್ರಾಕೃತಿಕ ವೆವಸ್ತೆಯ ಇಲ್ಲದ್ದೆಮಾಡಿದವು..
ಗುಡ್ಡೆ ಮಣ್ಣಿನ ಗುಂಡಿಗೆ ಸೊರುಗಿ ತಟ್ಟು ಮಾಡಿದವು, ಅಷ್ಟಪ್ಪಗ ಕೆರೆಗೊ ಮುಚ್ಚಿತ್ತು..
ಬಾವಿಗಳ ಮುಚ್ಚಿ, ಒಂದು ಬೋರುವೆಲ್ಲು ಕೊರದು ನೀರು ಮಾಡಿದವು..
ಕಾಡಿನ ಪೂರ ಮರದ ಇಬ್ರಾಯಿಗೆ ಕೊಟ್ಟು, ಬಂದ ಪೈಸೆಲಿ ಟಯರೀಸು ಹಾಕಿದವು,
– ಒಳಂಗೆ ಸೆಕೆ ಅಪ್ಪದಕ್ಕೆ ಒಂದು ಪೇನು ಹಾಕಿಗೊಂಡವು! ಆದರೆ ಹೆರ?
ಅಂತರ್ಜಲ ಪೂರಾ ಕಾಲಿ ಆಗಿ ಒಳಾಣ ತಂಪು ಮುಗಾತು!
ಮೇಗಾಣ ಬಾವಿಗೊ ಮುಚ್ಚಿ ಬೂಮಿಯ ಮೇಗಾಣ ತಂಪುದೇ ಮುಗಾತು!!
ಭೂಮಿ ನಿತ್ಯ ಬೆಶಿ ಆಗೆಂಡೇ ಹೋತು!
ಮೊದಲಿಂದಲೂ ಜಾಸ್ತಿ.

ರೋಡಿಲಿ ನೀರು ಬಂದು ತೋಡಿಲೇ ಕಾರು ಹೋದ ಹಾಂಗಾತು!

ಭೂಮಿ ಬೆಶಿ ಅಪ್ಪಗ ಗಾಳಿಲಿ ನೀರ ಹನಿ ಸೇರಿಗೊಂಡತ್ತು.
ಬೇಕಪ್ಪಗ ತಡದು ಮಳೆ ಬರುಸುಲೆ ಸಮಗಟ್ಟು ಗುಡ್ಡೆಗಳೂ ಇಲ್ಲೆ,
ಮತ್ತೂ ನೀರು ಎಳಕ್ಕೊಂಡೇ ಹೋತು, ಎಳದು, ಎಳದು – ಮಳೆಗಾಲದ ತಿಂಗಳೊರೆಂಗೂ ಎಳದತ್ತು!!
ಭೂಮಿ ಕಾದೊಂಡೇ ಹೋತು..

ಇನ್ನು ಗಾಳಿಲಿ ನೀರು ಹಿಡಿತ್ತೇ ಇಲ್ಲೆ – ಹೇಳಿ ಆದ ಮತ್ತೆ ಅದರ ಪುನಾ ಭೂಮಿಗೆ ಬಿಟ್ಟತ್ತು..
ಅಷ್ಟಪ್ಪಗ ತಂಪಿತ್ತು, ತಂಪಿಂಗೆ ಗಾಳಿಲಿರ್ತ ನೀರು ಪೂರ ಪುನಾ ಇಳುದತ್ತು..
ಇಳುದು, ಇಳುದು – ಮುಗುದ್ದೇ ಇಲ್ಲೆ, ಚಳಿಗಾಲ ಸುರು ಆದರೂ ವಾತಾವರಣಲ್ಲಿಪ್ಪ ನೀರಿನಂಶ ಕಾಲಿ ಆಯಿದಿಲ್ಲೆ..
ಅಲ್ಲಿ ಚಂಡಮಾರುತ, ಇಲ್ಲಿ ವಾಯುಭಾರ ಕುಸಿತ..
ಒಟ್ಟು,ಅಂದ್ರಾಣ ವೆವಸ್ತೆ ಏರುಪೇರು ಆಗಿ ನಾರಿಗೊಂಡಿದ್ದು!!
~
ಮೊದಲು ಹೀಂಗಿರ್ತದು ಆಯ್ಕೊಂಡಿತ್ತಿಲ್ಲೆ ಹೇಳಿ ಏನಲ್ಲ,
ಅರುವತ್ತೊರಿಶಕ್ಕೊಂದರಿ ವಿಕೃತಿ ಬಂದೇ ಬಕ್ಕು! – ಆದರೆ ಅಷ್ಟಪ್ಪಗ ಪ್ರಕೃತಿಯೇ ಸರಿಮಾಡಿಗೊಂಡಿತ್ತು!
ಈಗಾಣ ವಿಕೃತಿ ಸಂವತ್ಸರಕ್ಕೆ ಅದರ ತಡಕ್ಕೊಂಬ ಶೆಗ್ತಿ ಇಲ್ಲೆ.
ಮನುಷ್ಯ ಆ ನಮುನೆಲಿ ಪ್ರಕೃತಿಯ ವಿಕೃತಿ ಮಾಡಿ ಮಡಗಿದ್ದ.
ಹಾಂಗಾಗಿ ಪ್ರಕೃತಿಯೂ ನಮ್ಮ ಮೇಗೆ ವಿಕೃತಿ ತೋರುಸಿಗೊಂಡು ಇದ್ದು!
~
ಎರಡು ತಲೆಮಾರಿಂಗೆ ಒಂದು ಸಂವತ್ಸರಚಕ್ರ ಆವುತ್ತ ಕಾರಣ, ಅಜ್ಜನ ಪರಿಸ್ಥಿತಿ ಪುಳ್ಳಿಗೆ ಎದುರುಸಲೆ ಸಿಕ್ಕುಗು.
ಅದಕ್ಕೇ ಹೇಳುಗು, ಅಪ್ಪ ಅನುಬವಿಸಿದ್ದರ ಮಗ ಅನುಬವಿಸದ್ದೆ ಇಕ್ಕು, ಆದರೆ ಅಜ್ಜನ ಅನುಭವ ಪುಳ್ಳಿಯ ತಲೆಮಾರಿಂಗಪ್ಪಗ ಉಪಕಾರ ಆಗಿಯೇ ಅಕ್ಕು!
ಎರಡು ತಲೆಮಾರಿಂಗೆ ಒಂದರಿ ಒಂದೇ ಪರಿಸ್ಥಿತಿ ಬಂದು ನಿಂಬದು, ಮನುಶ್ಶಂಗೆ ಅವನ ಜಾಗೆ ತೋರುಸಲೆ ಅನುಕೂಲ ಆವುತ್ತೋ ಏನೋ – ಅಲ್ಲದೋ?

ಪ್ರಕೃತಿಯ ಹಾಳುಮಾಡಿದ ಮನುಶ್ಶಂಗೆ ವಿಕೃತಿಯ ತೋರುಸುಲೆ ಸಂವತ್ಸರ ಚಕ್ರಲ್ಲಿ ಒಂದೊರಿಶ ಇಪ್ಪದೋ ಹೇಳಿಗೊಂಡು ಜೋಯಿಶಪ್ಪಚ್ಚಿಗೆ ಸಂಶಯ ಬಯಿಂದು!
~
ಮೊನ್ನೆ ದೀಪಾವಳಿ ದಿನ ಜಡಿಕುಟ್ಟಿ ಮಳೆ ಬಂದ ಲೆಕ್ಕಲ್ಲಿ “ತೊಳಶಿಪೂಜೆ ಮಾಡಿಕ್ಕಲೆಡಿಯ” ಹೇಳಿ ಶರ್ಮಪ್ಪಚ್ಚಿ ಕೂದುಗೊಂಡವು.
ದೀಪಾವಳಿಗೆ ಹೇಂಗೂ ಮಳೆ, ಉತ್ಥಾನಕ್ಕಾದರೂ ಮಳೆ ಬಿಟ್ಟು ಸಿಕ್ಕಲಿ, ಹೇಳ್ತದು ಎಲ್ಲೋರ ಆಶಯ ಆಗಿತ್ತು.
ವಿಕೃತಿ ತೋರುಸಿದ್ದರ ನಿಲ್ಲುಸಿ, ಜೆನರ ಜೀವನಕ್ಕೆ ಬೇಕಾದ ಹಾಂಗೆ ನೆಡೆಯಲಿ ಹೇಳ್ತದೇ ನಮ್ಮ ಆಶೆ.

ಒಂದೊಪ್ಪ: ನಾವು ಪ್ರಕೃತಿಯ ಒಳಿಶೇಕು ಹೇಳಿ ನೆಂಪು ಮಾಡಿಗೊಂಬಲೆ ವಿಕೃತಿ ಸಂವತ್ಸರ ಇರೆಕ್ಕು – ಹೇಳ್ತದು ಜೋಯಿಶಪ್ಪಚ್ಚಿ ಅಭಿಪ್ರಾಯ.

29 thoughts on “ಛೇ ಛೇ ಪ್ರಕೃತಿಯೇ!! ಸಂವತ್ಸರ ಇಡೀ ವಿಕೃತಿಯೇ!!

  1. ಒಪ್ಪಣ್ಣ, ಈ ವಾರದ ಪ್ರಕೃತಿಯ ವಿಕೃತಿಯ ಬಗ್ಗೆ ಬರದ ಶುದ್ದಿ ಲಾಯ್ಕಾಯಿದು. ಜೋಯಿಶಪ್ಪಚ್ಚಿ ಹೇಳಿದ ಸಂವತ್ಸರಂಗಳ ವಿವರ ಎಂಗೊಗೆ ಅರ್ಥ ಅಪ್ಪ ಹಾಂಗೆ, ಅಥವಾ ಎಂಗೊ ಎಚ್ಚೆತ್ತುಗೊಂಬ ಹಾಂಗೆ ವಿವರ್ಸಿದ್ದು ಲಾಯ್ಕಾಯಿದು. ಪ್ರಕೃತಿಲಿ ನಮ್ಮಂದಾಗಿ ಆದ ಏರುಪೇರುಗಳ ಚೆಂದಲ್ಲಿ ವಿವರ್ಸಿದ್ದೆ. ಅದರಿಂದ ಅನುಭವಿಸುವ ವಿಕೃತಿಯನ್ನೂ ವಿವರ್ಸಿದ್ದೆ. ಮುಂದೆ ಎಂತ ಅಕ್ಕು ಹೇಳಿ ಎಚ್ಚರಿಕೆದೆ ಕೊಟ್ಟಿದೆ. ಲಾಯ್ಕಾಯಿದು.

    ನಮ್ಮ ಹಿರಿಯರು ಪ್ರತಿಯೊಂದನ್ನೂ ಸುಮಾರು ಅನುಭವಂಗಳ ಮೇಲೆಯೇ ರೂಪಿಸಿದ್ದವು ಹೇಳಿ ನಾವು ಅರ್ಥ ಮಾಡಿಗೊಂಬಲೆ ಅಕ್ಕಲ್ಲದಾ? ಪ್ರತಿಯೊಂದು ಸಂವತ್ಸರವೂ ತನ್ನ ಹೆಸರಿನ ಒಟ್ಟಿನ್ಗೆ ನವಗೆ ಮುನ್ಸೂಚನೆ ಕೊಡ್ತು. ನಾವು ಅದರ ಗಮನಿಸಿ ಗೌರವಿಸಿ, ನಮ್ಮ ಜೀವನಲ್ಲಿ ಮುಂದೆ ಹೋಯೆಕ್ಕು. ನಮ್ಮ ಸಂಸ್ಕೃತಿಲಿ ಪ್ರಕೃತಿಯ ಪೂಜೆ ಮಾಡಿ ಗೌರವಿಸುದರ ನಾವು ಇನ್ನುದೇ ಮನಸಾ ಅರ್ತು ಮಾಡೆಕ್ಕು. ಹಾಂಗಾದರೆ ಮಾತ್ರ ಪ್ರಕೃತಿ ಒಲಿಗು, ಒಳಿಗು. ಅಲ್ಲದ್ದರೆ ಪ್ರಕೃತಿ ವಿನಾಶ ಆದ ಹಾಂಗೆ ನಾವು ನಾಶ ಅಕ್ಕು.. ನಮ್ಮ ಮಕ್ಕಳ ಜೀವನವೂ ನಾಶ ಅಕ್ಕು.
    ಒಂದೊಪ್ಪ ಲಾಯ್ಕಾಯಿದು.

  2. ಬರ ಗನಾಕ್ ಆಯ್ದು ಒಪ್ಪಣ್ಣ, ನೀ ಹೇಳಿದ್ ಹೌದ! ಹಂಗೇ ಕಾಣ್ತು…

  3. ಲೇಖನ ತುಂಬಾ ಲಾಯ್ಕ ಇದ್ದು. ಮತ್ತೆ 2012ಕ್ಕೆ ಪ್ರಳಯ ಆವುತ್ತು ಹೇಳಿ ಶುದ್ದಿ ಇಲ್ಲೆಯಾ…? ಈಗ ಅಪ್ಪ “ವಿಕೃತಿ”ಗ ಅದರ ಮುನ್ಸೂಚನೆಯ ಹೇಂಗೆ…??? 🙂

  4. sooper aidu oppanno…
    maanavane maanavange bekagi prakruthiya vikruthi maadigombadu.
    entha maadudu ellavu vidhi niyama.naavu thale baagale beku.
    ellavannu daiva dattavagi sweekarusekkanne oppanno.
    tumba samaya aathu bailinge baaradde oppanno.
    maneli ondu maduve jembra iddattu hange itlagi bappale aidille.
    maneli sattumudi dina olle male baindu.madummaya kaide karatavu
    tindidano heluvastu male baindu.
    ellavu guru anukoola haange seridavara sahakaaranda saangavagi kaludattu.innu batta irte oppanno.
    good luck.

    1. ಶಾಂತತ್ತೆ ಬಂದಿರೋ.. ಬೈಲಿಲಿ ಎಲ್ಲ ಕೇಳಿಯೋಂಡು ಇತ್ತಿದ್ದವು ನಿಂಗೊ ಎಲ್ಲಿ ಹೇಳಿ..
      ಉತ್ತರ ಕೊಟ್ಟು ಸಾಕಾತು..

  5. ಭಾರೀ ಲಾಯ್ಕಾಯ್ದು!
    ನಾವು ಪ್ರಕೃತಿ ವಿನಾಶ / ಅದರ ಸಂರಕ್ಷಣೆ ಎಂಥ ಮಾಡಿದರೂ ಅದಕ್ಕೆ ಬೇಕಾದ್ದರ ಅದು ಮಾಡಿಗೊಳ್ತು ಹೇಳುದು ಒಂದು ಸತ್ಯ! ಉದಾಹರಣೆಗೆ ಕಳುದ ವರ್ಷ ಉತ್ತರ ಕರ್ನಾಟಕಲ್ಲಿ ಬರಪರಿಹಾರ ಮಾಡುದು ಹೇಳಿ (ಮಳೆ ಬಾರದ್ದಿಪ್ಪಗ ) ಸರಕಾರ ಹೆರಟು ಕೊನೆಗೆ ನೆರೆಪರಿಹಾರ ಮಾಡೆಕ್ಕಾಗಿ ಬಂತು!!
    ಒಳ್ಳೆ ಲೇಖನ!!
    (ಅನ್ಬಗಂಬಗ ಕಷಾಯ ಕುಡಿಯೆಕ್ಕು ಹೇಳಿ ಅಗಿಯೊಂಡಿರಲಿ, ಜೋಯಿಶಪ್ಪಚ್ಚಿಯಲ್ಲಿ ಸುದ್ದಿ ಸುಮಾರು ಸಿಕ್ಕುತ್ತು!! )

  6. ದೇವರು ನಾವು ಹೇಳಿದ ಹಾಂಗೆ ಕೇಳಿದರೆ ಸಾಕ…ನಾವು ಪ್ರಕ್ರಿತಿಲಿ ಮಾಡಿದ ಕೆಲವು ತಪ್ಪಿನ್ಗೆ ಶಿಕ್ಶೆಬೇಡದೊ…….

  7. ಪ್ರಕ್ರುತಿ ಬೋಸ ಭಾವನ ಹಾ೦ಗಿಪ್ಪ ಒ೦ದೊ೦ದು ವಿಕ್ರುತಿಗಳ ಮಾಡಿಯೊ೦ಡಿರ್ತದ.ಒಪ್ಪಣ್ಣ೦ಗೆ ಅದು ಸರೀ ಗೊ೦ತಾಯಿದು.ಹಿ೦ದಾಣವು ಗೊತಿಲ್ಲದ್ದವು ಹೇಳಿ ತಿಳುದ ನಾವೇ ಬೋಸುಗೊ.ಅವ್ವು ಸರಿಯಾಗಿ ಲೆಕ್ಕ ಹಾಕಿ ಯೇವಗೇವಗ ಎ೦ತೆ೦ತಾ ಅಕ್ಕು ಹೇಳಿ ಸಾವಿರಾರು ವರ್ಷ ಮದಲೇ ಹೇಳಿದ್ದವು ನಾವು ಅರ್ಥ ಮಾಡಿದ್ದಿಲ್ಲೆ ಅಷ್ಟೆ.ಇರಳಿ ಇಲ್ಲಿಗೆ ನಿಲ್ಲುಸುವೊ೦.ಒಪ್ಪ೦ಗಳೊಟ್ಟಿ೦ಗೆ.

  8. ಒಪ್ಪಣ್ಣ,
    ಸುರುವಾಣ ಪಟ ವಾಯುಭಾರ ಕುಸಿತದ್ದೂ ಅಲ್ಲ, ಸುಂಟರಗಾಳಿಯೂ ಅಲ್ಲ, ಬಂಡಾಡಿ ಅಜ್ಜಿಯ ಮಂತು ತಿರುಗಿದ್ದೂ ಅಲ್ಲ… ಅದು ‘ಓಜೋನ್ ಪದರ’ ಒಟ್ಟೆ ಅಪ್ಪಗ ತೆಗದ ಪಟ. ತೆಗದವು ಆರು ಹೇಳಿಂಡು ಎನ್ನತ್ರೆ ಕೇಳಿಕ್ಕೆಡ! 🙂

    1. ಆ ಚಿತ್ರ ಕ೦ಡು ಎನಗೆ ತೋರುವದು ಅದು ಯಾವುದೋ ಅಕಾಶ ಗ೦ಗೆ(galaxy) ಹೇಳಿ ಕಾಣ್ತು. ಹೆಚ್ಚಿನ೦ಶವೂ ಕ್ಷೀರಪಥ (milky way) ಆಗಿರೆಕು. ಅಲ್ದಾ? ಎನಗೆ ಹಾ೦ಗೆ ಕಾಣ್ತು, ಒ೦ದುವೇಳೆ ತಪ್ಪಾಗಿಪ್ಪಲೂ ಸಾಕು..

      1. ಇಲ್ಲೆಪ್ಪ… ಅದು ಚಂಡಮಾರುತದ್ದೆ ಪಟ… ಮೋಡ, ನೀರು ಎಲ್ಲ ಸುಳಿ ಸುತ್ತುದು ಕಾಣ್ತಿಲ್ಲೆಯಾ? ನೀಲಿ ಕಲರುದೆ ಇಪ್ಪ ಕಾರಣ ಗಾಳಿದೆ ಇದ್ದು. ಆಕಾಶ ಗಂಗೆ ಆಗಿದ್ದರೆ ಕಪ್ಪು ಬಣ್ಣ ಇರೆಕ್ಕಿತ್ತು…

  9. ಮನುಷ್ಯರು ಪ್ರಕೃತಿಯ ಶಕ್ತಿಯ ಎದುರು ಎಂತದೂ ಅಲ್ಲ . ವಿಜ್ಞಾನ ಎಷ್ಟೇ ಮುಂದುವರುದರೂ, ಪ್ರಕೃತಿಯ ನವಗೆ ಬೇಕಾದ ಹಾಂಗೆ ಮಣಿಸುಲೆ ಎಡಿಗಾಯಿದಿಲ್ಲೆ. ಆ “ಶಕ್ತಿಗೆ” ನಾವು ತಲೆ ಬಗ್ಗುಸಲೇ ಬೇಕು. ಪ್ರಕೃತಿ ಮುನಿದರೆ ನವಗೆ ಎಂತ ಮಾಡ್ಲೆ ಎಡಿಯ ಹೇಳಿ ಪ್ರತಿ ಸರ್ತಿ ತೋರ್ಸಿ ಕೊಟ್ಟರೂ ನಾವು ಅದರ ವಿನಾಶಕ್ಕೆ ಹೋಪದು ಕಮ್ಮಿ ಆವ್ತಿಲ್ಲೆ. ಭೂಮಿ ಪ್ರಾರ್ಥನಾ ಸ್ತುತಿಲಿ “ಎನ್ನ ಪಾದಂದ ನಿನ್ನ ತೊಳಿತ್ತಾ ಇದ್ದೆ, ಕ್ಷಮಿಸು” ಹೇಳಿ, ಉದಿಯಪ್ಪಗ ಭೂಮಿಗೆ ಕಾಲು ಮಡುಗೆಕ್ಕು ಹೇಳ್ತು.
    “ಭೂಮಿ ತಾಯಿ” ಹೇಳ್ತು ನಾವು. ಆ ತಾಯಿಗೆ ಅಷ್ಟೇ ಅಪಚಾರ ಮಾಡ್ತರೂ ಅದರ ಎಲ್ಲವನ್ನು ಸಹಿಸಿ ನಮ್ಮ ಕಾಪಾಡುತ್ತು. ಕೋಪ ಬಯಿಂದು ಹೇಳಿ ತೋರುಸುತ್ತು. ನವಗೆ ಮಾತ್ರ ಅರ್ಥ ಆವ್ತಿಲ್ಲೆ. ಪ್ರಕೃತಿಯ ವಿಕೃತಿ ಮಾಡ್ತಾ ಇಪ್ಪ ನಾವು ಇನ್ನಾದರೂ ಇದರ ಅರ್ಥ ಮಾಡಿಗೊಳೆಕ್ಕು.

  10. ಒಪ್ಪಣ್ಣಾ,ಸುಂದರ ಲೇಖನ. ನೆಗೆಗಾರ ನೆಗೆ ಮಾಡುಸಿದ ಹಾಂಗೆ,ಬೋಸ ಎಲ್ಲೋರನ್ನು ಬೋಸು ಮಾಡಿದ ಹಾಂಗೆ ಈ ವಿಕೃತಿ ಸಂವತ್ಸರವೂ ನಮ್ಮ ದೇಶಕ್ಕೆ ವಿಕೃತಿಯನ್ನೇ ತಂದದೋ ಹಾಂಗಾರೆ ಹೇಳ್ತ ಸಂಶಯ ಆತು,ಮನಸ್ಸಿಂಗೆ.ನೀನು ಹೇಳಿದ ಮಾತು ಸರಿ.ನಾವು ಪ್ರಕೃತಿಯ ಹಾಳು ಮಾಡಿರೆ ಅದು ನವಗೆ ಸರಿಯಾದ ಬುದ್ಧಿ ಕಲುಶುಗು.ಅದೂ ನೈಸರ್ಗಿಕ ಪ್ರಕೋಪದ ಹಾಂಗೆ ನಮ್ಮ ಕೈಲಿ ತಡೆಗಟ್ಟುವ ಶಗುತಿ ಇಲ್ಲದ್ದ ಒಂದು ರೀತಿಲಿ. ನಮ್ಮ ವಿಕೃತ ಮನಸ್ಸಿನ ಸರಿ ಮಾಡುಲೆ ಸರಿಯಾದ ಪ್ರಕೃತಿ ಚಿಕಿತ್ಸೆ ಆಗಿಕ್ಕಲ್ಲದೋ? ಬೆಳೆಹಾನಿ ಆವುತ್ತಾ ಇಪ್ಪದು ಕಂಡ್ರೆ ಉಪವಾಸ ಚಿಕಿತ್ಸೆಯ ನೆ೦ಪಾವುತ್ತು.
    ಹಾಂಗೆ ಆಸಕ್ತಿಲಿ ಬಪ್ಪಲೆ ಕಾದುಗೊಂದು ಚೌಕಿಲಿ ತಯಾರಾದ ವರುಷದ ಹೆಸರು ನೋಡಿದೆ. ಬಪ್ಪ ವರುಷ — ಖರ ಸಂವತ್ಸರ ಎಷ್ಟು ಖಾರ ಇಕ್ಕೋ?ಖರಾಸುರ ಪಂಚವಟಿಯ ಜೆನಪ್ರದೇಶಲ್ಲಿ ಋಷಿಮುನಿಗೊಕ್ಕೆ ತೊಂದರೆ ಕೊಟ್ಟ ಹಾಂಗೆ ಉಪದ್ರ ಮಾಡುಗೋ?ರಾಮ ದೇವರ ಕೈಲಿ ಮುಕ್ತಿ ಪಡಗೋ? ಖರ ಕಳುದು ಬಪ್ಪದು ವಿಜಯ ಆದ ಕಾರಣ ಈಗ ನೆಡೆತ್ತ ಅಧರ್ಮ,ಅನೀತಿ,ವಿಕೃತಿ,ಅಸಂಬದ್ಧ೦ಗೊಒಂದರಿಯಂಗೆ ಅಂತ್ಯ ಅಕ್ಕು ಹೇಳ್ತ ಆಶಾಭಾವನೆಲಿ ಮುಂದುವರಿಯುವ°,ಆಗದೋ.

    1. ಓ,ಸಣ್ಣ ತಪ್ಪಾತು,ಖರ ಕಳುದು ನಂದನ -ಬದುಕು ಆನಂದದ ನಂದನವನ,ಮತ್ತೆ ವಿಜಯ..

    2. ಯ್ಯೋ..!! ರಘು ಅಣ್ಣೊ.. ಆನು ಆರ ಬೋಸ ಮಾಡ್ಲಿ..??
      ನಿ೦ಗಳೆ ಹೇಳಿ..! 😛

  11. ಲಾಯಿಕಾಯಿದು ಒಪ್ಪಣ್ಣೊ…
    ಅಪ್ಪೋ ಮಾಣಿ.. ಉದ್ದಿನ ಹಿಟ್ಟು ಹುಳಿ ಬಾರದ್ದ ಸಂಗತಿ ಬೈಲಿಡೀಕ ಹೇಳುದೋ ನೀನು… ಬಾಳಗೆ ಎರಡು ದೋಸೆ ಕಮ್ಮಿ ಬೀಳುಗು ಹ್ಞಾ…

    1. ಅಜ್ಜಿ ಹಲಸಿನ ಹಣ್ಣು ದೋಸೆ ಲಾಯಕೆ ಆದರೆ.. ಆನು-ಅಜ್ಜಕಾನ ಬಾವನು, ಹ೦ತಿಲಿ ಮೊದ್ಲು ಕುಪದು.. 🙂
      ನವಗೆ ದೋಸೆ ಮೊದ್ಲು ಬೀಳೆಕು ಆತ??? 😛
      ನಾವು ಬಲ್ನಾಡು ಮಾಣಿಯ ಹ೦ತಿಲಿ ಅಕೇರಿಲಿ ಕೂರ್ಸುವೊ… 😀

      1. ಈಗ ಸತ್ಯ ಹೆರ ಬಿದ್ದತ್ತು,ಸುರುವಾಣ ದೋಸೆ ತಿಂದು ಹೀ೦ಗಾದ್ದದು ನಮ್ಮ ಬೋಸ..

        1. ರಘು ಭಾವೊ ಸರುವಾಣ ದೋಸೆ ನವಗಾಗ.. ಅದು ಗೊ೦ತಾಗದ್ದ ಹಾ೦ಗೆ ಬಲ್ನಾಡು ಮಾಣಿಗೆ ಬಳುಸುದು… 😀
          ಎನಗೆ ದೋಸೆ ರೆಜ್ಜಾ ಕರ೦ಚಿರೆಕು.. ಅ೦ಬಗ ರೈಸುತ್ತು ತಿ೦ಬಲೆ…:P

          1. ಎಬೇ… ಕಾಕೆಯೊ..???
            ಅನು ದೋಸೆ ಹೇಳಿದ್ಸು ಮಾಣಿ.. ಕಾಕೆಯ ಅಲ್ಲಾ, ಅದರ ಆರಾರು ತಿ೦ತ್ಸವಾ??? ಛೀ… 😛

          2. ತಿಂಬದರಲ್ಲಿ ಅಲ್ಲ ಮಾರಾಯ, 🙂 ಕಾಂಬದರಲ್ಲಿ ಕಾಕೆಯ ಹಾಂಗೋ ಕೇಳಿದ್ದು ಆನು !;)

      2. ಆನು ಹಂತಿಗೆ ಅಕೇರಿಂದಲೇ ಬಳುಸುಲೆ ಸುರು ಮಾಡ್ಲೆ ಶಿಫಾರಸು ಮಾಡ್ಸುತ್ತೆ, ಗುರಿಕ್ಕಾರರ ಹತ್ರೆ 😉

  12. ಒಪ್ಪಣ್ಣೋ……….ಲೇಖನ ಲಾಯಿಕ ಆಯಿದು ಬಿಲಿಯ…..ವಿಕ್ರುತಿಗೊ ಎಲ್ಲಾ ಸಂವತ್ಸರಂಗಳಲ್ಲೂ ಇತ್ತಿಲ್ಲೆಯಾ..ನಾವದರ ಅಶ್ಟಾಗಿ ಗಮನಿಸಿತ್ತಿದ್ದಿಲ್ಲೆ ಅಶ್ಟೆ!!!!!!!!!!ಒಳ್ಳೆದರ ಅರಿವು ಆಯೆಕಾದ್ರೆ ಕೆಟ್ಟದ್ದು ಇಪ್ಪಲೇ ಬೇಕು………..ಆಯಾಯಾ ಸಮಯಲ್ಲಿ ಅಪ್ಪದು ಆಯಾಯಾ ಸಮಯಕ್ಕೆ ಸರಿ……..ಕಾಲ ಬದಲಾದ್ದದಲ್ಲ!!!!!!!!!???? ಬದಲಾದ್ದದು ಬದಲಾಯೆಕಾದ್ದು ನಾವು…….ಪರಿಸ್ಥಿತಿಗೆ ಬೇಕಾದ ಹಾಂಗೆ…….ಎಂತ ಹೇಳ್ತಿ?

  13. ಎನಗೊಂದು ಸಣ್ಣ ಸಂಶಯ ಬಂದದು,ಸರಿಯಾಗಿ ಅರುವತ್ತು ವರ್ಷ ಹಿಂದೆ ಇದೇ ವಿದ್ಯಮಾನಂಗಳ ಹೋಲುಸಿರೆ ಸರ್ವಜಿತು ಸಂವತ್ಸರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ಸು ಆಯಿಕ್ಕು,ಅಲ್ಲದೋ.. ಹಾಂಗೆ ನೋಡಿರೆ ೧೯೫೦ರಲ್ಲಿ ವಿಕೃತಿಯೂ ಆದಿಕ್ಕು, ನಮ್ಮ ಸಂವಿಧಾನ ರೂಪುಗೊಂಡದಕ್ಕೂ ವಿಕೃತಿಗೂ ಈಗಾಣ ಅವಸ್ಥೆಗೊಕ್ಕೂ ಸಂಬಂಧ ಇಕ್ಕೋ…?

  14. ಊರಿಲೆಲ್ಲ ಮಳೆದೇ ಶುದ್ದಿ. ಬೈಲಿಲೂ ಅದೇ ಶುದ್ದಿಯ ಶುದ್ದಿ! ಜೋಯಿಷಪ್ಪಚ್ಚಿ ವಿವರ್ಸಿದ ಸಂವತ್ಸರಂಗಳ ಹೆಸರಿನ ಹಿಂದೆ ಇಪ್ಪ ಆಶಯಂಗಳ ಎಂಗೊಗೆಲ್ಲ ತಿಳಿಶಿಕೊಟ್ಟದಕ್ಕೆ ಧನ್ಯವಾದಂಗೊ. ಒಪ್ಪಣ್ಣನ ಪರಿಸರ ಕಾಳಜಿ, ಚಿಂತನೆ ಎಲ್ಲ ಕುಶಿ ಆತು.
    ಪ್ರಕೃತಿ – ವಿಕೃತಿಯ ಬಗ್ಗೆ ಬರದ ಎರಡು ಚೌಪದಿಗೊ ಲಾಯ್ಕಾಯಿದು.
    ಒಂದೊಪ್ಪವೂ ಸೂಪರ್!

    ಹ್ಮ್. ನಮ್ಮಂದಾಗಿ ಪ್ರಕೃತಿ ವಿಕೃತಿ ಆಗಿಹೋದ್ದರ ಕೂಡ್ಳೆ ಸರಿ ಮಾಡ್ಳೆ ಎಡಿಯ. ನಾವು ಅದಕ್ಕೆ ಮುನ್ನುಡಿ ಬರವ. ಅಷ್ಟಪ್ಪಾಗ ಮುಂದಾಣ ಪೀಳಿಗೆಗಾದರು ಸುಖ ಸಿಕ್ಕುಗು. ಇನ್ನು ನಲುವತ್ತೈದು ವರ್ಷ ಕಳುದು ಮತ್ತೆ ಬಪ್ಪ ‘ಬಹುಧಾನ್ಯ’ದ ಆಶಯವ ಒಳಿಶುದು ನಮ್ಮ ಕೈಲೇ ಇದ್ದು.

    ನಿಂಗ ಹೇಳಿದಾಂಗೇ ಬಂಡಾಡಿಲಿ ಭಯಂಕರ ಗಾಳಿ-ಮಳೆ. 🙁
    ಇಡೀ ಊರಿಲಿ ಒಟ್ಟು ಎರಡು ಸಾವಿರ ಅಡಕ್ಕೆ ಮರಂಗೊ ಹೋಯಿದಡ! ಪಂಚಾಯ್ತಿನವರತ್ರ ಪರಿಹಾರ ಕೇಳಿರೆ, ‘ಒಂದು ಮರಕ್ಕೆ ಇಪ್ಪತ್ತೈದು ರುಪಾಯಿ ಕೊಡ್ತೇವೆ’ ಹೇಳಿ ಹೇಳ್ತವಡ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×